ಯಲಹಂಕ ನಾಡಪ್ರಭುಗಳ ಕಾಲದ ಒಂದು ಅಪ್ರಕಟಿತ ತಾಮ್ರ ಶಾಸನ
ಡಾ. ಬಿ.ಎಸ್. ಪುಟ್ಟಸ್ವಾಮಿ
ಯಲಹಂಕ ನಾಡಪ್ರಭುಗಳ ಕಾಲಕ್ಕೆ ಸಂಬಂಧಿಸಿದಂತೆ ಕ್ಷೇತ್ರಕಾರ್ಯ ಮಾಡುವ ಸಂದರ್ಭದಲ್ಲಿ ಮಾಗಡಿ ಪ್ರದೇಶದಲ್ಲಿ ಒಂದು ಅಪ್ರಕಟಿತ ತಾಮ್ರಶಾಸನವಿರುವುದು ನನ್ನ ಗಮನಕ್ಕೆ ಬಂದಿತು. ಅದನ್ನು ಸಂರಕ್ಷಿಸಿಕೊಂಡು ಬಂದಿರುವ ಮಾಗಡಿಯ ಡಾ. ಎಂ.ಆರ್. ಗುರುದೇವ್ ಎಂಬುವವರ ಬಳಿ ಹೋಗಿ ಪಡೆದು ಅದರ ಪೂರ್ಣಪಾಠವನ್ನು ಸಿದ್ದಪಡಿಸಿದ್ದೇನೆ. ಶಾಸನವನ್ನು ತಾಮ್ರದ ತಗಡಿನಲ್ಲಿ ಎರಡೂ ಕಡೆಯಲ್ಲೂ ಬರೆಯಲಾಗಿದೆ. ತಾಮ್ರಪತ್ರವು 14 ಅಂಗುಲ ಉದ್ದ, 8 ಅಂಗುಲ ಅಗಲವಿದ್ದು ಮೇಲುಭಾಗದಲ್ಲಿ ಸೂರ್ಯ, ಚಂದ್ರ ಮಧ್ಯದಲ್ಲಿ ಶಿವಲಿಂಗವಿದೆ. ಮುಮ್ಮಖದಲ್ಲಿ 32 ಸಾಲುಗಳು, ಹಿಮ್ಮುಖದಲ್ಲಿ 10 ಸಾಲುಗಳಿವೆ. ಲಿಪಿ ಹದಿನೆಂಟನೇ ಶತಮಾನದ ಕನ್ನಡ ಬರವಣಿಗೆಯಾಗಿದ್ದು ಸುಲಭವಾಗಿ ಓದಬಹುದಾಗಿದೆ. ಬರವಣಿಗೆಯಲ್ಲಿ ಅಲ್ಲಲ್ಲಿ ಸ್ಖಾಲಿತ್ಯ ಕಂಡುಬಂದರೂ ಶಾಸನದ ಪಾಠವನ್ನು ಸರಳವಾಗಿ ಅರ್ಥ ಮಾಡಿಕೊಳ್ಳಬಹುದಾಗಿದೆ. ಶಾಸನವು ಬರೆಯಲ್ಪಟ್ಟ ತಾರೀಖನ್ನುಡಾ. ಬಿ.ಎಸ್. ಪುಟ್ಟಸ್ವಾಮಿ
, ಆಗ ಆಳುತ್ತಿದ್ದ ದೊರೆಗಳನ್ನು ಸ್ಪಷ್ಟವಾಗಿ ನಮೂದಿಸಲಾಗಿದೆ. ಶಾಸನ ಬರೆದದ್ದು ಶಾಲಿವಾಹನ ಶಕ 1634, ವಿಜಯ ಸಂವತ್ಸರ ವೈಶಾಖ ಶುದ್ಧ ಹತ್ತರಂದು, ಅಂದರೆ ಕ್ರಿ.ಶ. 1712ರ ಸೆಪ್ಟಂಬರ್ ತಿಂಗಳೆಂದು ತಿಳಿದುಬರುತ್ತದೆ. ಯಲಹಂಕನಾಡ ಕೊನೆಯ ಪ್ರಭುಗಳಾದ ಸದಾಶಿವಗೋತ್ರದ ಮುಮ್ಮಡಿ ಕೆಂಪೇಗೌಡರ ಪುತ್ರರಾದ, ಮುಮ್ಮಡಿ ದೊಡ್ಡವೀರಪ್ಪಗೌಡರ ಪುತ್ರರಾದ, ಕೆಂಪವೀರಪ್ಪಗೌಡರು ಬರೆಸಿಕೊಟ್ಟ ತಾಮ್ರಶಾಸನ ಎಂದಿದೆ. ಇದರಲ್ಲಿ ಮಾಗಡಿ ಸೀಮೆಗೆ ಸಲ್ಲುವ ಉದ್ದಂಡನಹಳ್ಳಿ ಗ್ರಾಮವನ್ನು ದಾನ ನೀಡಿದ ವಿವರಗಳು ಇವೆ. ಶಾಸನದ ಕೊನೆಯಲ್ಲಿ ಶಾಪಾಶಯ ಭಾಗವಿದೆ.
ಈ ಶಾಸನವು ಯಲಹಂಕ ನಾಡಪ್ರಭುಗಳ ಕಾಲ, ರಾಜ್ಯದ ಸರಹದ್ದುಗಳನ್ನು ತಿಳಿಸುವುದಲ್ಲದೆ ಅವರ ಧಾರ್ಮಿಕ, ಸಾಮಾಜಿಕ ಜೀವನದ ಮೇಲೆ ಬೆಳಕನ್ನು ಚೆಲ್ಲುತ್ತದೆ. ಶಾಸನದ ಪೂರ್ಣ ವಿವರಣೆ ಅದರ ರಾಜಕೀಯ ಮತ್ತು ಧಾರ್ಮಿಕ ಪ್ರಾಮುಖ್ಯತೆಯನ್ನು ವಿವರಿಸುತ್ತದೆ.
ಶಾಸನದ ಪಾಠ
ಶುಭಮಸ್ತು ಶಾಸನಮಸ್ತು ಶ್ರೀಮದ್ಗವಿಗಂಗಾಧರಾಯ ನಮಃ
ನಮಸ್ತುಂಗ ಶಿರಸ್ಛುಂಭಿ ಚಂದ್ರಚಾಮರ ಚಾರವೆ ತ್ರೈಲೋಕ್ಯನಗ
ರಾರಂಭ ಮೂಲಸ್ತಂಭಾಯ ಶಂಭವೆ|| ಸ್ವಸ್ತಿಶ್ರೀ ವಿಜಯಾಭ್ಯು
ದಯ ಶಾಲಿವಾಹನ ಶಕ ವರ್ಷಂಗಳು 1634ನೇ ವಿಜಯಸಂವ
ತ್ಸರ ವೈಶಾಖ ಶುದ್ಧ 10ರಲ್ಲೂ ಶ್ರೀಮತು ದೇವೋತ್ತಮ ದೇವತಾಸಾ
ರ್ವಭೌಮರಾದ ಗವಿಗಂಗಾಧರಸ್ವಾಮಿಯವರ ದಿವ್ಯ ಚ
ರಣಾರವಿಂಧಗಳ ಸೇವೆಗೈಯುತ್ತಾ ಶ್ರೀಮದ್ರಾಜಧಿರಾಜ ರಾಜ ಪರಮೆ
ಶ್ವರ ಶ್ರೀವೀರಪ್ರತಾಪ ಶ್ರಿರಂಗದೇವಮಹಾರಾಯ ರೈಯ್ಯನವರು
ಘನಗರಿಯಲ್ಲು ರತ್ನಾಸಿಂಹಾಸನಾರೂಢರಾನ್ನಿಪ್ಪ ಪೃಥ್ವೀಸ್ಥಿರ ಸಾಂಬ್ರ
ಜ್ಯಂ ಗೈಯುತ್ತಿರಲು ನಿಮ್ಮ ಪ್ರಿಯ ಭಕ್ತರಾದ ಸದಾಶಿವಗೋತ್ರದ ಯ
ಲಹಂಕನಾಡ ಪ್ರಭುಗಳಾದ ಮುಮ್ಮಡಿ ಕೆಂಪ್ಪಗಉಡರÀ ಪಾತ್ರರಾದ ಮುಂ
ಮ್ಮಡಿ ದೊಡ್ಡವೀರಪ್ಪಗಉಡರ ಪುತ್ರರಾದ ಮುಂಮ್ಮಡಿ ಕೆಂಪ್ಪವೀರಪ್ಪ
ಗಉಡರು ಬಿಂನಹಂಮಾಡಿ ಬರೆಶಿ ಕೊಟ್ಟ ತಾಂಬ್ರ್ರಶಾಸನದ ಕ್ರಮ
ವೆಂತೆಂದರ್ರೆ ಮಾಗಡಿ ಶೀಮೆಗೆ ಸಲುವ ಉದ್ದಂಡನಹಳ್ಳಿ ಗ್ರಾಮವಂನು
ಸಮರ್ಪಿಸ್ತಿನಾದ ಕಾರಣ ಯಿ ಗ್ರಾಮಕ್ಕೆ ಸಲುವ ಚತುಶೀಮೆ
ಯೋಳಗೆ ನಿಧಿನಿಕ್ಷೇಪ ಜಲಪಾಷಾಣ ಅಕ್ಷೀಣಿ ಆಗಾಮಿ ಸಿದ್ಧಸಾ
ಧ್ಯಂಗಳೆಂಬ ಅಷ್ಠಭೋಗಕೆ ಬಸಾಮ್ಯಗಳಂನು ದಾನಾದಿ
ಕ್ರಿಯ ವಿನಿಮಯ ಭೋಗ್ಯಂಗಳಿಗೆ ಯೋಗ್ಯವಾಗಿ ನಿತ್ಯ ಶ್ರೀನಿತ್ಯ
ಮಂಗಳವಾಗಿ ಆಚಂದ್ರಾರ್ಕವಾಗಿ ದೇವರ ಸೇವಾರ್ಥವಾಗಿ ನಿತ್ಯ
ಕಟಳೆ ಪಡಿತರ ದೀಪಾರಾಧನೆ ಮಹಾರಥೋತ್ಸವ ಪುತ್ರೋತ್ಸವ
ಪರ್ವತಿಥಿಸಕಲ ಉತ್ಸವಗಳಂನು ನಂನ್ನಾನಲ್ಲಿ ಪೂರ್ವ
ಕಟಾಕ್ಷವಿಟ್ಟು ಅಂಗೀಕರ್ರಿಶಿ ನನಗೆ ಯಿಷ್ಟಾಭಿಷ್ಟಗಳು ಕೊಟ್ಟು
ರಕ್ಷಿಸ ಬೇಕೆಂದು ಬಿಂನಹಂ ಮಾಡಿ ಬರೆಶಿಕೊಟ ತಾಂಬ್ರಶಾ
ಸನ\\ ಸ್ವದತ್ತಾದ್ವಿಗುಣಂ ಪುಂಣ್ಯಂಪರದತ್ತಾನು ಪಾಲನಂ
ಪರದತ್ತಾಪಹಾರೇಣ ಸ್ವದತ್ತಂ ನಿಷ್ಪಲಂಭವೇತು ನವಿಷಂಮಿ
ಹತ್ಯಾ ಹುಂ\\ ದೇವಸ್ವಂವಿಷಮುಚ್ಛತ್ತೇ ವಿಷಮೇ ಕಾಕಿನಂಹಂ
ದೇವಸ್ವಂಪುತ್ರ ಪೌತ್ರಕಂ ಸ್ವದತ್ತಾಂಪರದತ್ತಾವ್ವಾಯೋ
ಹರೆತ ವಸುಂಧರಾ ಷಷ್ಠಿವರ್ಷಸಹಸ್ರಾಣಿ ವಿಷ್ಠಾಂಯಾಂಜಾ
ಯತೇ ಕ್ರಿಮಿಃ\\ ಯಿ ಧರ್ಮಕ್ಕೆ ದೊರೆಗಳೇ ಆಗಲಿ ಉದ್ಯೋಗ
ಸ್ಥರೇ ಆಗಲಿ ದ್ರೋಹಬುದ್ದಿಯೆಣಿಶಿದರೆÀ ಆದಕೆ ಅವರು ತ್ರಿ
ಮೂರ್ತಿಗಳಿಗೂ ಹೊರಗೂ ಯಿಹಪರಕ್ಕೆ ಸಲ್ಲದವರ್ರು
ಯೀ ತಾಂಬ್ರಶಾಸನವಂನು ನಿಯೊಗಿ ಅಂಣಪೈನ ಮುಂದಿರಿಸಿ
ಹಿಂಬದಿ
ಕೊಟ್ಟು ರಾಯಸ್ತ ವೆಂಕಟಪತಿಕೈಲ್ಲಿ ಸರ್ವ ಮಾನ್ಯ ಬರೆಶಿ
ಕೊಟ್ಟ ಶಾಸನಾ\\ ಸ್ವಾಮಿ ಅರ್ಚನೆ ಆಗ ವೆಂಕೊಮಾರೈಗೆ
ಶಿರ್ವಾಪಿತವಾಗಿ ಕೊಟ್ಟೆಉ ಪಂಚಂಗದ ಉಂಮ್ಮಣಗೆ ಆಗಮ
ಶಿರ್ವಾಪಿತವಾಗಿ ಕೊಟ್ಟೆಉ\\ ಆಗಮ ಉಭಯತ್ರಾ
ಮಾಡಿಕೊಂಡುಯಿರುವವರು
ಸ್ವಸ್ತಿ ಶ್ರೀಯಲವಂಕವಂಶ ತಿಲಕ ಶ್ರೀಕೆಂಪಭೂಪಾತ್ಮಜ ಶ್ರೀವೀರಕ್ಷಿತಿ
ಪಾಲ ಸೂನುರಖಿಲಕ್ಷಾಮಂಡಲಾಧೀಶ್ವರ ಶ್ರೀಮನ್ಮುಮ್ಮುಡಿ ಕೆಂಪ್ಪ
ವೀರ ನೃಪತೆ ಸೋಮೇಶ್ವರ ಸ್ಥಾಪಕೋ ಜೀಯಾತ್ಸಜನÀಪಾಲನಾ
ಯಾ ರಚಿತಃ ಕ್ಷೇಮ ಗ್ರಹಾರಶಿರಂ\\ ಕೆಂಪವೀರಪ್ಪ
ಗಡಿಸ್ತಳದ ಪಂಚಂಗ ಉಮ್ಮಂಣಗೆ ಶಿವಾರ್ಪಿತವಾಗಿ ಕೊಟ್ಟೆಉ
ಉರಿಗÀಸಾಗರ ಅಗ್ರಹರ ಗಣಶಂಕೆ 14 ಕೆಂಪವೀರಪ್ಪ\\
ಎಂಬ ವಿಷಯ ತಾಮ್ರಪಟ ಶಾಸನದಿಂದ ತಿಳಿದುಬರುತ್ತದೆ. ಇದು ಯಲಹಂಕ ನಾಡಪ್ರಭುಗಳ ಸಂತತಿಯ ಕೊನೆಯ ದೊರೆ ಮುಮ್ಮಡಿ ಕೆಂಪವೀರಪ್ಪಗೌಡರ ಕಾಲದಲ್ಲಿ ನೀಡಿದ ದಾನ ಶಾಸನವಾಗಿರುತ್ತದೆ. ಮಾಗಡಿಶೀಮೆಯ ಉದ್ದಂಡನಹಳ್ಳಿಯನ್ನು ನಿಯೋಗಿ(ಸರ್ಕಾರಿ ಅಧಿಕಾರಿ) ಅಂಣಪೈಯ್ಯನು, ಶಿವಗಂಗೆಯ ಗವಿಗಂಗಾಧರೇಶ್ವರಸ್ವಾಮಿಯ ಧಾರ್ಮಿಕ ಆಚರಣೆ ಇತ್ಯಾದಿಗಳಿಗೆ ರಾಯಸ್ತ ವೆಂಕಟಪತಿಯ ಕೈಯಿಂದ ಬರೆಸಿ ವೆಂಕೊಮಾರೈಯ್ಯ ಹಾಗು ಉಂಮ್ಮಣಗೆ ಕೊಟ್ಟಂತಹ ಗಣಶಂಕೆ 14, ಉರಿಗಸಾಗರ ಎಂಬ ಅಗ್ರಹಾರವನ್ನು ನೀಡಿದ ದಾನ ಶಾಸನವಾಗಿರುತ್ತದೆ.
ಯಲಹಂಕ ನಾಡಪ್ರಭುಗಳ ಕಾಲದಲ್ಲಿ ರಾಜಕೀಯ ಶಕ್ತಿಯ ಪ್ರಭಾವದಿಂದಲೋ ಅಥವಾ ಶೈವ ಮಠದ ಗುರುಗಳ ಪ್ರಭಾವದಿಂದಲೋ ವೀರಶೈವ ಧರ್ಮದ ಧಾರ್ಮಿಕ ಆಚರಣೆ, ಸಂಪ್ರದಾಯಗಳು ವ್ಯಾಪಕತೆಯನ್ನು ಕಂಡುಕೊಂಡವು. ಇವರ ಆಳ್ವಿಕೆಯಲ್ಲಿ ಮಾಗಡಿ ಶೀಮೆಯಲ್ಲಿ ಸುಮಾರು 400 ಶೈವಮಠÀಗಳಿದ್ದವೆಂದು ತಿಳಿದು ಬರುತ್ತದೆ. ಶೈವಮಠಗಳಿಗೆ ಉದಾರ ದಾನದತ್ತಿಗಳನ್ನು ನೀಡುತ್ತಿದ್ದು, ಈ ಬಗ್ಗೆ ನಾಡಿನಲ್ಲಿ ಪಕ್ಷಪಾತ ಮಾಡಿದ್ದಾರೆಂದು ವೈಷ್ಣವರು ಆರೋಪಿಸಿ, ಆಳುವ ವರ್ಗಕ್ಕೂ ವೈಷ್ಣವರಿಗೂ ದ್ವೇಷಾಸೂಯೆಗಳುಂಟಾಗಿ, ಮುಮ್ಮಡಿ ಕೆಂಪವೀರಪ್ಪಗೌಡರ ವಿರುದ್ಧ ಪಿತೂರಿ ನಡೆಸಿದರು. ಧಾರ್ಮಿಕ ಸಂಚನ್ನು ರೂಪಿಸಿದ ವೈಷ್ಣವರು ಮೈಸೂರಿನ ದೊಡ್ಡ ಕೃಷ್ಣರಾಜ ಒಡೆಯನಿಗೆ ಚಾಡಿ ಹೇಳಿ ಸಹಾಯ ಯಾಚಿಸಿದರು. ಆನಂತರ ದಳವಾಯಿ ನಂಜರಾಜಯ್ಯ ಮಾಗಡಿ ಮೇಲೆ ಆಕ್ರಮಣ ಮಾಡಿ ಮುಮ್ಮಡಿ ಕೆಂಪ ವೀರಪ್ಪಗೌಡನನ್ನು ಬಂಧಿಸಿ ಶ್ರೀರಂಗಪಟ್ಟಣದ ಸೆರೆಮನೆಯಲ್ಲಿ ಹಾಕುವುದರೊಂದಿಗೆ ಯಲಹಂಕ ನಾಡಪ್ರಭುಗಳ ಆಳ್ವಿಕೆ (1728) ಅಂತ್ಯವಾಗುತ್ತದೆ.
[ಮಾಗಡಿಯ ಹೋಮಿಯೋಪತಿ ವೈದ್ಯರೂ, ಮಾಜಿ ಶಾಸಕರೂ ಆದ ಡಾ. ಸಿ.ಆರ್. ರಂಗೇಗೌಡರಿಗೆ ಸ್ಥಳೀಯ ಚರಿತ್ರೆ ಬಗ್ಗೆ ಆಸಕ್ತಿ ಇದ್ದು ಆ ಮೂಲಕ ಕೆಲವು ಆಕರಗಳ ಸಂಗ್ರಹಣೆಯಲ್ಲಿ ತೊಡಗಿದ್ದರು. ಇತಿಹಾಸಕ್ಕೆ ಸಂಬಂಧಪಟ್ಟಂತೆ ದೇವಾಲಯಗಳ ಪರಿಕರಗಳು, ತಾಳೆಗರಿಗಳು, ತಾಮ್ರಪಟ ಶಾಸನಗಳು ಇನ್ನೂ ಮುಂತಾದವನ್ನು ಸಂಗ್ರಹಿಸಿದ್ದು ಕೆಲವನ್ನು ತಮ್ಮ ಸ್ನೇಹಿತರಾದ ಹೆಚ್.ಎಲ್. ನಾಗೇಗೌಡರ ಜಾನಪದ ಲೋಕಕ್ಕೆ ನೀಡಿದ್ದು, ಪ್ರಸ್ತುತ ತಾಮ್ರಶಾಸನವನ್ನು ಸಂರಕ್ಷಿಸಿಟ್ಟುಕೊಂಡಿರುವ ಅವರಿಗೆ ಕೃತಜ್ಞತೆಗಳು.]
ಆಧಾರಸೂಚಿ
1. ರೈಸ್, ಬಿ.ಎಲ್., (ಸಂ), ಎ.ಕ. Iಘಿ. ಬೆಂಗಳೂರು.
2. ಸೂರ್ಯನಾಥ ಕಾಮತ್., (ಸಂ), ಬೆಂಗಳೂರು ಗ್ರಾಮಾಂತರ ಜಿಲ್ಲಾ ಗ್ಯಾಸೆಟಿಯರ್.
3. ಕರ್ಲಮಂಗಲ ಶ್ರೀಕಂಠಯ್ಯ., ಗೌಡಕುಲ ವಿಭೂಷಣ ಕೆಂಪೇಗೌಡನ ಜಯಪ್ರಶಸ್ತಿ.
4. ಮಂಜುನಾಥ್ ಎಂ.ಜಿ. (ಸಂ)., ಯಲಹಂಕ ನಾಡಪ್ರಭುಗಳ ಶಾಸನ ಸಂಪುಟ, 2006.
5. ಪುಟ್ಟಸ್ವಾಮಿ ಬಿ.ಎಸ್. , ಯಲಹಂಕ ನಾಡಪ್ರಭು ಕೆಂಪೇಗೌಡ ಮತ್ತು ಆತನ ವಂಶಸ್ಥರು, 2011.
ಸಹ ಪ್ರಾಧ್ಯಾಪಕರು, ಇತಿಹಾಸ ವಿಭಾಗ, ವಿ.ವಿ. ಪುರಂ ಕಾಲೇಜು, ಬೆಂಗಳೂರು-560004.