Monday, February 25, 2013

ಅರಟಾಳದ ಅಪ್ರಕಟಿತಶಾಸನ


ಗದಗ ಜಿಲ್ಲೆ ಮುಂಡರಗಿ ತಾಲ್ಲೂಕಿನ ಹಮ್ಮಿಗಿಯ ಮತ್ತು ಹಾವೇರಿ ಜಿಲ್ಲೆ ಶಿಗ್ಗಾಂವ ತಾಲ್ಲೂಕಿನ
ಅರಟಾಳದ ಅಪ್ರಕಟಿತ ಶಾಸನಗಳು
ಹನುಮಾಕ್ಷಿ ಗೋಗಿ?

ಮುಂಡರಗಿ ತಾಲೂಕಿನ ತುಂಗಭದ್ರಾ ನದೀ ತೀರದಲ್ಲಿರುವ ಚಿಕ್ಕಹಳ್ಳಿ ಹಮ್ಮಿಗಿ. ಊರಿನಲ್ಲಿ ಬಸದಿಯೊಂದಿದ್ದು, ಅದರಲ್ಲಿ ಸಂಗಮರವರಿ ಕಲ್ಲಿನಲ್ಲಿ ಕೆತ್ತಿದ ಚಂದ್ರಪ್ರಭ ತೀರ್ಥಂಕರ ವಿಗ್ರಹವಿದೆ. ಅದರೊಂದಿಗೆ ಸುಮಾರು ಎರಡು ಅಡಿ ಎತ್ತರದ ಚೌವ್ವೀಸ ತೀರ್ಥಂಕರರ ಲೋಹದ ವಿಗ್ರಹವಿದ್ದು, ಅದರ ಪಾದಪೀಠದಲ್ಲಿ ಪ್ರಸ್ತುತ ಶಾಸನವಿದೆ.
ಶಾಸನವು ಕಾಳುಮೆಣಸಿನ ರಾಣಿಯೆಂದೇ ಪ್ರಸಿದ್ಧಳಾದ ಮಹಾಮಂಡಲೇಶ್ವರ ಚಂನಭೈರಾದೇವಿಯ ಮಹಾಪ್ರಧಾನನಾದ ಹೈವಣನಾಯ್ಕರ ಪತ್ನಿಯೂ ಪಾರಿಸದೇವನಾಯ್ಕರ ಮಗಳೂ ಮಳ್ಕಿಯಲ್ಲಿ ಹುಟ್ಟಿಕೊಂಡ ಆನೆವಳಿಯ ಪದುಮರಸಿ ನಾಯ್ಕತಿಯು ಆಣತಿನೋ[ಂ]ಪಿಯನ್ನು ಕೈಕೊಂಡು, ವ್ರತದ ಉದ್ಯಾಪನೆಯ ಸಮಯದಲ್ಲಿ ತಮಗೆ ಪುಣ್ಯಪ್ರಾಪ್ತಿ ಆಗಬೇಕೆಂದು, ಶಾಸನವನ್ನು ಕೆತ್ತಿಸಿ ಈ ಚೌವ್ವೀಸ ತೀರ್ಥಂಕರ ವಿಗ್ರಹವನ್ನು ಮಾಡಿಸಿದಳೆಂದು ತಿಳಿಸುತ್ತದೆ.
ಇಲ್ಲಿ ಬರುವ ಆಣತಿ ನೋಂಪಿ ಎಂದರೆ ಜೈನ ಶ್ರಾವಕರು ತಮ್ಮ ಗುರುಗಳಾದ ಜೈನಾಚಾರ್ಯರ ಆದೇಶದಂತೆ ಆಚರಿಸುವ ಒಂದು ಪ್ರಕಾರದ ವ್ರತ. ಇಲ್ಲಿ ಯಾವ ರೀತಿಯ ಆಣತಿ ಇದಾಗಿತ್ತು ಎಂಬುದರ ವಿವರವಿಲ್ಲ. ಇದನ್ನು ಜಾತಿ/ಆಣಂತಿ ನೋಂಪಿ ಎಂದೂ ಕರೆಯಲಾಗುತ್ತದೆ. ಭಗವತೀದಾಸನೆಂಬ (೧೭ನೆಯ ಶತಮಾನ) ಹಿಂದಿಯ ಕವಿ ‘ಆದತ್ತಿ ವ್ರತರಾಸ’ ಎಂಬ ಕೃತಿಯನ್ನು ರಚಿಸಿದ್ದಾನೆ. ಆಣತಿ ವ್ರತವು ಅಭಕ್ಷಣಕ್ಕೆ ಸಂವಾದಿಯಾದುದು. (ಮಹಾಪುರಾಣ, ಪರ್ವ ೭೧, ಶ್ಲೋಕ ೯೪೫) ‘ದೇಮಪಾಯಗಳು ಆಣಂತಿಯ ನೋಂಪಿ ನಿಮಿತ್ತವಾಗಿ ಮಾಡಿಸಿದ ಪ್ರತಿಷ್ಠೆ’ ಎಂಬ ಉಲ್ಲೇಖ ಶಾಸನದಲ್ಲಿ ಬಂದಿದೆ. (ಮೈಸೂರು ಆರ್ಕಿಯಲಾಜಿಕಲ್ ರಿಪೋರ್ಟ್, ೧೯೪೧, ಪು. ೫೧, ಕಾಲ ಕ್ರಿ.ಶ.೧೨೦೦, ನೋಂಪಿಯ ಕಥೆಗಳು, ಡಾ. ಹಂಪ ನಾಗರಾಜಯ್ಯ, ಹಂಪಿ ವಿವಿ, ೨೦೦೧.)
ಸಾಮಾನ್ಯವಾಗಿ ನೋಂಪಿ ಪಾಲನೆ ಮಂಡಲಗಳಂತೆ ಬೆಸ ಸಂಖ್ಯೆಯಲ್ಲಿ ಇರುತ್ತದೆ. ಆದರೆ ಆಣತಿ ನೋಂಪಿಯು ಒಂದು ದಿನ ಮಾತ್ರ ನಡೆಸುವ ನೋಂಪಿಯೋ ಅಥವಾ ಚಾತುರ್ಮಾಸದುದ್ದಕ್ಕೂ ನಡೆಸುವದೋ ತಿಳಿದುಬರುವುದಿಲ್ಲ. ಹಲವಾರು ರೀತಿಯ ನೋಂಪಿಗಳ ಪಾಲನೆಯ ಕುರಿತು ಡಾ. ಹಂಪನಾ ಅವರು ನೋಂಪಿಯ ಕಥೆಗಳು ಕೃತಿಯಲ್ಲಿ ಸುದೀರ್ಘವಾಗಿ ವಿವರಿಸಿದ್ದಾರೆ. ‘ನೋಂಪಿಯನ್ನು ಪ್ರಾರಂಭಿಸುವುದಕ್ಕೆ ಹೇಗೆ ಒಂದು ಶಾಸ್ತ್ರೋಕ್ತ ವಿಧಿ ಇದೆಯೋ ಹಾಗೇ ನೋಂಪಿಯನ್ನು ಪೂರ್ಣಗೊಳಿಸುವುದಕ್ಕೂ ಒಂದು ಕ್ರಮವಿದೆ. ಇದನ್ನು ಉದ್ಯಾಪನ ಎನ್ನುವರು. ವ್ರತ ಸಮಾಪ್ತಿ ಎಂದು ಇದರ ರೂಢಿಯ ಅರ್ಥವಾದರೂ, ವ್ರತವನ್ನು ಪೂರ್ಣಗೊಳಿಸುವ ಕ್ರಮವೇ ಉದ್ಯಾಪನೆ’ ಎನ್ನುತ್ತಾರೆ ಅವರು*. ಆ ಸಂದರ್ಭದಲ್ಲಿ ಬಹುತೇಕ ಶ್ರೀಮಂತ ಶ್ರಾವಕರು ತೀರ್ಥಂಕರ ಪ್ರತಿಮೆಗಳನ್ನು ಮಾಡಿಸಿ ಬಸದಿಗಳಿಗೆ ನೀಡುತ್ತಿದ್ದರು. ಇಂತಹ ಹಲವಾರು ವ್ರತಗಳು, ಅವುಗಳ ಉದ್ಯಾಪನೆ ಹಾಗೂ ಆ ಸಂದರ್ಭದಲ್ಲಿ ನೋಂಪಿಯ ಸ್ಮರಣಾರ್ಥವಾಗಿ ಬಸದಿಗೆ ನೀಡಿದ ವಿಗ್ರಹಗಳ ಕುರಿತು ಶಾಸನಗಳಲ್ಲಿ ಸಾಕಷ್ಟು ವಿವರಗಳಿವೆ. ಇಂತಹ ೮೪ ವ್ರತಗಳು ಮತ್ತು ಅವುಗಳ ಬಗ್ಗೆ ಇರುವ ಕಥೆಗಳನ್ನು ನಾಡೋಜ ಡಾ. ಹಂಪನಾ ಅವರು ತಮ್ಮ ಕೃತಿ ನೋಂಪಿಯ ಕಥೆಗಳಲ್ಲಿ ನೀಡಿದ್ದಾರೆ.
ಹಾಡುವಳ್ಳಿಯ ಮಹಾಮಂಡಲೇಶ್ವರ ಎನಿಸಿಕೊಂಡ, ಸ್ವತಃ ಜೈನಧರ್ಮೀಯಳೂ ಆದ ಚನ್ನಭೈರಾದೇವಿಯ ಕಾಲದಲ್ಲಿ ರಚಿತಗೊಂಡ ಈ ಶಾಸನ ಸಹಿತ ಚೌವ್ವೀಸ (೨೪) ತೀರ್ಥಂಕರರ ವಿಗ್ರಹವನ್ನು ಯಾವುದೋ ಕಾಲದಲ್ಲಿ ಕರಾವಳಿಯ ತೀರದಿಂದ ಹಮ್ಮಿಗೆಗೆ ಸಾಗಿಸಲಾಗಿದೆಯೆಂದು ಊಹಿಸಬಹುದಾಗಿದೆ. ಇದರ ಮೂಲಸ್ಥಾನ ಯಾವ ಊರಾಗಿತ್ತೆಂದು ತಿಳಿಯದು.
ಹಾಡುವಳ್ಳಿ (ಸಂಗೀತಪುರ) ಅರಸರ ಮೂಲಪುರುಷರ ಹೆಸರೂ ಹೈವಣರಸ/ಹೈವಭೂಪ/ಹೈವರಾಜ ಆಗಿತ್ತೆಂದು ಗಮನಿಸಿದಾಗ, ಈ ಅರಸರಲ್ಲಿ ಕೆಲವರು ಹೈವೆ ದೇಶವನ್ನು (ಪ್ರಾಂತ) ಆಳುತ್ತಿದ್ದುದರಿಂದ ಈ ಹೆಸರು ಬಂದಿತ್ತೆಂದು, ಅದೇ ಹೆಸರು ಚನ್ನಭೈರಾದೇವಿಯ ಪ್ರಧಾನನಿಗೂ ಇತ್ತೆಂದು ಗ್ರಹಿಸಬಹುದು. ಪಾರಿಸದೇವ ಎನ್ನುವ ಹೆಸರು ೨೪ನೆಯ ತೀರ್ಥಂಕರ ಪಾರ್ಶ್ವನಾಥ ಹೆಸರಿನ ರೂಪವೇ ಆಗಿದೆ. ವರದೇವತೆ ಪದ್ಮಾವತಿಯು ಪಾರ್ಶ್ವನಾಥನ ಯಕ್ಷಿಯಾಗಿದ್ದು, ಆ ಹೆಸರಿನ ಆಡುನುಡಿಯ ರೂಪವೇ ಪದುಮರಸಿ (ಪದುಮ+ಅರಸಿ) ಆಗಿದ್ದು, ನಾಯಕನೊಬ್ಬನ ಪತ್ನಿಯಾಗಿದ್ದರಿಂದ ನಾಯ್ಕತಿ ಎನ್ನುವ ಉತ್ತರಪದ ಅಂಟಿಕೊಂಡಿದೆಯೆಂದು ಹೇಳಬಹುದು.
ಮಳ್ಕಿ (ಮಕ್ಕಿ-ವಿಜಾತೀಯ ದ್ವಿತ್ವವು ಸಜಾತೀಯ ದ್ವಿತ್ವವಾಗಿದೆ.) ಮತ್ತು ಆನೆವಳಿ (ಆನೆ+ಪಳ್ಳಿ=ಆನೆಪಳ್ಳಿ> ಆನೆವಳ್ಳಿ. ಇಲ್ಲಿ ಪ>ವ ಆಗಿದೆ.) ಇವು ಸ್ಥಳನಾಮಗಳಾಗಿವೆ. ಹಾಗೆಯೇ ಚಂನಭೈರಾದೇವಿ, ಹೈವಣನಾಯ್ಕ, ಪಾರಿಸದೇವ ನಾಯ್ಕ, ಪದುಮರಸಿನಾಯ್ಕತಿ ಇವು ವ್ಯಕ್ತಿನಾಮಗಳಾಗಿವೆ. ಪುಲ್ಲಿಂಗ ರೂಪವಾದ ನಾಯ್ಕ (ನಾಯಕ) ಇದಕ್ಕೆ ಸ್ತ್ರೀಲಿಂಗವಾಚಿ ಇತಿ ಸೇರಿಕೊಂಡು ನಾಯ್ಕತಿ (ನಾಯ್ಕ+ಇತಿ) ಆಗಿದೆ.
ಶಾಸನದ ಕಾಲವನ್ನು ‘ಶ್ರೀಮುಖ ಸಂವತ್ಸರದ ಚೈತ್ರ ಶು ೫ಲು’ ಎಂದು ಶಾಸನವು ಉಲ್ಲೇಖಿಸುತ್ತಿದ್ದು, ಚೆನ್ನಭೈರಾದೇವಿಯ ಕಾಲವು ಕ್ರಿ.ಶ.೧೫೪೯-೧೬೦೫ ಆಗಿರುವುದರಿಂದ, ಪ್ರಸ್ತುತ ಶಾಸನದ ಕಾಲವನ್ನು ಕ್ರಿ.ಶ.ಮಾರ್ಚ್ ೮, ೧೫೭೩ ಭಾನುವಾರವಾಗಿದೆಯೆಂದು ಗುರುತಿಸಬಹುದು.

ಶಾಸನದ ಪೂರ್ಣಪಾಠವು ಕೆಳಗಿನಂತಿದೆ
೧        ಶ್ರೀಮುಖ ಸಂವತ್ಸರದ ಚೈತ್ರ ಶು ೫ಲು ಶ್ರೀಮನ್ಮಹಾಮಂಡಲೇಶ್ವರ ಚೆಂ-
೨        ನಭೈರಾದೇವಿ ಅಮ್ಮನವರ ಮಹಾಪ್ರಧಾನ ಹೈವಣನಾಯ್ಕರ ಮ-
೩        ದವಳಿಗೆ ಪಾರಿಸದೇವನಾಯ್ಕರ ಮಗಳು ಮಳ್ಕಿಯಲ್ಲಿ ಹುಟ್ಟಿಕೊಂಡ
೪        ಆನೆವಳಿಯ ಪದುಮರಸಿನಾಯ್ಕತಿಯರು ಆಣತಿ ನೋ[ಂ]ಪಿಯ ವುದ್ಯಾಪ-
೫        ನೆಗೆ ತಮಗೆ ಪುಣ್ಯಾರ್ಥಕೆ ಮಾಡಿಸಿದ ಚವೀಸ ತೀರ್ಥಕ[ಂಕರ]ರಿಗೆ ಮಂಗಲಮಸ್ತು ಶ್ರೀ [||*]

ಅರಟಾಳದ ಅಪ್ರಕಟಿತ ಶಾಸನಗಳು
ಇಂದಿನ ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲೂಕಿನ ಒಂದು ಹಳ್ಳಿ ಅರಟಾಳ. ಶಿಗ್ಗಾಂವಿಯಿಂದ ದಕ್ಷಿಣಕ್ಕೆ ಸುಮಾರು ೨೫ ಕಿ.ಮೀ. ದೂರದಲ್ಲಿದೆ. ಈಗ ದೊರೆಯುವಂತೆ ಕಲ್ಯಾಣಚಾಲುಕ್ಯರ ಪ್ರಾರಂಭಿಕ ಕಾಲದಲ್ಲಿ ನಿರ್ಮಾಣಗೊಂಡ ಗರ್ಭಗೃಹ, ನಾಲ್ಕು ಕಂಬಗಳುಳ್ಳ ನವರಂಗಗಳಿಂದ ಕೂಡಿದ ಬಸದಿಯೊಂದಿದೆ. ಅದರ ನವರಂಗದ ಬಲಮೂಲೆಯಲ್ಲಿ ಶಾಸನದ ಫಲಕವೊಂದು ನಿಂತಿದೆ. ನವರಂಗದಲ್ಲಿಯ ಪಾರ್ಶ್ವನಾಥ ತೀರ್ಥಂಕರನ ವಿಗ್ರಹದ ಪಾದಪೀಠದಲ್ಲಿ ಶಾಸನವಿದೆ. ಶಾಂತಿನಾಥ ತೀರ್ಥಂಕರನ ವಿಗ್ರಹವೊಂದು ಗರ್ಭಗುಡಿಯಲ್ಲಿದ್ದು, ಅದರ ಮೇಲೆಯೂ ಶಾಸನದ ಸಾಲುಗಳನ್ನು ಕೆತ್ತಲಾಗಿದೆ.
ಊರ ಪ್ರಾರಂಭದಲ್ಲಿಯೇ ವೀರಭದ್ರನ ಗುಡಿಯೆಂದು ಕರೆಯಿಸಿಕೊಳ್ಳುವ ಇತ್ತೀಚಿನ ಗುಡಿಯೊಂದಿದ್ದು, ಅದರ ಎದುರಿಗೆ ಶಾಸನದ ಫಲಕವೊಂದು ಬಿದ್ದಿದೆ. ಕಲ್ಮೇಶ್ವರ ಗುಡಿಯೆಂದು ಕರೆಯಿಸಿಕೊಳ್ಳುವ ಪುರಾತನ ದೇಗುಲ ಜೀರ್ಣಾವಸ್ಥೆಯಲ್ಲಿದ್ದು ಅದರ ಮುಂದೆ ದೊಡ್ಡ ಹೊಂಡವೊಂದಿದೆ. ಅದರ ದಂಡೆಯಲ್ಲಿ ಮೂರು ವೀರಗಲ್ಲುಗಳನ್ನು ನಿಲ್ಲಿಸಿದ್ದು, ಎರಡರ ಮೇಲೆ ಲಿಪಿ ಇದೆ. ವೀರಭದ್ರನ ಗುಡಿ ಎದುರಿನ ಎರಡು ಗಾಲಿಗಳ ಮೇಲೆಯೂ ಅಕ್ಷರಗಳಿವೆ.
ಹೀಗೆ ಇಡೀ ಊರಲ್ಲಿ ದೊರೆಯುವ ಶಾಸನಗಳ ಸಂಖ್ಯೆ ಏಳು. ಆದರೆ ಧಾರವಾಡ ಜಿಲ್ಲೆಯ ಶಾಸನ ಸೂಚಿಯಲ್ಲಿ ಗುರುತಿಸಿರುವಂತೆ ಕೇವಲ ನಾಲ್ಕು ಶಾಸನಗಳ ಕುರಿತು ರಿಪೋರ್ಟಗಳಲ್ಲಿ ವರದಿಯಾಗಿದೆ. ಇನ್ನುಳಿದ ೩ ಶಾಸನಗಳನ್ನು ಗುರುತಿಸಿಲ್ಲ. ಡಾ|| ಹಂಪನಾ ಅವರ ಸೂಚನೆಯಂತೆ, ಇತ್ತೀಚೆಗೆ ನಾನು ನಡೆಸಿದ ಪರಿವೀಕ್ಷಣೆಯಲ್ಲಿ ಪಡಿಯಚ್ಚು ಮಾಡಿಕೊಂಡ ಈ ಏಳು ಶಾಸನಗಳ ಪಠ್ಯವನ್ನು ಹೊರತರುತ್ತಿದ್ದೇನೆ.
೧
ಬಸದಿಯ ಹಿಂಬದಿಯ ದಿಬ್ಬದಲ್ಲಿ ಹೂತಿರುವ ಶಾಸನ
ಕ್ರಿ.ಶ. ೧೦೬೧
ಶಾಸನದ ಮೇಲಿನ ೧’ ಭಾಗದಲ್ಲಿ ಮುಕ್ಕೊಡೆ ಸಹಿತ ಪರ್ಯಂಕಾಸನಸ್ಥ ತೀರ್ಥಂಕರ ಶಿಲ್ಪವಿದ್ದು, ಎಡ-ಬಲಗಳಲ್ಲಿ ಚಾಮರಧಾರಿಗಳಿದ್ದಾರೆ. ತೀರ್ಥಂಕರನ ಎಡಪಕ್ಕದಲ್ಲಿ ಕರುವಿಗೆ ಹಾಲೂಡುತ್ತಿರುವ ಆಕಳಿನ ಉಬ್ಬುಶಿಲ್ಪವಿದ್ದು, ಅದರ ಮೇಲೆ ಚಂದ್ರನಿದ್ದಾನೆ. ಶಾಸನದ ಬಲಭಾಗ ಅಂದಾಜು ೮’’ ರಿಂದ ೧೦’’ ಗಾತ್ರದ ಕಲ್ಲು ಒಡೆದು ಕಳೆದಿದೆ. ಈಗ ಲಭ್ಯವಿರುವ ಶಾಸನವೂ ಮಧ್ಯದಲ್ಲಿ ಎರಡು ತುಂಡುಗಳಾಗಿ ಒಡೆದಿದೆ. ೧’’ ಗಾತ್ರದ ಅಕ್ಷರಗಳನ್ನು ಆಳವಾಗಿ ಕೆತ್ತಲಾಗಿದೆ.
೫೦’’ ಉದ್ದ ೨೪’’ ಅಗಲದ ಕರಿಕಲ್ಲಿನ ಮೇಲೆ ಶಾಸನವನ್ನು ಕೆತ್ತಿದ್ದು, ೩೮ ಸಾಲುಗಳನ್ನು ಹೊಂದಿದೆ. ಕಲ್ಯಾಣ ಚಾಲುಕ್ಯ ಚಕ್ರವರ್ತಿ ತ್ರೈಳೋಕ್ಯಮಲ್ಲ ಮೊದಲನೆಯ ಸೋಮೇಶ್ವರನ ಕಾಲದ ಶಾಸನವಿದಾಗಿದ್ದು, ಶಾಸನದಲ್ಲಿರುವ ಮಿತಿಯು ಕ್ರಿ.ಶ.೧೦೬೧ರ ಜನೆವರಿ ೧೪ಕ್ಕೆ ಸರಿಹೊಂದುತ್ತದೆ.
ಗಂಗ ಪೆರ್ಮಾಡಿದೇವರು ಗಂಗವಾಡಿ ತೊಂಬತ್ತಾರು ಸಾವಿರ ಬನವಸೆ ಪನ್ನಿರ್ಚ್ಛಾಸಿರಗಳನ್ನು ಆಳುತ್ತಿರುವಾಗ, ಪಾನುಂಗಲ್ಲು ಐನೂರಿನಲ್ಲಿ ಮಯೂರವರ್ಮನ ಮಗ ಕಾದಂಬ ಚಕ್ರೇಶ್ವರನಾದ ಹರಿಕೇಸರಿ ಮಹಾಮಂಡಳೇಶ್ವರನಾಗಿ ರಾಜ್ಯಭಾರ ಮಾಡುತ್ತಿದ್ದ. ಆತನ ಪತ್ನಿ ದಾನಚಿಂತಾಮಣಿ ಎನಿಸಿದ ಲಚ್ಚಲದೇವಿ ಮಲ್ಲವುರ, ಬಂಕಾಪುರ, ಪುಲ್ಲಣಿಗಳಲ್ಲಿ ಶಿವದೇವಾಲಯಗಳನ್ನು ನಿರ್ಮಿಸಿದಳಂತೆ. ಹಾಗೆಯೇ ಹರಿಯಬ್ಬೆಯ ಬಸದಿ ಹೆಸರಿನ ಜಿನಾಲಯಕ್ಕೆ ದಾನ ಕೊಟ್ಟ ಉಲ್ಲೇಖ ಪ್ರಸ್ತುತ ಶಾಸನದಲ್ಲಿದೆ. ಬಹುಶಃ ಇಲ್ಲಿ ಉಲ್ಲೇಖಿತಳಾದ ಹರಿಯಬ್ಬೆ ಹರಿಕೇಸರಿಯ ಅಜ್ಜಿ ಮತ್ತು ಅಜ್ಜ ಹರಿಕಾಂತದೇವನ ಹೆಂಡತಿಯಾಗಿರಬಹುದೆಂದು ಊಹಿಸಬಹುದಾಗಿದೆ, ಶಾಸನವು ತ್ರುಟಿತಗೊಂಡಿರುವುದರಿಂದ ಅವರಿಬ್ಬರ ನಡುವಣ ಸಂಬಂಧ ಸ್ಪಷ್ಟವಾಗುವುದಿಲ್ಲ.
ಮೂಲಸಂಘ, ಸೇನಗಣ, ಚಂದ್ರಿಕಾವಾಟ ಗಚ್ಛದ ಅಜಿತಸೇನ ಭಟ್ಟಾರಕದೇವರ ನಂತರದ ಆಚಾರ್ಯ ಪರಂಪರೆಯಲ್ಲಿದ್ದ ನರೇಂದ್ರಸೇನಮುನಿ, ಸಮನ್ತಭದ್ರದೇವರು, ಅಷ್ಟೋಪವಾಸಿ, ದೇವಸೇನ ಎಂಬವರನ್ನು ಈ ಶಾಸನ ಬಣ್ಣಿಸುತ್ತದೆ.
ಕದಂಬ ಮಹಾಮಂಡಳೇಶ್ವರ ಹರಿಕೇಸರಿದೇವರು ಹಾಗೂ ಆತನ ಮಡದಿ ಲಚ್ಚದೇವಿಯರು ಸೇರಿ ಹರಿಯಬ್ಬೆಯ ಬಸದಿಯ ಖಣ್ಡಸ್ಫುಟಿತ ಜೀರ್ಣೋದ್ಧಾರಗಳಿಗಾಗಿ ಕೆರೆಯ ಕೆಳಗೆ ಎರಡು ಮತ್ತರು ಭೂಮಿ ದಾನವಾಗಿ ಕೊಟ್ಟುದನ್ನು ಶಾಸನ ದಾಖಲಿಸುತ್ತದೆ.
ಈ ಶಾಸನದಲ್ಲಿ ಉಲ್ಲೇಖಿತನಾದ ಮಹಾಮಂಡಳೇಶ್ವರ ಹರಿಕೇಸರಿದೇವ ಹಾನಗಲ್ಲು ಕದಂಬ ಮಹಾಮಂಡಳೇಶ್ವರ ಮಯೂರವರ್ಮ ಹಾಗೂ ಕಲ್ಯಾಣ ಚಾಲುಕ್ಯ ಚಕ್ರವರ್ತಿಗಳಾಗಿದ್ದ ಐದನೆಯ ವಿಕ್ರಮಾದಿತ್ಯ ಹಾಗೂ ಜಗದೇಕಮಲ್ಲ ಇಮ್ಮಡಿ ಜಯಸಿಂಹರ ಸೋದರಿ ರಣಭೈರವಿ ಎನಿಸಿದ ಅಕ್ಕಾದೇವಿಯರ ಹಿರಿಯ ಮಗ ಎನ್ನುವುದು ಗಮನಾರ್ಹ.
ಈಗಾಗಲೇ ಅರಟಾಳದಲ್ಲಿ ದೊರೆತಿರುವ ಶಾಸನವೊಂದು ಪಯಿಠ್ಠಣದ ಬೆಟ್ಟಕೇರಿಯ ಗಂಗರ ಬಮ್ಮಿಸೆಟ್ಟಿ ಮಾಡಿಸಿದ ಬಸದಿಯೊಂದನ್ನು ಹೆಸರಿಸುತ್ತಿದ್ದು, ಈ ಶಾಸನ ಹರಿಯಬ್ಬೆಯ ಬಸದಿ ಎಂಬ ಹೆಸರಿನ ಇನ್ನೊಂದು ಬಸದಿ ಅಲ್ಲಿದ್ದುದನ್ನು ಸೂಚಿಸುತ್ತದೆ. ಈ ಶಾಸನ ದೊರೆತ ಸ್ಥಳದಲ್ಲಿ ಉತ್ಖನನ ನಡೆಸಿದರೆ ಶಾಸನದ ಇನ್ನೊಂದು ತುಣುಕು ಹಾಗೂ ಬಸದಿಯ ಅವಶೇಷಗಳು ದೊರೆಯಬಹುದಾಗಿದೆ.
ಹರಿಕೇಸರಿಯ ಠಾಣ ಅಥವಾ ಹರಿಯಬ್ಬೆಯ ಠಾಣ ಎಂದು ಪ್ರಾರಂಭದಲ್ಲಿ ಕರೆಸಿಕೊಂಡ ಈ ಊರು, ಹರಿಠಾಣ ಎಂದು ಇಲ್ಲಿಯ ಇನ್ನುಳಿದ ಶಾಸನಗಳಲ್ಲಿಯೂ ಉಲ್ಲೇಖಗೊಂಡು, ಹರಿಠಾಣ>ಅರಿಠಾಣ>ಅರಠಾಣ>ಅರಟಾಣ>ಅರಟಾಳ ಎಂದು ಕಾಲಾಂತರದಲ್ಲಿ ಹೆಸರು ಬದಲಿಸಿಕೊಂಡಿದೆ ಎಂದು ಹೇಳಬಹುದು. ಹ>ಅ ಆಗುವುದು, ಠ>ಟ ಆಗುವುದು, ಣ>ಳ ಆಗುವುದು ಕನ್ನಡ ಭಾಷೆಯ ಬೆಳವಣಿಗೆಯಲ್ಲಿ ಸಹಜ ಕ್ರಿಯೆಯಾಗಿದೆ.
ಕಲ್ಯಾಣ ಚಾಲುಕ್ಯರ ಮಹಾಮಂಡಳೇಶ್ವರರಾಗಿ ಸುಮಾರು ಇನ್ನೂರು ವರ್ಷಗಳವರೆಗೆ ಆಳಿದ ಹಾನುಗಲ್ಲು ಕದಂಬರ ಒಂದು ಪ್ರಮುಖ ಶಾಖೆ ಬಂಕಾಪುರವನ್ನು ಕೇಂದ್ರವಾಗಿಟ್ಟುಕೊಂಡು ಆಳಿದೆ. ಈ ವಂಶದ ಪ್ರಮುಖ ಅರಸರ ವಂಶಾವಳಿಯನ್ನು ಹೀಗೆ ನೀಡಬಹುದು.
ಹರಿಕಾಂತದೇವ + ಹರಿಯಬ್ಬೆ
|
ಮಯೂರವರ್ಮ + ಅಕ್ಕಾದೇವಿ
|
------------------------------------------
                         |                      |                                   |
ಹರಿಕೇಸರಿ+ಲಚ್ಚಲದೇವಿ          ತೋಯಿಮದೇವ+ಮಾಳಲದೇವಿ           ಹರಿಕಾಂತದೇವ
ಈ ಮನೆತನದ ಇವರೆಲ್ಲರ ವ್ಯಕ್ತಿತ್ವ, ಸಾಧನೆ, ದಾನ-ಧರ್ಮಗಳ ಕುರಿತಾಗಿ ಹಾವಣಗಿ, ಬೆಳವತ್ತಿ, ಗುಡಗುಡಿ, ಬೈಚವಳ್ಳಿ, ಹೊಟ್ಟೂರು, ಶಿಗ್ಗಾಂವ, ಆಡೂರು, ಹಾನಗಲ್ಲು, ಬಂಕಾಪುರ, ನೀರಲಗಿ, ಕಾಗಿನೆಲ್ಲಿ, ಮಂತಗಿ, ಸೂಡಿ, ಹಿರೆಕಣಗಿ, ಉಪ್ಪುಣಸಿ, ಮಲಗುಂದ, ಹಿರೇಬಾಸೂರು, ಅಕ್ಕಿವಳ್ಳಿ, ಅರಳೇಶ್ವರ, ನರೇಗಲ್ಲು ಶಾಸನಗಳು ಸುಂದರವಾಗಿ, ಸುದೀರ್ಘವಾಗಿ ವರ್ಣಿಸುತ್ತವೆ.
ಶಾಸನದ ಪಾಠ
೧          [ಶ್ರೀಮತ್ಪರಮಗಂಭೀರ ಸ್ಯಾದ್ವಾದಾಮೋಘ ಲಾಂಛ*]ನಂ ಜೀಯಾ ತ್ರೆ ಳೋಕ್ಯನಾಥಸ್ಯ ಶಾಸನಂ ಜಿನಶಾಸನಂ ||
೨          [ಸ್ವಸ್ತಿ ಸಮಸ್ತ ಭುವನಾಶ್ರಯ*] ಶ್ರೀ ಪ್ರಿಥ್ವೀವಲ್ಲಭ ಮಹಾರಾಜಾಧಿರಾಜ ಪರಮೇಶ್ವರಂ ಪರಮ
೩          [ಭಟ್ಟಾರಕಂ ಸತ್ಯಾ*]ಶ್ರಯ ಕುಳತಿಳಕಂ ಚಾಳುಕ್ಯಾಭರಣಂ ಶ್ರೀಮತ್ರೈಳೋಕ್ಯ-
೪          [ಮಲ್ಲದೇವರ ವಿಜಯ*]ರಾಜ್ಯಮುತ್ತರೋತ್ತರಾಭಿವ್ರಿದ್ಧಿ ಪ್ರವರ್ದ್ಧಮಾನಮಾಚಂದ್ರಾ-
೫          [ರ್ಕ್ಕತಾರಂಬರಂ ಸಲು*]ತ್ತಮಿರೆ ತತ್ಪುತ್ರಂ ಸ್ವಸ್ತಿ ಸತ್ಯವಾಕ್ಯ ಕೊಂಗುಣಿವರ್ಮ್ಮ ಧರ್ಮ್ಮ
೬          [ಮಹಾರಾಜಾಧಿರಾಜ ಕೋ*]ಳಾಳ ಪುರವರೇಶ್ವರಂ ಪದ್ಮಾವತೀಲಬ್ಧ ವರಪ್ರಸಾದಂ ಶ್ರೀಮಚ್ಚಾಳುಕ್ಯ ಗಂಗ ಪೆ-
೭          [ರ್ಮ್ಮಾಡಿದೇ*]ವರ್ಗ್ಗಂಗವಾಡಿ ತೊಬತ್ತಱುಸಾಸಿರಮುಂ ಬನವಸೆ ಪನ್ನಿರ್ಚ್ಛಾಸಿರಮುಮಂ
೮          [ದುಷ್ಟನಿಗ್ರಹದಿಂ ಶಿಷ್ಟ ಪ್ರತಿ*]ಪಾಳನದಿಂ ಸುಖಸಂಕಥಾ ವಿನೋದದಿನರಸುಗೆಯ್ಯುತ್ತಮಿರೆ || ಸ್ವಸ್ತಿ ಸಮಧಿಗ-
೯          [ತ ಪಂಚಮಹಾಸಬ್ದ ಮಹಾ*]ಮಣ್ಡಳೇಶ್ವರಂ ಬನವಾಸೀ ಪುರವರೇಶ್ವರಂ ಧರಣೀದೇವತಾ ರುದ್ರ ಒರಸಾದೋತ್ಪಾ-
೧೦       . . . . . . . . . ಮಯೂರವರ್ಮ್ಮ ವಂಸೋದ್ಭವ ಅಷ್ಟಾದಸಾಸ್ವಮೇಧ ದೀಕ್ಷಿತ ಸತ್ಯ ನಿತ್ಯ
೧೧       [. . . . ರಿಪುರಾಜ ಕುಂಜರ ಪ್ರ*]ತಿಪನ್ನ ಮೇರು ಸರಣಾಗತ ವಜ್ರಪಂಜರ ಕಡಂಬರಾಭರಣಂ ಶ್ರೀಮನ್ಮಹಾಮಣ್ಡ-
೧೨       [ಳೇಶ್ವರಂ ಹರಿಕೇಸರಿದೇವರ್ಬ್ಬ]ನವಸೆ ಪನ್ನಿರ್ಚ್ಛಾಸಿರಮುಮಂ ಪಾನುಂಗಲ್ಲಯ್ನೂಱುಮಂ ದುಷ್ಟನಿಗ್ರಹ ವಿಶಿಷ್ಟ ಪ್ರ-
೧೩       [ತಿಪಾಳನದಿಂ ಸುಖಸಂಕಥಾ ವಿನೋದದಿಂ*] ರಾಜ್ಯಂಗೆಯ್ಯುತ್ತಮಿರೆ || ವೃ || ಜಳಧಿವಳಯ ಮಧ್ಯೇ ಕ್ಷತ್ರಿಯಾನ್ವಯಾ
೧೪       . . . . . . . . . . . ತತ್ಸೂರ್ಯೃ ಸೋಮಾಂಸುಜಾತಾನ್ ಅ . ಶಿರಶಿಚ ತೇಷಾಂ ಬದ್ಧತೇ ರಾಜಪಟ್ಟಂ ತ-
೧೫       . . . . . . . . . . . ತರಂ ಕುಳನ || ಹರಿರಾಜ ಧ್ವಜ ಸಪ್ತಸಪ್ತತಿ ಕದಂಬಾಧೀಶ ಪೆರ್ಮ್ಮಟ್ಟಿ ತೂರ್ಯ್ಯ-
೧೬       [ರವಾಷ್ಟಾದಶ ವಾಜಿಮೇಧ*]ಚತುರಗ್ರಾಶೀತಿ ಸಂಖ್ಯಾ ಪುರೇಶ್ವರ ರುದ್ರಾನ್ವಯ ಸಿಂಹಲಕ್ಷ್ಮ ಹಿಮಸೈಳೇಂದ್ರೋ
೧೭       [ಪರಿಸ್ಥಾಪಿತ ಸ್ಥಿರಶಕ್ತು ಧ್ವ*] ಹಿರಣ್ಯಗರ್ಭ್ಭಮಹಿಮಂ ಕಾದಂಬ ಚಕ್ರೇಶ್ವರ || ವಚನ || ಆ ಕಾದಂಬ ಚಕ್ರೇಶ್ವರ
೧೮       . . . . . . . . . . . . ಸ್ವಸ್ತ್ಯನವರತ ಪರಮ ಕಲ್ಲ್ಯಾಣಾಭ್ಯುದಯ ಸಹಶ್ರ ಫಳಭೋಗಭಾಗಿನಿ ದ್ವಿತೀಯ
೧೯       [ಲಕ್ಷ್ಮೀ ಸಮಾನೆ ತ್ಯಾಗನಿಧಾ*]ನೆ ಶ್ರಿಂಗಾರ ಗಂಗಾತರಂಗಿಣಿ | ದಾನ ಚಿನ್ತಾಮಣಿ | ಗೌರೀಲಬ್ಧವರಪ್ರಸಾದೆ | ಚಂಪ-
೨೦       [ಕಾಮೋದೆ ವಿವೇಕ ವಿದ್ಯಾಧ*]ರಿ | ಸಕಳ ಕಳಾಧರಿ | ಗೋತ್ರ ಪವಿತ್ರೆ ಶೃಮದರಿಕೇಸರಿದೇವ ಮನಸ್ಸ-
೨೧       [ರೋವರ ರಾಜಹಂಸೆಯರ*]ಪ್ಪ ಶ್ರೀಮಲ್ಲಚ್ಚಲದೇವಿಯರ್ || ವೃತ್ತ || ಸಾ(?)ಸ ಸಿರಿಯೊಳ್ಮಲಂಗುವಳಿವೆಣ್ಡಿರೊಳೇಂ
೨೨       . . . . . . . . . . . ಮೆ ತಂನ್ನ ಮಾಂತನಮೆ ತಂನ್ನಡಗುಂತಿಯೆ ತಂನ್ನ ಪೆಂಪೆ ತಂನೆಸೆವ ಪತಿ
೨೩       . . . . . . . . . . . ಯೆ ಮೂಱು ಲೋಕಮಂ ಪಸರಿಸಿ . . ದಿಸಿತ್ತೆನಿಸೆ ಲಚ್ಚಲದೇವಿಯಿಂದೇಂ ಕೃತಾರ್ಸ್ಥೆಯೋ ||
೨೪       . . . . . . . . . . . ಳ್ವಿಜರಾಜ ಮಲ್ಲವುರದೊಳೆ ಬಂಕಾಪುರದೊಳ್ಪುಲ್ಲಣಿಯೊಳ್ಪುರಹರಾಲಯಂ ಸತ್ರಮಂ
೨೫       . . . . . . . . . . ಪ್ಪ ಶ್ರೀ ಮನ್ಮಹಾಮಂಡಳೇಶ್ವರಂ ಹರಿಕೇಸರಿದೇವರುಂ ಶ್ರೀಮಲ್ಲಚ್ಚಲದೇವಿಯರುಂ
೨೬       . . . . . . . . . . . ಯ ಸಾರ್ವ್ವರಿ ಸಂವತ್ಸರದುತ್ತರಾಯಣ ಶಂಕ್ರಾನ್ತಿಯುಮಾದಿತೃವಾರಂ-
೨೭       . . . . . . . . . . ಮೂಳಸಂಘದ ಸೇನಗಣ ಚಂದ್ರಕಾವಾಟಗಚ್ಚದ ಶ್ರೀ ಮದಜಿತಸೇ-
೨೮       [ನಭಟ್ಟಾರಕರ್ತ್ತದನ್ತೇವಾಸಿಗಳ್ ಕನಕಸೇನ] ಭಟ್ಟಾರಕದೇವರ ಶಿಶ್ಯರ್ || ಕನ್ದ || ಚಾಂದ್ರಂ ಕಾತಂತ್ರಂ ಜೈನೇಂದ್ರಂ ಶಬ್ದಾನುಸಾಸನಂ ಪಾ-
೨೯       [ಣಿನಿ ಮತ್ತೈಂದ್ರಂ ನರೇನ್ದ್ರ*]ಸೇನ ಮುನೀಂದ್ರಂಗೇಕಾಕ್ಷರಂ ಪೆಱಂಗಿವು ಮೊಗ್ಗೇ || ಅನ್ತೆನಿಸಿದ ನರೇಂ-
೩೦       [ದ್ರಸೇನ. . . . . .ಶಿಷ್ಯರ*]ಪ್ಪ ಸಮನ್ತಭದ್ರದೇವರ ವರಶಿಷ್ಯರಷ್ಟೋಪವಾಸಿದೇವಸೇನ
೩೧       . . . . . . . . . . .ಹರಿಯಬ್ಬೆಯ ಬಸದಿಗೆ ಖಣ್ಡಸ್ಫುಟಿತ ಜೀರ್ಣೋದ್ಧರಣಂ[ಕ್ಕಂ*]
೩೨       . . . . . . . . . ಗೆಱೆಯ ಕೆಳಗೆ ಬಿಟ್ಟ ಗಱ್ದೆಯ ಮತ್ತರೆರಡು ಅದಕ್ಕೆ ಸೀ[ಮೆ*]
೩೩       . . . . . . . . ಡುವಲುಂ ಕೆಱೆಯೇರಿ ಪಡುವಲ್ನಟ್ಟ ಕಲ್ಲು ವಾಯಾವ್ಯದ ಆ . .
೩೪       . . . . . . . ದಲು ಸವಣ್ಗಲ್ಲ ಧಂರ್ಮ್ಮಮಂ ಪ್ರತಿಪಾಳಿಸಿದಾತಂಗೆ ವಾರ[ಣಾಸಿ*]
೩೫       . . . . . . . . . . . . . . . . . . . ಸಾಸಿರ್ವ್ವರು ಬ್ರಾಹ್ಮಣರಿರ್ಗ್ಗೆ ಕೊಟ್ಟ ಫಳವೀ . .
೩೬       . . . . . . . . . . . . . . . . . . [ಕ*]ವಿಲೆಯುಮುಮಂ ಸಾಸಿರ್ವ್ವ ಬ್ರಾಹ್ಮಣರುಮನ[ಳಿದ*]
೩೭       [ದೋಷಂ ಸಾರ್ಗ್ಗುಂ || ಸ್ವದತ್ತಾಂ ವಾಯೋ ಹರೇತಿ] ವಸುನ್ಧರಾಃ ಸಷ್ಟಿರ್ವ್ವರ್ಶ ಸಹಶ್ರಾಣಿ[ವಿಷ್ಟಾಯಾಂ*]
೩೮       [ಜಾಯತೇ ಕ್ರಿಮಿಃ ||*]
೨
ವೀರಭದ್ರಗುಡಿ ಹಿಂದೆ ಕೆರೆದಂಡೆಯಲ್ಲಿರುವ ವೀರಗಲ್ಲು
ಂಖSIಇ ೧೯೪೩-೪೪ ಓಔ.೩
ಕ್ರಿ.ಶ. ೧೦೭೯
ವೀರಗಲ್ಲಿನ ಮೊದಲ ಪಟ್ಟಿಕೆಯಲ್ಲಿ ಕುದುರೆಯ ಮೇಲೇರಿದ ನಾಲ್ವರು ವೀರರೊಡನೆ ಧನುರ್ಧಾರಿಯಾದ ವೀರನೊಬ್ಬ ಹೋರಾಡುತ್ತಿದ್ದಾನೆ. ಅವನ ಹಿಂದೆ ತುಱುಗಳು, ಬಾರಿಸುವ ಊದುವ ಮೇಳದವರಿದ್ದಾರೆ. ಎರಡನೆಯ ಪಟ್ಟಿಕೆಯಲ್ಲಿ ೫ ಸಾಲುಗಳ ಶಾಸನವಿದೆ. ಮೂರನೆಯ ಪಟ್ಟಿಕೆಯಲ್ಲಿ ಪಲ್ಲಕ್ಕಿಯಲ್ಲಿ ವೀರನೊಬ್ಬನನ್ನು ಕೂಡಿಸಿಕೊಂಡು ಇಬ್ಬಿಬ್ಬರು ಅಪ್ಸರೆಯರು ಹೊತ್ತೊಯ್ಯುತ್ತಿದ್ದಾರೆ. ನಾಲ್ಕನೆಯ ಪಟ್ಟಿಕೆಯಲ್ಲಿ ೫ ಸಾಲುಗಳ ಶಾಸನ ಮುಂದುವರಿದಿದ್ದು, ಅದರ ಮೇಲೆ ಶಿವಲಿಂಗ-ಪೂಜಾರಿ-ನಂದಿಯರಿದ್ದು, ಹಿಂದೆ ವೀರನೊಬ್ಬ ಕುಳಿತಿದ್ದಾನೆ. ಶಾಸನ ಇಬ್ಭಾಗವಾಗಿ ಸೀಳಿ ಉರುಳಿ ಬಿದ್ದಿದೆ.
ಕದಂಬ ಮಹಾಮಂಡಳೇಶ್ವರ ತೇಲಪದೇವರು ಆಳುತ್ತಿರುವಾಗ, ಕೇಸವಗಾವುಂಡ ಮಗ ಸಾತಗಾವುಂಡ ತುಱುಗೊಳ್ ಕದನದಲ್ಲಿ ಕಾದಿ ವೀರಮರಣವನ್ನಪ್ಪಿದುದನ್ನು, ಆತನ ತಮ್ಮ ನಾಕಗಾವುಂಡ ಶಾಸನಕ್ಕೆ ಮತ್ತು ಕುಂದಗೋಳದ ಕೇಶವ ಕ್ರಮಿತರಿಗೆ ಬಿಟ್ಟ ಭೂದಾನವನ್ನು ತಿಳಿಸುತ್ತದೆ.
೪ನೆಯ ಸಾಲಿನಲ್ಲಿ, ಶ್ರೀಮತು ಚಾಳುಕ್ಯ ವಿಕ್ರಮವಂಶದ ೧೩ನೆಯ ಕಾಳಯುಕ್ತ ಸಂವತ್ಸರದ ಮಾಘ . . .
ವಾರ ಎಂಬ ಮಿತಿಯಿದ್ದು, ಆರನೆಯ ವಿಕ್ರಮಾದಿತ್ಯನ ೩ನೆಯ ಆಳ್ವಿಕೆಯ ವರ್ಷ ಕಾಳಯುಕ್ತ ಸಂವತ್ಸರವಾಗಿದ್ದು ಜನೆವರಿ ೧೦೭೯ ಆಗುತ್ತದೆ.
ಶಾಸನದ ಪಾಠ
೧          . . . . . . . || ಹರಿರಾಜದ್ವಜ ಸಪ್ತಸಪ್ತತಿ ಕಡಂಬಾಧೀಶ ಪೆರ್ಮ್ಮಟ್ಟಿ ತೂರ್ಯ್ಯರವಾಷ್ಪಾದಶ ವಾಜಿಮೇಧ
            ಚತುರಾ-
೨          ಸೀತಿ ಸಂಖ್ಯಾಪುರೇಶ್ವರ ರುಂದ್ರಾನ್ವಯ ಸಿಂಘಲಕ್ಷ್ಮ ಹಿಮಶೈಳೇಂದ್ರ ಪರಿಸ್ಥಾಪಿತ ಸ್ಥಿರ ಶಕ್ತು ದ್ಘ
೩          ಮಹಿಮಾಭಿರಾಮಂ ಕಾಡಂಬ ಚಕ್ರೇಶ್ವರ || ಅನ್ತು ವಂಶೋದ್ಭವನೆನಿಸಿದ ಶ್ರೀ ಮನ್ಮಹಾಮಂಡಳೇಶ್ವರಂ
            ತೈಲಪದೇವರು
೪          . . ಗಾವುಂಡ ಶ್ರೀಮತು ಚಾಳುಕ್ಯ ವಿಕ್ರಮ ವರಿಶದ ೧೩ನೆಯ ಕಾಳಯುಕ್ತ ಸಂವತ್ಸರದ ಮಾಘ . . .
೫          ವಾರದಂದು ಶ್ರೀಮತು ವಾಟಂ ಹರಿಟಾಣದ ತುಱುವಂ ಕೊಳುವಲ್ಲಿ ಕೇಸವಗಾವುಂಡರ ಮಗ ಸಾತಗಾ-
೬          ವುಂಡ ತುಱುಗೋಳ ಕಡು ಕಡೆಗಣಿಸ ಪೋಗದೆಂದು ಕಾದಿ ತುಱುವಂ ಮಗುರ್ಚ್ಚಿ ಸುರಲೋಕಕ್ಕೆ ಸಂದನಾತನ
            ಗಂಡವಾ-
೭          ತಂ ಮೆಚ್ಚಿ || ಎಸೆದವು ದೇವದುಂದುಭಿಗಳಂಬರದೊಳು | ಸುರಕನ್ನಯರ್ಕ್ಕಳುಂ ಪಸರಿ ಪರ್ಬ್ಬಿ ಬಂದು ಪ್ರಭು ಸಾತಯ-
೮          ನೊಳ್ಕಿದನೆಂದು ರಾಜಗಿಂದೊಸೆದಮಳ್ದಪ್ಪಿಯುಯ್ದರಮರಾವತಿಯ ಸಾಂಕನ್ನೆಯರ್ಕ್ಕಳು || @
೯          ಸಾತಗಾವುಡಂನ ತಮ್ಮ ನಾಕಗಾವುಂಡ ಸಾಸನಕ್ಕೆ ಬಿಟ್ಟ ಗದ್ದೆ ತಮ್ಮ ಮೂವತ್ತು | ಕುಂದಗೋಳದ ಕೇಶವಕ್ರಮಿತ
೧೦       ರಿಗೆ ಬಿಟ್ ಗಱ್ದೆ  ಕಮ್ಮವಿಪ್ಪತ್ತು | ಮಾಗೆ ಸವಾಸಿ ಅಂಬವಗೆ ಕಮ್ಮ ೧೦.
೩
ಬಸದಿಯ ನವರಂಗದಲ್ಲಿ ಶಾಸನ
ಂಖSIಇ ೧೯೪೩-೪೪ ಓಔ.೧
ಕ್ರಿ.ಶ. ೧೧೨೨
೧೬೩ ಸೆ.ಮೀ. ಎತ್ತರ  ೯೪ ಸೆ.ಮಿ. ಅಗಲವಿರುವ ಬೆಣಚುಕಲ್ಲಿನ ಶೀಲಾಫಲಕವಿದ್ದು, ನುಣುಪಾಗಿ ಮಾಡಿಕೊಂಡನು ೧೨]’’ ಗಾತ್ರದ ಅಕ್ಷರಗಳಲ್ಲಿ ಶಾಸನವನ್ನು ಕಂಡಸರಿಸಲಾಗಿದೆ. ಮೇಲಿನ ೩’ ಭಾಗದಲ್ಲಿ ಉಬ್ದಬುಶಿಲ್ಪಗಳಿವೆ. ಆಕಳು, ಕರು, ಖಡ್ಗ, ಪೀಠದ ಮೇಲೆ ಕುಳಿತ ಸುಖಾಸನಸ್ಥ ಜಿನಬಿಂಬವಿದೆ. ಪಿಂಭ ಕಮಂಡಲಗಳು ಇದ್ದು, ಪ್ರಭಾವಳಿಯ ಮೇಲೆ ಮುಕ್ಕೊಡೆಯಿದೆ. ಎಡಬಲಗಳಲ್ಲಿ ಸೂರ್ಯಚಂದ್ರರಿದ್ದಾರೆ. ಜಿನ ಮಂಗಲಪದ್ಮದೊಂದಿಗೆ ಪ್ರಾರಂಭಗೊಳ್ಳುವ ಶಾಸನ ಕನಕಚಂದ್ರಸಿದ್ದಾಂತದೇವರ ಗುಡ್ಕ ಗಂಗರ ಬಮ್ಮಿಸೆಟ್ಟಿ ಈ ಬಸದಿಯನ್ನು ಮಾಡಿಸಿದನೆಂದು ತಿಳಿಸುತ್ತದೆ. ಕಲ್ಯಾಣಚಾಲುಕ್ಯ ಚಕ್ರವರ್ತಿ ತ್ರಿಭುವನಮಲ್ಲ ೬ನೆಯ ವಿಕ್ರಮಾದಿತ್ಯ ವಿಕ್ರಮಾದಿತ್ಯ ಆಳುತ್ತಿರುವಾಗ, ಕದಂಬ ತೈಲಪದೇವರು ಬನವಸೆ ಪನ್ನಿರ್ಚ್ಚಾಸಿರ ಪಾನುಂಗಲ್ ಐನೂರನ್ನು ಅಳುತ್ತಿದ್ದರೆಂದು ತಿಳಿಸುತ್ತದೆ.
ಮೂರುಕೇರಿಯ ಪ್ರಭುಗಾಮುಂಡುಗಳು, ಅರುವತ್ತೊಕ್ಕಲು, ಐನೂರ್ವರು ಸೇರಿ ಕೊನ್ತಕುಳಿಯ ಮೊದಲ ಹಳ್ಳಿ ಪಯಿಟ್ಟಣದ ಬೆಟ್ಟಕೇರಿಯ ಗಂಗರ ಬಮ್ಮಿಸೆಟ್ಟಿಯರು ಮಾಡಿಸಿದ ಬಸದಿಗೆ ಮೂಲಸಂಘದ ಕಾಣೂರ್ಗಣದ ಮೇಷಪಾಷಾಣಗಚ್ಛದ ಕನಕಚಂದ್ರಸಿದ್ಧಾಂತದೇವರ ಕಾಲ್ತೊಳೆದು, ದೇವರ ಅಷ್ಟವಿಧಾರ್ಚನೆಗೆ, ರಿಷಿಯರ ಆಹಾರದಾನಕ್ಕೆಂದು ಬಿಟ್ಟ ಭೂದಾನವನ್ನು ತಿಳಿಸುತ್ತದೆ. ಮುಂದುವರೆದು ಸುಂಕದಾನ ಮತ್ತು ನಂದಾದೀವಿಗೆಗೆ ಬಿಟ್ಟ ಎಣ್ಣೆದಾನವನ್ನು ವಿವರಿಸುತ್ತದೆ.
ಶಾಸನದ ೧೬ನೆಯ ಸಾಲಿನಲ್ಲಿ ಬರುವ “ಸಕವರ್ಷ ೧೦೪೫ನೆಯ ಶುಭ್ರಕ್ರಿತ್ಸರದ ಪುಷ್ಯಮಾಸಮವಾಸೆ ಆದಿತ್ಯವಾರ ಸೂರ್ಯ ಗ್ರಹಣದಂದು’’ ಎನ್ನುವ ಮಿತಿಯಲ್ಲಿ, ೧೦೪೫ನೆಯ ಶಕವರ್ಷ ಕ್ರಿ.ಶ.೧೧೨೩ರಲ್ಲಿ ಬರುತ್ತಿದ್ದು ಶೋಭನ ಸಂವತ್ಸರವಾಗಿದೆ. ಶುಭಕ್ರಿತ್ ಸಂವತ್ಸರವು ೧೦೪೪ರಲ್ಲಿ ಬರುತ್ತಿದ್ದು ಕ್ರಿ.ಶ.೧೧೨೨ ಎಂದು ಪರಿಗಣಿಸಿದರೆ ೨೦-೧೨-೧೧೨೨ಕ್ಕೆ ಹೊಂದುತ್ತಿದ್ದು, ವಾರ ಶಾಸನದಲ್ಲಿ ಸೂಚಿಸಿದಂತೆ ಆದಿತ್ಯವಾರವಾಗಿರದೆ ಶನಿವಾರವಾಗಿದೆ ಎಂಬುದನ್ನು ಗಮನಿಸಬೇಕು.
ಶಾಸನದ ಪಾಠ
೧          @ ಶ್ರೀಮತ್ಪರ ಗಂಭೀರ ಸ್ಯಾಧ್ವಾದಮೋಘ ಲಾಂಛನಂ ಜೀಯಾ ತ್ರೈಳೋಕ್ಯನಾಥಸ್ಯ ಶಾಸನಂ ಜಿನಶಾಸನಂ ||
೨          ಸ್ವಸ್ತಿ ಯಮನಿಯಮ ಸ್ವಾಧ್ಯಾಯ ಧ್ಯಾನಧಾರಣ ಮೋನಾನುಷ್ಠಾಣ ಸಮಾಧಿಶೀಳ ಸಂಪನ್ನ-
೩          ರಪ್ಪ ಕನಕಚಂದ್ರಾಸಿದ್ಧಾನ್ತದೇವರ ಗುಡ್ಡಂ ಗಂಗರ ಬಮ್ಮಿಸೆಟ್ಟಿ ಮಾಡಿಸಿದ ಬಸದಿ || ಮಂಗಳ ಮಹಾ ಶ್ರೀಶ್ರೀ
೪          @ ಸ್ವಸ್ತಿ ಸಮಸ್ತ ಭುವನಾಶ್ರಯಂ ಶ್ರೀ ಪ್ರಿಥ್ವೀವಲ್ಲಭಂ ಮಹಾರಾಜಾಧಿರಾಜಂ ಪರಮೇಶ್ವರಂ ಪರಮಭಟ್ಟಾರಕಂ ಸತ್ಯಾಶ್ರಯ ಕು-
೫          ಳತಿಳಕಂ ಚಾಳುಕ್ಯಾಭರಣಂ ಶ್ರೀಮತ್ತ್ರಿವನಮಲ್ಲದೇವರ ವಿಜಯರಾಜ್ಯಮುತ್ತರೋತ್ತರಾಭಿವ್ರಿದ್ದಿ ಪ್ರವರ್ಧಮಾನ-
೬          ಮಾಚಂದ್ರಾರ್ಕ್ಕು ತಾರಂಬರಂ ಸಲುತ್ತಮಿರೆ || ತತ್ಪಾದ ಪದ್ಮೋಪಜೀವಿ || ಸ್ವಸ್ತಿ ಸಮಧಿಗತ ಪಂಚಮಹಾಸಬ್ದ ಮಹಾಮಂಡಳೇಶ್ವರ
೭          ಬನವಾಸಿ ಪುರವರಾಧೀಶ್ವರಂ ಜಯನ್ತೀ ಮಧುಕೇಶ್ವರ ಲಬ್ಧವರಪ್ರಸಾದಂ ಮ್ರಿಗಮದಾಮೋದಂ ತ್ರ್ಯಕ್ಷಯಕ್ಷ[ಷಾ*]ಸಂಭ-
೮          ವಂ ಚತುರಾಶೀತಿ ನಗರಾಧಿಷ್ಠಿತಂ ಲಲಾಟಲೋಚನಂ ಚತುರ್ಬ್ಭುಜ ಜಗದ್ವಿದಿತಾಷ್ಟಾದಶಾಶ್ವಮೇಧ ದೀಕ್ಷಾದೀಕ್ಷಿತಂ
೯          ಹಿಮವದ್ಗಿರೀಂದ್ರ ರುದ್ರ ಶಿಖರೀಶಿಖರ ಸಂಸ್ಥಾಪಿತ ಸ್ಫಟಿಕ ಶಿಲಾಬದ್ಧ ಮದಗಜ ಮಹಾಮಹಿಮಾಭಿರಾಮಂ ಕಾ-
೧೦       ದಂಬಚಕ್ರಿ ಮಯೂರವರ್ಮ್ಮ ಮಹಾಮಹೀಪಾಳಕುಳಭೂಷಣಂ ಪೆರ್ಮ್ಮಟ್ಟಿ ತೂರ್ಯ್ಯ ನಿಗ್ಘೋಷಣಂ ಶಾಖಾಚರೇಂದ್ರ ಧ್ವ-
೧೧       ಜವಿರಾಜಮಾನ ಮಾನೋತ್ತುಂಗ ಸಿಂಹಲಾಂಛನಂ ದತ್ತಾರ್ತ್ಥಿಕಾಂಚನಂ ಸಮರ ಜಯಕಾರಣಂ ಕಡಂಬರಾಭರಣಂ ಮಾರ್ಕ್ಕೊಳ್ವರ ಗಂ
೧೨       ಡಂ ಪ್ರತಾಪಮಾರ್ತ್ತಂಡಂ ಮಂಡಳಿಕ ಗಂಡ ಬಂಗಾಱಂ ಶ್ರೀಮನ್ಮಹಾಮಂಡಳೇಶ್ವರಂ ತೈಲಪದೇವರ್ಬ್ಬನವಾಸೆ ಪಂನ್ನಿರ್ಚ್ಚಾಸಿರಮಂ ಪಾನುಂ-
೧೩       ಗಲ್ಗೈನೂಱಮನುಭಯ ಸಾಂಮ್ಯಮಾಳುತ್ತ ಸುಖಸಂಕಥಾ ವಿನೋದದಿಂ ರಾಜ್ಯಂಗೆಯ್ಯುತ್ತಮಿರೆ || ವ್ರಿತ್ತ || ಹರಿರಾಜದ್ವಜ
೧೪       ಸಪ್ತಸಪ್ತತಿ ಕಡಂಬಾಧೀಶ ಪೆರ್ಮ್ಮಟ್ಟಿ ತೂರ್ಯ್ಯರವಾಷ್ಟಾದಶವಾಜಿಮೇಧ ಚತುರಗ್ರಾಶೀತಿ ಸಂಖ್ಯಾಪುರೇಶ್ವರ ರುದ್ರಾ-
೧೫       ನ್ವಯ ಸಿಂಹಲಕ್ಷ್ಮ ಹಿಮಶೈಳೇಂದ್ರೋ ಪರಿಸ್ಥಾಪಿತ ಸ್ಥಿರಶಕ್ತ್ಯುದ್ಘ ಹಿರಣ್ಯಗರ್ಭ ಮಹಿಮಂ ಕಾದಂಬಚಕ್ರೇಶ್ವರಂ || ವ ||
೧೬       ಅನ್ತು ಪೆಂರ್ಮ್ಮೆಯನಾನ್ತ ತೈಲಪದೇವರಸರ್ಗ್ಗೆ || ಸಕವರ್ಷ ೧೦೪೫ನೆಯ ಶುಭಕ್ರಿತ್ಸಂವತ್ಸರದ ಪು-
೧೭       ಸ್ಯಮಾಸದಮದಾಸ್ಯೆ ಆದಿತ್ಯವಾರ ಸೂರ್ಯಗ್ರಹಣದಂದು ಕೊನ್ತಕುಳಿಯ ಮೊದಲ ಬಾಡಂ ಪಯಿಟ್ಟಣದ ಬೆಟ್ಟ-
೧೮       ಕೇರಿಯ ಗಂಗರ ಬಮ್ಮಿಸೆಟ್ಟಿಯರು ಮಾಡಿಸಿದ ಬಸದಿಗೆ ಮೂಱುಂಕೇರಿಯ ಪ್ರಭುಗಾಮುಂಡುಗಳುಂ ಅಱುವತ್ತೊಕ್ಕ-
೧೯       ಲು ಅಯಿನೂರ್ವ್ವರುಂ ಕಡಂಬ ಕುಳತಿಳಕಮೆಂದು ಪೆಸರಿಟ್ಟು ಬಿನ್ನಪಂಗೆಯ್ದು ಧರ್ಮ್ಮಪ್ರತಿಪಾಳನಾರ್ತ್ಥಂ || ನತ ಭೂಪಾ-
೨೦       ಳಕ ಮೌಳಿಸ್ಥಿತ ರತ್ನದ್ಯುತಿಗಳಿಂ ಪದದ್ಯುತಿಯೆಸೆಗುಂ ಸತತಂ ಸದ್ಯಾರುಚಿಯವೊಲ ತನ್ನ ಮದೇಭಾರಿ ಕನ-
೨೧       ಕಚಂದ್ರಬ್ರತಿಯ || ವ್ರಿ || ಅನುಪಮರೆಂದು ಬಣ್ಣಿಪುದನಾನಱಯೆಂ ತನು ಕಲ್ಲಕಂಭದನ್ತೆನಿತುಂ
೨೨       ಪರೀಷಹ ಪ್ರಬಳಭಾರಮನಾನ್ತುದು ಚಿತ್ತವಾತ್ಮಭಾವನೆಯೊಡಗೂಡಿತೀ ಕನಕಚಂದ್ರ ಮಹಾಮುನಿಪಂಗೆ ಕಾಲವ-
೨೩       ರ್ತ್ತನದವಸರ್ಪ್ಪಣಂ ನೆಗಳದಿರ್ದ್ದಡೆ ನೆಟ್ಟನೆ ರಿದ್ಧಿ ಪುಟ್ಟದೇ | ವೀರ ಮನೋಭವ ಪ್ರಬಳದರ್ಪ್ಪ ವಿಭಂಜನರುದ್ಧತ ತ್ತ್ರಿದಂಡಾ-
೨೪       ರಿ ಕುಳಾಚಳೇಂದ್ರ ಕುಳಿಶರ್ಕ್ಕಲಿಕಾಲ ವಿಮೋಹ ರಾಜನಿರ್ಧಾರಕರನ್ಯ ಶೂನ್ಯಮತಸನ್ತಮಸೋದಯ ಚಂ-
೨೫       ದ್ರರೆಂದು ವಿಸ್ತಾರದೆ ಬಣ್ಣಿಕುಂ ಕನಕಚಂದ್ರ ಮುನೀಂದ್ರನ ನಿಜಗರ್ಜ್ಜಮಂ || ಮುನಿಯೆ ಜಂಗಮ ಜೈನಬಿಬನನ ವದ್ಯಾ-
೨೬       ಭಾರನೆ ಜೈನಶಾಸನ ರಕ್ಷಾಮಣಿ ಶಾಂತನೆ ಸಕಳರಾಗ ದ್ವೇಷ ದೋಷ ಪ್ರಭಂಜನನುರ್ವ್ವೀ ನುತನೆ ಗುಣಪ್ರಣಯಿ
೨೭       ತಾನೆಂಬಿನಂ ವಿಶ್ವಮೇದಿನಿಯೊಳು || ಮಾಧವಚಂದ್ರದೇವನೆಸೆದಂ ಚಾರಿತ್ರ ಚಕ್ರೇಶ್ವರಂ || ಜಿನಮತ ಲಕ್ಷ್ಮಿಗಭ್ಯುದ-
೨೮       ಯಮಾದುದು ಭವ್ಯಜನಾನುರಾಗವರ್ತ್ತನೆಗೆ ವಿಶುದ್ಧ ಮಾರ್ಗ್ಗಮಳವಟ್ಟುದು ಸತ್ಯತಪೋನಿಧಾನ ನನ್ದನವನಿ ರಾ-
೨೯       ಜಿ ಪಲ್ಲವಿಸುತಿರ್ದ್ದುದು ಮಾಧವಚಂದ್ರದೇವನೆಂಬನುಪಮ ಯೋಗಿ ಪುಟ್ಟುಮದುವೀ ವಸುಧಾವಳಯಾಂತರಾಳ-
೩೦       ದೊಳು || ಇನ್ತು ನೆಗರ್ತ್ತೆವೆತ್ತ ಶ್ರೀ ಮೂಲಸಂಘದ ಕಾಣೂರ್ಗ್ಗಣದ ಮೇಷ ಪಾಷಾಣಗಚ್ಛದ ಕನಕಚಂದ್ರ ಸಿಧ್ಧಾನ್ತದೇವರ ಪಾ-
೩೧       ದ ಪ್ರಕ್ಷಾಳನಂಗೆಯ್ದು ಧಾರಾಪೂರ್ವ್ವಕಂ ಮಾಡಿ ದೇವರಷ್ಟವಿಧಾರ್ಚನೆಗಂ ರಿಷಿಯರಾಹಾರ ದಾನಕ್ಕಮೆಂದು ಬಿಟ್ಟ ಕೆಯ್ಯ ಸೀಮಾ
೩೨       ಸಮ್ಮಂಧಂ ಬೆಳ್ವಾವಿಯಿಂ ಮೂಡಲು ಗೋಗೆಱೆಯಿಂ ತೆಂಕಲು ಮಲ್ಲಿಗಾಮುಂಡಗೆಱೆಯ ಮೂಡಣ ಕೋಡಿಯಿಂ ಕೆಳಗೆ ಗರ್ದೆ ಪಿರಿಯ ಕೋ-
೩೩       ಲಲು ಮತ್ತರೊಂದು ೧ ಊರಿಂ ಪಡುವಣ ಬೆಂಡೆಕೆಱೆಯ ಕೆಳಗೆ ಗರ್ದ್ದೆ ಕಂಮ್ಮಂ ಇಪ್ಪತ್ತು ೨೦ ಅಲ್ಲಿ ಪೂದೋಂಟವೊಂದು ೧ ಬಸ-
೩೪       ದಿಯುತ್ತರದ ಬೀಡಿಯಿಂ ಬಡಗಲು ಪದಿನಯ್ದು ಕೈ ೧೫ ನಿವೇಶಣ ದಾನಶಾಲೆ ಅಯಿನೂರ್ವ್ವರು ಬಿಟ್ಟ ಧರ್ಮ್ಮ ಅಂಗಡಿ-
೩೫       ಯೊಳು ಸೊಂಟಿಗೆ ಹೊಱಗಣ ಬನ್ದ ಭಂಡಕ್ಕೆ ಹೊಂಗೆ ಸೊಂಟಿಗೆ ಯೊಂದು ೧ ಅಯ್ವತ್ತೊಕ್ಕಲು ದೇವರ ಸೊಡರೆಣ್ನೆಗೆ ಗಾಣದೊಳು ಕೊ-
೩೬       ಟ್ಟ ಸೊಂಟಿಗೆಯೊಂದು ೧ ಇನ್ತಿನಿತುಮಂ ಸರ್ವ್ವನಮಶ್ಯಮಾಗೆ ಪ್ರತಿಪಾಳಿಸಿದವರ್ಗ್ಗೆ ವಾರಣಾಸಿಯೊಳಂ ಅರ್ಗ್ಛ ತೀರ್ತ್ಥದೊಳಂ
೩೭       ಸಹಸ್ರ ಕಪಿಲೆಯಂ ಸಹಸ್ರ ಬ್ರಾಹ್ಮಣರಂ ಕೊಟ್ಟ ಫಲಮಕ್ಕು || ಇನ್ತೀ ಧರ್ಮ್ಮಮನಳಿದಾತನಾ ಕಪಿಲೆಯುಮನಾ ಬ್ರಾಹ್ಮ-
೩೮       ಣರುಮನಾ ತೀರ್ತ್ಥ[ದೊಳು ವಧಿಸಿದ ಮಹಾಪಾತಕನಕ್ಕುಂ*] || ಸ್ವದತ್ತಾ ಪರದತ್ತಾಂ ವಾಯೋ ಹರೇತಿ ವಸುಂಧರಾಂ ಷಷ್ಠಿರ್ವ್ವ-
೩೯       ರ್ಷ ಸಹಸ್ರಾಣಿ ವಿಷ್ಠಾಯಾಂ ಜಾಯತೇ ಕ್ರಿಮಿಃ ||
೪
ವೀರಭದ್ರ ದೇವಸ್ಥಾನದ ಎದುರಿಗೆ ಬಿದ್ದ ಶಾಸನ
ಂಖSIಇ ೧೯೪೩-೪೪ ಓo.೨
ಕ್ರಿ.ಶ. ೧೧೨೫
೨’ ಅಗಲ ೪’ ಎತ್ತರದ ಕರಿಕಲ್ಲಿನಲ್ಲಿ ಶಿಲಾಫಲಕವಿದಾಗಿದ್ದು, ಮೇಲೆ ಅರ್ಧ ವೃತ್ತಾಕಾರವಿದೆ. ಮೇಲ್ಬಾಗದ ೧೦’’ ಭಾಗದಲ್ಲಿ ಖಡ್ಗ, ಪೂಜಾರಿ, ಸೂರ್ಯ, ಶಿವಲಿಂಗ, ಚಂದ್ರ, ಆಕಳು ಹಾಗೂ ಕರುಗಳಿವೆ. ಕೆಳಗಿನ ೨’’ ಭಾಗದ ಪಟ್ಟಿಕೆಯಲ್ಲಿ ೨ ಸಾಲುಗಳ ಶಾಸನವಿದೆ. ನಂತರದ ೨’ ಭಾಗದ ಫಲಕದಲ್ಲಿ ೨/೪’’ ಗಾತ್ರದ ಅಕ್ಷರಗಳಲ್ಲಿ ಶಾಸನವನ್ನು ೧೨ನೆಯ ಶತಮಾನದ ಅಕ್ಷರಗಳಲ್ಲಿ ಕೆತ್ತಲಾಗಿದೆ. ಸಾಲುಗಳ ಅಕ್ಷರಗಳು ಅಲ್ಲಲ್ಲಿ ಚಕ್ಕಳೆ ಹಾರಿದ್ದರಿಂದ ತ್ರುಟಿತಗೊಂಡಿದೆ.
ಕಲ್ಯಾಣ ಚಾಲುಕ್ಯ ಚಕ್ರವರ್ತಿ ತ್ರಿಭುವನಮಲ್ಲ ಆಳುತ್ತಿರುವಾಗ, ಹಾನಗಲ್ಲ ಕದಂಬ ಮಹಾಮಂಡಲೇಶ್ವರ ತೈಲಪ ದೇವರು ಬನವಾಸಿ ಪನ್ನಿರ್ಚ್ಛಾಸಿರ ಪಾನುಂಗಲ್ಲೈನೂರನ್ನು ಆಳುತ್ತಿದ್ದನೆಂದು ತಿಳಿಸುತ್ತದೆ. ಹಾನಗಲ್ ಕದಂಬರ ಸಕಲ ಬಿರುದುಗಳನ್ನು ನೀಡುತ್ತದೆ. ನಂತರ ಹರಿಟಾಣದ ಮೂಲಸ್ಥಾನ ಕೇತೇಶ್ವರದೇವರಿಗೆ ಮಲ್ಲಗಾವುಡಗೆಱೆಯ ಎರಡು ಮತ್ತರು ಗದ್ದೆಯನ್ನು ದತ್ತಿಯಾಗಿ ಬಿಟ್ಟದ್ದನ್ನು ವಿವರಿಸಿ, ಕನ್ನಡ ಮತ್ತು ಸಂಸ್ಕೃತದಲ್ಲಿ ಫಲಶ್ರುತಿಯನ್ನು ಅರಹುತ್ತದೆ. ೨೧ನೇ ಸಾಲಿನಿಂದ ಶಿವಮಂಗಲ ಪದ್ಯದೊಂದಿಗೆ ಪ್ರಾರಂಭವಾಗಿ ಇನ್ನೊಂದು ದತ್ತಿಯನ್ನು ದಾಖಲಿಸುತ್ತದೆ. ಕಡಂಬ ಚಕ್ರೇಶ್ವರನ ಆಣತಿಯಂತೆ ಸಾತಗಾವುಂಡ ಕಣಗಿಲೆ ಬಯಲಲ್ಲಿ ೫೦ ಕಮ್ಮ ಕಾಳಗದ್ದೆ ಬಿಟ್ಟರೆ, ಅರುವತ್ತೊಕ್ಕಲು ಗಾಣದಲ್ಲಿ ಸೊಂಟಿಗೆ ಎಣ್ಣೆಯನ್ನು ದಾನವಾಗಿ ನೀಡಿದ್ದನ್ನು ತಿಳಿಸುತ್ತದೆ.
ಶಾಸನದ ೧೪-೧೫ನೆಯ ಸಾಲುಗಳಲ್ಲಿ ಬರುವ “ಸಕವರಿಷ ೧೦೪೭ನೆಯ ಕ್ರೋಧಿ ಸಂವತ್ಸರದ ಮಾಘ ಸುದ್ಧ . . . . ವಾರ ಸಂಕ್ರಾನ್ತಿಯುಂ ವೃತಿಪಾತಮುಂ’’ ಎಂಬ ಮಿತಿಯು ಕ್ರಿ.ಶ.೧೧೨೫ರ ಜನವರಿ ೨ ರಿಂದ ೨೦ರ ವರೆಗಿನ ಯಾವುದೋ ದಿನಕ್ಕೆ ಸಂಬಂಧಿಸಿದೆ.
ಶಾಸನದ ಪಾಠ
೧          ಸ್ವಸ್ತಿ ಸಮಸ್ತ ಭುವನಾಶ್ರಯ ಶ್ರೀ ಪ್ರಿಥ್ವೀವಲ್ಲಭ ಮಹಾರಾಜಾಧಿರಾಜ
೨          ಪರಮೇಶ್ವರಂ ಪರಮಭಟ್ಟಾರಕಂ ಸತ್ಯಾಶ್ರಯಕುಳತಿಳಕಂ ಚಾಳುಕ್ಯಾಭರಣಂ ಶ್ರೀಮ-
೩          ತ್ರಿಭುವನಮಲ್ಲದೇವ ವಿಜಯರಾಜ್ಯಮುತ್ತರೋತ್ತರಾಭಿವ್ರಿದ್ಧಿ ಪ್ರವರ್ದ್ಧಮಾನಮಾ-
೪          ಚಂದ್ರಾರ್ಕ್ಕತಾರಂಬರಂ ಸಲುತ್ತಮಿರೆ ಇರೆ || ಸ್ವಸ್ತಿ ಸಮಧಿಗತ ಪಂಚಮಹಾಶಬ್ದ ಮಹಾಮಂ-
೫          ಡಳೇಶ್ವರಂ ಬನವಾಸೀಪುರವರಾಧೀಶ್ವರಂ ಜಯಂತೀ ಮಧುಕೇಶ್ವರದೇವ ಲಬ್ಧವರಪ್ರಸಾದಂ ಮೃಗ-
೬          ಮದಾಮೋದಂ ತ್ರಿಯಕ್ಷಯಕ್ಷಾ ಸಂಭವಂ ಚತುರಾಶೀತಿ ನಗರಾಧಿಷ್ಟಿತ . .
೭          ಚತುರರ್ಬ್ಭುಜಂ ಜಗದ್ವಿದತಾಷ್ಟಾದಸಾಸ್ವಮೇಧ ದೀಕ್ಷಾದೀಕ್ಷಿತಂ ಹಿಮವದು ಗಿರೀಂದ್ರ
೮          ರುಂದ್ರಸಿಕರಸಂಸ್ಥಾಪಿತ ಸ್ಫಟಿಕ ಶಿಲಸ್ತಂಭಂ ಮದಗಜ ಮಹಾಮಹಿಮಾಭಿರಾಮಂ
೯          ಕದಂಬಚಕ್ರಿ ಮಯೂರವರ್ಮ್ಮ ಮಹಾಮಹೀ | ಪಾಳಕುಳಭೂಶಣಂ ಪೆರ್ಮ್ಮಟ್ಟಿ ತೂರ್ಯ್ಯ
೧೦       ನಿರ್ಗ್ಘೋಶಣಂ ಶಾಖಾಚರೇಂದ್ರ ಧ್ವಜ ವಿರಾಜಮಾನ ಮಾನೋತ್ತುಂಗ ಸಿಂಗಲಾಂಚನ ದತ್ತಾರ್ತ್ಥಿ-
೧೧       ಕಾಂಚನಂ ಸಮರಜಯಕಾರಣಂ ಕಡಂಬರಾಭರಣಂ ಮಾರ್ಕ್ಕೊಳ್ವರ ಗಂಡ ಪ್ರತಾಪ ಮಾರ್ತ್ತಂಡ
೧೨       ಮಂಡಳಿಕರ ಗಂಡ ಬಂಗಾಱನಿತ್ಯಖಿಳ ನಾಮಾವಳೀ ವಿರಾಜಿತರಪ್ಪ ಶ್ರೀಮನ್ಮಮಹಾಮಂಡಳೇಶ್ವರ
೧೩       ತೈಲಪದೇವರು ಬನವಾಸಿ ಪನ್ನಿರ್ಚ್ಚಾಸಿರಮುಮಂ ಪಾನುಂಗಲ್ಲೈನೂಱುಮಂ ದುಷ್ಟನಿಗ್ರಹ ಶಿ-
೧೪       ಷ್ಟ ಪ್ರತಿಪಾಳನದಿಂ ಸುಕಸಂಖತಾ ವಿನೋದದಿಂ ರಾಜ್ಯಂಗೆಯ್ಯುತ್ತಮಿಱ್ದು ಸಕವರಿಷ ೧೦೪೭-
೧೫       ನೆಯ ಕೋಧಿ ಸಂವತ್ಸರದ ಮಾಘ ಸುದ್ಧ . . . . ವರ ಸಂಕ್ರಾನ್ತಿಯುಂ ವ್ಯತಿಪಾತಮುಂ
೧೬       ಸೇರಿದಂದು ಸೀವಟಂ ಹರಿಟಾನದ ಮೂಲಸ್ಥಾನ ಶ್ರೀ ಕೇತೇಶ್ವರದೇವರ್ಗ್ಗೆ ಮಲ್ಲಗವುಡಗೆಱೆಯೊಳ-
೧೭       ಗೆ ಕೊಟ್ಟ ಗೆಱ್ದೆ ಮತ್ತ ೨ ಈ ಧರ್ಮ್ಮಮಂ ಪ್ರತಿಪಾಳಿಸಿದಾತಂ ವಾರಣಾಸಿಯಲುಂ ಗುರುಕ್ಷೇತ್ರ-
೧೮       ದೊಳಂ ಸಾಸಿರ ಕವಿಲೆಯಂ ಸಾಸಿರ್ವ್ವ ಬ್ರಾಹ್ಮಣರ್ಗ್ಗೆಯುಭಯಮುಖಿಯಂ ಕೊಟ್ಟ ಫಳಮಿದು
೧೯       ಧರ್ಮ್ಮವನಳಿದಾತಂ ವಾರಣಾಸಿಯಲು ಗುರುಕ್ಷೇತ್ರದಲುಂ ಸಾಸಿರ ಕವಿಲೆಯುಮಂ ಸಾ-
೨೦       ಸಿರ ಬ್ರಾಹ್ಮಣರು ಕೊಂದ ಫಳ @ ಸ್ವದತ್ತಂ ಪರದತ್ತಂ ವಾಯೋ ಹರೇತಿ ವಸುಂಧರಾ ಶಷ್ಟಿರ್ವ್ವರ್ಶ
೨೧       ಸಹಸ್ರಾಣಿ ಮ್ರಿಷ್ಟಾಷ್ಟಾಂ ಕ್ರಿಮಿಃ ಜಾಯತೇ || ನಮಸ್ತುಂಗ ಶಿರಶ್ಚುಂಬಿ ಚಂದ್ರ ಚಾಮರ ಚಾರವೇ
೨೨       ತ್ರೈಳೋಕ್ಯ ನಗರಾರಂಭಂ ಮೂಲಸ್ಥಂಭಾಯ ಶಂಭವೇ @ ಫನಿರಾಜೀದ್ವಜ ಸಪ್ತನಸಪ್ತತಿ ಕಡಂ-
೨೩       ಬಾಧೀಶ ಪೆರ್ಮ್ಮಟ್ಟಿ ತೂರ್ಯ್ಯರವಷ್ಟಾದಶ ವಾಜಿಮೇಧ ಚತುರಗ್ರಾಸೀತಿ ಸಂಖ್ಯಾ ಪುರೇಶ್ವರ ರುದ್ರಾ
೨೪       . ಯನಿಂಹಲಕ || ಹಿಮಶೈಳೇಂದ್ರ ಪರಿಸ್ತಾಪಿತ ಸೀತರಶಕ್ತ್ಯುದ್ಘ ಹಿರಣ್ಯಗರ್ಬ್ಭಮಹಿ-
೨೫       ಮಾ ಕಾಡಂಬ ಚಕ್ರೇಶ್ವರಂ ಆ ಕಡಂಬ ಚಕ್ರೇಶ್ವರನಾ ಬೆಸದಿ ಮತ್ತ ಸಾತಗಾವುಂಡಂ ಕಣಗಿಲೆ ಬ-
೨೬       ಯಲಲು ಬಿಟ್ಟ ಕಾಳಗದ್ದೆ ಕಮ್ಮವಯ್ವತ್ತು ಗಾಣದಲು ಮೂಱುಂ . . ಯೋ ಅರ‍್ವತ್ತೊಕ್ಕಲು
೨೭       ಬಿಟ್ಟ ಸೊಂಟಿಗೆ ಎಣ್ನೆ ಈ ಧರ್ಮ್ಮವಂ ಪ್ರತಿಪಾಳಿಸಿದರ್ಗ್ಗೆ ಮಂಗಳಮಹಾ ಶ್ರೀ ಶ್ರೀ @ @
೨೮       ಶ್ರೀ ಸರಸ್ವತ್ಯಾಯ ನಮಃ | ಗಣಪತ್ಯಾಯ ನಮಃ | @ @
೫
ಪಾರ್ಶ್ವನಾಥ ಬಸದಿಯ ಶಾಂತಿನಾಥ ತೀರ್ಥಂಕರ ವಿಗ್ರಹದ ಪಾದಪೀಠದಲ್ಲಿರುವ ಶಾಸನ
ಸು. ೧೨ನೆಯ ಶತಮಾನ
೩’೮’’ ಎತ್ತರದ ಕಾಯೋತ್ಸರ್ಗ ಭಂಗಿಯಲ್ಲಿ ನಿಂತ ತೀರ್ಥಂಕರ ವಿಗ್ರಹವಿದು. ಮೇಲೆ ಕೀರ್ತಿಮುಖವಿದ್ದು, ಮುಕೊಡೆಯಿದೆ, ಶಿರದ ಎಡ ಬಲಗಳಲ್ಲಿ ಚಾಮರಗಳಿವೆ. ಪಾದದ ಎಡಬಲಗಳಲ್ಲಿ ಯಕ್ಷ ಯಕ್ಷಿಗಳಿದ್ದಾರೆ. ಪಾದದ ಕೆಳಗೆ ಹರಿಣಿಯ ಲಾಂಛನವಿದೆ.
ಶ್ರೀ ಮೂಲಸಂಘದ ಕಾಣೂರ್ಗಣದ ಮೇಷಪಾಷಾಣ ಗಚ್ಚಕ್ಕೆ ಸೇರಿದ ಶ್ರೀ ಕನಕಚಂದ್ರಸಿದ್ಧಾಂತದೇವರ ಶಿಷ್ಯನಾದ ಹುಲ್ಲುಂಗೂರ ಕೇತಿಸೆಟ್ಟಿ ಎನ್ನುವವನ ಮಗ ಪಾರಿಸಯ್ಯ ಹರಿಠಾಣದ ಬಸದಿಗೆ ಶಾಂತಿನಾಥ ತೀರ್ಥಂಕರನ ಪ್ರತಿಮೆಯನ್ನು ಮಾಡಿಕೊಟ್ಟನೆಂದು ತಿಳಿಸುತ್ತಿದ್ದು, ಲಿಪಿ ಸ್ವರೂಪದಿಂದ ಸುಮಾರು ೧೨ ಶತಮಾನದ ಶಾಸನವಿದಾಗಿದೆಯೆಂದು ಹೇಳಬಹುದು.
೧          @ ಸ್ವಸ್ತಿ ಶ್ರೀ ಮೂಲಸಂಘದ ಕಾನೂರ್ಗ್ಗಣದ ಮೇಶಪಾ[ಷಾ*]
೨          ಣ ಗಛ್ಛದ ಶ್ರೀ ಕನಕಚಂದ್ರಸಿದ್ಧಾಂತದೇವರ ಗುಡಂ(ಡ್ಡ*)
೩          ಹುಲ್ಲುಂಗೂರ ಕೇತಿಸೆಟ್ಟಿ ಮಗ ಪಾರಿಸಯ್ಯ
೪          ಹರಿಠಾಣದ ಬಸದಿಗೆ ಮಾಡಿಸಿಕೊಟ್ಟ ಶಾನ್ತಿನಾಥದೇ
೫          ವರು @ @ @
೬
ಬಸದಿಯ ಗರ್ಭಗೃಹದ ಪಾರ್ಶ್ವನಾಥ ವಿಗ್ರಹದ ಪಾದಪೀಠದಲ್ಲಿರುವ ಶಾಸನ
ಸು. ೧೨ನೆಯ ಶತಮಾನ
೧೬೫ ಸೆ.ಮಿ. ಎತ್ತರ ೬೩ ಸೆ.ಮಿ. ಅಗಲದ ಕರಿಕಲ್ಲಿನ ಕಾಯೋತ್ಸರ್ಗ ಭಂಗಿಯ ವಿಗ್ರಹವಿದಾಗಿದೆ. ಹಿಂದೆ ಏಳು ಹೆಡೆಯ ಸರ್ಪವಿದೆ ಮೇಲೆ ಮುಕ್ಕೊಡೆಯಿದ್ದು, ಪಾರ್ಶ್ವದಲ್ಲಿ ಚಾಮರಧಾರಿಯರಿದ್ದು, ಪಾದಗಳ ಇಕ್ಕೆಲಗಳಲ್ಲಿ ಧರಣೇಂದ್ರ ಮತ್ತು ಪದ್ಮಾವತಿ ಯಕ್ಷಿಯರಿದ್ದಾರೆ. ಸು. ಹತ್ತನೆಯ ಶತಮಾನದ ಸುಂದರ ಅಕ್ಷರಗಳಲ್ಲಿ ಶಾಸನ ಕೆತ್ತಲಾಗಿದ್ದು, ಎಡಭಾಗದ ಕಲ್ಲಿನ ಚಕ್ಕಳ ಹಾರಿದೆ.
ಶ್ರೀ ಮೂಲಸಂಘದ ಸೂರಸ್ಥಗಣದ ವ್ಯಕ್ತಿಯೊಬ್ಬ ಪಾರ್ಶ್ವನಾಥ ತೀರ್ಥಂಕರನ ವಿಗ್ರಹ ಮಾಡಿಸಿದನೆಂದು, ಕೀರ್ತಿಯನ್ನು ಹೊಂದಲು ಮುಮುಕ್ಷಗಳಿಗಾಗಿ ಪ್ರತಿಷ್ಠಾಪಿಸಿದನೆಂದು ತಿಳಿಸುತ್ತದೆ. ಪ್ರತಿಮೆಯನ್ನು ಮಾಡಿದಾತ ರೂವಾರಿ ದೇವದಾಸಿ ಎಂದು ಹೆಸರಿಸುತ್ತದೆ. ಲಿಪಿ ಸಾದೃಶ್ಯದ ಸುಮಾರು ೧೨ನೆಯ ಶತಮಾನದ ಶಾಸನವಿದೆಂದು ಗುರುತಿಸಬಹುದು.
೧          ಸಿಧಂ ಮೂಲಸಂಘಾನ್ವಯೇ. . . . . . .
೨          ನ್ವಯೇ ಮಾಂ ಯುಧ್ಧಾ . . . . . . .
೩          ಸೂರಸ್ಥ ನಾಮ್ನಾ ಗಣೇ . . . . . . ಲ್ಗ್ರ . . .
೪          ಲಯೇ ನಗರಭೃಚ್ವ್ರಿ ಪಾರ್ಶ್ವನಾಥ . . . .
೫          ಪ್ರಾತಿಷ್ಠಾಮಕರೋನ್ಮು ಮುಷು ತಿಳ . . .
೬          ಕೀರ್ತ್ಯಜ್ಞಯಾ || ರೂವಾರಿ ದೇವರಾ[ಸಿ*]
೭
ವೀರಭದ್ರದೇವರ ಗುಡಿ ಪಕ್ಕದಲ್ಲಿರುವ ಗಾಲಿಗಳು
ಸು. ೨೦ನೆಯ ಶತಮಾನ
ಸುಮಾರು ೫’ ವ್ಯಾಸದ ಕಲ್ಲಿನ ಗಾಲಿಗಳ ಮೇಲೆ ಕೆಳಗಿನಂತೆ ಬರೆಯಲಾಗಿದೆ. ಬೆಳಗಾಂವಿಯ ಕೆ.ಎಲ್.ಇ. ಸಂಸ್ಥೆಯ ಸಂಸ್ಥಾಪಕರಲ್ಲಿ ಒಬ್ಬರಾದ ಅರಟಾಳ ರುದ್ರಗೌಡರು ತಮ್ಮ ಊರಿನ ವೀರಭದ್ರದೇವರಿಗೆ ಮಾಡಿಸಿದ ರಥದ ಗಾಲಿಗಳಿವು.
ಒಂದನೆಯ ಗಾಲಿ
    ಓಂ
೧          ಶ್ರೀ ವೀರಭದ್ರದೇವರ ಪ್ರೀತ್ಯಾರ್ಥ                      ೧          ಶ್ರೀ ವೀರಭದ್ರದೇವರ
೨          ರಾ.ಬ. ರುದ್ರಗವುಡ ಚನ್ನವೀರ             ೨          ಪ್ರೀತ್ಯರ್ಥ ರಾ.ಬ. ರುದ್ರ
೩          ಗವಡ ಅರಟಾಳ ಇವರ ಕಾ                 ೩          ಗವಡ ಚನ್ನವೀರಗವಡ
೪          ಣಿಕೆಯು               ೪          ಅರಟಾಳ ಇವರ ಕಾಣಿಕೆ
               ಎರಡನೆಯ ಗಾಲಿ
          ಓಂ

? ‘ಕಾರ್ತೀಕ ಶ್ರೀ’, ಎಚ್.ಐ.ಜಿ. ೨೭, ನವನಗರ, ಹುಬ್ಬಳ್ಳಿ, ಧಾರವಾಡ ಜಿಲ್ಲೆ - ೫೮೦೦೨೫.



Saturday, February 23, 2013

ತೀರ್ಥಹಳ್ಳಿ ಶಾಸನ



ತೀರ್ಥಹಳ್ಳಿ ರಾಮಮಂಟಪದ ಸುತ್ತಮುತ್ತಲಿನ ಅಪ್ರಕಟಿತ ಶಾಸನಗಳು
ಜಿ.ಕೆ. ದೇವರಾಜಸ್ವಾಮಿ
# ೫೬, ‘ತ್ರಯೀ’, ಮೈಸೂರು ಲ್ಯಾಂಪ್ಸ್ ಲೇಔಟ್,
ಚನ್ನನಾಯಕನಪಾಳ್ಯ, ೨ನೇ ಹಂತ, ನಾಗಸಂದ್ರ ಅಂಚೆ,
ಬೆಂಗಳೂರು-೫೬೦೦೭೩
ಶಿವಮೊಗ್ಗಾ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ತುಂಗಾನದಿಯ ಮಧ್ಯದಲ್ಲಿ ಪರಶುರಾಮ ತೀಥ ಹಾಗೂ ಕಲ್ಲಿನ ಮಂಟಪವಿದೆ. ಪರಶುರಾಮ ತನ್ನ ತಾಯಿಯನ್ನು ಪರಶುವಿನಿಂದ ಕಡಿದ ನಂತರ ಪಾಪ ಪರಿಹಾರಾರ್ಥವಾಗಿ ತೀರ್ಥಕ್ಷೇತ್ರ ಪರ್ಯಟನೆ ಮಾಡುತ್ತಾನೆ. ಆ ಸಂದರ್ಭದಲ್ಲಿ ಈ ತುಂಗಾನದಿಗೆ ಬಂದಾಗ ತಾಯಿಯನ್ನು ಕಡಿದ ಕೊಡಲಿಯನ್ನು ಇಲ್ಲೂ ತೊಳೆಯುತ್ತಾನಂತೆ. ಸ್ವಲ್ಪವೇ ರಕ್ತಸಿಕ್ತವಾದ ಕೊಡಲಿಯು ಸ್ವಚ್ಛವಾಗುತ್ತದಂತೆ. ಈ ಕಥೆಯ ಹಿನ್ನಲೆಯಲ್ಲಿ ಪುಣ್ಯತೀರ್ಥವೆಂದಾಗಿದೆ. ಪುರಾಣ, ಐತಿಹ್ಯವು ಜನಮನದಲ್ಲಿ ಹಾಸುಹೊಕ್ಕಾಗಿದೆ. ಈ ಹಿನ್ನಲೆಯಲ್ಲಿ ಪ್ರತಿವರ್ಷವೂ ಡಿಸೆಂಬರ್‌ನಲ್ಲಿ ಜಾತ್ರೆ, ತೀರ್ಥಸ್ನಾನ ಇಲ್ಲಿ ನಡೆಯುತ್ತಾ ಬಂದಿದೆ. ಇದರಿಂದ ಎಲ್ಲಾ ಪಾಪವೂ ಪರಿಹಾರವಾಗುತ್ತದೆಂಬ ನಂಬಿಕೆ ಜನರಲ್ಲಿದೆ.
ತುಂಗಾನದಿಯಲ್ಲಿ ನೈಸರ್ಗಿಕವಾಗಿ ನಿರ್ಮಿತವಾದ ಕುಳಿಯಲ್ಲಿ ನೀರು ಹರಿಯುತ್ತಿದ್ದು ತೀರ್ಥವೆನಿಸಿಕೊಂಡಿದೆ. ಇದರ ಮೇಲ್ಭಾಗದ ಬಂಡೆಯ ಮೇಲೆ ಕಲ್ಲಿನ ಮಂಟಪವಿದೆ. ಪರಶುರಾಮತೀರ್ಥದ ಬಂಡೆಯಲ್ಲಿ ಆಂಜನೇಯನ ಉಬ್ಬುಶಿಲ್ಪ, ಭಕ್ತರ ರೇಖಾಚಿತ್ರಗಳೂ ಸೇರಿದಂತೆ ನೂರಾರು ಶಾಸನಗಳಿವೆ. ಈ ಶಾಸನಗಳಲ್ಲಿ ಭಕ್ತಾದಿಗಳು, ರಾಜರು ಮುಖ್ಯರಾದವರು ತೀರ್ಥದಲ್ಲಿ ಸ್ನಾಮಾಡಿ ತಮ್ಮ ಹೆಸರುಗಳನ್ನು ದಾಖಲಿಸಿದ್ದಾರೆ. ಮೇಲಿನ ಮಂಟಪದ ಸುತ್ತಮುತ್ತಲೂ ಕಿರುಶಾಸನಗಳನ್ನು (ಐಚಿbeಟ Iಟಿsಛಿಡಿiಠಿಣioಟಿs) ಕೆತ್ತಲಾಗಿದೆ. ಹಾಗೆಯೇ ನದಿಯಲ್ಲಿನ ಹತ್ತಾರು ಬಂಡೆಗಳಲ್ಲಿಯೂ ಶಾಸನಗಳು ಕಂಡುಬರುತ್ತವೆ. ಈ ತೀರ್ಥಕ್ಷೇತ್ರದಲ್ಲಿ ಸ್ನಾನದೊಂದಿಗೆ ದಾನ ಧರ್ಮಾದಿಗಳನ್ನು ಮಾಡುವುದು ಪುಣ್ಯವೆಂದು ಪ್ರತೀತಿ. ಕೆಳದಿ ಶಿವಪ್ಪನಾಯಕ ಮತ್ತು ಚೆನ್ನಮ್ಮಾಜಿಯವರೂ ಈ ಸ್ಥಳದಲ್ಲಿ ಗೋದಾನ ಇತ್ಯಾದಿಗಳನ್ನು ಮಾಡಿದ ಬಗ್ಗೆ ತಾಲ್ಲೂಕಿನ ಇತರೆ ಶಾಸನವು ದಾಖಲಿಸಿದೆ.
ಈ ಎಲ್ಲಾ ಶಾಸನಗಳೂ ವಿಜಯನಗರೋತ್ತರ ಕಾಲದ್ದಾಗಿರುತ್ತವೆ. ಬಹುತೇಕ ಶಾಸನಗಳು ಕೆಳದಿ ಅರಸರ ಕಾಲದ್ದಾಗಿವೆ. ಬಹಳ ಹಿಂದಿನಿಂದಲೂ ತೀರ್ಥಕ್ಷೇತ್ರವಾಗಿದ್ದರೂ ಕೂಡ ಕೆಳದಿ ಅರಸರ ಹಾಗೂ ನಂತರ ಕಾಲದಲ್ಲಿ ತೀರ್ಥವು ವಿಶೇಷ ಮಹತ್ವ ಪಡೆದಿದೆ ಎನ್ನಬಹುದು.
ಶಾಸನಗಳಲ್ಲಿ ರಾಜವಂಶಸ್ಥರು, ಅಧಿಕಾರಿಗಳು, ಶ್ರೀಸಾಮಾನ್ಯರುಗಳ ಹೆಸರು ಕೆತ್ತಲ್ಪಟ್ಟಿದೆ. ಈ ಮೂಲಕ ಊರುಗಳ ಹೆಸರು, ಉದ್ಯೋಗ ಇತ್ಯಾದಿಗಳನ್ನು ಇವುಗಳಿಂದ ತಿಳಿಯಬಹುದಾಗಿದೆ. ಇವುಗಳ ಅಧ್ಯಯನದ ಮೂಲಕ ಇತಿಹಾಸಕ್ಕೆ ಹೊಸ ವಿಷಯಗಳು ಸೇರ್ಪಡೆಯಾಗಬೇಕಿದೆ.
ಈ ಶಾಸನಗಳ ಭಾಷೆ ಸ್ಖಾಲಿತ್ಯಗಳಿಂದ ಕೂಡಿದ್ದು, ಕೆಲವೆಡೆ ಅಕ್ಷರಗಳನ್ನು ಖಚಿತವಾಗಿ ಓದಲು ಸಾಧ್ಯವಾಗುತ್ತಿಲ್ಲ. ಸಾಲುಗಳ ಸಂಖ್ಯೆಯೂ ಕೆತ್ತಿರುವ ರೀತಿಯಿಂದ ಹಿಡಿತಕ್ಕೆ ಸಿಕ್ಕುವುದಿಲ್ಲ. ಭಾಷೆ, ಬಂಧ ಅರ್ಥದ ದೃಷ್ಟಿಯಿಂದ ಸ್ಥೂಲವಾಗಿ ವಿಂಗಡಿಸಲಾಗಿದೆ.
ಶಾಸನ ಪಾಠ
೧        ಜಾನಿಕಂಮನ ಬಿಂನಹಾ
೨        ಲಕ್ಷ್ಮೀಪತಿ ಅಯನ ಮಕ್ಕಳು ನರಸಯನ ಬಿಂನಹಾ|| ವಾಬರಸಯನ ಬಿಂನಹ ಮಹಾಲಕ್ಷ್ಮೀ ಲಕ್ಷ್ಮಿಅಕಂಮ | ಪುಟಮ ಸೂ (ಶ್ರೀ) ಲಕ್ಷ್ಮಿಯಾ ಬಿಂನಹ
೩        ವೊಂ ನಮೋನಾರಾಯಣಾಯ      ವೊಂ ನಮೋವೆಂಕಟೇಶಾಯ ದಾನಿಯನ ಮಗ....
೪        ಶ್ರೀರಾಮ ಕೃಷ್ಣಾಯ
೫        ನಮಃ ಘರುವೇನಮಃ ಚಿಕ್ಕತಿಂಮೈಯಣ್ಣ ಸ್ತ್ರಮ        ಭ್ರಂಹಾ ಪುಟ್ಟಂಣ ನಮಗ ನಾರಸಿಂಹ
೬        ಬಿಳಿಗಿ ಸುಬಯನ ಬಿಂನಹ | ಬಿಳಿಗಿ ಲಿಂಗಣನ          ಬಿಂನಹಾ | ಬಿಳಿಗಿ ದೇಮೌವಾ ಮಗ ಗುತ್ತಿ ಲಕ್ಷಮ್ನ ಪ್ನಮಗ ಅಚುತನಯ ದುಡ್ಯಿ ಕೃಷ್ಣದೇವನ ಬಿಂನಹಾ
೭        ಪುರಂದರ ವಿಠಲ (ನಾಗರೀಲಿಪಿ) ಂ ಸಿದಾರ್ತಿ ಸಂ| ಚೈತ್ರ.ಬ.೫
೮        ನಂಜುಂಡಯನಾ ಇಮಪುಲ         ಕಾಮಪ್ಪಯ್ಯನವರ ಪತ್ನಿ ತಿಂಮಮನವರ ಮಂದಾನ ಬಿಂನಹಾ ನಂಮಃ|
೯        ಬಯಲೂರ ಕೂಸಂಣನ ಬಿಂನಹ
೧೦     ಶ್ರೀ ಕೆಳದಿ ಚಂನಂಯಾಜಿಯವರ ಮಗ ನೆಗತ್ತಿ ಎಡ್ಡಿ ವೆಂಕಂಣನ ಬಿಂನಹಾ
೧೧     ಕೂಳಾಲದ ವೆಂಕಟಯನ ಕಂದಾಚಾರ | ಸಎಟ್ಟಿ ಫಣಿಯಪ್ಪನ ದನಿಲಕೈನ ಮಗನ ನಮಸ್ಕಾರ
೧೨     ವಾದಿರಾಜೈನ ಬಿಂನಹಾ
೧೩     ಶ್ರೀಮುಖ ಸಂ| ಮಾರ್ಗಶಿರ ಬಹುಳ ಚೌತಿಗೆ ಕಳನೈಮಕ್ಕಳು
೧೪     ಶಾಮಸಂಯಾನ ಸಂಕರನ ಮಾಮಗ
೧೫     ಕಾಯಿಶಾ ಸಬುನಿಸ ಕೋಳಿವಾಡದ ಬೊಮರಸ       ಮಯ್ಯನ ಬಿಂನಹಾ ಶ್ರೀ ಭವಾನಿ ಅಂಮನ ಬಿಂನಹ ಲಕ್ಷ್ಮಿ
೧೬     ಬಸರೂರ ನೊಳಪ್ಪನ ವಿರಂಮನ ನಮಸ್ಕಾರ
೧೭     ಸೂರಯುನ ಮಗ ಸೂದುಗೆಪನ ಬಿಂನಹ
೧೮     ಸೂಳೂರ ಶ್ರಿಂ ಪನಾಮಗ ಅಕರಯ ನಿಖಯನ ನ ಬಿಂನಹ
೧೯     ಅಭಿವಾಶಾನರತಿಗತ (ನಾಗರಿಲಿಪಿ)          ಯಿದ ಬರೆಸಿದಾತ ನಾಗಾಭಟರ ಮಗ ಗಣಪಂಣ
೨೦     ಪ್ರಪ್ಪದೇವಹ      ಯನ ಮಗ ಶಂಕರನಾರಾಯಣ ತುಂಗಭದ್ರೆಗೆ ಮಾಡುವ ನಮಸ್ಕಾರ
೨೧     ಪುಟ್ಟಿರಸಯ್ಯನ ಮಗ ಯ್ಯೋಗಪ್ಪಯನ ಬಿಂನಹಾ ನಮಸ್ಕಾರ
೨೨ ಶರಯ ಸ್ತ್ರಿಣಲ್ಲಂ ಮಗ ಬಿಂನಹಾ
೨೩     ಕೆಳಸಂಣ ಕೆಂಚಮನವರು ಭದ್ರಪ್ಪ ಸಿರ್ಸಿಣಿಯ         ರಾಯಸ್ತ ವೆಂಕಯ್ಯನ ಬಿಂನಮ
೨೪     ಲಕ್ಷ್ಮೀಗೋಪಾಲದಾಸೆ (ನಾಗರೀಲಿಪಿ)
೨೫     ಬಯಲೂರ ಸೀನಪ್ಪನ ಬಿಂನಹಾ
೨೬     ಗೋದಾವರಿ ನಮ (ನಾಗರೀಲಿಪಿ) ಯಿದ ಬರೆಸಿದಾತ ಬಕಾಯಂಗೆ ಸೆಗಟಿ ಸಿಂಗಾಶಯ
೨೭     ಸೂರೈಟಿ ಯಳರಾಯಸ್ತ ಶಂಕರನಾರಾಯಣೈನ       ಮಗ ಚೆಂನನ ಬಿಂನ
೨೮     ಸದಾಧ್ಯಾನಂ (ನಾಗರೀಲಿಪಿ)        ಬೊನಗಿರಿಯ ಸನರುಮಲ್ಲನ ಮಗ ನಾಗಪ್ಪನ ಬಿಂನಹ
೨೯     ನರಸಪ್ಪಯ್ಯನ ಬೆಳರೆ ವೆಂಕರಸೈಯನ ಮಗ          ಬಿಯದರಟದ ಸೂರಪ್ಪೈಚೆನಾ ಗುಣಿ ಶುಭನಾಮ ಯೋಡಣ ತನಯ (ನಾಗರೀಲಿಪಿ)   ಶಾಯಣದ ಮದಗದ ದೋಮು ವೆಂಕಮನ ನಮಸ್ಕಾರ
೩೦     ಪೊಲಿಟ್ಟ ರಾಮಯ್ಯನ      ವೊಂದು ಶಂಕರ ನಾವಯದಳ ನಮಸ್ಕಾರ
೩೧     ಶ್ರೀ ಚಉಠರ ಸೀಮೇ ಪುತ್ತಿಗೆ ಹೊಳೆನೀ     ಗಲುರಿ ಮಾದವ ಬಂಟನ ಮಗ ವೆಂಕಂಣ ನಮಗ ಮಾನಪ... ಸಬಾನ ಮಾಯೋಗಣನ ನಮಸ್ತೇ ||
೩೨     ಶಿವಪ್ಪ, ರಾಚಯ್ಯ
೩೩     ನಾಲ್ವಪ್ಪ ನಾಗಪ್ಪ
೩೪     ಪಟಿ ತಿಮ್ಮಪನ ಮಗ ಶ್ರೀನಿವಾಸ
೩೫     ಲಕ್ಷ್ಮಿಪತಿ ಮಂಗರಸನ ಬಿಂನಹ
೩೬     ಕವುರಿ ಕಲ್ಲಿರಾಮಪ್ಪ
೩೭     ಬೊಕ್ಕಸದ ಸಿದ್ದಪ್ಪ
೩೮     ಗೆರೆಸ ತಿಂಯ್ಯ
೩೯     ರಾಮಪ್ಪಯ್ಯ ನಂಜುಂಡಯ್ಯ
೪೦     ಕಳಸಪ್ಪ ದಿವಾಕರ

ಪರಶುರಾಮ ಮಂಟಪಕ್ಕೆ ಹೊಂದಿಕೊಂಡಂತೆ ನದಿ ಪಾತ್ರವಿದೆ. ನದಿಯ ಮತ್ತೊಂದು ದಡದಲ್ಲಿ ಜೋಗಿಗುಡ್ಡವಿದೆ. ಇಲ್ಲಿಯ ಬಂಡೆಗಳಲ್ಲಿ ಜೈನ ತೀರ್ಥಂಕರರ ರೇಖಾ ಚಿತ್ರಗಳು ಹಾಗೂ ಶಾಸನಗಳಿವೆ. ಅಲ್ಲದೆ ಪ್ರಕೃತಿಯ ನೈಸರ್ಗಿಕವಾದ ಬಂಡೆಯ ದೊಡ್ಡಕುಳಿ(ಬಾವಿ)ಗಳಲ್ಲಿಯೂ ತೀರ್ಥಂಕರರ ಚಿತ್ರ ಹಾಗೂ ಶಾಸನಗಳಿವೆ. ಈ ರೀತಿಯ ಚಿತ್ರ ಹಾಗೂ ಶಾಸನಗಳು ನೈಸರ್ಗಿಕ ಕುಳಿಗಳಲ್ಲಿ ಮತ್ತೆಲ್ಲಿಯೂ ಕಂಡುಬರುತ್ತಿಲ್ಲವೆನ್ನಬಹುದು.

ಶಾಸನ ಪಾಠ
೧.       ನಿಕರಸನ ಧರ್ಮ (ಪಕ್ಕದಲ್ಲಿ ಪಾರ್ಶ್ವನಾಥ ತೀರ್ಥಕರನ ರೇಖಾ ಚಿತ್ರವಿದೆ)

ಬಂಡೆಯ ಮೇಲೆರುವ ಶಾಸನ
೧        ಪಟ್ಟಸಹಣಿ ಕಲೆಯನ
೨        ಮಡದಿ ಧಾಗಿ[ಪಾರ್ಶ್ವನಾಥ]ಮಾಡಿಸಿದಳು
ಲಿಪಿ ದೃಷ್ಟಿಯಿಂದ ಈ ಶಾಸನವು ಕ್ರಿ.ಶ.ಸು. ಹನ್ನೊಂದನೆಯ ಶತಮಾನದ್ದೆನ್ನಬಹುದು. ಕಲ್ಲಿನ ಕುಳಿ/ಪೊಟರೆಗಳಲ್ಲಿ ಪಾರ್ಶ್ವನಾಥ ತೀರ್ಥಂಕರನ ರೇಖಾ ಚಿತ್ರ ಹಾಗೂ ಶಾಸನಗಳನ್ನು ಕೆತ್ತಲಾಗಿದ್ದು, ಇದು ಸಾಂತರಸರ ಕಾಲದ್ದಾಗಿದೆ.

ಶಾಸನ ಪಾಠ
೧        ಶ್ರೀಮತು ಚಲ್ಲದೇವಿ ಮಾಡಿಸಿದ ದೇವರು
೨        ಮಗಳು ಲಕುಮ್ಮಾದೇವಿ ಮಾಡಿಸಿದ ದೇವರು
೩        ವಿಜೆಪಟ್ಟಾಚಾರಿ ಮಡಿದ ದೇವರು
ಮೂರು ಸಾಲುಗಳುಳ್ಳ ಶಾಸನದಲ್ಲಿ ಕಾಲದ ಉಲ್ಲೇಖವಿಲ್ಲ. ಲಿಪಿದೃಷ್ಟಿಯಿಂದ ಕ್ರಿ.ಶ.ಸು.೧೦-೧೧ನೇ ಶತಮಾನದ್ದೆನ್ನಬಹುದು. ಚಲ್ಲದೇವಿ (ಚಟ್ಟಲದೇವಿ) ಸಾಂತರರ ರಾಣಿಯಾಗಿದ್ದಳು ಹಾಗೂ ಅವಳ ಮಗಳನ್ನೂ ಉಲ್ಲೇಖಿಸಿದೆ. ದೇವರನ್ನು ಕಂಡರಿಸಿದವನು ವಿಜೆಪಟ್ಟಾಚಾರಿ ಎಂಬುದು ತಿಳಿಯುತ್ತದೆ. ಜೋಗಿಗುಡ್ಡವು ಒಂದು ಜೈನ ತೀರ್ಥಕ್ಷೇತ್ರವಾಗಿತ್ತು ಎಂಬುದನ್ನು ನನ್ನ ಹಿಂದಿನ ಲೇಖನದಲ್ಲಿ ವಿಸ್ತಾರವಾಗಿ ಚಚಿಸಿದ್ದೇನೆ. (ಬರಹಬಾಗಿನ ಹಂಪನಾ ಷಷ್ಟ್ಯಬ್ದ ಗೌರವಗ್ರಂಥ ಸಂ. ಎಚ್.ವಿ. ನಾಗೇಶ್, ಪ್ರ. ಹಂಪನಾ ಅಭಿನಂದನ ಸಮಿತಿ, ೧೯೯೬, ಪು೧ ೩೯೩-೩೬.)
ತೀರ್ಥಹಳ್ಳಿ ಪರಶುರಾಮ ತೀರ್ಥ, ಕಲ್ಲುಸಾರದ ಸುತ್ತಮುತ್ತ ಇನ್ನೂ ನೂರಾರು ಕಿರುಶಾಸನಗಳು ಕಂಡುಬರುತ್ತವೆ. ಇವುಗಳ ಪೂರ್ಣ ದಾಖಲಾತಿಯು ಆಗಬೇಕಿದೆ. ಇದರಿಂದ ಇತಿಹಾಸಕ್ಕೆ ಹೊಸ ಆಯಾಮವು ದೊರೆಯುತ್ತದೆ.

[ಕ್ಷೇತ್ರ ಕಾರ್ಯದಲ್ಲಿ ನನ್ನೊಂದಿಗೆ ಸಹಕರಿಸಿದ ಸ್ನೇಹಿತ ಉಪಾಧ್ಯಾಯರಾದ ಎಲ್.ಎಸ್. ರಾಘವೇಂದ್ರ ಹಾಗೂ ಜಿ.ಎನ್. ಸಾತ್ವಿಕ್ ಮತ್ತು ಸ್ಕಂದ ಅವರಿಗೆ ನನ್ನ ಕೃತಜ್ಞತೆಗಳು.]

.





Wednesday, February 20, 2013

ಕೆ.ಆರ್‌ ಪೇಟೆ.ಕೈಗೋನ ಹಳ್ಳಿಯ ವೀರಗಲ್ಲು ಶಾಸನ


ಕೃಷ್ಣರಾಜಪೇಟೆ ತಾಲ್ಲೂಕಿನ ಕೈಗೋನಹಳ್ಳಿ ಗ್ರಾಮದ ಅಪ್ರಕಟಿತ ವೀರಗಲ್ಲು ಶಾಸನ
ಡಾ. ಆರ್. ರಂಗಸ್ವಾಮಿ
ಮುಖ್ಯಸ್ಥರು, ಇತಿಹಾಸ ವಿಭಾಗ,
ಸರ್ಕಾರಿ ಪ್ರಥಮ ದರ್ಜೆ ಕಾಲೇಜು,
ಶ್ರೀರಂಗಪಟ್ಟಣ-೫೭೧೪೩೮.



ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಕೈಗೋನಹಳ್ಳಿ ಗ್ರಾಮ ಕೆ.ಆರ್. ಪೇಟೆಯಿಂದ ಉತ್ತರಕ್ಕೆ ೬ ಕಿ.ಮೀ. ಅಂತರದಲ್ಲಿದೆ. ಈ ಗ್ರಾಮದಲ್ಲಿ ಹೊಯ್ಸಳರ ಕಾಲದ ಈಶ್ವರ ದೇಗುಲವಿದೆ. ಈ ದೇಗುಲದ ಪರಿಸರದಲ್ಲಿ ಕೃಷ್ಣರಾಜಪೇಟೆಯ ಕಲ್ಪತರು ಕಾಲೇಜಿನ ಎನ್.ಎಸ್.ಎಸ್. ವಿದ್ಯಾರ್ಥಿಗಳು ವಿಶೇಷ ಶಿಬಿರ ಕೈಗೊಂಡು, ದೇಗುಲವನ್ನು ಸ್ವಚ್ಚಗೊಳಿಸುತ್ತಿದ್ದ ಸಂದರ್ಭದಲ್ಲಿ ಪ್ರಸ್ತುತ ಶಾಸನ ಬೆಳಕಿಗೆ ಬಂದಿದೆ೧. ಈ ಗ್ರಾಮದಿಂದ ಈಗಾಗಲೇ ಎರಡು ಶಾಸನಗಳು ಎಪಿಗ್ರಾಫಿಯ ಕರ್ನಾಟಕ (ಪರಿಷ್ಕೃತ) ಸಂಪುಟ ೬ರಲ್ಲಿ ಪ್ರಕಟವಾಗಿವೆ೨. ಆ ಸಂಗ್ರಹಕ್ಕೆ ಈ ಶಾಸನ ಹೊಸದಾಗಿ ಸೇರ್ಪಡೆಯಾಗಿದೆ. ಕಪ್ಪುಶಿಲೆಯಿಂದ ಕಂಡರಿಸಲ್ಪಟ್ಟ ಈ ಶಾಸನದ ಶಿಲ್ಪದ ಎರಡು ಅಡ್ಡ ಪಟ್ಟಿಯಲ್ಲಿ ೭ ಸಾಲುಗಳಿರುವ ಶಾಸನದ ಪಾಠವಿದೆ. ಈ ಶಾಸನ ೧೬೦ ಸೆಂ.ಮೀ. ಎತ್ತರ ಮತ್ತು ೮೦ ಸೆ.ಮೀ. ಅಗಲವಾಗಿದೆ. ಈ ತಾಲ್ಲೂಕಿನಲ್ಲಿ ಈವರೆಗೆ ವರದಿಯಾಗಿರುವ ಶಾಸನಗಳಲ್ಲಿ ಕೈಗೋನಹಳ್ಳಿಯ ಅಪ್ರಕಟಿತ ಶಾಸನ ೧೨೯ನೆಯದು.
ವೀರಗಲ್ಲು ಶಿಲ್ಪದ ವಿವರಗಳು : ಈ ವೀರಗಲ್ಲಿನಲ್ಲಿ ನಾಲು ಶಿಲ್ಪ ಪಟ್ಟಿಕೆಗಳಿವೆ.
ಮೊದಲನೆಯ ಪಟ್ಟಿಕೆಯಲ್ಲಿ ವೀರನು ತನ್ನ ಎಡಗಾಲನ್ನು ಮುಂದಕ್ಕಿಟ್ಟು, ವೈರಿಯ ವಿರುದ್ಧ ಹೋರಾಡುತ್ತಿರುವನು. ವೀರನ ಹಿಂಭಾಗದಲ್ಲಿ ಇಬ್ಬರು ಸೈನಿಕರು ಹಾಗೂ ಎಂಟು ಹಸುಗಳ ಚಿತ್ರಗಳಿವೆ. ತಳಭಾಗದಲ್ಲಿ ಸೈನಿಕನೊಬ್ಬನು ಸತ್ತುಬಿದ್ದಿರುವ ದೃಶ್ಯವಿದೆ. ವೈರಿಯು, ಬಲಗಾಲನ್ನು ಮುಂದಿಟ್ಟು ವೀರನ ವಿರುದ್ಧ ಹೋರಾಡುತ್ತಿರುವನು. ಇವನ ಹಿಂಭಾಗದಲ್ಲಿ ಇಬ್ಬರು ಸೈನಿಕರು ಗುರಾಣಿಯನ್ನು ಹಿಡಿದುಕೊಂಡು ನಿಂತಿದ್ದಾರೆ.
ಎರಡನೆಯ ಪಟ್ಟಿಕೆಯಲ್ಲಿ ಯುದ್ಧದಲ್ಲಿ ಮಡಿದ ವೀರನ್ನು ಅಪ್ಸರೆಯರು ದೇವಲೋಕಕ್ಕೆ ಕೊಂಡೊಯ್ಯುತ್ತಿರುವ ದೃಶ್ಯವಿದೆ. ಅಪ್ಸರೆಯರು ಕೈಗಳಲ್ಲಿ ಹೂಮಾಲೆಯನ್ನು ಹಿಡಿದುಕೊಂಡಿದ್ದಾರೆ. ವೀರನು ವಿಮಾನದಲ್ಲಿ ಪದ್ಮಾಸನದಲ್ಲಿ ಕುಳಿತಿದ್ದಾನೆ.
ಮೂರನೆಯ ಪಟ್ಟಿಕೆಯ ಮಧ್ಯದಲ್ಲಿರುವ ಶಿವಲಿಂಗವನ್ನು ಇಬ್ಬರು ಯತಿಗಳು ಪೂಜಿಸುತ್ತಿರುವ ದೃಶ್ಯವಿದೆ. ಬಲಪಾರ್ಶ್ವದಲ್ಲಿ ವೀರನು ಕೈಮುಗಿದು ಕುಳಿತಿರುವನು. ಎಡಪಾರ್ಶ್ವದಲ್ಲಿ ಕುಳಿತ ನಂದಿ ಶಿಲ್ಪವಿದೆ.
ನಾಲ್ಕನೆಯ ಪಟ್ಟಿಕೆಯಲ್ಲಿ ಬ್ರಹ್ಮ, ಮಹೇಶ್ವರ ಮತ್ತು ವಿಷ್ಣು ಶಿಲ್ಪಗಳಿವೆ. ಎಡ ಮತ್ತು ಬಲ ಪಾರ್ಶ್ವದಲ್ಲಿ ಭಕ್ತರಿಬ್ಬರು ಕೈಮುಗಿದು ಕುಳಿತಿದ್ದಾರೆ. ಶಿಲ್ಪದ ಮೇಲ್ಭಾಗದಲ್ಲಿ ಸಾಮಾನ್ಯವಾದ ಸೂರ್ಯ ಮತ್ತು ಚಂದ್ರರ ಸಂಕೇತಗಳಿವೆ.
ಶಾಸನದ ಸಾರಾಂಶ : ವೀರಗಲ್ಲಿನ ಎರಡು ಅಡ್ಡಪಟ್ಟಿಯಲ್ಲಿ ಕನ್ನಡ ಭಾಷೆ ಮತ್ತು ೧೨ನೆಯ ಶತಮಾನದ ಕನ್ನಡ ಅಕ್ಷರಗಳಿವೆ. ಪ್ರಸ್ತುತ ಶಾಸನದಲ್ಲಿ ಹೊಯ್ಸಳ ಚಕ್ರವರ್ತಿ ವೀರನರಸಿಂಹದೇವನ ಹೆಸರು ಉಲ್ಲೇಖಿತವಾಗಿದೆ. ಇದರಲ್ಲಿ ತೇದಿಯ ಉಲ್ಲೇಖವಿಲ್ಲ. ಛಾಯಾಚಿತ್ರ ಮತ್ತು ಪಡಿಯಚ್ಚು ಸಹಾಯದಿಂದ ಶಾಸನವನ್ನು ಓದಲಾಗಿದೆ. ಪ್ರಸ್ತುತ ಶಾಸನ ಮತ್ತು ಶಿಲ್ಪದ ಮಹತ್ವವನ್ನು ಪರಿಚಯಿಸುವ ಪ್ರಯತ್ನ ನಮ್ಮದಾಗಿದೆ. ನಮಗೆ ತಿಳಿದ ಮಟ್ಟಿಗೆ ಶಾಸನದ ಸಾರಾಂಶ ಅಥವಾ ಪಾಠ ಈವರೆಗೆ ಪ್ರಕಟವಾಗಿಲ್ಲ.
ಹೊಯ್ಸಳ ಮನೆತನದ ವೀರನರಸಿಂಹದೇವನ ಆಳ್ವಿಕೆಯಲ್ಲಿ ವೀರನೊಬ್ಬನು ತುರುಗೋಳ್ ಯುದ್ಧದ ಸಂದರ್ಭದಲ್ಲಿ ವೀರ ಮರಣವನ್ನಪ್ಪಿದ ಉಲ್ಲೇಖವಿದೆ. ಐದು, ಆರು ಮತ್ತು ಏಳನೆಯ ಸಾಲಿನ ಅಕ್ಷರಗಳು ಮಾಸಿ ಹೋಗಿರುವುದರಿಂದ ವಿವರಗಳು ಅಸ್ಪಷ್ಟವಾಗಿದೆ. ಈ ವೀರಗಲ್ಲು ಶಾಸನಶಿಲ್ಪ ನಾಲ್ಕು ಪಟ್ಟಿಕೆಗಳಿಂದ ಕೂಡಿದೆ. ನಾಲ್ಕನೆಯ ಪಟ್ಟಿಕೆಯಲ್ಲಿ ಬ್ರಹ್ಮ, ಮಹೇಶ್ವರ ಮತ್ತು ವಿಷ್ಣು ಶಿಲ್ಪಗಳಿರುವುದು ವೈಶಿಷ್ಟ್ಯ. ಧರ್ಮಸಮನ್ವಯದ ತತ್ವವನ್ನು ಶಿಲ್ಪದಲ್ಲಿ ಸಾಂಕೇತಿಕವಾಗಿ ಬಿಡಿಸಲಾಗಿದೆ.
ಶಾಸನದ ಪಾಠ
೧        ಸ್ವಸ್ತಿ ಸಮಸ್ತಭುವನಾಶ್ರಯ[ಶ್ರೀ] ಪ್ರಿಥ್ವೀವಲ್ಲಭಂ ಮಹಾರಾಜಾಧಿರಾಜ ಪರಮೇಶ್ವರಂ ದ್ವಾರಾವತೀ
೨        ಪುರವರಾಧೀಶ್ವರಂ ಯಾದವ ಕುಲಾಂಬರದ್ಯಮಣಿ ಸಮ್ಯಕ್ ಚೂಡಾಮಣಿ ಮಲೆರಾಜ
೩        ರಾಜಮಲಪರೊಳುಗುಂಡ ಕದನ ಪ್ರಚಂಡನಸಹಾಯಸೂರ ಸನಿವಾರಸಿದ್ದಿ ಗಿರಿದುರ್ಗಮ
೪        ಲ್ಲ ಚಲದಂಕರಾಮನೇಕಾಂಗವೀರ ನಿಸ್ಸಂಕಪ್ರತಾಪ ಚಕ್ರವರ್ತಿ ಹೊಯ್ಸಳ ಶ್ರೀ ವೀರನರಸಿಂಹ ದೇವರು ಪಿಥ್ವೀ
೫        . . . . ದಲಿ ಕಹಿಗೊಂಡನ ಹಳಿಯ ತುಱುವನು [ಜಳೂರ ? ಮನು[ಗೊಂಡ] ಮಾ[ಳಾ ?] . . . . . .
೬        ಕಾಮಯ ಸುರಲೋಕ . . . . . . . . . . . . .
೭        . . . . . . . . . . . . . . . . ಶ್ರೀ ಶ್ರೀ


[ಕೃತಜ್ಞತೆಗಳು : ಸಂಪಾದಕರು, ಮಂಡ್ಯ ಜಿಲ್ಲೆ ಗ್ಯಾಸೆಟಿಯರ್ ಇವರಿಗೆ. ಲಿಪಿ ತಜ್ಞರಾದ ಡಾ. ಎಸ್.ವಿ. ಪಾಡಿಗಾರ್ ಮತ್ತು ಡಾ. ಡಿ.ಎಂ. ನಾಗರಾಜುರವರಿಗೆ ಹಾಗೂ ಕಲ್ಪತರು ಕಾಲೇಜಿನ ವ್ಯವಸ್ಥಾಪಕರನ್ನು ಮತ್ತು ಕೈಗೋನಹಳ್ಳಿ ಗ್ರಾಮದ ಮುಖ್ಯಸ್ಥರನ್ನು ನೆನೆಯುತ್ತೇನೆ.]





Monday, February 18, 2013

ಬೆಂಗಳೂರಿನ ಬಿ.ಎಂ.ಶ್ರೀ ಪ್ರತಿಷ್ಠಾನವು ಹಸ್ತ ಪ್ರತಿಗಳ ಗಣಕೀಕರಣ ಮತ್ತು ಸಂಶೋಧನೆಯ ಕಾರ್ಯ ಯೋಜನೆ ಹಮ್ಮಿಕೊಂಡಿದೆ.ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆಯಲ್ಲಿ ಆಸಕ್ತರಾದ ತಂತ್ರಜ್ಞರು, ವಿಶೇಷವಾಗಿ ಕನ್ನಡ ಮತ್ತು ಇತಿಹಾಸ  ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಬಯಸುವ ಸ್ವಯಂಸೇವಕರಿಗೆ ಸ್ವಾಗತ.  

Sunday, February 17, 2013

ಸುಗಟೂರು ಅರಸರ ಅಪ್ರಕಟಿತ ಶಾಸನ


ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕಿನ ಕೈವಾರದ ಸುಗಟೂರು ಅರಸರ ಅಪ್ರಕಟಿತ ಶಾಸನ

ಕುಮಾರಿ ಮುನಿರತ್ನಮ್ಮ ಕೆ.ಹೆಚ್
ನಂ.ಜಿ-೧, ಅರುಣೋದಯ ನಿಲಯ,
೧ನೇ ಮುಖ್ಯರಸ್ತೆ, ೬ನೆಯ ಅಡ್ಡರಸ್ತೆ,
 ಗಂಗಮ್ಮನ ಗುಡಿ ರಸ್ತೆ,
ಹೊಸಕೋಟೆ ಟೌನ್-೫೬೨೧೧೪

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಚಿಕ್ಕ ಗ್ರಾಮ ಕೈವಾರ. ಚಿಂತಾಮಣಿ ಮತ್ತು ಶಿಡ್ಲಘಟ್ಟ ತಾಲ್ಲೂಕಿನ ದಕ್ಷಿಣ ಭಾಗಗಳು, ಕೋಲಾರ ಜಿಲ್ಲೆಯ ವಾಯವ್ಯ ಭಾಗ ಹಾಗೂ ಹೊಸಕೋಟೆ ತಾಲ್ಲೂಕಿನ ಈಶಾನ್ಯಕ್ಕೆ ವಿಲೀನವಾಗಿದ್ದು, ಭೌಗೋಳಿಕವಾಗಿ ಸ್ವಲ್ಪ ಎತ್ತರವಾದ ಪ್ರದೇಶದಲ್ಲಿದೆ. ಅಲ್ಲಲ್ಲಿ ಚದುರಿದಂತೆ ಹಲವು ಬೆಟ್ಟಗುಡ್ಡಗಳಿಂದ ಕೂಡಿದ್ದು, ಅಂಬಾಜಿ ದುರ್ಗ, ಸೀತಿ ಬೆಟ್ಟ, ಕೈಲಾಸಗಿರಿ, ಮುರುಘಮಲೆ, ತಾಪಸಗಿರಿ ಇವು ಮುಖ್ಯವಾದವುಗಳಾಗಿವೆ. ಕೈವಾರದ ಉತ್ತರಕ್ಕೆ ಪಾಪಗ್ನಿ, ಆಗ್ನೇಯಕ್ಕೆ ಪಾಲಾರ್ ಹಾಗೂ ಪಶ್ಚಿಮದಲ್ಲಿ ದಕ್ಷಿಣ ಪಿನಾಕಿನಿ ನದಿಗಳು ಹರಿಯುತ್ತದೆ.೧ ಕೈವಾರ ಒಂದು ಪ್ರಸಿದ್ಧ ತೀರ್ಥಕ್ಷೇತ್ರವಾಗಿದ್ದು ಪೌರಾಣಿಕ ಮಹತ್ವದೊಂದಿಗೆ ಚಾರಿತ್ರಿಕ ಹಿನ್ನೆಲೆಯನ್ನು ಪಡೆದಿದೆ. ಇದನ್ನು ಮಹಾಭಾರತದಲ್ಲಿ ಬರುವ ಏಕಚಕ್ರಪುರವೆಂದು ಕರೆಯಲಾಗುತ್ತದೆ. ಅರಗಿನ ಮನೆಯಿಂದ ತಪ್ಪಿಸಿಕೊಂಡ ಪಾಂಡವರು ಕೆಲವು ಕಾಲ ಇಲ್ಲಿದ್ದರೆಂದು ಈ ಗ್ರಾಮದ ಹತ್ತಿರವಿರುವ ಚಿದಂಬರಗಿರಿ ಅಥವಾ ಚಿಕ್ಕಬೆಟ್ಟದಲ್ಲಿ ಇದ್ದ ಬಕಾಸುರನನ್ನು ಭೀಮ ಕೊಂದು ಅವನ ಶವವನ್ನು ಬೆಟ್ಟದ ಗುಹೆಯೊಂದರಲ್ಲಿ ಮುಚ್ಚಿಟ್ಟನೆಂದು ಸ್ಥಳಪುರಾಣದಿಂದ ತಿಳಿದುಬರುತ್ತದೆ.೨
ಕೈವಾರದಲ್ಲಿ ಅಮರನಾರಾಯಣ, ಧರ್ಮರಾಯ, ಭೀಮೇಶ್ವರ, ಅರ್ಜುನೇಶ್ವರ, ನಕುಲೇಶ್ವರ, ಸಹದೇವೇಶ್ವರ ದೇವಾಲಯಗಳಿವೆ. ಇವೆಲ್ಲಾ ಕ್ರಿ.ಶ.೧೨೮೩ಕ್ಕೆ ಮುಂಚೆಯೇ ಇದ್ದವೆಂದು ಇಲ್ಲಿ ದೊರಕಿರುವ ತಮಿಳುಶಾಸನಗಳಿಂದ ತಿಳಿದುಬರುತ್ತದೆ.೩ ಆದರೆ ಎಲ್ಲವೂ ಬಹುವಾಗಿ ನವೀಕೃತಗೊಂಡಿವೆ. ಕೈವಾರದ ನಾರಾಯಣ ಯೋಗಿಗಳೆಂಬ ಸಂತರು ೧೮ನೇ ಶತಮಾನದಲ್ಲಿ ಈ ಊರಿನಲ್ಲಿ ನೆಲೆಸಿದ್ದರು.
ಈ ಗ್ರಾಮವು ರಾಜಕೀಯವಾಗಿ ನೊಳಂಬರು, ಬಾಣರು, ಗಂಗರು, ಹೊಯ್ಸಳರು, ವಿಜಯನಗರ ಅರಸರ ಆಳ್ವಿಕೆಗೆ ಒಳಪಟ್ಟಿದೆ. ಈ ಹಿನ್ನಲೆಯಲ್ಲಿ ನನ್ನ ಕ್ಷೇತ್ರಕಾರ್ಯ ಸಂದರ್ಭದಲ್ಲಿ ವಿಜಯನಗರ ಕಾಲಕ್ಕೆ ಸೇರಿದ ಒಂದು ಅಪ್ರಕಟಿತ ಶಾಸನ ಲಭ್ಯವಾಗಿದೆ.
ಕೈವಾರದ ದಕ್ಷಿಣ ದಿಕ್ಕಿಗೆ ಸರ್ಕಾರಿ ದವಾಖಾನೆಯಿಂದ ಸ್ವಲ್ಪ ದೂರದಲ್ಲಿ ಬರುವ ಸರ್ವೇ ನಂಬರ್ ೨೦೬ ಬಣಜಿಗರ ವೆಂಕಟಪ್ಪನವರ ಹೊಲದಲ್ಲಿ ಪೂರ್ವಾಭಿಮುಖವಾಗಿ ನೆಲದ ಮೇಲೆ ಬಿದ್ದಿದೆ. ಇದು ೫ ಅಡಿ ಉದ್ದ, ೩ ಅಡಿ ಅಗಲ ಮತ್ತು ೪ ಇಂಚು ದಪ್ಪ ಇದೆ, ಗ್ರಾನೈಟ್ ಕಲ್ಲಿನ ಮೇಲೆ ಬರಹವಿದೆ. ಲಿಪಿ ಮತ್ತು ಭಾಷೆ ಕನ್ನಡದಲ್ಲಿದ್ದು ಈ ಶಾಸನ ೧೫ ಸಾಲುಗಳನ್ನು ಒಳಗೊಂಡಿದೆ.
ಸ್ವಸ್ತಿ ಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕವರ್ಷ ೧೫೧೧ನೆಯ ವಿರೋಧಿ ಸಂವತ್ಸರದಲ್ಲಿ ಹೊರಡಿಸಲಾಗಿದೆ. ಇದರಲ್ಲಿ ಕಂಡುಬರುವ ವಿಷಯವೆಂದರೆ ಸು. ಕ್ರಿ.ಶ.೧೫೮೯ರಲ್ಲಿ ಅರವೀಡು ವಂಶದ ಅರಸನಾದ ಎರಡನೇ ವೆಂಕಟನ ಕಾಲದಲ್ಲಿ ಈ ಶಾಸನ ಹೊರಡಿಸಲಾಗಿದೆ. ವೀರಪ್ರತಾಪ ವೆಂಕಟಪತಿ ಮಹಾರಾಯರು ಸುಗಟೂರು ಶ್ರೀಮಾದವಪ್ಪಯ್ಯ ಗೌಡರ ಮಗ ಕೈವಾರದ ಹರಿಗಪ್ಪಯ್ಯನ ಮಗ ಚನ್ನಯ್ಯನಿಗೆ ಬಿಟ್ಟ ಹೊಲ.... ಇದನ್ನು ‘ನೆತ್ತರ ಕೊಡುಗೆ’ಯಾಗಿ ನೀಡಲಾಗಿದೆ.
ಶಾಸನಗಳಲ್ಲಿ ಉಲ್ಲೇಖಿಸಿರುವ ‘ನೆತ್ತರ ಕೊಡುಗೆ’ ಎಂಬ ಪದ ಬಳಕೆಯಾಗಿರುವುದು ಇದರ ವಿಶೇಷತೆಯನ್ನು ಸೂಚಿಸುತ್ತದೆ. ವಿಜಯನಗರ ಅರಸರುಗಳ ಕಾಲದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭೂಮಾನ್ಯಗಳನ್ನು ಹೊರಡಿಸುವ ಬಗೆ ಶಾಸನಗಳಿಂದ ತಿಳಿದುಬರುತ್ತದೆ, ಹಾಗೂ ಇದಕ್ಕೂ ಪೂರ್ವಕಾಲದಿಂದಲೂ ಸಹ ‘ನೆತ್ತರ ಕೊಡುಗೆ’ಯ ಭೂದಾನ ಶಾಸನಗಳನ್ನು ನಾವು ಕಾಣಬಹುದು. ವೀರ ಪರಂಪರೆಯ ದ್ಯೋತಕವಾಗಿ ಶೌರ್ಯ ಬಲಿದಾನಗಳ ಸಂಕೇತವಾಗಿ ನೀಡಲಾಗುತ್ತದೆ. ನೆತ್ತರ ಕೊಡುಗೆಯನ್ನು ವಿಶೇಷ ಸಂದರ್ಭದಲ್ಲಿ ಅಂದರೆ ಯುದ್ದಲ್ಲಿ ಗೆದ್ದು ಬಂದ ವೀರರಿಗೆ ಅಥವಾ ವೀರಮರಣಕ್ಕಾಗಿ ಕೊಟ್ಟ (ದತ್ತಿ) ಭೂಮಿಯನ್ನು ಮಾನ್ಯವಾಗಿ ಅಥವಾ ಬಳುವಳಿಯಾಗಿ ನೀಡುತ್ತಿದ್ದರು.೪
ಶಾಸನ ಪಾಠ
೧        ಸ್ವಸ್ತಿ ಶ್ರೀ ವಿಜಯಾಬ್ಯುದಯ ಸಲಿವಾ[ಹ]
೨        ನ ಸಕ ವರುಸಂಗಗಳೂ ೧೫೧೧ ಯ ವಿರೋ
೩        ದಿ ಸಂವತ್ಸರದ ಮ ಬ ೨ ಬು ಲು ರಾ .
೪        ದಿ ರಾಜ ವಿರಪ್ರತಪ ವೆಂಕಟಪತಿ ಮಹರಯ
೫        ರಾಜ್ಯ ಗೆಉತ್ತ ಇರಲು ಸುಗುಟುರ ತಂ(ಯಿಂ)
೬        ಮಡಿ ತಮಪಯ ಗೌಡರ ಪ್ರತಿಪಲಗೆ
೭        ಯ ಕೈವರದ ತಿಂಮ(ರ)ಸನ ಧರ್ಮ ಪರಿಪತ್ಯದಲು
೮        ಕೈವರದ ಹರಿಗಪಪಯನ ಮಗನು ಚೆಂ
೯        ನಯಗೆ ಬಿಟ ನೆತ್ತರ ಗೊಡಗೆ ಬಿಟ್ಟ ಹೊಲಕ್ಕೆ
೧೦     ವರದ ಹಲಸು ಮರದವರು ಭಾಂನು ಮಾನ್ಯ
೧೧     ವಾಗಿಉಳಉ ಇದವನಿವ ಮನ್ಯಕೆ ಆ
೧೨     ರು ತಪಿದವರು ತಂಮ ಹೆಂಡಿರ ಯಾ
೧೩     ಉರ ತೋಟಿ ತಿಂಮನು ಕೇದನು
೧೪     ತಂಮ ಮಕಳು ತಂಮ ಎಡೆಯ
೧೫     ಲಿ ಹೊರಳದಿ ಹೊಗುವರು

[ಕೃತಜ್ಞತೆಗಳು: ಶಾಸನ ಪಾಠ ಓದಿಕೊಟ್ಟ ಪ್ರೊ|| ಕಲವೀರ ಮನ್ವಾಚಾರ್ಯ ಅವರಿಗೆ ವಂದನೆಗಳು.]

ಆಧಾರಸೂಚಿ ಮತ್ತು ಟಿಪ್ಪಣಿಗಳು
೧.         ಡಾ. ಪಿ.ವಿ. ಕೃಷ್ಣಮೂರ್ತಿ, ‘ಕೈವಾರನಾಡು-ಶಾಸನಗಳ ಹಿನ್ನೆಲೆಯಲ್ಲಿ ಒಂದು ಅಧ್ಯಯನ’
            ಇತಿಹಾಸ ದರ್ಶನ, ಸಂಪುಟ ೧೧-೧೯೯೬, ಪುಟ ೨೧೦, ಕೋಲಾರ ಜಿಲ್ಲೆ ಗ್ಯಾಸೆಟಿಯರ್, ಸಂ. ಎಚ್. ಚಿತ್ತರಂಜನ್, ೨೦೦೪.
೨.         ಡಾ. ಪಿ.ವಿ. ಕೃಷ್ಣಮೂರ್ತಿ, ‘ಪುರಾಣ ಪ್ರಸಿದ್ಧ ಏಕಚಕ್ರಪುರವಾದ ಕೈವಾರ ಕ್ಷೇತ್ರದ ಶಾಸನಗಳು-ಒಂದು ಅವಲೋಕನ’ 
               ಶಾಸನ ಮಂಥನ, ಪುಟ ೧೨೧-೧೩೨.
೩.         ಅದೇ.
೪.         ಡಾ. ಪಿ.ವಿ. ಕೃಷ್ಣಮೂರ್ತಿ, ಸುಗುಟೂರು ವೀರಶೈವ ಅರಸು ಮನೆತನ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ, ೧೯೯೮.


.