Thursday, December 6, 2012

ಹೊಳಲ್ಕೆರೆ ತಾಲ್ಲೂಕಿನಲ್ಲಿ ಕೆಲವು ಬೃಹತ್ ಶಿಲಾಯುಗದ ನೆಲೆಗಳ ಶೋಧ


ಎನ್.ಎಸ್. ಮಹಂತೇಶ ಎಸ್.
 ಇತಿಹಾಸ ಅಧ್ಯಾಪಕ, 
ಸಂಜೀವಿನಿ ನಿಲಯ, ೮ನೇ ಕ್ರಾಸ್, 
ಸಿ.ಕೆ. ಪುರ, ಕೆಳಗೋಟೆ, ಚಿತ್ರದುರ್ಗ - ೫೭೭೫೦೧.


ಹೊಳಲ್ಕೆರೆ ತಾಲೂಕು ಚಿತ್ರದುರ್ಗ ಜಿಲ್ಲೆಯ ಪ್ರಾಗೈತಿಹಾಸಿಕ ಸಂಸ್ಕೃತಿಯಲ್ಲಿ ತನ್ನದೇ ಆದ ಒಂದು ವಿಶೇಷವಾದ ಸ್ಥಾನವನ್ನು ಪಡೆದುಕೊಂಡಿದೆ. ರಾಬರ್ಟ್ ಬ್ರೂಸ್‌ಪೂಟ್ ಅವರು ಕ್ರಿ.ಶ.೧೮೬೩ರಲ್ಲಿ ಹೊಳಲ್ಕೆರೆ ತಾಲೂಕಿನ ತಾಳ್ಯದಲ್ಲಿ ಆದಿ ಹಳೇಶಿಲಾಯುಗದ ಮೂರು ಆಯುಧಗಳನ್ನು ಪತ್ತೆಹಚ್ಚಿ ಪ್ರಕಟಿಸಿದ್ದರು. ತರುವಾಯ ಅನೇಕ ಸಂಶೋಧಕರು ಈ ತಾಲೂಕಿನ ವಿವಿಧೆಡೆ ಹಲವು ಪ್ರಾಗೈತಿಹಾಸಿಕ ನೆಲೆಗಳನ್ನು ಪತ್ತೆಹಚ್ಚಿ ಪ್ರಕಟಿಸುತ್ತಾ ಬರುತ್ತಿರುವುದು ಇಲ್ಲಿನ ಪ್ರಾಗೈತಿಹಾಸ ಸಂಸ್ಕೃತಿಯ ಅಗಾಧತೆಗೆ ಸಾಕ್ಷಿಯಾಗಿದೆ. ಈಗಾಗಲೇ ಪತ್ತೆಯಾಗಿ ಪ್ರಕಟಗೊಂಡಿರುವ ನೆಲೆಗಳು ಹಳೇಶಿಲಾಯುಗ, ಬೃಹತ್ ಶಿಲಾಯುಗ ಹಾಗೂ ಆರಂಭಿಕ ಇತಿಹಾಸ ಕಾಲಕ್ಕೆ ಸೇರಿದವುಗಳಾಗಿವೆ.
ಹೊಳಲ್ಕೆರೆ ತಾಲೂಕಿನಲ್ಲಿ ನಾನು ಕೈಗೊಂಡ ಸಂಶೋಧನಾ ಕ್ಷೇತ್ರಕಾರ‍್ಯದಲ್ಲಿ ಪತ್ತೆಹಚ್ಚಿರುವ ಬೃಹತ್ ಶಿಲಾಯುಗದ ನೆಲೆಗಳನ್ನು ಕುರಿತು ಈ ಲೇಖನದಲ್ಲಿ ವಿವರಿಸಿದ್ದೇನೆ. ಹೊಳಲ್ಕೆರೆ ತಾಲೂಕಿನಲ್ಲಿ ಪತ್ತೆಯಾಗಿರುವ ಬೃಹತ್ ಶಿಲಾಯುಗದ ನೆಲೆಗಳೆಂದರೆ: ೧. ಸಿರಾಪ್ಪನಹಳ್ಳಿ, ೨. ಗೂಳಿಹೊಸಹಳ್ಳಿ, ೩. ಹಳೇಹಳ್ಳಿ ಲಂಬಾಣಿಹಟ್ಟಿ, ೪. ಹುಲಿಕೆರೆ.
೧. ಸಿರಾಪ್ಪನ ಹಳ್ಳಿ
ಹೊಳಲ್ಕೆರೆ ತಾಲೂಕಿನ ತಾಳ್ಯದ ಸಮೀಪವಿರುವ ಸಿರಾಪ್ಪನಹಳ್ಳಿಯು ಈ ಪರಿಸರದ ಪ್ರಮುಖ ಬೃಹತ್ ಶಿಲಾಯುಗದ ನೆಲೆಗಳಲ್ಲಿ ಒಂದು. ‘ಸಿರಿಯಪ್ಪ’ ಎಂಬ ಜನಪದ ವೀರನ ಸ್ಮರಣಾರ್ಥವಾಗಿ ಈ ಗ್ರಾಮಕ್ಕೆ ಸಿರಾಪ್ಪನಹಳ್ಳಿ ಹೆಸರು ಬಂದಿದೆ ಎಂದು ಸ್ಥಳೀಯರು ಹೇಳುತ್ತಾರೆ. ಸಿರಾಪ್ಪನಹಳ್ಳಿ ಪರಿಸರದಲ್ಲಿ ಬಿಳಿಕಣಶಿಲೆ, ಕೆಂಪು ಬೆಣಚುಕಲ್ಲು ಹಾಗೂ ಕಪ್ಪು ಶಿಲೆಗಳ ಬೆಟ್ಟ-ಗುಡ್ಡಗಳನ್ನು ಅಪಾರವಾಗಿ ಕಾಣಬಹುದು.
ಈ ಗ್ರಾಮದಿಂದ ಪಶ್ಚಿಮ ದಿಕ್ಕಿಗೆ ಕರಿಯಪ್ಪ ಅವರ ತೋಟದ ಪಕ್ಕದಲ್ಲೇ ‘ಪಾಂಡವರಗುಂಡು’ ಎಂದು ಕರೆಯಲ್ಪಡುವ ಮೂರು ಬೃಹದಾಕಾರದ ಕಲ್ಲಿನ ಹೆಬ್ಬಂಡೆಗಳಿವೆ. ಪಾಂಡವರು ವನವಾಸಕ್ಕೆ ಬಂದಾಗ ಇಲ್ಲೇ ನೆಲೆನಿಂತು ಅಡುಗೆಗೋಸ್ಕರ ಈ ಕಲ್ಲುಗುಂಡುಗಳನ್ನು ಹೂಡಿ ಒಲೆಯಾಗಿ ಮಾಡಿಕೊಂಡು ಅಡುಗೆ ಮಾಡಿಕೊಳ್ಳುತ್ತಿದ್ದರೆಂದು ಹೇಳಲಾಗುತ್ತದೆ. ಇದಕ್ಕೆ ಹೊಂದಿಕೊಂಡಂತೆ ಇರುವ ಬೆಟ್ಟದ (ಗೂಬೆಕಲ್ಲು) ಹಿಂಭಾಗದಲ್ಲಿ ‘ಭೀಮನಗುಂಡು’ ಎಂದು ಕರೆಯಲ್ಪಡುವ ಅತ್ಯಂತ ಬೃಹದಾಕಾರದ ಸುಮಾರು ೨೫ ಅಡಿ ಎತ್ತರದ ಬಂಡೆ ಇದ್ದು ಅದನ್ನು ಭೀಮನು ಒಲೆಗೋಸ್ಕರ ಹೊತ್ತು ತರುತ್ತಿರುವಾಗ ಅಷ್ಟರೊಳಗೆ ಆತನ ಕುಟುಂಬದವರು ಕಲ್ಲುಗುಂಡುಗಳನ್ನು ಹೂಡಿ ಅಡುಗೆ ಮಾಡುತ್ತಿದ್ದರು. ಆಗ ಭೀಮನು ಆ ಕಲ್ಲುಗುಂಡನ್ನು ಅಲ್ಲಿಯೇ ಬಿಟ್ಟು ಬಂದನು ಎಂದು ಅಲ್ಲಿನ ಸ್ಥಳೀಯರು ಕಥೆ ಹೇಳುತ್ತಾರೆ. ಹೀಗೆ ಪಾಂಡವರ ಐತಿಹ್ಯವಿರುವ ಈ ಪರಿಸರವು ‘ಬೃಹತ್ ಶಿಲಾಯುಗ’ದ ನೆಲೆಯಾಗಿದೆ. ಪಾಂಡವರ ಗುಂಡುಗಳಿರುವ ಜಾಗದಿಂದ ದಕ್ಷಿಣ ದಿಕ್ಕಿಗೆ ಇದೇ ಗ್ರಾಮದ ಶೇಖರಪ್ಪ ಅವರ ಹೊಲದಲ್ಲಿ ೨೮ ಬೃಹತ್ ಶಿಲಾಸಮಾಧಿಗಳಿವೆ. ಶಿಲಾವೃತ್ತಗಳಾಗಿರುವ ಇವುಗಳ ರಚನೆಗೆ ಸ್ಥಳೀಯವಾದ ಶಿಲಾ ಮಾದರಿಗಳನ್ನೇ ಬಳಸಿದ್ದಾರೆ. ವೃತ್ತ ಮಾದರಿಗಳ ಮಧ್ಯದಲ್ಲಿ ಸಣ್ಣಗಾತ್ರದ ಉರುಟುಗಲ್ಲುಗಳು, ಬೆಣಚು ಕಲ್ಲುಗಳನ್ನು ತುಂಬಿದ್ದಾರೆ. ವೃತ್ತಗಳಿಗೆ ಬಳಸಿರುವ ಕಲ್ಲುಗಳು ಸುಮಾರು ೪ ಅಡಿ ಅಗಲ, ೩ ಅಡಿ ಎತ್ತರದ ದೊಡ್ಡದಾದ ಆಕಾರದಲ್ಲಿವೆ. ಕೆಲವು ಶಿಲಾಸಮಾಧಿಗಳಿಗೆ ಬಳಸಿರುವ ಕಲ್ಲುಗಳು ೧.೫ ಅಡಿ ಅಗಲ ೨ ಅಡಿ ಎತ್ತದ ಚಿಕ್ಕ ಆಕಾರದಲ್ಲಿವೆ. ಈ ಶಿಲಾವೃತ್ತಗಳ ಸುತ್ತಳತೆಯು ೬೦ ಅಡಿ, ೭೦ ಅಡಿ, ೮೦ ಅಡಿ ಇವೆ. ಕಡಿಮೆ ಸುತ್ತಳತೆ ಹೊಂದಿರುವ ಶಿಲಾಸಮಾಧಿಗಳಿಗೆ ೧೦ರಿಂದ ೧೫ ಕಲ್ಲುಗುಂಡುಗಳನ್ನು ಇಟ್ಟಿದ್ದಾರೆ. ಕೆಲವು ಶಿಲಾಸಮಾಧಿಗಳಿಗೆ ಕಪ್ಪು ಶಿಲೆಗಳನ್ನು ಮತ್ತು ಕೆಲವಕ್ಕೆ ಬಿಳಿಕಣಶಿಲೆಗಳನ್ನು ಬಳಸಿದ್ದಾರೆ. ಮಧ್ಯದಲ್ಲಿರುವ ಹಾಸಿರುವ ಹಾಸುಗಲ್ಲು ೩/೪ ಅಡಿ ದಪ್ಪ ೧೫ x ೨೦ ಅಡಿ ಇವೆ. ಅದೇ ರೀತಿ ಪಾಂಡವರ ಗುಂಡುಗಳು ಇರುವ ಪ್ರದೇಶದಿಂದ ಉತ್ತರ ದಿಕ್ಕಿಗೆ ರುದ್ರಯ್ಯ ಅವರ ಹೊಲದಲ್ಲಿ ಸುಮಾರು ೨೫ ಬೃಹತ್ ಶಿಲಾಸಮಾಧಿಗಳಿವೆ. ಇವುಗಳು ಶಿಲಾವೃತ್ತ ಮಾದರಿಗೆ ಸೇರಿದವುಗಳಾಗಿದ್ದು ಇವುಗಳ ರಚನೆಯಲ್ಲಿ ಸುತ್ತಲೂ ಗುಂಡುಕಲ್ಲುಗಳನ್ನು ಕೆಲವಕ್ಕೆ ನೆಟ್ಟಿದ್ದರೆ, ಕೆಲವಕ್ಕೆ ಕಲ್ಲುಚಪ್ಪಡಿಗಳನ್ನು ಬಳಸಿದ್ದಾರೆ.
ಕಬ್ಬಿಣ ತಯಾರಿಕಾ ನೆಲೆ
ಸಿರಾಪ್ಪನಹಳ್ಳಿಯ ಪರಿಸರವು ಬೃಹತ್ ಶಿಲಾಯುಗ ಕಾಲಘಟ್ಟದ ಒಂದು ಅತ್ಯಂತ ದೊಡ್ಡನೆಲೆಯಾಗಿದೆ. ಈ ಪರಿಸರದಲ್ಲಿ ಕಾಣಬರುವ ಮಲಸಿಂಗನಹಳ್ಳಿಯ ಸುತ್ತಮುತ್ತಲೂ ಅಪಾರವಾದ ಕಬ್ಬಿಣದ ತಯಾರಿಕೆಗೆ ಸಂಬಂಧಿಸಿದ ಕಿಟ್ಟದ ಅವಶೇಷಗಳು, ಮಣ್ಣಿನ ಮೂಸೆಗಳು ಅಪಾರವಾಗಿವೆ. ಅದೆಷ್ಟೋ ಎಕರೆ ಭೂಪ್ರದೇಶದಲ್ಲಿ ಕಿಟ್ಟದ ಅವಶೇಷಗಳು ಹರಡಿಕೊಂಡಿವೆ. ಬೃಹತ್ ಶಿಲಾಯುಗದ ಕಾಲದಲ್ಲೇ ಈ ಪರಿಸರದಲ್ಲಿ ಕಬ್ಬಿಣ ತಯಾರಿಕೆ ಕಾರ‍್ಯಗಳು ನಡೆದಿರುವ ಸಾಧ್ಯತೆ ಇದೆ.
೨. ಗೂಳಿಹೊಸಹಳ್ಳಿ
ಹೊಳಲ್ಕೆರೆ ತಾಲೂಕಿನ ಪ್ರಸಿದ್ಧ ಹೊರಕೆರೆದೇವಪುರದ ಸಮೀಪ ಕಂಡುಬರುವ ಗೂಳಿಹೊಸಹಳ್ಳಿಯು ಈ ಪರಿಸರದ ಪ್ರಮುಖ ಪ್ರಾಗೈತಿಹಾಸಿಕ ನೆಲೆಗಳಲ್ಲಿ ಒಂದಾಗಿದೆ. ಈ ಗ್ರಾಮದ ಈಶಾನ್ಯ ದಿಕ್ಕಿನಲ್ಲಿ ಜುಂಜಪ್ಪನ ದೇವಾಲಯದ ಉತ್ತರ ಭಾಗಕ್ಕೆ ೭ ಬೃಹತ್ ಶಿಲಾಸಮಾಧಿಗಳು ಕಂಡುಬರುತ್ತವೆ. ಇವುಗಳು ಶಿಲಾವೃತ್ತ ಮಾದರಿಗೆ ಸೇರಿವೆ. ಈ ಪರಿಸರದಲ್ಲಿ ಭೌಗೋಳಿಕವಾಗಿ ಚಕ್ಕೆ ಕಲ್ಲುಗಳು ಕಂಡುಬರುತ್ತವೆ. ಆ ಕಲ್ಲುಗಳನ್ನೇ ಈ ಶಿಲಾಸಮಾಧಿಗಳ ರಚನೆಗೆ ಬಳಸಿದ್ದಾರೆ. ಸುತ್ತಲೂ ದೊಡ್ಡ ಗಾತ್ರದ ಚಿಕ್ಕಕಲ್ಲುಗಳನ್ನು ನೆಟ್ಟು ಮಧ್ಯದಲ್ಲಿ ಚಿಕ್ಕಗಾತ್ರದ ಶಿಲೆಗಳನ್ನು ತುಂಬಿದ್ದಾರೆ.
೩. ಹಳೇಹಳ್ಳಿ ಲಂಬಾಣಿಹಟ್ಟಿ
ಹೊಳಲ್ಕೆರೆ ತಾಲೂಕಿನ ಬೃಹತ್ ಶಿಲಾಯುಗದ ನೆಲೆಗಳಲ್ಲಿ ಲಂಬಾಣಿಹಟ್ಟಿಯು ಒಂದು. ಈ ಗ್ರಾಮವು ಶಿವಗಂಗಾ ಮತ್ತು ಹೊಳಲ್ಕೆರೆ ಮಾರ್ಗದಲ್ಲಿದೆ. ಹಳೇಹಳ್ಳಿ ಲಂಬಾಣಿಹಟ್ಟಿಯಿಂದ ಗಿಲಕೇನಹಳ್ಳಿಗೆ ಹೋಗುವ ಮಾರ್ಗದಲ್ಲಿ ಆಂಜನೇಯ ದೇವಾಲಯದ ಪರಿಸರದಲ್ಲಿ ಬೃಹತ್ ಶಿಲಾಸಮಾಧಿ ನೆಲೆ ಇದೆ. ಈ ಪರಿಸರವು ಭೌಗೋಳಿಕವಾಗಿ ಬೆಟ್ಟ-ಗುಡ್ಡ, ತಗ್ಗು-ದಿನ್ನೆಗಳಿಂದ ಕೂಡಿದ್ದು ಇಲ್ಲೇ ಗ್ರಾನೈಟ್ ಬೆಟ್ಟವಿದೆ. ಆದುದರಿಂದ ಅದಕ್ಕೆ ಸಮೀಪದಲ್ಲೇ ಕಲ್ಲು ಗಣಿಗಾರಿಕೆಯು ನಡೆಯುತ್ತಿದೆ. ಇಲ್ಲಿನ ಆಂಜನೇಯ ದೇವಾಲಯದ ಹತ್ತಿರ ಸುಮಾರು ೫೦ ಬೃಹತ್ ಶಿಲಾಸಮಾಧಿಗಳು ಪತ್ತೆಯಾದವು. ಇವುಗಳು ವೃತ್ತಮಾದರಿಗೆ ಸೇರಿವೆ. ಇವುಗಳ ರಚನೆಗೆ ಒಳಭಾಗಕ್ಕೆ ಬಿಳಿಕಣಶಿಲೆಯ ಚಪ್ಪಡಿಗಳನ್ನು ಬಳಸಿ ಮೇಲೆ ಅದೇ ಕಲ್ಲಿನ ಚಪ್ಪಡಿಯ ಹಾಸುಬಂಡೆಗಳನ್ನು ಹಾಕಿದ್ದಾರೆ. ಅಲ್ಲದೇ ಸಮಾಧಿಯ ಸುತ್ತಲೂ ಕಪ್ಪು ದುಂಡುಶಿಲೆಗಳನ್ನು ಬಳಸಿದ್ದಾರೆ. ಒಟ್ಟಾರೆ ಇಲ್ಲಿ ಭೌಗೋಳಿಕವಾಗಿ ದೊರೆಯುವ ಶಿಲಾ ಮಾದರಿಗಳನ್ನೇ ಬಳಸಿ ಸಮಾಧಿಗಳನ್ನು ನಿರ್ಮಿಸಿರುವುದು ಕಂಡುಬರುತ್ತದೆ.
೪. ಹುಲಿಕೆರೆ
ಹುಲಿಕೆರೆ ಗ್ರಾಮವು ಹೊಳಲ್ಕೆರೆ ತಾಲೂಕಿಗೆ ಸೇರಿದ್ದು ಹೊಸದುರ್ಗ ತಾಲೂಕಿನ ಗೂಳಿಹಟ್ಟಿ ಗ್ರಾಮಕ್ಕೆ ಸನಿಹದಲ್ಲಿದೆ. ಇದರ ಸ್ಥಳನಾಮವು ಪ್ರಾಣಿವಾಚಿಯಿಂದ ಕೂಡಿದೆ. ಈ ಗ್ರಾಮದ ಪಶ್ಚಿಮ ದಿಕ್ಕಿನಲ್ಲಿ ಹಾಳೂರು ಅಥವಾ ಹಳೇಊರು ಪರಿಸರವಿದೆ. ಇಲ್ಲಿನ ತಿಪ್ಪೇಸ್ವಾಮಿ ಅವರ ಹೊಲದಲ್ಲಿ ೩ ಬೃಹತ್ ಶಿಲಾಗೋರಿಗಳು ಪತ್ತೆಯಾಗಿದ್ದು ಅವುಗಳು ಸ್ವಸ್ತಿಕ ಮಾದರಿಗೆ ಸೇರಿವೆ. ಇವುಗಳ ಬದಿಗಳಲ್ಲಿ ಕಪ್ಪು, ಕೆಂಪು ಹಾಗೂ ಕಪ್ಪು-ಕೆಂಪು ಬಣ್ಣದ ಮಡಿಕೆ ಚೂರುಗಳು ದೊರೆತಿವೆ. ಬೃಹತ್ ಶಿಲಾಗೋರಿಗಳ ಬದಿಯಲ್ಲೇ ಒಂದು ಬೃಹದಾಕಾರದ ಬೆಟ್ಟದ ಗವಿ ಇದೆ. ಆದರೆ ಒಳಗೆ ಹೋಗುವ ಯಾವ ಪ್ರವೇಶದ್ವಾರಗಳು ಇರದೇ ಮುಚ್ಚಿಹೋಗಿವೆ. ಆದರೆ ಗವಿಗಳ ಹೊರವಲಯಗಳಲ್ಲಿ ಬೃಹತ್ ಶಿಲಾಸಂಸ್ಕೃತಿಯ ಮಡಿಕೆ ಚೂರುಗಳು ದೊರೆತಿವೆ. ಬಹುಶಃ ಇವುಗಳು ಮಾನವರ ವಾಸ್ತವ್ಯದ ಗುಹೆಗಳಾಗಿದ್ದಿರಬಹುದು.
ನೂತನ ಶಿಲಾಯುಗದ ನಂತರದ ಕಾಲದಲ್ಲಿ ಕಂಡುಬರುವ ಬೃಹತ್ ಶಿಲಾಸಂಸ್ಕೃತಿಯ ಪ್ರಧಾನವಾದ ಲಕ್ಷಣಗಳೆಂದರೆ - ಬೃಹದಾಕಾರದ ಸಮಾಧಿಗಳ ನಿರ್ಮಾಣ ಹಾಗೂ ಮೊತ್ತ ಮೊದಲ ಬಾರಿಗೆ ಕಬ್ಬಿಣ ಉಪಯೋಗದ ಪರಿಚಯ. ಆದುದರಿಂದ ಈ ಕಾಲವನ್ನು ‘ಕಬ್ಬಿಣಯುಗ’ ಎಂದು ಕರೆಯಲಾಗಿದೆ. ಚಿತ್ರದುರ್ಗ ಜಿಲ್ಲೆಯ ಬಹುಭಾಗಗಳಲ್ಲಿ ಬೃಹತ್ ಶಿಲಾಸಮಾಧಿಗಳು ಹಾಗೂ ನೆಲೆಗಳು ಅಪಾರ ಪ್ರಮಾಣದಲ್ಲಿ ಕಂಡುಬಂದಿವೆ. ಈ ಜಿಲ್ಲೆಯ ಬೃಹತ್ ಶಿಲಾಸಮಾಧಿಗಳ ಕಾಲಮಾನವನ್ನು ಕ್ರಿ.ಪೂ.೨೦೦ ರಿಂದ ಕ್ರಿ.ಶ.೧ನೇ ಶತಮಾನ ಎಂದು ಅಂದಾಜಿಸಲಾಗಿದೆ. ಹೊಳಲ್ಕೆರೆ ತಾಲೂಕಿನ ಸಿರಾಪ್ಪನಹಳ್ಳಿ, ಗೂಳಿಹೊಸಹಳ್ಳಿ, ಹಳೇಹಳ್ಳಿ, ಲಂಬಾಣಿಹಟ್ಟಿ, ಹುಲಿಕೆರೆ ಗ್ರಾಮಗಳ ಪರಿಸರಗಳಲ್ಲಿ ಕಂಡುಬಂದಿರುವ ಬೃಹತ್ ಶಿಲಾಸಮಾಧಿಗಳು ಇದೇ ಮೊದಲ ಬಾರಿಗೆ ಈ ಲೇಖನದ ಮೂಲಕ ಪ್ರಕಟಗೊಳ್ಳುತ್ತಿವೆ.

[
ಕೃತಜ್ಞತೆ : ಹೊಳಲ್ಕೆರೆ ತಾಲ್ಲೂಕಿನ ಕ್ಷೇತ್ರಕಾರ‍್ಯದಲ್ಲಿ ಸಹಕರಿಸಿದ ದುಗ್ಗಾವರದ ಬಿ.ಪಿ. ಸಂತೋಷ್‌ಕುಮಾರ್, ನನ್ನ ಆತ್ಮೀಯ ಗೆಳೆಯ ಆರ್.ಎಸ್. ಉಮೇಶ ಇವರಿಗೆ ವಂದನೆಗಳು.]








Monday, December 3, 2012

ಅಣ್ಣಿಗೇರಿಯಲ್ಲಿ ಪುರಾತತ್ತ್ವ ಉತ್ಖನನ


ಡಾ. ಎಂ.ಎಸ್. ಕೃಷ್ಣಮೂರ್ತಿ, ಡಾ. ಆರ್. ಗೋಪಾಲ್, ಟಿ.ಎಸ್. ಗಂಗಾಧರ್


ಅಣ್ಣಿಗೇರಿ ಅಥವಾ ಅಣ್ಣಿಗೆರೆ (೧೫ ೨೫’ ೩೪" ಉತ್ತರ ಮತ್ತು ೭೫೦೨೬’೧೭" ಪೂರ್ವ) ಹುಬ್ಬಳ್ಳಿಯಿಂದ ಬೆಳ್ಳಾರಿಗೆ ಹೋಗುವ ಮಾರ್ಗದಲ್ಲಿ, ಸುಮಾರು ೩೫ ಕಿ.ಮೀ. ದೂರದಲ್ಲಿದೆ. ಪ್ರಾಚೀನ ಪ್ರಸಿದ್ಧವಾದ ಈ ಊರು, ಆದಿಕವಿ ಪಂಪನ ಹುಟ್ಟೂರು ಎಂದೂ ಹೆಸರುವಾಸಿಯಾಗಿದೆ. ಅಣ್ಣಿಗೇರಿ ಸನ್ ೨೦೧೦ರ ಸೆಪ್ಟೆಂಬರ್ ಮಾಹೆಯಲ್ಲಿ, ಇದಕ್ಕಿದ್ದಂತೆ ಪ್ರಸಿದ್ಧಿಗೆ ಬಂತು. ಕಾರಣ, ಈ ಊರಿನಲ್ಲಿ, ಚರಂಡಿ ದುರಸ್ತಿ ಕಾರ್ಯದ ಸಮಯದಲ್ಲಿ, ಭೂಮಿಯಿಂದ ಹೊರಕ್ಕೆ ಬಂದ ಅನೇಕ ಮಾನವ ತಲೆ ಬುರುಡೆಗಳು ಮತ್ತು ಅಸ್ಥಿಗಳು. ಕುತೂಹಲಭರಿತರಾದ ಜನರು, ಆಡಳಿತ ವರ್ಗ, ಪತ್ರಕರ್ತರು, ದೃಶ್ಯ-ಶ್ರಾವ್ಯ ಮಾಧ್ಯಮದವರು, ಪುರಾತತ್ತ್ವಜ್ಞರು, ವಿದ್ವಾಂಸರು, ವೈದ್ಯರು ಮುಂತಾದವರು  ಅಣ್ಣಿಗೇರಿಗೆ ಧಾವಿಸಿ ಸ್ಥಳವನ್ನು ಪರೀಕ್ಷಿಸಿದರು, ವಿಸ್ಮಯಗೊಂಡರು, ಸಮಾಧಿಯ ಬಗ್ಗೆ ವಿವಿಧ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಯಂತ್ರದಿಂದ ಚರಂಡಿಯ ಮಣ್ಣನ್ನು ಉತ್ಖನನ ಮಾಡುತ್ತಿದ್ದುದರಿಂದ, ಈ ಸಮಾಧಿಯು ಬಹಳಷ್ಟು ಜಖಂ ಆಗಿತ್ತು. ಸೇರಿದ್ದ ಜನಸಂದಣ ತಮ್ಮಿಷ್ಟ ಬಂದಂತೆ ಬುರುಡೆಗಳನ್ನು ಹೊರತೆಗೆದಿದ್ದರು. ಚರಂಡಿಯ ಕೊಳಚೆಯ ನೀರಿನ ಮಧ್ಯದಲ್ಲಿ ಐವತ್ತಕ್ಕೂ ಹೆಚ್ಚು ಮಾನವ ತಲೆಬುರುಡೆಗಳು ಮೇಲ್ನೋಟಕ್ಕೆ ಕಾಣುತ್ತಿದ್ದವು. ತಲೆ ಬುರುಡೆಗಳನ್ನು, ಮೂಲತಃ ಸಾಲು-ಸಾಲಾಗಿ, ವ್ಯವಸ್ಥಿತವಾಗಿ ಜೋಡಿಸಿ ಸಮಾಧಿ ಮಾಡಲಾಗಿತ್ತು. ಬುರುಡೆಗಳ ಜೋಡಣೆಗೆ ಹೊಂದಿಕೊಂಡಂತೆ ದಕ್ಷಿಣ ತುದಿಯಲ್ಲಿ ಕೈಕಾಲು ಹಾಗೂ ಇನ್ನಿತರ ಮೂಳೆಗಳನ್ನು ರಾಶಿ ಸುರಿದಿದ್ದರು.
ಇಂತಹ ಪರಿಸ್ಥಿತಿಯಲ್ಲಿದ್ದ ಅಸ್ಥಿ ಅವಶೇಷಗಳನ್ನು ಮೇಲ್ನೋಟದಲ್ಲಿ ಪರಿಶೀಲಿಸಿದ ತಜ್ಞರು ವಿವಿಧವಾದ ಅಭಿಪ್ರಾಯಗಳನ್ನು ಸೂಚಿಸಿದ್ದರು. ಅವುಗಳಲ್ಲಿ ಮುಖ್ಯವಾದವುಗಳೆಂದರೆ:
          ಇಲ್ಲಿ ಹೂಳಲಾದ ಮನುಷ್ಯರ ತಲೆಬುರುಡೆಗಳನ್ನು ದೇಹದಿಂದ ಪ್ರತ್ಯೇಕಮಾಡಿ ಹೂತಿರುವುದರಿಂದ, ಈ ದೇಹಗಳು ಯಾವುದೋ ನರಹತ್ಯೆಯಲ್ಲಿ ಶಿರಚ್ಛೇದನವಾದ ಮನುಷ್ಯರ ಅಸ್ಥಿ ಅವಶೇಷಗಳು ಆಗಿರಬೇಕು. ಈ ಸಮಾಧಿ ರಾಜದ್ರೋಹಿಗಳದ್ದಾಗಿರಬಹುದು ಅಥವಾ ಯುದ್ಧ ಖೈದಿಗಳದ್ದಾಗಿರಬಹುದು, ಈ ನರಮೇಧ ಧರ್ಮದ್ವೇಷಿ ಗಳಿಂದಾಗಿರಬಹುದು ಅಥವಾ ೧೮೫೭ರಲ್ಲಿ ಸಂಭವಿಸಿದ ನರಗುಂದ ಬಂಡಾಯದಲ್ಲಿ ನಡೆದಿರಬಹುದಾದ ನರಹತ್ಯೆಯ ಭಾಗವಾಗಿರಬಹುದು. ಅಸ್ಥಿ ಅವಶೇಷಗಳು ಸಾಕಷ್ಟು ಗಟ್ಟಿಯಾಗಿದ್ದುದರಿಂದ ಈ ಸಮಾಧಿ ಸುಮಾರು ಇನ್ನೂರು ವರ್ಷಗಳಷ್ಟು ಹಳೆಯದಿರಬಹುದೆಂದೂ ಸೂಚಿಸಲಾಗಿತ್ತು.
          ಹುಬ್ಬಳ್ಳಿಯ ‘ಕಿಮ್ಸ್’ (ಏIಒS) ಸಂಸ್ಥೆಯಿಂದ ಬಂದು ಸ್ಥಳ ಪರಿಶೀಲಿಸಿದ ವೈದ್ಯರ ತಂಡವೊಂದು, ಈ ಸಮಾಧಿಯಿಂದ ಮೂರು ತಲೆಬುರುಡೆ ಮಾದರಿಗಳನ್ನು ಸಂಗ್ರಹಿಸಿ ಹೆಚ್ಚಿನ ಪರೀಕ್ಷೆಗಾಗಿ ಕೊಂಡೊಯ್ದಿತ್ತು. ವೈದ್ಯರ ವರದಿಯ ಪ್ರಕಾರ, ಆ ಮೂರು ತಲೆಬುರುಡೆಗಳಲ್ಲಿ ಎರಡು ಪುರುಷರ ತಲೆಬುರುಡೆಗಳು, ಒಂದು ಸ್ತ್ರೀ ತಲೆಬರುಡೆಯೆಂದು ತಿಳಿಸಲಾಯಿತು. ಅಲ್ಲದೆ ಈ ಬುರುಡೆಗಳು ಸುಮಾರು ೩೦-೪೦ ವರ್ಷ ವಯಸ್ಸಿನ ವ್ಯಕ್ತಿಗಳದ್ದೆಂದೂ ಸಹ ವರದಿ ತಿಳಿಸಿತು. ಆಶ್ಚರ್ಯದ ಸಂಗತಿಯೆಂದರೆ ಸಮಾಧಿಯಲ್ಲಿ ಮೇಲ್ನೋಟಕ್ಕೆ ಕಾಣುತ್ತಿದ್ದ ಬುರುಡೆಗಳಿಗೂ, ಹಾಗೂ ವೈದ್ಯರ ಪರಿಶೀಲಿಸಿದ ತಲೆಬುರುಡೆಗಳೂ ಈ ಎರಡಕ್ಕೂ ಕೆಳದವಡೆ ಕಾಣೆಯಾಗಿತ್ತು. ಜೊತೆಗೆ ತಲೆ ಬುರುಡೆಯ ಕೆಳಭಾಗದಲ್ಲಿ ಬಲವಾಗಿ ಕಚ್ಚಿಕೊಂಡಿರುವಂತಹ ಮೊದಲನೆಯ ಕಶೇರುಮಣಿಯೂ ಸಹ ಕಾಣದಾಗಿತ್ತು.
ವಿದ್ವಾಂಸರ ವಿವಿಧ ಅಭಿಪ್ರಾಯಗಳ ಹಾಗೂ ವೈದ್ಯರ ವರದಿಯ ಹಿನ್ನೆಲೆಯಲ್ಲಿ ರಾಜ್ಯ ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯವು, ಪುರಾತತ್ತ್ವ ಉತ್ಖನನವನ್ನು ಅಣ್ಣಿಗೇರಿಯಲ್ಲಿ ಪ್ರಾರಂಭಿಸಿತು. ಡಾ| ಎಂ.ಎಸ್. ಕೃಷ್ಣಮೂರ್ತಿ, ಪ್ರೊಫೆಸರ್ ಎಮೆರಿಟಸ್, ಮೈಸೂರು ವಿಶ್ವವಿದ್ಯಾನಿಲಯ; ಡಾ| ಆರ್. ಗೋಪಾಲ್, ನಿರ್ದೇಶಕರು; ಶ್ರೀ ಟಿ.ಎಸ್. ಗಂಗಾಧರ್, ಉಪ-ನಿರ್ದೇಶಕರು, ಇವರುಗಳ ನೇತೃತ್ವದಲ್ಲಿ ಉತ್ಖನನವು ನಡೆಯಿತು. ಉತ್ಖನನ ೨೦೧೧ನೆಯ ಸಾಲಿನ ಫೆಬ್ರವರಿ-ಮಾರ್ಚ್ ತಿಂಗಳುಗಳಲ್ಲಿ, ಐವತ್ತು ದಿನಗಳ ಕಾಲ ನಡೆಯಿತು. ಇದರ ಫಲವಾಗಿ ಬಹಳ ಸ್ವಾರಸ್ಯಕರವಾದ ವಿಷಯಗಳು, ಸಮಾಧಿಯ ಬಗ್ಗೆ ಹೊರಬಂದವು.
ತಲೆಬುರುಡೆಗಳ ಸಮಾಧಿ ಇದ್ದ ಸ್ಥಳ, ಕೊಳಚೆ ನೀರಿನ ಚರಂಡಿಯ ತಳಮಟ್ಟದಲ್ಲಿತ್ತು. ಇದರಿಂದಾಗಿ ಇಡೀ ಸಮಾಧಿಸ್ಥಳ ಕೊಳಚೆಗುಂಡಿಯಂತೆಯೇ ಇತ್ತು. ಬಹಳ ವಿಚಕ್ಷಣೆಯಿಂದ ಇಡೀ ಜಾಗವನ್ನು ಜೌಗು ರಹಿತವನ್ನಾಗಿ ಮಾಡಿ, ವ್ಶೆಜ್ಞಾನಿಕವಾಗಿ ಉತ್ಖನನವನ್ನು ನಡೆಸಲಾಯಿತು. ಉತ್ಖನನದಿಂದ ಹೊರಬಂದ ಪ್ರಮುಖ ವಿಷಯಗಳೆಂದರೆ:
೧.       ಈ ಸಮಾಧಿಯನ್ನು ಎಲ್ಲಿಂದಲೋ ಸಂಗ್ರಹಿಸಲಾದ ತಲೆಬುರುಡೆಗಳು ಮತ್ತು ಮೂಳೆಗಳಿಗಾಗಿ ಮಾಡಲಾಗಿದೆ.
೨.       ಬುರುಡೆಗಳು ಮತ್ತು ಮೂಳೆಗಳ ಸ್ಥಿತಿಯನ್ನು ಗಮನಿಸಿದಾಗ ಅವುಗಳು ಸಮಾಧಿಗೆ ಮುಂಚೆ ಕನಿಷ್ಟ ಆರು ತಿಂಗಳಿಗೂ ಹೆಚ್ಚುಸಮಯ ಬಯಲಿನಲ್ಲಿ, ಕಾಲ ಮತ್ತು ನಿಸರ್ಗದ ವಿಕೋಪಕ್ಕೆ ತುತ್ತಾಗಿವೆ ಎಂದು ಎನಿಸುತ್ತದೆ.
೩.       ಈ ರೀತಿ ನಿಸರ್ಗದ ವಿಕೋಪಕ್ಕೆ ತುತ್ತಾಗಿರುವುದರಿಂದ ತಲೆಬುರುಡೆಗೆ ಭದ್ರವಾಗಿ ಅಂಟಿಕೊಂಡಿರುವ ಕೆಳದವಡೆ ಮತ್ತು ಮೊದಲ ಕಶೇರು ಮಣಿಗಳು ಈಗ ಬುರುಡೆಗಳಿಂದ ಬೇರ್ಪಟ್ಟಿವೆ.
೪.       ಅಸ್ಥಿ ರಾಶಿಯಲ್ಲಿ ಹೆಚ್ಚಾಗಿ ದೊಡ್ಡ-ದೊಡ್ಡ ಮೂಳೆಗಳು ಮಾತ್ರ ಇವೆ. ಇವುಗಳೂ ಸಹ ಕೀಲುಗಳಲ್ಲಿ ಬೇರ್ಪಟ್ಟಿವೆ, ಕೆಲವು ಮುರಿದಿವೆ, ಕೆಲವು ಸೀಳಿವೆ, ಕೆಲವು ಜಜ್ಜಿಹೋಗಿವೆ.
೫.       ಸಮಾಧಿಯಲ್ಲಿ, ಸುಸ್ಥಿತಿಯಲ್ಲಿರುವ, ಒಡೆದಿರುವ, ಜಜ್ಜಿರುವ, ಪುಡಿಯಾಗಿರುವ ಹಾಗೂ ಚರಂಡಿಯ ಅಗೆತದಿಂದ ನಾಶವಾಗಿರಬಹುದಾದ ಎಲ್ಲಾ ಬುರುಡೆಗಳನ್ನು ಲೆಕ್ಕಕ್ಕೆ ತೆಗೆದುಕೊಂಡರೆ, ಈ ಸಮಾಧಿಯಲ್ಲಿ ಮೂಲತಃ ಸುಮಾರು ಆರುನೂರು ತಲೆ ಬುರುಡೆಗಳು ಇದ್ದಿರಬಹುದೆಂದು ಹೇಳಬಹುದು.
೬.       ಇಷ್ಟು ಅಗಾಧವಾದ ಬುರುಡೆಗಳ ಸಂಖ್ಯೆಗೆ ಹೋಲಿಸಿದರೆ, ಸಮಾಧಿಯಲ್ಲಿ ದೊರೆತಿರುವ ಮೂಳೆಗಳ ಪ್ರಮಾಣ ಬಹಳ ಕಡಿಮೆಯೆನ್ನಬಹುದು.
೭.       ಇಲ್ಲಿ ಸಮಾಧಿಗೆ ಅಗೆದಿರುವ ಗುಂಡಿ ಹೆಚ್ಚೆಂದರೆ ೧೫ ಸೆಂ.ಮೀ. ಆಳವಾಗಿದೆ.
೮.       ಆಳವಲ್ಲದ ಈ ರೀತಿಯ ಗುಂಡಿ, ಈ ಸಮಾಧಿ, ಕೇವಲ ಒಣಗಿದ ಮೂಳೆಗಳಿಗೆ ಮಾಡಲಾಗಿದೆ ಎನಿಸುತ್ತದೆ.
೯.       ಹಾಗೆಯೇ ಸಮಾಧಿಯ ಮೇಲೆ ಮುಚ್ಚಿದ್ದ ಮಣ್ಣೂ ಸಹ ಸುಮಾರು ೧೫ ಸೆಂ.ಮೀ. ಗಾತ್ರದ ತೆಳು ಪದರವಾಗಿತ್ತು.
೧೦.     ಅಸ್ಥಿ ಅವಶೇಷಗಳ ಗಟ್ಟಿತನ, ದೃಢತೆಯನ್ನು ಪರಿಶೀಲಿಸಿ ದಾಗ ಅವುಗಳು ಸುಮಾರು ೨೦೦ ವರ್ಷಗಳಷ್ಟು ಹಳೆಯವು ಎಂದು ಹೇಳಬಹುದು.
೧೧.     ಮೇಲೆ ಉಲ್ಲೇಖವಾದ ಅಂಶಗಳಿಂದಾಗಿ ಈ ಸಮಾಧಿ ಬಹುಕಾಲ ಬಯಲಿನಲ್ಲಿ, ನಿಸರ್ಗದ ವಿಕೋಪಕ್ಕೆ ಗುರಿಯಾದ ಅಸ್ಥಿಗಳಿಗೆ ಮಾಡಲಾಗಿತ್ತೇ ವಿನಃ ರಕ್ತ ಮಾಂಸಗಳಿಂದ ಕೂಡಿದ್ದ ದೇಹಗಳಿಗೆ ಈ ಸಮಾಧಿಯನ್ನು ಮಾಡಲಾಗಿರಲಿಲ್ಲ ಎನ್ನಬಹುದು.
೧೨.     ಈ ಸಮಾಧಿಯ ತಲೆಬುರುಡೆಗಳು, ಅಸ್ಥಿಗಳು ಅವುಗಳ ಕೀಲುಗಳಿಂದ ಬೇರೆಯಾಗಿರುವುದು ಸಹಜವಾಗಿ, ಕಾಲಪುರುಷನ ಹಾವಳಿಯಿಂದಲೇ ಹೊರತು, ಅವುಗಳನ್ನು ಕತ್ತರಿಸಿ ಬೇರ್ಪಡಿಸಿದಂತೆ ತೋರುವುದಿಲ್ಲ್ಲ.
೧೩.     ಈ ಸಮಾಧಿಯ ಹಲವಾರು ತಲೆಬುರುಡೆಗಳನ್ನು ಉತ್ಖನನಾನಂತರ ಪರೀಕ್ಷೆ ಮಾಡಿದ ತಜ್ಞರು ಈ ಬುರುಡೆಗಳ ಸಮೂಹದಲ್ಲಿ ವಿವಿಧ ವಯಸ್ಸಿನ ಪುರುಷರ, ಸ್ತ್ರೀಯರ ಮತ್ತು ಮಕ್ಕಳ, ಜನರ ತಲೆಬುರುಡೆಗಳು ಇವೆ ಎಂದು ವರದಿ ನೀಡಿದ್ದಾರೆ.
ಈ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ, ಇಷ್ಟು ಅಗಾಧ ಸಂಖ್ಯೆಯಲ್ಲಿ ಏಕಕಾಲದಲ್ಲಿ ಆಗಿರುವ ಜನರ ಸಾವಿಗೆ ಕಾರಣ, ಈ ಮುಂಚೆ ಊಹಿಸಿದಂತೆ ರಾಜದ್ರೋಹಿಗಳ ಶಿರಚ್ಛೇದನವಲ್ಲ, ಯುದ್ಧದಲ್ಲಿ ಸೈನಿಕರ ಹತ್ಯೆಯಲ್ಲ, ಧರ್ಮದ್ವೇಷದಿಂದ ಮಾಡಿದ ಹತ್ಯೆಯಲ್ಲ, ಅಥವಾ ರೋಗ-ರುಜಿನ ಮಾರಿಗಳಲ್ಲ. ಇಂತಹ ಸಂದರ್ಭಗಳಲ್ಲಿ ಸತ್ತವರ ಹೆಣವನ್ನು ಇಡಿಯಾಗಿ ಹೂತಿರುತ್ತಾರೆ. ಅಂಗಾಂಗಗಳನ್ನು ಕತ್ತರಿಸಿ ಅಥವಾ ಶಿರಚ್ಛೇದನವನ್ನು ಮಾಡಿ ಹೂಳುವುದಿಲ್ಲ. ಹೆಣಗಳನ್ನು ಕೂಡಲೇ ಪೂರ್ಣವಾಗಿ ಹೂಳುತ್ತಾರೆ. ಅನೇಕ ದಿನಗಳ ಕಾಲ ಕೊಳೆತು ನಾರುವುದಕ್ಕೆ ಅಂಗಗಳನ್ನು ಬೇರ್ಪಡಿಸುವುದಕ್ಕೆ ಬಿಡುವುದಿಲ್ಲ. ಹೀಗಾಗಿ ಪ್ರಸ್ತುತ ಸಮಾಧಿಯಲ್ಲಿ ಹೂಳಲ್ಪಟ್ಟಿರುವ ತಲೆಬುರುಡೆಗಳ, ಅಸ್ಥಿಗಳ ಜನರ ಸಾವಿಗೆ ಕಾರಣ ಬೇರೇನೋ ಇರಬೇಕು ಎನಿಸುತ್ತದೆ.
ಇತಿಹಾಸದ ಪುಟಗಳನ್ನು ತಿರುವಿದಾಗ ನಮಗೆ ತಿಳಿದುಬರುವ ಅಂಶವೆಂದರೆ, ಒಂದು ಘೋರವಾದ ನೈಸರ್ಗಿಕ ಪ್ರಕೋಪದ ಫಲವಿದು. ಅದೆಂದರೇ, ಇಂದಿಗೆ ೨೨೨ ವರ್ಷಗಳ ಹಿಂದೆ, ದಖನ್ನಿನಲ್ಲಿ ಅದರಲ್ಲೂ ಉತ್ತರ ಕರ್ನಾಟಕದಲ್ಲಿ ತಲೆದೋರಿದ (ಸಂಭವಿಸಿದ) ಡವಗಿಬರ ಅಥವಾ ಬುರುಡೆಬರ೧ (ಇಟಿಜಟಿoಣes) ಈ ಡವಗಿಬರ ಇಂದಿಗೂ ಉತ್ತರ ಕರ್ನಾಟಕದ ಜನಪದದಲ್ಲಿ ಮಸಕು ಮಸಕಾಗಿ ನೆನಪಿನಲ್ಲಿದೆ. ಡವಿಗೆ/ಡವುಗೆ/ಡವಗಿ (ಆಡುಭಾಷೆ) ಎಂದರೆ ತಲೆಬುರುಡೆ. ‘ನಿನ್ನ ಡವಗಿ ಸೀಳುತ್ತೇನೆ ನೋಡು’ ಎಂಬುದು ಈಗಲೂ ಸಹ ಬಳಸುವ ಒಂದು ಸಾಮಾನ್ಯ ನುಡಿ (ನುಡಿಗಟ್ಟು).
ಡವಗಿಬರ ಅಥವಾ ಬುರುಡೆಬರ ೧೭೮೯-೯೨ ರ ನಡುವೆ ಸಂಭವಿಸಿತ್ತು. ಈ ಬರ ಅಥವಾ ಕ್ಷಾಮದಿಂದಾಗಿ ಲಕ್ಷಾಂತರ ಜನರು ಅಸುನೀಗಿದರು. ಆ ಕಾಲದ ಬ್ರಿಟಿಷ್ ಆಡಳಿತ ವರದಿಗಳಲ್ಲಿ ಈ ಕ್ಷಾಮವನ್ನು ‘ಡೊಂಗಿಬುರ’ ಅಥವಾ ‘ಸ್ಕಲ್ ಫ್ಯಾಮೈನ್’ (Sಞuಟಟ-ಈಚಿmiಟಿe) ಎಂದು ದಾಖಲಿಸಿದ್ದಾರೆ. ಈ ಬರದ ಭೀಕರತೆ ಬ್ರಿಟಿಷ್ ದಾಖಲೆಗಳಲ್ಲಿ ಮತ್ತು ನಂತರದ ಕೆಲವು ಗ್ಯಾಜ಼ೆಟಿಯರ್‌ಗಳಲ್ಲಿ ಪ್ರಕಟವಾಗಿದೆ. ಡವಗಿಬರದ ಭೀಕರತೆ ಎಷ್ಟಿತ್ತೆಂದರೇ, ಹಸಿವು, ನೀರಡಿಕೆಗಳಿಂದ ಸತ್ತು ಗತಿಗಾಣದೆ ಬಿದ್ದಿದ್ದವರ ಶವಗಳು, ಮೂಳೆಗಳು ಮತ್ತು ತಲೆಬುರುಡೆಗಳು, ಚೆಲ್ಲಾಪಿಲ್ಲಿಯಾಗಿ ರಸ್ತೆಗಳು ಮತ್ತು ಪಕ್ಕದ ಬಯಲುಗಳನ್ನೆಲ್ಲಾ ಬಿಳುಪು ಮಾಡಿದ್ದವು” ಎಂದು ಹೇಳಲಾಗಿದೆ. ಬಿಜಾಪುರ ಜಿಲ್ಲೆಯಲ್ಲಿ “ಎಲ್ಲಾ ಪ್ರದೇಶಗಳೂ ಗತಿಗಾಣದೆ ಬಿದ್ದಿದ್ದ ತಲೆ ಬುರುಡೆಗಳಿಂದ ಆವೃತವಾಗಿತ್ತು” ಎನ್ನಲಾಗಿದೆ. ಸ್ಥಳೀಯ ಜನಪದದ ಪ್ರಕಾರ “ಕ್ಷಾಮಪೀಡಿತವಾಗಿದ್ದ ಪ್ರದೇಶಗಳಲ್ಲೆಲ್ಲಾ ತಲೆ ಬುರುಡೆಗಳೇ ಕಾಣುತ್ತಿದ್ದವು”. “ಹಸಿವು-ಬಾಯಾರಿಕೆಗಳಿಂದ ಸತ್ತು ಗತಿಗಾಣದೆ ಬಿದ್ದಿದ್ದವರ ಮೂಳೆ/ಬುರುಡೆಗಳಿಂದಾಗಿ ಈ ಬರವನ್ನು ‘ಡವಗಿಬರ’ ಅಥವಾ ‘ಬುರುಡೆಬರ’ ಎಂದೇ ಜನರು ನೆನಪಿಸಿಕೊಳ್ಳುತ್ತಾರೆ”. “ಗೋಕಾಕಿನಲ್ಲಿ ಹೆಂಗಸೊಬ್ಬಳು ಹಸಿವು ನೀಗಿಸಿಕೊಳ್ಳಲು ತನ್ನ ಮಕ್ಕಳನ್ನೇ ಕೊಂದು ತಿಂದಳಂತೆ. ಅದಕ್ಕಾಗಿ ಜನರು ಅವಳನ್ನು ಎಮ್ಮ್ಮೆಯ ಕಾಲಿನಿಂದ ತುಳಿಸಿ ಸಾಯಿಸಿದರಂತೆ” ಎಂದು ದಾಖಲೆಗಳು ಹೇಳುತ್ತವೆ.
‘ಧಾರವಾಡ, ಬೆಳಗಾವಿ, ರಾಯಚೂರು, ಬಿಜಾಪುರ ಜಿಲ್ಲೆಗಳು ಡವಗಿಬರದಿಂದ ಹೆಚ್ಚು ಸಂಕಷ್ಟಕ್ಕೀಡಾದ ಪ್ರದೇಶಗಳು. ಬಹಳಷ್ಟು ಜನ ತಮ್ಮ ಊರುಗಳನ್ನು ತೊರೆದು ಬೇರೆಡೆಗೆ ವಲಸೆ ಹೋದರು. ಕ್ಷಾಮಕಾಲದ ಮೂರನೇ ವರ್ಷ ಇನ್ನೂ ಹೆಚ್ಚು ಭಯಂಕರವಾಗಿತ್ತು. ರೋಗ-ರುಜಿನಗಳು ಹರಡಿ ಇನ್ನೂ ಹೆಚ್ಚು ಸಾವು-ನೋವುಗಳುಂಟಾದವು. ಸತ್ತವರ ಸಂಸ್ಕಾರಕ್ಕೆ ಜನಗಳೇ ಇರಲ್ಲಿಲ್ಲ. ರಸ್ತೆ-ರಸ್ತೆಗಳಲ್ಲಿ ಜನರು ಸತ್ತು ಬಿದ್ದಿದ್ದರು. ಪ್ರಾಣಿ-ಪಕ್ಷಿಗಳು ಹೆಣಗಳನ್ನು ಹರಿದು ತಿಂದವು. ಅಳಿದುಳಿದ ಬುರುಡೆಗಳು, ಮೂಳೆಗಳು ರಸ್ತೆ ಬಯಲುಗಳಲ್ಲೆಲ್ಲಾ ಹರಡಿ ಬಿದ್ದಿದ್ದವು’.
ಕ್ಷಾಮ ಕಳೆದ ಮೇಲೆ ಸ್ವಸ್ಥಳಕ್ಕೆ ಹಿಂದಿರುಗಿದ ಅಣ್ಣಿಗೇರಿಯ ಜನರು ತಮ್ಮ ಊರಿನ ಸುತ್ತ-ಮುತ್ತ ಚಲ್ಲಾಪಿಲ್ಲಿಯಾಗಿ ಬಿದ್ದಿದ್ದ ಬುರುಡೆ/ಮೂಳೆಗಳನ್ನು ಸಂಗ್ರಹಿಸಿ ಅವುಗಳಿಗೆ ಸೂಕ್ತ ರೀತಿಯಲ್ಲಿ ಸಮಾಧಿ ಮಾಡಿದಂತೆ ತೋರುತ್ತದೆ. ಈ ಎಲ್ಲಾ ತಲೆಬುರುಡೆಗಳಿಗೆ ಕೆಳದವಡೆ ಮತ್ತು ಮೊದಲ ಕಶೇರು ಮಣಿ ಕಳಚಿಕೊಂಡಿದ್ದವು. ಮೂಳೆಗಳು ಕೀಲುಗಳಿಂದ ಕಳಚಿಕೊಂಡಿದ್ದವು, ಮುರಿದಿದ್ದವು, ಜಜ್ಜಿದ್ದವು, ಸೀಳಿದ್ದವು, ಜಖಂ ಆಗಿದ್ದವು. ಸಮಾಧಿ ಮಾಡುವಾಗ ತಲೆ ಭಾಗಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುವುದು ವಾಡಿಕೆ. ಹೀಗಾಗಿ, ಸಂಗ್ರಹಿಸಿದ ತಲೆಬುರುಡೆಗಳನ್ನು ವ್ಯವಸ್ಥಿತವಾಗಿ ಜೋಡಿಸಿ ಸಮಾಧಿ ಮಾಡಿದ್ದಾರೆ. ಪ್ರಾಣಿ-ಪಕ್ಷಿಗಳು ತಿಂದ ನಂತರ ಉಳಿದಿದ್ದ ದೊಡ್ಡ ದೊಡ್ಡ ಮೂಳೆಗಳನ್ನು ಸಂಗ್ರಹಿಸಿ ರಾಶಿಯಾಗಿ ಒಂದು ತುದಿಯಲ್ಲಿ ಸುರಿದಿದ್ದಾರೆ. ಈ ಮೂಳೆಗಳ ರಾಶಿಯಲ್ಲಿ ಸಂಗ್ರಹಿಸಲಾದ ಕೆಳದವಡೆಗಳು, ಮುರಿದ-ಚೂರಾದ ತಲೆಬುರುಡೆಗಳು, ಬೆನ್ನು ಮೂಳೆಗಳು ಜೊತೆಗೆ ಒಂದು ಪೂರ್ಣ ಅಸ್ಥಿಪಂಜರ, ಎಲ್ಲವು ಕಂಡುಬಂದಿವೆ.
ಉತ್ಖನನದಲ್ಲಿ ದೊರೆತ ಈ ಎಲ್ಲಾ ಅಂಶಗಳೂ, ಈ ಸಮಾಧಿ, ಡವಗಿಬರಕ್ಕೆ ಬಲಿಯಾದ ಮನುಷ್ಯರ ಮೂಳೆಗಳಿಗಾಗಿ ಮಾಡಿದ್ದು ಎಂದು ಹೇಳುವುದಕ್ಕೆ ಪುಷ್ಟಿ ನೀಡುತ್ತವೆ. ಮೂಳೆಯ ಗಟ್ಟಿತನದ ಆಧಾರದ ಮೇಲೆ ನೀಡಿರುವ ಕಾಲಮಾನ, ಹಾಗೂ ಪದರಶಾಸ್ತ್ರದ ಮುಖಾಂತರ ನೀಡಬಹುದಾದ ಕಾಲವೂ ಸಹ ಈ ಮೂಳೆಗಳು ಸುಮಾರು ೨೦೦ ವರ್ಷಗಳಷ್ಟು ಹಳೆಯವು ಎಂಬ ಅನುಮಾನಕ್ಕೆ ಪುಷ್ಟಿ ನೀಡುತ್ತವೆ. ಆದ್ದರಿಂದ ೧೭೮೯-೯೨ರಲ್ಲಿ ಸಂಭವಿಸಿದ ಡವಗಿಬರದಲ್ಲಿ ಅಸುನೀಗಿದವರ ಅಸ್ಥಿಗಳಿಗಾಗಿ ಈ ಸಮಾಧಿಯನ್ನು ಅಣ್ಣಿಗೇರಿಯ ಮಹಾಜನರು ಮಾಡಿದ್ದಾರೆ ಎಂದು ಹೇಳಬಹುದು. ಹೀಗಾಗಿ ಈ ಬುರುಡೆಯ ಸಮಾಧಿಯ ಬಗ್ಗೆ ಈ ಮುಂಚೆ ಹೇಳಲಾಗಿರುವ ಅಭಿಪ್ರಾಯಗಳನ್ನು, ಈಗ ಲಭ್ಯವಾಗಿರುವ ಪುರಾತತ್ತ್ವದ ಆಧಾರದ ಮೇಲೆ, ಎಲುಬು ವಿಜ್ಞಾನದ ಆಧಾರದ ಮೇಲೆ ಮತ್ತು ಬ್ರಿಟಿಷ್ ಆಡಳಿತದ ದಾಖಲೆಗಳ ಆಧಾರಗಳ ಮೇಲೆ ಸಮಂಜಸವಲ್ಲವೆಂದು ತಿರಸ್ಕರಿಸಬಹುದು.
ಕೊನೆಯಲ್ಲಿ ಈ ಸಮಾಧಿಯ ಬಗ್ಗೆ ಹೇಳಬಹುದಾದ ಕೆಲವು ಮುಖ್ಯ ತೀರ್ಮಾನಗಳೆಂದರೆ: ಈ ರೀತಿಯಲ್ಲಿ ನೂರಾರು ಮಾನವ ತಲೆಬುರುಡೆಗಳನ್ನು ವ್ಯವಸ್ಥಿತವಾಗಿ ಜೋಡಿಸಿಟ್ಟು ಮತ್ತು ಅದಕ್ಕೆ ಸಂಬಂಧಿಸಿದ ಅಸ್ಥಿಗಳನ್ನು ಒಂದೇ ಸ್ಥಳದಲ್ಲಿ, ಒಂದೇ ಸಮಯದಲ್ಲಿ ಹೂತಿರುವ ಸನ್ನಿವೇಶ ಭಾರತೀಯ ಪುರಾತತ್ವ ಇತಿಹಾಸದಲ್ಲೇ ಪ್ರಪ್ರಥಮವೂ, ವಿಶಿಷ್ಟವೂ ಆದದ್ದು. ಈ ಸಮಾಧಿ ನೈಸರ್ಗಿಕ/ಹವಾಮಾನ ಪ್ರಕೋಪದಿಂದ ಸಾವಿಗೀಡಾದ ದುರ್ದೈವಿಗಳದ್ದು ಎಂಬುದು ಮತ್ತೊಂದು ಹೊಸ ವಿಷಯ. ಜಾತಿ, ಮತ, ವರ್ಗ, ಲಿಂಗ ಭೇದವಿಲ್ಲದೆ ಅಸ್ಥಿಗಳನ್ನು ಕೂಡಿಸಿ ಮಾಡಿದ ಸಮೂಹ ಸಮಾಧಿಯಿದು. ಆ ಕಾಲದ ಅಣ್ಣಿಗೇರಿಯ ಮಹಾಜನರ ಸಜ್ಜನಿಕೆಯ ಪ್ರತೀಕವಾಗಿ ನಿರ್ಮಾಣವಾದ ಸಮಾಧಿ ಇದಾಗಿದೆ. ಇದುವರೆಗೆ ನಮಗೆ ಡವಗಿಬರದ ಭೀಕರತೆಯು ಇತಿಹಾಸದಿಂದ, ಜಾನಪದದಿಂದ ಮಾತ್ರ ತಿಳಿದಿತ್ತು. ಆದರೆ ಈಗ ಡವಗಿಬರದ ಭಯಂಕರ ಭೌತಿಕ ಪರಿಚಯ ನಮಗೆ ಈ ಸಮಾಧಿಯಿಂದ ಆಗಿದೆ.  
ಉತ್ಖನಿತ ಪುರಾತತ್ವಿಕ ಮಾಹಿತಿಗಳು, ಅಸ್ಥಿ ವಿಜ್ಞಾನ ವಿಶ್ಲೇಷಣೆ ಹಾಗೂ ಬ್ರಿಟಿಷ್ ಸರ್ಕಾರದ ಆಡಳಿತದ ದಾಖಲೆಗಳು, ಇವೆಲ್ಲವುಗಳನ್ನೂ ಕೂಲಂಕಷವಾಗಿ ಅಧ್ಯಯನ ಮಾಡಿ, ಅಣ್ಣಿಗೇರಿಯ ತಲೆಬುರುಡೆ ಸಮಾಧಿಯು ಕ್ರಿ.ಶ.೧೭೮೯-೯೨ರ ನಡುವೆ ಸಂಭವಿಸಿದ ಭೀಕರ ಕ್ಷಾಮದಲ್ಲಿ (ಡವಗಿಬರ) ಮೃತರಾದವರಿಗೆ, ಸಾವು ಸಂಭವಿಸಿದ ಕೆಲವಾರು ವರ್ಷಗಳ ನಂತರ, ಅಣ್ಣಿಗೇರಿಯ ಸತ್ಪ್ರಜೆಗಳು ಮಾಡಿದ ಶವ (ಅಸ್ಥಿ) ಸಂಸ್ಕಾರದ ಕ್ರಿಯೆ ಎಂದು ಹೇಳಿದ್ದೇವೆ. ಆದರೇ, ಪುರಾತತ್ವ ಶಾಸ್ತ್ರಜ್ಞರು ಸಮಾಧಿಯ ಮೂಳೆಗಳ ಬಗ್ಗೆ ನೀಡಿರುವ ಈ ಕಾಲಮಾನ ಎಷ್ಟರ ಮಟ್ಟಿಗೆ ಸರಿ ಎಂಬ ಅನುಮಾನ ಬರುವುದು ಸಹಜ. ಇದರಿಂದಾಗಿ ಅಣ್ಣಿಗೇರಿಯ ಬುರುಡೆಗಳ ತುಣುಕುಗಳನ್ನು ಮತ್ತು ಹಲ್ಲುಗಳನ್ನು ವೈಜ್ಞಾನಿಕ ಪ್ರಯೋಗಾಲಯ ಪರೀಕ್ಷೆಗಾಗಿ ಅಮೇರಿಕಾ ಸಂಯುಕ್ತ ಸಂಸ್ಥಾನದ (USಂ) ಮಿಯಾಮಿ, ಫ್ಲಾರಿಡಾದಲ್ಲಿರುವ ಬೀಟಾ ಅನಾಲಿಟಿಕ್ ಇನ್‌ಕಾರ್ಪೂರೇಷನ್ ಸಂಸ್ಥೆಯ ಪ್ರಯೋಗಾಲಯಕ್ಕೆ, ವೈಜ್ಞಾನಿಕ ಕಾಲನಿರ್ಣಯಕ್ಕಾಗಿ ಕಳುಹಿಸಲಾಯಿತು. ವೈಜ್ಞಾನಿಕ ಪರೀಕ್ಷಾ ವರದಿ ನೀಡಿರುವ ಅಲ್ಲಿಯ ತಜ್ಞರು ಈ ಮೂಳೆಗಳು ಮತ್ತು ಹಲ್ಲುಗಳು ಸುಮಾರು ೧೮೦-೨೦೦ ವರ್ಷಗಳಷ್ಟು ಮಾತ್ರ ಹಳೆಯವು ಎಂದು ತೀರ್ಮಾನಿಸಿದ್ದಾರೆ. ಪುರಾತತ್ವವಿದರು ನೀಡಿರುವ ಕಾಲಮಾನಕ್ಕೆ (೨೨೦ ವರ್ಷಗಳು) ಹೆಚ್ಚು-ಕಡಿಮೆ ವೈಜ್ಞಾನಿಕ ವಿಶ್ಲೇಷಣೆಯ ಕಾಲಮಾನವೂ ಸರಿಹೊಂದುತ್ತದೆ. ಹೀಗಾಗಿ ಅಣ್ಣಿಗೇರಿಯ ತಲೆಬುರುಡೆ ಸಮಾಧಿಯು ಕ್ರಿ.ಶ.೧೭೮೯-೯೨ರಲ್ಲಿ ಸಂಭವಿಸಿದ ಡವಗಿಬರಕ್ಕೆ ಆಹುತಿಯಾದವರ ತಲೆಬುರುಡೆಗಳು ಮತ್ತು ಮೂಳೆಗಳಿಗಾಗಿ ಮಾಡಿದ್ದಾಗಿದೆ ಎಂದು ನಿಸ್ಸಂದೇಹವಾಗಿ ಹೇಳಬಹುದು.
ಅಣ್ಣಿಗೇರಿಯ ತಲೆಬುರುಡೆ ಸಮಾಧಿಯ ಬಗ್ಗೆ ಡಾ| ಎಂ.ಎಂ. ಕಲ್ಬುರ್ಗಿಯವರೂ ಸಹ ತಮ್ಮ ಅಭಿಪ್ರಾಯವನ್ನು ಕೆಲವಾರು ಪತ್ರಿಕಾ ಮಾಧ್ಯಮಗಳಲ್ಲಿ ವ್ಯಕ್ತಪಡಿಸಿದ್ದಾರೆ. ಅವರು ಈ ತಲೆಬುರುಡೆಗಳ ಸಮಾಧಿ, ಮಾಹೇಶ್ವರರೆಂದು ಕರೆಯಲ್ಪಡುವ ಪರಮ ಶಿವಭಕ್ತರ ಸ್ವಯಂಛೇದಿತ (ಆತ್ಮಾಹುತಿ ಮಾಡಿಕೊಂಡ) ಶಿರಗಳದ್ದೆಂದು ಹೇಳಿದ್ದಾರೆ. ಅವರ ವಾದಕ್ಕೆ ಪೋಷಕವಾಗಿ ಮನುಷ್ಯರ ತಲೆಗಳನ್ನು ಪಕ್ಕಪಕ್ಕದಲ್ಲಿ, ವ್ಯವಸ್ಥಿತವಾಗಿ ಜೋಡಿಸಿಟ್ಟಿರುವುದನ್ನು ಬಿಂಬಿಸುವ ಉಬ್ಬುಶಿಲ್ಪದ, ಶ್ರೀಶೈಲದ, ಪ್ರಾಚೀನ ಶಿಲಾಫಲಕವನ್ನು ಉಲ್ಲೇಖಿಸುತ್ತಾರೆ. ಹಾಗೂ ಈ ಸಮಾಧಿ ಸುಮಾರು ಎಂಟುನೂರು ವರ್ಷಗಳಷ್ಟು ಹಳೆಯದಿರಬಹುದೆಂದೂ ಅಭಿಪ್ರಾಯಪಡುತ್ತಾರೆ. ಡಾ| ಕಲ್ಬುರ್ಗಿಯವರು ಕೊಟ್ಟಿರುವ ಶಿಲ್ಪಯುತ ಶಿಲಾಫಲಕ ಅಣ್ಣಿಗೇರಿಯ ಉತ್ಖನಿತ ಬುರುಡೆ ಸಮಾಧಿಯ ಚಿತ್ರವನ್ನು ನೆನಪಿಗೆ ತರಬಹುದು. ಆದರೆ ಕಲ್ಬುರ್ಗಿಯವರ ವಾದವನ್ನು ಅಣ್ಣಿಗೇರಿಯ ತಲೆಬುರುಡೆ ಸಮಾಧಿಯೊಂದಿಗೆ ಸಮೀಕರಿಸಲು ಪುರಾತತ್ತ್ವಿಕ ಮತ್ತು ಅಸ್ಥಿ ವೈಜ್ಞಾನಿಕ ಕುರುಹುಗಳು ಅಡ್ಡಬರುತ್ತವೆ. ಏಕೆಂದರೆ ಅಣ್ಣಿಗೇರಿಯ ಬುರುಡೆಗಳಾವುದಕ್ಕೂ ಕೆಳದವಡೆ ಮತ್ತು ಮೇಲಿನ ಕಶೇರುಮಣಿ ಇರುವುದು ಕಂಡುಬಂದಿಲ್ಲ. ಯಾವುದೇ ಮಾನವ ಶವಸಂಸ್ಕಾರ ಪದ್ಧತಿಯಲ್ಲಿ ಕತ್ತರಿಸಿದ ಶಿರವನ್ನು ಹೂಳುವಾಗ ಕೆಳದವಡೆಯನ್ನು ತಲೆಬುರುಡೆಯಿಂದ ಬೇರ್ಪಡಿಸುವ ಪದ್ದತಿ ಕಂಡಿಲ್ಲ, ಕೇಳಿಲ್ಲ. ಅಂತೆಯೇ ಆ ಶಿರಗಳಿಗೆ ಸಂಬಂಧಿಸಿದ ಇತರ ಭಾಗಗಳನ್ನು ಕತ್ತರಿಸಿ, ಛೇದಿಸಿ ಗುಡ್ಡೆಯಾಗಿ ಹಾಕಿ ಶವಸಂಸ್ಕಾರ ಮಾಡಿರುವ ಅಥವಾ ಮಾಡುವ ಪದ್ದತಿಯಿರಲಿಲ್ಲ. ಇಂತಹ ಶವಗಳ ಸಮಾಧಿಯನ್ನು ಕೇವಲ ಆರು ಇಂಚು ಆಳದ ಗುಂಡಿಯಲ್ಲಿ ಹೂಳುವ ಮತ್ತು ಅದರ ಮೇಲೆ ಕೇವಲ ಆರು ಇಂಚು ದಪ್ಪದ ಮಣ್ಣು ಮುಚ್ಚಿರುವ ಸಂಗತಿ ಅಥವಾ ಅಭ್ಯಾಸ ಇರಲಿಲ್ಲ. ಅಲ್ಲದೇ ಈ ಬುರುಡೆಗಳ ಸಮೂಹದಲ್ಲಿ, ವಿವಿಧ ವಯಸ್ಸಿನ ಸ್ತ್ರೀಯರ, ಪುರುಷರ ಮತ್ತು ಮಕ್ಕಳ ಬುರುಡೆಗಳು ಕಂಡುಬಂದಿವೆ. ಆತ್ಮಾರ್ಪಣೆಯನ್ನು ಮಾಡಿಕೊಳ್ಳುತ್ತಿದ್ದ ಮಾಹೇಶ್ವರರ ಸಮೂಹದಲ್ಲಿ ಸ್ತ್ರೀ-ಬಾಲರು ಇರುತ್ತಿದ್ದರೇ ಎಂಬುದು ಪ್ರಶ್ನಾರ್ಹ. ಮಾನ್ಯ ಕಲ್ಬುರ್ಗಿಯವರು ಅವರ ವಾದವನ್ನು ಮಂಡಿಸುವ ಮುನ್ನ, ಉತ್ಖನನದಲ್ಲಿ ಕಂಡು ಬಂದಿರುವ ಈ ಎಲ್ಲಾ ಅಂಶಗಳಿಗೆ ಸಮರ್ಪಕವಾದ ಉತ್ತರ ನೀಡಬೇಕಾಗಿತ್ತು. ಆದರೆ ಅವರು ಅವುಗಳ ಗೋಜಿಗೆ ಹೋಗಿಲ್ಲ. ಹೀಗಾಗಿ, ಅವರ ವಾದವನ್ನು ಸತ್ಯಕ್ಕೆ ದೂರವಾದ, ಕೇವಲ ವೈಯಕ್ತಿಕ ಅಭಿಪ್ರಾಯವೆಂದು ಪರಿಗಣಿಸಬಹುದು.
[ಈ ಸಂಶೋಧನೆಯನ್ನು ‘ಡವಗಿ ಬರ’ದತ್ತ ಗಮನಹರಿಸಲು ಸಲಹೆ ನೀಡಿದ ಡಾ|| ಶ್ರೀಮತಿ ವಸುಂಧರಾ ಫಿಲಿಯೋಜ ಅವರಿಗೆ ಲೇಖಕರು ಕೃತಜ್ಞರಾಗಿದ್ದಾರೆ.]
ಪ್ರೊಫೆಸರ್ ಎಮೆರಿಟಸ್, ಪುರಾತತ್ತ್ವ ವಿಭಾಗ, ಮಾಸನಗಂಗೋತ್ರಿ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು.
 ನಿರ್ದೇಶಕರು, ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯ ನಿರ್ದೇಶನಾಲಯ, ಕರ್ನಾಟಕ ಸರ್ಕಾರ, ಮೈಸೂರು.
 ಉಪನಿರ್ದೇಶಕರು, ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯ ನಿರ್ದೇಶನಾಲಯ, ಕರ್ನಾಟಕ ಸರ್ಕಾರ, ಮೈಸೂರು.ಅ





Saturday, December 1, 2012

ಪುನ್ನಾಟದ ಪುರಾತನ ಬಂಡಿ




         ಕೀರ್ತಿಪುರ ಅಥವಾ ಈಗಿನ ಮೈಸೂರು ಜಿಲ್ಲೆ, ಹೆಚ್.ಡಿ. ಕೋಟೆ ತಾಲೂಕಿನ ಕಿತ್ತೂರು ಪ್ರಾಚೀನ ಪುನ್ನಾಟದ ರಾಜಧಾನಿ. ಕಾವೇರಿ ಮತ್ತು ಕಪಿನಿ ನದಿಗಳಿಂದ ಆಲಂಕೃತವಾದ ಪ್ರದೇಶ ಪುಂರಾಷ್ಟ್ರ ವೆಂದು ಶಾಸನೋಕ್ತ ಉಲ್ಲೇಖವಿದೆ. ಪ್ರಸ್ತುತ ಕಬಿನಿ ಹಿನ್ನೀರಿನಲ್ಲಿ ಮುಳುಗಡೆಯಾಗಿರುವ ಕಿತ್ತೂರಿನ, ಉಳಿಕೆ ಪ್ರದೇಶದಲ್ಲಿ  ರವಿರಾಮೇಶ್ವರ ದೇವಾಲಯ, ಶಾಸನ, ಬಿಡಿ ಶಿಲ್ಪಗಳು ಅಲ್ಲಲ್ಲಿ ಕಂಡು ಬರುತ್ತವೆ.
          ಅಕ್ಟೋಬರ್ ೨೯, ೨೦೧೧ ರಂದು ಹೆಚ್.ಡಿ. ಕೋಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ನಾವು ಕಿತ್ತೂರಿನಲ್ಲಿ ನಡೆಸಿದ ಕ್ಷೇತ್ರಾಧ್ಯಯನ ಸಂದರ್ಭದಲ್ಲಿ ಕಂಡು ಬಂದ ಒಂದು ಅಪರೂಪದ ಕಲ್ಲಿನ ಬಂಡಿಯ ಶಿಲ್ಪದ ವಿಶ್ಲೇಷಣಾತ್ಮಕ ಲೇಖನವೇ ಈ ಪ್ರಬಂಧ.


ಪುನ್ನಾಟ:

 ಪ್ರಾಚೀನ ಕರ್ನಾಟಕದ ದಕ್ಷಿಣ ಭಾಗದಲ್ಲಿದ್ದ ಒಂದು ಭೌಗೋಳಿಕ ಘಟಕ, ಇದರ ವಿಸ್ತೀರ್ಣ ಅಸ್ಪಷ್ಟ. ಪುನ್ನಾಟ ಪ್ರದೇಶಕ್ಕೆ ಬಹು ಪ್ರಾಚೀನ ಉಲ್ಲೇಖಗಳು ದೊರೆಯುತ್ತವೆ. ಈಜಿಪ್ಟಿನ ೧೮ನೆಯ ರಾಜವಂಶದ ಅರಸರುಗಳ, ಪ್ರ.ಶ.ಪೂ. ೧೫-೧೪ ನೆಯ ಶತಮಾನದ ದಾಖಲೆಗಳಲ್ಲಿ ದೊರಕುವ ಪುಂಟ್ ಪುನ್ನಾಟವಿರಬಹುದೆಂದು ಕೆಲವು ವಿದ್ವಾಂಸರ ಅಭಿಪ್ರಾಯ. ಒಂದು ಪ್ರತೀತಿಯಂತೆ ಹರಿಷೇಣನ ಬೃಹತ್ಕಥಾ ಕೋಶದಲ್ಲಿ (೯೩೧) ಭದ್ರಭಾಹುವಿನ ಮಾತಿನಂತೆ ಜೈನ ಸಂಘ ದಕ್ಷಿಣದಲ್ಲಿದ್ದ ಪುನ್ನಾಟ ವಿಷಯಕ್ಕೆ ಹೋಯಿತು ಎಂದು ಹೇಳಿದೆ. ಇದರಂತೆ ಪುನ್ನಾಟ ರಾಜ್ಯ ಪ್ರ.ಶ.ಪೂ. ೩ ನೇ ಶತಮಾನದಲ್ಲಿಯೇ ಅಸ್ತಿತ್ವದಲ್ಲಿತ್ತೆನ್ನಬಹುದು. ಪ್ರಶಕ್ತ ಶಕಾರಂಭದಲ್ಲಿ ರೋಮ್ ಚಕ್ರಾಧಿಪತ್ಯಕ್ಕೂ ಈ ರಾಜ್ಯಕ್ಕೂ ವ್ಯಾಪಾರ ಸಂಬಂಧ ಬೆಳದು ಬಂದಿದ್ದಿರಬೇಕು. ಫ್ಲೀನಿ ಭಾರತದ ಪಚ್ಚೆಯ ಹರಳುಗಳ ಮೇಲೆ ರೋಮನ್ ಕುಶಲ ಕಲೆಗಾರರು ಕೆತ್ತನೆ ಮಾಡಿರುವ ವಿಷಯ ತಿಳಿಸಿದ್ದಾನೆ. ಗ್ರೀಕ್ ಭೂಗೋಳ ಶಾಸ್ತ್ರಜ್ಞ ಟಾಲೆಮಿ (ಕ್ರಿ.ಶ. ೯೦-೧೬೮), ಪುನ್ನಾಟವನ್ನು ‘ಪೌನ್ನಟ’ ವೆಂದು ಕರೆದಿದ್ದಾನೆ. 


          ೪ ನೇ ಶತಮಾನದಲ್ಲಿ ಕದಂಬ ಮೂಲ ಪುರುಷ ಮಯೂರ ಶರ್ಮ ಇತರ ಅನೇಕ ರಾಜ ಮನೆತನಗಳ ಜೊತೆಗೆ ಪುನ್ನಾಟರನ್ನು ಸೋಲಿಸಿದನೆಂದು ಚಂದ್ರವಳ್ಳಿಯ ಶಾಸನದಿಂದ ವ್ಯಕ್ತವಾಗುತ್ತದೆ. (ಆದರೆ ಡಾ. ಬಿ. ರಾಜಶೇಖರಪ್ಪ ನವರು, ಶಾಸನದ ಪಾಠವನ್ನು ಸಂಪೂರ್ಣ ಪರಿಷ್ಕರಿಸಿ, ಚಂದ್ರವಳ್ಳಿ ಶಾಸನ ಕೇವಲ ಕೆರೆಯೊಂದರ ನಿರ್ಮಾಣದ ವಿಷಯವನ್ನು ತಿಳಿಸುತ್ತದೆ ಎಂದು ಸಾಧಿಸಿ ತೋರಿಸಿದ್ದಾರೆ) ಪುನ್ನಾಟ ರಾಜರೆಂದು ಪ್ರಸಿದ್ಧವಾಗಿರುವ ೫-೭ ನೇ ಶತಮಾನಗಳಲ್ಲಿ ಈ ಪ್ರದೇಶದಲ್ಲಿ ಆಳಿದ ವಂಶದವರ ಮೂರು ತಾಮ್ರ ಶಾಸನಗಳು ಇದುವರೆಗೆ ದೊರೆತಿವೆ. ಕೊಮರಲಿಂಗಂ ತಾಮ್ರ ಶಾಸನದಲ್ಲಿ ಪುನ್ನಾಟ ರಾಜ ರವಿದತ್ತ ರಾಜಧಾನಿ ಕಿತ್ಥಿಪುರ ದಲ್ಲಿದ್ದು ದಾನ ಮಾಡಿದುದಾಗಿ ತಿಳಿಸಿರುವುದರಿಂದ ಕಿತ್ಥಿಪುರ ಅಥವಾ ಕೀರ್ತಿಪುರ ಇವರ ರಾಜಧಾನಿಯಾಗಿತ್ತೆಂಬುದು ಸ್ಪಷ್ಟ.

          ಕಬಿನಿ ನದಿಯ ದಡದಲ್ಲಿರುವ ಈಗಿನ ಕಿತ್ತೂರು ಹಿಂದಿನ ಕೀರ್ತಿಪುರವಾಗಿತ್ತೆಂದು ಅಲ್ಲಿ ಒಂದು ಶಾಸನದಿಂದ ಸಿದ್ಧಪಡುತ್ತದೆ. ಈ ವಂಶದ ಮೂಲ ಪುರುಷ ತಾಮ್ರ ಕಶ್ಯಪ (ಇವನು ಮಿಕನೆಂಬುವನ ಮಗನೆಂದು ಒಂದು ಶಾಸನ ತಿಳಿಸುತ್ತದೆ).  ಈ ತಾಮ್ರ ಕಾಶ್ಯಪನ ಮಗ ರಾಜಾದಿತ್ಯ. ಇವನ ವಂಶದಲ್ಲಿ ಮುಂದೆ ಕಾಣಿಸಿಕೊಳ್ಳುವವನು ವಿಷ್ಣುದಾಸ. ಈ ವಿಷ್ಣುದಾಸನ ಮಗ ರಾಷ್ಟ್ರವರ್ಮ (ಸು. ೪೭೫), ಕದಂಬ ವಂಶದ ಪ್ರಭಾವತಿ ಎಂಬುವಳನ್ನು ಮದುವೆಯಾಗಿದ್ದ. ಈತನಿಗೆ ಮೂವರು ಮಕ್ಕಳು. ಮಾಂಬಳ್ಳಿ ಶಾಸನವನ್ನು ಹಾಕಿಸಿದ ಪ್ರಥ್ವೀಪತಿ (ಸು. ೫೨೦), ಸ್ಕಂದವರ್ಮ (ಸು. ೫೩೦) ಮತ್ತು ಕೊಮರಲಿಂಗಂ ಶಾಸನದ ಕರ್ತೃ ರವಿದತ್ತನ ಮುತ್ತಾತನಾದ ನಾಗದತ್ತ (ಸು. ೫೩೦). ಕೊಮರಲಿಂಗಂ ಶಾಸನದಲ್ಲಿ, ಈ ವಂಶಾವಳಿ ಹೀಗೆ ಮುಂದುವರೆಯುತ್ತದೆ. ನಾಗದತ್ತನ ಮಗ ಭುಜಂಗಾಧಿರಾಜ (ಸು. ೫೭೫), ಅವನ ಮಗ ಸ್ಕಂದವರ್ಮ (ಸು.೬೨೫), ಆ ಸ್ಕಂದವರ್ಮನ ಮಗ ಶಾಸನದ ಕರ್ತೃವಾದ ಪುನ್ನಾಟದ ರಾಜ ರವಿದತ್ತ (ಸು. ೬೫೦). ದುರ್ವಿನೀತನ ಶಾಸನಗಳಲ್ಲಿ ಅವನನ್ನು ‘ಪೌನ್ನಾಟಾಧಿಪತಿನಾ’ ಎಂದು ಕರೆಯಲಾಗಿದೆ.

 ಬಂಡಿಯ ಪ್ರಾಚೀನತೆ:

     ಭಾರತ ಅನಾದಿ ಕಾಲದಿಂದಲೂ ಕೃಷಿ ಪ್ರಧಾನ ಆರ್ಥಿಕತೆಯ ದೇಶ. ಎತ್ತಿನ ಬಂಡಿ ಕೃಷಿಯಾಧಾರಿತ ಬದುಕಿನ ಬುನಾದಿ. ಸಿಂಧೂ-ಸರಸ್ವತಿ ನಾಗರೀಕತೆಯ ಕಾಲದಿಂದಲೂ ಬಂಡಿ ಭಾರತದ ಆರ್ಥಿಕತೆಯ ಭಾಗವಾಗಿದೆ. ಸಿಂಧೂ-ಸರಸ್ವತಿ ನಾಗರೀಕತೆಯ ವಿವಿಧ ನಿವೇಶನಗಳಲ್ಲಿ ಬಂಡಿಯ ಆಟಿಕೆ ಮಾದರಿಯ ಅವಶೇಷಗಳು ಪತ್ತೆಯಾಗಿವೆ. ಉತ್ತರ ದಖ್ಖನ್ನಿನ ಜೋರ್ವೆ ಸಂಸ್ಕೃತಿಯ ಇನಾಂಗಾವ್ ನೆಲೆಯಲ್ಲಿ ದೊರೆತ ಒಂದು ಮಡಕೆಯ ಅವಶೇಷದ ಮೇಲೆ ಎತಿನ ಬಂಡಿಯ ಆಕರ್ಷಕ ಚಿತ್ರವಿದೆ, ಬಹುಶಃ ಇದೇ ದಕ್ಷಿಣ ಭಾರತದ ಅತ್ಯಂತ ಪ್ರಾಚೀನ ಬಂಡಿಯ ಉದಾಹರಣೆಯೆನ್ನಬಹುದು. ಕರ್ನಾಟಕದಲ್ಲಿ ಬೃಹತ್ ಶಿಲಾಯುಗದ ಕಾಲದಲ್ಲಿಯೇ ಎತ್ತು ಅಥವಾ ಕೋಣಗಳಿಂದ ಎಳೆಯಲ್ಪಡುತ್ತಿದ್ದ ಬಂಡಿಗಳು ಅಸ್ತಿತ್ವದಲ್ಲಿದ್ದಿರಬಹುದಾದ ಭಾಷಿಕ ಸೂಚನೆಗಳಿವೆ. ಮಲೆನಾಡಿನ ಹೆರಗಲ್, ಬೈಸೆ ಮತ್ತು ಮುರುಂಬದ ಬೃಹತ್ ಶಿಲಾಯುಗ ಕಾಲದ ನಿಲಿಸುಗಲ್ಲುಗಳ ಬಗ್ಗೆ ಚರ್ಚಿಸುತ್ತಾ ಡಾ. ಅ. ಸುಂದರ ಅವರು ಹೇರು ಎಂದರೆ ಭಾರ + ಕಲ್ = ಹೆರಗಲ್, ಎಂದರೆ ಕಲ್ಲುಗಳನ್ನು ಬಂಡಿಗಳಲ್ಲಿ ತುಂಬಿಸಿ ಸಾಗಿಸುತ್ತಿದ್ದ ಸ್ಥಳ ಎಂದು ಅರ್ಥೈಸಿದ್ದಾರೆ. ಇದರಿಂದ ಬೃಹತ್ ಶಿಲಾಯುಗ ಕಾಲದಲ್ಲೆ ಬಂಡಿಗಳ ಬಳಕೆ ಇಲ್ಲಿ ವ್ಯಾಪಕವಾಗಿತ್ತೆಂದು ತಿಳಿಯುತ್ತದೆ.  ಸನ್ನತಿಯ ಉತ್ಖನನದಲ್ಲಿ ಪತ್ತೆಯಾದ ಶಿಲಾ ಫಲಕಗಳ ಮೇಲೆ ಬಂಡಿಯ ಉಬ್ಬು ಶಿಲ್ಪಗಳಿದ್ದು ಬಹುಶಃ ಅವುಗಳೇ ದಕ್ಷಿಣ ಭಾರತದ ಅತ್ಯಂತ ಪ್ರಾಚೀನ ಎತ್ತಿನ ಬಂಡಿಯ ಶಿಲ್ಪಗಳಾಗಿವೆ. ನಂತರ ದೇವಾಲಯಗಳ ಭಿತ್ತಿ ಶಿಲ್ಪಗಳಾಗಿ ಬಂಡಿಯ ಶಿಲ್ಪಗಳು ಕಂಡು ಬರುತ್ತವೆ.

ಪುನ್ನಾಟದ ಪುರಾತನ ಬಂಡಿ:



ಪುನ್ನಾಟದ ಪುರಾತನ ಬಂಡಿ ಸುಮಾರು ಎರಡು ಅಡಿ ಎತ್ತರವಿದ್ದು ಹತ್ತು ಇಂಚು ಅಗಲವಿದೆ. ಇದನ್ನು ಕಂದು ಬಣ್ಣದ ಗ್ರಾನೈಟ್ ಶಿಲೆಯಲ್ಲಿ ರಚಿಸಲಾಗಿದೆ. ದೇವಾಲಯದ ಭಿತ್ತಿ ಶಿಲ್ಪವಾಗಿಯೋ ಅಥವಾ ಉಬ್ಬು ಶಿಲ್ಪವಾಗಿಯೋ ಇರದೆ, ಹಂಪಿಯ ರಥದ ಹಾಗೆ ಒಂದು ಸ್ವತಂತ್ರ ಶಿಲ್ಪವಾಗಿರುವುದು ಈ ಶಿಲ್ಪದ ವೈಶಿಷ್ಟ್ಯವಾಗಿದೆ. ಎತ್ತರವಾದ ಪೀಠದ ಮೇಲೆ ಎರಡು ದಷ್ಠ-ಪುಷ್ಠ ಎತ್ತುಗಳು ಗಾಡಿಯ ನೊಗವನ್ನು ಹೊತ್ತು ನಿಂತಿರುವಂತೆ ಚಿತ್ರಿಸಲಾಗಿದೆ. ಗಾಡಿಯ  ಮುಂಭಾಗದಲ್ಲಿ ಗಾಡಿ ನಡೆಸುವ ವ್ಯಕ್ತಿ ಎಡಗೈಯಲ್ಲಿ ಸೂತ್ರಗಳನ್ನು ಹಿಡಿದು ಕುಳಿತು ಕೊಂಡಿದ್ದಾನೆ ಬಲಗೈಯಲ್ಲಿ ಚಾವಟಿಯಿದೆ. ಬಂಡಿಯ ಎರಡೂ ಪಾರ್ಶ್ವಗಳಲ್ಲಿ ಎರಡು ಗಾಲಿಗಳಿವೆ. ಬಂಡಿಯ ಅರೆ ಸುತ್ತ ಮತ್ತೊಂದು ಗಾಲಿಯಂತಹ ರಚನೆ ಇದ್ದು, ಸರಳವಾದ ಗಾಲಿಗೆ ಸೌಂದರ್ಯವನ್ನು ಒದಗಿಸಿದೆ. ಗಾಡಿಯ ಹೊರಭಾಗದಲ್ಲಿ ಎರಡು ಅಡ್ಡ ಪಟ್ಟಿಕೆಗಳಿವೆ. ಗಾಡಿಗೆ ಕಮಾನಿನ ಮುಚ್ಚುಕೆ ಇದೆ. ಎತ್ತುಗಳ ಮುಖ ಮತ್ತು ಬಂಡಿ ಹೊಡೆವವನ ಮುಖಗಳು ಮುಕ್ಕಾಗಿವೆಯಾದರೂ ಅವುಗಳ ಸಹಜ ಸೌಂದರ್ಯಕ್ಕೆ ಗಾಂಭೀರ್ಯಕ್ಕೆ ಏನೂ ಧಕ್ಕೆಯಾಗಿಲ್ಲ.

ಪುನ್ನಾಟದ ಬಂಡಿಯ ಕಾಲ:

          ಈ ಶಿಲ್ಪದ ಚಿತ್ರವನ್ನು ಅವಲೋಕಿಸಿದ ಪ್ರಖ್ಯಾತ ಪುರಾತತ್ವ ವಿದ್ವಾಂಸ ಡಾ.ಅ. ಸುಂದರ ಅವರು ಇದೊಂದು ಸ್ಮಾರಕ ಶಿಲ್ಪದಂತಿದ್ದು, ಕಾಲಮಾನದ ದೃಷ್ಠಿಯಿಂದ ವಿಜಯನಗರ ಕಾಲದ್ದಾಗಿರಬಹುದೆಂದು ಅಭಿಪ್ರಾಯ ಪಟ್ಟಿದ್ದಾರೆ. ಮತ್ತೋರ್ವ ವಿದ್ವಾಂಸರಾದ ಡಾ. ಬಿ. ರಾಜಶೇಖರಪ್ಪನವರು, ಸುಮಾರು ೧೦ನೇ ಶತಮಾನದ ಶಿಲ್ಪವೆಂದು ಅಭಿಪ್ರಾಯ ಪಟ್ಟಿದ್ದಾರೆ. ಆದರೆ ನನ್ನ ಪ್ರಕಾರ ಇದು ಸುಮಾರು ೭ ನೇ ಶತಮಾನದ ಶಿಲ್ಪವಾಗಿದೆ. ಕಾಲದ ಬಗ್ಗೆ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯವಿದ್ದರೂ ಖಂಡಿತ ಇದೊಂದು ಅಪರೂಪದ ಶಿಲ್ಪವೆನ್ನುವುದರಲ್ಲಿ ಎರಡು ಮಾತಿಲ್ಲ ಎನ್ನುವುದು ವಿದ್ವಾಂಸರ ಅಭಿಪ್ರಾಯವಾಗಿದೆ.

ಪುನ್ನಾಟದ ಬಂಡಿಯ ಮಹತ್ವ:


            ಸು. ಕ್ರಿ.ಶ. ೬ನೇ ಶತಮಾನದ ಮಾಂಬಳ್ಳಿ ತಾಮ್ರ ಶಾಸನವು ಈ ರಾಷ್ಟ್ರವನ್ನು ಹೀಗೆ ಬಣ್ಣಿಸಿದೆ. ‘ಈ ದೇಶವು ಎಮ್ಮೆ, ಆಕಳು, ಕುದುರೆಗಳಿಂದಲೂ, ಉಣ್ಣೆಯ ಬಟ್ಟೆ, ರತ್ನ, ಬಂಗಾರ, ಬೆಳ್ಳಿ, ಮುತ್ತು, ಹವಳಗಳ ಸಂಪತ್ತುಳ್ಳ ಜನರಿಂದಲೂ ಬಹು ಶೋಭಾಯಮಾನವಾಗಿತ್ತು. ಭತ್ತ, ಗೋಧಿ, ಜವೆಗೋಧಿ, ರಾಡಾಕ(?) (ಇದು ರಾಗಿಯಾಗಿರಬಹುದೇ?)ಗಳು ಪ್ರತಿವರ್ಷವೂ ಹುಲುಸಾಗಿ ಬೆಳಿಯುತ್ತಿದ್ದವು. ಜನರು ತಮ್ಮ ನಿತ್ಯ ಜೀವನದಲ್ಲಿ ವಿವಾಹ, ಉತ್ಸವ, ನರ್ತನಾದಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಆನಂದಗೊಳ್ಳುತ್ತಿದ್ದರು. ಬಾಳೆ, ಅಡಕೆ, ತೆಂಗು, ಕಬ್ಬು, ಹಲಸು, ಸಂಪಿಗೆ, ವೀಳ್ಯದೆಲೆ, ಬಕುಲ, ಅಶೋಕ, ಪುನ್ನಾಗ, ಮೊದಲಾದ ಗಿಡಬಳ್ಳಿಗಳುಳ್ಳ ತೋಟಗಳಿಂದ ಕಂಗೊಳಿಸುವ ತಟಗಳುಳ್ಳ ಕಾವೇರಿ, ಕಪಿನೀ ನದಿಗಳಿಂದ ಆಲಂಕೃತವಾಗಿತ್ತು ಮತ್ತು ವಿದೇಹ ದೇಶದಂತೆ ಸೊಬಗಿನ ಬೀಡಾಗಿ ಶೋಭಿಸುತ್ತಿತ್ತು ಎಂದು ತಿಳಿಸಿದೆ’. ಅದೇ ಶಾಸನದ ೧೯ ನೇ ಸಾಲಿನಲ್ಲಿ, “ವ್ಯಾಪಾರೋರ್ಜಿತದಕ್ಷಿಣ ಭುಜಃ” ಎಂದೂ, ಮುಂದುವರೆದು “ವ್ಯಾಪಾರ ರತಾಪ ಘನ ಭುಜಃ ಅಪ್ರತಿಹತ” ನೆಂದು ವರ್ಣಿಸಲಾಗಿದೆ ಶಾಸನೋಕ್ತ ವಿವರಗಳಿಂದ ಪುನ್ನಾಟವು ಕೃಷಿ, ಪಶುಪಾಲನೆ, ಗಣಿಗಾರಿಕೆ ಮತ್ತು ವಾಣಿಜ್ಯಾಧಾರಿತ ಆರ್ಥಿಕತೆಯನ್ನು ಹೊಂದಿದ್ದ ಸಂಪದ್ಭರಿತ ದೇಶವಾಗಿತ್ತು ಎನ್ನುವುದು. ಸ್ಪಷ್ಟವಾಗುತ್ತದೆ. ವಾಣಿಜ್ಯ ಮತ್ತು ಕೃಷಿಯಲ್ಲಿ ಮುಂಚೂಣಿಯಲ್ಲಿದ್ದ ದೇಶವೊಂದರ ಪ್ರಮುಖ ಸಾಧನವೆಂದರೆ ಬಂಡಿ, ಅಂತಹ ಬಂಡಿಯನ್ನು ಸ್ವತಂತ್ರ ಶಿಲ್ಪವೊಂದರಲ್ಲಿ ಅಭಿವ್ಯಕ್ತಗೊಳಿಸಿರುವುದು ಅಸಹಜ ಸಂಗತಿಯೇನಲ್ಲ. ಈ ಹಿನ್ನೆಲೆಯಲ್ಲಿ ಬಂಡಿ ೬-೭ ನೇ ಶತಮಾನದ ಶಿಲ್ಪವೇ ಆಗಿರಬೇಕೆನಿಸುತ್ತದೆ.

  

       
             ಪ್ರೊ.ಟಿ.ಮುರುಗೇಶಿ, 
ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ ವಿಭಾಗ, 
ಎಂ.ಎಸ್.ಆರ್.ಎಸ್. ಕಾಲೇಜು ಶಿರ್ವ - ೫೭೪೧೧೬, 
ಉಡುಪಿ. Ph: ೯೪೮೨೫೨೦೯೩೩
ಪ್ರೊ. ಎ. ಉಷಾದೇವಿ, 
ಇತಿಹಾಸ ವಿಭಾಗ, 
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, 
ಹೆಚ್.ಡಿ. ಕೋಟೆ, ಮೈಸೂರು.
*

 

                                   


.