Tuesday, November 20, 2012

ಡಾ. ಮಲ್ಲಿಕಾರ್ಜುನ ಕುಂಬಾರ -ಲೇಖನ







                           ಕಾಲಕಾಲೇಶ್ವರದಲ್ಲಿರುವ ‘ಆನೆಗುಂದಿ ಬಸವಣ್ಣ’-ಒಂದು ಟಿಪ್ಪಣಿ






ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಪ್ರಸಿದ್ದ ನಂದಿಯನ್ನೆ ಹೋಲುವ ಬಸವಣ್ಣ(ನಂದಿ)ನ ಮೂರ್ತಿಯೊಂದು ಗದಗ ಜಿಲ್ಲೆಯ ರೋಣ ತಾಲೂಕಿನ ಗಜೇಂದ್ರಗಡದ ಸನಿಹದಲ್ಲಿರುವ ಸುಪ್ರಸಿದ್ದ ಕಾಲಕಾಲೇಶ್ವರ ದೇವಾಲಯದ ಅನತಿ ದೂರದಲ್ಲಿದೆ. ಸಂಪೂರ್ಣವಾಗಿ ಕಾಡು ಕಲ್ಲಿನಲ್ಲಿಯೇ ಕೆತ್ತಿದ, ಆದರ ಕೆತ್ತನೆವು ನಾಜೂಕಲ್ಲದಿದ್ದರೂ ನೋಡುಗರ ಗಮನವನ್ನು ಸೆಳೆಯುತ್ತದೆ. ಈ ಬೃಹದಾಕಾರದ ಏಕಶಿಲೆಯ ನಂದಿಯು ಪ್ರಚಾರವಿಲ್ಲದೆ ಎಲೆಯ ಮರೆಯ ಫಲದಂತೆ, ಕಾಲಕಾಲೇಶ್ವರದಿಂದ ಗುಡೂರಿಗೆ ಹೋಗುವ ಕಣಿವೆಯ ಮಾರ್ಗದಲ್ಲಿ  ರಸ್ತೆಗೆ ಹೊಂದಿ ನಿಂತಿದೆ. ಇದು ೨೫ ಅಡಿ ಉದ್ದ, ೧೨ ಅಡಿ ಅಗಲ ಮತ್ತು ೨೩ ಅಡಿ ಎತ್ತರವನ್ನು ಹೊಂದಿದೆ. ಈ ಭಾಗದಲ್ಲಿ ಇದನ್ನು ಆನೆಗುಂದಿ ಬಸವಣ್ಣನೆಂದು ಕರೆಯುತ್ತಾರೆ. ಈ ನಂದಿಯನ್ನು ಯಾರು ಯಾವಾಗ ಕೆತ್ತಿದರು? ಎನ್ನುವ ಬಗ್ಗೆ ದಾಖಲೆಗಳು ಸಿಗುವದಿಲ್ಲ.
   ಜನಪದರ ಹೇಳುವ ಐತಿಹ್ಯಗಳ ನೆರಳಲ್ಲಿ ಒಂದಷ್ಟು ಇತಿಹಾಸ ಹುದುಗಿರುತ್ತದೆ. ಸನಿಹದ ಕಾಲಕಾಲೇಶ್ವರ ದೇವಾಲಯದ ಬಹಳಷ್ಟು ಕಟ್ಟಡಗಳು ವಿಜಯನಗರದ ಶೈಲಿಯಲ್ಲಿವೆ. ಈ ಹೆಸರಿನ ಸುಳಿವಿನಿಂದ ಇದು ೧೬ ನೆಯ ಶತಮಾನಕ್ಕೆ ಸೇರಿದೆ. ಈ ಹಿನ್ನೆಲೆಯಲ್ಲಿ ನಂದಿಯನ್ನು ವಿಜಯನಗರ ಅರಸರ ಕೊನೆಯ ಸಂತತಿಯವರಾದ ಆನೆಗುಂದಿ ಅರವೀಡು ಅರಸರ ಆಳ್ವಿಕೆಯ ಕಾಲದಲ್ಲಿ (ಕ್ರಿ.ಶ.೧೫೭೨-೧೬೮೦) ಕೆತ್ತಿದ್ದಾರೆಂದು ಸ್ಪಷ್ಟವಾಗುತ್ತದೆ ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಆರಂಭದಲ್ಲಿ ಮತ್ತು ಅದರ ಕೊನೆಯ ಕಾಲದಲ್ಲಿ ಕೂಡಾ ಆನೆಗುಂದಿಯು ಪ್ರಮುಖ ಸ್ಥಾನವಾಗಿ ಹಾಗೂ ರಾಜಧಾನಿಯಾಗಿ ಉಳಿದ ಸ್ಥಳ. ಅದು ಎಂದಿಗೂ ಶತ್ರುಗಳ ವಶವಾಗಲಿಲ್ಲ. ಅಳಿಯ ರಾಮರಾಯನ  ಅವಸಾನದ ನಂತರ  ವಿಜಯನಗರ ಪತನವಾಯಿತು. ಆ ನಂತರ  ಅರವೀಡು ಸಂತತಿಯ ಅರಸರ ಶಾಖೆಯೊಂದು ಸ್ವಲ್ಪು ದಿನಗಳ ಕಾಲ ಆನೆಗುಂದಿಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆಳ್ವಿಕೆ ಮಾಡಿತು. ಇದೇ ಅರಸರು ಮುಂದೆ ಪೆನಗೊಂಡೆಗೆ ತೆರಳಿದರು. ಇವರು  ಆನೆಗುಂದಿಯಲ್ಲಿರುವಾಗ ಅರವೀಡು ಸಂತತಿಯ ಮೊದಲ ಅರಸ ಶ್ರೀರಂಗರಾಯರು (ಕ್ರಿ.ಶ.೧೫೭೨-೮೫) ಆಳ್ವಿಕೆ ಮಾಡಿದರು.
 ಈ ಅರಸನಿಗೆ ಬೇಟೆಯ ಖಯಾಲಿ ಇತ್ತೆಂದು, ಈ ಪ್ರದೇಶದಲ್ಲಿ ಆನೆಗುಂದಿ ಅರಸರು ಬೇಟೆಗೆ ಬರುತ್ತಿದ್ದರೆಂದು ಬಹಳಷ್ಟು ಕಥೆ ಮತ್ತು ಐತಿಹ್ಯಗಳು ಇಲ್ಲಿನ ಪರಿಸದಲ್ಲಿವೆ. ಇಲ್ಲಿಂದ    ತುಸು   ದೂರದಲ್ಲಿರುವ ನಾಗೇಂದ್ರಗಡದ ಸನಿಹದ  ಹೊಗರಿ ಕೆರೆಯ ಪ್ರದೇಶದ,  ಶಾಸನಗಳಲ್ಲಿ ಪೊಂಗರಿ ಎನ್ನಿಸಿಕೊಂಡ ಪರಿಸರದಲ್ಲಿ ಈ ಅರಸನು ಬೇಟೆಗೆ ಬಂದು  ಪೊಂಗರಿಯ  ಒಡತಿ ಹೊಂಬಾಳೆ ಎಂಬವಳನ್ನು ಮೋಹಿಸಿದನೆಂದು ನಾಗೇಂದ್ರಗಡದ ಪರಿಸರ ಜನರು ಕಣ್ಣಿಗೆ ಕಟ್ಟುವಂತೆ ಕಥೆಯನ್ನು ಹೇಳುತ್ತಾರೆ. ಇದೆಲ್ಲವನ್ನು ಗಮನಿಸಿದರೆ ಅರಸ ಶ್ರೀರಂಗರಾಯನು ಈ ಭಾಗದಲ್ಲಿ ಬಹಳಷ್ಟು ಸಖ್ಯವನ್ನು ಹೊಂದಿರಬೇಕು.

    ವಿಜಯನಗರದ ಪತನದ ನಂತರ ಜಿಗುಪ್ಸೆಯನ್ನು ಹೊಂದಿದ ಈ ಅರಸನು ದೇವತಾ ಸೇವೆ, ಮಂದಿರಗಳ ಜೀರ್ಣೋದ್ದಾರ, ಮೂರ್ತಿಗಳನ್ನು ಕೆತ್ತಿಸುವ ಕೈಂಕರ್ಯವನ್ನು ಕೈಗೊಂಡಿರಬೇಕು. ಇದರಿಂದ ಈ ಭಾಗದಲ್ಲಿ  ಸಂಚರಿಸಿದ ಈ ಅರಸನು ಕ್ರಿ.ಶ.೧೫೭೨-೮೫ ರ ಸಮಯದಲ್ಲಿಯೇ ನಂದಿ ಮೂರ್ತಿಯನ್ನು ಕೆತ್ತಿಸಿದ್ದಲ್ಲದೇ, ಪಕ್ಕದಲ್ಲಿರುವ ಕಾಲಕಾಲೇಶ್ವರ ದೇವಾಲಯದ ಜೀರ್ಣೋದ್ದಾರ ಮಾಡಿದರು.. ಅದಕ್ಕೆ ಸಾಕ್ಷಿಯಾಗಿ ಇಲ್ಲಿನ ಕಟ್ಟಡಗಳು  ವಿಜಯನಗರದ ಶೈಲಿಯಲ್ಲಿವೆ. 
ಈ ನಂದಿಯನ್ನು ಇತ್ತೀಚಿಗೆ ಸುಂದರಗೊಳಿಸಲು ಅದಕ್ಕೆ ಸುಣ್ಣವನ್ನು ಬಳಿಯುವ ಯತ್ನವನ್ನು ಕೆಲವರು ತಡೆದರು. ಸುಣ್ಣವನ್ನು ಬಳಿಯುವದರಿಂದ ಈ ಶಿಲ್ಪವು ಕೆಲವು ದಿನಗಳ ನಂತರ ಸವೆದು ವಿರೂಪಗೊಳ್ಳುತ್ತದೆ. ಅದನ್ನು ಇರುವ ಸ್ಥಿತಿಯಲ್ಲಿಯೇ ಉಳಿಸಿಕೊಳ್ಳಬೇಕು. ಇದೇ ದೇವಾಲಯದ ಪಕ್ಕದಲ್ಲಿ ಕುದುರೆಗುಂಡು ಎನ್ನುವ ಸ್ಥಳದಲ್ಲಿ ಕೂಡಾ ಇನ್ನೊಂದು ನಂದಿ ಮೂರ್ತಿಯನ್ನು ಕಲ್ಲಿನಲ್ಲಿ ರೂಪಿಸಿ ಅಪೂರ್ಣಗೊಳಿಸಿದ್ದಾರೆ. ಇದೂ ಕೂಡಾ ಗಮನಾರ್ಹ ಅಂಶವಾಗಿದೆ.

                                                                                                             
 ಡಾ.ಮಲ್ಲಿಕಾರ್ಜುನ ಕುಂಬಾರ
             ‘’ªÀZÀ£
     gÁdÆgÀ-582230
     vÁ;gÉÆÃt, f;UÀzÀUÀ 






No comments:

Post a Comment