Saturday, July 27, 2013

ಅಳಿಯಸಂತಾನ -ಇಂದಿರಾಹೆಗಡೆ

 
                                                                                                             
ಇಂದಿರಾ ಹೆಗಡೆ

   ಕುಲಶೇಖರ ಆಳುಪೇಂದ್ರನ ಶಾಸನದಲ್ಲಿ ಅಳಿಯ ಸಂತಾನ ಕುಟುಂಬ ಪದ್ಧತಿ


         ಕರ್ನಾಟಕದ ಕರಾವಳಿ ಭಾಗದ ತುಳುನಾಡು ಕರ್ನಾಟಕದ ಇತರ ಭಾಗಕ್ಕಿಂತ  ಸಾಂಸ್ಕೃತಿಕ ಮತ್ತು ಸಾಮಾಜಿಕ ಪದ್ಧತಿಯಲ್ಲಿ ಭಾರತದ ಇತರ ಭಾಗಕ್ಕಿಂತ ಭಿನ್ನವಾಗಿ ವಿಶಿಷ್ಠತೆಯನ್ನು ಪಡೆದಿದೆ. ಅಂತರ ಒಂದು ವಿಶಿಷ್ಠ ಸಾಮಾಜಿಕ ಪದ್ಧತಿ ಅಳಿಯ ಸಂತಾನ ಕುಟುಂಬ ಪದ್ಧತಿ ಅಥವಾ ಮಾತೃವಂಶೀಯ ಕುಟುಂಬ ಪದ್ಧತಿ. ಮಾತೃವಂಶೀಯ ಪದ್ಧತಿಯಲ್ಲೂ ರಾಜ್ಯವನ್ನು ಆಳುವ ಅರಸ ಪುರುಷನೇ. ಹೀಗಾಗಿ ಒಬ್ಬ ಅರಸ ಸತ್ತ ಅನಂತರ ಅವನ ಸೋದರಳಿಯ  ಆ ಸಿಂಹಾಸನಕ್ಕೆ ವಾರಸುದಾರನಾಗುತ್ತಾನೆ.  ಆದ್ದರಿಂದ ಅಳಿಯ ಸಂತಾನ ಪದ್ಧತಿ ಎನ್ನುವ ರೂಢಿ ಬೆಳೆದಿದೆ. ಆದರೆ ವಂಶದ ವಿಷಯದಲ್ಲಿ ಆತನ ತಾಯಿಯ ಮೂಲವನ್ನು ನೋಡುವುದರಿಂದ ಮಾತೃವಂಶೀಯ ಕುಟುಂಬ ಪದ್ಧತಿ ಎನ್ನುತ್ತಾರೆ. ವಾಸ್ತವವಾಗಿ ಇವೆರಡೂ ಒಂದೇ.

         ಅಳಿಯಸಂತಾನ ಪದ್ಧತಿಯ ಬಗ್ಗೆ ಶಾಸನಾಂಕಿತ ದಾಖಲೆ ಸಿಗುವುದು ತಡವಾಗಿ. ಕ್ರಿ.ಶ. ಹತ್ತನೆಯ ಶತಮಾನದ ತಳಂಗರೆಯ ಜಯಸಿಂಹನ ಶಾಸನದಲ್ಲಿ ಆ ಆಸ್ತಿಯ ಉತ್ತರಾಧಿಕಾರವು ಹೆಣ್ಣುಮಕ್ಕಳಿಗಲ್ಲದೆ ಗಂಡುಮಕ್ಕಳಿಗೆ ಹೋಗ ಸಲ್ಲದು ಎಂದು ಜೋಗವ್ವೆಯು ಶಾಸನೀಕರಿಸಿದ್ದಾಳೆ. ಈ ಆಸ್ತಿಯು ಆಕೆಯ ತಾಯಿಯ ಮೂಲದಿಂದ (ಮಾತೃ ಮೂಲ) ಬಂದ ಆಸ್ತಿಯಾಗಿರದೆ ಆಕೆಯ ಸ್ವಯಾರ್ಜಿತ (ಕನ್ಯಾದಾನವಾಗಿ) ಆಸ್ತಿಯಾಗಿದೆ. ಹೀಗಾಗಿ ಆಕೆಗೆ ಶಾಸನಾಂಕಿತಗೊಳಿಸುವ ಅಗತ್ಯ ಬಂದಿರಬೇಕು.  ೧೦ನೆಯ ಶತಮಾನಕ್ಕಾಗಲೇ ತುಳುವ ರೂಢಿ ಪದ್ಧತಿಯಂತೆ ಹೆಣ್ಣುಮಕ್ಕಳಿಗೆ ತಾಯಿಯ/ಮಾತೃಮೂಲದ ಆಸ್ತಿ ಸಲ್ಲುತ್ತಿದ್ದು ಇತರ ಮೂಲಗಳ ಆಸ್ತಿಯಲ್ಲಿ ಗಂಡುಮಕ್ಕಳೂ ಪಾಲು ಪಡೆಯುತ್ತಿದ್ದಿರಬೇಕು. ಹೀಗಾಗಿ ಜೋಗವ್ವೆ ತನ್ನ ಆಸ್ತಿ ಹೆಣ್ಣು ಸಂತಾನಕ್ಕೆ ಮಾತ್ರ ಹೋಗಬೇಕೆಂದೂ ಹೆಣ್ಣು ಮಕ್ಕಳಿಲ್ಲವಾದರೆ ಗಂಡು ಮಕ್ಕಳಿಗೆ ಹೋಗಬಹುದೆಂದು ಶಾಸನ ಬರೆಸಿರಬೇಕು. ತಳಂಗೆರೆ ಆಳುಪರಸರ ಆಳ್ವಖೇಡಕ್ಕೆ ಸೇರಿದ ಭಾಗ.

        
         ವರಾಂಗದ ಶಾಸನದ ಪ್ರಕಾರ ಕುಲಸೇಖರಾಳ್ಪೆಂದ್ರನಿಗೆ ಜಾಕಮಲಾದೇವಿ ಎಂಬ ರಾಣಿಯೂ ಇದ್ದಳು.
 ****************************************************************************************
 ಕ್ರಿ.ಶ. ೧೨೦೪ರ ವೀರ ಕುಲಶೇಖರನ ಮಂಗಳೂರು ಶಾಸನವು ಮಂಗಲಾಪುರದ ಭುವನಾಶ್ರಯದ ಮೊಗಸಾಲೆಯಲ್ಲಿ ನಡೆದ ರಾಜ ಶಭೆಯಲ್ಲಿ ಅಳಿಯ ವೀರ ಬಂಕಿದೇವನಿಗೆ ಮುಗುರುನಾಡಿನ ರಾಜಭಾರವನ್ನು ಬಿಟ್ಟುಕೊಟ್ಟ ಬಗ್ಗೆ ಉಲ್ಲೇಖ ನೀಡುತ್ತದೆ. ಶಾಸನದ ಕೊನೆಗೆ  “ ಯೀ ಧರ್ಮವನ್ನು ಶಿಲಾಶಾಸನಂಗೆಯಿದು ಕೊಟ್ಟ ಮಾವ ಕುಲಸೇಖರ ದೇವರ್ಗೆ ಅಳಿಯಂದಿರು ಬಂಕಿದೇವರು, ಬಂಮದೇವರು ಕುಲಸೇಖರ ದೇವರರ್ಗೇ ಮಂಗಳ ಮಹಾ .......” (ಕೆ.ವಿ ರಮೇಶ ಮತ್ತು ಎಂ.ಜೆ.ಶರ್ಮ ತುಳುನಾಡಿನ ಶಾಸನಗಳು ಸಂ. ೩೬) ಎಂದಿದೆ. ಕೂರ್ಸಿ ಶಾಸನ ಬರೆದ ೪೩ ವರ್ಷಗಳ ಬಳಿಕ ಮಂಗಳೂರು ಶಾಸನವನ್ನು ಬರೆಯಲಾಗಿದೆ. ೧೧೬೨ರಲ್ಲಿ ಕೂರ್ಸಿಯ ಭೂಮಿಯನ್ನು ದಾನ ನೀಡುವಾಗ ಕುಲಸೇಖರನ ಕುಟುಂಬದಲ್ಲಿ ಇದ್ದ ಇತರ ಆತನ ಸೋದರಳಿಯ ಪಾಂಡ್ಯ ಪಟ್ಟಿಗದೇವರುಂ, ಬಲ್ಲಹದೇವರುಂ, ಕುಲಶೇಖರ ದೇವರುಂ, ಕೀರ್ತಿದೇವರುಂ -ಇವರೆಲ್ಲರ ಪ್ರಸ್ತಾಪ ಮಂಗಳೂರಿನ ಮೇಲಿನ ಶಾಸನದಲ್ಲಿ ಇಲ್ಲ. ಬಂಕಿದೇವನ ಸೋದರ ಸಾಂತರ ದೇವನ ಪ್ರಸ್ತಾಪ ಕೂಡಾ ಇಲ್ಲಿ ಇಲ್ಲ.  ‘ಅಳಿಯಂದಿರು ಬಂಕಿದೇವರು, ಬಂಮದೇವರು ಕುಲಸೇಖರ ದೇವರರ್ಗೇ’ ಎಂದಿದೆ. ಸಾಂತರ ದೇವ ಆ ಸಂಬದರ್ಭದಲ್ಲಿ ರಾಜ ಸಭೆಯಲ್ಲಿ ಇಲ್ಲದೆ ಹೋಗಿರಬಹುದು. ಆದರೆ ಕೊಲಶೇಖರನ ಉತ್ತರಾಧಿಕಾರಿಯಾಗಬೇಕಾಗಿದ್ದ ಪಾಂಡ್ಯ ಪಟ್ಟಿಗದೇವ ಏನಾದ? ಬಹುಷ ಮುಗುರುನಾಡನ್ನು ಬಂಕಿದೇವನಿಗೆ ಕೊಟ್ಟು ಹಿರಿಯ ಅಳಿಯ ಪಾಂಡ್ಯ ಪಟ್ಟಿಗದೇವನು  ಆಳುಪ ಸಿಂಹಾಸನಕ್ಕೆ ಕೊಲಶೇಖರನ ಉತ್ತರಾಧಿಕಾರಿಯಾಗಿದ್ದಿರಬೇಕು.  .  ಈ ಮೂಲಕ ಆತ ತನ್ನ ಇಬ್ಬರು ಸೋದರಿಯರಲ್ಲಿ ರಾಜ್ಯವನ್ನು ಹಂಚಿರಬೇಕು. ತುಳುನಾಡಿನ ಅಳಿಯ ಸಂತಾನ ಪದ್ಧತಿಯಲ್ಲಿ ಎಲ್ಲಾ ಹೆಣ್ಣು ಮಕ್ಕಳಿಗೆ ಸಮಾನ ಭಾಗ ದೊರಕುತ್ತದೆ. ಮೂಲ ಭಾಗ ಹಿರಿಯವಳಿಗೆ ಸೇರುತ್ತದೆ.

         ವರಾಂಗದ ೧೩ನೆಯ ಶತಮಾನದ ಶಾಸನದಲ್ಲಿ ಆಳುಪ ಅರಸರಾದ ಪಟ್ಟಿಯೊಡೆಯ , ಪಾಂಡ್ಯ ಪಟ್ಟಿಯೊಡೆಯ, ಕವಿಯಾಳುಪ, ಮತ್ತು ಪಟ್ಟಿಯೊಡೆಯ ಕುಲಶೇಖರ ಇವರುಗಳ ಹೆಸರು ಕ್ರಮವಾಗಿ ಬಂದಿದೆ. ಶಾಸನದ ಕೊನೆಯ ಭಾಗದಲ್ಲಿ “ತ್ರಿಭುವನ ಶಾನ್ತರನನ್ನು ಹೊಗುಳುತ್ತಾ ಇವನಿಗೆ ‘ಶಾಂತರನೆಂಬನ್ವರ್ತ್ಥ ಸಂಜ್ಞೆಯ(ಂ)’ ಎನ್ನುವುದಲ್ಲದೆ ಇವನನ್ನು ‘ವೀರ ಭೂಪಾಲ’ ಎನ್ನುತ್ತದೆ. “ರಿಪುರಾಯರ ತೂಳ್ದಿ ಧರ್ಮಮಂ ಪಾಳಿಸಿ ರಾಜ್ಯಲಕ್ಷ್ಮಿಯಂ ಮಿಳಿಸಿ ರಾಜ್ಯಂಗೈಯ್ಯುತ್ತಿರಲಾ ಮಹೀಭುಜ ನಿಜಾನುಜನ ಪಾರೋದರ ಶೌರ್ಯಚಾರ ವೀರಭೂಪಾಳನಿಂ ಕಿರಿಯನಪ್ಪ ಕುಂಡಣ ಕ್ಷೋಣೀಪಾಳನಖಿಲ ದಿಕ್ಪಾಳ ನಿಳಯಮಂ ನಿಜಕೀರ್ತಿಯಿಂ  ಧವಳಿಸಿ ಜಗತ್ಪ್ರಸಿದ್ಧ ವಿದ್ಯಾ ವಿಳಾಸಿನೀ ಸ್ವರ್ಣ ಕರ್ಣ್ಣಕುಂಡಲಾಭರಣನಪ್ಪು(ದ)..........ಪಂಡಿತ ಪಾಂಡ್ಯನೆನೆನಿಸಿ ಪಾಂಡ್ಯ ದನಂಜಯ ನಪ್ಪು ........ .” (ಕೆ.ವಿ ರಮೇಶ ಮತ್ತು ಎಂ.ಜೆ.ಶರ್ಮ ತುಳುನಾಡಿನ ಶಾಸನಗಳು ಸಂ. ೩೯) ಹೀಗೆ ಶಾಸನ ಪಾಠ ಮುಂದುವರಿಯುತ್ತದೆ. ಈ ಶಾಸನದಲ್ಲಿ ಬರುವ ಕುಲಸೇಖರನೇ ಕೂರ್ಸಿ ಶಾಸನದ ಕುಲಶೇಖರ. ಇಲ್ಲಿ ಬುರವ ಬಂಕಿದೇವನಿಗೆ ಮೊಗರುನಾಡಿನ ರಾಜ್ಯವನ್ನು ಕುಲಶೇಖರ ಬಿಟ್ಟುಕೊಟ್ಟಿದ್ದ. (ಅದೇ. ಸಂ. ೩೬) ಆದರೆ ಮುಂದಿನ ಇತಿಹಾಸಗಳ ಪುಟದಲ್ಲಿ ಮುಗುರುನಾಡಿನ ಬಂಕಿದೇವನ ಪ್ರಸ್ತಾಪ ಕಾಣಬರುವುದಿಲ್ಲ.
ಕುಂಡಣನ ಶಾಸನದಲ್ಲಿ ಮೇಲಿನ ಅರಸರನ್ನು ‘ನಲ್ಲಿಂ’ ಬಳಿಯವರು ಎನ್ನಲಾಗಿದೆ.  

ಮುಂದೆ ಆಳುಪ ಸಿಂಹಾಸನ ದತ್ತಾಳುಪ ಬಳಿಯರಿಗೆ ಸೇರುತ್ತದೆ. ವೀರ ಪಾಂಡ್ಯನ ಅಳಿಯ ಬಂಕಿದೇವ ದತ್ತಾಳುಪ ಬಳಿಯವನೆಂದು ಹೇಳಲಾಗಿದೆ. ( SII.,ಗಿoಟ. ೨೭,ಓo, ೨೧೬,  ೧೨೮೧ ಂ.ಆ)   ಹೀಗಾಗಿ ಬಂಕಿದೇವನ ಸೋದರಮಾವನಾದ ವೀರ ಪಾಂಡ್ಯನೂ ದತ್ತಾಳುಪ ಬಳಿಯವನು ಆಗುತ್ತಾನೆ. ವೀರಪಾಂಡ್ಯದೇವಾಳುಪೇಂದ್ರನ ಕಾಲ ಕ್ರಿ.ಶ ೧೨೫೦-೧೨೭೫.

         ಕ್ರಿ.ಶ. ೧೨೦೪ರಲ್ಲಿ ನಲ್ಲಿ ಬಳಿಯ ಕುಲಸೇಖರ ಮಂಗಳಾಪುರದಿಂದ ಆಳುತ್ತಿದ್ದ. ಮುಂದೆ ಆಳುಪ ಸಿಂಹಾಸನದಲ್ಲಿ  ತ್ರಿಭುವನ ಸಾಂತರ ಮತ್ತು ಕುಂಡಣರು ಕಾಣಬರುತ್ತಾರಾದರೂ ಇವರ ಕಾಲ ೧೩ನೆಯ ಶತಮಾನ ಎಂದಿದೆ. ದತ್ತಾಳುಪೇಂದ್ರ ಶ್ರೀ ಮಾರ ಒಡ್ಡಮದೇವ ಕೆಲವು ಕಾಲ ಆಳಿರಬಹುದು. ಕ್ರಿ.ಶ. ೧೨೫೦ರಲ್ಲಿ ದತ್ತಾಳುಪ ಬಳಿಯ ವೀರ ಪಾಂಡ್ಯದೇವ ಮಂಗಳೂರಿನಿಂದ ಆಳುತ್ತಾನೆ. ಇಲ್ಲಿಯ ಸುಮಾರು ೮೫ವರುಷಗಳ ಅವಧಿಯ ರಾಜಕೀಯ ಇತಿಹಾಸ ಕತ್ತಲೆಯಲ್ಲಿ ಉಳಿದಿದೆ.

         ವೀರ ಪಾಂಡ್ಯಾಳುಪೇಂದ್ರನ ಶಾಸನದಲ್ಲೂ ಆತನ ತಾಯಿಯನ್ನು ಸ್ಮರಿಸಲಾಗಿದೆ. ತಂದೆಯನ್ನಲ್ಲ:
“ ಶ್ರೀ ಮತ್ಪಟ್ಟದ ಪಿರಿಯರಸಿ ಪಟ್ಟಮಹಾದೇವಿಯ ಸುಪುತ್ರರಹ ಶ್ರೀಮತು ಪಾಂಡ್ಯ ಚಕ್ರವರ್ತಿ ಅರಿರಾಯ ಗಜಕೆಸರಿ ವೀರ ಪಾಂಡ್ಯ ದೇವಾಳುಪೇಂದ್ರ ದೇವರಸರು......ತನ್ನ ರಾಣಿ ಬಲ್ಲಮಹಾದೇವಿಯೊಂದಿಗೆ ಬಾರಹ ಕನ್ಯಾಪುರದಿಂದ ಆಳುವ ಮಾಹಿತಿ ಸಿಗುತ್ತದೆ. (SII.,ಗಿoಟ. ೨೭,ಓo .೨೧೩ , ೧೩ಣh ಛಿeಟಿಣuಡಿಥಿ’) ವೀರಪಾಂಡ್ಯದೇವಾಳುಪೇಂದ್ರನನ್ನು ಪಟ್ಟದ ಪಿರಿಯರಸಿ ಪಟ್ಟಮಹಾದೇವಿಯ ಪುತ್ರ ಎಂದಿದೆ. ಕೂರ್ಸಿಯ ಶಾಸನದಲ್ಲಿ ಕುಲಶೇಖರನ ಸೋದರಿ ಬಮ್ಮಲದೇವಿಯನ್ನು ‘ಪಟ್ಟಮಹಾದೇವಿ’ ಎನ್ನಲಾಗಿದೆ. ಕ್ರಿ.ಶ. ೧೨೯೨ರ ಶಾಸನದಲ್ಲಿಯೂ ನಾಗದೇವರಸನನ್ನು ‘ಪಿರಿಯರಸಿ ಬಲ್ಲಮಹಾದೇವಿಯ ಪುತ್ರ’ ಎನ್ನಲಾಗಿದೆ.   . (SII.,Vol. 27,No .213 , 13th century’)ಕ್ರಿ.ಶ. ೧೩೦೨ರಕ್ಕೆ ವೀರಪಾಂಡ್ಯದೇವಾಳುಪೇಂದ್ರನ ಅಳಿಯ ಬಂಕಿದೇವ ಬಂಕಿದೇವಾಳುಪೇಂದ್ರನಾಗಿ ರಾಜಧಾನಿ ಮಂಗಳಾಪುರದಿಂದ ಆಳುತ್ತಾನೆ. ಕುಲಸೇಖರ ಮಂಗಳಾಪುರದರಮನೆಯ ಮೊಗಸಾಲೆಯಲ್ಲಿ ಕುಳಿತು ನಡೆಸಿದ ಒಡ್ಡೋಲಗವನ್ನು ಈತ ನಡೆಸುತ್ತಾನೆ. (ಕೆ.ವಿ ರಮೇಶ ಮತ್ತು ಎಂ.ಜೆ.ಶರ್ಮ ತುಳುನಾಡಿನ ಶಾಸನಗಳು. ಸಂ .೪೫) ಈತನ ಅಕ್ಕ ವೋಚಮಲಾ ದೇವಿಗೆ ಈತ ವಾಮನನ ಕೈಯಲ್ಲಿ ನೀರದೇವಾಲಯದಲ್ಲಿ ಪಿಂಡಪ್ರಧಾನ ಮಾಡಿಸುತ್ತಾನೆ. ಹೀಗಾಗಿ ಬಂಕಿದೇವನಿಗೆ ವಾಮನನೆಂಬ ಅಳಿಯನಿದ್ದ ಎಂದಾಗುತ್ತದೆ. ಸತ್ತವರ ಗಂಡು ಮಕ್ಕಳ ಕೈಯಲ್ಲಿ ಪಿಂಡ ಪ್ರಧಾನ ಮಾಡುವುದು ಪದ್ಧತಿ. ಹಾಗಿದ್ದಲ್ಲಿ ವೋಚಮಲಾ ದೇವಿಗೆ ವೋಮನ ಎಂಬ ಮಗನಿದ್ದ. ಆತ ಬಂಕಿದೇವನ ಉತ್ತರಾಧಿಕಾರಿಯಾಗಬೇಕಾದವನು.

         ಮುಂದೆ ಬರುವ ಅರಸರ ಸಾಮಾಜಿಕ ಪದ್ಧತಿಯಲ್ಲಿಯೂ ಮಾತೃ ವಂಶೀಯ, ಮಾತೃಪ್ರಧಾನ, ಅಳಿಯ ಸಂತಾನ ಪದ್ಧತಿಯನ್ನು ಕಾಣಬಹುದು.  ‘ಕ್ರಿ.ಶ. ೧೪೫೫ರ ಶಾಸನವು ‘ಶ್ರೀ ಚಂದಲ ದೇವಿಯರ ಕುಮಾರ ಅರಿರಾಯ ಗಂಡರಧಾವಣಿ ಶ್ರೀ ವೀರ ಪಾಂಡ್ಯಪ್ಪೊಡೆಯರು.’ (ಕೆ.ವಿ.ರಮೆಶ ಮತ್ತು ಎಂ ಜೆ. ಶರ್ಮ ತುಳುನಾಡಿನ ಶಾಸನಗಳು ಸಂ. ೮೬.)ಎಂಬಲ್ಲಿ  ತಾಯಿಯೇ ಪ್ರಧಾನಳಾಗುತ್ತಾಳೆ. ಕಿರಿತಾಯಿಗೂ ಇಲ್ಲಿ ಅಧಿಕಾರ ಇರುತ್ತದೆ. ಕ್ರಿ.ಶ. ೧೫೪೬ರ ಕುಂದಾಪುರ ತಾಲೂಕಿನ ಹಾಡುವಳ್ಳಿ ಶಾಸನದಲ್ಲಿ “....ಚಿಕ್ಕ ಅರಮನೆಯ  ಕಿರಿತಾಯಿ ಬಸವನಾಯಕತಿ ಹಾಕಿಸಿದ ಕಲ್ಲು ಎಂದಿದೆ. (ಡಾ| ಪಿ.ಎನ್. ನರಸಿಂಹಮೂರ್ತಿ, ಕುಂದಾನಾಡಿನ ಶಾಸನಗಳು. ಸಂ.೫೬ ) ‘ಶ್ರೀ ಮದ್ಭೈರವರಾಜ ತುಂಗ ಭಗಿನೀ ಶ್ರೀ ಗುಮ್ಮಟಾಂಬಸುತ ..’.ಎಂದು ಭೈರವರಾಜನ ಅಳಿಯ ತನ್ನನ್ನು ಕರೆದುಕೊಳ್ಳುತ್ತಾನೆ. (ಕೆ.ವಿ.ರಮೆಶ ಮತ್ತು ಎಂ ಜೆ. ಶರ್ಮ ತುಳುನಾಡಿನ ಶಾಸನಗಳು ಸಂ. ೮೮ ) ಅನೇಕ ಶಾಸನಗಳು ತಾಯಿಯ ಮೂಲಕವೇ ಅರಸನನ್ನು ಹೆಸರಿಸುತ್ತವೆ.  

         ಪಿತೃವಂಶೀಯ ವ್ಯವಸ್ಥೆಯಲ್ಲಿ ತಂದೆಯ ಅನಂತರ ಮಗನ ಆಳ್ವಿಕೆಯಲ್ಲಿಯೇ ಆ ರಾಜ್ಯ ಉಳಿದು ಬರುತ್ತದೆಯೆಂದು ಹೇಳಲಾಗದು. ಅಂತಯೇ ಮಾತೃವಂಶೀಯ ವ್ಯವಸ್ಥೆಯಲ್ಲಿ  ಸೋದರಮಾವನ ಅನಂತರ ಸೋದರಳಿಯನಲ್ಲಿ  ಮಾತ್ರವೇ ಉಳಿಯುವುದು ಎಲ್ಲಾ ಸಮದಭ್ದಲ್ಲೂ ಸಂಭವವಲ್ಲ. ರಾಜ್ಯಕ್ಕಾಗಿಯೇ ಯುದ್ಧನಡೆಯುತ್ತಿರುವಾಗ ಇಂತಹ ನಿರೀಕ್ಷೆಗಳೇ ತಪ್ಪಾಗುತ್ತವೆ. ಎಂಟನೆಯ ಶತಮಾನದಲ್ಲಿ ಉದ್ಯಾವರದ ಆಳುಪ ಸಿಂಹಾಸನಕ್ಕಾಗಿ ರಣಸಾಗರ, ಚಿತ್ರವಾಹನ, ಶ್ವೇತವಾಹನ ಇವರೊಳಗೆ ನಡೆದ ಯುದ್ಧವನ್ನೂ ಗಮನಿಸಬಹುದು. ಹಿಂದಿನ ಅರಸರ ಉತ್ತರಾಧಿಕಾರಿಯಾಗಿ ಬಂದವರು ಮಗನೇ ಎಂದು ತುಳುನಾಡಿನ ಯಾವ ಶಾಸನಗಳಲ್ಲೂ ಸ್ಪಷ್ಟ ಮಾಹಿತಿ ಇಲ್ಲ. ಹೀಗಿರುವಾಗ ನಾನು ಮೇಲೆ ತೋರಿಸಿದ ಮಾತೃಪ್ರಧಾನ ಪದ್ಧತಿಯನ್ನು ಆಧಾರಕ್ಕೆ ತೆಗೆದುಕೊಳ್ಳಬೇಕಾಗುತ್ತದೆ. ಸಿಂಹಾಸನದ ಉಪನಾಮ ಪಟ್ಟಾಭಿಷೇಕ ಆದವರಿಗೆ ಅಧಿಕೃತವಾಗಿ ನೀಡುವ ಪಟ್ಟದ ಹೆಸರು. ಅಲ್ಲಿ ಮಗ ಕೂತರೂ ಅಳಿಯ ಕೂತರೂ ಅಥವಾ ಇವರಿಬ್ಬರಿಗೂ ಸಂಬಂಧ ಪಡದ ಮೂರನೆಯ ವ್ಯಕ್ತಿ ಕೂತರೂ ಆತ ಸಿಂಹಾಸನದ ಪೂರ್ವ ಪರಂಪರೆಯ ಹೆಸರನ್ನು  ಪಡೆಯುತ್ತಾನೆ.

ಪಿತೃಪ್ರಧಾನ, ಪಿತೃವಂಶೀಯ ವ್ಯವಸ್ಥೆಯು ಮಾತೃಪ್ರಧಾನ, ಮಾತೃವಂಶೀಯ ವ್ಯವಸ್ಥೆಯಾಗಿ ಪಲ್ಲಟಗೊಂಡ ಉದಾಹರಣೆ ಇಡಿಯ ವಿಶ್ವದಲ್ಲಿ ಎಲ್ಲೂ ಕಾಣದು ಎನ್ನುತ್ತಾರೆ ಮಾನವ ಶಾಸ್ತ್ರಜ್ಷರು.  ಮಾತೃಪ್ರಧಾನ, ಮಾತೃವಂಶೀಯ ವ್ಯವಸ್ಥೆಯೇ ವಿಶ್ವದ ಮೊದಲ ಸಮಾಜ ವ್ಯವಸ್ಥೆಯಾಗಿದ್ದು ಅದು ಪಿತೃಪ್ರಧಾನತೆಗೆ ಪರಿವರ್ತನೆಗೊಂಡುದೇ ಹೆಚ್ಚು ಅಥವಾ ಇವೆರಡರ ಮಧ್ಯೆ ಇತ್ತು ಎನ್ನುವುದು ಅವರ ಅಭಿಪ್ರಾಯ.



ಇಂದಿರಾ ಹೆಗ್ಗಡೆ
ನಂ ೬ ಕೃಷ್ಣಾ ರೆಸಿಡೆನ್ಸಿ ೪ನೆಯ ತಿರುವು,ಅಮರಜ್ಯೋತಿ ನಗರ
ವಿಜಯನಗರ ಬೆಂಗಳೂರು ೫೬೦೦೪೦
 ೦೮೦-೨೩೩೮೧೬೩೩, ೯೮೪೫೫೭೭೫೫೩







                              
        




Friday, July 26, 2013

ಇತಿಹಾಸಕಾರರು- ಪ್ರೊ. ಜಿ.ಎಸ್‌... ದೀಕ್ಷಿತ್‌

ಎಚ್.ಶೇಷಗಿರಿರಾವ್

ಪ್ರೊಫೆಸರ್ ಗಿರೀಶ್ ಶ್ರೀಧರ ದೀಕ್ಷಿತರು:
http://kendasampige.com/images/trans.gif

http://kendasampige.com/images/trans.gif








ಸನಾತನ ಭಾರತೀಯ ಸಂಪ್ರದಾಯದ ಪ್ರಕಾರ " ಗುರುದೇವೋ ಮಹೇಶ್ವರಃ"" ಅಂದರೆ ಗುರುವೇ ದೇವರು. ಪುರಾತನ ಕಾಲದಲ್ಲಿ ಗುರು ಎಂದರೆ ಅರಿವು, ಕಲಿಕೆ ಮತ್ತು ವಿದ್ವತ್ತಿನ ಪ್ರತಿರೂಪ. ಆದರೆ ಇಂಥಹ ಗುರುತ್ವವನ್ನು ಪಡೆಯುವುದು ಸಾಮಾನ್ಯ ಸಾಧನೆ ಅಲ್ಲ. ಅದನ್ನು ದೀರ್ಘಕಾಲದ ಅಧ್ಯಯನ,ತಪ ,ಸಂಯಮ ಮತ್ತು ಕಠಿನ ಪರಿಶ್ರಮದಿಂದ ಪಡೆಯಲು ಸಾಧ್ಯ. ಈ ರೀತಿಯ ಗುರುಗಳು ನಿಸ್ವಾರ್ಥದಿಂದ ತಮ್ಮ ಜ್ಞಾನವನ್ನು ಅರ್ಹರಾದ ಎಲ್ಲರಿಗೂ ಧಾರೆ ಎರೆಯುವರು. ಇಂಥಹ ಗುರುಗಳ ಮಾರ್ಗದರ್ಶನವೇ ದೊಡ್ಡ ಸೌಭಾಗ್ಯ. ನಾನು ನನ್ನ ಕುಟುಂಬ, ಎಂದು ದುಡಿದು ಹಣ್ಣಾಗುವವರು ಬಹಳ. ಏನೇ ಕೆಲಸಮಾಡಿದರೂ ನನಗೇನು ಸಿಗುವುದು ಎಂದು ಕೇಳುವವರು ಹೆಚ್ಚು. ಅರ್ಥಪೂರ್ಣ ಬದುಕನ್ನು ವ್ಯರ್ಥಮಾಡಿಕೊಳ್ಳುವವರು ಬಹಳ. ನನ್ನಿಂದ ಅನ್ಯರಿಗೆ ಏನು ಅನುಕೂಲ ಮಾಡಿಕೊಡಲಿ ಎಂದು ಸದಾ ತುಡಿಯುವವರು ಕಡಿಮೆ. ಆಧುನಿಕ ಕಾಲದಲ್ಲಿ ಇಂಥಹ ಗುರುಗಳು ವಿರಳಾತಿ ವಿರಳ. ಅಂಥಹ ವಿರಳರಲ್ಲಿ ಪ್ರಮುಖರು ಪ್ರೊ. ಜಿ ಎಸ್. ದೀಕ್ಷಿತ್.

 ಪೂರ್ಣ ಹೆಸರು ಜಿ.ಎಸ್.ದೀಕ್ಷಿತ್ (ಗಿರೀಶ್ ಶ್ರೀಧರ ದೀಕ್ಷಿತ್) ಕರ್ನಾಟಕದ ಹೆಸರಾಂತ ಇತಿಹಾಸ ತಜ್ಞರು. ಭಾರತೀಯ ಮತ್ತು ಪಾಶ್ಚಾತ್ಯ ಇತಿಹಾಸದಲ್ಲಿ ಪರಿಣಿತರು. ಅವರ ಹುಟ್ಟೂರು ಚಿತ್ರದುರ್ಗ ಜಿಲ್ಲೆಯ ಹರಿಹರ. ಅವರದು ಸಂಪ್ರದಾಯಸ್ಥ ಕುಟುಂಬ. ಹೆಸರಾಂತ ವಿದ್ವಾಂಸರಾದ ಅಪ್ಪಯ್ಯ ದೀಕ್ಷಿತರ ಮನೆತನದವರು. ಅವರು .ಜನಿಸಿದುದು ೧೦ನೆಯ ಜನವರಿ೧೯೧೧ ರಂದು. ತಂದೆ ಗಿರಿರಾಮ ದೀಕ್ಷಿತರು ಅವರು ಅಂಥಹ ಸ್ಥಿತಿವಂತರಲ್ಲ. ಮಗನಿಗೆ ಶಿಕ್ಷಣ ಕೊಡಿಸುವುದೂ ಅವರಿಗೆ ಕಠಿಣ ಎನಿಸಿತಿತ್ತು. ಪ್ರಾಥಮಿಕ ಶಿಕ್ಷಣ ಹರಿಹರದ ಸರ್ಕಾರಿ ಶಾಲೆಯಲ್ಲಿ ಆಯಿತು ನಂತರ ಹೈಸ್ಕೂಲ್ ಶಿಕ್ಷಣಕ್ಕಾಗಿ ದಾವಣಗೆರೆಗೆ ಹೋದರು. ಕಾರಣ ಅಲ್ಲಿ ಊಟ ವಸತಿ ಉಚಿತವಾಗಿ ಲಭ್ಯವಾಗಿತ್ತು. ಅಲ್ಲಿಂದ ಪದವಿಗಾಗಿ ಶಿವಮೊಗ್ಗದಲ್ಲಿ ಕೆಲ ಕಾಲ ಕಳೆದ ನಂತರ ಕೊನೆಗೆ ಮೈಸೂರು ಮಹಾರಾಜಾ ಕಾಲೇಜು ಅವರ ವಿದ್ಯಾತಾಣ ವಾಯಿತು .೧೯೩೨ ರಲ್ಲಿ ಪದವಿ ಪಡೆದರು. ಬಹಳ ತೀಕ್ಷ್ಣ ಮತಿ. ಎಷ್ಟೆಲ್ಲಾ ಕಷ್ಟಗಳ ಮಧ್ಯ ರಾಜ್ಯದಲ್ಲಿ ೧೧ನೆಯ ಸ್ಥಾನ ಪಡೆದರು ಮತ್ತು ಇತಿಹಾಸ ವಿಷಯದಲ್ಲಿ ಪ್ರಪ್ರಥಮರಾದರು. .್
ಆಗ ಶಿಕ್ಷಣ ಸೌಲಭ್ಯ ಮಿತವಾಗಿದ್ದ ಸಮಯ. ಆಗಲ್ಲೂ ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಿದರು. ಆದರೆ ಉದ್ಯೋಗ ಅವಕಾಶಗಳೂ ವಿರಳ. ಕೆಲಸಕ್ಕಾಗಿ ಊರಿಂದ ಊರಿಗೆ ಅಲೆದಾಟ ಮೊದಲಾಯಿತು. ಮೈಸೂರು ರಾಜ್ಯದಲ್ಲಿ ಅವಕಾಶವೇ ಸಿಕ್ಕಲಿಲ್ಲ . ಆಗ ಮದ್ರಾಸ್ ಪ್ರಾಂತ್ಯದ ಭಾಗವಾಗಿದ್ದ ಈಗಿನ ಒರಿಸ್ಸಾದ ಗಂಜಾಂ ಕಾಲೇಜಿನಲ್ಲಿ ಕೆಲಸ ದೊರೆಯಿತು. ಪಾರ್ಲ ಕಿಮೇದಿ ಆಗ ಒಂದು ಚಿಕ್ಕ ಸಂಸ್ಥಾನ. ಇವರ ಆಕರ್ಷಕ ವ್ಯಕ್ತಿತ್ವ ಮತ್ತು ಕ್ರೀಡಾಸಕ್ತಿಯಯ ಫಲವಾಗಿ ಅಲ್ಲಿನ ರಾಜ ಕುಟುಂದೊಡನೆ ಗೆಳೆತನ ಬೆಳೆಯಿತು. ಇವರು ಉತ್ತಮ ಟೆನ್ನಿಸ್ ಪಟುವಾಗಿದ್ದರು .ಅದರಿಂದಾಗಿ ರಾಜ ಕುಮಾರನಿಗೆ ಹತ್ತಿರದವರಾದರು. ದಿನವೂ ಅವರೊಡನೆ ಟೆನ್ನಿಸ್ಆಡಲು ಅರಸರು ದೀಕ್ಷಿತರು ಕೆಲಸ ಮುಗಿಸಿ ಕಾಲೇಜಿನಿಂದ ಬರುವುದನ್ನೇ ಕಾಯುತಿದ್ದರು. ಅದರಿಂದ ಅವರ ಜೀವನ ಶೈಲಿಯೇ ಬದಲಾಯಿತು. ಉಡುಗೆತೊಡುಗೆಯಲ್ಲಿ ಅಚ್ಚುಕಟ್ಟುತನ, ಸಮಯಪ್ರಜ್ಞೆ ಮೈ ಗೂಡಿತು. ಮಾತು ಸ್ಪಷ್ಟ, ನಿಖರ ಮತ್ತು ಗಾಂಭೀರ್ಯದಿಂದ ಕೂಡಿತು. ಅವರ ಅರಸರೊಡಗಿನ ಆತ್ಮೀಯತೆಯ ಫಲವಾಗಿ ಅಲ್ಲಿ ನಡೆದ ಇಂಡಿಯನ್ ಹಿಸ್ಟರಿ ೨ನೇ ಸಮ್ಮೇಳನದಲ್ಲಿ, ಸಕ್ರಿಯವಾಗಿ ಭಾಗವಹಿಸುವ ಅವಕಾಶ ಸಿಕ್ಕಿತು." ಪೂರ್ವ ಗಂಗರ ರಾಜಧಾನಿ" ಪ್ರಬಂಧ ಮಂಡನೆಗೆ ಅವಕಾಶ ದೊರೆಯಿತು. ಜೀವನ ಸುಗಮವಾಗಿ ಸಾಗುತಿತ್ತು, ಹಗಲಿನಲ್ಲಿ ಕಾಲೇಜು ಕೆಲಸ ಸಂಜೆಯ ನಂತರ ಟೆನ್ನಿಸ್ಆಟ. ಜೀವನದಲ್ಲಿ ಯಾವುದಕ್ಕೂ ಕೊರತೆ ಇರಲಿಲ್ಲ. ಬಾಳು ಸುಗಮವಾಗಿ ಸಾಗುತಿತ್ತು.ಆದರೆ ತಾಯಿ ನೆಲದ ಸೆಳೆತ ಅಧಿಕವಾಯಿತು. ಇದ್ದ ಕೆಲಸವನ್ನು ಬಿಟ್ಟು ೧೯೩೯ ರಲ್ಲಿ ಮೈಸೂರಿಗೆ ವಾಪಸ್ಸು. ಬಂದರು. ಮತ್ತೆ ಕೆಲಸದ ಬೇಟೆ ಪ್ರಾರಂಭಿಸಿದರು. ಮೈಸೂರು ಪ್ರಾಚ್ಯವಸ್ತು ಇಲಾಖೆಯಲ್ಲಿ ತಾತ್ಕಾಲಿಕ ಉದ್ಯೋಗ ದೊರೆಯಿತು. ಖ್ಯಾತ ಪುರಾತತ್ತ್ವ ತಜ್ಞರಾದ ಎಂ. ಎಚ್. ಕೃಷ್ಣ ರ ಮಾರ್ಗದರ್ಶನದಲ್ಲಿ ಉತ್ಖನನದ ಕೆಲಸದಲ್ಲಿ ತೊಡಗಿದರು . ಚಿತ್ರದುರ್ಗ ಜಿಲ್ಲೆಯ ಬ್ರಹ್ಮ ಗಿರಿ ಮತ್ತು ಚಂದ್ರವಳ್ಳಿಯ ಉತ್ಖನನದಲ್ಲಿ ನೆರವು ನೀಡಿದರು. ಪ್ರಾಚೀನ ಶಿಲಾಯುಗದ ಅವಶೇಷಗಳ ಶೋಧನೆಯ ಕಾರ್ಯದಲ್ಲಿ ತೊಡಗಿಸಿಕೊಂಡರು.
ಆದರೆ ಕಡಿಮೆ ಆದಾಯದಲ್ಲಿ ಜೀವನ ನಡೆಯುವುದ ಅಷ್ಟು ಸುಲಭವಾಗಿರಲಿಲ್ಲ. ಅದಕ್ಕೆ ಪೂರ್ಣಾವಧಿ ಉದ್ಯೋಗಕ್ಕೆ ಪ್ರಯತ್ನ ಮಾಡುತ್ತಲೇ ಇದ್ದರು. ಮತ್ತೆ ಮಹಾರಾಷ್ಟ್ರದ ಸಾಂಗ್ಲಿಯ,ಕಾಲೇಜಿನಲ್ಲಿ ಅಧ್ಯಾಪಕ ಉದ್ಯೋಗ ದೊರೆಯಿತು. ಅಲ್ಲಿ ಶ್ರೀ ಗೋಕಾಕ. ರಂಶ್ರೀ.ಮುಗುಳಿ ,ಡಾ. ಎಸ್ ಆರ್.ಶರ್ಮರ ಜೊತೆ ಕೆಲಸ ಮಾಡುವ ಅವಕಾಶ ದೊರೆಯಿತು. ವಿಲ್ಲಿಂಗ್ಟನ್ ಕಾಲೇಜಿನಲ್ಲಿ ೧೬ವರ್ಷ ನಿರಂತರ ಸೇವೆಯ ನಂತರ ಫರ್ಗ್ಯೂಸನ್ ಕಾಲೇಜಿಗೆ ವರ್ಗವಾಯಿತು. ಪೂನಾ ವಿಶ್ವ ವಿದ್ಯಾಲಯ.೧೯೪೯ ರಲ್ಲಿ ಸ್ಥಾಪನೆಯಾದಾಗ ಇವರ ಪಾಲಿಗೆ ಇತಿಹಾಸ ವಿಭಾಗ ರೂಪಿಸುವ ಹೊಣೆ ಬಂದಿತು. ಇವರೇ ಸ್ನಾತಕೋತ್ತರ ತರಗತಿಗಳ ಪಠ್ಯ ಕ್ರಮದ ರಚನೆ ಮತ್ತು ಸ್ನಾತಕೋತ್ತರ ತರಗತಿಗಳಿಗೆ ಬೋಧನೆಯ ಕೆಲಸವನ್ನೂ ಮಾಡಿದರು.ಅಲ್ಲಿ ಆರು ವರ್ಷ ಕಾರ್ಯನಿರ್ವಹಿಸಿದರು.
೧೯೫೫ ರಲ್ಲಿ ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯ ಸ್ಥಾಪನೆಯಾದಾಗ ಇತಿಹಾಸ ವಿಭಾಗ ರೂಪಿಸುವಲ್ಲಿ ಡಾ. ಭಾಸ್ಕರಾನಂದ ಸಾಲತ್ತೂರ್ ಅವರಿಗೆ ನೆರವಾಗಲು ಬಂದರು. ಅಲ್ಲಿಂದಲೇ ಪಿಎಚ್.ಡಿ ಯನ್ನು ಪಡೆದರು .ಧಾರವಾಡದ ಕರ್ನಾಟಕ ಕಾಲೇಜು ವಿಶ್ವ ವಿದ್ಯಾಲಯದ ನೇರ ಕಕ್ಷೆಯಲ್ಲಿನ ಕಾಲೇಜು. ಸ್ನಾತಕೋತ್ತರ ವಿಭಾಗದಲ್ಲಿ ಕಲಿಸುವ ಪ್ರಾಧ್ಯಾಪಕರೂ ಪದವಿ ವಿದ್ಯಾರ್ಥಿಗಳಿಗೂ ಕಲಿಸುವುದು ರೂಢಿ. ಅಲ್ಲಿ ಬ್ರಿಟಿಷ್ ಸಂವಿಧಾನದ ಚರಿತ್ರೆ ಆರಿಸಿಕೊಂಡ ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳಿಗೆ ಹಾಗಾಗಿ ವಿದ್ವಾಂಸರ ನಿಕಟ ಸಂಪರ್ಕ ಅವರಿಗೆ ದೊರೆಯುತಿತ್ತು. ಕರ್ನಾಟಕ ಕಾಲೇಜಿನಲ್ಲಿ ಕಲಿಯುವ ಪದವಿ ವಿದ್ಯಾರ್ಥಿಗಳಿಗೂ ಡಾ. ಜಿ.ಎಸ್ ದೀಕ್ಷಿತರ ಪಾಠಕೇಳುವ ಭಾಗ್ಯ ದೊರಕುತಿತ್ತು.
ಇವರದು ಆಕರ್ಷಕ ವ್ಯಕ್ತಿತ್ವ. ಮೊದಲೇ ಕ್ರೀಡಾಪಟು ಉತ್ತಮ ದೇಹ ಧಾರ್ಡ್ಯ. ಉಡುಪು ಸದಾ ಟಿಪ್ಟಾಪ್. ಹೊರಗೆ ಹೊರಟರೆ ಫೂಲ್ ಸೂಟ್. ಸಮಯ ಪ್ರಜ್ಞೆ ಬಹಳ. ಜೇಬಿನಲ್ಲಿನ ಸರಪಳಿ ಇದ್ದ ಗಡಿಯಾರನ್ನು ತರಗತಿಗೆ ಬಂದೊಡನೆ ಮೇಜಿನ ಮೇಲೆ ಇಟ್ಟು ಠಾಕೋ ಠೀಕ್ ಸಮಯಕ್ಕೆ ಸರಿಯಾಗಿ ಪಾಠ. ಒಂದು ನಿಮಿಷವೂ ಅಪವ್ಯಯಾಗಕೂಡದು. ವಿಷಯದ ವಿವರವಾದ ವಿಶ್ಲೇಷಣೆ. ಮಧ್ಯಮಧ್ಯ ತಿಳಿ ಹಾಸ್ಯ. ಹಾಗಾಗಿ ವಿದ್ಯಾರ್ಥಿಗಳ ನೆಚ್ಚಿನ ಗುರುವಾದರು. ಇತಿಹಾಸ ವಿಭಾಗದ ಬೆಳವಣಿಗೆಗೆ ೧೯೭೧ರವರೆಗೆ ಅವರೇ ಕಾರಣರಾದರು. ಸಾಲತ್ತೂರ್ ನಿವೃತ್ತರಾದಾಗ ವಿಭಾಗ ಮುಖ್ಯಸ್ಥರಾಗಿ ಮುನ್ನೆಡಸಿದರು. ಅವರು ಬರಿ ತರಗತಿಯಲ್ಲಿ ಉಪನ್ಯಾಸ ಮಾಡಿ ಹೋಗುವವರಲ್ಲ. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಮಾತ್ರವಲ್ಲ, ಅವರ ವೃತ್ತಿ ಜೀವನ ಮತ್ತು ಅನೇಕರ ವೈಯುಕ್ತಿಕ ಬದುಕಿನಲ್ಲೂ ಮಾರ್ಗದರ್ಶಕರಾಗಿರುತಿದ್ದರು ಮತ್ತು ದುಃಖದ ಸಮಯದಲ್ಲಿ ಬಂಡೆಗಲ್ಲಿನಂತೆ ದೃಢವಾದ ಆಸರೆ ಕೊಡುತಿದ್ದರು.ಅವರ ಶಿಷ್ಯ ವಾತ್ಸಲ್ಯ ದೊಡ್ಡದು ತಮ್ಮಸಂಪರ್ಕಕ್ಕೆ ಬಂದ ಎಲ್ಲ ವಿದ್ಯಾರ್ಥಿಗಳ ಕಷ್ಟ ಸುಖಗಳಲ್ಲಿ ಭಾಗಿಯಾಗುವರು ಮತ್ತು ಅವರ ಜೀವನದಲ್ಲಿ ನೆಲೆಗೊಳ್ಳಲು ಸಹಾಯ ಹಸ್ತ ಚಾಚುತಿದ್ದರು. ದೀಕ್ಷಿತ್ ಇತಿಹಾಸದ ಪ್ರತಿಭಾನ್ವಿತ ಪ್ರಾಧ್ಯಾಪಕ ಮತ್ತು ಶ್ರೇಷ್ಠ ಸಂಶೋಧಕರು. ವಿದ್ಯಾರ್ಥಿಗಳಿಗೆ ತರಗತಿಯಲ್ಲಿ ಪಾಠ ಮಾಡಿ ಕೈತೊಳೆದುಕೊಳ್ಳವುದು ಅವರ ಜಾಯಮಾನವಲ್ಲ. ಅವರ ಜೀವನದುದ್ದಕ್ಕೂ ಎಲ್ಲೆ ಇರಲಿ ಪತ್ರದ ಮೂಲಕವಾದರೂ ಮಾಹಿತಿ ನೀಡಿ ಮಾರ್ಗದರ್ಶನ ಮಾಡಿದ ಹಿರಿಯ ಜೀವ. ಹಿರಿಯ ವಿದ್ವಾಂಸ ಎ.ಕೆ. ಶಾಸ್ತ್ರಿಗಳು ತಮಗೆ ಸುಮಾರು ೧೦೦ಕ್ಕೂ ಹೆಚ್ಚು ಪತ್ರ ಬರೆದಿರುವರುಎಂದು ತಿಳಿಸಿರುವುರು. ಡಾ. ಸೂರ್ಯನಾಥ್ ಕಾಮತ್ ಜೀವನದಲ್ಲಿ ನೆಲಗೊಳ್ಳಲು ಕಾರಣ ಕರ್ತರು. ಡಾ.ಜ್ಯೋತ್ಸ್ನಾ ಕಾಮತ್ ಗೆ ಕೊನೆಯವರೆಗ ಮಾರ್ಗದರ್ಶನ ಮಾಡಿದರು ಅವರ ಮಾರ್ಗದರ್ಶನದಲ್ಲಿ ೧೯ ವಿದ್ಯಾರ್ಥಿಗಳು ಸಂಶೋಧನೆ ಮಾಡಿ ಪಿಎಚ್.ಡಿ ಪಡೆದಿರುವರು. ಅವರು ಉತ್ತಮ ಸಂಘಟಕರು.ಕರ್ನಾಟಕ ಇತಿಹಾಸ ಅಕಾಡಮಿ ಮತ್ತು ಇಂಡಿಯನ್ ಹಿಸ್ಟರಿ ಕಾಂಗ್ರೆಸ್ ಅವರ ಕನಸಿನ ಕೂಸುಗಳು.
ಪ್ರೊ.ದೀಕ್ಷಿತರು ಮಧ್ಯಕಾಲೀನ ಇತಿಹಾಸದಲ್ಲಿ ಅಧಿಕಾರಯುತವಾಗಿ ಮಾತನಾಡ ಬಲ್ಲವರಾಗಿದ್ದರು ಪ್ರೊ. ದೀಕ್ಷಿತರು ಇತಿಹಾಸವನ್ನು ಸಮಗ್ರವಾಗಿ ಒಂದು ಘಟಕವಾಗಿ ಪರಿಗಣಿಸುತಿದ್ದರು. ಅವರ ಅಮೇರಿಕನ್ಇತಿಹಾಸದ ಮತ್ತು ಕೆಳದಿರಾಜ್ಯಗಳ ಕುರಿತಾದ ಕನ್ನಡದ ಎರಡು ಕೃತಿಗಳು ಅಧಿಕೃತ ಪಠ್ಯ ಪುಸ್ತಕಗಳೆನ್ನಬಹುದು. ವಿಶ್ವ ರಾಜಕೀಯದಲ್ಲಿ ಅರಬ್ ರಾಷ್ಟ್ರಗಳ ಪಾತ್ರವನ್ನು ಮನಗಂಡು ತೈಲ ರಾಜಕೀಯ ಮೊದಲಾಗುವ ಮುಂಚೆಯೇ, ಸ್ನಾತಕೋತ್ತರ ಅಧ್ಯಯನದಲ್ಲಿ ಮಧ್ಯಪ್ರಾಚ್ಯದ ಇತಿಹಾಸವನ್ನು ಪಠ್ಯ ಕ್ರಮದಲ್ಲಿ ಸೇರಿಸಿದ್ದರು. ಅವರಿಗೆ ವಿಜಯನಗರದ ಇತಿಹಾಸದಷ್ಟೇ ಚೀನಾ ಮತ್ತು ಜಪಾನುಗಳ ಇತಿಹಾಸವೂ ಕೈವಶವಾಗಿತ್ತು. ೧೯೬೧ರಲ್ಲಿ ಹೆಚ್ಚಿನ ಅಧ್ಯಯನಕ್ಕೆ ವಿದೇಶ ಪ್ರವಾಸಮಾಡಿದರು. ಫುಲ್ಬ್ರೈಟ್ ವಿದ್ಯಾರ್ಥಿ ವೇತನ ಪಡೆದು ಅಮೇರಿಕಾಗೆ ಹೋದರು.
ಮಧ್ಯಕಾಲೀನ ಕರ್ನಾಟಕ ಇತಿಹಾಸ,ಬೌಧ್ಧ ಧರ್ಮದ ಕೊಡುಗೆ, ಆಂಧ್ರ ಅರಸರ ಕೊಡುಗೆ. ಮೈನರ್ ಕಿಂಗ್ಡಮ್ಸ್ ಅಂಡ್ ಮೇಕರ್ ಡೈನಾಸ್ಟೀಸ್-ಕೆಳದಿ- ಭಾರತೀಯ ಇತಿಹಾಸ ಕುರಿತು ೬೦ ಲೇಖನಗಳು ಬರೆದಿರುವರು ಅದರಲ್ಲಿ ೪೬ ಕನ್ನಡ , ೧೪ ಇಂಗ್ಲಿಷ್ ನಲ್ಲಿವೆ. ೧೨ ವ್ಯಕ್ತಿಚಿತ್ರಗಳನ್ನು ಬರೆದಿರುವರು.
ಶಾಸನ ಅಧ್ಯಯನ-೧೮೭೨ ರಲ್ಲಿ , ಕೊಡೂರು- ಬೆಳಗಾಂ ಜಿಲ್ಲೆಗಳ ಕನ್ನಡ ಶಾಸನಗಳು ಪ್ರಕಟ-೧೯೭೩-೯೨ ರ ತನಕದ ೧೯೬ ದಾಖಲೆಗಳ ಪ್ರಕಟನೆಗೆ ಕಾರಣರಾದರು., ಇಂಡಿಯನ್ ಆಂಟಿಕ್ವರಿ ಜರ್ನಲ್ ಗೆ ಸತತ ಬರವಣಿಗೆ ಮಾಡುತಿದ್ದರು . ಕೆಲವು ಸಮಯ ಅದರ ಸಂಪಾದಕೀಯ ಮಂಡಳಿಯಲ್ಲಿ ಕಾರ್ಯ ನಿರ್ವಹಿಸಿದರು. ಬಾದಾಮಿ ಚಾಲುಕ್ಯರ ಇತಿಹಾಸ,ಐಹೊಳೆ ಶಾಸನ, ಮಹಾಕೂಟದ ಸ್ತಂಭ ಶಾಸನ, ರಾಷ್ಟ್ರಕೂಟ ನಾಣ್ಯ ಮತ್ತು ಸ್ಥಳನಾಮಗಳ ಬಗ್ಗೆ ಅಧ್ಯಯನ ,ಗಂಭೀರ ಸಂಶೋಧನೆ ಮಾಡಿರುವರು.ಶಿಲಾಹರರು ಕೊಂಕಣ ಮತ್ತು ಉತ್ತರಕೊಂಕಣಗಳ ಅಧ್ಯಯನ ಮಾಡಿರುವರು. ಲಾವಣಿ ಸಂಗ್ರಹವನ್ನೂ ಮಾಡಿದರು. ಕಿತ್ತೂರು ಚೆನ್ನಮ್ಮನನ್ನು ಕುರಿತ ೨೯ ಲಾವಣಿಗಳನ್ನು ಭಾಷಾಂತರ ಸಮೇತ ಪ್ರಕಟಿಸಿದರು .


ನಿವೃತ್ತಿಯ ನಂತರ ಮದ್ರಾಸ್, ಬಾಂಬೆ ಕರ್ನಾಟಕ ವಿಶ್ವ ವಿದ್ಯಾನಿಲಯಗಳಿಗೆ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು. ಅವರ ಸೇವೆ ವಿದೇಶದಲ್ಲೂ ಸಂದಿತು. ಅಮೆರಿಕಾದ ವಿಸ್ಕಾನ್ಸಿನ್ ವಿಶ್ವವಿದ್ಯಾಲಯ ಮತ್ತು ಕೆನಡಾದ ಟೊರೆಂಟೊ ವಿಶ್ವವಿದ್ಯಾಲಯಗಳಲ್ಲಿ ಸಂದರ್ಶನ ಪ್ರಾಧ್ಯಾಪಕರಾಗಿ ಸೇವೆ ಮಾಡಿದರು.
ಕೃಷ್ಣ ದೇವರಾಯ ಅವರ ಮೆಚ್ಚಿನ ಅರಸ. ಅವನನ್ನು ಕುರಿತ ಕನ್ನಡದಲ್ಲಿ ಮಾನೊಗ್ರಾಫ್ ರಚಿಸಿದರು -ಅದು ಕನ್ನಡದಲ್ಲೂ ಮಾನೊಗ್ರಾಫ್ ಬರೆದಿರುವರು..್
ಅವರ ಪ್ರಮುಖ ಕೃತಿಗಳಲ್ಲಿ ಕೆಲವು :
1.‘Local self-government in medieval Karnataka'. 1964, Karnatak University, Dharwar.
2.‘Tank irrigation in Karnataka: a historical survey', (with G.R. Kuppuswamy and S.K. Mohan), 1993, Gandhi Sahitya Sangha, Bangalore.
3.‘Early Vijayanagara: Studies in its History and Culture': Proceedings of S. Srikantayya Centenary Seminar, (with others) B.M.S. Memorial Foundation, Bangalore.
4.‘Studies in Keladi History, Seminar papers' edited by Giri. S. Dikshit), 1981, Mythic Society, Bangalore.
ಮಡದಿ ತಾರಾ ಮತ್ತು ಅವರದು ಇಬ್ಬರು ಹೆಣ್ಣುಮಕ್ಕಳಿಂದ ಕೂಡಿದ ಚಿಕ್ಕ ಮತ್ತು ಚೊಕ್ಕ ಸಂಸಾರ. ದೀಕ್ಷಿತ್ ಇಂದಿನ ಮತ್ತು ಮುಂದಿನ ಜನಾಂಗ ಸೇರಿಸುವ ಕೊಂಡಿಯ ಕಾರ್ಯ ನಿರ್ವಹಿಸಿದರು. ಅವರು 2004ಲ್ಲಿ ಇತಿಹಾಸ ಲೋಕ ಸೇರಿದರು.ತಮ್ಮ ಹಲವಾರು ವಿದ್ವಾಂಸರಾದ ಶಿಷ್ಯರ ಮನಸ್ಸಿನಲ್ಲಿ ಈಗಲೂ ನೆಲೆ ನಿಂತಿರುವರು.


Wednesday, July 24, 2013

ಶ್ರೀ ಚಾಮುಂಡೇಶ್ವರಿ ನಾಟಕ ಸಭೆ

ಶ್ರೀ ಚಾಮುಂಡೇಶ್ವರಿ ನಾಟಕ ಸಭೆ ಪ್ರಾರಂಭ ಹಾಗೂ ಅಂತ್ಯ
ಎಂ. ನರಸಿಂಹಮೂರ್ತಿ?
“ಶ್ರೀ ಚಾಮುಂಡೇಶ್ವರಿ ನಾಟಕ ಸಭೆ’’ ಎಂಬ ನಾಟಕ ಕಂಪನಿ ಸುಮಾರು ೧೯೨೦-೨೧ರ ಸಮಯದಲ್ಲಿ ಮೈಸೂರಿನಲ್ಲಿ ಪ್ರಾರಂಭವಾಯಿತು. ಇದನ್ನು ಪ್ರಾರಂಭಿಸಿದವರು ‘ಗೋಪಾರಾಜೇ ಅರಸ್’ರವರು. ಇವರು ಮೈಸೂರು ಅರಸರ ಹತ್ತಿರದ ಸಂಬಂಧಿಯಾಗಿದ್ದು ಮಹಾರಾಜರಿಗೆ ಂಆ ಅಚಿmಠಿ ಃoಜಥಿ gouಡಿಜ ಆಗಿದ್ದರು.
ಮಹಾರಾಜರು ದರ್ಬಾರಿಗೆ ಬರುವ ಸಮಯದಲ್ಲಿ ಅವರ ಹಸ್ತವನ್ನು, ನೇಮಿಸಿದ ವ್ಯಕ್ತಿ (ಆಸ್ಥಾನದಲ್ಲಿ ಪ್ರಮುಖರಾಗಿರಬೇಕು) ತಮ್ಮ ಕೈಯಲ್ಲಿ ಹಿಡಿದುಕೊಂಡು ಸಿಂಹಾಸನದ ಬಳಿಗೆ ಕರೆದೊಯ್ಯುವುದು ಸಂಪ್ರದಾಯ. ಇದಕ್ಕೆ ‘ಹಸ್ತಲಾಘವ’ ಎಂದು ಕರೆಯುತ್ತಾರೆ. ಸಿಂಹಾಸನದಲ್ಲಿ ಮಹಾರಾಜರು ಕುಳಿತ ಮೇಲೆ ಅವರ ಹಿಂದೆ ಹೋಗಿ ನಿಲ್ಲುವುದು ಈ ಎರಡು ಕಾರ್ಯವನ್ನು ‘ಸರ್ದಾರ್ ಗೋಪಾಲರಾಜೇ ಅರಸ್’ ಮಾಡುತ್ತಿದ್ದರು.
ಕುಸ್ತಿ ಸ್ಪರ್ಧೆ ನಡೆಸುವುದು, ಉತ್ತಮ ನಾಟಕಗಳನ್ನು ತಮ್ಮ ಕಂಪನಿಯ ಮೂಲಕ ಪ್ರದರ್ಶಿಸುವುದು ಇವುಗಳಲ್ಲಿ ಅತ್ಯಂತ ಆಸಕ್ತಿ ಹೊಂದಿದ್ದ ಗೋಪಾಲರಾಜೇ ಅರಸ್‌ರವರು ಈ ಎರಡು ಕಲೆಗಳನ್ನು ಬೆಳೆಸಲು ಬಹಳವಾಗಿ ಶ್ರಮಿಸಿದರು.
ನಾಟಕಕ್ಕೆ ಆಸಕ್ತಿ ತೋರುವವರು ಬೇಕು, ಕಲಾವಿದರಿಗೆ ಅನುಕೂಲವಾಗಬೇಕು, ನಾಟಕರಂಗ ಬೆಳೆಯಬೇಕು ಇದು ಅವರ ಉದ್ದೇಶವಾಗಿತ್ತು. ಇದಕ್ಕಾಗಿ ಮೈಸೂರಿನ ಸಂತೆಪೇಟೆ ವರ್ತಕರನ್ನೆಲ್ಲಾ ಸೇರಿಸಿದರು. ನಾಟಕ ಕಂಪನಿ ಮಾಡುವ ಉದ್ದೇಶ ಕಾರ್ಯಕ್ರಮ ನಡೆಸುವ ರೀತಿ ಎಲ್ಲವನ್ನು ವಿವರಿಸಿ ಅವರೆಲ್ಲರ ಸಹಕಾರ ತೆಗೆದುಕೊಂಡು ನಾಟಕ ಕಂಪನಿ (ಶ್ರೀ ಚಾಮುಂಡೇಶ್ವರಿ ನಾಟಕ ಸಭೆ) ಪ್ರಾರಂಭಿಸಿ ಹಲವಾರು ನಾಟಕಗಳು ಪ್ರದರ್ಶನವಾಗಲು ಕಾರಣರಾಗಿದ್ದರು. ಈ ಕಂಪನಿಯಲ್ಲಿ ಹಲವಾರು ಪ್ರತಿಭಾನ್ವಿತ ನಟ, ನಟಿಯರು ಇದ್ದರು. ಮುಖ್ಯರಾದವರು ಸುಬ್ಬಣ್ಣ, ಆಸ್ಥಾನದ  ಸಂಗೀತ ವಿದ್ವಾನ್ ಬಿ. ರಾಚಪ್ಪನವರು, ನಾಗೇಂದ್ರರಾಯರು.
ನಂತರ ಈ ಕಂಪನಿ ‘ಧರ್ಮರತ್ನಾಕರ ಎಂದೇ ಪ್ರಸಿದ್ಧರಾಗಿದ್ದ ನಂದಿ ಬಸಪ್ಪ ಹಾಗೂ ಮಳವಳ್ಳಿ ಸುಂದರಮ್ಮನವರ ಆಡಳಿತಕ್ಕೆ ಹೋಯಿತು. ಈ ಕಂಪನಿ ಕೆಲ ಕಾಲ ನಡೆದು ನಿಂತುಹೋಯಿತು.
ಹಿಂದೆ ನಡೆಸಿಕೊಂಡು ಬಂದಂತೆ ಬರುವ ಉತ್ಪತ್ತಿಯನ್ನು ನಟ, ನಟಿಯರಿಗೆ ಹಂಚದೆ ಅವರಿಗೆ ಮಾಹೆಯಾನ ವೇತನ ವ್ಯವಸ್ಥೆ ಮಾಡಿದುದಾಗಿ ಪ್ರಕಟಿತ ಪತ್ರದ ಮುಖೇನ ತಿಳಿದುಬರುತ್ತದೆ.
ಇದಾದ ಬಹಳ ವರ್ಷಗಳ ನಂತರ ೧೯೫೫ರ ಸಮಯದಲ್ಲಿ ಹಿಂದಿನ ಶ್ರೀ ಚಾಮುಂಡೇಶ್ವರಿ ಕಂಪನಿಯಲ್ಲಿ ಹೆಸರಾಂತ ನಟರಾಗಿದ್ದ ಬಸವರಾಜುರವರ ಸಹೋದರರ ನೇತೃತ್ವದಲ್ಲಿ ‘ಶ್ರೀ ಚಾಮುಂಡೇಶ್ವರಿ ಸಂಗೀತ ನಾಟಕ ಮಂಡಲಿ’ ಎಂಬ ನಾಮಾಂಕಿತದಲ್ಲಿ ಕಂಪನಿ ಮತ್ತೆ ಪ್ರಾರಂಭವಾಯಿತು. ಇದಕ್ಕೆ ತಿಗುಳರ ಪೇಟೆಯಲ್ಲಿದ್ದ ಪ್ರೊ. ಅಣ್ಣಯ್ಯಪ್ಪನವರ ಸಹಕಾರವಿತ್ತು.
ಆ ಸಮಯದಲ್ಲಿ ಪ್ರೊ. ಅಣ್ಣಯ್ಯಪ್ಪನವರು ಅತ್ಯಂತ ಶ್ರೀಮಂತಿಕೆಯ ನಾಟಕದ ಸೆಟ್‌ಗಳನ್ನು ಹೊಂದಿದ್ದರು. ಆ ಸಮಯದಲ್ಲೇ ಈ ಎಲ್ಲಾ ಸೆಟ್‌ಗಳಿಗೆ ೭೫೦೦ ರೂ.ಗಳು ಖರ್ಚಾಗಿತ್ತೆಂದು ಪತ್ರದ ಮುಖೇನ ತಿಳಿದುಬರುತ್ತದೆ.
‘ಶ್ರೀ ಚಾಮುಂಡೇಶ್ವರಿ ಸಂಗೀತ ನಾಟಕ ಮಂಡಲಿ’ಯ ಮೂಲಕ ಆಸ್ಥಾನ ವಿದ್ವಾ ಬೆಳ್ಳಾವೆ ನರಹರಿ ಶಾಸ್ತ್ರಿಗಳ ವಿರಚಿತ ‘ದಶಾವತಾರ’ ನಾಟಕವನ್ನು ಬೆಂಗಳೂರಿನ ಸುಭಾಷ್ ನಗರ ಕೆರೆಯ ಆವರಣದಲ್ಲಿ (ಕೆಂಪೇಗೌಡ ಬಸ್‌ಸ್ಟ್ಟಾಂಡ್) ಪ್ರದರ್ಶಿಸಲಾಗಿತ್ತು. ದಶಾವತಾರ ನಾಟಕದ ಉದ್ಘಾಟನೆಯನ್ನು ಆಗಿನ ಮುಖ್ಯಮಂತ್ರಿಗಳಾಗಿದ್ದ ಕೆಂಗಲ್ ಹನುಮಂತಯ್ಯನವರು ಮಾಡಿದ್ದರು.
ಈ ನಾಟಕದ ಸೆಟ್‌ಗಳನ್ನು ನೋಡಲೆಂದೇ ಜನ ಮುಗಿಬಿದ್ದು ಬರುತ್ತಿದ್ದರು. ಕೆಲವು ನಾಟಕಗಳನ್ನು ಪ್ರದರ್ಶಿಸಿದ ಈ ಕಂಪನಿ ನಂತರದ ದಿನಗಳಲ್ಲಿ ನಿಂತೇ ಹೋಯಿತು.

? # ೨೫೦/ಐ, ೨ನೇ ‘ಸಿ’ ಮುಖ್ಯರಸ್ತೆ, ಹೇಮಾವತಿ ರಸ್ತೆ, ಗಿರಿನಗರ, ಬೆಂಗಳೂರು-೫೬೦೦೮೫.











Sunday, July 21, 2013

ಕುರುಬರಪ್ರಸಾದ ನಿಲಯಗಳು-ಚಾರಿತ್ರಿಕ ನೋಟ

ಕುರುಬರ ಪ್ರಸಾದ ನಿಲಯಗಳು :
ಒಂದು ಚಾರಿತ್ರಿಕ ನೋಟ

ಡಾ. ಅನ್ನಪೂರ್ಣ ಗೋಸ್ವಾಳ
ಮುಂದುವರಿದ ಜನಾಂಗಗಳು ಶಿಕ್ಷಣಕ್ಕೆ ಪ್ರಾಮುಖ್ಯತೆಯನ್ನು ನೀಡಿದ್ದವು. ವೈದಿಕ ವೀರಶೈವ ಸಮಾಜದಲ್ಲಿ ಹೆಚ್ಚಿನ ಕಾಳಜಿ ತಳೆಯಲಾಗಿತ್ತು. ಹಿಂದುಳಿದ ಸಮಾಜಗಳು ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಪ್ರಗತಿಯ ಕೊರತೆಯಿಂದಾಗಿ ಅಂಧಕಾರದಲ್ಲಿ ಮುಳುಗಿದ್ದವು. ಇಂಥ ಸಂದರ್ಭದಲ್ಲಿ ಶಿಕ್ಷಣದ ಸೂಕ್ಷ್ಮಗಾಳಿ ಬೀಸತೊಡಗಿತು.
ಕಳೆದ ಶತಮಾನದ ಆರಂಭದಲ್ಲಿ ಸಮುದಾಯಗಳ ಸರ್ವಾಂಗೀಣ ಅಭಿವೃದ್ಧಿ ಹಾಗೂ ಜನಜಾಗೃತಿಗಾಗಿ ಅನೇಕ ವಿದಾಯಕ ಕಾರ‍್ಯಕ್ರಮಗಳು ಹುಟ್ಟಿಕೊಂಡವು. ಆಯಾ ಸಮುದಾಯಗಳ ಧಾರ್ಮಿಕ, ಸಾಮಾಜಿಕ, ಆರ್ಥಿಕ ಪ್ರಗತಿಗಾಗಿ ಮಹಾಸಭೆ ಸಮ್ಮೇಳನಗಳನ್ನು ಆಯೋಜಿಸಿ, ಅನೇಕ ಸಂಘ, ಸಂಸ್ಥೆ ಪ್ರಸಾದ ನಿಲಯಗಳನ್ನು ಸಮಾಜದ ಸರ್ವಾಂಗೀಣ ಅಭಿವೃದ್ಧಿಗಾಗಿ ಸ್ಥಾಪನೆ ಮಾಡಿದುದನ್ನು ಕಾಣುತ್ತೇವೆ.
ಹಾಲುಮತ ಸಮುದಾಯದ ಜಾಗೃತಿಯು ೨೦ನೆಯ ಶತಮಾನದಿಂದ ಆದಿಯಾಯಿತೆಂದು ಹೇಳಬಹುದು. ೧೯೧೦ರಲ್ಲಿ ಲಕ್ಷ್ಮೇಶ್ವರದಲ್ಲಿ ಹಾಲುಮತ ಧಾರ್ಮಿಕ ಹಾಗೂ ವಿದ್ಯಾವರ್ಧಕ ೧ನೆಯ ಮಹಾಸಭೆಯನ್ನು ನೆರವೇರಿಸಿ ಸಮಾಜದಲ್ಲಿ ಒಂದು ರೀತಿಯ ಕ್ರಾಂತಿಯನ್ನು ಆರಂಭಿಸಲಾಯಿತು. ೧೯೨೦ರಲ್ಲಿ ನಲವಡಿಯಲ್ಲಿ ಕರ್ನಾಟಕ ಕುರುಬರ ೧ನೆಯ ಪರಿಷತ್ತು ನಡೆದು ಕರ್ನಾಟಕ ಕುರುಬರ ಸಂಘ ಮತ್ತು ಮುಂಬಯಿ ಕರ್ನಾಟಕ ಹಾಲುಮತ ಸಹಕಾರಿ ಸಂಘಗಳು ಸ್ಥಾಪಿಸಲ್ಪಟ್ಟವು. ಇದರಿಂದ ಸಮಾಜ ಸುಧಾರಣೆಯ ಕಾರ್ಯವು ತೀವ್ರತೆಯಿಂದ ನಡೆಯಿತು. ೧೯೨೦ ನವಂಬರಿನಲ್ಲಿ ಜೇವೂರಿ ಕ್ಷೇತ್ರದಲ್ಲಿ ಅಖಿಲ ಭಾರತ ಕುರುಬರ ೧ನೆಯ ಪರಿಷತ್ತು, ೧೯೨೨ರಲ್ಲಿ ಅಮಳನೇರದಲ್ಲಿ (ಖಾನದೇಶ) ಅಖಿಲ ಭಾರತ ಕುರುಬರ ೨ನೆಯ ಪರಿಷತ್ತು, ೧೯೨೩ ಏಪ್ರಿಲ್‌ನಲ್ಲಿ ಹುಲ್ಲೂರಿನಲ್ಲಿ ೨ನೆಯ ಹಾಲುಮತ ಧಾರ್ಮಿಕ ಹಾಗೂ ವಿದ್ಯಾವರ್ಧಕ ಮಹಾಸಭೆ, ೧೯೨೪ರಲ್ಲಿ ಬಂಕಾಪುರದಲ್ಲಿ ಕರ್ನಾಟಕ ಕುರುಬರ ೨ನೆಯ ಪರಿಷತ್ತು ನಡೆದವು. ತುಮಕೂರು ಜಿಲ್ಲೆಯ ಚಿಕ್ಕನಾಯಕನ ಹಳ್ಳಿಯಲ್ಲಿ ಕುರುಬರ ಸಂಘದ ಸ್ಥಾಪನೆಗಾಗಿ ಕುರುಬರ ಸಂಘದ ಜನರಲ್ ಸೆಕ್ರೆಟರಿಯಾಗಿದ್ದ ನೀಲಗಿರಿ ಸಂಜೀವಯ್ಯನವರ ಅಧ್ಯಕ್ಷತೆಯಲ್ಲಿ ೧೯೨೫ ಮೇ ೧೩ರಂದು ಪೂರ್ವಭಾವಿಯಾಗಿ ಸಭೆಯನ್ನು ಆಯೋಜಿಸಲಾಗಿತ್ತು. ಇವುಗಳಿಂದ ಜಾಗೃತಗೊಂಡು ಹಾಲುಮತ ಸಮಾಜದ ಕಲ್ಪನೆ, ಸಮಾಜಿಕ ಪರಿಸ್ಥಿತಿಗಳು ಪರಿಚಯಗೊಂಡು ಸಭೆಗಳಲ್ಲಿ ಹಾಲುಮತ ಬೋರ್ಡಿಂಗ್ ಸ್ಥಾಪಿಸಬೇಕೆಂಬ ಠರಾವುಗಳಾದವು.
ಈ ಹಿನ್ನೆಲೆಯಲ್ಲಿ ಶೈಕ್ಷಣಿಕ ಅಭಿವೃದ್ಧಿಗಾಗಿ ವಿದ್ಯಾರ್ಥಿಗಳ ಜ್ಞಾನರ್ಜನೆಗಾಗಿ ಪ್ರಸಾದ ನಿಲಯಗಳು ಪ್ರಾರಂಭಗೊಂಡವು. ೧೯೨೫ರಲ್ಲಿ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನಲ್ಲಿ ಅಮೋಘಸಿದ್ಧಾರ್ಯ ಕುರುಬರ ಬೋರ್ಡಿಂಗ್, ೧೯೩೦ರಲ್ಲಿ ಬೆಂಗಳೂರಿನಲ್ಲಿ ಕುರುಬರ ವಿದ್ಯಾರ್ಥಿ ನಿಲಯ, ೧೯೪೦ರಲ್ಲಿ ನಂಜನಗೂಡಿನಲ್ಲಿ ಶ್ರೀ ಕನಕದಾಸ ಸಾರ್ವಜನಿಕ ವಿದ್ಯಾರ್ಥಿ ನಿಲಯ, ೧೯೪೫ರಲ್ಲಿ ಬೆಳಗಾವಿಯ ಅಖಿಲ ಕರ್ನಾಟಕ ಕುರುಬರ ಫ್ರೀ ಬೋರ್ಡಿಂಗ್, ೧೯೪೭ರಲ್ಲಿ ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಬಟ್ಟೂರು ಗ್ರಾಮದ ಕುರುಬ ವಿದ್ಯಾರ್ಥಿಗಳ ಧರ್ಮಾರ್ಥ ಬೋರ್ಡಿಂಗ್, ಹೀಗೆ ನಾಡಿನಾದ್ಯಂತ ಪ್ರಸಾದ ನಿಲಯಗಳು ಆರಂಭಗೊಂಡವು. ಇಂಥ ಕುರುಬರ ಪ್ರಸಾದ ನಿಲಯಗಳ ಚರಿತ್ರೆಯನ್ನು ಕಟ್ಟಿಕೊಡುವ ಪ್ರಯತ್ನ ಇಲ್ಲಿದೆ.
ಅಮೋಘಸಿದ್ಧಾರ್ಯ ಕುರುಬರ ಬೋರ್ಡಿಂಗ (೧೯೨೫)
ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಲಿಂಗಾಪುರ ಗ್ರಾಮದಲ್ಲಿ ೧೯೨೫ ಜೂನ್ ೬ರಂದು ‘ಅಮೋಘಸಿದ್ಧಾರ್ಯ ಕುರುಬರ ಬೋರ್ಡಿಂಗ್’ ಸ್ಥಾಪನೆಯಾಯಿತು. ಇದು ಹಾಲುಮತದ ಮೊಟ್ಟ ಮೊದಲ ಪ್ರಸಾದ ನಿಲಯವಾಗಿದೆ. ಬೇರೆ ಬೇರೆ ಸ್ಥಳಗಳಿಂದ ಸಮಾಜ ಬಾಂಧವರು, ತರುಣರು, ಆಸಕ್ತರು, ಉತ್ಸಾಹಿಗಳು ಸೇರಿದ್ದರು. ವೇ ಸಿದ್ಧಯ್ಯನವರ ಅಮೋಗಿ ಹುಲ್ಲೂರು ಹಸ್ತದಿಂದ ಬೋರ್ಡಿಂಗ್ ಪ್ರಾರಂಭದ ಸಮಾರಂಭ ವಿಜೃಂಭಣೆಯಿಂದ ನಡೆಯಿತು. ಅವರು ಅಂದಿನ ತಮ್ಮ ದೀರ್ಘವಾದ ಭಾಷಣದಲ್ಲಿ “ಕಾಡಾಗಿದ್ದ ಹಾಲುಮತ ಸಮಾಜದ ಮನೋಭೂಮಿಕೆಯನ್ನು ಬಹು ದಿವಸಗಳಿಂದ ಹದಮಾಡಿ ಬಿತ್ತಿದ ಫಲವು ಈಗ ದೊರೆಯಹತ್ತಿದ್ದನ್ನು ನೋಡಿದರೆ ಯಾರಿಗೆ ಆನಂದವಾಗಲಿಕ್ಕಿಲ್ಲ? ಯಾರು ಧನ್ಯವಾದಗಳನ್ನು ಮಾಡಲಿಕ್ಕಿಲ್ಲ? ಅಂತೇ ಈ ದಿವಸವು ಹಾಲುಮತ ಇತಿಹಾಸದಲ್ಲಿ ಮಹತ್ವದ್ದಾಗಿದೆಯೆಂದು ನಾನು ಅಭಿಮಾನದಿಂದ ಹೇಳುವೆನು. ನಮಗೂ ಜ್ಞಾನವುಂಟು, ಧರ್ಮವುಂಟು, ಇತಿಹಾಸವುಂಟು, ವಾಙ್ಮಯವುಂಟು, ಶಕ್ತಿಯುಂಟು, ಸಂಘಟನೆಯುಂಟು, ನಮ್ಮ ಪೂರ್ವಜರು ಮಹಾಮಹಾಕಾರ್ಯಗಳನ್ನು ಮಾಡಿ ನಮ್ಮ ಸಮಾಜದ ಗೌರವ ಕಾಯ್ದಿರುವರು.... ಜನಾಂಗವು ಮುಂದುವರಿಯ ಬೇಕಾದರೆ ಶಿಕ್ಷಣವೇ ತಳಹದಿಯಾಗಿರುವುದು.... ಪ್ರತಿಯೊಬ್ಬರಲ್ಲಿ ಸಮಾಜಾಭಿಮಾನವು ಉಕ್ಕುತ್ತಿರಲೆಂದೂ ಈ ಕಾರ್ಯದಲ್ಲಿ ಶ್ರೀ ರೇವಣಸಿದ್ದೇಶ್ವರರ ಪೂರ್ಣ ಅನುಗ್ರಹವಿರಲೆಂದು ಆಶಿಸಿ ಈ ನನ್ನ ಭಾಷಣ ಮುಗಿಸುವೆನು” ಎಂದು ಜನಾಂಗದ ಏಳುಬೀಳುಗಳ ಕುರಿತು ಮಾತನಾಡಿದರು.
ಹೀಗೆ ಪ್ರಾರಂಭವಾದ ಪ್ರಸಾದ ನಿಲಯದಲ್ಲಿ ಇಂಗ್ಲಿಷ್ ಕಲಿಯುವ ಹಾಗೂ ತಲಾಠಿ ಕುಲಕರ್ಣಿ ಪರೀಕ್ಷೆಗಾಗಿ ಸಮುದಾಯದ ವಿದ್ಯಾರ್ಥಿಗಳಲ್ಲದೆ ಇನ್ನಿತರ ಕಬ್ಬೇರ ತಳವಾದ ಮೊದಲಾದ ಹಿಂದುಳಿದ ಬಡವಿದ್ಯಾರ್ಥಿಗಳ ಕಲಿಕೆ ಹಾಗೂ ವಸತಿ ವ್ಯವಸ್ಥೆಗೆ ಅವಕಾಶ ಕಲ್ಪಿಸಿದ್ದನ್ನು ಡಾ. ಎಫ್.ಟಿ. ಹಳ್ಳಿಕೇರಿ ಅವರು ಶೋಧಿಸಿದ ವರದಿಯಿಂದ ತಿಳಿಯಬಹುದು. ಅಲ್ಲದೆ ಲಿಂಗಾಪುರ ಗ್ರಾಮಗಳ ಕುರುಬ ಸಮಾಜದವರು  ದವಸ-ಧಾನ್ಯ, ಹಣದ ರೂಪದಲ್ಲಿ ಈ ಬೋರ್ಡಿಂಗ್‌ಗೆ ದಾನ ನೀಡಿದ ವಿವರಗಳು ಕುತೂಹಲಕಾರಿಯಾಗಿವೆ. ಹಣ ಮತ್ತು ಭತ್ತ ನೀಡಿದ ಮಹನೀಯರ ಸಹಕಾರವನ್ನು ವರದಿಗಳಲ್ಲಿ ಸ್ಮರಿಸಲಾಗಿದೆ.
ವಿದ್ಯಾರ್ಥಿಗಳ ಜ್ಞಾನಾಭಿವೃದ್ಧಿಗಾಗಿ ಬೋರ್ಡಿಂಗ್‌ನಲ್ಲಿ ಪ್ರತಿಭಾನುವಾರ ಮತ್ತು ಹಬ್ಬದ ದಿನಗಳಂದು ವಿದ್ಯಾರ್ಥಿಗಳು ಸಾಮಾಜಿಕ ವಿಷಯ ಕುರಿತು ಸಭೆ, ಚರ್ಚೆ, ವ್ಯಾಖ್ಯಾನ ಕೊಡುವದು, ಹಾಲುಮತ ವಿಷಯವಾಗಿ ಪೌರಾಣಿಕ ಹಾಗೂ ಐತಿಹಾಸಿಕ ಸಂಗತಿ ತಿಳಿಯುವ, ಪ್ರಸಿದ್ಧ ಪುರುಷರ ಚರಿತ್ರೆ ಓದುವ, ಸ್ಫೂರ್ತಿದಾಯಕ ಸಾಮಾಜಿಕ ವಿಷಯಗಳ ಲೇಖನಗಳನ್ನು ಬರೆದು ಸಂಸ್ಥೆಗೆ ಕಳುಹಿಸುವಂಥಹ ವಿಭಿನ್ನ ವಿಚಾರಗಳ ಮೂಲಕ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿ ಪ್ರಗತಿ ಸಾಧಿಸಲು ಪ್ರಯತ್ನಿಸಲಾಗುತ್ತಿತ್ತು.
ಕುರುಬರ ಸಂಘ (೧೯೩೦)
ಬೆಂಗಳೂರಿನಲ್ಲಿ ೧೯೩೦ರಲ್ಲಿ ಕುರುಬರ ವಿದ್ಯಾರ್ಥಿ ನಿಲಯ ಪ್ರಾರಂಭವಾಯಿತು. ೫೦ ಜನರ ಕಾರ್ಯಕಾರಿ ಸಮಿತಿ ರಚಿಸಲಾಗಿತ್ತು. ಚಾಮರಾಜಪೇಟೆಯ ೧ನೆಯ ರಸ್ತೆಯ ಒಂದು ಬಾಡಿಗೆ ಕಟ್ಟಡದಲ್ಲಿ ವಿದ್ಯಾರ್ಥಿನಿಲಯವನ್ನು ಆರಂಭಿಸಲಾಯಿತು. ಈ ಕಟ್ಟಡಕ್ಕಾಗಿ ಅನೇಕ ದಾನಿಗಳು ಆಗಿನ ಕಾಲದಲ್ಲೇ ಸಾವಿರ ರೂಪಾಯಿಗಳಂತೆ ಹಣವನ್ನು ಕೊಟ್ಟಿದ್ದಾರೆ. ೧೯೩೭ರಲ್ಲಿ ಕಲಾಸಿಪಾಳ್ಯದಿಂದ ವಿದ್ಯಾರ್ಥಿ ನಿಲಯವನ್ನು ಗಾಂಧಿನಗರದ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು. ಈ ಬಾಡಿಗೆ ಕಟ್ಟಡವೇ ಇಂದಿನ ಸಂಘದ ಭವ್ಯಕಟ್ಟಡ ನಿರ್ಮಾಣಕ್ಕೆ ನಾಂದಿಯಾಗಿದೆ. ೧೧.೧೧.೧೯೪೦ರಲ್ಲಿ ಅಂದಿನ ದಿವಾನರಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್‌ರ ಸಿಫಾರಸಿನ ಮೇರೆಗೆ ಸಂಘಕ್ಕೆ ನಿವೇಶನ ಮಂಜೂರಾಯಿತು. ೧೯೪೧ ರಂದು ಕಟ್ಟಡ ನಿರ್ಮಾಣದ ಉಪಸಮಿತಿಯನ್ನು ರಚಿಸಿ ೧೯೪೨ರಲ್ಲಿ ದಿವಾನ ಮಾಧವರಾವ ಅವರಿಂದ ಕಟ್ಟಡದ ಶಂಕಸ್ಥಾಪನೆ ಮಾಡಲಾಯಿತು. ೧೫.೧೦.೧೯೫೬ರಂದು ನಂಜನಗೂಡಿನಲ್ಲಿ ಸಂಘದ ಸರ್ವಸದಸ್ಯರ ಸಭೆಯನ್ನು ಕರೆದು ‘ಕುರುಬರ ಸಂಘ’ದ ಹೆಸರನ್ನು ‘ಮೈಸೂರು ಪ್ರದೇಶದ ಕುರುಬರ ಸಂಘ’ ಎಂದು ಪರಿವರ್ತಿಸಲಾಯಿತು. ಬಡ ಹಾಗೂ ಪ್ರತಿಭಾವಂತ ಜನಾಂಗದ ವಿದ್ಯಾರ್ಥಿಗಳಿಗೆ ೧೯೫೮-೫೯ರ ಸಾಲಿನಲ್ಲಿ ೫೦೦ ರೂ. ಸಹಾಯಧನ ಕೊಡಲು ಆರಂಭಿಸಿದರು. ಅದು ಇಂದು ೮-೧೦ ಸಾವಿರಕ್ಕೆ ಏರಿದೆ. ಹಲವಾರು ಕಾರಣಗಳಿಂದ ವಿದ್ಯಾರ್ಥಿ ನಿಲಯದ ಬಡ ವಿದ್ಯಾರ್ಥಿಗಳಿಗೆ ಪೂರ್ಣವಾಗಿ ಉಚಿತ ಭೋಜನ ವ್ಯವಸ್ಥೆ ಮಾಡುವ ಗುರಿಯನ್ನು ಮುಟ್ಟಲಾಗಿಲ್ಲ. ನಾಡಗೌಡರ ಸಮಿತಿ ವರದಿ ಪ್ರಕಾರ ಈ ಜನಾಂಗದ ವಿದ್ಯಾಭ್ಯಾಸ ೧೯೬೨ರಲ್ಲಿ ಶೇಕಡಾ ಐದರಷ್ಟಿತ್ತು. ಇದು ಮತದ ಶೈಕ್ಷಣಿಕ ಪ್ರಗತಿಯ ನಿಧಾನಗತಿಯನ್ನು ಸೂಚಿಸುತ್ತದೆ. ಈ ಸಂಘಕ್ಕೆ ಆರ್. ನಾಗನಗೌಡರು, ಟಿ. ಮರಿಯಪ್ಪ ಮೊದಲಾದ ಅನೇಕ ಗಣ್ಯರು ದುಡಿದು ಅದರ ಕೀರ್ತಿ, ಸೇವಾಕ್ಷೇತ್ರಗಳನ್ನು ವಿಸ್ತರಿಸಲು ಕಾರಣರಾಗಿದ್ದಾರೆ.
ಜಾತಿ-ಭೇದಗಳಿಲ್ಲದೆ ಎಲ್ಲ ಜನಾಂಗಗಳ ವಿದ್ಯಾರ್ಥಿಗಳಿಗೆ ಹಾಸ್ಟೆಲಿನಲ್ಲಿ ಅವಕಾಶ ಕೊಟ್ಟು ವಿದ್ಯಾಭ್ಯಾಸ ಹರಡುವ ಮತ್ತು ಇತರ ಜನಾಂಗಗಳೊಂದಿಗೆ ಸೋದರತೆ ಮತ್ತು ಐಕ್ಯತೆಯನ್ನು ಸಾಧಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ.
ಶ್ರೀ ಕನಕದಾಸ ಸಾರ್ವಜನಿಕ ವಿದ್ಯಾರ್ಥಿ ನಿಲಯ (೧೯೪೦)
ಶ್ರೀ ಕನಕದಾಸ ಸಾರ್ವಜನಿಕ ವಿದ್ಯಾರ್ಥಿ ನಿಲಯ ನಂಜನಗೂಡಿನಲ್ಲಿ ೧೯೪೦ರಲ್ಲಿ ಎನ್. ರಾಚಯ್ಯನವರಿಂದ ಆರಂಭಗೊಂಡಿತ್ತು. ಹಳ್ಳಿಯ ಮಕ್ಕಳು ಪ್ರೌಢಶಾಲೆ ಕಲಿಯಲು ನಂಜನಗೂಡಿಗೆ ಬರಬೇಕಿತ್ತು. ಕೆಲವು ವಿದ್ಯಾರ್ಥಿಗಳು ಮಧ್ಯಾಹ್ನದ ಊಟದ ಡಬ್ಬಿಗಳನ್ನು ರಾಚಯ್ಯನವರ ಬಾಳೆಹಣ್ಣಿನ ಅಂಗಡಿಯಲ್ಲಿ ಇಡುತ್ತಿದ್ದರು. ಮಕ್ಕಳು ವಿದ್ಯಾರ್ಜನೆಗಾಗಿ ಪಡುತ್ತಿದ್ದ ಬವಣೆಯನ್ನು ಗಮನಿಸಿ ದೃಢ ಸಂಕಲ್ಪ ಮಾಡಿ ೧೦ ವಿದ್ಯಾರ್ಥಿಗಳಿಗೆ ಊಟ ವಸತಿ ಸೌಲಭ್ಯ ಕಲ್ಪಿಸಿದರು.
ಹೀಗೆ ಕನಕದಾಸ ವಿದ್ಯಾರ್ಥಿ ನಿಲಯ ಸ್ಥಾಪನೆಗೊಂಡಿತು. ಅದೇ ನಿಲಯ ನಂತರ ನೂರಾರು ವಿದ್ಯಾರ್ಥಿಗಳಿಗೆ ಆಶ್ರಯ ತಾಣವಾಯಿತು. ೧೯೫೨ ಅಕ್ಟೋಬರ ೧೦ರ ಬೆಳಗಿನ ಜಾವ ರಾಚಯ್ಯನವರು ಕಂಡ ಕನಸಿನಲ್ಲಿ ಅಂದಿನ ಪ್ರಧಾನಿ ಜವಾಹರಲಾಲ್ ನೆಹರುರವರಿಗೆ ೨೦,೦೦೦ ರೂ.ಗಳನ್ನು ವಿದ್ಯಾರ್ಥಿ ನಿಲಯದ ಅಭಿವೃದ್ಧಿಗಾಗಿ ಕಾಣಿಕೆ ನೀಡುವ ಮಾತು ಕೊಟ್ಟಿದ್ದರು. ಅಂದೇ ಬೆಳಿಗ್ಗೆ ತಮ್ಮ ಮಾತನ್ನು ಅನುಷ್ಠಾನಕ್ಕೆ ತಂದು ತಮ್ಮ ಕನಸಿನ ವಾಗ್ದಾನದಂತೆ ನಡೆದುಕೊಂಡರು. ಹೀಗೆ ರಾಚಯ್ಯನವರ ಹೆಮ್ಮೆಯ ಕನಕದಾಸ ವಿದ್ಯಾರ್ಥಿ ನಿಲಯ ನಿರ್ಮಾಣ ವಾಯಿತು. ಅಲ್ಲದೇ ಅದು ಗ್ರಾಮಾಂತರದಿಂದ ಬರುತ್ತಿದ್ದ ಅನೇಕ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ನೀಡುವ ನ್ಯಾಯಾಲಯವಾಯಿತು. ಅದರ ಸರ್ವತೋಮುಖ ಬೆಳವಣಿಗೆಗಾಗಿ ೧೯೫೨ರಲ್ಲಿ ಶ್ರೀ ಕನಕದಾಸ ಸಾರ್ವಜನಿಕ ವಿದ್ಯಾರ್ಥಿನಿಲಯ ಟ್ರಸ್ಟನ್ನು ಸ್ಥಾಪಿಸಲಾಯಿತು. ನಿಲಯದಲ್ಲಿ ಶಿಸ್ತು, ನೀತಿ, ನಿಯಮಗಳಿಂದ ದಿನಚರಿಯನ್ನು ರೂಪಿಸಲಾಗಿತ್ತು. ಅಂದು ನಂಜನಗೂಡು ಪಟ್ಟಣದಲ್ಲಿ ಸಾರ್ವಜನಿಕ ವಾಚನಾಲಯ ಇರಲಿಲ್ಲ. ಕಾರಣ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಇತರರಿಗೂ ಅದು ಜ್ಞಾನಮಂದಿರವಾಯಿತು. ನಿಲಯದಲ್ಲಿ ಮಾಧ್ಯಮಿಕ ಮತ್ತು ಪ್ರೌಢಶಾಲೆಗಳನ್ನು ಪ್ರಾರಂಭಿಸಿದರು. ಹೀಗೆ ಗ್ರಾಮಾಂತರ ಮತ್ತು ಪಟ್ಟಣಗಳ ಮಕ್ಕಳಿಗೆ ಊಟ ವಸತಿ ಶಿಕ್ಷಣ ಎಲ್ಲವೂ ಒಂದೇ ನೆಲೆಯಲ್ಲಿ ದೊರಕುವಂತಾಯಿತು. ನಂತರ ಶಾಲೆಯ ನಿರ್ವಹಣೆಗಾಗಿ ಕನಕದಾಸ ವಿದ್ಯಾರ್ಥಿ ನಿಲಯದ ಟ್ರಸ್ಟಿನ ಅಂಗ ಸಂಸ್ಥೆಯಾಗಿ ‘ಕನಕದಾಸ ವಿದ್ಯಾ ಸಂಸ್ಥೆ’ಯು ರಚನೆಯಾಯಿತು. ವಿದ್ಯಾರ್ಥಿ ನಿಲಯ ಸುಗಮವಾಗಿ ನಡೆಯಲು ಮತ್ತು ಜನಾಂಗ ಸಂಘಟನೆಯ ಉದ್ದೇಶದಿಂದ ೧೯೬೯ರಲ್ಲಿ ಕುರುಬರ ಸಂಘವನ್ನು ಸ್ಥಾಪಿಸಲಾಯಿತು.
೪. ದಿ ಅಖಿಲ ಕರ್ನಾಟಕ ಫ್ರೀ ಬೋರ್ಡಿಂಗ್ (೧೯೪೫)
ಬೆಳಗಾವಿ ಜಿಲ್ಲೆಯ ಅಕ್ಕೋಳ ಗ್ರಾಮದಲ್ಲಿ ಹಾಲುಮತ ಸಮಾಜದ ಘನೋದ್ದೇಶ ಮತ್ತು ಸಮಾಜ ಬಾಂಧವರ ಸತತ ಆರು ತಿಂಗಳ ಪ್ರಯತ್ನದ ಫಲವಾಗಿ ೧.೮.೧೯೪೫ರಂದು “ಬೆಳಗಾವಿಯ ಅಖಿಲ ಕರ್ನಾಟಕ ಫ್ರೀ ಬೋರ್ಡಿಂಗ್” ಎಂಬ ಪ್ರಸಾದ ನಿಲಯವನ್ನು ಮಲ್ಲಪ್ಪ ಸಿದ್ದಪ್ಪ ಖಿಲಾರಿ ಅವರ ಅಮೃತಹಸ್ತದಿಂದ ಸ್ಥಾಪನೆ  ಮಾಡಲಾಯಿತು. ಗ್ರಾಮಾಂತರ ಪ್ರದೇಶದ ಮಕ್ಕಳ ಉಚ್ಚಮಟ್ಟದ ವ್ಯಾಸಂಗಕ್ಕಾಗಿ ಊಟ ವಸತಿಯ ಸೌಕರ್ಯವನ್ನು ಉಚಿತವಾಗಿ ಒದಗಿಸಲಾಗುತ್ತಿತ್ತು. ಈ ಬೋರ್ಡಿಂಗ್ ೧೮.೯.೧೯೫೨ರಂದು ‘ವಿಜಯನಗರ ವಿದ್ಯಾರ್ಥಿಗಳ ಪ್ರಸಾದ ನಿಲಯ’ ಎಂಬ ಹೆಸರಿನಿಂದ ಪುನಃ ಕರೆಯಲಾಯಿತು. ವಿದ್ಯಾರ್ಥಿ ನಿಲಯದ ಟ್ರಸ್ಟ ಕಾರ್ಯಕಾರಿ ಮಂಡಳಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರ, ವಕೀಲ ಎನ್.ಬಿ. ದಳವಾಯಿ ಅವರು ಅಧ್ಯಕ್ಷರಾಗಿ, ಜಿ.ಎಸ್.ಬೆಳವಡಿ ಹಿರೆಕುಂಬಿ ಉಪಾಧ್ಯಕ್ಷರಾಗಿದ್ದರು. ಹೀಗೆ ಅನೇಕ ದೇಶಾಭಿಮಾನಿಗಳು, ಶಿಕ್ಷಣಾಭಿಮಾನಿಗಳು ಈ ಸಂಸ್ಥೆಯ ಶ್ರೇಯೋಭಿವೃದ್ಧಿಗಾಗಿ ಅಹೋರಾತ್ರಿ ದುಡಿದು ಈ ಪ್ರಸಾದ ನಿಲಯಕ್ಕೆ ಒಂದು ಮೂರ್ತ ಸ್ವರೂಪವನ್ನು ತಂದುಕೊಟ್ಟರು.
ಕಡಿದಾಳ ಮಂಜಪ್ಪ, ಬಿ.ಡಿ.ಜತ್ತಿ, ಕೆ.ಎಫ್.ಪಾಟೀಲ, ಟಿ.ಮರಿಯಪ್ಪ ಮತ್ತು ಬೆಳಗಾವಿಯ ಡೆಪ್ಯುಟಿ ಕಮೀಷನರ ಸಚ್ಚಿದಾನಂದಮೂರ್ತಿ ಮೊದಲಾದವರ ಸಹಕಾರದಿಂದ ೧೯೬೦ರಲ್ಲಿ ಉಳವಿಯ ಚೆನ್ನಬಸವಣ್ಣದ ಜಾತ್ರೆಯ ಸಂದರ್ಭದಲ್ಲಿ ಸದಸ್ಯರಿಂದ ನಿರ್ಣಯ ತೆಗೆದುಕೊಳ್ಳಲಾಯಿತು. ೧೬೯೧ರಲ್ಲಿ ೫ ಎಕರೆ ಜಮೀನನ್ನು ಕಡಿಮೆ ಬೆಲೆಯಲ್ಲಿ ಖರೀದಿಸಿದರು. ೬.೪.೧೯೬೨ರಂದು ಮೈಸೂರು ರಾಜ್ಯದ ಮುಖ್ಯಮಂತ್ರಿಗಳಾದ ಎಸ್.ಆರ್. ಕಂಠಿ ಅವರ ಅಮೃತಹಸ್ತದಿಂದ ವೆಂಕಟರೆಡ್ಡಿ ಹುಲಿ ಅವರ ಅಧ್ಯಕ್ಷತೆಯಲ್ಲಿ ಕಟ್ಟಡದ ಅಡಿಪಾಯ ಹಾಕಲಾಯಿತು. ಈ ಸಂಸ್ಥೆ ೧೯೬೩ರ ವರೆಗೆ ಬಾಡಿಗೆ ಕಟ್ಟಡದಲ್ಲಿ ನಡೆದು ನಂತರ ಸ್ವಂತ ಕಟ್ಟಡವನ್ನು ಹೊಂದಿತು. ಈ ಸಂಸ್ಥೆಗಾಗಿ ವಕೀಲ ಎನ್.ಬಿ.ದಳವಾಯಿ ಅವರ ಅಧ್ಯಕ್ಷತೆಯಲ್ಲಿ ಸರಕಾರದಿಂದ ೧,೬೫,೦೦೦ ರೂ.ಗಳಷ್ಟು ಅನುದಾನ ಸಂಗ್ರಹಿಸಲಾಯಿತು.
ಒಟ್ಟಾರೆ ೧೯೪೫ರಿಂದ ೧೯೫೨ರವರೆಗೆ ಈ ಸಂಸ್ಥೆಯ ಲಾಲನೆ, ಪಾಲನೆ, ಪೋಷ ಮಾಡಿ ಬೆಳಸಿ ಸರ್ವತೋಮುಖ ಬೆಳವಣಿಗೆಗೆ ಪ್ರಾರಂಭದಲ್ಲಿ ಕಾರಣರಾದ ಎನ್.ಬಿ.ದಳವಾಯಿ ಅವರನ್ನು ಈ ಸಂಸ್ಥೆ ಮರೆಯಲಾರದು. ಹೀಗೆ ಅಂದು ಸಸಿಯಾಗಿ ನೆಟ್ಟಿದ್ದು ಇಂದು ಹೆಮ್ಮರವಾಗಿ ಬೆಳೆದಿದೆ. ಅನೇಕ ವಿದ್ಯಾರ್ಥಿಗಳಿಗೆ ಆಶ್ರಯ ತಾಣವಾಗಿದೆ.
೫. ಕುರುಬ ವಿದ್ಯಾರ್ಥಿಗಳ ಧರ್ಮಾರ್ಥ ಬೋರ್ಡಿಂಗ್ (೧೯೪೭)
ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬಟ್ಟೂರ ಗ್ರಾಮದಲ್ಲಿ ೧೯೪೭ರಲ್ಲಿ ಕುರುಬರ ಬಡ ಆಸಕ್ತ ಅನಾಥ ವಿದ್ಯಾರ್ಥಿಗಳಿಗಾಗಿ ಪ್ರಸಾದ ನಿಲಯ ಆರಂಭವಾಯಿತು. ಬಟ್ಟೂರಿನ ಪ್ರಾಥಮಿಕ ಶಾಲೆಯಲ್ಲಿ ೨೦ ವಿದ್ಯಾರ್ಥಿಗಳು ಮತ್ತು ಲಕ್ಷ್ಮೇಶ್ವರದ ಹೈಸ್ಕೂಲಿನ ೫ ವಿದ್ಯಾರ್ಥಿಗಳು ಪ್ರಾರಂಭದಲ್ಲಿ ಸೌಲಭ್ಯ ಪಡೆದರು. ಈ ಬೋರ್ಡಿಂಗಗಾಗಿ ಅನೇಕ ಮಹನೀಯರು ಧಾನ್ಯದ ರೂಪದಲ್ಲಿ ಸೇವೆ ಸಲ್ಲಿಸಿದರು. ಪ್ರಸಾದ ನಿಲಯದಲ್ಲಿ ವಾಚನಾಲಯ, ಔಷಧೋಪಚಾರ, ಉಪನ್ಯಾಸಗಳನ್ನು ಏರ್ಪಡಿಸಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿತ್ತು. ಹೀಗೆ ಪ್ರಸಾದ ನಿಲಯಗಳಲ್ಲಿ ಕಲಿತ ಅನೇಕರು ಇಂದು ಸಾಹಿತ್ಯಿಕ, ಸಾಂಸ್ಕೃತಿಕ, ರಾಜಕೀಯ, ಸಾಮಾಜಿಕ ಕ್ಷೇತ್ರಗಳಲ್ಲಿ ಎತ್ತರದ ಸಾಧನೆ ಮಾಡಿದ್ದಾರೆ.
[ಆಕರಗಳನ್ನು ನೀಡಿ ಸಹಕರಿಸಿದ ಡಾ. ಎಫ್.ಟಿ. ಹಳ್ಳಿಕೇರಿ ಅವರಿಗೆ ಕೃತಜ್ಞತೆಗಳು.]
ಆಧಾರಸೂಚಿ
೧.         ಹಾಲುಮತ ಮಹಾಸಭೆ ಭಾಷಣಗಳು ಮತ್ತು ವರದಿಗಳು, ಡಾ. ಎಫ್.ಟಿ. ಹಳ್ಳಿಕೇರಿ, ೨೦೦೯.
೨.         ದಾಸೋಹ, ನಾಗನೂರು ರುದ್ರಾಕ್ಷಿಮಠ, ಬೆಳಗಾವಿ.
೩.         ಪಾವನ, ಶ್ರೀ ಕಾಗಿನೆಲೆ ಮಹಾಸಂಸ್ಥಾನ, ಕನಕ ಗುರು ಪೀಠದ ಸ್ಥಾಪನೆಯ ಸಂಸ್ಮರಣ ಸಂಚಿಕೆ, ಪುಟ ೧೧೯, ೧೯೯೨.
೪.         ದಳವಾಯಿ, ಪ್ರೊ. ಸಿದ್ದಣ್ಣ ಬಿ. ಉತ್ನಾಳ
೫.         ಕವಲುದಾರಿಯಲ್ಲಿ ಕರ್ನಾಟಕದ ಕುರುಬ ಜನಾಂಗ, ಪುಟ ೧೨೭, ಪ್ರೊ. ಒಡೆಯರ್ ಡಿ. ಹೆಗ್ಗಡೆ, ೨೦೦೩.

? ಅ/o ರೇವಣ್ಣ ಸಿದ್ದೇಶ್ವರ ಜನರಲ್ ಸ್ಟೋರ್ಸ್, ರಾಮಾ ಟಾಕೀಸ್ ಹತ್ತಿರ, ಹೊಸಪೇಟೆ, ಬಳ್ಳಾರಿ ಜಿಲ್ಲೆ-೫೮೩೨೦೧.