Tuesday, July 8, 2014

ಧಾರವಾಡ ತಾಲೂಕಿನ ಸ್ಥಳ ನಾಮಗಳು ಶಾಸನಗಳಲ್ಲಿ



ಧಾರವಾಡ ತಾಲ್ಲೂಕಿನ ಶಾಸನೋಕ್ತ ಸ್ಥಳನಾಮಗಳು

ವಿರೂಪಾಕ್ಷಗೌಡ ಪಾಟೀಲ

ಧಾರವಾಡ ತಾಲ್ಲೂಕು ಮಲೆನಾಡು, ಅರೆಮಲೆನಾಡು (ಗಡಿನಾಡು) ಮತ್ತು ಬಯಲುನಾಡು ಭೂ ಪ್ರದೇಶವನ್ನು ಹೊಂದಿದ ಸ್ಥಳೀಯ ಶಾಸನಗಳ ಆಧಾರದ ನೆಲೆಗಟ್ಟಿನ ಮೇಲೆ ‘ಧಾರವಾಡ ತಾಲೂಕಿನ ಸ್ಥಳನಾಮಗಳ ಅಧ್ಯಯನ’ ಮಾಡಲಾಗಿದೆ. ಸಾಮಾನ್ಯವಾಗಿ ಊರ ಹೆಸರುಗಳಿಗೆ ಮೂರು ಬಗೆಯ ನಿಷ್ಪತ್ತಿಗಳಿರುವುದು ಕಂಡುಬರುತ್ತದೆ. 1) ಪಾಮರ ನಿಷ್ಪತ್ತಿ 2) ಪಂಡಿತ ನಿಷ್ಪತ್ತಿ 3) ನಿಜ ನಿಷ್ಪತ್ತಿ. ಉದಾಹರಣೆಗೆ ಧಾರವಾಡ ತಾಲೂಕಿನ ಅಮ್ಮಿನಭಾವಿ ಕುರಿತು ‘ಅಮೀನ್’ ಹೆಸರಿನ ಮುಸಲ್ಮಾನನೊಬ್ಬ ಬಾವಿ ಕಟ್ಟಿಸಿದ ಕಾರಣ ‘ಅಮ್ಮಿನ್‍ಬಾವಿ’ ಹೆಸರು ಬಂದಿತೆನ್ನುತ್ತಾರೆ. ಇನ್ನು ಕೆಲವರು ಅಮ್ಮನವರ ಹೆಸರಿನ ಜೈನ ಪದ್ಮಾವತಿ ಯಕ್ಷಿ ಹೆಸರಿನಿಂದಾಗಿ ಅಮ್ಮನವರಬಾವಿ>ಅಮ್ಮಿನಬಾವಿ ಆಗಿದೆಂದು ಹೇಳಲಾಗುತ್ತದೆ. ಇದು ಮುಸ್ಲಿಂ ಮತ್ತು ಜೈನ ಇವೆರಡು ಜಾತಿಯವರು ಆ ಊರಿನ ಮೇಲೆ ತಮ್ಮ ತಮ್ಮ ಹಕ್ಕು ಸಾಧಿಸಲು ಪ್ರಯತ್ನಿಸಿದ ಬಗೆಯನ್ನು ತಿಳಿಸುತ್ತದೆ. ಮೂಲತಃ ಇವೆರಡು ಪಾಮರ ನಿಷ್ಪತ್ತಿಗಳಾದರೂ ‘ಅಮೀನ್’ ಎಂಬ ಮುಸ್ಲಿಂರದು ಪಾಮರ ನಿಷ್ಪತ್ತಿ ಎಂದೂ, ‘ಅಮ್ಮನವರದು’ ಎಂಬ ಜೈನರ ಹೇಳಿಕೆಯು ಪಂಡಿತ ನಿಷ್ಪತ್ತಿ ಎನಿಸುತ್ತದೆ. ಇವೆರಡಕ್ಕಿಂತಲೂ ನಿಜ ನಿಷ್ಪತ್ತಿ ಬೇರೆನೇ ಆಗಿರುತ್ತದೆ. ಅಮ್ಮಯ್ಯನೆಂಬುವವನು ಭಾವಿಯನ್ನು ಕಟ್ಟಿಸಿದ್ದರ ನಿಮಿತ್ತ ‘ಅಮಿನಭಾವಿ’ ಹೆಸರು ಬಂದಿದೆಂದು ತಿಳಿದುಬರುತ್ತದೆ.1
ಆದ್ದರಿಂದ ಶಾಸನದಲ್ಲಿ ಅಮ್ಮಯನ ಬಾವಿ2, ಅಂಮೆನ ಬಾವಿ3 ಎಂಬ ರೂಪಗಳು ದೊರೆಯುತ್ತವೆ.  ಕಾಲಗರ್ಭದಲ್ಲಿ ಅನೇಕ ರೀತಿಯ ಬದಲಾವಣೆಗಳನ್ನು ಹೊಂದುತ್ತಾ ಸವಕಳಿರೂಪದಲ್ಲಿ ನಮ್ಮ ಮುಂದೆ ಚಲಾವಣೆಯ ರೂಪದಲ್ಲಿರುವ ಸ್ಥಳನಾಮಗಳನ್ನು ಶಾಸನದ ಹಿನ್ನೆಲೆಯಲ್ಲಿ ಗಮನಿಸಿ ಅಲ್ಲಿಯ ಮೂಲರೂಪವನ್ನು ಗುರುತಿಸಿ ಅದರಿಂದ ಅಲ್ಲಿಯು ಸಾಂಸ್ಕøತಿಕ ಮತ್ತು ಭೌಗೋಳಿಕ ಸಂಗತಿಗಳನ್ನು ಅರಿಯಬಹುದು. ಈ ನಿಟ್ಟಿನಲ್ಲಿ ಧಾರವಾಡ ತಾಲೂಕಿನ ಶಾಸನಗಳಲ್ಲಿ ದಾಖಲೆಯಾದ ಸ್ಥಳನಾಮಗಳನ್ನು ನಿಸರ್ಗವಾಚಿ ಮತ್ತು ಸಾಂಸ್ಕøತಿಕವಾಚಿ ಸ್ಥಳನಾಮಗಳೆಂದು ವಿಂಗಡಿಸಿಕೊಂಡು ವಿವೇಚಿಸಲಾಗಿದೆ.
1. ನಿಸರ್ಗವಾಚಿ ಸ್ಥಳನಾಮಗಳು:
ಮಾನವ ನಿಸರ್ಗದಲ್ಲಿ ಸಹಜವಾಗಿ ಬದುಕುತ್ತಿರುವಾಗ ಅಲ್ಲಿಯ ನೈಸರ್ಗಿಕ ಸ್ಥಿತಿಯನ್ನೇ ಹೆಸರಿಸಿಕೊಂಡು ತನ್ನ ವಸತಿಸ್ಥಳಗಳಿಗೆ ಹೆಸರಿಟ್ಟು ಕರೆದ. ಇದು ವಸತಿ ಸ್ಥಳಗಳಿಗೆ ಹೆಸರಿಡುವ ಮೊದಲ ಹಂತ. ಆಗ ನೈಸರ್ಗಿಕ ಅನ್ವರ್ಥಕ ನಾಮಗಳ ಬಳಕೆ ಸಹಜವಾಗಿತ್ತು. ಈ ನಿಟ್ಟಿನಲ್ಲಿ ಧಾರವಾಡ ತಾಲೂಕಿನ ಶಾಸನೋಕ್ತ ನಿಸರ್ಗವಾಚಿ ಸ್ಥಳನಾಮಗಳು ಇಂತಿವೆ.
‘ನರೇಂದ್ರ’ದ ಮೂಲ ಹೆಸರು ಕುಂದೂರು’4. ಕುಂದ+ಊರು=ಕುಂದೂರು ಅಂದರೆ ಬೆಟ್ಟದ ಮೇಲಿರುವ ಊರು. ಅದು ಪಲಸಿಗೆ 12,000 ನಾಡಿನ 500ರ ವಿಷಯವಾಗಿತ್ತು (500 ಇದೊಂದು ಆಡಳಿತ ಕೇಂದ್ರ). 12 ಶತಮಾನದ ನಂತರದಲ್ಲಿ ಕುಂದೂರು ನರೇಂದ್ರವಾಗಿ ಪರಿವರ್ತನೆಗೊಂಡಿತು. ಪ್ರಾಯಶಃ ಆಡಳಿತದವರು, ಅರಸ ಸಂಬಂಧಿಗಳು ಅಲ್ಲಿ ವಾಸವಾಗಿರುವುದರಿಂದ ಆಡಳಿತಗಾರರು ಮತ್ತು ಅರಸರು ದೇವತೆಗಳೆಂಬ ಮಧ್ಯಯುಗದ ಇತಿಹಾಸ ಕಲ್ಪನೆಯಂತೆ ನರೇಂದ್ರ ಎಂಬ ಹೆಸರು ಬಂದಿದೆ. ‘ಮುಗದ’ ಗ್ರಾಮನಾಮದ ಮೂಲರೂಪ ‘ಮುಗುಂದ’5. ಮೂರು+ಗುಂದ=ಮೂರುಗುಂದ> ಮುಗುಂದ> ಮುಗದ ಸೌಲಭ್ಯಾಕಾಂಕ್ಷೆಯಿಂದ ಬಿಂದು ಲೋಪವಾಗಿದೆ. ಮುಗುದ ಮೂರು ಬೆಟ್ಟಗಳ ಮೇಲಿದ್ದ ಊರೆಂಬುದನ್ನು ಅದು ಸಾಬಿತುಪಡಿಸುತ್ತದೆ. ‘ನಿಗದಿ’ ಗ್ರಾಮದ ಮೂಲರೂಪ ‘ನಿಗುಂದೆ’6 ನೀಳ+ಗುಂದೆ = ನೀಳ್‍ಗುಂದೆ> ನೀಗುಂದೆ> ನಿಗುಂದೆ> ನಿಗಂದೆ> ನಿಗದೆ> ನಿಗದಿ ಆಗಿದೆ. ಇಲ್ಲಿಯೂ ಸೌಲಭ್ಯಾಕಾಂಕ್ಷೆಯಿಂದ ಬಿಂದು ಲೋಪವಾಗಿದೆ. ಇದು ನೀಳ್ ಅಂದರೆ ನೀಡಿದಾದ ಬೆಟ್ಟವನ್ನು ಹೊಂದಿತ್ತೆಂದು ಹೇಳುತ್ತದೆ. ಮನಗುಂಡಿ ಗ್ರಾಮನಾಮದ ಮೂಲರೂಪ ಮಣಿಗುಂದ.7 ಮಣಿ+ಕುಂದ= ಮಣಿಕುಂದ> ಮಣಿಗುಂದ> ಮನಿಗುಂಡ > ಮನಿಗುಂಡಿ >ಮನಗುಂಡಿ ಆಗಿದೆ. ‘ಮಣಿ’ ಖನಿಜ ಲವಣಾಂಶಗಳನ್ನು ಉಳ್ಳ ಬೆಟ್ಟವನ್ನು ನೆನಪಿಸುತ್ತದೆ. ಅಥವಾ ಅದು ಮುತ್ತು, ರತ್ನ, ಮಣಿ-ಮಾಣಿಕ್ಯಗಳ ವ್ಯಾಪಾರದ ಕೇಂದ್ರ ನೆಲೆಯಾಗಿತ್ತೆಂದು ಅರ್ಥೈಸಲಿಕ್ಕೆ ಸಾಧ್ಯವಿದೆ.
‘ಗರಗ’ ಗ್ರಾಮದ ಮೂಲ ಹೆಸರು ‘ಬೆಳೊಟ್ಟಿಗೆ’8, ಅದು ಬೆಳ್+ಒಟ್ಟೆ+ಕೆಯ್= ಬೆಳೊಟ್ಟಿಕೆಯ್> ಬೆಳೊಟ್ಟಿಗೆ> ಬೆಳ್ಳಿಟ್ಟಿಗೆ ಎಂದಾಗಿತ್ತು. ಒಟ್ಟೆ ಅಂದರೆ ಕಾಡತುತ್ತಿ ಗಿಡ ಎಂಬ ಸಸ್ಯಮೂಲದ ಹೆಸರಾಗಿದೆ. ಅದು ಬಿಳಿ ಕಾಡತುತ್ತಿ ಆಗಿರುವುದರಿಂದ ಬೆಳೊಟ್ಟಿಗೆ ಎಂಬ ಹೆಸರನ್ನು ಹೊಂದಿದೆ. ಅದು ನಂತರದಲ್ಲಿ ಗರಗ ಎಂಬ ಹೆಸರನ್ನು ಪಡೆದುಕೊಂಡಿದೆ. ‘ಬಾವಿಹಾಳ’ ಮೂಲತಃ ಹಲ್ಗುಂಡಿ.9 ಹುಲ್ಲು+ಗುಂಡಿ = ಹಲ್ಗುಂಡಿ. ನಂತರದಲ್ಲಿ ಬಾವಿಹಾಳ (ಬಾವಿ+ಪಾಳ್ಯ) ಎಂಬ ಪರಿವರ್ತನೆ ನಾಮವನ್ನು ಹೊಂದಿದೆ. ನುಗ್ಗಿಯಹಳ್ಳಿ10 ನುಗ್ಗಿ ಸಸ್ಯವನ್ನು ನೆನಪಿಸುತ್ತದೆ. ನುಗ್ಗಿಯ+ಹಳ್ಳಿ= ನುಗ್ಗಿಹಳ್ಳಿ ಈ ಗ್ರಾಮ ಕೆರೆಯನ್ನು ಹೊಂದಿದಾಗ ಉತ್ತರ ಪದ ಹಳ್ಳಿಯಿಂದ ‘ಕೆರೆ’ ಪದಕ್ಕೆ ಬದಲಾಗಿ ನುಗ್ಗಿಕೆರೆ11 ಎಂಬ ನಾಮವನ್ನು ಹೊಂದಿದೆ. ಮುಗಳಿ ನಾಮವು ಒಂದು ಜಾತಿಯ ಮುಳ್ಳು ಮರವನ್ನು ಸೂಚಿಸುತ್ತದೆ. ಇಂದಿನ ದೇವರ ಹುಬ್ಬಳ್ಳಿ ಮೂಲತಃ ಹುಪ್ಪವಳ್ಳಿ.12 ಅದು ಪುಷ್ಟಪಳ್ಳಿ> ಪುಪ್ಪವಳ್ಳಿ> ಹುಪ್ಪವಳ್ಳಿ ಆಗುವ ಸಾಧ್ಯತೆ ಇದೆ. ನಂತರದಲ್ಲಿ ಹುಬ್ಬವಳ್ಳಿ> ಹುಬ್ಬಳ್ಳಿ ಆಗಿದೆ. ಸಮೀಪದಲ್ಲಿ ಮತ್ತೊಂದು ಹುಬ್ಬಳ್ಳಿ ಇದ್ದುದರಿಂದ ದೇವರ ಎಂಬ ವಿಶೇಷಣವನ್ನು ಹೊಂದಿ ದೇವರಹುಬ್ಬಳ್ಳಿ ಆಯಿತು. ‘ನವಲೂರು’ ಮೂಲತಃ ನವಿಲೂರು.13 ನವಿಲುಗಳನ್ನು ಹೊಂದಿರುವ ಊರು. ನವಿಲೂರು> ನವಲೂರು ಆಗಿದೆ. ನೀರುಸಾಗರ14 (ನೀರು+ ಸಾಗರ) ಬೃಹತ್ ನೀರನ್ನು ಹೊಂದಿರುವ ಸ್ಥಳವಾಗಿದೆ. ಹಳ್ಳವನ್ನು ಹೊಂದಿರುವ ಊರಿಗೆ ಹಳ್ಳಂಗೆರೆ15 >ಹಳ್ಳಿಗೇರಿ ಎಂದು ಕರೆಯಲಾಗಿದೆ. ‘ಪೆಗ್ಗೆರೆ’16ಯು> ಹೆಗ್ರ್ಗೆರೆ> ಹಿರಿಕೆರೆ ಆಗಿದೆ.
2. ಸಾಂಸ್ಕøತಿಕವಾಚಿ ಸ್ಥಳನಾಮಗಳು:
ವಸತಿ ಸ್ಥಳನಾಮಗಳು ನಮ್ಮ ಪೂರ್ವಿಕರ ಆಚಾರ-ವಿಚಾರ ಸಂಪ್ರದಾಯ, ನಂಬಿಕೆ, ವೃತ್ತಿ ಇತ್ಯಾದಿಯಾಗಿ ಅವರ ಜೀವನ ವಿಧಾನವನ್ನು ತಿಳಿಸುತ್ತವೆ. ಈ ನಿಟ್ಟಿನಲ್ಲಿ ಧಾರವಾಡ ತಾಲೂಕಿನ ಶಾಸನೋಕ್ತ ಸ್ಥಳನಾಮಗಳಲ್ಲಿ ವ್ಯಕ್ತಿವಾಚಿ, ಜನಾಂಗವಾಚಿ, ಐತಿಹಾಸಿಕವಾಚಿ, ದೈವವಾಚಿ, ಮುಂತಾದ ಬಗೆಯ ಸ್ಥಳನಾಮಗಳಿರುವುದನ್ನು ಗುರುತಿಸಬಹುದಾಗಿದೆ.
‘ಅಮ್ಮಿನಬಾವಿ’ ಗ್ರಾಮದ ಮೂಲನಾಮ ‘ಅಮ್ಮಿನ ಬಾವಿ’17 ಅದರ ನಿಷ್ಪತ್ತಿ ಅಮ್ಮಯ್ಯನಬಾವಿ (ಅಮ್ಮಯ್ಯನ+ ಬಾವಿ)> ಅಮ್ಮಯನಬಾವಿ> ಅಂಮ್ಮೆನಬಾವಿ> ಅಮ್ಮಿನಬಾವಿ ಎಂದಾಗಿದೆ ಅಂದರೆ ಅಮ್ಮಯ್ಯ ಕಟ್ಟಿಸಿದ ಬಾವಿ ಅಮ್ಮಿನಬಾವಿ ಎಂದಾಗಿದೆ. ಶಿಂಗನಳ್ಳಿ ‘ಸವಣನಪಳ್ಳಿ’18 ಆಗಿತ್ತು. ಸವಣನ+ಪಳ್ಳಿ= ಸವಣನಪಳ್ಳಿ> ಸವಣನಳ್ಳಿ > ಸಂಗವಳ್ಳಿ > ಶಿಂಗನಳ್ಳಿ. ಇದು  ಇಂದು ಮೌಖಿಕರೂಪದಲ್ಲಿ ಶಿಗನಹಳ್ಳಿ ಆಗಿದೆ. ಇದು ಜೈನಯತಿಯಾದ ಸವಣನನ್ನು ನೆನಪಿಸುತ್ತದೆ. ಸಿದ್ಧಾಪುರದ ಮೂಲ ಹೆಸರು ‘ಪೊಸವೊಳಲ’,19 ಪೊಸ+ಪೊಳಲ್= ಪೊಸವೊಳಲ್ ಪ>ಹ ಕಾರವಾದ ಕಾಲಘಟ್ಟದ ಊರು. ಆಗ ಹೊಸ ಊರಾಗಿದ್ದ ಇದು ನಂತರದಲ್ಲಿ ‘ಸಿದ್ಧಾಪುರ’ವಾಗಿ ಬದಲಾವಣೆಗೊಂಡಿದೆ. ಅದು ಸಿದ್ದಪ್ಪ+ಪುರ= ಸಿದ್ದಪ್ಪಪುರ> ಸಿದ್ದಾಪುರವೆಂದು ವ್ಯಕ್ತಿನಾಮವಾಗಿ ಬದಲಾವಣೆಗೊಂಡಿರಬಹುದು. ತೇಗೂರು ಮೂಲತಃ ‘ಕೊಳನೂರು’20 ಎಂಬ ಹೆಸರನ್ನು ಹೊಂದಿತ್ತು. ಕೊಳನ+ಊರು = ಕೊಳನೂರು ಆಗಿದೆ. ಇದು ಕೊಳನ ಎಂಬ ವ್ಯಕ್ತಿನಾಮದ ಹಿನ್ನೆಲೆಯಲ್ಲಿ ಬಂದಿದೆ. ನಂತರದಲ್ಲಿ ತೇಗೂರು ಎಂಬ ಪರಿವರ್ತನ ನಾಮವನ್ನು ಹೊಂದಿದೆ. ತೇಗ+ಊರು=ತೇಗೂರು ತೇಗಿನ ಮರಗಳು ಯಥೇಚ್ಚವಾಗಿ ಬೆಳೆದಿದ್ದರಿಂದ ಈ ಹೆಸರು ಬಂದಿದೆ.
‘ಧಾರವಾಡ’ದ ಮೂಲ ರೂಪ ‘ದಾರವಾಡ’.21 ಬಹಳಷ್ಟು ಚರ್ಚಿತವಾಗಿರುವ ಧಾರವಾಡ ಗ್ರಾಮದ ನಿಪ್ಪತ್ತಿಯು ಸಹ ವ್ಯಕ್ತಿನಾಮದ್ದಾಗಿರುವ ಸಾಧ್ಯತೆ ಹೆಚ್ಚಿದೆ. ಧಾರವಾಡ ಜಿಲ್ಲಾ ಗೆಝೆಟಿಯರ್‍ದಲ್ಲಿ ವಿಜಯನಗರದ ರಾಮರಾಜನ ಕಾಲದ ಧಾರರಾವ್ ಎಂಬುವನು 1403ರಲ್ಲಿ ಕೋಟೆ ಕಟ್ಟಿಸಿದ್ದರ ನಿಮಿತ್ತ ಈ ಊರಿಗೆ ಧಾರವಾಡ ಎಂಬ ಹೆಸರು ಬಂದಿತೆಂದು ತಿಳಿಸುತ್ತದೆ. ಆದರೆ ಕ್ರಿ.ಶ.1117 ಧಾರವಾಡ ಶಾಸನದಲ್ಲಿಯೇ ‘ದಾರವಾಡ’ ಎಂಬ ಹೆಸರು ಬಳಕೆಗೊಂಡಿದೆ. ಇದಕ್ಕೆ ಸಹಾಯಕವಾಗಿ ಕ್ರಿ.ಶ.1125 ನರೇಂದ್ರ ಮತ್ತು 1148 ಧಾರವಾಡ ಶಾಸನಗಳಲ್ಲೂ ಕ್ರಮವಾಗಿ ದಾರವಾಡ ಮತ್ತು ಧಾರವಾಡ ಬಳಕೆಗೊಂಡಿವೆ. ಅಲ್ಲದೆ 1403ರಲ್ಲಿ ರಾಮರಾಯ ವಿಜಯನಗರವನ್ನು ಆಳುತ್ತಿರಲಿಲ್ಲ. ಇವೆಲ್ಲ ಕಾರಣಗಳಿಂದ ಈ ವಾದವನ್ನು ಒಪ್ಪಲಿಕ್ಕಾಗದು.
ಡಾ. ಪಿ.ಬಿ. ದೇಸಾಯಿ ಧಾರವಾಡ ಪದವು ಸಂಸ್ಕøತದ ‘ದ್ವಾರ’ದಿಂದ ‘ದಾರ’ ಮತ್ತು ‘ವಾಟ’ ದಿಂದ ‘ವಾಡ’ ಬಂದಿದೆ ಎನ್ನುತ್ತಾರೆ.  ಡಾ. ಎಂ.ಎಂ. ಕಲಬುರ್ಗಿ ಅವರು ವಾದವನ್ನು ಒಪ್ಪುವುದಿಲ್ಲ. ಸಾಮಾನ್ಯವಾಗಿ ಊರ ಹೆಸರನ್ನು ಇಷ್ಟರಮಟ್ಟಿಗೆ ಸಂಸ್ಕøತ ಭೂಯಿಷ್ಠವಾಗಿ ಇಡುವುದು ಅಸಂಭವ. ಅಲ್ಲದೆ ಅಲ್ಲಿ ಸುಂಕವನ್ನು ಆಕರಿಸಲಾಗುತ್ತಿತ್ತು ಎಂಬ ಕಾರಣಕ್ಕೆ ಇದೊಂದೇ ಪ್ರದೇಶದ ಮೂಲಕ ಎರಡು ವಿಶಾಲ ಪ್ರದೇಶಗಳ ಸುಂಕವನ್ನು ಆಕರಿಸಲಾಗುತ್ತಿತ್ತೆಂದಲ್ಲ. ಸುಂಕ ಸಂಗ್ರಹ ಸಾಮಾನ್ಯವಾಗಿ ಅಂದು ಎಲ್ಲಾ ಗ್ರಾಮಗಳಲ್ಲಿ ಕಂಡುಬರುವಂತಹದ್ದಾಗಿ ಸಾಮಾನ್ಯವಾಗಿ ಅಂದು ಎಲ್ಲಾ ಗ್ರಾಮಗಳಲ್ಲಿ ಕಂಡುಬರುವಂತಹದ್ದಾಗಿತ್ತು ಎಂಬ ಡಾ. ಕಲಬುರ್ಗಿ ಅವರ ವಿಚಾರಗಳನ್ನು ಒಪ್ಪುವಂತಹದ್ದೆ.
ಡಾ. ಎಂ.ಎಂ. ಕಲಬುರ್ಗಿ ಅವರು ಧಾರವಾಡ ಪದದ ಪೂರ್ವಪದದ ಅಂತ್ಯ ‘ರ’ ಕಾರವುಳ್ಳ ಈ ಪದವು ಜನಾಂಗಿ ಸೂಚಿಯಾಗಿದೆ ಎಂದು ತಿಳಿಸುತ್ತಾ ದಾಯರ, ದಾರರ, ದಾವರ ಇವುಗಳಲ್ಲಿ ಒಂದರ ಸವೆದ ರೂಪ ‘ದಾರ’ ಎಂದು ತಿಳಿಸುತ್ತಾರೆ. ಹೀಗಾಗಿ ದಾಯರು, ದಾರರು, ದಾವರು ಇವುಗಳಲ್ಲಿ ಒಂದು ಜನಾಂಗದ ನೆಲೆ ಆಗಿರಬಹುದೆನ್ನುತ್ತಾರೆ. ಇನ್ನು ಉತ್ತರ ಪದ ‘ವಾಡ’ ದ್ರಾವಿಡದ ‘ಬಾಡ’ದಿಂದ ಬಂದಿರುವ ಸಾಧ್ಯತೆಯನ್ನು ತಿಳಿಸುತ್ತಾರೆ.
ಡಾ. ಎಂ.ಎಂ. ಕಲಬುರ್ಗಿ ಅವರು ತಿಳಿಸುವ ದಾಯರ, ದಾರರ, ದಾವರ ಎನ್ನುವ ಜನಾಂಗಗಳಿದ್ದವು ಎನ್ನುವದರ ಬಗ್ಗೆ ನಮಗೆ ಯಾವುದೇ ರೀತಿಯ ಕುರುಹುಗಳಿಲ್ಲ. ಹೀಗಾಗಿ ಧಾರವಾಡದ ಮೂಲ ತಿಳಿಸುವ ಅವರ ಜನಾಂಗ ನಿಷ್ಠೆ ಅಭಿಪ್ರಾಯ ಸರಿಯೆನಿಸುವುದಿಲ್ಲ. ಆದ್ದರಿಂದ ಧಾರವಾಡ ಗ್ರಾಮನಾಮದ ನಿಷ್ಪತ್ತಿಯನ್ನು ಜನಾಂಗವಾಚಿಗಿಂತ ವ್ಯಕ್ತಿವಾಚಿಯಲ್ಲಿ ಹುಡಕಲು ಆಧಾರ ಒಂದು ದೊರೆಯುತ್ತದೆ. ‘ಸಾಮಾನ್ಯವಾಗಿ ಇಂದಿಗೂ ಜನಬಳಕೆಯಲ್ಲಿ ಮೇಲೆ, ಮ್ಯಾಲೆ ಎಂಬ ಪದಬಳಕೆಯುಂಟು. ಮೇಲೆ ಗ್ರಾಂಥಿಕವಾದರೆ, ಮ್ಯಾಲೆ ಮೌಖಿಕವಾದದು. ಅದರಂತೆ ದೇರಣ್ಣ> ದ್ಯಾವಣ್ಣ, ದೇಮಪ್ಪ> ದ್ಯಾಮಪ್ಪ ನಾಮಗಳ ಬಳಕೆಯುಂಟು, ಇಂಥ ಯಾವುದೋ ವ್ಯಕ್ತಿಯೋರ್ವನ ಹೆಸರೇ ಧಾರವಾಡ ಗ್ರಾಮಕ್ಕೆ ಆದಿಯಾಗಿರಬೇಕು. ಇದಕ್ಕೆ ಸಹಾಯಕವಾಗಿ ಸುಮಾರು 9ನೇ ಶತಮಾನದ ಧಾರವಾಡದ ಒಂದು ವೀರಗಲ್ಲು ಶಾಸನದಲ್ಲಿ ದೇರಣ್ಣ ಎಂಬ ವ್ಯಕ್ತಿಯ ಉಲ್ಲೇಖ ಕಂಡುಬರುತ್ತದೆ. ಪ್ರಾಯಶಃ ಆತನೇ ವೀರಮರಣ ಹೊಂದಿದ ವ್ಯಕ್ತಿಯಾಗಿರಬೇಕು. ಶಾಸನ ಅಧಿಕ ತ್ರುಟಿತವಿದೆ. ಆ ದೇರಣ್ಣ ಹೆಸರು ಧಾರವಾಡದ ಮೂಲ ನಿಷ್ಪತ್ತಿಯಾಗಿರಬೇಕು. ಅಂದರೆ ಧಾರವಾಡ ಪದದ ನಿರ್ದಿಷ್ಟ ಪದವಾಗಿರಬೇಕು. ಇನ್ನು ವಾರ್ಗಿಕ ಡಾ. ಎಂ.ಎಂ. ಕಲಬುರ್ಗಿಯವರು ತಿಳಿಸುವಂತೆ ಬಾಡದಿಂದಲೇ ಬಂದಿರಬೇಕು. ದೇರಣ್ಣಬಾಡ> ದ್ಯಾರಣ್ಣಬಾಡ> ದಾರನಬಾಡ> ದಾರವಾಡ> ಧಾರವಾಡ ಆಗಿರುವ ಸಾಧ್ಯತೆ ಹೆಚ್ಚಾಗಿದೆ’.22 ಭಾಷಾ ಹಿನ್ನೆಲೆಯಲ್ಲಿ ಇದು ಸರಿಯಾದ ಕ್ರಮವಾಗಿದೆ. ಇನ್ನು ಧಾರವಾಡವನ್ನು ಸಂಸ್ಕøತಿ ನೆಲೆಯಲ್ಲಿ ತುಂತುಪುರಿ, ಧಾರಾನಗರಿ ಎಂದು ಹೆಸರಿಸಿದ್ದುಂಟು. ಮುಸ್ಲಿಂ ಆಡಳಿತ ಕಾಲದಲ್ಲಿ ‘ನಸ್ರತಾಬಾದ್’, ಬ್ರಿಟಿಷರ ಆಡಳಿತದಲ್ಲಿ
‘ಧಾರವಾರ’ ಎಂದು ಕರೆಸಿಕೊಂಡಿತ್ತು ಈಗ ಮತ್ತೆ ಧಾರವಾಡ ಆಗಿದೆ.
ಡಾ. ಎಂ.ಎಂ. ಕಲಬುರ್ಗಿ ಅವರು ತಿಳಿಸುವಂತೆ ಗ್ರಾಮನಾಮದ ಪೂರ್ವಪದದ ಅಂತ್ಯದಲ್ಲಿ ಲಾ.ಳ.ಬ್ಬೆ.ಕ್ಕ ಇವು ಬಂದಿದ್ದರೆ ಅವು ಸ್ತ್ರೀವಾಚಿ ಸ್ಥಳನಾಮಗಳಾಗಿರುತ್ತವೆ. ‘ಅಳ್ನಾವರ’ ಮೂಲತಃ ಅಣಿಲಾಪುರ.23 ಅಣಿಲಾ+ ಪುರ=ಅಣಿಲಾಪುರ> ಅಳಣಾಪೂರ> ಅಳ್ನಾವಾರ ಆಗಿದೆ. ಇಲ್ಲಿ ಪೂರ್ವಪದದ ಅಂತ್ಯಾಕ್ಷರ ‘ಲಾ’ ಇರುವುದರಿಂದ ಇದೊಂದು ಸ್ತ್ರೀವಾಚಿನಾಮವಾಗಿದೆ. ‘ಕನಕೂರು’ ‘ಕನಕಾಪುರ’24ವಾಗಿತ್ತು. ಕನಕಾ+ಪುರ= ಕನಕಾಪುರ > ಕನಕೂರ ಅಗಿದೆ. ಕನಕಾ ಸ್ತ್ರೀನಾಮವಾಗಿದ್ದು ಇದು ಊರಿನ ಗ್ರಾಮದೇವತೆ ಕನಕಮ್ಮ ಗ್ರಾಮದೇವತೆಯಿಂದ ಬಂದಿರುವಂತಹದ್ದಾಗಿರಬಹುದು. ಬೊಮ್ಮರಸಿಕೊಪ್ಪ ‘ಬಮ್ಮರಸಿ ಕೊಪ್ಪ’25ವಾಗಿತ್ತು. ಬಮ್ಮಅರಸಿ+ಕೊಪ್ಪ= ಬಮ್ಮರಸಿಕೊಪ್ಪ> ಬೊಮ್ಮರಸಿಕೊಪ್ಪ ಎಂದಾಗಿದೆ. ಇದು ಪ್ರಭುವರ್ಗದ ರಾಣಿಯನ್ನು ನೆನಪಿಸುವಂತಹದ್ದಾಗಿದೆ.
ಸತ್ತೂರು ‘ಶ್ರೋತ್ರಿಯೂರು’26 ಆಗಿತ್ತೆಂದು ಶಾಸನ ತಿಳಿಸುತ್ತದೆ. ಶ್ರೋತ್ರಿಯ + ಊರು = ಶ್ರೋತ್ರಿಯೂರು > ಸೊತ್ತಿಯೂರು > ಸತ್ತಿವೂರು27 > ಸತ್ತೂರು ಆಗಿದೆ. ಪ್ರಾಯಶಃ ಬ್ರಾಹ್ಮಣರಿಗೆ ದಾನವಾಗಿ ಕೊಟ್ಟಾಗ ಈ ಹೆಸರಿನಿಂದ ಈ ಗ್ರಾಮವನ್ನು ಕರೆದಿರಲು ಸಾಕು. ಕನ್ನಡ ಮೂಲದ ಹೆಸರೊಂದು ಸಂಸ್ಕøತ ರೂಪಕ್ಕೆ ತಿರುಗಿದ ಬಗೆ ಇದಾಗಿದ್ದರೂ ಇದರ ಮೂಲನಾಮ ತಿಳಿಯದು. ಹಂಗರಕಿ ಮೂಲರೂಪ ‘ಹಗರಗೆ’28 ಎಂದು ಶಾಸನದಲ್ಲಿದ್ದರೂ ಪ್ರಾಯಶಃ ಅದರ ಮೂಲರೂಪ ‘ಹಂಗರಗೆ’ ಇದ್ದಿರಬಹುದಾಗಿದೆ. ಹಾಗಾಗಿ ಹಂಗರ+ಕೆಯ್= ಹಂಗರಕೆಯ್> ಹಂಗರಗೆ> ಹಗರಗೆ> ಹಂಗರಕಿ ಆಗಿದೆ. ‘ಹಂಗರ’ ಇದೊಂದು ಜನಾಂಗ ನಾಮವಾಗಿದೆ. ಅದರಂತೆ ‘ಕುಂಬಾರ ಗೆರೆ’ ಕುಂಬಾರ ಜನಾಂಗವನ್ನು ನೆನಪಿಸುತ್ತ್ತಿದೆ.
ಅರಸರು ಉದಾತ್ತ ಕಾರ್ಯಕ್ಕಾಗಿ ಯಾರಿಗೋ ಅನುಭೋಗಿಸಲು ಕೊಟ್ಟ ಊರು ಭೋಗೂರು29> ಬೋಗೂರು ಆಗಿದೆ. ಮರೆವಾಡ ಗ್ರಾಮನಾಮ ‘ಮರೆಯ ವಾಡ’30 ಆಗಿತ್ತು. ಮರೆಯ+ಬಾಡ= ಮರೆಯಬಾಡ> ಮರೆಯ ವಾಡ> ಮರೆವಾಡ ಆಗಿದೆ. ಈ ಹಳ್ಳಿ ಭೌಗೋಳಿಕವಾಗಿ ಮರೆಯಲ್ಲಿ (ಕಾಣದ ಹಾಗೆ) ಇರುವುದರಿಂದ ಆ ಹೆಸರು ಬಂದಿದೆ. ‘ಬಾಡ’ ವಾರ್ಗಿಕನಾಮವು ಗ್ರಾಮನಾಮವಾಗಿ ಬಳಕೆಗೊಂಡಿದೆ. ಹೆಬ್ಬಳ್ಳಿ ಮೂಲರೂಪ ಪೆಬ್ರ್ಬಳ್ಳಿ31 ಪೆರ್+ಪಳ್ಳಿ= ಪೆರ್‍ಪಳ್ಳಿ> ಪೆರ್ಬಪಳ್ಳಿ> ಹೆಬ್ಬವಳ್ಳಿ> ಹೆಬ್ಬಳ್ಳಿ ಆಗಿದೆ. ಪೆರ್ ಅಂದರೆ ಹಿರಿಯ ಪ್ರಾಚೀನ ಕಾಲದಲ್ಲಿ ಇದು ದೊಡ್ಡಹಳ್ಳಿ ಆಗಿರಬಹುದಾಗಿದೆ.
‘ಕೌಲಗೇರಿ’32 ಗ್ರಾಮನಾಮವು ಕೌಲ>ಕವಲ+ಕೇರಿ= ಕೌವಲಗೇರಿ ಎಂದಾಗಿರಬಹುದು. ಇದು ‘ಕೌಲಗುಡ್ಡ, ಕೌಲಗಿ, ಕೌಲೂರುಗಳಂತೆ ಕೌಲಪಂಥದ ನೆಲೆಯಾಗಿರಬೇಕು (ಎಂ.ಎಂ. ಕಲಬುರ್ಗಿ, ಕನ್ನಡ ನಾಮವಿಜ್ಞಾನ-86) ಅಥವಾ ಕವಲದಾರಿಯನ್ನು ನೆನಪಿಸುವ ನೆಲೆಗಟ್ಟಿನಲ್ಲಿ ಬಳಕೆಗೊಂಡ ಪದವಾಗಿರಬೇಕು.
ಧಾರವಾಡ ತಾಲೂಕಿನಲ್ಲಿರುವ ಅಮ್ಮಿನಬಾವಿ, ದೇವರಹುಬ್ಬಳ್ಳಿ, ನವಲೂರು, ಬಾಡ, ಕನಕೂರು, ಮನಗುಂಡಿ ಇವು ಪ್ರಾಚೀನ ಕಾಲದಲ್ಲಿ ಅಗ್ರಹಾರಗಳಾಗಿದ್ದವು. ಅದರಂತೆ ಕುಂದೂರ (ನರೇಂದ್ರ)-500, ಮುಗದ-30 ಇವು ಆಡಳಿತದ ಕೇಂದ್ರಗಳಾಗಿದ್ದವು. ಹೀಗೆ ಒಟ್ಟಾರೆ ಧಾರವಾಡ ತಾಲೂಕಿನ ಪೂರ್ವ ಇತಿಹಾಸವನ್ನು ತಿಳಿಯಲು ಅಲ್ಲಿಯ ಸ್ಥಳನಾಮಗಳು ಸಹಾಯಕವಾಗಿ ಬಂದಿರುವುದು ವಿಶೇಷ.
[ಈ ಲೇಖನದ ಲೇಖಕರು ಮತ್ತು ವಿಳಾಸ ಖಚಿತವಾಗಿ ತಿಳಿಯದು. ಲೇಖಕರು ತಮ್ಮ ಹೆಸರನ್ನು ಮತ್ತು ವಿಳಾಸವನ್ನು ನೀಡಿರುವುದೇ ಇಲ್ಲ. ಇ-ಮೇಲ್‍ನಲ್ಲಿ ವಿರೂಪಾಕ್ಷ ಎಂಬುವವರ ಕಡೆಯಿಂದ ಲೇಖನ ಬಂದಿರುತ್ತದೆ. ಆದ ಕಾರಣ ನಮ್ಮ ಗಮನಕ್ಕೆ ಬಂದ ಮಟ್ಟಿಗೂ ಸಂದೇಹವಾಗಿ ಲೇಖಕರ ಹೆಸರನ್ನು ಮತ್ತು ವಿಳಾಸವನ್ನು ಸೂಚಿಸಿದ್ದೇವೆ. -ಸಂ.]
ಆಧಾರಸೂಚಿ ಹಾಗೂ ಟಿಪ್ಪಣಿಗಳು
1. ಡಾ.ಎಂ.ಎಂ. ಕಲಬುರ್ಗಿ, ಕನ್ನಡ ನಾಮ ವಿಜ್ಞಾನ, ಪುಟ 54, 55.
2. ಡಾ. ಎಂ.ಎಂ. ಕಲಬುರ್ಗಿ, ಧಾರವಾಡ ತಾಲ್ಲೂಕಿನ ಶಾಸನಗಳು, ನಂ. 2, ಅಮ್ಮಿನಬಾವಿ, ಕ್ರಿ.ಶ. 1071-72.
3. ಅದೇ, ನಂ. 9, ಅಮ್ಮಿನಬಾವಿ, ಕ್ರಿ.ಶ. 1547.
4. ಅದೇ, ನಂ. 39 ನರೇಂದ್ರ, ಕ್ರಿ.ಶ. 1125.
5. SII.ಘಿI-i-78, ಮುಗದ, ಕ್ರಿ.ಶ. 1045.
6. ಡಾ. ಎಂ.ಎಂ. ಕಲಬುರ್ಗಿ, ಧಾರವಾಡ ತಾಲ್ಲೂಕಿನ ಶಾಸನಗಳು, ನಂ. 44, ನಿಗದಿ, ಕ್ರಿ.ಶ. 1111.
7. ಅದೇ, ನಂ. 51, ಮನಗುಂಡಿ, ಕ್ರಿ.ಶ. 1203.
8. ಅದೇ, ನಂ. 20, ಗರಗ, ಕ್ರಿ.ಶ. 1287.
9. SII.ಘಿಗಿ- 9, ಭಾವಿಹಾಳ, ಕ್ರಿ.ಶ. 1125.
10. ಡಾ. ಎಂ.ಎಂ. ಕಲಬುರ್ಗಿ, ಧಾರವಾಡ ತಾಲ್ಲೂಕಿನ ಶಾಸನಗಳು, ನಂ. 51, ಮನಗುಂಡಿ, ಕ್ರಿ.ಶ. 1203.
11. ಅದೇ, ನಂ. 46, ನುಗ್ಗಿಕೇರಿ, ಸು, 18ನೇ, ಶತಮಾನ.
12. ಡಾ. ಎಂ.ಎಂ. ಕಲಬುರ್ಗಿ, ಧಾರವಾಡ ತಾಲ್ಲೂಕಿನ ಶಾಸನಗಳು, ನಂ. 27, ದೇವರ ಹುಬ್ಬಳ್ಳಿ, ಕ್ರಿ.ಶ. 1206.
13. ಡಾ.ಎಂ.ಎಂ. ಕಲಬುರ್ಗಿ, ಧಾರವಾಡ ತಾಲ್ಲೂಕಿನ ಶಾಸನಗಳು, ನಂ. 29, ಧಾರವಾಡ, ಸುಮಾರು 9ನೇ, ಶತಮಾನ.
14. SII.ಘಿಗಿ- 233, ಮನಗುಂಡಿ, ಕ್ರಿ.ಶ. 1203.
15. ಡಾ. ಎಂ.ಎಂ. ಕಲಬುರ್ಗಿ, ಧಾರವಾಡ ತಾಲ್ಲೂಕಿನ ಶಾಸನಗಳು, ನಂ. 53, ಮನಗುಂಡಿ, ಕ್ರಿ.ಶ. 1203.
16. SII.ಘಿಗಿ-i- 78, ಮುಗದ, ಕ್ರಿ.ಶ. 1045.
17. SII.ಘಿI-ii- 121, ಅಮ್ಮಿನಬಾವಿ, ಕ್ರಿ.ಶ. 1071-72
18. ಡಾ. ಎಂ.ಎಂ. ಕಲಬುರ್ಗಿ, ಧಾರವಾಡ ತಾಲ್ಲೂಕಿನ ಶಾಸನಗಳು, ನಂ. 39 ನರೇಂದ್ರ, ಕ್ರಿ.ಶ. 1125.
19. ಅದೇ, ನಂ. 66, ಸಿದ್ದಾಪುರ, ಕ್ರಿ.ಶ. 1120.
20. SII.ಘಿI-ii- 128, ತೇಗೂರ, ಕ್ರಿ.ಶ. 1082.
21. ಡಾ. ಎಂ.ಎಂ. ಕಲಬುರ್ಗಿ, ಧಾರವಾಡ ತಾಲ್ಲೂಕಿನ ಶಾಸನಗಳು, ನಂ. 33, ಧಾರವಾಡ, ಕ್ರಿ.ಶ. 1117.
22. ಡಾ. ವ್ಹಿ.ಎಲ್. ಪಾಟೀಲ, ದೇಶಿ ಅವಲೋಕನ, ಪುಟ 77.
23. ಡಾ. ಎಂ.ಎಂ. ಕಲಬುರ್ಗಿ, ಧಾರವಾಡ ತಾಲ್ಲೂಕಿನ ಶಾಸನಗಳು, ನಂ. 11, ಅಳ್ನಾವರ, ಕ್ರಿ.ಶ. 1081.
24. SII.ಘಿI-ii-154, ಕನಕೂರ, ಕ್ರಿ.ಶ. 1104.
25. ಡಾ. ಎಂ.ಎಂ. ಕಲಬುರ್ಗಿ, ಧಾರವಾಡ ತಾಲ್ಲೂಕಿನ ಶಾಸನಗಳು, ನಂ. 36, ಧಾರವಾಡ, ಕ್ರಿ.ಶ. 1448.
26. ಡಾ. ಎಂ.ಎಂ. ಕಲಬುರ್ಗಿ, ನಾಮ ವಿಜ್ಞಾನ, ಪುಟ 79.
27. ಡಾ. ಎಂ.ಎಂ. ಕಲಬುರ್ಗಿ, ಧಾರವಾಡ ತಾಲ್ಲೂಕಿನ ಶಾಸನಗಳು, ನಂ. 51, ಮನಗುಂಡಿ, ಕ್ರಿ.ಶ. 1203.
28. SII.ಘಿಗಿ- 230, ಬೋಕ್ಯಾಪುರ, ಕ್ರಿ.ಶ. 1163.
29. ಡಾ. ಎಂ.ಎಂ. ಕಲಬುರ್ಗಿ, ಧಾರವಾಡ ತಾಲ್ಲೂಕಿನ ಶಾಸನಗಳು, ನಂ. 50, ಮದನಭಾವಿ, ಕ್ರಿ.ಶ. 1127.
30. ಅದೇ, ನಂ. 38, ನರೇಂದ್ರ, ಕ್ರಿ.ಶ. 1123.
31. ಅದೇ, ನಂ. 38, ನರೇಂದ್ರ, ಕ್ರಿ.ಶ. 1123.
32. ಡಾ. ಎಂ.ಎಂ. ಕಲಬುರ್ಗಿ, ಧಾರವಾಡ ತಾಲ್ಲೂಕಿನ ಶಾಸನಗಳು, ನಂ. 39, ನರೇಂದ್ರ, ಕ್ರಿ.ಶ. 1125.

 ಕನ್ನಡ ಪ್ರಾಧ್ಯಾಪಕರು, ಅನುಗ್ರಹ, ನವೋದಯ ನಗರ, ಧಾರವಾಡ-580003.

No comments:

Post a Comment