ಹಿರಿಯೂರು
ತಾಲ್ಲೂಕಿನ ಸ್ಮಾರಕ ಶಿಲ್ಪಗಳು
ಡಾ. ಬಿ. ಸುರೇಶ್
ಸಹಾಯಕ ಪ್ರಾಧ್ಯಾಪಕರು,
ಸ್ನಾತಕೋತ್ತರ ಇತಿಹಾಸ ವಿಭಾಗ,
ಸರ್ಕಾರಿ ಕಲಾ ಕಾಲೇಜು, ಚಿತ್ರದುರ್ಗ-೫೭೭೫೦೧.
ಚಿತ್ರದುರ್ಗ ಜಿಲ್ಲೆಯಾದ್ಯಾಂತ
ಕಾಣಸಿಗುವ ಅನೇಕ ರೂಪದ ಐತಿಹಾಸಿಕ ಕುರುಹುಗಳಲ್ಲಿ ಸ್ಮಾರಕಶಿಲ್ಪಗಳು ಪ್ರಮುಖವು. ಪ್ರಾದೇಶಿಕ
ಇತಿಹಾಸವನ್ನು ತಿಳಿಯುವಲ್ಲಿ ಇವುಗಳ ಪಾತ್ರ ತುಂಬಾ ಮುಖ್ಯವಾದುದು. ಸ್ಥಳೀಯ ಜನರ ದೈಹಿಕ
ಲಕ್ಷಣಗಳು, ವೇಷ
ಭೂಷಣಗಳು, ಸಮಾಜ-ಸಂಸ್ಕೃತಿಯನ್ನು ತಿಳಿಯಲು ಇವುಗಳು
ಸಹಕಾರಿಯಾಗುತ್ತವೆ. ಇಂದು ರಸ್ತೆಬದಿಗಳಲ್ಲಿ, ಕೆರೆ ಏರಿಗಳ ಮೇಲೆ,
ಗ್ರಾಮದ ಹೊರವಲಯಗಳಲ್ಲಿ, ಬಸ್ ನಿಲ್ದಾಣಗಳಲ್ಲಿ ಹೀಗೆ
ಇನ್ನಿತರ ಅನೇಕ ಕಡೆಗಳಲ್ಲಿ ಸರ್ವೇ ಸಾಮಾನ್ಯವಾಗಿ ಇವುಗಳು ಕಂಡುಬರುತ್ತವೆ. ಶಾಲಾ ಆವರಣ,
ಗ್ರಾಮದ ಅರಳಿಕಟ್ಟೆ, ದೇವಾಲಯಗಳ
ಆವರಣಗಳಲ್ಲಿರುವಂತವುಗಳನ್ನು ಹೊರತುಪಡಿಸಿದರೆ ಬಹುತೇಕವು ಅನಾಥವಾಗಿ ಬಿದ್ದಿರುವಂತೆಯೂ, ನಿರ್ಲಕ್ಷಕ್ಕೆ ಒಳಗಾಗಿರುವಂತೆಯೂ ಭಾಸವಾಗುತ್ತದೆ. ಸ್ಥಳೀಯರಲ್ಲಿ ಅವುಗಳ ಬಗ್ಗೆಯಿರುವ
ತಪ್ಪು ಕಲ್ಪನೆಯೇ ಇದಕ್ಕೆ ಕಾರಣ. ಇವುಗಳನ್ನು ಮುಟ್ಟಿದರೆ, ಅಥವಾ
ಸ್ಥಳಾಂತರಿಸಿದರೆ ತಮಗೂ ಹಾಗೂ ತಮ್ಮ ಗ್ರಾಮಕ್ಕೂ ಕೇಡುಂಟಾಗುತ್ತದೆ ಎನ್ನುವ ಅಭಿಪ್ರಾಯ ಈಗಲೂ
ಗ್ರಾಮೀಣ ಭಾಗದ ಜನರದ್ದಾಗಿದೆ. ಆದರೆ ಇದಕ್ಕೆ ಅಪವಾದವೆನ್ನುವಂತೆ, ಇವುಗಳನ್ನು
ಪೂಜಿಸಿದರೆ ಮಕ್ಕಳಾಗುತ್ತವೆ ಎನ್ನುವ ಭಾವನೆಯಿಂದ ಇವುಗಳಿಗೆ ಗುಡಿಗಳನ್ನು ಕಟ್ಟಿ
ಪೂಜಿಸುತ್ತಿರುವುದು ಅಪರೂಪಕ್ಕೆ ಕಂಡುಬರುತ್ತದೆ.
ಆರಂಭದಲ್ಲಿ ಕೃತಜ್ಞತಾಪೂರ್ವಕವಾಗಿ
ಹುಟ್ಟಿಕೊಂಡ ಈ ಸ್ಮಾರಕಶಿಲ್ಪಗಳು ಕ್ರಮೇಣ ಅದರ ವ್ಯಾಪ್ತಿ ವಿಸ್ತಾರಗೊಂಡು ಮುಂದೆ ನಾನಾ
ಕಾರಣಗಳಿಗಾಗಿ ನಿರ್ಮಾಣಗೊಂಡಿರುವುದನ್ನು ಕಾಣುತ್ತೇವೆ. ದೇವಾಲಯಗಳ ಸಮೀಕ್ಷೆಗೆಂದು ನಾನು
ಕ್ಷೇತ್ರಕಾರ್ಯ ಕೈಗೊಂಡ ಸಂದರ್ಭದಲ್ಲಿ ಜಿಲ್ಲೆಯಾದ್ಯಂತ ಅನೇಕ ಸ್ಮಾರಕ ಶಿಲ್ಪಗಳು ಗೋಚರಿಸಿದವು.
ಅವುಗಳಲ್ಲಿ ಹಿರಿಯೂರು ತಾಲ್ಲೂಕಿನಲ್ಲಿ ಕಂಡುಬಂದ ಕೆಲ ವಿಶಿಷ್ಟ ಅಂಶಗಳಿಂದ ಕೂಡಿದ ಸ್ಮಾರಕ
ಶಿಲ್ಪಗಳನ್ನು ಪ್ರಸ್ತುತ ಲೇಖನದಲ್ಲಿ ಚರ್ಚಿಸಲು ಪ್ರಯತ್ನಿಸಿರುತ್ತೇನೆ.
ಚಿತ್ರದುರ್ಗ ತಾಲ್ಲೂಕಿನ ಐಮಂಗಲ
ಹೋಬಳಿ ಕೇಂದ್ರದಿಂದ ಯರಬಳ್ಳಿಗೆ ಹೋಗುವ ಮಾರ್ಗದಲ್ಲಿ ತಾಳವಟ್ಟಿ ಎನ್ನುವ ಗ್ರಾಮವಿದೆ. ಗ್ರಾಮದ
ವಾಯವ್ಯ ದಿಕ್ಕಿನ ರಸ್ತೆಯ ಎಡಬದಿಯಲ್ಲೇ ಕಂಡುಬರುವ ಕರಿಯಮ್ಮ ಗುಡಿಯು ಮುಂಭಾಗದಲ್ಲಿ ಸ್ಮಾರಕ
ಶಿಲ್ಪವೊಂದಿದೆ. ಇದು ತನ್ನ ವಿಶಿಷ್ಟ ಅಂಶಗಳಿಂದ ಗಮನ ಸೆಳೆಯುತ್ತದೆ.
ಶಿಲ್ಪವು ಮೂರು ಹಂತಗಳಲ್ಲಿ
ನಿರೂಪಿತಗೊಂಡಿದೆ. ಕೆಳಗಿನ ಹಂತದ ಶಿಲ್ಪ ಎಡಬದಿಯಲ್ಲಿ ಧಗಧನಗೆ ಉರಿಯುತ್ತಿರುವ ಬೆಂಕಿಯ
ಕೆನ್ನಾಲಿಗೆಯಲ್ಲಿ ಸತಿ-ಪತಿಯರಿಬ್ಬರು ಮಲಗಿರುವಂತೆ ತೋರಿಸಲಾಗಿದೆ. ಹೀಗೆ ಉರಿಯುತ್ತಿರುವ ಬೆಂಕಿ
ಹಾಗು ಬೆಂಕಿಯಲ್ಲಿ ಬಿದ್ದಿರುವ ದಂಪತಿಯರಿಗೆ ಸ್ತ್ರೀಯೊರ್ವಳು ಕೈಮುಗಿಯುತ್ತಿರುವಳು. ಸ್ತ್ರೀಯ
ಹಿಂಭಾಗದಲ್ಲಿ ಮತ್ತೊಬ್ಬ ಸ್ತ್ರೀಯನ್ನು ತೋರಿಸಲಾಗಿದ್ದು, ಸತಿ-ಪತಿಯರು ಬೆಂಕಿಗೆ ಆಹುತಿಯಾಗುತ್ತಿರುವುದನ್ನು
ಸ್ತ್ರೀಯರು ಭಕ್ತಿಪೂರ್ವಕವಾಗಿ ವೀಕ್ಷಿಸುತ್ತಿರುವಂತಿದೆ. ಪುರುಷನು ಯಾವುದೋ ಕಾರಣಗಳಿಂದ
ತೀರಿಕೊಂಡಿದ್ದು ಆತನನ್ನು ದಹಿಸುತ್ತಿರುವ ಸಂದರ್ಭದಲ್ಲಿ ಮಹಿಳೆಯು ತನ್ನ ವೇದನೆಯನ್ನು ತಾಳಲಾಗದೆ,
ಅಥವಾ ತನ್ನ ಪತಿಯಿಲ್ಲದ ಮುಂದಿನ ಜೀವನವನ್ನು ಕಲ್ಪಿಸಿಕೊಳ್ಳಲು ಸಾಧ್ಯವಾಗದೆ
ಚಿತೆಗೆ ಹಾರುತ್ತಿರುವಂತೆ ನಿರೂಪಿತಗೊಂಡಿದೆ.
ಎರಡನೆ ದೃಶ್ಯದಲ್ಲಿ ಸತಿಯನ್ನು
ಇಬ್ಬರು ಹಾಗು ಪತಿಯನ್ನು ಇಬ್ಬರು ಅಪ್ಸರೆಯರು ತಮ್ಮ ಭುಜದ ಮೇಲೆ ಹಾಕಿಕೊಂಡು ಸ್ವರ್ಗಕ್ಕೆ
ಕರೆದೊಯ್ಯುತ್ತಿರುವರು. ಮೂರನೇ ದೃಶ್ಯದಲ್ಲಿ ಸತಿಪತಿಯರು ಸ್ವರ್ಗದಲ್ಲಿ ಅರ್ಧಪದ್ಮಾಸನದಲ್ಲಿ
ಕುಳಿತಿರುವರು. ಬದಿಗಳಲ್ಲಿ ಚಾಮರಧಾರಿಯರಿರುವರು. ಶಿಲ್ಪದ ಮೇಲ್ಭಾಗದಲ್ಲಿ ಶಿವಲಿಂಗ, ನಂದಿಯ ಉಬ್ಬು ಶಿಲ್ಪಗಳಿವೆ.
ಪ್ರಸ್ತುತ ಶಿಲ್ಪದಲ್ಲಿ ಪುರುಷನು
ಯಾವ ಕಾರಣಕ್ಕಾಗಿ ತೀರಿಕೊಂಡಿದ್ದಾನೆ. ಎನ್ನುವುದು ತಿಳಿಯುತ್ತಿಲ್ಲ. ಇಲ್ಲಿ ಸತಿಯು ತನ್ನ
ಪತಿಯೊಂದಿಗೇ ಚಿತೆಗೆ ಹಾರಿರುವ ದೃಶ್ಯವನ್ನು ತೋರಿಸಿರುವುದು ತುಂಬಾ ಅಪರೂಪವೆನಿಸುತ್ತದೆ.
ದಂಪತಿಯರ ಹಾಗು ಅಪ್ಸರೆಯರ ವೇಷ-ಭೂಷಣವೂ ಸಹ ಗಮನ ಸೆಳೆಯುತ್ತದೆ.
ಬಿದರಕೆರೆ ಗ್ರಾಮದ ಸಿದ್ದೇಶ್ವರ
ದೇವಾಲಯದ ಆವರಣದಲ್ಲಿ ಒಟ್ಟು ನಾಲ್ಕು ವೀರಗಲ್ಲುಗಳಿವೆ. ಅವುಗಳಲ್ಲಿ ಒಂದು ಶಿಲ್ಪವು ತುಂಬಾ
ಆಕರ್ಷಣೀಯವಾಗಿದೆ ಪ್ರಸ್ತುತ ಶಿಲ್ಪದಲ್ಲಿ ವೀರನೊಬ್ಬನನ್ನೇ ತೋರಿಸಲಾಗಿದೆ. ಈತನು ತನ್ನ
ಬಲಗೈಯಲ್ಲಿ ಉದ್ದನೆಯ ಕತ್ತಿ ಹಿಡಿದಿರುವನು. ಎಡಗೈಯಲ್ಲಿ ಒಂದು ರೀತಿಯ ಬಳ್ಳಿಯನ್ನು
ಹಿಡಿದಿರುವನು. ತಲೆಯ ಕೂದಲಿಗೆ ಬಟ್ಟೆಯನ್ನು ಕಟ್ಟಿರುವನು. ಕೂದಲಿನಲ್ಲಿ ಆಧುನಿಕವಾಗಿ ಎಣೆದ
ರೀತಿಯ ಉದ್ದನೆಯ ಜಡೆಯನ್ನು ತೋರಿಸಲಾಗಿದ್ದು ಜಡೆಯ ತುದಿಯಲ್ಲಿ ಗಂಟನ್ನು (ಆಧುನಿಕ
ರಿಬ್ಬನ್?) ಹಾಕಿದಂತಿದೆ. ಈ ರೀತಿ ಜಡೆಯನ್ನು ಹಾಕಿರುವ ವೀರನನ್ನು ತೋರಿಸಿರುವುದೂ ಸಹ ಅಪರೂಪವೇ ಸರಿ.
ಆದರೆ ಹಿರಿಯೂರು ತಾಲ್ಲೂಕಿನಲ್ಲಿ ಈ ರೀತಿಯ ಇನ್ನೂ ಹತ್ತಾರು ವೀರಗಲ್ಲುಗಳು ಕಂಡುಬರುತ್ತವೆ.
ವೀರನು ತನ್ನ ಸೊಂಟಕ್ಕೆ ವಸ್ತ್ರವನ್ನು ಕಟ್ಟಿರುವನು, ಕಿವಿಯಲ್ಲಿ ಆಭರಣ ಧರಿಸಿರುವನು. ಕೊರಳಲ್ಲಿ ಎರಡು ಹಾರಗಳಿವೆ, ಕೈ ಕಾಲುಗಳಿಗೂ ಆಭರಣ ಧರಿಸಿರುವನು, ಈತನ ವೇಷ-ಭೂಷಣಗಳನ್ನು ಗಮನಿಸಿದರೆ, ಈತನೊಬ್ಬ ಬುಡಕಟ್ಟು ಸಂಪ್ರದಾಯದ
ವೀರನಂತಿದೆ. ಪ್ರಸ್ತುತ ಈ ಪರಿಸರದಲ್ಲಿ ಬುಡಕಟ್ಟು ಜನಾಂಗದವರೇ ಹೆಚ್ಚಿಗಿರುವುದೂ ಇದಕ್ಕೆ
ಪುಷ್ಠಿ ನೀಡುತ್ತದೆ. ಶಿಲ್ಪದ ಕಾಲಮಾನ ಸುಮಾರು ಕ್ರಿ.ಶ.೧೫-೧೬ನೇ ಶತಮಾನ.
ಇದೇ ಗ್ರಾಮದಲ್ಲಿರುವ ಮತ್ತೊಂದು ಶಿಲ್ಪವು ತನ್ನ ವಿಶಿಷ್ಟ ಅಂಶಗಳಿಂದ
ಗಮನ ಸೆಳೆಯುತ್ತದೆ. ಪ್ರಸ್ತುತ ಶಿಲ್ಪದಲ್ಲಿ ವೀರ ಹಾಗು ಸತಿಯನ್ನು ತೋರಿಸಲಾಗಿದೆ. ಶಿಲ್ಪದ
ವಿಶೇಷತೆಯೆಂದರೆ ವೀರನನ್ನು ಟಗರಿನ? ಮೇಲೆ ಕುಳಿತಿರುವಂತೆ ತೋರಿಸಿರುವುದು. ಸಾಮಾನ್ಯವಾಗಿ ವೀರನನ್ನು ಶಿಲ್ಪಗಳಲ್ಲಿ
ಕುದುರೆ/ಆನೆಗಳ ಮೇಲೆ ತೋರಿಸಲಾಗಿರುತ್ತದೆ. ಆದರೆ ಇಲ್ಲಿ ಟಗರಿನ ಮೇಲೆ ವೀರನನ್ನು ತೋರಿಸಲಾಗಿದೆ.
ವೀರನು ತನ್ನ ಎಡಗೈಯಲ್ಲಿ ಟಗರಿನ ಹಗ್ಗವನ್ನು, ಬಲಗೈಯಲ್ಲಿ ಕತ್ತಿಯನ್ನು ಹಿಡಿದಿರುವನು. ವಸ್ತ್ರಾಭರಣ ಭೂಷಿತನಾದ
ಈತನು ತನ್ನ ತಲೆಯ ಕೂದಲನ್ನು ತುರುಬಿನಂತೆ ಕಟ್ಟಿ ಅಲಂಕರಿಸಿಕೊಂಡಿರುವನು. ತುರುಬಿನಿಂದ ಕೆಳಗೆ
ಜಡೆಯನ್ನು ಹೆಣೆಯಲಾಗಿದ್ದು ತುದಿಯಲ್ಲಿ ರಿಬ್ಬನ್ ಹಾಕಲಾಗಿದೆ. ಟಗರನ್ನು ಅಲಂಕೃತಗೊಳಿಸಲಾಗಿದ್ದು, ಉದ್ದನೆಯ ಎರಡು ಕೊಂಬುಗಳನ್ನು
ಇಳಿಬಿದ್ದಿರುವಂತೆ ತೋರಿಸಲಾಗಿದೆ. ಬಾಲವು ಚಿಕ್ಕದಾಗಿದೆ. ವೀರನ ಹಿಂಬದಿಯಲ್ಲಿ ನಿಂತಿರುವ ಸತಿಯು
ಬಲಗೈಯಲ್ಲಿ ನಿಂಬೆ ಹಣ್ಣನ್ನು ಮೇಲಕ್ಕೆ ಎತ್ತಿ ನಿಂತಿರುವಳು. ತನ್ನ ಎಡಗೈಯಲ್ಲಿ
ದರ್ಪಣವನ್ನಿಡಿದು ಕೆಳಗೆ ಇಳಿಬಿಟ್ಟಿರುವಳು. ಸತಿಯು ಸಹ ವಸ್ತ್ರಾಭರಣ ಭೂಷಿತೆಯಾಗಿರುವಳು.
ಕೂದಲನ್ನು ತುರುಬಿನ ರೀತಿಯಲ್ಲಿ ಕಟ್ಟಿಕೊಂಡಿದ್ದು ಕೇದಗೆ ಹೂವಿನಿಂದ ಸಿಂಗರಿಸಿಕೊಂಡಿರುವಳು.
ಕಂದಿಕೆರೆಯಲ್ಲಿ ಒಟ್ಟು ನಾಲ್ಕು ವೀರಗಲ್ಲುಗಳಿದ್ದು, ಅವುಗಳಲ್ಲಿ ಶಾಸನೋಕ್ತ ವೀರಗಲ್ಲೊಂದು
ಗಮನ ಸೆಳೆಯುತ್ತದೆ. ಗ್ರಾಮದ ದಕ್ಷಿಣಕ್ಕಿರುವ ವೀರಚನ್ನಪ್ಪ ಗುಡಿಯಲ್ಲಿ ಪ್ರಸ್ತುತ ವೀರಗಲ್ಲಿದೆ.
ಈ ಶಿಲ್ಪದ ಪೀಠದಲ್ಲಿ ಹಂಸ ಮತ್ತು ವರಾಹದ ಉಬ್ಬುಶಿಲ್ಪಗಳಿರುವುದು ಆಶ್ಚರ್ಯದ ಸಂಗತಿ. ಹಲವಾರು
ಹಂತಗಳಲ್ಲಿ ನಿರೂಪಿತಗೊಂಡಿರುವ ಸ್ಮಾರಕ ಶಿಲ್ಪಗಳಿಗೆ ಸಾಮಾನ್ಯವಾಗಿ ಪೀಠಗಳಿರುವುದಿಲ್ಲ. ಮೂಲ
ಪೀಠದ ಮೇಲೆ ಬೇರಿನ್ನಾವುದೋ ಶಿಲ್ಪವಿದ್ದಿರಬೇಕೆನಿಸುತ್ತದೆ. ಆದರೆ ನಂತರದ ದಿನಗಳಲ್ಲಿ ಅದೇ ಪೀಠದ
ಮೇಲೆ ಎರಡು ಹಂತಗಳಲ್ಲಿರುವ ಪ್ರಸ್ತುತ ವೀರಗಲ್ಲು ಶಿಲ್ಪವನ್ನು ಪ್ರತಿಷ್ಠಾಪಿಸಲಾಗಿದೆ.
ವೀರನು ಕುದುರೆಯ ಮೇಲೆ ಯುದ್ಧ/ಕಾಳಗಕ್ಕೆ ಹೊರಟಂತೆ ತುಂಬ ಅಮೋಘವಾಗಿ
ಚಿತ್ರಿಸಲಾಗಿದೆ. ವೀರನು ತನ್ನ ಎಡಕೈಯಲ್ಲಿ ಕುದುರೆಯ ಜೀನನ್ನು, ಬಲಗೈಯಲ್ಲಿ ಉದ್ದನೆಯ ಕತ್ತಿಯನ್ನು ಮೇಲಕ್ಕೆತ್ತಿ
ಹಿಡಿದಿರುವನು. ವೀರನು ಕಂಠಹಾರ, ಕೇಯೂರ, ಕಿಂಕಣಿ, ತೋಳ್ಬಂದಿ, ಕರ್ಣಕುಂಡಲ ಇತ್ಯಾದಿ ಆಭರಣಗಳಿಂದ ಅಲಂಕೃತಗೊಂಡಿದ್ದು, ತಲೆಗೆ ಪೇಟವನ್ನು ಹಾಗು ತನ್ನ ಉದ್ದನೆಯ ಕೂದಲನ್ನು
ತುರುಬಿನೋಪಾದಿಯಲ್ಲಿ ಕಟ್ಟಿಕೊಂಡಿರುವನು. ಮೇಲಿನ ದೃಶ್ಯದಲ್ಲಿ ಲಿಂಗ ಹಾಗೂ ಅಭಿಮುಖವಾಗಿ
ಕುಳಿತಿರುವ ನಂದಿಯ ಉಬ್ಬುಶಿಲ್ಪಗಳು ಹಾಗೂ ಅವುಗಳ ಮೇಲ್ಬಾಗದಲ್ಲಿ ಸೂರ್ಯ-ಚಂದ್ರರ ಶಿಲ್ಪಗಳನ್ನು
ಕಂಡರಿಸಲಾಗಿದೆ.
ಶಿಲ್ಪದ ಮೇಲೆ ಯಥೇಚ್ಛವಾಗಿ ಎಣ್ಣೆ ಹಾಕಿರುವುದರಿಂದ ಪ್ರಭಾವಳಿರೂಪದ
ಪಟ್ಟಿಕೆ ಹಾಗೂ ಮಧ್ಯ ಪಟ್ಟಿಕೆಯಲ್ಲಿರುವ ಶಾಸನ ಸೂಕ್ಷ್ಮವಾಗಿ ಗಮನಿಸದ ಹೊರತು ತಕ್ಷಣವೇ
ಕಂಡುಬರುವುದಿಲ್ಲ. ಪ್ರಭಾವಳಿಯ ಪಟ್ಟಿಕೆಯಲ್ಲಿ, ಶುಭಮಸ್ತು ನಮಸ್ತುಂಗ ಎನ್ನುವ ಶೈವ ಶ್ಲೋಕದಿಂದ ಶಾಸನವು ಆರಂಭಗೊಂಡು
ಎರಡು ಸಾಲುಗಳಲ್ಲಿ ಕೊರೆಯಲ್ಪಟ್ಟಿದೆ. ನಂತರ ಮಧ್ಯದ ಪಟ್ಟಿಕೆಯಲ್ಲಿ ಮುಂದುವರೆದು ಮೂರು
ಸಾಲುಗಳಲ್ಲಿ ಕೊರೆಯಲ್ಪಟ್ಟಿದೆ. ಒಟ್ಟು ಐದು ಸಾಲುಗಳಲ್ಲಿರುವ ಈ ಶಾಸನದ ಕಾಲಮಾನ ಕ್ರಿ.ಶ.೧೫೯೮.
ಸ್ಥಳೀಯರು ಈ ಶಿಲ್ಪವನ್ನು ವೀರ ಚಿನ್ನಪ್ಪನೆಂದೇ ಪೂಜಿಸುತ್ತಿರುವರು.
ಶಾಸನದಲ್ಲಿ ಉಲ್ಲೇಖಗೊಂಡಿರುವ ಕಂದಿಕೆರೆ ಗ್ರಾಮವು ಹರತಿನಾಯಕರ
ಆಡಳಿತದ ವ್ಯಾಪ್ತಿಯಲ್ಲಿದ್ದ ಪ್ರದೇಶವಾಗಿದ್ದಿತು. ಗ್ರಾಮದ ತಳವಾರಿಕೆ ವೃತ್ತಿಯನ್ನು
ಮಾಡುತ್ತಿದ್ದ ಚನ್ನಿನಾಯಕನು ತುರಗ ಕಾಳಗದಲ್ಲಿ ಮಡಿದಿದ್ದುದರ ಪರಿಣಾಮವಾಗಿ ಆತನ
ಜ್ಞಾಪಕಾರ್ಥವಾಗಿ ಪ್ರಸ್ತುತ ಸ್ಮಾರಕವನ್ನು ಪ್ರತಿಷ್ಠಾಪಿಸಲಾಗಿದೆ. ಶಾಸನದಲ್ಲಿ
ಉಲ್ಲೇಖಿಸಿರುವಂತೆ ತಳವಾರಿಕೆ ವೃತ್ತಿಯನ್ನು ನಾಯಕ ಜಾತಿಯವರು ಮಾಡುತ್ತಿದ್ದರು. ಈ ರೀತಿಯ
ವಿವರಗಳು ಇದೇ ಪರಿಸರದ ಇನ್ನೂ ಹಲವಾರು ಶಾಸನಗಳಿಂದ ತಿಳಿದುಬರುತ್ತದೆ. ಹಾಗೆಯೇ ತಳವಾರಿಕೆ ವೃತ್ತಿಯು
ವಂಶಪಾರಂಪರ್ಯವಾಗಿದ್ದುದೂ ಸಹ ಪ್ರಸ್ತುತ ಶಾಸನದಿಂದ ತಿಳಿದುಬರುತ್ತದೆ. ಇದಕ್ಕೆ ಪೂರಕವಾಗಿ
ಇಂದಿಗೂ ಈ ಭಾಗದಲ್ಲಿ ನಾಯಕ ಜಾತಿಯವರು ತಳವಾರಿಕೆ ವೃತ್ತಿಯನ್ನು ಮಾಡುತ್ತಿರುವುದು
ಕಂಡುಬರುತ್ತದೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕು ಪ್ರದೇಶವು
ಐತಿಹಾಸಿಕವಾಗಿ ಶ್ರೀಮಂತವಾಗಿದೆ. ಮೇಲೆ ಚರ್ಚಿಸಿದ ಅಪರೂಪದ ಸ್ಮಾರಕಶಿಲ್ಪಗಳ ಜೊತೆಗೆ ಇನ್ನು
ಸಾಕಷ್ಟು ಸಂಖ್ಯೆಯ ಶಿಲ್ಪಗಳನ್ನು ಇಲ್ಲಿ ನೋಡಬಹುದು. ತಾಲ್ಲೂಕಿನ ಸಿಡ್ಲಯ್ಯನಕೋಟೆ, ಚಿಲ್ಲಹಳ್ಳಿ, ಧರ್ಮಪುರ, ಹರತಿಕೋಟೆ, ಬಬ್ಬೂರು, ದೇವಿಗೆರೆ, ಜವನಗೊಂಡನಹಳ್ಳಿ, ತವಂದಿ, ಉಡುವಳ್ಳಿ, ಹಿರಿಯೂರು, ಐಮಂಗಲ, ಗುಯಿಲಾಳು, ಮೇಟಿಕುರ್ಕೆ, ವದ್ದೀಕೆರೆ ಇತ್ಯಾದಿ ಗ್ರಾಮಗಳಲ್ಲಿ ಸ್ಮಾರಕ ಶಿಲ್ಪಗಳು ಕಂಡುಬರುತ್ತವೆ. ಇವುಗಳಲ್ಲಿ ಕೆಲವೇ
ಕೆಲವು ರಕ್ಷಿತ ಶಿಲ್ಪಗಳನ್ನು ಹೊರತುಪಡಿಸಿದರೆ, ಉಳಿದವುಗಳಿಗೆ ಸಂರಕ್ಷಣೆಯ ಅವಶ್ಯಕತೆಯಿದೆ. ಸ್ಥಳೀಯ ಜನರಿಗೆ ಅವುಗಳ
ಮಹತ್ವ ತಿಳಿಯದಿರುವುದೇ ಅವುಗಳ ಈ ಸ್ಥಿತಿಗೆ ಕಾರಣ. ಅವುಗಳು ಕೇವಲ ನಿರ್ಜೀವ ವಸ್ತುಗಳಾಗಿರದೆ, ಅವುಗಳಿಗೂ ಜೀವವಿದೆ ಎನ್ನುವುದನ್ನು
ತಿಳಿಯಹೇಳಬೇಕಿದೆ. ಅವುಗಳು ಸಮಕಾಲೀನ ಸಮಾಜ, ಸಂಸ್ಕೃತಿ ಮತ್ತು ಜನಾಂಗೀಯ ವಿವರಗಳನ್ನು ನೀಡುವ ಪ್ರಮುಖ
ಆಕರಗಳಾಗಿದ್ದು ಅವುಗಳಿರುವುದರಿಂದಲೇ ಈ ಪ್ರದೇಶಕ್ಕೆ ಐತಿಹಾಸಿಕ ಮಹತ್ವವಿದೆ ಎನ್ನುವ ಅರಿವನ್ನು
ಮೂಡಿಸುವ ಅಗತ್ಯವಿದೆ.
[ಕ್ಷೇತ್ರಕಾರ್ಯ ಸಂದರ್ಭದಲ್ಲಿ
ನನ್ನೊಂದಿಗಿದ್ದು ಸಹಕರಿಸಿದ ಸಹೋದರಿ ಡಾ. ಬಿ. ಜಯಮ್ಮ ಹಾಗು ವಿದ್ಯಾರ್ಥಿ ಮಿತ್ರ ಮಹೇಶ ಎಂ.
ಅವರಿಗೆ ಕೃತಜ್ಞತೆಗಳು].
ಆಧಾರಸೂಚಿ
೧. ಡಾ.
ಆರ್. ಶೇಷಶಾಸ್ತ್ರಿ, ಕರ್ನಾಟಕದ ವೀರಗಲ್ಲುಗಳು, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು-೨೦೦೪.
೨. ಡಾ.
ಬಿ. ಸುರೇಶ, ಚಿತ್ರದುರ್ಗ-ದಾವಣಗೆರೆ ಜಿಲ್ಲೆಗಳ ದೇವಾಲಯಗಳು, ಸಂಶೋಧನಾ ಪ್ರಕಾಶನ, ಬಾಲೇನಹಳ್ಳಿ, ಚಿತ್ರದುರ್ಗ ಜಿಲ್ಲೆ, ೨೦೦೮.
೩. ಎಸ್.ಕೆ.
ರಾಮಚಂದ್ರರಾವ್, ಮೂರ್ತಿ ಶಿಲ್ಪ ನೆಲೆ-ಹಿನ್ನೆಲೆ, ಬೆಂಗಳೂರು, ವಿ.ವಿ. ಬೆಂಗಳೂರು, ೧೯೭೪.
೪. ಟಿ.ಎ.
ಗೋಪಿನಾಥರಾವ್, ದ ಎಲಿಮೆಂಟ್ಸ್ ಆಫ್ ಹಿಂದೂ ಐಕನೋಗ್ರಫಿ, ಸಂ. ೧, ಭಾಗ-೨, ೧೯೯೭.
No comments:
Post a Comment