ಡಾ. ಮುತ್ತುರಾಜು
ಕನ್ನಡ ಅಧ್ಯಾಪಕರು,
ಜವಾಹರ್ ನವೋದಯ ವಿದ್ಯಾಲಯ,
ಉಡುವಳ್ಳಿ, ಹಿರಿಯೂರು ತಾಲ್ಲೂಕು,
ಚಿತ್ರದುರ್ಗ ಜಿಲ್ಲೆ-೫೭೭೫೯೮.
ಹೂವಿನಹೊಳೆ ಚಿತ್ರದುರ್ಗ ಜಿಲ್ಲೆ ಹಿರಿಯೂರು
ತಾಲ್ಲೂಕಿನ ಒಂದು ಗ್ರಾಮ. ಇದನ್ನು ಹೂವಿನಹಳ್ಳಿ, ಹೂನಳ್ಳಿ ಎಂತಲೂ ಕರೆಯಲಾಗುತ್ತಿದೆ. ಸುವರ್ಣಮುಖಿ ನದಿ ಇಲ್ಲಿ ಹರಿಯುತ್ತಿದ್ದು,
ಹೊಳೆ ಎಂಬ ಜಲಸಂಬಂಧಿ ಉತ್ತರಪದ ಬಂದಿದ್ದು ಸಸ್ಯವಾಚಕವಾದ ‘ಹೂವು’ ಪದ ಪೂರ್ವಪದವಾಗಿದೆ. ಈ ನದಿಯ ದಡದಲ್ಲಿ ವಿಸ್ತಾರವಾಗಿ ಗ್ರಾಮ ಬೆಳೆದು
ಬಂದಿದೆ. ಈಶ್ವರಗೆರೆಯಿಂದ ಈ ಊರಿಗೆ ಪ್ರವೇಶ ಮಾಡುವ ಮುನ್ನ ಸಿಗುವ ಬ್ರಿಡ್ಜ್ ಒಂದರ ಮಗ್ಗುಲಲ್ಲಿ
‘ಮಸಿಯಮ್ಮ’ ಎಂದು ಕರೆಯುವ ಮೂರ್ತಿಯೊಂದು ಇದೆ. ಪ್ರಸ್ತುತ
ಇದನ್ನು ಕಟ್ಟೆಯೊಂದರ ಮೇಲೆ ನಿಲ್ಲಿಸಲಾಗಿದ್ದು ಗುಡಿ ಇಲ್ಲದೇ ಪೂಜಿಸಲಾಗುತ್ತಿದೆ. ನಂಬಿಕೆಯಂತೆ ಈ
ಮೂರ್ತಿಗೆ ಕೆಂಪು ಸೀರೆ ಹಸಿರು ಬಳೆಗಳನ್ನು ತೊಡಿಸಿ ಸಾಂಪ್ರದಾಯಕವಾಗಿ ಜನತೆ ಪೂಜೆ ಸಲ್ಲಿಸುತ್ತಿದ್ದಾರೆ.
ವಾಸ್ತವವಾಗಿ ಇದೊಂದು ಮಹಾಸತಿ ಸ್ಮಾರಕವಾಗಿದ್ದು, ಪತಿಯ ಮರಣದ ಕಾರಣವನ್ನು ತನ್ನ ಚಿತ್ರಣದಲ್ಲಿಯೇ
ಹೇಳುವಂತಹದ್ದಾಗಿದೆ. ಇದು ನಾಲ್ಕು ಅಡಿ ಎತ್ತರ ಮತ್ತು ಎರಡು ಅಡಿ ಅಗಲದ ಸಿಸ್ಟ್ ಶಿಲೆಯಿಂದ ಮಾಡಿರುವಂತಹದ್ದಾಗಿದೆ.
ಹತ್ತು ಅಡಿಗಳ ದುಂಡುಕಟ್ಟೆಯ ಮಧ್ಯದಲ್ಲಿ ನಿಂತಿರುವ ಈ ಸ್ಮಾರಕದ ಪಾದಗಳು ಮಾತ್ರ ತುಂಡಾಗಿ ಬಳಿಯಲ್ಲಿಯೆ
ಮಣ್ಣಿನಲ್ಲಿ ಬೆರೆತುಹೋಗಿವೆ. ಇತರ ಮಹಾಸತಿಯ ಮೂರ್ತಿಗಳಂತೆ ಎತ್ತಿದ ಬಲಗೈ ಇದ್ದು ಇದರಲ್ಲಿ ನಿಂಬೆಹಣ್ಣನ್ನು
ಹಿಡಿಯಲಾಗಿದೆ. ಇಳಿಬಿಟ್ಟ ಎಡದ ಕೈನಲ್ಲಿ ಕನ್ನಡಿಯನ್ನು ಹಿಡಿಯಲಾಗಿದೆ. ಶಿರದ ಹಿಂದೆ ಪ್ರಭಾವಳಿ ಇದ್ದು
ಎತ್ತಿ ಕಟ್ಟಿದ ತುರುಬು ಶಿರದ ಬಲಭಾಗದಲ್ಲಿ ಬಂದಿದೆ. ಕರ್ಣಗಳಲ್ಲಿ ಹಿರಿದಾದ ಆಭರಣಗಳಿದ್ದು ಮುಂಗೈ, ತೋಳು ಮತ್ತು ಎದೆಯ ಮೇಲೆ ಮತ್ತು ನಡುವಿನಲ್ಲೂ
ಆಭರಣಗಳಿವೆ. ನಡುವಿನ ಆಭರಣಕ್ಕೆ ಹೊಂದಿಕೊಂಡಂತೆ ಅಲಂಕಾರಯುಕ್ತವಾದ ವಸ್ತ್ರದ ಉಡುಗೆ ಇದೆ. ಈ ವಸ್ತ್ರದ
ಅಲಂಕಾರಿಕ ನೆರಿಗೆಗಳು ಗಮನಾರ್ಹವಾಗಿವೆ. ಈ ಸ್ಮಾರಕದ ಮುಖದ ಭಾವ ಸವೆದುಹೋಗಿದೆ. ಸಮಭಂಗಿಯಲ್ಲಿ ನಿಂತಿರದೆ
ಎಡಗಾಲನ್ನು ತುಸು ಭಾಗಿಸಿ ನಿಂತ ಮೂರ್ತಿ ಇದಾಗಿದೆ.
ಈ ಮೂರ್ತಿಯ ಬಲಭಾಗದ ಕೆಳಗಡೆ ಮಡಿದ ಮಹಾಸತಿಯ ಪತಿಯ ಪುಟ್ಟ ಪ್ರಮಾಣದ ಚಿತ್ರಣವಿದ್ದು
ಈತ ತನ್ನ ಬಿಚ್ಚುಗತ್ತಿಯಿಂದ ತನ್ನ ಮೇಲೆ ಆಕ್ರಮಣ ಮಾಡುತ್ತಿರುವ ಹುಲಿಯೊಂದನ್ನು ಇರಿಯುತ್ತಿದ್ದಾನೆ.
ಹುಲಿಯು ತನ್ನ ಬಾಯಿಯನ್ನು ತೆರೆದು ಇವನ ಮೇಲೆ ಎರಗಿ ಬಂದಿದೆ. ವೀರನ ಶಿರದ ಹಿಂದೆ ಖಡ್ಗವೊಂದರ ಚಿತ್ರಣವಿದೆ.
ಈ ವೀರನು ಹುಲಿಯಿಂದ ತನ್ನನ್ನು ರಕ್ಷಿಸಿಕೊಳ್ಳುವಲ್ಲಿ ವಿಫಲನಾಗಿ ಹತನಾಗಿದ್ದಾನೆ. ಪತಿಯನ್ನು ಸಾವಿನಲ್ಲೂ
ಹಿಂಬಾಲಿಸುವ ನಂಬಿಕೆಯ ಪದ್ಧತಿಯಿಂದ ಈತನ ಪತ್ನಿ ಚಿತೆ ಏರಿ ಸಹಗಮನ ಮಾಡಿದ್ದಾಳೆ. ಮಾಸ್ತಿಕಲ್ಲು ಸ್ಮಾರಕಗಳಲ್ಲಿ
ಕಲ್ಲಿಗೆ ಹೊಂದಿಕೊಂಡಂತೆಯೇ ಶಿಲ್ಪಗಳನ್ನು ಬಿಡಿಸಿರುವುದು ಈವರೆಗೆ ಕರ್ನಾಟಕದಲ್ಲಿ ದೊರೆತಿರುವ ಸ್ಮಾರಕಗಳಲ್ಲಿ
ಸಿಂಹಪಾಲಿನವುಗಳಾಗಿವೆ. ವಿರಳವಾಗಿ ಸ್ಮಾರಕಗಳನ್ನು ಮೂರ್ತಿಗಳನ್ನಾಗಿ ಕೆತ್ತಿರುವ ಕೆಲವು ಸ್ಮಾರಕಗಳಲ್ಲಿ
ಇದೂ ಒಂದು ಆಗಿರುವುದು. ವಿಶೇಷವಾಗಿದೆ. ಅಮರಳಾದ ಈ ಮಹಾಸತಿಯನ್ನು ಅಂದಿನಿಂದ ಪೂಜಭಾವದಿಂದ ದೈವತ್ವಕ್ಕೇರಿಸಿ
ಪೂಜಿಸಿಕೊಂಡು ಬರಲಾಗುತ್ತಿದೆ. ಮಾಸ್ತಿ ಸ್ಮಾರಕಗಳ ಆಧಾರದ ಮೇಲೆ ಈ ಸ್ಮಾರಕದ ಕಾಲಮಾನವನ್ನು ಕ್ರಿ.ಶ.
ಸುಮಾರು ಹದಿಮೂರನೇ ಶತಮಾನವೆಂದು ನಿರ್ಧರಿಸಬಹುದಾಗಿದೆ.
ಇಲ್ಲಿಯ ಗೊಲ್ಲರಹಟ್ಟಿ ಬಳಿಯ ಗೌಡಜ್ಜ ಎಂಬುವರ ಹೊಲದಲ್ಲಿ ಮಣ್ಣಿನಲ್ಲಿ
ಹೂತು ಹೋಗಿದ್ದ ತುರುಕಾಗಳಗದ ವೀರಗಲ್ಲುವೊಂದನ್ನು ಇತ್ತೀಚೆಗೆ ಹೊರತೆಗೆದು ಇಲ್ಲಿಯೇ ನಿಲ್ಲಿಸಲಾಗಿದೆ.
ಇದನ್ನು ಪಶ್ಚಿಮಾಭಿಮುಖವಾಗಿ ನಿಲ್ಲಿಸಲಾಗಿದೆ. ಎಂಟು ಅಡಿ ಎತ್ತರ ಮತ್ತು ಐದುಕಾಲು ಅಡಿ ಅಗಲವನ್ನು
ಹೊಂದಿದೆ. ಈ ವೀರಗಲ್ಲು ಸ್ಮಾರಕವು ಮೂರ ಹಂತಗಳ ಚಿತ್ರಣವನ್ನು ಹೊಂದಿದೆ. ಕೆಳಹಂತದ ಬಲಭಾಗದಲ್ಲಿ ನಾಲ್ಕು
ಗೋವುಗಳು ಬಲಮುಖವಾಗಿ ಚಲಿಸುತ್ತಿರುವ ಚಿತ್ರಣವಿದೆ. ಈ ಗೋವುಗಳ ಹಿಂದೆ ಖಡ್ಗವಿಡಿದು ಎದುರಾಳಿಗಳಾದ
ಇಬ್ಬರು ಗೋವು ಅಪಹರಣಕಾರರ ಜೊತೆ ಹೋರಾಡು ತ್ತಿರುವ ಚಿತ್ರಣವಿದೆ. ವೀರನು ತನ್ನ ಬಲಗೈನಲ್ಲಿ ಹಿಡಿದ
ಖಡ್ಗವನ್ನು ಶತ್ರುಗಳ ಮೇಲೆ ಪ್ರಯೋಗಿಸಲು ಬಲವಾಗಿ ಬೀಸುತ್ತಿದ್ದಾನೆ. ಎದುರಾಳಿ ಗಳಾದ ಶತ್ರುಗಳು ತಮ್ಮ
ಧನಸ್ಸಿನಿಂದ ಈತನ ಮೇಲೆ ಬಾಣಪ್ರಯೋಗ ಮಾಡಿದ್ದಾರೆ. ಈ ಬಾಣಗಳು ವೀರನ ಉದರಕ್ಕೆ ತಾಗಿಕೊಂಡಿವೆ. ವೀರನು
ಹತನಾಗಿ ವೀರಮರಣ ವನ್ನು ಹೊಂದಿದ್ದಾನೆ. ಆದರೆ ಶತ್ರುಗಳ ಸೆರೆಯಿಂದ ಗೋವುಗಳನ್ನು ರಕ್ಷಿಸಿದ್ದಾನೆ.
ಎರಡನೆಯ ಹಂತದಲ್ಲಿ ನಾಲ್ವರು ಅಪ್ಸರೆಯರು ವೀರನನ್ನು ಪಲ್ಲಕ್ಕಿಯೊಂದರಲ್ಲಿ
ಕುಳ್ಳಿರಿಸಿಕೊಂಡು ಚಾಮರಸೇವೆ ಸಹಿತ ಸಂಗೀತ ವಾದ್ಯಗಳನ್ನು ನುಡಿಸುತ್ತ ಸ್ವರ್ಗಕ್ಕೆ ಕರೆದುಕೊಂಡು
ಹೋಗುತ್ತಿದ್ದಾರೆ.
ಮೂರನೆಯ ಹಂತದಲ್ಲಿ ಈ ನಾಲ್ವರು ಅಪ್ಸರೆಯರು ವೀರನನ್ನು ಸ್ವರ್ಗಕ್ಕೆ ಕರೆದುತಂದಿದ್ದು
ಶಿಲ್ಪದ ಇಕ್ಕೆಲಗಳಲ್ಲೂ ಇಬ್ಬರು ಅಪ್ಸರೆಯರು ಪಲ್ಲಕ್ಕಿಯನ್ನು ಮಂಡಿಯೂರಿ ಹಿಂದಕ್ಕೆ ಬಲಗಾಲುಗಳನ್ನು
ಚಾಚಿ ಕೈಗಳಿಂದ ಹಿಡಿದುಕೊಂಡು ಇಳಿಸುತ್ತಿದ್ದು ಇನ್ನಿಬ್ಬರು ಚಾಮರಸೇವೆಯಲ್ಲಿ ನಿರತರಾಗಿದ್ದಾರೆ.
ವೀರನು ಮಧ್ಯದ ಪೀಠದ ಮೇಲೆ ಪಾರ್ಶ್ವಮುಖಿಯಾಗಿ ಕುಳಿತಿದ್ದಾನೆ.
ಎರಡನೆ ಹಂತದ ಬಲಭಾಗದಲ್ಲಿ ೧೩ ಅಕ್ಷರಗಳ ಪುಟ್ಟ ಶಾಸನವು ಲಿಪಿಸ್ವರೂಪದಲ್ಲಿ
ನೊಳಂಬರ ಕಾಲದ ಆರಂಭದ ಲಿಪಿಗಳಾಗಿವೆ. ನಾಲ್ಕು ಸಾಲುಗಳ ಈ ಪುಟ್ಟ ಶಾಸನದ ಬರಹ ಇಂತಿದೆ.
ಸ್ವತ್ತಶ್ರೀ
ಣೊೞಣ್ಬ
ನೇ ಅಟ್ಕ
ಕಲೀರಯ
ಲಿಪಿಯ ಆರಂಭದಲ್ಲಿ ಸ್ವಸ್ತಿಶ್ರೀ ಬದಲು ಸ್ವತ್ತಶ್ರೀ ಎಂದು ಬರೆಯಲಾಗಿದೆ.
ನೊಳಂಬರ ಕಾಲದಲ್ಲಿ ಕಲೀರಯ ಎಂಬ ವೀರನು ಮಡಿದ ವಿಷಯವನ್ನು ಶಾಸನವು ತಿಳಿಸುತ್ತಿದ್ದು ಇದರ ಕಾಲ ಕ್ರಿ.ಶ. ಸುಮಾರು
೮೫೦ ಆಗಿದೆ. ಲಿಪಿಯನ್ನು ಹೊಂದಿದ ಹಿರಿಯೂರಿನ ತಾಲ್ಲೂಕಿನ ಪ್ರಾಚೀನ ಸ್ಮಾರಕ ಇದಾಗಿದೆ.
ಈ ಗ್ರಾಮದಲ್ಲಿ ದೊರೆತ ಪ್ರಾಚೀನ ವೀರ ಮತ್ತು ಮಾಸ್ತಿಕಲ್ಲುಗಳ ಕುರುಹುಗಳಿಂದಾಗಿ
ಈ ಗ್ರಾಮದಲ್ಲಿ ಕ್ರಿ.ಶ. ಸುಮಾರು ೮೫೦ಕ್ಕೆ ಮುನ್ನವೇ ಜನಜೀವನವಿದ್ದು ಅಂದಿನಿಂದ ನಿರಂತರವಾಗಿ ಸಾಮಾಜಿಕ
ಧಾರ್ಮಿಕ ಮತ್ತು ರಾಜಕೀಯವಾಗಿ ಮುಂದುವರೆದುಕೊಂಡು ಬಂದಿದೆ.
Thanks to Sri Dr. Muthuraj for publishing the new information about Huvina Hole.
ReplyDeleteDr.Harihara Sreenivas Rao
thanks a lot
ReplyDelete