Monday, October 28, 2013

ಲುಪ್ತ ಲಿಪಿ - ಖರೋಷ್ಠಿ


ಎಚ್‌.ಶೇಷಗಿರಿರಾವ್‌
                              








 ಖರೋಷ್ಠಿ ಲಿಪಿ
ಭಾರತದ ಭಾಷೆಗಳ ಬರಹದ  ಮಾತೆ ಎನಿಸಿರುವ ಬ್ರಾಹ್ಮಿಲಿಪಿಯ ಇನ್ನೊಂದು ಸಮಕಾಲೀನ ಲಿಪಿ ಖರೋಷ್ಠಿ . .ಮೊಟ್ಟಮೊದಲು ಅದು ಬೆಳಕಿಗೆ ಬಂದುದೇ ಅಶೋಕನ ಶಾಸನಗಳ ಮೂಲಕ. ಅನೇಕ ಶಾಸನಗಳು ಅದರಲ್ಲೂ ವಾಯವ್ಯ ಭಾರತದಲ್ಲಿ  ಬ್ರಾಹ್ಮಿ ಮತ್ತು ಖರೋಷ್ಟೀ ಲಿಪಿಯಲ್ಲಿ ದೊರಕಿವೆ. ಅದರಲ್ಲೂ ಕೆಲವು ಕಡೆ ದ್ವಿಭಾಷಾ ಶಾಸನಗಳು  ಅಂದರೆ ಬ್ರಾಹ್ಮಿ ಮತ್ತು ಖರೋಷ್ಠಿ ಲಿಪಿಗಳಲ್ಲಿನ ಶಾಸನಗಳು ದೊರೆತಾಗ ಖರೋಷ್ಠಿಯ ಅಧ್ಯಯನ ಹೊಸ ತಿರುವು ಪಡೆಯಿತು. ಜೊತೆಗೆ ಅನೇಕ ನಾಣ್ಯಗಳ ಮೇಲೆ ಒಂದು ಬದಿಯಲ್ಲಿ ಬ್ರಾಹ್ಮಿ ಮತ್ತು ಇನ್ನೊಂದು ಬದಿಯಲ್ಲಿ ಖರೋಷ್ಠಿಯ ಲಿಪಿಗಳ ಬರಹವೂ ಕಂಡು ಬಂದಿದೆ.
ದ್ವಿಭಾಷಾ ಲಿಪಿಇರುವ ನಾಣ್ಯ
ಖರೋಷ್ಟಿಯು ಭಾರತದ ವಾಯವ್ಯ ಪ್ರಾಂತ್ಯಗಳಲ್ಲಿ ಕ್ರಿ.ಪೂ.4ನೆಯ  ಶತಮಾನದಿಂದ ಕ್ರಿ.ಪೂ.ನೆಯದಲ್ಲಿ ಶತಮಾನದಲ್ಲಿ ಪ್ರಚಲಿತವಿದ್ದ  ಲಿಪಿ. ಅದು ಒಂದು  ಹಂತದಲ್ಲಿ ಪ್ರಾಕೃತ ಮತ್ತು ಸಂಸ್ಕೃತ ಭಾಷೆಗಳನ್ನುಬರೆಯಲು ಬಳಕೆಯಾಗುತಿತ್ತು. ಅದು ಬ್ರಾಹ್ಮೀ ಲಿಪಿಗೆ ಸರಿದೊರೆಯಾಗಿತ್ತು. ಅದನ್ನು ಸಾಮ್ರಾಟ್‌  ಅಶೋಕನು ತನ್ನಶಾಸನಗಳಲ್ಲಿ ವ್ಯಾಪಕವಾಗಿ ಬಳಸಿದನು ಹಲವು ಕಡೆ ಪ್ರಾಕೃತ ಮತ್ತು ಖರೋಷ್ಠಿಗಳನ್ನು ಒಟ್ಟೊಟ್ಟಿಗೆ  ಬಳಸಿರುವುದು  ಕಂಡುಬಂದಿದೆ..
ಖರೋಷ್ಟಿಯು ಅರಾಮಿಕ್‌ ಲಿಪಿಯಿಂದ ಉಗಮವಾಗಿದೆ..ಕಾರಣ ಆ ಪ್ರದೇಶವು ಅಕಾಮೆನಿಡ್‌ ಸಾಮ್ರಾಜ್ಯದ ಭಾಗವಾಗಿತ್ತು ಕ್ರಿ. ಪೂ. ಐದನೆಯ ಶತಮಾನದಲ್ಲಿ ಅವರ ಆಧೀನದಲ್ಲಿದ್ದುದರಿಂದ ಆ ಭಾಷೆಯ ಪ್ರಬಾವ ಅವರ ಮೇಲೆ  ಬಿದ್ದಿತು.

ಖರೋಷ್ಠಿ ಲಿಪಿಯನ್ನು  ಬಂಡೆ, ಲೋಹ, ಚರ್ಮ ಮತ್ತು ಪಾರ್ಚಮೆಂಟಗಳ ಮೇಲೆ ಬರೆದಿರುವ ದಾಖಲೆ ದೊರೆತಿವೆ.  ಅವುಗಳಲ್ಲಿ ಬೌದ್ಧ ಧರ್ಮದ ಬರಹಗಳೇ ಅಧಿಕ.. ಆ ದಾಖಲೆಗಳು ಕೊಡುಗೆ , ದಾನ , ಸ್ಥೂಪ ನಿರ್ಮಾಣದ ವಿವರನೀಡುತ್ತವೆ. ಅದೂ ಅಲ್ಲದೆ ಖರೋಷ್ಠಿಯನ್ನು ಸಾಹಿತ್ಯ ಮತ್ತು ಆಡಳಿತ ಉದ್ದೇಶಕ್ಕೂ ಬಳಸಿರುವುದು ಕಂಡು ಬರುತ್ತದೆ.  .
ಖರೋಷ್ಠಿಯ ವ್ಯಾಪಕ ಅಧ್ಯಯನವು  ಸಾಧ್ಯವಾದುದು ಬೌಧ್ಧ ಧರ್ಮದ ಪ್ರಾಚೀನ ಹಸ್ತಪ್ರತಿಗಳಿಂದ ಗಾಂಧಾರಿ ಭಾಷೆಯಲ್ಲಿನ ೨೭ ಬರ್ಚ ಮರದ ತೊಗಟೆಯ ಮೇಲೆ ಬರೆದಿರುವ ಖರೋಷ್ಠಿ  ಲಿಪಿಯ ಬರಹವು ೧೯೯೪ ರಲ್ಲಿ ದೊರಕಿದವು. ಅದನ್ನು ಮೊದಲು ಬ್ರಿಟಿಷ್‌ಲೈಬ್ರರಿ ಪಡೆಯಿತು  ವಾಷಿಂಗ್ಟನ್‌ ವಿಶ್ವ ವಿದ್ಯಾನಿಲಯದ  ವಿಶೇಷ ಅಧ್ಯಯನ ಪೀಠ ಈ ಕೆಲಸ ಪ್ರಾರಂಬಿಸಿತು. ಈ ಹಸ್ತಪ್ರತಿಗಳು ಕ್ರಿಪೂ.ಒಂದನೆಯ ಶತಮಾನದಿಂದ  ಕ್ರಿ.ಶ ಮೂರನೆಯ ಶತಮಾನದವರೆಗಿನ  ಅವಧಿಯ ಯದ್ಧವಾಗಿದ್ದವು. ಇವು ದಕ್ಷಿಣ ಏಷಿಯಾದಲ್ಲಿ ಮತ್ತು ಖರೋಷ್ಠಿ ಲಿಪಿಯಲ್ಲಿ ದೊರೆತ ಅತ್ಯಂತ ಪ್ರಾಚೀನ ಹಸ್ತಪ್ರತಿಗಳು ಎನ್ನಬಹದು.   .ಇಮತ್ತು      ಕ್ಷಿಣ ಏಷಿಯಾದಲ್ಲಿನ ಬೌದ್ಧ ಧರ್ಮದ ಸ್ಥಿತಿಗತಿ ಮತ್ತು ಅದು.  ಮಧ್ಯಏಷಿಯಾದಲ್ಲಿ ಹರಡಿದ ಕುರಿತಾದ ಇತಿಹಾಸದ ಮೇಲೆ ಬೆಳಕು ಚೆಲ್ಲುತ್ತದೆ..

ಶೋಕನ ಕಾಲದಲ್ಲಿ ಅರಸನ ಅಧಿಕೃತ ದಾಖಲೆಗಳು,ಲೆಕ್ಕ ಪತ್ರ, ಸರ್ಕಾರಿ ಮತ್ತು ಖಾಸಗಿ ಪತ್ರಗಳನ್ನು  ಮರದ  ಪಟ್ಟಿಕೆಗಳ ಮೇಲೆ ಖರೋಷ್ಠಿ ಲಿಪಿಯಲ್ಲಿ ಬರೆಯುತಿದ್ದರು. ಪುರಾತನ ಲವುಲಾನ್‌ ನಗರದಲ್ಲಿ ಅಂಥಹ ಕಟ್ಟಿಗೆಯ ಪಟ್ಟಿಕೆಗಳು ದೊರೆತಿವೆ.
ಮೌರ್ಯರ ಶಾಸನಗಳು ಬ್ರಾಹ್ಮಿ ಮತ್ತು ಖರೋಷ್ಟಿಲಿಪಿಯಲ್ಲಿ ಬರೆಯಲಾಗಿದೆ ಕಾರಣ ಸಾಮಾನ್ಯ ಜನರು ಎರಡು ಲಿಪಿಯನ್ನು ಅರ್ಥ ಮಾಡಿಕೊಳ್ಳುತಿದ್ದರು. ಬೌದ್ಧ   ಸಂಸ್ಕೃತ ಕೃತಿ “ ಲಲಿತ ವಿಸ್ತಾರ’ ಆಗಿನ ಕಾಲದಲ್ಲಿ ಪ್ರಚಲಿತವಿದ್ದ ೬೪ ಲಿಪಿಗಳ ದೀರ್ಘ ಪಟ್ಟಿಯನ್ನೇ ಕೊಡುವುದು. ಅದರಲ್ಲಿ ಖರೋಷ್ಠಿಯ ಹೆಸರೂ ಇದೆ ಖರೋಷ್ಠಿ  ಎಂದರೆ ಕತ್ತೆ ತುಟಿ    ಆಥವ ಒಂಟೆ ತುಟಿಯಂಥಹ ಲಿಪಿ ಎಂಬ ಅರ್ಥವನ್ನೂಕೊಡುವರು. .ಅರವತ್ತುನಾಲ್ಕು ಲಿಪಿಗಳಲ್ಲಿ ಅನೇಕ ಪ್ರಾದೇಶಿಕ, ಬುಡಕಟ್ಟು ಮತ್ತು ವಿದೇಶಿ ಲಿಪಿಗಳೆಂದು ವಿಭಾಗ ಮಾಡಲಾಗಿದೆ. ,
ಖರೋಷ್ಟಿ ಅಕ್ಷರಗಳು ಸುಮಾರು ಕ್ರಿ. ಪೂ.  .ನೆಯ ಶತಮಾನದಲ್ಲಿ  ಕಂಡುಬಂದಿವೆ. ಬಹುಶಃ ಅದರ ಮೂಲ ಅರಾಮಿಕ್‌ ಅಕ್ಷರಗಳಾಗಿರಬಹುದು. ಇದು ಸಾಮಾನ್ಯವಾಗಿ ವಾಯವ್ಯಭಾರತ ಮತ್ತು ಮಧ್ಯ ಏಷಿಯಾದಲ್ಲಿ ಕ್ರಿ.ಶ  4tನೆಯ ಶತಮಾನದ ವರೆಗೆ ಬಳಕೆಯಲ್ಲಿತ್ತು
ಇದಕ್ಕೆ ಬ್ರಾಹ್ಮಿಯಂತೆ  ಭಾರತ ಮತ್ತು ವಾಯುವ್ಯ ಏಷಿಯಾದಲ್ಲಿ ಉತ್ತರಾಧಿಕಾರಿಗಳು ಇಲ್ಲ. ಇದು ಮಧ್ಯ ಏಷಿಯಾದ ರಾಜ್ಯಗಳಲ್ಲಿ ಖೋತಾನ್‌ಮತ್ತು ಕ್ರೊರೆಯಿನ್ ರಾಜ್ಯಗಳಲ್ಲಿ ಅಧಿಕೃತ ಭಾಷೆಯಾಗಿ ಅಧಿಕೃತ ದಾಖಲೆಗಳಲ್ಲಿ ಬಳಸಲಾಗುತಿತ್ತು ಮೂರು ಮತ್ತು ನಾ;ಲ್ಕನೆ ಶತಮಾನದಲ್ಲಿ.ರೇಷ್ಮೆ ರಸ್ತೆಯ ಬದಿಯಲ್ಲಿದ್ದ ನಗರಗಳಲ್ಲೂ ಏಳನೆ ಶತಮಾನದವರಗೆ  ಬಳಕೆ ಇದ್ದಿತು.   ಬಗ್ಗೆ 1830ರಿಂದ 1840ರ ವರೆಗೆ ಅನೇಕ ವಿದ್ವಾಂಸರು ಸಂಶೋಧನೆ ಮಾಡಿರುವರು. ಜೇಮ್ಸ ಪ್ರಿನ್ಸೆಪ್‌, ಕ್ರಿಶ್ವಿಯನ್‌ ಲಸ್ಸಾನ್‌ಎದ್ವಿನ್‌ನೋರಿಸ್‌ರು ಪ್ರತ್ಯೇಕವಾಗಿ ಕಾರ್ಯನಿರ್ವಹಿಸಿದರು. ಆದರೆ ಪರಸ್ಪರ ವಿಚಾರ ವಿನಿಮಯ ನಡೆಸುತಿದ್ದರು.ಅಂತಿಮವಾಗಿ ಅದರ ರಹಸ್ಯ ಬಯಲಾಯಿತು.
  ಭಾರತದಲ್ಲಿ ಖರೋಷ್ಟಿ ಲಿಪಿಗೆ ಅನೇಕ ಹೆಸರುಗಳು ಇವೆ.” ಬೆಕ್ಟ್ರಿಯನ್‌”, “ಕಾಬೂಲಿ”, ಇಂಡೊ ಬೆಕ್ಟ್ರಿಯನ್ಎಂದು ಗುರುತಿಸುವರುಖರೋಷ್ಠಿಯು, ಬ್ರಾಹ್ಮಿ ಲಿಪಿಯ ಜೊತೆಯಲ್ಲಿಯೇ ಭಾರತದಲ್ಲಿ ವಿವಿಧ ಬಾಗಗಳಲ್ಲಿ  ಸುಮಾರು ಏಳು ನೂರು ವರ್ಷಗಳ ಕಾಲ ಬಳಕೆಯಾಗುತಿತ್ತು.  (  ಕ್ರಿ.. ಪೂ. 4ನೆಯ  ಶತಮಾನದಿಂದ  ಕ್ರಿ. ಶ  3ನೆಯ ಶತಮಾನದವರೆಗೆ AD), ಆದರೆ ಬ್ರಾಹ್ಮಿ ಲಿಪಿಯು ಭಾರತೀಯ ಭಾಷೆಗಳಿಗೆ ಹೆಚ್ಚು ಸೂಕ್ತವೆನಿಸಿದುದರಿಂದ ಬರಬರುತ್ತಾ ಖರೋಷ್ಠಿಯ ಜಾಗವನ್ನು ಆಕ್ರಮಿಸಿತು ಆದರೂ ವಾಯವ್ಯ ಭಾರತದಲ್ಲಿ ಕುಟುಕು ಜೀವ ಹಿಡಿದಿತ್ತು.
ಪಾಕೀಸ್ತಾನದ ಖೈಬರ್‌ಪ್ರದೇಸದಲ್ಲಿನ ಬಂಡೆ ಶಾಸನ


ಈ ಲಿಪಿಯು ಪೂರ್ಣ ಪ್ರಮಾಣದಲ್ಲಿ ಕಂಡು ಬಂದಿರುವುದು  ಅಶೋಕನ ಶಾಸನಗಳಲ್ಲಿ (ಶಹಬಜ ಘರ್‌ ಶಾಸನಗಳಲ್ಲಿ ).ಖರೋಷ್ಠಿ ಲಿಪಿಯ ಮೊದಲ ಶಾಸನವು ನಮಗೆ ದೊರೆತಿರುವುದು ಪಾಕೀಸ್ತಾನದಲ್ಲಿ. ಅದರ ಕಾಲ  ಕ್ರಿ. ಪೂ.2ನೆಯ  ಶತಮಾನ ಆದರೂ ಅನೇಕ ಮೂಲಗಳ ಪ್ರಕಾರ ಈ ಭಾಷೆಯು ಅದಕ್ಕೂ ಬಹು ಮೊದಲೇ ಜನಿಸಿತ್ತು ಮತ್ತು ಬಳಕೆಯಲ್ಲಿಯೂ ಇದ್ದಿತು ಎಂಬ ವಾದವೂ ಇದೆ.. ಖರೋಷ್ಠಿಯು ಹೆಚ್ಚು ಜನಪ್ರಿಯವಾಗದೇ ಇರಲು ಕಾರಣ ಅದನ್ನು ಬರೆಯುವ ರೀತಿ. ಎಲ್ಲ ಭಾರತೀಯ ಭಾಷೆಗಳನ್ನು ಓದುವುದು ಎಡದಿಂದ ಬಲಕ್ಕೆ  ಆದರೆ ಇದು ಮಾತ್ರ ಬಲದಿಂದ ಎಡಕ್ಕೆ . ಆದ್ದರಿಂದ ಇದನ್ನು ಬಳಸಲು ಹಿಂಜರಿದರು.ಆದರೂ ಖರೋಷ್ಠಿಯು ಆಫಘನಿಸ್ತಾನ, ಮಧ್ಯ ಏಷಿಯಾ ಮತ್ತು ಈಶಾನ್ಯ ಚೀನಾದ ಭಾರತದ ಬೆಕ್ಟ್ರಿರಿಯಾ ಮತ್ತು ಸ್ಕೈಥಿಯಾ ರಾಜ್ಯಗಳಲ್ಲೂ ಬಳಸಲಾಗುತಿತ್ತು.. ಆದರೂ ಕ್ರಿ.ಶ ಐದನೆಯ ಶತಮಾನದಲ್ಲಿ ಸಂಪೂರ್ಣವಾಗಿ ಮಾಯವಾಯಿತು. ಖರೋಷ್ಠಿ ವರ್ಣಮಾಲೆಯ ಮೂಲ ಅಕ್ಷರಗಳು ವ್ಯಂಜನಗಳು.  ಹೊರತಾಗಿ ಎಲ್ಲ ಸ್ವರಗಳೂ ಅವುಗಳನ್ನು  ಹಿಂಬಾಲಿಸುತ್ತವೆ. ಸ್ವರಗಳನ್ನು ಚಿಕ್ಕದಾದ ಹೆಚ್ಚುವರಿ ಸಂಕೇತಗಳಂತೆ ಬರೆಯಲಾಗುವುದು. ಆ ಸಂಕೇತಗಳು ವ್ಯಂಜನದ ಮೇಲೆ ಅಥವ ಕೆಳಗೆ ಇರಬಹುದು..
ಖರೋಷ್ಠಿಯಲ್ಲಿ ಹ್ರಸ್ವ ಸ್ವರ ಮತ್ತು ದೀರ್ಘ ಸ್ವರಗಳ ನಡುವೆ ವ್ಯತ್ಯಾಸ ಇಲ್ಲ.ಅಶೋಕ,  ಶಕ ಮತ್ತು ಕುಶಾನರ ಶಾಸನಗಳಲ್ಲಿ ಹ್ರಸ್ವ ಮತ್ತು ಧೀರ್ಘ ಸ್ವರಗಳ ವ್ಯತ್ಯಾಸ ಇಲ್ಲ   ಕೂಡು ಬರಹ. ಮೊದಲ ಸ್ವರಕ್ಕೆ ಒಂದೇ ಚಿಹ್ನೆ.ಉಳಿದ ಸ್ವರಗಳು ಅದಕ್ಕೆ ತುಸು ಬದಲಾವಣೆ ಮಾಡುವುದರಿಂದ ಪಡೆಯಲಾಗುವುದು
    ಕರೋಷ್ಠಿಯು ಪ್ರಮುಖವಾಗಿ ವರ್ಗೀಯ ಮತ್ತು ಅವರ್ಗೀಯ ವ್ಯಂಜನಗಳಿಂದಲೇ ಆಗಿದೆ. ವರ್ಣಮಾಲೆಯಲ್ಲಿ  ಇರುವುದು ೩೩ ಅಕ್ಷರಗಳು .ಪ್ರತ್ಯೇಕ ಸ್ವರಗಳಿಲ್ಲ..ಅಡ್ಡ ಸಾಲಿನಲ್ಲಿ ಎಡದಿಂದ ಬಲಕ್ಕೆ ಬರೆಯುವ ಖರೋಷ್ಠಿ  ..






ಪ್ರತಿ ಅಕ್ಷರದಲ್ಲಿಯೇ  /a/  ಸ್ವರ ಇದೆ. ಇತರೆ ಸ್ವರಗಳನ್ನು . ಕಾಗುಣಿತದಂತೆ ಸೇರಿಸಬಹುದು  ( diacritics.)ಮೂಲಸ್ವರಕ್ಕೆ ವಿವಿಧ ಭಾಗದಲ್ಲಿ ಗರೆ ಸೇರಿಸುವುದರಿಂದ ಉಳಿದ ಸ್ವರಗಳನ್ನು ಸೃಷ್ಠಿಸುವರು.’ಇ’ ಕಾರವನ್ನು ಸೂಚಿಸಲು  ’ಅ’ ಅಕ್ಷರದ  ಎಡಭಾಗದಲ್ಲಿ ಛೇದಕ ಗರೆ ಎಳೆಯುವರು.ಉಕಾರವು ಅ’ ಅಕ್ಷರದ ಎಡಭಾಗದಲ್ಲಿ ಆದರೆ ಕೆಳಗೆ ಗೆರೆ ಎಳೆಯುವರು. ಎ ಕಾರವು ’ಇ’ ಕಾರ ಸೂಚಿಸುವ ಗೆರೆಯ ಅರ್ಧದಷ್ಟು ಉದ್ದವಾಗಿರುತ್ತದೆ.’ಓ’ ಕಾರವು ಅಕ್ಷರದ ಕೆಳಗೆ ಎಡಭಾಗದಲ್ಲಿ ಗೆರೆ ಇರುವುದು. ಅನುಸ್ವಾರಕ್ಕೆ  ಅಕ್ಷರಗಳ ಕೆಳಗೆ ’ಮ’ ಬರೆಯುವರು. ಒತ್ತಕ್ಷರಗಳನ್ನು ಒಂದು ಅಕ್ಷರದಲ್ಲಿ ಇನ್ನೊಂದು ಸೇರಿಸುವ ಮೂಲಕ ಪ್ರತಿನಿಧಿಸುವರು




                    
ಸ್ವತಂತ್ರ ಸ್ವರಗಳೇ ಇಲ್ಲ . ಮತ್ತು ದೀರ್ಘ ಸ್ವರಗಳು ಮತ್ತು ಸಂಯುಕ್ತ ಸ್ವರಗಳು ಇಲ್ಲದಿರುವುದು   ಗಮನಾರ್ಹ
  



          
                    ಅಂಕೆಗಳಲ್ಲಿಯೂ ಒಂದರಿಂದ ನಾಲಕ್ಕು ಮಾತ್ರ ಬಳಸಿರುವರು.

 

ಬ್ಯೂಹ್ಲರನ ಪ್ರಕಾರ ಇದು ಕರಣಿಕರ ಲಿಪಿ ಅದಕ್ಕೆ ದೀರ್ಘಸ್ವರಗಳಿಲ್ಲ. ಆದರೆ  ರಾಜ ಬಲಿಪಾಂಡೆಯವರ ಪ್ರಕಾರ ಇದನ್ನುಪ್ರಾಕೃತ ಭಾಷೆ ಬರೆಯಲು  ಬಳಸುತಿದ್ದುದರಿಂದ ಹೀಗಾಗಿದೆ. ಕಾರಣ ಅದರಲ್ಲಿ ದೀರ್ಘಸ್ವರ ಇಲ್ಲ  ಇದು ಸಿಮೇಟಿಕ್‌ ಪ್ರಭಾವದಿಂದ ಆಗಿರುವುದಲ್ಲ.



ಈಗ ತಿಳಿದಿರುವಂತೆ ಖರೋಷ್ಠಿಯು ಅರಾಮಿಕ್‌ಲಿಪಿಯಿಂದ ಉಗಮವಾಗಿದೆ ಮತ್ತು ಅದನ್ನು ಅಕಮೆಂಡೈಡ್‌ನ ಭಾರತೀಯ ಸಾಮಂತರ ಆಸ್ಥಾನದಲ್ಲಿ ಅನ್ವೇಷಿಸಲಾಗಿದೆ. ಖರೋಷ್ಠಿಯನ್ನು ಪೂರ್ಣವಾಗಿ ಅರಾಮಿಯಾ ಲಿಪಿಯನ್ನು ಯಥಾರೀತಿ ತೆಗೆದುಕೊಂಡಿಲ್ಲ ಅದರಲ್ಲಿ 33 ಅಕ್ಷರಗಳನ್ನು ತುಸು ಬದಲಾವಣೆಯೊಂದಿಗೆ ಅಳವಿಡಿಸಿಕೊಳ್ಳಲಾಗಿದೆ.
ಖರೋಷ್ಠಿ ಮತ್ತು ಬ್ರಾಹ್ಮಿ ಇವೆರಡರಲ್ಲಿ ಯಾವುದು ಭಾರತದಲ್ಲಿ ಮೊದಲು ಬಂದಿತು ಎಂಬುದು ಅನಿಶ್ಚಿತ. ಆದರೆ ಬ್ರಾಹ್ಮಿಯ ಮೇಲೆ ಖರೋಷ್ಠಿಯ ಪ್ರಭಾವ ಇದ್ದಂತೆ ಕಾಣುತ್ತದೆ.
 ಕರೋಷ್ಠಿ ಲಿಪಯನ್ನು ಭಾರತದ ಪ್ರಾಕೃತ ಮತ್ತು ಸಂಸ್ಕೃತ ಹಾಗೂ ಈರಾನಿನ ಬೆಕ್ಟ್ರಿಯನ್ ಸಸೇಯನ್‌ ಮತ್ತು ಸ್ಕೈಥಿಯನ್‌ ಭಾಷೆಗಳನ್ನು ಬರೆಯಲು ಬಳಕೆ ಮಾಡುತಿದ್ದರು

                              
               ಖರೋಷ್ಠಿ ಲಿಪಿಯಲ್ಲಿ ಅಡ್ಡ ಸಾಲಿನಲ್ಲಿ ಎಡದಿಂದ ಬಲಕ್ಕೆ ಬರೆಯುವರು..
  
                                                            ಮಾದರಿ ನರಹ

  
                                            ಬಲದಿಂದ ಎಡಕ್ಕೆ ಓದಿ: 



                                                       Ci-th.a ma-sa di-va-se pra-d.ha-me

                                          ಸಿ-ತ-ಅ-ಮ-ಸ-ಡಿ-ವ –ಸೆ ಪರ-ಹ-ಮೆ

                                               ಚೈತ್ರದ ಮೊದಲ ದಿನ










Saturday, October 26, 2013

ಬಿ.ಎಂ.ಶ್ರೀ. ಸ್ಮಾರಕ ಪ್ರತಿಷ್ಠಾನ


- ಡಾ|| ಪಿ.ವಿ. ಕೃಷ್ಣಮೂರ್ತಿ

ಬೆಳ್ಳಿ ಹಬ್ಬದ ಸಡಗರದಲ್ಲಿ ಕನ್ನಡ ಸಾಹಿತ್ಯ ಸಂಶೋಧನೆಯ
ವಿಶಿಷ್ಟಸಂಸ್ಥೆ - ಬಿ.ಎಂ.ಶ್ರೀ ಪ್ರತಿಷ್ಠಾನ






ಆಧುನಿಕ ಕನ್ನಡ ಸಾಹಿತ್ಯದ ಅರುಣೋದಯದ ಕಾಲಘಟ್ಟದಲ್ಲಿ ಪ್ರಾಂಜಲ ಸೇವೆ ಸಲ್ಲಿಸಿದ ಆಚಾರ್ಯ ಬಿ.ಎಂ.ಶ್ರೀಕಂಠಯ್ಯನವರು ಪ್ರಾತಃಸ್ಮರಣೀಯರು. ಅವರು ಅಂದು ಕನ್ನಡನಾಡಿನಲ್ಲಿ ಉಂಟುಮಾಡದ ಜಾಗೃತಿಯ ಕಾರಣದಿಂದಲೇ ಕನ್ನಡ - ಕರ್ನಾಟಕಗಳು ಇಂದು ರಾಷ್ಟ್ರ ಸಾಹಿತ್ಯ ರಂಗದಲ್ಲಿ ಗಮನಾರ್ಹ ಸ್ಥಾನ ಮಾನಗಳಿಗೆ ಪಾತ್ರವಾಗಿರುವುದು, ಎಂದರೆ ತಪ್ಪಾಗಲಾರದು.
ಆಚಾರ್ಯ ಬಿ.ಎಂ.ಶ್ರೀ ಅವರು ಮೂಲತಃ ಒಬ್ಬ ಇಂಗ್ಲಿಷ್‌ಪ್ರಾದ್ಯಾಪಕರು ಕಾಲಾಂತರದಲ್ಲಿ ಕನ್ನಡ ಸಾಹಿತ್ಯದ ಆಳ ವಿಸ್ತಾರಗಳನ್ನು ಗಮನಿಸತೊಡಗಿದ ಅವರು ಆ ಸಾಹಿತ್ಯದಲ್ಲಿ ತಾವು ಪಡೆದುಕೊಂಡ ಪರಿಣತಿ ಮತ್ತು ವಿದ್ವತ್ ಪ್ರತಿಭೆಯ ಕಾರಣದಿಂದ ಮೈಸೂರು ವಿಶ್ವವಿದ್ಯಾನಿಲಯದ ಪ್ರಪ್ರಥಮ ಕನ್ನಡ ಪ್ರಾಧ್ಯಾಪಕರೂ ಆದರು. ಅಷ್ಟೇ ಅಲ್ಲ ಮುಂದೆ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ವಿಭಾಗವು ಒಂದು ಹೆಮ್ಮೆಯ ತಾಣವಾಗುವಂತೆಯೂ ಮಾಡಿದರು. ಅವರ ಮಾರ್ಗದರ್ಶನದಲ್ಲಿ ತರಬೇತಾದ ಕನ್ನಡಾಭಿಮಾನಿ ವಿದ್ವಾಂಸರು ಅನೇಕರು. ಅವರಲ್ಲಿ ಕುವೆಂಪು, ಡಿ.ಎಲ್.ಎನ್., ತೀ.ನಂ.ಶ್ರೀ., ತ.ಸು.ಶಾಮರಾವ್, ಎಚ್.ಎಂ.ಶಂಕರನಾರಾಯಣರಾವ್, ಕೆ.ವೆಂಕಟರಾಮಪ್ಪ, ಪರಮೇಶ್ವರ ಭಟ್ಟ, ಪ್ರೊ|| ಎಂ.ವಿ.ಸೀತಾರಾಮಯ್ಯ ಮುಂತಾದವರು ಅಗ್ರಗಣ್ಯರು. ಇವರು ಒಬೊಬ್ಬರೂ ತಾವು ಆಯ್ದುಕೊಂಡ ಸಾಹಿತ್ಯ ಪ್ರಕಾರಗಳಲ್ಲಿ ವಿಶಿಷ್ಟತೆಯನ್ನು ಪಡೆದು ಮಾನ್ಯರಾಗಿ ಕನ್ನಡ ಸಾಹಿತ್ಯಾಭ್ಯಾಸಿಗಳಿಗೆ ಪ್ರಾತಃ ಸ್ಮರಣೀಯರಾಗಿರುವುದು ಸರಿಯಷ್ಟೆ. ಅವರ ಶಿಷ್ಯರಲ್ಲಿ ಒಬ್ಬರಾಗಿದ್ದ ಪ್ರೊ|| ಎಂ.ವಿ.ಸೀತಾರಾಮಯ್ಯನವರು ಬಹು ವಿಶಿಷ್ಟ ಪ್ರತಿಭೆಯುಳ್ಳವರಾಗಿದ್ದರು.
ಸಾಹಿತ್ಯವಲಯದಲ್ಲಿ ಎಂ.ವಿ.ಸೀ. ಎಂದೇ ಪ್ರಸಿದ್ಧರಾಗಿದ್ದ ಪ್ರೊ|| ಎಂ.ವಿ.ಸೀತಾರಾಮಯ್ಯನವರು ಕೇವಲ ಸೃಜನಾತ್ಮಕ ಸಾಹಿತ್ಯದ ಕರ್ತೃಗಳು ಮಾತ್ರವಾಗಿರಲಿಲ್ಲ. ಅವರು ಒಬ್ಬ ಉತ್ತಮ ಸಹೃದಯ ಕಲಾವಿದರೂ ಕಲಾಭಿಮಾನಿಗಳೂ ಆಗಿದ್ದರು. ಸಂಗೀತ, ಚಿತ್ರ ಕಲೆಗಳನ್ನು ಅವರು ಕರಗತ ಮಾಡಿಕೊಂಡಿದ್ದರು. ಅಷ್ಟೇ ಅಲ್ಲದೆ ಶಿಸ್ತುಬದ್ಧವಾದ ಸಂಶೋಧನೆಯಲ್ಲೂ ಅವರದು ಎತ್ತಿದಕೈ.
ಸದ್ಯಕ್ಕೆ ಲಭ್ಯವಿರುವ ಕನ್ನಡದ ಪ್ರಥಮ ಸಾಹಿತ್ಯ ಶಾಸ್ತ್ರಕೃತಿ ಕವಿರಾಜಮಾರ್ಗ ಗ್ರಂಥವನ್ನು ಪ್ರೊ|| ಎಂ.ವಿ.ಸೀ. ಅವರು ಶಿಸ್ತುಬದ್ಧವಾಗಿ, ವೈಜ್ಞಾನಿಕವಾಗಿ ಮತ್ತು ವಿಸ್ತಾರವಾದ ಪ್ರಸ್ಥಾಪನೆಯೊಂದಿಗೆ ಸಂಪಾದಿಸಿ ಪ್ರಕಟಿಸಿ ಕನ್ನಡ ವಿದ್ವತ್ ಲೋಕಕ್ಕೆ ನೀಡಿ, ಮಾನ್ಯತೆಯನ್ನು ಪಡೆದವರು. ಕನ್ನಡ ಸಾಹಿತ್ಯದಲ್ಲಿ ಆಗಬೇಕಾದ ಸಂಶೋಧನೆಗಳಿಗಾಗಿ ಕನಸು ಕಂಡು ನನಸು ಮಾಡಿದ ಸಂಸ್ಥೆ ಬಿ.ಎಂ.ಶ್ರೀ. ಸ್ಮಾರಕ ಪ್ರತಿಷ್ಠಾನ.
ಕಳೆದ ಶತಮಾನದ ೭೦ರ ದಶಕಕ್ಕಾಗಲೇ ಕನ್ನಡದಲ್ಲಿ ಕುಸಿಯುತ್ತಿದ್ದ ಪಾಂಡಿತ್ಯ, ವಿದ್ವತ್ ಸ್ಥಿತಿಗತಿಗಳನ್ನು ಮನಗಂಡ ಪ್ರೊ|| ಎಂ.ವಿ.ಸೀ. ಅವರು, ಅದನ್ನು ಹೇಗಾದರೂ ಮತ್ತೆ ನೆಲೆಗೊಳಿಸಬೇಕು, ಹಿಂದಿನಂತೆ ಮುಂದೆಯೂ ಕನ್ನಡದಲ್ಲಿ ಪಾಂಡಿತ್ಯ, ವಿದ್ವತ್ ಪ್ರತಿಭೆಗಳು ಬೆಳಗಬೇಕು, ಅದಕ್ಕಾಗಿ ಒಂದು ವಿದ್ವತ್ ಸಂಶೋಧನ ಸಂಸ್ಥೆಯನ್ನು ಕಟ್ಟಬೇಕೆಂದು ಕನಸು ಕಂಡರು. ದೈಹಿಕವಾಗಿ ದುರ್ಬಲರಾದೂ ಮಾನಸಿಕವಾಗಿ ಪ್ರಬಲರಾಗಿದ್ದ ಅವರು ತಮ್ಮ ಪೂಜ್ಯ ಗುರುಗಳಾದ ಆಚಾರ್ಯ ಬಿ.ಎಂ.ಶ್ರೀ. ಅವರ ಸ್ಮರಣಾರ್ಥವಾಗಿ ಒಂದು ಸಾಹಿತ್ಯ ಸಂಶೋಧನ ಸಂಸ್ಥೆಯನ್ನು ಸ್ಥಾಪಿಸಲು ನಿರ್ಧರಿಸಿದರು. ಪರಿಣಾಮವಾಗಿ ೧೯೭೯ರ ಮೇ ೬ ರಂದು ಪ್ರತಿಷ್ಠಾನವನ್ನು ಸ್ಥಾಪಿಸಲಾಯಿತು. ಮುಂದೆ ದಿನಾಂಕ ೧೦.೦೩.೧೯೮೦ ರಂದು ವಿದ್ಯುಕ್ತವಾಗಿ ಬಿ.ಎಂ.ಶ್ರೀ. ಸ್ಮಾರಕ ಸಾಹಿತ್ಯ ಸಂಶೋಧನ ಪ್ರತಿಷ್ಠಾನವನ್ನು ರಾಷ್ಟ್ರಕವಿ ಸನ್ಮಾನ್ಯ ಕುವೆಂಪು ಅವರ ಅಮೃತ ಹಸ್ತದಿಂದ ಉದ್ಘಾಟನೆ ಮಾಡಿಸಿಯೇಬಿಟ್ಟರು - ದಿಟ್ಟ ನಿಲುವಿನ ಪ್ರೊ|| ಎಂ.ವಿ.ಸೀ. ಅವರು. ಕುವೆಂಪು ಅವರು ಆಗ್ಗೆ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಭಾಗವಹಿಸುವುದನ್ನು ಬಿಟ್ಟುಬಿಟ್ಟಿದ್ದರು. ಆದರೆ ತಮ್ಮ ಪೂಜ್ಯ ಗುರುಗಳಾದ ಆಚಾರ್ಯ ಬಿ.ಎಂ.ಶ್ರೀ ಅವರ ಹೆಸರಿನಲ್ಲಿ ಆರಂಭವಾಗುತ್ತಿರುವ ಸದುದ್ದೇಶದ ಸಂಸ್ಥೆಯ ಹಾಗೂ ಪ್ರೊ|| ಎಂ.ವಿ.ಸೀ. ಅವರ ಮೇಲಿನ ಪ್ರೀತಿಯಿಂದ ಸಮಾರಂಭಕ್ಕೆ ಆಗಮಿಸಿ ಶುಭಕೋರಿದರು. ಈ ಕಾರ‍್ಯದಲ್ಲಿ ಅವರ ಬೆಂಗಳೂರಿನ ಅನೇಕ ತರುಣ ಸಾಹಿತ್ಯಾಭಿಮಾನಿಗಳು ಹಾಗೂ, ನಾಡಿನ ಅನೇಕ ವಿದ್ವಾಂಸರು ಬೆನ್ನೆಲುಬಾಗಿ ನಿಂತರು.
ಬಿ.ಎಂ.ಶ್ರೀ. ಪ್ರತಿಷ್ಠಾನದ ಪ್ರಧಾನ ಉದ್ದೇಶ ಸಂಶೋಧನೆಗೆ ಅಗತ್ಯವಾದ ಆಕರ ಸಾಮಗ್ರಿಗಳ ಸಂಗ್ರಹ. ಅಂತೆಯೇ ಆ ನಿಟ್ಟಿನಲ್ಲಿ ಕನ್ನಡ ಸಾಹಿತ್ಯದ ಓಲೆಗರಿ - ಹಸ್ತಪ್ರತಿಗಳ ಸಂಗ್ರಹಣ ಕಾರ್ಯಕ್ಕೆ ಒತ್ತು ನೀಡಿದ್ದು, ನಾಡಿನ ಮೂಲೆ ಮೂಲೆಗಳಿಂದ ಈವರೆಗೂ ೧೫೦೦ಕ್ಕೂ ಅಧಿಕ ಓಲೆಗರಿ ಮತ್ತು ಕಾಗದದ ಅಮೂಲ್ಯ ಹಸ್ತಪ್ರತಿಗಳನ್ನು ಸಂಗ್ರಹಿಸಲಾಗಿದೆ. ಕೇವಲ ಹಸ್ತಪ್ರತಿಗಳನ್ನು ಸಂಗ್ರಹಿಸುವುದಷ್ಟೇ ಅಲ್ಲ, ಅವುಗಳನ್ನು ಸಂರಕ್ಷಿಸಿ, ಅವುಗಳಲ್ಲಿ ನಿಕ್ಷಿಪ್ತವಾಗಿರುವ ಜ್ಞಾನವನ್ನು ಹೊರ ತೆಗೆಯುವ ಕಾರ್ಯವೂ ಆಗಬೇಕು. ಅದಕ್ಕಾಗಿ ಅವುಗಳನ್ನು ಓದುವ, ನಕಲುಮಾಡುವ, ಅಧ್ಯಯನ, ಸಂಪಾದನೆ, ವಿಶ್ಲೇಷಣೆ, ಇತ್ಯಾದಿ ತತ್ಸಂಬಧಿ ವಿದ್ವತ್ ಕಾರ್ಯಗಳನ್ನು ನಿರ್ವಹಿಸುವ ಒಂದು ದೊಡ್ಡ ಸಾಹಿತ್ಯಾಭಿಮಾನಿ ಬಳಗವೇ ಬೇಕಾಗುತ್ತದೆ. ಈ ನಿಟ್ಟಿನಲ್ಲೂ ಪ್ರತಿಷ್ಠಾನ ಕಾರ್ಯೋನ್ಮುಖವಾಗಿ ೧೯೯೦ ರಿಂದಲೇ ಹಸ್ತಪ್ರತಿಶಾಸ್ತ್ರ ತರಗತಿಗಳನ್ನು ಕರ್ನಾಟಕದಲ್ಲೇ ಏಕೈಕ ಪ್ರಯತ್ನವಾಗಿ ಆರಂಭಿಸಲಾಗಿದೆ (೧೯೮೧ರಲ್ಲಿ ಹಸ್ತಪ್ರತಿಶಾಸ್ತ್ರ ವಿಚಾರ ಗೋಷ್ಠಿಯನ್ನು ರಾಷ್ಟ್ರಮಟ್ಟದಲ್ಲಿ ಏರ್ಪಡಿಸಲಾಗಿತ್ತು). ಪ್ರತಿವರ್ಷ ಗರಿಷ್ಠ ೧೦ ಜನ ವಿದ್ಯಾರ್ಥಿಗಳಿಗೆ ಓಲೆಗರಿ ಕಾಗದ ಹಸ್ತಪ್ರತಿಗಳ ಸಂಗ್ರಹ, ಸಂರಕ್ಷಣೆ, ಸಂಪ್ರತಿ, ದಾಖಲೀಕರಣ ಮತ್ತು ಗ್ರಂಥ ಸಂಪಾದನಾ ಕೌಶಲದಲ್ಲಿ ಪರಿಣತಿಯನ್ನು ನೀಡಲಾಗುತ್ತಿದೆ. ಈ ತರಗತಿಗಳಲ್ಲಿ ತರಬೇತಿ ಪಡೆದ ಹಲವರು ಈಗಾಗಲೇ ಈ ವಿದ್ವತ್ ಕೈಂಕರ್ಯದಲ್ಲಿ ಸಕ್ರಿಯರಾಗಿರುವುದು ಸಂಸ್ಥೆಗೆ ಹೆಮ್ಮೆಯನ್ನುಂಟು ಮಾಡಿದೆ.

ಪ್ರತಿಷ್ಠಾನದ ಆಕರ ಗ್ರಂಥಾಲಯ ಮತ್ತು ಸಂಶೋಧನ ಕೇಂದ್ರ:
          ಹಸ್ತಪ್ರತಿ ಶೋಧನೆ, ಸಂಪಾದನಾ ಕಾರ್ಯಗಳಿಗೆ ಪೂರಕವಾಗಿ ಆಕರ ಗ್ರಂಥಾಲಯವು ಅತ್ಯಗತ್ಯ. ಈ ದಿಸೆಯಲ್ಲಿ ಪ್ರತಿಷ್ಠಾನ ಹಿಂದೆ ಬಿದ್ದಿಲ್ಲ. ಕನ್ನಡ-ಕರ್ನಾಟಕ ಸಂಶೋಧನೆಗೆ ಅಗತ್ಯವಾದ ಆಕರ ಗ್ರಂಥಗಳ ಸಂಗ್ರಹ ಅವಿರತವಾಗಿ ಸಾಗಿದೆ. ಸಂಸ್ಥೆಯ ಗ್ರಂಥ ಭಂಡಾರದಲ್ಲಿ ಈವರೆಗೂ ಹನ್ನೆರಡು ಸಾವಿರಕ್ಕೂ ಹೆಚ್ಚು ಗ್ರಂಥಗಳು ಸಂಗ್ರಹವಾಗಿದೆ. ಅವೆಲ್ಲವೂ ಸಂಶೋಧನೆಗೆ ಅಗತ್ಯವಾದ ಗ್ರಂಥಗಳು ಮಾತ್ರವಾಗಿವೆ ಎಂಬುದು ಗಮನಾರ್ಹ. ಕರ್ನಾಟಕಾಧ್ಯಯನಕ್ಕೆ ಅಗತ್ಯವಾದ ಎಫಿಗ್ರಾಫಿಯ ಕರ್ನಾಟಿಕ, ಮೈಸೂರು ಆರ್ಕಿಯಲಾಜಿಕಲ್ ವರದಿಗಳು, ವಿವಿಧ ನಿಘಂಟುಗಳು, ಪ್ರಬುದ್ಧ ಕರ್ಣಾಟಕ, ಕನ್ನಡ ನುಡಿ, ಪರಿಷತ್ಪತ್ರಿಕೆ, ಸಾಧನೆ, ಕರ್ನಾಟಕ ಭಾರತಿ, ಜೀವನ ಮುಂತಾದ ಪತ್ರಿಕೆಗಳ ಸಂಗ್ರವೂ ಬೇರೆ ಬೇರೆ ಸಂಸ್ಥೆಗಳ ಹಸ್ತಪ್ರತಿ ಗ್ರಂಥ ಸೂಚಿಗಳೂ ವ್ಯವಸ್ಥಿತವಾಗಿ ಸಂಗ್ರಹವಾಗಿದ್ದು ಸಾಹಿತ್ಯ ಸಂಶೋಧನೆಯ ಆಸಕ್ತರು ಮತ್ತು ಉನ್ನತ ವ್ಯಾಸಂಗದ ವಿದ್ಯಾರ್ಥಿಗಳು ನಿರಂತರವಾಗಿ ಇದರ ಪ್ರಯೋಜನ ಪಡೆಯುತ್ತಿದ್ದಾರೆ. ನಾಡಿನ ಖ್ಯಾತ ವಿದ್ವಾಂಸರಾಗಿದ್ದ ಶ್ರೀ ಎಂ.ವಿ.ಸೀ., ಎಸ್.ಶ್ರೀಕಂಠಯ್ಯ, ಅನಂತರಂಗಾಚಾರ್ಯ ಮೊದಲಾದ ಗಣ್ಯರು ನೀಡಿರುವ ದಾನದ ಪುಸ್ತಕಗಳಿಂದ ಪ್ರತಿಷ್ಠಾನದ ಭಂಡಾರ ಶ್ರೀಮಂತಗೊಂಡಿದೆ. ಕರ್ನಾಟಕ-ಕನ್ನಡ ಸಂಶೋಧನೆಗೆ ಅಗತ್ಯವಾದ ಪ್ರಾಚೀನ ಗ್ರಂಥಗಳನ್ನು ಕೊಡುಗೆಯಾಗಿ ಪಡೆಯಲು ಪ್ರತಿಷ್ಠಾನದ ಬಾಗಿಲು ತೆರೆದಿದೆ.
          ಗ್ರಂಥಸಂಪಾದನಾ ಕಾರ‍್ಯ : ಈವರೆಗೂ ಪ್ರಕಟವಾಗದೆ, ಹಸ್ತಪ್ರತಿಯ ಸ್ಥಿತಿಯಲ್ಲೇ ಉಳಿದಿದ್ದ ಅನೇಕ ಕಾವ್ಯಗಳನ್ನು ವಿದ್ವಾಂಸರಿಂದ ಸಂಪಾದಿಸಿ ಪ್ರಕಟಿಸುವ ಕಾರ್ಯವನ್ನು ಬಿ.ಎಂ.ಶ್ರೀ. ಸ್ಮಾರಕ ಪ್ರತಿಷ್ಠಾನ ಕೈಗೊಂಡಿದೆ. ಹೀಗೆ ಪ್ರಕಟವಾದ ಪ್ರತಿಗಳ ಸಂಖ್ಯೆ ಹದಿನೈದಕ್ಕೂ ಹೆಚ್ಚು. ಅವುಗಳಲ್ಲಿ ಸೂತಭಾರತ, ಶ್ರೀಕೃಷ್ಣದೇವರಾಯನ ದಿನಚರಿ, ಚಂದ್ರಚೂಡಾಮಣಿ ಶತಕ, ಶ್ರೀನಿವಾಸ ಕಲ್ಯಾಣ, ಮರುನ್ನಂದನ ಶತಕ, ಧ್ರುವಚರಿತ್ರೆ, ಪದ್ಮಿನಿ ಕಲ್ಯಾಣ, ಶ್ರೀಕೃಷ್ಣ ಬಾಲಲೀಲೆ, ಕೀರ್ತನ ಕುಸುಂಮಾಂಜಲಿ, ಬೇಟೆರಾಯ ದೀಕ್ಷಿತರ ದೇವರ ನಾಮಗಳು - ಮುಂತಾದವು ಗಮನಾರ್ಹವಾದುವಾಗಿದ್ದು, ಎಂ.ಜಿ.ಹೆಗ್ಗಡೆ, ಸಂಪತ್ಕುಮಾರಾಚಾರ್ಯ, ಎಸ್.ಶಿವಣ್ಣ, ಎಸ್.ರಾಮಸ್ವಾಮಿ ಮೊದಲಾದವರು ಸಂಪಾದಿಸಿಕೊಟ್ಟಿರುತ್ತಾರೆ. ಈ ಎಲ್ಲ ಗ್ರಂಥಗಳೂ ಗ್ರಂಥ ಸಂಪಾದನಾ ಶಿಸ್ತಿಗೆ ಅನುಗುಣವಾಗಿ ಸಂಪಾದಿಸಲಾಗಿದ್ದು, ಪಾಠಾಂತರ ನಿಷ್ಕರ್ಷೆ, ವಿಸ್ತೃತ ಪ್ರಸ್ಥಾವನೆ, ಕವಿ ಕಾವ್ಯ ವಿಚಾರ ಮತ್ತು ಸೂಕ್ತ ಅನುಬಂಧಗಳೊಂದಿಗೆ ಶಾಸ್ತ್ರೀಯವಾಗಿ ಸಂಪಾದಿಸಲಾಗಿದೆ. ಅಲ್ಲದೆ ಜನಪ್ರಿಯ ಕೃತಿಗಳಾದ ಸರ್ವಜ್ಞನ ವಚನಗಳು, ಕುಮಾರವ್ಯಾಸ ಭಾರತ ಇವುಗಳನ್ನು ನೂತನ ಪಾಠಾಂತರಗಳೊಂದಿಗೆ ಸಂಪಾದಿಸಿ ಪ್ರಕಟಿಸಲಾಗಿದೆ. ಅಷ್ಟೇ ಅಲ್ಲದೆ ಪ್ರತಿಷ್ಠಾನದ ಸಂಗ್ರಹದಲ್ಲಿರುವ ತಿಮ್ಮಪ್ಪದಾಸರ ಕೀರ್ತನೆಗಳು, ವೆಂಕಟದಾಸರ ಕೀರ್ತನೆಗಳು, ಮುಂತಾದವುಗಳ ಶಾಸ್ತ್ರೀಯ ಸಂಪಾದನಾ ಕಾರ್ಯ ಮುಂದುವರೆದಿದೆ. ಪ್ರತಿಷ್ಠಾನದ ತಜ್ಞ ತಂಡ ಇತರರಿಗೂ ಕೆಲವು ಪ್ರಚೀನ ಗ್ರಂಥಗಳನ್ನು ಸಂಪ್ರತಿ ಮಾಡುವ ಮತ್ತು ಶಾಸ್ತ್ರೀಯವಾಗಿ ಸಂಪಾದಿಸುವ ಕಾರ್ಯವನ್ನು ಮಾಡಿಕೊಡುತ್ತದೆ. ಈ ನಿಟ್ಟಿನಲ್ಲಿ ಡಾ|| ಸಿದ್ಧಯ್ಯ ಪುರಾಣಿಕರಿಗಾಗಿ ಮಳೆಯ ರಾಜ ಚರಿತ್ರೆ ಹಾಗೂ ಬಸವ ಸಮಿತಿಗಾಗಿ ನವರತ್ನಮಾಲಿಕೆ, ಪ್ರೊ|| ಧ್ರುವನಾರಾಯಣ ಅವರಿಗಾಗಿ ಕನ್ನಿಕಾಂಬೆಯ ಕಥೆ, ಮುಂತಾದವುಗಳನ್ನು ಸಿದ್ಧಪಡಿಸಿ ಕೊಟ್ಟಿರುವುದು ಮುಖ್ಯವಾದುದಾಗಿದೆ.
          ಶಾಸ್ತ್ರ ಸಂಬಂಧಿ ಲಕ್ಷಣ ಗ್ರಂಥಗಳ ಪ್ರಕಟಣ ಕಾರ್ಯವನ್ನು ಪ್ರತಿಷ್ಠಾನ ಕೈಗೊಂಡಿದ್ದು, ಮೊದಲಿಗೆ ಹಸ್ತಪ್ರತಿಶಾಸ್ತ್ರಕ್ಕೆ ಸಂಬಂಧಿಸಿದಂತೆ ವಿಚಾರಗೋಷ್ಠಿಗಳನ್ನು ಸಂಘಟಿಸಿ ಮಣಿಹ, ಹಸ್ತಪ್ರತಿಶಾಸ್ತ್ರ, ಮುಂತಾದ ಕೃತಿಗಳನ್ನು ಹೊರತಂದಿರುವುದಲ್ಲದೆ ತತ್ಸಂಬಂಧಿ ವಿಷಯಗಳಾದ ಹಸ್ತಪ್ರತಿಶಾಸ್ತ್ರ ಪರಿಚಯ, ಭಾಷಾಂತರ ಕಲೆ, ಸೃಜನಶೀಲತೆ ಮತ್ತು ಪಾಂಡಿತ್ಯ, ಹೊಸಗನ್ನಡ ವ್ಯಾಕರಣ ಕನ್ನಡ ಸಾಹಿತ್ಯದಲ್ಲಿ ಅದ್ವೈತ ಮುಂತಾದ ಕೃತಿಗಳು ಪ್ರಕಟಗೊಂಡಿವೆ. ೧೯೯೦ರ ದಶಕದಲ್ಲಿ ಅಂತರ ಶಿಸ್ತೀಯ ಸಂಶೋಧನೆಯ ಶಿಸ್ತು ವಿನಃ ಪರಿಕಲ್ಪನೆ ಅನುಗುಣವಾಗಿ ಅಂತರ ಶಿಸ್ತೀಯ ಸಂಶೋಧನೆಯ ಸಂಶೋಧನ ವಿಧಿ ವಿಧಾನ ಎಂಬ ಲಕ್ಷಣ ಗ್ರಂಥವನ್ನು ಪ್ರಕಟಿಸಲಾಗಿದೆ. ಅಲ್ಲದೆ ತೌಲನಿಕ ಸಾಹಿತ್ಯವನ್ನು ಕುರಿತ ಒಂದು ಲಕ್ಷಣ ಗ್ರಂಥ ಪ್ರಕಟಣೆಯ ಹಂತದಲ್ಲಿದೆ.
          ಸಂಶೋಧನ ವಿದ್ವತ್ ಪತ್ರಿಕೆ ಕರ್ನಾಟಕ ಲೋಚನ : ಕರ್ನಾಟಕ ಸಾಹಿತ್ಯ-ಸಂಸ್ಕೃತಿಯಲ್ಲಿ ನಡೆಯುವ ನೂತನ ಅವಿಷ್ಕಾರಗಳು, ಹೊಸ ಚಿಂತನೆಗಳು, ವಿದ್ವತ್ ಟಿಪ್ಪಣಿಗಳು ಅಪ್ರಕಟಿತ ಕೃತಿಯ ಭಾಗಗಳು, ಸಂಶೋಧನಾ ಚಟುವಟಿಕೆಗಳ ವಿವರಗಳು, ಶಾಸ್ತ್ರಗ್ರಂಥಗಳ ವಿಮರ್ಶೆ ಇತ್ಯಾದಿಗಳನ್ನು ದಾಖಲಿಸಿ ವಿದ್ವತ್ ಪ್ರಪಂಚಕ್ಕೆ ನೆರವಾಗಲು ನಿಂತಿರುವ, ನಿಯತವಾಗಿ ಪ್ರಕಟವಾಗುತ್ತಿರುವ ಏಕೈಕ ಪತ್ರಿಕೆ ಎಂಬ ಹೆಗ್ಗಳಿಕೆಗೆ ಈ ಪತ್ರಿಕೆ ಪಾತ್ರವಾಗಿದೆ. ಛಂದೋಬದ್ಧ ಕವಿತೆಗಳ ರಚನೆಗೆ ಪ್ರೋತ್ಸಾಹ ನೀಡುವ ಸಮಸ್ಯಾಪೂರಣ ಮುಂತಾದ ಸಂಶೋಧನೆ - ಪಾಂಡಿತ್ಯಕ್ಕೆ ಪೂರಕವಾದ ಬರಹಗಳು ಈ ಪತ್ರಿಕೆಯ ವಿಶೇಷವಾಗಿದೆ. ೧೯೮೨ ರಿಂದ ಅರ್ಧವಾರ್ಷಿಕ ಪತ್ರಿಕೆಯಾಗಿ ಈಗ ೨೨ ವರ್ಷಗಳನ್ನು ಪೂರೈಸುತ್ತಲಿದೆ. ಈ ಪತ್ರಿಕೆಯ ೧೫ ವರ್ಷಗಳ ಲೇಖನ ಸೂಚಿಯೂ ಪ್ರಕಟವಾಗಿದೆ. ಸಂಶೋಧನಾ ಕೇಂದ್ರಕ್ಕೆ ಇರಲೇಬೇಕಾದ ಪ್ರಕಟಣೆಯಾಗಿ ಈ ಪತ್ರಿಕೆ ಮುಂದುವರೆದಿದೆ.

ಗ್ರಂಥ ಪ್ರಕಟಣೆ, ವಿಚಾರಗೋಷ್ಠಿ, ವಿಶೇಷ ಕಾರ್ಯಕ್ರಮಗಳು:
          ಬಿ.ಎಂ.ಶ್ರೀ. ಪ್ರತಿಷ್ಠಾನವು ಕಾಲ ಕಾಲಕ್ಕೆ ರಾಜ್ಯಮಟ್ಟದ, ರಾಷ್ಟ್ರಮಟ್ಟದ ವಿಚಾರ ಗೋಷ್ಠಿಗಳನ್ನು ಏರ್ಪಡಿಸುತ್ತಾ ಬಂದಿದೆ. ಅವುಗಳಲ್ಲಿ ರಾಷ್ಟ್ರಮಟ್ಟದ ಹಸ್ತಪ್ರತಿಶಾಸ್ತ್ರ (೧೯೮೧), ಕನ್ನಡ ನವೋದಯ ಸಾಹಿತ್ಯ (೧೯೮೪), ವಿಜಯನಗರ ಸಾಮ್ರಾಜ್ಯ ಇತಿಹಾಸ ಮತ್ತು ಸಂಸ್ಕೃತಿ (೧೯೮೬), ಕುಮಾರವ್ಯಾಸ ಭಾರತ ಸಮಗ್ರ ಸಮೀಕ್ಷೆ (೧೯೮೭), ಕನ್ನಡ ಸಾಹಿತ್ಯದಲ್ಲಿ ಅದ್ವೈತ (೧೯೮೮) ಎಂಬುವು ಮುಖ್ಯವಾದುವಾಗಿವೆ. ಈ ವಿಚಾರಗೋಷ್ಠಿಗಳಲ್ಲಿ ಮಂಡಿತವಾದ ಪ್ರಬಂಧಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವ ಕಾರ್ಯವನ್ನೂ ಪ್ರತಿಷ್ಠಾನ ಮಾಡುತ್ತ ಬಂದಿದೆ.
          ಪ್ರತಿಷ್ಠಾನವು ಆಗಾಗ್ಗೆ ವಿಶೇಷ ಉಪನ್ಯಾಸಗಳನ್ನು ಏರ್ಪಡಿಸಿ ಸಾಹಿತ್ಯ ಸಂಶೋಧನೆಗೆ ಪೂರಕವಾಗುವಂತೆ ಕಾರ್ಯಕ್ರಮಗಳನ್ನು ವ್ಯವಸ್ಥೆ ಮಾಡುತ್ತಾ ಬಂದಿದೆ. ಅದಕ್ಕಾಗಿ ಒಂದು ವ್ಯವಸ್ಥಿತ ಅಧ್ಯಯನ ಕೇಂದ್ರವೇ ಕಾರ್ಯಪ್ರವೃತ್ತವಾಗಿದೆ. ಈ ಕೇಂದ್ರದ ಮೂಲಕ ಪ್ರತಿ ತಿಂಗಳು ನಡೆಯುವ ಯುವ ವೇದಿಕೆ ಸಹೃದಯಗೋಷ್ಠಿ ಸಾಹಿತ್ಯ ಸಂಶೋಧನ ಕ್ಷೇತ್ರಕ್ಕೆ ಗಣನೀಯ ಸೇವೆ ಸಲ್ಲಿಸಿದ ವಿದ್ವಾಂಸರನ್ನು ಕುರಿತು ಉಪನ್ಯಾಸ ಮಾಲೆ, ಸಾಹಿತ್ಯೋಪಾಸಕರು ಹಾಗೂ ಪ್ರತಿಷ್ಠಾನದ ಉದ್ದೇಶಿತ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸ್ಮರಣೀಯರಾಗಿದ್ದ ವಿದ್ವಾಂಸರ ಶತಮಾನೋತ್ಸವಗಳನ್ನು ಪ್ರತಿಷ್ಠಾನ ನಿಷ್ಠೆಯಿಂದ ಆಚರಿಸಿ ಅವರ ಜೀವನ ಸಾಧನೆಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯಗಳನ್ನು ನಿರಂತರವಾಗಿ ನಡೆಯಿಸಿಕೊಂಡು ಬರುತ್ತಿದೆ. ಈ ದಿಸೆಯಲ್ಲಿ ಹಲವು ಸಂಸ್ಮರಣ ಸಂಪುಟಗಳು ಮತ್ತು ಜೀವನ ಚರಿತ್ರೆಗಳು ಪ್ರಕಟವಾಗಿವೆ. ಅವುಗಳಲ್ಲಿ ಮಣಿಹ (ಫ.ಗು.ಹಳಕಟ್ಟಿ ಸಂಸ್ಮರಣ ಸಂಪುಟ), ಶ್ರೀನಿಧಿ (ಬಿ.ಎಂ.ಶ್ರೀ. ಸಂಸ್ಮರಣ ಸಂಪುಟ), ಆಚಾರ್ಯ ಬಿ.ಎಂ.ಶ್ರೀ. (ಜೀವನ ಚರಿತ್ರೆ), ಟಿ.ಎಸ್. ವೆಂಕಣ್ಣಯ್ಯ (ಜೀವನ ಚರಿತ್ರೆ), ಮಾಸ್ತಿ ವೆಂಕಟೇಶ ಅಯ್ಯಂಗಾರ್ (ಜೀವನ ಚರಿತ್ರೆ), ಬೇಂದ್ರೆ ಸ್ಮೃತಿ, ಎಂ.ವಿ.ಸೀ. ಸಂಸ್ಮರಣೆ, ಮಾಸ್ತಿ ಸ್ಮರಣೆ, ನವ್ಯ ಸೂರ್ತ್ಪಿ, ಗೋಕಾಕ್ ನೆನಪು, ಕಾರಂತ ಕಿರಣ, ಶಂಬಾಸ್ಮೃತಿ ಸಮೀಕ್ಷೆ, ಮಧುರಸ್ಮೃತಿ, ಬಿ.ರಾಮಸ್ವಾಮಿ (ಸಂಸ್ಮರಣ) ಮುಂತಾದ ಕೃತಿಗಳನ್ನು ಹೆಸರಿಸಬಹುದು.

ಹಳಗನ್ನಡ ಕಾವ್ಯಾಭ್ಯಾಸ ಶಿಬಿರ :
          ಪ್ರತಿಷ್ಠಾನ ನಡೆಯಿಸಿಕೊಂಡು ಬರುತ್ತಿರುವ ಚಟುವಟಿಕೆಗಳಲ್ಲಿ ಈ ಹಳಗನ್ನಡ ಕಾವ್ಯಾಭ್ಯಾಸ ಶಿಬಿರಕ್ಕೆ ವಿಶೇಷ ಸ್ಥಾನವಿದೆ. ಪ್ರತಿಷ್ಠಾನದ ಹಸ್ತಪ್ರತಿ ಶಾಸ್ತ್ರದ ವಿದ್ಯಾರ್ಥಿಗಳು ಹಾಗೂ ಇತರ ಆಸಕ್ತರು ಸೇರಿ ರೂಪಿಸಿರುವ ಸಿರಿಕಂಟ ಎಂಬ ಅಧ್ಯಯನ ಗೋಷ್ಠಿಯ ಮೂಲಕ ೨೦೦೧ ರಿಂದ ಪ್ರತಿ ವರ್ಷ ಹಳಗನ್ನಡ ಕಾವ್ಯಾಭ್ಯಾಸ ಶಿಬಿರವನ್ನು ಏರ್ಪಡಿಸುತ್ತಾ ಬಂದಿದೆ. ಈ ಶಿಬಿರದಲ್ಲಿ ಅಧ್ಯಯನಾ ಆಸಕ್ತರಿಗೆ ಪ್ರಾಚೀನ ಸಾಹಿತ್ಯ ಪ್ರಿಯರಿಗೆ, ವಿದ್ಯಾರ್ಥಿಗಳಿಗೆ ಮತ್ತು ಕನ್ನಡ ಅಧ್ಯಾಪಕರಿಗೆ ಹಳಗನ್ನಡ ಕಾವ್ಯಗಳನ್ನು ಓದುವ ಆಸ್ವಾದಿಸುವ ಹಾಗೂ ಅರ್ಥೈಸುವುದಕ್ಕೆ ಅನುಕೂಲವಾಗುವಂತೆ ಪ್ರಾಯೋಗಿಕವಾಗಿಯೂ ಮಾರ್ಗದರ್ಶನ ನೀಡಲಾಗುತ್ತದೆ. ಈ ಕಾರ್ಯದಲ್ಲಿ ನಾಡಿನ ನುರಿತ ವಿದ್ವಾಂಸರು ಸಂಪನ್ಮೂಲ ವ್ಯಕ್ತಿಗಳಾಗಿ ವಿಶೇಷ ಪ್ರೀತಿಯಿಂದ, ಸ್ವಪ್ರೇರಣೆಯಿಂದಲೇ ಆಗಮಿಸಿ ಭಾಗವಹಿಸಿ ಮುಂದಿನ ಪೀಳಿಗೆಯ ಬಗ್ಗೆ ತಮ್ಮ ಕಾಳಜಿಯನ್ನು ವ್ಯಕ್ತಪಡಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಅಷ್ಟೇ ಅಲ್ಲ, ಹಸ್ತಪ್ರತಿಗಳ ಸಂರಕ್ಷಣೆ ಮತ್ತು ಸಂಪ್ರತೀಕರಣ ಸೇವೆಯನ್ನು ನೀಡುವ ಹಸ್ತಪ್ರತಿ ಸೇವಾ ಕೇಂದ್ರವನ್ನು ೨೦೦೧ ರಿಂದಲೇ ಆರಂಭಿಸಲಾಗಿದೆ. ಪ್ರಾಚೀನ ಹಸ್ತಪ್ರತಿಗಳನ್ನು ಹೊಂದಿರುವವರು ಅಪೇಕ್ಷಿಸಿದರೆ ಅವುಗಳನ್ನು ಅವರ ಸ್ಥಳದಲ್ಲೇ ಆಗಲೀ ಅಥವಾ ಪ್ರತಿಷ್ಠಾನದಲ್ಲೇ ಆಗಲೀ ವೈಜ್ಞಾನಿಕವಾಗಿ ಸಂರಕ್ಷಿಸಿ ಕೊಡುವ ವ್ಯವಸ್ಥೆಯನ್ನು ಪ್ರತಿಷ್ಠಾನ ಕೈಗೊಂಡಿದೆ. ಹಾಗೇ ಸಂಪ್ರತಿ ಮತ್ತು ಸೂಚಿಗಳನ್ನು ಮಾಡಿಕೊಡಲಾಗುವುದು. ಇದಕ್ಕೆ ಸೂಕ್ತ ಸೇವಾಶುಲ್ಕವನ್ನು ನಿಗದಿಪಡಿಸಲಾಗಿದೆ.





ಸ್ನಾತಕೋತ್ತರ ಸಂಶೋಧನಾ ಕೇಂದ್ರ:

          ಇದೀಗ ಬಿ.ಎಂ.ಶ್ರೀ. ಸ್ಮಾರಕ ಪ್ರತಿಷ್ಠಾನಕ್ಕೆ ಸ್ನಾತಕೋತ್ತರ ಸಂಶೋಧನ ಕೇಂದ್ರವಾಗಿ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಮಾನ್ಯತೆ ದೊರೆತಿದ್ದು ಇದರಿಂದ ಅದರ ಸಂಶೋಧನ ಚಟುವಟಿಕೆಗಳಿಗೆ ಪರಿಪೂರ್ಣತೆ ಬಂದಂತಾಗಿದೆ. ವಿದ್ಯಾರ್ಥಿಗಳು, ವಿದ್ವಾಂಸರು ಈ ಸಂಸ್ಥೆಯ ಮೂಲಕವೂ ಎಂ.ಫಿಲ್., ಪಿಎಚ್.ಡಿ., ಮೊದಲಾದ ಉನ್ನತ ಅಧ್ಯಯನಗಳನ್ನು ಕೈಗೊಳ್ಳಬಹುದಾಗಿದೆ.
          ಹೀಗೆ ಹಲವು ಯೋಜನೆಗಳ ಮೂಲಕ ಪ್ರತಿಷ್ಠಾನ ನಿರಂತರವಾದ ಸಾಹಿತ್ಯ ಸಂಶೋಧನ ಚಟುವಟಿಕೆಗಳನ್ನು ನಡೆಯಿಸಿಕೊಂಡು ಬರುತ್ತಿದ್ದು ಸಾಮಾನ್ಯ ಜನರಲ್ಲೂ ಸಂಶೋಧನ ಸಾಹಿತ್ಯದತ್ತ ಆಸಕ್ತಿ ಮೂಡುವಂತೆ ಶ್ರಮಿಸುತ್ತಿದೆ. ಪ್ರತಿಷ್ಠಾನ ಕೈಗೊಳ್ಳುವ ಯಾವುದೇ ಯೋಜನೆಯನ್ನು ಕಾರ್ಯಗತಗೊಳಿಸಲು ತಜ್ಞ ವಿದ್ವಾಂಸರು ಸಂಶೋಧಕರು ಹಾಗೂ ಆಸಕ್ತರ ಸ್ವಯಂ ಸೇವಾ ತಂಡವೇ ಪ್ರತಿಷ್ಠಾನದಲ್ಲಿ ಕಾರ್ಯನಿರತವಾಗಿರುವುದು ಸಂತೋದ ಸಂಗತಿ. ಜೊತೆಗೆ ಕಟ್ಟಡ, ಗ್ರಂಥಾಲಯ, ಹಸ್ತಪ್ರತಿ ಭಂಡಾರ, ಸಂಶೋಧನಾ ಕೇಂದ್ರಗಳ ಸೌಲಭ್ಯವೂ ಇದೆ. ಈ ಸೌಕರ್ಯಗಳನ್ನು ಇನ್ನೂ ಉತ್ತಮಪಡಿಸುವ ಅಭಿವೃದ್ಧಿಪಡಿಸುವ ಅಗತ್ಯವಂತೂ ಇದ್ದೇ ಇದೆ. ಅದಕ್ಕಾಗಿ ಸಾಕಷ್ಟು ಸಂಪನ್ಮೂಲದ ಕ್ರೋಡೀಕರಣವಾಗಬೇಕಷ್ಟೆ. ಇದೀಗ ಬೆಳ್ಳಿಹಬ್ಬವನ್ನು ಆಚರಿಸುತ್ತಿರುವ ಪ್ರತಿಷ್ಠಾನಕ್ಕೆ ಈ ಸಂಪನ್ಮೂಲಗಳು ಲಭ್ಯವಾಗಲೆಂದು ಹಾರೈಸೋಣ.