ಮೋಹನ ತರಂಗಿಣಿ ಬಿಂಬಿಸುವ ವಿಜಯನಗರದ ವಾಣಿಜ್ಯ
ರಾಜೀವ ಬಾಬು
ಕನಕದಾಸರ ರಚನೆಯಾದ ಮೋಹನ ತರಂಗಿಣಿಯು, ಮಹಾಕಾವ್ಯವಾಗಿದ್ದು ಇತಿಹಾಸ ಸಂಶೋಧಕರಿಗೆ ಪರಿಚಿತವಾಗಿದೆ. ಕೃಷ್ಣದೇವರಾಯನ ಆಳ್ವಿಕೆಯ ಸಂದರ್ಭದಲ್ಲಿ ಕನಕದಾಸರು ಜೀವಿಸಿದ್ದರೆಂಬುದು ತಿಳಿದ ಸಂಗತಿಯಾಗಿದೆ.
ಮೋಹನ ತರಂಗಿಣಿಯಲ್ಲಿ ಬರತಕ್ಕಂತಹ ವಾಣಿಜ್ಯ ಅಂಶಗಳನ್ನು ಗಮನಿಸಿ, ಅದನ್ನು ಕೆಲವು ವಿದೇಶಿ ಬರಹಗಳೊಂದಿಗೆ ತುಲನೆ ಮಾಡಿ ಎರಡರಲ್ಲೂ ದೊರಕುವ ಐತಿಹಾಸಿಕ ಮಾಹಿತಿಗಳ ವಿಶ್ವಸ್ಥತೆಯನ್ನು ಸಮರ್ಥಿಸಲಾಗಿದೆ. ಮೋಹನ ತರಂಗಿಣಿಯು ಶ್ರೀಕೃಷ್ಣನ ಲೀಲೆಗಳನ್ನು ವರ್ಣಿಸುವ ಒಂದು ಸಾಂಗತ್ಯ ಕಾವ್ಯ. ಇದರಲ್ಲಿ ಮೂರನೇ ಸಂಧಿಯ 11ನೇ ಪದ್ಯದಿಂದ 31ನೇ ಪದ್ಯದವರೆಗೂ ದ್ವಾರಕಾಪುರದಲ್ಲಿ ನಡೆಯುತ್ತಿದ್ದ ವಾಣಿಜ್ಯ ವ್ಯವಹಾರಗಳನ್ನು ವರ್ಣಿಸಲಾಗಿದೆ. ಇದು ನಿಸ್ಸಂದೇಹವಾಗಿ ಕನಕದಾಸರು ತಮ್ಮ ಕಾಲದಲ್ಲಿ ಕಂಡು ಅನುಭವಿಸಿದ ವರ್ತಕ ಚಟುವಟಿಕೆಗಳ ಪ್ರತಿಬಿಂಬ.
ಮೋಹನ ತರಂಗಿಣಿಯಲ್ಲಿ ದ್ವಾರಕಾಪುರದ ವಾಣಿಜ್ಯ ವಿವರಣೆ ಹೀಗಿದೆ. ದ್ವಾರಕಾಪುರದಲ್ಲಿ ‘ಸೋಮ/ಸೂರ್ಯ’ ಎಂಬ ಹೆಸರುಗಳಿಂದ ಕರೆಯಲ್ಪಡುತ್ತಿದ್ದ ಎರಡು ಬೀದಿಗಳಿದ್ದವು. ಈ ಬೀದಿಗಳ ಎರಡೂ ಬದಿಗಳಲ್ಲಿ ವಾಸದ ಮನೆಗಳೊಂದಿಗೆ ಸಾಲು ಸಾಲಾಗಿ ಅಂಗಡಿಗಳಿದ್ದವು. ಈ ಅಂಗಡಿಗಳಲ್ಲಿ ನಾನಾ ಪ್ರಕಾರದ ವಸ್ತುಗಳು ವಿಕ್ರಯಗೊಳ್ಳುತ್ತಿದ್ದವು. ಇಲ್ಲಿ ಒಂದು ಭಾಗದಲ್ಲಿ ತಾಂಬೂಲಕ್ಕೆ ಬಳಸಲಾಗುವ ವಿಳ್ಯದ ಎಲೆ, ಅಡಿಕೆ, ಅದಕ್ಕೆ ಬಳಸಲಾಗುವ ಪರಿಮಳ ದ್ರವ್ಯವಾದ ಜವಾಜಿ, ಇತ್ಯಾದಿಗಳು ಮಾರಲ್ಪಡುತ್ತಿದ್ದವು. ಮತ್ತೊಂದು ಕಡೆ ದೈನಂದಿನ ಬಳಕೆಯ ಕಂಚು, ಹಿತ್ತಾಳೆ ಪಾತ್ರೆಗಳನ್ನು ಮಾರಲಾಗುತ್ತಿತ್ತು. ಇನ್ನು ಅಕ್ಕಸಾಲಿಗರ ಅಂಗಡಿಗಳಲ್ಲಿ ನಾನಾ ರೀತಿಯ ಆಭರಣಗಳನ್ನು ಮಾಡಲಾಗುತ್ತಿತ್ತು. ಈ ಅಕ್ಕಸಾಲಿಗರು ಹೊಸ ಆಭರಣಗಳನ್ನು ಸಿದ್ಧಪಡಿಸುವುದೇ ಅಲ್ಲದೆ ಹಳೆಯ ಆಭರಣಗಳಿಗೆ ಮೆರಗು ನೀಡುತ್ತಿದ್ದರು. ಹೂವನ್ನು ಮಾರುವಂತಹ ಹೂವಾಡಿಗರು ನಾನಾ ಬಗೆಯ ಹೂವುಗಳನ್ನು ಮಾರುತ್ತಿದ್ದರು. ಇದರಲ್ಲಿ ಹೆಸರಿಸಿರುವ ಹೂವುಗಳು, ಇಂದಿಗೂ ಪರಿಚಯವಿರುವ, ಮಲ್ಲಿಗೆ, ಸಂಪಿಗೆ, ಜಾಜಿ ಇತ್ಯಾದಿ. ಇವರೊಂದಿಗೆ ತರುಣಿಯರನ್ನು ಆಕರ್ಷಿಸುವಂತಹ ಬಳೆಗಳನ್ನು ಮಾರತಕ್ಕಂತಹ ಬಳೆಗಾರರಿದ್ದರು.
ಇಲ್ಲಿಯ ಅಂಗಡಿಗಳಲ್ಲಿ ಗಮನಾರ್ಹವಾದ ಅಂಗಡಿಗಳೆಂದರೆ ಚಿತ್ರಗಾರರ ಮತ್ತು ಶಿಲ್ಪಿಗಳ ಆಯುಧಗಳನ್ನು ಮಾರುತ್ತಿದ್ದ ಅಂಗಡಿಗಳು. ಪ್ರಾಯಶಃ ಬಗೆಬಗೆಯ ಕುಂಚ, ಬಣ್ಣದ ಸಾಧನ, ವಿವಿಧ ಪ್ರಕಾರದ ಉಳಿ, ಅಳತೆಗೋಳ, ಮೊದಲಾದ ವಸ್ತುಗಳನ್ನು ಈ ಅಂಗಡಿಗಳಲ್ಲಿ ಮಾರುತ್ತಿದ್ದಿರಬಹುದು.
ಮೇಲಿನ ಪದ್ಯಗಳ ಸಾರಾಂಶವನ್ನು ಗ್ರಹಿಸಿದಾಗ ಕೇವಲ ವಾಣಿಜ್ಯವೇ ಅಲ್ಲದೆ, ಕೆಲವು ಸಾಮಾಜಿಕ ಮತ್ತು ಆರ್ಥಿಕ ಅಂಶಗಳು ಗಮನಕ್ಕೆ ಬರುತ್ತವೆ. ಅವುಗಳನ್ನು ಈ ಕೇಳಗೆ ಚರ್ಚಿಸಲಾಗಿದೆ.
ಈ ಕಾವ್ಯದಲ್ಲಿ ಹೂವಿನ ವ್ಯಾಪಾರ ನಡೆಯುತ್ತಿದ್ದ ಬಗೆಗೆ ವಿವರಣೆಗಳಿವೆ. ಈ ರೀತಿ ಮಾರುಕಟ್ಟೆಯಲ್ಲಿ ಹೂವಿನ ವ್ಯಾಪಾರ ನಡೆಯುವುದು ವಿಜಯನಗರ ಕಾಲದಿಂದ ಪ್ರಾಯಶಃ ಆರಂಭವಾಯಿತು ಎಂದು ಚಿಂತಿಸುವಂತೆ ಮಾಡುತ್ತದೆ. ಏಕೆಂದರೆ ವಿಜಯನಗರ ಕಾಲದಲ್ಲಿ ದೇವಾಲಯಕ್ಕೆ ಹೂತೋಟಗಳನ್ನು ರೂಪಿಸಿ ದಾನವಾಗಿ ನೀಡುತ್ತಿದ್ದ ಉಲ್ಲೇಖ ದೊರೆಯುತ್ತದೆ. ಇನ್ನು ಸಾರ್ವಜನಿಕ ಬಳಕೆಗೆ ಕೈತೋಟಗಳು ಖಾಸಗಿಯಾಗಿ ಇದ್ದಿರಬೇಕು. ಆದರೆ ವಿಜಯನಗರವು ಅಂದಿನ ಕಾಲಕ್ಕೆ ಮಹಾನಗರವಾದ ಕಾರಣ ಪ್ರಾಯಶಃ ಸಾರ್ವಜನಿಕ ಬಳಕೆಗೂ ಹೂವನ್ನು ವಿಕ್ರಯಿಸಲು ತೊಡಗಿರಬಹುದು. ವಿಜಯನಗರ ಪೂರ್ವಕಾಲದಲ್ಲಿ ದೇವಾಲಯದ ಬಳಕೆಗೆ ಹೂತೋಟಗಳಿದಿದ್ದು, ಅದಕ್ಕಾಗಿ ನೇಮಕವಾದ ಹೂವಾಡಿಗರಿದ್ದದ್ದು ಬಾದಾಮಿಯ 3ನೇ ಗುಹೆಯ ಶಾಸನ ಮತ್ತು ಹರಿಹರನ ಪುಷ್ಪರಗಳೆಗಳಿಂದ ತಿಳಿದುಬರುತ್ತದೆ.
ಮತ್ತೊಂದು ಗಮನಾರ್ಹ ಅಂಶವೆಂದರೆ ವರ್ತಕರು ತಮ್ಮ ಅಂಗಡಿಗಳಲ್ಲಿ ಜನರ ಗಮನವನ್ನು ಸೆಳೆಯಲು ಆಕರ್ಷಕವಾದ ಹುಡುಗಿಯರನ್ನು ನೇಮಕ ಮಾಡಿಕೊಳ್ಳುತ್ತಿದ್ದದ್ದು. ಇದು ಇಂದಿನ ಕಾಲದ ‘ಸೇಲ್ಸ್ ಗಲ್ರ್ಸ್’ಗಳ ಪರಿಕಲ್ಪನೆಯು ವಿಜಯನಗರ ಕಾಲದ ಹೊತ್ತಿಗೆ ಇದ್ದದ್ದು ತಿಳಿದುಬರುತ್ತದೆ. ಮತ್ತೊಂದು ಗಮನಾರ್ಹ ಅಂಶವೆಂದರೆ ವೇಶ್ಯೆಯರ ವಾಸಸ್ಥಾನ. ಅಂದಿನ ವೇಶ್ಯೆಯರು ಜನಸಾಮಾನ್ಯರ ವಸತಿಯಿಂದ ದೂರವಿರದೆ, ವ್ಯಾಪಾರ ಕೇಂದ್ರಗಳ ಸಮೀಪವಾಗಿಯೇ ತಮ್ಮ ವಾಟಿಕೆಗಳನ್ನು ನಿರ್ಮಿಸಿಕೊಂಡಿರುತ್ತಿದ್ದರು. ಇದು ದೇಶ ವಿದೇಶದಿಂದ ವ್ಯಾಪಾರಾರ್ಥವಾಗಿ ಬರುತ್ತಿದ್ದ ವರ್ತಕರಿಗೆ ಅಗತ್ಯವಾಗಿತ್ತು. ಇಲ್ಲಿಯ ವೇಶ್ಯೆಯರು ವರ್ತಕರಿಗೆ ಕೇವಲ ಒಡನಾಟ ಮಾತ್ರವಲ್ಲದೆ, ವಾಸಕ್ಕೂ ಅನುಕೂಲ ಒದಗಿಸುತ್ತಿದ್ದರು. ಜನಸಾಮಾನ್ಯರಿಗೂ ಯಾತ್ರಾರ್ಥಿಗಳಿಗೂ ಹಲವು ಛತ್ರ ಮತ್ತು ಚಾವಡಿಗಳು ನಿರ್ಮಾಣವಾಗುತ್ತಿದ್ದದ್ದು ತಿಳಿದ ಸಂಗತಿಯೆ. ಅಂದರೆ, ಅಮೂಲ್ಯವಾದ ವಸ್ತುಗಳನ್ನು ವ್ಯಾಪಾರಾರ್ಥವಾಗಿ ತರುತ್ತಿದ್ದ ವರ್ತಕರಿಗೆ ಹೆಚ್ಚು ಏಕಾಂತ ಮತ್ತು ಭದ್ರತೆಯೂ ಗಣಿಕಾಲಯಗಳಲ್ಲಿ ಪರೋಕ್ಷವಾಗಿ ದೊರಕುತ್ತಿದ್ದಿರಬಹುದು. ಈ ಕಾರಣದಿಂದ ವರ್ತಕ ಬೀದಿಗಳ ಸಮೀಪಗಳಲ್ಲಿಯೇ ವೇಶ್ಯೆವಾಸಗಳಿರುವುದು ತಿಳಿದುಬರುತ್ತದೆ. ಈ ಕಾರಣದಿಂದಲೇ ಆಡಳಿತಗಾರರು ವೇಶ್ಯೆಯರಿಂದಲೂ ಸಹ ತೆರಿಗೆಯನ್ನು ಕಟ್ಟಿಸಿಕೊಳ್ಳುತ್ತಿದ್ದರು. ಅಚ್ಯುತರಾಯ ದೇವಾಲಯದ ಮುಂದಿನ ‘ಅಚ್ಯುತ ಬಜಾರ್’ ಬೀದಿಯ ಮತ್ತೊಂದು ತುದಿಯನ್ನು ‘ಸೂಳೆ ಬಜಾರ್’ ಎಂದು ಇಂದಿಗೂ ಗುರುತಿಸುತ್ತಾರೆ.
ಈ ಕಾವ್ಯದಲ್ಲಿ ರತ್ನ ಮತ್ತು ಮುತ್ತುಗಳನ್ನು ಹೊಳಪು ಮಾಡುವ ಅಂಗಡಿಗಳಿದ್ದ ಬಗ್ಗೆ ಉಲ್ಲೇಖವಿದೆ. ಬಹುಶಃ ಇವು ಹಳೆಯ ಒಡವೆಗಳನ್ನು ಹೊಳಪು ಮಾಡುವ ಅಥವಾ ರೂಪಾಂತರ ಮಾಡುವ ಅಂಗಡಿಗಳಿದ್ದಿರಬಹುದು.
ಮೂರನೇ ಸಂಧಿಯ 29ನೇ ಪದ್ಯದಲ್ಲಿ ಇಲ್ಲಿ ಕುಬೇರನಿಗೂ ಸಾಲ ಕೊಡುವಂತಹ ಶ್ರೀಮಂತರಿದ್ದರು ಎಂಬ ವರ್ಣನೆಯಿದ್ದು, ಪ್ರಾಯಶಃ ಅಂದಿನ ಕಾಲಕ್ಕೆ ಇವರು ಬ್ಯಾಂಕರ್‍ಗಳಾಗಿದ್ದಿರಬಹುದು. ವರ್ತಕರಿಗೂ ಮತ್ತು ಕೆಲವೊಮ್ಮೆ ಜನಸಾಮಾನ್ಯರಿಗೂ ದ್ರವ್ಯವನ್ನು ಸಾಲ ಕೊಡುತ್ತಿರಬಹುದು. ಇವರು ಐವತ್ತಾರು ರಾಜ್ಯಗಳ ನಾಣ್ಯಗಳನ್ನು ಕೊಪ್ಪರಿಗೆಗಳಲ್ಲಿ ಸುರಿದುಕೊಂಡು ವಿನಿಮಯ ಮಾಡುತ್ತಿದ್ದರೆಂದು ಹೇಳಲಾಗಿದೆ. ಇದು ಸಮಕಾಲೀನ ವಿದೇಶಿ ವಿನಿಮಯದ ಪೂರ್ವರೂಪವಿದ್ದಿರಬಹುದು. ಭರತ ವರ್ಷದಲ್ಲಿ ಅಂಗ, ವಂಗ, ಕಳಿಂಗ, ಕಾಮರೂಪ, ಇತ್ಯಾದಿ 56 ರಾಜ್ಯಗಳು ಇದ್ದುವೆಂದು ಪುರಾಣಗಳಲ್ಲಿ ಹೇಳಲಾಗಿದೆ. ವಿಜಯನಗರ ಕಾಲದಲ್ಲಿ ಈ 56 ದೇಶಗಳ ಪರಿಕಲ್ಪನೆಯಿದ್ದಿತೋ ಇಲ್ಲವೋ, ಆದರೆ ವಿಜಯನಗರ ಸಾಮ್ರಾಜ್ಯದ ವ್ಯಾಪಾರ ಚಟುವಟಿಕೆಯೊಂದಿಗೆ ನಾನಾ ದೇಶಗಳು ಸಂಪರ್ಕವನ್ನು ಹೊಂದಿದ್ದವು. ಸಮುದ್ರದ ಆಚೆಗೆ ಅಲ್ಲದೆ ಉತ್ತರ ಭಾರತದ ಹಲವು ಭಾಗ ಮತ್ತು ಅರಬ್ ದೇಶಗಳೊಂದಿಗೆ ಸಂಪರ್ಕವಿದ್ದಿತು. ಪ್ರಾಯಶಃ ವಿಜಯನಗರದ ಗದ್ಯಾಣ, ವರಹ, ಇತ್ಯಾದಿ ನಾಣ್ಯಗಳಂತೆ ಉತ್ತರ ಭಾರತ ಮತ್ತು ಇತರ ರಾಜ್ಯಗಳಲ್ಲಿ ಬೇರೆ ನಾಣ್ಯಗಳು ಚಲಾವಣೆಯಲ್ಲಿದ್ದಿರಬಹುದು ಮತ್ತು ಇವೆರಡರ ಮೌಲ್ಯ, ತೂಕ ಇತ್ಯಾದಿಗಳಲ್ಲೂ ವ್ಯತ್ಯಾಸವಿದ್ದಿರಬಹುದು. ಈ ಕಾರಣದಿಂದ ಹೊರದೇಶದ ವ್ಯಾಪಾರಿಗಳು ತಮ್ಮೊಂದಿಗೆ ತಂದ ದ್ರವ್ಯದ ಮೌಲ್ಯವನ್ನು ವಿಜಯನಗರದಲ್ಲಿ ಪ್ರಚಲಿತವಾಗಿದ್ದ ಮೌಲ್ಯಕ್ಕೆ ಮಾರ್ಪಡಿಸಿಕೊಂಡು ಬಳಸುತ್ತಿದ್ದಿರಬಹುದು.
ಮೋಹನ ತರಂಗಿಣಿಯ ಈ ಉಲ್ಲೇಖಗಳಿಗೆ ನಮಗೆ ಹಲವಾರು ವಿದೇಶಿಯ ಪ್ರವಾಸ ಕಥನಗಳು ಮತ್ತು ಪುರಾತತ್ತ್ವ ಉತ್ಖನನಗಳು ಪೆÇೀಷಕವಾಗಿ ದೊರೆತಿವೆ. ಕನಕದಾಸರು ‘ಸೋಮ/ಸೂರ್ಯ’ ಬೀದಿಯೆಂದು ಹೆಸರುಗಳನ್ನು ಉಲ್ಲೇಖಿಸಿರುತ್ತಾರೆ. ಆ ಹೆಸರಿನ ಬೀದಿಗಳು ಇದ್ದವೆಂದು ಅಬ್ದುಲ್ ರಜಾಕನ ಬರವಣಿಗೆಯಲ್ಲಿ ಉಲ್ಲೇಖವಾಗಿದೆ. ಅಲ್ಲದೇ ಅಬ್ದುಲ್ ರಜಾಕನು ವ್ಯಾಪಾರಕೇಂದ್ರಗಳ ಬಳಿಯಿದ್ದ ವೇಶ್ಯಾವಾಟಿಕೆಗಳನ್ನು ಕುರಿತು ಬರೆಯುತ್ತಾನೆ.
ಕನಕದಾಸರು ಮತ್ತು ವಿದೇಶ ಪ್ರವಾಸಿಗಳು, ಬಹುತಳ ಅಂತಸ್ತಿನ ಭವನಗಳು, ಅಂದರೆ ಮಹಡಿ ಮನೆಗಳ ಬಗ್ಗೆ ವಿವರಗಳನ್ನು ಕೋಡುತ್ತಾರೆ. ಇತ್ತೀಚಿನ ಪುರಾತತ್ತ್ವ ಉತ್ಖನನಗಳಲ್ಲಿ ಎರಡು ಅಂತಸ್ತಿನ ಹಲವಾರು ಮಂಟಪಗಳ ಸಾಲು ವಿರೂಪಾಕ್ಷ ಬಜಾರ್, ವಿಠಲಾಪುರ ಬಜಾರ್ ಮತ್ತು ಅಚ್ಯುತರಾಯ ಬಜಾರಗಳಲ್ಲಿ ಬೆಳಕಿಗೆ ಬಂದಿದೆ.
ಒಟ್ಟಾರೆ ಪುರಾತತ್ತ್ವ ಸಂಶೋಧನೆ ಮತ್ತು ವಿದೇಶಿ ಪ್ರವಾಸ ಕಥನಗಳೊಂದಿಗೆ ಸ್ಥಳೀಯ ಸಾಹಿತ್ಯವು ಪೂರಕ ಮಾಹಿತಿಯನ್ನು ಒದಗಿಸಿರುವುದು ಇಲ್ಲಿ ಗಮನಾರ್ಹ.
[ಈ ಲೇಖನವನ್ನು ಸಿದ್ದಪಡಿಸಲು ನನಗೆ ನೆರವಾಗಿ ಮಾರ್ಗದರ್ಶನವಿತ್ತ ನನ್ನ ಗುರುಗಳಾದ ಡಾ. ಜಿ. ಮನೋಜ್ ಮತ್ತು ಡಾ. ಟಿ.ವಿ. ನಾಗರಾಜ್‍ಗೆ ನಾನು ಆಭಾರಿಯಾಗಿದ್ದೇನೆ.]
ಆಧಾರಸೂಚಿ
1. ಮೋಹನ ತರಂಗಿಣಿ, ಗದ್ಯಾನುವಾದ, ಡಾ. ಎಸ್.ಎಸ್. ಕೋತಿನ, ಕನ್ನಡ ಸಾಹಿತ್ಯ ಪರಿಷತ್.
2. ಇತಿಹಾಸ ದರ್ಶನ, ಸಂಪುಟ 16, `ವಿಜಯನಗರ ಕಾಲದ ಸಂತೆಗಳು’, ಎಂ.ಬಿ. ಪಾಟೀಲ್.
3. ಕರ್ನಾಟಕ ಜನಜೀವನ, ಬೆಟೆಗೇರಿ ಕೃಷ್ಣಶರ್ಮ.
4. ಪ್ರವಾಸಿ ಕಂಡ ವಿಜಯನಗರ, ಸಂಪಾದಕರು, ಡಾ. ಬಿ.ಎ. ವಿವೇಕ ರೈ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
# 26, `ನೇಸರ’, ನಾಲ್ಕನೇ ಮುಖ್ಯರಸ್ತೆ, ನಾಲ್ಕನೇ ಅಡ್ಡರಸ್ತೆ, ಮುನಿಕೊಂಡಪ್ಪ ಬಡಾವಣೆ, ಬಾಗಲಗುಂಟೆ, ಬೆಂಗಳೂರು-560073.
No comments:
Post a Comment