Saturday, November 24, 2012

ಡಾ. ದೇವರಕೊಂಡಾರೆಡ್ಡಿ-ಲೇಖನ



# ೩೫/೧, ೨೦  ಮುಖ್ಯರಸ್ತೆ, ವೆಂಕಟೇಶ್ವರ ಲೇಔಟ್, 
ಮಾರುತಿನಗರ, ಬಿ.ಟಿ.ಎಂ. ಮೊದಲ ಹಂತ, 
ಬೆಂಗಳೂರು-೫೬೦೦೬೮.
 ಕದಂಬ ರವಿವರ್ಮನ ದಾವಣಗೆರೆಯ ತಾಮ್ರ ಶಾಸನ

 ಶಾಸನದ ಜೆರಾಕ್ಸ್ (ನೆರಳಚ್ಚು) ಪ್ರತಿಯು ಗಂಗಾವತಿಯ ಶರಣಬಸವ ಎಂಬುವವರ ಕಡೆಯಿಂದ ನನ್ನ ಕಡೆಗೆ ಬಂತು. ಇವರಿಗೂ ದಾವಣಗೆರೆಯ ಕಡೆಯವರೊಬ್ಬರು ನೀಡಿದರಂತೆ. ಈ ಶಾಸನ ದೊರೆತ ಸ್ಥಳವಾಗಲೀ, ಯಾರಿಂದ ಬಂತೆಂಬ ಬಗ್ಗೆಯಾಗಲೀ ಅವರು ತಿಳಿಸಲಿಲ್ಲ. ಈಗ ಅವರ ದೂರವಾಣಿ ಸಂಖ್ಯೆಯೂ ಬದಲಾಗಿದ್ದು ಅವರನ್ನು ಸಂಪರ್ಕಿಸುವುದು ಸಾಧ್ಯವಾಗುತ್ತಿಲ್ಲ. ಹೀಗಾಗಿ ಈ ಶಾಸನಕ್ಕೆ ಸಂಬಂಧಿಸಿದ ಅನೇಕ ವಿವರಗಳು ನೇಪಥ್ಯದಲ್ಲಿಯೇ ಉಳಿದಿವೆ. ಈ ಶಾಸನ ಮೇಲ್ನೋಟಕ್ಕೆ ಮೂರು ಪತ್ರಗಳನ್ನು ಹೊಂದಿದ್ದು ಮೊದಲ ಮತ್ತು ಕಡೆಯ ಫಲಕಗಳಲ್ಲಿ ಒಳಭಾಗದಲ್ಲಿ ಮಾತ್ರ ಬರೆದಿರುವಂತೆ ತಿಳಿಯುತ್ತದೆ. ಉಂಗುರ ಇತ್ತೇ ಇಲ್ಲವೇ ? ಇದ್ದಲ್ಲಿ ಮುದ್ರೆ ಯಾವುದಿತ್ತು,ಹೇಗಿತ್ತು ಎಂಬ ಬಗೆಗೂ ವಿವರಗಳು ತಿಳಿಯುತ್ತಿಲ್ಲ. ಈ ಎಲ್ಲಾ ಕಾರಣಗಳಿಂದ ಇದು ದಾವಣಗೆರೆ ಯಲ್ಲಿ ದೊರೆತಿರುವುದರಿಂದ ಇದಕ್ಕೆ ರವಿವರ್ಮನ ದಾವಣಗೆರೆ ತಾಮ್ರಶಾಸನವೆಂದು ಕರೆದಿದ್ದೇನೆ.
ಶಾಸನ ಚಿತ್ರವನ್ನು ಜೆರಾಕ್ಸ್ ಮಾಡಿಸಿದ್ದು ಜೆರಾಕ್ಸ್ ಕಾಗದವನ್ನು ಮಡಚಿ ತಂದ ಕಾರಣದಿಂದ ಕಾಗದದ ಮಡತೆ ಬಳಿಯ ಅಕ್ಷರಗಳ ಕಪ್ಪು ಬಣ್ಣ ಹಾಳಾಗಿದೆ. ಇದರಿಂದ ಶಾಸನದ ಅಕ್ಷರಗಳನ್ನು ಗುರುತಿಸಲು ಅಲ್ಲಲ್ಲಿ ತೊಂದರೆ ಯಾಗಿದೆ. ೧೬ ಸಾಲು ಪಾಠವನ್ನು ಹೊಂದಿರುವ ಈ ಶಾಸನದಲ್ಲಿ ಪ್ರತಿಯೊಂದು ಹಲಗೆಯಲ್ಲಿ ನಾಲ್ಕು ನಾಲ್ಕು ಸಾಲುಗಳಿವೆ. ಅಕ್ಷರಗಳನ್ನು ಬಿಡಿಬಿಡಿಯಾಗಿ ಬರೆಯಲಾಗಿದೆ. ಅಕ್ಷರಗಳ ತಲೆಯ ಮೇಲೆ ಚೌಕಾಕಾರದ ತಲೆಕಟ್ಟಿಲ್ಲ. ಅಕ್ಷರಗಳ ಒಟ್ಟು ವಿನ್ಯಾಸವೂ ಚೌಕಾಕಾರದಿಂದ ಬಿಡುಗಡೆ ಗೊಂಡಿರುವುದನ್ನು ಕಾಣಬಹುದು.  ಮತ್ತು ಅಕ್ಷರಗಳ ಸ್ಪಷ್ಟ ವ್ಯತ್ಯಾಸ,  ಮತ್ತು  ಕಾರಗಳ ವ್ಯತ್ಯಾಸ  ಮತ್ತು  ಕಾರಗಳ ಬರೆವಣಿಗೆಯಲ್ಲಿ ಎದ್ದು ಕಾಣುವಂತಹ ವ್ಯತ್ಯಾಸವನ್ನು ತೋರಿಸಲಾಗಿದೆ. ಒಟ್ಟಾರೆ ಅಕ್ಷರಗಳನ್ನು ಗಮನಿಸಿದಾಗ ಕ್ರಿ.ಶ. ೬ನೆಯ ಶತಮಾನ ಆರಂಭ ಕಾಲದ ಅಕ್ಷರ ಲಕ್ಷಣಗಳನ್ನು ಒಳಗೊಂಡಿದೆ. ಲಿಪಿ ಮತ್ತು ಪಾಠದ ಅಧ್ಯಯನದಿಂದ ಇದೊಂದು ನೈಜ ಶಾಸನವೆಂದು ಹೇಳಬಹುದಾಗಿದೆ.
ಶಾಸನದಲ್ಲಿ ಬನವಾಸಿಯನ್ನಾಳಿದ ಕದಂಬರ ಪಾರಂಪರಿಕ ವಿಶೇಷಣಗಳನ್ನು ಬಳಸಿದ್ದು ಮುಂದೆ ಕದಂಬ ರಾಜ ರವಿವರ್ಮನನ್ನು ಹೆಸರಿಸಿದೆ. ಸಂಸ್ಕೃತ ಭಾಷೆ, ಕನ್ನಡ ಲಿಪಿಯಲ್ಲಿರುವ ಈ ಶಾಸನದಲ್ಲಿ ಕೊನೆಯ ಅಂದರೆ ೧೬ನೆಯ ಸಾಲು ಕನ್ನಡ ಭಾಷೆಯಲ್ಲಿರುವುದು ವಿಶೇಷ. ಸಂಸ್ಕೃತ ಭಾಷಾ ಬರೆವಣಿಗೆಯಲ್ಲಿ ಅಲ್ಲಲ್ಲಿ ಸ್ಖಾಲಿತ್ಯಗಳನ್ನು ಕಾಣಬಹುದು.
ವೈಜಯನ್ತಿಯಲ್ಲಿ ಮಾತೃಗಣಗಳಿಂದ ಅಭಿಷಿಕ್ತನಾದ ಮಹಾಸೇನನ [ಕೃಪೆಗೆ ಪಾತ್ರರಾದ], ಮಾನವ್ಯಸ ಗೋತ್ರಕ್ಕೆ ಸೇರಿದ ಹಾರೀತಿಯ ಮಕ್ಕಳೆನಿಸಿದ ಸ್ವ-ಅಧ್ಯಯನ, ಚರ್ಚೆ ಮೊದಲಾದವುಗಳನ್ನು ನಡೆಸುವ ಕದಂಬ ವಂಶದ ಶ್ರೀ ರವಿವರ್ಮನು ವೈಜಯನ್ತಿಯಿಂದ ರಾಜ್ಯಭಾರ ಮಾಡುತ್ತಿದ್ದ. ಈ ರವಿವರ್ಮನು ಕೌಣ್ಡಿನ್ಯ ಗೋತ್ರಕ್ಕೆ ಸೇರಿದ ವೇದಗಳಲ್ಲಿ ಪಾರಂಗತನಾದ ಷಟ್ಕರ್ಮ್ಮಗಳಲ್ಲಿ ನಿರತನಾದ ದೇವಶರ್ಮ್ಮ ಎಂಬ ಬ್ರಾಹ್ಮಣನಿಗೆ  ಕೊಳಯಿ ಎಂಬ ಗ್ರಾಮದಲ್ಲಿ ಪುಕ್ಕೊಳಿ ಕ್ಷೇತ್ರದಲ್ಲಿ ೭೪ ನಿವರ್ತನದಷ್ಟು ಭೂಮಿಯನ್ನು ಮಹಾಪೌರ್ಣಮಿ ಯಂದು ನೀಡಿದಂತೆ ಹೇಳಿದೆ. ಮುಂದೆ ಶಾಪಾಶಯ ಮುಗಿದ ಮೇಲೆ ಕೊನೆಯಲ್ಲಿ ದೇವರ ಸ್ವಾಮಿಗಳ್ಗೆ ಮತ್ತು ಭೀಮಣೋ[ಜ]ಗೆ ಏನನ್ನೋ ನೀಡಿದಂತೆ ಹೇಳಿದೆ. ಕದಂಬರ ಶಾಸನಗಳಲ್ಲಿ ಕನ್ನಡ ಭಾಷೆ ಸ್ವಲ್ಪ ಸ್ವಲ್ಪವೇ ನುಸುಳುತ್ತಿದ್ದುದರ ಸಂಕೇತ ಇದಾಗಿದೆ. ಈ ಕಾಲಕ್ಕಾಗಲೇ ಹಲ್ಮಿಡಿ ಶಾಸನ ರಚನೆಯಾಗಿತ್ತು. ಕೆಲಗುಂದ್ಲಿ ಶಾಸನ ಕನ್ನಡದಲ್ಲಿಯೇ ರಚನೆಯಾಗಿದೆ. ಇದರಲ್ಲಿ ಪೂರ್ವದ ಹಳಗನ್ನಡ ಭಾಷೆಯ ಸ್ಪಷ್ಟ ಬಳಕೆ ಕಂಡುಬರುತ್ತದೆ. ಇದು ರವಿವರ್ಮನ ಕಾಲದ್ದೇ ಆದ ಶಾಸನವೆಂಬುದು ಗಮನಾರ್ಹ ಅಂಶವಾಗಿದೆ. ಹೀಗಾಗಿ ರವಿವರ್ಮನ ಕಾಲಕ್ಕೆ ಕನ್ನಡವನ್ನು ಶಾಸನಗಳಲ್ಲಿ ಬಳಸು ತ್ತಿದ್ದುದು ಹೆಚ್ಚಾಗಿ ಕಂಡುಬಂದಿದೆ. ಇದರಲ್ಲಿ ಅಕ್ಷರ ಸ್ಖಾಲಿತ್ಯಗಳು ಇರುವ ಪ್ರಯೋಗಗಳೂ ಹೇರಳವಾಗಿವೆ. ಇವನ ಕಾಲದ ಒಂದು ಶಾಸನದಲ್ಲಿ ನಿವರ್ತನ ಎಂಬ ಶಬ್ದದ ಸ್ಥಾನದಲ್ಲಿ ಮತ್ತರು ಎಂಬ ಪ್ರಯೋಗವೂ ಬಂದಿದೆ. ಶಾಸನ ಪಾಠದಲ್ಲಿ ಚೌಕ ಕಂಸದಲ್ಲಿ [ ] ಸೂಚಿಸಿರುವುದು ಊಹಾಪಾಠವಾಗಿದ್ದು, [ *] ಈ ರೀತಿಯ ಕಂಸದಲ್ಲಿ ಸೂಚಿಸಿರುವುದು ಅಸ್ಪಷ್ಟಾಕ್ಷರ ಸಂದರ್ಭದ ಪಾಠವೆಂದು ತಿಳಿಯಬೇಕು.
ಶಾಸನಪಾಠ
ಮೊದಲನೆಯ ಹಲಗೆಯ ಹಿಂಭಾಗ
        ಸ್ವಸ್ತಿ ವಿಜಯ ವೈಜಯನ್ತ್ಯಾ[ಮ್]ಸ್ವಾಮಿಮಹಾಸೇನ            ಮಾ[ತೃ]
        ಗಣಾನುದ್ಧ್ಯತಾಭಿಷಿಕ್ತಾ[ಮ್] ಮಾನವ್ಯಸ ಗೋತ್ರೋ            ಹಾರೀತೀ
        ಪುತ್ರಃ ಪ್ರತಿಕೃತ ಸ್ವಾದ್ಧ್ಯಾಯ ಚರ್ಚಾಮ್ಕದಮ್ಬಾನಾಂ
        ಮಹಾರಾಜಾ ಶ್ರೀ ರವಿವರ್ಮ್ಮಾ ಕೌಣ್ಡಿನಿ ಸಗೋ

ಎರಡನೆಯ ಹಲಗೆಯ ಮುಂಭಾಗ
        ತ್ರಾಯ ವೇದ ಪಾರಗಾಯ ಷಟ್ಕರ್ಮ್ಮ ನಿರತಾಯದೇವ
        ಶರ್ಮ್ಮಣೇ ಕೊಳಯಿ ಗ್ರಾಮೇ ಪುಕ್ಕೊಳಿ ಕ್ಷೇತ್ರಂ ರಾಜ
        ಮಾನೇನ ಚತುಸ್ಸಪ್ತತಿ ನಿವರ್ತ್ತನಂ ವಟಾಕ ಬ * . ಯ
        ದುದಕ ಸ್ರಾವೇ ಸರ್ವ್ವ ಪರಿಹಾರ ಯುಕ್ತಂ ಮಹ

ಎರಡನೆಯ ಹಲಗೆ ಹಿಂಭಾಗ
        ಪೌರ್ಣ್ಣಮಾಸ್ಯಾ[ಮ್] ಸ್ವವರ್ದ್ಧಮಾನ ವಿಜಯ ಸಂವತ್ಸರೇ .
೧೦     . . . . ಕದತ್ತ ವಾ . ನು . ರಿಕೂಲ್ಯೇಷಣ್ಣಿವರ್ತ್ತನಗ್ರಹಾ
೧೧     . . . ಪೂರ್ವರಾಜ ಸ್ಥಿತ್ಯಾ . . ಯೋಸ್ಯಾಪಹರ್ತ್ತಾಸ
೧೨     ಮಹಾ ಪಾತಕ ಸಂಯುಕ್ತೋ ಭವತಿ ಯೋಭಿ ರಕ್ಷಿತಾ


ಮೂರನೆಯ ಹಲಗೆಯ ಮುಂಭಾಗ
೧೩     ಸಪುಣ್ಯ ಫಲ ಭಾಗ್ಭವತೀತ್ಯುಕ್ತಞ್ಚ [ಬ][ಹುಭಿ*]
೧೪     ರ್ವ್ವಸುಧಾಭುಕ್ತಾ ರಾಜಭಿಸ್ಸಗರಾದಿಭಿರ್ಯ್ಯಸ್ಯ
೧೫     ಯಸ್ಯ ಯದಾ ಭೂಮಿ ತಸ್ಯ ತಸ್ಯ ತದಾ ಫಲಮಿ
೧೬  ತಿ ದೇವರ ಸ್ವಾಮಿಗಳ್ಗೆ ಭೀಮಣೋ[ಜ]ಗೆ [ಸ್ವ]ದತ್ತಂ||





No comments:

Post a Comment