Tuesday, March 25, 2014

ಭೀಮನ ಹಳ್ಳಿಯ ವೀರ ಗಲ್ಲುಗಳು


ಭೀಮನಹಳ್ಳಿಯಲ್ಲಿ ದೊರೆತ ಅಪ್ರಕಟಿತ ವೀರಗಲ್ಲುಗಳು
ಡಾ. ಜಿ. ಕರಿಯಪ್ಪ. ಡಾ. ಹೆಚ್.ಎನ್. ಕಾಳಸ್ವಾಮಿ.
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿ ಕಂಡುಬರುವ ಭೀಮನಹಳ್ಳಿಯು ಚಾರಿತ್ರಿಕವಾಗಿ ಪ್ರಮುಖ ಸ್ಥಳವಾಗಿದೆ. ಈ ಭಾಗದಲ್ಲಿ ಗಂಗರು, ಚೋಳರು, ಹೊಯ್ಸಳರು, ವಿಜಯನಗರದ ಅರಸರು, ಮೈಸೂರು ಒಡೆಯರು ಮತ್ತು ನಾಗಮಂಗಲದ ಪ್ರಭುಗಳು ಆಳ್ವಿಕೆ ಮಾಡಿದ್ದಾರೆ. ಹೀಗಾಗಿ ಈ ಭಾಗದಲ್ಲಿ ಅನೇಕ ವೀರಗಲ್ಲುಗಳು ದೊರಕಿವೆ.
ವೀರಗಲ್ಲು-೧: ಇದು ಭೀಮನಹಳ್ಳಿಯ ಪೂರ್ವಕ್ಕೆ ಈಶ್ವರ ದೇವಸ್ಥಾನದ ಬಲಭಾಗದಲ್ಲಿ ಕಂಡುಬರುತ್ತದೆ. ಇದು ಗ್ರಾನೈಟ್ ಕಲ್ಲಿನದಾಗಿದ್ದು ಸುಮಾರು ೪ ಅಡಿ ಎತ್ತರ, ೨ ಅಡಿ ಅಗಲ ಮತ್ತು ೪ ಇಂಚು ದಪ್ಪನಾಗಿದೆ. ಇದು ಮೂರು ಪಟ್ಟಿಕೆಗಳಿಂದ ಕೂಡಿದ್ದು ಮೊದಲನೆ ಪಟ್ಟಿಕೆಯಲ್ಲಿ ಶಿಲ್ಪಗಳನ್ನು ಗಮನಿಸಿದರೆ ಯಾರೋ ಬೇರೆ ವ್ಯಕ್ತಿಗಳು ಯುದ್ಧದಲ್ಲಿ ಹೋರಾಡಿ ಮರಣವನ್ನು ಹೊಂದಿದ್ದು ಅವರಿಗೋಸ್ಕರ ದೇವರಲ್ಲಿ ಭಕ್ತಿಪೂರ್ವಕವಾಗಿ ದೇವರನ್ನು ಬೇಡುವುದು ಕಂಡುಬರುತ್ತದೆ. ಎರಡನೇ ಪಟ್ಟಿಕೆಯಲ್ಲಿ ಮೂರು ಜನ ವ್ಯಕ್ತಿಗಳ ಉಬ್ಬು ಶಿಲ್ಪಗಳಿದ್ದು ಒಬ್ಬ ಹೆಂಗಸು, ಒಬ್ಬ ಪ್ರಮುಖ ವ್ಯಕ್ತಿ ಮತ್ತೊಬ್ಬರು ಕೈಮುಗಿದು ಧ್ಯಾನಿಸುತ್ತಿರುವ ದೃಶ್ಯ ಕಾಣಬರುತ್ತದೆ. ಮೂರನೇ ಪಟ್ಟಿಕೆಯಲ್ಲಿ ಶಿವ ಲಿಂಗಕ್ಕೆ ಒಬ್ಬ ಸ್ತ್ರೀಯು ಪೂಜೆ ಸಲ್ಲಿಸುತ್ತಿದ್ದು ಪಕ್ಕದಲ್ಲಿ ರಾಜನು ಕೈಮುಗಿದು ನಿಂತಿರುವುದು ಮತ್ತು ನಂದಿ ಶಿಲ್ಪ ಮೇಲ್ಭಾಗದಲ್ಲಿ ಸೂರ್ಯ ಚಂದ್ರರನ್ನು ಕೆತ್ತಲಾಗಿದೆ. ಒಟ್ಟಾರೆ ಈ ಶಿಲ್ಪದಲ್ಲಿ ಮೂಡಿ ಬಂದಿರುವ ದೇವ-ದೇವತೆಗಳನ್ನು ಪೂಜಿಸುವುದು ಆ ಪ್ರಾಂತದಲ್ಲಿ ಶೈವ ಪರಂಪರೆಯು ಪ್ರಚಲಿತದಲ್ಲಿತ್ತು ಎಂಬುದನ್ನು ತೋರಿಸುತ್ತದೆ.
ವೀರಗಲ್ಲು-೨: ಈ ವೀರಗಲ್ಲು ಮೂರು ಪಟ್ಟಿಕೆಗಳಿಂದ ಕೂಡಿದ್ದು ೩ ಅಡಿ ಎತ್ತರ, ೨ ಅಡಿ ಅಗಲ, ೪ ಇಂಚು ದಪ್ಪನಾಗಿದ್ದು ಗ್ರಾನೈಟ್ ಕಲ್ಲಿನದ್ದಾಗಿದೆ. ಮೊದಲನೆ ಪಟ್ಟಿಕೆಯಲ್ಲಿ ವೀರರು ಯಾವುದೋ ಒಂದು ಯುದ್ಧದಲ್ಲಿ ಆಯುಧಗಳನ್ನಿಡಿದು ವೀರಾವೇಶದಿಂದ ಪರಸ್ಪರ ಹೋರಾಟ ಮಾಡುತ್ತಿರುವ ದೃಶ್ಯ. ಎರಡನೆ ಪಟ್ಟಿಕೆಯಲ್ಲಿ ವೀರ ಯುದ್ಧದಲ್ಲಿ ಮರಣ ಹೊಂದಿದ ವ್ಯಕ್ತಿಯನ್ನು ಮಂಟಪದಲ್ಲಿ ಇರಿಸಿ ಇಬ್ಬರು ದೇವಶೂರರು ಸ್ವರ್ಗಕ್ಕೆ ಕರೆದುಕೊಂಡು ಹೋಗುತ್ತಿರುವ ದೃಶ್ಯ. ಮೂರನೇ ಪಟ್ಟಿಕೆಯಲ್ಲಿ ಸ್ವರ್ಗಕ್ಕೆ ಹೋಗಬೇಕಾದರೆ ಧಾರ್ಮಿಕ ವಿಧಿ ಅನ್ವಯ ಭಕ್ತಿಪೂರ್ವಕವಾಗಿ ಪೂಜೆ ಮಾಡುತ್ತಿರುವುದು ಅಲ್ಲದೆ ಋಷಿ ಮುನಿ ಶಿವಲಿಂಗಕ್ಕೆ ಪೂಜೆ ಸಲ್ಲಿಸುತ್ತಿರುವುದು ಕಂಡುಬಂದಿದ್ದು ಜೊತೆಗೆ ಸೂರ್ಯ ಚಂದ್ರರ ಸಾಕ್ಷಿಯಾಗಿ ಈ ವೀರಗಲ್ಲುಗಳನ್ನು ನಿಲ್ಲಿಸಿರುವುದನ್ನು ಕಾಣಬಹುದಾಗಿದೆ.
ವೀರಗಲ್ಲು-೩: ಅದೇ ಸ್ಥಳದಲ್ಲಿರುವ ಮತ್ತೊಂದು ವೀರಗಲ್ಲು ಇದು ೪ ಅಡಿ ಎತ್ತರ, ೨ ಅಡಿ ಅಗಲ ಮತ್ತು ೪ ಇಂಚು ದಪ್ಪನಾಗಿದ್ದು ಮೂರು ಪಟ್ಟಿಕೆಗಳಿಂದ ಕೂಡಿದೆ. ಮೊದಲನೆ ಪಟ್ಟಿಕೆಯಲ್ಲಿ ಇಬ್ಬರು ವೀರಯೋಧರು ಯುದ್ಧದಲ್ಲಿ ಹೋರಾಡಿ ಹಾರವಾಗಿರುವ ದೃಶ್ಯ. ಎರಡನೆ ಪಟ್ಟಿಕೆಯಲ್ಲಿ ಯುದ್ಧದಲ್ಲಿ ಮಡಿದ ಯೋಧನನ್ನು ಮಂಟಪದಲ್ಲಿ ಕುಳ್ಳಿರಿಸಿ ಸ್ವರ್ಗಕ್ಕೆ ಕರೆದುಕೊಂಡು ಹೋಗುತ್ತಿರುವ ದೃಶ್ಯ ಮೂರನೇ ಪಟ್ಟಿಕೆಯಲ್ಲಿ ಶಿವಲಿಂಗಕ್ಕೆ ಒಬ್ಬ ಮುನಿ ಮತ್ತು ನಂದಿ ಶಿಲ್ಪ ಲಿಂಗಕ್ಕೆ ತಲೆ ಎತ್ತಿ ಕೈಮುಗಿಯುತ್ತಿರುವ ಸನ್ನಿವೇಶವನ್ನು ಕಾಣಬಹುದಾಗಿದೆ.
ವೀರಗಲ್ಲು-೪: ಅದೇ ಸ್ಥಳದಲ್ಲಿ ಕಂಡುಬರುವ ಮತ್ತೊಂದು ವೀರಗಲ್ಲು. ಇದು ಸುಮಾರು ೩ ಅಡಿ ಎತ್ತರ, ಒಂದುವರೆ ಅಡಿ ಅಗಲ ಮತ್ತು ೪ ಇಂಚು ದಪ್ಪನಾಗಿದ್ದು ಇದರಲ್ಲಿ ಇಬ್ಬರು ವೀರರು ಬಲವಂತವಾಗಿ ಕುಸ್ತಿಯಲ್ಲಿ ತಲ್ಲೀನರಾಗಿರುವುದನ್ನು ಕಾಣಬಹುದು. ಇವರು ಜಟ್ಟಿಯ ರೀತಿಯಲ್ಲಿ ಪಂಚೆ (ವಸ್ತ್ರ)ಯನ್ನು ಕಟ್ಟಿರುವುದು ಸುಂದರವಾಗಿ ಮೂಡಿಬಂದಿದ್ದು ಕೈಗಳಿಗೆ ತೋಳುಬಂದಿಯನ್ನು ಧರಿಸಿದ್ದಾರೆ ಮತ್ತು ತುಂಬಿದ ಅಗಲವಾದ ದಪ್ಪನೆಯ ಮುಖ, ಕಾಲುಗಳಿಗೆ ಕಾಲುಕಡಗ, ಆಕರ್ಷಕ ಕಣ್ಣುಗಳು ಸುಂದರವಾಗಿ ಶಿಲ್ಪಕಲೆಯಲ್ಲಿ ಮೂಡಿಬಂದಿದೆ. ಒಟ್ಟಾರೆ ಇಲ್ಲಿ ಕಾಣುವ ದೃಶ್ಯವನ್ನು ಗಮನಿಸಿದರೆ ವೀರಯೋಧರ ಶಿಲ್ಪವೆಂದು ಪರಿಗಣಿಸಬಹುದಾಗಿದೆ.
ವೀರಗಲ್ಲು-೫: ಇದು ಸುಮಾರು ೩ ಅಡಿ ಎತ್ತರವಾದ, ಮೇಲೆ ಹೋದಂತೆ ಕಿರಿದಾಗಿದ್ದು ೨.೫ ಅಡಿ ಅಗಲ ೪ ಇಂಚು ದಪ್ಪನಾಗಿದೆ ಇದು ಮೂರು ಪಟ್ಟಿಕೆಗಳಿಂದ ಕೂಡಿದ್ದು ಮೊದಲನೆ ಪಟ್ಟಿಕೆಯಲ್ಲಿ ಇಬ್ಬರು ವೀರರು ವೀರಾವೇಶದಿಂದ ಹೋರಾಡುತ್ತಿರುವ ದೃಶ್ಯ ಕಂಡುಬಂದಿದ್ದು ಆ ಭಾಗ ಅಸ್ಪಷ್ಟವಾಗಿದೆ ಎರಡನೇ ಪಟ್ಟಿಕೆಯಲ್ಲಿ ಇಬ್ಬರು ದೇವಲೋಕದ ಕನ್ಯೆಯರು ಯುದ್ಧದಲ್ಲಿ ಮಡಿದ ವೀರನನ್ನು ವಿಮಾನದಲ್ಲಿ ಕೂರಿಸಿಕೊಂಡು ಚಾಮರಧಾರಣಿಯರಾಗಿ ಸ್ವರ್ಗಕ್ಕೆ ಕರೆದೊಯ್ಯುತ್ತಿರುವ ದೃಶ್ಯ ಮೂರನೇ ಪಟ್ಟಿಕೆಯಲ್ಲಿ ಶಿವಲಿಂಗಕ್ಕೆ ಯತಿಯು ಪೂಜೆ ಸಲ್ಲಿಸುತ್ತಿದ್ದು ಬಲಭಾಗದಲ್ಲಿ ವೀರನ ಪತ್ನಿಯು ಕೈಮುಗಿದು ಕುಳಿತಿರುವ ದೃಶ್ಯ ಹಾಗೂ ನಂದಿ ಶಿಲ್ಪವಿರುವುದು ಜೊತೆಗೆ ಮೇಲ್ಭಾಗದಲ್ಲಿ ಸೂರ್ಯ ಚಂದ್ರ ಕೆತ್ತನೆಯನ್ನು ಕಾಣಬಹುದು.
ವೀರಗಲ್ಲು-೬: ಇದು ಎರಡು ಅಡಿ ಎತ್ತರ ೧.೫ ಅಡಿ ಅಗಲ ೩ ಇಂಚು ದಪ್ಪನಾಗಿದ್ದು ಗ್ರಾನೈಟ್ ಕಲ್ಲಿನದ್ದಾಗಿದೆ. ಇದು ಮೂರು ಪಟ್ಟಿಕೆಗಳಿಂದ ಕೂಡಿದ ಮೊದಲನೆ ಪಟ್ಟಿಕೆಯಲ್ಲಿ ನಾಲ್ಕು ಜನರಿದ್ದು ಇದರಲ್ಲಿ ಇಬ್ಬರು ವೀರರು ತಮ್ಮ ಕೈಯಲ್ಲಿ ಖಡ್ಗವನ್ನು ಹಿಡಿದು ನಿಂತಿರುವುದು ಇವರ ಪಕ್ಕದಲ್ಲಿ ಇವರ ಮಡದಿಯರಿಬ್ಬರು ಸೊಂಟದ ಮೇಲೆ ಕೈಗಳನ್ನು ಇಟ್ಟು ನಿಂತಿರುವುದನ್ನು ಕಾಣಬಹುದು. ಎರಡನೆ ಪಟ್ಟಿಕೆಯಲ್ಲಿ ಯುದ್ಧದಲ್ಲಿ ಮಡಿದ ವೀರನನ್ನು ವಿಮಾನದಲ್ಲಿ ಕುಳ್ಳಿರಿಸಿ ಇಬ್ಬರು ದೇವಕನ್ಯೆಯರು ಸ್ವರ್ಗಕ್ಕೆ ಕರೆದ್ಯೊಯ್ಯುತ್ತಿರುವ ದೃಶ್ಯ ಮೂರನೆ ಹಂತದಲ್ಲಿ ಶಿವಲಿಂಗವಿದ್ದು ಇದಕ್ಕೆ ಯತಿಯು ಪೂಜೆ ಸಲ್ಲಿಸುತ್ತಿರುವುದು ಮತ್ತು ಪಕ್ಕದಲ್ಲಿ ನಂದಿಯ ಶಿಲ್ಪವಿರುವುದು ಹಾಗೂ ಸೂರ್ಯ ಚಂದ್ರರಿರುವುದನ್ನು ಕಾಣಬಹುದು.
ವೀರಗಲ್ಲು-೭: ಇದು ಸಹ ೩ ಅಡಿ ಎತ್ತರ, ೧.೫ ಅಡಿ ಅಗಲ, ೩ ಇಂಚು ದಪ್ಪನಾಗಿದ್ದು ನಾಲ್ಕು ಪಟ್ಟಿಕೆಗಳಿಂದ ಕೂಡಿದೆ. ಮೊದಲನೇ ಪಟ್ಟಿಕೆಯಲ್ಲಿ ೩ ಜನ ವೀರರು ಖಡ್ಗವನ್ನು ಹಿಡಿದು ನಿಂತಿರುವುದು ಎರಡನೆ ಪಟ್ಟಿಕೆಯಲ್ಲಿ ಯುದ್ಧದಲ್ಲಿ ಮಡಿದ ವೀರನನ್ನು ದೇವಕನ್ಯೆಯರು ದೇವಲೋಕಕ್ಕೆ ಕರೆದೊಯ್ಯುತ್ತಿರುವ ದೃಶ್ಯ ಮೂರನೇ ಪಟ್ಟಿಕೆಯಲ್ಲಿ ಶಿವಲಿಂಗಕ್ಕೆ ಯತಿಯು ಪೂಜೆ ಸಲ್ಲಿಸುತ್ತಿದ್ದು ಪಕ್ಕದಲ್ಲಿ ನಂದಿಯ ಶಿಲ್ಪವನ್ನು ಕಾಣಬಹುದು. ನಾಲ್ಕನೆ ಪಟ್ಟಿಕೆಯಲ್ಲಿ ಸೂರ್ಯ ಚಂದ್ರರು ಮತ್ತು ತ್ರಿಶೂಲವಿರುವುದನ್ನು ಕಾಣಬಹುದು. ಇದರಿಂದ ಶೈವಧರ್ಮವು ಈ ಪ್ರಾಂತ್ಯದಲ್ಲಿ ಇದ್ದಿತ್ತೆಂದು ತಿಳಿದುಬರುತ್ತದೆ.
ವೀರಮಾಸ್ತಿಕಲ್ಲು-೮: ಇದು ಸುಮಾರು ೩ ಅಡಿ ಎತ್ತರವಾಗಿದ್ದು ಮೇಲೆ ಹೋದಂತೆ ಕಿರಿದಾಗಿದ್ದು ೨ ಅಡಿ ಅಗಲ, ೪ ಇಂಚು ದಪ್ಪನಾದ ಕಪ್ಪು ಗ್ರಾನೈಟ್ ಕಲ್ಲಿನದಾಗಿದೆ, ಇದು ಮೂರು ಪಟ್ಟಿಕೆಯಿಂದ ಕೂಡಿದ್ದು ದುರಾದೃಷ್ಟವಶಾತ್ ಮೊದಲನೆ ಪಟ್ಟಿಕೆಯು ಭೂಮಿಯಲ್ಲಿ ಹೂತುಹೋಗಿದೆ ಎರಡನೆ ಪಟ್ಟಿಕೆಯಲ್ಲಿ ಇಬ್ಬರು ದೇವಕನ್ಯೆಯರು ಚಾಮರಧಾರಿಣಿಯರಾಗಿ ಯುದ್ಧದಲ್ಲಿ ಮಡಿದ ಇಬ್ಬರು ಮಹಾಸತಿಯರನ್ನು ಕಲಾತ್ಮಕ ಮತ್ತು ಅಲಂಕೃತವಾದ ಮಂಟಪದಲ್ಲಿ ಕೂರಿಸಿಕೊಂಡು ದೇವಲೋಕಕ್ಕೆ ಕರೆದೊಯ್ಯುತ್ತಿರುವ ದೃಶ್ಯ ಕಂಡುಬಂದಿದ್ದು ಇದರ ಮೇಲೆ ಎಡ ಮತ್ತು ಬಲ ಭಾಗದಲ್ಲಿ ಇಬ್ಬರು ದೇವಕನ್ಯೆಯರು ಅಂಜಲಿಬದ್ಧರಾಗಿ ಕುಳಿತಿರುವ ದೃಶ್ಯ ಬಹಳ ಮನೋಹರವಾಗಿ ಮೂಡಿ ಬಂದಿದ್ದು ಮೂರನೇ ಪಟ್ಟಿಕೆಯಲ್ಲಿ ಅಲಂಕೃತನಾದ ಶಿವಲಿಂಗವಿದ್ದು ಇದಕ್ಕೆ ಯತಿಯು ಕೈಮುಗಿದು ಪೂಜೆ ಸಲ್ಲಿಸುತ್ತಿರುವುದು ಬಲಭಾಗದಲ್ಲಿ ಇಬ್ಬರು ದೇವಸೂರರು ಅಂಜಲಿಬದ್ಧರಾಗಿ ಕೈಮುಗಿದು ಕುಳಿತಿರು ವುದು, ಎಡಭಾಗದಲ್ಲಿ ನಂದಿಯ ಶಿಲ್ಪವಿರುವುದು, ಮೇಲ್ಭಾಗದಲ್ಲಿ ಸೂರ್ಯ ಚಂದ್ರರು ಇದಕ್ಕೆ ಸಾಕ್ಷಿಯಾಗಿರುವಂತೆ ಮೂಡಿಬಂದಿರುವುದನ್ನು ಕಾಣಬಹುದು.
ಭೈರವ ಶಿಲ್ಪ-೯: ಭೈರವ ಸಂಸ್ಕೃತಿ ಶೈವ ಪರಂಪರೆಯಲ್ಲಿ ಕಂಡುಬರುವ ಸಂಸ್ಕೃತಿಯಾಗಿದೆ ಅಂದರೆ ಶೈವ ಪರಂಪರೆಯಲ್ಲಿ ಶಿವನು ಆರಾಧನೆ ಪೂಜೆ ಮಾಡುವುದು ಕರ್ನಾಟಕದಾದ್ಯಂತ ಕಂಡುಬರುತ್ತದೆ. ಇದು ಗ್ರಾನೈಟ್ ಕಲ್ಲಿನದಾಗಿದ್ದು, ಮುಖವು ಸಂಪೂರ್ಣ ದುಸ್ಥಿತಿ ಹೊಂದಿದ್ದು ಚತುರ್ಭುಜಾಧಾರಿಯಾಗಿದ್ದಾನೆ. ಕೈಗಳಲ್ಲಿ ತ್ರಿಶೂಲ, ಢಮರುಗ, ಖಡ್ಗ ಮತ್ತು ಒಂದು ಕೈಯಲ್ಲಿ ತಲೆಯ ಬುರುಡೆಯನ್ನು ಹಿಡಿದಿರುವುದು ಕಂಡುಬರುತ್ತದೆ. ಕೊರಳಲ್ಲಿ ರುಂಡಮಾಲೆಯನ್ನು ಧರಿಸಿರುವುದು ಕಂಡುಬರುತ್ತದೆ ಜೊತೆಗೆ ಈ ಶಿಲ್ಪವು ನಗ್ನಾವಸ್ಥೆಯಲ್ಲಿದೆ.
ಒಟ್ಟಾರೆ ಮೇಲಿನ ಎಲ್ಲಾ ವೀರಗಲ್ಲುಗಳನ್ನು ಗಮನಿಸಿದಾಗ ಈ ಪ್ರಾಂತದಲ್ಲಿ ಶೈವ ಧರ್ಮದ ಆಚರಣೆ ಹೆಚ್ಚಾಗಿ ಕಂಡುಬಂದಿದ್ದು ಚಾರಿತ್ರಿಕವಾಗಿ ಮತ್ತು ಐತಿಹಾಸಿಕವಾಗಿ ಹೆಚ್ಚಿನ ಮಹತ್ವವನ್ನು ಹೊಂದಿದೆ ಎಂದು ಹೇಳಬಹುದು. ಜೊತೆಗೆ ಸಂಶೋಧನಾತ್ಮಕವಾಗಿ ಹೆಚ್ಚಿನ ಅಧ್ಯಯನದ ಅಗತ್ಯವಿದೆ ಎಂಬ ಅಂಶವನ್ನು ತಿಳಿಯಪಡಿಲಾಗಿದೆ.

ಆಧಾರಸೂಚಿ
೧.         ಪಾರ್ಥಸಾರಥಿ. ಟಿ.ಎ. (ಪ್ರ.ಸಂ.) ಕರ್ನಾಟಕ ರಾಜ್ಯ ಗ್ಯಾಸೆಟಿಯರ್, ಮಂಡ್ಯ ಜಿಲ್ಲೆ, ಕರ್ನಾಟಕ ಸರ್ಕಾರ, ಬೆಂಗಳೂರು, ೨೦೦೩.
೨.         ಶೇಷಶಾಸ್ತ್ರಿ. ಆರ್., ಕರ್ನಾಟಕದ ವೀರಗಲ್ಲುಗಳು, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, ೨೦೦೪.
೩.         ತಿಪ್ಪೇರುದ್ರಸ್ವಾಮಿ, ಹೆಚ್., ಕರ್ನಾಟಕ ಸಂಸ್ಕೃತಿ ಸಮೀಕ್ಷೆ, ಮೈಸೂರು, ೨೦೧೦.
೪.         ಪರಮಶಿವಮೂರ್ತಿ. ಡಿ.ವಿ., ಕನ್ನಡ ಶಾಸನಶಿಲ್ಪ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೯೯.
೫.         ಚಿದಾನಂದಮೂರ್ತಿ. ಎಂ., ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ, ಬೆಂಗಳೂರು, ೨೦೦೨.
೬.         ಫೋಟೋದಲ್ಲಿನ ಚಿತ್ರವನ್ನು ಗಮನಿಸಿ, ಚಿತ್ರ ಸಂಖ್ಯೆ ೧. ೨. ೩. ೪. ೫. ೬. ೭. ೮. ೯.

ತಿ # ಸಹಾಯಕ ಪ್ರಾಧ್ಯಾಪಕರು, ಪ್ರಾಚೀನ ಮತ್ತು ಪುರಾತತ್ತ್ವ ಅಧ್ಯಯನ ವಿಭಾಗ, ಮಾನಸ ಗಂಗೋತ್ರಿ, ಮೈಸೂರು-೫೭೦೦೦೬.
ತಿತಿ ಉಪನ್ಯಾಸಕರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹುಲ್ಲಹಳ್ಳಿ, ನಂಜನಗೂಡು ತಾಲ್ಲೂಕು-೫೭೧೩೧೪.


                 
ವೀರಗಲ್ಲು ಸಂಖ್ಯೆ - ೧           ವೀರಗಲ್ಲು ಸಂಖ್ಯೆ - ೨           ವೀರಗಲ್ಲು ಸಂಖ್ಯೆ - ೩          ವೀರಗಲ್ಲು ಸಂಖ್ಯೆ - ೪            ವೀರಗಲ್ಲು ಸಂಖ್ಯೆ - ೫


           

ವೀರಗಲ್ಲು ಸಂಖ್ಯೆ - ೬             ವೀರಗಲ್ಲು ಸಂಖ್ಯೆ - ೭         ವೀರಗಲ್ಲು ಸಂಖ್ಯೆ - ೮       ವೀರಗಲ್ಲು ಸಂಖ್ಯೆ - ೯




No comments:

Post a Comment