Thursday, November 29, 2012

ಇತಿಹಾಸಕಾರರು. ಸರಣಿ-೩



ಎಚ್ .ಶೇಷಗಿರಿರಾವ್
appaaji@gmail.com


          










                       ಇತಿಹಾಸದ ಆಕರಗಳ ಸಮಗ್ರ ಸಂಗ್ರಾಹಕ -ಕರ್ನಲ್‌ ಕಾಲಿನ್‌ ಮೆಕೆಂಜಿ
                                  (೧೭೫೪-೧೮೨೧)

        ಕರ್ನಾಟಕದ ಇತಿಹಾಸದ  ಅಭ್ಯುದಯದಲ್ಲಿ ಪಾಶ್ಚಾತ್‌ ವಿದ್ವಾಂಸರ ಕೊಡುಗೆ ಅಪಾರ. ಅದರಲ್ಲೂ ಖಾಸಗಿ ಕೆಲಸಕ್ಕಾಗಿ ಭಾರತಕ್ಕೆ ಬಂದು ನಂತರ ಬ್ರಿಟಿಷ್‌ಸೈನ್ಯದ ಅಧಿಕಾರಿಯಾಗಿ ಸೇವೆಗೆ ಸೇರಿ ಸ್ವಾಮಿಕಾರ್ಯದ ಜೊತೆಗೆ ತಾವು ಸೇವೆ ಸಲ್ಲಿಸುತ್ತಿರುವ  ಪ್ರದೇಶದಲ್ಲಿನ ಸಮಾಜದ ಹಲವು ಆಯಾಮಗಳನ್ನು ದಾಖಲಿಸಿದ ಕೀರ್ತಿ ಕರ್ನಲ್‌ ಮೆಕೆಂಜಿಯದು.’ಕಂಟ ಹಿಡಿದರೆ ಕವಿ, ಖಡ್ಗ ಹಿಡಿದರೆ ಕಲಿ” ಎಂಬಕೀರ್ತಿಗೆ ಕನ್ನಡದ  ಆದಿಕವಿ ಪಾತ್ರನಾದರೆ. “ಕೋವಿ ಹಿಡಿದು ಯುದ್ಧದಲ್ಲಿ ಜಯಸಾಧನೆ ಸರ್ವೆಕ್ಷಣೆ ಮಾಡುವಾಗ ಇತಿಹಾಸ ಸಂಶೋಧನೆ ”  ಎಂಬುದು ಕರ್ನಲ್‌ ಕಾಲಿನ್‌ ಮೆಕೆಂಜಿಯವರ ಕಾರ್ಯ ವೈಖರಿ, ಕನ್ನಡದ ಕೈಫಿಯತ್‌, ಬಖೈರು ಮತ್ತು ಕಡತಗಳಗಳ ನಿರ್ಮಾಣಕ್ಕೆ ಕಾರಣಕರ್ತ ಕರ್ನಲ್‌ ಕಾಲಿನ್‌ಮೆಕಂಜಿ. ಅದರ ಪರಿಣಾಮವಾಗಿ ದಕ್ಷಿಣಭಾರತದ ಮಧ್ಯಕಾಲೀನ ಇತಿಹಾಸ,ಜನ ಜೀವನ ಮತ್ತು ಆಚರಣೆಗಳ ಸ್ಪಷ್ಟ ಚಿತ್ರಣ ಹಾಗೂ ಒಳನೋಟವು ಲಭ್ಯವಾಗುವುದು.
ಲೂವಿ ದ್ವೀಪ
ಕಾಲಿನ್ ಮೆಕೆಂಜಿ ಸ್ಕಾಟಲೇಂಡಿನವನು. ಅಲ್ಲಿನ ಲೀವೀಸ್‌ ದ್ವೀಪದ ಸ್ಟಾರ್ನವೇಯಲ್ಲಿ ೧೭೫೪ ರಲ್ಲಿ  ಜನಿಸಿದನು.. ತಂದೆ ಮರ್ಡೋಕ್ ಮೆಕೆಂಜಿ. ಸ್ಥಿತಿವಂತ ವ್ಯಾಪಾರಿ. ಪ್ರಾರಂಭಿಕ ಶಿಕ್ಷಣ ಹುಟ್ಟಿದೂರಿನಲ್ಲಿಯೇ ಆಯಿತು. ಹೆಸರಾಂತ ಟ್ಯೂಟರ್‌ ಅಲೆಕ್ಜಾಂಡರ್‌ಆಂಡರ್ಸನ್‌ ನಿಂದ ಖಾಸಗಿಯಾಗಿ ಕಲಿಕೆ.ವಿಜ್ಞಾನ ಮತ್ತು ಗಣಿತದಲ್ಲಿ ವಿಶೇಷ ಆಸಕ್ತಿ.. ಅವರ ಸಹಪಾಠಿಯೂ ಹೆಸರಾಂತ ಸಂಶೋಧಕನಾದ ಅಲೆಕ್ಜಾಂಡರ್‌

ಚಿಕ್ಕ ಅಧಿಕಾರಿಯಾಗಿ ಸೇರಿ ಕರ್ನಲ್‌ ಹುದ್ದೆಯವರೆಗೆ ಏರಿದ ಮೆಕೆಂಜಿ ೧೭೮೩  ರಿಂದ ೧೮೨೧ ರ ವರೆಗೆ ೩೮ವರ್ಷ ಭಾರತದ ವಿವಿಧ ಪ್ರಾಂತಗಳನ್ನು ಸುತ್ತಿ  ಸರ್ವೇಕ್ಷಣ ಪರಣಿತನೆನಿಸಿ ಸುಮಾರು -೭೯ ನಕ್ಷೆಗಳನ್ನು ರಚಿಸಿದ. ಭಾರತದ ಪ್ರಥಮ ಸರ್ವೇಯರ್‌ ಜನರಲ್‌ ಆಗಿ ನೇಮಕ ವಾಯಿತು.

ಮೆಕೆಂಜಿ ಬರಿ ಭೂಮಾಪನ ಅಧಿಕಾರಿಯಾಗಿದ್ದರೆ  ಸಾವಿರಾರು ಅಧಿಕಾರಿಗಳಲ್ಲಿ ಒಬ್ಬರಾಗುತ್ತಿದ್ದರು,ಇತಿಹಾಸದಲ್ಲಿ ಅವರ ಹೆಸರು ಅಜರಾಮರ ವಾಗುತ್ತಿರಲಿಲ್ಲ. ಅವರು ಬರಿ ಭೂಮಿಯನ್ನು ಮೋಜಣಿ ಮಾತ್ರ ಮಾಡದೆ ಅಲ್ಲಿನ ಜನ ಜೀವನವನ್ನು ದಾಖಲೆ ಮಾಡಿದರು. ಅಲ್ಲಿನ ಪ್ರತಿ ಊರಿನ ಜನರ ಆಚಾರ-ವಿಚಾರ, ಜಾತಿ –ಜನಾಂಗ,.ನಂಬಿಕೆ ಆಚರಣೆ ,ಇತಿಹಾಸ – ಐತಿಹ್ಯ  ಅಂದಂದೇ ಸ್ಥಳಿಯ ಲಿಪಿಕಾರರಿಂದ ಬರೆಸಿ ದಾಖಲೆ ಮಾಡಿ  ಸಂಗ್ರಹಿಸಿದರು.ಕಾಗದದ ಬಳಕೆ ಅದೇ ತಾನೆ ಪ್ರಾರಂಭ ವಾಯಿಯು,ತಮ್ಮ ಸಹಾಯಕ್ಕಾಗಿ ಅಲ್ಲಿನ ಜನ ಹೇಳಿದುದನ್ನು ಬರೆದುಕೊಳ್ಳಲು ದೇಶೀಯ ಭಾಷೆ ಸಂಸ್ಕೃತ ಮತ್ತು ಇಂಗ್ಲಿಷ್‌ ಬಲ್ಲ ವಿದ್ಯಾವಂತ ಬ್ರಾಹ್ಮಣ ನೌಕರರನ್ನು ನೇಮಿಸಿಕೊಂಡರು.ಹಗಲಿನಲ್ಲಿ ಸರ್ವೆ ಕೆಲಸ ಮುಗಿಸಿಕೊಂಡು ರಾತ್ರಿ ಡೇರೆಯಲ್ಲಿ ಕುಳಿತು ಹಲವಾರು ವಿದ್ಯಾವಂತ ಸಹಾಯಾಕರ ಒಡಗೂಡಿ  ಕೈಫಿಯತ್ತುಗಳ ಬರವಣಿಗೆಗೆ ತೊಡಗುತ್ತಿದ್ದರು.. ಅವರಿಗೆ ತನ್ನ ವೇತನದಿಂದಲೇ ಸಂಬಳ ನೀಡಿ ದಾಖಲೆ ಕಾರ್ಯಮುಂದುವರೆಸಿದ.ಆ ದಾಖಲೇಗಳೇ  ಅತ್ಯಮೂಲ್ಯವಾವಾದ, ವಿಶಿಷ್ಟವಾದ ಐತಿಹಾಸಿಕ ಆಕರಗಳಾದ ಕೈಫಿಯತ್‌ಗಳೆನಿಸಿವೆ. ಮೆಕೆಂಜಿಯ ಪ್ರಕಾರ ಕೈಫಿಯತ್‌ ಎಂದರೆ ಸ್ಥಳ ಪುರಾಣ,ಐತಿಹ್ಯ,ಜಾನಪದ ಮತ್ತುಇತಿಹಾಸ ಗಳನ್ನು ಒಳ ಗೊಂಡ ದಾಖಲೆ.
ಕರ್ನಲ್‌ ಕಾಲಿನ್‌ಮೆಕೆಂಜಿ

ಅದರ ಮೂಲ ಸ್ಥಳೀಯ ಅಧಿಕಾರಿಗಳು, ಪಟೇಲರು , ಶಾನುಭೋಗರು,ಪಂಡಿತರು ಸ್ವತಃ ಬರೆದು ಕೊಟ್ಟಿದ್ದು. ಇದುವರೆಗ ಇತಿಹಾಸದ ಆಧಾರ ಶಾಸನಗಳು ಮತ್ತು ಅದಕ್ಕೆ ಪೂರಕವಾಗಿ ಕೆಲಮಟ್ಟಿಗೆ ಸಾಹಿತ್ಯ ತಾಳೆಯೋಲೆ. ಇವು ಹೊಸ ಪ್ರಕಾರ. ೭೯೯೦-೧೮೨೧ ರ ವರೆಗೆ ಸಂಗ್ರಹಿಸಿದ , ಬರೆಸಿದ. ಪ್ರಾಚೀನ,ಮಧ್ಯಕಾಲೀನ ಸಮಕಾಲೀನ ಭೌಗೋಲಿಕ, ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಧಾರ್ಮಿಕ ಸ್ಥೀತಿಗತಿಗಳ ನೈಜ ಚಿತ್ರಣವಾಗಿದೆ. ಹೀಗೆ ಸಂಗ್ರಹಿಸುವಾಗ  ಅವರಲ್ಲಿ ಮಾನವ ಶಾಸ್ತ್ರಜ್ಞ , ಸಮಾಜ ಶಾಸ್ತ್ರಜ್ಞ ಮತ್ತು ಇತಿಹಾಸಕಾರರ ಮೂರೂ ಗುಣಗಳೂ ಅವರಲ್ಲಿ  ಮುಪ್ಪರಿಗಂಡಿದ್ದವು ಈ ದಾಖಲೆಗಳ ಅಧ್ಯಯನ  ಇಂದು ನಾಲ್ಕಾರು ವಿದ್ವಾಂಸರಿಂದ ಮಾತ್ರ ಆಗಿದೆ
.
ಅವನು   ೪೨೦೦ಮೈಲು ಸುತ್ತಾಡಿ ಸಂಗ್ರಹಿಸಿದ  ೨೦೭೦ ಕೈಫಿಯತ್‌ಗಳ ರಚನೆಗೆ ಕಾರಣರಾದರು.ಕೈಫಿಯತ್‌ಗಳು ವಿಜಯನಗರ,ಹೊಯ್ಸಳಅರಸರ, ಹಾಗೂ ಅನೇಕ ಕಿರಿಯ ಸಂಸ್ಥಾನಿಕರ  ವಿವರ ಸಂಗ್ರಹಿಸಲಾಯಿತು ಕಂಪಿಲ. ಮುಸ್ಲಿಂ,ಮರಾಠ ಮತ್ತು ವಿಜಯನಗರದ ರಾಜ ಕೆಳದಿ ಮತ್ತು ಇತರೆ ಮನೆತನದ ಇತಿಹಾಸದ ಮೇಲೆ ಅವು ಬೆಳಕು ಚೆಲ್ಲುತ್ತವೆ. ಅವರ ಗಮನ ಬರಿ ಅರಸರ, ರಾಜರ ಮತ್ತು ಇನಾಂದಾರ ಮತ್ತು ಜಾಗೀರುದಾರರ ಮಾಹಿತಿ ಸಂಗ್ರಹಕ್ಕೆ ಮಾತ್ರ ಮೀಸಲಾಗಿರಲಿಲ್ಲ. ಜನಸಾಮಾನ್ಯರ ನಡೆ ನುಡಿ, ಆಚಾರ ವಿಚಾರ ,ವೃತ್ತಿ ಉದ್ಯೋಗ, ಮನರಂಜನೆ ಜೀವನ ವಿಧಾನವೂ ಅವರಿಗೆ ಅತಿ ಮುಖ್ಯವಾಗಿತ್ತು ಆದುದರಿಂದಲೇ ಚನ್ನಯ್ಯ ಕುಲದ ಕೈಫಿಯತ್ತು, ಜಾತಿರಿವಾಜು ಕೈಫಿಯತ್ತು, ವಕ್ಕಲಿಗರ ಕೈಫಿಯತ್ತು ಮೊದಲಾದ ಹಲವು ಕೈಫಿಯತ್ತು ಅಂದಿನ ಸಾಮಾಜಿಕ, ಧಾರ್ಮಿಕ ಜೀವನದಮೇಲೆ ಬೆಳಕು ಚೆಲ್ಲುತ್ತವೆ.  ಸೂಪಶಾಸ್ತ್ರ-ಬಾಣ ಬಿರುಸು ಕ್ರಮ-ಶಿಲ್ಪಶಾಸ್ತ್ರ-ಧನ್ವಂತರಿ ನಿಘಂಟು-ವೈದ್ಯ.ನಿಘಂಟು  ಸಂಸ್ಕೃತದಲ್ಲಿದ್ದರೆ ಅದರ  ಕನ್ನಡ ಟೀಕೆಯೂ ಇತ್ತು.. ವೈದ್ಯಕೀಯದಲ್ಲಿ ಬಳಸುವ ಗಿಡ ಮೂಲಿಕೆಗಳ  ಆಕಾರಾದಿ  ಪಟ್ಟಿ -ಜ್ಯೋತಿಷ್ಯ ಸಂಗ್ರಹ, ಶಕುನ ಶಾಸ್ತ್ರ ,ಹಾಲಕ್ಕಿ ಶಕುನ,ಗಣಿತ ಸಂಗ್ರಹ- ಭೂಮಿತಿ, ತತ್ವಶಾಸ್ತ್ರ, ವೈದ್ಯ,ಜ್ಯೋತಿಷ್ಯ , ವಿವಿಧ ವೃತ್‌ಇಗಾರ ಕೆಲಸದ ವಿಧಾನ, ಬಳೆ ಮಾಡುವ ವಿಧಾನ-ಬಣಜಿಗರ ಪೂರ್ವೋತ್ತರ, ತಾವು ಭೇಟಿ ನೀಡಿದ ಸ್ಥಳಗಳ ವರ್ಣನೆ, ಅಲ್ಲಿನ ಸಸ್ಯಸಂಪತ್ತು ಮತ್ತು ಪ್ರಾಣಿವೈವಿದ್ಯದ ವಿವರ,ಬಿದುನೂರ ಮೃಗಗಳು- ಸ್ಥಳ ವರ್ಣನೆ ಅಲ್ಲಿ ದೊರೆವ ಶಾಸನಗಳ ಪಟ್ಟಿ,  ಶಾಸನಗಳು, ಶಾಸನ ಪ್ರತಿಗಳು, ರಾಮಾಯಣ, ಮಹಾಭಾರತ , ಭಾಗವತ ಹಲವು ಹನ್ನೊಂದು ಕೃತಿಗಳ ಅನೇಕ ಪ್ರತಿಗಳನ್ನು ಅಲ್ಲಿ ಕಾಣ ಬಹುದು. ಜೊತೆಗೆ ರಾಜವಂಶೀಐರ ವಿವರ, ಗ್ರಾಮಚರಿತ್ರೆ, ಆಡಳಿತ ಸಂಬಂಧಿ ದಾಕಲೆಗಳನ್ನೂ ಬರೆಸಿದ. ಅವನ ಸಹಾಯಕರುರಾದ ದೇಶೀಯ ವಿದ್ವಾಂಸರು ಹಲವುದಾಖಲೆಗಳ  ಇಂಗ್ಲಿಷ್‌ ಅನುವಾದವನ್ನು ಮಾಡಿದರುಅದರ ಜೊತೆಯಲ್ಲಿಯೇ ಅಲ್ಲಿರುವ ವಿಶೇಷ ವಿಗ್ರಹಗಳು, ಚಲಾವಣೆಯಲ್ಲಿರುವ ನಾಣ್ಯಗಳು ಹೀಗೆ ಮೆಕೆಂಜಿ ಮುಟ್ಟದಪ್ರಾಚ್ಯ ವಸ್ತುವೇ ಇಲ್ಲ ಎನ್ನಬಹುದು.. ಮೆಕೆಂಜಿಯುಹೆಚ್ಚು ಕಡಿಮೆ ಈಗಿನ ಗೆಜೆಟಿಯರ್‌ಗಳ ಕೆಲಸವನ್ನೇ ಮಾಡಿದನು ಯಾವುದೇ ಪ್ರದೇಶದ ಸರ್ವೆ ಮಾಡಿದರೆ ಅಲ್ಲಿನ ಎಲ್ಲ ಮಾಹಿತಿಯೂ ದಾಖಲುಮಾಡಿರುವುದರಿಂದ ಒಂದು ರೀತಿಯಲ್ಲಿ ವಿಶ್ವ ಕೋಶವೇ ನಿರ್ಮಿಸುತ್ತಿದ್ದನೆನ್ನ ಬಹುದು
ಈ ಕೈಫಿಯತ್ತುಗಳು ವಿಶೇಷ ವಾಗಿ ಧಾರ್ಮಿಕ ಕೇಂದ್ರಗಳ ದೈನಂದಿನ ಆಚರಣೆಯ ವಿವರವನ್ನು ಕೊಡುತ್ತವೆ.   ಪೇಜಾವರ, ಪುತ್ತಿಗೆ , ಮೊದಲಾದ ಅಷ್ಠ ಮಠಗಳ ಕೈಫಿಯತ್ತುಗಳಲ್ಲಿ ಅಲ್ಲಿ ದೈನಂದಿನ ಆಚರಣೆಯ ಮಾಹಿತಿ ದೊರೆಯುವುದು.
ಮೆಕಂಜಿಯವರ ಸಂಗ್ರಹದಲ್ಲಿ ಕನ್ನಡ , ತುಳು ಮರಾಠಿ ತೆಲುಗು , ತಮಿಳು ಮೊದಲಾದ  ೧೪ ಭಾಷೆಗಳ  ಮತ್ತು ೧೭ ಲಿಪಿಗಳಲ್ಲಿ ಕೈಫಿಯತ್ತುಗಳು ಇವೆ..ಅವನು ಬಹುಬಾಷೆ ಬಲ್ಲವರಾಗಿರುವುದು ಇದರಿಂದ ವಿದಿತವಾಗಿತ್ತದೆ. ಅವನ ಇಪ್ಪತ್ತಕ್ಕೂ ಹೆಚ್ಚುವರ್ಷದ ದುಡಿಮೆಯ ಫಲವಾಗಿ ೨೦೦೦ಕ್ಕೂ ಮಿಕ್ಕಿ ಶಾಸನಗಳು . ನಾಣ್ಯಗಳು, ಶಾಸನ ಪ್ರತಿ ವಿಗ್ರಹಗಳ  ಶೋಧನೆ ಮತ್ತು ಸಂಗ್ರಹ ವಾಯಿತು.  ೧೮೦೭ ರಲ್ಲಿ ಏಷಿಯಾಟಿಕ್‌ ರಿಸರ್ಚ ಸಂಚಿಕೆಯಲ್ಲಿನ  ೯ನೆಯ ಸಂಪುಟದಲ್ಲಿ ಬರೆದ ಲೇಖನಗಳು  ದಕ್ಷಿಣ ಭರತದ ರಾಜವಂಶಗಳ ಕುರಿತಾದ ಬಹುಮುಖ್ಯ ದಾಖಲೆಯಾಗಿದೆ. ಬಖೈರುಗಳು ಎಂದರೆ ಸಂಭಾಷಣೆಗಳ ದಾಖಲೆ. ಟಿಪ್ಪುಸುಲ್ತಾನನು  ಆಂಗ್ಲ ಅಧಿಕಾರಿಯೊಡನೆ  ನಡೆಸಿದ ೫೮೬ ಪುಟಗ:ಳ ಸಂಭಾಷಣೆ  ಈ ಸಂಗ್ರಹದಲ್ಲಿದೆ.  ಮರಾಠ ಮನೆತನ, ಸಮಕಾಲಿನರ ನೆನಪಿನ ದಾಖಲೆ, ಚೋಳರಾಜಾಂಚೆಕಥಾ, ಘೋರ್ಪಡೆಯಾಂಚಿ ಕೈಫಿಯತ್ತು, ಲೋಹಾಚಲಮಹಾತ್ಮೆಗಳು ದಕ್ಷಿಣ ಭಾರತದ ಇತಿಹಾಸದ ಮಹತ್ವದ ಆಕರ ಸಾಮಗ್ರಿಗಳಾಗಿವೆ
ಮೆಕಂಜಿ ಸಂಚರಿಸಿದ ಪ್ರದೇಶ

 ಚರಿತ್ರೆ ಹೇಳುವ ಅವನ ಟಿಪ್ಪಣಿಗಳು ಅಗಾಧ ಕಾರ್ಯದ ಮೇಲೆ ಬೆಳಕು ಬೀರುವವು.. ಕಡಿಮೆ ಕಾಲದಲ್ಲಿ  ಶ್ರೇಷ್ಠ ಸಾದನೆ ಮಾಡಿದ ಹಿರಿಮೆ ಅವನದು. ೧೮೦೦ ರಿಂದ ೧೮೨೧ರ  ಮಧ್ಯದ ಅವಧಿಯಲ್ಲಿ  ೮೦೦೦ ಶಾಸನ ,ಸುಮಾರು ೧೫೦೦ ಹಸ್ತಪ್ರತಿಗಳು, ೬೨೧೮ . ವಿಗ್ರಹಗಳು ೧೦೬ ನಾಣ್ಯಗಳು ಮತ್ತು  ಸಾವಿರಾರು ಶಾಸನ ಪ್ರತಿಗಳನ್ನು  ಸಂಗ್ರಹಿಸಲಾಯಿತು. ಈ ಎಲ್ಲ ಅಗಾಧ ಕೆಲಸವು ವೈಜ್ಞಾನಿಕ ಉಪಕರಣಗಳು ಇಲ್ಲದ, ಆಧುನಿಕ ಸಾರಿಗೆ ಸಂಪರ್ಕವಿಲ್ಲದ ಕಾಲದಲ್ಲಿ ಮಾಡಲಾಗಿರುವುದು  ಅವನ ಶ್ರಮ, ಶ್ರದ್ಧೆ ಮತ್ತು ಬದ್ಧತೆಯ ಸೂಚಕವಾಗಿದೆ.’
ಕರ್ನಲ್‌ ಮೆಕೆಂಜಿ ಬಹು ಭಾಷಾವಿದ್ವಾಂಸ.ಅದರಿಂದಲೇ ಅವನ ಸಂಗ್ರಹದಲ್ಲಿ ವಸ್ತುಗಳ ವೈವಿದ್ಯತೆ ಅಪಾರ.ದಾಖಲೆಗಳಂತೂ ಹಲವು ಹತ್ತು ಭಾಷೆಗಳಲ್ಲಿವೆ. .ಅವನ ಸಂಗ್ರಹದಲ್ಲಿನ ದಾಖಲೆಗಳ ಸೂಚಿ  ೧೮೯೩ರಲ್ಲಿ ಮದ್ರಾಸಿನಲ್ಲಿ ಪ್ರಾರಂಭವಾಯಿತು. ಅದು ೧೯೫೨ ರ ವರಗೆ ಮುಂದುವರೆಯಿತು ಎಂದರೆ ಅದರ ಅಗಾಧತೆಯ ಅರಿವಾಗುವುದು
ಅವರ ಸಂಗ್ರಹಗಳ ವಿವರವನ್ನು  ಅರಿಯಲು.ಅನೇಕ ವಿದ್ವಾಂಸರು ವರ್ಷಾನುಗಟ್ಟಲೆ ಶ್ರಮಿಸುತ್ತಿದ್ದಾರೆ.ಅವರ ದುಡಿಮೆಯ ಫಲವಾಗಿ  ಸಂಪಾದಿಸಿದ ಏಳು ಸಂಪುಟಗಳು ಈಗಾಗಲೇ ಹೊರ ಬಂದಿವೆ.  ಕುಪ್ಪುಸ್ವಾಮಿ, ಶಂಕರರಾವ್‌,  ಟಿ.ವಿ.ಚಂದ್ರಶೇಖರ ಶಾಸ್ತ್ರಿ ಮತ್ತು ಇತರರು  ಅವಿರತ ದುಡಿದಿದ್ದಾರೆ.ಆದರೆ ಇನ್ನೂ ಅವನ ಸಂಗ್ರಹದ ಹಲವು ಆಯಾಮಗಳ ಅಧ್ಯಯನ ಆಗ ಬೇಕಿದೆ. ಕನ್ನಡದ ವಿವಿಧ ಕೃತಿಗಳನ್ನು ಪುರಾಣ, ಕಾವ್ಯಕಥನ, ಶಾಸ್ತ್ರ, ಜೈನ ವಾಙ್ಮಯವೆಂದು ವಿಂಗಡನೆ ಮಾಡಿರುವನು. ಅವನ ಸಂಗ್ರಹದಲ್ಲಿನ ಬಾಣ ಬಿರುಸು ಕಾರ್ಯಕ್ರಮ  ಮತ್ತು ಸೂಪಶಾಸ್ತ್ರ ಎಂಬ ಕೃತಿಗಳು ಇವೆ. ಅವುಗಳು ಅನನ್ಯವಾಗಿದ್ದು  ಬೇರೆ ಇನ್ನಾವ ಭಾಷೆಯಲ್ಲೂ ಅವು ದೊರೆಯುವುದಿಲ್ಲ ಎಂದರೆ ಅವನ ಸಂಗ್ರಹದ ಸೂಕ್ಷ್ಮತೆಯ ಮಹತ್ವದ ಅರಿವಾಗುವುದು.  ಅದರಿಂದ ಮೆಕಂಜಿಯ.ಕನ್ನಡ ಇತಿಹಾಸ ಮತ್ತು ಸಾಹಿತ್ಯಕ್ಕೆ  ಕೊಡುಗೆಯ ಅಗಾಧತೆ ಅರಿವಾಗುವುದು.  ಅವನ ಕೊಡುಗೆ ಬರಿ ದಕ್ಷಿಣ ಭಾರತಕ್ಕ ಮಾತ್ರ ಸೀಮಿತವಾಗಿರಲಿಲ್ಲ. ಸೈನಿಕ ಸೇವೆಗೆಂದು ಎರಡು ವರ್ಷ ಜಾವಾಕ್ಕೆ ಮತ್ತು ಬರ್ಮಕ್ಕೆ ಹೋದಾಗ ವೃತ್ತಿಯ ಜೊತೆ  ತನ್ನ ಪ್ರವೃತ್ತಿಯನ್ನು ಯಶಸ್ವಿಯಾಗಿ ನಿಭಾಯಿಸಿ ಅಲ್ಲಿನ ಪುರಾತತ್ವ ವಸ್ತುಗಳನ್ನು ತನ್ನ ಸಂಗ್ರಹಕ್ಕೆ ಸೇರ್ಪಡೆ ಮಾಡಿದ.. “ಭಾರತದ ನಕ್ಷೆ ನಿರ್ಮಿಸಿದ ಮೊದಲ ವ್ಯಕ್ತಿ “ಎಂಬ ಹೆಗ್ಗಳಿಕೆಯ ಜೊತೆ ದಕ್ಷಿಣ ಭಾರತದ ಅದರಲ್ಲೂ ಕರ್ನಾಟಕದ ಪುರಾತತ್ವ ಸಂಪತ್ತನ್ನು ಸಂಶೋಧಿಸಿ ಅನಾವರಣಮಾಡಿದ ಏಕಮೇವಾದ್ವೀತೀಯ ಸಂಶೋಧಕನೆಂಬ ಹಿರಿಮೆಗೂ ಪಾತ್ರನಾದ.
ಮೆಕೆಂಜಿ ಕಲೆಕ್‌ಷನ್‌-೧೯೨೮,ರಲ್ಲಿ ಮೊದಲ ಬಾರಿಗೆ ಪ್ರಕಟವಾಯಿತು.ಅದು   ಹಸ್ತ ಪ್ರತಿಗಳು ಸಾಹಿತ್ಯ, ಇತಿಹಾಸ, ಪುರಾತತ್ವ ವಸ್ತುಗಳು ಮತ್ತು ಇತರೆ ಐತಿಹಾಸಿಕ ಆಕರಗಳ ವರ್ಣನಾತ್ಮಕ    ಕ್ಯಾಟಲಾಗ್,-ಎಚ್‌ಎಚ್ ವಿಲ್ಸನ್‌ ನಿಂದ ಪ್ರಫ್ರಥಮವಾಗಿ ಕಲ್ಕತ್ತಾದಲ್ಲಿ ಪ್ರಕಟವಾಯಿತು.ನಂತರ ಆ ಕಾರ್ಯ ಚೆನ್ನೈನಲ್ಲಿ ಮುಂದುವರಿಯಿತು

ಬ್ರಿಟಿಷ್‌ ಮ್ಯೂಜಿಯಂ ಮತ್ತು ಲೈಬ್ರರಿಯಲ್ಲಿರುವ ಮೆಕೆಂಜಿಯ ಸಂಗ್ರಹವು ಇಂದಿಗೂ ಸಂಶೋದಕರ ಪಾಲಿಗೆ ಅಮೂಲ್ಯ ನಿಧಿ

ಮೆಕೆಂಜಿ ಕಲೆಕ್‌ಷನ್‌ ಪುಸಕ
ಜಾವಾ,,ಬರ್ಮಾ ,ಹಳೆಗನ್ನಡ, ತೆಲುಗು,ಒರಿಯಾ ಮರಾಠಿ, ಹಿಂದಿ, ಅರಾಬಿಕ್, ತಮಿಳು ಭಾಷೆಯ ,ಸ್ಥಳೀಯ ಇತಿಹಾಸ, ಜೀವನ ಚರಿತ್ರೆ,ಅಧ್ಯಯನ ಮಾಡುವವರು ಮೊದಲು ನೆನೆಯ ಬೇಕಾದದ್ದು ಮೆಕೆಂಜಿಯನ್ನು .”ಭಾರತದ ಭೂಪಟವನ್ನು ರಚಿಸಿದ ವ್ಯಕ್ತಿ’ ಎಂದು ಗುರುತಿಸುವರು. ಮೆಕೆಂಜಿ  ತನ್ನ ಕರ್ಮಭೂಮಿಯಾದ ಭಾರತಲ್ಲೇ ೧೮೨೧  ರಲ್ಲಿ ಕೊನೆಯುಸಿರು ಎಳೆದ..ಕಲಕತ್ತಾದಲ್ಲಿನ ಸೌತ್‌ಪಾರ್ಕ ರಸ್ತೆಯ ಸ್ಮಶಾನದಲ್ಲಿ ಅವನ  ಸಮಾಧಿ ಮಾಡಲಾಯಿತು. ಅವನ ಪ್ರಾಚ್ಯವಸ್ತುಗಳ ಸಂಗ್ರಹ ಮಡದಿಗೆ ಸೇರಿತು . ಅದನ್ನು ಬ್ರಿಟಷ್ ಸರ್ಕಾರ ಬರಿ ೧೦೦೦೦ಪೌಂಡು ಬೆಲೆ ನೀಡಿ ಖರೀದಿಸಿತು. ಅವುಗಳಲ್ಲಿ  ಬಹುಪಾಲನ್ನು ಇಂಗ್ಲೆಂಡಿಗೆ ಸಾಗಿಸಿತು. ಅವನ ಸಂಗ್ರಹದ ಹೆಚ್ಚಿನ , ದಾಖಲೆಗಳು, ಹಸ್ತಪ್ರತಿಗಳು, ಕಲಾಕೃತಿಗಳು ಈಗ ಬ್ರಿಟಿಷ್‌ ಮ್ಯೂಜಿಯಂ ಮತ್ತು  ಬ್ರಿಟಿಷ್‌ ಲೈಬ್ರರಿಯ ಓರಿಯಂಟಲ್‌ ಮತ್ತು ಇಂಡಿಯಾ ಆಫೀಸ್‌ನಲ್ಲಿವೆ. ಸ್ವಲ್ಪಭಾಗ ಚೆನ್ನೈನ ಸರ್ಕಾರಿ ಪೌರಾತ್ಯ ಹಸ್ತಪ್ರತಿ ಲೈಬ್ರರಿಯಲ್ಲೂ ಇವೆ.. ರಾಜ್ಯ ಪುನರ್‌ವಿಂಗಡಣೆ ನಂತರ ಅವನ್ನು  ಮೈಸೂರಿನ  ಕನ್ನಡ ಅಧ್ಯಯನ ಸಂಸ್ಥೆಗೆ ವರ್ಗಾಯಿಸಲಾಗಿದೆ.ಪುರಾತತ್ವ ಇಲಾಖೆ , ಧಾರವಾಡದ ಕನ್ನಡ ಅಧ್ಯಯನ ಸಂಸ್ಥೆಗಳಲ್ಲಿ  ಅವುಗಳ ಪ್ರತಿಗಳು ಇವೆ.
ಮೆಕೆಂಜಿಯ ಪುರಾತತ್ವ ವಸ್ತುಗಳ ಸಂಗ್ರಹ ಮಧ್ಯಕಾಲೀನ ಇತಿಹಾಸ ಆಕರಗಳ ಸಾಗರವೆನ್ನಬಹುದು.ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತದ ಹಾಗೂ ಬರ್ಮಾ ಮತ್ತು ಜಾವಗಳ ಇತಿಹಾಸ, ಸಾಹಿತ್ಯ ,ಮಧ್ಯಕಾಲೀನ ಜನಜೀವನ ಮತ್ತು ರಾಜಕೀಯ ಅಧ್ಯಯನ ಮಾಡುವವರು ಮೆಕೆಂಜಿಯನ್ನು ಮರೆಯುವ ಮಾತಿಲ್ಲ.ಮೆಕೆಂಜಿಯ ಸಂಗ್ರಹವೇ ಅವರಿಗೆ ಅತಿ ಮುಖ್ಯ ಆಕರ.

ಆಕರ ಮೂಲಗಳು  :ಸ್ಕಾಟಲೇಂಡಿನ Stornoway Historical Society,ಹಾಗೂ ಅನೇಕ ಅಂತರ್‌ಜಾಲತಾಣಗಳು ಮತ್ತು ಅಭಿನಂದನ ಗ್ರಂಥಗಳು, ಡಾ. ಬಿ ಎಸ್‌ ಪುಟ್ಟ ಸ್ವಾಮಿಯವರ ಕರ್ನಲ್‌ ಮೆಕೆಂಜಿ ಮತ್ತು ಕೈಫಿಯತ್ತು ಗಳಿಗೆ ಮಾಹಿತಿ ಮತ್ತು ಚಿತ್ರಗಳಿಗಾಗಿ ಕೃತಜ್ಞತೆಗಳು





.


Wednesday, November 28, 2012

ಚಂದಾಲಿಂಗ ಕ್ಷೇತ್ರದಲ್ಲಿ ಜೈನರ ಕುರುಹು



ಡಾ.ಮಲ್ಲಿಕಾರ್ಜುನ ಕುಂಬಾರ.(ಎಂ.ಎ, ಪಿಎಚ್.ಡಿ)
          ‘’ವಚನ’’
      ರಾಜೂರ-೫೮೨೨೩೦
      ತಾ;ರೋಣಜಿ;ಗದಗ
ದೂರವಾಣಿ; [೦೮೩೮೧] ೨೬೨೯೨೫


                        ಚಂದಾಲಿಂಗ ಕ್ಷೇತ್ರದಲ್ಲಿ ಜೈನರ ಕುರುಹು
     ಇತಿಹಾಸ ಮೌನವಹಿಸಿದಾಗ ಆಂತರ‍್ಯದಲ್ಲಿನ ಹಲವು ವಿಷಯಗಳು ಮಾತನಾಡುತ್ತವೆ. ಎನ್ನುವ ಮಾತೊಂದಿದೆ.ಈ ಮಾತು ಇಲ್ಲಿನ ಚಂದಾಲಿಂಗದೇವಸ್ಥಾನಕ್ಕೆ ಬಹಳಷ್ಠು ಅನ್ವಯಿಸುತ್ತದೆ. ”ಹೆಸರಿಲ್ಲದ ಮರ, ನೆರಳಿಲ್ಲದ ಭಾವಿ” ಖ್ಯಾತಿಯ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನಚಂದಾಲಿಂಗೇಂಶ್ವರಎಂಬ ಕ್ಷೇತ್ರವು ಅತೀ ಪುರಾತನವಾದದ್ದು
ಚಂದಾಲಿಂಗ ಕ್ಷೇತ್ರದ ಮಹಾದ್ವಾರ
.ಹನಮಸಾಗರದಿಂದ ೮ -೧೦ ಕಿ ಮೀ ದೂರದಲ್ಲಿರುವ ಕುರುಚಲು ಕಾಡುಗಳ ಮದ್ಯೆ ಸಣ್ಣದಾದ ಗುಡ್ಡದಲ್ಲಿರುವ ಪ್ರಶಾಂತ ಸ್ಥಳವಿದಾಗಿದೆ.ಈ ಕ್ಷೇತ್ರದಲ್ಲಿನ ಆರಾಧ್ಯ ದೇವತೆ ಚಂದಾಲಿಂಗೇಶ್ವರ. ಈ ಮಂದಿರವು ಕಲ್ಯಾಣ ಚಾಲುಕ್ಯರ ಶೈಲಿಯಲ್ಲಿದೆ. ಈ ಗುಡಿಯಸುತ್ತಲೂ ಎತ್ತರವಾದ ಕೋಟೆಯಂತಹ ಭದ್ರವಾದ ಗೋಡೆಯಿದೆ.ಅದರಮೇಲೆ ತೆನೆಗಳಿವೆ. ಈ ಕೋಟೆಯಂತಹಗೋಡೆಯುಮೂರು ಸುತ್ತಿನದಾಗಿದೆ. ಒಳ ಸುತ್ತಿನಲ್ಲಿ ದೇವಾಲಯದ ಸಮುಚ್ಚಯವಿದೆ. ಎರಡನೆಯದ್ದು ಗುಡಿಯ ಮಹಾದ್ವಾರವನ್ನೊಳಗೊಂಡಿದೆ. 
ಮೂರನೆಯದ್ದುಅನತಿ ದೂರದಲ್ಲಿ ಗುಡ್ಡದಲ್ಲಿ ವ್ಯಾಪಿಸಿಕೊಂಡು ಸಾಕಷ್ಥು ಹಾಳಾಗಿ ಅಳಿದುಳಿದಿದೆ.ಅದರ ಒಳಗಡೆ ಅನೇಕ ಅಳಿದುಳಿದ ಶಿಥಿಲವಾದ ಗುಡಿಗಳು, ಪಾಳು ಬಿದ್ದ ಮೂರ್ತಿಗಳು ಅಲ್ಲಲ್ಲಿ ಬಿದ್ದಿವೆ. ನಿಧಿಗಳ್ಳರು ಅಲ್ಲಲ್ಲಿನೆಲವನ್ನು ಅಗಿದಿದ್ದಾರೆ.ನಿಸರ್ಗ ರಮಣೀಯವಾದ ಚಂದಾಲಿಂಗನ ಗರ್ಭಗೃಹವು ದಕ್ಷಿಣಾಭಿಮುಖವಾಗಿದೆ. ಅದರ ಎದುರುಗಡೆ ಒಂದೇಸಾಲಿನಲ್ಲಿ ಸಣ್ಣ ಸಣ್ಣ ಗುಡಿಗಳಿವೆ.ಅದರಲ್ಲಿರುವ ಮೂರ್ತಿಗಳು ಮೂಲದಲ್ಲಿನವುಗಳಲ್ಲ. ಅವುಗಳನ್ನು ಬೇರೆಕಡೆಗಳಿಂದ ತಂದು  ಇಡಲಾಗಿದೆ. ಪೌಳಿಗೆ ಹೊಂದಿಕೊಂಡ ಇವುಗಳು ಉತ್ತರಾಭಿಮುಖವಾಗಿವೆ..ಅವು ಸರಿಯಾಗಿ೨೪ ಇವೆ.ಇದು ೨೪ತೀರ್ಥಂಕರರನ್ನು ಹೊಂದಿರಬಹುದೆ? ಈ ಸಣ್ಣದಾದ ಗುಡಿಗಳಬಾಗಿಲು ಪಟ್ಟಿಕೆಗಳುಬಹಳಷ್ಥು ಸುಣ್ಣ ಬಳಿದ ಕಾರಣದಿಂದ ಸರಿಯಾಗಿ ಕಾಣದೇ ಹೂವಿನಾಕಾರದ ಚಿತ್ರಗಳು ಅಸ್ಪಷ್ಥವಾಗಿ ಕಾಣುತ್ತವೆ.ಒಳಗಡೆ ಎಲ್ಲೂತೀರ್ಥಂಕರರ ಮೂರ್ತಿಗಳಿಲ್ಲ. 
೨೪ ಸಣ್ಣ ಸಣ್ಣ ಗುಡಿಗಳ ಸಾಲುಗಳು  

ದೇವಾಲಯದ ಮಹಾದ್ವಾರವು ಬಸದಿಯ ಶೈಲಿಯಲ್ಲಿ ಇಳಿಜಾರಾದ ಕರಿಕಲ್ಲುಗಳಿಂದ     ನಿರ್ಮಿತವಾಗಿದೆ. ಇದನ್ನು ಸ್ಥಳಿಕರು ಅರಿವಿನ ಮಂಟಪವೆಂದು ಕರೆಯುತ್ತಾರೆ.ಇದು ೫೨ ಕಂಬಗಳಿಂದಕೂಡಿದ ಕಲಾತ್ಮಕ ಶೈಲಿಯಲ್ಲಿದೆ.ಇದು ಪೂರ್ವದಲ್ಲಿ ಜೈನರ ಕ್ಷೇತ್ರವಾಗಿರಬಹುದೆ? ಏಕೆಂದರೆ ಕೊಪ್ಪಳ ಜಿಲ್ಲೆಯು ೧೨ನೇಯ ಶತಮಾನದ ಪೂರ್ವದಲ್ಲಿ ಜೈನರ ಆಡಂಬೋಲಾದದ್ದನ್ನಿಲ್ಲಿ ಸ್ಮರಿಸಬಹುದಾಗಿದೆ. ಅಂದು ಕೊಪ್ಪಳ ಬೆಟ್ಟವು”ಕೊಪಣಾಚಲ”ಎಂದು ಪ್ರಖ್ಯಾತಿಯನ್ನುಪಡೆದಿತ್ತು.ತಿರುಳ್ಗನ್ನಡದ ನಾಡೆಂದು ಕವಿರಾಜ ಮಾರ್ಗಕಾರನಿಂದ ಹೊಗಳಿಸಿಕೊಂಡ ಈ ನಾಡು ತಿರುಳ್ಗನ್ನಡದ ನಾಡಿನ ಗಡಿಭಾಗವಾಗಿತ್ತು.ಅಂದು ಈ ಜಿಲ್ಲೆಯ ಯಲಬುರ್ಗಿ, ಕುಷ್ಟಗಿ, ಗಂಗಾವತಿ ತಾಲೂಕುಗಳು ಜೈನರಿಂದತುಂಬಿ ತುಳುಕುತ್ತಿದ್ದವು.ಈ ಹಿನ್ನೆಲೆಯಲ್ಲಿ ಈ ಕ್ಷೇತ್ರವು ೧೨ನೇಯ ಶತಮಾನದ ನಂತರಜೈನರಿಂದ ಇಳಿಮುಖವಾಗಿ ಶೈವರಪ್ರಭಾವದಿಂದ ಚಂದಾಲಿಂಗೇಶ್ವರನಾಗಿ ಪರಿವರ್ತನ ಗೊಂಡಿರಬಹುದು.ಇಲ್ಲಿನ ೨೪ ಗುಡಿಗಳಲ್ಲಿನ ಜೈನ ಬಿಂಬಗಳು ನಾಶವಾಗಿರಬಹುದು ಅವುಗಳ ಕುರುಹಾಗಿ ಯಕ್ಷ-ಯಕ್ಷಿಯರ ಹಾಳಾದಒಂದುಮೂರ್ತಿವೊಂದು ಒಂದೆಡೆ ಬಿದ್ದಿದೆ ಹೊರತು ಉಳಿದಕುರುಹುಗಳೇನೂ ಉಳಿದಿಲ್ಲ.ಗುಡಿಯ ಪ್ರಾಂಗಣದಲ್ಲಿಕಾಳಾಮುಖ ಯತಿಯ ಶಿಲ್ಪ,ವೀರಗಲ್ಲುಗಳು ಅಲ್ಲಲ್ಲಿಬಿದ್ದಿವೆ.ಈ ದೇವಾಲಯದಲ್ಲಿ ಶಾಸನವೊಂದು ಸಣ್ಣ ಶಿಲಾಫಲಕವೊಂದರಲ್ಲಿದ್ದು ಅದು ಕ್ರಿ.ಶ ೧೩೪೫ ಕ್ಕೆ ಸೇರಿದೆ.ಈ ಶಾಸನವು ಬಹಳಷ್ಥು ತೃಟಿತವಾಗಿದೆ.ಈ ೭ಸಾಲಿನ ಶಾಸನದಲ್ಲಿ ಭಂಡಾರಿ,ಹೆಗ್ಗೆಡೆ ಮಾರಮಯ್ಯ ಎಂಬವರು ಭೂದಾನವನ್ನು ನೀಡಿದ ಉಲ್ಲೇಖವಿದೆ. ಅಲ್ಲದೇ ಇದರಲ್ಲಿ ನಂದಿ....ಭಂಢಾರಿ.ಎಂಬ ಹೆಸರುಗಳಿವೆ.ಈ ಹೆಸರಿನ ಮುಂದಿನ ಭಾಗ ನಾಶವಾಗಿದೆ. ಈನಂದಿ, ಭಂಢಾರಿಗಳು ಯಾರು? ಇವರು ಜೈನ ಮುನಿಗಣದವರೆ?ಈ ಶಾಸನವುಳ್ಳ ಶಿಲಾಫಲಕವು ಮೂಲದಲ್ಲಿ ಎಲ್ಲಿತ್ತು?
ಭಗ್ನ ಮೂರ್ತಿ

ಈಬಗ್ಗೆ ಸಂಶೋಧನೆ ನಡೆಯಬೇಕಾಗಿದೆ.ಗಟ್ಟಿಯಾದ ಆಧಾರಗಳು ದೊರೆಯುವತನಕ ಬರೀ ಊಹೆಯನ್ನೆಅವಲಂಬಿಸಬೇಕಾಗುತ್ತದೆ
ಜೈನರು  ಸಾಮಾನ್ಯವಾಗಿ ಜಪ,ತಪ,ಧ್ಯಾನಗಳಿಗಾಗಿ ಜನವಸತಿ ಇರದ ಸ್ಥಳಗಳನ್ನು ಆಯ್ಕೆಮಾಡಿಕೊಳ್ಳುತ್ತಿದ್ದರು.ಈ ಹಿನ್ನೆಲೆಯಲ್ಲಿ   ಜನವಸತಿ ಇರದ ಈ ಸ್ಥಳವನ್ನು ಏಕೆ ಆಯ್ಕೆಮಾಡಿಕೊಂಡಿರಬಾರದು? ಆದರೆ ಇಂದು ಅದರ ಸುಳಿವೂ ಕೂಡಾಸಿಗದಂತೆ ಈ ಕ್ಷೇತ್ರ ಪರಿವರ್ತನೆಗೊಂಡಿದೆ.ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಇಲ್ಲಿನ ಸಣ್ಣಗುಡಿಗಳು೨೪ ಏಕಿವೆ?ಈ ವಿಷಯವು ಸಂಶೊಧನೆಗೆ ಸಣ್ಣಬೆಳಕಿನ ಕಿಂಡಿಯಾದೀತು.                                                                                                                 
                                       -



Tuesday, November 27, 2012

ತೀರ್ಥಹಳ್ಳಿ ರಾಮಮಂಟಪದ ಸುತ್ತಮುತ್ತಲಿನ ಅಪ್ರಕಟಿತ ಶಾಸನಗಳು


ಜಿ.ಕೆ. ದೇವರಾಜಸ್ವಾಮಿ
ತಿ # ೫೬, ‘ತ್ರಯೀ, ಮೈಸೂರು ಲ್ಯಾಂಪ್ಸ್ ಲೇಔಟ್, ಚನ್ನನಾಯಕನಪಾಳ್ಯ, ೨ನೇ ಹಂತ, ನಾಗಸಂದ್ರ ಅಂಚೆ, ಬೆಂಗಳೂರು-೫೬೦೦೭೩.

ಶಿವಮೊಗ್ಗಾ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ತುಂಗಾನದಿಯ ಮಧ್ಯದಲ್ಲಿ ಪರಶುರಾಮ ತೀಥ ಹಾಗೂ ಕಲ್ಲಿನ ಮಂಟಪವಿದೆ. ಪರಶುರಾಮ ತನ್ನ ತಾಯಿಯನ್ನು ಪರಶುವಿನಿಂದ ಕಡಿದ ನಂತರ ಪಾಪ ಪರಿಹಾರಾರ್ಥವಾಗಿ ತೀರ್ಥಕ್ಷೇತ್ರ ಪರ್ಯಟನೆ ಮಾಡುತ್ತಾನೆ. ಆ ಸಂದರ್ಭದಲ್ಲಿ ಈ ತುಂಗಾನದಿಗೆ ಬಂದಾಗ ತಾಯಿಯನ್ನು ಕಡಿದ ಕೊಡಲಿಯನ್ನು ಇಲ್ಲೂ ತೊಳೆಯುತ್ತಾನಂತೆ. ಸ್ವಲ್ಪವೇ ರಕ್ತ ಸಿಕ್ತವಾದ ಕೊಡಲಿಯು ಸ್ವಚ್ಛವಾಗುತ್ತದಂತೆ. ಈ ಕಥೆಯ ಹಿನ್ನಲೆಯಲ್ಲಿ ಪುಣ್ಯ ತೀರ್ಥವೆಂದಾಗಿದೆ. ಪುರಾಣ, ಐತಿಹ್ಯವು ಜನಮನದಲ್ಲಿ ಹಾಸುಹೊಕ್ಕಾಗಿದೆ. ಈ ಹಿನ್ನಲೆಯಲ್ಲಿ ಪ್ರತಿವರ್ಷವೂ ಡಿಸೆಂಬರ್‌ನಲ್ಲಿ ಜಾತ್ರೆ, ತೀರ್ಥಸ್ನಾನ ಇಲ್ಲಿ ನಡೆಯುತ್ತಾ ಬಂದಿದೆ. ಇದರಿಂದ ಎಲ್ಲಾ ಪಾಪವೂ ಪರಿಹಾರ ವಾಗುತ್ತದೆಂಬ ನಂಬಿಕೆ ಜನರಲ್ಲಿದೆ.
ತುಂಗಾನದಿಯಲ್ಲಿ ನೈಸರ್ಗಿಕವಾಗಿ ನಿರ್ಮಿತವಾದ ಕುಳಿಯಲ್ಲಿ ನೀರುಹರಿಯುತ್ತಿದ್ದು ತೀರ್ಥವೆನಿಸಿಕೊಂಡಿದೆ. ಇದರ ಮೇಲ್ಭಾಗದ ಬಂಡೆಯ ಮೇಲೆ ಕಲ್ಲಿನ ಮಂಟಪವಿದೆ. ಪರಶುರಾಮ ತೀರ್ಥದಬಂಡೆಯಲ್ಲಿ ಆಂಜನೇಯನ ಉಬ್ಬು ಶಿಲ್ಪ, ಭಕ್ತರ ರೇಖಾಚಿತ್ರಗಳೂ ಸೇರಿದಂತೆ ನೂರಾರು ಶಾಸನಗಳಿವೆ. ಈ ಶಾಸನಗಳಲ್ಲಿ ಭಕ್ತಾದಿಗಳು, ರಾಜರು ಮುಖ್ಯರಾದವರು ತೀರ್ಥದಲ್ಲಿ ಸ್ನಾಮಾಡಿ ತಮ್ಮಹೆಸರುಗಳನ್ನು ದಾಖಲಿಸಿದ್ದಾರೆ. ಮೇಲಿನ ಮಂಟಪದ ಸುತ್ತ ಮುತ್ತಲೂ ಕಿರುಶಾಸನಗಳನ್ನು (ಐಚಿbe Iಟಿsಛಿಡಿiಠಿಣioಟಿs) ಕೆತ್ತಲಾಗಿದೆ. ಹಾಗೆಯೇ ನದಿಯಲ್ಲಿನ ಹತ್ತಾರು ಬಂಡೆಗಳಲ್ಲಿಯೂ ಶಾಸನಗಳು ಕಂಡು ಬರುತ್ತವೆ. ಈ ತೀರ್ಥಕ್ಷೇತ್ರದಲ್ಲಿ ಸ್ನಾನದೊಂದಿಗೆ ದಾನ ಧರ್ಮಾದಿಗಳನ್ನು ಮಾಡುವುದು ಪುಣ್ಯವೆಂದು ಪ್ರತೀತಿ. ಕೆಳದಿಶಿವಪ್ಪನಾಯಕ ಮತ್ತು ಚೆನ್ನಮ್ಮಾಜಿಯವರೂ ಈ ಸ್ಥಳದಲ್ಲಿ ಗೋದಾನ ಇತ್ಯಾದಿ ಗಳನ್ನು ಮಾಡಿದ ಬಗ್ಗೆ ತಾಲ್ಲೂಕಿನ ಇತರೆ ಶಾಸನವು ದಾಖಲಿಸಿದೆ.
ಈ ಎಲ್ಲಾ ಶಾಸನಗಳೂ ವಿಜಯನಗರೋತ್ತರ ಕಾಲದ್ದಾಗಿರುತ್ತವೆ. ಬಹುತೇಕ ಶಾಸನಗಳು ಕೆಳದಿ ಅರಸರ ಕಾಲದ್ದಾಗಿವೆ. ಬಹಳ ಹಿಂದಿನಿಂದಲೂ ತೀರ್ಥಕ್ಷೇತ್ರ ವಾಗಿದ್ದರೂ ಕೂಡ ಕೆಳದಿ ಅರಸರ ಹಾಗೂ ನಂತರ ಕಾಲದಲ್ಲಿ ತೀರ್ಥವು ವಿಶೇಷ ಮಹತ್ವ ಪಡೆದಿದೆ ಎನ್ನಬಹುದು.
ಶಾಸನಗಳಲ್ಲಿ ರಾಜವಂಶಸ್ಥರು, ಅಧಿಕಾರಿಗಳು. ಶ್ರೀಸಾಮಾನ್ಯರುಗಳ ಹೆಸರು ಕೆತ್ತಲ್ಪಟ್ಟಿದೆ. ಈ ಮೂಲಕ ಊರುಗಳ ಹೆಸರು, ಉದ್ಯೋಗ ಇತ್ಯಾದಿಗಳನ್ನು ಇವುಗಳಿಂದ ತಿಳಿಯಬಹುದಾಗಿದೆ. ಇವುಗಳ ಅಧ್ಯಯನದ ಮೂಲಕ ಇತಿಹಾಸಕ್ಕೆ ಹೊಸ ವಿಷಯಗಳು ಸೇರ್ಪಡೆಯಾಗಬೇಕಿದೆ.
ಈ ಶಾಸನಗಳ ಭಾಷೆ ಸ್ಖಾಲಿತ್ಯಗಳಿಂದ ಕೂಡಿದ್ದು, ಕೆಲವೆಡೆ ಅಕ್ಷರಗಳನ್ನು ಖಚಿತವಾಗಿ ಓದಲು ಸಾಧ್ಯವಾಗುತ್ತಿಲ್ಲ. ಸಾಲುಗಳ ಸಂಖ್ಯೆಯೂ ಕೆತ್ತಿರುವ ರೀತಿಯಿಂದ ಹಿಡಿತಕ್ಕೆ ಸಿಕ್ಕುವುದಿಲ್ಲ. ಭಾಷೆ, ಬಂಧ ಅರ್ಥದ ದೃಷ್ಟಿಯಿಂದ ಸ್ಥೂಲ ವಾಗಿ ವಿಂಗಡಿಸಲಾಗಿದೆ.
ಶಾಸನ ಪಾಠ
೧        ಜಾನಿಕಂಮನ ಬಿಂನಹಾ
೨        ಲಕ್ಷ್ಮೀಪತಿ ಅಯನ ಮಕ್ಕಳು ನರಸಯನ ಬಿಂನಹಾ|| ವಾಬರಸಯನ ಬಿಂನಹ ಮಹಾಲಕ್ಷ್ಮೀ ಲಕ್ಷ್ಮಿಅಕಂಮ | ಪುಟಮ ಸೂ (ಶ್ರೀ) ಲಕ್ಷ್ಮಿಯಾ ಬಿಂನಹ
೩        ವೊಂ ನಮೋನಾರಾಯಣಾಯ
          ವೊಂ ನಮೋವೆಂಕಟೇಶಾಯ
          ದಾನಿಯನ ಮಗ....
೪        ಶ್ರೀರಾಮ ಕೃಷ್ಣಾಯ
೫        ನಮಃ ಘರುವೇನಮಃ
          ಚಿಕ್ಕತಿಂಮೈಯಣ್ಣ ಸ್ತ್ರಮ
          ಭ್ರಂಹಾ ಪುಟ್ಟಂಣ
          ನಮಗ ನಾರಸಿಂಹ
೬        ಬಿಳಿಗಿ ಸುಬಯನ ಬಿಂನಹ | ಬಿಳಿಗಿ ಲಿಂಗಣನ
          ಬಿಂನಹಾ | ಬಿಳಿಗಿ ದೇಮೌವಾ ಮಗ
          ಗುತ್ತಿ ಲಕ್ಷಮ್ನ ಪ್ನಮಗ ಅಚುತನಯ
          ದುಡ್ಯಿ ಕೃಷ್ಣದೇವನ ಬಿಂನಹಾ
೭        ಪುರಂದರ ವಿಠಲ (ನಾಗರೀಲಿಪಿ) ಂ ಸಿದಾರ್ತಿ ಸಂ| ಚೈತ್ರ.ಬ.೫
೮        ನಂಜುಂಡಯನಾ ಇಮಪುಲ
          ಕಾಮಪ್ಪಯ್ಯನವರ ಪತ್ನಿ ತಿಂಮಮನವರ ಮಂದಾನ
          ಬಿಂನಹಾ ನಂಮಃ|
೯        ಬಯಲೂರ ಕೂಸಂಣನ ಬಿಂನಹ
೧೦     ಶ್ರೀ ಕೆಳದಿ ಚಂನಂಯಾಜಿಯವರ ಮಗ ನೆಗತ್ತಿ
          ಎಡ್ಡಿ ವೆಂಕಂಣನ ಬಿಂನಹಾ
೧೧     ಕೂಳಾಲದ ವೆಂಕಟಯನ
          ಕಂದಾಚಾರ | ಸಎಟ್ಟಿ ಫಣಿಯಪ್ಪನ
          ದನಿಲಕೈನ ಮಗನ ನಮಸ್ಕಾರ
೧೨     ವಾದಿರಾಜೈನ ಬಿಂನಹಾ
೧೩     ಶ್ರೀಮುಖ ಸಂ|
          ಮಾರ್ಗಶಿರ
          ಬಹುಳ ಚೌತಿಗೆ
          ಕಳನೈಮಕ್ಕಳು
೧೪     ಶಾಮಸಂಯಾನ ಸಂಕರನ ಮಾಮಗ
೧೫     ಕಾಯಿಶಾ ಸಬುನಿಸ ಕೋಳಿವಾಡದ ಬೊಮರಸ
          ಮಯ್ಯನ ಬಿಂನಹಾ ಶ್ರೀ ಭವಾನಿ ಅಂಮನ ಬಿಂನಹ ಲಕ್ಷ್ಮಿ
೧೬     ಬಸರೂರ ನೊಳಪ್ಪನ ವಿರಂಮನ ನಮಸ್ಕಾರ
೧೭     ಸೂರಯುನ ಮಗ
          ಸೂದುಗೆಪನ ಬಿಂನಹ
೧೮     ಸೂಳೂರ ಶ್ರಿಂ ಪನಾಮಗ
          ಅಕರಯ
          ನಿಖಯನ
          ನ ಬಿಂನಹ
೧೯     ಅಭಿವಾಶಾನರತಿಗತ (ನಾಗರಿಲಿಪಿ)
          ಯಿದ ಬರೆಸಿದಾತ ನಾಗಾಭಟರ ಮಗ
          ಗಣಪಂಣ
೨೦     ಪ್ರಪ್ಪದೇವಹ
          ಯನ ಮಗ ಶಂಕರನಾರಾಯಣ ತುಂಗಭದ್ರೆಗೆ
          ಮಾಡುವ ನಮಸ್ಕಾರ
೨೧     ಪುಟ್ಟಿರಸಯ್ಯನ ಮಗ ಯ್ಯೋಗಪ್ಪಯನ ಬಿಂನಹಾ ನಮಸ್ಕಾರ
೨೨ ಶರಯ ಸ್ತ್ರಿಣಲ್ಲಂ ಮಗ ಬಿಂನಹಾ
೨೩     ಕೆಳಸಂಣ ಕೆಂಚಮನವರು ಭದ್ರಪ್ಪ ಸಿರ್ಸಿಣಿಯ
          ರಾಯಸ್ತ ವೆಂಕಯ್ಯನ ಬಿಂನಮ
೨೪     ಲಕ್ಷ್ಮೀಗೋಪಾಲದಾಸೆ (ನಾಗರೀಲಿಪಿ)
೨೫     ಬಯಲೂರ ಸೀನಪ್ಪನ ಬಿಂನಹಾ
೨೬     ಗೋದಾವರಿ ನಮ(ನಾಗರೀಲಿಪಿ)
          ಯಿದ ಬರೆಸಿದಾತ ಬಕಾಯಂಗೆ ಸೆಗ
          ಟಿ ಸಿಂಗಾಶಯ
೨೭     ಸೂರೈಟಿ ಯಳರಾಯಸ್ತ ಶಂಕರನಾರಾಯಣೈನ
          ಮಗ ಚೆಂನನ ಬಿಂನ
೨೮     ಸದಾಧ್ಯಾನಂ (ನಾಗರೀಲಿಪಿ)
          ಬೊನಗಿರಿಯ ಸನರುಮಲ್ಲನ ಮಗ ನಾಗಪ್ಪನ ಬಿಂನಹ
೨೯     ನರಸಪ್ಪಯ್ಯನ
          ಬೆಳರೆ ವೆಂಕರಸೈಯನ ಮಗ
          ಬಿಯದರಟದ ಸೂರಪ್ಪೈಚೆನಾ ಗುಣಿ
          ಶುಭನಾಮ ಯೋಡಣ ತನಯ (ನಾಗರೀಲಿಪಿ)
          ಶಾಯಣದ ಮ
          ದಗದ ದೋಮು
          ವೆಂಕಮನ ನಮಸ್ಕಾರ
೩೦     ಪೊಲಿಟ್ಟ ರಾಮಯ್ಯನ
          ವೊಂದು ಶಂಕರ ನಾವಯದಳ
          ನಮಸ್ಕಾರ.
೩೧     ಶ್ರೀ ಚಉಠರ
          ಸೀಮೇ ಪುತ್ತಿಗೆ ಹೊಳೆನೀ
          ಗಲುರಿ ಮಾದವ ಬಂಟನ
          ಮಗ ವೆಂಕಂಣ
          ನಮಗ ಮಾನಪ...
          ಸಬಾನ ಮಾಯೋಗಣನ ನಮಸ್ತೇ ||
೩೨     ಶಿವಪ್ಪ, ರಾಚಯ್ಯ,
೩೩     ನಾಲ್ವಪ್ಪ ನಾಗಪ್ಪ
೩೪     ಪಟಿ ತಿಮ್ಮಪನ ಮಗ ಶ್ರೀನಿವಾಸ
೩೫     ಲಕ್ಷ್ಮಿಪತಿ ಮಂಗರಸನ ಬಿಂನಹ
೩೬     ಕವುರಿ ಕಲ್ಲಿರಾಮಪ್ಪ
೩೭     ಬೊಕ್ಕಸದ ಸಿದ್ದಪ್ಪ
೩೮     ಗೆರೆಸ ತಿಂಯ್ಯ
೩೯     ರಾಮಪ್ಪಯ್ಯ ನಂಜುಂಡಯ್ಯ
೪೦     ಕಳಸಪ್ಪ, ದಿವಾಕರ.
ಪರಶುರಾಮ ಮಂಟಪಕ್ಕೆ ಹೊಂದಿಕೊಂಡಂತೆ ನದಿ ಪಾತ್ರವಿದೆ. ನದಿಯ ಮತ್ತೊಂದು ದಡದಲ್ಲಿ ಜೋಗಿಗುಡ್ಡವಿದೆ. ಇಲ್ಲಿಯ ಬಂಡೆಗಳಲ್ಲಿ ಜೈನ ತೀರ್ಥಂಕರರ ರೇಖಾ ಚಿತ್ರಗಳು ಹಾಗೂ ಶಾಸನಗಳಿವೆ. ಅಲ್ಲದೆ ಪ್ರಕೃತಿಯ ನೈಸರ್ಗಿಕವಾದ ಬಂಡೆಯ ದೊಡ್ಡಕುಳಿ(ಬಾವಿ)ಗಳಲ್ಲಿಯೂ ತೀರ್ಥಂಕರರ ಚಿತ್ರ ಹಾಗೂ ಶಾಸನಗಳಿವೆ. ಈ ರೀತಿಯ ಚಿತ್ರ ಹಾಗೂ ಶಾಸನಗಳು ನೈಸರ್ಗಿಕ ಕುಳಿಗಳಲ್ಲಿ ಮತ್ತೆಲ್ಲಿಯೂ ಕಂಡು ಬರುತ್ತಿಲ್ಲವೆನ್ನಬಹುದು.
ಶಾಸನ ಪಾಠ
೧        ನಿಕರಸನ ಧರ್ಮ (ಪಕ್ಕದಲ್ಲಿ ಪಾರ್ಶ್ವನಾಥ ತೀರ್ಥಕರನ ರೇಖಾ ಚಿತ್ರವಿದೆ)
ಬಂಡೆಯ ಮೇಲೆರುವ ಶಾಸನ
೧        ಪಟ್ಟಸಹಣಿ ಕಲೆಯನ
೨        ಮಡದಿ ಧಾಗಿ[ಪಾರ್ಶ್ವನಾಥ]ಮಾಡಿಸಿದಳು
ಲಿಪಿ ದೃಷ್ಟಿಯಿಂದ ಈ ಶಾಸನವು ಕ್ರಿ.ಶ.ಸು. ಹನ್ನೊಂದ ನೆಯ ಶತಮಾನದ್ದೆನ್ನಬಹುದು ಕಲ್ಲಿನ ಕುಳಿ/ಪೊಟರೆಗಳಲ್ಲಿ ಪಾರ್ಶ್ವನಾಥ ತೀರ್ಥಂಕರನ ರೇಖಾ ಚಿತ್ರ ಹಾಗೂ ಶಾಸನಗಳನ್ನು ಕೆತ್ತಲಾಗಿದ್ದು ಇದು ಸಾಂತರಸರ ಕಾಲದ್ದಾಗಿದೆ.
ಶಾಸನ ಪಾಠ
೧        ಶ್ರೀಮತು ಚಲ್ಲದೇವಿ ಮಾಡಿಸಿದ ದೇವರು
೨        ಮಗಳು ಲಕುಮ್ಮಾದೇವಿ ಮಾಡಿಸಿದ ದೇವರು
೩        ವಿಜೆಪಟ್ಟಾಚಾರಿ ಮಡಿದ ದೇವರು
ಮೂರು ಸಾಲುಗಳುಳ್ಳ ಶಾಸನದಲ್ಲಿ ಕಾಲದ ಉಲ್ಲೇಖವಿಲ್ಲ. ಲಿಪಿದೃಷ್ಟಿಯಿಂದ ಕ್ರಿ.ಶ.ಸು.೧೦-೧೧ನೇ ಶತಮಾನದ್ದೆನ್ನ ಬಹುದು. ಚಲ್ಲದೇವಿ (ಚಟ್ಟಲದೇವಿ) ಸಾಂತರರ ರಾಣಿಯಾಗಿದ್ದಳು ಹಾಗೂ ಅವಳ ಮಗಳನ್ನೂ ಉಲ್ಲೇಖಿಸಿದೆ. ದೇವರನ್ನು ಕಂಡರಿಸಿದವನು ವಿಜೆಪಟ್ಟಾಚಾರಿ ಎಂಬುದು ತಿಳಿಯುತ್ತದೆ. ಜೋಗಿ ಗುಡ್ಡವು ಒಂದು ಜೈನ ತೀರ್ಥಕ್ಷೇತ್ರ ವಾಗಿತ್ತು ಎಂಬುದನ್ನು ನನ್ನ ಹಿಂದಿನ ಲೇಖನದಲ್ಲಿ ವಿಸ್ತಾರ ವಾಗಿ ಚಚಿಸಿದ್ದೇನೆ. ಬರಹಬಾಗಿನ ಹಂಪನಾ ಷಷ್ಟ್ಯಬ್ದ ಗೌರವಗ್ರಂಥ ಸಂ. ಎಚ್.ವಿ. ನಾಗೇಶ್, ಪ್ರ. ಹಂಪನಾ ಅಭಿನಂದನ ಸಮಿತಿ, ೧೯೯೬, ಪು೧ ೩೯೩-೩೬.
ತೀರ್ಥಹಳ್ಳಿ ಪರಶುರಾಮ ತೀರ್ಥ, ಕಲ್ಲುಸಾರದ ಸುತ್ತ ಮುತ್ತ ಇನ್ನೂ ನೂರಾರು ಕಿರುಶಾಸನಗಳು ಕಂಡುಬರುತ್ತವೆ. ಇವುಗಳ ಪೂರ್ಣ ದಾಖಲಾತಿಯು ಆಗಬೇಕಿದೆ. ಇದರಿಂದ ಇತಿಹಾಸಕ್ಕೆ ಹೊಸ ಆಯಾಮವು ದೊರೆಯುತ್ತದೆ.
[ಕ್ಷೇತ್ರ ಕಾರ್ಯದಲ್ಲಿ ನನ್ನೊಂದಿಗೆ ಸಹಕರಿಸಿದ ಸ್ನೇಹಿತ ಉಪಾಧ್ಯಾಯರಾದ ಎಲ್.ಎಸ್. ರಾಘವೇಂದ್ರ ಹಾಗೂ ಜಿ.ಎನ್. ಸಾತ್ವಿಕ್ ಮತ್ತು ಸ್ಕಂದ ಅವರಿಗೆ ನನ್ನ ಕೃತಜ್ಞತೆಗಳು.]



Monday, November 26, 2012




ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಕ್ಯಾಸವಾರ ಗ್ರಾಮದ ಅಪ್ರಕಟಿತ ಶಿಲಾಶಾಸನ ಮತ್ತು ವಿಷ್ಣುಶಿಲ್ಪ

                                                                                      

                                                                    
                                                   ಡಾ. ಪಿ.ವಿ.ಕೃಷ್ಣಮೂರ್ತಿ                                                       
         
       ಎಸ್. ಕಾರ್ತಿಕ್‌                                                                                                                                         

   ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆ, ಕೊರಟಗೆರೆ ತಾಲ್ಲೂಕು ಹೊಳವನಹಳ್ಳಿ ಹೋಬಳಿಗೆ ಸೇರಿರುವ ಕ್ಯಾಸವಾರ (ಕೇಶವಾರ) ಗ್ರಾಮವು ಸುಮಾರು ೬೯೭ ಎಕರೆ ವಿಸ್ತೀರ್ಣದಿಂದ ಕೂಡಿದೆ. ಈ ಗ್ರಾಮದ ಶ್ರೀಯುತ ವೆಂಕಟರಾವ್ ಅವರ ಮೊಮ್ಮಗ ಶ್ರೀಯುತ ನರೇಂದ್ರ ಅವರ ಹೊಲದಲ್ಲಿ ಪ್ರಕೃತ ಪ್ರಕಟವಾಗುತ್ತಿರುವ, ನಮ್ಮ ಗಮನಕ್ಕೆ ಬಂದಂತೆ ಇದುವರೆಗೂ ಅಪ್ರಕಟಿತವಾಗಿರುವ ಶಾಸನವಿದೆ (ಚಿತ್ರ-೧). ಪ್ರಕಟನೆಗಾಗಿ ಈ ಶಾಸನದ ಛಾಯಾಚಿತ್ರವನ್ನು ಹಾಗೂ ಶಾಸನವಿರುವ ಸ್ಥಳದ ಭೌಗೋಳಿಕ ವಿವರಗಳನ್ನು ನಮಗೆ ನೀಡಿದ ಕೇಶವಾರದವರೇ ಆದ ಕಥೆಗಾರ ಶ್ರೀ ನಾರಾಯಣ ಭಗವಾನ್ ಅವರಿಗೆ ನಮ್ಮ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ. ಈ ಪ್ರದೇಶಕ್ಕೆ ಸ್ವತಃ ಹೋಗಿ ಕ್ಷೇತ್ರಕಾರ‍್ಯವನ್ನು ಮಾಡಲು ಈ ಸಂದರ್ಭದಲ್ಲಿ ನಮಗೆ ಸಾಧ್ಯವಾಗಲಿಲ್ಲ.

 ಈ ಶಾಸನವಿರುವ ಸ್ಥಳ ಜಯಮಂಗಲಿ, ಸುವರ್ಣಮುಖೀ ನದಿಗಳ ಸಂಗಮದಿಂದ ಅರ್ಧಕಿಲೋಮೀಟರ್ ದೂರ ಪಶ್ಚಿಮಕ್ಕಿದೆ. ಜೊತೆಗೆ ಶಾಸನವಿರುವ ಸ್ಥಳದಿಂದ ೨೦೦ ಮೀಟರ್ ಹಿಂದೆ ಮೊದಲು ಕೆರೆ ಇದ್ದಿತೆಂದು ತಿಳಿದುಬರುತ್ತದೆ. ಕೆರೆ ಇದ್ದ ಕುರುಹಾಗಿ ಈಗ ಕಟ್ಟೆ ಮಾತ್ರ ಕಂಡುಬರುತ್ತದೆ. ಇಲ್ಲಿಯೇ ಭಗ್ನವಾಗಿರುವ ಕೇಶವನ ಶಿಲ್ಪವೂ ಇದೆ (ಚಿತ್ರ-೨). ಶಾಸನದಲ್ಲಿ ವಿಷ್ಣುವಿನ ದೀಪಕ್ಕಾಗಿ ದಾನವನ್ನು ನೀಡಿರುವ ವಿಚಾರವನ್ನು ಹೇಳಿರುವುದರಿಂದ ಈ ಸ್ಥಳದಲ್ಲಿ ಕೇಶವ ದೇವಾಲಯವಿದ್ದಿರಬಹುದಾದ ಸಾಧ್ಯತೆಯಿದೆ. ಈ ಪ್ರದೇಶದಲ್ಲಿ ಉತ್ಖನನ ಹಾಗೂ ಕ್ಷೇತ್ರಕಾರ‍್ಯ ನಡೆದರೆ ಹೆಚ್ಚಿನ ಕುರುಹುಗಳು ದೊರಕಬಹುದಾಗಿದೆ. ಜೊತೆಗೆ ಪ್ರಕೃತ ಶಾಸನವಿರುವ ಗ್ರಾಮದ ಹೆಸರು ಕ್ಯಾಸವಾರ ಅಥವಾ ಕೇಶವಾರ ಎಂದಿರುವುದು ಗಮನಾರ್ಹ. ಇದರ ಮೂಲ ರೂಪ ಬಹುಶಃ ಕೇಶವಪುರ ಎಂದಿರಬಹುದೆಂದು ಕಾಣುತ್ತದೆ.

    ಶಾಸನಪಾಠವು ಸಂಸ್ಕೃತ ಭಾಷೆಯಲ್ಲಿ, ಕನ್ನಡ ಲಿಪಿಯಲ್ಲಿ ರಚಿತವಾಗಿದೆ. ಶಾಸನದಲ್ಲಿ ಕಾಲವನ್ನು ಸೂಚಿಸಿಲ್ಲ. ಆದರೂ ಲಿಪಿಯ ಆಧಾರದಿಂದ ಕ್ರಿ.ಶ. ಸುಮಾರು ೮ ನೆಯ ಶತಮಾನವೆಂದು ಹೇಳಬಹುದಾಗಿದೆ. ಶಾಸನದ ಮೊದಲನೆಯ ಸಾಲಿನಲ್ಲಿ ಸ್ವಸ್ತಿ ಮತ್ತು ಶ್ರೀ ಅಕ್ಷರಗಳ ನಡುವೆ ಸುದರ್ಶನ ಚಕ್ರವನ್ನು ಕೆತ್ತಲಾಗಿದೆ. ಈ ಚಕ್ರವನ್ನು ಗಡಿಗಲ್ಲೆಂದು ಭಾವಿಸಬಹುದೇ ? ವಿಚಾರಣೀಯ. ಏಕೆಂದರೆ ಅನೇಕ ದತ್ತಿಯ ಶಾಸನಗಳಲ್ಲಿ ಗಡಿಗಳನ್ನು ಸೂಚಿಸುವಾಗ ಈ ರೀತಿ ಚಕ್ರವನ್ನು ಕೆತ್ತಲಾಗಿದೆ. ಆದ ಕಾರಣ ಇವುಗಳನ್ನು ಚಕ್ರಕಲ್ಲು ಶಾಸನಗಳೆಂದು ಕರೆಯುವ ರೂಢಿಯುಂಟು. ಪ್ರಕೃತ ಶಾಸನವನ್ನೂ ಇದೇ ಗುಂಪಿಗೆ ಸೇರಿಸಬಹುದೇ ? ಎಂಬುದು ವಿಚಾರಾರ್ಹ. ಆದರೆ ಶಾಸನವು ವಿಷ್ಣುವಿನ ದೀಪಕ್ಕೆ ದಾನವನ್ನು ನೀಡಿರುವ ವಿವರವನ್ನು ದಾಖಲಿಸಿರುವ ಕಾರಣ ಇದನ್ನು ಸುದರ್ಶನ ಚಕ್ರವೆಂದು ಕೂಡ ಹೇಳಬಹುದಾಗಿದೆ. ಇದನ್ನು ಗಡಿಗಲ್ಲು ಶಾಸನವೆಂದೇ ಪರಿಗಣಿಸಿದರೆ ಕ್ರಿ.ಶ. ಸುಮಾರು ಎಂಟನೆಯ ಶತಮಾನದಲ್ಲಿ ಈ ಶಾಸನ ದೊರಕಿರುವುದು ಕಾಲದ ದೃಷ್ಟಿಯಿಂದ ಮಹತ್ತ್ವದೆನ್ನಿಸುತ್ತದೆ. ಮೊದಲು ಶಾಸನ ಪಾಠವನ್ನು ಯಥಾವತ್ತಾಗಿ ದಾಖಲಿಸಲಾಗಿದೆ.

ಶಾಸನಪಾಠ

೧ ಸ್ವಸ್ತಿ                  ಶ್ರೀ
೨ ವಿಷ್ಣವೇ ದೀಪಾಯ
೩ ಶಿವಶಮ್ಮಣಾ ಭೂ
೪ ಮಿರಿಯಮ್ ದತ್ತಾ
{ತ್ತಾರ್ಯ್ಯ}ರಿಯಮ್ ಧರ್ಮ್ಮರಕ್ಷ
೬ ಣೀಯಃ

ಶಾಸನಪಾಠದ ಅನ್ವಯ : ಸ್ವಸ್ತಿ. ಶಿವಶರ‍್ಮಣಾ ಇಯಂ ಭೂಮಿಃ ವಿಷ್ಣವೇ ದೀಪಾಯ ದತ್ತಾ. ಇಯಂ ಧರ‍್ಮೋ ರಕ್ಷಣೀಯಃ

ಶಾಸನಪಾಠದ ಅರ್ಥ : ಸ್ವಸ್ತಿ. ಶಿವಶರ‍್ಮನಿಂದ ವಿಷ್ಣುದೇವರ ದೀಪಕ್ಕಾಗಿ ಈ ಭೂಮಿಯು ಕೊಡಲ್ಪಟ್ಟಿದೆ.  ಈ ಧರ‍್ಮವು
                       ರಕ್ಷಿಸಲ್ಪಡಬೇಕು.
ಮೇಲ್ಕಂಡ ಶಾಸನದಲ್ಲಿ ಅಕ್ಷರಗಳನ್ನು ಆಳವಾಗಿ ಸ್ಪಷ್ಟವಾಗಿ ಕಂಡರಿಸಲಾಗಿದ್ದರೂ ಅಕ್ಷರಗಳ ಕಂಡರಣೆ ಒಂದೇ ಗಾತ್ರದಲ್ಲಿ ಮೂಡಿಲ್ಲ. ಇದರಿಂದಾಗಿ ಒಂದೆರಡು ಕಡೆ ಅಸ್ಪಷ್ಟತೆಯಿದೆ. ಮೂರನೆಯ ಸಾಲಿನಲ್ಲಿ ಶಿವಶಮ್ಮಣಾ ಎಂದಿರುವುದು ಪ್ರಾಕೃತ ಭಾಷೆಯ ರೂಪವಾಗಿದೆ. ಪುಷ್ಪಾವರಣವನ್ನು ಹಾಕಿರುವ ಐದನೆಯ ಸಾಲಿನ ಮೊದಲ ಎರಡು ಅಕ್ಷರಗಳನ್ನು ತೀರಾ ಒತ್ತಾಗಿ ಕಂಡರಿಸಿರುವ ಕಾರಣ ಸ್ಪಷ್ಟವಾಗಿ ಓದಲು ಸಾಧ್ಯವಾಗುತ್ತಿಲ್ಲ. ಈ ಭಾಗದ ಪಾಠ ಕೆಟ್ಟಿದೆ. ಇದನ್ನು ಶಾಸನದ ಒಟ್ಟು ಅರ್ಥದ ದೃಷ್ಟಿಯಿಂದ ಗಮನಿಸಿ ತಾತ್ಕಾಲಿಕವಾಗಿ ಹೇಳಬಹುದಾದರೆ ಅನಗತ್ಯ ಪಾಠ ಎಂದು ಭಾವಿಸಬಹುದು.  ಇದರ ಅರ್ಥವನ್ನು ಸ್ಥೂಲವಾಗಿ ಬರೆಯಲಾಗಿದೆ. ಇದಕ್ಕಿಂತ ಹೆಚ್ಚಿಗೆ ಇದನ್ನು ಅರ್ಥೈಸಲು ಸದ್ಯದಲ್ಲಿ ಸಾಧ್ಯವಾಗುತ್ತಿಲ್ಲ. ಆರನೆಯ ಸಾಲಿನಲ್ಲಿ ಕೆಲವು ಅಕ್ಷರಗಳು ಇರುವಂತೆ ಕಾಣುತ್ತದೆಯಾದರೂ ಅವು ಸಂಪೂರ್ಣ ವಾಗಿ ಸವೆದುಹೋಗಿವೆ.

ಇದೇ ಸ್ಥಳದ ಸಮೀಪದಲ್ಲಿಯೇ ಕರಿಯ ಕಲ್ಲಿನಲ್ಲಿ ಕೆತ್ತಲಾಗಿರುವ ಈಗ ಭಗ್ನವಾಗಿರುವ ಚತುರ್ಭುಜನಾದ ವಿಷ್ಣುವಿನ ಶಿಲ್ಪವೂ ದೊರೆತಿದ್ದು ಸ್ಥೂಲವಾಗಿ ಅದರ ಮೂರ್ತಿ ಲಕ್ಷಣಗಳಿಂತಿದೆ.

೧.       ಈ ಮೂರ್ತಿಯ ಹಣೆ, ಕಣ್ಣು, ಕಿರೀಟಗಳ ಭಾಗ ಭಿನ್ನವಾಗಿದೆ. ಮಕರ ಕುಂಡಲ, ಕಂಠಾಭರಣ, ಕೇಯೂರ  
ಕಂಕಣಗಳು, ದಪ್ಪ ಯಜ್ಞೋಪವೀತ, ಉದರಬಂಧ ಹಾಗೂ ಕಟಿಬಂಧಗಳು ಕಂಡುಬರುತ್ತವೆ. ಭಗ್ನ ವಾಗಿದ್ದರೂ ಕ್ರಿ.ಶ.ಸುಮಾರು ೮ ನೆಯ ಶತಮಾನದ ತಲಕಾಡು ಗಂಗ-ನೊಳಂಬ ಶೈಲಿಯ ಶಿಲ್ಪಲಕ್ಷಣಗಳನ್ನು ಹೊಂದಿದೆ. ಮೂರ್ತಿಯು ಸಮಭಂಗದಲ್ಲಿ ನಿಂತಿದ್ದು ಕಟಿಪ್ರದೇಶದಿಂದ ಕೆಳಗೆ ಹೂತುಹೋಗಿದ್ದು ಬಹುಶಃ ಗದೆ, ಕಾಲು ಮತ್ತು ಪೀಠವಿರುವ ಭಾಗ ಕೂಡ ಹೂತು ಹೋಗಿರುವಂತೆ ಕಂಡುಬರುತ್ತದೆ.

೨.       ಮೂರ್ತಿಯ ಮೇಲಿನ ಬಲಗೈಯಲ್ಲಿ ಚಕ್ರ, ಮೂರ್ತಿಯ ಕೆಳಗಿನ ಬಲಗೈಯಲ್ಲಿ ಅಭಯ /ಪದ್ಮ
ಮೂರ್ತಿಯ ಮೇಲಿನ ಎಡಗೈಯಲ್ಲಿ ಶಂಖ, ಮೂರ್ತಿಯ ಕೆಳಗಿನ ಎಡಗೈಯಲ್ಲಿ ಗದೆ (?)

೩.       ಸ್ಥೂಲವಾಗಿ ಹೇಳಬಹುದಾದರೆ ಈ ಶಿಲ್ಪವು ಸುಮಾರು ೧.೨ ಮೀಟರ್ ಎತ್ತರ, ೬೫ ರಿಂದ ೭೦ ಸೆಂ.ಮೀಟರ್ ಅಗಲವಿದೆ ಹಾಗೂ ಎದೆಯ ಭಾಗವು ಸುಮಾರು ೩೦ ಸೆಂ.ಮೀಟರ್ ದಪ್ಪವಿದೆ.

ಮೇಲಿನ ಲಕ್ಷಣಗಳಿಂದ ಕೂಡಿರುವ ಇದನ್ನು ಜನಾರ್ದನ ಮೂರ್ತಿಯ ಶಿಲ್ಪವೆಂದು ಹೇಳಬಹುದು. ಜನಾರ್ದನ ಮೂರ್ತಿಯ ಲಕ್ಷಣವನ್ನು ಪಾಂಚರಾತ್ರ ಕ್ರಿಯಾಪಾದದಲ್ಲಿರುವಂತೆಯೇ ಮುಮ್ಮಡಿ ಕೃಷ್ಣರಾಜರ (ಕ್ರಿ.ಶ. ೧೭೯೪-೧೮೬೮) ಶ್ರೀತತ್ತ್ವನಿಧಿಯಲ್ಲಿ {ಶ್ರೀತತ್ತ್ವನಿಧಿ (ದ್ವಿತೀಯ ಸಂಪುಟ, ವಿಷ್ಣುನಿಧಿ), ಪ್ರಾಚ್ಯವಿದ್ಯಾ ಸಂಶೋಧನಾಲಯ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು-೨೦೦೨, ಪುಟ ೩೩} ದಾಖಲಿಸಿದ್ದು ಸಂಬಂಧಿಸಿದ ಪಠ್ಯವಿಂತಿದೆ.

ಜನಾರ್ದನೋ ರಕ್ತವರ್ಣಶ್ಚಕ್ರಶಙ್ಖಗದಾಭೃತ್
ವಾಮೋರ್ಧ್ವಕರೇ ಶಙ್ಖಃ | ವಾಮಾಧಃ ಕರೇ ಗದಾ | ದಕ್ಷಾಧಃ ಕರೇ ಪದ್ಮಮ್ | ದಕ್ಷೋರ್ಧ್ವಕರೇ ಚಕ್ರಮ್

ಮೇಲಿನ ವಿಶ್ಲೇಷಣೆಯಿಂದ ಹೇಳಬಹುದಾದರೇ ಇಲ್ಲಿ ಜನಾರ್ದನ ದೇವಾಲಯವಿದ್ದಿತು. ಈ ಸ್ಥಳವನ್ನು ಉತ್ಖನನಕ್ಕೆ ಒಳಪಡಿಸಿದರೆ ಹೆಚ್ಚಿನ ಮಾಹಿತಿ ಲಭ್ಯವಾಗುವುದರಲ್ಲಿ ಸಂದೇಹವೇನಿಲ್ಲ. ಆದರೆ ಕ್ರಿ.ಶ. ೮ ನೆಯ ಶತಮಾನಕ್ಕೆ ಸೇರುವ ಈ ಮೂರ್ತಿಯ ವಿವರಗಳು ಮತ್ತು ಶಾಸನೋಕ್ತ ವಿವರಗಳ ಬಗೆಗೆ ವಿಶ್ಲೇಷಣೆ ನಡೆಯಬೇಕು. ಇಲ್ಲಿ ಯಾವ ರೀತಿ ವಿಷ್ಣುವಿನ ಆರಾಧನೆ ನಡೆಯುತ್ತಿದ್ದಿತು, ಅದು ಯಾವ ರೂಪದಲ್ಲಿ ಮುಂತಾದ ವಿವರಗಳನ್ನೆಲ್ಲಾ ವಿಮರ್ಶಿಸಿದರೆ ಈ ಪ್ರದೇಶದ ವಿಷ್ಣುವಿನ ಆರಾಧನೆಯ ಒಂದು ಮಜಲನ್ನು ಚಿತ್ರಿಸಬಹುದು. ಕೇಶವನ ಆರಾಧನೆ ಪ್ರಚಲಿತವಾದದ್ದು ಸಾಮಾನ್ಯವಾಗಿ ಕ್ರಿ.ಶ. ಹನ್ನೊಂದನೆಯ ಶತಮಾನದ ಸುಮಾರಿಗೆ. ಕ್ಯಾಸವಾರ ಅಥವಾ ಕೇಶವಾರದ ಮೂಲ ಹೆಸರು ಕೇಶವಪುರವೆಂದು ಇದ್ದಿರಬಹುದು ಎಂಬ ಅಂಶವನ್ನು ಮೇಲೆ ಹೇಳಿದ್ದರೂ ಪ್ರಕೃತ ಶಾಸನದ ಕಾಲದಲ್ಲಿ ಅಂದರೆ ಕ್ರಿ.ಶ. ಎಂಟನೆಯ ಶತಮಾನದ ಸುಮಾರಿಗೆ ಈ ಪ್ರದೇಶದ ಹೆಸರು ಏನಿತ್ತು ಎಂಬುದರ ಬಗೆಗೂ ಅಧ್ಯಯನ ನಡೆಯಬೇಕಿದೆ.

ಪ್ರಕೃತ ಶಾಸನದಂತೆಯೇ ಪ್ರತಿಯೊಂದು ಜಿಲ್ಲೆ ಮತ್ತು ತಾಲ್ಲೂಕಿನ ಗ್ರಾಮಗಳಲ್ಲಿಯೂ ಅನೇಕ ಅಪ್ರಕಟಿತ ಶಾಸನಗಳು ಕಂಡುಬರುವ ಸಾಧ್ಯತೆ ಬಹಳವಾಗಿದೆ. ಇವೆಲ್ಲವುಗಳನ್ನು ಕ್ಷೇತ್ರಕಾರ‍್ಯದ ಮೂಲಕ ಪತ್ತೆಮಾಡಿ ಪ್ರಕಟಿಸಬೇಕು. ಇದರಿಂದ ಹೆಚ್ಚಿನ ಅಧ್ಯಯನ ಸಾಧ್ಯವಾಗುತ್ತದೆ. ಈ ಕಾರ‍್ಯ ನಿರಂತರವಾಗಿ ನಡೆಯಲೆಂದು ಹಾರೈಸುತ್ತೇವೆ.

[ಈ ಶಾಸನ ಪಾಠವನ್ನು ಮತ್ತು ವಿಷ್ಣುವಿನ ಶಿಲ್ಪದ ಬಗೆಗಿನ ವಿವರಗಳನ್ನು ಬರೆಯುವಲ್ಲಿ ಮೈಸೂರು ಪ್ರಾಚ್ಯವಿದ್ಯಾ ಸಂಶೋಧನಾಲಯದ ಸಂಶೋಧಕ ವಿದ್ವಾಂಸರಾದ ಎಸ್. ಜಗನ್ನಾಥ ಅವರೂ, ಭಾರತೀಯ ಪುರಾತತ್ತ್ವ ಸರ್ವೇಕ್ಷಣ, ಬೆಂಗಳೂರು ವಲಯದ ನಿವೃತ್ತ ಉಪ ಆಧೀಕ್ಷಕ ಪುರಾತತ್ತ್ವವಿದರಾದ ಎಂ.ವಿ. ವಿಶ್ವೇಶ್ವರ ಅವರೂ ಬಹಳವಾಗಿ ನೆರವು ನೀಡಿದ್ದಾರೆ. ಇವರುಗಳಿಗೆ ನಮ್ಮ ಕೃತಜ್ಞತೆಗಳನ್ನು ಸೂಚಿಸುತ್ತೇವೆ]


    
       
* * *