Saturday, March 15, 2014

ಹಸ್ತ ಪ್ರತಿಗಳು ಮತ್ತು ಐತಿಹ್ಯ



ಹಸ್ತಪ್ರತಿಗಳ ಬಗೆಗಿನ ನಂಬಿಕೆಗಳು ಮತ್ತು ಆಚರಣೆಗಳು

ಬಹುಕಾಲ ಉಳಿದು ನಿಲ್ಲುವ ಶಿಲೆ, ಸುಟ್ಟಮಣ್ಣು, ಲೋಹಪಟಗಳಂತಹ ಭಾರವಾದ ವಸ್ತುಗಳಲ್ಲದ, ಅಲ್ಪಕಾಲದಲ್ಲಿ ಅಳಿದುಹೋಗುವ ವಸ್ತ್ರಪಟಗಳು. ವೃಕ್ಷಪತ್ರಗಳು ಕಾಗದಗಳಂತಹ ಹಗುರ ವಸ್ತುಗಳ ಮೇಲಿನ ಕೈಬರಹಗಳು ಮಾತ್ರ ಹಸ್ತಪ್ರತಿ ವರ್ಗದಲ್ಲಿ ಸೇರುತ್ತವೆ.
ಹಸ್ತಪ್ರತಿಗಳು ಲೌಕಿಕ-ಅಲೌಕಿಕ ಜೀವನದ ಉತ್ಕರ್ಷೆಗೆ ಅಗತ್ಯ ಎಂಬುದು ಮನಗಂಡಂತಹ ಕೆಲವರು ಅವುಗಳ ಪೋಷಣೆ, ರಕ್ಷಣೆ, ಅಭಿವೃದ್ಧಿ ಕಾರ್ಯ ಮಾಡುವುದು. ಅದಕ್ಕೂ ಮಿಗಿಲಾಗಿ ಅದೂ ಒಂದು ಧಾರ್ಮಿಕವಾದಂತಹ ಕರ್ತವ್ಯ ಎಂದು ತಿಳಿದು ಕಾರ್ಯ ಮಾಡುತ್ತದ್ದರು.
ಶಾತವಾಹನರು, ಗಂಗರು, ಚಾಲುಕ್ಯರು, ರಾಷ್ಟ್ರಕೂಟರು, ಹೊಯ್ಸಳರು, ಮೈಸೂರು, ವಿಜಯನಗರ, ಕೆಳದಿ ಇನ್ನೂ ಮುಂತಾದ ರಾಜಮನೆತನದ ಅರಸರು ಜೈನ, ಶೈವ, ವೀರಶೈವ, ವೈಷ್ಣವ ದಂತಹ ಧರ್ಮಗಳಿಗೆ ಆಶ್ರಯ ನೀಡಿ ಹಸ್ತಪ್ರತಿಗಳ ಪೋಷಣೆ ಮತ್ತು ಅಭಿವೃದ್ಧಿಗೆ ಕಾರಣರಾಗಿದ್ದಾರೆ. ರಾಜರುಗಳ ಸಪ್ತಸಂತಾನ ಕಾರ್ಯಗಳಲ್ಲಿ ಒಂದು ಎನಿಸಿ ಹಸ್ತಪ್ರತಿಗಳ ನಿರ್ಮಾಣ ಅಭಿವೃದ್ಧಿ ಕಾರ್ಯ ಸಮಾವೇಶಗೊಂಡಿದೆ.
ಸಾಹಿತ್ಯ, ಸಮಾಜ, ಭಾಷೆ, ಇತಿಹಾಸ, ಧರ್ಮ, ನಂಬಿಕೆ, ಆಚರಣೆಗಳು, ಆಚಾರ-ವಿಚಾರ, ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ, ವೈದ್ಯ-ವೇದ, ಲೌಕಿಕಶಾಸ್ತ್ರ ಹೀಗೆ ಅನೇಕ ಅಂಶಗಳನ್ನು ಹಸ್ತಪ್ರತಿಗಳು ಒಳಗೊಂಡಿದ್ದು. ಹಸ್ತಪ್ರತಿಗಳು ಹೊಂದಿರುವ ವಿಷಯಗಳ ಕ್ಷೇತ್ರ ವೈವಿಧ್ಯತೆಯ ಅವಕಾಶಗಳನ್ನು ಓದುಗರಲ್ಲಿ ಕಲ್ಪಿಸುವಂತದ್ದಾಗಿದೆ.
ಆಚಾರ್ಯರ ಸ್ವ-ಅಧ್ಯಯನ ಪ್ರವಚನಗಳಿಗಾಗಿ ಮಠಮಂದಿರಗಳ ಧಾರ್ಮಿಕ ಹಸ್ತಪ್ರತಿ ಭಂಡಾರಗಳು ಅಧ್ಯಯನದ ಹವ್ಯಾಸ ಕಾರಣಕ್ಕಾಗಿ ವೈಯಕ್ತಿಕ ಗ್ರಂಥ ಭಂಡಾರಗಳೂ ನಮ್ಮ ದೇಶದಲ್ಲಿ ಸಂವರ್ಧಿಸಿದವು. ಗ್ರಂಥದಾನದಂತಹ ಪುಣ್ಯಕಾರ್ಯ ನೆವದಿಂದ ಹಸ್ತಪ್ರತಿಗಳು ಪೂಜಾಯೋಗ್ಯವಾದವು ಎಂಬುದು ಅವುಗಳ ಕುರಿತ ಅಲೌಕಿಕ ನಂಬಿಕೆ ಆದರೆ. ಕುಮಾರ ವ್ಯಾಸನು ತಾನು ತನ್ನ ಕೈಯ್ಯಾರೆ ಬರೆದ ಮಹಾಭಾರತದ ಪ್ರತಿಯನ್ನು ನೆರೆಹಳ್ಳಿಯ ಶ್ರೀಮಂತರದಲ್ಲಿ ಒತ್ತೆಯಿಟ್ಟಿದ್ದನು ಎಂಬ ನಂಬಿಕೆಗಳು ಹಸ್ತಪ್ರತಿಗಳ ಬಗೆಗಿನ ಲೌಕಿಕ ನಂಬಿಕೆಗಳ ಮಹತ್ವವನ್ನು ಸ್ಪಷ್ಟಪಡಿಸುತ್ತವೆ.
ಹಸ್ತಪ್ರತಿಗಳ ಬಗೆಗೆ ಅನೇಕ ನಂಬಿಕೆಗಳು ಆಚರಣೆಗಳು ಇರುವುದನ್ನು ಅನೇಕ ಸಂಶೋಧಕರು, ವಿದ್ವಾಂಸರುಗಳ ಕ್ಷೇತ್ರಕಾರ್ಯಗಳಿಂದ ತಿಳಿಯಬಹುದು. ಅಂತಹ ಕೆಲವು ನಿದರ್ಶನಗಳೆಂದರೆ;
ವೀರಶೈವರಲ್ಲಿ ಶರಣರ ವಚನಗಳ ಹಸ್ತಪ್ರತಿ ಕಟ್ಟುಗಳನ್ನು ದೇವರು ಎಂದು ಪರಿಭಾವಿಸಿ ಅವುಗಳನ್ನೆ ಪೂಜಿಸುತ್ತಾ ಬಂದ ಕೊಡೇಕಲ್ಲ ಬಸವಣ್ಣನ ಪಂರಪರೆಯೊಂದಿಗೆ ವಿಶೇಷವಾಗಿ ಕಾಲಜ್ಞಾನದ ವಚನಗಳನ್ನೇ ಸಾರುವ ಈ ಪರಂಪರೆಯ ಗುಡಿಗಳಲ್ಲಿ ಪೀಠದ ಮೇಲೆ ಹಸ್ತಪ್ರತಿಗಳನ್ನ ವಸ್ತ್ರದಲ್ಲಿ ಸುತ್ತಿಟ್ಟು ನಿತ್ಯವೂ ಪೂಜಿಸುವ ಕ್ರಮ ಇರುವುದು ತಿಳಿಯುತ್ತದೆ ಎಂಬುದು ವೀರಶೈವ ಹಸ್ತಪ್ರತಿಗಳಿಂದ ತಿಳಿಯುತ್ತದೆ. ಅಲ್ಲದೆ ಬಾಗಲಕೋಟೆ ಜಿಲ್ಲೆಯ ಅಮೀನಗಡದ ಪ್ರಭುರಾಜೇಂದ್ರ ಮಠದಂತಹ ಹಲವು ವೀರಶೈವ ಮಠಗಳಲ್ಲಿ ಇಂದಿಗೂ ಹಸ್ತಪ್ರತಿಗಳನ್ನೇ ಗದ್ದಿಗೆ ಮೇಲಿಟ್ಟು ಪೂಜಿಸಲಾಗುತ್ತಿದೆ. ಹಲವಾರು ಮನೆಗಳ ಜಗುಲಿಯ ಮೇಲೆ/ದೇವರ ಕೋಣೆಗಳಲ್ಲಿ ಹಸ್ತಪ್ರತಿಯ ಗಂಟುಗಳು ದೇವರಸ್ಥಾನ ಅಲಂಕರಿಸಿದ್ದು ಪೂಜೆಗೆ ಒಳಪಟ್ಟಿವೆ.
ಪುರಾಣ ಚರಂತಿಗೆ ಮತ್ತು ವೀರಶೈವ ಮಠಗಳ ಅಧಿಕಾರವನ್ನು ಹಸ್ತಾಂತರ ಮಾಡುವಾಗ ಪ್ರತಿಯೊಬ್ಬ ಸ್ವಾಮಿಗೂ ಮೊದಲ ಕಾಣಿಕೆಯಾಗಿ ಗುರುವಾರದವರು ಹಸ್ತಪ್ರತಿಗಳ ಕಟ್ಟನ್ನೇ ಕೊಡುತ್ತಾರೆ. ಈ ಬಗೆಗೆ ವಿವರಣೆ:
ಮಠಸ್ತರಾದ ಚರಮೂರ್ತಿಗಳಲ್ಲಿ ಚರಂತಿಗೆ ಪುಸ್ತಕ ಅಂದರೆ ಬಸವ ಪುರಾಣ, ಶಿವಪುರಾಣ, ಪ್ರಭುಚನ್ನಬಸವರಾಜೇಂದ್ರರು ಶಿವಮೂರ್ತಿಯಾದ ಸೊನ್ನಲಿಗೆಯ ಸಿದ್ಧರಾಮೇಶರಿಗೆ ರೂಪಿಸಿದ ಗೋಹೇಶ್ವರನ ವಚನಕರಣಹಸುಗೆ ಮಿಶ್ರಾರ್ಪಣ, ಸಿದ್ಧರಾಮೇಶ್ವರ ಮಂತ್ರಗೋಪ್ಯ, ಅಕ್ಕಗಳ ಸೃಷ್ಠಿಯ ವಚನ, ಪ್ರಭುದೇವರ ಸೃಷ್ಠಿಯ ವಚನ, ಸಿದ್ಧೇಶ್ವರರ ವಚನ, ಶೂನ್ಯಸಂಪಾದನೆ ಮುಂತಾದವುಗಳ ಸಂಗ್ರಹಿಸಿದ ಪುಸ್ತಕವ ಸಭಾಮಧ್ಯದಲ್ಲಿ ಆ ಶಿವಾನುಭವ ಚರಂತಿಗೆ ತೆಗೆದುಕೊಂಡು ಗುರುವರನ ಕಡೆಯಿಂದ ಆ ಶಾಸ್ತ್ರವಂ ಶಿಷ್ಯೋತ್ತಮನು ಶಿವಮಂತ್ರ ಗುರುಪ್ರಸಾದ ಮುಖನಾದ ಅಂಗಲಿಂಗ ಸಾಮರಸ್ಯ.ಮುಂತಾಗಿ ಮೂವತ್ತಾರು ತತ್ವಂಗಳು ತಿಳಿದಾತನು ಶಾಸ್ತ್ರವಾ ಗುರುಗಳಿಂ ಶ್ರವಣಗೊಂಡಾತನಾದ ವಿರಕ್ತಗೆ ಶಾಸ್ತ್ರದ ಕಟ್ಟು ಹಿಡಿಯಬೇಕು. ಈತನಿಗೆ ಶಿವಾನುಭವ ಶಾಸ್ತ್ರವೇ ಆಗಲಿ ಪುರಾಣ ಪುಸ್ತಕವೇ ಆಗಲಿ ಇವುಗಳನ್ನು ಗುರುಗಳಾದ ಚರಮೂರ್ತಿಗಳು ಸಭೆಯಲ್ಲಿಕೊಟ್ಟು ತಮ್ಮಾಸನದಲ್ಲಿ ಕುಳ್ಳಿರಿಸಿಕೊಳ್ಳಲು ಆ ಗಣವಾನೆ ಚರಮೂರ್ತಿ ಎನಿಸುವನು.
ಇದು ಹಸ್ತಪ್ರತಿಗಳನ್ನು ಒಂದು ಪೀಳಿಗೆಯಿಂದ ಒಂದು ಪೀಳೆಗೆಗೆ ಸಂರಕ್ಷಿಸುವದು ಒಂದಂಶವಾದರೆ ಇನ್ನೊಂದು ಹಸ್ತಪ್ರತಿಗಳು ಅಲೌಕಿಕವಾದ ಜ್ಞಾನವನ್ನು ಒಳಗೊಂಡಿವೆ ಆದುದರಿಂದ ಅವು ದೇವರ ಸಮಾನವಾದಂತಹವು ಎಂಬ ಅಗಾಧವಾಗಿ ನಂಬಿ ಅದನ್ನು ಇಂದಿಗೂ ಆಚರಿಸಲಾಗುತ್ತಿದೆ.
ಹಸ್ತಪ್ರತಿಗಳ ರಚನೆಯು ಇಹ-ಪರ ಫಲದಾಯಿನಿ ಎಂಬುದು ಅಂದಿನ ಅನೇಕ ಕವಿಗಳ ನಂಬಿಕೆ ಅಂತೆಯೇ ಕವಿಯು ತಾನೇ ಬರೆದಿರಲಿ ಅಥವಾ ಲಿಪಿಕಾರನಿಂದ ಬರೆಯಿಸಿರಲಿ ಕಾವ್ಯದ ಮಂಗಲ ಪದ್ಯದಲ್ಲಿ ತನ್ನ ಕೃತಿ ಅಥವಾ ಪ್ರತಿಗಳನ್ನು ಓದುವಂತವರಿಗೆ ಅನೇಕಾನೇಕ ಫಲಗಳು ದಕ್ಕಬೇಕು ಎನ್ನುವ ಆಶಯಗಳನ್ನು ವ್ಯಕ್ತಪಡಿಸಿರುವುದು ಕಂಡುಬರುತ್ತದೆ.
ಪಂಪ-ವಿಕ್ರಮಾರ್ಜುನ ವಿಜಯಂ
ಕರಮಳ್ಕರ್ತು ಸಮಸ್ತಭಾರತಕಥಾಸಂಬಂಧಮಂ ಭಾಜಿಸಲ್
ಬರೆಯಲ್ ಕೇಳಲೊಡರ್ಚುವಂಗಮಿದರೊಳ್ ತನ್ನಿಷ್ಟವಷ್ಟನ್ನಮು
ತ್ತರಮಕ್ಕುಂ ಧೃತಿ ತುಷ್ಟಿ ಪುಷ್ಟಿ ವಿಭವಂ ಸೌಭಾಗ್ಯಮಿಷ್ಟಾಂಗನಾ
ಸುರತಂ ಕಾತಿಯಗುಂತಿ ಶಾಂತಿ ವಿಭವಂ ಭದ್ರಂ ಶುಭಂ ಮಂಗಳಂ.
ಜನ್ನನ ಅನಂತನಾಥ ಪುರಾಣದ ಅಂತ್ಯದ ಪದ್ಯ ಇದೇ ಭಾವನೆಯನ್ನ ತಿಳಿಸುತ್ತದೆ
ಈ ಕಥೆಯ ಕೇಳ್ದ ಭವ್ಯ
ನೀ ಕಂಮಿದಂ ಬರೆವ ನೆನೆವ ವಂದಿಪ ಜನರುಂ
ಲೋಕಂ ಸ್ತುತಿಯಿಸೆ ನೆಗಳ್ದರ
ನೇಕರು ಸುರಲೋಕ ಮೋಕ್ಷಸುಖಮಂ ಪಡೆದರ್.
ಹಸ್ತಪ್ರತಿಗಳ ಬಗೆಗೆ ಜೈನರಲ್ಲಿರುವ ನಂಬಿಕೆ ಎಂದರೆ; ಜೈನರು ನೋಂಪಿ ಆಚರಣೆಯ ಅಂಗವಾಗಿ ಶಾಸ್ತ್ರದಾನ ಮಾಡುವುದು. ಮುನಿಗಳ ಹಿರಿಯರ ಮರಣಾನಂತರದಲ್ಲಿ ಧಾರ್ಮಿಕ ಕಾವ್ಯ ರಚನೆಗೆ ಪ್ರೇರಕವಾಗುವದು ಪುಣ್ಯಕಾರಕವೆಂದು ಜೈನರು ಭಾವಿಸಿದಂತಿದೆ.
ಗುರು ಜಿನಚಂದ್ರ ಮುನೀಂದ್ರರ
ಪರೋಕ್ಷದೊಳ್ ತಂಮುತಿರ್ವರುಂ ಪೊನ್ನಿಗನಿಂ
ಬರೆಯಿಸಿದರ್ ಸರಳೋರ್ವಿಗೆ
ಪರೆಯಿಸಿದರ್ ಸಲೆ ಪುರಾಣ ಚೂಡಾಮಣಿಯಂ
ಎಂದು ಹೇಳುವ ರನ್ನನು ಅತ್ತಿಮಬ್ಬೆಯ ಕೂಡ ತನ್ನಿಂದ ಇದೇ ರೀತಿ ಅಜಿತಪುರಾಣವನ್ನು ಬರೆಯಿಸಿದಳೆನ್ನುತ್ತಾಳೆ. ನಂತರ
ಶಾಂತಿಪುರಾಣದ ಪರಿಶಿಷ್ಟದಲ್ಲಿನ ಅಜ್ಞಾತ ಕತ್ತೃಕಗಳೆನ್ನಲಾದ ಪದ್ಯಗಳಲ್ಲಿ ಒಂದಾದ.
ಎಸೆಯದೆ ಪೊಳ್ದುಕೆಟ್ಟಪುದು ಶಾಂತಿಪುರಾಣಮದಂ ನೆಗಳ್ದುವೆಂ
ವಸುಧೆಯೊಳೆನ್ನ ತಂದೆಯ ಪರೋಕ್ಷದೊಳೆಂದು ಸಹಸ್ರ ಪುಸ್ತಕ
ಪ್ರಸರಮನತ್ತಿಮಬ್ಬೆ ಪರಮಾದರದಿಂ ಬರೆಯಲ್ಕೆವೇಳ್ದ ಪೆಂಪ
ಸದಳಮದ್ವಿತೀಯ ಮಸಮಂ ಸತಿ ಭಾವಿಸಲೆಯ್ದೆ ಬಣ್ಣಿಪಲ್|
- ಎಂಬ ಪದ್ಯದಲ್ಲಿ ತಂದೆಯ ಪರೋಕ್ಷದಲ್ಲಿಯೇ (ಮರಣಾನಂತರ) ಅತ್ತಿಮಬ್ಬೆ ಶಾಂತಿಪುರಾಣದ ಒಂದು ಸಾವಿರ ಪ್ರತಿಗಳನ್ನು ಬರೆಸಿದಳು. ಎನ್ನಲಾಗಿದೆ.
ಶಿವಮತ ಪ್ರತಿಷ್ಠಾಪನ ಗ್ರಂಥದಲ್ಲಿನ ಕೊನೆಯ ಪದ್ಯವಾದ
ನಿರುತದಿಂದ ತತ್ವಶಿವಮಹಿಷಟ್ಪದವ
ಬರೆದೋದಿ ಅರ್ಥವನು ಕೇಳೇಳಿದೊಡೆ ನವರಸವು
ವರಭೋಗ ಮೋಕ್ಷಗಳು ದೊರಕೊಂಡು ಸುಖವಿಹರು ಸಂತತಂ ಶಿವಶರಣರೂ
ಕರಿ ಸಿಹ್ವಾ ಹುಲಿ ಕರಡಿ ರಾಜಭಯ ಚೋರಭಯ
ಅರಿಮರಣ ಅಪಮೃತ್ಯು ತೋಳ ವೃಶ್ಚಿಕ ವುರಗ
ದುರುಳಯವದೂತರಾಜಿಗಳ ನಿಲ್ಲದೆ ವೋಡುವವು ಪರಮಾತನವು.
-       ಎಂದುಗ್ಗಡಿಸುತ್ತದೆ. . . . . . ಇಲ್ಲಿ ಚೇಳು ಹಾವು ಮೊದಲಾಗಿ ಆನೆ, ಸಿಂಹ, ಕರಡಿ, ರಾಜಭಯ, ಕಳ್ಳತನದ ಭಯ, ಯಮಧೂತರ ಭಯ ಈ ಎಲ್ಲವುಗಳಿಂದ ಪಾರಾಗಲು ಈ ಗ್ರಂಥವನ್ನು ಬರೆದೋದಬೇಕು ಅಷ್ಟೇ ಏಕೆ ಮುಕ್ತಿಯನ್ನು ಪಡೆಯಲು ಕೂಡ ಇದು ಸಹಾಯಕಾರಿಯಾಗಿದೆ.
ಪಿತ್ರಾರ್ಜಿತ ಆಸ್ಥಿಯನ್ನು ಮಕ್ಕಳು ಪಾಲು ಮಾಡಿಕೊಳ್ಳುವ ಸಮಯದಲ್ಲಿ ಮನೆಗಳಲ್ಲಿದ್ದ ಹಸ್ತಪ್ರತಿ ಕಟ್ಟುಗಳನ್ನು ಸಹ ಆಸ್ತಿಯಂತೆ ಸಮಾನವಾಗಿ ಹಂಚಿಕೊಳ್ಳುತ್ತಿದ್ದರು ಹಸ್ತಪ್ರತಿಗಳು ಎಂದರೆ ಅವರ ಪಾಲಿಗೆ ದೇವರು. ಹಸ್ತಪ್ರತಿಗಳು ಇರುವ ಮನೆಗೆ ಏಳಿಗೆ, ಪುಣ್ಯ, ಐಶ್ವರ್ಯ ಎಲ್ಲದೂ ಬರುವುದು ಎಂದು ನಂಬಿ ಅವುಗಳನ್ನು ತಮ್ಮ ತಮ್ಮ ಮನೆಗಳಲ್ಲಿಟ್ಟು ಅವುಗಳು ಸ್ವಲ್ಪವೂ ಮುಕ್ಕಾಗದಂತೆ ಪೂಜಿಸುವ ಆಚರಣೆಗಳೂ ಇವೆ.
ತಾಳೆ ಓಲೆ ಮೆಲಿನ ಬರೆಹ ಒಂದು ಸಾವಿರ ವರ್ಷ ತಾಳಿಕೆ ಬರುತ್ತದೆನ್ನುವ ನಂಬಿಕೆಯಿಂದ ಸಂಪ್ರದಾಯಸ್ಥ ಜನರು ಜಾತಕಗಳನ್ನು ಓಲೆಗರಿಗಳ ಮೇಲೆ ಒಳ್ಳೆಯ ದಿನ, ಮುಹೂರ್ತಗಳಲ್ಲಿ ಬರೆಸುವ ಮೂಲಕ ತಾಳೆಗರಿಗಳಂತೆ ತಮ್ಮ ಆಯುಷ್ಯವೂ ಶಾಶ್ವತವಾಗಿರಲೆಂದು ಬರೆಸಿಡುತ್ತಿದ್ದರು ಮತ್ತು ಈ ಹಸ್ತಪ್ರತಿಗಳನ್ನ ಓದಿಸುವ ಆಚರಣೆಗಳು ಬಹಳ ಪೂಜ್ಯನೀಯವಾಗಿವೆ.
ದಸರಾ ಮಹೋತ್ಸವದ ಆಯುಧ ಪೂಜೆಯ ದಿನದಂದು ಮೈಸೂರಿನಲ್ಲಿ ಮಹಾರಾಜರ ಸಿಂಹಾಸನದ ಮೇಲೆ ಹಸ್ತಪ್ರತಿಗಳನ್ನಿಟ್ಟು ಪೂಜೆ ನಡೆಯುತ್ತದೆ. ಹಸ್ತಪ್ರತಿಗಳು ಪೂರ್ವಿಕರ ಸ್ವತ್ತು ಎಂಬ ಕಾರಣದಿಂದ ಮತ್ತು ಅವುಗಳಿಗೆ ಪೂಜೆ ಸಲ್ಲಿಸುವದರಿಂದ ನಾಡಿನ ಜನತೆಗೆ ವಿದ್ಯೆ, ಬುದ್ಧಿ, ಸಂಪತ್ತು ಸುಖ ಲಭಿಸುವುದು ಎಂಬ ಕಾರಣದಿಂದ ಈ ಆಚರಣೆ ಪ್ರತೀವರ್ಷ ನಡೆಯುತ್ತಿದೆ.
ಹಸ್ತಪ್ರತಿ ಹೊತ್ತಿಗೆಗಳಲ್ಲಿ ಬಂಗಾರ, ನಿಕ್ಷೇಪಗಳಿರುವ ಮಾಹಿತಿ ಸಂಕೇತಗಳಿರುತ್ತವೆ. ತಮ್ಮ ಮನೆತನದಲ್ಲಿ ಈ ಹಸ್ತಪ್ರತಿ ಓದಬಲ್ಲ ಬುದ್ದಿವಂತ ಹುಟ್ಟಿಬರುವನು. ಅದನ್ನು ಬೇರೆಯವರಿಗೇಕೆ ಕೊಡಬೇಕು? ಎಂಬ ಕೆಲ ನಂಬಿಕೆಗಳನ್ನು ಹೊಂದಿದ್ದ ಜನರು ತಮ್ಮ ಮನೆಗಳಲ್ಲಿದ್ದ ಹಸ್ತಪ್ರತಿಗಳನ್ನು ಯಾರಿಗೂ ಕೊಡುತ್ತಿರಲಿಲ್ಲ. (ಮಣಿಹ. ಪುಟ-೭೯)
ಪಂಡಿತರಲ್ಲಿ ಕೆಲವರು ವಿಚಿತ್ರ ಸ್ವಭಾವಗಳಿಂದ ಕೂಡಿದವರಾಗಿದ್ದು, ಜೀವನ ಪರ್ಯಂತ ತನ್ನಲ್ಲಿದ್ದ ಹಸ್ತಪ್ರತಿಗಳ ಸಂಪೂರ್ಣ ಉಪಯೋಗ ಪಡೆದುಕೊಂಡು ತಾನು ಸತ್ತಮೇಲೆ ಆ ಹಸ್ತಪ್ರತಿಗಳು ಬೇರೆಯವರಿಗೆ ಸಿಕ್ಕಿ ಅವುಗಳನ್ನು ಅವರು ಅಪವಿತ್ರಗೊಳಿಸಬಹುದೆಂದು ಕಲ್ಪಿಸಿ ಅಪವಿತ್ರವಾದರೆ ತನ್ನ ಕುಟುಂಬಕ್ಕೆ ಕೇಡು ಉಂಟಾಗುತ್ತದೆ ಎಂದು ನಂಬಿ ಅವುಗಳನ್ನು ಗಂಗೆಯಲ್ಲಿ ಬಿಡುತ್ತಿದ್ದರಂತೆ. (ಮಣೆಹ- ಪು-೮೭)
ಹಸ್ತಪ್ರತಿಗಳಿದ್ದ ಕೆಲ ಮನೆಗಳಲ್ಲಿ ಅವುಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆ ಅವುಗಳನ್ನು ಸರಿಯಾಗಿ ಸಂರಕ್ಷಣೆ ಮಾಡದೇ ಅವು ಮುಕ್ಕಾದರೆ ತಮ್ಮ ಮುಂದಿನ ಪೀಳಿಗೆಗೆ ಕೆಡುಕುಂಟಾಗುತ್ತದೆ. ದೇವರೇ ನಮಗೆ ಕೆಟ್ಟದ್ದು ಮಾಡುತ್ತಾನೆ ಎಂಬ ಭಯಗಳಿಂದ ನದಿಗೋ ಕೆರೆಗಳಿಗೋ ಪೂಜೆ ಮಾಡಿಬಿಡುತ್ತಿದ್ದರು. (ಹಸ್ತಪ್ರತಿ- ಒಂದು ಅಧ್ಯಯನ - ಬಿ.ಕೆ. ಹಿರೇಮಠ ಉಧೃತ - ಪುಟ.೧೩೯)
ಕೆಲವೊಂದು ಸನ್ನಿವೇಶಗಳಲ್ಲಿ ಒಂದಕ್ಕೊಂದಕ್ಕೆ ಸಂಬಂಧಗಳೇ ಇಲ್ಲದಂತಹ ಆಚರಣೆಗಳು ಹಸ್ತಪ್ರತಿಗಳನ್ನ ಕುರಿತ ನಂಬಿಕೆಗಳು ಇವೆ. ಅವುಗಳೆಂದರೆ;
ಅಪೌತ್ರರಿಗೆ, ಅನರ್ಹರಿಗೆ ಹಸ್ತಪ್ರತಿಗಳನ್ನು ಘಳಿಗೆ ಸಮಯಗಳನ್ನು ನೋಡದೆ ದಾನ ನೀಡಿದರೆ ತಮ್ಮ ಆಯುಷ್ಯವನ್ನ ತಾವೇ ಅಲ್ಪಗೊಳಿಸಿಕೊಳ್ಳುವರು ಅಕಾಲ ಮರಣಕ್ಕೆ ಬಲಿಯಾಗುವರು ಎಂಬ ನಂಬಿಕೆಗಳು ಇವೆ.
ಇಷ್ಟಾರ್ಥ ಸಿದ್ದಿಗಾಗಿ ಕರ್ನಾಟಕ ಕಾದಂಬರಿಯನ್ನು ಮತ್ತು ಪಂಚತಂತ್ರದ ಹಸ್ತಪ್ರತಿಗಳನ್ನು ಓದಿಸುವುದು.
ಸಕಲ ಐಶ್ವರ್ಯ ಪ್ರಾಪ್ತಿಗಾಗಿ ಅಮರಕೋಶ, ಶಬ್ದಮಣಿದರ್ಪಣಂ ಕಾಲಜ್ಞಾನದಂತಹ ಹಸ್ತಪ್ರತಿಗಳನ್ನು ಓದಿಸುವುದು.
ಆಯಸ್ಸು ಆರೋಗ್ಯಕ್ಕಾಗಿ ಶೃಂಗಾರ ರಸ ಪ್ರಧಾನವಾದ ಲೀಲಾವತಿ ಹಾಗೂ ಶೂಪಶಾಸ್ತ್ರದ ಹಸ್ತಪ್ರತಿಗಳನ್ನು ಓದಿಸುವುದು.
ಹೀಗೆ ಕೆಲವು ನಂಬಿಕೆಗಳನ್ನ ಕಾಣಬಹುದಾಗಿದೆ.
ಕರ್ಣಾಟ ಭಾರತ ಕಥಾಮಂಜರಿಯ ವಿರಾಟಪರ್ವದಲ್ಲಿ ಪಾಂಡವರು ಸಾಮಾನ್ಯ ಜನರಂತೆ ಇದ್ದ ಕಾಲ. ಆ ಕಾಲದಲ್ಲಿ ಕೃತಿಯ ಪ್ರಕಾರ ವಿರಾಟನ ನಗರವು ಮಳೆ, ಬೆಳೆಗಳು ಸಾಕಷ್ಟು ಆಗಿ ಬಹಳ ಸಮೃದ್ಧಿಯಿಂದ ಕೂಡಿತ್ತು ಎಂಬ ಕಾರಣದಿಂದಲೋ ಏನೋ ಎಂಬಂತೆ ಒಟ್ಟಿನಲ್ಲಿ ಹಸ್ತಪ್ರತಿಯ ವಿರಾಟ ಪರ್ವ ಭಾಗವನ್ನು ಪಠಣ ಮಾಡಿದರೆ ಮಳೆ ಬರುವುದೆಂದು ನಂಬಿ ಅನೇಕ ಊರುಗಳ ದೇವಾಲಯಗಳಲ್ಲಿ ಮಳೆಯು ಬಾರದೆ ಬರಗಾಲ ಬಂದಂತ ಸಮಯಗಳಲ್ಲಿ ಪಠಣ (ಪಾರಾಯಣ)ವನ್ನು ಮಾಡಲಾಗುತ್ತದೆ.
ಉದಾ: ಮಲಪನಗುಡಿಯಲ್ಲಿ ಹದಿನಾಲ್ಕು ದಿನಗಳು ವಿರಾಟಪರ್ವದ ಪಾರಾಯಣದಿಂದ ಮಳೆ ಬಂದಿರುವಂತಹ (ಸಾಕ್ಷಿಗೆ ಅಲ್ಲಿನ ಜನಗಳು ಮತ್ತು ನೋಡಿದವರಿದ್ದಾರೆ. (೨೦೧೦-೧೧) ಪ್ರತೀತಿ ಇದೆ.
ಒಟ್ಟಾರೆ ಈ ನಂಬಿಕೆಗಳು, ಆಚರಣೆಗಳು, ಹಸ್ತಪ್ರತಿ ಸಂರಕ್ಷಣೆಗೆ ಯಾವುದೇ ವಿಧಾನಗಳೇ ಇಲ್ಲದ ಕಾಲದಲ್ಲಿ ಮತ್ತು ಜನರು ದೈವ ಶಕ್ತಿಯೇ ಶ್ರೇಷ್ಠ್ಠ ಆ ಶಕ್ತಿಯ ಮುಂದೆ ಬೇರಾವ ಶಕ್ತಿಯೂ ಸಮನಲ್ಲ ಎಂದು ನಂಬಿದ್ದ ಕಾಲದಲ್ಲಿ ಹಸ್ತಪ್ರತಿ ನಿರ್ಮಾಣಕಾರರೂ ವಿದ್ವಾಂಸರುಗಳೂ ಇಂತಹ ಅನೇಕ ನಂಬಿಕೆ, ಆಚರಣೆಗಳ ಮೂಲಕ ಹಸ್ತಪ್ರತಿಗಳ ರಕ್ಷಣೆಯ ಕಾರ್ಯವನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಮತ್ತು ಒಂದು ಸಮಾಜದ ಸಾಂಸ್ಕೃತಿಕ ಫಲಿತಗಳಾದ ಹಸ್ತಪ್ರತಿಗಳು ಇಲ್ಲಿಯ ವರೆವಿಗೂ ದೊರಕುವಂತೆ ಮಾಡಿರುವುದು ಇವೆಲ್ಲವುಗಳಿಂದ ತಿಳಿಯುತ್ತದೆ.

                                                                  ಮಧು ಎ.ಪಿ.
                                                                ಎಂ.ಎ.ಪಿ‌ಎಚ್.ಡಿ (೩ನೇ ಸೆಮಿಸ್ಟರ್)
                                                                 ಭಾಷಾ ನಿಕಾಯ
                                                   ಕನ್ನಡ ವಿಶ್ವವಿದ್ಯಾಲಯ, ಹಂಪಿ
                                                       ವಿದ್ಯಾರಣ್ಯ
ಪರಾಮರ್ಶನ ಗ್ರಂಥಗಳು
೧.      ಕನ್ನಡ ಹಸ್ತಪ್ರತಿಗಳ ಬಹುಪಠ್ಯೀಯ ನೆಲೆಗಳು - ಡಾ. ವೀರೇಶ ಬಡಿಗೇರ.
೨.      ಮಣೆಹ -
೩.      ಹಸ್ತಪ್ರತಿಗಳು ಒಂದು ಅಧ್ಯಯನ -  ಡಾ. ಬಿ.ಕೆ. ಹಿರೇಮಠ
೪.      ವಿಕ್ರಮಾರ್ಜುನ ವಿಜಯಂ ಎಂಬ
ಪಂಪ ಭಾರತ  -       (ಸಂ) ಟಿ.ವಿ. ವೆಂಕಟಾಚಶಾಸ್ತ್ರಿ.
೫.      ರನ್ನ ಸಂಪುಟ                    -       (ಸಂ) ಹಂಪನಾಗರಾಜಯ್ಯ.
೬.      ಜನ್ನ ಸಂಪುಟ                    -       (ಸಂ) ಸಿ.ಪಿ. ಕೃಷ್ಣಕುಮಾರ್.
        





No comments:

Post a Comment