ಡಾ || ಪಿ.ವಿ.ಕೃಷ್ಣಮೂರ್ತಿ
# ೩೭, ಶ್ರೀಕೃಷ್ಣ ಕೃಪ, ೩ ನೆಯ ಅಡ್ಡರಸ್ತೆ,
ಸುಬ್ಬಣ್ಣ ಲೇಔಟ್, ಹರಿನಗರಕ್ರಾಸ್,
ಬೆಂಗಳೂರು-೫೬೦೦೬೨
ಸುಬ್ಬಣ್ಣ ಲೇಔಟ್, ಹರಿನಗರಕ್ರಾಸ್,
ಬೆಂಗಳೂರು-೫೬೦೦೬೨
ತುಮಕೂರು ಜಿಲ್ಲೆ, ಗುಬ್ಬಿ ತಾಲ್ಲೂಕು, ಬಿಕ್ಕೆಗುಡ್ಡ ಗ್ರಾಮದಲ್ಲಿ ದೊರೆತ ಈ ಶಾಸನವು ಈಗ
ತುಮಕೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ ಸಂರಕ್ಷಿತವಾಗಿದೆ. ಈ ಶಾಸನವು ನಮ್ಮ ಗಮನಕ್ಕೆ ಬಂದಂತೆ
ಇದುವರೆಗೂ ಅಪ್ರಕಟಿತವಾಗಿದೆ. ಇದೊಂದು ಕ್ರಯಪತ್ರ
ಶಾಸನವಾಗಿದ್ದು ಕೋನಾಕಾರದ ಕಂಬದಂಥ ನಿಲುಗಲ್ಲಿನ
ಕೂಸಿನಮೇಲೆ ಕೆತ್ತಲಾಗಿದೆ. ಈ ಶಾಸನದ ಶಿಲೆಯು ಸುಮಾರು ೧೦/೩೫ ಸೆಂ.ಮೀ. ಅಗಲ, ೧೪೦ ಸೆಂ.ಮೀ. ಎತ್ತರ ಹಾಗೂ ಸುಮಾರು ೧೦/೧೮ ಸೆಂ.ಮೀ.
ದಪ್ಪನೆಯ ಕಲ್ಲಿನದಾಗಿದ್ದು ಶಾಸನದ ಅಕ್ಷರಗಳನ್ನು ಮುಂಭಾಗ ಮತ್ತು ಶಾಸನದ ಬಲಬದಿಯಲ್ಲಿ
ಕೊರೆಯಲಾಗಿದೆ. ಹತ್ತೊಂಬತ್ತನೆಯ ಶತಮಾನದ ಕನ್ನಡ ಲಿಪಿ ಮತ್ತು ಭಾಷೆಯಲ್ಲಿರುವ ಈ ಶಾಸನದ ಅಕ್ಷರಗಳ
ಗಾತ್ರ ಸರಾಸರಿ ೫/೩.೫ ಸೆಂ.ಮೀ. ಪ್ರಮಾಣದಲ್ಲಿದ್ದು ಸಾಕಷ್ಟು ಆಳವಾಗಿ ಕೊರೆಯಲಾಗಿದೆ. ಈ ಶಾಸನದ
ಭಾಷಾ ಪ್ರಯೋಗದಲ್ಲಿ ಸಮಕಾಲೀನವಾಗಿ ಪ್ರಚಲಿತವಿದ್ದ ರೀತಿಯನ್ನು ಅಂದರೆ ಪದ ಮಧ್ಯದಲ್ಲಿ ಸ್ವರಗಳ
ಬಳಕೆ ಪದಾದಿಯಲ್ಲಿ ‘ಈ’, ‘ಉ’ ಸ್ವರಗಳ
ಬದಲಾಗಿ ವ್ಯಂಜನ ‘ಯೀ’ ‘ವು’ ಗಳ ಪ್ರಯೋಗ, ಇಂತಹ
ಪ್ರಯೋಗಗಳು ಸಮಕಾಲೀನ ಹಸ್ತಪ್ರತಿ, ಕೈಫಿಯತ್ತು
ಇತ್ಯಾದಿ ಬರಹಗಳಲ್ಲಿ ವಿಶೇಷವಾಗಿ ಕಂಡುಬರುವುದು ಸರಿಯಷ್ಟೆ. ಉದಾ: ತಾಉ (ತಾವು), ನಿಲಿಸಿದೆಉ (ನಿಲ್ಲಿಸಿದೆವು), ಗಉಡ (ಗೌಡ), ಕೆಂಪೈಯ (ಕೆಂಪಯ್ಯ), ಯಿಂತಿ (ಇಂತಿ), ಯಿವರ (ಇವರ) ಇತ್ಯಾದಿ.
ಈ ಶಾಸನದಲ್ಲಿ ವಿಶ್ವಾವಸು ಸಂವತ್ಸರ ಚೈತ್ರ ಶುದ್ಧ
ಪಂಚಮಿ ಎಂದು ಮಾತ್ರ ಕಾಲ ಸೂಚಿತವಾಗಿದೆ. ಭಾಷೆ ಮತ್ತು ಲಿಪಿ ೧೯ ನೆಯ ಶತಮಾನದ್ದಾಗಿದೆ. ಈ
ಆಧಾರದಿಂದ ಶಾಸನೋಕ್ತ ಕಾಲವು ೧೨-೪-೧೮೪೫, ಶುಕ್ರವಾರಕ್ಕೆ
ಸರಿಹೊಂದುತ್ತದೆ.
ಇದು ಶ್ರೀಮನ್ ಮಹಾನಾಯಕನ iಕ್ಕಳು ಬಡ ತಿಮ್ಮಯ್ಯನು ಹೆಂಜೆರೀ ಲೆಕ್ಕಯ್ಯನ ಮಗ
ಹೆಂಜೆರೀ ಲಕ್ಕಯ್ಯನಿಗೆ ಕೊಟ್ಟ ಕ್ರಯಪತ್ರವಾಗಿದೆ. ಇದರಲ್ಲಿ ಮಲ್ಲಪ್ಪನಹಳ್ಳಿಯಲ್ಲಿರುವ ಹೊಲ, ಗದ್ದೆ, ಹೊರೆ
ಹುಲ್ಲು, ಬೀಜ, ಎತ್ತು, ಸುವರ್ಣಾದಾಯ
ಎಲ್ಲವನ್ನೂ ಕ್ರಯವಾಗಿ ನಿರಯಸವಾಗಿ ನೀಡಿದ ವಿವರವಿದೆ. ಈ ಸಂದರ್ಭದಲ್ಲಿ ಮಲ್ಲಪ್ಪನಹಳ್ಳಿಯ ಚಿಣ್ಣಪ್ಪಗೌಡನ
ಮಗ ನಿಂಗೇಗೌಡ, ಸುರಗಿಹಳ್ಳಿಯ
ಮಾಳೇಗೌಡನ ಮಗ ದೊಡ್ಡಕೆಂಪಯ್ಯ, ತೆನಹಳ್ಳಿಯ
ಸಿಂಗಯ್ಯ - ಇವುರುಗಳು ಸಾಕ್ಷಿಯಾಗಿರುತ್ತಾರೆ.
ಈ ಕ್ರಯಪತ್ರ ಶಾಸನವನ್ನು ಕೊಟ್ಟಿರುವವರು ಮಹಾನಾಯಕನ ಮಕ್ಕಳೆಂದು ಉಲ್ಲೇಖಗೊಂಡಿರುವುದು ಗಮನಾರ್ಹ
ಅಂಶ. ಮಹಾನಾಯಕ, ನಾಯಕಾಚಾರ್ಯ, ಎಂಬುದು ಸಾಮಾನ್ಯವಾಗಿ ವಿಜಯನಗರ ಅರಸರ ಕಾಲದ ನಾಯಕ
ಪಾಳೆಯಗಾರ ವಂಶೀಯರಿಗಿದ್ದ ಬಿರುದಾಗಿತ್ತು. ಹಾಗಾಗಿ ಪ್ರಸ್ತುತ ಕ್ರಯಪತ್ರ ಶಾಸನವನ್ನು ಕೊಟ್ಟವರು
ನಾಯಕವಂಶಕ್ಕೆ ಸೇರಿದ ಬಡತಿಮ್ಮಯ್ಯ. ಕೊಂಡುಕೊಂಡವರು ಅಥವಾ ಪಡೆದವರು ಹೆಂಜೇರು (ಇಂದಿನ ಆಂಧ್ರದ
ಮಡಕಶಿರಾ ತಾಲ್ಲೂಕಿನ ಹೇಮಾವತಿ) ಸ್ಥಳದ ಲೆಕ್ಕಯ್ಯನ ಮಗ ಲಕ್ಕಯ್ಯ. ಕ್ರಯಕ್ಕೆ ಕೊಟ್ಟಿರುವ
ಪ್ರದೇಶ ಮಲ್ಲಪ್ಪನಹಳ್ಳಿಯ ಹೊಲ, ಗದ್ದೆ, ಇತ್ಯಾದಿ. ಅವಾದರೂ ಮಹಾನಾಯಕ ಬಡತಿಮ್ಮಯ್ಯನ ಮಕ್ಕಳ
‘ಅಶೀಕೀ’ಗೆ ಸಂದಂತಹದ್ದು. ಇಲ್ಲಿ
ಪ್ರಯೋಗವಾಗಿರುವ ‘ಅಶೀಕೀ ಎಂಬುದು ಪ್ರಾಯಶಃ ‘ಅಸಿಕ’ ಎಂಬುದರ
ಅಪಭ್ರಂಶ ರೂಪವೆಂದು ತೋರುತ್ತದೆ. ‘ಅಸಿಕ’ವೆಂದರೆ ಸಣ್ಣ ಕತ್ತಿ, ಕಠಾರಿ ಎಂಬ
ಅರ್ಥಗಳಿವೆ. ಬಹುಶಃ ಬಡತಿಮ್ಮಯ್ಯನ ಮಕ್ಕಳು ಹಿಂದೆ ಯಾವುದೋ ಹೋರಾಟದಲ್ಲಿ ಹೋರಾಡಿರಬೇಕು. ಆ
ಕಾರಣವಾಗಿ ಅವರಿಗೆ ಈ ಮಲ್ಲಪ್ಪನಹಳ್ಳಿ (ಮಲಪನಹಳ್ಳಿ) ಗ್ರಾಮವು ಬಾಳ್ಗಚ್ಚು ರೀತಿಯ ಅಂದರೆ ಕತ್ತಿ
ಕಾಳೆಗಕ್ಕೆ ನೀಡಲಾಗಿದ್ದ ರಕ್ತಗೊಡಗೆ ರೀತಿಯ ದತ್ತಿ ಭೂಮಿಯಾಗಿದ್ದಿತೆಂದು ತೋರುತ್ತದೆ.
ಪ್ರಸ್ತುತ ಆ ಗ್ರಾಮದ ಭೂಮಿಯನ್ನು ಹೆಂಜೇರಿ ಲಕ್ಕಯ್ಯನಿಗೆ ಕ್ರಯಕ್ಕೆ ನೀಡಿರುವ ಸಂಗತಿ ಈ
ಕ್ರಯಪತ್ರ ಶಾಸನದಿಂದ ತಿಳಿದುಬರುತ್ತದೆ.
ಈ ಶಾಸನದ ಕ್ರಯಪತ್ರದಲ್ಲಿ ಮಾರೆಂತೆಂದರೆ ಎಂಬ
ಪ್ರಯೋಗವಿದೆ. ಇದು ಸಾಮಾನ್ಯವಾಗಿ ಇಂತಹ ದಾನಶಾಸನ ಗಳಲ್ಲಿ ಕಂಡುಬರುವ ಕ್ರಮವೆಂತೆಂದರೆ ಎಂಬುದರ
ಪರ್ಯಾಯವೆಂದು ತಿಳಿಯಬಹುದು. ಮಾರು ಎಂದರೆ ವಿಕ್ರಯ ಎಂದು ಕೇಶಿರಾಜನ ಶಬ್ದಮಣಿದರ್ಪಣದ ಧಾತು
ಪಾಠದಲ್ಲಿ ಉಕ್ತವಾಗಿದೆ. ಈ ಅರ್ಥವು ಕೂಡಾ ಪ್ರಕೃತ
ಶಾಸನದ ದಾಖಲಾತಿಗೆ ಸರಿಹೊಂದುತ್ತದೆ.
ಈ ಶಾಸನದಲ್ಲಿ ಉಕ್ತವಾಗಿರುವ ಮಲ್ಲಪ್ಪನಹಳ್ಳಿಯು
ಪ್ರಸ್ತುತ ಶಾಸನ ದೊರೆತ ಬಿಕ್ಕೇಗುಡ್ಡ ಗ್ರಾಮದ ನೆರೆಯಲ್ಲೇ ಇರುವ ಗ್ರಾಮವಾಗಿದೆ. ಶಾಸನೋಕ್ತ
ಸುರಗಿಹಳ್ಳಿ, ತೆನಹಳ್ಳಿಗಳು
ಗುಬ್ಬಿ ತಾಲ್ಲೂಕಿನ ಗ್ರಾಮಗಳೇ ಆಗಿವೆ.
ಶಾಸನಪಾಠ
೧ ವಿಶ್ವವಸು
ಸಂವತ್ಸರದ ಚ
೨ ಯಿತ್ರ
ಶುದ್ಧ ೫ ರಲು ಶ್ರೀಮನು
೩ ಮಹಾನಾಯಕನ
ಮಕಳು ಬ
೪ ಡ
ತಿಂಮಯ್ಯನೂ ಹೆಂಜೆರೀ
೫ ಲೆಕ್ಕಯ್ಯನ
ಮಗ ಹೆಂಜೆರೀ
೬ ಲಕ್ಕಯ್ಯಕೆ
ಕೊಟ್ಟ ಕ್ರಯಪ
೭ ತ್ರದ
ಮಾರೆಂತೆಂದರೆ ತಂಮ
೮ ಮಕ್ಕಳ
ಅಶೀಕೀಗೆ ಸಲುವ
೯ ಮಲ್ಲಪನಹಳಿಯೊಳಗೆ
೧೦ ಸಲುವಂತ
ಹೊಲ ಗದ್ದೆ ಹೀ
೧೧ ಯ್ಯ
ಚೌಟ್ಯು ಹೊರೆ ಹುಲ್ಲು
೧೨ ವೊರ
ಭತ್ತ ಚಳಿಕಂತ್ತೆ ಆ
೧೩ ಯದಾಯ
ಬೀಜ ಎತ್ತಿನ
೧೪ ಕು
ಸುವರ್ಣದಾಯವೆಲ್ಲ
೧೫ ವನು
ತಾಉ ನಿಮಗೆ ಕ್ರಯ
೧೬ ವಾಗಿ
ಗ ೪ ಅಕ್ಷರದಲು ನಾಲ್ಕು
೧೭ ವರಹಕ್ಕೆ
ಕೊಟ್ಟು ನಿರಯಸ
೧೮ ತಾಉ
ನಿಲಿಸಿದ[ಕ]ಲು ಯಿಂತಾ
೧೯ ದುದಕ್ಕೆ
ಸಾಕ್ಷಿಗಳು ಮಲ್ಲಪ
೨೦ ನಹಳ್ಳಿಯ
ಸ್ಥಳದ ಗಉಡ
೨೧ ಚಿಂಣ್ಣಪಗಉಡನ
ಮಗ
೨೨ ನಿಂಗೇಗಉಡ
ಸುರಗಿಹ
೨೩ ಳ್ಳಿಯ
ಮೊಳೆಗಉಡನ ಮಗ
೨೪ ದೊಡ
ಕೆಂಪೈಯನು ತೆನಹ
೨೫ ಳ್ಳಿಯ
ಪಟಣದ ಸಿಂಗಯ್ಯ
೨೬ ಯಿಂತಿ
ಯಿವರ ಉಭೇಯಾನ
೨೭ ತದಿರೇ
ಸಾಕ್ಷಿಗಳೊಪ್ಪಿತ ಮುಲ
೨೮ ಕ
. . . ಕಪಟವಿನೊಪ್ಪಿತ ಸಂತ್ತೆ
೨೯ ಯನ
ಸಹನಿದ . . .
೩೦ ಹಯಗಕ್ಕಾ ಪೂರ್ಣದಾ
೩೧ ಯ್ಯಾ
ಅಪರಾಧಿ ಸಲು[ವ ಕ್ರ]
ಶಾಸನದ ಬಲಭಾಗದಲ್ಲಿರುವ
ಬರಹ
೩೨ ಯ
ಪತ್ರ
೩೩ ತದ
ಪೀ
೩೪ [ತ ?] ಸಾಕಾಲ್ಯ
೩೪ ವಾಗಿ
ಸಂತ್ತು
೩೫ ಬಡತಿಂಮ
೩೬ ಯ್ಯನಾ
ದೈವ
೩೭ ಹು
ಕೈಯ್ಯ
೩೮ ಲದೆ
೩೯ ನಡೆವಾರೂ
೪೦ ಲಕ್ಷ್ಮೀದೇವರು
೪೧ ದಾಯಾದ
ಸಾ
೪೨ ವಂತರ
ವೊ
೪೩ ಪಿಸಿ
ಮಾರಿದೆ
೪೪ ಉ
ಶ್ರೀ ಹರಿಹ
೪೫ ರಾದಿಗಳೂ
[ಈ ಶಾಸನದ
ಪಡಿಯಚ್ಚು ತೆಗೆದುಕೊಳ್ಳಲು ಎಲ್ಲಾ ವಿಧದ ಅನುಕೂಲಗಳನ್ನು ಮಾಡಿಕೊಟ್ಟು, ಸಹಕಾರವನ್ನು
ನೀಡಿದ ತುಮಕೂರು ವಿಶ್ವವಿದ್ಯಾನಿಲಯದ ಡಾ|| ಡಿ.ವಿ. ಗುಂಡಪ್ಪ ಕನ್ನಡ
ಅಧ್ಯಯನ ಕೇಂದ್ರದ ಉಪಪ್ರಾಧ್ಯಾಪಕರಾದ ಡಾ|| ಶ್ರೀಪಾದಭಟ್ಟರಿಗೂ ಮತ್ತು
ವಿಭಾಗದ ಮುಖ್ಯಸ್ಥರಿಗೂ ನಾವು ತುಂಬಾ ಕೃತಜ್ಞರಾಗಿದ್ದೇವೆ].
ಡಾ || ಪಿ.ವಿ.ಕೃಷ್ಣಮೂರ್ತಿ
# ೩೭, ಶ್ರೀಕೃಷ್ಣ ಕೃಪ, ೩ ನೆಯ ಅಡ್ಡರಸ್ತೆ, ಸುಬ್ಬಣ್ಣ ಲೇಔಟ್, ಹರಿನಗರಕ್ರಾಸ್, ಬೆಂಗಳೂರು-೫೬೦೦೬೨
No comments:
Post a Comment