Saturday, July 12, 2014

ಚನ್ನಪಟ್ಟಣ ತಾಲ್ಲೂಕಿನ ಐತಿಹಾಸಿಕ ನೆಲೆಗಳು


ಚನ್ನಪಟ್ಟಣ ತಾಲ್ಲೂಕಿನ ಐತಿಹಾಸಿಕ ಮಹತ್ವದ ನೆಲೆಗಳು

ಎ.ಎಸ್. ಮಹೇಂದ್ರಕುಮಾರ್ ಅಕ್ಕೂರ
ಚನ್ನಪಟ್ಟಣ
ಚನ್ನಪಟ್ಟಣವೂ ಮೈಸೂರು-ಬೆಂಗಳೂರು ರಾಜ್ಯ ಹೆದ್ದಾರಿಯಲ್ಲಿ ಬರುವ ಪ್ರಮುಖ ಐತಿಹಾಸಿಕ ಮಹತ್ವ ಪಡೆದ ನಗರವಾಗಿದೆ. 1873’ರಲ್ಲಿ ಚನ್ನಪಟ್ಟಣವೂ ಕ್ಲೋಸ್ ಪೇಟೆ (ಇಂದಿನ ರಾಮನಗರ) ತಾಲ್ಲೂಕಿನ ಉಪತಾಲ್ಲೂಕು ಆಗಿತ್ತು. ನಂತರದ ಬೆಳವಣಿಗೆಯಲ್ಲಿ ಚನ್ನಪಟ್ಟಣವು 1892ರಲ್ಲಿ ಪೂರ್ಣ ತಾಲ್ಲೂಕು ಆಗಿ ರೂಪುಗೊಂಡಿದ್ದಲ್ಲದೆ ಇಂದಿನ ರಾಮನಗರ ತಾಲ್ಲೂಕು, ಚನ್ನಪಟ್ಟಣದ ಉಪ ತಾಲ್ಲೂಕು ಆಗಿ ಮಾಡಲಾಯಿತು. ಚನ್ನಪಟ್ಟಣಕ್ಕೆ ಮೊದಲಿದ್ದ ಹೆಸರು `ಚಂದದ ಪಟ್ಟಣ’, `ಚಂದಾಪುರ’ ಎಂದು ಕರೆಯುತ್ತಿದ್ದರು ಎಂದು ಇತಿಹಾಸದ ದಾಖಲೆಯಿಂದ ತಿಳಿದುಬರುತ್ತದೆ. ಈ ನಗರವನ್ನು ಕರ್ನಾಟಕದ ಪ್ರಸಿದ್ಧ ರಾಜವಂಶಗಳಾದ ಹೊಯ್ಸಳರು, ಗಂಗರಸರು, ಚೋಳರು, ವಿಜಯನಗರದ ಅರಸರು ಹಾಗೂ ಮೈಸೂರು ಅರಸರು, ಕೆಲವು ಸಮಯ ಮರಾಠರು, ಟಿಪ್ಪು ಮತ್ತು ಹೈದರಾಲಿಯ ಆಳ್ವಿಕೆಗೂ ಸೇರಿತು ಎಂದು ತಿಳಿದುಬರುತ್ತದೆ.
1534ರಲ್ಲಿ ತಿಮ್ಮಪ್ಪಯ್ಯ (1534-1670) ಇವರ ವಂಶಸ್ಥರ ಆಳ್ವಿಕೆಗೆ ಒಳಪಟ್ಟಿತ್ತು. ತದನಂತರ 1580ರಲ್ಲಿ ಈ ವಂಶದ ಶ್ರೀ ಜಗದೇವರಾಯರು ಈ ನಗರಕ್ಕೆ ಕೋಟೆಯನ್ನು ಕಟ್ಟಿಸಿದರು. ಇವರು ವಿಜಯನಗರ ಅರಸರ ಸಾಮಂತರಾಗಿದ್ದು, 1630ರಲ್ಲಿ ಮೈಸೂರು ಅರಸು ಶ್ರೀ ಚಾಮರಾಜ ಒಡೆಯರ್ ಆಳ್ವಿಕೆಗೆ ಒಳಪಟ್ಟಿತು. ತದ ನಂತರದ ಸಮಯದಲ್ಲಿ ಮರಾಠರ ಶ್ರೀ ಗೋಪಾಲಹರಿಯ ಆಕ್ರಮಣಕ್ಕೆ ಒಳಗಾಗಿತ್ತು ಎಂದು ಇತಿಹಾಸ ತಿಳಿಸುತ್ತದೆ. ಹೈದರಾಲಿಯ ಈ ಒಂದು ಆಕ್ರಮಣವನ್ನು ಮುಕ್ತಗೊಳಿಸಿದನೆಂದು 1970ರಲ್ಲಿ ಟಿಪ್ಪು ಈ ನಗರವನ್ನು ಆಳ್ವಿಕೆಯ ಸಮಯದಲ್ಲಿ ಮದ್ದುಗುಂಡು ಸಂಗ್ರಹಿಸುವ ಆಯುಧಗಾರವಾಗಿ ಈ ನಗರವನ್ನು ಆಯ್ಕೆ ಮಾಡಿಕೊಂಡಿದ್ದು, ಮುಂದೆ ಮೈಸೂರು ಅರಸರು ದಿವಾನ್ ಪೂರ್ಣಯ್ಯನವರ ಆಳ್ವಿಕೆಗೂ ಒಳಪಟ್ಟಿತು ಎಂದು ತಿಳಿದುಬರುತ್ತದೆ.
ತಿಮ್ಮಪ್ಪರಾಜೇ ಅರಸು ಅರಮನೆ ಎಂಬ ಒಂದು ಹಳೆಯ ಕಾಲದ ಅರಮನೆ ಇತ್ತು. ಈ ಕಟ್ಟಡವನ್ನು ತಾಲ್ಲೂಕಿನ ಕಚೇರಿ ಎಂದು ತಾಲ್ಲೂಕಿನ ಜನರು ಗುರುತಿಸುತ್ತಿದ್ದರು. ಈ ಕಟ್ಟಡಕ್ಕೆ ಸಂಬಂಧಿಸಿದ ಹಳೆಯ ಐತಿಹಾಸಿಕ ವಸ್ತುಗಳನ್ನು ಜನಪದ ವಸ್ತುಸಂಗ್ರಹಾಲಯದಲ್ಲಿ ಸಂಗ್ರಹಿಸಿ ಇಡಲಾಗಿದೆ. ಹಿಂದೆ ಚನ್ನಪಟ್ಟಣ ವೀಣೆಯ ತಂತಿಯ ತಯಾರಿಕೆಯಲ್ಲಿ ಹಾಗೂ ಚಂದನದ ಗೊಂಬೆಯನ್ನು ತಯಾರಿಸುವ ಕೆಲಸದಲ್ಲಿ ಬಹಳ ಪ್ರಸಿದ್ಧಿ ಪಡೆದಿತ್ತು ಎಂದು `ಚಂದನದ ಗೊಂಬೆ’ಯ ತಯಾರಿಕೆ ಮಾರುತ್ತಿದ್ದುದರಿಂದ ಚನ್ನಪಟ್ಟಣ ಎಂದು ಹೆಸರು ಬರಲು ಮತ್ತೊಂದು ಕಾರಣ ಎಂಬ ಇತಿಹಾಸವಿದೆ. ಇದು ಸಹ ಸಾಂಪ್ರದಾಯಿಕ ಗೊಂಬೆಯ ಬದಲಾಗಿ ಇತರೆ ಕರಕುಶಲ ಗೊಂಬೆ ತಯಾರಿಕೆಯಲ್ಲಿ ವಿಶ್ವ ಭೂಪಟದಲ್ಲಿ ಅಗ್ರಗಣ್ಯವಾದ ಸ್ಥಾನವನ್ನು ಪಡೆದಿದ್ದು ಇಂದಿಗೂ ತನ್ನ ಸ್ಥಾನವನ್ನು ಉಳಿಸಿಕೊಂಡು ಬರುತ್ತಿವೆ. ಚನ್ನಪಟ್ಟಣ ಶ್ರೀ ವರದರಾಜ ದೇವಾಲಯ, ಶ್ರೀ ಕೋಟೆಮಾರಮ್ಮನವರ ದೇವಸ್ಥಾನ, ಶ್ರೀ ಕಾಶಿವಿಶ್ವೇಶ್ವರ ದೇವಸ್ಥಾನಗಳು ಪ್ರಮುಖ ಸ್ಥಾನ ಪಡೆದಿರುತ್ತವೆ. ಶ್ರೀ ವರದರಾಜಸ್ವಾಮಿ ದೇವಾಲಯವು ವೈಷ್ಣವಮತ ಸ್ಥಾಪಕರಾದ ಶ್ರೀ ರಾಮಾನುಜಾಚಾರ್ಯರ ಕಾಲದಲ್ಲಿ ನಿರ್ಮಾಣವಾಗಿರಬಹುದೆಂದು ತಿಳಿದುಬರುತ್ತದೆ. ತದನಂತರದ ಸಮಯದಲ್ಲಿ ಕೆಲವು ಭಾಗಗಳನ್ನು ವಿಜಯನಗರ ಆಳ್ವಿಕೆಯ ಕಾಲದಲ್ಲಿ ನಿರ್ಮಾಣವಾಯಿತು ಎಂದು ತಿಳಿದುಬರುತ್ತದೆ. ಸುಂದರವಾದ ಮುಖಮಂಟಪ ಸುಖಾಸೀನ ಗರ್ಭಗೃಹವನ್ನು ಹೊಂದಿದ್ದು, ಇದು ದ್ರಾವಿಡನ್ ಶೈಲಿಯನ್ನು ಹೊಂದಿದೆ. ದೇವಸ್ಥನದ ಕಂಬದ ಮೇಲೆ ಸುಂದರ ದಶಾವತಾರ ಚಿತ್ರಗಳು, ವಿಷ್ಣುಪುರಾಣದ ಚಿತ್ರಗಳನ್ನು ಬಹಳ ಸೂಕ್ಷ್ಮವಾಗಿ ಚಿತ್ರಿಸಲಾಗಿದೆ. ವಸಂತೋತ್ಸವ ಮಂಟಪ, ಕಲ್ಯಾಣ ಮಂಟಪ, ನಮ್ಮಳ್ವಾರ್ ಮಂಟಪಗಳು, ಶ್ರೀ ರಾಮಾನುಜಾಚಾರ್ಯರ ವಿಗ್ರಹ, ಎಡಕ್ಕೆ ಶ್ರೀ ಸೌಮ್ಯನಾಯಕಿ ಅಮ್ಮನವರ ಗುಡಿ ಸಹ ಇದೆ. ಈ ದೇವಾಲಯಕ್ಕೆ ಅನತಿ ದೂರದಲ್ಲಿ ಶ್ರೀ ಪ್ರಸನ್ನರಾಮ ದೇವಸ್ಥಾನವಿದೆ. ಈ ಮಂದಿರವು ಮೈಸೂರು ಅರಸರ ಶೈಲಿಯನ್ನು ಹೋಲುತ್ತದೆ.
ಸಮೀಪದಲ್ಲಿ ಇರುವ ಶ್ರೀ ವ್ಯಾಸರಾಜ ಮಠ, ಕುಂದಾಪುರ ಸಂಸ್ಥಾನಕ್ಕೆ ಒಳಪಟ್ಟಿದ್ದು, ಈ ಮಠವು ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಈ ಮಠದಲ್ಲಿ ಶ್ರೀ ವ್ಯಾಸರಾಜರು ಶ್ರೀನಿವಾಸದೇವರನ್ನು ಪ್ರತಿಷ್ಠಾಪಿಸಿದ್ದಾರೆ. ಈ ಮಠದ ಒಳಭಾಗದಲ್ಲಿ ವಿಜಯನಗರ ಸಾಮ್ರಾಜ್ಯದ ಎರಡು ಧ್ರುವತಾರೆಗಳಾದ ಶ್ರೀ ವ್ಯಾಸರಾಯರಿಗಾಗಿ ಶ್ರೀ ಪುರಂದರದಾಸರು ತಮ್ಮ ನೆಚ್ಚಿನ ಗುರುಗಳಿಗಾಗಿ ಪೂಜಾಮಂಟಪ ಒಂದನ್ನು ತಮ್ಮ ಗೋಪಾಲವೃತ್ತಿಯಿಂದ ಅರ್ಜಿಸಿದ ಸಂಪತ್ತಿನಿಂದ ಒಂದು ಪೂಜಾಮಂಟಪ ಕಟ್ಟಿಸಿ ಕೊಟ್ಟಿದ್ದಾರೆ. ಇದನ್ನು ಪುರಂದರ ಮಂಟಪ ಎಂದು ಇಂದಿಗೂ ಸಹ ಕರೆಯುತ್ತಾರೆ. ಶ್ರೀ ವರದರಾಜಸ್ವಾಮಿ ದೇವಸ್ಥಾನದ ಸಮೀಪದಲ್ಲಿ ಇರುವ ಶ್ರೀ ಆಂಜನೇಯ ಗುಡಿ ಇದ್ದು, 1553ರಲ್ಲಿ ರಚನೆಯಾದಂತೆ ಕಂಡುಬರುತ್ತದೆ. ಇಲ್ಲಿನ ಒಂದು ಶಾಸನವು ಸದಾಶಿವರಾಯನ ಬಗ್ಗೆ ತಿಳಿಸುತ್ತದೆ. ಇದಲ್ಲದೆ ಗರುಡಗಂಬ ಬೀದಿಯಲ್ಲಿರುವ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನ ಮತ್ತು ಶ್ರೀ ನೀಲಕಂಠೇಶ್ವರ ದೇವಾಲಯವು ಬಹಳ ಪ್ರಸಿದ್ಧಿ ಪಡೆದಿದೆ. ಈ ದೇವಾಲಯವು ಜಗದೇವರಾಯನ ಕಾಲದಲ್ಲಿ ನಿರ್ಮಾಣವಾಯಿತು ಎಂದು ಐತಿಹ್ಯ ಹೇಳುತ್ತದೆ. ಶ್ರೀ ಸುಗ್ರೀವಸ್ವಾಮಿ ಮಂದಿರವು ಬಹಳ ಅಪರೂಪವಾದ ದೇವಾಲಯವಾಗಿದ್ದು ಈ ಹೆಸರಿನ ದೇವಾಲಯವು ಕಂಡುಬರುವುದು ವಿಶೇಷವಾಗಿದೆ. ಮತ್ತು ಶ್ರೀ ಕಾಳಿಕಾಂಬ ಮಂದಿರ ಹಾಗೂ ಶ್ರೀರಾಮಮಂದಿರಗಳು ಒಳಗೊಂಡಿವೆ. ಹಾಗೂ ಚನ್ನಪಟ್ಟಣ ನಗರಪ್ರದೇಶದಲ್ಲಿ ಮುಸಲ್ಮಾನರು ಹೆಚ್ಚಿನ ಸಂಖ್ಯೆಯಲ್ಲಿ ಹೈದರಾಲಿ ಕಾಲದಲ್ಲಿ ಬಂದು ನೆಲೆಸಿದ್ದಾರೆ ಎಂಬ ಅಂದಾಜಿದೆ. ನಗರದ ಪೂರ್ವಭಾಗದಲ್ಲಿ ದಾರೆಕೇರಿ, ಸೈಯದ್‍ವಾಡಿ, ಮಕಾನ್ ಮತ್ತು ಕೋಟೆಯ ಕೆಲವು ಪ್ರದೇಶದಲ್ಲಿ ಮಹಮದೀಯರು, ಶಿಯಾ, ಸುನ್ನಿ ಎಂಬ ಮಹಮದಿಯಾ ಪಂಗಡದವರು ನೆಲೆಸಿದ್ದಾರೆ.
ಮಸೀದಿ ಮತ್ತು ದರ್ಗಾಗಳು ಸೇರಿ ಸುಮಾರು 20 ಪ್ರಾರ್ಥನೆಯ ಮಂದಿರಗಳು ಇರುತ್ತವೆ. ಟಿಪ್ಪುಸುಲ್ತಾನರ ಗುರುವಿನ ಸಮಾಧಿಯು ಬೆಂಗಳೂರು-ಮೈಸೂರು ರಸ್ತೆಯಲ್ಲಿ ಇದ್ದು, ಪ್ರತಿವರ್ಷ ಈ ಜಾಗದಲ್ಲಿ `ಉರುಸ್’ ನಡೆಯುತ್ತದೆ. ಸಾವಿರಾರು ಜನರು ಭಾಗವಹಿಸುತ್ತಾರೆ. ಈ ಒಂದು ನಗರದಲ್ಲಿ ಒಂದು ವೀರಶೈವ ಮಠ ಸಹ ಕುಡಿಯುವ ನೀರಿನ ಕಟ್ಟೆಯ ಹತ್ತಿರ ಇರುತ್ತದೆ. ಈ ಊರಿನ ಸಾಮೂಹಿಕ ಆಚರಣೆಯ ಹಬ್ಬವೆಂದರೆ `ಕಾಮನ ಹುಣ್ಣಿಮೆ’. ಈ ತಾಲ್ಲೂಕಿನ ಪ್ರಮುಖ ಉತ್ಸವವಾಗಿದ್ದು, ನಗರದಲ್ಲಿ 10 ದಿವಸಗಳ ಕಾಲ ಆಚರಿಸಲಾಗುತ್ತದೆ. ಈ ತಾಲ್ಲೂಕಿನ ಪ್ರಮುಖ ಉತ್ಸವವಾಗಿದ್ದು, ನಗರದಲ್ಲಿ 10 ದಿವಸಗಳ ಕಾಲ ಆಚರಿಸಲಾಗುತ್ತದೆ. ಈ ತಾಲ್ಲೂಕಿನ ಇತರೆ ಐತಿಹಾಸಿಕ ನೆಲೆಗಳನ್ನು ಪರಿಶೀಲಿಸೋಣ.
ದೇವರ ಹೊಸಹಳ್ಳಿ
ದೇವರ ಹೊಸಹಳ್ಳಿ ತಾಲ್ಲೂಕಿನ ಪ್ರಮುಖ ಧಾರ್ಮಿಕ ವೈಷ್ಣವ ಕ್ಷೇತ್ರವಾಗಿದ್ದು, ವಿಜಯನಗರ ಕಾಲದಲ್ಲಿ ನಿರ್ಮಾಣವಾದ ದೇವಸ್ಥಾನವೆಂದು ತಿಳಿದುಬರುತ್ತದೆ. ಮೊದಲಿಗೆ ಈ ದೇವಸ್ಥಾನಕ್ಕೆ ಪ್ರಸನ್ನ ಆಂಜನೇಯ ದೇವಸ್ಥಾನವೆಂದು ಕರೆಯುತ್ತಿದ್ದು, ಶ್ರೀ ವ್ಯಾಸರಾಯರು ಸ್ಥಾಪಿಸಿದ ದೇವಸ್ಥಾನ ಎಂದು ಇತಿಹಾಸ ಹೇಳುತ್ತದೆ. ಇಲ್ಲಿ ಹನುಮಂತ ಮೂರ್ತಿಯು ತುಂಬಾ ಸುಂದರವಾಗಿದ್ದು, ಸುಮಾರು 1.5 ಮೀಟರ್ ಎತ್ತರವಿದ್ದು, ಬಾಲದಲ್ಲಿ ಘಂಟೆ ಇರುವುದರಿಂದ ಶ್ರೀ ವ್ಯಾಸರಾಯರ ಸ್ಥಾಪನೆ ಎಂದು ತಿಳಿಯುತ್ತದೆ. ವಿಜಯನಗರ ಕಾಲದ ಲಾಂಛನವನ್ನು ಇಲ್ಲಿನ ದೇವಾಲಯದ ಕಂಬದ ಮೇಲೆ ಇಂದು ಸಹ ನೋಡಬಹುದಾಗಿದೆ. ಈ ಕ್ಷೇತ್ರದಲ್ಲಿ ಧ್ಯಾನ ಫಲಪ್ರದ ಮತ್ತು ಮಾನಸಿಕ ರೋಗಿಗಳಿಗೆ ಉತ್ತಮವಾದ ಚಿಕಿತ್ಸೆ ರೂಪದಲ್ಲಿನ ತೀರ್ಥವು ಸಿದ್ಧೌಷಧಿಯಾಗಿದ್ದು, ಆದ್ದರಿಂದ ಈ ದೇವರಿಗೆ ಸಂಜೀವ ರಾಯಸ್ವಾಮಿ ಎಂದು ಹೆಸರು ಬಂದಿದೆ ಎಂದು ಇತಿಹಾಸ ಹೇಳುತ್ತದೆ. ಆಷಾಢ ಮಾಸದಲ್ಲಿ ನಡೆಯುವ ಜಾತ್ರೆಗೆ ಹೊಸದಾಗಿ ವಿವಾಹವಾದ ವಧು-ವರರು ಹೆಚ್ಚಾಗಿ ಬರುವುದು ಈ ಜಾತ್ರೆಯ ವಿಶೇಷವಾಗಿದೆ, ತಾಲ್ಲೂಕಿನ ಧಾರ್ಮಿಕ ಜಾಗೃತ ಕ್ಷೇತ್ರವಾಗಿದ್ದು ತನ್ನದೇ ಆದ ಬಹಳ ಪ್ರಸಿದ್ಧಿಯನ್ನು ಪಡೆದ ಕ್ಷೇತ್ರವಾಗಿದೆ ಹಾಗೂ ಈ ಮೂರ್ತಿಯನ್ನು ನೋಡಿದ ಪುರಂದರದಾಸರು ಈ ಕ್ಷೇತ್ರಕ್ಕೆ ಭೇಟಿ ನೀಡಿ ಈ ಕೆಳಗಿನ ಕೀರ್ತನೆಯನ್ನು ರಚಿಸಿದರೆಂಬ ಅಭಿಪ್ರಾಯವಿದೆ ``ಅಂಜಿಕೆ ಇನ್ನು ಏತಕ್ಕಯ ಭಯವು ಇನ್ನು ಯಾತಕಯ್ಯ ಸಂಜೀವರಾಯನ ನೆನೆದ ಮೇಲೆ’’ ಎಂಬ ಕೀರ್ತನೆ ರಚಿಸಿದ್ದಾರೆಂಬ ಹಾಗೂ ದೊಡ್ಡಮಳೂರಿನ ಶ್ರೀ ರಾಮಾಪ್ರಮೇಯ ಮತ್ತು ಅಂಬೆಗಾಲು ಕೃಷ್ಣನ ದೇವಸ್ಥಾನಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲೇ ಇಲ್ಲಿಗೂ ಭೇಟಿ ಕೊಟ್ಟು ಮೇಲಿನ ಕೀರ್ತನೆಯನ್ನು ರಚಿಸಿದ್ದಾರೆಂಬ ಅಭಿಪ್ರಾಯವಿದೆ.
ದೊಡ್ಡ ಮಳೂರು
ದೊಡ್ಡ ಮಳೂರು ಮತ್ತೊಂದು ಪ್ರಸಿದ್ದಿ ಪಡೆದಿರುವ ವೈಷ್ಣವ ಕ್ಷೇತ್ರವೂ ಹೌದು. ಮತ್ತು ಶೈವಕ್ಷೇತ್ರವು ಆಗಿ ಐತಿಹಾಸಿಕವಾಗಿ ಮಹತ್ವಪೂರ್ಣ ಚೋಳರ ಕಾಲದಲ್ಲಿ ಪೆರಿಯಾ ಮಾಳೂರು ಎಂದು ಮಾಲಲೂರು, ಮೂಲವೂರು, ಮಾಳೆತೂರು, ರಾಜೇಂದ್ರ ಸಿಂಹಪುರ, ಚತುರ್ವೇದ ಮಂಗಳಪುರ, ಜ್ಞಾನಮಂಟಪಕ್ಷೇತ್ರ, ತೆಂಕಣಯೋಧ್ಯ, ಪಂಚಕೇಶನಗರ, ಭಕ್ತಿವೃದ್ದಿ ವಿಮಾನಪುರ, ಧರ್ಮವೃದ್ದಿ ಕ್ಷೇತ್ರ ಎಂಬ ಹೆಸರುಗಳಿಂದ ಕರೆಸಿಕೊಂಡಿರುವ ಕ್ಷೇತ್ರವಾಗಿದೆ.
ಚೋಳರ ಕಾಲದಲ್ಲಿ ಶ್ರೀ ಅಪ್ರಮೇಯಸ್ವಾಮಿ ಮಂದಿರ ನಿರ್ಮಾಣವಾಯಿತೆಂದು ತದನಂತರ ಹೊಯ್ಸಳರ ಅರಸರು ವಿಜಯನಗರದ ಅರಸರು ಈ ದೇವಾಲಯಕ್ಕೆ ಹೆಚ್ಚಿನ ಉತ್ತೇಜನ ನೀಡಿ ದೇವಾಲಯವನ್ನು ಅಭಿವೃದ್ಧಿಪಡಿಸಿದರೆಂದು ತಿಳಿದುಬರುತ್ತದೆ. ಶ್ರೀ ರಾಮಾನುಜಾಚಾರ್ಯರು ಈ ದೇವಾಲಯದಲ್ಲಿ ಒಂದು ವಾರ ತಾತ್ಕಾಲಿಕ ವಾಸ್ತವ್ಯ ಇದ್ದಾರೆಂದು ಐತಿಹ್ಯ ಹೇಳುತ್ತದೆ. ಈ ದೇವಾಲಯದಲ್ಲಿ ಇರುವ ಸಾಲಿಗ್ರಾಮ ಶಿಲೆಯ ಅಂಬೆಗಾಲಿನ ಶ್ರೀ ಕೃಷ್ಣನ ಮೂರ್ತಿಯನ್ನು ಶ್ರೀ ವ್ಯಾಸರಾಯರು ಸ್ಥಾಪಿಸಿದರು ಎಂದು ಈ ಕೃಷ್ಣನ ಚೆಲುವನ್ನು ನೋಡಿ ಶ್ರೀ ಪುರಂದರದಾಸರು ಈ ದೇವಾಲಯಕ್ಕೆ ಭೇಟಿ ನೀಡಿ `ಆಡಿಸಿದಳೇ ಯಶೋಧೆ ಜಗದೋದ್ದಾರನ’ ಎಂಬ ಕೀರ್ತನೆಯನ್ನು ರಚಿಸಿದರು ಎಂದು ತಿಳಿದುಬರುತ್ತದೆ. ಶ್ರೀ ರಾಮಾಪ್ರಮೇಯಸ್ವಾಮಿಯ ಸುಂದರ ಭವ್ಯ ದೇವಾಲಯದ ನೆಲೆಯಲ್ಲಿ ಯಾಜ್ಞವಲ್ಕ್ಯ ಸ್ಮ ೃತಿಗೆ ವಿಜ್ಞಾನೇಶ್ವರನೆಂಬ ಕವಿಯು ಸಾಹಿತ್ಯ ರಚನೆಯು ಕನ್ನಡ ನೆಲದಲ್ಲಿ ನಡೆಯಿತು ಎಂಬ ಅಭಿಪ್ರಾಯವಿದೆ. ಇದಲ್ಲದೆ ಸಾರಂಗಧರ, ಕಣ್ವಮಹರ್ಷಿಗಳು ಈ ನೆಲದಲ್ಲಿ ಕನಕಪುರಂದರ ರಾಮಾನುಜರು, ವ್ಯಾಸರು ತುಳಿದು ಪಾವನಗೊಳಿಸಿದ್ದು ವೈಷ್ಣವ ಆರಾಧನ ಪದ್ಧತಿಗೂ ತನ್ನದೇ ಆದಂತಹ ಒಂದು ಭದ್ರ ಬುನಾದಿ ನೀಡಿದ ಕ್ಷೇತ್ರವೆಂದು ಹೇಳಬಹುದು. ಈ ಊರು ಶೈವಕ್ಷೇತ್ರವೂ ಹೌದು, ವೈಷ್ಣವ ಕ್ಷೇತ್ರವೂ ಹೌದು ಎಂಬುದಕ್ಕೆ. ಈ ಊರಿನಲ್ಲಿ ಶೈವ ಮಂದಿರಗಳಾದ ಶ್ರೀ ಕೈಲಾಸೇಶ್ವರ ದೇವಸ್ಥಾನ ಕ್ರಿ.ಶ.1000 ಚೋಳರ ಕಾಲದಲ್ಲಿ ನಿರ್ಮಾಣವಾಗಿದ್ದು, ಇದಲ್ಲದೆ ಕಲ್ಲಿನಾಥೇಶ್ವರ, ಶ್ರೀಮುಕ್ತನಾಥೇಶ್ವರ, ಶ್ರೀ ಜಲಕಂಠೇಶ್ವರ ದೇವಸ್ಥಾನಗಳೆಂದು ನಾಲ್ಕು ದಿಕ್ಕಿನಲ್ಲಿ ನಾಲ್ಕು ಸರೋವರಗಳನ್ನು ಹೊಂದಿದ್ದು, ಪುಣ್ಯಸ್ನಾನಕ್ಕೆ ಹೇಳಿ ಮಾಡಿಸಿದ ಕ್ಷೇತ್ರವಾಗಿದೆ.
ಮಂಕುಂದ
ಗಂಗರ ರಾಜಧಾನಿ ನಗರವಾಗಿದ್ದು, ಈ ನೆಲಕ್ಕೆ ಮಾನ್ಯಪುರ ಎಂದು ಕರೆಯುತ್ತಿದ್ದರು ಎಂದು ಐತಿಹ್ಯವಿದೆ. ಈ ಸ್ಥಳದಲ್ಲಿ ಗಂಗರ ಭೂವಿಕ್ರಮ ಮತ್ತು ಶಿವಮಾರ ಇವರ ಆಳ್ವಿಕೆ ಕಾಲದಲ್ಲಿ ಮುಖ್ಯ ಪಟ್ಟಣವಾಗಿದ್ದ ಸ್ಥಳವಾಗಿದೆ.  ನಂತರ ಚೋಳರ ಆಳ್ವಿಕೆಯಲ್ಲಿ ಸರ್ವನಾಶವಾದ ಸ್ಥಳವಾಗಿದೆ.
ಈ ಸ್ಥಳದಲ್ಲಿ ಶ್ರೀ ವೀರಭದ್ರಸ್ವಾಮಿ, ಶ್ರೀ ಆಂಜನೇಯಸ್ವಾಮಿ ಶ್ರೀ ಸೋಮೇಶ್ವರ ದೇವರುಗಳ ಮಂದಿರಗಳಿವೆ. ಹಳೆಯ ಮೈಸೂರು ಮಾದರಿಯಲ್ಲಿ ವೀರಭದ್ರನ ದೇವಸ್ಥಾನವಿದ್ದು, ಇದೀಗ ನವೀಕರಿಸಲಾಗಿದೆ. ದೇವಸ್ಥಾನದ ಒಳಭಾಗದಲ್ಲಿ ಸೂರ್ಯನ ಮೂರ್ತಿಯಿದೆ. ದಂಡಮ್ಮನ ದೇವಸ್ಥಾನದ ಸಮೀಪ ಗಂಗರ ಕಾಲದ ಶಿಲಾಶಾಸನವಿದ್ದು, ಕ್ರಿ.ಶ.913 ಅದರಲ್ಲಿ ನೀತಿಮಾರ್ಗನ ಉಲ್ಲೇಖಿತವಾಗಿದೆ. ಇದಕ್ಕೆ ದೇಣಿಗೆಯಾಗಿ 2 ಹಳ್ಳಿಗಳಾದ ಕೂಡ್ಲೂರು ಹಾಗೂ ಬೊಲರಿಯಾರು ಕಂದಾಯವನ್ನು ಇಲ್ಲಿಗೆ ನೀಡುವಂತೆ ತಿಳಿಸಿರುವಂತೆ ದಾಖಲೆ ಇದೆ. ಸೋಮೇಶ್ವರ ದೇವಾಲಯದಲ್ಲಿ ಗರ್ಭಗೃಹ ಮತ್ತು ಚಿಕ್ಕದಾದ ಆರಾಧನಾ ಮಂಟಪವಿದ್ದು, ಬಸವನ ವಿಗ್ರಹವಿದೆ. ಮೂರು ವೀರಗಲ್ಲು ಒಂದು ಮಾಸ್ತಿಕಲ್ಲು ಈ ಗ್ರಾಮದಲ್ಲಿ ಕಂಡುಬರುವ ಐತಿಹಾಸಿಕ ದಾಖಲೆ ಆಗಿದೆ.
ಮಳೂರು ಪಟ್ಟಣ
ಈ ಐತಿಹಾಸಿಕ ಸ್ಥಳವು ಕಣ್ವ ನದಿಯ ದಂಡೆಯ ಮೇಲೆ ಇದ್ದು, ಮುಖ್ಯವಾದ ಅಗ್ರಹಾರವಾಗಿತ್ತು. ಹಿಂದೆ ಚೋಳರ ಕಾಲದಲ್ಲಿ ಚತುರ್ವೇದಿ ಮಂಗಲಪುರ ಎಂಬ ಹೆಸರು ತಮಿಳು ಭಾಷೆಯ ದಾಖಲೆಯಲ್ಲಿ ಕ್ರಿ.ಶ.1041 ಶ್ರೀ ನಾರಾಯಣಸ್ವಾಮಿ ದೇವಾಲಯದಲ್ಲಿ ಸಿಕ್ಕುತ್ತದೆ. ಇಲ್ಲಿ ಹಲವಾರು ವೀರಗಲ್ಲುಗಳು ದೇವಸ್ಥಾನಗಳಿವೆ. ವಿಜಯನಗರ ಕಾಲಕ್ಕೆ ಸೇರಿದ ಹಲವಾರು ಬರಹಗಳನ್ನು ಕಾಣಬಹುದಾಗಿದೆ. 1763ರಲ್ಲಿ ಹೈದರಾಲಿಯು ಮಳೂರು ಪಟ್ಟಣವನ್ನು ಕಾಣಿಕೆಯಾಗಿ ತನ್ನ ಗುರು `ಫಕೀರಷಾಹಿ ಖಾದರ್’ಗೆ ನೀಡಿದ ದಾಖಲೆ ಸಿಗುತ್ತದೆ. ಈ ಸ್ಥಳದಲ್ಲಿ ಶ್ರೀ ನಾರಾಯಣಸ್ವಾಮಿ, ಶ್ರೀ ಅಮೃತೇಶ್ವರ, ಶ್ರೀ ವರದರಾಜ, ಶ್ರೀ ಚೌಡೇಶ್ವರಿ ಅಮ್ಮನವರ ಹಾಗೂ ಒಂದು ಶಿವ ದೇವಾಲಯವು ಇದ್ದು ಈ ದೇವಸ್ಥಾನಕ್ಕೆ ಶ್ರೀ ಅಮೃತೇಶ್ವರ ದೇವಸ್ಥಾನವೆಂದು ಕರೆಯುತ್ತಾರೆ ಈ ಮಂದಿರವನ್ನು ಗಂಗರ ಕಾಲದ ನಿರ್ಮಾಣದಂತೆ ಕಂಡುಬರುತ್ತದೆ. ಚೋಳ ದಾಖಲೆಯ ಪ್ರಕಾರ `ಆರು ಮಾಳೇದೇಶ್ವರಂ’ ಎಂದು ಇರುತ್ತದೆ. `ಆರು ಮಾಳಬರ ಉದಯನ್’ ಎಂದು ನಂತರ ಸ್ಥಳೀಯರ ಬಾಯಿಂದ ಅಮೃತೇಶ್ವರ ಎಂದು ಕರೆಯಲು ಪ್ರಾರಂಭಿಸಿದರು. ಈ ದೇವಸ್ಥಾನದ ಮುಂದಿನ ಭಾಗವನ್ನು ಹೊಯ್ಸಳರ ನರಸಿಂಹ ನಿರ್ಮಾಣ ಮಾಡಿಸಿದನು. ಈ ದೇವಸ್ಥಾನದ ಬಳಿ ಕ್ರಿ.ಶ.900ರಲ್ಲಿ ಕನ್ನಡದ ಒಂದು ಶಾಸನವಿದೆ. ಶ್ರೀ ಅಮೃತೇಶ್ವರ ದೇವಸ್ಥಾನದ ಹತ್ತಿರ ಇರುವ ಶ್ರೀ ನಾರಾಯಣಸ್ವಾಮಿ ಮಂದಿರದ ಬಳಿ ತಮಿಳು ಶಾಸನ ಇದೆ. ಈ ಶಾಸನವು ಕ್ರಿ.ಶ.1007ರಲ್ಲಿ ರಾಜರಾಜಚೋಳನು ದೇವಸ್ಥಾನದ ನಿರ್ವಹಣೆಗೆ ಬೇಕಾದ ಪೂಜೆಯ ವೆಚ್ಚಕ್ಕೆ ಬೇಕಾದ ಸವಲತ್ತಿನ ಬಗ್ಗೆ ತಿಳಿಸುತ್ತದೆ. ಶ್ರೀ ಚೌಡೇಶ್ವರಿ ದೇವಸ್ಥಾನದ ಹತ್ತಿರ ಮತ್ತೊಂದು ಶಾಸನವಿದ್ದು, ಹಲವು ವೀರಕಲ್ಲುಗಳಿವೆ. ಕ್ರಿ.ಶ.1180ರಲ್ಲಿ ಹೊಯ್ಸಳರ ಎರಡನೇ ಬಲ್ಲಾಳನ ಕಾಲಕ್ಕೆ ಸಂಬಂಧಿಸಿದ್ದು ಎಂದು ತಿಳಿಸುತ್ತದೆ. ಈ ಚೌಡೇಶ್ವರಿ ದೇವಸ್ಥಾನವು ವಿಜಯನಗರ ಕಾಲದ ಶೈಲಿಯನ್ನು ಹೊಂದಿರುತ್ತದೆ. ಈ ದೇವಸ್ಥಾನದಲ್ಲಿ ಭೈರವದುರ್ಗಾ ಮತ್ತು ದ್ವಾರಪಾಲಕರು ಇದ್ದಾರೆ. ಶ್ರೀ ಚಾಮುಂಡಿ ಮೂರ್ತಿ ಸಹ ಈ ದೇವಾಲಯದಲ್ಲಿ ನೋಡಬಹುದಾಗಿದೆ. ಕ್ರಿ.ಶ.1437ರಲ್ಲಿ ದೇವರಾಯ ವಿಜಯನಗರ ಕಾಲದ ಆಳ್ವಿಕೆಗೆ ಸಂಬಂಧಿಸಿದ ವೀರಗಲ್ಲು ಮತ್ತು ಶಾಸನ ಇರುತ್ತದೆ.
ಕೆಂಗಲ್
ಚನ್ನಪಟ್ಟಣ ತಾಲ್ಲೂಕಿನ ಪ್ರಸಿದ್ಧ ವೈಷ್ಣವ ಕ್ಷೇತ್ರ ಬೆಂಗಳೂರು-ಮೈಸೂರು ರಸ್ತೆಯಲ್ಲಿ ಚನ್ನಪಟ್ಟಣದಿಂದ ಮೂರು ಕಿ.ಮೀ. ದೂರದಲ್ಲಿರುವ ಕ್ಷೇತ್ರವಾಗಿದೆ. ಕೆಂಗಲ್ ಆಂಜನೇಯ ಸ್ವಾಮಿಯ ಗುಡಿಯು ಈಗಿನದಾದರೂ ಆಂಜನೇಯಸ್ವಾಮಿ ಮತ್ತು ಈ ಜಾಗ ಪ್ರಾಚೀನವಾದುದೇ. ಕೆಂಪು ಕಲ್ಲಿನ ಬಂಡೆಯೊಂದರಲ್ಲಿ ಶ್ರೀ ವ್ಯಾಸರಾಜರು ಆಂಜನೇಯ ಚಿತ್ರ ಬರೆದು ಪೂಜಿಸಿದರಂತೆ. ವ್ಯಾಸರಾಜರ ಒಟ್ಟು 732 ಆಂಜನೇಯ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿದ್ದು, ಈ ರೇಖಾಚಿತ್ರವು ಶ್ರೀಯವರ ಮೂರ್ತಿಯಾಗಿ ರೂಪ ಪಡೆಯಿತು ಎಂದು ಐತಿಹ್ಯವು ತಿಳಿಸುತ್ತದೆ. ವಿಧಾನಸೌಧದಂತಹ ಅದ್ಭುತ ಕಲಾ ನೈಪುಣ್ಯದ ಭವನದ ನಿರ್ಮಾಣ ಕರ್ತೃ ಶ್ರೀ ಕೆಂಗಲ್ ಹನುಮಂತಯ್ಯನವರು ಈ ದೇವರ ವರಪ್ರಸಾದದಿಂದ ಜನಿಸಿದರು ಎಂದು ತಿಳಿಯುತ್ತದೆ. ಈ ದೇವಸ್ಥಾನದ ನಿರ್ಮಾಣಕ್ಕೆ ವಿಧಾನಸೌಧ ಕಟ್ಟಿದ ನಂತರ ಉಳಿದ ಕಲ್ಲಿನಿಂದ ನಿರ್ಮಾಣವಾಗಿರುವುದು ವಿಶೇಷವಾಗಿದೆ. ಹಾಗೂ ರಾಷ್ಟ್ರರತ್ನ ಶ್ರೀ ಕೆ. ಹನುಮಂತಯ್ಯನವರು ನಿಧನ ಹೊಂದಿದ ನಂತರ ಭೌತಿಕ ಶರೀರವನ್ನು ಈ ಜಾಗದಲ್ಲಿಯೇ ಸಮಾಧಿ ಮಾಡಲಾಗಿದೆ. ಹೀಗೆ ಐತಿಹಾಸಿಕವಾಗಿ, ಧಾರ್ಮಿಕವಾಗಿ, ರಾಜಕೀಯವಾಗಿ ಈ ಕ್ಷೇತ್ರವು ಬಹಳ ಪ್ರಮುಖವಾದ ಕ್ಷೇತ್ರವಾಗಿ ರೂಪುಗೊಂಡಿದೆ ಹಾಗೂ ದಿವಾನ್ ಸರ್ ಮಿರ್ಜಾ ಇಸ್ಮಾಯಿಲ್‍ರವರು ಬೆಂಗಳೂರಿಗೆ ಹೋಗುವಾಗ ಈ ಸ್ಥಳಕ್ಕೆ ಭೇಟಿ ನೀಡುತ್ತಿದ್ದರು ಒಂದು ಬಾರಿ ಇಲ್ಲಿಯ ಹುಲ್ಲಿಮುತ್ತಿಗೆ ಅರಣ್ಯದಲ್ಲಿ ಹುಲಿಗಳ ಉಪಟಳ ಹೆಚ್ಚಾಗಿ ಅಕ್ಕಪಕ್ಕದ ಗ್ರಾಮದ ಜನರಿಗೆ ತುಂಬಾ ತೊಂದರೆಯಾಗಿ ಅದರ ನಿಯಂತ್ರಣಕ್ಕೆ ಪರಿಹಾರ ಮಾರ್ಗ ಕಾಣದೆ ಈ ದೇವಾಲಯಕ್ಕೆ ಭೇಟಿ ನೀಡಿ ಅನನ್ಯವಾಗಿ ಪ್ರಾರ್ಥನೆ ಮಾಡಿದರೆಂದು ತದನಂತರ ಈ ಉಪದ್ರವವು ಕಡಿಮೆಯಾಯಿತೆಂದು ಇದರಿಂದ ಸಂತೋಷಗೊಂಡು ಹರಕೆಯ ರೂಪದಲ್ಲಿ ಬೆಳ್ಳಿಯ ನೇತ್ರವನ್ನು ಸ್ವಾಮಿಗೆ ಅರ್ಪಿಸಿದರೆಂಬ ಮಾಹಿತಿ ಹಿಂದೆ.
ಕೂಡ್ಲೂರು
ಗಂಗ, ಚೋಳ ಮತ್ತು ವಿಜಯನಗರ ಅರಸರ ಕಾಲದಲ್ಲಿ ಈ ಐತಿಹಾಸಿಕ ಸ್ಥಳವು ಅಗ್ರಹಾರವಾಗಿತ್ತು ಈ ಊರಿನಲ್ಲಿರುವ ಚೋಳರ ಕಾಲದ ಶಾಸನದ ಪ್ರಕಾರ ಈ ಗ್ರಾಮಕ್ಕೆ ಮೊದಲು ಇದ್ದ ಹೆಸರು `ರಾಜರಾಜಚತುರ್ವೇದಿ ಮಂಗಲಂ ಅಗ್ರಹಾರ’ ಈ ಗ್ರಾಮದಲ್ಲಿ ಇಂದು ಸುಮಾರು 25ಕ್ಕಿಂತ ಹೆಚ್ಚು ದೇವಾಲಯಗಳಿವೆ. ಮುಖ್ಯವಾಗಿ ಶ್ರೀ ಮಂಗಳೇಶ್ವರ, ಶ್ರೀ ಪಾತಾಳೇಶ್ವರ, ಶ್ರೀ ಮಹಾಬಲೇಶ್ವರ, ಶ್ರೀ ವೈದ್ಯನಾಥೇಶ್ವರ, ಶ್ರೀ ಮರಳೇಶ್ವರ ಎಂಬ ಪಂಚಲಿಂಗ ದೇವಸ್ಥಾನವು ಚೋಳರ ಕಾಲದಲ್ಲಿ ನಿರ್ಮಾಣ ಎಂದು ದಾಖಲೆಗಳು ತಿಳಿಸುತ್ತದೆ. ಈ ದೇವಾಲಯದ ಸಮೀಪದಲ್ಲೇ ಒಂದು ಕೊಳ ಇರುತ್ತದೆ. ಈ ದೇವಸ್ಥಾನಕ್ಕೆ ನೀಡಿದ ದಾನದತ್ತಿಗಳ ಬಗ್ಗೆ ಕ್ರಿ.ಶ.1200ರಲ್ಲಿ ಚೋಳರ ದಾಖಲೆಗಳು ತಿಳಿಸುತ್ತವೆ. ಕ್ರಿ.ಶ.1305ರಲ್ಲಿ ಹೊಯ್ಸಳರು ಈ ಮಂದಿರಕ್ಕೆ ಹಲವು ದಾನದತ್ತಿ ನೀಡಿದ ಬಗ್ಗೆ ದಾಖಲೆಯನ್ನು ಕಾಣಬಹುದಾಗಿದೆ.
ಮತ್ತೊಂದು ಐತಿಹಾಸಿಕ ಮಹತ್ವಪೂರ್ಣವಾದ ಮಂದಿರವೆಂದರೆ ಶ್ರೀರಾಮ ದೇವಾಲಯ ಈ ಮಂದಿರವನ್ನು ಐತಿಹ್ಯದ ಪ್ರಕಾರ ಕ್ರಿ.ಶ.1600 `ಗಂಗರಾಜ ವಿಜಯಪಾಲ’ ದೇವಸ್ಥಾನ ನಿರ್ಮಿಸಿದರು ಎಂದು ತಿಳಿದುಬರುತ್ತದೆ. ಈ ಮಂದಿರದ ವಿಶೇಷ ಜಟಾಯು ಪಕ್ಷಿಗೆ ಮುಕ್ತಿ ನೀಡಿ ಶ್ರೀ ವಿಷ್ಣುಮೂರ್ತಿ ರೂಪದಲ್ಲಿ ಕಾಣಿಸಿಕೊಂಡ ಪ್ರತೀತಿ ಇದೆ ಇದ್ದು ಸಹ ವಿಷ್ಣು ಮತ್ತು ಶ್ರೀರಾಮನ ರೂಪದ ಸಂಗಮವಾಗಿದ್ದು. ಅಭಯಹಸ್ತ, ಶಂಖಚಕ್ರ, ಕಟಿಹಸ್ತದಿಂದ ಕೂಡಿದೆ. ವಿಜಯನಗರ ಅರಸರು ಈ ವರದಿಯನ್ನು ಜೀರ್ಣೋದ್ಧಾರಗೊಳಿಸಿದ್ದಾರೆ. ಮೂರು ತಮಿಳು ಶಿಲಾಲೇಖನಗಳು ಗೋಡೆಗಳ ಮೇಲೆ ಕಂಡುಬರುತ್ತವೆ. ಮೊದಲನೇ ದಾಖಲೆಯು ಕ್ರಿ.ಶ.1232 ತಿರುಮಲ ಪಾಡಿಯ ರಾಜಸಿಂಗನು ಭೂಮಿಯನ್ನು ನೀಡಿದ ವಿಚಾರ ತಿಳಿಯುತ್ತದೆ. ಕ್ರಿ.ಶ.1180ರಲ್ಲಿ ಹೊಯ್ಸಳರ ಎರಡನೇ ಬಲ್ಲಾಳನು ಈ ದೇವಸ್ಥಾನಕ್ಕೆ ಕೆಲವು ಕಾಣಿಕೆ ನೀಡಿದ ವಿವರವನ್ನು ತಿಳಿಸುತ್ತದೆ. ಕ್ರಿ.ಶ.1288ರಲ್ಲಿ ಕನ್ನಡ ಶಾಸನ ಕನಕಹಳ್ಳಿಯ ಮಹಿಳೆಯೊಬ್ಬರು ತೆಂಗಿನ ತೋಟವನ್ನು ಈ ದೇವಸ್ಥಾನಕ್ಕೆ ನೀಡಿದ ಬಗ್ಗೆ ಮಾಹಿತಿಯನ್ನು ನೀಡುತ್ತದೆ. ಶ್ರೀರಾಮ ನವಮಿಯಂದು ಇಲ್ಲಿ ಕಾರ್ಯಕ್ರಮಗಳು ನಡೆಯುತ್ತದೆ. ಇಂದು ಈ ದೇವಾಲಯವು ಮುಜರಾಯಿ ಇಲಾಖೆಯ ಆಳ್ವಿಕೆಗೆ ಒಳಪಡುತ್ತದೆ. ಈ ಸ್ಥಳದಲ್ಲಿ ಚೋಳರ ಕಾಲದ ಹಲವು ಗ್ರಾಮ ಶಾಸನಗಳು ನಟರಾಜ, ಶಿವ, ಪಾರ್ವತಿಯ ಪಂಚಲೋಹದ ವಿಗ್ರಹಗಳು ದೊರೆತಿದ್ದು, ಇವು ಪ್ರಾಚ್ಯವಸ್ತು ಮತ್ತು ಪುರಾತತ್ವ ಇಲಾಖೆ ವಶದಲ್ಲಿದೆ.
ಕೂರಣಗೆರೆಬೆಟ್ಟ (ನರಸಿಂಹಸ್ವಾಮಿ ಬೆಟ್ಟ)
ಚನ್ನಪಟ್ಟಣದಿಂದ 8 ಕಿ.ಮೀ. ದೂರದಲ್ಲಿ ಯೋಗಾ ನರಸಿಂಹಸ್ವಾಮಿಯ ಬೆಟ್ಟವಿದೆ. ಈ ಬೆಟ್ಟವು ಐತಿಹಾಸಿಕ ಮಹತ್ವಕ್ಕಿಂತ ಪ್ರಕೃತಿಪ್ರಿಯರ ತಾಣವಾಗಿ ಬಹಳ ಪ್ರಸಿದ್ಧಿ ಪಡೆದಿದ್ದು, ವಿಜಯನಗರ ಶೈಲಿಯ ಕಂಬದಲ್ಲಿ ನರಸಿಂಹದೇವರು ಉದ್ಭವವಾಗಿರುವ ರೂಪ ಕಂಡುಬರುತ್ತದೆ. ವ್ಯಾಸರಾಯರು ಈ ಸ್ಥಳದಲ್ಲಿ ಈ ಸ್ವಾಮಿಯನ್ನು ಅಸದೃಶ್ಯರೂಪದಲ್ಲಿ ಕಾಣಿಸಿಕೊಂಡ ಸ್ಥಳವೆಂದು ತಿಳಿದುಬರುತ್ತದೆ.
ಭೂಮಟ್ಟದಿಂದ 1000 ಅಡಿಗಳ ಎತ್ತರದಲ್ಲಿ ಈ ದೇವಸ್ಥಾನವಿದ್ದು, ಈ ಸ್ಥಳದಿಂದ ಮಾರ್ಚನಹಳ್ಳಿ ಕೆರೆ, ತಿಪ್ಪೂರು ಕೆರೆ, ನೂಣ್ಣೂರು ಬೆಟ್ಟ, ಗರಕಹಳ್ಳಿ ಬೆಟ್ಟಗಳು ಬಹಳ ಸುಂದರವಾಗಿ ಕಂಡುಬರುತ್ತವೆ. ಈ ಬೆಟ್ಟದಲ್ಲಿ ನರಿಗಳು, ನವಿಲುಗಳು, ಜಿಂಕೆಗಳು ಕಂಡುಬರುತ್ತವೆ. ಪ್ರತಿ ಶ್ರಾವಣ ಶನಿವಾರದಂದು ಬಹುದೊಡ್ಡ ಜಾತ್ರೆಯಂತೆ ಜನರು ಸೇರುತ್ತಾರೆ.
ಸೋಗಾಲ
ಸೋಗಾಲ ಎಂಬ ಹೆಸರು ಬಂದಿರುವ ಬಗ್ಗೆ ಈ ಗ್ರಾಮದ ಐತಿಹ್ಯದ ಪ್ರಕಾರ 500 ವರ್ಷಗಳ ಹಿಂದಿನ ಸೋಮೇಶ್ವರ ದೇವಸ್ಥಾನ ಈ ಊರಿನಲ್ಲಿದ್ದು, `ಗಾಲ’ ಎಂಬ ಋಷಿಯು ಈ ಜಾಗದಲ್ಲಿ ತಪಸ್ಸು ಮಾಡಿದ್ದರಿಂದ ಈ ಗ್ರಾಮದ ಹೆಸರು ಸೋಗಾಲ ಎಂದಾಯಿತು ಎಂದು ಐತಿಹ್ಯ ಕೇಳಿಬರುತ್ತದೆ.
ಸೋಮೇಶ್ವರ (ಈಶ್ವರ) ದೇವಸ್ಥಾನ, ಶ್ರೀ ಆಂಜನೇಯ ಸ್ವಾಮಿ, ಶ್ರೀ ಕಾಳಮ್ಮನವರ ದೇವಸ್ಥಾನ ಈ ಊರಿನಲ್ಲಿದೆ. ಈಶ್ವರನ ದೇವಾಲಯವು ವಿಜಯನಗರ ಕಾಲದ ಕೊಡುಗೆಯಾಗಿದೆ. ಗರ್ಭಗೃಹ, ಆರಾಧನಾ ಮಂಟಪ ಹೊಂದಿದ್ದು, ದ್ರಾವಿಡ ಶಿಖರವನ್ನು ಹೊಂದಿದೆ. ಈ ದೇವಾಲಯಕ್ಕೆ ಪೂರ್ವ ಮತ್ತು ದಕ್ಷಿಣ ದಿಕ್ಕಿಗೆ ಬಾಗಿಲು ಇದೆ. ಎರಡು ಕಡೆಯು ಚಿಕ್ಕ ಮುಖಮಂಟಪವಿದೆ. ಸೂರ್ಯ, ಗಣಪತಿ ಹಾಗೂ ಸಪ್ತಮಾತೃಕೆಯರ ಸುಂದರವಾದ ಶಿಲ್ಪಗಳನ್ನು ಒಳಗೊಂಡಿದೆ. ನವರಂಗದ ದಕ್ಷಿಣ ಪ್ರವೇಶದ್ವಾರದಲ್ಲಿ ವಿಜಯನಗರ ಅರಸರ ಕಾಲದ ಕಾಲಕ್ಕೆ ಬಳಕೆಗೆ ಬಾರದ ಕನ್ನಡ ಲಿಪಿಯ ಶಾಸನ ಇದೆ. ನವರಂಗದ ಪಶ್ಚಿಮದ ಬಾಗಿಲಲ್ಲಿ ದ್ವಾರಪಾಲಕರಿದ್ದಾರೆ. ದೇವಸ್ಥಾನದ ಬಳಿ ಒಂದು ವೀರಗಲ್ಲು ಹಾಗೂ ಎರಡು ಮಾಸ್ತಿಕಲ್ಲು ಇವೆ. ಈ ದೇವಸ್ಥಾನದ ಹಿಂದೆ ಕೆಲವು ವೀರಗಲ್ಲು ಇದ್ದು, ಒಬ್ಬ ರಾಜನು ಹುಲಿಯೊಂದಿಗೆ ಸೆಣಸುತ್ತಿರುವ ಚಿತ್ರಗಳನ್ನು ಕೆತ್ತಲಾಗಿದೆ. ದೇವಸ್ಥಾನಕ್ಕೆ ಅನತಿ ದೂರದಲ್ಲಿ ಇನ್ನು ಹಲವು ವೀರಗಲ್ಲು ಕಂಡುಬರುತ್ತದೆ.
ಸಿಂಗರಾಜಿಪುರ
ಸಿಂಗರಾಜಿಪುರವು ಚನ್ನಪಟ್ಟಣದಿಂದ ಸಾತನೂರಿಗೆ ಹೋಗುವ ಮಾರ್ಗದಲ್ಲಿ ಸಿಗುವ ಸ್ಥಳವಾಗಿದ್ದು, ಸುಮಾರು 110 ಅಡಿ ಎತ್ತರದಲ್ಲಿ ಬೆಟ್ಟವಿದ್ದು, ಇದು ಶ್ರೀ ಗವಿರಂಗಸ್ವಾಮಿ ಬೆಟ್ಟವೆಂದು ಪ್ರಸಿದ್ಧಿ ಪಡೆದಿದೆ. `ಸಿಂಗರಾಜನು’ ಹೊಯ್ಸಳ ದೊರೆಯ ಆಳ್ವಿಕೆಗೆ ಸೇರಿದ್ದರೆಂದು ಈ ಗ್ರಾಮಕ್ಕೆ ಸಿಂಗರಾಜ ಪುರವೆಂದು ಬಂದಿರಬಹುದು ಎಂದು ಊಹಿಸಲಾಗಿದೆ. `ಸಿಂಗರಾಜಪುರ’ ಎನ್ನುವುದು ಶೃಂಗರಾಜಪುರ ಎನ್ನುವುದರಿಂದ ನಿಷ್ಪನ್ನವಾಗಿದೆ ಎಂದು ಹೇಳುತ್ತಾರೆ.
ಮತ್ತೊಂದು ಹೇಳಿಕೆಯ ಪ್ರಕಾರ ಋಷಿಶೃಂಗರು ಇಲ್ಲಿನ ಗವಿರಂಗಸ್ವಾಮಿ ಬೆಟ್ಟದ ಮೇಲೆ ಸ್ವಲ್ಪ ಸಮಯ ವಾಸ ಮಾಡಿದ್ದಕ್ಕಾಗಿ ಅವರ ಜ್ಞಾಪಕವಾಗಿ ಈ ಊರಿಗೆ `ಋಷಿಶೃಂಗ’ ಹೆಸರಿಗಾಗಿ ಸಿಂಗರಾಜಪುರವಾಗಿದೆ ಎಂದು ಐತಿಹ್ಯ ಇದೆ. ಈ ಗ್ರಾಮದಲ್ಲಿ ಗೋಪಾಲಕೃಷ್ಣ ದೇವಸ್ಥಾನವಿದ್ದು, ವಿಜಯನಗರ ಶೈಲಿಯನ್ನು ಹೋಲುವಂತೆ ಇದೆ. ವಿಜಯನಗರ ಶೈಲಿಯ ಬಾಗಿಲಿನ ದ್ವಾರಪಾಲಕರ ಚಿತ್ರ ಕಂಡುಬರುತ್ತದೆ. ಈ ಊರಿಗೆ ಹೊಂದಿಕೊಂಡಿರುವ ಶ್ರೀ ಗವಿರಂಗಸ್ವಾಮಿ ಬೆಟ್ಟದ ರಸ್ತೆಯಲ್ಲೇ ಭೈರವ ಗುಹೆಯು ಇದೆ. ಗವಿರಂಗಸ್ವಾಮಿ ಶ್ರೀ ಗುಹೆಯಲ್ಲಿ ಇದ್ದು, ಲಿಂಗಾಕೃತಿಯಲ್ಲಿದೆ. ಸೀತೆಯು ಸ್ನಾನಕ್ಕಾಗಿ ಲಕ್ಷ್ಮಣನು ಬಾಣಪ್ರಯೋಗ ಮಾಡಿದ ಬಿಲ್ಲು ಸೊಣೆ ಇಲ್ಲಿದೆ. ಈ ಸೊಣೆಗೂ ಮುತ್ತತ್ತಿಯ ನದಿಗೂ ಸಂಬಂಧವಿದೆ. ಅಲ್ಲಿ ಪ್ರವಾಹ ಬಂದಾಗ ಇಲ್ಲಿ ನೀರು ಉಕ್ಕುತ್ತದೆ ಎಂದು ಹೇಳುತ್ತಾರೆ ಸ್ಥಳದಲ್ಲಿ ಋಷ್ಯಶೃಂಗ ಮುನಿ, ಮತಂಗಋಷಿ, ವಿಬಾಂಡಕ ಋಷಿ ತಪಸ್ಸು ಮಾಡಿದ್ದಾರೆ ಎಂದು ವಿಚಾರ ತಿಳಿದುಬರುತ್ತದೆ.
ಹೊಂಗನೂರು
ಹೊಂಗನೂರು ಐತಿಹಾಸಿಕ ಮಹತ್ವದ ಸ್ಥಳವಾಗಿದ್ದು, ಹೊಂಗನೂರಿಗೆ ಹಿಂದೆ `ಪುಂಗನೂರು’, `ಹುಂಗನೂರು’ ಎಂದು ಶಾಸನಗಳು ತಿಳಿಸುತ್ತವೆ. ಚೋಳರ ಕಾಲದಲ್ಲಿ ಅಗ್ರಹಾರವಾಗಿದ್ದು, ಅವರ ಕಾಲದಲ್ಲಿ ಈ ಗ್ರಾಮಕ್ಕೆ ಇದ್ದ ಮತ್ತೊಂದು ಹೆಸರು `ತ್ರಿಲೋಕ್ಯಮಾದೇವಿ-ಚತುರ್ವೇದಿ-ಮಂಗಳಂ’ ಎಂದು ಅನಂತರ ಈ ಸ್ಥಳವು ಕ್ರಿ.ಶ.1296ರ ಹೊಯ್ಸಳರ ದಾಖಲೆ ಪ್ರಕಾರ `ಹೊಂಗನೂರು’ ಎಂದು ಕಂಡುಬರುತ್ತದೆ.
ಗಂಗರ ಕಾಲದಲ್ಲಿ ಇದು `ಚಿಕ್ಕ ಗಂಗವಾಡಿ’ ಪ್ರಾಂತದ ಕೇಂದ್ರಸ್ಥಾನವೆಂತಲೂ, ಶಿಂಷಾ ನದಿಯ ಅಕ್ಕಪಕ್ಕದ ಊರುಗಳಿಗೆ ಕೇಂದ್ರಸ್ಥಾನವಾಗಿತ್ತು ಎಂದು ಮಳವಳ್ಳಿ ತಾಲ್ಲೂಕಿನ `ನಿಟ್ಟೂರಿನ ಶಾಸನ’ವು 1265ರ ಹೊಯ್ಸಳರ ದಾಖಲೆಯಲ್ಲಿ ಈ ಬಗ್ಗೆ ಪುರಾವೆ ಸಿಗುತ್ತದೆ. ಈ ಗ್ರಾಮದಲ್ಲಿ ಕೋಡಿಭೈರವ ಗುಡಿ, ಲಕ್ಷ್ಮಿ, ಗೋಪಾಲಕೃಷ್ಣ,
ಮಾರಮ್ಮ, ಈಶ್ವರ (ಹೊನ್ನಲೇಶ್ವರ) ಮುಂತಾದ ದೇವಸ್ಥಾನಗಳು ಇವೆ.
ಹೊಯ್ಸಳರ ಕಾಲದ ಕೋಢಿಭೈರವನ ವಿಗ್ರಹವಿದೆ. ಗೋಪಾಲಕೃಷ್ಣ ದೇವಸ್ಥಾನವು ಹೊಯ್ಸಳ ಮತ್ತು ವಿಜಯ ನಗರ ಅರಸರ ಕಾಲದಲ್ಲಿ ಜೀರ್ಣೋದ್ಧಾರ ಆಗಿರುವಂತೆ ಕಂಡುಬರುತ್ತವೆ. ಗೋಪಾಲಕೃಷ್ಣನ ಮೂರ್ತಿ ಮನೋಹರ ವಾಗಿದ್ದು, ವಿಜಯನಗರ ಶೈಲಿಯಂತೆ ಕಂಡುಬರುತ್ತದೆ. ಈ ದೇವಾಲಯದ ಪ್ರಾಕಾರದಲ್ಲಿ ಚೋಳರ ಕಾಲದ ಲಕ್ಷ್ಮಿ ದೇವಾಲಯವಿದ್ದು, 6 ಕಂಬಗಳ ಮಂಟಪವಿದ್ದು, ದೇವಿಯ ವಿಗ್ರಹ ವಿಜಯನಗರದ ಉತ್ತರ ಕಾಲಕ್ಕೆ ಸೇರಿದಂತೆ ಕಂಡುಬರುತ್ತದೆ. ರಾಜೇಂದ್ರ ಚೋಳ ಕ್ರಿ.ಶ.1081ರಲ್ಲಿ ಇವರ ಶಾಸನವು ಉದ್ನೆಯ ವಾಕ್ಯದಂತೆ ಪುಂಗನೂರು ತ್ರೈಲೋಕ್ಯಮಾದೇವಿ ಚತುರ್ವೇದಿಮಂಗಳಂ ಕಳಲೈ ನಾಡುವಿನಲ್ಲಿ ಮುಡಿಗೊಂಡ ಚೋಳ ಮಂಡಲದಲ್ಲಿದೆ ಎಂದಿದೆ. ಈ ಶಾಸನದ ಮೊದಲರ್ಧದಲ್ಲಿ ದೇವಕುಂದೈ ವನ್ನಾಗರ ಆಳ್ವಾರ್‍ಗೆ ಕೊಟ್ಟ ದತ್ತಿ ಸೋಮಸಿಂಗಾರ್ಯನ ಬಗ್ಗೆ ತಿಳಿಸುತ್ತದೆ. ಶ್ರೀ ಹೊನ್ನಾಳೇಶ್ವರ ದೇವಾಲಯವು ಚೋಳರಸರ ಮತ್ತೊಂದು ಕೊಡುಗೆ ಎತ್ತರವಾದ ಶಿವಲಿಂಗವಿದೆ. ಸಪ್ತಮಾತೃಕೆಯರ ಮೂರ್ತಿಗಳಿವೆ. ಕ್ರಿ.ಶ. 1155 ಎರಡನೇ ನರಸಿಂಹನು ಕೆತ್ತಿಸಿರುವ ಒಂದು ಶಾಸನದ ಪ್ರಕಾರ ಮಲ್ಲಿದೇವನಾಯಕ ಯುದ್ಧದಲ್ಲಿ ವೀರಾವೇಶದಿಂದ ಹೋರಾಡಿ ಸತ್ತನೆಂದು ಅವನ `ನಾಗವ್ವೆ’ ಈ ವೀರಕಲ್ಲನ್ನು ನಿಲ್ಲಿಸಿದ್ದಾಳೆ.
ಹಾರೋಕೊಪ್ಪ
ಹಾರೋಕೊಪ್ಪವು ಸೋಗಾಲದಿಂದ 3 ಕಿ.ಮೀ. ಅಂತರದಲ್ಲಿ ಇರುವ ಐತಿಹಾಸಿಕ ಪ್ರಸಿದ್ಧ ಸ್ಥಳವಾಗಿದೆ. ಈ ಗ್ರಾಮವು ಗುಡಿ-ಗೋಪುರಗಳಿಂದ ತುಂಬಿ ಹೋಗಿರುವ ಪ್ರದೇಶವಾಗಿದ್ದು, ಸುಮಾರು 20ಕ್ಕಿಂತ ಹೆಚ್ಚು ಸಣ್ಣ-ಪುಟ್ಟ ದೇವಾಲಯಗಳು ಇದ್ದು, ಹಲವಾರು ವೀರಗಲ್ಲು ಮತ್ತು ಮಾಸ್ತಿಕಲ್ಲುಗಳನ್ನು ಪಡೆದುಕೊಂಡ ಗ್ರಾಮವಾಗಿದೆ. ಹಿಂದೆ ಈ ಗ್ರಾಮದಲ್ಲಿ ಅಗ್ರಹಾರದ ಒಂದು ಭಾಗವಾಗಿತ್ತು ಎಂದು ಹಾಗಾಗಿ ಈ ಊರಿಗೆ ಹಾರೋ ಎಂದರೆ ಹಾರೂರು `ಬ್ರಾಹ್ಮಣ’ರು ವಾಸ ಮಾಡುತ್ತಿದ್ದ ಸ್ಥಳವಾಗಿತ್ತು ಎಂದು ಐತಿಹ್ಯ ತಿಳಿಸುತ್ತದೆ. ಶ್ರೀ ಭೈರವನ ದೇವಾಲಯ ಚಿಕ್ಕ ಕಲ್ಯಾಣಿ, ಶ್ರೀ ವೀರಭದ್ರ, ಶ್ರೀ ಹಟ್ಟಿ ಮಾರಮ್ಮ, ಶ್ರೀ ಚೌಡೇಶ್ವರಿ ಮುಂತಾದ ಗುಡಿಗಳಿವೆ.
ಅಬ್ಬೂರು
ಅಬ್ಬೂರಿಗೆ ಕರ್ನಾಟಕದ ಎರಡನೆಯ ಮಂತ್ರಾಲಯ ಎಂಬ ಹೆಗ್ಗಳಿಕೆ ಇದೆ. ಬ್ರಹ್ಮಣ್ಯತೀರ್ಥರ ಬೃಂದಾವನ ಇರುವ ಪ್ರದೇಶ ಅಬ್ಬೂರು ತಪಸ್ವಿಗಳು ತ್ರಿಕಾಲಜ್ಞಾನಿಗಳು ಆಗಿದ್ದ ಬ್ರಹ್ಮಣತೀರ್ಥರು ಸೂರ್ಯಂಶಸಂಭೂತರೆಂಬ ಪ್ರತೀತಿ ಇದೆ. ಈ ಯತಿಗಳು ಪವಾಡಪುರುಷರು ವಿಜಯನಗರದ ಶ್ರೀ ಕೃಷ್ಣದೇವರಾಯನ ಸಿಂಹಾಸನಕ್ಕೆ ಒದಗಿದ್ದ `ದುರ್ಯೋಗ’ವನ್ನು ದೂರ ಮಾಡಿದ ತನ್ನ ತಪಶಕ್ತಿಯನ್ನು ಧಾರೆ ಎರೆದ ಯತಿ ವ್ಯಾಸರಾಯನು ಈ ಬ್ರಹ್ಮಣ್ಯತೀರ್ಥರ ಶಿಷ್ಯರು ಶ್ರೀವ್ಯಾಸರಾಯರಿಗೆ ಗುರುಕಾಣಿಕೆಯಾಗಿ ಶ್ರೀಕೃಷ್ಣದೇವರಾಯನು ಅಬ್ಬೂರು ಗ್ರಾಮವನ್ನು 1523ರಲ್ಲಿ ದಾನ ಮಾಡಿದ ಒಂದು ಶಾಸನವಿದೆ ಈ ಸ್ಥಳಕ್ಕೆ ಮೊದಲು ವಯಾರಾಜ ಮಠ ಎಂದು ಕರೆಯುತ್ತಿದ್ದರು. ಶ್ರೀರಾಮ ತೀರ್ಥರು ಇಲ್ಲಿ ವಾಸಕ್ಕೆ ಬಂದ ಮೇಲೆ ಈ ಭಾಗದ ಹೆಸರು `ಅಪ್ಪಿಯಾರು’ (ತಮಿಳು) ಚೋಳ (ಕ್ರಿ.ಶ. 1060) ಆಯಿತು ಎಂದು ತಿಳಿದುಬರುತ್ತದೆ. ಇಲ್ಲಿ ಇತರೆ 8 ಸ್ವಾಮಿಗಳ ಬೃಂದಾವನವಿದೆ. ಅವುಗಳೆಂದರೆ ಶ್ರೀ ಲಕ್ಷ್ಮಿಧರತೀರ್ಥ ಬೃಂದಾವನ, ಶ್ರೀ ರಘುನಾಥತೀರ್ಥ, ಶ್ರೀ ಲಕ್ಷ್ಮಿನಾರಾಯಣತೀರ್ಥ, ಶ್ರೀ ಲಕ್ಷ್ಮಿಮನೋಹರತೀರ್ಥ, ಶ್ರೀ ಲಕ್ಷ್ಮಿಧರತೀರ್ಥ ಇವುಗಳು ಸುಸಂಬಂಧಗೊಳಿಸಿದವರು ಶ್ರೀ ಪುರುಷೋತ್ತಮನಂದತೀರ್ಥ ಎಂದು ತಿಳಿದುಬರುತ್ತದೆ. ಶ್ರೀ ವ್ಯಾಸತೀರ್ಥರ ವಿದ್ಯಾಗುರುಗಳಾದ ಶ್ರೀಪಾದರಾಯರು ಕನ್ನಡದ ಮೊದಲ ವಾಗ್ಗೇಯಕಾರರು. ಅವರು ಸಹ ಬಾಲ್ಯವೂ ಈ ಅಬ್ಬೂರಿನಲ್ಲಿ ಕಳೆದರೆಂಬ ಪ್ರತೀತಿ ಇದೆ ಈಗಲೂ ಈ ಸುತ್ತಿನ ಪ್ರದೇಶವು ತಪೆÇೀವನದಂತೆ ಕಾಣಿಸುತ್ತದೆ. ಭಾವುಕ ಭಕ್ತರಿಗೆ ಪುಣ್ಯಕ್ಷೇತ್ರವಾಗಿದೆ.
ಬೇವೂರು
ಬೇವೂರು ಒಂದು ಸಮಯದಲ್ಲಿ ಬಹಳ ಪ್ರಮುಖ ಜೈನಕೇಂದ್ರವಾಗಿತ್ತು. ಕ್ರಿ.ಶ.900ರಲ್ಲಿ ಈ ಜಾಗವನ್ನು `ನಿಂಬಗ್ರಾಮ’ ಎಂತಲೂ ಜೈನರು ಕರೆದಿದ್ದು ಉಂಟು ಆದರೆ ನಂತರದ ದಾಖಲಾತಿಗಳ ಪ್ರಕಾರ ಇದೇ ಜಾಗವನ್ನು ಕ್ರಿ.ಶ.1331ರಲ್ಲಿ ಹೊಯ್ಸಳರ ಬಲ್ಲಾಳರನ್ನು `ಬೇವೂರು’ ಎಂದು ಕರೆದನು ಮುಂದೆ ಇದೇ ಸ್ಥಳ ಮಣ್ಣಿನ ಮಡಿಕೆ ಮಾಡುವವರ ಸ್ಥಳವಾಗಿ ಹೆಸರು ಪಡೆಯಿತು. ನಂತರ ಸಣ್ಣ ಮಣ್ಣಿನ ಮಡಿಕೆ ಕಲಾಕೃತಿ ತಯಾರಿಕೆಗೆ ಕಾರಣವಾಗಿ `ಕುಡಿಕೆ ಬೇವೂರು ಆಯಿತು’. ಶ್ರೀ ತಿಮ್ಮಪ್ಪನ ಬೆಟ್ಟವು ಒಂದು ಕಾಲದಲ್ಲಿ ಜೈನರ ಕೇಂದ್ರವಾಗಿದ್ದು, ಅದನ್ನು `ಕೆರುಗುಂಡ’ ಎಂದು ಕರೆಯುತ್ತಿದ್ದರು ಎಂದು ಕ್ರಿ.ಶ.900ರ ಎರಡು ದಾಖಲೆಗಳು ಹೇಳುತ್ತವೆ ದಾಖಲೆಗಳ ಪ್ರಕಾರ ಹಲವು ಜೈನ ಮುನಿಗಳು ಅಂದರೆ ಸಿದ್ದಿ ಮತ್ತು ಚಂದ್ರಸೇನರು ಧರ್ಮಗುರುಗಳಾಗಿ ಆಳ್ವಿಕೆ ನಡೆಸಿದರು ಶಾಂತಿಸೇನ ಮತ್ತ ಅವನ ಗುರು ಶ್ರೀ ಸೇನರು ಸ್ನೇಹಿತರಾಗಿದ್ದರು ಎಂದು ಒಂದು ದಾಖಲೆ ಹೇಳುತ್ತದೆ. ನಂದಿ ಗ್ರಾಮದ ದಾಖಲೆ ತಿಳಿಸುತ್ತದೆ.
ಚಂದ್ರಸೇನನು ಈ `ಕಿರುಕುಂಡ’ ಬೆಟ್ಟದಲ್ಲಿ ಸಾಧು ರೂಪಕ್ಕೆ ತಂದನು ಎಂದು ತಿಳಿಸುತ್ತದೆ. ಆದರೆ ಒಂದು ಕಾಲದಲ್ಲಿ ಜೈನರ ಪವಿತ್ರ ಸ್ಥಳವಾಗಿದ್ದ ಯಾವುದೇ ಸ್ಮಾರಕವಾಗಲಿ ಕೀರ್ತಿ ಸ್ತಂಭಗಳಾಗಲಿ ಕಂಡುಬರುವುದಿಲ್ಲ ವೆಂಕಟ ಎಂಬುವನು ಕ್ರಿ.ಶ. 1579ರಲ್ಲಿ ದೇವಸ್ಥಾನವನ್ನು ತಿಮ್ಮಪ್ಪನ ಗುಡಿ ನಿರ್ಮಾಣದ ಬಗ್ಗೆ ದಾಖಲೆ ಮಾತ್ರ ಇದೆ.
ಇಗ್ಗಲೂರು
ಚನ್ನಪಟ್ಟಣ ತಾಲ್ಲೂಕು ಗಡಿ ಭಾಗದಲ್ಲಿ ಇರುವ ಈ ಸ್ಥಳವು ಐತಿಹಾಸಿಕವಾಗಿ ತನ್ನದೇ ಆದಂತಹ ಹಲವು ಅಮೂಲ್ಯವಾದ ದಾಖಲೆಯನ್ನು ಬಚ್ಚಿರಿಸಿಕೊಂಡಿದೆ. ಇಗ್ಗಲೋರು ಎಂಬ ಸ್ಥಳವನ್ನು ತಿಳಿಸುವ ಒಂದು ವೀರಗಲ್ಲು 12 ಶತಮಾನದ್ದು ಈ ಸ್ಥಳದ ಬಗ್ಗೆ ತಿಳಿಸುತ್ತದೆ. ಹಲವಾರು ಮಾಸ್ತಿಕಲ್ಲು ಮತ್ತು ವೀರಗಲ್ಲು ಹಾಗೂ ದೇವಸ್ಥಾನಗಳು ಇದೆ ಚೋಳ ಕಾಲಕ್ಕೆ ಸಂಬಂಧಿಸಿದ ಬಸವೇಶ್ವರ ದೇವಸ್ಥಾನವಿದೆ ಹಾಗೆಯೇ ವಿಜಯನಗರದ ಕಾಲಕ್ಕೆ ಸಂಬಂಧಿಸಿದ ಶ್ರೀ ಸೋಮೇಶ್ವರ ದೇವಸ್ಥಾನ ಶ್ರೀ ಸಿದ್ಧೇಶ್ವರ ದೇವಸ್ಥಾನ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನದ ಶ್ರೀ ಮಾರುತಿ ದೇವಸ್ಥಾನ ಬಳಿ ಇರುವ ಒಂದು ವೀರಗಲ್ಲು ಶಾಸನವು ಬುಕ್ಕರಾಯನ ಪ್ರಾರಂಭದ ಅವಧಿ ಮತ್ತು ಹರಿಯಪ್ಪ ಒಡೆಯರ್‍ರವರ ಆಳ್ವಿಕೆಯ ಬಗ್ಗೆ ಈ ಸ್ಥಳದ ಬಗ್ಗೆ ಹಲವು ಮಹತ್ವ ದಾಖಲೆಯನ್ನು ಒದಗಿಸುತ್ತದೆ. ಇಲ್ಲಿನ ಮತ್ತೊಂದು ಶಾಸನವು ಹೊಯ್ಸಳ ಕಾಲಕ್ಕೆ ಸೇರಿದ್ದಾಗಿದ್ದು ಕ್ರಿ.ಶ.1176 ಪ್ರಕಾರ ಹಲವು ನಾಯಕರು ಯುದ್ಧದಲ್ಲಿ ಸತ್ತರೆಂಬ ವಿಚಾರವನ್ನು ತಿಳಿಸುತ್ತದೆ ಒಂದು ಕಾಲದಲ್ಲಿ ರಾಜಕೀಯವಾಗಿ ಮಹತ್ವ ಪಡೆದಿದ್ದ ಸ್ಥಳವಾಗಿದ್ದ ಬಗ್ಗೆ ಮಾಹಿತಿ ದೊರೆಯುತ್ತದೆ.
ಗರಕಹಳ್ಳಿ
ಗರಕಹಳ್ಳಿಗೆ ಒಂದು ಕಾಲದಲ್ಲಿ `ದೇವರಾಯಪುರ’ವೆಂದು ಹೆಸರಿತ್ತು ಎಂದು ಕ್ರಿ.ಶ.1666 ದೇವರಾಜ ಒಡೆಯರ್‍ರವರ ಮಗ `ದೇವರಾಜ ಮಹಿಪಾಲರು’ ಈ ಊರನ್ನು ಅಗ್ರಹಾರವಾಗಿ ಮಾಡಿದ್ದಾರೆಂದು ಒಂದು ಶಿಲಾಶಾಸನದ ಪ್ರಕಾರ ತಿಳಿಯುತ್ತದೆ. ಶ್ರೀ ಕಣ್ಣೇಶ್ವರ ದೇವಾಲಯವು ಈ ಗ್ರಾಮದಲ್ಲಿ ಇದ್ದು ಹಿಂದೆ ಇಲ್ಲಿ ನೇರಳೆ ಮರಗಳ ಗುಂಪು ಇದ್ದುದರಿಂದ `ಜಂಬೂ ಕ್ಷೇತ್ರವೆಂದು’ ಕರೆಯುತ್ತಿದ್ದರು ಎಂದು ತಿಳಿಯುತ್ತದೆ. ಶ್ರೀ ಸಿದ್ಧೇಶ್ವರ ದೇವಾಲಯವು ಇದ್ದ ಚಿಕ್ಕ ಪುಟ್ಟ ಬೆಟ್ಟಗಳಿಂದ ಕೂಡಿದ ಇತಿಹಾಸ ಮಹತ್ವ ಪಡೆದ ಸ್ಥಳವಾಗಿತ್ತು ಎಂದು ತಿಳಿದು ಬರುತ್ತದೆ.
ನುಣ್ಣೂರು
ಈ ಊರಿನಲ್ಲಿ ವಿಜಯನಗರ ಅರಸರ ಕಾಲಕ್ಕೆ ಸಂಬಂಧಿಸಿದ ಶ್ರೀ ವೈದ್ಯೇಶ್ವರ ದೇವಾಲಯವು ಇದ್ದು ಈ ಮಂದಿರದ ಗೋಡೆಯ ಒಳಭಾಗದಲ್ಲಿ ಪ್ರಚಾರಕ್ಕೆ ಬಾರದ ಲಿಪಿಯೊಂದರ ಶಾಸನವು ಕಂಡುಬರುತ್ತದೆ ಈ ಸ್ಥಳದಲ್ಲಿ  ಹಲವಾರು ವೀರಗಲ್ಲು ಮತ್ತು ಮಾಸ್ತಿಕಲ್ಲುಗಳು ಕಂಡುಬರುತ್ತವೆ. ಅನತಿ ದೂರದಲ್ಲೇ `ಸವಣಪ್ಪನ ಗುಡ್ಡೆ’ ಎಂಬ ಗುಡ್ಡದಲ್ಲಿ ಉತ್ತರಾಭಿಮುಖವಾಗಿ ನಿಂತಿರುವ ಶ್ರವಣನ ದಿಗಂಬರ ಮೂರ್ತಿಯನ್ನು ನೋಡಬಹುದಾಗಿದೆ. ಒಂದು ಕಾಲದಲ್ಲಿ ಮಲ್ಲಿಕಾಫರ್ ದಂಡೆಯಾತ್ರೆಯ ಸಮಯದಲ್ಲಿ ಸಂಪೂರ್ಣವಾಗಿ ನಾಶ ಹೊಂದಿದ್ದ ಈ ಜೈನ ಕೇಂದ್ರದ ಬಗ್ಗೆ ಇತಿಹಾಸದಲ್ಲಿ ಯಾವುದೇ ದಾಖಲೆಗಳು ಸಿಗುವುದಿಲ್ಲ 15ನೇ ಶತಮಾನಕ್ಕಿಂತ ಹಿಂದೆ ನಡೆದ ಘಟನೆ ಆಗಿರಬಹುದೆಂದು ಊಹಿಸಲಾಗಿದೆ. ಇಂದಿಗೂ ಈ ಸ್ಥಳದಲ್ಲಿ ಮಕ್ಕಳ ಸಂತಾನಫಲ ಬಯಕೆ ಇರುವವರು ಭಕ್ತಿಯಿಂದ ಪ್ರಾರ್ಥನೆಯನ್ನು ಸಲ್ಲಿಸುವ ಪದ್ಧತಿಯು ಕಂಡುಬರುತ್ತದೆ.
ಹೀಗೆ ಚನ್ನಪಟ್ಟಣ ತಾಲ್ಲೂಕು ಹಲವಾರು ಐತಿಹಾಸಿಕ ವಿಚಾರಗಳನ್ನು ಐತಿಹ್ಯಗಳನ್ನು ತನ್ನ ಕಾಲಗರ್ಭದಲ್ಲಿ ಹುದುಗಿಸಿಕೊಂಡು ಮುಂದಿನ ಸಂಶೋಧಕರಿಗೆ ಸಂಶೋಧನೆ ಮಾಡಲು ಪ್ರೇರಣೆಯ ಕಣಜವಾಗಿದೆ ಎಂದೆನಿಸುತ್ತದೆ.

 ಸಹಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ಕೃಷ್ಣಾಪುರ, ಚನ್ನಪಟ್ಟಣ ತಾಲ್ಲೂಕು, ರಾಮನಗರ ಜಿಲ್ಲೆ-571501.

2 comments:

  1. ಬಹಳ ಅರ್ಥಪೂರ್ಣವಾಗಿದೆ...

    ReplyDelete
  2. Very good information about channapattana and public want more information about another village thanks

    ReplyDelete