Friday, August 1, 2014

ನವಶೋಧಿತ ಜೈನ ಶಿಲ್ಪ


 ಯಲವಟ್ಟಿಯಲ್ಲಿ  ನವಶೋಧಿತ ಜೈನ ಶಿಲ್ಪ 
            ಡಾ.ಬಾಲಕೃಷ್ಣ ಹೆಗಡೆ  
     ಭಾರತದ ಪ್ರಾಚೀನ ಧರ್ಮಗಳಲ್ಲಿ ಒಂದಾದ ಜೈನ ಧರ್ಮ ದೇಶದ ದರ್ಮ, ಸಂಸ್ಕøತಿ, ಸಾಹಿತ್ಯ, ಕಲೆ ಮತ್ತು ವಾಸ್ತು ಶಿಲ್ಪಗಳಿಗೆ ತನ್ನದೇ ಆದ ಕೊಡುಗೆ ನೀಡಿದ್ದನ್ನು ನಾವು ಕಾಣುತ್ತೇವೆ. ಕರ್ನಾಟಕದಲ್ಲಂತೂ ಜೈನರ ಸೇವೆಯನ್ನು ಮರೆಯುಂತೆಯೇ ಇಲ್ಲ. ಕರ್ನಾಟಕದ ಎಲ್ಲಾ ಪ್ರಮುಖ ರಾಜ ಮನೆತನಗಳು, ಕದಂಬರು, ಗಂಗರು, ರಾಷ್ಟ್ರಕೂಟರು, ಹೊಯ್ಸಳರು, ವಿಜಯನಗರದ ಅರಸರು ಜೈನ ಧರ್ಮವನ್ನು ಪೋಷಿಸಿದ್ದಾರೆ. ವಿಜಯನಗರ ಕಾಲದಲ್ಲಂತೂ ಸಾಮ್ರಾಜ್ಯ ಕಟ್ಟಲು ನೆರವಾದ ವೀರರಲ್ಲಿ ಜೈನರು ಮುಖ್ಯ ಪಾತ್ರ ವಹಿಸಿದ್ದರೆಂಬುದನ್ನು ಅಲ್ಲಗಳೆಯುವಂತಿಲ್ಲ.
     ಕರ್ನಾಟಕದ ವಿವಿಧ ಭಾಗಗಳಲ್ಲಿ ಆಳಿದ ಹಲವು ಜಿನ ಸಾಮಂತರು ಜೈನರಾಗಿದ್ದಾರೆ. ಸಾಂಸ್ಕøತಿಕವಾಗಿ ಕರ್ನಾಟಕದ ವಾಸ್ತು ಶಿಲ್ಪವನ್ನು ಶ್ರೀಮಂತಗೊಳಿಸಿದ ಶ್ರವಣಬೆಳಗೊಳ, ಹುಂಚ, ಗೇರುಸೊಪ್ಪೆ, ಬೀಳಗಿ, ಹಾಡುವಳ್ಳಿ, ಮೂಡಬಿದಿರೆ, ಕಾರ್ಕಳ, ವೇಣೂರು ಇವು ಇಂದಿಗೂ ಜೈನ ಕ್ಷೇತ್ರಗಳಾಗಿವೆ.
     ಶಿವಮೊಗ್ಗ ಕೂಡ ಒಂದು ಕಾಲದಲ್ಲಿ ಜೈನ ಪ್ರಭಾವವಿರುವ ಪ್ರಮುಖ ಕೇಂದ್ರವಾಗಿತ್ತೆಂಬುದಕ್ಕೆ ಇತ್ತೀಚೆಗೆ ಜಿಲ್ಲೆಯ ಯಲವಟ್ಟಿಯಲ್ಲಿ ದೊರೆತ ಜೈನ ಶಿಲಾ ವಿಗ್ರಹ ಸಮರ್ಥನೆಯನ್ನು ನೀಡುತ್ತದೆ.
     ಯಲವಟ್ಟಿ ಇದು ಒಂದು ಪುಟ್ಟ ಹಳ್ಳಿ. ಶಿವಮೊಗ್ಗ ತಾಲೂಕಿನ ನಿದಿಗೆ ಹೋಬಳಿ ವ್ಯಾಪ್ತಿಯಲ್ಲಿ ಬರುವ ಒಂದು ಗ್ರಾಮ. ಇಲ್ಲಿಯ ಕೆರೆ ಹೂಳೆತ್ತುವ ಸಂದರ್ಭದಲ್ಲಿ ಮಣ್ಣಿನಡಿಯಲ್ಲಿ ಹೂತು ಹೋಗಿದ್ದ ಈ ವಿಗ್ರಹ ಬೆಳಕಿಗೆ ಬಂದಿದೆ.


     ನೀಲಿ ಮಿಶ್ರಿತ ಬಳಪದ ಕಲ್ಲಿನಲ್ಲಿ ಅತ್ಯಂತ ಸುಂದರವಾಗಿ ಕೆತ್ತಲಾದ ಈ ಮೂರ್ತಿಯ ಒಟ್ಟೂ ಎತ್ತರ 32 ಸೆ.ಮೀ. ಇದ್ದು ಅಗಲ 21 ಸೆ.ಮೀ.ಇದೆ.  ಮೂರ್ತಿಯ ದಪ್ಪ 10 ಸೆ.ಮೀ.ಇದೆ. ಇದರಲ್ಲಿ ಒಟ್ಟೂ ಐದು ಜೈನ ಮೂರ್ತಿಗಳನ್ನು ಖಂಡರಿಸಲಾಗಿದ್ದು ಐದು ಮೂರ್ತಿಗಳ ಗುಂಪಿನ ಒಂದು ವಿಗ್ರಹ ಇದಾಗಿದೆ. ಮಧ್ಯದಲ್ಲಿ ಒಂದು ಸ್ವಲ್ಪ ದೊಡ್ಡ ಮೂರ್ತಿ, ಅದರ ಸುತ್ತಲೂ ಎಡ-ಬಲಗಳಲ್ಲಿ ಮೇಲೊಂದು, ಕೆಳಗೊಂದು ಹೀಗೆ ನಾಲ್ಕು ಚಿಕ್ಕ ಜೈನ ಮೂರ್ತಿಗಳನ್ನು ಕೆತ್ತಲಾಗಿದೆ.
     ಮಧ್ಯದಲ್ಲಿರುವ ಮೂರ್ತಿ 14 ಸೆ.ಮೀ.ಎತ್ತರವಿದ್ದು 12.5 ಸೆ.ಮೀ.ಅಗಲವಿದೆ. ಪ್ರಭಾವಳಿ ಸುಂದರವಾದ ಲತಾ ಬಳ್ಳಿಗಳ ಕೆತ್ತನೆಯಿಂದ ಕೂಡಿದ್ದು 15.ಸೆ.ಮೀ.ಎತ್ತರವಿದೆ. ಮೂರ್ತಿಯ ತಲೆಯ ಮೇಲ್ಗಡೆ ಜೈನ ಮುಕ್ಕೊಡೆ ಇದ್ದು ಅದು 8.5 ಸೆ.ಮೀ.ಎತ್ತರವಿದೆ.
     ಸಿಂಹ ಪೀಠದ ಮೇಲೆ ಈ ಮೂರ್ತಿಗಳನ್ನು ಕೆತ್ತಲಾಗಿದು ಪೀಠದ ಇಕ್ಕೆಲೆಗಳಲ್ಲಿ ಸಿಂಹ ಯ್ಯಾಳಿ ಚಿತ್ರಗಳನ್ನು ಕೊರೆಯಲಾಗಿದೆ. ಕೆಳ ಭಾಗದಲ್ಲಿರುವ ಮುಖ್ಯ ಮೂರ್ತಿಯೂ ಸೇರಿದಂತೆ ಇನ್ನಿತರ ಎರಡು ಚಿಕ್ಕ ಮೂರ್ತಿಗಳು ಕಮಲದ  ಹೂ ದಳಗಳ ಮೇಲೆ ಕುಳಿತಂತೆ ಚಿತ್ರಿಸಲಾಗಿದೆ. ಬಲಭಾಗದ ಮೂತಿಯ ಶಿರ ಜೆ.ಸಿ.ಬಿ ತಾಗಿ ಭಗ್ನವಾಗಿದೆ. ಎಲ್ಲಾ ಐದು ಮೂರ್ತಿಗಳು ಎಡಗಾಲ ಮೇಲೆ ಬಲಗಾಲನ್ನಿಟ್ಟು, ಪಾದದ ಮೇಲೆ ಎಡಗೈ ಮೇಲೆ ಬಲಗೈಯನ್ನಿಟ್ಟು ಧ್ಯಾನ ಭಂಗಿಯಲ್ಲಿ ಪರ್ಯಂಕಾಸನದಲ್ಲಿ  ಕುಳಿತಿರುವಂತೆ ಕೊರೆಯಲಾಗಿದೆ. ಮುಖ್ಯ ಮೂರ್ತಿಯ ಹಿಂಭಾಗದಲ್ಲಿ ಎಡ-ಬಲಗಳಲ್ಲಿ ಭುಜದಿಂದ ಮೇಲಕ್ಕೆ ಎರಡು ಮರದ ರೆಂಬೆಗಳನ್ನು ಕೆತ್ತಲಾಗಿದ್ದು ಅವುಗಳ ತುದಿಯಲ್ಲಿ ಪರ್ಯಂಕಾಸನದಲ್ಲಿ ಕುಳಿತ ಎರಡು ಮೂರ್ತಿಗಳನ್ನು ಕೆತ್ತಲಾಗಿದೆ.
     ಪೀಠದಲ್ಲಿ ಸಿಂಹ ಲಾಂಛನವಿರುವುದರಿಂದ ಇದೊಂದು ಮಹಾವೀರ ತೀರ್ಥಂಕರ? ಮೂರ್ತಿ ಎಂಬ ಅಭಿಪ್ರಾಯಕ್ಕೆ ಬರಲಾಗಿದೆ. ಸಾಮಾನ್ಯವಾಗಿ ನಾಲ್ಕು ಮೂರ್ತಿಗಳಿರುವ ವಿಗ್ರಹಗಳು ದೊರೆಯುತ್ತವೆ. ಆದರೆ ಈ ರೀತಿಯ ಐದು ವಿಗ್ರಹಗಳಿರುವ ಮೂರ್ತಿ ದೊರೆಯುವುದು ಬಹಳ ವಿರಳ. ಈ ಮೂರ್ತಿ ಅತ್ಯಂತ ವಿಶಿಷ್ಟವಾಗಿದ್ದು ಇದೊಂದು ‘ಪಂಚತೀರ್ಥಿ’ ಜೈನ ವಿಗ್ರಹ ಎಂದು ಇತಿಹಾಸಕಾರರಾದ ಡಾ.ಶ್ರೀನಿವಾಸ ಪಾಡಿಗಾರ ಅಭಿಪ್ರಾಯ ಪಟ್ಟಿದ್ದಾರೆ.
     ತೀರ್ಥಂಕರ ಪರ್ಯಂಕಾಸನದಲ್ಲಿ ಧ್ಯಾನಮುದ್ರೆಯಲ್ಲಿದ್ದು, ಏಕಚಿತ್ತವಾಗಿ ನಾಸಿಕದ ತುದಿ, ನೀಳವಾದ ಜೋತು ಬಿದ್ದ ಕಿವಿಗಳು, ಗಂಭೀರವಾದ ಏಕಚಿತ್ತ ಮುಖ ಭಾವ, ಗುಂಗುರು ಕೂದಲು, ಕಮಲದ ದಳಗಳ ಮೇಲೆ ಪದ್ಮಾಸನದಲ್ಲಿ ಕುಳಿತ ತೀರ್ಥಕರನ ಕಾಲುಗಳು ಒಂದರ ಮೇಲೊಂದು. ತಲೆಯ ಮೇಲೆ ಮುಕ್ಕೊಡೆ ಈ ಮೂರ್ತಿ ಶಿಲ್ಪದ ವೈಶಿಷ್ಟ್ಯವಾಗಿದೆ. ಈ ಶಿಲ್ಪ ಕಲಾ ಸೌಂದರ್ಯ ಮತ್ತು ಸಾಂಸ್ಕøತಿಕ ದೃಷ್ಟಿಯಿಂದ ಮಹತ್ವದ್ದಾಗಿದೆ. ಕೆತ್ತನೆ ಶೈಲಿಯಿಂದ ಈ ವಿಗ್ರಹ ಸುಮಾರು ಕ್ರಿ.ಶ.12-13ನೇ ಶತಮಾನದ ಹೊಯ್ಸಳ ಕಾಲದ್ದಿರಬಹುದೆಂದು ಊಹಿಸಬಹುದು.
      ಮೂರ್ತಿಯ ಹಿಂಭಾಗ ಸಂಪೂರ್ಣ ನುಣುಪಾತಿದ್ದು ಯಾವುದೇ ಶಾಸನವಾಗಲೀ ಕೆತ್ತನೆಯಾಗಲೀ ಇಲ್ಲ.  ಈ ಮೂರ್ತಿಯ ಮಾಟವನ್ನು ಗಮನಿಸಿದರೆ ಇದೊಂದು ಭಕ್ತರು ಹರಕೆ ಹೊತ್ತು ಕೆತ್ತಿಸಿ ನೀಡಿದ ಮೂರ್ತಿಯಂತೆ ಕಾಣುತ್ತದೆ.
      ನಿದಿಗೆ ಗ್ರಾಮದ ದೊಡ್ಡಕೆರೆ ಏರಿ ಮೀಲಿನ ಕಲ್ಲಿನಲ್ಲಿನ ಆರು ಸಾಲಿನ ಶಾಸನ ಯಲವಟ್ಟಿ ಕುರಿತು ಉಲ್ಲೇಖವನ್ನು ನೀಡುತ್ತಿದೆ. ಆ ಶಾಸನದ ಪಾಠ ಇಂತಿದೆ:
1ಸ್ವಸ್ತಿ ಸಮಸ್ತಸಕಳಗುಣಸಂಪಂನರಪ್ಪ ಶ್ರೀಮೂಲ
2ಸಂಘದೇಸಿಯಗಣಕೊಂಡಕುಂದಾನ್ವಯವೋಸ್ತಕಗಛ್ಛದ
3 .....
4
5ಗೌಡನ ಮಗ ಎಲವಟ್ಟಿಯದಾಸೆಯನಾಯಕನ ಸಿದ್ದಯಪ್ಪ ಭೂಮಿ
6ಯಿದುಮಂಗಳಮಹಾ ಶ್ರೀಶ್ರೀಶ್ರೀ
ಜೈನ ಧರ್ಮದ ಸಂಪ್ರದಾಯದಂತೆ ಸಲ್ಲೇಖನ ವೃತ ಆಚರಿಸಿ ನಿರ್ವಾಣ ಹೊಂದಲು ಜೈನರು ಶ್ರವಣ ಬೆಳಗೊಳ, ಕೊಪ್ಪಳ ಮೊದಲಾದ ಪ್ರಸಿದ್ಧ ಜೈನ ಕ್ಷೇತ್ರಗಳಿಗೆ ಹೋಗುತ್ತಿದ್ದಂತೆ ನಿದಿಗೆ, ಯಲವಟ್ಟಿ ಗ್ರಾಮಗಳಿಗೂ ಬರುತ್ತಿದ್ದರೆಂಬುದು ಈ ವಿಗ್ರಹದಿಂದ ತಿಳಿಯಬಹುದು.
ಯಲವಟ್ಟಿ, ಇಲ್ಲಿಗೆ ಸಮೀಪದ ಹೊಸೂಡಿ, ಪುರಲೆ, ಗುರುಪುರ, ನಿದಿಗೆ ಮೊದಲಾದ ಗ್ರಾಮಗಳು ಜೈನ ಧರ್ಮದ ಪ್ರಭಾವವಿದ್ದ ಗ್ರಾಮಗಳಾಗಿದ್ದವೆಂಬುದು ಇದರಿಂದ ವೇದ್ಯವಾಗುತ್ತದೆ. ಅಲ್ಲದೆ ಈ ಗ್ರಾಮಗಳಲ್ಲಿ ದೊರಕಿದ, ದೊರಕುತ್ತಿರುವ ಜೈನ ಶಿಲ್ಪಗಳು, ಶಾಸನಗಳು, ನಿಷಿಧಿ ಕಲ್ಲುಗಳು ಈ ಭಾಗದಲ್ಲಿ ಜೈನ ಧರ್ಮ ಉಛ್ರಾಯ ಸ್ಥಿತಿಯಲ್ಲಿತ್ತು ಎಂಬುದನ್ನು ಪುಷ್ಟೀಕರಿಸುತ್ತವೆ.
     ಈ ಮೂರ್ತಿಯನ್ನು ಅರ್ಥೈಸುವಿಕೆಯಲ್ಲಿ ಸಹಕರಿಸಿದ ನನ್ನ ಗುರುಗಳಾದ ಡಾ.ಶ್ರೀನಿವಾಸ ಪಾಡಿಗಾರ ಅವರಿಗೂ ಮಿತ್ರರಾದ ಡಾ.ಜಗದೀಶ ಅಗಸಿಬಾಗಿಲ ಅವರಿಗೂ, ಅಲ್ಲದೆ ಈ ವಿಗ್ರದ ಮಾಹಿತಿ ನೀಡಿದ ನನ್ನ ವಿದ್ಯಾರ್ಥಿನಿ ನಯನಾಳಿಗೂ ಮೂರ್ತಿಯನ್ನು ಜೋಪಾನವಾಗಿರಿಸಿಕೊಂಡ ಚಂದ್ರಪ್ಪ ಶಿವಣ್ಣ ಯಲವಟ್ಟಿ ಅವರಿಗೂ ನನ್ನ ಹೃತ್ಪೂರ್ವಕ ಕೃತಜ್ಞತೆಗಳು.
ಪರಾಮರ್ಶನ ಗ್ರಂಥಗಳು:
1.ಇ.ಸಿ.ಸಂಪುಟ ಗಿII P-I ನಂ.58, ಪುಟ ಸಂಖ್ಯೆ 61
2.ಡಾ.ವಾಸುದೇವನ್ ಸಿ.ಎಸ್.( ಸಂ)’ಮುಕ್ಕೊಡೆ’ ಜೈನ ಸಂಸ್ಕøತಿಯ ಕುರಿತ ಲೇಖನಗಳು, ಹಂಪಿ
3.ಭಟ್ ಸೂರಿ ಕೆ.ಜಿ. ‘ಹಾಡುವಳ್ಳಿ’ ಜೈನ ಶಾಸನ ವಾಸ್ತು-ಮೂರ್ತಿ ಶಿಲ್ಪ, ಹಂಪಿ.
4.ಡಾ.ಕಲಘಟಗಿ ಟಿ.ಜಿ. ‘ಜೈನಿಸಮ್ ಆಂಡ್ ಕರ್ನಾಟಕ ಕಲ್ಚರ್’ (ಸಂ).ಕ.ವಿ.ವಿ.ಧಾರವಾಡ.

No comments:

Post a Comment