Saturday, November 24, 2012

ಡಾ. ದೇವರಕೊಂಡಾರೆಡ್ಡಿ-ಲೇಖನ



# ೩೫/೧, ೨೦  ಮುಖ್ಯರಸ್ತೆ, ವೆಂಕಟೇಶ್ವರ ಲೇಔಟ್, 
ಮಾರುತಿನಗರ, ಬಿ.ಟಿ.ಎಂ. ಮೊದಲ ಹಂತ, 
ಬೆಂಗಳೂರು-೫೬೦೦೬೮.
 ಕದಂಬ ರವಿವರ್ಮನ ದಾವಣಗೆರೆಯ ತಾಮ್ರ ಶಾಸನ

 ಶಾಸನದ ಜೆರಾಕ್ಸ್ (ನೆರಳಚ್ಚು) ಪ್ರತಿಯು ಗಂಗಾವತಿಯ ಶರಣಬಸವ ಎಂಬುವವರ ಕಡೆಯಿಂದ ನನ್ನ ಕಡೆಗೆ ಬಂತು. ಇವರಿಗೂ ದಾವಣಗೆರೆಯ ಕಡೆಯವರೊಬ್ಬರು ನೀಡಿದರಂತೆ. ಈ ಶಾಸನ ದೊರೆತ ಸ್ಥಳವಾಗಲೀ, ಯಾರಿಂದ ಬಂತೆಂಬ ಬಗ್ಗೆಯಾಗಲೀ ಅವರು ತಿಳಿಸಲಿಲ್ಲ. ಈಗ ಅವರ ದೂರವಾಣಿ ಸಂಖ್ಯೆಯೂ ಬದಲಾಗಿದ್ದು ಅವರನ್ನು ಸಂಪರ್ಕಿಸುವುದು ಸಾಧ್ಯವಾಗುತ್ತಿಲ್ಲ. ಹೀಗಾಗಿ ಈ ಶಾಸನಕ್ಕೆ ಸಂಬಂಧಿಸಿದ ಅನೇಕ ವಿವರಗಳು ನೇಪಥ್ಯದಲ್ಲಿಯೇ ಉಳಿದಿವೆ. ಈ ಶಾಸನ ಮೇಲ್ನೋಟಕ್ಕೆ ಮೂರು ಪತ್ರಗಳನ್ನು ಹೊಂದಿದ್ದು ಮೊದಲ ಮತ್ತು ಕಡೆಯ ಫಲಕಗಳಲ್ಲಿ ಒಳಭಾಗದಲ್ಲಿ ಮಾತ್ರ ಬರೆದಿರುವಂತೆ ತಿಳಿಯುತ್ತದೆ. ಉಂಗುರ ಇತ್ತೇ ಇಲ್ಲವೇ ? ಇದ್ದಲ್ಲಿ ಮುದ್ರೆ ಯಾವುದಿತ್ತು,ಹೇಗಿತ್ತು ಎಂಬ ಬಗೆಗೂ ವಿವರಗಳು ತಿಳಿಯುತ್ತಿಲ್ಲ. ಈ ಎಲ್ಲಾ ಕಾರಣಗಳಿಂದ ಇದು ದಾವಣಗೆರೆ ಯಲ್ಲಿ ದೊರೆತಿರುವುದರಿಂದ ಇದಕ್ಕೆ ರವಿವರ್ಮನ ದಾವಣಗೆರೆ ತಾಮ್ರಶಾಸನವೆಂದು ಕರೆದಿದ್ದೇನೆ.
ಶಾಸನ ಚಿತ್ರವನ್ನು ಜೆರಾಕ್ಸ್ ಮಾಡಿಸಿದ್ದು ಜೆರಾಕ್ಸ್ ಕಾಗದವನ್ನು ಮಡಚಿ ತಂದ ಕಾರಣದಿಂದ ಕಾಗದದ ಮಡತೆ ಬಳಿಯ ಅಕ್ಷರಗಳ ಕಪ್ಪು ಬಣ್ಣ ಹಾಳಾಗಿದೆ. ಇದರಿಂದ ಶಾಸನದ ಅಕ್ಷರಗಳನ್ನು ಗುರುತಿಸಲು ಅಲ್ಲಲ್ಲಿ ತೊಂದರೆ ಯಾಗಿದೆ. ೧೬ ಸಾಲು ಪಾಠವನ್ನು ಹೊಂದಿರುವ ಈ ಶಾಸನದಲ್ಲಿ ಪ್ರತಿಯೊಂದು ಹಲಗೆಯಲ್ಲಿ ನಾಲ್ಕು ನಾಲ್ಕು ಸಾಲುಗಳಿವೆ. ಅಕ್ಷರಗಳನ್ನು ಬಿಡಿಬಿಡಿಯಾಗಿ ಬರೆಯಲಾಗಿದೆ. ಅಕ್ಷರಗಳ ತಲೆಯ ಮೇಲೆ ಚೌಕಾಕಾರದ ತಲೆಕಟ್ಟಿಲ್ಲ. ಅಕ್ಷರಗಳ ಒಟ್ಟು ವಿನ್ಯಾಸವೂ ಚೌಕಾಕಾರದಿಂದ ಬಿಡುಗಡೆ ಗೊಂಡಿರುವುದನ್ನು ಕಾಣಬಹುದು.  ಮತ್ತು ಅಕ್ಷರಗಳ ಸ್ಪಷ್ಟ ವ್ಯತ್ಯಾಸ,  ಮತ್ತು  ಕಾರಗಳ ವ್ಯತ್ಯಾಸ  ಮತ್ತು  ಕಾರಗಳ ಬರೆವಣಿಗೆಯಲ್ಲಿ ಎದ್ದು ಕಾಣುವಂತಹ ವ್ಯತ್ಯಾಸವನ್ನು ತೋರಿಸಲಾಗಿದೆ. ಒಟ್ಟಾರೆ ಅಕ್ಷರಗಳನ್ನು ಗಮನಿಸಿದಾಗ ಕ್ರಿ.ಶ. ೬ನೆಯ ಶತಮಾನ ಆರಂಭ ಕಾಲದ ಅಕ್ಷರ ಲಕ್ಷಣಗಳನ್ನು ಒಳಗೊಂಡಿದೆ. ಲಿಪಿ ಮತ್ತು ಪಾಠದ ಅಧ್ಯಯನದಿಂದ ಇದೊಂದು ನೈಜ ಶಾಸನವೆಂದು ಹೇಳಬಹುದಾಗಿದೆ.
ಶಾಸನದಲ್ಲಿ ಬನವಾಸಿಯನ್ನಾಳಿದ ಕದಂಬರ ಪಾರಂಪರಿಕ ವಿಶೇಷಣಗಳನ್ನು ಬಳಸಿದ್ದು ಮುಂದೆ ಕದಂಬ ರಾಜ ರವಿವರ್ಮನನ್ನು ಹೆಸರಿಸಿದೆ. ಸಂಸ್ಕೃತ ಭಾಷೆ, ಕನ್ನಡ ಲಿಪಿಯಲ್ಲಿರುವ ಈ ಶಾಸನದಲ್ಲಿ ಕೊನೆಯ ಅಂದರೆ ೧೬ನೆಯ ಸಾಲು ಕನ್ನಡ ಭಾಷೆಯಲ್ಲಿರುವುದು ವಿಶೇಷ. ಸಂಸ್ಕೃತ ಭಾಷಾ ಬರೆವಣಿಗೆಯಲ್ಲಿ ಅಲ್ಲಲ್ಲಿ ಸ್ಖಾಲಿತ್ಯಗಳನ್ನು ಕಾಣಬಹುದು.
ವೈಜಯನ್ತಿಯಲ್ಲಿ ಮಾತೃಗಣಗಳಿಂದ ಅಭಿಷಿಕ್ತನಾದ ಮಹಾಸೇನನ [ಕೃಪೆಗೆ ಪಾತ್ರರಾದ], ಮಾನವ್ಯಸ ಗೋತ್ರಕ್ಕೆ ಸೇರಿದ ಹಾರೀತಿಯ ಮಕ್ಕಳೆನಿಸಿದ ಸ್ವ-ಅಧ್ಯಯನ, ಚರ್ಚೆ ಮೊದಲಾದವುಗಳನ್ನು ನಡೆಸುವ ಕದಂಬ ವಂಶದ ಶ್ರೀ ರವಿವರ್ಮನು ವೈಜಯನ್ತಿಯಿಂದ ರಾಜ್ಯಭಾರ ಮಾಡುತ್ತಿದ್ದ. ಈ ರವಿವರ್ಮನು ಕೌಣ್ಡಿನ್ಯ ಗೋತ್ರಕ್ಕೆ ಸೇರಿದ ವೇದಗಳಲ್ಲಿ ಪಾರಂಗತನಾದ ಷಟ್ಕರ್ಮ್ಮಗಳಲ್ಲಿ ನಿರತನಾದ ದೇವಶರ್ಮ್ಮ ಎಂಬ ಬ್ರಾಹ್ಮಣನಿಗೆ  ಕೊಳಯಿ ಎಂಬ ಗ್ರಾಮದಲ್ಲಿ ಪುಕ್ಕೊಳಿ ಕ್ಷೇತ್ರದಲ್ಲಿ ೭೪ ನಿವರ್ತನದಷ್ಟು ಭೂಮಿಯನ್ನು ಮಹಾಪೌರ್ಣಮಿ ಯಂದು ನೀಡಿದಂತೆ ಹೇಳಿದೆ. ಮುಂದೆ ಶಾಪಾಶಯ ಮುಗಿದ ಮೇಲೆ ಕೊನೆಯಲ್ಲಿ ದೇವರ ಸ್ವಾಮಿಗಳ್ಗೆ ಮತ್ತು ಭೀಮಣೋ[ಜ]ಗೆ ಏನನ್ನೋ ನೀಡಿದಂತೆ ಹೇಳಿದೆ. ಕದಂಬರ ಶಾಸನಗಳಲ್ಲಿ ಕನ್ನಡ ಭಾಷೆ ಸ್ವಲ್ಪ ಸ್ವಲ್ಪವೇ ನುಸುಳುತ್ತಿದ್ದುದರ ಸಂಕೇತ ಇದಾಗಿದೆ. ಈ ಕಾಲಕ್ಕಾಗಲೇ ಹಲ್ಮಿಡಿ ಶಾಸನ ರಚನೆಯಾಗಿತ್ತು. ಕೆಲಗುಂದ್ಲಿ ಶಾಸನ ಕನ್ನಡದಲ್ಲಿಯೇ ರಚನೆಯಾಗಿದೆ. ಇದರಲ್ಲಿ ಪೂರ್ವದ ಹಳಗನ್ನಡ ಭಾಷೆಯ ಸ್ಪಷ್ಟ ಬಳಕೆ ಕಂಡುಬರುತ್ತದೆ. ಇದು ರವಿವರ್ಮನ ಕಾಲದ್ದೇ ಆದ ಶಾಸನವೆಂಬುದು ಗಮನಾರ್ಹ ಅಂಶವಾಗಿದೆ. ಹೀಗಾಗಿ ರವಿವರ್ಮನ ಕಾಲಕ್ಕೆ ಕನ್ನಡವನ್ನು ಶಾಸನಗಳಲ್ಲಿ ಬಳಸು ತ್ತಿದ್ದುದು ಹೆಚ್ಚಾಗಿ ಕಂಡುಬಂದಿದೆ. ಇದರಲ್ಲಿ ಅಕ್ಷರ ಸ್ಖಾಲಿತ್ಯಗಳು ಇರುವ ಪ್ರಯೋಗಗಳೂ ಹೇರಳವಾಗಿವೆ. ಇವನ ಕಾಲದ ಒಂದು ಶಾಸನದಲ್ಲಿ ನಿವರ್ತನ ಎಂಬ ಶಬ್ದದ ಸ್ಥಾನದಲ್ಲಿ ಮತ್ತರು ಎಂಬ ಪ್ರಯೋಗವೂ ಬಂದಿದೆ. ಶಾಸನ ಪಾಠದಲ್ಲಿ ಚೌಕ ಕಂಸದಲ್ಲಿ [ ] ಸೂಚಿಸಿರುವುದು ಊಹಾಪಾಠವಾಗಿದ್ದು, [ *] ಈ ರೀತಿಯ ಕಂಸದಲ್ಲಿ ಸೂಚಿಸಿರುವುದು ಅಸ್ಪಷ್ಟಾಕ್ಷರ ಸಂದರ್ಭದ ಪಾಠವೆಂದು ತಿಳಿಯಬೇಕು.
ಶಾಸನಪಾಠ
ಮೊದಲನೆಯ ಹಲಗೆಯ ಹಿಂಭಾಗ
        ಸ್ವಸ್ತಿ ವಿಜಯ ವೈಜಯನ್ತ್ಯಾ[ಮ್]ಸ್ವಾಮಿಮಹಾಸೇನ            ಮಾ[ತೃ]
        ಗಣಾನುದ್ಧ್ಯತಾಭಿಷಿಕ್ತಾ[ಮ್] ಮಾನವ್ಯಸ ಗೋತ್ರೋ            ಹಾರೀತೀ
        ಪುತ್ರಃ ಪ್ರತಿಕೃತ ಸ್ವಾದ್ಧ್ಯಾಯ ಚರ್ಚಾಮ್ಕದಮ್ಬಾನಾಂ
        ಮಹಾರಾಜಾ ಶ್ರೀ ರವಿವರ್ಮ್ಮಾ ಕೌಣ್ಡಿನಿ ಸಗೋ

ಎರಡನೆಯ ಹಲಗೆಯ ಮುಂಭಾಗ
        ತ್ರಾಯ ವೇದ ಪಾರಗಾಯ ಷಟ್ಕರ್ಮ್ಮ ನಿರತಾಯದೇವ
        ಶರ್ಮ್ಮಣೇ ಕೊಳಯಿ ಗ್ರಾಮೇ ಪುಕ್ಕೊಳಿ ಕ್ಷೇತ್ರಂ ರಾಜ
        ಮಾನೇನ ಚತುಸ್ಸಪ್ತತಿ ನಿವರ್ತ್ತನಂ ವಟಾಕ ಬ * . ಯ
        ದುದಕ ಸ್ರಾವೇ ಸರ್ವ್ವ ಪರಿಹಾರ ಯುಕ್ತಂ ಮಹ

ಎರಡನೆಯ ಹಲಗೆ ಹಿಂಭಾಗ
        ಪೌರ್ಣ್ಣಮಾಸ್ಯಾ[ಮ್] ಸ್ವವರ್ದ್ಧಮಾನ ವಿಜಯ ಸಂವತ್ಸರೇ .
೧೦     . . . . ಕದತ್ತ ವಾ . ನು . ರಿಕೂಲ್ಯೇಷಣ್ಣಿವರ್ತ್ತನಗ್ರಹಾ
೧೧     . . . ಪೂರ್ವರಾಜ ಸ್ಥಿತ್ಯಾ . . ಯೋಸ್ಯಾಪಹರ್ತ್ತಾಸ
೧೨     ಮಹಾ ಪಾತಕ ಸಂಯುಕ್ತೋ ಭವತಿ ಯೋಭಿ ರಕ್ಷಿತಾ


ಮೂರನೆಯ ಹಲಗೆಯ ಮುಂಭಾಗ
೧೩     ಸಪುಣ್ಯ ಫಲ ಭಾಗ್ಭವತೀತ್ಯುಕ್ತಞ್ಚ [ಬ][ಹುಭಿ*]
೧೪     ರ್ವ್ವಸುಧಾಭುಕ್ತಾ ರಾಜಭಿಸ್ಸಗರಾದಿಭಿರ್ಯ್ಯಸ್ಯ
೧೫     ಯಸ್ಯ ಯದಾ ಭೂಮಿ ತಸ್ಯ ತಸ್ಯ ತದಾ ಫಲಮಿ
೧೬  ತಿ ದೇವರ ಸ್ವಾಮಿಗಳ್ಗೆ ಭೀಮಣೋ[ಜ]ಗೆ [ಸ್ವ]ದತ್ತಂ||





Wednesday, November 21, 2012

ಇತಿಹಾಸ ಕಾರರು ಸರಣಿ-೨



  







           ಎಚ್‌... ಶೇಷಗಿರಿರಾವ್‌
          ೫/೧. ೨ನೇ ಮುಖ್ಯ ರಸ್ತ, ಎನ್‌ಆರ್‌ ಕಾಲನಿ
        ಬೆಂಗಳೂರು-೧೯.ದೂರವಾಣಿ-೯೪೪೮೪೪೨೩೨೩
          appaaji@gmail.com

ಶಾಸನ ಮತ್ತು ಸಾಹಿತ್ಯ ಕ್ಷೇತ್ರದ ಸವ್ಯಸಾಚಿ -ಆರ್‌. ನರಸಿಂಹಾಚಾರ್ಯ
ಕನ್ನಡ ನಾಡಿನ  ಶಾಸನ ಲೋಕದಲ್ಲಿ ಬಿ .ಎಲ್‌. ರೈಸ್‌  ಬೆಳಗಿದ ಜ್ಯೋತಿಯನ್ನು ಪ್ರಜ್ವಲಗೊಳಿಸಿದ ಸಶಕ್ತ   ಉತ್ತರಾಧಿಕಾರಿ ಮತ್ತು .  ಕನ್ನಡ ಭಾಷೆ ಮತ್ತು ಕಾವ್ಯದ ಅಧ್ಯಯನಕ್ಕೆ ಆರಂಭ ಮಾಡಿದರೆ ಕವಿ ಕಾವ್ಯದ ಬಗ್ಗೆ ಯಾವುದೇ ಮಾಹಿತಿ ಬೇಕಾದರೆ ಇಂದಿಗೂ ನಮಗೆ ಅತಿ ಮುಖ್ಯ ಆಕರ ಗ್ರಂಥವಾದ  ಕರ್ನಾಟಕ ಕವಿ ಚರಿತ್ರೆಯ ಕೊಡುಗೆ ನೀಡಿದ,ಶಾಸನ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಸವ್ಯಸಾಚಿಯಾಗಿ   ಕನ್ನಡಮ್ಮನ ಸೇವೆಗೆ ಕಟಿಬದ್ಧನಾದ ಮೊದಲ ದೇಶೀಯ ವ್ಯಕ್ತಿ ರಾಮಾನುಜಾಪುರಂ ನರಸಿಂಹಾಚಾರ್ಯರು
 ಆರ್‌ ನರಸಿಂಹಾಚಾರ್ಯರರ ಜನನ ಮಂಡ್ಯ ಜಿಲ್ಲೆಯ, ಶ್ರೀರಂಗಪಟ್ಟಣ ತಾಲೂಕಿನ ಅರೆಕೆರೆ ಬಳಿಯ ಕೊಪ್ಪಲು ಗ್ರಾಮದಲ್ಲಿ. ತಂದೆ ತಿರುನಾರಾಯಣ ಪೆರುಮಾಳ್‌ ಮತ್ತು ತಾಯಿ ಶಿಂಗಮ್ಮಾಳ್‌ .ಅವರ ಜನನ ೧೮೬೦ ರ ಏಪ್ರಿಲ್‌ ತಿಂಗಳಲ್ಲಿಅವರದು ಸಂಪ್ರದಾಯಸ್ಥ ಮನೆತನ. ಅವರ ಮೊದಲ ಅಕ್ಷರಾಭ್ಯಾಸ ಹಳ್ಳಿಯಲ್ಲಿ. ಅಲ್ಲಿ ಕನ್ನಡ ಕಲಿತರೆ ಮನೆಯಲ್ಲಿ ತಂದೆಯಿಂದ ಸಂಸ್ಕೃತ ಅಧ್ಯಯನ.. ನಂತರ ಮದ್ರಾಸಿನ ಪ್ರಸಿಡೆನ್ಸಿ ಕಾಲೇಜಿನಲ್ಲಿ ಶಿಕ್ಷಣ ಮುಂದುವರಿಸಿ ತಮಿಳುಭಾಷೆಯಲ್ಲಿ ಮೆಟ್ರಿಕ್ಯುಲೇಷನ್‌ ಮುಗಿಸಿದರು. ಅವರು ಪದವಿ ಶಿಕ್ಷಣ ಪಡೆದುದು ಬೆಂಗಳೂರಿನ ಸೆಂಟ್ರಲ್‌ಕಾಲೇಜಿನಲ್ಲಿ.  ವಿದ್ಯಾರ್ಥಿಯಿದ್ದಾಗಲೇ  ವಿವಾಹವಾಯಿತು. ಳೆಯವಯಸ್ಸಿನಲ್ಲೆ ಸಂಸಾರದ ನಿರ್ವಹಣೆಯ ಹೊಣೆ. ಬಿಎ. ಪದವಿ ಪಡೆದ ನಂತರ ಪ್ರೌಢಶಾಲೆಯಲ್ಲಿ ಅಧ್ಯಾಪನ.  ಅನೇಕ ಊರುಗಳಲ್ಲಿ ಕೆಲಸ ನಿರ್ವಹಣೆ.  ಆದರೆ  ಅವರದು  ಇಂಗದ ಜ್ಞಾನದಾಹ. ಗಳಿಕೆಯ ಜೊತೆ ಕಲಿಕೆ ಅವರ ಮಂತ್ರ. ಅವರ ಅನವರತ  ಅಧ್ಯಯನದ ಫಲವಾಗಿ. ಮದ್ರಾಸ್‌ ವಿಶ್ವವಿದ್ಯಾನಿಲಯದಿಂದ ೧೮೯೪ ರಲ್ಲಿ ಎಂ ಎ ಪದವಿ ಪಡೆದರು... ನಂತರ  ವಿದ್ಯಾಇಲಾಖೆಯಲ್ಲಿ ಭಾಷಾಂತರಕಾರನೆಂದು ನೇಮಕವಾಯಿತು. ಅಲ್ಲಿ ಐದುವರ್ಷ ಸೇವೆ ಮಾಡಿದರು.. ಆಗಲೇ ಸಾಹಿತ್ಯಾಸಕ್ತಿಯು ಅವರನ್ನು ಕೃತಿ ರಚನೆಗೆ ಪ್ರೇರಣೆ ನೀಡಿತು. ಇವರ ಪ್ರೌಢಿಮೆ ಗಮನಿಸಿ ಪ್ರಾಚ್ಯವಸ್ತು ಇಲಾಖೆಯಲ್ಲಿ ಬಿ. ಎಲ್‌. ರೈಸರಿಗೆ ಸಹಾಯಕರಾಗಿ ನೇಮಕವಾಯಿತು. 


ಏಳು ವರ್ಷಗಳಕಾಲ ರೈಸ್‌ರ ಶಾಸನ ಸಂಬಂಧಿ ಕೆಲಸಗಳಲ್ಲಿ ಬಲಗೈ ಬಂಟರಾಗಿ ದುಡಿದರು. ಆ ಅವಧಿಯಲ್ಲಿ ರೈಸ್‌ರವರ ಎಲ್ಲ ಪ್ರಾಚ್ಯವಸ್ತು ಸಂಗ್ರಹಣೆ ಮತ್ತು ಸಂಪಾದನೆಯಲ್ಲಿ ಇವರದು ಸಿಂಹಪಾಲು. ರೈಸ್‌ ಅವರಿಗೆ ನಿವೃತ್ತಿಯಾದ ನಂತರ ನಿರ್ದೇಶಕರ ಹುದ್ದೆಗೆ ಬೇರೊಬ್ಬರನ್ನು ಹುಡುಕುವ ಅಗತ್ಯವೇ ಇರಲಿಲ್ಲ ಅವರ ಉತ್ತರಾಧಿಕಾರಿಯಾಗಲು ಆಚಾರ್ಯರೇ ಸೂಕ್ತ ವ್ಯಕ್ತಿಯಾಗಿದ್ದರು. ಅವರಿಗೆ ನಿರ್ದೇಶಕರಾಗಿ ನೇಮಕಾತಿ ಆಯಿತು.. ನಿರ್ದೇಶಕರಾದ ಮೇಲೆ ಶಾಸನಗಳ ಸಂಶೋಧನೆ ಭರದಿಂದ ಸಾಗಿತು. ಹಳ್ಳಿಹಳ್ಳಿಗಳಿಗೆ ಸಂಚರಿಸಿ ಸರಿ ಸುಮಾರು ೫೦೦೦ ಶಾಸನಗಳ ಸಂಗ್ರಹಮಾಡಿದರು. ಅವರು ಸಂಗ್ರಹಿಸಿದ ವಸ್ತುಗಳನ್ನು ಕುರಿತು  ಸಿದ್ಧಪಡಿಸಿದ ವಾರ್ಷಿಕ ವರದಿಗಳು ಸಮಗ್ರವಾಗಿರುತಿದ್ದವು. ಹೊಸದಾಗಿ ಸಂಗ್ರಹಿಸಿದ ಶಾಸನಗಳನ್ನು ಎಪಿಗ್ರಾಫಿಯಾ ಕರ್ಣಾಟಿಕದ ಪುರವಣಿಗಳಾಗಿ ಪ್ರಕಟಿಸಿಸಲು ಸಿದ್ಧ ಮಾಡಿದರು.ಎಪಿಗ್ರಾಫಿಕಯಾ ಕರ್ಣಾಟಿಕ ಮತ್ತು ಎಂ.ಎ. ಆರ್‌ಗಳ ಅಕಾರಾದಿ ಶಬ್ದ ಸೂಚಿಯನ್ನು ಸಿದ್ಧ ಮಾಡಿದರು. ಶ್ರವಣಬೆಳಗೊಳದ ಶಾಸನ ಸಂಪುಟವನ್ನು ಆಮೂಲಾಗ್ರವಾಗಿ ಪರಿಷ್ಕರಿಸಿದರು.

ಬಿ ಎಲ್‌ ರೈಸ್‌ರವರು ಸಂಪಾದಿಸಿದ  ೨ನೇ ಸಂಪುಟದಲ್ಲಿ ಶ್ರವಣ ಬೆಳಗೊಳದ  ೧೪೪ ಶಾಸನಗಳು ಮಾತ್ರ ಇದ್ದವು.ಆಚಾರ್ಯರ ಪರಿಷ್ಕರಣೆಯಲ್ಲಿ ಅವುಗಳ ಸಂಖ್ಯೆ ೫೦೦ಕ್ಕೆ ಏರಿತ್ತು. ಶ್ರವಣಬೆಳಗೊಳದ ಬಸದಿಗಳ ವಾಸ್ತುಶಿಲ್ಪಕುರಿತಾದ ಅವರ ಬರಹಗಳು ಇತೀಚಿನ ಹೊಸ ಪರಿಷ್ಕೃತ ಸಂಪುಟಗಳು ಬಂದಮೇಲೂ ಅತಿಮುಖ್ಯ ಆಕರ ಸಾಮಗ್ರಿಯಾಗಿ ಉಳಿದಿವೆ.
ನರಸಿಂಹಾಚಾರ್ಯರ ಸಾಹಿತ್ಯ ರಚನೆಯು ವಿದ್ಯಾ ಇಲಾಖೆಯಲ್ಲಿ ಇದ್ದಾಗಲೇ ಮೊದಲಾಗಿತ್ತು. ಪಂಪಭಾರತವನ್ನು ರೈಸ್‌ ಪರಿಷ್ಕರಿಸುವಾಗ ಬಹಳಷ್ಟು ಸಹಾಯ ಮಾಡಿದ್ದರು. ಬರಿ ಶಾಸನ ಲೋಕದಲ್ಲಿ ಮಾತ್ರವಲ್ಲದೆ ಕನ್ನಡದ ಕಾವ್ಯ ಲೋಕಕ್ಕೂ ಅವರ ಕೊಡುಗೆ ಅಪಾರ.  ಲಕ್ಷಣ ಶಾಸ್ತ್ರ ಕುರಿತಾದ ’ಕಾವ್ಯಾವಲೋಕನ’,  ಭಾಷಾ ಭೂಣ ಮತ್ತು ಶಬ್ದಾನುಶಾಸನ” ಗ್ರಂಥಗಳನ್ನು ತುಂಬ ಸಮರ್ಥವಾಗಿ ಸಂಪಾದಿಸಿದರು. ಕನ್ನಡದಲ್ಲಿ ಅವರ ಕೀರ್ತಿಯನ್ನು ಕೊನೆಯ ತನಕ ಉಳಿಸಿರುವುದು  ಅವರ ಸ್ವತಂತ್ರ ಕೃತಿ.  ’ ಕರ್ನಾಟಕ ಕವಿಚರಿತ್ರೆ” ಯಂಥಹ ಬೃಹತ್‌ ಕೃತಿಯನ್ನು ಮೂರು ಸಂಪುಟಗಳಲ್ಲಿ ಪ್ರಕಟಿಸಿದರು ಒಂದು ಸಂಸ್ಥೆಯಲ್ಲಿ ಹತ್ತಾರು ಜನರತಂಡ ಹಲವಾರು ವರ್ಷಗಳಲ್ಲಿ ಮಾಡಬಹುದಾದ ಕೆಲಸವನ್ನು ಅವರು ಏಕಾಂಗಿಯಾಗಿ ಮಾಡಿರುವುದು ಅವರ ದಣಿವರಿಯದ ದುಡಿಮೆ,ಸತತ ಪರಿಶ್ರಮ ಅದ್ಭುತ ವಿದ್ವತ್‌ ಮತ್ತು ಸಂಯಮಶೀಲ ಶ್ರದ್ಧೆಗಳಿಗೆ ಸಾಕ್ಷಿಯಾಗಿದೆ. ಕನ್ನಡದ ಯಾವುದೇ ಕವಿಯಬಗ್ಗೆ ತಿಳಿದುಕೊಳ್ಳಲು ಮೊರೆ ಹೋಗಬೇಕಾದದ್ದು ಅವರ ಈ ಕೃತಿಗೆ.  ಕನ್ನಡಸಾಹಿತ್ಯ ಇತಿಹಾಸದಲ್ಲಿ ಅವರ ಸಾಧನೆ ಒಂದು ಮೈಲಿಗಲ್ಲು
 ನರಸಿಂಹಾಚಾರ್ಯರ ಕನ್ನಡ ನಾಡು, ನುಡಿಯ  ಸೇವೆಯ ಮಹತ್ವವನ್ನು  ವಿದ್ವತ್‌ಲೋಕ ಗುರುತಿಸಿತು. ಅವರಿಗೆ ೧೯೦೭ರಲ್ಲಿ ಎಂಆರ್‌ ಎ .ಎಸ್‌ ಸದಸ್ಯತ್ವ ಲಭಿಸಿತು.  ’ಪ್ರಾಕ್ತನ ವಿಮರ್ಶ ವಿಚಕ್ಷಣ’  ಮತ್ತು ’ರಾವ್‌ಬಹದ್ದೂರ್‌’ ಪ್ರಶಸ್ತಿಗಳನ್ನು ಕೊಡಲಾಯಿತು. ಅವರ ಸಾಹಿತ್ಯ ಸೇವೆಗಾಗಿ  ೧೯೧೮ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ೪ನೇ ಸಮ್ಮೇಳನದ ಅಧ್ಯಕ್ಷ ಪದವಿ ನೀಡಿ ಗೌರವಿಸಲಾಯಿತು. ಪ್ರಾಚ್ಯಸಂಶೋಧನಾ ಕಾರ್ಯದ ಮಹತ್ವ  ಗುರುತಿಸಿ ’ಕರ್ನಾಟಕ ಪ್ರಾಚ್ಯ ವಿದ್ಯಾವೈಭವ ’ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ರಾಷ್ಟ್ರೀಯ ಮಟ್ಟದಲ್ಲೂ ಅವರ ಸಾಧನೆಯನ್ನು ಮನ್ನಿಸಿ  ಭಾರತ ಸರ್ಕಾರವು ಕೂಡಾ ಅವರಿಗೆ “ ಮಹಾಮಹೋಪಾಧ್ಯಾಯ” ಪ್ರಶಸ್ತಿನೀಡಿ ಗೌರವ ಸಲ್ಲಸಿತು
ಅವರು ಕನ್ನಡ ಕಾವ್ಯ ಮತ್ತು ಕರ್ನಾಟಕಇತಿಹಾಸದ ಅಧ್ಯಯನಕ್ಕೆ ಶಾಸ್ತ್ರೀಯ ಅಡಿಪಾಯ ಹಾಕಿದ ಮಹನೀಯರು . ತಮ್ಮ ಇಳಿವಯಸ್ಸಿನಲ್ಲೂ ಅವರ ಕನ್ನಡ ಸೇವೆ ಕಾರ್ಯ ಸ್ಥಗಿತವಾಗಲಿಲ್ಲ. ಅವರು ತಮ್ಮ ೭೭ನೇ ವಯಸ್ಸಿನಲ್ಲಿ ಇಹಲೋಕ ತೊರೆಯುವ ತನಕ ಕನ್ನಡಕ್ಕಾಗಿ ದುಡಿದರು..ಅವರು ಕಾಲವಾದರೂ  ಕನ್ನಡಿಗರ ಮನ ಮಾನಸದಲ್ಲಿ ಶಾಶ್ವತವಾಗಿ ನೆಲಸಿರುವರು. ಅಂದಿಗೂ ಇಂದಿಗೂ ಕನ್ನಡದ ’ಮಹಾಮಹೋಪಾಧ್ಯಾಯರೆಂದರೆ  ಆರ್‌ ನರಸಿಂಹಾಚಾರ್ಯರೊಬ್ಬರೇ.

Tuesday, November 20, 2012

ಡಾ. ಮಲ್ಲಿಕಾರ್ಜುನ ಕುಂಬಾರ -ಲೇಖನ







                           ಕಾಲಕಾಲೇಶ್ವರದಲ್ಲಿರುವ ‘ಆನೆಗುಂದಿ ಬಸವಣ್ಣ’-ಒಂದು ಟಿಪ್ಪಣಿ






ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಪ್ರಸಿದ್ದ ನಂದಿಯನ್ನೆ ಹೋಲುವ ಬಸವಣ್ಣ(ನಂದಿ)ನ ಮೂರ್ತಿಯೊಂದು ಗದಗ ಜಿಲ್ಲೆಯ ರೋಣ ತಾಲೂಕಿನ ಗಜೇಂದ್ರಗಡದ ಸನಿಹದಲ್ಲಿರುವ ಸುಪ್ರಸಿದ್ದ ಕಾಲಕಾಲೇಶ್ವರ ದೇವಾಲಯದ ಅನತಿ ದೂರದಲ್ಲಿದೆ. ಸಂಪೂರ್ಣವಾಗಿ ಕಾಡು ಕಲ್ಲಿನಲ್ಲಿಯೇ ಕೆತ್ತಿದ, ಆದರ ಕೆತ್ತನೆವು ನಾಜೂಕಲ್ಲದಿದ್ದರೂ ನೋಡುಗರ ಗಮನವನ್ನು ಸೆಳೆಯುತ್ತದೆ. ಈ ಬೃಹದಾಕಾರದ ಏಕಶಿಲೆಯ ನಂದಿಯು ಪ್ರಚಾರವಿಲ್ಲದೆ ಎಲೆಯ ಮರೆಯ ಫಲದಂತೆ, ಕಾಲಕಾಲೇಶ್ವರದಿಂದ ಗುಡೂರಿಗೆ ಹೋಗುವ ಕಣಿವೆಯ ಮಾರ್ಗದಲ್ಲಿ  ರಸ್ತೆಗೆ ಹೊಂದಿ ನಿಂತಿದೆ. ಇದು ೨೫ ಅಡಿ ಉದ್ದ, ೧೨ ಅಡಿ ಅಗಲ ಮತ್ತು ೨೩ ಅಡಿ ಎತ್ತರವನ್ನು ಹೊಂದಿದೆ. ಈ ಭಾಗದಲ್ಲಿ ಇದನ್ನು ಆನೆಗುಂದಿ ಬಸವಣ್ಣನೆಂದು ಕರೆಯುತ್ತಾರೆ. ಈ ನಂದಿಯನ್ನು ಯಾರು ಯಾವಾಗ ಕೆತ್ತಿದರು? ಎನ್ನುವ ಬಗ್ಗೆ ದಾಖಲೆಗಳು ಸಿಗುವದಿಲ್ಲ.
   ಜನಪದರ ಹೇಳುವ ಐತಿಹ್ಯಗಳ ನೆರಳಲ್ಲಿ ಒಂದಷ್ಟು ಇತಿಹಾಸ ಹುದುಗಿರುತ್ತದೆ. ಸನಿಹದ ಕಾಲಕಾಲೇಶ್ವರ ದೇವಾಲಯದ ಬಹಳಷ್ಟು ಕಟ್ಟಡಗಳು ವಿಜಯನಗರದ ಶೈಲಿಯಲ್ಲಿವೆ. ಈ ಹೆಸರಿನ ಸುಳಿವಿನಿಂದ ಇದು ೧೬ ನೆಯ ಶತಮಾನಕ್ಕೆ ಸೇರಿದೆ. ಈ ಹಿನ್ನೆಲೆಯಲ್ಲಿ ನಂದಿಯನ್ನು ವಿಜಯನಗರ ಅರಸರ ಕೊನೆಯ ಸಂತತಿಯವರಾದ ಆನೆಗುಂದಿ ಅರವೀಡು ಅರಸರ ಆಳ್ವಿಕೆಯ ಕಾಲದಲ್ಲಿ (ಕ್ರಿ.ಶ.೧೫೭೨-೧೬೮೦) ಕೆತ್ತಿದ್ದಾರೆಂದು ಸ್ಪಷ್ಟವಾಗುತ್ತದೆ ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಆರಂಭದಲ್ಲಿ ಮತ್ತು ಅದರ ಕೊನೆಯ ಕಾಲದಲ್ಲಿ ಕೂಡಾ ಆನೆಗುಂದಿಯು ಪ್ರಮುಖ ಸ್ಥಾನವಾಗಿ ಹಾಗೂ ರಾಜಧಾನಿಯಾಗಿ ಉಳಿದ ಸ್ಥಳ. ಅದು ಎಂದಿಗೂ ಶತ್ರುಗಳ ವಶವಾಗಲಿಲ್ಲ. ಅಳಿಯ ರಾಮರಾಯನ  ಅವಸಾನದ ನಂತರ  ವಿಜಯನಗರ ಪತನವಾಯಿತು. ಆ ನಂತರ  ಅರವೀಡು ಸಂತತಿಯ ಅರಸರ ಶಾಖೆಯೊಂದು ಸ್ವಲ್ಪು ದಿನಗಳ ಕಾಲ ಆನೆಗುಂದಿಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆಳ್ವಿಕೆ ಮಾಡಿತು. ಇದೇ ಅರಸರು ಮುಂದೆ ಪೆನಗೊಂಡೆಗೆ ತೆರಳಿದರು. ಇವರು  ಆನೆಗುಂದಿಯಲ್ಲಿರುವಾಗ ಅರವೀಡು ಸಂತತಿಯ ಮೊದಲ ಅರಸ ಶ್ರೀರಂಗರಾಯರು (ಕ್ರಿ.ಶ.೧೫೭೨-೮೫) ಆಳ್ವಿಕೆ ಮಾಡಿದರು.
 ಈ ಅರಸನಿಗೆ ಬೇಟೆಯ ಖಯಾಲಿ ಇತ್ತೆಂದು, ಈ ಪ್ರದೇಶದಲ್ಲಿ ಆನೆಗುಂದಿ ಅರಸರು ಬೇಟೆಗೆ ಬರುತ್ತಿದ್ದರೆಂದು ಬಹಳಷ್ಟು ಕಥೆ ಮತ್ತು ಐತಿಹ್ಯಗಳು ಇಲ್ಲಿನ ಪರಿಸದಲ್ಲಿವೆ. ಇಲ್ಲಿಂದ    ತುಸು   ದೂರದಲ್ಲಿರುವ ನಾಗೇಂದ್ರಗಡದ ಸನಿಹದ  ಹೊಗರಿ ಕೆರೆಯ ಪ್ರದೇಶದ,  ಶಾಸನಗಳಲ್ಲಿ ಪೊಂಗರಿ ಎನ್ನಿಸಿಕೊಂಡ ಪರಿಸರದಲ್ಲಿ ಈ ಅರಸನು ಬೇಟೆಗೆ ಬಂದು  ಪೊಂಗರಿಯ  ಒಡತಿ ಹೊಂಬಾಳೆ ಎಂಬವಳನ್ನು ಮೋಹಿಸಿದನೆಂದು ನಾಗೇಂದ್ರಗಡದ ಪರಿಸರ ಜನರು ಕಣ್ಣಿಗೆ ಕಟ್ಟುವಂತೆ ಕಥೆಯನ್ನು ಹೇಳುತ್ತಾರೆ. ಇದೆಲ್ಲವನ್ನು ಗಮನಿಸಿದರೆ ಅರಸ ಶ್ರೀರಂಗರಾಯನು ಈ ಭಾಗದಲ್ಲಿ ಬಹಳಷ್ಟು ಸಖ್ಯವನ್ನು ಹೊಂದಿರಬೇಕು.

    ವಿಜಯನಗರದ ಪತನದ ನಂತರ ಜಿಗುಪ್ಸೆಯನ್ನು ಹೊಂದಿದ ಈ ಅರಸನು ದೇವತಾ ಸೇವೆ, ಮಂದಿರಗಳ ಜೀರ್ಣೋದ್ದಾರ, ಮೂರ್ತಿಗಳನ್ನು ಕೆತ್ತಿಸುವ ಕೈಂಕರ್ಯವನ್ನು ಕೈಗೊಂಡಿರಬೇಕು. ಇದರಿಂದ ಈ ಭಾಗದಲ್ಲಿ  ಸಂಚರಿಸಿದ ಈ ಅರಸನು ಕ್ರಿ.ಶ.೧೫೭೨-೮೫ ರ ಸಮಯದಲ್ಲಿಯೇ ನಂದಿ ಮೂರ್ತಿಯನ್ನು ಕೆತ್ತಿಸಿದ್ದಲ್ಲದೇ, ಪಕ್ಕದಲ್ಲಿರುವ ಕಾಲಕಾಲೇಶ್ವರ ದೇವಾಲಯದ ಜೀರ್ಣೋದ್ದಾರ ಮಾಡಿದರು.. ಅದಕ್ಕೆ ಸಾಕ್ಷಿಯಾಗಿ ಇಲ್ಲಿನ ಕಟ್ಟಡಗಳು  ವಿಜಯನಗರದ ಶೈಲಿಯಲ್ಲಿವೆ. 
ಈ ನಂದಿಯನ್ನು ಇತ್ತೀಚಿಗೆ ಸುಂದರಗೊಳಿಸಲು ಅದಕ್ಕೆ ಸುಣ್ಣವನ್ನು ಬಳಿಯುವ ಯತ್ನವನ್ನು ಕೆಲವರು ತಡೆದರು. ಸುಣ್ಣವನ್ನು ಬಳಿಯುವದರಿಂದ ಈ ಶಿಲ್ಪವು ಕೆಲವು ದಿನಗಳ ನಂತರ ಸವೆದು ವಿರೂಪಗೊಳ್ಳುತ್ತದೆ. ಅದನ್ನು ಇರುವ ಸ್ಥಿತಿಯಲ್ಲಿಯೇ ಉಳಿಸಿಕೊಳ್ಳಬೇಕು. ಇದೇ ದೇವಾಲಯದ ಪಕ್ಕದಲ್ಲಿ ಕುದುರೆಗುಂಡು ಎನ್ನುವ ಸ್ಥಳದಲ್ಲಿ ಕೂಡಾ ಇನ್ನೊಂದು ನಂದಿ ಮೂರ್ತಿಯನ್ನು ಕಲ್ಲಿನಲ್ಲಿ ರೂಪಿಸಿ ಅಪೂರ್ಣಗೊಳಿಸಿದ್ದಾರೆ. ಇದೂ ಕೂಡಾ ಗಮನಾರ್ಹ ಅಂಶವಾಗಿದೆ.

                                                                                                             
 ಡಾ.ಮಲ್ಲಿಕಾರ್ಜುನ ಕುಂಬಾರ
             ‘’ªÀZÀ£
     gÁdÆgÀ-582230
     vÁ;gÉÆÃt, f;UÀzÀUÀ 






Sunday, November 18, 2012

ಗುಬ್ಬಿ ತಾಲ್ಲೂಕು ಬಿಕ್ಕೆಗುಡ್ಡದ ಅಪ್ರಕಟಿತ ಕ್ರಯಪತ್ರ ಶಾಸನ

                                                                          
                                                                        







                                                              
                                                                                                     ಡಾ || ಪಿ.ವಿ.ಕೃಷ್ಣಮೂರ್ತಿ

                                                                       # ೩೭ಶ್ರೀಕೃಷ್ಣ ಕೃಪ೩ ನೆಯ ಅಡ್ಡರಸ್ತೆ
                                                                                                                             ಸುಬ್ಬಣ್ಣ ಲೇಔಟ್ಹರಿನಗರಕ್ರಾಸ್
                                                                                                                             ಬೆಂಗಳೂರು-೫೬೦೦೬೨


ತುಮಕೂರು ಜಿಲ್ಲೆ, ಗುಬ್ಬಿ ತಾಲ್ಲೂಕು, ಬಿಕ್ಕೆಗುಡ್ಡ ಗ್ರಾಮದಲ್ಲಿ ದೊರೆತ ಈ ಶಾಸನವು ಈಗ ತುಮಕೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ ಸಂರಕ್ಷಿತವಾಗಿದೆ. ಈ ಶಾಸನವು ನಮ್ಮ ಗಮನಕ್ಕೆ ಬಂದಂತೆ ಇದುವರೆಗೂ ಅಪ್ರಕಟಿತವಾಗಿದೆ. ಇದೊಂದು  ಕ್ರಯಪತ್ರ ಶಾಸನವಾಗಿದ್ದು ಕೋನಾಕಾರದ ಕಂಬದಂಥ ನಿಲುಗಲ್ಲಿನ  ಕೂಸಿನಮೇಲೆ ಕೆತ್ತಲಾಗಿದೆ. ಈ ಶಾಸನದ ಶಿಲೆಯು ಸುಮಾರು ೧೦/೩೫ ಸೆಂ.ಮೀ. ಅಗಲ, ೧೪೦ ಸೆಂ.ಮೀ. ಎತ್ತರ ಹಾಗೂ ಸುಮಾರು ೧೦/೧೮ ಸೆಂ.ಮೀ. ದಪ್ಪನೆಯ ಕಲ್ಲಿನದಾಗಿದ್ದು ಶಾಸನದ ಅಕ್ಷರಗಳನ್ನು ಮುಂಭಾಗ ಮತ್ತು ಶಾಸನದ ಬಲಬದಿಯಲ್ಲಿ ಕೊರೆಯಲಾಗಿದೆ. ಹತ್ತೊಂಬತ್ತನೆಯ ಶತಮಾನದ ಕನ್ನಡ ಲಿಪಿ ಮತ್ತು ಭಾಷೆಯಲ್ಲಿರುವ ಈ ಶಾಸನದ ಅಕ್ಷರಗಳ ಗಾತ್ರ ಸರಾಸರಿ ೫/೩.೫ ಸೆಂ.ಮೀ. ಪ್ರಮಾಣದಲ್ಲಿದ್ದು ಸಾಕಷ್ಟು ಆಳವಾಗಿ ಕೊರೆಯಲಾಗಿದೆ. ಈ ಶಾಸನದ ಭಾಷಾ ಪ್ರಯೋಗದಲ್ಲಿ ಸಮಕಾಲೀನವಾಗಿ ಪ್ರಚಲಿತವಿದ್ದ ರೀತಿಯನ್ನು ಅಂದರೆ ಪದ ಮಧ್ಯದಲ್ಲಿ ಸ್ವರಗಳ ಬಳಕೆ  ಪದಾದಿಯಲ್ಲಿ ‘ಈ, ಸ್ವರಗಳ ಬದಲಾಗಿ ವ್ಯಂಜನ ‘ಯೀ ವು ಗಳ ಪ್ರಯೋಗ, ಇಂತಹ  ಪ್ರಯೋಗಗಳು ಸಮಕಾಲೀನ ಹಸ್ತಪ್ರತಿ, ಕೈಫಿಯತ್ತು ಇತ್ಯಾದಿ ಬರಹಗಳಲ್ಲಿ ವಿಶೇಷವಾಗಿ ಕಂಡುಬರುವುದು ಸರಿಯಷ್ಟೆ. ಉದಾ: ತಾಉ (ತಾವು), ನಿಲಿಸಿದೆಉ (ನಿಲ್ಲಿಸಿದೆವು), ಗಉಡ (ಗೌಡ), ಕೆಂಪೈಯ (ಕೆಂಪಯ್ಯ), ಯಿಂತಿ (ಇಂತಿ), ಯಿವರ (ಇವರ) ಇತ್ಯಾದಿ.
ಈ ಶಾಸನದಲ್ಲಿ ವಿಶ್ವಾವಸು ಸಂವತ್ಸರ ಚೈತ್ರ ಶುದ್ಧ ಪಂಚಮಿ ಎಂದು ಮಾತ್ರ ಕಾಲ ಸೂಚಿತವಾಗಿದೆ. ಭಾಷೆ ಮತ್ತು ಲಿಪಿ ೧೯ ನೆಯ ಶತಮಾನದ್ದಾಗಿದೆ. ಈ ಆಧಾರದಿಂದ ಶಾಸನೋಕ್ತ ಕಾಲವು ೧೨-೪-೧೮೪೫, ಶುಕ್ರವಾರಕ್ಕೆ ಸರಿಹೊಂದುತ್ತದೆ.
ಇದು ಶ್ರೀಮನ್ ಮಹಾನಾಯಕನ iಕ್ಕಳು ಬಡ ತಿಮ್ಮಯ್ಯನು ಹೆಂಜೆರೀ ಲೆಕ್ಕಯ್ಯನ ಮಗ ಹೆಂಜೆರೀ ಲಕ್ಕಯ್ಯನಿಗೆ ಕೊಟ್ಟ ಕ್ರಯಪತ್ರವಾಗಿದೆ. ಇದರಲ್ಲಿ ಮಲ್ಲಪ್ಪನಹಳ್ಳಿಯಲ್ಲಿರುವ ಹೊಲ, ಗದ್ದೆ, ಹೊರೆ ಹುಲ್ಲು, ಬೀಜ, ಎತ್ತು, ಸುವರ್ಣಾದಾಯ ಎಲ್ಲವನ್ನೂ ಕ್ರಯವಾಗಿ ನಿರಯಸವಾಗಿ ನೀಡಿದ ವಿವರವಿದೆ. ಈ ಸಂದರ್ಭದಲ್ಲಿ ಮಲ್ಲಪ್ಪನಹಳ್ಳಿಯ ಚಿಣ್ಣಪ್ಪಗೌಡನ ಮಗ ನಿಂಗೇಗೌಡ, ಸುರಗಿಹಳ್ಳಿಯ ಮಾಳೇಗೌಡನ ಮಗ ದೊಡ್ಡಕೆಂಪಯ್ಯ, ತೆನಹಳ್ಳಿಯ ಸಿಂಗಯ್ಯ - ಇವುರುಗಳು ಸಾಕ್ಷಿಯಾಗಿರುತ್ತಾರೆ.
ಈ ಕ್ರಯಪತ್ರ ಶಾಸನವನ್ನು ಕೊಟ್ಟಿರುವವರು  ಮಹಾನಾಯಕನ ಮಕ್ಕಳೆಂದು ಉಲ್ಲೇಖಗೊಂಡಿರುವುದು ಗಮನಾರ್ಹ ಅಂಶ. ಮಹಾನಾಯಕ, ನಾಯಕಾಚಾರ್ಯ, ಎಂಬುದು ಸಾಮಾನ್ಯವಾಗಿ ವಿಜಯನಗರ ಅರಸರ ಕಾಲದ ನಾಯಕ ಪಾಳೆಯಗಾರ ವಂಶೀಯರಿಗಿದ್ದ ಬಿರುದಾಗಿತ್ತು. ಹಾಗಾಗಿ ಪ್ರಸ್ತುತ ಕ್ರಯಪತ್ರ ಶಾಸನವನ್ನು ಕೊಟ್ಟವರು ನಾಯಕವಂಶಕ್ಕೆ ಸೇರಿದ ಬಡತಿಮ್ಮಯ್ಯ. ಕೊಂಡುಕೊಂಡವರು ಅಥವಾ ಪಡೆದವರು ಹೆಂಜೇರು (ಇಂದಿನ ಆಂಧ್ರದ ಮಡಕಶಿರಾ ತಾಲ್ಲೂಕಿನ ಹೇಮಾವತಿ) ಸ್ಥಳದ ಲೆಕ್ಕಯ್ಯನ ಮಗ ಲಕ್ಕಯ್ಯ. ಕ್ರಯಕ್ಕೆ ಕೊಟ್ಟಿರುವ ಪ್ರದೇಶ ಮಲ್ಲಪ್ಪನಹಳ್ಳಿಯ ಹೊಲ, ಗದ್ದೆ, ಇತ್ಯಾದಿ. ಅವಾದರೂ ಮಹಾನಾಯಕ ಬಡತಿಮ್ಮಯ್ಯನ ಮಕ್ಕಳ ‘ಅಶೀಕೀಗೆ ಸಂದಂತಹದ್ದು. ಇಲ್ಲಿ ಪ್ರಯೋಗವಾಗಿರುವ ‘ಅಶೀಕೀ ಎಂಬುದು ಪ್ರಾಯಶಃ ‘ಅಸಿಕ ಎಂಬುದರ ಅಪಭ್ರಂಶ ರೂಪವೆಂದು ತೋರುತ್ತದೆ. ‘ಅಸಿಕವೆಂದರೆ ಸಣ್ಣ ಕತ್ತಿ, ಕಠಾರಿ ಎಂಬ ಅರ್ಥಗಳಿವೆ. ಬಹುಶಃ ಬಡತಿಮ್ಮಯ್ಯನ ಮಕ್ಕಳು ಹಿಂದೆ ಯಾವುದೋ ಹೋರಾಟದಲ್ಲಿ ಹೋರಾಡಿರಬೇಕು. ಆ ಕಾರಣವಾಗಿ ಅವರಿಗೆ ಈ ಮಲ್ಲಪ್ಪನಹಳ್ಳಿ (ಮಲಪನಹಳ್ಳಿ) ಗ್ರಾಮವು ಬಾಳ್ಗಚ್ಚು ರೀತಿಯ ಅಂದರೆ ಕತ್ತಿ ಕಾಳೆಗಕ್ಕೆ ನೀಡಲಾಗಿದ್ದ ರಕ್ತಗೊಡಗೆ ರೀತಿಯ ದತ್ತಿ ಭೂಮಿಯಾಗಿದ್ದಿತೆಂದು ತೋರುತ್ತದೆ. ಪ್ರಸ್ತುತ ಆ ಗ್ರಾಮದ ಭೂಮಿಯನ್ನು ಹೆಂಜೇರಿ ಲಕ್ಕಯ್ಯನಿಗೆ ಕ್ರಯಕ್ಕೆ ನೀಡಿರುವ ಸಂಗತಿ ಈ ಕ್ರಯಪತ್ರ ಶಾಸನದಿಂದ ತಿಳಿದುಬರುತ್ತದೆ.
ಈ ಶಾಸನದ ಕ್ರಯಪತ್ರದಲ್ಲಿ ಮಾರೆಂತೆಂದರೆ ಎಂಬ ಪ್ರಯೋಗವಿದೆ. ಇದು ಸಾಮಾನ್ಯವಾಗಿ ಇಂತಹ ದಾನಶಾಸನ ಗಳಲ್ಲಿ ಕಂಡುಬರುವ ಕ್ರಮವೆಂತೆಂದರೆ ಎಂಬುದರ ಪರ್ಯಾಯವೆಂದು ತಿಳಿಯಬಹುದು. ಮಾರು ಎಂದರೆ ವಿಕ್ರಯ ಎಂದು ಕೇಶಿರಾಜನ ಶಬ್ದಮಣಿದರ್ಪಣದ ಧಾತು ಪಾಠದಲ್ಲಿ ಉಕ್ತವಾಗಿದೆ. ಈ ಅರ್ಥವು ಕೂಡಾ ಪ್ರಕೃತ  ಶಾಸನದ ದಾಖಲಾತಿಗೆ ಸರಿಹೊಂದುತ್ತದೆ.
ಈ ಶಾಸನದಲ್ಲಿ ಉಕ್ತವಾಗಿರುವ ಮಲ್ಲಪ್ಪನಹಳ್ಳಿಯು ಪ್ರಸ್ತುತ ಶಾಸನ ದೊರೆತ ಬಿಕ್ಕೇಗುಡ್ಡ ಗ್ರಾಮದ ನೆರೆಯಲ್ಲೇ ಇರುವ ಗ್ರಾಮವಾಗಿದೆ. ಶಾಸನೋಕ್ತ ಸುರಗಿಹಳ್ಳಿ, ತೆನಹಳ್ಳಿಗಳು ಗುಬ್ಬಿ ತಾಲ್ಲೂಕಿನ ಗ್ರಾಮಗಳೇ ಆಗಿವೆ.

ಶಾಸನಪಾಠ
೧        ವಿಶ್ವವಸು ಸಂವತ್ಸರದ ಚ
೨        ಯಿತ್ರ ಶುದ್ಧ ೫ ರಲು ಶ್ರೀಮನು
೩        ಮಹಾನಾಯಕನ ಮಕಳು ಬ
೪        ಡ ತಿಂಮಯ್ಯನೂ ಹೆಂಜೆರೀ
೫        ಲೆಕ್ಕಯ್ಯನ ಮಗ ಹೆಂಜೆರೀ
೬        ಲಕ್ಕಯ್ಯಕೆ ಕೊಟ್ಟ ಕ್ರಯಪ
೭        ತ್ರದ ಮಾರೆಂತೆಂದರೆ ತಂಮ
೮        ಮಕ್ಕಳ ಅಶೀಕೀಗೆ ಸಲುವ
೯        ಮಲ್ಲಪನಹಳಿಯೊಳಗೆ
೧೦     ಸಲುವಂತ ಹೊಲ ಗದ್ದೆ ಹೀ
೧೧     ಯ್ಯ ಚೌಟ್ಯು ಹೊರೆ ಹುಲ್ಲು
೧೨     ವೊರ ಭತ್ತ ಚಳಿಕಂತ್ತೆ ಆ
೧೩     ಯದಾಯ ಬೀಜ ಎತ್ತಿನ
೧೪     ಕು ಸುವರ್ಣದಾಯವೆಲ್ಲ
೧೫     ವನು ತಾಉ ನಿಮಗೆ ಕ್ರಯ
೧೬     ವಾಗಿ ಗ ೪ ಅಕ್ಷರದಲು ನಾಲ್ಕು
೧೭     ವರಹಕ್ಕೆ ಕೊಟ್ಟು ನಿರಯಸ
೧೮     ತಾಉ ನಿಲಿಸಿದ[ಕ]ಲು ಯಿಂತಾ
೧೯     ದುದಕ್ಕೆ ಸಾಕ್ಷಿಗಳು ಮಲ್ಲಪ
೨೦     ನಹಳ್ಳಿಯ ಸ್ಥಳದ ಗಉಡ
೨೧     ಚಿಂಣ್ಣಪಗಉಡನ ಮಗ
೨೨     ನಿಂಗೇಗಉಡ ಸುರಗಿಹ
೨೩     ಳ್ಳಿಯ ಮೊಳೆಗಉಡನ ಮಗ
೨೪     ದೊಡ ಕೆಂಪೈಯನು ತೆನಹ
೨೫     ಳ್ಳಿಯ ಪಟಣದ ಸಿಂಗಯ್ಯ
೨೬     ಯಿಂತಿ ಯಿವರ ಉಭೇಯಾನ
೨೭     ತದಿರೇ ಸಾಕ್ಷಿಗಳೊಪ್ಪಿತ ಮುಲ
೨೮     ಕ . . . ಕಪಟವಿನೊಪ್ಪಿತ ಸಂತ್ತೆ
೨೯     ಯನ ಸಹನಿದ . . .
೩೦     ಹಯಗಕ್ಕಾ  ಪೂರ್ಣದಾ
೩೧     ಯ್ಯಾ ಅಪರಾಧಿ ಸಲು[ವ ಕ್ರ]
ಶಾಸನದ ಬಲಭಾಗದಲ್ಲಿರುವ ಬರಹ
೩೨     ಯ ಪತ್ರ
೩೩     ತದ ಪೀ
೩೪     [ತ ?]  ಸಾಕಾಲ್ಯ
೩೪     ವಾಗಿ ಸಂತ್ತು
೩೫     ಬಡತಿಂಮ
೩೬     ಯ್ಯನಾ ದೈವ
೩೭     ಹು ಕೈಯ್ಯ
೩೮     ಲದೆ
೩೯     ನಡೆವಾರೂ
೪೦     ಲಕ್ಷ್ಮೀದೇವರು
೪೧     ದಾಯಾದ ಸಾ
೪೨     ವಂತರ ವೊ
೪೩     ಪಿಸಿ ಮಾರಿದೆ
೪೪     ಉ ಶ್ರೀ ಹರಿಹ
೪೫     ರಾದಿಗಳೂ

[ಈ ಶಾಸನದ ಪಡಿಯಚ್ಚು ತೆಗೆದುಕೊಳ್ಳಲು ಎಲ್ಲಾ ವಿಧದ ಅನುಕೂಲಗಳನ್ನು ಮಾಡಿಕೊಟ್ಟು, ಸಹಕಾರವನ್ನು ನೀಡಿದ ತುಮಕೂರು ವಿಶ್ವವಿದ್ಯಾನಿಲಯದ ಡಾ|| ಡಿ.ವಿ. ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರದ ಉಪಪ್ರಾಧ್ಯಾಪಕರಾದ ಡಾ|| ಶ್ರೀಪಾದಭಟ್ಟರಿಗೂ ಮತ್ತು ವಿಭಾಗದ ಮುಖ್ಯಸ್ಥರಿಗೂ ನಾವು ತುಂಬಾ ಕೃತಜ್ಞರಾಗಿದ್ದೇವೆ].
ಡಾ || ಪಿ.ವಿ.ಕೃಷ್ಣಮೂರ್ತಿ
೩೭ಶ್ರೀಕೃಷ್ಣ ಕೃಪ೩ ನೆಯ ಅಡ್ಡರಸ್ತೆಸುಬ್ಬಣ್ಣ ಲೇಔಟ್ಹರಿನಗರಕ್ರಾಸ್ಬೆಂಗಳೂರು-೫೬೦೦೬೨







Friday, November 16, 2012

ಡಿ. ಸ್ಮಿತಾರೆಡ್ಡಿ ಲೇಖನ


ಘಾಟಿ ಪರಿಸರದ ಪ್ರಾಗೈತಿಹಾಸಿಕ ನೆಲೆಗಳು ಒಂದು ಶೋಧ

ಡಿ. ಸ್ಮಿತಾರೆಡ್ಡಿ
ನಂ. ೭೦೨, ಬಿ-೨, ಕೃಷ್ಣಾ ಬ್ಲಾಕ್ ರಾಷ್ಟ್ರೀಯ ಕ್ರೀಡಾಗ್ರಾಮ ವಸತಿ ಸಂಕೀರ್ಣ ಕೋರಮಂಗಲ, ಬೆಂಗಳೂರು-೫೬೦೦೪೭.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ದಕ್ಷಿಣ ಭಾರತದ ಪ್ರಮುಖ ನಾಗಾರಾಧನಾ ಸ್ಥಳವಾಗಿದ್ದು, ಪುಣ್ಯ ಕ್ಷೇತ್ರವೆಂದು ಪರಿಗಣಿತವಾಗಿದೆ. ಸುತ್ತಲೂ ಬೆಟ್ಟಗುಡ್ಡಗಳನ್ನೊಳಗೊಂಡ ಕಣಿವೆಯಲ್ಲಿ ಸುಬ್ರಹ್ಮಣ್ಯ ದೇವಾಲಯವಿರುವುದರಿಂದ, ಈ ಗ್ರಾಮವನ್ನು ಘಾಟಿ ಸುಬ್ರಹ್ಮಣ್ಯವೆಂದೂ ಸಹ ಕರೆಯುತ್ತಾರೆ. ಪ್ರಕೃತಿಯ ಸೊಬಗಿನಿಂದ ಮನೊಂಹರವಾದ ಸ್ಥಳದಲ್ಲಿರುವ ಈ ಗ್ರಾಮ ಆಸ್ತಿಕರನ್ನು ಮಾತ್ರವಲ್ಲದೆ, ನಿಸರ್ಗಪ್ರಿಯರನ್ನೂ ಸಹ ಆಕರ್ಷಿಸುತ್ತಿದೆ. ಇದು ಉತ್ತರ ಪಿನಾಕಿನಿ ನದಿಯ ವ್ಯಾಪ್ತಿಯಲ್ಲಿ ಬರುವುದರಿಂದ ಈ ಸ್ಥಳ ವ್ಯವಸಾಯಕ್ಕೆ ತಕ್ಕಂತಹ ವಾತಾವರಣವನ್ನು ಹೊಂದಿದೆ. ಹಾಗಾಗಿ ಘಾಟಿ ಮತ್ತು ಅದರ ಕಣಿವೆಯಲ್ಲಿ ಬರುವ ಗ್ರಾಮಗಳು ಹಿಂದೊಮ್ಮೆ ಪ್ರಾಗೈತಿಹಾಸಿಕ ಮಾನವನ ನೆಲೆಯಾಗಿತ್ತೆಂಬುದರಲ್ಲಿ ಸಂಶಯವೇ ಇಲ್ಲ.
ಘಾಟಿ ಗ್ರಾಮಕ್ಕೆ ಸುಮಾರು ಎರಡು ಕಿ.ಮೀ.ಗಳ ಅಂತರದಲ್ಲಿ ಲಗುಮೇನಹಳ್ಳಿ ಎಂಬ ಒಂದು ಪುಟ್ಟ ಗ್ರಾಮವಿದೆ. ಗ್ರಾಮಕ್ಕೆ ಹೊಂದಿಕೊಂಡಂತಿರುವ ಹೊಲಗಳಲ್ಲಿ ಹಾಗೂ ಮನೆಗಳ ಅಕ್ಕಪಕ್ಕದಲ್ಲಿಯೇ ಹಲಾವರು ಚೌಕಾಕಾರದ ಕಿಂಡಿಕೋಣೆಯ (ಸ್ವಲ್ಪ ಮಟ್ಟಿಗೆ ಸ್ವಸ್ತಿಕ ಆಕಾರದ) ಶಿಲಾ ಗೋರಿಗಳಿವೆ ಇವು ಸುಮಾರು ಅರ್ಧ ಕಿ.ಮೀ. ಸುತ್ತಳತೆಯಲ್ಲಿ ಪ್ರಸರಿಸಿವೆ. ಆದರೆ ವ್ಯವಸಾಯ ಕಾರ್ಯ ಮನೆಗಳ ನಿರ್ಮಾಣ, ಅವುಗಳ ಬಗೆಗಿನ ಅವಜ್ಞೆ ಹಾಗೂ ನಿಧಿಗಳ್ಳರಿಂದಾಗಿ ಬಹುತೇಕ ಎಲ್ಲಾ ಶಿಲಾಗೋರಿಗಳೂ ನಾಶವಾಗಿ ಅವಶೇಷಗಳ ರೂಪದಲ್ಲಿ ಉಳಿದಿವೆ. ಗ್ರಾಮಕ್ಕೆ ಹೊಂದಿಕೊಂಡ ಹೊಲದಲ್ಲಿ ಇಂತ ಭಗ್ನಾವಸ್ಥೆಯಲ್ಲಿರುವ ಸುಮಾರು ಹದಿನಾರು ಬೃಹತ್ ಶಿಲಾ ಗೋರಿಗಳನ್ನು ಕಾಣಬಹುದು. (ಹೊಲಗಳಲ್ಲಿ ಈ ಶಿಲಾಸಮಾಧಿಗಳಿರುವುದರಿಂದ ಹೆಚ್ಚಿನವು ಕಣ್ಮರೆಯಾಗಿವೆ.) ಇವುಗಳ ಉದ್ದ ಸುಮಾರು ಎಂಟು ಅಡಿ ಇದ್ದು ಅಗಲ ಸುಮಾರು ಮೂರು ಅಡಿಗಳಷ್ಟಿದೆ. ಆದರೆ ಮೇಲ್ಭಾಗದ ಚಪ್ಪಡಿಕಲ್ಲು ಎಷ್ಟು ವಿಸ್ತೀರ್ಣವಿತ್ತು ಎಂಬುದನ್ನು ಹೇಳುವುದು ಕಷ್ಟವಾದರೂ ಅಲ್ಲಿ ಚದುರಿ ಬಿದ್ದಿರುವ ಅವಶೇಷಗಳ ಆಧಾರದ ಮೇಲೆ ಅವು ಸುಮಾರು ಎಂಟು ಅಡಿ ಉದ್ದ ಹಾಗೂ ಐದು ಅಡಿ ಅಗಲವನ್ನು ಹಾಗೂ ಸುಮಾರು ೧ ೧/೨ ಅಡಿ ದಪ್ಪವನ್ನು ಹೊಲದಿದ್ದಿರಬಹುದೆಂದು ಊಹಿಸ ಬಹುದು. ಗ್ರಾಂದ ಬಹುತೇಕ ಎಲ್ಲ ಶಿಲಾಗೋರಿಗಳೂ ಇದೇ ಸ್ವರೂಪದಲ್ಲಿವೆ. ಶಿಲಾಗೋರಿಗಳ ಕೋಣೆ ಕಿಂಡಿಯು ಸುಮಾರು ಒಂದು ಅಡಿ ವ್ಯಾಸವನ್ನು ಹೊಂದಿದೆ.
ಲಗುಮೇನಹಳ್ಳಿಯಿಂದ ಪೂರ್ವದಿಕ್ಕಿನ ಕಡೆಗಿರುವ ಬೆಟ್ಟದ ಮೇಲೆ ಬೃಹತ್ತಾದ ನೈಸರ್ಗಿಕವಾದ ಒಂದು ಕಲ್ಮನೆಯಿದ್ದು, ಇದು ಸುಮಾರು ೧೪ ಅಡಿಗಳಷ್ಟು ಉದ್ದ, ಹತ್ತು ಅಡಿಗಳಷ್ಟು ಅಗಲವಿದೆ. ಹಾಗೂ ಬಂಡೆಯ ದಪ್ಪವೂ ಸಹ ಸುಮಾರು ೨ ೧/೨ ಅಡಿಗಳಷ್ಟು ದಪ್ಪವಿದೆ. ಮುಂಭಾಗವು ಸುಮಾರು ಮೂರು ಅಡಿಗಳಿಗಿಂತಲೂ ಹೆಚ್ಚು ದಪ್ಪವನ್ನು ಹೊಂದಿದೆ. ಈ ಕಲ್ಮನೆಯ ಕೆಳಗೆ ಸುಮಾರು ೬ ಮಂದಿ ಮಲಗಬಹು ದಾದಷ್ಟು ಸ್ಥಳಾವಕಾಶವಿದೆ. (ಇದರ ಆಸುಪಾಸಿನಲ್ಲೇ ಇನ್ನೂ ನಾಲ್ಕು ಶಿಲಾಸಮಾಧಿಗಳಿವೆ.) ಹಾಗೆಯೇ ಸ್ವಲ್ಪ ಮುಂದೆ ಬೆಟ್ಟದ ನಡುನೆತ್ತಿಯನ್ನು ತಲುಪಿದರೆ, ಅಲ್ಲಿ ಸ್ವಾಭಾವಿಕವಾದ ಬೃಹತ್ ಕಲ್ಲುಬಂಡೆಗಳಿವೆ. ಒಂದಕ್ಕೊಂದು ತಗುಲಿ ಕೊಂಡಿರುವ ಎಡರು ಬಂಡೆಕಲ್ಲುಗಳ ಕೆಳಭಾಗದಲ್ಲಿ ನುಸುಳಿ ದರೆ, ಎಡಭಾಗದ ದೊಡ್ಡ ಬಂಡೆಯ ಕೆಳಗೆ ಒಬ್ಬ ವ್ಯಕ್ತಿ ಒಳಗೆ ನುಸುಳಬಹುದಾದಷ್ಟು ಸಣ್ಣ ಕಿಂಡಿಯಿದೆ. ಈ ಕಿಂಡಿಯ ಮೂಲಕ ಒಳಗೆ ಹೋದರೆ ಆ ಬಂಡೆಯ ಕೆಳಗೆ ಸುಮಾರು ೧೨ ಜನ ಮಲಗುವಷ್ಟು ವಿಶಾಲವಾದ ಸ್ಥಳವಿದೆ. ಆ ಸ್ಥಳದಲ್ಲಿ ಇಂದಿಗೂ ಮಡಿಕೆ ಕುಡಿಕೆಗಳನ್ನಿಟ್ಟು ಪೂಜೆ ಮಾಡುವ ಪದ್ಧತಿಯಿದೆ.  ಪದ್ಧತಿ ಗಮನಿಸಿದರೆ ಹಿಂದೆ ಆ ಸ್ಥಳದಲ್ಲಿ ಪ್ರಾಗೈತಿಹಾಸಿಕ ಕಾಲದ ಮಾನವರು ವಾಸಿಸುತ್ತಿದ್ದು, ಅವನಿಗೆ ಸಂಬಂಧಿಸಿದ ಅವಶೇಷಗಳು ಅಲ್ಲಿ ಇದ್ದಿರಲೂ ಬಹುದು. ಈ ಜಾಗದಲ್ಲೆ ನವಶಿಲಾಯುಗದ ಕಾಲಕ್ಕೆ ಸೇರಿರುವ ಒಂದು ಒರಟಾದ ಶಿಲಾಯುಧ (ಕಲ್ಲಿನ ಗುಂಡು) ಸಹ ಇದೆ (ಈ ಶಿಲಾಯುಧವು ಬೆಣಚುಕಲ್ಲಿನದ್ದಾಗಿದ್ದು, ಚೌಕಾಕಾರದಲ್ಲಿದೆ. ಇದನ್ನು ಅಲ್ಲಲ್ಲಿ ಚಕ್ಕೆ ಎಬ್ಬಿಸಿ ಬಳಸಿರುವುದು ಚಿತ್ರದಿಂದ ಸ್ಪಷ್ಟವಾಗುತ್ತದೆ. ಇದು ಸುಮಾರು ೬x ಇದೆ.)  ಈಗ  ಅಲ್ಲಿ ಸೋಮವಾರ ಮುನೇಶ್ವರ ದೇವರ ಹೆಸರಿನಲ್ಲಿ ಪೂಜೆ ಮಾಡುತ್ತಾರೆ. ಬೆಟ್ಟದಿಂದ ಗ್ರಾಮಕ್ಕೆ ಇಳೀಯುವಾಗ ಒಂದು ಕಡೆ ಕಲ್ಲುಗಳನ್ನಿಟ್ಟು ಪೂಜಿಸ ಲಾಗುತ್ತದೆ. ಅಲ್ಲಿ ಒಂದು ಕಲ್ಲಿನ ಮೇಲೆ ಒಂದು ರೇಖಾ ಚಿತ್ರವಿದ್ದು ಅದು ಗೂಳಿಯ ರೇಖಾಚಿತ್ರವಿರಬಹುದೆಂದು ಊಹಿಸಬಹುದು.
ಲಗುಮೇನಹಳ್ಳಿ ಗ್ರಾಮದಿಂದ ದಕ್ಷಿಣಕ್ಕೆ ಸುಮಾರು ೨.ಕಿ.ಮೀ ದೂರ ಕ್ರಮಿಸಿದರೆ ಅಲ್ಲಿ ಮತ್ತೊಂದು ಬೆಟ್ಟವಿದೆ. ಬೆಟ್ಟವನ್ನು ಹತ್ತುತ್ತಿದ್ದಂತೆಯೇ ಪ್ರಾರಂಭದಲ್ಲಿಯೇ ಉತ್ತರಾಭಿ ಮುಖವಾಗಿ ಒಂದು ಸ್ವಾಭಾವಿಕವಾದ ಗುಹೆಯಿದ್ದು, ಗುಹೆಯ ಒಳಗೆ ದೊಡ್ಡದಾದ ಸುರಂಗ ಮಾದರಿಯ ರಚನೆಯಿದೆ. ಗುಹೆಯ ಸ್ವಾಭಾವಿಕ ರಚನೆಯಾಗಿದೆ. ಗುಹೆಯ ಬೆಟ್ಟದ ಕೆಳಗಿದ್ದರೂ, ಗುಹೆಯ ಮೇಲ್ಭಾಗವನ್ನು ದೊಡ್ಡ ದೊಡ್ಡ ಕಲ್ಲು ಚಪ್ಪಡಿಗಳನ್ನು ಒಂದರ ಮೇಲೊಂದು ಜೋಡಿಸಿರು ವಂತಿದೆ. ಬೆಟ್ಟದ ಆ ಭಾಗದ ರಚನೆಯೂ ಸಹ ವಿಶಿಷ್ಟ ವಾಗಿದ್ದು, ಅದನ್ನು ನೋಡಿದಾಕ್ಷಣವೇ ಅದು ಹಿಂದೊಮ್ಮೆ ಮಾನವನ ನೆಲೆಯಾಗಿತ್ತೆಂದು ಸ್ಪಷ್ಟವಾಗುತ್ತದೆ.
ಗುಹೆಯಿರುವ ಭಾಗದಿಂದ ಬೆಟ್ಟದ ಮೇಲೆಯೇ ಹಿಂದಕ್ಕೆ ಸಾಗಿದರೆ ಬೆಟ್ಟ ಸಮತಟ್ಟಾಗಿದ್ದು, ವಿಶಾಲವಾದ ಬಯಲು ಪ್ರದೇಶವಿದೆ. ಈ ಪ್ರದೇಶ ಪ್ರಾಗೈತಿಹಾಸಿಕ ಮಾನವನ ನಿವಾಸವಾಗತ್ತೆಂಬುದಕ್ಕೆ ಪೂರಕವಾಗಿ ಈ ಬೆಟ್ಟದ ಮೇಲೆ ಎರಡು ಪ್ರಾಕೃತಿಕ ದೊಣೆಗಳಿದ್ದು, ಎಲ್ಲಾ ಋತುಗಳಲ್ಲಿಯೂ ಅಲ್ಲಿ ನೀರು ಇರುತ್ತದೆಂದು ಸ್ಥಳೀಯರು ಹೇಳುತ್ತಾರೆ. ಆ ದೊಣೆಯ ಮೇಲ್ಭಾಗದಲ್ಲಿ ಒಂದು ಭಗ್ನಾವಸ್ಥೆಯ ನಿಲುವುಗಲ್ಲು ಸಹ ಇದೆ. ಪ್ರಾಗೈತಿಹಾಸಿಕ ಕುರುಹುಗಳಿರುವ ಬೆಟ್ಟದ ಪ್ರದೇಶಗಳಲ್ಲಿ ಸರ್ವೇಸಾಧಾರಣವಾಗಿ ಕಂಡು ಬರುವಂತೆ ಇಲ್ಲಿಯೂ ಸಹ ಕಲ್ಲುಗಳ ಮೇಲೆ ಕಲ್ಲುಗಳನ್ನು ಪೇರಿಸುವ ವ್ಯವಸ್ಥೆಯನ್ನು ಕಾಣಬಹುದು. ಮದುವೆ ಯಾಗದಿರುವವರು, ಮಕ್ಕಳಾಗದಿರುವವರು ಹಾಗೂ ಮನೆಯನ್ನು ಕಟ್ಟಬೇಕೆಂಬ ಆಕಾಂಕ್ಷೆ ಇರುವವರು ತಮ್ಮ ಆಸೆಗಳು ಈಡೇರುತ್ತವೆಂಬ ಆಶಯದಿಂದ ಈಗಲೂ ಇದೇ ಪದ್ಧತಿಯನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ. ಬೆಟ್ಟದ ಮೇಲೆ ಅಲ್ಲಲ್ಲಿ ಕಲ್ಮನೆಗಳು ಭಗ್ನಗೊಂಡಿರುವ ಕುರುಹುಗಳು ಕಂಡು ಬರುತ್ತದೆ.
ರಮಣೀಯವಾದ ಸುತ್ತಲೂ ಬೆಟ್ಟಗುಡ್ಡಗಳ ನ್ನೊಳಗೊಂಡ ಕಣಿವೆಯಲ್ಲಿರುವ ಘಾಟಿ ಸುಬ್ರಹ್ಮಣ್ಯ ಕ್ಷೇತ್ರವು ಇಲ್ಲಿಯವರೆಗೆ ಪುಣ್ಯಕ್ಷೇತ್ರವೆಂದು ಪರಿಗಣಿಸಲ್ಪಟ್ಟಿತ್ತು. ಈ ಶೋಧದಿಂದ ಈ ಪರಿಸರವು ಕ್ರಿ.ಸ್ತಶಕದ  ಪ್ರಾರಂಭದ ವೇಳೆಗಾಗಲೇ ಮಾನವನಿಗೆ ಆವಾಸಸ್ಥಾನವಾಗಿತ್ತೆಂದು ಇಲ್ಲಿನ ಶಿಲಾಗೋರಿ, ಕಲ್ಮನೆ, ಗುಹೆಗಳು ಹಾಗೂ ನಿಲುವುಗಳಿಂದ ಸ್ಪಷ್ಟವಾಗುತ್ತದೆ.
[ಕ್ಷೇತ್ರ ಕಾರ್ಯಕ್ಕೆ ನನ್ನೊಂದಿಗೆ ಬಂದು ನೆರವು ನೀಡಿದ ಪತಿ ಎನ್.ಸಿ. ಬಾಬುರೆಡ್ಡಿಯವರಿಗೆ ಹಾಗೂ ಮಗಳು ಎಸ್.ಬಿ. ಸೃಷ್ಟಿಗೆ ಕೃತಜ್ಞತೆಗಳು.]



Wednesday, November 14, 2012

ಇತಿಹಾಸಕಾರರ ಸರಣಿ-೧




ಇತಿಹಾಸಕಾರರ -ಸರಣಿ

 ಎಲ್ಲರಿಗೂ ದೀಪಾವಳಿಯ ಶುಭಾಶಯಗಳು .ಕನ್ನಡ  ಇತಿಹಾಸಲೋಕದಲ್ಲಿ  ಹಿರಿಯ ಸಾಧಕರ ಪರಿಚಯ ಮಾಡಿಕೊಡಲು ದೀಪಾವಳಿಯಿಂದ ಒಂದು ಸರಣಿ ಪ್ರಾರಂಭಿಸಿದೆ. ಇತಿಹಾಸಪ್ರಿಯರಿಗೆ  ಆಸಕ್ತಿ ಮೂಡಿಸುವ ಪ್ರಯತ್ನದಲ್ಲಿ ತಮ್ಮೆಲ್ಲರ ಸಹಕಾರ ಕೋರಿದೆ  ಸರಣಿಯ ಬರಹಕ್ಕೆ ಅನೇಕ  ಅಭಿನಂದನ ಗ್ರಂಥಗಳು, ಎಪಿಗ್ರಾಫಿಯಾಕರ್ನಾಟಕ, ವಿಶ್ವಕೋಶ ಮತ್ತು ಅನೇಕ ಅಂತರ್‌ಜಾಲ ತಾಣಗಳನೆರವಿನಿಂದ   ಮಾಹಿತಿ  ಮತ್ತು ಚಿತ್ರಗಳನ್ನು ಪಡೆಯಲಾಗಿದೆ.ಡಾ. ಪಿ.ವಿ.ಕೆ ಸಲಹೆ, ಸಹಕಾರ ನೀಡಿದ್ದಾರೆ ಅವರಿಗೆಲ್ಲರಿಗೂ ಋಣಿಯಾಗಿರುವೆ.
.- ಎಚ್‌. ಶೇಷಗಿರಿರಾವ್





                               ಕನ್ನಡ ಖಜಾನೆ ಕೀಲಿ ಕೈ ಬೆಂಜಮಿನ್‌  ಲೂಯಿ ರೈಸ್‌
 ಕನ್ನಡ ಭಾಷೆ, ಸಾಹಿತ್ಯ, ಶಾಸನ ಎಂದೊಡನೆ ತಟ್ಟನೆ ನೆನಪಿಗೆ ಬರುವ ಹೆಸರು ಬಿ.ಎಲ್‌. ರೈಸ್‌ ಅವರದು.ಅವರು ನಮ್ಮ ನಾಡಿನ ಶಾಸನಶಾಸ್ತ್ರದ ಪಿತಾಮಹ ಎನ್ನಬಹುದು. ರೈಸ್‌  ಕುಟುಂಬವು ಕನ್ನಡನಾಡಿನೊಡನೆ  ಒಂದು ಶತಮಾಕ್ಕೂ ಹೆಚ್ಚು ಒಡನಾಟ ಹೊಂದಿದೆ.  ಬಿ ಎಲ್‌ರೈಸ್‌  ಬೆಂಗಳೂರಿಗರು ಎನ್ನಬಹುದು. ಅವರ  ತಂದೆ ಬೆಂಜಮಿನ್ ಹೋಲ್ಟ್ಚ್‌.ರೈಸರು ಇಂಗ್ಲೆಂಡಿನಿಂದ ಭಾರತಕ್ಕೆ  ಬಂದಿದ್ದು  ಧರ್ಮೋಪದೇಶಕರಾಗಿ.ಅವರ ಕಾರ್ಯಕ್ಷೇತ್ರ ಹಳೇ ಮೈಸೂರು ಪ್ರಾಂತ್ಯ. ಮನೆ ಮಾಡಿ ನೆಲಸಿದ್ದು ಬೆಂಗಳೂರಿನಲ್ಲಿ. ಧರ್ಮಬೋಧೆಗೆ ಅನುವಾಗಲಿ ಎಂದು ಕನ್ನಡ ಕಲಿತರು. ಅವರ ಮಡದಿಯೂ ಪತಿಗೆ ನೆರವಾಗಲು ಕನ್ನಡ ಕಲಿತರು.  ಅವರ ಮಗ  ಬೆಂಜಮಿನ್‌ ೧೮೩೭ರಲ್ಲಿ ಬೆಂಗಳೂರಿನಲ್ಲೇ ಜನಿಸಿದ. ಕನ್ನಡ ಪರಿಸರದಲ್ಲಿ  ಮಗು ಬೆಳೆಯಿತು. ಬಿ.ಎಲ್‌. ರೈಸ್‌. ಬಾಲ್ಯವೆಲ್ಲಾ ಬೆಂಗಳೂರಿನಲ್ಲಿಯೇ ಹಾಗಾಗಿಕನ್ನಡವನ್ನು ಅವರು ಇಂಗ್ಲಿಷ್‌ಗಿಂತ ಚೆನ್ನಾಗಿ ಮಾತನಾಡಬಲ್ಲವರಾಗಿದ್ದರು.         


 ಅವರು ಶಿಕ್ಷಣ ಪಡೆದಿದ್ದು ಇಂಗ್ಲಂಡಿನ ಹ್ಯಾರೋ ನಗರದಲ್ಲಿ. ಪದವಿಧರರಾದಮೇಲೆ. ಕೆಲಕಾಲ ಅಲ್ಲಿಯೇ ಕೆಲಸ ಮಾಡುತ್ತಾ ಐಸಿಎಸ್‌ ಪರೀಕ್ಷೆಗೆ ತಯಾರಿ ನಡೆಸಿರುವಾಗಲೇ ೧೮೬೦ ರಲ್ಲಿ ಬೆಂಗಳೂರಿಗೆ ಬರಬೇಕಾಯಿತು. ಮೈಸೂರುರಾಜ್ಯ ಶಿಕ್ಷಣ ಇಲಾಖೆಯಲ್ಲಿ ಅವರಿಗೆ ಉದ್ಯೋಗದ ಕರೆ ಬಂದಿತು.ಬೆಂಗಳೂರಿನ ಸೆಂಟ್ರಲ್‌ಹೈಸ್ಕೂಲಿನ ೨೩ ನೇ    ವಯಸ್ಸಿನಲ್ಲೇ ಮುಖ್ಯೋಪಧ್ಯಾಯ ಹುದ್ದೆ ಅವರದಾಯಿತು.ಸೇವೆಯ ಕುರಿತು ಅವರ ಬದ್ದತೆ ಅಪಾರ. ಜನಸಂಪರ್ಕದ ಮಹತ್ವ ಅರಿತ ಅವರು ತಮ್ಮ ಕಾರ್ಯ ಕ್ಷೇತ್ರದ ಜನರ ಭಾಷೆಯಮೇಲಿನ ಪ್ರಭುತ್ವದ   ಅಗತ್ಯವನ್ನು ಮನಗಂಡರು. ಬಂದ ಒಂದೇ ವರ್ಷದಲ್ಲಿ ಹೈಯರ್‌ ಸೆಕೆಂಡರಿ ಕನ್ನಡ ಪರೀಕ್ಷೆಗೆ ಕುಳಿತು ಉತ್ತೀರ್ಣರಾದರು.
 ಅವರು ೧೯೬೫ ರಿಂದ ಮೂರುವರ್ಷಗಳ ಕಾಲ ಮೈಸೂರು ಮತ್ತು ಕೊಡಗು ಸೀಮೆಯ ಶಾಲಾ ಇನಸ್ಪೆಕ್ಟರ್‌ಆಗಿ ಕೆಲಸ ಮಾಡಿದರು. ನಂತರ ಇಂಗ್ಲೇಂಡಿಗೆ ಹೋಗಿ ಮದುವೆಯಾಗಿ ವಾಪಸ್ಸು ಬೆಂಗಳೂರಿಗೆ ಬಂದರು. ಆಸಮಯದಲ್ಲಿ ಮೇಜರ್‌ ಡಿಕ್ಸನ್‌  ಹಲವು ಶಾಸನಗಳ ಭಾವಚಿತ್ರ ನೀಡಿ ಅದರ ಭಾಷಾಂತರ ಮಾಡುವಂತೆ ಕೋರಿದರು. ಅವರ ಶಾಸನ ಅಧ್ಯಯನಕ್ಕೆ ಅದು ನಾಂದಿಯಾಯಿತು.ಅವರು ಹೈಗ್ರಂಡನನಿವೇಶನದಲ್ಲಿ  ತಮ್ಮವಾಸಕ್ಕಾಗಿ ಸುಸಜ್ಜಿತ ಮನೆ ನಿರ್ಮಿಸಿಕೊಂಡರು.ಅವರ ಮೊದಲ ಮಗು ಅಲ್ಲಿಯೇ ಜನಿಸಿತು.ಆ ಅವಧಿಯಲ್ಲಿಯೇ ಅವರ ಶಾಸನ ಸಂಗ್ರಹದ ಆಸಕ್ತಿ ಚಿಗುರೊಡೆಯಿತು ಹೋದ ಊರುಗಳಲ್ಲೆಲ್ಲ ಶೈಕ್ಷಣಿಕ ತಪಾಸಣೆ ಜತೆ ಹಸ್ತ ಪ್ರತಿ ಸಂಗ್ರಹ, ಶಾಸನಗಳ ಸಮೀಕ್ಷೆ, ಅಧ್ಯಯನ ಮೊದಲುಮಾಡಿದರು. ಕನ್ನಡ ನುಡಿಗೆ ಅವರು ಸಲ್ಲಿಸಲಿದ್ದ ಮಹಾನ್‌ಕೊಡುಗೆಗೆ  ಈ ಕೆಲಸವೇ ಮುನ್ನುಡಿ ಬರೆಯಿತು. ನಂತರ ೧೫ ವರ್ಷಗಳ ಕಾಲ ಮೈಸೂರು ಸಂಸ್ಥಾನದ ಶಿಕ್ಷಣ ಇಲಾಖೆಯನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ಆಗಂತೂ ತಮ್ಮವ್ಯಾಪ್ತಿಯಲ್ಲಿ ಬರುವ ಎಲ್ಲ  ಪ್ರದೇಶಗಳಲ್ಲಿ ಶಾಸನ ಮತ್ತು  ಹಸ್ತಪ್ರತಿಗಳನ್ನು ಹುಡುಕುವುದೇ ಆದ್ಯ ಕೆಲಸವಾಯಿತು. ಅವುಗಳನ್ನು  ಸಂಗ್ರಹಿಸಿ  ಅಧ್ಯಯನಕ್ಕೆ ಮೊದಲು ಮಾಡಿದರು.ಅವರ ಶಿಕ್ಷಣಾಸಕ್ತಿಯನ್ನು ಗಮನಿಸಿ  ಹಂಟರ್‌  ಶಿಕ್ಷಣ ಆಯೋಗದ ಕಾರ್ಯದರ್ಶಿ ಸ್ಥಾನ ಕೊಡಲಾಯಿತು. ಒಂದೇ ವರ್ಷದಲ್ಲಿ ಶಿಕ್ಷಣ ವರಿದಿ ಸಿದ್ಧ ವಾಯಿತು. ಮೈಸೂರು ಸಂಸ್ಥಾನದಲ್ಲಿ ಪ್ರಾರಂಭಗೊಂಡ ಪುರಾತತ್ವ ಇಲಾಖೆಯನಿರ್ದೇಶಕರಾಗಿ ವಿದ್ಯಾಇಲಾಖೆಯ ಹೊಣೆಯ ಜೊತೆಯಲ್ಲಿಯೇ ನೋಡಿಕೊಳ್ಳಲು ನೇಮಿಸಿದರು.ಹೊಸ ಹುದ್ದೆಯ ಕಾರ್ಯವನ್ನು ಅವರು ಯಶಸ್ವಿಯಾಗಿನಿರ್ವಹಿಸಿದರು.. ಈ ಇಲಾಖೆಯ ಮಹತ್ವವನ್ನು ಮನಗಂಡ ಸರ್ಕಾರವು ಅವರನ್ನು ಪುರಾತತ್ವ ಇಲಾಖೆಗೆ ಪೂರ್ಣಾವಧಿ ನಿರ್ದೇಶಕರಾಗಿ ೧೮೯೦ರಲ್ಲಿ ನೇಮಿಸಿತು. ಅಲ್ಲಿಂದ ೧೬ ವರ್ಷಗಳ ಕಾಲ ಅವರು ನಿವೃತ್ತಿಯಾಗುವವರೆಗೂ ಅವಿರತವಾಗಿ ದುಡಿದು ಅಮೂಲ್ಯ ಕೊಡುಗೆ ನೀಡಿದರು. ಅವರು ಒಟ್ಟು ೮೮೬೯ ಶಾಸನಗಳನ್ನು ಸಂಗ್ರಹಿಸಿ, ಅಧ್ಯಯನಮಾಡಿ, “ ಎಪಿಗ್ರಾಫಿಯಾ ಕರ್ಣಾಟಕ”  ಎಂಬ ಹೆಸರಿನ ೧೨ ಸಂಪುಟಗಳನ್ನು ಪ್ರಕಟಿಸಿದರು. ಅದರಲ್ಲಿನ ಮೊದಲ ಸಂಪುಟ ಕೊಡಿಗಿನದಾದರೆ,೨ನೇ ಸಂಪುಟವು ಶಾಸನಗಳ ಆಗರವಾದ  ಶ್ರವಣಬೆಳಗೊಳಕ್ಕೆ ಮೀಸಲಾಯಿತು. ಅದರಲ್ಲಿ ೧೪೪ ಶಾಸನಗಳು ಪ್ರಕಟಗೊಂಡಿದ್ದವು.  ಅದು ಶ್ರವಣಬೆಳಗೊಳದಲ್ಲಿ ದೊರೆತ ೬೦೦ ಶಾಸನಗಳ  ಸಂಪಾದನಾ ಮತ್ತು ಅಧ್ಯಯನ ಕಾರ್ಯಕ್ಕೆ ಅಡಿಪಾಯವಾಯಿತು..


ಇವರು ಈಗಾಲೆ ಮೈಸೂರು ಇನಸ್ಕ್ರಿಪ್ಷನ್‌” ಎಂಬ ಶಾಸನ ಕುರಿತಾದ ಕೃತಿಪ್ರಕಟಿಸಿದ್ದರು.ಮೈಸೂರು ಮತ್ತು ಕೊಡಗು ಸೀಮೆಯ ಗೆಜೆಟಿಯರ್‌ಗಳನ್ನು ಮೂರು ಸಂಪುಟಗಳಲ್ಲಿ ೧೮೮೭ರಲ್ಲಿಯೇ ಸಿದ್ಧಪಡಿಸಿ ಪ್ರಕಟಿಸಿದ್ದರು. ಪ್ರಥಮ ಜನಗಣತಿ ವರದಿಯೂ ಇವರದೇ. ಇವರ ಗೆಜೆಟಿಯರ್‌ಗಳು ಬರಿ ಅಂಕೆಸಂಖ್ಯೆಗಳ ದಾಖಲೆಗಳಾಗಿರದೆ  ಐತಿಹಾಸಿಕ ಮತ್ತು ಸಾಂಸ್ಕೃತಿಕ  ಅಂಶಗಳನ್ನೂ ಒಳಗೊಂಡು ಓದುಗರ ಆಸಕ್ತಿ ಕೆರಳಿಸುವಂತೆ ಇವೆ. ಆದ್ದರಿಂದ ಅವು  ಇಂದಿಗೂ ಆಡಳಿತ ಸಂಶೋಧನೆಯ  ಉತ್ತಮ ಮಾದರಿಗಳಾಗಿವೆ ಎನ್ನಬಹುದು.

ಇವರು ಬರಿ ಗೆಜೆಟಿಯರ್‌ ಮತ್ತು ಶಾಸನ ಸಂಪುಟಗಳ ರಚನೆಗೆ ಮಾತ್ರ ತಮ್ಮ ಆಸಕ್ತಿಯನ್ನು ಸೀಮಿತಗೊಳಿಸದೆ ಕನ್ನಡ ಹಸ್ತಪ್ರತಿಗಳ ಸಂಗ್ರಹಣ ,ಸೂಚೀಕರಣ, ಹಾಗೂ ಸಂಪಾದನೆಯ ಕಡೆಗೂ ಗಮನ ಹರಿಸಿದ್ದರು. ಸಾಹಿತ್ಯೋಪಸನೆಗೆ ಉಪಯುಕ್ತವಾದ “ ಬಿಬ್ಲಿಯೋಥಿಕಾ ಕರ್ಣಾಟಿಕಾ” ಎಂಬ ಗ್ರಂಥ ಮಾಲೆಪ್ರಾರಂಭಿಸಿ, ಅದರಲ್ಲಿ  ’ಪಂಪ ರಾಮಾಯಣ, ಕರ್ನಾಟಕ ಭಾಷಾಭೂಷಣ , ಪಂಪ ಭಾರತ, ಶಬ್ದಾನುಶಾಸನ, ಅಮರಕೋಶ, ಕವಿರಾಜಮಾರ್ಗ ಮೊದಲಾದ ಕೃತಿಗಳನ್ನು ಪ್ರಕಟಿಸಿದರು. ಕನ್ನಡ ಸಾಹಿತ್ಯ ಮತ್ತು ಇತಿಹಾಸ ಅಧ್ಯಯನಕ್ಕೆ ಈಕೃತಿಗಳು ಅಡಿಪಾಯ ಹಾಕಿದವು.ಅವರು ತಮ್ಮ ೭೦ನೇ ವಯಸ್ಸಿನಲ್ಲಿ ನಿವೃತ್ತರಾಗಿ ಇಂಗ್ಲೆಂಡಿಗೆ ಹೋಗಿ ಹ್ಯಾರೋದಲ್ಲಿ ನೆಲಸಿದರು.ಅಲ್ಲಿಯೂ ಕನ್ನಡ ಸೇವೆ ಮುಂದುವರಿಸಿದರು. ನಿವೃತ್ತರಾದ ಮೂರುವರ್ಷದ ನಂತರ ತಮ್ಮ ಅಧ್ಯಯನದ ಫಲವಾದ “ ಮೈಸೂರು ಅಂಡ್‌ ಕೂರ್ಗ ಇನ್‌ಸ್ಲ್ರಿಪ್ಷನ್ಸ” ಕೃತಿ ಪ್ರಕಟಿಸಿದರು.  ಅದನ್ನು ದಕ್ಷಿಣ ಕರ್ನಾಟಕದ ಅಧಿಕೃತ ಚಾರಿತ್ರಿಕ ಕೃತಿ ಎನ್ನಬಹುದು. ತಮ್ಮ ೭೮ನೇ ವಯಸ್ಸಿನಲ್ಲೂ “ ಎಪಿಗ್ರಾಫಿಯಾ ಕರ್ನಾಟಕ” ದ ಮೊದಲನೆ ಸಂಪುಟವನ್ನು ಭಾರತ ಸಕಾರದ ಮನವಿಯ ಮೇರೆಗೆ ಪರಿಷ್ಕರಿಸಿ ಕೊಟ್ಟರು. ತೊಂಬತ್ತು ವರ್ಷದ ತುಂಬು ಜೀವನ ನಡೆಸಿ೧೯೨೭ರಲ್ಲಿ ಕಾಲವಶರಾದು. ಅವರ ಹೆಸರು ಕರ್ನಾಟಕದ ಜನರ ಹೃದಯಲ್ಲಿ ಚಿರಸ್ಥಾಯಿಯಾಗಿದೆ.

 ಕಾಲವಾಗುವ ಕೆಲವೇ ಸಮಯದ ಮುಂಚೆ ವೆಂಬರ್ಲಿಯಲ್ಲಿ ನಡೆದ ಅಂತರಾಷ್ಟ್ರೀಯ ವಸ್ತು ಪ್ರದರ್ಶನದ ಕನ್ನಡ ಮಳಿಗೆಗೆ ತಮ್ಮ ಮಕ್ಕಳ ಸಹಾಯದಿಂದ  ಭೇಟಿನೀಡಿದ್ದರು. ಅಲ್ಲಿರುವ ಗರಳೆಪುರಿ ಶಾಸ್ತ್ರಿಗಳು ಇಂಗ್ಲಿಷ್‌ನಲ್ಲಿ ಮಾತನಾಡಿದಾಗ, ಕನ್ನಡದ ಸವಿಯನ್ನು ಕೇಳಲೆಂದೆ ಬಂದಿರುವೆ ಕನ್ನಡದಲ್ಲೇ ಮಾತನಾಡಿ ಎಂದು ಅಲ್ಲಿನವರಿಗೆ ವಿನಂತಿಸಿದರು. ಅವರ ಜತೆ ಕನ್ನೆಡದಲ್ಲೆ ಗಂಟೆಗಟ್ಟಲೇ ಬಾಯ್ತುಂಬ ಮಾತನಾಡಿದರು ’ ಕುವೆಂಪು ಅವರು ಬರೆದ ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು ’.ಎಂದು ಬರೆಯುವ ಅನೇಕ ದಶಕಗಳ ಮೊದಲೇ  ಅದರಂತೆ ಬಾಳಿ ಬದುಕಿದ ಹಿರಿಯಜೀವ ಅವರು.ಅವರ ಅಪಾರ ಕನ್ನಡಾಭಿಮಾನದ ಪ್ರತೀಕ. ಅದಕ್ಕಾಗಿಯೇಅವರು ಗತಿಸಿ ನೂರಾರು ವರ್ಷಗಳಾದರೂ ಕನ್ನಡಿಗರಿಗೆ ಪ್ರಾಥಃಸ್ಮರಣೀಯರಾದ ಅನೇಕ ಮಹನೀಯರಲ್ಲಿ  ಅವರೂ ಒಬ್ಬರಾಗಿರುವುರು.