ಶೃಂಗೇರಿ ಶಾರದಾಪೀಠ ಮತ್ತು ಮೈಸೂರು ಸಂಸ್ಥಾನ ಒಂದು ಅಧ್ಯಯನ
*ಕೆ.ಜಿ. ಪ್ರಶಾಂತ್ & **, ಡಾ. ಮಹಾದೇವಿ
೧೨೦೦ ವರ್ಷಗಳಷ್ಟು ಪುರಾತನವಾದ ದಕ್ಷಿಣ ಭಾರತದ ಪ್ರಮುಖ
ಯಾತ್ರಾಸ್ಥಳವಾದ ಶೃಂಗೇರಿ ಶಾರದಾ ಪೀಠವು ತನ್ನದೇ ಆದ ಐತಿಹಾಸಿಕ ಮಹತ್ವವನ್ನು ಪಡೆದಿದೆ.
ಕ್ರಿ.ಶ.೧೩೩೬ರಲ್ಲಿ ವಿಜಯನಗರವೆಂಬ ಮಹಾ ಸಾಮ್ರಾಜ್ಯದ ಉದಯವು ಶೃಂಗೇರಿ ಶಾರದಾ ಪೀಠ ಮತ್ತು
ಕರ್ನಾಟಕದ ಇತಿಹಾಸದಲ್ಲಿ ಮಹತ್ವಪೂರ್ಣವಾದ ಸುವರ್ಣಾಧ್ಯಾಯವನ್ನು ತೆರೆಯಿತು. ಶೃಂಗೇರಿ ಜಗದ್ಗುರು
ಪರಂಪರೆಯ ೧೦ನೇ ಗುರುಗಳಾಗಿದ್ದ ಶ್ರೀ ವಿದ್ಯಾತೀರ್ಥರು ಅವರ ಶಿಷ್ಯರಾದ ಶ್ರೀ ಭಾರತೀ ತೀರ್ಥರು
ಮತ್ತು ವಿದ್ಯಾರಣ್ಯರು ವಿಜಯನಗರದ ಸಂಸ್ಥಾಪಕ ದೊರೆಗಳಾದ ಹರಿಹರ ಬುಕ್ಕರಾಯರಿಗೆ ನೀಡಿದ ಮಾರ್ಗದರ್ಶನ
ಮತ್ತು ಅಂತಃಸ್ಫೂರ್ತಿಯ ಶೃಂಗೇರಿ ಶಾರದಾಪೀಠಕ್ಕೆ ರಾಜಾಶ್ರಯ ದೊರಕುವಂತೆ ಮಾಡಿತು.
ವಿಜಯನಗರದ ಅರಸರ ನಂತರ ಕೆಳದಿ ಸಂಸ್ಥಾನದ ಅರಸರಲ್ಲಿ ಸದಾಶಿವನಾಯಕನಿಂದ ಹಿಡಿದು ಮುಮ್ಮಡಿ
ಸೋಮಶೇಖರನ ಆಳ್ವಿಕೆಯವರೆಗೂ ಶೃಂಗೇರಿ ಶಾರದಾ ಪೀಠಕ್ಕೆ ರಾಜಾಶ್ರಯವನ್ನು ಕೊಟ್ಟು, ಮಠಕ್ಕೆ ಹೇರಳವಾಗಿ ಭೂಮಿ, ವಸ್ತು, ಒಡವೆಗಳನ್ನು ದಾನ ಮಾಡಿ ಜಗದ್ಗುರುಗಳೊಂದಿಗೆ ನಿಕಟ ಸಂಪರ್ಕವನ್ನಿರಿಸಿಕೊಂಡಿದ್ದರೆಂದು
‘ಗುರುವಂಶಕಾವ್ಯ’, ‘ಕೆಳದಿ ನೃಪವಿಜಯಂ’, ‘ಶಿವತತ್ತ್ವ ರತ್ನಾಕರ’ ಮುಂತಾದ ಗ್ರಂಥಗಳಿಂದ ತಿಳಿಯಬಹುದಾಗಿದೆ.
೧೮ ಮತ್ತು ೧೯ನೇ ಶತಮಾನದಲ್ಲಿ ಪೇಶ್ವೆ, ಘೋರ್ಪಡೆ, ಶಿಂಧೆ, ಭೋಸಲೆ ಮುಂತಾದ ಮರಾಠರು ಶೃಂಗೇರಿ
ಜಗದ್ಗುರುಗಳೊಂದಿಗೆ ಇಟ್ಟುಕೊಂಡಿದ್ದ ನಿಕಟ ಸಂಬಂಧವನ್ನು ‘ಜಗದ್ಗುರು ಶೃಂಗೇರಿ ಶ್ರೀಮಠೀಯ
ಪ್ರಾಕ್ತನ ಲೇಖನಮಾಲಾ ಸಂಗ್ರಹ’ವು ದಾಖಲಿಸಿದೆ.
ಹೀಗೆ ವಿಜಯನಗರದ ದೊರೆಗಳು, ಕೆಳದಿ ಸಂಸ್ಥಾನದ ನಾಯಕರು, ಮರಾಠರು ಶೃಂಗೇರಿ ಶಾರದಾಪೀಠದ
ಅಭ್ಯುದಯಕ್ಕೆ ಕಾರಣರಾದರೋ ಅದೇ ರೀತಿ ಮುಸ್ಲಿಂ ದೊರೆಗಳಾದ ಹೈದರಾಬಾದಿನ ನಿಜಾಮರು, ವಿಜಾಪುರದ ಆದಿಲ್‌ಶಾಹಿಗಳು, ಮೊಘಲ್ ಅಧಿಕಾರಿಗಳು ಹೈದರ್‌ಆಲಿ, ಟಿಪ್ಪುಸುಲ್ತಾನ್ ಮುಂತಾದವರು ಶೃಂಗೇರಿ ಮಠದ ಶ್ರೇಷ್ಠತೆಯನ್ನು ಎತ್ತಿ ಹಿಡಿದು ಸಮಕಾಲೀನ
ಜಗದ್ಗುರುಗಳನ್ನು ಗೌರವಿಸಿದ ವಿಷಯಕ್ಕೆ ಶ್ರೀಮಠದಲ್ಲಿನ ಪರ್ಷಿಯನ್, ಸಂಸ್ಕೃತ ಮತ್ತು ಕನ್ನಡ ಭಾಷೆಯ ಅನೇಕ ದಾಖಲೆಗಳು, ಪತ್ರಗಳು, ಕೆ.ಆರ್. ವೆಂಕಟರಾಮನ್‌ರವರ ‘ಶೃಂಗೇರಿ ಗುರುರಾಜ್ ಅಂಡ್
ಮುಸ್ಲಿಂ ರೂಲರ‍್ಸ್’ ಮುಂತಾದ
ಆಕರಗಳು ಬೆಳಕು ಚೆಲ್ಲುತ್ತದೆ.
ಶೃಂಗೇರಿ ಶಾರದಾಪೀಠ ಮತ್ತು ಮೈಸೂರು ಸಂಸ್ಥಾನ: ವಿಜಯನಗರದ ಪತನಾನಂತರ ವಿಜಯನಗರದ ಪರಂಪರೆಯನ್ನು
ಉತ್ತರಾಧಿಕಾರದ ರೂಪದಲ್ಲಿ ಮುನ್ನಡೆಸಿಕೊಂಡು ಬಂದ ಮೈಸೂರು ಒಡೆಯರು ಶೃಂಗೇರಿ ಮಠದೊಂದಿಗೆ ಬಹುಶಃ
ಇನ್ನಾವ ರಾಜಮನೆತನಗಳೂ ಇರಿಸಿಕೊಂಡಿರದಷ್ಟು ಅನ್ಯೋನ್ಯವಾಗಿ ಇಟ್ಟುಕೊಂಡಿದ ಬಾಂಧವ್ಯಕ್ಕೆ ರಾಜ
ಮಹಾರಾಜರ ಪತ್ರಗಳು, ಪಲ್ಲಕ್ಕಿ, ಸಿಂಹಾಸನ, ಆಭರಣಗಳು, ಪೂಜಾ ಸಾಮಗ್ರಿಗಳು, ಶೃಂಗೇರಿ ಶಾರದಾ ಪೀಠದಲ್ಲಿ ಮತ್ತು ಮೈಸೂರು ಅರಮನೆಯಲ್ಲಿ ಇಂದಿಗೂ ಆಚರಿಸಲ್ಪಡುತ್ತಿರುವ
ಹಲವಾರು ಸಂಪ್ರದಾಯಗಳು ಪ್ರತ್ಯಕ್ಷ ಪ್ರಮಾಣಗಳಾಗಿದೆ.
ಕರ್ನಾಟಕ ರಾಜ್ಯ ಪತ್ರಾಗಾರ, ಮೈಸೂರು ಅರಮನೆ ಪತ್ರಾಗಾರ, ಮದ್ರಾಸ್ ಓರಿಯಂಟಲ್ ಲೈಬ್ರರಿ, ಶೃಂಗೇರಿ ಮಠದ ಪತ್ರಾಗಾರಗಳ ದಾಖಲೆಗಳು, ಕಡತಗಳು, ‘ಜಗದ್ಗುರು ಶೃಂಗೇರಿ ಶ್ರೀ ಮಠೀಯ
ಪ್ರಾಕ್ತನ ಲೇಖನ ಮಾಲಾ ಸಂಗ್ರಹ’, ‘ಆನ್ಯುವಲ್ ರಿಪೋರ್ಟ್ ಆಫ್ ದಿ ಮೈಸೂರು
ಆರ್ಕಿಯಾಲಾಜಿಕಲ್ ಡಿಪಾರ್ಟ್‌ಮೆಂಟ್’, ಕೆ.ಆರ್. ವೆಂಕಟರಾಮನ್‌ರವರ ‘The throne of transcedental wisdom’, ಪ್ರೊ. ಎ.ಕೆ. ಶಾಸ್ತ್ರಿಗಳವರ
‘ಶೃಂಗೇರಿ ಧರ್ಮ ಸಂಸ್ಥಾನ’ ಸಂಶೋಧನಾ ಪ್ರಬಂಧ ಮುಂತಾದ ಆಕರಗಳು
ಶೃಂಗೇರಿ-ಮೈಸೂರು ಸಂಬಂಧಗಳ ಮೇಲೆ ಬೆಳಕನ್ನು ಚೆಲ್ಲುತ್ತದೆ.
ಎಪಿಗ್ರಾಫಿಯಾ ಕರ್ನಾಟಿಕಾ (ಮೈಸೂರು ವಿಶ್ವವಿದ್ಯಾಲಯದ ೧೯೯೮ರ
ಪ್ರಕಟಣೆ) ೧೧ನೇ ಸಂಪುಟದಲ್ಲಿ ಮೈಸೂರು ಮಹಾರಾಜರುಗಳು ಶೃಂಗೇರಿ ಮಠಕ್ಕೆ ದಾನ ಮಾಡಿದ ಪೂಜಾ
ಸಾಮಗ್ರಿಗಳು, ಸಿಂಹಾಸನ, ಪಲ್ಲಕ್ಕಿ, ದೇವರ ವಿಗ್ರಹ ಮುಂತಾದ ಕೊಡುಗೆಗಳನ್ನು ಮತ್ತು ಅಲ್ಲಿನ ಶಾಸನಗಳನ್ನು ದಾಖಲಿಸಲಾಗಿದ್ದು, ಮೈಸೂರು ಮಹಾರಾಜರುಗಳು ಶೃಂಗೇರಿ ಮಠದ, ಅಲ್ಲಿನ ಗುರುಗಳ ವಿಚಾರದಲ್ಲಿ ಎಷ್ಟೊಂದು
ಆಸಕ್ತಿ ವಹಿಸಿದ್ದರೆಂದು ತಿಳಿಯಲು ಸಹಕಾರಿಯಾಗಿದೆ.
ಮೈಸೂರಿನ ರಾಜ ವಂಶಸ್ಥರು ವಿಜಯನಗರದ ಶೈಲಿಯಲ್ಲಿ ರಾಜ
ದರ್ಬಾರನ್ನು ಪರಂಪರಾನುಗತವಾಗಿ ಇಂದಿನವರೆಗೂ ಆಚರಿಸಿಕೊಂಡು ಬಂದಿರುತ್ತಾರೆ. ಮೈಸೂರಿನ ದರ್ಬಾರಿನ
ಶೈಲಿಯಲ್ಲೇ ಶೃಂಗೇರಿಯ ಶರನ್ನವರಾತ್ರಿ ಉತ್ಸವದಲ್ಲಿ ಶೃಂಗೇರಿ ಜಗದ್ಗುರುಗಳವರು ಇಂದಿಗೂ
ದರ್ಬಾರನ್ನು ಆಚರಿಸುತ್ತಾರೆ. ಹೀಗೆ ಶೃಂಗೇರಿ ಮತ್ತು ಮೈಸೂರು ಸಂಸ್ಥಾನದ ದರ್ಬಾರ್ ಆಚರಣೆಯು
ಕರ್ನಾಟಕದ ಸಾಂಸ್ಕೃತಿಕ ವೈಭವವನ್ನು ಸಾರುತ್ತ ಶೃಂಗೇರಿ-ಮೈಸೂರಿನ ಚಾರಿತ್ರಿಕ ಸಂಬಂಧವನ್ನು
ಬೆಸೆಯುತ್ತಿದೆ.
ಇಮ್ಮಡಿ ಕೃಷ್ಣರಾಜ ಒಡೆಯರು ಮತ್ತು ಶಾರದಾಪೀಠ: ಮೈಸೂರು ಮಹಾರಾಜ ಇಮ್ಮಡಿ ಕೃಷ್ಣರಾಜ ಒಡೆಯರು (೧೭೩೪-೬೬)
ಶೃಂಗೇರಿ ಜಗದ್ಗುರು ಶ್ರೀ ಸಚ್ಚಿದಾನಂದಭಾರತೀ (೧೭೦೫-೧೭೪೧) ಸ್ವಾಮಿಗಳು ಸಮಕಾಲೀನರಾಗಿದ್ದು ಇವರ
ಕಾಲವು ಶೃಂಗೇರಿ ಮಠ ಮತ್ತು ಮೈಸೂರು ಸಂಸ್ಥಾನದ ನಿಕಟ ಸಂಬಂಧದ ಪ್ರಾರಂಭವಾಗಿ
ಸುವರ್ಣಾಧ್ಯಾಯವನ್ನು ತೆರೆಯಿತು.
ಕ್ರಿ.ಶ.೧೭೬೦ರಲ್ಲಿ ಶ್ರೀ ಸಚ್ಚಿದಾನಂದಭಾರತೀ ಸ್ವಾಮಿಗಳ
ಪಾದಾರ್ಪಣೆಯಿಂದ ರಾಜ್ಯಕ್ಕೆ ಅಗತ್ಯವಾದ ಮಳೆ ಬಂದು ಸರ್ವ ಸಮೃದ್ಧಿ ಹೊಂದುವುದೆಂದು ಮಹಾರಾಜ
(೧೭೬೦ರ ತಾಮ್ರಶಾಸನ ಶೃಂಗೇರಿ)ರು ಗುರುಗಳನ್ನು ಮೈಸೂರಿಗೆ ಆಮಂತ್ರಿಸಿ ವೈಭವದ ಸ್ವಾಗತ ನೀಡಿ
ಗುರುಕಾಣಿಕೆ ಸಮರ್ಪಿಸಿದ್ದನ್ನು ನಾವು ಸ್ಮರಿಸಬಹುದಾಗಿದೆ. ಮಹಾರಾಜರು ಆ ಸಂದರ್ಭದಲ್ಲಿ ೧೨೦೦
ವರಹಗಳ ಬೆಳವಾಡಿ ಮತ್ತು ಅದಕ್ಕೆ ಸಂಬಂಧಿಸಿದ ಕೊಪ್ಪಲುಗಳನ್ನು ಗುರುಗಳಿಗೆ ದಾನವಾಗಿ ಕೊಟ್ಟರು.
(ಎ.ಆರ್.ಎಂ.ಡಿ.-೧೯೨೩, ‘ಶೃಂಗೇರಿ ಧರ್ಮಸಂಸ್ಥಾನ’)
ಇಮ್ಮಡಿ ಕೃಷ್ಣರಾಜ ಒಡೆಯರು ಶೃಂಗೇರಿ ಮಠಕ್ಕೆ ಆನೆಯೊಂದನ್ನು
ದಾನ ಮಾಡಿದರು. ಗುರುಗಳಿಗೆ ಬೆಳ್ಳಿ ಕುಸುರಿಗಳಿಂದ ಅಲಂಕೃತವಾದ ವಸ್ತ್ರವನ್ನು ದಾನ
ಮಾಡಿದುದಲ್ಲದೇ ಜಗದ್ಗುರುಗಳನ್ನು ‘ಅಲಂಕೃತ ಶೃಂಗಪುರದ ಸಿಂಹಾಸನದಲ್ಲಿ ಆಸೀನರಾದ ಯೋಗ
ಸಾಮ್ರಾಜ್ಯದ ಅಧಿಪತಿ’ (ಖuಟeಡಿ oಜಿ ಥಿogಚಿ ಇmಠಿiಡಿe) ಎಂದು ವರ್ಣಿಸಿದ್ದಾರೆ.
ಶೃಂಗೇರಿ ಮಠದಲ್ಲಿನ ಕ್ರಿ.ಶ.೧೭೩೭ರ ಕಾಲದ ತಾಮ್ರಶಾಸನವು
ಮೈಸೂರಿನ ಇಮ್ಮಡಿ ಕೃಷ್ಣರಾಜ ಒಡೆಯರು ಮಠದಲ್ಲಿ ಜರುಗುವ ವ್ಯಾಸಪೂಜೆಗಾಗಿ ಮಾಡಿದ ಭೂದಾನವನ್ನು
ತಿಳಿಸುತ್ತದೆ. ಶ್ರೀ ಸಚ್ಚಿದಾನಂದಭಾರತೀ ಸ್ವಾಮಿಗಳನ್ನು ಕುರಿತಾಗಿ ಬರೆಸಿದ ಈ ತಾಮ್ರಶಾಸನದಲ್ಲಿ
‘ಶ್ರೀ ಮದ್ರಾಜಾಧಿರಾಜ ರಾಜಪರಮೇಶ್ವರ ಪ್ರೌಢಪ್ರತಾಪ ಅಪ್ರತಿಮ ವೀರನರಪತಿ ಮಹಿಶೂರ ಇಮ್ಮಡಿ ಶ್ರೀ
ಕೃಷ್ಣರಾಜ ಒಡೆಯರ್‌ರವರ್ರು ಉಭಯ ಕಾವೇರಿ ಮಧ್ಯ ಶ್ರೀರಂಗ ಪಟ್ಟದಲ್ಲೂ ರತ್ನಸಿಂಹಾಸನಾರೂಢರಾಗಿ
ಪೃಥ್ವಿ ಸಂಬ್ರಾಜ್ಯಂಗ್ವೆ ಉರತಿರಲಾಗಿ’ ಎಂದು ಉಲ್ಲೇಖಿಸಲ್ಪಟ್ಟಿದೆ.
ಶೃಂಗೇರಿ ಶಾರದಾಪೀಠ ಮತ್ತು ದಿವಾನ್ ಪೂರ್ಣಯ್ಯ: (ಕ್ರಿ.ಶ. ೧೭೯೯-೧೮೧೧ ಈ ಅವಧಿಯಲ್ಲಿ) ಮೈಸೂರು ಮಹಾರಾಜ
ಮುಮ್ಮಡಿ ಕೃಷ್ಣರಾಜ ಒಡೆಯರು ಅಪ್ರಾಪ್ತರಾದುದರಿಂದ ಪೂರ್ಣಯ್ಯನವರು ರಾಜಪ್ರತಿನಿಧಿಯಾಗಿ ರಾಜ್ಯದ
ಚುಕ್ಕಾಣಿಯನ್ನು ಹಿಡಿದರು. ಪೂರ್ಣಯ್ಯನವರು ದ್ವೈತ ಮತಾವಲಂಬಿಯಾದರೂ ಶೃಂಗೇರಿಯ ೩೦ನೇ
ಜಗದ್ಗುರುಗಳಾದ ತೃತೀಯ ಸಚ್ಚಿದಾನಂದಭಾರತೀ ಸ್ವಾಮಿಗಳು ತಪೋಮಹಿಮೆ ಮತ್ತು ವಿದ್ವತ್ತನ್ನು
ಕಣ್ಣಾರೆ ಕಂಡು ಶೃಂಗೇರಿಯ ಅದ್ವೈತ ಮಠಕ್ಕೆ ಗೌರವದಿಂದ ನಡೆದುಕೊಂಡರು.
‘ಮದುವೆ, ಮುಂಜಿ, ಶುಭ-ಶೋಭನಗಳಲ್ಲಿ ಅಗ್ರ ತಾಂಬೂಲವನ್ನು ಮುಂಚಿತವಾಗಿ ಶೃಂಗೇರಿ ಮಠಕ್ಕೂ ತರುವಾಯ ಶಿವಗಂಗೆ
ಮಠಕ್ಕೂ ಕೊಡುವಂತೆ’
ಪೂರ್ಣಯ್ಯನವರು ಆಜ್ಞಾಪಿಸಿದ್ದನ್ನು ಅವರು ಬೆಂಗಳೂರು ಸುಬೇದಾರ ಮದ್ವರಾಯರಿಗೆ ಬರೆದ ಪತ್ರದಲ್ಲಿ
(ಕ್ರಿ.ಶ.೧೮೦೭-೦೮) ಉಲ್ಲೇಖಿತವಾಗಿದೆ.
ಶೃಂಗೇರಿ ಮಠದಲ್ಲಿ ಸಂರಕ್ಷಿಸಲ್ಪಟ್ಟಿರುವ ದಿವಾನ್ ಪೂರ್ಣಯ್ಯನವರು ಗುರುಗಳಿಗೆ ಬರೆದ
ಸುಮಾರು ೩೮ ಐತಿಹಾಸಿಕ ಪತ್ರಗಳು ಇವರೀರ‍್ವರ ಸಂಬಂಧಗಳ ಅಧ್ಯಯನಕ್ಕೆ ಉಪಕಾರಿಯಾಗಿದೆ Epigraphia Carnatica-11 volume. This record on a golden
crown states that thsi jewelled crown was the gift of krishnaraja vodeya of
mysore to the matha at sringeri)
ಮುಮ್ಮಡಿ ಕೃಷ್ಣರಾಜ ಒಡೆಯರು ಮತ್ತು ಶಾರದಾ ಪೀಠ: ಪೂರ್ಣಯ್ಯನವರ ರಾಜಪ್ರತಿನಿಧಿತ್ವ ಕೊನೆಗೊಂಡ ಮೇಲೆ
ಕ್ರಿ.ಶ.೧೮೧೧ರಲ್ಲಿ ಮುಮ್ಮಡಿಕೃಷ್ಣ ರಾಜ ಒಡೆಯರು ರಾಜ್ಯದ ಅಧಿಕಾರ ವಹಿಸಿಕೊಂಡರು. ಅಧಿಕಾರದ
ಚುಕ್ಕಾಣಿ ಹಿಡಿದ ಕೂಡಲೇ ತೃತೀಯ ಸಚ್ಚಿದಾನಂದಭಾರತೀ ಸ್ವಾಮಿಗಳನ್ನು ಅರಮನೆಗೆ ಆಮಂತ್ರಿಸಿ
ಭವ್ಯಸ್ವಾಗತ ನೀಡಿದರು.
ಶೃಂಗೇರಿ ಜಗದ್ಗುರುಗಳಾದ ತೃತೀಯ ಸಚ್ಚಿದಾನಂದ ಭಾರತೀ, ದ್ವಿತೀಯ ಅಭಿನವ ಸಚ್ಚಿದಾನಂದ ಭಾರತೀ ಮತ್ತು ಅಷ್ಟಮ ನೃಸಿಂಹಭಾರತೀ ಸ್ವಾಮಿಗಳು ಮುಮ್ಮಡಿ
ಕೃಷ್ಣರಾಜ ಒಡೆಯರ ಸಮಕಾಲೀನರಾಗಿದ್ದರು.
ದ್ವಿತೀಯ ಅಭಿನವ ಸಚ್ಚಿದಾನಂದ ಭಾರತೀ ಸ್ವಾಮಿಗಳ
ಪಟ್ಟಾಭಿಷೇಕಕ್ಕೆ ಗುರುಗಳಿಗೆ ಒಂದು ಸಾವಿರ ವರಹಗಳು, ಬೆಳ್ಳಿಯ ಪೀಠ ಮತ್ತು ಪಾದುಕೆಗಳನ್ನು ಸಮರ್ಪಿಸುವಂತೆ ಆಜ್ಞಾಪಿಸಿದ್ದು ಮಹಾರಾಜರು ನಗರ
ಫೌಜುದಾರ ಸರ್ವೋತ್ತಮ ರಾಯನಿಗೆ ಬರೆದ ನಿರೂಪದಿಂದ ತಿಳಿದು ಬರುತ್ತದೆ.
ನೃಸಿಂಹಭಾರತೀ ಸ್ವಾಮಿಗಳು ೧೮೨೮ರಲ್ಲಿ ಮೈಸೂರಿಗೆ ಆಗಮಿಸಿದ್ದಾಗ ಶಾರದಾಂಬಾ ಮತ್ತು ಚಂದ್ರಮೌಳೇಶ್ವರ
ಪೂಜೆ ಮತ್ತು ದೀಪೋತ್ಸವಗಳಿಗಾಗಿ ಮುಮ್ಮಡಿ ಕೃಷ್ಣರಾಜರು ಬೆಳವಾಡಿ, ಲಿಂಗವಳ್ಳಿ ಮತ್ತು ಶಿರಕರಡಿ ಗ್ರಾಮಗಳನ್ನು ಮಠಕ್ಕೆ ದಾನ ಮಾಡಿದ ವಿಷಯವು ಮಠದ ಕಡತದಲ್ಲಿ
ದಾಖಲಾಗಿರುವುದನ್ನು ಒಂಖ-೧೯೧೬ ನೇ ಸಂಪುಟದಲ್ಲಿ ಕಾಣಬಹುದು.
ಮುಮ್ಮಡಿ ಕೃಷ್ಣರಾಜ ಒಡೆಯರು ಬೇರೆ ಬೇರೆ ಮಠಗಳು ಶೃಂಗೇರಿ
ಪೀಠಕ್ಕೆ ಅಧೀನವಾಗಿರುವಂತೆ ಆಜ್ಞೆ ಮಾಡಿ ಪ್ರಾಚೀನವಾದ ಶೃಂಗೇರಿ ಮಠದ ಸರ್ವಶ್ರೇಷ್ಠತೆಯನ್ನು
ಮಾನ್ಯ ಮಾಡಿದರು. ಶ್ರೀಮ್ಮಹಾರಾಜ ಮುಮ್ಮಡಿ ಕೃಷ್ಣರಾಜರು ಶೃಂಗೇರಿಯ ಅಷ್ಟಮ ನರಸಿಂಹಭಾರತೀ
ಗುರುಗಳಿಗೆ ಬಹದಾಕಾರದ, ಸುಂದರವಾದ ಬಂಗಾರದ ಪಲ್ಲಕ್ಕಿ (ಸುವರ್ಣಾಂದೋಳಿಕ)ಯನ್ನು
ಗುರುಗಳು ಉತ್ಸವದಲ್ಲಿ ಉಪಯೋಗಿಸಲೆಂದು ಗುರುಕಾಣಿಕೆಯಾಗಿ ಸಮರ್ಪಿಸಿದುದು ೧೮೫೪-ಜುಲೈ ೨೬ರಂದು
ಪಲ್ಲಕ್ಕಿಯ ಒಳಭಾಗದಲ್ಲಿ ಬರೆಸಲ್ಪಟ್ಟ ಶಾಸನದಿಂದ ವೇದ್ಯವಾಗುತ್ತದೆ. (ಎಪಿಗ್ರಾಫಿಯಾ
ಕರ್ನಾಟಿಕಾ-೧೧ನೇ ಸಂಪುಟ) ಈ ಪಲ್ಲಕ್ಕಿಯನ್ನು ಇಂದಿಗೂ ಶಾರದಾ ಶರನ್ನವರಾತ್ರಿ ಉತ್ಸವ ಹಾಗೂ
ವಿಶೇಷ ಸಂದರ್ಭಗಳಲ್ಲಿ ಶೃಂಗೇರಿ ಜಗದ್ಗುರುಗಳು ಅಲಂಕರಿಸುತ್ತಾರೆ.
ಸ್ವತಃ ಕವಿಗಳೂ, ಘನ ವಿದ್ವಾಂಸರು ಆಗಿದ್ದ ಮುಮ್ಮಡಿ ಕೃಷ್ಣರಾಜ ಪ್ರಭುಗಳು ತಾವು ರಚಿಸಿದ ಶ್ರೀ ನರಸಿಂಹಭಾರತೀ
ಅಷ್ಟೋತ್ತರ ಶತನಾಮಾವಳಿಯಲ್ಲಿ ‘ಪ್ರತಿಜ್ಞಾರ್ಥ ಸಾಧಕಃ’ ಎಂಬ ಅನ್ವರ್ಥ ವಿಶೇಷಣವನ್ನು ಅಲಂಕಾರ ಪ್ರಾಯವಾಗಿ
ಹೇಳಿರುವರು.
ಶೃಂಗೇರಿಯ ಇನ್ನೊಂದು ತಾಮ್ರಶಾಸನವು ‘ವಿದ್ಯಾ ನಗರ
ಮಹಾರಾಜಧಾನಿ’, ‘ಕರ್ನಾಟಕ ಸಿಂಹಾಸನ ಪ್ರತಿಷ್ಠಾಪನಾಚಾರ್ಯ’ ಎಂಬ ಶೃಂಗೇರಿ ಜಗದ್ಗುರುಗಳ ಬಿರುದಾವಳಿಗಳಿಂದ
ಪ್ರಾರಂಭವಾಗಿದ್ದು ಅಭಿನವ ಸಚ್ಚಿದಾನಂದಭಾರತೀ ಗುರುಗಳಿಗೆ ಮುಮ್ಮಡಿ ಕೃಷ್ಣರಾಜ ಒಡೆಯರು ಬರೆಸಿದ
ದಾನಶಾಸನವಾಗಿದೆ. ಇದರಲ್ಲಿ ‘ಮಹಿಶೂರ ಕಂಠೀರವ ನರಸಿಂಹರಾಜ ಒಡೆಯರೈಯ್ಯನವರ ಪೌತ್ರರಾದ, ಕೃಷ್ಣರಾಜ ಒಡೆಯರೈಯ್ಯನವರ ಪುತ್ರರಾದ ಕೃಷ್ಣರಾಜ ಒಡೆಯರೈಯ್ಯನವರು ಬರಿಶಿಕೊಟ್ಟ ಭೂದಾನದ
ತಾಮ್ರಶಾಸನ’ ಎಂಬುದಾಗಿ ಬರೆಯಲಾಗಿದ್ದು, ಮುಮ್ಮಡಿ ಕೃಷ್ಣರಾಜದ ಸಹಿಯಿಂದ ಕೊನೆಗೊಳ್ಳುತ್ತದೆ.
ಇದೇ ರೀತಿ ಶೃಂಗೇರಿ ಮಠಕ್ಕೆ ಮುಮ್ಮಡಿ ಕೃಷ್ಣರಾಜ ಒಡೆಯರ
ಮಹಾರಾಣಿ ಚಂದ್ರವಿಲಾಸ ಸನ್ನಿಧಾನರವರು ಚಿನ್ನದ ಪಾನ್‌ದಾನ್‌ನ್ನು ಅರ್ಪಿಸಿರುತ್ತಾರೆ.
ಮಹಾರಾಣಿ ಸುಮುಖ ತೊಟ್ಟಿ ಸನ್ನಿಧಾನವು ಬೆಲೆ ಬಾಳುವ
ಕೆಂಪುಗಳನ್ನೊಳಗೊಂಡ ಬಂಗಾರದ ಬಟ್ಟಲನ್ನೂ, ಮದನವಿಲಾಸ ಸನ್ನಿಧಾನವು ವಜ್ರದ
ಹರಳುಗಳಿಂದ ಅಲಂಕೃತವಾದ ಬಂಗಾರದ ಬಟ್ಟಲನ್ನು ಕೃಷ್ಣವಿಲಾಸ ಸನ್ನಿಧಾನವು ಬೆಳ್ಳಿಯ ಬಟ್ಟಲನ್ನೂ
ಜಗದ್ಗುರುಗಳವರಿಗೆ ಅರ್ಪಿಸಿರುತ್ತಾರೆಂದು ಎಫಿಗ್ರಾಪಿಯಾ ಕರ್ನಾಟಿಕಾ ೧೧ನೇ ಸಂಪುಟದಲ್ಲಿ
ದಾಖಲಾಗಿದೆ.
ಮುಮ್ಮಡಿ ಕೃಷ್ಣರಾಜ ಒಡೆಯರಿಂದ ಶೃಂಗೇರಿಗೆ ಗುರು ಕಾಣಿಕೆಯಾಗಿ ಅರ್ಪಿಸಲ್ಪಟ್ಟ Epigraphia
Carnatica-11 volume. This record on a golden crown states that thsi jewelled crown
was the gift of krishnaraja vodeya of mysore to the matha at sringeri)
ಮೈಸೂರು
ಸಂಸ್ಥಾನದ ರಾಜಲಾಂಛನ ಗಂಡಭೇರುಂಡ ಮತ್ತು ಶೃಂಗೇರಿ ಮಠದ ಲಾಂಛನವೂ ಜ್ಞಾನದ ಪ್ರತೀಕವೂ ಆದ
ಹಂಸಪಕ್ಷಿಯ ಚಿನ್ಹೆಯನ್ನೊಳಗೊಂಡಿರುವ ಸುಂದರವಾದ ವಜ್ರಖಚಿತ ಸ್ವರ್ಣಕಿರೀಟವು ಶೃಂಗೇರಿಯ ದಸರಾ
ದರ್ಬಾರ್ ಸಮಯದಲ್ಲಿ ಅಂದಿನಿಂದ ಇಂದಿನವರೆಗೂ ಇಲ್ಲಿನ ಗುರುಗಳಿಂದ ಧರಿಸಲ್ಪಡುತ್ತಿದ್ದು
ಇತಿಹಾಸವನ್ನು ಸಾರುತ್ತಿದೆ.
ಮುಮ್ಮಡಿ ಕೃಷ್ಣರಾಜ ಒಡೆಯರ ಆಸ್ಥಾನ ವಿದ್ವಾಂಸ ಕುಣಿಗಲ್
ರಾಮಾಶಾಸ್ತ್ರಿಗಳ ಪುತ್ರ ಶಿವಸ್ವಾಮಿ ಶೃಂಗೇರಿಯ ೩೩ನೇ ಜಗದ್ಗುರುಗಳಾದ ಘಟನೆ ಶೃಂಗೇರಿ ಮಠ ಮತ್ತು
ಮೈಸೂರು ಸಂಸ್ಥಾನದ ನಿಕಟಪೂರ್ವ ಬಾಂಧವ್ಯ, ಅನ್ಯೋನ್ಯತೆಗೆ ಸಾಕ್ಷೀಭೂತವಾಗಿ
ಪರಿಣಮಿಸಿತು. (ಲ.ನ. ಶಾಸ್ತ್ರಿ-‘ಅಭಿನವ ಶಂಕರಾಲಯ’)
ಕುಣಿಗಲ್ ರಾಮಾಶಾಸ್ತ್ರಿಗಳು ತಮ್ಮ ವಿದ್ವತ್ಪೂರ್ಣ
ಪಾಂಡಿತ್ಯದಿಂದ ಮುಮ್ಮಡಿ ಕೃಷ್ಣರಾಜ ಒಡೆಯರ ರಾಜಸಭೆಯಲ್ಲಿ ಅಗ್ರಗಣ್ಯರೆನಿಸಿದ್ದರು.
ರಾಮಾಶಾಸ್ತ್ರಿಗಳ ಪುತ್ರ ಶಿವಸ್ವಾಮಿಯ ಸನ್ಯಾಸ ಸ್ವೀಕಾರದ ಹಿಂದಿನ ದಿನ ಮಹಾರಾಜರು ಶೃಂಗೇರಿ
ಪೀಠವನ್ನುಲಂಕರಿಸಲಿರುವ ಈ ಪುಟ್ಟ ಬಾಲಕನನ್ನು ತನ್ನ ತೊಡೆಯ ಮೇಲೆ ಕೂರಿಸಿಕೊಂಡು ‘ಇಂದು ಈ ಬಾಲಕ
ನಮ್ಮ ತೊಡೆಯ ಮೇಲೆ ಪವಡಿಸಿದ್ದಾನೆ. ನಾವೆಲ್ಲರೂ ಅವರಿಗೆ ನಮಸ್ಕರಿಸಬೇಕಾಗುತ್ತದೆ’ ಎಂದು ಉದ್ಗರಿಸಿದ್ದರು. ೧೮೬೬ರಲ್ಲಿ ಮುಮ್ಮಡಿ ಕೃಷ್ಣರಾಜರ
ಉಪಸ್ಥಿತಿಯಲ್ಲಿ ಮೈಸೂರು ಅರಮನೆಯ ಲಕ್ಷ್ಮೀರಮಣಸ್ವಾಮಿ ದೇವಾಲಯದಲ್ಲಿ ವೈಭವೋಪೀತವಾಗಿ ಗುರುಗಳು
ಸನ್ಯಾಸಾಶ್ರಮ ಸ್ವೀಕಾರ ನೆರವೇರಿತು.
ಮುಮ್ಮಡಿಕೃಷ್ಣ ರಾಜ ಒಡೆಯರು ಅಷ್ಟಮ ನರಸಿಂಹಭಾರತೀ ಗುರುಗಳವರಿಗೆ
ನೀಡಿದ ಭಿನ್ನವತ್ತಳೆಯಲ್ಲಿ ತಮ್ಮನ್ನು ಗುರುಗಳ ‘ಚರಣ ಸೇವಕ’ ಎಂದು ಹೇಳಿಕೊಂಡಿರುವುದು ಗುರು-ಶಿಷ್ಯ ಅನ್ಯೋನ್ಯತೆಗೆ ಹಿಡಿದ
ಕನ್ನಡಿಯಾಗಿದೆ.
ಪ್ರಸ್ತುತ ಮೈಸೂರು ಅರಮನೆಯಲ್ಲಿರುವ ಮೈಸೂರು ಶೈಲಿಯ
ಕಲಾಕೃತಿಯು ಉಗ್ರನರಸಿಂಹಭಾರತೀ ಸ್ವಾಮಿಗಳಿಂದ ಮುಮ್ಮಡಿ ಕೃಷ್ಣರಾಜ ಒಡೆಯರು ಶಿವಗೀತೆಯ
ರಹಸ್ಯವನ್ನು ಬೋಧಿಸಲ್ಪಡುತ್ತಿರುವ ಘಟನೆಯನ್ನು ತಿಳಿಸುತ್ತದೆ.
ಖeಜಿ ಮೈಸೂರು ಮಹಾರಾಜ ಜಯಚಾಮರಾಜ ಒಡೆಯರು
ನವದೆಹಲಿಯ ಶಂಕರ ಮಠದ ಶಂಕುಸ್ಥಾಪನಾ ಸಮಾರಂಭದಲ್ಲಿ (೧೯೬೬) ಮಾಡಿದ ಭಾಷಣ ಶೃಂಗೇರಿ ಮಠದ ಸವನೀರ್- There has been from
a long time close and cordial relationship between the royal dynasty of Mysore
and swamins of Sringeri. Successive kings of Mysore were privileged to be the disciples of
the Sringeri Seat of religion and learning. Nearly a century ago his highness
Sri Mummadi Krishnaraja Wadiyar Bahaddur accorded a grand receiption to Sri
Narasimha Bharati Swamiji of Sringeri matha and presented to him a valuable
crown. He also dedicated a precious ornament. ‘Naga bharana’ to God
Chandramoulishwara of Sringeri. He had the good fortune of learning
‘Shivageetha’ at the hands of the swami who, on account of his spiritual powers
was known as ‘Ugraswami’
“
ಚಾಮರಾಜ ಒಡೆಯರು ಮತ್ತು ಶೃಂಗೇರಿ ಮಠ: ೧೮೮೫ನೇ ಪಾರ್ಥಿವ ಸಂವತ್ಸರದಲ್ಲಿ ಮೈಸೂರು ಮಹಾರಾಜ
ಜಯಚಾಮರಾಜೇಂದ್ರ ಒಡೆಯರ್‌ರವರು ತಮ್ಮ ದಿವಾನರಾಗಿದ್ದ ಶೇಷಾದ್ರಿ ಅಯ್ಯರ್, ಬ್ರಿಟಿಷ್ ರೆಸಿಡೆಂಟ್ ಮಿಸ್ಟರ್ ಗರ್ಲಿಸ್ಟನ್ ಸಾಹೇಬರು ಮೊದಲಾದ ಪರಿವಾರದೊಡನೆ ಶೃಂಗೇರಿಗೆ
ದಯಮಾಡಿಸಿದರು. ಆಗ ಶೃಂಗೇರಿ ಪೀಠದಲ್ಲಿ ರಾರಾಜಿಸುತ್ತಿದ್ದ (೩೩ನೇ ಗುರುಗಳು) ಸಚ್ಚಿದಾನಂದ
ಶಿವಾಭಿನವ ನರಸಿಂಹಭಾರತೀ ಸ್ವಾಮಿಗಳು ಶೃಂಗೇರಿ ವಿದ್ಯಾರಣ್ಯಸ್ವಾಮಿಗಳಿಂದ ಸ್ಥಾಪಿಸಲ್ಪಟ್ಟ
ಪವಿತ್ರವಾದ ಕರ್ನಾಟಕ ಸಿಂಹಾಸನಾಧಿಪತ್ಯವನ್ನು ಅನುಭವಿಸುತ್ತಲಿರುವ ಮೈಸೂರು ಮಹಾರಾಜರಿಗೆ
‘ರತ್ನಕಿರೀಟಾಧಿಪತ್ಯ’ವನ್ನೂ
ಅನುಭವಿಸುವಂತೆ ಅನುಗ್ರಹಿಸುವುದು ಉಚಿತವೆಂದು ಭಾವಿಸಿ ಶಾರದಾಂಬಾ ಸನ್ನಿಧಿಯಲ್ಲಿ
ಬೊಕ್ಕಸದಲ್ಲಿದ್ದ ಅಪೂರ್ವ ಕಿರೀಟವನ್ನು ತರಿಸಿ ಅಮೃತಮಯವಾದ ತಮ್ಮ ಹಸ್ತಗಳಿಂದ ಮಹಾರಾಜರ
ಶಿರಸ್ಸಿನಲ್ಲಿ ಧಾರಣ ಮಾಡಿಸಿ, ಪ್ರಸ್ತುತ ಮೈಸೂರು ಅರಮನೆಯಲ್ಲಿರುವ
ಹಿಂದೆ ವಿದ್ಯಾರಣ್ಯರಿಂದ ವಿಜಯನಗರದಲ್ಲಿ ಸ್ಥಾಪಿಸಲ್ಪಟ್ಟಿದ್ದ ಪುರಾತನ ಸಿಂಹಾಸನವನ್ನು
ಪ್ರಭುಗಳು ಆರೋಹಣ ಮಾಡತಕ್ಕ ಕಾಲದಲ್ಲಿ ಶ್ರೀರಾಮಚಂದ್ರನಂತೆ ಈ ಕಿರೀಟ ಧರಿಸಿ ಅಲಂಕೃತವಾಗಿ
ಸಿಂಹಾಸನಾರೂಢರಾಗುವುದು ಅವಶ್ಯಕವೆಂದು, ದಯಮಾಡಿಸಿದ್ದ ಮಹಾರಾಜರಿಗೆ ತಿಳಿಸಿ
ಅನುಗ್ರಹಿಸಿದರು. (ಲ.ನ. ಶಾಸ್ತ್ರಿಗಳವರ ಶೃಂಗೇರಿ ಇತಿಹಾಸ ಕುರಿತ ಗ್ರಂಥ.)
ಇಂದಿಗೂ ಮೈಸೂರು ಅರಮನೆಯಲ್ಲಿ ಈ ಕಿರೀಟವು ‘ಶೃಂಗೇರಿ ಕಿರೀಟ’ ಎಂಬ ಹೆಸರಿನಲ್ಲಿ ಪ್ರತಿ ವರ್ಷದ ದಸರಾ ದರ್ಬಾರ್ ಸಮಯದಲ್ಲಿ
ಮೈಸೂರು ರಾಜವಂಶಸ್ಥರಿಂದ ಪೂಜಿಸಲ್ಪಡುತ್ತಿದೆ (ಶೃಂಗೇರಿ ಶಾರದಾಪೀಠ ಮತ್ತು ಮೈಸೂರು ಸಂಸ್ಥಾನ ಗ್ರಂಥ, ಪ್ರಶಾಂತ್ ಶೃಂಗೇರಿ)
೧೮೯೧ರಲ್ಲಿ ನೃಸಿಂಹಭಾರತಿ ಜಗದ್ಗುರುಗಳು ಚಾಮರಾಜ ಒಡೆಯರ
ಅಪೇಕ್ಷೆಯಂತೆ ಮೈಸೂರು ಅರಮನೆ ಸಮೀಪದ ಶ್ರೀ ಚಾಮರಾಜೇಂದ್ರ ಸರಸ್ವತಿ ಪ್ರಸಾದ ಪಾಠಶಾಲೆಯ
ಅಭಿವೃದ್ಧಿಗಾಗಿ ಒಂದು ಶುಭಲಗ್ನದಲ್ಲಿ ವೇದೋಕ್ತ ವಿಧಾನದಿಂದ ವಿದ್ಯಾಗಣಪತಿಯನ್ನು
ಪ್ರತಿಷ್ಠಾಪಿಸಿ, ಪೂಜಿಸಿ ಅನುಗ್ರಹಿಸಿದರೆಂದು ನರಸಿಂಹಭಾರತೀ ಜೀವನ ಚರಿತ್ರೆ
(ಲೇಖಕರು: ನಂಜನಗೂಡು ಶ್ರೀಕಂಠಶಾಸ್ತ್ರಿ)ಯಿಂದ ತಿಳಿಯಬಹುದಾಗಿದೆ.
ನಾಲ್ವಡಿ ಕೃಷ್ಣರಾಜ ಒಡೆಯರು ಮತ್ತು ಶೃಂಗೇರಿಮಠ: ನಾಲ್ವಡಿ ಕೃಷ್ಣರಾಜ ಒಡೆಯರು ಶೃಂಗೇರಿಯ ೩೩ ಮತ್ತು ೩೪ನೇ
ಜಗದ್ಗುರುಗಳ ಸಮಕಾಲೀನರಾಗಿದ್ದರು.
ಸಚ್ಚಿದಾನಂದ ಶಿವಾಭಿನವ ನರಸಿಂಹಭಾರತೀ ಸ್ವಾಮಿಗಳು ಕೇರಳ
ರಾಜ್ಯದ ಕಾಲಟಿಯ ಪೂರ್ಣಾನದಿ ತೀರದಲ್ಲಿ ಆದಿಶಂಕರಾಚಾರ್ಯರ ಹುಟ್ಟಿದ ಪುಣ್ಯಸ್ಥಳವನ್ನು ಪತ್ತೆ
ಮಾಡಿ ಅಲ್ಲಿ ಶಾರದಾ ಶಂಕರರ ಭವ್ಯ ಮಂದಿರಗಳನ್ನು ನಿರ್ಮಿಸುವ ಕೈಂಕರ್ಯದಲ್ಲಿ ನಾಲ್ವಡಿ ಕೃಷ್ಣರಾಜ
ಒಡೆಯರ ಮತ್ತು ಮೈಸೂರು ಸಂಸ್ಥಾನದ ದಿವಾನರಾದ ವಿ.ಪಿ. ಮಾಧವರಾವ್ ಮತ್ತು ಶೇಷಾದ್ರಿ ಅಯ್ಯರ್‌ರವರ
ಪಾತ್ರ ಮಹತ್ತರವಾದುದು.
೧೯೧೦ರಂದು ಕೇರಳದ ಕಾಲಟಿಯಲ್ಲಿ ಆದಿಶಂಕರ ಮತ್ತು ಶಾರದಾಂಬಾ
ದೇವಾಲಯದ ಕುಂಬಾಭಿಷೇಕವು ಜರುಗಿತು. ಈ ಶುಭಸಂದರ್ಭದಲ್ಲಿ ನರಸಿಂಹಭಾರತೀ ಜಗದ್ಗುರುಗಳು ನಾಲ್ವಡಿ
ಕೃಷ್ಣರಾಜ ಒಡೆಯರಿಗೆ ‘ಧರ್ಮಮೂಲ’ ಎಂಬ ಬಿರುದನ್ನು ಅನುಗ್ರಹಿಸಿದರೆಂದು ಗುರುಗಳು ಜೀವನಚರಿತ್ರೆಯ ಗ್ರಂಥ (ಲೇಖಕ: ನಂಜನಗೂಡು
ಶ್ರೀಕಂಠಶಾಸ್ತ್ರಿ)ದಿಂದ ತಿಳಿದುಬರುತ್ತದೆ.
೧೯೧೨ರಲ್ಲಿ ಚಂದ್ರಶೇಖರಭಾರತೀ ಸ್ವಾಮಿಗಳು ಶೃಂಗೇರಿ ಪೀಠದ
೩೪ನೇ ಗುರುಗಳಾಗಿ ಪಟ್ಟಾಭಿಷಕ್ತರಾದರು. ಈ ಗುರುವರ್ಯರು ೧೯೧೬ರಲ್ಲಿ ತಮ್ಮ ಗುರುಗಳಾದ
ನರಸಿಂಹಭಾರತೀ ಗುರುಗಳ ಸಮಾಧಿ ಆಲಯದ ಕುಂಬಾಭಿಷೇಕವನ್ನು ಶೃಂಗೇರಿಯಲ್ಲಿ ನೆರವೇರಿಸಿದ
ಸಂದರ್ಭದಲ್ಲಿ ನಾಲ್ವಡಿ ಕೃಷ್ಣರಾಜರು ಹಾಜರಿದ್ದರು.
ಮಹಾರಾಜರ ಮತ್ತು ಶಿಷ್ಯರ ವಿಶೇಷ ಆಮಂತ್ರಣವನ್ನು ಮನ್ನಿಸಿ ೧೯೨೪ರಲ್ಲಿ ಚಂದ್ರಶೇಖರಭಾರತೀ
ಸ್ವಾಮಿಗಳು ಮೈಸೂರಿಗೆ ಭೇಟಿ ಕೊಟ್ಟು ನಾಲ್ವಡಿ ಕೃಷ್ಣರಾಜ ಒಡೆಯರ ಸಹಾಯದಿಂದ ನರಸಿಂಹಭಾರತೀ
ಗುರುಗಳ ಹುಟ್ಟಿದ ಸ್ಥಳವಾದ ಈಗಿನ ಅಭಿನವಶಂಕರಾಲಯದಲ್ಲಿ ಭವ್ಯವಾದ ಗುರುಗಳ ಶಿಲಾಮೂರ್ತಿಯನ್ನು
ಪ್ರತಿಷ್ಠಾಪಿಸಿದರು. prof. A.V. Narasimhamurthy
)
ಜಯರಾಮರಾಜೇಂದ್ರ ಒಡೆಯರು ಮತ್ತು ಶೃಂಗೇರಿ ಮಠ: “During the reign of
Jagadguru Sri.Sri. Abhinava Vidyateertha Swamji, who was the 35th Acharya of
the sringeri sharadapeetam and who shone as a great yogi and a great scholar,
there were innumerable occasions when the Maharaja of Mysore Sri.
Jayachamarajendra Wadiyar sought the blessings of His Holiness”-Article by Sri.
Ramaswamy IAS published in Mysore Shankaramath ‘Guruvandana-2002’)
ಮೈಸೂರು ಸಂಸ್ಥಾನದ ಕಟ್ಟಕಡೆಯ ರಾಜರಾದ ಜಯಚಾಮರಾಜೇಂದ್ರ
ಒಡೆಯರು ತಮ್ಮ ಪೂರ್ವಿಕರು ಹಾಕಿಕೊಟ್ಟ ಸತ್‌ಸಂಪ್ರದಾಯವನ್ನು ಅನುಸರಿಸಿ ಶೃಂಗೇರಿ ಮಠದ ಮೇಲೆ
ಅಪಾರ ಗೌರವಾದರಗಳಿಂದ ನಡೆದು ಕೊಂಡರು. ಶೃಂಗೇರಿಯ ಸಮಕಾಲೀನ ಗುರುಗಳಾಗಿದ್ದ ಅಭಿನವ ವಿದ್ಯಾತೀರ್ಥ
ಸ್ವಾಮಿಗಳ ಅಂತರಂಗದ ಶಿಷ್ಯರಾಗಿದ್ದು ಆಗಾಗ ಶ್ರೀಗಳನ್ನು ಮೈಸೂರಿನ ಅರಮನೆಗೆ ಆಮಂತ್ರಿಸಿ
ಸತ್ಕರಿಸಿರುವುದು ದಾಖಲೆಗಳಿಂದ ತಿಳಿದುಬರುತ್ತದೆ.
೧೯೬೧ರಲ್ಲಿ ದಕ್ಷಿಣ ಭಾರತ ವಿಜಯಯಾತ್ರೆಯನ್ನು ಮುಗಿಸಿ
ಬೆಂಗಳೂರಿಗೆ ಚಿತ್ತೈಸಿದ ಚಂದ್ರಶೇಖರ ಭಾರತೀ
ಗುರುಗಳನ್ನು ಮಹಾರಾಜರು ಭವ್ಯವಾಗಿ ಆಮಂತ್ರಿಸಿದರು. ೧೯೬೨ರಲ್ಲಿ ಮಹಾರಾಜರ ಆಮಂತ್ರಣದ
ಮೇಲೆ ಶ್ರೀಗಳು ಮೈಸೂರಿಗೆ ಯಾತ್ರೆ ಕೈಗೊಂಡಾಗ ಬಂಗಾರದ ಪಲ್ಲಕ್ಕಿಯ ಮೆರವಣಿಗೆಯೊಂದಿಗೆ
ವೈಭವೋಪೇತವಾಗಿ ಪೂರ್ಣಕುಂಭ ಸ್ವಾಗತವನ್ನು ಮಹಾರಾಜರು ಗುರುಗಳಿಗೆ ನೀಡಿ ಅರಮನೆಯಲ್ಲಿ
ಪಾದಪೂಜೆಯನ್ನು ನರೆವೇರಿಸಿ ಈ ಸಂದರ್ಭದಲ್ಲಿ ‘ಊರ್ಮಿಳಾ’ ಎಂಬ ಮರಿ ಆನೆಯೊಂದನ್ನು ಶೃಂಗೇರಿ ಮಠಕ್ಕೆ ದಾನ ಮಾಡಿದುದನ್ನು
ಸ್ಮರಿಸಬಹುದಾಗಿದೆ.
ಶ್ರೀಕಂಠದತ್ತ ನರಸಿಂಹರಾಜ ಒಡೆಯರು: ಜಯಚಾಮರಾಜೇಂದ್ರ ಒಡೆಯರ ಸುಪುತ್ರರಾದ ಶ್ರೀಕಂಠದತ್ತ
ನರಸಿಂಹರಾಜ ಒಡೆಯರು ಪ್ರಸ್ತುತ ಶೃಂಗೇರಿ ಪೀಠದಲ್ಲಿ ರಾರಾಜಿಸುತ್ತಿರುವ ಶ್ರೀ ಭಾರತೀತೀರ್ಥ
ಸ್ವಾಮಿಗಳೊಂದಿಗೆ ಹೊಂದಿರುವ ಬಾಂಧವ್ಯವು ಸುಮಾರು ಎರಡು ಶತಮಾನಕ್ಕಿಂತಲೂ ಮಿಗಿಲಾದ ಶೃಂಗೇರಿ
ಮತ್ತು ಮೈಸೂರಿನ ಚಾರಿತ್ರಿಕ ಸಂಬಂಧವನ್ನು ಬೆಸೆದು, ಪ್ರತ್ಯಕ್ಷ ಪ್ರಮಾಣಕ್ಕೆ ಸಾಕ್ಷೀಕರಿಸುತ್ತದೆ.
೨೦೦೨ ಮತ್ತು ೨೦೦೫ರಲ್ಲಿ ಶ್ರೀ ಭಾರತೀತೀರ್ಥ ಸ್ವಾಮಿಗಳವರು
ಮೈಸೂರು ಮಹಾರಾಜರ ಆಮಂತ್ರಣದ ಮೇರೆಗೆ ಮೈಸೂರಿಗೆ ಭೇಟಿ ಇತ್ತಾಗ ಅನೂಚಾನವಾಗಿ ನಡೆದು ಬಂದ ಅರಮನೆಯ
ಸಂಪ್ರದಾಯದಂತೆ ಮಹಾರಾಜರು ಮತ್ತು ರಾಜಪರಿವಾರವು ಗುರುಗಳನ್ನು ಒಂಟೆ, ಆನೆ, ಅಶ್ವಗಳಿಂದೊಡಗೂಡಿದ ಮೆರವಣಿಗೆಯಲ್ಲಿ, ರಾಜೋಚಿತ ಗೌರವದೊಂದಿಗೆ ಅತ್ಯಂತ ನಾಜೂಕಿನ ಕುಸುರಿ ನೈಪುಣ್ಯತೆಯಿಂದ ಅಲಂಕೃತವಾದ ರಜತ
ರಥದಲ್ಲಿ ಸಕಲ ಮರ‍್ಯಾದೆಯಿಂದ ಕುಳ್ಳಿರಿಸಿ ಪೂರ್ಣಕುಂಭ ಸ್ವಾಗತದಿಂದ ಬರಮಾಡಿಕೊಂಡು, ಮಹಾರಾಣಿಯವರೊಡಗೂಡಿ ಗುರುಗಳಿಗೆ ಪಾದಪೂಜೆ ನೆರವೇರಿಸಿ ಹಲವಾರು ಕಾಣಿಕೆಗಳಿಂದ
ಸತ್ಕರಿಸಿದರು. ಪ್ರತಿ ವರ್ಷ ಶೃಂಗೇರಿ ಗುರುಗಳ ವರ್ಧಂತಿ ಮತ್ತು ಶರನ್ನವರಾತ್ರಿಯ ಸಂದರ್ಭದಲ್ಲಿ
ಇಂದಿಗೂ ಮೈಸೂರು ಸಂಸ್ಥಾನದಿಂದ ಗುರುಕಾಣಿಕೆ ಸಮರ್ಪಿಸಲ್ಪಡುತ್ತದೆ. ಮೈಸೂರಿನ ದಸರಾ ದರ್ಬಾರ್
ಸಂದರ್ಭದಲ್ಲಿ ಶೃಂಗೇರಿಯ ಮಠದ ಪ್ರಸಾದವನ್ನು ಇಂದಿಗೂ ಮಹಾರಾಜರಿಗೆ ಕೊಡಲಾಗುತ್ತದೆ.
ಶೃಂಗೇರಿ ಮಠದ ಪ್ರಸಾದವನ್ನು ದರ್ಬಾರಿನಲ್ಲಿ ಮಹಾರಾಜರಿಗೆ
ಅರ್ಪಿಸುವ ಸಮಯದಲ್ಲಿ ‘ಚಿರಂ ಅಭಿವರ್ಧಿತಂ ಯದು ಸಂತಾನಶ್ರೀ’ ಎಂದು ಹೇಳಲಾಗುತ್ತದೆ.
ಹೀಗೆ ಸುಮಾರು ಎರಡು ಶತಮಾನಕ್ಕಿಂತಲೂ ಮಿಗಿಲಾಗಿ ಶೃಂಗೇರಿ
ಶಾರದಾ ಪೀಠಕ್ಕೂ ಮೈಸೂರು ಸಂಸ್ಥಾನಕ್ಕೂ ಇರುವ ಚಾರಿತ್ರಿಕ ಸಂಬಂಧದ ಕೊಂಡಿಯಾಗಿ ಪ್ರಸ್ತುತ
ಮೈಸೂರು ರಾಜ ವಂಶಸ್ಥರ ಮತ್ತು ಈಗಿನ ಶೃಂಗೇರಿ ಶ್ರೀಗಳು ಬಾಂದವ್ಯವು ಪರಿಣಮಿಸಿದೆ.
ಈ ಲೇಖನದೊಂದಿಗೆ ಲಗತ್ತಿಸಲಾದ ಹಲವಾರು ಛಾಯಾಚಿತ್ರಗಳು ಮೈಸೂರು
ಸಂಸ್ಥಾನ ಮತ್ತು ಶೃಂಗೇರಿ ಮಠದ ಐತಿಹಾಸಿಕ ಮಧುರ ಬಾಂಧವ್ಯಕ್ಕೆ ಮಹತ್ತರವಾದ ಬೆಳಕನ್ನು
ಚೆಲ್ಲುತ್ತದೆ.
ಆಧಾರಸೂಚಿ ಮತ್ತು ಟಿಪ್ಪಣಿಗಳು
೧. ಜೈನ್ ಕೊಠಡಿ, ain
Knowldge Warehouse, John corte ‘Traditional Libraries in India’
American aritcal society, Jan-March 1995
೨. ಜೋತ್ಸ್ನಾ
ಕಾಮತ್, ಕರ್ನಾಟಕ ಶಿಕ್ಷಣ ಪರಂಪರೆ, (ಮುಂಬೈ ೧೯೮೮), ಪುಟ ೩೩.
೩. ವಿದ್ಯಾರಣ್ಯರು
ಶೃಂಗೇರಿ ಮಠವನ್ನು ಯಾವ ರೀತಿಯಲ್ಲಿ ಪ್ರಗತಿ ಪಥಕ್ಕೆ ತಂದರು ಎಂಬ ವಿಚಾರ ಡಾ. ಎ.ಕೆ.
ಶಾಸ್ತ್ರಿಯವರು ವಿವರಿಸಿದ್ದಾರೆ. ನೋಡಿ ಇವರ ಗ್ರಂಥ ಶೃಂಗೇರಿ ಮಠದ ಇತಿಹಾಸ (ಶೃಂಗೇರಿ ೧೯೮೩), ಪುಟ ೩೧-೩೨.
೪. ದಕ್ಷಿಣ
ಭಾರತದ ಶಾಸನ ಸಂಪುಟ ಘಿಘಿಗಿII, ನಂ. ೮೨.
೬. ಅದೇ., ಶೃಂಗೇರಿ ಧರ್ಮ ಸಂಸ್ಥಾನ, ಪುಟ ೨೧೧.
೯. ಕಾಶ್ಯಪ
ಸಂಹಿತೆ ಗ್ರಂಥ ಪ್ರಥಮವಾಗಿ ಸಿಕ್ಕಿದ್ದು ೧೯೦೧ರಲ್ಲಿ. ಇದನ್ನು ನೇಪಾಳ ರಾಜ್ಯದ ಗ್ರಂಥಾಲಯದಲ್ಲಿ
ಮಹಾ ಮಹೋಪಾಧ್ಯಾಯ ಹರಿಪ್ರಸಾದ ಶಾಸ್ತ್ರಿ ಇದನ್ನು ಬೆಳಕಿಗೆ ತಂದರು. ಆದರೆ ಈ ಗ್ರಂಥ ಅಪೂರ್ಣ
ಎಂದು ಹೊರ್ನಾಲಿ ಅಭಿಪ್ರಾಯಪಟ್ಟಿದ್ದಾರೆ. ನೋಡಿ The Royal Asiatic Society, Londan, 1909, ಪುಟ ೧೭೮-೯.
* ‘ # ೬೭೪, ೨೭ನೇ ಮುಖ್ಯರಸ್ತೆ, ೨ನೇ ಹಂತ, ಜೆ.ಪಿ. ನಗರ, ಮೈಸೂರು-೫೭೦೦೦೮.
** ಪ್ರಾಧ್ಯಾಪಕರು, ಇತಿಹಾಸ ವಿಭಾಗ, ಕೆಎಸ್‌ಓಯು, ಮೈಸೂರು-೫೭೦೦೦೬.
ಶ್ರೀ ಜಯಚಾಮರಾಜ ಪ್ರಭುಗಳು ಶ್ರೀ ಸಚ್ಚಿದಾನಂದ ಭಾರತಿ
ಗುರುಗಳಿಗೆ ಬರೆದ ಪತ್ರ.
ಶ್ರೀ ನರಸಿಂಹಭಾರತಿ ಸ್ವಾಮಿಗಳೊಂದಿಗೆ ಯುವ ಚಾಮರಾಜರು
ಮೈಸೂರು ಮಹಾರಾಣಿ ಮದನ ವಿಲಾಸ ಸನ್ನಿಧಾನವು ಶೃಂಗೇರಿಗೆ
ಅರ್ಪಿಸಿದ ವಜ್ರದ ಪಂಚಪಾತ್ರೆ.
ಶ್ರೀ ನರಸಿಂಹಭಾರತಿ ಗುರುವರ್ಯರ ಪೂರ್ವಾಶ್ರಮದ ಸಹೋದರ ಶ್ರೀ
ಲಕ್ಷ್ಮೀನರಸಿಂಹಶಾಸ್ತ್ರಿಗಳು.
ಅರಮನೆ ವಿದ್ವಾಂಸರೂ ಶ್ರೀ ನರಸಿಂಹಭಾರತಿ ಗುರುಗಳ
ಪೂರ್ವಾಶ್ರಮದ ಪಿತೃವರ್ಯರು ಆಗಿದ್ದ ಕುಣಿಗಲ್ ರಾಮಾಶಾಸ್ತ್ರಿಗಳು