Wednesday, March 26, 2014

ನಂದಿ ಸ್ಮಾರಕ ಸ್ತಂಭ


                              ವಿಜಯನಗರದ ಕಾಲದ
ಕಾಲಕಾಲೇಶ್ವರದ ನಂದಿ ಸ್ಮಾರಕ ಸ್ತಂಭ 
 ಒಂದು ಟಿಪ್ಪಣೆ
    ಪ್ರಾಚೀನರು ತಮ್ಮ ಹೆಸರನ್ನು ಅಜರಾಮರವಾಗಿರಿಸಿಕೊಳ್ಳಲು ಶಾಸನ, ವೀರಗಲ್ಲುಗಳನ್ನು ನಿಲ್ಲಿಸುತ್ತಿದ್ದರು. ಅದರ ಜೊತೆಗೆ ನಂದಿ ಸ್ತಂಭಗಳನ್ನು ಕೂಡಾ ನಿರ್ಮಿಸುವ ಪದ್ದತಿಯನ್ನು ಹಾಕಿಕೊಂಡಿದ್ದರು. ಎತ್ತರವಾದ ಚೌಕಾಕಾರದ ಶಿಲಾ ಸ್ತಂಭದ ಮೇಲೆ ಮಲಗಿದ ನಂದಿಯನ್ನು ಕೆತ್ತಿಸುತ್ತಿದ್ದರು. ಈ ನಂದಿಯು ಕೆಲವು ಸಲ ಮೃತನ ಸ್ಮಾರಕವೂ ಕೂಡಾ ಆಗಿರುತ್ತಿತ್ತು. ಅಂತಹ ಶಿಲ್ಪಗಳು ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿ ಸಿಗುತ್ತವೆ. ಮಹಾರಾಷ್ಟ್ರದಲ್ಲಿ ಚೌಕಾಕಾರದ ಕಂಬಗಳಲ್ಲಿ ವಚನಗಳನ್ನು ಕೆತ್ತಿದ್ದಾರೆ. ಅಂತಹ ಶಿಲ್ಪಗಳು ಸೊಲ್ಲಾಪೂರದಲ್ಲಿವೆ. ಅದರ ಮೇಲೆ ಶರಣ ಸಿದ್ದರಾಮನ ವಚನಗಳನ್ನು ಕೆತ್ತಿದ್ದಾರೆ.
 ಗದಗ ಜಿಲ್ಲೆಯ ರೋಣ ತಾಲೂಕಿನ ಗಜೇಂದ್ರಗಡ ಸನಿಹದ ಕಾಲಕಾಲೇಶ್ವರ  ಕ್ಷೇತ್ರದಲ್ಲಿ ಒಂದೆರಡು ನಂದಿ ಸ್ಮಾರಕ ಶಿಲ್ಪಗಳಿವೆ. ಈ ಶಿಲ್ಪವು ದೇವಾಲಯದ ತಪ್ಪಲಿನ ಮತ್ತು ಕಾಲಕಾಲೇಶ್ವರ ಗ್ರಾಮದ ಸನಿಹದ ಕುರುಚಲು ಗಿಡಗಳ ಮಧ್ಯದಲ್ಲಿವೆ. ಇದನ್ನು ಸ್ಥಳಿಕರು ನಂದಿಕೋಲ ಬಸವಣ್ಣನೆಂದು ಕರೆಯುತ್ತಾರೆ. ಇದರಲ್ಲಿ ಒಂದು ಶಿಲಾಸ್ತಂಭದ ಸುತ್ತಲು ಚೌಕಾಕಾರದ ಕಲ್ಲಿನಕಟ್ಟೆ ಇದೆ. 

ಈ ನಂದಿ ಸ್ತಂಭದ ಎತ್ತರ ೪.೨ ಅಡಿ, ಅಗಲ ೧.೧x೦.೭ ಅಡಿಯುಳ್ಳ ಚೌಕಾಕಾರದ ಸ್ತಂಭದ ನಡುವೆ ಉಬ್ಬು ಶಿಲ್ಪದಲ್ಲಿ ಒಬ್ಬ ವ್ಯಕ್ತಿಯು ಕೈಮುಗಿದು ನಿಂತಿದ್ದಾನೆ. ಆತನ ಎರಡು ಬದಿಗಳಲ್ಲಿ ಇಬ್ಬರು ಸ್ತ್ರೀಯರಿದ್ದಾರೆ. ಅವರು ಆತನ ಪತ್ನಿಯರಾಗಿರಬೇಕು. ಇವರ ಕೆಳಗೆ ನಾಗ ಶಿಲ್ಪವಿದೆ. ಸ್ತಂಭದ ಮೇಲೆ ಮಲಗಿದ ಸುಂದರವಾದ ನಂದಿಯನ್ನು ಕೆತ್ತಲಾಗಿದೆ. ಅದರ ಎತ್ತರ ೧.೧ ಅಡಿ ಇದೆ. ಈ ಶಿಲ್ಪವು ಕಾಲಕಾಲೇಶ್ವರ ದೇವಾಲಯಕ್ಕೆ ಮುಖಮಾಡಿದೆ. ಈ ರೀತಿ ನಂದಿ ಸ್ತಂಭವನ್ನು ನಡೆಸುವದು ಉತ್ತರಕಾಲೀನ ವಿಜಯ ನಗರ ಕಾಲದಿಂದ, ಅದರಲ್ಲೂ ವಿಶೇಷವಾಗಿ ಇದು ವೀರಶೈವರಿಂದ ಆರಂಭಿಸಲಾಯಿತೆಂದು ಖ್ಯಾತ ಇತಿಹಾಸ ತಜ್ಞರಾದ ಡಾ.ಅ.ಸುಂದರ ಅವರು ಅಭಿಪ್ರಾಯಪಡುತ್ತಾರೆ. ಇದಕ್ಕೆ ಪುಷ್ಠಿ ನೀಡುವಂತೆ ಕಾಲಕಾಲೇಶ್ವರದಲ್ಲಿರುವ ಶಾಸನವೊಂದು ವಿಜಯನಗರ ಅರಸರಿಗೆ ಸೇರಿದೆ. ಅವರು ಈ ದೇವಾಲಯವನ್ನು ಜೀರ್ಣೋದ್ದಾರ ಮಾಡಿ ಇದಕ್ಕೆ ಅನೇಕ ದತ್ತಿಗಳನ್ನು ನೀಡಿದ್ದನ್ನು ಶಾಸನವು ಉಲ್ಲೇಖಿಸುತ್ತದೆ. ಇಲ್ಲಿನ ಸನಿಹದ ಕಣಿವೆಯಲ್ಲಿ ವಿಜಯನಗರದ ಕಾಲದ ಆನೆಗುಂದಿ ಬಸವಣ್ಣ ಕರೆಯುವ ಬೃಹದಾಕಾರದ, ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವಂತಹ ನಂದಿ ಶಿಲ್ಪವಿದೆ.
 ಈ ಸ್ಮಾರಕ ನಂದಿ ಸ್ತಂಭದಲ್ಲಿ ಯಾವದೇ ಬರಹವಿರದಿದ್ದರೂ ಇಲ್ಲಿರುವ ದ್ವಿಪತ್ನಿ ಸಮೇತನಾಗಿರುವ ವ್ಯಕ್ತಿಯನ್ನು  ಸೂಕ್ಷ್ಮವಾಗಿ ಗಮನಿಸಿದರೆ ಈತನು ವಿಜಯ ನಗರ ಕಾಲಕ್ಕೆ ಸೇರಿದ್ದಾನೆ. ಇಲ್ಲಿರುವ ಶಾಸನವು ವಿಜಯನಗರದ ಎರಡನೆಯ ಹರಿಹರ(೧೩೭೭-೧೪೦೪)ನ ಕಾಲಕ್ಕೆ ಸೇರಿದ್ದರಿಂದ ಈ ನಂದಿ ಸ್ಮಾರಕ ಶಿಲ್ಪವು ೧೪-೧೫ ನೆಯ ಶತಮಾನಕ್ಕೆ ಸೇರುತ್ತದೆ. ಆದರೆ ಆ ವ್ಯಕ್ತಿ ಯಾರೆಂದು ಹೇಳಲಾಗದು. ಇತನು ಆ ಕಾಲದ ರಾಜ ಪ್ರಮುಖ, ಇಲ್ಲವೇ ಕಾಲಕಾಲೇಶ್ವರನ ಅಪ್ಪಟ ಭಕ್ತನಾಗಿರಬೇಕು. 
ಅಂತೆಯೇ ಮೇಲೆ ನಂದಿಯನ್ನು ಹೊತ್ತು ಕೈಮುಗಿದು ನಿಂತು, ದೇವಾಲಯಕ್ಕೆ ಮುಖ ಮಾಡಿದ್ದಾನೆ. ಅಂದಿನ ಕಾಲದಲ್ಲಿ ರಾಜ ಪ್ರಮುಖರು ಮಡಿದಾಗಲೂ ಕೂಡಾ ಅದರ ದ್ಯೋತಕವಾಗಿ ನಂದಿ ಶಿಲ್ಪವನ್ನು ನಿಲ್ಲಿಸುತ್ತಿದ್ದರೆಂಬ ಅಭಿಪ್ರಾಯ ಕೂಡಾ ಇದೆ.  ಈ ಶಿಲ್ಪದ ಪಕ್ಕದಲ್ಲಿಯೇ ಮತ್ತೊಂದು ಇಂತಹದೇ ಸ್ಮಾರಕವುಳ್ಳ ಶಿಲ್ಪವಿದೆ. ಅದು ಭಗ್ನಗೊಂಡಿದ್ದು. ಇದರ ಮೇಲ್ಭಾಗದಲ್ಲಿ ನಂದಿ ಶಿಲ್ಪ ಇಲ್ಲ. ಅದರ ಎತ್ರರ ೩.೬ ಅಡಿ ಇದೆ. ಇದು ವೃತ್ತಾಕಾರದಲ್ಲಿದ್ದು, ಇದರ ಸುತ್ತಳತೆ ೩.೪ ಅಡಿ ಇದೆಅದೂ ಕೂಡಾ ಸನಿಹದ ಸ್ಮಾರಕದಲ್ಲಿರುವಂತೆ ದ್ವಿಪತ್ನಿ ಸಮೇತನಾದ ಕೈಮುಗಿದ ವ್ಯಕ್ತಿಯ ಉಬ್ಬು ಶಿಲ್ಪವಿದೆ. ಇದು ಅಪೂರ್ಣಗೊಂಡ ಒರಟಾಗಿ ಕೆತ್ತಿದ ಶಿಲ್ಪವಾಗಿದೆ.  ಈ ಬಗ್ಗೆ ಸಂಶೋಧನೆ ನಡೆಯಬೇಕಾಗಿದೆ.

                                                                      - ಡಾ.ಮಲ್ಲಿಕಾರ್ಜುನ ಕುಂಬಾರ
* ಫೋಟೊ ವಿವರ,
, ೨) ಕಾಲಕಾಲೇಶ್ವರದಲ್ಲಿರುವ ನಂದಿ ಶಿಲ್ಪ ಸ್ಥಂಭ
೩) ದೇವಸ್ಥಾನಕ್ಕೆ ಮುಖಮಾಡಿರುವ ನಂದಿ ಶಿಲ್ಪ ಸ್ಥಂಭ
೪) ನಂದಿ ಶಿಲ್ಪ ನಂದಿ ಸ್ಥಂಭ ಸನಿಹದಲ್ಲಿರುವ ತುಂಡಾದ ಮತ್ತೊಂದು ಸ್ಥಂಭ


* ವಿಳಾಸ; ಡಾ.ಮಲ್ಲಿಕಾರ್ಜುನ ಕುಂಬಾರ.
          ವಚನ
      ರಾಜೂರ-೫೮೨೨೩೦
      ತಾ;ರೋಣ, ಜಿ;ಗದಗ
ದೂರವಾಣಿ; [೦೮೩೮೧] ೨೬೨೯೨೫, (ಸನಿಹವಾಣಿ::- ೯೭೩೯೩೪೧೭೨೬)
  ಇ ಮೇಲ್; mಚಿಟಟiಞಚಿಡಿರಿuಟಿ೯೨೫@gmಚಿiಟ.ಛಿom








1 comment:

  1. Intahavu aneka kade ive. Ivu saamaanyavaagi datti biTTa bhuumiya ellegallugaLaagiruvudannu kaaNabahudu.

    ReplyDelete