Saturday, March 15, 2014

ಹಸ್ತ ಪ್ರತಿಗಳು ಮತ್ತು ಐತಿಹ್ಯ



ಹಸ್ತಪ್ರತಿಗಳ ಬಗೆಗಿನ ನಂಬಿಕೆಗಳು ಮತ್ತು ಆಚರಣೆಗಳು

ಬಹುಕಾಲ ಉಳಿದು ನಿಲ್ಲುವ ಶಿಲೆ, ಸುಟ್ಟಮಣ್ಣು, ಲೋಹಪಟಗಳಂತಹ ಭಾರವಾದ ವಸ್ತುಗಳಲ್ಲದ, ಅಲ್ಪಕಾಲದಲ್ಲಿ ಅಳಿದುಹೋಗುವ ವಸ್ತ್ರಪಟಗಳು. ವೃಕ್ಷಪತ್ರಗಳು ಕಾಗದಗಳಂತಹ ಹಗುರ ವಸ್ತುಗಳ ಮೇಲಿನ ಕೈಬರಹಗಳು ಮಾತ್ರ ಹಸ್ತಪ್ರತಿ ವರ್ಗದಲ್ಲಿ ಸೇರುತ್ತವೆ.
ಹಸ್ತಪ್ರತಿಗಳು ಲೌಕಿಕ-ಅಲೌಕಿಕ ಜೀವನದ ಉತ್ಕರ್ಷೆಗೆ ಅಗತ್ಯ ಎಂಬುದು ಮನಗಂಡಂತಹ ಕೆಲವರು ಅವುಗಳ ಪೋಷಣೆ, ರಕ್ಷಣೆ, ಅಭಿವೃದ್ಧಿ ಕಾರ್ಯ ಮಾಡುವುದು. ಅದಕ್ಕೂ ಮಿಗಿಲಾಗಿ ಅದೂ ಒಂದು ಧಾರ್ಮಿಕವಾದಂತಹ ಕರ್ತವ್ಯ ಎಂದು ತಿಳಿದು ಕಾರ್ಯ ಮಾಡುತ್ತದ್ದರು.
ಶಾತವಾಹನರು, ಗಂಗರು, ಚಾಲುಕ್ಯರು, ರಾಷ್ಟ್ರಕೂಟರು, ಹೊಯ್ಸಳರು, ಮೈಸೂರು, ವಿಜಯನಗರ, ಕೆಳದಿ ಇನ್ನೂ ಮುಂತಾದ ರಾಜಮನೆತನದ ಅರಸರು ಜೈನ, ಶೈವ, ವೀರಶೈವ, ವೈಷ್ಣವ ದಂತಹ ಧರ್ಮಗಳಿಗೆ ಆಶ್ರಯ ನೀಡಿ ಹಸ್ತಪ್ರತಿಗಳ ಪೋಷಣೆ ಮತ್ತು ಅಭಿವೃದ್ಧಿಗೆ ಕಾರಣರಾಗಿದ್ದಾರೆ. ರಾಜರುಗಳ ಸಪ್ತಸಂತಾನ ಕಾರ್ಯಗಳಲ್ಲಿ ಒಂದು ಎನಿಸಿ ಹಸ್ತಪ್ರತಿಗಳ ನಿರ್ಮಾಣ ಅಭಿವೃದ್ಧಿ ಕಾರ್ಯ ಸಮಾವೇಶಗೊಂಡಿದೆ.
ಸಾಹಿತ್ಯ, ಸಮಾಜ, ಭಾಷೆ, ಇತಿಹಾಸ, ಧರ್ಮ, ನಂಬಿಕೆ, ಆಚರಣೆಗಳು, ಆಚಾರ-ವಿಚಾರ, ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ, ವೈದ್ಯ-ವೇದ, ಲೌಕಿಕಶಾಸ್ತ್ರ ಹೀಗೆ ಅನೇಕ ಅಂಶಗಳನ್ನು ಹಸ್ತಪ್ರತಿಗಳು ಒಳಗೊಂಡಿದ್ದು. ಹಸ್ತಪ್ರತಿಗಳು ಹೊಂದಿರುವ ವಿಷಯಗಳ ಕ್ಷೇತ್ರ ವೈವಿಧ್ಯತೆಯ ಅವಕಾಶಗಳನ್ನು ಓದುಗರಲ್ಲಿ ಕಲ್ಪಿಸುವಂತದ್ದಾಗಿದೆ.
ಆಚಾರ್ಯರ ಸ್ವ-ಅಧ್ಯಯನ ಪ್ರವಚನಗಳಿಗಾಗಿ ಮಠಮಂದಿರಗಳ ಧಾರ್ಮಿಕ ಹಸ್ತಪ್ರತಿ ಭಂಡಾರಗಳು ಅಧ್ಯಯನದ ಹವ್ಯಾಸ ಕಾರಣಕ್ಕಾಗಿ ವೈಯಕ್ತಿಕ ಗ್ರಂಥ ಭಂಡಾರಗಳೂ ನಮ್ಮ ದೇಶದಲ್ಲಿ ಸಂವರ್ಧಿಸಿದವು. ಗ್ರಂಥದಾನದಂತಹ ಪುಣ್ಯಕಾರ್ಯ ನೆವದಿಂದ ಹಸ್ತಪ್ರತಿಗಳು ಪೂಜಾಯೋಗ್ಯವಾದವು ಎಂಬುದು ಅವುಗಳ ಕುರಿತ ಅಲೌಕಿಕ ನಂಬಿಕೆ ಆದರೆ. ಕುಮಾರ ವ್ಯಾಸನು ತಾನು ತನ್ನ ಕೈಯ್ಯಾರೆ ಬರೆದ ಮಹಾಭಾರತದ ಪ್ರತಿಯನ್ನು ನೆರೆಹಳ್ಳಿಯ ಶ್ರೀಮಂತರದಲ್ಲಿ ಒತ್ತೆಯಿಟ್ಟಿದ್ದನು ಎಂಬ ನಂಬಿಕೆಗಳು ಹಸ್ತಪ್ರತಿಗಳ ಬಗೆಗಿನ ಲೌಕಿಕ ನಂಬಿಕೆಗಳ ಮಹತ್ವವನ್ನು ಸ್ಪಷ್ಟಪಡಿಸುತ್ತವೆ.
ಹಸ್ತಪ್ರತಿಗಳ ಬಗೆಗೆ ಅನೇಕ ನಂಬಿಕೆಗಳು ಆಚರಣೆಗಳು ಇರುವುದನ್ನು ಅನೇಕ ಸಂಶೋಧಕರು, ವಿದ್ವಾಂಸರುಗಳ ಕ್ಷೇತ್ರಕಾರ್ಯಗಳಿಂದ ತಿಳಿಯಬಹುದು. ಅಂತಹ ಕೆಲವು ನಿದರ್ಶನಗಳೆಂದರೆ;
ವೀರಶೈವರಲ್ಲಿ ಶರಣರ ವಚನಗಳ ಹಸ್ತಪ್ರತಿ ಕಟ್ಟುಗಳನ್ನು ದೇವರು ಎಂದು ಪರಿಭಾವಿಸಿ ಅವುಗಳನ್ನೆ ಪೂಜಿಸುತ್ತಾ ಬಂದ ಕೊಡೇಕಲ್ಲ ಬಸವಣ್ಣನ ಪಂರಪರೆಯೊಂದಿಗೆ ವಿಶೇಷವಾಗಿ ಕಾಲಜ್ಞಾನದ ವಚನಗಳನ್ನೇ ಸಾರುವ ಈ ಪರಂಪರೆಯ ಗುಡಿಗಳಲ್ಲಿ ಪೀಠದ ಮೇಲೆ ಹಸ್ತಪ್ರತಿಗಳನ್ನ ವಸ್ತ್ರದಲ್ಲಿ ಸುತ್ತಿಟ್ಟು ನಿತ್ಯವೂ ಪೂಜಿಸುವ ಕ್ರಮ ಇರುವುದು ತಿಳಿಯುತ್ತದೆ ಎಂಬುದು ವೀರಶೈವ ಹಸ್ತಪ್ರತಿಗಳಿಂದ ತಿಳಿಯುತ್ತದೆ. ಅಲ್ಲದೆ ಬಾಗಲಕೋಟೆ ಜಿಲ್ಲೆಯ ಅಮೀನಗಡದ ಪ್ರಭುರಾಜೇಂದ್ರ ಮಠದಂತಹ ಹಲವು ವೀರಶೈವ ಮಠಗಳಲ್ಲಿ ಇಂದಿಗೂ ಹಸ್ತಪ್ರತಿಗಳನ್ನೇ ಗದ್ದಿಗೆ ಮೇಲಿಟ್ಟು ಪೂಜಿಸಲಾಗುತ್ತಿದೆ. ಹಲವಾರು ಮನೆಗಳ ಜಗುಲಿಯ ಮೇಲೆ/ದೇವರ ಕೋಣೆಗಳಲ್ಲಿ ಹಸ್ತಪ್ರತಿಯ ಗಂಟುಗಳು ದೇವರಸ್ಥಾನ ಅಲಂಕರಿಸಿದ್ದು ಪೂಜೆಗೆ ಒಳಪಟ್ಟಿವೆ.
ಪುರಾಣ ಚರಂತಿಗೆ ಮತ್ತು ವೀರಶೈವ ಮಠಗಳ ಅಧಿಕಾರವನ್ನು ಹಸ್ತಾಂತರ ಮಾಡುವಾಗ ಪ್ರತಿಯೊಬ್ಬ ಸ್ವಾಮಿಗೂ ಮೊದಲ ಕಾಣಿಕೆಯಾಗಿ ಗುರುವಾರದವರು ಹಸ್ತಪ್ರತಿಗಳ ಕಟ್ಟನ್ನೇ ಕೊಡುತ್ತಾರೆ. ಈ ಬಗೆಗೆ ವಿವರಣೆ:
ಮಠಸ್ತರಾದ ಚರಮೂರ್ತಿಗಳಲ್ಲಿ ಚರಂತಿಗೆ ಪುಸ್ತಕ ಅಂದರೆ ಬಸವ ಪುರಾಣ, ಶಿವಪುರಾಣ, ಪ್ರಭುಚನ್ನಬಸವರಾಜೇಂದ್ರರು ಶಿವಮೂರ್ತಿಯಾದ ಸೊನ್ನಲಿಗೆಯ ಸಿದ್ಧರಾಮೇಶರಿಗೆ ರೂಪಿಸಿದ ಗೋಹೇಶ್ವರನ ವಚನಕರಣಹಸುಗೆ ಮಿಶ್ರಾರ್ಪಣ, ಸಿದ್ಧರಾಮೇಶ್ವರ ಮಂತ್ರಗೋಪ್ಯ, ಅಕ್ಕಗಳ ಸೃಷ್ಠಿಯ ವಚನ, ಪ್ರಭುದೇವರ ಸೃಷ್ಠಿಯ ವಚನ, ಸಿದ್ಧೇಶ್ವರರ ವಚನ, ಶೂನ್ಯಸಂಪಾದನೆ ಮುಂತಾದವುಗಳ ಸಂಗ್ರಹಿಸಿದ ಪುಸ್ತಕವ ಸಭಾಮಧ್ಯದಲ್ಲಿ ಆ ಶಿವಾನುಭವ ಚರಂತಿಗೆ ತೆಗೆದುಕೊಂಡು ಗುರುವರನ ಕಡೆಯಿಂದ ಆ ಶಾಸ್ತ್ರವಂ ಶಿಷ್ಯೋತ್ತಮನು ಶಿವಮಂತ್ರ ಗುರುಪ್ರಸಾದ ಮುಖನಾದ ಅಂಗಲಿಂಗ ಸಾಮರಸ್ಯ.ಮುಂತಾಗಿ ಮೂವತ್ತಾರು ತತ್ವಂಗಳು ತಿಳಿದಾತನು ಶಾಸ್ತ್ರವಾ ಗುರುಗಳಿಂ ಶ್ರವಣಗೊಂಡಾತನಾದ ವಿರಕ್ತಗೆ ಶಾಸ್ತ್ರದ ಕಟ್ಟು ಹಿಡಿಯಬೇಕು. ಈತನಿಗೆ ಶಿವಾನುಭವ ಶಾಸ್ತ್ರವೇ ಆಗಲಿ ಪುರಾಣ ಪುಸ್ತಕವೇ ಆಗಲಿ ಇವುಗಳನ್ನು ಗುರುಗಳಾದ ಚರಮೂರ್ತಿಗಳು ಸಭೆಯಲ್ಲಿಕೊಟ್ಟು ತಮ್ಮಾಸನದಲ್ಲಿ ಕುಳ್ಳಿರಿಸಿಕೊಳ್ಳಲು ಆ ಗಣವಾನೆ ಚರಮೂರ್ತಿ ಎನಿಸುವನು.
ಇದು ಹಸ್ತಪ್ರತಿಗಳನ್ನು ಒಂದು ಪೀಳಿಗೆಯಿಂದ ಒಂದು ಪೀಳೆಗೆಗೆ ಸಂರಕ್ಷಿಸುವದು ಒಂದಂಶವಾದರೆ ಇನ್ನೊಂದು ಹಸ್ತಪ್ರತಿಗಳು ಅಲೌಕಿಕವಾದ ಜ್ಞಾನವನ್ನು ಒಳಗೊಂಡಿವೆ ಆದುದರಿಂದ ಅವು ದೇವರ ಸಮಾನವಾದಂತಹವು ಎಂಬ ಅಗಾಧವಾಗಿ ನಂಬಿ ಅದನ್ನು ಇಂದಿಗೂ ಆಚರಿಸಲಾಗುತ್ತಿದೆ.
ಹಸ್ತಪ್ರತಿಗಳ ರಚನೆಯು ಇಹ-ಪರ ಫಲದಾಯಿನಿ ಎಂಬುದು ಅಂದಿನ ಅನೇಕ ಕವಿಗಳ ನಂಬಿಕೆ ಅಂತೆಯೇ ಕವಿಯು ತಾನೇ ಬರೆದಿರಲಿ ಅಥವಾ ಲಿಪಿಕಾರನಿಂದ ಬರೆಯಿಸಿರಲಿ ಕಾವ್ಯದ ಮಂಗಲ ಪದ್ಯದಲ್ಲಿ ತನ್ನ ಕೃತಿ ಅಥವಾ ಪ್ರತಿಗಳನ್ನು ಓದುವಂತವರಿಗೆ ಅನೇಕಾನೇಕ ಫಲಗಳು ದಕ್ಕಬೇಕು ಎನ್ನುವ ಆಶಯಗಳನ್ನು ವ್ಯಕ್ತಪಡಿಸಿರುವುದು ಕಂಡುಬರುತ್ತದೆ.
ಪಂಪ-ವಿಕ್ರಮಾರ್ಜುನ ವಿಜಯಂ
ಕರಮಳ್ಕರ್ತು ಸಮಸ್ತಭಾರತಕಥಾಸಂಬಂಧಮಂ ಭಾಜಿಸಲ್
ಬರೆಯಲ್ ಕೇಳಲೊಡರ್ಚುವಂಗಮಿದರೊಳ್ ತನ್ನಿಷ್ಟವಷ್ಟನ್ನಮು
ತ್ತರಮಕ್ಕುಂ ಧೃತಿ ತುಷ್ಟಿ ಪುಷ್ಟಿ ವಿಭವಂ ಸೌಭಾಗ್ಯಮಿಷ್ಟಾಂಗನಾ
ಸುರತಂ ಕಾತಿಯಗುಂತಿ ಶಾಂತಿ ವಿಭವಂ ಭದ್ರಂ ಶುಭಂ ಮಂಗಳಂ.
ಜನ್ನನ ಅನಂತನಾಥ ಪುರಾಣದ ಅಂತ್ಯದ ಪದ್ಯ ಇದೇ ಭಾವನೆಯನ್ನ ತಿಳಿಸುತ್ತದೆ
ಈ ಕಥೆಯ ಕೇಳ್ದ ಭವ್ಯ
ನೀ ಕಂಮಿದಂ ಬರೆವ ನೆನೆವ ವಂದಿಪ ಜನರುಂ
ಲೋಕಂ ಸ್ತುತಿಯಿಸೆ ನೆಗಳ್ದರ
ನೇಕರು ಸುರಲೋಕ ಮೋಕ್ಷಸುಖಮಂ ಪಡೆದರ್.
ಹಸ್ತಪ್ರತಿಗಳ ಬಗೆಗೆ ಜೈನರಲ್ಲಿರುವ ನಂಬಿಕೆ ಎಂದರೆ; ಜೈನರು ನೋಂಪಿ ಆಚರಣೆಯ ಅಂಗವಾಗಿ ಶಾಸ್ತ್ರದಾನ ಮಾಡುವುದು. ಮುನಿಗಳ ಹಿರಿಯರ ಮರಣಾನಂತರದಲ್ಲಿ ಧಾರ್ಮಿಕ ಕಾವ್ಯ ರಚನೆಗೆ ಪ್ರೇರಕವಾಗುವದು ಪುಣ್ಯಕಾರಕವೆಂದು ಜೈನರು ಭಾವಿಸಿದಂತಿದೆ.
ಗುರು ಜಿನಚಂದ್ರ ಮುನೀಂದ್ರರ
ಪರೋಕ್ಷದೊಳ್ ತಂಮುತಿರ್ವರುಂ ಪೊನ್ನಿಗನಿಂ
ಬರೆಯಿಸಿದರ್ ಸರಳೋರ್ವಿಗೆ
ಪರೆಯಿಸಿದರ್ ಸಲೆ ಪುರಾಣ ಚೂಡಾಮಣಿಯಂ
ಎಂದು ಹೇಳುವ ರನ್ನನು ಅತ್ತಿಮಬ್ಬೆಯ ಕೂಡ ತನ್ನಿಂದ ಇದೇ ರೀತಿ ಅಜಿತಪುರಾಣವನ್ನು ಬರೆಯಿಸಿದಳೆನ್ನುತ್ತಾಳೆ. ನಂತರ
ಶಾಂತಿಪುರಾಣದ ಪರಿಶಿಷ್ಟದಲ್ಲಿನ ಅಜ್ಞಾತ ಕತ್ತೃಕಗಳೆನ್ನಲಾದ ಪದ್ಯಗಳಲ್ಲಿ ಒಂದಾದ.
ಎಸೆಯದೆ ಪೊಳ್ದುಕೆಟ್ಟಪುದು ಶಾಂತಿಪುರಾಣಮದಂ ನೆಗಳ್ದುವೆಂ
ವಸುಧೆಯೊಳೆನ್ನ ತಂದೆಯ ಪರೋಕ್ಷದೊಳೆಂದು ಸಹಸ್ರ ಪುಸ್ತಕ
ಪ್ರಸರಮನತ್ತಿಮಬ್ಬೆ ಪರಮಾದರದಿಂ ಬರೆಯಲ್ಕೆವೇಳ್ದ ಪೆಂಪ
ಸದಳಮದ್ವಿತೀಯ ಮಸಮಂ ಸತಿ ಭಾವಿಸಲೆಯ್ದೆ ಬಣ್ಣಿಪಲ್|
- ಎಂಬ ಪದ್ಯದಲ್ಲಿ ತಂದೆಯ ಪರೋಕ್ಷದಲ್ಲಿಯೇ (ಮರಣಾನಂತರ) ಅತ್ತಿಮಬ್ಬೆ ಶಾಂತಿಪುರಾಣದ ಒಂದು ಸಾವಿರ ಪ್ರತಿಗಳನ್ನು ಬರೆಸಿದಳು. ಎನ್ನಲಾಗಿದೆ.
ಶಿವಮತ ಪ್ರತಿಷ್ಠಾಪನ ಗ್ರಂಥದಲ್ಲಿನ ಕೊನೆಯ ಪದ್ಯವಾದ
ನಿರುತದಿಂದ ತತ್ವಶಿವಮಹಿಷಟ್ಪದವ
ಬರೆದೋದಿ ಅರ್ಥವನು ಕೇಳೇಳಿದೊಡೆ ನವರಸವು
ವರಭೋಗ ಮೋಕ್ಷಗಳು ದೊರಕೊಂಡು ಸುಖವಿಹರು ಸಂತತಂ ಶಿವಶರಣರೂ
ಕರಿ ಸಿಹ್ವಾ ಹುಲಿ ಕರಡಿ ರಾಜಭಯ ಚೋರಭಯ
ಅರಿಮರಣ ಅಪಮೃತ್ಯು ತೋಳ ವೃಶ್ಚಿಕ ವುರಗ
ದುರುಳಯವದೂತರಾಜಿಗಳ ನಿಲ್ಲದೆ ವೋಡುವವು ಪರಮಾತನವು.
-       ಎಂದುಗ್ಗಡಿಸುತ್ತದೆ. . . . . . ಇಲ್ಲಿ ಚೇಳು ಹಾವು ಮೊದಲಾಗಿ ಆನೆ, ಸಿಂಹ, ಕರಡಿ, ರಾಜಭಯ, ಕಳ್ಳತನದ ಭಯ, ಯಮಧೂತರ ಭಯ ಈ ಎಲ್ಲವುಗಳಿಂದ ಪಾರಾಗಲು ಈ ಗ್ರಂಥವನ್ನು ಬರೆದೋದಬೇಕು ಅಷ್ಟೇ ಏಕೆ ಮುಕ್ತಿಯನ್ನು ಪಡೆಯಲು ಕೂಡ ಇದು ಸಹಾಯಕಾರಿಯಾಗಿದೆ.
ಪಿತ್ರಾರ್ಜಿತ ಆಸ್ಥಿಯನ್ನು ಮಕ್ಕಳು ಪಾಲು ಮಾಡಿಕೊಳ್ಳುವ ಸಮಯದಲ್ಲಿ ಮನೆಗಳಲ್ಲಿದ್ದ ಹಸ್ತಪ್ರತಿ ಕಟ್ಟುಗಳನ್ನು ಸಹ ಆಸ್ತಿಯಂತೆ ಸಮಾನವಾಗಿ ಹಂಚಿಕೊಳ್ಳುತ್ತಿದ್ದರು ಹಸ್ತಪ್ರತಿಗಳು ಎಂದರೆ ಅವರ ಪಾಲಿಗೆ ದೇವರು. ಹಸ್ತಪ್ರತಿಗಳು ಇರುವ ಮನೆಗೆ ಏಳಿಗೆ, ಪುಣ್ಯ, ಐಶ್ವರ್ಯ ಎಲ್ಲದೂ ಬರುವುದು ಎಂದು ನಂಬಿ ಅವುಗಳನ್ನು ತಮ್ಮ ತಮ್ಮ ಮನೆಗಳಲ್ಲಿಟ್ಟು ಅವುಗಳು ಸ್ವಲ್ಪವೂ ಮುಕ್ಕಾಗದಂತೆ ಪೂಜಿಸುವ ಆಚರಣೆಗಳೂ ಇವೆ.
ತಾಳೆ ಓಲೆ ಮೆಲಿನ ಬರೆಹ ಒಂದು ಸಾವಿರ ವರ್ಷ ತಾಳಿಕೆ ಬರುತ್ತದೆನ್ನುವ ನಂಬಿಕೆಯಿಂದ ಸಂಪ್ರದಾಯಸ್ಥ ಜನರು ಜಾತಕಗಳನ್ನು ಓಲೆಗರಿಗಳ ಮೇಲೆ ಒಳ್ಳೆಯ ದಿನ, ಮುಹೂರ್ತಗಳಲ್ಲಿ ಬರೆಸುವ ಮೂಲಕ ತಾಳೆಗರಿಗಳಂತೆ ತಮ್ಮ ಆಯುಷ್ಯವೂ ಶಾಶ್ವತವಾಗಿರಲೆಂದು ಬರೆಸಿಡುತ್ತಿದ್ದರು ಮತ್ತು ಈ ಹಸ್ತಪ್ರತಿಗಳನ್ನ ಓದಿಸುವ ಆಚರಣೆಗಳು ಬಹಳ ಪೂಜ್ಯನೀಯವಾಗಿವೆ.
ದಸರಾ ಮಹೋತ್ಸವದ ಆಯುಧ ಪೂಜೆಯ ದಿನದಂದು ಮೈಸೂರಿನಲ್ಲಿ ಮಹಾರಾಜರ ಸಿಂಹಾಸನದ ಮೇಲೆ ಹಸ್ತಪ್ರತಿಗಳನ್ನಿಟ್ಟು ಪೂಜೆ ನಡೆಯುತ್ತದೆ. ಹಸ್ತಪ್ರತಿಗಳು ಪೂರ್ವಿಕರ ಸ್ವತ್ತು ಎಂಬ ಕಾರಣದಿಂದ ಮತ್ತು ಅವುಗಳಿಗೆ ಪೂಜೆ ಸಲ್ಲಿಸುವದರಿಂದ ನಾಡಿನ ಜನತೆಗೆ ವಿದ್ಯೆ, ಬುದ್ಧಿ, ಸಂಪತ್ತು ಸುಖ ಲಭಿಸುವುದು ಎಂಬ ಕಾರಣದಿಂದ ಈ ಆಚರಣೆ ಪ್ರತೀವರ್ಷ ನಡೆಯುತ್ತಿದೆ.
ಹಸ್ತಪ್ರತಿ ಹೊತ್ತಿಗೆಗಳಲ್ಲಿ ಬಂಗಾರ, ನಿಕ್ಷೇಪಗಳಿರುವ ಮಾಹಿತಿ ಸಂಕೇತಗಳಿರುತ್ತವೆ. ತಮ್ಮ ಮನೆತನದಲ್ಲಿ ಈ ಹಸ್ತಪ್ರತಿ ಓದಬಲ್ಲ ಬುದ್ದಿವಂತ ಹುಟ್ಟಿಬರುವನು. ಅದನ್ನು ಬೇರೆಯವರಿಗೇಕೆ ಕೊಡಬೇಕು? ಎಂಬ ಕೆಲ ನಂಬಿಕೆಗಳನ್ನು ಹೊಂದಿದ್ದ ಜನರು ತಮ್ಮ ಮನೆಗಳಲ್ಲಿದ್ದ ಹಸ್ತಪ್ರತಿಗಳನ್ನು ಯಾರಿಗೂ ಕೊಡುತ್ತಿರಲಿಲ್ಲ. (ಮಣಿಹ. ಪುಟ-೭೯)
ಪಂಡಿತರಲ್ಲಿ ಕೆಲವರು ವಿಚಿತ್ರ ಸ್ವಭಾವಗಳಿಂದ ಕೂಡಿದವರಾಗಿದ್ದು, ಜೀವನ ಪರ್ಯಂತ ತನ್ನಲ್ಲಿದ್ದ ಹಸ್ತಪ್ರತಿಗಳ ಸಂಪೂರ್ಣ ಉಪಯೋಗ ಪಡೆದುಕೊಂಡು ತಾನು ಸತ್ತಮೇಲೆ ಆ ಹಸ್ತಪ್ರತಿಗಳು ಬೇರೆಯವರಿಗೆ ಸಿಕ್ಕಿ ಅವುಗಳನ್ನು ಅವರು ಅಪವಿತ್ರಗೊಳಿಸಬಹುದೆಂದು ಕಲ್ಪಿಸಿ ಅಪವಿತ್ರವಾದರೆ ತನ್ನ ಕುಟುಂಬಕ್ಕೆ ಕೇಡು ಉಂಟಾಗುತ್ತದೆ ಎಂದು ನಂಬಿ ಅವುಗಳನ್ನು ಗಂಗೆಯಲ್ಲಿ ಬಿಡುತ್ತಿದ್ದರಂತೆ. (ಮಣೆಹ- ಪು-೮೭)
ಹಸ್ತಪ್ರತಿಗಳಿದ್ದ ಕೆಲ ಮನೆಗಳಲ್ಲಿ ಅವುಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆ ಅವುಗಳನ್ನು ಸರಿಯಾಗಿ ಸಂರಕ್ಷಣೆ ಮಾಡದೇ ಅವು ಮುಕ್ಕಾದರೆ ತಮ್ಮ ಮುಂದಿನ ಪೀಳಿಗೆಗೆ ಕೆಡುಕುಂಟಾಗುತ್ತದೆ. ದೇವರೇ ನಮಗೆ ಕೆಟ್ಟದ್ದು ಮಾಡುತ್ತಾನೆ ಎಂಬ ಭಯಗಳಿಂದ ನದಿಗೋ ಕೆರೆಗಳಿಗೋ ಪೂಜೆ ಮಾಡಿಬಿಡುತ್ತಿದ್ದರು. (ಹಸ್ತಪ್ರತಿ- ಒಂದು ಅಧ್ಯಯನ - ಬಿ.ಕೆ. ಹಿರೇಮಠ ಉಧೃತ - ಪುಟ.೧೩೯)
ಕೆಲವೊಂದು ಸನ್ನಿವೇಶಗಳಲ್ಲಿ ಒಂದಕ್ಕೊಂದಕ್ಕೆ ಸಂಬಂಧಗಳೇ ಇಲ್ಲದಂತಹ ಆಚರಣೆಗಳು ಹಸ್ತಪ್ರತಿಗಳನ್ನ ಕುರಿತ ನಂಬಿಕೆಗಳು ಇವೆ. ಅವುಗಳೆಂದರೆ;
ಅಪೌತ್ರರಿಗೆ, ಅನರ್ಹರಿಗೆ ಹಸ್ತಪ್ರತಿಗಳನ್ನು ಘಳಿಗೆ ಸಮಯಗಳನ್ನು ನೋಡದೆ ದಾನ ನೀಡಿದರೆ ತಮ್ಮ ಆಯುಷ್ಯವನ್ನ ತಾವೇ ಅಲ್ಪಗೊಳಿಸಿಕೊಳ್ಳುವರು ಅಕಾಲ ಮರಣಕ್ಕೆ ಬಲಿಯಾಗುವರು ಎಂಬ ನಂಬಿಕೆಗಳು ಇವೆ.
ಇಷ್ಟಾರ್ಥ ಸಿದ್ದಿಗಾಗಿ ಕರ್ನಾಟಕ ಕಾದಂಬರಿಯನ್ನು ಮತ್ತು ಪಂಚತಂತ್ರದ ಹಸ್ತಪ್ರತಿಗಳನ್ನು ಓದಿಸುವುದು.
ಸಕಲ ಐಶ್ವರ್ಯ ಪ್ರಾಪ್ತಿಗಾಗಿ ಅಮರಕೋಶ, ಶಬ್ದಮಣಿದರ್ಪಣಂ ಕಾಲಜ್ಞಾನದಂತಹ ಹಸ್ತಪ್ರತಿಗಳನ್ನು ಓದಿಸುವುದು.
ಆಯಸ್ಸು ಆರೋಗ್ಯಕ್ಕಾಗಿ ಶೃಂಗಾರ ರಸ ಪ್ರಧಾನವಾದ ಲೀಲಾವತಿ ಹಾಗೂ ಶೂಪಶಾಸ್ತ್ರದ ಹಸ್ತಪ್ರತಿಗಳನ್ನು ಓದಿಸುವುದು.
ಹೀಗೆ ಕೆಲವು ನಂಬಿಕೆಗಳನ್ನ ಕಾಣಬಹುದಾಗಿದೆ.
ಕರ್ಣಾಟ ಭಾರತ ಕಥಾಮಂಜರಿಯ ವಿರಾಟಪರ್ವದಲ್ಲಿ ಪಾಂಡವರು ಸಾಮಾನ್ಯ ಜನರಂತೆ ಇದ್ದ ಕಾಲ. ಆ ಕಾಲದಲ್ಲಿ ಕೃತಿಯ ಪ್ರಕಾರ ವಿರಾಟನ ನಗರವು ಮಳೆ, ಬೆಳೆಗಳು ಸಾಕಷ್ಟು ಆಗಿ ಬಹಳ ಸಮೃದ್ಧಿಯಿಂದ ಕೂಡಿತ್ತು ಎಂಬ ಕಾರಣದಿಂದಲೋ ಏನೋ ಎಂಬಂತೆ ಒಟ್ಟಿನಲ್ಲಿ ಹಸ್ತಪ್ರತಿಯ ವಿರಾಟ ಪರ್ವ ಭಾಗವನ್ನು ಪಠಣ ಮಾಡಿದರೆ ಮಳೆ ಬರುವುದೆಂದು ನಂಬಿ ಅನೇಕ ಊರುಗಳ ದೇವಾಲಯಗಳಲ್ಲಿ ಮಳೆಯು ಬಾರದೆ ಬರಗಾಲ ಬಂದಂತ ಸಮಯಗಳಲ್ಲಿ ಪಠಣ (ಪಾರಾಯಣ)ವನ್ನು ಮಾಡಲಾಗುತ್ತದೆ.
ಉದಾ: ಮಲಪನಗುಡಿಯಲ್ಲಿ ಹದಿನಾಲ್ಕು ದಿನಗಳು ವಿರಾಟಪರ್ವದ ಪಾರಾಯಣದಿಂದ ಮಳೆ ಬಂದಿರುವಂತಹ (ಸಾಕ್ಷಿಗೆ ಅಲ್ಲಿನ ಜನಗಳು ಮತ್ತು ನೋಡಿದವರಿದ್ದಾರೆ. (೨೦೧೦-೧೧) ಪ್ರತೀತಿ ಇದೆ.
ಒಟ್ಟಾರೆ ಈ ನಂಬಿಕೆಗಳು, ಆಚರಣೆಗಳು, ಹಸ್ತಪ್ರತಿ ಸಂರಕ್ಷಣೆಗೆ ಯಾವುದೇ ವಿಧಾನಗಳೇ ಇಲ್ಲದ ಕಾಲದಲ್ಲಿ ಮತ್ತು ಜನರು ದೈವ ಶಕ್ತಿಯೇ ಶ್ರೇಷ್ಠ್ಠ ಆ ಶಕ್ತಿಯ ಮುಂದೆ ಬೇರಾವ ಶಕ್ತಿಯೂ ಸಮನಲ್ಲ ಎಂದು ನಂಬಿದ್ದ ಕಾಲದಲ್ಲಿ ಹಸ್ತಪ್ರತಿ ನಿರ್ಮಾಣಕಾರರೂ ವಿದ್ವಾಂಸರುಗಳೂ ಇಂತಹ ಅನೇಕ ನಂಬಿಕೆ, ಆಚರಣೆಗಳ ಮೂಲಕ ಹಸ್ತಪ್ರತಿಗಳ ರಕ್ಷಣೆಯ ಕಾರ್ಯವನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಮತ್ತು ಒಂದು ಸಮಾಜದ ಸಾಂಸ್ಕೃತಿಕ ಫಲಿತಗಳಾದ ಹಸ್ತಪ್ರತಿಗಳು ಇಲ್ಲಿಯ ವರೆವಿಗೂ ದೊರಕುವಂತೆ ಮಾಡಿರುವುದು ಇವೆಲ್ಲವುಗಳಿಂದ ತಿಳಿಯುತ್ತದೆ.

                                                                  ಮಧು ಎ.ಪಿ.
                                                                ಎಂ.ಎ.ಪಿ‌ಎಚ್.ಡಿ (೩ನೇ ಸೆಮಿಸ್ಟರ್)
                                                                 ಭಾಷಾ ನಿಕಾಯ
                                                   ಕನ್ನಡ ವಿಶ್ವವಿದ್ಯಾಲಯ, ಹಂಪಿ
                                                       ವಿದ್ಯಾರಣ್ಯ
ಪರಾಮರ್ಶನ ಗ್ರಂಥಗಳು
೧.      ಕನ್ನಡ ಹಸ್ತಪ್ರತಿಗಳ ಬಹುಪಠ್ಯೀಯ ನೆಲೆಗಳು - ಡಾ. ವೀರೇಶ ಬಡಿಗೇರ.
೨.      ಮಣೆಹ -
೩.      ಹಸ್ತಪ್ರತಿಗಳು ಒಂದು ಅಧ್ಯಯನ -  ಡಾ. ಬಿ.ಕೆ. ಹಿರೇಮಠ
೪.      ವಿಕ್ರಮಾರ್ಜುನ ವಿಜಯಂ ಎಂಬ
ಪಂಪ ಭಾರತ  -       (ಸಂ) ಟಿ.ವಿ. ವೆಂಕಟಾಚಶಾಸ್ತ್ರಿ.
೫.      ರನ್ನ ಸಂಪುಟ                    -       (ಸಂ) ಹಂಪನಾಗರಾಜಯ್ಯ.
೬.      ಜನ್ನ ಸಂಪುಟ                    -       (ಸಂ) ಸಿ.ಪಿ. ಕೃಷ್ಣಕುಮಾರ್.
        





Wednesday, March 12, 2014

ಇತಿಹಾಸ ಪರಂಪರೆ

ಶಾಸನಗಳು ದೇಶದ ಪರಂಪರೆಯ ಆಸ್ತಿ

                 




ಉಡುಪಿ: ಮಾ, 12: ಕರ್ನಾಟಕದ ಅತ್ಯಂತ ಪ್ರಾಚೀನ ಮೃಣ್ಮಯ ಮೂರ್ತಿಗಳ ಮಾತೃದೇವತಾ ಆರಾಧನಾ ಕೇಂದ್ರವಾಗಿರುವ ಉದ್ಯಾವರ, ಶಿಲ್ಪ ಕಲೆಯ ಉಗಮದ ಆರಂಭಿಕ ಕಲಾಕೇಂದ್ರ. ತುಳುನಾಡಿನ ಪ್ರಾಚೀನ ರಾಜಧಾನಿ. ಪ್ರಾಚೀನ ಶಾಸನ, ಶಿಲ್ಪಗಳ ಅಪರೂಪದ ಕೇಂದ್ರ. ಶಾಸನಗಳು, ಪ್ರಾಚೀನ ಚರಿತ್ರೆಯ ಅಮೂಲ್ಯ ಆಕರಗಳು ಮತ್ತು ದೇಶದ ಪರಂಪರೆಯ ಆಸ್ತಿ, ಎಂದು ಕರ್ನಾಟಕ ಇತಿಹಾಸ ಆಕಾದೆಮಿಯ ಕಾರ್ಯಕಾರಿ ಸದಸ್ಯ, ಶಿರ್ವದ ಮೂಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನ ಪುರಾತತ್ವ ವಿದ್ವಾಂಸ ಪ್ರೊ.ಟಿ.ಮರುಗೇಶಿಯವರು ಬ್ರಹ್ಮಾವರದ ಎಸ್.ಎಂ.ಎಸ್. ಕಾಲೇಜು ಮತ್ತು ಕರ್ನಾಟಕ ಸರ್ಕಾರದ ಪ್ರಾಚ್ಯವಸ್ತು ಮತ್ತು ಪರಂಪರೆ ಇಲಾಖೆ ಉದ್ಯಾವರದ ವೀರಭದ್ರ ದೇವಾಲಯದ ಆವರಣದಲ್ಲಿ ಏರ್ಪಡಿಸಲಾಗಿದ್ದ ಐತಿಹಾಸಿ ಪರಂಪರೆ ಉಳಿಸಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸರ್ಕಾರದ ಪರವಾಗಿ ಭಾಗವಹಿಸಿದ್ದ ಮಂಗಳೂರಿನ ಶ್ರೀಮಂತಿ ಬಾಯಿ ವಸ್ತುಸಂಗ್ರಹಾಲಯದ ಕ್ಯೂರೇಟರ್ ಶ್ರೀ ಶೇಜೇಶ್ವರ್ ನಾಯಕ್ ಮಾತನಾಡಿ, ಯುವಕರು ಕರಾವಳಿಯ ಪ್ರಾಚೀನ ನಿವೇಶನ ಮತ್ತು ಸ್ಮಾರಕಗಳನ್ನು ಗುರುತಿಸಿ, ಇಲಾಖೆಗೆ ಮಾಹಿತಿ ನೀಡಿದರೆ ಸರ್ಕಾರದ ವತಿಯಿಂದ ಐತಿಹಾಸಿಕ ಪ್ರಾಮುಖ್ಯತೆಯುಳ್ಳ ಸ್ಥಳಗಳನ್ನು ರಕ್ಷಿಸುವ ಪ್ರಯತ್ನ ಮಾಡಲಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್.ಎಮ್.ಎಸ್. ಕಾಲೇಜಿನ ಪ್ರಾಶುಂಪಾಲರಾದ ಪ್ರೊ. ನಾರಾಯಣನ್ ಕೆಯವರು ನಾಲ್ಕು ಗೋಡೆಗಳ ಮದ್ಯೆ ಪಡೆವ ಸಾಂಪ್ರದಾಯಿಕ ಶಿಕ್ಷಣಕ್ಕಿಂತ, ಗೋಡೆಗಳಾಚೆ ಪಡೆವ ಪ್ರಾಯೋಗಿಕ ಶಿಕ್ಷಣ ಅತ್ಯಂತ ಮಹತ್ವದ್ದು, ಇಂತಹ ಅವಕಾಶ ಒದಗಿಸಿದ ಪ್ರಾಚ್ಯವಸ್ತು ಇಲಾಖೆ ಅಭಿನಂದನಾರ್ಹ ಎಂದು ತಿಳಿಸಿದರು. ಚರಿತ್ರೆ ವಿಭಾಗ ಮುಖ್ಯಸ್ಥರಾದ ಪ್ರೊ. ರಾಬರ್ಟ್ ರವರು ಪ್ರಾಸ್ಥಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿ ಪರಿಚಯಿಸಿದರು. ಪ್ರೊ. ಪ್ರಶಾಂತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಧನ್ಯವಾದ ಸಮರ್ಪಿಸಿದರು. ಬಳಿಕ ಪ್ರೊ. ಟಿ. ಮುರುಗೇಶಿಯವರು ವಿದ್ಯಾರ್ಥಿಗಳಿಗೆ, ಶಾಸನಗಳನ್ನು ಹೇಗೆ ಪ್ರತಿಮಾಡಲಾಗುತ್ತದೆ ಎಂಬುದನ್ನು ಪ್ರಾಯೋಗಿಕವಾಗಿ ಮಾಡಿ ತೋರಿಸಿದರು.

12/03/2014                     ಪ್ರಾಂಶುಪಾಲರು
ಸ್ಥಳ:  ಉದ್ಯಾವರ           ಎಸ್.ಎಂ.ಎಸ್. ಕಾಲೇಜು, ಬ್ರಹ್ಮಾವರ

Sunday, March 9, 2014

ಕವನ ವಾಚನ

 ಸ್ವರಚಿತ ಕವನ ವಾಚನ- ಎಚ್‌.ಶೇಷಗಿರಿರಾವ್‌


ಕವನ 
 ಮನದ ಅಂಗಳದಿ ಭಾವದಾ ಗಿಡ ಗಂಟಿ
ಕಾಲಿಡಲು ತಾವಿಲ್ಲ ಬರಿ ಮುಳ್ಳುಕಂಟಿ
ನಡುವೆ ನಳ ನಳಿಸುವ ಒಂದೇ ಹೂವು
 ಮೂಡಿ ಬರೆ ಅದೇ ಕವನ
ಏರುತಿರೆ ಹಿಮ ಗಿರಿಶಿಖರ
 ನೆರಳಿಲ್ಲ , ನೀರಿಲ್ಲ
ಇಲ್ಲ ಮರ ಮಣ್ಣು
 ಬಿಳಿ ಬಿಟ್ಟು ಬೇರೆಏನು ಕಾಣದು ಕಣ್ಣು
ಬಿಡುವ ಉಸಿರೂ ಕೂಡಾ ನುಣ್ಣನೆ ಹಿಮಮಣಿ
ಮೂಳೆ ಮುಟ್ಟುವ ಚಳಿಯಲಿ
ಉಕ್ಕುವಾ  ಬಿಸಿ  ನೀರ ಬುಗ್ಗೆ ಕವನ
ಮೇಲೆ ಧಗಧಗಿಸುವ ಭಾನು
ಜ್ವರವೇರಿರುವ ಭೂಮಿ
ಕಣ್ಣೋಟ ಹರಿವವರೆಗ ಮರಳೇ ಮರಳು
ನಡುವೆ ಕಜ್ಜೂರದ ನೆರಳು
ಒಸರುವ ಸಿಹಿ ನೀರ ಒರತೆ
ಅದುವೆ ಕವಿತೆ

 ಹೊರಗೆ ವಾಹನ ಮೈಕುಗಳ ಭರಾಟೆ
ಮನೆಯಲಿ ರೇಡಿಯೋ,ಟಿವಿ , ಮಕ್ಕಳ ಗಲಾಟೆ
ಕಿವಿಗಾಗಬಹುದು ತೂತು
ಎನುವಾಗ ಕೇಳುವ
ಇನಿಯಳ ಪಿಸು ಮಾತೆ
ಕವಿತೆ.
ತಾಯ ಮಡಿಲಿನ ಹಸುಳೆ
ಮೂಡದಿಹ ಹಾಲುಹಲ್ಲು,
ಜಾರುತಿರೆ ಜೊಲ್ಲು
ಅರೆ ಬಿರಿದ ಅಧರ
 ಹೂವಿನ ಎಸಳು
ಪಶು, ಪಕ್ಷಿ, ಜಡ ಚೇತನ,
ತನ್ನವರು ಅನ್ಯರು  ಎನದೆ
ಖುಷಿಯಿಂದ ಮಗು
 ತೂರಿಬಿಡುವ ನಗು
ಒಂದು ಸುಂದರ ಕವನ.




Friday, March 7, 2014

ಬೆಂಗಳೂರಿನ ಕುವೆಂಪುನಗರ- ಐತಿಹಾಸಿಕ ಹಿನ್ನೆಲೆ


ಕುವೆಂಪುನಗರ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೀಯ ಭಾಷಣ
              
.
               ಕುವೆಂಪುನಗರ ಒಂದು ವಿಶಿಷ್ಟವಾದ ಪ್ರದೇಶ. ಬೆಂಗಳೂರಿನ ಇತರೆಡೆಗೆ ಇಲ್ಲದ ಒಂದು ಇತಿಹಾಸ ಇದಕ್ಕಿದೆ. ಇಂದು ಬೆಂಗಳೂರಿನ ಪ್ರಮುಖ ಭಾಗವಾಗಿರುವ ಈ ಕುವೆಂಪುನಗರ ಹಿಂದಿನ ಬೆಂಗಳೂರಿನ ಗ್ರಾಮಗಳಾಗಿದ್ದ ಭೈರಸಂದ್ರ, ತಾವರೆಕೆರೆ ಹಾಗೂ ಮಡಿವಾಳ ಪ್ರದೇಶಗಳು ಸೇರಿ ರೂಪಿತವಾಗಿರುವ ಭಾಗ. ಮಡಿವಾಳ ಹಿಂದಿನಿಂದಲೂ ಬೆಂಗಳೂರಿಗೆ ಆಗ್ನೇಯದ ಬಾಗಿಲು. ತಮಿಳುನಾಡಿನಿಂದ ಬರುತ್ತಿದ್ದ ವರ್ತಕರು ಈ ಪ್ರದೇಶದಲ್ಲಿ ವಸತಿ ಮಾಡಿ ನಂತರ ಬೆಂಗಳೂರು ಪೇಟೆಗೆ ಪ್ರವೇಶಿಸುತ್ತಿದ್ದರು. ಶಾಲಿವಾಹನ ಶಕ ೧೭೧೫ರಲ್ಲಿ (ಕ್ರಿ.ಶ. ೧೭೯೩) ಆಟುಪಾಕಂ ಅಂಣಾಮಲೆ ಮೊದಲಿಯಾರರ ಧರ್ಮಪತ್ನಿ ವೆಂಕಟಮ್ಮ ಛತ್ರ ಕಟ್ಟಿಸಿದ್ದರು. ಇವರ ದೊಡ್ಡ ಮಗನೇ ರಾಯ ಬಹದ್ದೂರು ರತ್ನಸಭಾಪತಿ ಮೊದಲಿಯಾರ್ ಎಂಬುವವನು. ಹಳೆಯ ಪೊಲೀಸ್ ಠಾಣೆ ಈ ಛತ್ರದಲ್ಲಿಯೇ ಇತ್ತು. ಈಗ ಈ ಪ್ರದೇಶವೂ ಸಾಕಷ್ಟು ಪ್ರಗತಿ ಹೊಂದಿದೆ. ಬೆಂಗಳೂರಿನ ವ್ಯಾಪಾರಾಭಿವೃದ್ಧಿಯಲ್ಲಿ ಈ ಊರಿನ ಪಾತ್ರ ಗಣನೀಯವಾದುದ್ದು.


               ಹಾಗೆಯೇ ತಾವರೆಕೆರೆ ಇಂದು ಗುರುತಿಸಲಾರದಷ್ಟು ಬದಲಾಗಿದ್ದರೂ ಆ ಗ್ರಾಮದ ಮಧ್ಯೆ ಇರುವ ಹಳೆಯ ಮರ ತನ್ನ ಇರವನ್ನು ಸಾರುತ್ತಿದೆ. ಇದಕ್ಕಿಂತ ಮುಖ್ಯವಾಗಿ ಮಡಿವಾಳದ ಅಸ್ತಿತ್ವಕ್ಕೆ ಇದರದೇ ಕೊಡುಗೆ ಇದೆ. ಮಡಿವಾಳ ಹಿಂದಿನ ಕಾಲದಲ್ಲಿ ತಾವರೆಕೆರೆಯ ಭಾಗವೇ ಆಗಿತ್ತು.
               ಐತಿಹಾಸಿಕವಾಗಿ ತಾವರೆಕೆರೆ ಬೆಂಗಳೂರಿನ ಇತಿಹಾಸ ರಚಿಸುವಲ್ಲಿ ಬಹು ಮುಖ್ಯಪಾತ್ರ ವಹಿಸಿದೆ. ಹೊಯ್ಸಳ ರಾಜನೊಬ್ಬನ ಕಾಲದಲ್ಲಿ ಅಂದರೆ ಈ ತಾವರೆಕೆರೆ ಶೆಬಸುಂಉಡೈಯರಿಗೆ (ಸೋಮೇಶ್ವರ ದೇವರಿಗೆ) ವೆಪ್ಪೂರಿನ ಪೆರುಮತ್ತಿಯಾರ್ ಎಂಬುವವನು ವೆಂಗಳೂರಿನ ಪೆರವರಿಯ (ದೊಡ್ಡ ಕೆರೆ) ಕೆಳಗೆ ಎರಡು ಖಂಡುಗ ಭೂಮಿಯನ್ನು ವೇದಕಂಡಿಕಕ್ಕಾಗಿ ಬಿಟ್ಟಂತೆ ಹೇಳಿದೆ. ಈ ದಾನ ಬಹುಶಃ ಖಿಲವಾದಾಗ ಕೂಡಲ್ ಗ್ರಾಮದ ಅಮಾತ್ತಿಯಾರ್ ಎಂಬುವವನು ಇದನ್ನು ನವೀಕರಿಸಿದ್ದಂತೆ ಹೇಳಿದೆ. ಅಂದರೆ ಕ್ರಿ.ಶ.೧೨೪೭ಕ್ಕಿಂತ ಮೊದಲೇ ತಾವರೆಕೆರೆ ಗ್ರಾಮ ಅಸ್ತಿತ್ವದಲ್ಲಿತ್ತು ಎಂಬುದು ದೃಢವಾಗುತ್ತದೆ. ಮುಖ್ಯವಾದ ಸಂಗತಿಯೆಂದರೆ ಬೆಂಗಳೂರಿನ ದೊಡ್ಡ ಕೆರೆಯ ಉಲ್ಲೇಖವಾಗಿರುವುದು.
               ಇಷ್ಟಾದರೂ ಬೆಂಗಳೂರು ಈ ಕಾಲಕ್ಕೆ ಚಿಕ್ಕ ಗ್ರಾಮವಾಗಿಯೇ ಇತ್ತು ಎಂಬುದು ಸ್ಪಷ್ಟವಾಗುತ್ತದೆ. ವೆಪ್ಪೂರ್‌ನಾಡು ಅಥವಾ ಬೇಗೂರು ನಾಡಿಗೆ ಈ ಪ್ರದೇಶ ಸೇರಿತ್ತೆಂಬುದು ಸ್ಪಷ್ಟ. ಇದಕ್ಕೆ ಆಧಾರವಾಗಿ ಈ ಪ್ರದೇಶದಲ್ಲಿ ದೊರೆತಿರುವ ಶಾಸನಗಳಲ್ಲಿ ಕುವೆಂಪುನಗರದ ಭಾಗವಾದ ತಾವರೆಕೆರೆಯು ವಿಜಯನಗರ ರಾಜ್ಯದ ಆರಂಭದವರೆಗೆ ನಿಗರಿಲಿ ಚೋಳಮಂಡಲವೆಂಬ ದೊಡ್ಡಭಾಗದಲ್ಲಿ ರಾಜೇಂದ್ರಚೋಳ ಒಳನಾಡು ಎಂಬ ಚಿಕ್ಕ ಭಾಗವಿತ್ತು. ಈ ನಾಡಿನಲ್ಲಿ ಮಾಸಾಂಡಿನಾಡಿತ್ತು. ಈ ಮಾಸಾಂಡಿನಾಡಿನಲ್ಲಿ ವೆಪ್ಪೂರ್ (ಬೇಗೂರು) ನಾಡಿತ್ತು. ಇದರ ಭಾಗವಾಗಿ ತಾವರೆಕೆರೆ ಇತ್ತು ಹೇಳಿದೆ.
               ಒಂದನೆಯ ಬುಕ್ಕರಾಯನ ಮಗ ವೀರಕೆಂಪಣ (ಕಂಪಣ)ನಿಗೆ ಈ ರಾಜ್ಯ ಸೇರಿತ್ತು. ವೆಪ್ಪೂರು (ಬೇಗೂರು) ತೋಪ್ಪೂರು (ತೋಗೂರು), ಕೂಡಲ್ (ಕೂಡ್ಲು) ಈ ಕಾಲಕ್ಕೆ ಇದರ ಸಮೀಪ ಗ್ರಾಮಗಳಾಗಿದ್ದವು. ಅಂದಿನಿಂದ ಈ ಪ್ರದೇಶದ ರಚನೆಯಲ್ಲಿ ಅಂತಹ ವ್ಯತ್ಯಾಸಗಳೇನೂ ಇರಲಿಲ್ಲ. ಮುಂದಿನದು ಎಲ್ಲರಿಗೂ ತಿಳಿದಿರುವ ಇತಿಹಾಸವೇ.
               ಮುಂದೆ ಕನ್ನಡ ಭಾಷೆ ಕರ್ನಾಟಕಕ್ಕೆ ಸಂಬಂಧಿಸಿದಂತೆ ಚರ್ಚಿಸೋಣ. ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಇದು ನಿರ್ವಿವಾದ. ಈ ಇತಿಹಾಸ ಊಹಾತ್ಮಕವಾದುದಲ್ಲ. ಸ್ಪಷ್ಟ ಐತಿಹಾಸಿಕ ಕುರುಹುಗಳ ಇತಿಹಾಸ. ಇದುವರೆವಿಗೆ ಹಲ್ಮಿಡಿ ಶಾಸನವೇ ಕನ್ನಡದ ಪ್ರಾಚೀನ ಶಾಸನವೆಂದು ತಿಳಿದಿದ್ದೆವು. ಇತ್ತೀಚೆಗೆ ಇದಕ್ಕಿಂತಲೂ ೫೦ ವರ್ಷ ಹಿಂದಕ್ಕೆ ಹೋಗಬಹುದಾದ ಕನ್ನಡ ಶಾಸನದ ಭಾಗವೊಂದು ಪತ್ತೆಯಾಗಿದೆ. ಇದು ಕದಂಬರ ಆರಂಭಕಾಲಕ್ಕೆ ಸೇರಬಹುದಾದ ಶಾಸನ. ಹೀಗಾಗಿ ಇದುವರೆವಿಗೆ ಇದ್ದ ಪ್ರಾಚೀನ ಉಪಲಬ್ದ ಶಾಸನದ ಕಾಲವನ್ನು ನಾವು ಕ್ರಿ.ಶ.೩೭೫ಕ್ಕೆ ಕೊಂಡೊಯ್ಯಬಹುದಾಗಿದೆ. ಚಿತ್ರದುರ್ಗದ ಬೆಟ್ಟದಲ್ಲಿ ಸಿಕ್ಕಿ ಪ್ರಕಟವಾಗಿರುವ ಮೂರು ಅಕ್ಷರದ ಶಾಸನ ಮಯಮ ಎಂಬುದನ್ನು ಕನ್ನಡದ ಹೆಸರೆಂದು ಪರಿಗಣಿಸಿದಲ್ಲಿ ಕನ್ನಡ ಭಾಷೆಯ ಶಾಸನದ ಅಸ್ತಿತ್ವವನ್ನು ಕ್ರಿ.ಶ.೨೫೦ರಷ್ಟು ಹಿಂದಕ್ಕೆ ಕೊಂಡೊಯ್ಯಬಹುದಾಗಿದೆ.
               ಕನ್ನಡ ಭಾಷೆ ಹಾಗೂ ಸಾಹಿತ್ಯದ ಇತಿಹಾಸವನ್ನು ಅಧ್ಯಯನ ಮಾಡುವಾಗ ನಮಗೆ ಒಂದು ಸ್ಪಷ್ಟ ಕಾಲಾನುಕ್ರಮಣಿಕೆ ದೊರೆಯುತ್ತದೆ. ಇಂತಹ ಅಧ್ಯಯನವನ್ನು ಕನ್ನಡ ಭಾಷಾ ಅಧ್ಯಯನಕಾರರು ವೈಜ್ಞಾನಿಕವಾಗಿ ನಡೆಸುತ್ತಾ ಬಂದಿದ್ದಾರೆ. ಕನ್ನಡ ಸಾಹಿತ್ಯ ಚರಿತ್ರೆ ರಚಿಸುವಲ್ಲಿ ಯಾವುದಾದರೂ ಗ್ರಂಥದ ಕಾಲನಿರ್ಣಯ ಮಾಡಬೇಕಾದರೆ ಕಾಲದ ಉಲ್ಲೇಖವಿಲ್ಲದಿದ್ದಲ್ಲಿ ಅದರ ಅಧ್ಯಯನದಿಂದ ದೊರಕುವ ಆಂತರಿಕ ಆಧಾರಗಳಿಂದ ಅದರ ಕಾಲವನ್ನು ಸರಿಸುಮಾರಾಗಿ ಹತ್ತಿರಕ್ಕೆ ಕೊಂಡೊಯ್ಯಲು ಸಾಧ್ಯವಿದೆ. ಇಂತಹ ಅನುಕೂಲ ದಕ್ಷಿಣ ಭಾರತದ ಭಾಷೆಗಳಲ್ಲಿ ಕನ್ನಡ ಭಾಷೆಗಿರುವ ವೈಶಿಷ್ಟ್ಯ. ಕನ್ನಡ ಭಾಷೆಯ ಬೆಳವಣಿಗೆಯಲ್ಲಿ ಪ್ರತಿ ಶತಮಾನದಲ್ಲಿ ಕಾಣಬರುವ ಬದಲಾವಣೆಗಳು, ಅಕ್ಷರಪಲ್ಲಟ ಅಸಗ>ಅಗಸ, ಕಾರಕ್ಕೆ ಕಾರ, ಕಾರ ಕಾರವಾಗಿದ್ದು, ಪರಕೆ>ಹರಕೆ, , ಱಗಳ ಬಳಕೆ ಹಾಗೂ ಕೈಬಿಡುವಿಕೆ, ಕಾಲದಿಂದ ಕಾಲಕ್ಕೆ ಸೇರ್ಪಡೆಯಾದ ಅನ್ಯಭಾಷಾ ಪದಗಳು ಮೊದಲಾದ ಆಧಾರದಿಂದ ವೈಜ್ಞಾನಿಕವಾದ ಅಧ್ಯಯನ ಸಾಧ್ಯವಾಗಿದೆ. ಯಾವುದೇ ಗೊಂದಲಕ್ಕೆ ಆಸ್ಪದವಿಲ್ಲದಂತೆ, ಯಾವುದೇ ಶಾಸನವನ್ನಾಗಲೀ, ಕೃತಿಯನ್ನಾಗಲೀ ಇತರೆ ಭಾಷೆಗಳಂತೆ ಶತಮಾನಗಳ ಅಂತರದಿಂದ ಕಾಲವನ್ನು ಎಳೆದಾಡುವ ಪರಿಸ್ಥಿತಿ ಬಂದಿಲ್ಲ.
ಬೆಂಗಳೂರಿಗೆ ವಲಸೆ: ಇದೊಂದು ಸೂಕ್ಷ್ಮವಾದ ಪ್ರಶ್ನೆ. ವಲಸೆ ಎಂಬುದು ಮಾನವ ಜನ್ಮತಳೆದಾಗಿನಿಂದ ನಡೆದ, ನಡೆಯುತ್ತಿರುವ ನಿರಂತರ ಪ್ರಕ್ರಿಯೆ. ಹೊಟ್ಟೆಪಾಡಿಗಾಗಿ, ನೆಮ್ಮದಿಗಾಗಿ, ರಕ್ಷಣೆಗಾಗಿ, ಬೇರೆಯವರ ದಾಳಿಗಳಿಂದ ರಕ್ಷಿಸಿಕೊಳ್ಳಲು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಮಾನವ ವಲಸೆ ಹೋಗುತ್ತಲೇ ಇದ್ದಾನೆ. ಇದು ಭಾರತ, ಭಾರತದಲ್ಲಿ ಅಂತರ‍್ಗತವಾಗಿರುವ ಕರ್ನಾಟಕ, ಕರ್ನಾಟಕದ ವಿವಿಧ ಪ್ರದೇಶಗಳಿಂದ ಇನ್ನೊಂದು ಪ್ರದೇಶಕ್ಕೆ ಈ ವಲಸೆ ನಡೆಯುತ್ತಲೇ ಇದೆ. ಇದು ನಿರಂತರ ಪ್ರಕ್ರಿಯೆ. ಗ್ರಾಮದಿಂದ ಪಟ್ಟಣಕ್ಕೆ, ಪಟ್ಟಣದಿಂದ ನಗರಗಳಿಗೆ, ನಗರಗಳಿಂದ ಬೇರೆ ಬೇರೆ ದೇಶಗಳಿಗೆ ಖಂಡಾಂತರಗಳಿಗೆ ಈ ವಲಸೆ ನಡೆಯುತ್ತಲೇ ಇದೆ. ಬೆಂಗಳೂರಿಗೂ ಇದು ತಪ್ಪಿದ್ದಲ್ಲ. ಇತಿಹಾಸದಲ್ಲಿ ಉಲ್ಲೇಖವಾಗಿರುವ ರಾಜಮನೆತನಗಳು ಅನೇಕವು ಇಲ್ಲಿನವಲ್ಲ. ಶಾತವಾಹನರು, ಪಲ್ಲವರು, ಚುಟುಕುಲದವರು, ರಾಷ್ಟ್ರಕೂಟರು, ಯಾದವ ವಂಶದ ಅರಸರು, ಅನೇಕ ಪಾಳೆಯಗಾರರು ಹೊರಗಿನವರೇ ಆಗಿದ್ದಾರೆ.
ಬೆಂಗಳೂರಿನ ಈ ಪ್ರದೇಶಕ್ಕೆ ಸಮೀಪವಾಗಿರುವ ಬೇಗೂರನ್ನು ೯-೧೦ನೆಯ ಶತಮಾನದಲ್ಲಿ ಆಳುತ್ತಿದ್ದ ನಾಗತ್ತರ ಎಂಬ ಅರಸ ಮಹಾಬಲಿ ವಂಶದವನು. ಈ ವಂಶದವರು ಕರ್ನಾಟಕದ ಪೂರ್ವಕ್ಕೆ ಈಗಿನ ಉತ್ತರ ತಮಿಳುನಾಡು ಹಾಗೂ ದಕ್ಷಿಣ ಆಂಧ್ರಪ್ರದೇಶದಲ್ಲಿ ಆಳ್ವಿಕೆ ನಡೆಸಿದವರು. ಈ ಮಹಾಬಲಿ ಅಥವಾ ಬಾಣವಂಶದ ಅನೇಕ ಮಾಂಡಳಿಕರು ಬೇಗೂರು ಪ್ರದೇಶದಲ್ಲಿದ್ದರು. ಹೀಗಾಗಿ ಈ ಪ್ರದೇಶ ಅಂದಿಗೇ ನೆರೆಯ ಪ್ರಾಂತ್ಯಗಳೊಂದಿಗೆ ಸಂಪರ್ಕ, ಸಂಬಂಧವನ್ನು ಹೊಂದಿತ್ತು. ಈ ಶಾಸನೋಕ್ತ ಹೆಸರುಗಳಾದ ಇರುಗ, ನಾಗತ್ತರ, ಪೆಗೂರ ಮೊದಲಾದವು ಕನ್ನಡ ಜಾಯಮಾನದ ಹೆಸರುಗಳಲ್ಲ. ಇವರ ನಂತರ ಕರ್ನಾಟಕವನ್ನು ಪ್ರವೇಶಿಸಿದ ಚೋಳರು, ನಂತರ ಹೊಯ್ಸಳರು ಕಾರಣದಿಂದ ಬಂದ ಮಧ್ಯ ತಮಿಳುನಾಡಿನ ತಮಿಳು ಪಂಡಿತರು ಮತ್ತು ಆಡಳಿತಗಾರರು, ವಿಜಯನಗರ ಕಾಲಕ್ಕೆ ಬಂದ ತೆಲುಗು ಮಾತನಾಡುವ ಪಂಡಿತ, ಆಡಳಿತಗಾರ, ಸೈನಿಕ ಮುಂತಾದವರು ಮುಸಲ್ಮಾನ ಅರಸರ ಕಾಲದಲ್ಲಿ ಮುಸಲ್ಮಾನರು, ಮರಾಠರ ಆಡಳಿತ ಕಾಲದಲ್ಲಿ ಮರಾಠರು, ಬ್ರಿಟಿಷರ ಕಾಲದಲ್ಲಿ ವಿದೇಶೀಯರು ಈ ಬೆಂಗಳೂರಿಗೆ ಬಂದಿದ್ದಾರೆ.
ಈ ಪ್ರದೇಶದ ಕನ್ನಡ ಭಾಷೆಯ ಮೇಲೆ ಹೀಗೆ ವಲಸೆ ಬಂದವರ ಪ್ರಭಾವವನ್ನು ನಿಚ್ಚಳವಾಗಿ ಕಾಣಬಹುದು. ಸಾಮಾನ್ಯವಾಗಿ ಮೊದಲ ತಲೆಮಾರಿನ ಸಾಮಾನ್ಯ ಜನ ಸ್ಥಳೀಯರೊಂದಿಗೆ ಹೊಂದಿಕೊಳ್ಳುವುದರಲ್ಲಿ ಸ್ವಲ್ಪ ಸಮಯ ತೆಗೆದುಕೊಂಡರೂ ಅವರ ಮುಂದಿನ ತಲೆಮಾರಿನ ಜನ ಸ್ಥಳೀಯರೇ ಆಗಿಬಿಡುವುದು ವಲಸೆಯ ವಿಶೇಷ. ಪ್ರತ್ಯೇಕತೆ ಕಂಡುಬರುವುದು ಧರ್ಮಗಳಲ್ಲಿ ಮಾತ್ರ. ಒಂದೇ ಧರ್ಮದ ಜನ ಒಂದೆಡೆ ಇದ್ದಲ್ಲಿ ಹೊಂದಾಣಿಕೆಯಲ್ಲಿ ಸುಲಭವಿರುತ್ತದೆ. ಉಳಿದಂತೆ ಕಷ್ಟಕರವಾಗಿರುತ್ತದೆ.
ಬೆಂಗಳೂರಿನ ಬೆಳವಣಿಗೆ : ಕ್ರಿ.ಶ. ೯ನೆಯ ಶತಮಾನದಲ್ಲಿ ಅಂದರೆ ಸುಮಾರು ೧೧೦೦ ವರ್ಷಗಳ ಹಿಂದೆಯೇ ಅಸ್ತಿತ್ವದಲ್ಲಿದ್ದ ಬೆಂಗಳೂರು ಪ್ರದೇಶವು ಕಾಲದಿಂದ ಕಾಲಕ್ಕೆ ಅಲ್ಪ ಸ್ವಲ್ಪ ಬೆಳವಣಿಗೆಯನ್ನು ತೋರಿಸುತ್ತ ಬಂದಿದೆ. ೧೧೦೦ ವರ್ಷಗಳ ಹಿಂದೆಯೇ ಈ ಊರಿಗೆ ಕೋಟೆ ಇತ್ತೆಂಬ ವಿಷಯ ತಿಳಿಯುವುದರಿಂದ ಇದೊಂದು ಪ್ರಮುಖ ಪಟ್ಟಣವಾಗಿತ್ತೆಂಬುದರಲ್ಲಿ ಸಂದೇಹವಿಲ್ಲ. ವ್ಯವಸಾಯ ಕೇಂದ್ರಿತಪ್ರದೇಶವಾಗಿದ್ದ ಈ ಗ್ರಾಮವು ವಾಣಿಜ್ಯ ಕೇಂದ್ರಿತವಾದದ್ದೇ ೧೬ನೆಯ ಶತಮಾನದಿಂದ ಯಲಹಂಕ ನಾಡಪ್ರಭುಗಳ ಕಾಲದಲ್ಲಿ. ಈ ವಾಣಿಜ್ಯ ಹಾಗೂ ಗೃಹಕೈಗಾರಿಕಾ ಕೇಂದ್ರವಾಗಿದ್ದ ಈ ನಗರ ಟಿಪ್ಪು ಮತ್ತು ಬ್ರಿಟಿಷರ ಕಾಲದಲ್ಲಿ ಮಿಲಿಟರಿ ಚಟುವಟಿಕೆಯ ಕೇಂದ್ರವಾಗಿಯೂ ಮಾರ್ಪಡುತ್ತದೆ. ಶ್ರೀರಂಗಪಟ್ಟಣವನ್ನು ಬ್ರಿಟಿಷರು ಗೆದ್ದ ಮೇಲೆ ಮುಂದೆ ಬ್ರಿಟಿಷ್ ಸೈನ್ಯ ಬೆಂಗಳೂರನ್ನು ಕೇಂದ್ರವಾಗಿಟ್ಟುಕೊಂಡು ಇಲ್ಲಿಯೇ ಸೈನಿಕಠಾಣೆಯನ್ನು ಸ್ಥಾಪಿಸುತ್ತದೆ. ಬ್ರಿಟಿಷರ ಸೈನ್ಯವು ಮದರಾಸು ಪ್ರಾಂತ್ಯದಿಂದ ಬಂದದ್ದರಿಂದ ಬಹಳಷ್ಟು ತಮಿಳು ಸೈನಿಕರು ಇದ್ದರು. ಇವರ ದೈನಂದಿನ ಕಾರ್ಯಗಳಲ್ಲಿ ಸಹಾಯ ಮಾಡಲು ಚಾಕರಿ ಜನಗಳೂ ಬಂದು ನೆಲೆಸಿದರು. ಇದಕ್ಕೆ ಪೂರಕವಾಗಿ ರೈಲು ಮಾರ್ಗವೂ ಸಹಕರಿಸಿತು. ಹೀಗೆ ಬೆಂಗಳೂರಿನ ಪೂರ್ವಭಾಗ ತಮಿಳುಜನರಿಂದ ತುಂಬಲು ಕಾರಣವಾಯಿತು. ಮಿಲಿಟರಿಯ ಜೊತೆಯಲ್ಲಿ ಮೊದಲು ಬಂದವರು ಮಧ್ಯಮವರ್ಗದ ತಮಿಳುಜನರಾದರೆ ಸ್ವಾತಂತ್ರ್ಯಪೂರ್ವ ಹಾಗೂ ಸ್ವಾತಂತ್ರ್ಯಾನಂತರ ಬಂದವರು ಬಡ ಕೂಲಿಕಾರ್ಮಿಕರು. ಇವರು ಬಂದಿದ್ದು ಕೊಂಗುನಾಡಿನಿಂದ. ಹಾಗೆಯೇ ಪೂರ್ವ ಕರ್ನಾಟಕಕ್ಕೆ ಬಂದ ಇನ್ನೊಂದು ವಲಸೆ ಕೆಂಪೇಗೌಡರ ಕಾಲದ್ದು. ಪೆನಗೊಂಡೆ ವಿಜಯನಗರದ ರಾಜಧಾನಿಯಾಗಿದ್ದಾಗ ಪೆನಗೊಂಡೆಗೆ ಹೋಗುತ್ತಿದ್ದ ಕೆಂಪೇಗೌಡರ ಅಲ್ಲಿನ ಅನೇಕ ವ್ಯಾಪಾರಿಗಳನ್ನು ಕರೆತಂದು ಬೆಂಗಳೂರಿನಲ್ಲಿ ನೆಲೆಸಲು ಅನುಕೂಲಗಳನ್ನು ನೀಡಿದ. ಆತನೇ ಹೇಳಿದಂತೆ ಪೆನುಗೊಂಡೆ, ರತ್ನಗಿರಿ, ರಾಯಕೋಟೆ, ಧಾರಾಪುರಿ, ಕೃಷ್ಣಗಿರಿಗಳಿಂದ ವರ್ತಕರನ್ನು ಕರೆಸಿದ್ದ. ಹೀಗೆ ತೆಲುಗು ವ್ಯಾಪಾರಿಗಳು, ಅವರೊಡನೆ ಬಂದ ರೈತರು ಈ ಪ್ರದೇಶದಲ್ಲಿ ನೆಲೆಗೊಂಡರು.
ಭಾಷೆಯ ಸ್ಥಿತಿಗತಿ : ಭಾಷೆ ಉಳಿಯಬೇಕಾದರೆ ಜನರ ಬಳಕೆ ಅತ್ಯಗತ್ಯ. ಕನ್ನಡ ಭಾಷೆಯನ್ನು ಕಾಲದಿಂದ ಕಾಲಕ್ಕೆ ಹಿಡಿದಿಡುವ ಪ್ರಯತ್ನಗಳು ನಡೆಯುತ್ತಲೇ ಬಂದಿದೆ. ೧೨೦೦ ವರ್ಷಗಳ ಹಿಂದೆ ಕವಿರಾಜಮಾರ್ಗ ಬರೆದ ಶ್ರೀವಿಜಯನ ಕಾಲದಲ್ಲಿಯೇ ಕನ್ನಡ, ತಿರುಳ್ಗನ್ನಡದ ಬಗ್ಗೆ ಚರ್ಚೆ ಆರಂಭವಾಗಿತ್ತು. ಪರ್ಷಿಯಾ ಹಾಗೂ ಅರಬ್ಬೀ ವ್ಯಾಪಾರಿಗಳಿಂದ ೯ನೆಯ ಶತಮಾನಕ್ಕಾಗಲೇ ಪರ್ಷಿಯಾ ಶಬ್ದಗಳು ಕನ್ನಡದಲ್ಲಿ ಬಳಕೆಗೆ ಬಂದಿದ್ದವು. ಅಂದು ಆರಂಭವಾದ ಚರ್ಚೆ ಇಂದಿಗೂ ನಡೆಯುತ್ತಲೇ ಇರುವುದು ಈ ಭಾಷೆಯ ಜೀವಂತಿಕೆಗೆ ಸಾಕ್ಷಿ. ಇತ್ತೀಚಿನ ದಿನಗಳಲ್ಲಿ ಬಳಕೆಯಾಗುತ್ತಿರುವ ಈಒ ರೇಡಿಯೋ ಕನ್ನಡ, ಸಿನಿಮಾ ಕನ್ನಡ, ಕಾನ್ವೆಂಟ್ ಕನ್ನಡ, ಟಿವಿಗಳಲ್ಲಿ, ಸಂದರ್ಶನಗಳಲ್ಲಿ, ಅಡುಗೆ ಮುಂತಾದ ಪ್ರಾತ್ಯಕ್ಷಿಕೆಗಳಲ್ಲಿ ಬಳಕೆಯಾಗುವ ಕನ್ನಡದ ಬಗ್ಗೆ ತೀವ್ರವಾದ ಚರ್ಚೆಗಳು ಹಾಗೂ ಕೆಲವೊಮ್ಮೆ ಪ್ರತಿಭಟನೆಗಳು ನಡೆದಿವೆ. ಹೀಗಾಗಿ ಕವಿರಾಜಮಾರ್ಗಕಾರ ಹೇಳುವಂತೆ ಇಂದಿನ ತಿರುಳ್ಗನ್ನಡ ಯಾವುದೆಂಬ ಬಗ್ಗೆ ಈಗಿನ ಪರಿಸ್ಥಿತಿಯಲ್ಲಿಯೂ ಚರ್ಚೆ ನಡೆಯುತ್ತಿರುವುದು ಜೀವಂತ ಭಾಷೆಯ ಲಕ್ಷಣವೆಂದೇ ಹೇಳಬೇಕು.
ಭಾಷೆಯನ್ನು ನಾವು ನಿರ್ದಿಷ್ಟ ಚೌಕಟ್ಟಿನಲ್ಲಿ ಹಿಡಿದಿಡಲು ಎಂದಿಗೂ ಸಾಧ್ಯವಿಲ್ಲ. ಹಾಗೆ ಹಿಡಿದಿಟ್ಟಲ್ಲಿ ಅದು ಬಳಕೆಯಲ್ಲಿ ಜೀವಂತವಾಗಿರಲು ಸಾಧ್ಯವಾಗಲಾರದು. ಹಾಗೆಯೇ ಇಂದಿಗೂ, ಹಿಂದೆಯೂ ಗ್ರಾಂಥಿಕ ಭಾಷೆ ಹಾಗೂ ಬಳಕೆಯ ಭಾಷೆ ಎರಡೂ ಬೇರೆ ಬೇರೆಯಾಗಿಯೇ ಇದ್ದವು. ಹೊಸ ಪದಗಳನ್ನು ಬಳಸಿ ಸೇರಿಸಿಕೊಳ್ಳುವುದು, ತನ್ನದೇ ಕೆಲವು ಪದಗಳನ್ನು ಬಿಡುವುದು ಎಲ್ಲ ಕಾಲದಲ್ಲಿ ಭಾಷೆಯಲ್ಲಿ ನಡೆದ ಪ್ರಕ್ರಿಯೆ. ಕನ್ನಡವೂ ಈ ನಿಯಮಕ್ಕೆ ಹೊರತಾಗಿಲ್ಲ. ಹಾಗೆಂದು ಸಿಕ್ಕ ಸಿಕ್ಕ ಪದಗಳನ್ನು ಭಾಷೆ ಸ್ವೀಕರಿಸುವುದಿಲ್ಲ. ತನ್ನ ಜಾಯಮಾನಕ್ಕೆ ಒಗ್ಗುವ ಪದಗಳನ್ನು ಮಾತ್ರ ಅದು ಸ್ವೀಕರಿಸುತ್ತದೆ.
ಕುವೆಂಪು ನಗರ ಪ್ರದೇಶವು ಬಹುಭಾಷಿಕರು ನೆಲೆಗೊಂಡಿರುವ ಪ್ರದೇಶ. ಕನ್ನಡ, ತಮಿಳು, ತೆಲುಗು, ಮಲೆಯಾಳ, ಉರ್ದು, ಹಿಂದಿ ಮತ್ತಿತರ ಭಾಷಿಕರು ಈ ಪ್ರದೇಶದಲ್ಲಿ ನೆಲೆಸಿದ್ದಾರೆ. ಇವರಲ್ಲಿ ಕೆಲವರು ಇಲ್ಲಿಯ ಮೂಲ ನಿವಾಸಿಗಳೂ ಆಗಿದ್ದಾರೆ. ಇಡೀ ಪ್ರದೇಶ ಮಿನಿಭಾರತವಿದ್ದಂತೆ. ಈ ಪ್ರದೇಶದಲ್ಲಿ ಈಗ ಇರುವಷ್ಟು ಪೇಯಿಂಗ್ ಗೆಸ್ಟ್, ಹಾಸ್ಟೆಲ್‌ಗಳು ಬೆಂಗಳೂರಿನಲ್ಲಿ ಎಲ್ಲಿಯೂ ಇಲ್ಲ. ಹೀಗಾಗಿ ಐಟಿ, ಬಿಟಿ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಬಂದವರಿಗೆ ಒಂದು ಬಗೆಯ ಆಶ್ರಯಸ್ಥಾನವಾಗಿ ಇದು ಪರಿಣಮಿಸಿದೆ. ಇಂತಹ ಪ್ರದೇಶದಲ್ಲಿ ಕನ್ನಡದ ವಾತಾವರಣವನ್ನು ಸ್ಥಾಪಿಸುವುದು. ಹಾಗೂ ಕನ್ನಡ ಭಾಷೆಯ ಬಗ್ಗೆ ಜಾಗೃತಿ ಮೂಡಿಸುವುದು ಪ್ರಯಾಸದ ಕೆಲಸವೇ ಸರಿ. ಇಲ್ಲಿ ಪೇಯಿಂಗ್ ಗೆಸ್ಟ್, ಹಾಸ್ಟೆಲ್‌ಗಳಲ್ಲಿ ವಾಸವಾಗಿರುವವರು ಹಾಗೂ ಪ್ರತಿದಿನವೂ ಬಂದು ಹೋಗುವ ಹೊರಗಿನ ಜನರಿಂದ ಈ ಪ್ರದೇಶ ಕೂಡಿದೆ. ಇವರು ಕನ್ನಡ ಭಾಷೆ ಕಲಿಯಬೇಕೆಂದರೂ ಬೇಕಾದ ಅನುಕೂಲಗಳಿಲ್ಲ. ಸುಲಭವಾಗಿ ಕನ್ನಡ ಕಲಿಸುವ ಪಠ್ಯಪುಸ್ತಕಗಳಿಲ್ಲ. ಕರ್ನಾಟಕದ ಬಗ್ಗೆ ಹಾಗೂ ಕರ್ನಾಟಕ ಸಂಸ್ಕೃತಿಯ ಬಗ್ಗೆ ತಿಳಿ ಹೇಳುವ ಸಂಸ್ಥೆಗಳಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಕೆಲವೊಮ್ಮೆ ಕನ್ನಡ ಕಣ್ಮರೆಯಾಗುತ್ತಿದೆಯೆಂದು ಅನೇಕ ಸಲ ಅನ್ನಿಸದೆ ಇರದು. ಇದಕ್ಕೆ ಪರಿಹಾರವಾಗಿ ಕೆಲವೊಂದು ಕಾರ್ಯಗಳನ್ನು ಇಂತಹ ಕನ್ನಡ ಘಟಕಗಳು ಕೈಗೆತ್ತಿಗೊಳ್ಳಬೇಕಾಗಿದೆ.
೧.            ಕನ್ನಡ ಸಾಹಿತ್ಯ ಪರಿಷತ್ತಿನ ಚಿಕ್ಕ ಘಟಕಗಳಿಗೆ ಕಟ್ಟಡ ಸೌಲಭ್ಯ ಸರ್ಕಾರ ಒದಗಿಸುವುದು.
೨.            ಸ್ಥಳೀಯ ಸಾಹಿತ್ಯ ಚಟುವಟಿಕೆಗಳ ಜೊತೆಗೆ ಬಡಾವಣೆಯ ಬೇರೆ ಬೇರೆ ಕಡೆಗಳಲ್ಲಿ ಕರ್ನಾಟಕ ಸಂಸ್ಕೃತಿಯನ್ನು ಪರಿಚಯಿಸುವ ಕವಿಗಳ-ಕ್ಷೇತ್ರಗಳ ಸಾಕ್ಷ್ಯಚಿತ್ರ / ಚಿತ್ರ ಪ್ರದರ್ಶನ. ಆಯ್ದ ಶಾಲೆಗಳಲ್ಲಿ ತಿಂಗಳಿಗೆ ಒಮ್ಮೆ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದು.
೩.            ಅಂತರಭಾಷಾ ಕವಿಗೋಷ್ಠಿಗಳನ್ನು ನಡೆಸುವ ಮೂಲಕ ಇತರ ಭಾಷಿಕರನ್ನು ಕನ್ನಡದ ಕಡೆಗೆ ಸೆಳೆಯುವುದು.
೪.            ಆಸಕ್ತ ಕನ್ನಡೇತರರಿಗೆ ಕನ್ನಡ ಆಡುನುಡಿ ಕಲಿಸುವುದು. ಇದಕ್ಕಾಗಿ ಒಂದು ಕೇಂದ್ರವನ್ನು ತೆರೆಯುವುದು.
ಈ ಕೆಲವು ಕ್ರಮಗಳಿಂದ ಕನ್ನಡ ಭಾಷೆ / ಸಂಸ್ಕೃತಿಯನ್ನು ಜಾಗೃತವಾಗಿಡಬಹುದಾಗಿದೆ.
ಮಾನ್ಯರೇ,
ಇದುವರೆಗೆ ನನ್ನ ಕೆಲವು ಹೃದಯಾಂತರಾಳದ ಮಾತುಗಳನ್ನು ಆಲಿಸಿದ ತಮಗೆಲ್ಲರಿಗೂ ವಂದಿಸಿ, ನನ್ನ ಮಾತುಗಳನ್ನು ಮುಗಿಸುತ್ತೇನೆ.
ಜೈ ಕರ್ನಾಟಕ
ಜೈ ಹಿಂದ್






Tuesday, March 4, 2014

ಇತಿಹಾಸ ಅಕಾದಮಿಯ ಪ್ರವಾಸ



ಕೊಂಕಣ ಯಾತ್ರೆ.  


ಕರ್ನಾಟಕ ಇತಿಹಾಸ ಅಕಾದಮಿಯುಇತಿಹಾಸ ಪ್ರಜ್ಞೆಯನ್ನು ಜಾಗೃತ ಗೊಳಿಸುವ ಅನೇಕ ಕಾರ್ಯಕ್ರಮಗಳಲ್ಲಿ ಐತಿಹಾಸಿ ಸ್ಥಳಗಳಿಗೆ ಪ್ರವಾಸ ಏರ್ಪಡಿಸುವುದೂ ಒಂದು. ಇದು ತಕ್ಕ ಮಟ್ಟಿಗೆ ಜನ ಪ್ರಿಯವೂ ಹೌದು. ಪ್ರೇಕ್ಷಣೀಯ ಸ್ಥಳಗಳನ್ನು ಸಾಧಾರಣ ಪ್ರವಾಸಿಗಳಂತೆ ನೋಡದೆ ಅದರ ಐತಿಹಾಸಿಕ ವಿವರ,ಚಾರಿತ್ರಿಕ ಮಹತ್ವ, ಅಲ್ಲಿನ ಶಿಲಾಶಾಸನ ಸ್ಮಾರಕಗಳ ಮೂರ್ತಿ ಶಿಲ್ಪ , ವಾಸ್ತು ಶಿಲ್ಪಗಳ ನಿಖರ ಮಾಹಿತಿಯನ್ನು ತಜ್ಞರು ತಿಳಿಸಿಕೊಡುವ ಪರಿಪಾಠವಿದೆ.ಈಸಲ ಬೆಂಗಳೂರು ಜಿಲ್ಲಾ ಘಟಕವು ಕೊಂಕಣ ತೀರಕ್ಕೆ ಪ್ರವಾಸ ಹಮ್ಮಿಕೊಂಡಿತ್ತು. ಕಾಸರಗೋಡಿನಿಂದ ಹಿಡಿದು ಮಲ್ಪೆಯವರೆಗಿನ ತೀರದಲ್ಲಿನ ಕೋಟೆ ಕೊತ್ತಲ ದೇಗುಲ ,ಐತಿಹಾಸಿಕ ಸ್ಮಾರಕಗಳ ವೀಕ್ಷಣೆಯು ಪ್ರವಾಸದ ಗುರಿಯಾಗಿತ್ತು. ಪ್ರವಾಸವನ್ನು ಸಂಘಟಿಸಿದವರು ಕರಾವಳಿ ತೀರದವರೇ ಆದ ಡಾ. ಇಂದಿರಾ ಹೆಗಡೆ. ಅವರು ಬೆಂಗಳೂರು ಘಟಕದ ಅಧ್ಯಕ್ಷೆಯೂ ಹೌದು



ಮೂರು ರಾತ್ರಿ ಎರಡುಹಗಲುಗಳ ಈ  ಪ್ರವಾಸಕ್ಕೆ ೧೮ ಸದಸ್ಯರು ನೊಂದಾಯಿಸಿದ್ದರು.ರಾಜ್ಯದ್ಯಕ್ಷರಾದ ಡಾ.ದೇವರ ಕೊಂಡಾರೆಡ್ಡಿಯವರ ಮಾರ್ಗದರ್ಶನವೂ ಇದ್ದಿತು. ಆದರೆ ಅವರು ಆರೋಗ್ಯದ ಕಾರಣದಿಂದ ರಾತ್ರಿ ಪಯಣ ಮಾಡುವುದನ್ನುಕಡಿಮೆ ಮಾಡಿರುವರು. ಅವರು ಹಗಲೇ ಹೊರಟು ಮಂಜೇಶ್ವರದಲ್ಲಿ ತಂಡವನ್ನು ಕೂಡಿಕೊಂಡುಮುನ್ನೆ ಡೆಸುವವರಿದ್ದರು.ಭಾಗವಹಿಸಿದವರೆಲ್ಲ ಇತಿಹಾಸರಂಗದಲ್ಲಿ ಪಳಗಿದವರೇ. ನಾವು ಒಬ್ಬಿಬ್ಬರು ಮಾತ್ರ ಕುತೂಹಲಿಗಳಾದ ಇತಿಹಾಸ ಆಸಕ್ತರು. ನಾವೆಲ್ಲ ಶನಿವಾರಾತ್ರಿ ಎಸ್‌.ಆರ್‌.ಎಸ್‌ ಬಸ್ಸಿನಲ್ಲಿ ಕಾಸರೋಡಿಗೆ ಹೊರಟೆವು.ಎಲ್ಲರಿಗೂ ನಿದ್ರಾಸನಗಳು. ಕೆಲವರಿಗೆ ಒಂಟಿ ಶಯ್ಯೆ ದೊರೆತರೆ ಹಲವರಿಗೆ ಜಂಟಿ ಹಾಸಿಗೆಗಳು.ನಮ್ಮಲ್ಲಿರು ದಂಪತಿಗಳನ್ನು ಎಲ್ಲರೂ ಒತ್ತಾಯ ಮಾಡಿದರೂ ಅವರು ಮನೆಯಲ್ಲಂತೂ ಇದ್ದೇ ಇದೆ ಇಲ್ಲಿ ಬದಲಾವಣೆ ಇರಲಿ ಎಂದರು. ಆದರೆ ಮೂಲ ಕಾರಣ ಅನೇಕ ದಿನಗಳ ಮೇಲೆ ದೊರೆತ ಗೆಳಯರೊಡಗಿನ ಮಾತು ಕಥೆಯ ಅವಕಾಶ ಕಳೆದು ಕೊಳ್ಳಲು ಅವರು ಸಿದ್ಧರಿರಲಿಲ್ಲ. ಆದರೆ ಇಬ್ಬರು ಸೋದರಿಯರಿಬ್ಬರು,ವಾಸ್ತು ಶಿಲ್ಪ ಮತ್ತು ಮೂರ್ತಿಶಿಲ್ಪ ತಜ್ಞೆಯರಬ್ಬರೂ  ಜಂಟಿ ಹಾಸಿಗೆಯನ್ನು ಆನಂದಿಂದ ಆರಿಸಿ ಕೊಂಡರು ಏಕೆಂದರೆ ಅವರು ಜೀವದ ಗೆಳತಿಯರು. ಹೀಗೆ ಎಲ್ಲರೂ ಅಲ್ಲಲ್ಲಿ ಮಲಗಲು ಸನ್ನದ್ದರಾದರು.ನಮ್ಮ ತಂಡದ ನಾಯಕಿ ಬಲುಶಿಸ್ತಿನ ವ್ಯಕ್ತಿ.ಎಲ್ಲವೂ ಅಚ್ಚುಕಟ್ಟಾಗಿ ಜರುಗ ಬೇಕು.ಅವರ ಈ ಗುಣ ಕ್ಕೆ ಕಾರಣ ಅವರ ಮನೆಗೆ ಹೋದಾಗ ತಿಳಿಯಿತು. ಅದಕ್ಕೆ ಕಾರಣ ಅವರ ಪತಿ ಶಿವರಾಮ ಹೆಗಡೆ. ಅವರು ಮಾಜಿ ಸೈನಿಕ. ಹತ್ತೊಭತ್ತನೆಯ ವಯಸ್ಸಿನಲ್ಲಿಯೇ ಯಾರಿಗೂ ಹೇಳದೆ ಕೇಳದೇ ಸೈನ್ಯ ಸೇರಿ ಸಾಮಾನ್ಯ ಸಿಪಾಯಿಯಿಂದ ಹವಲ್ದಾರೆ ಹುದ್ದೆಗೆ ಏರಿ ನಂತರ ಸ್ವಯಂ ನಿವೃತ್ತಿ ಪಡೆದು ವಿವಿಧ ಹುದ್ದೆ ನಿರ್ವಹಿಸಿ ಅಧಿಕಾರಿಯಾಗಿ ನಿವೃತ್ತರಾದವರು. 


ಎಲ್ಲಿಯೇ ಇರಲಿ ಸೈನಿಕ ಶಿಸ್ತು ಅವರದು. ಅದು ಸಂಗಾತಿಯ ಮೇಲೂ ಅದು ಪರಿಣಾಮ ಬೀರಿತ್ತು  .ಮೇಲುನೋಟಕ್ಕೆ ತುಸು ಸಿಡುಕು ಎನಿಸಿದರು ಶಿಸ್ತು ಮತ್ತು ಶ್ರದ್ಧೇ ಯ ಪರಿಣಾಮ ಮಗ ಮತ್ತು ಮಗಳು ಕೂಡಾ ವಿದ್ಯಾವಂತರಾಗಿ ಉತ್ತಮ ಹುದ್ದೆಯಲ್ಲಿದ್ದರು.  ಜೊತೆಗೆ ತಾವೂ ಮೆಟೀರಿಯಲ್‌ಮ್ಯಾನೇಜ್‌ಮೆಂಟ್‌ನಲ್ಲಿ ಚಿನ್ನದ ಪದಕ ಗಳಿಸಿದವರು. ಹೆಂಡತಿಯ ವ್ಯಕ್ತಿತ್ವ ವಿಕಸನಕ್ಕೂ ಸಹಕಾರಿ ಮದುವೆ ಮಕ್ಕಳ ಜಂಜಾಟದ ನಡುವೆಯೂ ಸ್ನಾತಕೋತ್ತರ ಅಧ್ಯಯನ ನಡೆಸಿ ಪಿ. ಎಚ್‌ಡಿ ಪದವಿ ಪಡೆದು ಸಂಶೋಧನೆ ಮತ್ತು ಸಾಹಿತ್ಯರಂಗದಲ್ಲಿ ಮಿಂಚಲುಕಾರಣ ಪತಿಯ ಪ್ರಭಾವ ಮತ್ತು ಸಹಕಾರ.  ಇದರಿಂದ ಅವರಿಗೆ ವಹಿಸಿದ ಯಾವುದೇ ಹೊಣೆ ಅತ್ಯಂತ ಯಶಸ್ವಿಯಾಗುವುದು.ಅವರ ಶಿಸ್ತನ್ನು ಗಮನಿಸಿದ ಗೆಳೆಯರು ಅವರನ್ನು ಇಂದಿರಾಗಾಂಧಿ ಎಂದುಪ್ರೀತಿಯಿಂದ ಕಾಲೆಳೆಯುತಿದ್ದರು.ಅದೂ ಅವರ ಬೆನ್ನ ಹಿಂದೆ.

ಆದರೆ ಆರು ಕ್ರಾಫ್‌ಇದ್ದರೂ ನಿರ್ವಹಣೆ ಕಠಿನವಲ್ಲ ಆದರೆ ಮೂರು ಜಡೆ ಒಟ್ಟಿಗೆ ಇದ್ದರೆ ಬಲು ಕಷ್ಟ ಎನ್ನುವ ಮಾತಿದೆ, ನಮ್ಮಲ್ಲಿ ಹತ್ತು ಜನ ಅವರೇ . ಒಬ್ಬೊಬ್ಬರದು ಒಂದು ಧಾಟಿ ಹೀಗಾಗಿ ಸಮಯಪಾಲನೆಗೆ ಅವರನ್ನು ಒಳ ಪಡಿಸಲು ತುಸು ಗಂಭೀರತೆ ಅಗತ್ಯವಾಗಿತ್ತು.

ಮಂಜೇಶ್ವರದ ಹತ್ತಿರದ  ಹೊಸ ಅಂಗಡಿ ತಲುಪಿದಾಗ ಬೆಳಗಿನ ಆರು ಗಂಟೆ.  ಅಲ್ಲಿನ ಹಿಲ್‌ವ್ಯೂ ನಲ್ಲಿ ಬೆಳಗಿನ ಕಾರ್ಯಕ್ರಮ ಮುಗಿಸಿ ದೆವು. ಹೆಸರು ಹಿಲ್‌ವ್ಯು ಆದರೆ ಅಲ್ಲಿ ಹಿಲ್ಲೂ ಇಲ್ಲ ವ್ಯೂ ನೂ ಇಲ್ಲ.ರೈಲು ದಾರಿಹೋಗುವ ಎತ್ತರದ ಜಾಗ ಬಿಟ್ಟು  ಉಳಿದುದನ್ನು ಕಡಿದು ಅಂಗಡಿ ನಿರ್ಮಾಣ ಮಾಡಿರುವುದು ಕಂಡುಬಂದಿತು.  ಅದುಕೇರಳ ರಾಜ್ಯದಲ್ಲಿದೆ. ಆದರೆ ಎಲ್ಲಿ ನೋಡಿದರೂ ಕನ್ನಡದ ಫಲಕಗಳು ಅಂಗಡಿ ಮುಂಗಟ್ಟು, ವೈದ್ಯರು ಹೋಟೆಲ್ ಎಲ್ಲ ನಾಮಫಲಕಗಳು ಕನ್ನಡದಲ್ಲಿ , ಜೊತೆಗೆ ಇಂಗ್ಲಿಷ್‌ನಲ್ಲಿ. ಅಲ್ಲಿಲ್ಲಿ ಮಲೆಯಾಳಿ ಅಕ್ಷರಗಳು ಕಂಡೂ ಕಾಣದಂತೆ ಇದ್ದವು.  ನಮಗಂತೂ ನಮ್ಮ ಹೆಮ್ಮೆಯ ಕನ್ನಡನಾಡಿಗಿಂತಲೂ ಅಲ್ಲಿ ಹೆಚ್ಚು ಕನ್ನಡ ಕಾಣ ಬಂದಿತು. ಬೇರೆಯಾಗಿ ೬೦ ವರ್ಷಗಳಿಗೂ ಹೆಚ್ಚಾದರೂ ಅಲ್ಲಿನವರ ಕನ್ನಡಾಭಿಮಾನ ಕಣ್ಣುಕುಕ್ಕುವಂತಿತ್ತು. ಸತೀಶ್‌ ಅಲ್ಲಿ ನಮ್ಮ ಮಾರ್ಗದರ್ಶಿ. ನಮ್ಮನ್ನು ಸ್ವಾಗತಿಸಲು ಅವರು ಮಾಡಿದ ಪುಟ್ಟ ಭಾಷಣ ಆಕರ್ಷಕವಾಗಿತ್ತು, ಕಾರಣ ಅವರು ಯಕ್ಷಗಾನ ಪಟು. ಸ್ವಾಗತ ಶೈಲಿಯೇ ಅದನ್ನು ಸಾರಿತು.ತೆಂಕುತಿಟ್ಟು ಬಡಗು ತಿಟ್ಟು ಯಕ್ಷಗಾನದ ಮಟ್ಟುಗಳನ್ನು ಹಾಡಿ ತೋರಿಸಿದರು. ಕುಣಿತಕ್ಕೂ ಸಿದ್ಧನಿದ್ದರೂ ನಮ್ಮ ವಾಹನದಲ್ಲಿ ಅದು ಸಾಧ್ಯ ವಿರಲಿಲ್ಲ.ಶೇಷಗಿರಿ ಮಂಜೇಶ್ವರಕ್ಕೆ ಬಂದರು ಎಂಬ ಸಾಹಿತ್ಯವನ್ನೇ ತಾಳಬದ್ದವಾದ ಬಡಗುತಿಟ್ಟು ಮತ್ತು ರಾಗವಾದ ತೆಂಕಣ ತಿಟ್ಟಿನಲ್ಲಿ ತಾಳ ಹಾಕುತ್ತಾ ಹಾಡಿದಾಗ.ಅವರ ಕಲಾ ಪ್ರೌಢಿಮೆಯ ಪರಿಚಯವಾಯಿತ.ನಂತರ ತಿಳಿಯಿತು 

    
                                                            ವೃತ್ತಿಯಿಂದ ಕಬ್ಬಿಣದ ಕಂಬಿ ಬೆಸೆಯುವ ಕೆಲಸಮಾಡಿದರೂ ಪ್ರವೃತ್ತಿಯಿಂದ ಕಲಾಪ್ರೇಮಿ.   ಯಕ್ಷಗಾನ ಕಲಾತಂಡವನ್ನು ಕಟ್ಟಿ ಪ್ರದರ್ಶನ ನೀಡುವವರು. ಬೆಳಗಿನ ಉಪಹಾರ ಮುಗಿಸಿ ಗೋವಿಂದ ಪೈಸ್ಮಾರಕ ಭವನಕ್ಕೆ ಹೋದಾಗ ಮಾತ್ರ ನಿರಾಶೆ ಕವಿಯಿತು    ಕನ್ನಡದ ಮೊದಲ ರಾಷ್ಟ್ರ ಕವಿ ಗೋವಿಂದ ಪೈ ಅವರು , ಹದಿನಾಲ್ಕುಭಾಷೆಗಳ ಪಂಡಿತ, ಕವಿ,ಸಂಶೋಧಕ, ಸಾಹಿತಿ ಕಟ್ಟಾ ಕನ್ನಡ ಅಭಿಮಾನಿ. ನಿರಂತರ ಕಾಸರಗೋಡು ಕರ್ನಾಟಕದ್ದು ಎಂದು ಕನವರಿಸುತ್ತಾ ಕೊನೆ ಯುಸಿರೆಳೆದ ಪವಿತ್ರತಾಣದ ಪರಿಸ್ಥಿತಿಮಾತ್ರ ಶೋಚನೀಯ. 

ಕೇರಳ ಸರ್ಕಾರಕ್ಕೆ ಬೇಕಿಲ್ಲ. ಕರ್ನಾಟಕ ಸರ್ಕಾರಕ್ಕೆ ಕಾಣುವದಿಲ್ಲ. ಪರಿಣಾಮ ಅವರ ಸ್ಮಾರಕವು ಅಳಿವಿನಂಚಿಗೆ ಬಂದಿದೆ. ನಮ್ಮ ನಾಯಕರದ್ದು ಬರಿ ಬಾಯ್ಮಾತಿನ ಬೆಡಗು. ದಕ್ಷಿಣ ಕನ್ನಡಮೂಲದ  ಮಾಜಿಮುಖ್ಯ ಮಂತ್ರಿಯೊಬ್ಬರು ಅದರ ಜೀರ್ಣೋದ್ಧಾರಕ್ಕೆ ಮೂರು ಸಲ ಕಲ್ಲು ಹಾಕಿದರು(ಶಿಲಾ ನ್ಯಾಸ) ಮಾಡಿರುವರು)  ಎಂದು ಅಲ್ಲಿನವರ ಹೇಳಿಕೆ.ಅಲ್ಲಿ ಜನಸಾಮಾನ್ಯರ ಕಳಕಳಿ ಮೆಚ್ಚುಗೆ ಪಾತ್ರ ಆದರೆ ಕನ್ನಡಿಗರ ನಿರ್ಲಕ್ಷ್ಯ ಕಣ್ಣು ಚುಚ್ಚುವಂತಿದೆ.



ಅಲ್ಲಿನ ಅವ್ಯವಸ್ಥೆಯನ್ನು  ಧೂಳು ತುಂಬಿದ ಕಪಾಟುಗಳು ಹುಳುತಿಂದ ಪುಸ್ತಕಗಳೂ ಸಾರಿ ಹೇಳುತಿದ್ದವು.    ಇದುವಿಶ್ವಾಮಿತ್ರ ಮೇನಕೆಯ ಮಗುವಿನಂತೆ ಆಗಿದೆ. ಯಾರಿಗೂ ಬೇಡದ್ದು.ಅಲ್ಲಿಂದ ನಾವು ಹೊರಟದ್ದು  ಅರಿಕ್ಕೆಕಾಡಿಯಲ್ಳಲಿರುವ  ಕೆಳದಿಯರಸರ  ಕೋಟೆ ನೋಡಲು.. ಇಕ್ಕೇರಿಯ ಶಿವಪ್ಪನಾಯಕನ ಕೋಟೆ ಗಿಂತಲು ಕೋಟೆಯ ಆಂಜನೇಯನ ಸನ್ನಿಧಿ ಸುಸ್ಥಿತಿಯಲ್ಲಿದೆ, ಕೋಟೆ ಜಂಬಿಟ್ಟಿಗೆ ಗಳಿಂದ ನಿರ್ಮಾಣವಾಗಿದ್ದು ನಾಮಾವಶೇಷವಾಗಿ ಒಂದು ಬುರುಜುಮಾತ್ರ ಎದ್ದು ಕಾಣುವಂತೆ ಮಧ್ಯದಲ್ಲಿ ನಿಂತಿದೆ.ಅದರ ಮೇಲೆ ಹತ್ತಿದರೆ ಅಳಿದುಳಿದ ಕೋಟೆ ಅರಮನೆ ಹಾಗು ಇತರೆ ಅವಶೇಷಗಳು ಕಾಣತ್ತವೆ.
ಮುಂದಿನ ತಾಣ ಬೇಕಲ್‌ಕೋಟೆ. 'ಬೇಕಲ್‌ ’ ಕೋಟೆಯು ಕೇರಳ ರಾಜ್ಯದ ಗಡಿ ಜಿಲ್ಲೆ ಕಾಸರಗೊಡಿನಲ್ಲಿದೆ. ಅದರ ವಿಸ್ತೀರ್ಣ ಸುಮಾರು ೪೦ ಎಕರೆ (160,000 m2)..ಕಡಲ ತೀರದಿಂದಲೇ ಕೋಟೆಯಭಾಗ ಶುರುವಾಗುವುದು.ಕೋಟೆಯ ಮುಕ್ಕಾಲುಭಾಗ ಅರಬ್ಬಿ ಸಮುದ್ರದ ಅಲೆಗಳಿಂದ ಆವೃತವಾಗಿದೆ.  ಇದು ಆಡಳಿತ ಕೇಂದ್ರವಾಗಿರದೆ ರಾಜ್ಯ ರಕ್ಷಣಾ ದೃಷ್ಟಿಯಿಂದ ನಿರ್ಮಾಣವಾದ ಕೋಟೆಯಾಗಿದೆ.  ಕೋಟೆಯ ಬಾಗಿಲ ಹತ್ತಿರವೇ ಇರುವ ಮುಖ್ಯ ಪ್ರಾಣನ ಮಂದಿರ ಮತ್ತು ಕೋಟೆಗೆ ಅಂಟಿಕೊಂಡಿರುವ ಮಸೀದಿ ಆ ಕಾಲದ ಕೋಮು ಸಾಮರಸ್ಯದ ಸಂಕೇತವಾಗಿವೆ.    ಕೋಟೆಯ ಭೂಭಾಗದಲ್ಲಿ ಸುತ್ತಲೂ ಕಂದಕವಿದೆ.ಕೋಟೆಯ ರಚನಾಕುಶಲತೆಯು ಮೇಲಿರುವ ರಂದ್ರಗಳಿಂದ ಗೋಚರವಾಗುವುದು.. ಎತ್ತರದಲ್ಲಿರುವ ಕಿಂಡಿಗಳಿಂದ ದೂರದಲ್ಲಿರುವ ಶತೃವಿನಮೇಲೆ ದಾಳಿ ಮಾಡಬಹುದಾದರೆ ಕೆಳಗಿರುವ ಕಿಂಡಿಗಳು ಹತ್ತಿರದ ಶತೃಗಳನ್ನು ಗುರಿಇಟ್ಟು ಗುಂಡುಹಾರಿಸಲು ಅನುಕೂಲ.ಕೊಟೆಯಲ್ಲಿನ ವಿಶೇಷವೆಂದರೆ ಮೆಟ್ಟಿಲುಗಳುರುವ ಬಾವಿಗಳು ಅಲ್ಲಿ ದೊರೆವ ಸಿಹಿನೀರು ಈಗ ಅಲ್ಲೆ ಬೆಳಸಲಾಗಿರುವ ತೋಟಕ್ಕೆ ನಿರುಣಿಸುವುದು. ಅಲ್ಲಿನ  ಮದ್ದಿ ಮನೆ ಮತ್ತು ಕಾವಲು ಬರುಜು ಕಣ್ಣು ಸೆಳೆಯುತ್ತವೆ. ಅದರ ಮೇಲೆ ನಿಂತರೆ ಸುತ್ತಮುತ್ತಲಿನ ನೆಲ ಮತ್ತು ಜಲದ ಮೇಲಿನ  ಅತಿ ಸೂಕ್ಷ್ಮ ಚಲನೆಯೂ ಮೈಲುಗಟ್ಟಲೇ ದೂರದಿಂದಲೆ ಕಿನ್ಣಿಗೆ ಬೀಳುತ್ತದೆ. ಅದರಿಂದಲೇ ಇದು ಸೈನ್ಯದ ತಂತ್ರದೃಷ್ಟಿಯಿಂದ ಅಮೂಲ್ಯವಾದುದು.
ಈ ಕೋಟೆಯ ನಿರ್ಮಾಣ  ೧೬೫೦ ರಲ್ಲಿ ಮಾಡಿದವನು ಬಿದನೂರಿನ ಅರಸ ಶಿವಪ್ಪನಾಯಕ.ಕೊದಾವಲಂ ಶಾಸನದಿಂದ ಇದು ವಿದಿತ.  ಕೆಳದಿಯ ಅರಸರು ಕ್ರಮೇಣ ದುರ್ಬಲರಾಗಿ ಹೈದರಾಲಿಗೆ ಶರಣಾದರು ಆಗ . ಬೇಕಲ್‌  ಟಿಪ್ಪೂ ಸುಲ್ತಾನ ಸೈನಿಕ ಠಾಣೆಯೂ ಆಗಿತ್ತು  ಇಲ್ಲಿನಿಂದಲೇ ಮಲಬಾರನ್ನು ವಶಪಡಿಸಿಕೊಂಡದ್ದು. ಟಿಪ್ಪುವಿನ ಮರಣಾನಂತರ ಇದು ಆಂಗ್ಲರ ವಶಕ್ಕೆ ಬಂದಿತು. ಮೊದಲುತಾಲೂಕು ಆಗಿದ್ದ ಬೇಕಲ್‌ ರಾಜ್ಯ ಪುನರ್‌ವಿಂಗಡಣೆಯಿಂದ ಕಾಸರಗೊಡು ತಾಲೂಕಿಗೆ ಸೆರಿ ತನ್ನಪ್ರಾಮುಖ್ಯತೆ  ಕಳೆದು ಕೊಂಡಿತು.. ಈಗ ಅದು ಪ್ರವಾಸಿ ಆಕರ್ಷಣೆಯ ಸ್ಥಳವಾಗಿದೆ.


ಮುಂದಿನ ಪಯಣ  ಮಧೂರಿಗೆ ಹೊರಟೆವು. ಅಲ್ಲಿನ ಮಹಾಗಣಪತಿದೇವಾಯ ಅತಿ ಪ್ರಸಿದ್ಧವಾಗಿದೆ.ಅಲ್ಲಿನ ದೇವಾಲಯದ ವಾಸ್ತು ವಿಶಿಷ್ಟವಾಗಿದೆ.  ನಮಗೆ ಕಂಡು ಬಂದುದು ಅಲ್ಲಿನ ದೇಗುಲ ಒಂದರ ಮೇಲೆ ಇರುವ ಖಡ್ಗದ ಗುರುತು. ಅದು ಟಿಪ್ಪುವಿಮ ಖಡ್ಗದ ಗುರುತು ಎಂಬ ಫಲಕ ಹಾಕಲಾಗಿದೆ.ವಿವರ ತಿಳಿಯುವ ಪ್ರಯತ್ನ ಫಲ ನೀಡಲಿಲ್ಲ. ಒಂದಂತೂ ನಿಜ. ಐತಿಹಾಸಿಕ ದಾಖಲೆಗಳ ಪ್ರಕಾರ ಅಲ್ಲಿಗೆ ಟಿಪ್ಪು ಸುಲ್ತಾನ ದಾಳಿ ಮಾಡಿದ್ದ. ಅಲ್ಲಿನ ವಿಶೇಷವೆಂದರೆ ಬಂದ ಜನಕ್ಕೆಲ್ಲ ಭೋಜನ ವ್ಯವಸ್ಥೆ   . ಅದು ದಕ್ಷಿಣ ಕನ್ನಡದ ಅನೇಕ ಕಡೆ ಇರುವ ಪದ್ದತಿ , ಆದರೆ ಇಲ್ಲಿನ ವಿಶೇಷವೆಂದರೆ ಟೋಕನ್‌ ನೀಡಿದವರಿಗೆ ಮಾತ್ರ ಊಟ. ಅದೂ ಭಫೆ ಪದ್ದತಿ. ತಟ್ಟೆ ಹಿಡಿದು ಹೋದರೆ ಅನ್ನ, ಸಾರು ,ಸಾಂಬಾರು  ಮತ್ತು  ಪಲ್ಯ. ಹಾಕುವರು. ನಂತರ ಅಲ್ಲಿರುವ ದೊಡ್ಡ ಹಜಾರದಲ್ಲಿ ನಿಂತು ಕುಳಿತು ಊಟ ಮುಗಿಸಬಹುದು.  ಅದೆನೋ ಗೊತ್ತಿಲ್ಲ ಸಾರು ಸಾಂಬಾರಿನ ರುಚಿ ಬೆರಳು ಕಚ್ಚುವಹಾಗಿತ್ತು. ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ಬಡಿಸುತಿದ್ದರು

. ಅಲ್ಲಿಂದ ನಾವು  ಹೊದದ್ದು ಅನಂತೇಶ್ವರ ದೇಗುಲಕ್ಕೆ. ಅಲ್ಲಿನ ವಿಶೇಷವೆಂದರೆ ಕೊಳದ ನಡುವಿನ ಸುಂದರ ದೇಗುಲದಲ್ಲಿ ದೇವರು ಆಸೀನ ನಾಗಿರುವನು. ಅಲ್ಲಿನ ವಿಗ್ರಹ ಶಿಲೆ ಅಥವ ಲೋಹದಿಂದ ಮಾಡಿದ್ದಲ್ಲ.ಆಯುರ್ವೇದದ ೬೦ ಗಿಡ ಮೂಲಿಕೆಗಳ ಮಿಶ್ರಣದಿಂದ ಕಟು ಶರ್ಕರ ಪಾಕ ಪದ್ದತಿಯಲ್ಲಿ ರೂಪಿಸಿದ್ದು. ಅಲ್ಲಿನ ವಿಗ್ರಹಕ್ಕೆ ಅಭಿಷೇಕ ಇಲ್ಲ. ಬರಿ ಮಂತ್ರಪ್ರೋಕ್ಷಣೆ. ನಮಗೆ ದೇವರ ದರ್ಶನ ಆಗಲಿಲ್ಲ.   ಅಲ್ಲಿ ಮೊಸಳೆ ನೈವೇದ್ಯ ಎಂಬ ಸೇವೆ ನೋಡಿ ನಮಗೆ ಅಚ್ಚರಿಯಾಯಿತು. ಹತ್ತಿರದಲ್ಲೇ ಇರುವ ಕೊಳದಲ್ಲಿ ಮೊಸಳೆ ಇರುವುದಂತೆ. ಅದು ಮಾಂಸಾಹಾರಿ ಅಲ್ಲ. ಬರಿಅನ್ನ ಹಾಕುವರು. ಅದಕ್ಕೆ ಆಹಾರ ಕೊಡುವುದೇ ಮೊಸಳೆ ನೈವೇಧ್ಯ ಸೇವೆ. ಅದು ಅದೃಷ್ಟವಂತರಿಗೆ ಮಾತ್ರ ಕಾಣುವುದು. ಬಿರು ಬಿಸಿಲಲ್ಲಿ ನಾವು ಮೂರು ನಾಲ್ಕುಜನ ನೊಡಲು ಹೋದೆವು. ಆದರೆ ಅದರ ದರ್ಶನ ಯೋಗ ನಮಗೆ ಇರಲಿಲ್ಲ. ಅಲ್ಲಿ ವಿಚಾರ ವಿನಿಯಮದಲ್ಲಿ ತಿಳಿದ ಅಂಶವೆಂದರೆ ಎಲ್ಲ ಅನಂತ ಶಯನಗಳೂ ಜಲಮೂಲಕ್ಕೆ ಹತ್ತಿರದಲ್ಲೇ ಇರುವವು. ರಂಗನಾಥನೂ ಕಾವೇರಿ ತೀರದಲ್ಲಿ ಇರುವುದು ನಮಗೆ ನೆನಪು ಬಂದಿತು. ಹಾಲಕಡಲಲ್ಲಿ ಮಲಗಿದ ಮಹಾವಿಷ್ಣುವಿಗೆ  ನೀರಿನ ಕತ್ತಿರ ಮಲಗುವುದು ಸಹಜವಾಗಿದೆ.
ಹತ್ತಿರದಲ್ಲೇ ಇದ್ದ ಕುಂಬಳೆ ಅರಸರ ಅರಮನೆಗೆ ಹೋದೆವು. ಬೃಹತ್ತಾದ ಬಂಗಲೆ.ಅವರು ಹಾನಗಲ್ಲಿನ ಕದಂಬ ವಂಶಜರು.
ಕುಂಬಳೆಯ  ರಾಮಂತರು.   ಈಗಿನ ಅರಸರ ಹೆಸರು ದಾನ ಮಾರ್ತಾಂಡ ರಾಮಂತರು. ಇವರು ಬ್ರಾಹ್ಮಣರು.ಅಳಿಯ ಸಂತಾನ ಪದ್ದತಿ ಅವರಲ್ಲಿ.    ಅಲ್ಲಿನ ಸಿಂಹಾಸನ , ಮಧ್ವಾಚಾರ್ಯ ಮತ್ತು ದುರ್ಗಾ ದೇವಿಯರನ್ನು ದೂರದಿಂದಲೇ ನೋಡಲು ಅವಕಾಶ. ಸದ್ಯದ ಅರಸರು ತುಮುಕೂರಿನಲ್ಲಿ ಉಡ್‌ಲ್ಯಾಂಡ್‌ ಹೋಟಲಿನ ಮಾಲಕರು ಹಬ್ಬ ಹರಿದಿನ ಉತ್ಸವಗಳಿಗೆ ಮಾತ್ರ ಇಲ್ಲಿಗೆ ಬಂದು ಆಚರಣೆಗಳನ್ನು ವಿಧಿವತ್ತಾಗಿ ಆಚರಿಸುವರು.
ಅಲ್ಲಿಂದ ಉದ್ಯಾವರಕ್ಕೆ ಹೊರಟೆವು.ಅಲ್ಲಿನ ವೈಶಿಷ್ಟ್ಯವೆಂದರೆ ಹಿಂದೂ ಮುಸ್ಲಿಂ ಸಾಮರಸ್ಯ.ಅಲ್ಲಿರುವ ಸೋದರ ದೈವಗಳು ( ಭೂತಗಳ) ಉತ್ಸವ ಮಾಡುವಾಗ ಮಸೀದೆಗೆ ಭೇಟಿ ನೀಡುವುದು ಕಡ್ಡಾಯ. 
ಬೊಬ್ಬರ್ಯ ಮತ್ತು ಅದರ ಸೋದರ ದೈವದ ದೇಗುಲ ಮತ್ತು ರಥಗಳಿವೆ. ಅಲ್ಲಿರುವ ಶಿಲಾಸಿಂಹಾಸನದಲ್ಲಿ ಪಾತ್ರಿ ಕುಳಿತು ತೀರ್ಮಾನ ಮಾಡುವರು. ಸರ್ವಜನಾಂಗದವರೂ ಒಟ್ಟಾಗಿ ಸೇರುವರು. ಅಲ್ಲಿ ಗುಡಿ (ಧ್ವಜ) , ಖಡ್ಗ ಹಿಡಿಯುವವರು , ಪಾ
ತ್ರಿ, ಮಾತಿಗೆ  ಸಿಕ್ಕರು ಅವರ ಕೆಲಸ ವಂಶಪಾರ್ಯಪರವಾಗಿರುವುದು. ಆ ಸಮಯದಲ್ಲಿ ಜಾತಿ ಬೇಧವಿಲ್ಲದೆ ಒಟ್ಟಾಗಿ ಸೇರುವರು.ತಳ ಸಮುದಾಯದವರು ಆರಾಧಿಸುವ ದೈವವೇ ವೈದಿಕರು ಆರಾಧಿಸಿದರೆ  ದೇವರಾಗುವುದು ಉದಾಹರಣೆಗೆ ದುರ್ಗ ಪರಮೇಶ್ವರಿ ಎಂಬ ಡಾ. ಇಂದಿರಾ ಹೆಗಡೆಯವರ ವಿವರಣೆ ಸೂಕ್ತ ಎನಿಸಿತು.ಸಮುದಾಯದಲ್ಲಿನ  ಜನಸಾಮಾನ್ಯರೇ ತಮ್ಮ ಅಸೀಮ ಸಾಧನೆಯಿಂದ ದೈವದ ಮಟ್ಟಕ್ಕೆ ಏರಿರುರವರು ಎಂಬ ಅಂಶ ಗಮನಾರ್ಹ.ಕೋಲ, ಕಂಬಳ, ನಾಗಮಂಡಲ, ಭೂತಾರಾಧನೆ ತುಳು ನಾಡಿನ ಉಪ ಸಂಸ್ಕೃತಿಯ ಹೆಗ್ಗುರುತುಗಳು.
ತುಳುವರು   ದೇಶ, ವಿದೇಶದಲ್ಲಿ ಎಲ್ಲಿಯೇ ಇದ್ದರೂ ಇಲ್ಲಿನ ಉತ್ಸವಕ್ಕೆ  ಬಂದು ಸೇರುವರು. 

ರಾತ್ರಿಯ ವೇಳೆಗೆ ಸೂರತ್ಕಲ್‌ಗೆ ಬಂದು ಸೇರಿದೆವು ಅಲ್ಲಿ ಡಾ. ಇಂದಿರಾಅವರ ಫ್ಲಾಟ್‌ಇದೆ. ಕಡಲತೀರಕ್ಕೆ ಸಮೀಪ. ಬಾಲ್ಕನಿಯಲ್ಲಿನಿಂತರೆ ಸೂರ್ಯಾಸ್ತ ಕಾಣುವುದು.ಹೆಸರು Sea Beach Pearlಅದು ಸಮುದ್ರ ದ ತೀರದಲ್ಲಿಹಸಿರಿನ ನಡುವೆ ಇದೆ. ಅವರ ಫ್ಲಾಟ್‌ನ ಪಕ್ಕದಲ್ಲೇ ಖಾಲಿರುವ ಇನ್ನೊಂದುಫ್ಲಾಟ್‌ ಸಹಾ ನಮಗೆ ದೊರಕಿತು ಹಾಗಾಗಿ ನಮ್ಮ ವಸತಿ ಸಮಸ್ಯೆ ಪರಿಹಾರವಾಗಿತ್ತು.ಹೆಗಡೆ ದಂಪತಿಗಳ ಆತಿಥ್ಯ ನೆನಪಿನಲ್ಲಿಡುವಂತಿದ್ದಿತು.ರಾತ್ರಿ  ಭೂರಿಭೋಜನ. ನಂತರ ರಾತ್ರಿ ಬಹು ಹೊತ್ತಿನ ವರೆಗೆ ಮೂರ್ತಿ ಶಿಲ್ಪ ವಾಸ್ತು ಶಿಲ್ಪ ಮತ್ತು ಇತಹಾಸ ಕುರಿತ ಕುರಿತ ಸಂವಾದ ಬಹು ಆಸಕ್ತಿ ದಾಯಕವಾಗಿತ್ತು . ಮೈಸೂರಿನ ಡಾ. ಎಂ. ಎನ್‌ ಪ್ರಭಾಕರ ಮುರ್ತಿ ಶಿಲ್ಪ ತಜ್ಞರು. ವೃತ್ತಿಯಿಂದ ಬ್ಯಾಂಕ್‌ನ ನಿವೃತ್ತ ಅಧಿಕಾರಿ. ಮದಲ್ಲಿ ಹಸ್ತ ಪ್ರತಿ ಅಧ್ಯಯನದಲ್ಲಿ ಆಸಕ್ತಿ. ನಂತರ ಮುರ್ತಿಶಿಲ್ಪದಲ್ಲಿಆಳವಾದ ಅಧ್ಯಯನ ಮಾಡಿ ಕೃತಿ. ಡಾ. ದೇವರ ಕೊಂಡಾ ರೆಡ್ಡಿಯವರದು ಪಾಂಡಿತ್ಯ ಪೂರ್ಣ ಮಾತು.ಯಾವುದೇ ವಿಷಯವಿದ್ದರೂ ಇದಮಿಥ್ಥಂ ಎಂದು ಹೇಳಬಲ್ಲರು. ರಚನೆ ಮಾಡಿರುವರು.ಸಮುದ್ರದ ತಂಗಾಳಿಯಿಂದ ನಿದ್ದೆ ಬಂದ್ದದೇ ಗೊತ್ತಾಗಲೇ ಇಲ್ಲ. ಬೆಳಗ್ಗೆ ಕಣ್ಣು ಬಿಡುವ ಮೊದಲೆ ಬೆಡ್‌ಕಾಫಿಯೊಡನೆ ಎಸ್‌ಆರ್‌ ಹೆಗಡೆ ಯವರು ಹಾಜರು. ಅಷ್ಟೇ ಅಲ್ಲ ಯಾರಿಗೆ ಸಕ್ಕರೆ ಸಹಿತ ಮತ್ತು ಯಾರಿಗೆ ಸಕ್ಕರೆ ರಹಿತ ಎಮದು ನೆನಪಿಟ್ಟು ಕೊಂಡು ತಂದಿದ್ದರು.ಅದಕ್ಕೆ ಮೊದಲೇ ಹಿಂದಿನ ದಿನ ಇಪ್ಪತ್ತು ಜನರ ಊಟ ಉಪಚಾರದೊನಡ ಸಂಗ್ಹವಾಗಿದ್ದ ಪ್ಲಾಸ್ಟಿ ತಟ್ಟೆ ಲೋಟ ಮತ್ತು ಕಸವನ್ನುಶಿಸ್ತಾಗಿ ಚೀಲದಲ್ಲಿ ಹಾಕಿ ಚೊಕ್ಕವಾಗಿ ಚೀಲದಲ್ಲಿ ಹಾಕಿ ಕಸದ ತೊಟ್ಟಿಗೆ ಸೇರಿಸಿದ್ದರು.ಅವರ ಮಿಲಿಟರಿ ತರಬೇತಿಯ ಪರಿಣಾಮ ಅವರ ದೈನಂದಿನ ನಡೆನುಡಿಯಲ್ಲಿ ಎದ್ದು 

ಣುತಿತ್ತು.ಬೆಳಗಾಗುತ್ತಲೇ ನಮ್ಮ ಮಹಿಳಾ ಸಹಪಯಣಿಗರು ಮೊದಲು ಮಾಡಿದ ಕೆಲಸವೆಂದರೆ ಸಮುದ್ರದ ತೀರಕ್ಕೆ ಧಾವಿಸಿದ್ದು.. ಅದನ್ನು ನೋಡಿದ ರೆಡ್ಡಿಯವರು ತಾವೂ ಲಗುಬಗೆಯಿಂದ ಅವರನ್ನು ಹಿಂಬಾಲಿಸಿದರು. ಇವರಿಗೆ ಸಮುದ್ರದ ಅಪಾಯ ತಿಳಿಯದು ಜೊತೆಯಲ್ಲಿ ನಾವು ಇರಲೇಬೇಕು. ಹೊಸ ಜಾಗದಲ್ಲಿ ನೀರಿಗೆ ಇಳಿದರೆ ಅನಾಹುತವಾಗಬಹುದು ಕ್ಷಣಿಕಎನ್ನುವುದು ಅವರ ಕಳಕಳಿ. ನನಗೆ ಹಿಂದ ಶಾಲಾಮಕ್ಕಳನ್ನು ನಾವು ಶೈಕ್ಷಣಿಕ ಪ್ರವಾಸಕ್ಕೆ ಕರೆದೊಯ್ದಾಗ ತೆಗೆದು ಕೊಳ್ಳುತಿದ್ದ ಮುನ್ನೆಚ್ಚರಿಕೆ ನೆನಪಿಗೆ ಬಂದಿತು.  ಮಕ್ಕಳು ಮೊಮ್ಮಕ್ಕಳನ್ನು ಕಂಡಿದ್ದ ಮಹಿಳೆಯರು ಮತ್ತೆ ಬಾಲ್ಯದ ದಿನಕ್ಕೆ ಹಿಂದಿರುಗಿದವರಂತೆ ನೀರಾಟವಾಡಿದರು . ಅವರನ್ನು ನೀರಿನಿಂದ ಹೊರ ಕರೆತರಲು ಹರ ಸಾಹಸ ಮಾಡ ಬೇಕಾಯಿತು.
ನಾವೆಲ್ಲ ಪ್ರತಃ ವಿಧಿಗಳನ್ನು ಪೂರೈಸಿ ಹೊರಟೆವು ನಮ್ಮ ಗೆಳೆಯ ಗುರುಪ್ರಸಾದ್ ಶಿಸ್ತುಗಾರ . ಚಾರಣ ಪ್ರಿಯ.  ದಿನಾ ಗಲ್ಲಮಿರಿಮಿರಿಮಿಂಚವುದು. ಆಲ್ಲಿ ಕನ್ನಡಿಯೇ ಇರಲಿಲ್ಲ. ಷೇವ್‌ಮಾಡಿಕೊಳ್ಳುವ ಬಗೆ ಹೇಗೆ ಎಲ್ಲರೂ ತಲೆ ಕೆರದುಕೊಳ್ಳುತ್ತಿರುವಾಗ ಅವರು ಬಾಲ್ಕನಿಯಲ್ಲಿರುವ ಗಾಜಿನ ಬಾಗಿಲಿನೆದುರಿಗೆ ನಿಂತು ಅಲ್ಲಿ ಕಂಡ ಪ್ರತಿಬಂಬದಿಂದಲೇ ತಮ್ಮ ಕಾರ್ಯ ಮುಗಿಸಿದರು. ಅವಶ್ಯ ಕತೆಯೇ ಅನ್ವೇಷಣೆಯ ತಾಯಿ ಎಂಬ ಮಾತು ನೆನಪಿಗೆ ಬಂದಿತು
ಮಾರನೆಯದಿನ ಮಲ್ಪೆಗೆ ಹೋಗಿ ಸೆಂಟ್‌ ಮೇರಿ ದ್ವೀಪದ ವೀಕ್ಷಣೆ. ಹಾದಿಯಲ್ಲಿ ಬರುವ ಮುಲ್ಕಿಯ  ಸ್ವಾಗತ ಹೋಟೆಲ್‌ನಲ್ಲಿ ಉಪಹಾರವಾಯಿತು. ಅದರ ಮಾಲಕರು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿಅಧ್ಯಕ್ಷರಾದ ಶ್ರೀ ಹರಿಕೃಷ್ಣ ಪುನರೂರರು. ನಮ್ಮಲ್ಲಿ  ಅನೇಕರಿಗೆ ಚಿರಪರಿಚಿತರು. ಅವರ ಜೊತೆ ಮಾತನಾಡುವಾಗ ನಮ್ಮ ಹಸ್ತ ಪ್ರತಿ ಅಭಿಯಾನದ ಕುರಿತು ಹೇಳಿದೆ. ತಕ್ಷಣ ಅವರು ತಮ್ಮ ಮನೆಯಲ್ಲಿ ಹಸ್ತ ಪ್ರತಿ ಇರುವುದು ಕೊಡುವೆ  ಎಂದರು.ಅಲ್ಲಿ ತುಳುಸಮಸ್ಕೃತಿಯ ಉಳಿವಿಗೆ ಮಾಡುತ್ತಿರವ ಪ್ರಯತ್ನ ಕಂಡು ಬಂದಿತು


 ನಮಗೆ ಹೋಗುವ ಅವಸರ. ಬರುವಾಗ ಪಡೆಯಿರಿ, ತರಿಸಿ ಇಡುವೆ ಎಂದುಆಶ್ವಾಸನೆ ನೀಡಿದರು.ನಾವು ಮೂವರು,ಶ್ರೀ ಎಂ. ಎನ್‌ಪ್ರಭಾಕರ್‌, ಗುರು ಪ್ರಸಾದ ಮತ್ತು ನಾನು ಉಡುಪಿಯಲ್ಲೇ ಉಳಿದು ಅಲ್ಲಿನ ಹಸ್ತ ಪ್ರತಿ ಸಂರಕ್ಷಣ ಕಾರ್ಯ ನೊಡಿ ಬರಲು ಹೋದೆವು. ಉಡುಪಿಯ ಮಠಕ್ಕೆ ಹೊದ ಮೇಲೆ ತಿಳಿಯಿತು. ಹಸ್ತಪ್ರತಿ ಸಂರಕ್ಷಣೆಯ ಕೆಲಸವನ್ನು ಪುತ್ತಿಗೆಯ ಮೂಲ ಮಠದಲ್ಲಿ ಮಾಡುತ್ತಿರುವರು ಎಂದು. ಅದು ಹಿರಿಯಡ್ಕದಿಂದ ಆರು ಕಿಲೋ ಮೀಟರ್‌ ದೂರದಲ್ಲಿರುವುದಾಗಿ ತಿಳಿಯಿತು. ಅಲ್ಲದೆ ಸ್ವಾಮೀಜಿಯವರು ಅಮದು ಮಠದಲ್ಲಿ ಇರಲಿಲ್ಲ. ಸಂಬಂಧಿಸಿದ ಅಧಿಕಾರಿಗಳೂ ಸಂಪರ್ಕಕ್ಕೆ ಸಿಕ್ಕಲಿಲ್ಲ. ಹಾಗಾಗಿ ಫೋನ್‌ ನಂಬರ್‌ ಪಡೆದು ವಾಪಸ್ಸು ಮಲ್ಪೆಗೆ ಬಂದೆವು. ಅಲ್ಲಿ ಸೇಂಟ್‌ ಮೇರಿ ದ್ವೀಪದ ವೀಕ್ಷಣೆ ಮುಗಿಸಿ ಬಂದ ನಮ್ಮ ತಂಡವನ್ ಸೇರಿಕೊಂಡೆವು ಮಧ್ಯಾಹ್ನದ ಭೋಜನ ಕಟ್ಟಿತಂದಿದ್ದ ಪಲಾವ್‌ ಇದ್ದಿತು.




 ವಾಪಸ್‌ ಬರುತ್ತಾ ಬೊಪ್ಪನಾಡು ಅರಮನೆಗೆ ಹೋದೆವು ಅದರ ನವೀಕರಣ ನಡೆಯುತಿತ್ತು


ಅಲ್ಲಿಂದ ದುರ್ಗಾ ಪರಮೇಶ್ವರಿ ದೇಗುಲಕ್ಕೆ ಭೇಟಿ ನೀಡಿದೆವು. ಅಲ್ಲಿನ ಬೃಹತ್‌ ಡೋಲು ತುಂಬ ಹೆಸರುವಾಸಿ ಸುಮಾರು ಹತ್ತು ಅಡಿ ಉದ್ದ ಮತ್ತು ನಾಲ್ಕು ಅಡಿ ಎತ್ತರವಿರಬಹುದು. ಇದನ್ನುಬಾರಿಸಲು ಬಹ ಶಕ್ತಿಬೇಕು ಅದಕ್ಕೆ ಬರಿ ಮೈ ಬೆಳಸಿ ಬುದ್ದಿ ಬೆಳಸದ ವಿದ್ಯಾರ್ಥಿಗಳಿಗೆ ಬೊಪ್ಪನಾಡಿನ ಡೋಲು ಬಾರಿಸಲು ಲಾಯಕ್‌ ಎಂದು  ಹಂಗಿಸುವರು.ಅಲ್ಲಿ ವಿಶೇಷವೆಂದರೆ ಬೆಳಗಿನಿಂದ ರಾತ್ರಿಯವರೆಗೆ ದರ್ಶನ ಪಡೆಯಬಹುದು.ಆಮೂರ್ತಿಯು ಬೊಪ್ಪಬ್ಯಾರಿಗೆ ದೊರೆತದ್ದು ಎಂಬ ಪ್ರತಿತಿ.ಬೊಪ್ಪನಾಡಿನಲ್ಲಿ ಇದು ಪ್ರಸಿದ್ಧ ದೇವಾಲಯ.ಅಲ್ಲಿಂ ಸಿದಾ ಸೂರತ್ಕಲ್‌ಗೆ ಬಂದು ಸೂರ್ಯಾಸ್ತ ನೊಡಿ ಮನೆಗೆ ವಾಪಸ್ಸು ಬಂದೆವು ಊಟ ಮುಗಿಯುವ ಮೊದಲು ಡಾ. ಜಯಮ್ಮ ಕರಿಯಣ್ಣ ಲೆಕ್ಕಪತ್ರ ಒಪ್ಪಿಸಿದರು. ಹೆಗಡೆ ದಂಪತಿಗಳ ಆತಿಥ್ಯದಿಂದಾಗಿ ಊಟ ವಸತಿಯ ವೆಚ್ಚ ಉಳಿತಾಯವಾಗಿತ್ತು ಪ್ರತಿಯೊಬ್ಬರಿಗೂ ನಾಲ್ಕುನೂರು ರೂಪಾಯಿ ವಾಪಸ್ಸು ಬಂದಿತು. ಮೂರುದಿನ ಮೂರು ನಿಮಿಷಗಳಂತೆ ಕಳೆದುದು ಒಂದುವಿಶೇಷ ಅನುಭವವಾಗಿತ್ತು.









 




 


ಹೊರೆ ಕಾಣಿಕೆ

ದೈವದ ಶಿಲಾಸಿಂಹಾಸನ
ದೈವದ