Friday, January 24, 2014

ಹಳಗನ್ನಡದ ಹೊಸ ರೂಪದ ಪುಸ್ತಕಗಳು





ಡಾ. ಪಿ.ವಿ.ಎನ್‌ರ ನಾಲ್ಕು ಪುಸ್ತಕ  ಕುರಿತ ಮೂರು ಮಾತು.

-ಎಚ್‌.ಶೇಷಗಿರಿರಾವ್‌

ಕನ್ನಡವು ಶಾಸ್ತ್ರೀಯ ಭಾಷೆಯ ಸ್ಥಾನ ಮಾನ ಪಡೆದ ಹಿನ್ನೆಲೆಯಲ್ಲಿ ನಮ್ಮ ಭಾಷೆಗೆ ೧೫೦೦ ವರ್ಷದ ಇತಿಹಾಸವಿದೆ ಎಂದು  ಕನ್ನಡಿಗರೆಲ್ಲ  ಹೆಮ್ಮೆ ಪಡುವುದು ಸಹಜ. ಆದರೆ ಪ್ರಾಚೀನಕೃತಿ ಓದಿರುವರು ಎಷ್ಟು ಎಂದಾಗ ಮೌನಕ್ಕೆ ಶರಣಾಗುವವರೇ ಬಹಳ. ಕಾರಣ ಬಹು ಸರಳ  ಹತ್ತು ಹನ್ನೆರಡನೆಯ ಶತಮಾನದ ಕೃತಿಗಳ ಹೆಸರು ಬಲ್ಲೆವೇ ಹೊರತು ಮೂಲದಲ್ಲಿ ಓದಿರುವವರು ಬೆರಳ ಎಣಿಕೆಯಷ್ಟು. ಕಾರಣ ಕಬ್ಬಿಣದ ಕಡಲೆಯಾಗಿರುವ ಹಳೆಗನ್ನಡ ಭಾಷೆ ಮತ್ತು ಗದ್ಯ ಪದ್ಯ ಮಿಶ್ರಿತ ಸಂಸ್ಕೃತ ಮಯವಾಗಿರುವ ಚಂಪೂ ಶೈಲಿ.. ನಾರಿಕೇಳ ಪಾಕದಂತಿರುವ  ಸಾಹಿತ್ಯ ಕೃತಿಗಳನ್ನು ದ್ರಾಕ್ಷಾಪಾಕಮಾಡಿ ಜನಸಾಮಾನ್ಯರೂ ಓದಬಹುದಾದ ಹೊಸ ಗನ್ನಡದ ಗಧ್ಯ ಶೈಲಿಯಲ್ಲಿ ಸಾದರ ಪಡಿಸುವ  ಪ್ರಯತ್ನದ ಫಲವೇ  ಡಾ.ಕೆ.ವಿ. ನಾರಾಯಣರ  ಈ ನಾಲ್ಕು ಕೃತಿಗಳು . ಆದಿ ಕವಿ ಪಂಪನ  ಯುಗಳ ಕೃತಿಗಳ ಸರಳ ನಿರೂಪಣೆಯ ಪಂಪಕಾವ್ಯ ಸಾರ,ಅಭಿನವಪಂಪ ನಾಗಚಂದ್ರನ  ಪಂಪ ರಾಮಾಯಣ  , ನಯ ಸೇನನ ಧರ್ಮಾಮೃತ  ಮತ್ತು ಪಂಪನ ನುಡಿಗಣಿ  ಎಂಬ ಶಬ್ದ ಕೋಶ     ಇವು ಬಹುಕಾಲದ ಕೊರತೆಯನ್ನು ನೀಗುವ ಸಾಹಿತ್ಯ ರಸಿಕರಿಗೆ ರಸಪಾಕವಾಗಬಲ್ಲ ಕೃತಿಗಳು.


ಡಾ. ಪಿ.ವಿ.ನಾರಾಯಣ ಅವರು ಹಳೆಯ ಸೃಷ್ಟಿಯನ್ನು ಹೊಸ ದೃಷ್ಟಿ ಯಲ್ಲಿ ನೋಡ ಬಲ್ಲ ವಿರಳ ವಿದ್ವಾಂಸರಲ್ಲಿ ಒಬ್ಬರು. ಹಳೆಯದೆಲ್ಲ ಹೊನ್ನು ಎಂಬ ಅಂಧಾಭಿಮಾನವಿಲ್ಲ.ಸಂಸ್ಕೃತ ಭೂಯಿಷ್ಠ ಭಾಷೆ, ಅಸಂಬದ್ಧ ಅಷ್ಟಾದಶ ವರ್ಣನೆಗಳಿವೆ   ಎಂಬ ತಾತ್ಸಾರವೂ ಇಲ್ಲ.ಮಾರ್ಗದಲ್ಲಿ ದೇಶಿಯನ್ನು ಕಾಣುವ , ಅಂದಿನ ಮಿತಿಯಲ್ಲಿ ಶ್ರೇಷ್ಟತೆ ಸಾಧಿಸುವ ಯತ್ನವನ್ನು ಗುರುತಿಸುವ ಸಹೃದಯತೆ ಇದೆ.ಹಾಗೆಂದು ದೋಷವನ್ನು ಗುಣ ಎನ್ನದೆ ಎತ್ತಿತೋರುವ ಎದೆಗಾರಿಕೆ ಇದೆ. ಈ ಕಾರಣಗಳಿಂದ  ಪ್ರಾಚೀನ ಕೃತಿಗಳೂ ಇಂದಿನ ಸಮಕಾಲೀನ ಸಮಾಜಕ್ಕೆ ಆಪ್ತ ವಾಗುವವು.’.ಹಾದರದ ಕಥೆ, ಸೋದರರ ವಧೆ’ಎಂದು ಹೀಗಳೆಯುವವರೂ ಓದಿ ಅವುಗಳಲ್ಲಿರುವ ಉದಾತ್ತತೆ ,,ಸಾರ್ವತ್ರಿಕ ಸತ್ಯ ,ಜನ ಜೀವನ ಮತ್ತು ಭಾಷಾಬಳಕೆಯ ಸೌಂದರ್ಯದ ಕಿರು ನೋಟ ಪಡೆಯಲು  ಸಹಾಯಕವಾಗಿವೆ, ಹೊಸ ರೂಪದಲ್ಲಿ ಬಂದ ಈ ಕೃತಿಗಳು.
ಪಂಪ ಕಾವ್ಯ ಸಾರ – ಹೆಸರೇ ಸೂಚಿಸುವಂತೆ ಆದಿಕವಿ ಪಂಪನ ಮತ್ತು ಆದಿಪುರಾಣಗಳ ಮತ್ತು ವಿಕ್ರಮಾರ್ಜುನ ವಿಜಯ ಸಂಕ್ಷಿಪ್ತ ಆವೃತ್ತಿ.  ಆಯ್ದ ಸಾರವತ್ತಾದ ಭಾಗಗಳನ್ನು ಮಾತ್ರ ಒಳಗೊಂಡಿದೆ..ಸಮಯದೊಂದಿಗೆ ಸ್ಪರ್ಧಿಸುತ್ತಿರುವ ಈ ಆಧುನಿಕ ಕಾಲದಲ್ಲಿ ಶ್ರೇಷ್ಟ ಕಾವ್ಯ ಪರಿಚಯಮಾಡಿಕೊಳ್ಳಲು ಅನುವಾಗುವುದು.  
  .ಪಂಪ ಕನ್ನಡದ ಆದಿಕವಿ. ಬರಿಕಾಲದ ದೃಷ್ಟಿಯಿಂದ ಮಾತ್ರವಲ್ಲ. ಕಾವ್ಯಗುಣಮಟ್ಟದ  ದೃಷ್ಟಿಯಿಂದಲೂ ಮೂಲಪುರುಷ.’.ಆದಿಪುರಾ”  ಕನ್ನಡದ ಲ್ಲಿ ಜೈನ ಪರಂಪರೆಯ ಮೊದಲಕಾವ್ಯ.. ಪ್ರಥಮ ತೀರ್ಥಂಕರ   ಆದಿನಾಥನ ಅನುಭವದ ಪುನರ್‌ಸೃಷ್ಷ್ಟಿ.  ಜೀವನವನ್ನು ಪಾವನವಾಗಿ ಮಾಡಿಕೊಂಡ ಬಗೆ ಎಲ್ಲರಿಗೂ ಆದರ್ಶ. ಲೌಕಿಕ ಕಾವ್ಯ ಎಂದು ಅವನೇ ಹೇಳಿಕೊಳ್ಳುವ ವಿಕ್ರಮಾರ್ಜುನ ವಿಜಯದ  ಕಥಾಭಾಗ ಯಥಾರೀತಿ ವ್ಯಾಸನಿಂದ ಪಡೆದಿದ್ದರೂ ಅದರ ಅಭಿವ್ಯಕ್ತಿ ಮತ್ತು ತನ್ನ ಆಶ್ರಯದಾತ ಅರಿಕೇಸರಿಗೆ ಅರ್ಜುನನ್ನು ಸಮೀಕರಿಸಿ ಮಾಡಿಕೊಂಡ ಬದಲಾವಣೆ,,ಸಮಕಾಲೀನ ಪರಿಸ್ಥಿತಿಯ ಚಿತ್ರಣ,ವಿಶೇಷವಾಗಿ ಬಳಸಿದ ಮಾರ್ಗದಲ್ಲಿ ಜಾನಪದವನ್ನು ಸಮ್ಮಿಳನಗೊಳಿಸಿದ ರೀತಿಯಿಂದ ಸಾವಿರ ವರ್ಷಕಳೆದರೂ ಇನ್ನು ಜೀವಂತವಾಗಿದ್ದು ಸ್ಪೂರ್ತಿಯ ಸೆಲೆಯಾಗಿದೆ
ಪಂಪ ರಾಮಾಯಣ-  ಹನ್ನೊಂದು ಹನ್ನೆರಡನೆ ಶತಮಾನದ ಸಂಧಿಕಾಲದಲ್ಲಿ ಇದ್ದ ನಾಗಚಂದ್ರ ಜೈನ ಕವಿಗಳಲ್ಲಿ ಗಣ್ಯ. ಪಂಪನ ಉತ್ಕಟ  ಅಭಿಮಾನಿ.
 ಅಭಿನವ ಪಂಪನೆಂದು ಕರೆದು ಕೊಂಡು ಹೆಮ್ಮೆ ಪಟ್ಟುಕೊಂಡವ. ಅವನಂತೆಯೇ ಒಂದು ಧಾರ್ಮಿಕ ಕಾವ್ಯ ಮತ್ತು ಒಂದು ಲೌಕಿಕ ಕಾವ್ಯ ರಚಿಸಿದ. ಕುಮಾರವ್ಯಾಸನ ಕಾಲಕ್ಕೆ ’ತಿಣುಕಿದನು ಫಣಿರಾಯ ರಾಮಾಯಣ ಕವಿಗಳ  ಭಾರದಲ್ಲಿ’  ಎಂದರೂ ನಮಗೆ ದೊರೆತಿರುವ ರಾಮಾಯಣಗಳ ಸಂಖ್ಯೆ ಅಧಿಕವಾಗಿಲ್ಲ. ಆದರೆ ನಾಗಚಂದ್ರನ ’ ರಾಮಚಂದ್ರ ಚರಿತೆ’ ಒಂದು ವಿಶಿಷ್ಟವಾದ ಕೃತಿ. ವಾಲ್ಮೀಕಿಯ ಕಥೆಯನ್ನು ಜೈನಸಂಪ್ರದಾಯಕ್ಕೆ ಅಳವಿಡಿಸಿರುವುದರಿಂದ ಸಾಮಾನ್ಯ ಓದುಗರಿಗೆ ವಿಚಿತ್ರವೆನಿಸುವ ಬದಲಾವಣೆಗಳಿವೆ. ರಾಮ ನಾಯಕನಾದರೂ ರಾವಣನ್ನು ಕೊಲ್ಲುವುದು ಲಕ್ಷ್ಮಣ.., ಹನುಮಂತ ,ಸುಗ್ರೀವ  ಮೊದಲಾದವರು ವಾನರನಲ್ಲ. ಅವರೆಲ್ಲ ಕಪಿಧ್ವಜರು. ರಾಮನು  ವನವಾಸಕ್ಕೆ ಹೋಗುವುದಿಲ್ಲ. ದೇಶ ಸಂಚಾರಕ್ಕೆ ಹೊರಡುವನು.ರಾವಣ ಪ್ರತಿ ನಾಯಕನಾದರೂ ’ ದುಷ್ಟನಲ್ಲ ಪರಾಂಗನಾವಿರತಿ ’ ವ್ರತನಿಷ್ಠ.  ಮೊದಲ ಬಾರಿಗೆ ಕನ್ನಡ ಕಾವ್ಯ ಕ್ಷೇತ್ರದಲ್ಲಿ ದರಂತ ನಾಯಕನಾಗಿ ಅವನ  ಚಿತ್ರಣ ಭವ್ಯವಾಗಿ ಮೂಡಿಬಂದಿದೆ. ಭಾರತದಲ್ಲಿ ಕಾವ್ಯಗಳು ಬಹುತೇಕ ನಾಯಕ ಪ್ರಧಾನ. ಆದರೆ ಇಲ್ಲಿ ರಾವಣ ತನ್ನ ಎಲ್ಲ ಸಾಧನೆಯ ಗುಣಗಳ ಹೊರತಾಗಿಯೂ ವಿಧಿಯ  ಕೈಗೊಂಬೆಯಾಗಿ ದುರಂತ ನಾಯಕನಾಗುವನು. ಓದುಗರ ಕರುಣೆಗೆ ಪಾತ್ರನಾಗುವನು.ಈ ರೀತಿಯ ಪಾತ್ರ ಚಿತ್ರಣ ಗ್ರೀಕ್‌  ದುರಂತ ನಾಟಕಗಳಲ್ಲಿ ಸಾಮಾನ್ಯವಾದರೂ ಕನ್ನಡದಲ್ಲಿ ಅತಿವಿರಳ . ಇದರ ಪ್ರಭಾವ ಆಧುನಿಕ ಕವಿಗಳ ಮೇಲೆ ಮೂಡಿರುವದನ್ನು ಗುರುತಿಸಬಹುದು. ಚಂಪೂವಿನಲ್ಲಿರುವ ಈ ಕಾವ್ಯವನ್ನು ಗಧ್ಯ ರೂಪದಲ್ಲಿ ತಂದಿರುವುದರಿಂದ  ಸರಳವಾಗಿ ಓದಿಸಿಕೊಂಡು ಹೋಗುವುದು.ಇದರಿಂದ ಪ್ರಾಚೀನ ಕಾವ್ಯದ ಪರಿಚಯ ಸುಲಭ ವಾಗುವುದು..
ಧರ್ಮಾಮೃತ- ಹನ್ನೆರಡನೆಯ ಶತಮಾನದ ಕವಿ ನಯಸೇನ.. ಹೆಸರೇ ಸೂಚಿಸುವಂತೆ ಜೈನ ಧರ್ಮದ ಹಿರಿಮೆಯನ್ನು ಸಾರುವುದು ಅವನ ಗುರಿ. ಆದರೆ ಅದಕ್ಕೆ ಅವನು ಆರಿಸಿಕೊಂಡ ವಿಧಾನ ಜೈನ ತತ್ವಗಳನ್ನು ಬೇರೆ ಬೇರೆ. ಹದಿನಾಲ್ಕು ಕಥಗಳ ಮೂಲಕ ವಿಶದ ಪಡಿಸುವುದು..ಅದೂ ಪಂಚತಂತ್ರದ ಮಾದರಿಯಲ್ಲಿ.
ಶೈಲಿ  ಗದ್ಯಪದ್ಯ ಮಿಶ್ರಿತ ಚಂಪೂ ಆದರೂ ಸಂಸ್ಕೃತ ಅತಿಯಾಗಿಲ್ಲ. ಗದ್ಯಕ್ಕೆ ಆದ್ಯತೆ, ಕನ್ನಡಕ್ಕೆ ಪ್ರಥಮ ಸ್ಥಾನ. ಆಡುನುಡಿಯ ಸೊಬಗನ್ನು ಮೈ ಗುಡಿಸಿಕೊಂಡಿದೆ. ಕವಿ ಉಪಮಾಲೋಲ.  ಹೀಗಾಗಿ ತಿಳಿಯಾದ ಶೈಲಿಯಲ್ಲಿ ಜನ ಸಾಮಾನ್ಯರಿಗೂ ಅರ್ಥವಾಗುವಷ್ಟು ಸರಳ ಭಾಷೆ.
ಸಂಸ್ಕೃತ ಬೆರಸುವುದರ ಕಡುವಿರೋಧಿ. ಕನ್ನಡಕ್ಕೆ ಆದ್ಯತೆ ಇರಬೇಕೆಂಬುದು ಅವನ ಸ್ಪಷ್ಟ ನಿಲುವು.. ಈ ಎಲ್ಲ ಕಾರಣಗಳಿಂದ ನಯಸೇನನ ಕೃತಿ ಕನ್ನಡಿಗರ ಹೃದಯಕ್ಕೆ ಹತ್ತಿರವಾಗಿದೆ. ಅದನ್ನು ಪೂರ್ಣವಾಗಿ ಗದ್ಯದಲ್ಲಿ ರೂಪಾಂತರಿಸಿರುವುದರಿಂದ ಇಂದಿನ ಓದುಗರಿಗೆ ಅನುಕೂಲ.ಹಳೆಗನ್ನಡದ ಮೂರು ಕೃತಿಗಳು ಹೊಸಗನ್ನಡದ ಓದುಗರಿಗೆ  ಅಭಿರುಚಿ ಮಾಡುವಂತೆ ರೂಪಾಂತಿಸಿರುವ  ಲೇಖಕರ ಪ್ರಯತ್ನ ಅಬಿನಂದನೀಯ. 


  ” ಪಂಪನ ನುಡಿ ಗಣಿ’  ಒಂದು ಅಪೂರ್ವ . ಶಬ್ದಕೋಶ.  ಪಂಪನ  ಎರಡೂ ಕಾವ್ಯಗಳಲ್ಲಿ  ಪ್ರಯೋಗವಾಗಿರುವ ಪದಗಳ ಸಂಗ್ರಹ.  ಪಂಪನ ಕಾವ್ಯದ ಲ್ಲಿ ಹಾಸು ಹೊಕ್ಕಾಗಿರುವ  ದೇಶಿ ಮತ್ತು ಮಾರ್ಗ ಪದಗಳ ಅರ್ಥವನ್ನು ಪ್ರಯೋಗದ ಮೂಲಕ ಪರಿಚಯಿಸುವ ಪರಿ ಅನನ್ಯ.  ಅಲ್ಲಿಯೇ ಪದದ ವ್ಯಾಕರಣ ಸ್ವರೂಪವನ್ನೂನೀಡಲಾಗಿದೆ.ಅಕಾರಾದಿಯಾಗಿ ಹ ಕಾರದ ವರೆಗ ಇರುವ ಪದಗಳ ವಿವಧ ರೂಪಗಳನ್ನು ಸುಮಾರು ೬೦೦ ಪುಟಗಳಲ್ಲಿಅಳವಡಿಸಿಲಾಗಿದೆ.ಇದು ವಾಣಿಜ್ಯ ಉದ್ದೇಶದಿಂದ ಮಾಡಿದ ಪ್ರಕಟನೆಯಲ್ಲ. ಸಾಹಿತ್ಯ ಪ್ರೀತಿಯ ಫಲ. ಈ ಧೈರ್ಯ ಮಾಡಿರುವವರು ಸದಭಿರುಚಿಯ ಕೃತಿಗಳ ಹೊರತರುವಲ್ಲಿ ಹೆಸರಾಗಿರುವ ಕಾಮಧೇನು ಪುಸ್ತಕ ಪ್ರಕಾಶನದವರು.ಲಘು  ಸಾಹಿತ್ಯಕ್ಕೇ ಒಗ್ಗಿಕೊಂಡಿರುವವರನ್ನು ಆಕರ್ಷಿಸವಂತಿವೆ. ಪ್ರಾಚೀನ ಕೃತಿಗಳ ಸಾರ ಸೆರೆ ಹಿಡಿದಿರುವ ಮೂರು ಪುಸ್ತಕಗಳು ಸಂಗ್ರಹ ಯೋಗ್ಯ. ಮತ್ತು ಪರಾಮರ್ಶನಕ್ಕೆ ಕೈಗನ್ನಡಿಯಾಗಿದೆ ಶಬ್ದ ಕೋಶ .
ಪುಸ್ತಕ ಪ್ರಪಂಚಕ್ಕೆ ಒಂದು ಉತ್ತಮ ಕೊಡುಗೆ.. ಈ ಪುಸ್ತಕಗಳ ಇನ್ನೊಂದು ಹೆಗ್ಗಳಿಕೆ ಎಂದರೆ  ಉತ್ತಮ ಮುದ್ರಣ ಮತ್ತು ವಿನ್ಯಾಸ.   ಆಕರ್ಷಕ ಮುಖಪುಟ,    ಗಂಜೀಫಾ ರಘುಪತಿ ಭಟ್ಟರ ಚಿತ್ರಗಳು  ಕಣ್ಣುಸೆಳೆಯುವಂತಿವೆ. ನೋಡಿದವರು ಕೈಗೆತ್ತಿಕೊಳ್ಳುವಷ್ಟು ಸುಂದರವಾಗಿ ಮೂಡಿ ಬಂದಿವೆ.






No comments:

Post a Comment