Sunday, June 16, 2013

ಅಳುಪ ಅರಸು ಮನೆತನ-ಡಾ. ಪಿ ಎನ್‌ನರಸಿಂಹ ಮೂರ್ತಿ

ಆಳುಪ ಅರಸು ಮನೆತನದ ರಾಣಿಯರು ಮತ್ತು ರಾಜಕುವರಿಯರು
ಡಾ. ಪಿ.ಎನ್. ನರಸಿಂಹಮೂರ್ತಿ
ಗುರುಕೃಪನಂ. ೨೦೩೧
೧೦ನೇ ಕ್ರಾಸ್ಕಲ್ಲಹಳ್ಳಿವಿ.ವಿ. ನಗರ
ಮಂಡ್ಯ-೫೭೧೪೦೧ರ್ನಾಟಕದ ವಿಶಿಷ್ಟ ಭೌಗೋಳಿಕ ಸನ್ನಿವೇಶ ಹೊಂದಿರುವ ಪ್ರದೇಶ ಕರಾವಳಿ. ಭೋರ್ಗರೆವ ಪಶ್ಚಿಮ ಕಡಲು ಒಂದೆಡೆಯಾದರೆ ಮುಗಿಲೆತ್ತರಕ್ಕೆ ಏರಿರುವ ಸಹ್ಯಾದ್ರಿ ಬೆಟ್ಟ ಸಾಲುಗಳು; ಇದರ ಬಿಳಿಲುಗಳಂತೆ ಸಮುದ್ರದವರೆಗೂ ಚಾಚಿರುವ ಗುಡ್ಡ ಸಾಲುಗಳು; ಕಿರಿದಾದ ಕಣಿವೆಗಳು, ಇದ್ದೂ ಇಲ್ಲದಂತಿರುವ ಬಯಲು; ಮಳೆಗಾಲದಲ್ಲಿ ಭೋರ್ಗರೆದು ಆನಂತರ ಶಾಂತವಾಗಿ ಪಶ್ಚಿಮ ಕಡಲಿಗೆ ಹರಿದೋಡುವ ಅಸಂಖ್ಯ ತೊರೆ, ಹೊಳೆ, ನದಿಗಳು. ಕಣಿವೆ, ಬಯಲುಗಳಲ್ಲಿ ನೇಗಿಲ ಕಜ್ಜವಾದರೆ, ಗುಡ್ಡ ಬೆಟ್ಟಗಳಲ್ಲಿ ಪ್ರಕೃತಿಯ ಓಕುಳಿಯಾಟ; ಹಚ್ಚ ಹಸುರಿನ ಸೆರಗು ಹೊತ್ತ ವಯ್ಯಾರದ ನೋಟ. ಅನುಭವಿಸಿ, ಆಸ್ವಾದಿಸಿ ಆನಂದಿಸುವವರಿಗೆ ಇದು ಸುಂದರ ಲೋಕ. ಕ್ಷಾತ್ರ ತೇಜ, ಆಡಳಿತ, ಆರ್ಥಿಕ ಚಟುವಟಿಕೆ, ವ್ಯಾಪಾರ, ವಾಣಿಜ್ಯ, ಸಮಾಜ, ಸಂಸ್ಕೃತಿ, ಧರ್ಮ, ದೇವ-ದೇವಿಯರು, ದೈವಗಳು, ಭೂತಗಳು, ನಂಬಿಕೆ, ಆಚರಣೆ, ಪೂಜೆ, ಉತ್ಸವ, ತೀರ್ಥ ಕ್ಷೇತ್ರಗಳು ಇತ್ಯಾದಿಯಾಗಿ ಎಲ್ಲಕ್ಕೂ ಇಲ್ಲಿದೆ ವಿಷಯ ಪ್ರವಾಹ. ಪರಂಪರಾಗತ ನಂಬಿಕೆಗಳ ಆಗರವಾದರೂ ಇಲ್ಲಿದೆ. ಆಧುನಿಕತೆಯ ಸಿಂಗಾರ. ಅಪೂರ್ವ ಎನ್ನಲೇಬೇಕಾದ ಪ್ರದೇಶ; ಇದು ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿದೆ.
ಕ್ರಿಸ್ತ ವರ್ಷಾರಂಭಕ್ಕೆ ಇಲ್ಲಿ ಸ್ವತಂತ್ರ, ಬಲಿಷ್ಠ ಮತ್ತು ಗೌರವಯುತ ರಾಜಕೀಯ ವಾತಾವರಣ ಇತ್ತು. ತಮಿಳು ಸಂಗಂ ಸಾಹಿತ್ಯದ ಪ್ರಕಾರ ನಣ್ಣನ್ ಇದರ ಪ್ರಥಮ ಪ್ರಭಾವೀ ರಾಜ ತಮಿಳು ರಾಜರೊಂದಿಗೆ ನಡೆದ ಹಲವಾರು ಯುದ್ಧಗಳಲ್ಲಿ ಈತ ಜಯಶಾಲಿಯಾಗಿದ್ದ. ಕೊನೆಗೆ ಚೇರ ರಾಜ ಕೞಂಗಾಯಕ್ಕಣ್ಣಿ ನಾರ್ಮುಡಿಚ್ಚೇರಲ್‌ನೊಡನೆ ನಡೆದ ಯುದ್ಧದಲ್ಲಿ ಮರಣ ಹೊಂದಿದ ಆನಂತರ ಈ ಭಾಗವನ್ನು ಆಳಿದವರು ಆಳುಪರು. ಸಾವಿರಕ್ಕೂ ಹೆಚ್ಚು ವರ್ಷಗಳ ಕಾಲ ಈ ಭಾಗದಲ್ಲಿ ಅವಿಚ್ಛಿನ್ನವಾಗಿ ಆಳ್ವಿಕೆ ನಡೆಸಿದವರು ಇವರು. ಸಾಮಂತರಾದರೂ ಸಾಮ್ರಾಜ್ಞರಂತೆ ಮೆರೆದ ಅತ್ಯಂತ ನಂಬಿಕಾರ್ಹ ಭೃತ್ಯರು. ತಮ್ಮ ದೀರ್ಘವಾದ ಆಳ್ವಿಕೆ ಕಾಲದಲ್ಲಿ ಇಂದಿನ ತುಳುವ ಸಮಾಜ ಮತ್ತು ಸಂಸ್ಕೃತಿಗೆ ಭದ್ರ ಬುನಾದಿಯನ್ನು ಇವರು ಹಾಕಿದರು. ಈ ಪರಂಪರೆಯ ಬೆಳವಣಿಗೆಯ ಜ್ಞಾನ ಸರಿಯಾಗಿ ಇಲ್ಲದಿದ್ದರೆ ಇಲ್ಲಿಯ ಸಮಾಜ, ಆಚಾರ-ವಿಚಾರ, ನಡೆ-ನುಡಿ ಇತ್ಯಾದಿಗಳ ಸ್ಪಷ್ಟ ಪರಿಚಯ ಆಗುವುದು ಕಷ್ಟ.
ತುಳುನಾಡಿನ ವಿಶಿಷ್ಟ ಸಂಸ್ಕೃತಿಯ ಜೀವನಾಡಿ ಮಹಿಳೆ. ಇಲ್ಲಿಯ ಪ್ರತಿಯೊಂದು ರೀತಿಯ ಬೆಳವಣಿಗೆಯಲ್ಲೂ ಈಕೆಯ ಪಾತ್ರ ಮಹತ್ವ ಪೂರ್ಣವಾದುದು. ಇಲ್ಲಿರುವುದು ಮಾತೃ ಪ್ರಧಾನ ಕುಟುಂಬ ವ್ಯವಸ್ಥೆ. ಸ್ಥಳೀಯವಾಗಿ ಇದನ್ನು “ಅಳಿಯ ಸಂತಾನ ಕಟ್ಟು’’ ಎಂದು ಕರೆಯಲಾಗಿದೆ ಬಹುಮಂದಿ ಇದರ ಅನುಸರಿಗಳಾಗಿದ್ದರೂ ಸಮಾಜದ ಎಲ್ಲ ವರ್ಗಗಳೂ ಈ ಕಟ್ಟಿನ ಚೌಕಟ್ಟಿನೊಳಗಿವೆ ಎಂಬುದು ಇದರ ಅರ್ಥವಲ್ಲ. ಆದರೆ ಸ್ತ್ರೀ ಹಾಗು ಮಾತೆಯ ಗೌರವ ಮತ್ತು ಸ್ಥಾನಮಾನಗಳಿಗೆ ಸರ್ವತ್ರ ಎಂದೂ ಚ್ಯುತಿ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಈ ಭಾಗದ ಮಹಿಳಾ ಕಾರ್ಯಗಳ ಅಧ್ಯಯನಕ್ಕೊಂದು ಮೆರುಗು ಇದೆ.
ದಿನನಿತ್ಯದ ಆಗುಹೋಗುಗಳಲ್ಲಿ ಸಾಮಾನ್ಯ ಮಹಿಳೆಯ ಪಾತ್ರ ಹಿರಿದಾಗಿದ್ದರೂ ಅದು ಬಹುತೇಕ ಗೋಚರಕ್ಕೆ ಬಾರದೇ ಹೋಗುತ್ತದೆ. ಇದಕ್ಕೆ ಅಪವಾದಗಳಿರಬಹುದು. ಆದರೆ ಅದರ ಸಂಖ್ಯೆ ಬೆರಳೆಣಿಕೆಯಷ್ಟು. ಅರಸು ಮನೆತನಗಳ ಮತ್ತು ಹಿರಿಯ ಅಧಿಕಾರಿ ವಂಶಗಳ ಮಹಿಳೆಯರ ಕಾರ್ಯ ಚಟುವಟಿಕೆಗಳ ಒಂದಲ್ಲ ಒಂದು ರೀತಿಯಲ್ಲಿ ಇತಿಹಾಸದಲ್ಲಿ ದಾಖಲಾಗುವ ಸನ್ನಿವೇಶಗಳು ಹೆಚ್ಚು. ಇವರ ಕಾರ್ಯ ವೈಖರಿಗಳು ಸಾಮಾನ್ಯರ ಮೇಲೂ ಪ್ರಭಾವ ಬೀರಬಲ್ಲವಾಗಿರುವ ಕಾರಣ, ಇದು ಸ್ತ್ರೀ ಶಕ್ತಿಯನ್ನು ಅಳೆಯಲು ಪರೋಕ್ಷ ಸಹಕಾರಿ ಎಂದು ತಿಳಿಯಬಹುದು. ಈ ನಿಟ್ಟಿನಲ್ಲಿ ಆಳುಪ ಅರಸು ವಂಶದ ಕೆಲವು ಪ್ರಮುಖ ರಾಜಕುವರಿಯರ ಮತ್ತು ರಾಣಿಯರ ಸಾಧನೆಯ ಕಿರು ಸಮೀಕ್ಷೆಯನ್ನು ಇಲ್ಲಿ ಮಾಡಲಾಗಿದೆ.
ಆಳುಪರು ರಾಜಕೀಯವಾಗಿ ಬೆಳೆದುದು ಅವರು ತಮ್ಮ ಸಾಮ್ರಾಟರು ಮತ್ತು ಸಾಮಂತರೊಂದಿಗೆ ಬೆಳೆಸಿಕೊಂಡಿದ್ದ ಮಧುರ ಸಂಬಂಧದಿಂದ. ಇದಕ್ಕೆ ಸೇತುವಾಗಿದ್ದವರು ಅವರ ರಾಣಿಯರು ಮತ್ತು ರಾಜಕುವರಿಯರು. ಈ ಸಂಬಂಧಗಳನ್ನು ಮೂರು ಹಂತಗಳಲ್ಲಿ ಗುರುತಿಸಬಹುದು - ೧) ಆಳುಪ-ಬನವಾಸಿ ಕದಂಬ, ೨) ಆಳುಪ-ಬಾದಾಮಿ ಚಲುಕ್ಯ ಮತ್ತು ೩) ಆಳುಪ-ಸಾಂತರ ಸಂಬಂಧಗಳು. ಇದು ಪರಸ್ಪರ ಕೊಡು-ಕೊಳ್ಳುವಿಕೆಯ ನೆಲೆಯಲ್ಲಿ ಭದ್ರವಾಗಿತ್ತು.
೧. ಆಳುಪ ಇತಿಹಾಸ ಪ್ರಾರಂಭವಾಗುವುದೇ ಕದಂಬ ಕಾಕುಸ್ಥವರ್ಮನ ಹಲ್ಮಿಡಿ ಶಾಸನ ಕಾಲದಿಂದ (ಸು. ಕ್ರಿ.ಶ. ೪೨೦ ಇಲ್ಲಿ ಆಳುಪಗಣ ಪಶುಪತಿಯ ಉಲ್ಲೇಖ ಇದೆ. ಈತ ಕದಂಬ ರಾಜಕುಮಾರಿ ಕಾಕುಸ್ಥವರ್ಮನ ಮಗಳಾದ ಲಕ್ಷ್ಮಿಯನ್ನು ಮದುವೆಯಾಗಿದ್ದ. ಈ ಸಂಬಂಧ ಎರಡೂ ವಂಶಗಳನ್ನು ಗಟ್ಟಿಯಾಗಿ ಬೆಸೆದಿತ್ತು. ಇವರ ಮಗ ಕಾಕುಸ್ಥ ಭಟರಿ. ಈತ ಹತ್ತು ಮಾಂಡಲಿಕರ ನಾಯಕನಾಗಿ ಮತ್ತು ಸುಂಕದ ಅಧಿಕಾರಿಯಾಗಿ ದಕ್ಷತೆ ಮೆರೆದು ಎಲ್ಲರ ಪ್ರೀತಿಪಾತ್ರನಾಗಿದ್ದ ಲಕ್ಷ್ಮಿ ನೇರವಾಗಿ ರಾಜಕೀಯದಲ್ಲಿ ಪ್ರವೇಶಿಸಿದ್ದು ಕಂಡುಬರದಿದ್ದರೂ ತನ್ನ ಮಗನ ಕಾರ್ಯ ಚಟುವಟಿಕೆಗಳ ಮೇಲೆ ನಿಗಾ ಇಟ್ಟು ಅಪಾರವಾದ ಪ್ರಭಾವ ಬೀರಿರಬೇಕು. ಈ ಸಂಬಂಧ ಯಾವ ರೀತಿಯಲ್ಲಿ ಮುಂದುವರೆದಿತ್ತು ಎಂಬುದಕ್ಕೆ ಆಧಾರಗಳ ಕೊರತೆ ಇದೆ.
೨. ಬನವಾಸಿ ಕದಂಬರ ಸೋಲು ಮತ್ತು ಅಂತ್ಯದಿಂದ ಪ್ರಾರಂಭವಾಗುತ್ತದೆ ಬಾದಾಮಿ ಚಲುಕ್ಯರ ಅಭ್ಯುದಯ. ಕದಂಬರಿಗೆ ಬಹಳ ನಿಷ್ಠರಾಗಿದ್ದ ಆಳುಪರನ್ನು ಬಾದಾಮಿ ಚಲುಕ್ಯರು ತಮ್ಮ ಮುತ್ಸದ್ದಿತನದಿಂದಲೇ ಸ್ನೇಹ ಸಂಬಂಧಕ್ಕೆ ಒಳಪಡಿಸಿದರೆಂದು ಕಾಣುತ್ತದೆ. ಇದಕ್ಕಿರುವ ಸ್ಪಷ್ಟ ನಿದರ್ಶನವೆಂದರೆ ಚಲುಕ್ಯ ಮೊದಲ ಕೀರ್ತಿವರ್ಮ ತನ್ನ ತಮ್ಮ ಮಂಗಳೇಶನ ವಿವಾಹವನ್ನು ಆಳುಕ (ಆಳುಪ) ಮಹಾರಾಜನ ಮಗಳಾದ ಕದಂಬ ಮಹಾದೇವಿಯೊಂದಿಗೆ ನೆರವೇರಿಸಿದ್ದ. ಈ ಸಂಬಂಧ ಆಳುಪ-ಚಲುಕ್ಯ ಮನೆತನಗಳ ಪ್ರಮುಖ ಸಂಪರ್ಕ ಸೇತುವಾಯಿತು. ಇದು ಎಷ್ಟು ಗಾಢವಾಗಿತ್ತು ಎಂಬುದನ್ನು ಕ್ರಿ.ಶ.೫೯೮ಕ್ಕೆ ಸೇರುವ ಮಾರಟೂರು ಶಾಸನ ತಿಳಿಸುತ್ತದೆ. ಕ್ಷಾತ್ರ ಮತ್ತು ಧರ್ಮ ತೇಜಗಳನ್ನು ಮೈಗೂಡಿಸಿಕೊಂಡಿದ್ದ ಆಳುಪ ರಾಜಕುಮಾರಿ ಕದಂಬ ಮಹಾದೇವಿ ಸಾಮ್ರಾಟ ಮಂಗಳೇಶನಿಗೆ ತಕ್ಕ ರಾಣಿಯಾಗಿ, ಒಡತಿಯಾಗಿ ರಾಜಕಾರ್ಯದಲ್ಲಿ ಭಾಗಿಯಾಗಿದ್ದಳು. ಸದಾ ಸಾಮ್ರಾಜ್ಯದ ಹಿತ ಕಾಯುವುದರಲ್ಲೇ ನಿರತನಾಗಿದ್ದ ಆಳುಕ ಮಹಾರಾಜ ಸಾಮ್ರಾಟನ ಕರೆಗೆ ಓಗೊಟ್ಟು ತನ್ನ ವಾರ್ಧಕ್ಯವನ್ನೂ ಮರೆತು ಮಂಗಳಾಪುರದಿಂದ (ಇಂದಿನ ಮಂಗಳೂರು) ದೂರದ ಮಾರಟೂರಿಗೆ (ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆ) ಹೋಗಿ ಅಲ್ಲಿ ಚಕ್ರವರ್ತಿಗೆ ಯುದ್ಧದಲ್ಲಿ ಜಯ ದೊರಕಿಸಿಕೊಟ್ಟು ನಂತರ ಸೈನಿಕ ನೆಲೆಯಲ್ಲಿದ್ದಾಗ ಅಸುನೀಗಿದ ಕದಂಬ ಮಹಾದೇವಿಯು ತನ್ನ ತಂದೆಯ ಉತ್ತರಕ್ರಿಯಾದಿಗಳನ್ನು ಅಲ್ಲೇ ನೆರವೇರಿಸಿ ಅವನ ಪರೋಕ್ಷ-ವಿನಯಕ್ಕಾಗಿ ಹಲವು ಜನ ಬ್ರಾಹ್ಮಣರಿಗೆ ಮತ್ತು ಒಬ್ಬ ಯತಿಗೆ ಭೂ ದಾನಗಳನ್ನು ಮಾಡಿದಳು. ಚಕ್ರವರ್ತಿ ಇದನ್ನು ಶಾಸನಾಂಕಿತ ಮಾಡಿಸಿದ. ಇದರಲ್ಲಿ ಆಳುಕ ಮಹಾರಾಜನ ಗುಣಗಾನವಿದೆ. ಇದರಲ್ಲಿ ಹೆಸರಿಸಿರುವ ಆಳುಕ ಮಹಾರಾಜ ಇಷ್ಟರವರೆಗೆ ಬೆಳಕಿಗೆ ಬಾರದೆ ಇದ್ದ ಒಬ್ಬ ಪ್ರಖ್ಯಾತ ಆಳುಪ ರಾಜ. ಈತನ ಮಗಳು ಮೊದಲಬಾರಿಗೆ ಆಳುಪ-ಚಲುಕ್ಯ ಸಂಬಂಧಕ್ಕೆ ಸೇತುವಾದಳು, ೬ನೆಯ ಶತಮಾನದ ಉತ್ತರಾರ್ಧದ ಆಳುಪ ಇತಿಹಾಸ ನಮಗೆ ದೊರೆಯುವಂತೆ ಮಾಡಿದಳು.
ಇದಾದ ಬಹಳ ಸಮಯದ ನಂತರ ನಮಗೆ ದೊರೆಯುವ ಹೆಸರು ರಾಣಿ ಮಹಾದೇವಿ. ಈಕೆ ಆಳುಪ ಗುಣಸಾಗರ (ಒಂದನೆಯ ಆಳುವರಸ)ನ ಮಡದಿ ಎಂದು ಕಿಗ್ಗ ಶಾಸನ (ಕ್ರಿ.ಶ.೬೭೫) ತಿಳಿಸುತ್ತದೆ೧೦ ಈಕೆಯ ಬಗ್ಗೆ ಹೆಚ್ಚಿನ ಮಾಹಿತಿಯೇನೂ ಲಭ್ಯವಿಲ್ಲ. ಪ್ರಾಯಶಃ ಈಕೆ ಅಂದಿನ ಹೆಸರಾಂತ ಅರಸು ಮನೆತನದ ರಾಜಕುವರಿ ಇರಬೇಕು. ಇಲ್ಲಿ ಎರಡು ಸಾಧ್ಯತೆಗಳನ್ನು ಸೂಚಿಸಬಹುದು: ೧) ಸೇನ್ದ್ರಕ ರಾಜಕುಮಾರಿ ೨) ಚಲುಕ್ಯ ರಾಜಕುಮಾರಿ. ಸೇನ್ದ್ರಕರು ಶಿವಮೊಗ್ಗ ಮತ್ತು ಅದರ ಉತ್ತರ ಭಾಗದಲ್ಲಿ ಆಳುತ್ತಿದ್ದು, ರಾಜಕೀಯವಾಗಿ ಪ್ರಬಲರಾಗಿದ್ದರು. ಚಲುಕ್ಯರಿಗೆ ಆಪ್ತರಾಗಿದ್ದ ಒಂದು ಪ್ರಮುಖ ಸಾಮಂತ ಪ್ರಾಚೀನ ರಾಜ ವಂಶ. ಇವರ ನೈಋತ್ಯ ಭಾಗದ ಕರಾವಳಿ ಪ್ರದೇಶವನ್ನು ಆಳುತ್ತಿದ್ದವರು ಆಳುಪರು. ಇವರೂ ಸಹ ಬಾದಾಮಿ ಚಲುಕ್ಯರ ಪರಮಾಪತ್ತ ಭೃತ್ಯರು. ಈ ನೆಲೆಯಲ್ಲಿ ಆಳುಪ-ಸೇನ್ದ್ರಕ ಸ್ನೇಹ ಸಂಬಂಧ ಬೆಸೆದು ಅದು ಆಳುವರಸ ಗುಣಸಾಗರ ಮತ್ತು ಮಹಾದೇವಿಯರ ವಿವಾಹದಿಂದ ಭದ್ರವಾಗಿರಬಹುದು. ಇನ್ನು ಎರಡನೆಯದಾಗಿ ಯೋಚಿಸುವುದಾದರೆ ಬಾದಾಮಿ ಚಲುಕ್ಯ ಸಂಬಂಧ. ಇದರಲ್ಲಿ ಅಚ್ಚರಿಯ ಸಂಗತಿ ಏನೂ ಕಾಣುವುದಿಲ್ಲ. ಕಾರಣ ಈಗಾಗಲೇ ಚಲುಕ್ಯ ಮಂಗಳೇಶ ಆಳುಪ ರಾಜಕುಮಾರಿಯಾದ ಕದಂಬ ಮಹಾದೇವಿಯನ್ನು ಮದುವೆಯಾಗಿದ್ದ ವಿಚಾರವನ್ನು ಮೇಲೆ ನೋಡಿದ್ದೇವೆ. ಈಕೆ ಆಳುಕ ಮಹಾರಾಜನ ಮಗಳು. ಆತ ಕೈಗೊಂಡ ದೂರದ ಪ್ರಯಾಣ ಮತ್ತು ಅದರಿಂದಾದ ಆಯಾಸ, ನಂತರ ಭಾಗವಹಿಸಿದ ಯುದ್ಧಗಳು ಆಗಲೇ ವಾರ್ಧಕ್ಯದ ಹಿರಿತನದಲ್ಲಿದ್ದ ದೇಹಕ್ಕೆ ಘಾಸಿ ಉಂಟುಮಾಡಿದುದರಿಂದ ಆಗಿರಬೇಕು. ಪ್ರಾಯಶಃ ಆಳುವರಸ ಗುಣಸಾಗರ ಈತನ ಮೊಮ್ಮಗನಿರಬೇಕು. ಈ ಗುಣಸಾಗರ ಮತ್ತು ಮಹಾದೇವಿಯರ ಮಗ ಚಿತ್ರವಾಹನ ಚಲುಕ್ಯ ರಾಜಕುಮಾರಿ ಕುಂಕುಮದೇವಿಯನ್ನು ವಿವಾಹವಾಗಿದ್ದ ವಿಚಾರ ಬಹಳ ಖ್ಯಾತಿಯನ್ನು ಗಳಿಸಿದೆ.
ಆಳುಪರು ತಮಗೆ ಅತ್ಯಂತ ಕಷ್ಟಕಾಲದಲ್ಲಿ ಮಾಡಿದ ಸೇವೆಗಾಗಿ ಚಲುಕ್ಯ ವಿನಯಾದಿತ್ಯನು ತನ್ನ ಮಗಳಾದ ಕುಂಕುಮದೇವಿಯನ್ನು ಆಳುಪ ಚಿತ್ರವಾಹನನಿಗೆ ವಿವಾಹ ಮಾಡಿಕೊಟ್ಟ. ಇದರ ಪ್ರಸ್ತಾಪ ಚಕ್ರವರ್ತಿಯ ಶಿಗ್ಗಾವ್ ತಾಮ್ರ ಶಾಸನದಲ್ಲಿದೆ೧೧ ಈ ಶಾಸನ ಕ್ರಿ.ಶ.೭೦೬ಕ್ಕೆ ಸೇರಿದ್ದು. ಈ ವಿವಾಹ ಆಳುಪರು ಅಲ್ಲಿಯವರೆಗೆ ಮಾಡಿದ್ದ ಶ್ರೇಷ್ಠ ಸೇವೆ ಮತ್ತು ಸಾಧನೆಗೆ ಹಾಗೂ ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿದೆ. ಸಾಮಂತ ರಾಜಕುಮಾರನೋರ್ವ ಸಾಮ್ರಾಟ ರಾಜಕುವರಿಯ ಕೈ ಹಿಡಿಯುವುದೇನು ಸಾಮಾನ್ಯ ವಿಷಯವಲ್ಲ. ಈ ನಿಟ್ಟಿನಲ್ಲಿ ಕುಂಕುಮದೇವಿ ಬೆಸೆದ ಸಂಬಂಧ ಶ್ಲಾಘನೀಯ. ಈಕೆ ರಾಜಕೀಯ ಅಷ್ಟೇ ಅಲ್ಲದೆ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಬಹಳ ಯಶಸ್ವಿಯಾಗಿ ಬೆಳೆಸಿದ್ದಳು. ಈಕೆಯ ಅಣ್ಣ ಚಕ್ರವರ್ತಿ ವಿಜಯಾದಿತ್ಯ ಪರಮಭಾಗವತ, ಪತಿ ಆಳುಪ ಚಿತ್ರವಾಹನ ಪರಮ ಶಿವಭಕ್ತ (ಪಾಶುಪತರ ದೊರೆ) ಆದರೆ ತಾನು ಪರಮ ಜಿನ ಭಕ್ತೆ. ಈ ಮೂವರೊಳಗಿನ ಸಂಬಂಧ ಹಾಲು-ಸಕ್ಕರೆಯಂತಿತ್ತು. ಸಾಮಾನ್ಯವಾಗಿ ಇಂತಹ ಸಂಬಂಧಗಳನ್ನು ಸಾಧಿಸಿ ಬಲಪಡಿಸುವ ಶಕ್ತಿ ಮತ್ತು ಮನೋಧರ್ಮ ಹೆಣ್ಣಿಗೆ ಹೆಚ್ಚು. ಅಸಾಧಾರಣ ಮಹಿಳೆಯಾದ ಕುಂಕುಮದೇವಿ ಇದನ್ನು ಬಹಳ ಯಶಸ್ವಿಯಾಗಿ ಪ್ರೀತಿ ಮತ್ತು ವಿಶ್ವಾಸದಿಂದ ಸಾಧಿಸಿದಳು.
ಕುಂಕುಮದೇವಿ ಪುರಿಗೆರೆ (ಇಂದಿನ ಲಕ್ಷ್ಮೇಶ್ವರ)ದಲ್ಲಿ ಆನೆಸಜ್ಜೆಯ ಬಸದಿಯನ್ನು ಪತಿಯ ಸಹಕಾರದಿಂದ ಕಟ್ಟಿಸಿದಳು. ಇದರ ಪೂಜಾಕಾರ್ಯಗಳಿಗಾಗಿ ಚಕ್ರವರ್ತಿ ವಿಜಯಾದಿತ್ಯನು ಗುಡಿಗೆರೆ ಗ್ರಾಮವನ್ನು ದಾನ ಮಾಡುವಂತೆ ಮಾಡಿದಳು. ಈ ಗ್ರಾಮ ದಾನಕ್ಕೆ ಹೆಂಡತಿಯ ಪರವಾಗಿ ಬೇಡಿಕೆ ಸಲ್ಲಿಸಿದವ ಆಳುಪ ರಾಜ೧೨ ಇಲ್ಲಿ ಆಳುಪ ರಾಣಿಯ ಪಾತ್ರ ಹಿರಿದಾದುದೆಂದು ಹೇಳಬೇಕಾದುದಿಲ್ಲ. ಕುಂಕುಮದೇವಿ ತುಳುನಾಡಿನ ಸೊಸೆಯಾಗಿ ಬಂದ ಕಾರಣ ಈ ಭಾಗದಲ್ಲಿ ಜೈನ ಧರ್ಮದ ಕಾರ್ಯ ಚಟುವಟಿಕೆಗಳು ಗರಿಗೆದರಿ ಬಲಗೊಂಡವು.
ತುಳುನಾಡಿನಲ್ಲಿ ಈಕೆ ಏನು ಮಾಡಿದಳು ಎಂಬುದಕ್ಕೆ ನಮಗೆ ಇನ್ನೂ ಮಾಹಿತಿ ದೊರೆಯಬೇಕಿದೆ. ಆಳುಪ ರಾಜ್ಯ ಆಗ ಇಡೀ ಕದಂಬ ಮಂಡಲಸಹಿತವಾದ ವಿಶಾಲವಾದ ಮತ್ತು ಆಯಕಟ್ಟಿನ ರಾಜ್ಯವಾಗಿತ್ತು. ಇದರ ಆಡಳಿತ ಮತ್ತು ಶಾಂತಿ ಪಾಲನೆ ಕ್ಲಿಷ್ಟಕರವಾಗಿತ್ತು.೧೩ ಇದರ ಸುಗಮ ಕಾರ್ಯಾಚರಣೆಗಾಗಿ ಕುಂಕುಮವೆಂಬ ತನ್ನ ಪತಿಯೊಡನೆ ಸಹಕರಿಸಿರಬೇಕು. ಈ ಕಾಲದ ಹೊಸ ಶಾಸನಗಳು ತೃಪ್ತಿಕರ ಸಂಖ್ಯೆಯಲ್ಲಿ ದೊರೆತಲ್ಲಿ ಇದರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗುವುದು.
೩. ಕೇವಲ ಸಾಮ್ರಾಟರೊಂದಿಗೆ ಕೊಡು-ಕೊಳ್ಳುವಿಕೆಯ ಸಂಬಂಧವನ್ನು ರಾಜಕಾರಣದಲ್ಲಿ ಸ್ನೇಹ ಬಲವರ್ಧನೆಗಾಗಿ ಆಳುಪರು ಬೆಳೆಸಿದ್ದಲ್ಲ. ಇಂತಹುದೇ ಸಂಬಂಧವನ್ನು ತಮ್ಮ ಅಧಿಕಾರಿ ಸಾಮಂತರಾದ ಹೊಂಬುಚ್ಛ ಸಾಂತರರೊಂದಿಗೂ ಹೊಂದಿದ್ದರು. ಈ ಸಂಬಂಧಕ್ಕೆ ಸೇತುವಾದವರು ಎರಡೂ ಕಡೆಯ ರಾಜಕುಮಾರಿಯರು. ಇವರು ವಿವಾಹಾನಂತರ ರಾಣಿಯರಾದರು. ಇವರಲ್ಲಿ ಮೂರು ಜನ ಆಳುಪ ಹಾಗೂ ಒಬ್ಬಳು ಸಾಂತರ ರಾಜಕುಮಾರಿಯರ ಪಾತ್ರ ಹಿರಿದಾದುದು.
ಏಂಜಲದೇವಿ
ಹತ್ತನೆಯ ಶತಮಾನದ ಪ್ರಾರಂಭದಲ್ಲಿ ಆಳುಪ ರಣಂಜಯನು ತನ್ನ ಮಗಳಾದ ಏಂಜಲದೇವಿಯನ್ನು ಸಾಂತರ ರಾಜ ಚಾಗಿ ಸಾಂತರನಿಗೆ ಮದುವೆ ಮಾಡಿಕೊಟಿದೆ೧೪ ಇದಕ್ಕೆ ಹಿಂದಿನ ಸಂಬಂಧಗಳ ಮಾಹಿತಿ ಇಲ್ಲದ ಕಾರಣ ಸದ್ಯಕ್ಕೆ ಏಂಜಲದೇವಿ ಆಳುಪ-ಸಾಂತರ ಸಂಬಂಧದ ಪ್ರಥಮ ಸೇತು ಆದಳು. ವಿಕ್ರಮ ಸಾಂತರನ ಮಗ ಚಾಗಿ ಸಾಂತರ. ವಿಕ್ರಮ ಸಾನ್ತರನಿಗೆ ವಿಕ್ರಮಾದಿತ್ಯ ಸಾಂತರ ಎಂಬ ಹೆಸರೂ ಇತ್ತು.೧೫ ಈತ ಸುಮಾರು ಕ್ರಿ.ಶ.೮೯೦ರಿಂದ ೯೩೫ರ ವರೆಗೆ ಆಳಿದ. “ಆಳುಪರ ಸಂಬಂಧವನ್ನು ಹೊಂದಿದ್ದ ವಿಕ್ರಮಾದಿತ್ಯ ವೀರಸಾನ್ತರನು ತನ್ನ ಮಗನಾದ ಚಾಗಿ ಸಾನ್ತರನಿಗೆ ಆಳುಪ ರಣಂಜಯನ ಮಗಳಾದ ಏಂಜಲದೇವಿಯನ್ನು ಲಗ್ನಮಾಡಿ ಈ ಎರಡು ಮನೆತನಗಳಿಗೆ ರಾಜಕೀಯ ಬೆಸುಗೆ ಹಾಕಿದನು’’ ಎಂದು ಹಂಪ ನಾಗರಾಜಯ್ಯ ಹೇಳುತ್ತಾರೆ೧೬ ಆದರೆ ಮುಂದೆ ಸಾಂತರ ವಂಶಾವಳಿ ಕೊಡುವಾಗ ವೀರಸಾಂತರನ ಹೆಂಡತಿ ಏಂಜಲದೇವಿ, ಈಕೆ ಆಳುಪ ರಣಂಜಯನ ಮಗಳು ಎಂದು ಹೇಳಿದ್ದಾರೆ.೧೭ ಇದು ತಪ್ಪು. ಆಳ್ವ ರಣಂಜಯ ಈತನ ಸಮಕಾಲೀನ೧೮ ರಣಂಜಯ ಸುಮಾರು ಕ್ರಿ.ಶ.೯೦೦ರಿಂದ ೯೩೦ರ ವರೆಗೆ ಆಳಿದ ಎಂದು ಡಾ. ಕೆ.ವಿ. ರಮೇಶ ಅವರು ಅಭಿಪ್ರಾಯಪಡುತ್ತಾರೆ೧೯.
ಇದಾದ ಬಹಳ ಕಾಲದ ನಂತರ ಸಾಂತರ ರಾಜ ಅಂಮಣದೇವ ತನ್ನ ಮಗಳಾದ ಬೀರಬ್ಬರಸಿ (ಬೀರಲದೇವಿ) ಯನ್ನು ಆಳುಪ ರಾಜ ಬಂಕಿದೇವನಿಗೆ ಮದುವೆ ಮಾಡಿಕೊಟ್ಟ ಮತ್ತು ತನ್ನ ಮಗ ಸಾಂತರ ತೈಲಪದೇವನಿಗೆ ಆಳುಪ ರಾಜಕುಮಾರಿ ಬಂಕಿದೇವನ ತಂಗಿಯಾದ ಮಂಕಬ್ಬರಸಿಯನ್ನು ತಂದು ಮದುವೆ ಮಾಡಿದ. ಇದರಿಂದ ಆಳುಪ-ಸಾಂತರ ಸಂಬಂಧ ಮತ್ತೆ ಗಟ್ಟಿಯಾಯಿತು. ನಂಬಿಕೆ, ಪ್ರೀತಿ ಮತ್ತು ವಿಶ್ವಾಸದಿಂದ ನೆರವೇರಿದ ಈ ಸಂಬಂಧಗಳಿಗೆ ಇರ್ವರು ರಾಜಕುವರಿಯರು ಸರಕುಗಳಾದರು ಎಂದು ಕಂಡುಬಂದರೂ ಹಾಗೆನ್ನಲು ಸಾಧ್ಯವಿಲ್ಲ. ಕಾರಣ ಮುಂದೆ ಇರ್ವರೂ ತಾವು ಸೇರಿದ ವಂಶಗಳ ಬೆಳಕಾದರು. ಇವರ ಕುಡಿಗಳು ಆಯಾ ರಾಜ್ಯದ ಚುಕ್ಕಣಿ ಹಿಡಿದವು. ಇದೇನೂ ಸಾಮಾನ್ಯವಾದ ಸಾಧನೆಯಲ್ಲ. ಸಾಂತರ ಅಂಮಣ ಆಳುಪ ಬಂಕಿದೇವನ ಸಾಮಂತ. ಈತ ಕರಾವಳಿಯ ಮೇಲೆ ಧಾಳಿ ಮಾಡಿದ್ದ ಚೋಳರ ಸೈನ್ಯವನ್ನು ಧೂಳಿಪಟ ಮಾಡಿ ತನ್ನ ಸ್ವಾಮಿ ಬಂಕಿದೇವನಿಗೆ ಆತನ ರಾಜ್ಯ ಪುನಃ ದೊರೆಯುವಂತೆ ಮಾಡಿದ ಎಂದು ಬಾರಕೂರಿನ ಒಂದು ಶಾಸನ ತಿಳಿಸುತ್ತದೆ೨೦ ಇದೇ ವಿಷಯ ಇಲ್ಲಿನ ಇನ್ನೊಂದು ಶಾಸನದಲ್ಲೂ ಪ್ರಸ್ತಾಪವಾಗಿದೆ. ಆದರೆ ಈ ಶಾಸನದ ಪೂರ್ಣ ಪಾಠ ಲಭ್ಯವಿಲ್ಲ೨೧ ಬಂಕಿದೇವ ಸುಮಾರು ಕ್ರಿ.ಶ.೧೦೨೦ರಿಂದ ೧೦೫೦ರ ವರೆಗೆ ಆಳಿದ ಎಂದು ರಮೇಶ್ ಅವರು ಅಭಿಪ್ರಾಯಪಡುತ್ತಾರೆ೨೨ ಮುಂದೆ ಬಂಕಿದೇವನ ನಂತರ ಪಟ್ಟಣಕ್ಕೆ ಬಂದ ಆಳುಪ ಪಟ್ಟಿಯೊಡೆಯನು ತನ್ನ ಮಗಳಾದ ಅಚಲಾದೇವಿಯನ್ನು ಸಾಂತರ ತೈಲಪದೇವನ ಮಗನಾದ ವೀರ ಸಾಂತರನಿಗೆ ಮದುವೆ ಮಾಡಿಕೊಟ್ಟ. ವೀರ ಸಾಂತರನಿಗೆ ರಾಯ ಸಾಂತರ ಎಂಬ ಇನ್ನೊಂದು ಹೆಸರೂ ಇತ್ತು೨೩ ಅಚಲಾದೇವಿ ತನ್ನ ಪತಿ ವೀರ ಸಾಂತರನಿಗೆ ಆತನ ರಾಜಕಾರ್ಯದಲ್ಲಿ ಸದಾ ನೆರವಾಗಿದ್ದಳು ಎಂಬ ವಿಚಾರ ಉದಿಯಾವರದ ಒಂದು ಶಾಸನದಿಂದ ತಿಳಿಯುತ್ತದೆ.೨೪
ಈ ರೀತಿಯ ಆಳುಪ-ಸಾಂತರ ಸಂಬಂಧಗಳು ನಿರಂತರವಾಗಿ ಮುಂದುವರೆದಿತ್ತು ಎಂಬುದಕ್ಕೆ ನಂತರದ ಕಾಲಗಳಲ್ಲೂ ಹಲವಾರು ನಿದರ್ಶನಗಳು ದೊರೆಯುತ್ತವೆ೨೫ ಕಳಸ-ಕಾರ್ಕಳ ರಾಜ್ಯವನ್ನು ಮುಂದೆ ಆಳಿದ ರಾಜವಂಶ ಸಾಂತರ ಮೂಲದ್ದು.
ಮುಂದೆ ೧೨-೧೩ನೆಯ ಶತಮಾನಗಳಲ್ಲಿ ಬಹಳ ಕ್ರಿಯಾಶೀಲವಾಗಿದ್ದು ಮತ್ತು ಶಾಸನೋಕ್ತವಾಗಿರುವ ಪ್ರಮುಖ ಆಳುಪ ಅರಸಿಯರೆಂದರೆ-ಪಾಂಡ್ಯಮಹಾದೇವಿ, ಜಾಕಳಮಹಾದೇವಿ, ಪಟ್ಟಮಹಾದೇವಿ ಮತ್ತು ಬಲ್ಲ ಮಹಾದೇವಿಯರು. ಕವಿಆಳುಪನ (ಕ್ರಿ.ಶ.೧೧೧೦-೧೧೬೦) ರಾಣಿ ಪಾಂಡ್ಯಮಹಾದೇವಿ. ಈಕೆ ರಾಜ್ಯದ ಆಡಳಿತದಲ್ಲಿ ಸಕ್ರಿಯವಾಗಿ ಭಾಗವಹಿಸಿ, ಪನ್ನೀರ್ಪಳ್ಳಿ ಭಾಗದ ಅಧಿಕಾರಿಯಾಗಿಯೂ ಕರ್ತವ್ಯ ನಿರ್ವಹಿಸಿದ್ದಳು ಎಂದು ಶಾಸನಗಳಿಂದ ತಿಳಿದುಬರುತ್ತದೆ.೨೬
ರಾಜ ಒಂದನೆಯ ಕುಲಶೇಖರನ (ಕ್ರಿ.ಶ.೧೧೬೦-೧೨೨೦) ಮಡದಿ ಜಾಕಲಮಹಾದೇವಿ. ಕುಂದಣನ ವರಾಂಗ ಶಾಸನವು (ಸು. ಕ್ರಿ.ಶ.೧೨೨೦) ಆಳುಪರ ಸಾಧನೆಗಳೊಂದಿಗೆ ಜಾಕಳಮಹಾದೇವಿಯ ಸಾಧನೆಯನ್ನು ವಿವರಿಸುತ್ತದೆ೨೭ ಈಕೆ ಪ್ರಖ್ಯಾತವೂ, ಪ್ರಾಚೀನವೂ ಆದ ಜೈನಕ್ಷೇತ್ರ (ಕಾರ್ಕಳ ತಾಲ್ಲೂಕು) ವರಾಂಗದ ನೇಮಿಶ್ವರ ಬಸದಿಯ ಜೀರ್ಣೋದ್ಧಾರ ಮಾಡಿ ಅಲ್ಲೊಂದು ಸುಂದರವಾದ ತಟಾಕವನ್ನು ನಿರ್ಮಿಸುತ್ತಾಳೆ. ಈಕೆಯ ಕಾರ್ಯ ಮೇಲೆ ವಿವರಿಸಿರುವ ಕುಂಕುಮದೇವಿಯ ಕಾರ್ಯಕ್ಕೆ ಸಮನಾದುದು.
ಪಟ್ಟಮಹಾದೇವಿ
ಆಳುಪ ರಾಜ ವಲ್ಲಭದೇವನ (ಕ್ರಿ.ಶ.೧೨೩೦-೧೨೫೦) ಮಡದಿ ಪಟ್ಟಮಹಾದೇವಿ. ಶಾಸನಗಳು ಈಕೆಯನ್ನು ‘ಪಟ್ಟವ ಪಿರಿಯರಸಿ ಪಟ್ಟಮಹಾದೇವಿ ಎಂದೇ ಉಲ್ಲೇಖಿಸಿವೆ.೨೮ ಇದೇ ಈಕೆಗೆ ರಾಜ್ಯಾಡಳಿತದಲ್ಲಿದ್ದ ವರ್ಚಸ್ಸನ್ನು ಸೂಚಿಸುವಂತಿದೆ. ಗಂಡನ ಆಳ್ವಿಕೆ ಕಾಲದಲ್ಲಿ ಆದ ಎಲ್ಲ ಪ್ರಮುಖ ನಿರ್ಧಾರಗಳಿಗೆ ಮತ್ತು ದಾನಕಾರ್ಯಗಳಿಗೆ ಈಕೆ ಸಾಕ್ಷಿಯಾಗಿದ್ದಳು. ರಾಜಸಭೆಯಲ್ಲಿ ಈಕೆಯೂ ಸದಾ ಉಪಸ್ಥಿತಳಿದ್ದಳು. ಈಕೆ ಸಾಂತರ ವೀರ ಜಗದೇವರಸನ ಅಕ್ಕ. ಹಾಗಾಗಿ ಕೆಲವೊಮ್ಮೆ ವೀರ ಜಗದೇವರಸನೂ ಆಳುಪ ರಾಜಸಭೆಯಲ್ಲಿ ಉಪಸ್ಥಿತನಿರುತ್ತಿದ್ದ೨೯
ಪಟ್ಟಮಹಾದೇವಿಯು ತನ್ನ ಗಂಡ ವಲ್ಲಭದೇವನ ಮರಣಾನಂತರ ಮಗನಾದ ವೀರಪಾಂಡ್ಯನನ್ನು ಸಿಂಹಾಸನದಲ್ಲಿ ಕುಳ್ಳಿರಿಸಿ ಸ್ವಲ್ಪ ಕಾಲ ತಾನೇ ರಾಜ್ಯ ಸೂತ್ರ ವಹಿಸಿಕೊಂಡಳು ಎಂದು ಕಾಣುತ್ತದೆ೩೦ ರಾಜ್ಯದ ಹಿತರಕ್ಷಣೆ ರಕ್ಷಣೆ ಸಲುವಾಗಿ ಈ ಜವಾಬ್ದಾರಿ ಹೊತ್ತಿದ್ದೇ ಹೊರತು ಸರ್ವಾಧಿಕಾರಿ ಹಂಬಲದಿಂದಲ್ಲ. ಈಕೆ ತನ್ನ ಸೊಸೆ ಬಲ್ಲಮಹಾದೇವಿಯೂ ರಾಜ್ಯಾಡಳಿತದ ಜವಾಬ್ದಾರಿ ಹೊರುವಂತೆ ಮಾಡಿದಳು. ಇದೂ ಸಹ ರಾಜಮಾತೆ ಪಟ್ಟಮಹಾದೇವಿಯಲ್ಲಿ ಸರ್ವಾಧಿಕಾರಿ ಮನೋಭವ ಇರಲಿಲ್ಲ ಎಂಬುದನ್ನು ಸೂಚಿಸುತ್ತದೆ. ಕಿರಿಯರಿಗೆ ಆಡಳಿತದಲ್ಲಿ ಶಿಕ್ಷಣ ನೀಡುವ ಮನೋಭಾವ ಇವಳಲ್ಲಿತ್ತು. ತನ್ನ ಜೀವನದ ಇಳಿವಯಸ್ಸಿನಲ್ಲೂ ಈಕೆ ಈ ಜವಾಬ್ದಾರಿಗಳನ್ನೆಲ್ಲಾ ಹೊತ್ತಿದ್ದಳು ಎಂಬ ವಿಚಾರವನ್ನು ಸುಮಾರು ಕ್ರಿ.ಶ.೧೨೭೪ಕ್ಕೆ ಸೇರುವ ಬಾರಕೂರು ಕೋಟೆಕೇರಿಯ ಒಂದು ಶಾಸನ ತಿಳಿಸುತ್ತದೆ೩೧ ಪ್ರಾಯಶಃ ಈಕೆ ಇದೇ ವರ್ಷ ಮರಣ ಹೊಂದಿರಬೇಕು.
ಬಲ್ಲಮಹಾದೇವಿ
ವೀರ ಪಾಂಡ್ಯದೇವನು ಮರಣ (ಕ್ರಿ.ಶ.೧೨೭೫) ಹೊಂದಿದಾಗ ಆತನ ಮಗ ಇನ್ನೂ ಕಿರಿಯವನಾಗಿದ್ದ. ಇದರಿಂದ ರಾಜಕುಮಾರ ಮತ್ತು ರಾಜ್ಯದ ಜವಾಬ್ದಾರಿ ಬಲ್ಲಮಹಾದೇವಿಯದಾಯಿತು. ಬಲ್ಲಮಹಾದೇವಿ ತನ್ನ ಅತ್ತೆ ಪಟ್ಟಮಹಾದೇವಿಯಿಂದಲೇ ಆಡಳಿತದ ಶಿಕ್ಷಣ ಪಡೆದಳು ಎಂದು ಮೇಲೆ ಹೇಳಿದೆ. ಇದರಿಂದಾಗಿ ಪತಿ ವೀರಪಾಂಡ್ಯ ದೇವನು ಮರಣ ಹೊಂದಿದಾಗ ಮಗ ನಾಗದೇವರಸನು ಅಪ್ರಾಪ್ತನಾಗಿದ್ದರೂ ಧೃತಿಗೆಡದೆ ರಾಜಕಾರ್ಯ ಸೂತ್ರ ಹಿಡಿಯಲು ಈಕೆ ಸಿದ್ಧವಾಗಿದ್ದಳು. ಕ್ರಿ.ಶ.೧೨೭೫ರಿಂದ ೧೯೨೦ ರವರೆಗೆ ತಾನೇ ರಾಜ್ಯಭಾರ ಮಾಡಿದಳು೩೨ ಆನಂತರ ಮಗನನ್ನು ಸಿಂಹಾಸನದಲ್ಲಿ ಕುಳ್ಳಿರಿಸಿ ೧೯೯೨ ರವರೆಗೆ ಜಂಟಿಯಾಗಿ ಆಳ್ವಿಕೆ ನಡೆಸಿದಳು. ನಂತರ ನಾಗದೇವರಸ ಸ್ವತಂತ್ರವಾಗಿ (ಕ್ರಿ.ಶ.೧೩೦೦ರವರೆಗೆ) ರಾಜ್ಯವಾಳಿದ.೩೩
“ಶ್ರೀಮತು ಪಟ್ಟದ ಪಿರಿಯರಸಿ ಬಲ್ಲಮಹಾ ದೇವಿಯರು’’ ಎಂಬುದು ಶಾಸನಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಈಕೆ ಪ್ರಶಸ್ತಿ೩೪ ಕೆಲವು ಶಾಸನಗಳಲ್ಲಿ ‘ಪಾಂಡ್ಯ ಚಕ್ರವರ್ತಿ ಎಂಬ ಉಲ್ಲೇಖವೂ ಇದೆ೩೫ ‘ಸ್ವಸ್ತಿ ಶ್ರೀಮತು ಶ್ರೀಮನ್ಮಾನಾಭರಣೇಶ್ವರ ದೇವರ ವಂಶಾನ್ವೆಯರುಂ ಪಶ್ಚಿಮ ಸಮುದ್ರಾಧಿಪತಿಯರುಂ ಶ್ರೀಮತು ಪಟ್ಟದ ಹಿರಿಯರಸಿ ಬಲ್ಲಮಹಾದೇವಿಯರು’’ ಎಂದು ಈಕೆಯ ಕೆಂಜೂರು ಶಾಸನ ತಿಳಿಸುತ್ತದೆ೩೬ ಬಹಳ ತ್ರುಟಿತವಾಗಿರುವ ಪೆರ್ಣಂಕಿಲ ಶಾಸನದಲ್ಲಿ ಆಳುಪರಿಗಿದ್ದ ಎಲ್ಲ ಸಾರ್ವಭೌಮ ಸೂಚಕ ಪ್ರಶಸ್ತಿಗಳೂ ಈಕೆಗಿವೆ೩೭.
ಮೂಡ ಅಲೆವೂರಿನ ಶಾಸನದಲ್ಲಿರುವ ಈಕೆಯ ಪ್ರಶಸ್ತಿ ಇಲ್ಲಿ ಉಲ್ಲೇಖಾರ್ಹ. “ಅನವರತ ಪರಮ ಕಲ್ಯಾಣಾಭ್ಯುದಯ ಸಹಸ್ರ (ಫಳ ಭೋಗ) ಭಾಗಿನಿ ದ್ವಿತೀಯ ಲಕ್ಷ್ಮೀ ಸಮಾನೆ .... ಗಮನೆಯರುಂ . ಮದಗಜ(ಗಮ)ನೆಯರುಂ ... ಪ್ರತ್ಯಕ್ಷ ಪಾರ್ವತಿಯರುಂ ಪತಿವ್ರತಾ ಅರುಂಧತಿಯರುಂ ಸೋಮ ಕುಲೋದ್ಭವರುಂ .... ಕುಲ ಪ್ರಖ್ಯಾತೆಯರುಂ ಗೋತ್ರ ಪವಿತ್ರೆಯರುಂ ಬಂಧುಜನ ಚಿಂತಾಮಣಿಯರುಂ ಆಶ್ರಿತ ಜನ ಕಲ್ಪವ್ರಿಕ್ಷರುಂ ದಾನವಿನೋದಿಗಳುಂ ಸುವರ್ನ ದಾನ ಸೂಱೆಕಾಱರಯರುಂ ಮರೆಹೊಕ್ಕರ ಕಾವರುಂ ಶರಣಾಗತ ವಜ್ರ ಪಂಜರರುಮಪ್ಪ ಶ್ರೀ ಮಂಜುನಾಥ ದೇವರ ದಿವ್ಯಶ್ರೀಪಾದ ಪದ್ಮಾರಾಧಕೆಯರುಂ ಶ್ರೀ ಪರಬಳಸಾಧಕೆಯರುಮಪ್ಪ ಸ್ವಸ್ತಿ ಶ್ರೀಮತು ಪಟ್ಟದ ಪಿರಿಯರಸಿ ಬಲ್ಲಮಹಾದೇವಿಯರು’’೩೮ ಬಹಳ ಹಾಳಾಗಿರುವ ಕುದಿ ಗ್ರಾಮದ ಶಾಸನದಲ್ಲೂ ಸಹ ಈ ಪ್ರಶಸ್ತಿ ಪ್ರತಿಧ್ವನಿತವಾಗಿದೆ೩೯ ಬೇರಾವುದೇ ಆಳುಪ ರಾಣಿಗೆ ಇಲ್ಲದ ಪ್ರಶಸ್ತಿ-ಪ್ರಶಂಸೆ ಇಲ್ಲಿದೆ. ಇಲ್ಲಿ ಹೊಗಳಿಕೆಯ ಅಂಶ ಸ್ವಲ್ಪ ಇರಬಹುದು. ಆದರೆ ಸಾಕಷ್ಟು ಸಾಧನೆಗೈದ ಅರ್ಹತೆ ಇಲ್ಲದಿದ್ದಲ್ಲಿ ಅಂದಿನ ಪುರುಷ ಸಮಾಜ ರಾಣಿಯಾದರೂ ಸ್ತ್ರೀಯೊರ್ವಳನ್ನು ಈ ರೀತಿಯ ಸಾಮಾಜಿಕ ಗೌರವಕ್ಕೆ ಪಾತ್ರಳೆಂದು ಗುರುತಿಸುತ್ತಿರಲಿಲ್ಲ. ಇದಕ್ಕೆ ಶಾಸನೋಕ್ತವಾಗಿಯೇ ಹಲವು ಉದಾಹರಣೆಗಳನ್ನು ಕೊಡಬಹುದು.
ಈಕೆ “ಮಾನಾಭರಣೇಶ್ವರ ದೇವರ ವಂಶಾನ್ವಯೆ’’ ಎಂಬ ಬಗ್ಗೆ ಸರಿಯಾದ ಅರ್ಥ ಮೂಡಿಲ್ಲ. ಈ ಬಗ್ಗೆ ಇರುವ ತರ್ಕಗಳನ್ನು೪೦ ಒಂದೆಡೆಯಿಟ್ಟು ತುಳುನಾಡಿನ ಶಾಸನಗಳಲ್ಲಿ ದೊರೆಯುವ ಮಾಹಿತಿ ಆಧಾರದಲ್ಲಿ ಚಿಂತಿಸುವುದಾದರೆ ಈಕೆ ಬಲ್ಲವೆರ್ಗಡೆಯ ಮಗಳು ಇರಬಹುದು. ವೀರ ಪಾಂಡ್ಯದೇವನ (ಕ್ರಿ.ಶ.೧೨೫೪ರ) ಶಾಸನವೊಂದರಲ್ಲಿ೪೧ ಬಲ್ಲವೆರ್ಗಡೆಯ ಉಲ್ಲೇಖ ಇದೆ. ಆನಂತರ ಬಲ್ಲಮಹಾದೇವಿಯ ಶಾಸನಗಳಲ್ಲಿ ನರಸಿಂಗ ಹೆಗ್ಗಡೆಯ ಪ್ರಸ್ತಾಪ ವಿಶೇಷವಾಗಿದೆ.೪೨ ಪ್ರಾಯಶಃ ಈ ನರಸಿಂಗ ಹೆಗ್ಗಡೆಯೇ ಬಲ್ಲವೆರ್ಗಡೆ. ಬಲ್ಲಮಹಾದೇವಿಯ ಹೆಸರಿನಲ್ಲಿರುವ ಪೂರ್ವ ಪದ ‘ಬಲ್ಲ ತುಳುನಾಡಿನ ಪೂರ್ವ ಭಾಗದಲ್ಲಿದ್ದ ‘ಬಲ್ಲಹ ಪಾಳೆಯಪಟ್ಟನ್ನು ಸೂಚಿಸುವು ದಾಗಿರಬೇಕು. ೯ನೆಯ ಶತಮಾನದ ಬಂಟ್ರ ಶಾಸನದಲ್ಲಿ೪೩ ಬಲ್ಲ ವೊಡೆಯರ ಉಲ್ಲೇಖ ಇದೆ. ಈ ಶಾಸನದಲ್ಲಿ ಮರ್ದಾಳದ (ಈಶ್ವರ) ದೇವರ ಮತ್ತು ಕುಕ್ಕೆ (ಸುಬ್ರಹ್ಮಣ್ಯ ಮತ್ತು ಕುಕ್ಕೆ ಲಿಂಗ) ಉಲ್ಲೇಖ ಇದೆ. ಪ್ರಾಯಶಃ ಇಲ್ಲಿಯ ಯಾವುದಾದರೂ ದೇವರಿಗೆ ಮಾನಾಭರಣೇಶ್ವರ ದೇವ ಎಂಬ ಹೆಸರಿತ್ತೇ ಎಂಬುದು ತಿಳಿಯುವುದಿಲ್ಲ. ಮುಂದಿನ ಶೋಧಗಳು ಈ ಬಗ್ಗೆ ಬೆಳಕು ಚೆಲ್ಲಬೇಕು.
ಈಕೆ ಪಶ್ಚಿಮ ಸಮುದ್ರಾಧಿಪತಿಯಾಗಿದ್ದಳು. ಅಂದರೆ ಆ ಕಾಲದಲ್ಲಿ ಸಮುದ್ರದ ಮೇಲೆ ನಡೆಯುತ್ತಿದ್ದ ಎಲ್ಲ ರೀತಿಯ ಕಾರ್ಯಚಟುವಟಿಕೆಗಳ ಮೇಲೂ ಈಕೆ ಹಿಡಿತ ಸಾಧಿಸಿದ್ದಳು. ಇದಕ್ಕೆ ಸಹಕಾರಿಯಾಗಿ ಇವಳಲ್ಲಿ ನೌಕಾಬಲ ಇತ್ತೇ ಎಂಬ ಪ್ರಶ್ನೆಗೆ ಉತ್ತರ ಸಾಧ್ಯವಿಲ್ಲ. ಒಂದು ರೀತಿಯ ಕಾವಲು ಪಡೆ ಇವಳಲ್ಲಿ ಇದ್ದಿರಬಹುದು. ಯಾವುದೇ ರೀತಿಯ ಸಮಸ್ಯೆಯನ್ನೂ ಎದುರಿಸಬಲ್ಲ ಛಾತಿ ಇವಳಲ್ಲಿ ಇತ್ತು. ಆಳುಪರಿಗೆ ಸಮುದ್ರದ ಮೇಲಿನ ಹಿಡಿತ ಅನಾದಿ ಕಾಲದಿಂದಲೂ ಇತ್ತು. ಸಾಮ್ರಾಟರು ಯಾರೇ ಆಗಿರಲಿ ಆಳುಪರ ಈ ಶಕ್ತಿಗೆ ಕುತ್ತು ಬಂದಿರಲಿಲ್ಲ. ಹಾಗಾಗಿ ಅವರು ತಾವು ಸಮುದ್ರಾಧಿಪತಿ ಎಂದು ಕರೆದುಕೊಳ್ಳುವ ಅವಶ್ಯಕತೆ ಇರಲಿಲ್ಲ. ಆದರೆ ಬಲ್ಲ ಮಹಾದೇವಿಯ ಕಾಲಕ್ಕೆ ಪರಿಸ್ಥಿತಿ ಬದಲಾಗಿರಬೇಕು. ಇದು ತೀರ ಪ್ರದೇಶದಲ್ಲಿ ನಡೆಯುತ್ತಿದ್ದ ವ್ಯಾಪಾರ ಮತ್ತು ವಾಣಿಜ್ಯ ವ್ಯವಹಾರಗಳಿಗೆ ತೊಡಕನ್ನು ಉಂಟು ಮಾಡಿರಬೇಕು. ಇದರ ನಿವಾರಣೆಗಾಗಿ ಬಲ್ಲಮಹಾದೇವಿ ಸಮುದ್ರದ ಮೇಲಿನ ಚಟುವಟಿಕೆಗಳ ಮೇಲೆ ನಿಗಾವಹಿಸಲು ತನಗಿದ್ದ ಅಧಿಕಾರವನ್ನು ಸ್ಪಷ್ಟಪಡಿಸಿದಳು ಎಂದು ಕಾಣುತ್ತದೆ.
ಎದುರಾದ ಸಮಸ್ಯೆ
ತನ್ನ ಆಳ್ವಿಕೆಯ ಮಧ್ಯ ಕಾಲದಲ್ಲಿ ಬಲ್ಲಮಹಾದೇವಿ ಒಂದು ದೊಡ್ಡ ಸಮಸ್ಯೆಯನ್ನು ಎದುರಿಸಬೇಕಾಯಿತು. ತನ್ನ ಪತಿಯ ಸೋದರಿಯ ಮಗ ಬಂಕಿದೇವನು ಆವರೆವಿಗೂ ಒರ್ವ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ್ದವನು ತಾನೂ ರಾಜನಾಗಬೇಕೆಂಬ ಆಸೆಯಿಂದ ರಾಜ್ಯದ ಮೇಲೆ ತನ್ನ ಹಕ್ಕನ್ನು ಪ್ರತಿಪಾದಿಸಲು ಪ್ರಾರಂಭಿಸಿದನು೪೪ ಅಷ್ಟರವರೆಗೂ ಮಕ್ಕಳ ಕಟ್ಟು ಅಂದರೆ ತಂದೆಯಿಂದ ಮಗನಿಗೆ ಅಧಿಕಾರ ಹಸ್ತಾಂತರ ನಿಯಮವನ್ನು ಪಾಲಿಸಿದ್ದ. ಅಳುಪ ವಂಶಕ್ಕೆ ಬಂಕಿದೇವನ ಆಗ್ರಹ ಹೊಸ ತಲೆನೋವಾಯಿತು. ಸೋದರಿಯ ಮಗನಿಗೆ ಹಕ್ಕು ಇದೆ ಎಂಬುದು ಅನೂಚಾನವಾಗಿ ಆಳುಪ ವಂಶದಲ್ಲಿ ನಡೆದು ಬಂದ ಪದ್ಧತಿಯಲ್ಲಿ ಇಲ್ಲದಿದ್ದರೂ ಸಮಾಜದ ಹಲವು ವರ್ಗಗಳಲ್ಲಿ ಈ ಪದ್ಧತಿ ಇದ್ದುದು ಇಲ್ಲೂ ಪ್ರಭಾವ ಬೀರಿತ್ತು೪೫ ಅನವಶ್ಯಕ ಬಲ ಪ್ರಯೋಗಕ್ಕೆ ಎಡೆಕೊಡದೆ ಅತ್ಯಂತ ಸಹನೆ ಮತ್ತು ಜಾಣ್ಮೆಯಿಂದ ಬಲ್ಲಮಹಾದೇವಿ ಈ ಸಮಸ್ಯೆಯನ್ನು ಬಗೆಹರಿಸಿದಳು. ರಾಜ್ಯವನ್ನು ಎರಡು ಭಾಗ ಮಾಡಿ ದಕ್ಷಿಣದ ಮಂಗಳೂರು ಭಾಗವನ್ನು ಬಂಕಿದೇವನಿಗೂ ಉತ್ತರದ ಬಾರಕೂರು ಭಾಗವನ್ನು ತನ್ನ ಮಗ ನಾಗದೇವನಿಗೂ ಹಂಚಿ ರಾಜ್ಯದ ಶಾಂತಿಯನ್ನು ಕಾಪಾಡಿದಳು೪೬ ಹೀಗೆ ಸಕಾಲದಲ್ಲಿ ಕ್ಲಿಷ್ಟ ಮತ್ತು ಸೂಕ್ಷ್ಮವಾಗಿದ್ದ ಸಮಸ್ಯೆಯನ್ನು ಬಗೆಹರಿಸುವ ಮೂಲಕ ತಾನೋರ್ವ ಚತುರಮತಿ ಮುತ್ಸದ್ದಿ ಎಂಬುದನ್ನು ತೋರಿಸಿಕೊಟ್ಟಳು; ಅಷ್ಟೇ ಅಲ್ಲ ಅರಮನೆ ಯೊಳಗಿನ ಕಲಹ ಹೊರಗೆ ಹೋಗದಂತೆ ನೋಡಿ ಕೊಂಡಳು. ಇದು ಅವಳ ಧೀಮಂತ ವ್ಯಕ್ತಿತ್ವವನ್ನು ಸಾರುತ್ತದೆ.
ಸ್ಥಳೀಯ ಆಚಾರ, ವಿಚಾರ, ನಡಾವಳಿ, ಜವಾಬ್ದಾರಿ ಮತ್ತು ಹಕ್ಕುಗಳನ್ನು ಸರಿಯಾಗಿ ಅರ್ಥೈಸಿಕೊಂಡು ಅವಕ್ಕೆ ಸೂಕ್ತವಾಗಿ ಮತ್ತು ಸಮಯಕ್ಕೆ ತಕ್ಕಂತೆ ಸ್ಪಂದಿಸುವ ಕಲೆ ಸ್ಥಳೀಯರಿಗೆ ಹೆಚ್ಚು ಸಿದ್ಧಿಸಿರುತ್ತದೆಯೇ ಹೊರತು ಅನ್ಯರಿಗೆ ಅಲ್ಲ. ಬಲ್ಲಮಹಾದೇವಿ ‘ಅಳಿಯ ಕಟ್ಟು ಮತ್ತು ‘ಮಕ್ಕಳ ಕಟ್ಟು ಎರಡನ್ನೂ ರಾಜಕೀಯವಾಗಿ ತೂಗಿ ನೋಡಿ ದೀರ್ಘವಾಗಿ ಬೆಳೆದಿದ್ದ ಆಳುಪ ವಂಶದ ಘನತೆ ಗೌರಗಳಿಗೆ ಕುಂದು ಬಾರದ ರೀತಿಯಲ್ಲಿ, ಸಮಾಜದಲ್ಲಿ ಸಂಘರ್ಷ ಮನೋಭಾವ ಮೂಡದ ರೀತಿಯಲ್ಲಿ, ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವ ಸಲುವಾಗಿ ದಿಟ್ಟ ನಿರ್ಧಾರ ಕೈಗೊಂಡಳು. ಇದು ಆಕೆಯಲ್ಲಿ ರಕ್ತಗತವಾಗಿದ್ದ ಗುಣದ ಸಂಕೇತ. ಈ ನಿಟ್ಟಿನಲ್ಲಿ ಯೋಚಿಸಿದರೆ ಬಲ್ಲಮಹಾದೇವಿ ತುಳುನಾಡಿನವಳೇ ಆಗಿರಬೇಕು ಎಂಬ ಅನುಮಾನ ಬಲವತ್ತರ ವಾಗುತ್ತದೆ.
‘ಮಕ್ಕಳಕಟ್ಟು ಮತ್ತು ‘ಅಳಿಯಕಟ್ಟು ಈ ಎರಡೂ ಪದ್ಧತಿಗಳು ಕರಾವಳಿಯಲ್ಲಿ ಪ್ರಾಯಶಃ ಕ್ರಿಸ್ತ ವರ್ಷದ ಆರಂಭದಿಂದಲೇ ಬೆಳೆದುಬಂದ ಪದ್ಧತಿಗಳು. ‘ಮಕ್ಕಳ ಕಟ್ಟು ಆಚರಣೆ ಇರುವ ವರ್ಗಗಳಲ್ಲಿ ಆಸ್ತಿ ಮತ್ತು ಅಧಿಕಾರದ ಹಕ್ಕುಗಳು ತಂದೆಯಿಂದ ಮಗನಿಗೆ ಅನೂಚಾನವಾಗಿ ಬರುತ್ತಿತ್ತು. ಅಳಿಯಕಟ್ಟಿನಲ್ಲಿ ಈ ಹಕ್ಕು ಸೋದರಳಿಯ ಅಂದರೆ ಮಗಳ ಮಗನಿಗೆ ಹೋಗುತ್ತಿತ್ತು. ತುಳುನಾಡಿನಲ್ಲಿ ಈಗಲೂ ಈ ಪದ್ಧತಿ ಕೆಲವು ವರ್ಗಗಳಲ್ಲಿ ರೂಢಿಯಲ್ಲಿದೆ. ಆದರೆ ಪ್ರಾಚೀನ ರಾಜಮನೆತನವಾದ ಆಳುಪರಲ್ಲಿ ಮಕ್ಕಳಕಟ್ಟು ರೂಢಿಯಲ್ಲಿತ್ತು. ಬಂಕಿದೇವನ ಬೇಡಿಕೆಯಿಂದಾಗಿ ಅಳಿಯಕಟ್ಟಿನ ಹಕ್ಕಿಗೂ ಒಮ್ಮೆ ಮನ್ನಣೆ ದೊರೆಯುವಂತಾಯಿತು. ಆದರೆ ಅಳಿಯ ಬಂಕಿದೇವನ ನಂತರ ಪಟ್ಟಕ್ಕೆ ಬಂದುದು ಆತನ ಮಗ ಸೋಯಿದೇವ೪೭ ಈ ದೃಷ್ಟಿಯಲ್ಲಿ ಬಲ್ಲಮಹಾದೇವಿಯ ಕ್ರಮವನ್ನು ಅವಲೋಕಿಸಿದರೆ ಆಕೆ ಮಾಡಿದುದು ಕೇವಲ ಆಸ್ತಿ (ರಾಜ್ಯ) ವಿಭಜನೆ. ಇದರಿಂದ ರಾಜ್ಯದಲ್ಲಿ ಶಾಂತಿ ಮತ್ತು ಸೌಹಾರ್ದತೆಗಳನ್ನು ಕಾಪಾಡಿಕೊಂಡು ಬರಲು ಆಕೆಗೆ ಸಾಧ್ಯವಾಯಿತು. ಪ್ರಾಯಶಃ ಈಕೆ ಕ್ರಿ.ಶ.೧೨೯೨ರಲ್ಲಿ ಸ್ವರ್ಗಸ್ತಳಾದಳು. ಆಳುಪ ರಾಜ್ಯ ಕಮರುವುದಕ್ಕೆ ಮುನ್ನ ಬೆಳಗಿದ ತುಳುನಾಡ ಜ್ಯೋತಿ ಬಲ್ಲಮಹಾದೇವಿ.
ವೀರ ಚಿಕ್ಕಾಯಿತಾಯಿ
ಶಾಸನಗಳು ಈಕೆಯನ್ನು ವೀರ ಚಿಕ್ಕಾಯಿತಾಯಿ ಮತ್ತು ವೀರ ಕಿಕ್ಕಾಯಿತಾಯಿ ಎಂದು ಹೆಸರಿಸಿವೆ೪೮ ಈಕೆ ಆಳುಪ ರಾಜಕುಮಾರಿ ಮತ್ತು ಹೊಯ್ಸಳ ಚಕ್ರವರ್ತಿ ಮೂರನೆಯ ಬಲ್ಲಾಳನ ಪಟ್ಟದ ಪಿರಿಯರಸಿ೪೯ ಹೊಯ್ಸಳ ಚಕ್ರವರ್ತಿಯು ಆಳುಪ ಸೋಯಿದೇವನನ್ನು ಒಮ್ಮೆ (ಕ್ರಿ.ಶ.೧೩೧೮-೧೯ರಲ್ಲಿ) ಯುದ್ಧದಲ್ಲಿ ಸೋಲಿಸಿದ್ದ೫೦ ಆನಂತರ ಕ್ರಿ.ಶ.೧೩೩೩ರಲ್ಲಿ ತುಳುನಾಡಿನಮೇಲೆ ಧಾಳಿ ಮಾಡಿದ. ಪ್ರಾಯಶಃ ಈ ಸಂದರ್ಭದಲ್ಲಿ ಸೋಯಿದೇವ ಯುದ್ಧ ಮಾಡುವ ಬದಲು ಸ್ನೇಹ ಸಂಪಾದಿಸುವ ಸಲುವಾಗಿ ತನ್ನ ತಂಗಿಯಾದ ಚಿಕ್ಕಾಯಿ ತಾಯಿಯನ್ನು ವೀರ ಬಲ್ಲಾಳನಿಗೆ ಮದುವೆ ಮಾಡಿಕೊಟ್ಟ. ಇದು ಆಳುಪ-ಹೊಯ್ಸಳ ಮಧುರ ಸಂಬಂಧಕ್ಕೆ ದಾರಿ ಮಾಡಿಕೊಟ್ಟಿತು. ಆದರೆ ವೀರ ಬಲ್ಲಾಳ ಮಾತ್ರ ಈ ಕರಾವಳಿ ಪ್ರದೇಶವನ್ನು ತನ್ನ ವಶ ಇರಿಸಿಕೊಳ್ಳುವ ತೀರ್ಮಾನ ಮಾಡಿದ. ತನ್ನ ಪಟ್ಟದ ರಾಣಿ ಚಿಕ್ಕಾಯಿ ತಾಯಿಯನ್ನೇ ಈ ಭಾಗದ ಆಡಳಿತಾಧಿಕಾರಿಯಾಗಿ ನೇಮಿಸಿದ. ಬಾರಕೂರು ಹೊಯ್ಸಳರ ಕರಾವಳಿ ಭಾಗದ ರಾಜಧಾನಿ ಆಯಿತು೫೧ ಆಳುಪರು ಅಧಿಕಾರ ಕಳೆದುಕೊಳ್ಳದಿದ್ದರೂ ಅವಸಾನದ ಅಂಚಿಗೆ ದೂಡಲ್ಪಟ್ಟರು. ರಾಜಕೀಯವಾಗಿ ಸಂದಿಗ್ಧ ಮತ್ತು ಮಹತ್ತಾದ ಕಾಲವೊಂದರಲ್ಲಿ ಆಡಳಿತದ ಚುಕ್ಕಾಣಿ ಹಿಡಿಯುವ ಜವಾಬ್ದಾರಿ ಚಿಕ್ಕಾಯಿ ತಾಯಿಯದಾಯಿತು. ಪ್ರಸ್ತುತ ಲಭ್ಯವಿರುವ ಮಾಹಿತಿಯ ಪ್ರಕಾರ ಕ್ರಿ.ಶ.೧೩೩೩ರಿಂದ ೧೩೪೮ರ ವರೆಗೆ ಈ ಕಾರ್ಯವನ್ನು ಈಕೆ ಯಶಸ್ವಿಯಾಗಿ ನಿಭಾಯಿಸಿದಳು.
ಎದುರಾದ ಸಂದಿಗ್ಧತೆ
ಚಕ್ರವರ್ತಿಯ ಕೈಹಿಡಿದು ಆನಂತರ ತುಳು ರಾಜ್ಯಕ್ಕೆ ಅಧಿಪತಿಯಾಗಿ ಬಂದಾಗ ಚಿಕ್ಕಾಯಿ ತಾಯಿ ಹಲವು ಸಂದಿಗ್ಧತೆಗಳನ್ನು ಎದುರಿಸಬೇಕಾಯಿತು. ಆಳುಪ ರಾಜ್ಯ ತನ್ನ ತವರು; ಅದರ ಮೇಲೆ ಹೊಯ್ಸಳರ ಆಧಿಪತ್ಯವನ್ನು ಸ್ಥಾಪಿಸಿದ್ದು ತನ್ನ ಪತಿ ವೀರಬಲ್ಲಾಳ, ದೈವ ಲೀಲೆ ಅದರ ಆಡಳಿತದ ಜವಾಬ್ದಾರಿ ಚಿಕ್ಕಾಯಿತಾಯಿ ಹೆಗಲಿಗೆ ಬಂದುದು. ಈ ಜವಾಬ್ದಾರಿ ಈಕೆಗೆ ಮದುವೆ ಆದ ಕೂಡಲೇ ಬಂದುದರ ಸಾಧ್ಯತೆ ಬಹಳ ಕಡಿಮೆ. ಆದರೆ ಕೆ.ವಿ. ರಮೇಶ ಅವರ ಪ್ರಕಾರ೫೨ ಮೇಲೆ ಹೇಳಿದಂತೆ ಆಳುಪ ಸೋಯಿದೇವ ಈ ವಿವಾಹವನ್ನು ೧೩೩೩ರ ಆಸುಪಾಸಿನಲ್ಲಿ ಜರುಗಿಸಿದ. ಈ ಬಗ್ಗೆ ಸ್ವಲ್ಪ ಚರ್ಚೆ ಅಗತ್ಯ ಎನಿಸುತ್ತದೆ.
ಹೊಯ್ಸಳ ಮೂರನೆಯ ಬಲ್ಲಾಳನು ಕ್ರಿ.ಶ.೧೩೧೮-೧೯ರಲ್ಲಿ ಆಳುಪ ಸೋಯಿದೇವನ ರಾಜ್ಯದ ಮೇಲೆ ಧಾಳಿ ನಡೆಸಿ ಜಯಶೀಲನಾಗಿದ್ದ. ಇದರಿಂದ ತನ್ನ ರಾಜ್ಯವನ್ನೇನೂ ಕಳೆದುಕೊಳ್ಳದಿದ್ದರೂ ಪ್ರಬಲ ಶಕ್ತಿಯೊಂದರ ವಿರುದ್ಧ ಹಗೆತನ ಸಾಧಿಸುವ ಶಕ್ತಿ ಸೋಯಿದೇವನಿಗಿರಲಿಲ್ಲ ಎಂದು ಕಾಣುತ್ತದೆ. ಪರಿಸ್ಥಿತಿಯನ್ನು ನಿಭಾಯಿಸುವ ಸಲುವಾಗಿ ಈತ ಅನುಸರಿಸಿದ ಮಾರ್ಗ ವೈವಾಹಿಕ ಸಂಬಂಧ ಕಲ್ಪಿಸುವುದು. ಈ ರೀತಿಯ ವೈವಾಹಿಕ ಸಂಬಂಧಗಳನ್ನು ಆಳುಪರು ಚಕ್ರವರ್ತಿ ವಂಶಗಳೊಂದಿಗೆ ಹೊಂದಿದ್ದನ್ನು ಮೇಲೆ ನೋಡಿದ್ದೇವೆ. ಸೋಯಿದೇವ ಅನುಸರಿಸಿದ ನೀತಿ ಅದೇ ಆಗಿದೆ. ಪ್ರಾಯಶಃ ಈ ವಿವಾಹ ಸಂಬಂಧ ಕ್ರಿ.ಶ.೧೩೧೯-೨೦ರ ಆಸುಪಾಸಿನಲ್ಲಿ ನೆರವೇರಿರಬೇಕು. ಇದರ ರಕ್ಷೆಯಲ್ಲಿ ಸ್ವಲ್ಪ ಕಾಲ ಸೋಯಿದೇವ ನಿಶ್ಚಿಂತನಾಗಿದ್ದ. ಆದರೆ ಕ್ರಿ.ಶ.೧೩೩೦ರ ವೇಳೆಗೆ ಈ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡಿದೆ. ಇದು ಕರಾವಳಿಯ ಮೇಲೆ ನೇರ ಆಳ್ವಿಕೆ ಸ್ಥಾಪಿಸುವಂತೆ ಹೊಯ್ಸಳ ವೀರಬಲ್ಲಾಳನನ್ನು ಪ್ರೇರೇಪಿಸಿದೆ. ಇದರ ಕುರುಹಾಗಿ ಕರಾವಳಿಯಲ್ಲಿ ಹೊಯ್ಸಳ ಶಾಸನಗಳು ಕ್ರಿ.ಶ.೧೩೩೩ ರಿಂದ ಕಾಣಿಸಿಕೊಳ್ಳಲು ಪ್ರಾರಂಭಿಸಿವೆ. ಅಷ್ಟೇ ಅಲ್ಲ ಆಳುಪ ಪ್ರಶಸ್ತಿಗಳಾದ ‘ಪಾಂಡ್ಯ ಚಕ್ರವರ್ತಿ, ‘ಅರಿರಾಯ ಬಸವ ಶಂಕರ ಮತ್ತು ‘ರಾಯ ಗಜಾಂಕುಶ-ಇವು ಅಂದಿನಿಂದ ಹೊಯ್ಸಳರಿಗೂ ಲಭ್ಯವಾದವು೫೩ ಆ ವೇಳೆಗೆ ಸುಮಾರು ಒಂದು ದಶಕದ ಕಾಲ ವೈವಾಹಿಕ ಜೀವನ ನಡೆಸಿದ್ದ ಚಿಕ್ಕಾಯಿತಾಯಿ ಆಡಳಿತದ ಜವಾಬ್ದಾರಿ ಹೊರಲು ಸಿದ್ಧವಾಗಿದ್ದಳು. ಹೊಯ್ಸಳ ವೀರಬಲ್ಲಾಳನಿಗೂ ತನ್ನ ರಾಣಿಯ ಶಕ್ತಿ ಮತ್ತು ನಿಷ್ಠೆಯ ಬಗ್ಗೆ ಅಪಾರವಾದ ನಂಬಿಕೆ ಇದ್ದ ಕಾರಣ ಅವಳನ್ನೆ ಕರಾವಳಿಯಂತಹ ಸೂಕ್ಷ್ಮ ಪ್ರದೇಶಕ್ಕೆ ಅಧಿಪತಿ ಆಗಿ ನೇಮಿಸಿದ.
ಡಿರೆಟ್ಟನ ಆಕ್ಷೇಪಣೆ
ಹೊಯ್ಸಳ ಇತಿಹಾಸವನ್ನು ರಚಿಸಿರುವ ಬ್ರಿಟಿಶ್ ಇತಿಹಾಸಕಾರರ ಡಂಕನ್ ಎಂ. ಡಿರೆಟ್ ಚಿಕ್ಕಾಯಿ ತಾಯಿಯ ಮೇಲೆ ಒಂದು ಆರೋಪ ಹೊರೆಸಿದ್ದಾನೆ. ಹೊಯ್ಸಳ ವೀರ ಬಲ್ಲಾಳ ಈಕೆಯ ಹಲವು ಪತಿಗಳಲ್ಲಿ ಒಬ್ಬನಿರಬಹುದು ಎಂಬುದು ಈತನ ಆರೋಪ೫೪ ಇದನ್ನು ಅಳಿಯ ಸಂತಾನ ಕಟ್ಟಿನ ಆಧಾರದಲ್ಲಿ ಮಾಡಿದ್ದಾನೆ. ಈ ಆರೋಪದಲ್ಲಿ ಹುರುಳಿಲ್ಲ ಎಂಬುದನ್ನು ಕೆ.ವಿ. ರಮೇಶ ಸಿದ್ಧಪಡಿಸಿದ್ದಾರೆ೫೫.
ಚಿಕ್ಕಾಯಿತಾಯಿ ಬಾರಕೂರಿಗೆ ಆಡಳಿತದ ಜವಾಬ್ದಾರಿ ಹೊತ್ತು ಬರುವ ವೇಳೆಗೆ ಮಗ ಕುಲಶೇಖರನಿಗೆ ಜನ್ಮ ನೀಡಿದ್ದಳು. ಈತ ತನ್ನ ಕೊನೆಗಾಲದವರೆಗೆ ತಾಯಿಯ ಜೊತೆಯಲ್ಲಿದ್ದ. ಚಿಕ್ಕಾಯಿತಾಯಿ ಇಲ್ಲಿಗೆ ಬಂದ ಕೆಲವೇ ವರ್ಷಗಳಲ್ಲಿ ಪ್ರಬಲವಾದೊಂದು ಹೊಸ ರಾಜ್ಯ ವೀರ ಬಲ್ಲಾಳನ ಆಶೀರ್ವಾದದೊಂದಿಗೆ ಹುಟ್ಟಿದ್ದನ್ನು (ಕ್ರಿ.ಶ.೧೩೩೬ರಲ್ಲಿ) ಕಂಡಳು. ಕೆಲವೇ ವರ್ಷಗಳಲ್ಲಿ ಇದರ ಅಧಿಕಾರ ಇಡೀ ಕರಾವಳಿಯನ್ನು ಆವರಿಸಿತು. ಮಂಗಳೂರು ಮತ್ತು ಬಾರಕೂರು ರಾಜ್ಯಗಳೆಂಬ ಎರಡು ಆಡಳಿತ ಭಾಗಗಳು ಇಲ್ಲಿ ಹುಟ್ಟಿಕೊಂಡವು. ಹೊಸ ರಾಜಕೀಯ ಪರಿಸ್ಥಿತಿಗೆ ಚಿಕ್ಕಾಯಿ ತಾಯಿ ಬಲು ಬೇಗ ಹೊಂದಿಕೊಂಡಳು. ಆದರೆ ದುರ್ವಿಧಿ ತನ್ನ ಗಂಡನನ್ನು ಕಳೆದುಕೊಳ್ಳುವಂತೆ ಮಾಡಿತು. ಹೊಯ್ಸಳ ವೀರಬಲ್ಲಾಳ ಕ್ರಿ.ಶ.೧೩೪೨ರಲ್ಲಿ ನಡೆದ ಮಧುರೆಯ ಯುದ್ಧದಲ್ಲಿ ಮೋಸದಿಂದ ಕೊಲೆಯಾದ೫೬ ಮಗನ ರಕ್ಷಣೆ ಮತ್ತು ನಷ್ಟವನ್ನು ಸಾವರಿಸಿಕೊಂಡು ಕ್ರಿ.ಶ.೧೩೪೮ರ ವರೆಗೆ ರಾಜ್ಯವಾಳಿದಳು. ಕ್ರಿ.ಶ.೧೩೪೪ ರಲ್ಲಿ ಮಗ ಕುಲಶೇಖರನನ್ನು ಸಿಂಹಾಸನದಲ್ಲಿ ಕುಳ್ಳಿರಿಸಿ ರಾಜ್ಯವನ್ನು ಜಂಟಿಯಾಗಿ ಆಳಿದಳು. ಕೆ.ವಿ. ರಮೇಶ ಅವರ ಪ್ರಾಕಾರ ಪ್ರಾಯಶಃ ಈಕೆ ಕ್ರಿ.ಶ.೧೩೫೦ರಲ್ಲಿ ಮರಣ ಹೊಂದಿದಳು ಮತ್ತು ತನ್ನ ತಾಯಿ ಗತಿಸಿದ ನಂತರ ಕುಲಶೇಖರ ಹೆಚ್ಚು ಕಾಲ ರಾಜ್ಯವಾಳಲಿಲ್ಲ೫೭ ಘಟ್ಟದ ಮೇಲಣ ಸ್ಥಳಗಳಲ್ಲಿ ಹೊಯ್ಸಳ ಇತಿಹಾಸ ವೀರಬಲ್ಲಾಳನ ಮರಣದೊಂದಿಗೆ ಮುಕ್ತಾಯಗೊಂಡರೆ ಕರಾವಳಿಯಲ್ಲಿ ಅದು ಕುಂಟುತ್ತಾ ಸಾಗಿದ್ದು ಕ್ರಿ.ಶ.೧೩೫೦ರ ವೇಳೆಗೆ ಕೊನೆಯುಸಿರೆಳೆಯಿತು.
ವಿಚಕ್ಷಣ ಮನೋವೃತ್ತಿ
ಹಲವು ಸಾಧನೆಗಳ ಹಿನ್ನೆಲೆಯ ವಂಶದಿಂದ ಬಂದ ಚಿಕ್ಕಾಯಿತಾಯಿ ಚತುರಮತಿ ರಾಜಕುವರಿಯಾಗಿ, ಪ್ರೀತಿಯ ಪಟ್ಟದರಸಿಯಾಗಿ, ರಾಜನೀತಿಜ್ಞೆಯಾಗಿ ಮತ್ತು ರಾಜ ಮಾತೆಯಾಗಿ ಮೆರೆದಿದ್ದಾಳೆ. ಆಡಳಿತದ ಜವಾಬ್ದಾರಿ ಹೊತ್ತು ಕರಾವಳಿಗೆ ಬಂದಾಗ ಆಕೆಯ ಮಗ ಇನ್ನೂ ಬಾಲಕ. ಈತನ ಲಾಲನೆ, ಪಾಲನೆ ಮತ್ತು ವಿದ್ಯಾಭ್ಯಾಸ ಹೇಗಾಯಿತು ಎಂಬುದರ ಬಗ್ಗೆ ಮಾಹಿತಿ ಇಲ್ಲದಿದ್ದರೂ ರಾಣಿ ಈ ಬಗ್ಗೆ ಸೂಕ್ತವಾದ ಏರ್ಪಾಟು ಮಾಡಿದ್ದಿರಬೇಕು. ಬಾರಕೂರಿನಲ್ಲಿ ಹೊಯ್ಸಳ ಸೈನಿಕ ನೆಲೆಯನ್ನು ಸ್ಥಾಪಿಸಿ ಅದರ ಉಸ್ತುವಾರಿಯನ್ನು ವೀರಬಲ್ಲಾಳನೇ ನೋಡಿಕೊಂಡಿದ್ದುದು೫೮ ಚಿಕ್ಕಾಯಿತಾಯಿಗೆ ಹೆಚ್ಚು ಶಕ್ತಿ ನೀಡಿತ್ತು. ಈಕೆ ಬಹಳ ಎಚ್ಚರಿಕೆಯಿಂದ ಹೊಯ್ಸಳ-ಆಳುಪ ಸಂಬಂಧವನ್ನು ಕಾಯ್ದುಕೊಂಡಳು. ಎರಡೂ ವಂಶಗಳು ಇಲ್ಲಿ ತಮ್ಮ ಗೌರವಯುತ ಸ್ವತಂತ್ರ ಸ್ಥಾನ-ಮಾನಗಳನ್ನು ರಕ್ಷಿಸಿಕೊಂಡು ಬಾಳುವಂತೆ ನೋಡಿಕೊಂಡಳು. ಇದು ಅವರ ಶಾಸನಗಳಿಂದ ವ್ಯಕ್ತವಾಗುತ್ತದೆ೫೯ ಈ ನಿಟ್ಟಿನಲ್ಲಿ ಚಿಕ್ಕಾಯಿತಾಯಿ ಕೈಗೊಂಡ ಒಂದು ನಿರ್ಧಾರ ಬಹಳ ಮುಖ್ಯವಾದುದು. ಈ ವಿಷಯವನ್ನು ತಿಳಿಸುವ ಶಿಲಾ ಶಾಸನವೊಂದು ಕುಂದಾಪುರ ತಾಲ್ಲೂಕಿನ ಬಿಜೂರು ಗ್ರಾಮದಲ್ಲಿ ದೊರೆತಿದೆ.೬೦
ಇದೊಂದು ಹೊಸ ಶಾಸನ. ಇತ್ತೀಚೆಗೆ ನನ್ನ ಅನ್ವೇಷಣಾ ಕಾರ್ಯ ಸಮಯದಲ್ಲಿ ದೊರೆತುದು೬೧. ಇದರ ಕಾಲ ಕ್ರಿ.ಶ.೧೩೩೫ ಡಿಸೆಂಬರ್ ೧೦ ಆದಿವಾರ. ಇದರ ಲಿಪಿ ಮತ್ತು ಭಾಷೆ ಕನ್ನಡ. ಈ ಶಾಸನ “ಶ್ರೀ ಮತ್ಪಾಂಡ್ಯ ಚಕ್ರವರ್ತಿ ಅರಿರಾಯ ಬಸವ ಸಂಕರ ರಾಯಗಜಾಂಕುಸ ಶ್ರೀಮತು ಪ್ರ(ತಾಪ ಚಕ್ರವರ್ತಿ) ಹೊಯಿಸಣ ಬೀರ ಬಲ್ಲಾಳ ದೇವರ್ಸ(ರ) ಪಟ್ಟದ ಪಿರಿಯರಸಿ ಚಿಕ್ಕಾಯಿ ತಾಯಿಗಳ ಶ್ರೀ ಪಾದ ಸಂನ್ನಿಧಿಯಲು೬೨ ಎಂದು ನೇರವಾಗಿ ಚಿಕ್ಕಾಯಿ ತಾಯಿಯ ಆಳ್ವಿಕೆಯನ್ನು ಉಲ್ಲೇಖಿಸಿದೆ. ಈಕೆಯ ಆಸ್ಥಾನದಲ್ಲಿ ಮಹಾ ಪ್ರಧಾನ ವಯಿಜಪ್ಪ ದಂಣಾಯಕ, ಅಜ್ಜಂಣ ಸಹಾಣಿ, ಸಮಸ್ತ ಪ್ರಧಾನರು, ಎರಡು ಕೋಲ ಬಳಿಯವರು, ಬಾಹತ್ತರ ನಿಯೋಗಿಗಳು ಮುಂತಾಗಿ೬೩ ನೆರೆದಿದ್ದ ಸಮಸ್ತರ ಸಮ್ಮುಖದಲ್ಲಿ “ವೀರ ಬಸವಿ ದೆವರ್ಸರ ರಾಣಿವಾಸ (ಹೆಸರು ನಷ್ಟವಾಗಿದೆ) ದೇವಿಯರ ಕುಮಾರ ಬೆಮಕೋವ ದೇವರಸರಿಗೆ’’ ೧೨೦ ಮುಡಿ ಭೂಮಿಯನ್ನು ಧಾರೆ ಯೆರೆದು ಕೊಟ್ಟಳು೬೪. ಇದರ ಉತ್ಪತ್ತಿಯಲ್ಲಿ ವರ್ಷಂಪ್ರತಿ ಆರು (೬) ಗದ್ಯಾಣ ಹೊಂನನ್ನು ಕೋಟೀಸ್ವರ ದೇವರ ನಂದಾ ಬೆಳಕಿಗೆ ಕೊಡಬೇಕೆಂದು ಕಟ್ಟು ಮಾಡಲಾಯಿತು೬೫. ಈ ಭೂ ದಾನವನ್ನು ‘ಸರ್ವಮಾಂನ್ಯ (ಸಂಪೂರ್ಣ ತೆರಿಗೆ ರಹಿತ) ಎಂದು ಘೋಷಿಸಿದಳು೬೬.
ಇಲ್ಲಿ ಗಮನಿಸಬೇಕಾದ ಒಂದು ಮುಖ್ಯ ಅಂಶವೆಂದರೆ-ವೀರ ಬಸವಿ ದೇವರಸ, ಆತನ ರಾಣಿ ಮತ್ತು ಮಗ ಬೆಂಕೋವ ದೇವರ್ಸನ ಪ್ರಸ್ತಾಪ ಮತ್ತು ಚಿಕ್ಕಾಯಿ ತಾಯಿ ಬೆಂಕೋವ ದೇವರಸನಿಗೆ ಮಾಡಿದ ಭೂದಾನ. ಕ್ರಿ.ಶ.೧೩೧೮-೧೯ರಲ್ಲಿ ನಡೆದ ಹೊಯ್ಸಳ-ಆಳುಪ ಯುದ್ಧದಲ್ಲಿ ಆಳುಪ ಅಧಿಕಾರಿ ಚಂದಾವರದ ವೀರ ಬಸವಿ ದೇವರಸನು ಹೊಯ್ಸಳ ವೀರ ಬಲ್ಲಾಳನ ವಿರುದ್ಧ ಯುದ್ಧ ಮಾಡಿದ್ದನು೬೭. ಬಿಜೂರಿನ ಶಾಸನ ಕಾಲಕ್ಕೆ ಈತ ಮರಣ ಹೊಂದಿದ್ದ ಎಂದು ಕಾಣುತ್ತದೆ. ಅಲ್ಲದೆ ಈತನ ರಾಣಿ ಮತ್ತು ಮಗ ಚಂದಾವರದಲ್ಲಿ ತಮ್ಮ ಅಸ್ಥಿತ್ವ ಕಳೆದುಕೊಂಡಿದ್ದರೆಂದೂ ತೋರುತ್ತದೆ. ಈ ಭಾಗದ ಅಧಿಕಾರ ಹೊಯ್ಸಳರ ಪಾಲಾದಾಗ ಬೆಂಕೋವ ದೇವ ಮತ್ತು ಆತನ ತಾಯಿ ಚಿಕ್ಕಾಯಿ ತಾಯಿಗೆ ಶರಣಾಗಿ ಆಶ್ರಯ ಬೇಡಿರಬೇಕು. ಹೊಯ್ಸಳ ರಾಣಿ ತನ್ನ ಪತಿಯ ಹಳೆಯ ಹೆಗಯನ್ನು ಮನ್ನಿಸಿ ಅವನ ಸಂಸಾರಕ್ಕೆ ಆಶ್ರಯ ಕೊಟ್ಟು ತನ್ನ ಉದಾತ್ತ ಗುಣವನ್ನು ಪ್ರಕಟಪಡಿಸಿದಳು.
ಚಿಕ್ಕಾಯಿತಾಯಿ ಔದಾರ್ಯದ ಗಣಿಯಾಗಿದ್ದಳು ಎಂಬುದು ಅವಳ ಶಾಸನಗಳಿಂದ ತಿಳಿದುಬರುತ್ತದೆ೬೮. ಇಲ್ಲಿಯವರೆಗೆ ದೊರೆತಿರುವ ಅವಳ ಎಲ್ಲ ಶಾಸನಗಳೂ ದಾನ ಶಾಸನಗಳೇ ಆಗಿವೆ. ಬದಲಾದ ಪರಿಸ್ಥಿತಿಗೆ ಹೊಂದಿಕೊಂಡು ಅವಳು ನಡೆಸುತ್ತಿದ್ದ ರಾಜ ಕಾರ್ಯಗಳು ಅತ್ಯಂತ ಸಮರ್ಥ, ಸಕಾಲಿಕ ಮತ್ತು ಶ್ಲಾಘನೀಯವಾದುವು. ಇದಕ್ಕೆ ಮೇಲಿನದಲ್ಲದೆ ಇನ್ನೂ ಒಂದು ಉದಾಹರಣೆಯನ್ನು ಕೊಡಬಹುದು.
ಹೊಯ್ಸಳ ವೀರ ಬಲ್ಲಾಳನ ಆಶೀರ್ವಾದದೊಂದಿಗೆ ಪ್ರಬಲವಾದೊಂದು ರಾಜ್ಯ ಕ್ರಿ.ಶ.೧೩೩೬ರಲ್ಲಿ ಹುಟ್ಟಿ ಅದು ಶೀಘ್ರವಾಗಿ ಕರಾವಳಿಗೆ ಹರಡಿದ ವಿಚಾರ ಮೇಲೆ ಹೇಳಿದೆ. ಇದರಿಂದಾಗಿ ಬೇರಾವ ಪ್ರದೇಶದಲ್ಲೂ ಇಲ್ಲದಂತಹ ರಾಜಕೀಯ ಪರಿಸ್ಥಿತಿ ಕರಾವಳಿಯಲ್ಲಿ ಹುಟ್ಟಿಕೊಂಡಿತು. ಹೊಸದಾಗಿ ಬಂದ ವಿಜಯನಗರದ ಅಧಿಕಾರ ಆಮವೇಳೆಗಾಗಲೇ ಅಲ್ಲಿದ್ದ ಆಳುಪ ಮತ್ತು ಹೊಯ್ಸಳ ರಾಜ್ಯಗಳನ್ನು ತನ್ನ ತೆಕ್ಕೆಗೆ ಒಳಪಡಿಸಿಕೊಂಡಿತು. ಆದರೂ ಅವುಗಳ ಅಧಿಕಾರ ಮತ್ತು ಆಂತರಿಕ ಸ್ವಾತಂತ್ರ್ಯವನ್ನು ಮಾನ್ಯ ಮಾಡಿತು. ಅದುವರೆವಿಗೂ ತನಗಿದ್ದ ಸಾಮ್ರಾಟ ಸ್ಥಿತಿಗೆ ಇದರಿಂದ ಭಂಗ ಬಂದರೂ ಪರಿಸ್ಥಿತಿಯ ಅನಿವಾರ್ಯತೆಯನ್ನು ಅರ್ಥ ಮಾಡಿಕೊಂಡ ಚಿಕ್ಕಾಯಿತಾಯಿ ಅದಕ್ಕೆ ತಕ್ಕಂತೆ ನಡೆದುಕೊಂಡಳು. ವಿಜಯನಗರದೊಂದಿಗೆ ಸ್ನೇಹ ಮೆರೆದು ಮುಂದೆ ತನ್ನ ಪತಿ ಯುದ್ಧದಲ್ಲಿ ಮರಣ ಹೊಂದಿದ ನಂತರ ಅದರ ಸಾರ್ವಭೌಮತೆಯನ್ನು ಗೌರವಿಸಿದಳು. ಕ್ರಿ.ಶ.೧೩೪೬ರಲ್ಲಿ ಒಂದನೆಯ ಹರಿಹರನು ತನ್ನ ಪರಿವಾರ ಸಹಿತ ಶೃಂಗೇರಿಗೆ ಬಂದು ಅಲ್ಲಿನ ಮಠಕ್ಕೆ ದಾನ ಮಾಡಿದ ಸಂದರ್ಭದಲ್ಲಿ ಚಿಕ್ಕಾಯಿತಾಯಿಯು ಪುತ್ರ ಸಹಿತವಾಗಿ ಚಕ್ರವರ್ತಿಯನ್ನು ಭೇಟಿ ಮಾಡಿ ತಾನೂ ಶ್ರೀಮಠಕ್ಕೆ ಹಲವು ಗ್ರಾಮಗಳನ್ನು ದಾನ ಮಾಡಿದಳು೬೯. ಈಕೆ ದಾನ ಮಾಡಿದ ಗ್ರಾಮಗಳು ಸಾಂತಳಿಗೆ ನಾಡೊಳಗಿದ್ದುವು. ಈ ಭಾಗ ಚಿಕ್ಕಾಯಿತಾಯಿಯ ಆಳ್ವಿಕೆಗೆ ಒಳಪಟ್ಟಿತ್ತೆಂದು ಇದರಿಂದ ತಿಳಿಯುತ್ತದೆ.೭೦ ಅಲ್ಲದೆ ತುಂಗೆಯ ತಟದಲ್ಲಿದ್ದ ಪಾವನಕ್ಷೇತ್ರ ಶೃಂಗೇರಿ ಸಹ ಈಕೆಯ ಆಳ್ವಿಕೆಯ ಪ್ರದೇಶದೊಳಗೇ ಇತ್ತೆಂದು ಕಾಣುತ್ತದೆ. ಅತ್ಯಂತ ಪ್ರಾಚೀನ ಆಳುಪರ ಶಾಸನವೊಂದು ಇದರ ಸಮೀಪ ಇರುವ ಕಿಗ್ಗದಲ್ಲಿ ದೊರೆತಿದೆ.೭೧ ಅದು ಆಳುಪ ಗುಣಸಾಗರನು ಅಲ್ಲಿಯ ದೇವಾಲಯಕ್ಕೆ ಮಾಡಿದ ದಾನವನ್ನು ಉಲ್ಲೇಖಿಸುತ್ತದೆ. ಆಗ ಅವನೊಡನೆ ಅವನ ರಾಣಿ ಮಹಾದೇವಿ ಮತ್ತು ಮಗ ಚಿತ್ರವಾಹನರಿದ್ದರು. ಚಿಕ್ಕಾಯಿತಾಯಿ ಶೃಂಗೇರಿ ಮಠಕ್ಕೆ ಮಾಡಿದ ದಾನ ಹೊಯ್ಸಳ ನೆಲೆಯಲ್ಲಿ ಮಾಡಿದ್ದಾದರೂ ತನ್ನ ಮೂಲ ಆಳುಪ ನೆಲೆಯಲ್ಲಿ ಮಾಡಿದ ಕೊನೆಯ ದಾನ ಕಾರ್ಯವಾದುದು ವಿಚಿತ್ರವಾದುದು.
ಆಳುಪ ಅರಸು ಮನೆತನ ಒಂದು ಸಾವಿರ ವರ್ಷಕ್ಕೂ ಹೆಚ್ಚು ಕಾಲ ಕರಾವಳಿಯನ್ನಾಳಿದ ಒಂದು ಧೀಮಂತ ಮನೆತನ. ಇವರ ಎಲ್ಲ ಮಹಾನ್ ಸಾಧನೆಗಳ ಹಿಂದೆ ಇವರ ರಾಣಿಯರ ಮತ್ತು ರಾಜ ಕುವರಿಯರ ತ್ಯಾಗ ಮತ್ತು ಕರ್ತವ್ಯ ನಿಷ್ಠೆ ಇದ್ದು ಅದು ಈ ವಂಶವನ್ನು ಉತ್ತುಂಗಕ್ಕೇರಿಸಿದೆ.
[ಈ ಬಗ್ಗೆ ಕರಾವಳಿಯಲ್ಲಿ ನಾನು ಕೈಗೊಂಡ ಕ್ಷೇತ್ರ ಕಾರ್ಯದಲ್ಲಿ ನೆರವಾದ ಎಲ್ಲ ಮಹನೀಯರಿಗೆ ಕೃತಜ್ಞತೆಗಳನ್ನು ಸಮರ್ಪಿಸುತ್ತೇನೆ.]
ಆಧಾರಸೂಚಿ ಮತ್ತು ಟಿಪ್ಪಣಿಗಳು
೧.         ಕೆ.ವಿ. ರಮೇಶ, ಎ ಹಿಸ್ಟರಿ ಆಫ್ ಸೌತ್ ಕೆನರ, (೧೯೭೦), ಪುಟ ೧೨-೨೬.
೨.         ಅದೇ, ಪುಟ ೨೪-೨೫.
೩.         ಅದೇ, ಪುಟ ೩೫-೧೫೦.
೪.         ಪೊಳಲಿ ಶೀನಪ್ಪ ಹೆಗ್ಡೆ, ದಕ್ಷಿಣ ಕನ್ನಡ ಜಿಲ್ಲೆಯ ಚರಿತ್ರೆ ಮತ್ತು ಭೂತಾಳಪಾಂಡ್ಯರಾಯನ ಅಳಿಯಕಟ್ಟು, ಉಡುಪಿ, ೧೯೮೧ ದ್ವಿತೀಯ ಮುದ್ರಣ.
೫.         ಕೆ.ವಿ. ರಮೇಶ೧೯೭೦, ಪುಟ ೨೭-೩೪.
೬.         ಅದೇ, ಪುಟ ೩೧-೩೨ ಮತ್ತು ಎಂ.ಎ.ಆರ್. ೧೯೩೬, ಸಂಖ್ಯೆ ೧೬, ಪುಟ ೭೨.
೭.         oಠಿಠಿeಡಿ ಠಿಟಚಿಣe Iಟಿsಛಿಡಿiಠಿಣioಟಿs oಜಿ ಂಟಿಜಡಿಚಿ Pಡಿಚಿಜesh, oveಡಿಟಿmeಟಿಣ ಒuseum, ಊಥಿಜeಡಿಚಿbಚಿಜ (ಗಿoಟ-೧) ಇಜ-ಓ. ಖಚಿmeshಚಿಟಿ ಂ.P.ಉ. ಂ.S-, ಊಥಿಜeಡಿಚಿbಚಿಜ, ೧೯೬೨, Pಚಿge ೧೧-೩೯.
೮.         ಅದೇ.
೯.         ಅದೇ.
೧೦.      ಎಪಿಗ್ರಾಫಿಯ ಕರ್ನಾಟಿಕ, ಸಂ. ೬, (ರೈಸ್ ಆವೃತ್ತಿ), ಕೊಪ್ಪ, ೩೯.
೧೧.      ಶಿಗ್ಗಾವ್ ತಾಮ್ರ ಶಾಸನ, (ಕ್ರಿ.ಶ. ೭೦೭), ಎಪಿಗ್ರಾಫಿಯಾ ಇಂಡಿಕಾ, ಸಂ. ೩೨, ಪುಟ ೩೧೭ ರಿಂದ ಮುಂದೆ ಮತ್ತು ಛಾಯಾಚಿತ್ರ.
೧೨.      ಅದೇ ಮತ್ತು ಕೆ.ವಿ. ರಮೇಶ್, (೧೯೭೦) ಪುಟ ೫೯-೬೦.
೧೩.      ಕೆ.ವಿ. ರಮೇಶ್, (೧೯೭೦), ಪುಟ ೫೦-೬೨.
೧೪.      ಎಪಿಗ್ರಾಫಿಯ ಕರ್ನಾಟಿಕ, ಸಂ. ೭, (ರೈಸ್ ಆವೃತ್ತಿ), ನಗರ ೩೫, ಕ್ರಿ.ಶ. ೧೦೭೭ರ ಹೊಂಬುಚ ಶಾಸನ.
೧೫.      ಹಂಪ ನಾಗರಾಜಯ್ಯ, ಸಾಂತರರು-ಒಂದು ಅಧ್ಯಯನ, ೧೯೯೭, ಪುಟ ೪೬.
೧೬.      ಅದೇ ಪುಟ ೪೬.
೧೭.      ಅದೇ ಪುಟ ೩೦೨.
೧೮.      ಕೆ.ವಿ. ರಮೇಶ್, ೧೯೭೦, ಪುಟ ೯೩.
೧೯.      ಅದೇ, ಪುಟ ೯೩-೯೪.
೨೦.      ದಕ್ಷಿಣ ಭಾರತದ ಶಾಸನಗಳು, ಎಸ್.ಐ.ಐ, ಸಂ. ೭. ಸಂ. ೩೨೭.
೨೧.      ಅದೇ, ಸಂ. ೩೨೮, ಕೆ.ವಿ. ರಮೇಶ್, ೧೯೭೦, ಪುಟ ೧೦೨-೧೦೩.
೨೨.      ಕೆ.ವಿ. ರಮೇಶ್, ಪುಟ ೧೦೪.
೨೩.      ಹೊಂಬುಚ ಶಾಸನ, ಸಾಂತರರು ಒಂದು ಅಧ್ಯಯನ, ಹಂಪನಾ, ೧೯೯೭.
೨೪.      ಎಸ್.ಐ.ಐ. ಸಂ. ೭, ಸಂ. ೨೭೮.
೨೫.      ಪಿ.ಎನ್. ನರಸಿಂಹಮೂರ್ತಿ, ಕುಂದನಾಡಿನ ಶಾಸನಗಳು, ೨೦೦೭, ಪ್ರಸ್ತಾವನೆ ಪುಟ ೧೪-೧೬, ಕುಂದಣನ ವರಾಂಗ ಶಾಸನ, ಎಪಿಗ್ರಾಫಿಯಾ ಇಂಡಿಕಾ, ೩೭ ಪುಟ ೨೬೯-೨೭೬.
೨೬.      ಎಸ್.ಐ.ಐ. ಸಂ. ೭, ನಂ. ೩೭೬.
೨೭.      ಕೆ.ವಿ. ರಮೇಶ್ ಮತ್ತು ಎಮ್.ಜೆ. ಶರ್ಮ, ತುಳುನಾಡಿನ ಶಾಸನಗಳು, ೧೯೭೮, ಸಂ. ೩೯, ತು.ನಾ.ಶಾ.
೨೮.      ಎಸ್.ಐ.ಐ. ಸಂ. ೯ ಭಾಗ ೧, ನಂ. ೩೯೫, ೩೯೬, ಸಂ. ೨೭, ನಂ. ೨೦೮ ಇತ್ಯಾದಿ.
೨೯.      ಕೆ.ವಿ. ರಮೇಶ್, ೧೯೭೦, ಪುಟ ೧೨೧-೧೨೫.
೩೦.      ಅದೇ ಕೆ.ವಿ. ರಮೇಶ್, ೧೯೭೦.
೩೧.      ಎಸ್.ಐ.ಐ. ಸಂ. ೭, ಸಂ. ೩೮೦.
೩೨.      ಕೆ.ವಿ. ರಮೇಶ್, (೧೯೭೦), ಪುಟ ೧೨೫-೧೨೭.
೩೩.      ಅದೇ, ಪುಟ ೧೨೭-೧೨೯.
೩೪.      ಎಸ್.ಐ.ಐ. ಸಂ. ೨೭, ಸಂ. ೨೧೪, ೨೧೫, ೨೧೮, ೨೧೯, ೧೨೧ ಮತ್ತು ೧೨೩.
೩೫.      ಅದೇ, ಸಂ. ೨೧೭.
೩೬.      ಅದೇ, ಸಂ. ೨೧೬.
೩೭.      ಅದೇ, ಸಂ. ೨೨೩.
೩೮.      ಅದೇ, ಸಂ. ೨೨೦.
೩೯.      ಅದೇ, ಸಂ. ೨೨೨.
೪೦.      ಕೆ.ವಿ. ರಮೇಶ್, (೧೯೭೦), ಪುಟ ೧೨೫-೧೨೭.
೪೧.      ಎಸ್.ಐ.ಐ. ಸಂ. ೨೭, ಸಂ. ೨೦೫ ಮತ್ತು ೨೦೬.
೪೨.      ಅದೇ, ಸಂ. ೨೦೭, ೨೦೮, ೨೦೯ ಮತ್ತು ೨೧೬.
೪೩.      ತು.ನಾ.ಶಾ. ಸಂ. ೨೪, ಎಪಿಗ್ರಾಫಿಯಾ ಇಂಡಿಕಾ, ೩೭, ಪುಟ ೨೩-೨೬.
೪೪.      ಕೆ.ವಿ. ರಮೇಶ್, (೧೯೭೦) ಪುಟ ೧೨೮.
೪೫.      ಅದೇ, ಪುಟ ೧೨೮, ೧೩೯, ೧೭೪, ೧೮೫-೧೯೫, ಇತ್ಯಾದಿ.
೪೬.      ಅದೇ, ಪುಟ ೧೨೫-೧೩೦.
೪೭.      ಅದೇ, ಪುಟ ೧೩೦-೧೩೧.
೪೮.      ಎಸ್.ಐ.ಐ. ಸಂ. ೨೭, ಸಂ. ೨೩೬, ೨೩೭, ೨೩೮, ೨೪೧ ಇತ್ಯಾದಿ.
೪೯.      ಅದೇ ಶಾಸನಗಳು.
೫೦.      ಎಪಿಗ್ರಾಫಿಯ ಕರ್ನಾಟಿಕ, ಸಂ. ೭, (ರೈಸ್ ಆವೃತ್ತಿ) ಹೊನ್ನಾಳಿ ಸಂ. ೧೧೭.
೫೧.      ಕೆ.ವಿ. ರಮೇಶ್, (೧೯೭೦), ಪುಟ ೧೩೮.
೫೨.      ಅದೇ, ಪುಟ ೧೩೮-೧೩೯.
೫೩.      ಅದೇ.
೫೪.      ಡಂಕನ್ ಎಮ್. ಡಿರೆಟ್, ದಿ ಹೊಯ್ಸಳಾಸ್, ಪುಟ ೧೬೫-೧೬೬.
೫೫.      ರಮೇಶ ಕೆ.ವಿ. ಪುಟ ೧೩೯.
೫೬.      ಅದೇ, ಪುಟ ೧೪೨.
೫೭.      ಅದೇ, ೧೪೪.
೫೮.      ಎಪಿಗ್ರಾಫಿಯ ಕರ್ನಾಟಿಕ-೫, ಹಾಸನ ಜಿಲ್ಲೆ, ರೈಸ್ ಆವೃತ್ತಿ, ಅರಸೀಕೆರೆ ತಾಲ್ಲೂಕು, ಆಲದಹಳ್ಳಿ, ನಂ. ೧೮೩.
೫೯.      ನೋಡಿ : ಈ ಕಾಲದ ಆಳುಪ ಮತ್ತು ಹೊಯ್ಸಳ ಶಾಸನಗಳು.
೬೦.      ಪಿ.ಎನ್. ನರಸಿಂಹಮೂರ್ತಿ, ಕುಂದನಾಡಿನ ಶಾಸನಗಳು, ಸಂ. ೨೪.
೬೧.      ಇದರ ಪತ್ತೆ ಕಾರ್ಯದಲ್ಲಿ ಭಾಗವಹಿಸಿ ಸಹಕರಿಸಿದ ಶ್ರೀ ಉಪ್ಪುಂದ ಚಂದ್ರಶೇಖರ ಹೊಳ್ಳ (ಮಾಜಿ ಉಡುಪಿ ಜಿಲ್ಲಾ ಸಾಹಿತ್ಯ ಪರಿಷತ್
ಅಧ್ಯಕ್ಷರು) ಅವರಿಗೆ ನನ್ನ ಕೃತಜ್ಞತೆಗಳು.
೬೨.      ಶಾಸನ ಪಾಠ ಸಾಲುಗಳು ೨-೭.
೬೩.      ಅದೇ, ಸಾಲುಗಳು, ೮-೧೦.    
೬೪.      ಅದೇ, ಸಾಲುಗಳು ೧೧-೧೭.
೬೫.      ಅದೇ, ಸಾಲುಗಳು ೧೮-೧೯.  
೬೬. ಅದೇ, ಸಾಲು ೧೮.
೬೭.      ಎಪಿಗ್ರಾಫಿಯ ಕರ್ನಾಟಿಕ, ಸಂ. ೭, ರೈಸ್ ಆವೃತ್ತಿ, ಹೊನ್ನಾಳಿ ೧೧೭, ಹನಗವಾಡಿ ಶಾಸನ.
೬೮.      ನೋಡಿ, ಮೇಲೆ ಉದಾಹರಿಸಿರುವ ಈಕೆಯ ಶಾಸನಗಳು.
೬೯.      ಎಪಿಗ್ರಾಫಿಯ ಕರ್ನಾಟಿಕ, ಸಂ. ೬, ರೈಸ್ ಆವೃತ್ತಿ, ಶೃಂಗೇರಿ ನಂ. ೧.
೭೦.      ಕೆ.ವಿ. ರಮೇಶ್, ಪುಟ ೧೪೪.
೭೧.      ಎಪಿಗ್ರಾಫಿಯ ಕರ್ನಾಟಿಕ, ಸಂ. ೬, ರೈಸ್ ಆವೃತ್ತಿ, ಕೊಪ್ಪ ೩೮, ಕಿಗ್ಗ ಶಾಸನ.

 ‘ಗುರುಕೃಪ, ನಂ. ೨೦೩೧
೧೦ನೇ ಕ್ರಾಸ್, ಕಲ್ಲಹಳ್ಳಿ, ವಿ.ವಿ. ನಗರ
, ಮಂಡ್ಯ-೫೭೧೪೦೧.




Thursday, June 13, 2013

ಇತಿಹಾಸಕಾರರು- ಆರ್‌ಎಸ್‌ ಪಂಚಮುಖಿ

ಎಚ್..ಶೇಷಗಿರಿರಾವ್‌





ಆರ್.ಎಸ್.ಪಂಚಮುಖಿಯವರು:ಅಪ್ಪಾಜಿರಾಯರ ಹಸ್ತಪ್ರತಿ ಸರಣಿ

ಉತ್ತರ ಕರ್ನಾಟಕದಲ್ಲಿ ಶಾಸನ ಕ್ಷೇತ್ರದಲ್ಲಿ ಫ್ಲೀಟ್‌ ನಂತರ ಗಣನೀಯ ಸೇವೆ ಸಲ್ಲಿಸಿದವರಲ್ಲಿ ಆರ್‌.ಎಸ್‌. ಪಂಚಮುಖಿಯವರೂ ಒಬ್ಬರು. ಹಳೆಯ ಮೈಸೂರುಪ್ರಾಂತ್ಯದಲ್ಲಿ ಬಿ. ಎಲ್. ರೈಸ್‌, ರಾ ನರಸಿಂಹಾಚಾರ್, ಮೊದಲಾದವರು ಹುರುಪಿನಿಂದ ಸಂಶೋಧನೆಯ ಕೆಲಸದಲ್ಲಿ ತೊಡಗಿದ್ದರು. ಅದಕ್ಕೂ ಹೆಚ್ಚಾಗಿ ಪ್ರಾಚ್ಯ ಸಂಶೋಧನಾಸಂಸ್ಥೆಯು ಮೊದಲು ಉದಕಮಂಡಲದಲ್ಲಿ ಇತ್ತು. ಅದು ಮೈಸೂರಿಗೆ ಹತ್ತಿರವೂ ಹೌದು. ನಂತರ ಮೈಸೂರಿಗೆ ಬಂದಿತು. ಹಾಗಾಗಿ ಹಳೆಯ ಮೈಸೂರು ಪ್ರದೇಶದಲ್ಲಿ ಸಂಶೋಧನಾಕಾರ್ಯ ಭರದಿಂದ ಸಾಗಿತು.ಇದೇ ಮಾತನ್ನು ಮುಂಬೈ ಕರ್ನಾಟಕ ಮತ್ತು ಹೈದ್ರಾಬಾದ್‌ ಕರ್ನಾಟಕದ ವಿಷಯದಲ್ಲಿ ಎದೆ ಮುಟ್ಟಿಕೊಂಡು ಹೇಳಲು ಆಗದು. ಅಲ್ಲಿ ಆಮೆ ಗತಿಯಲ್ಲಿ ಕೆಲಸ ಸಾಗಿತ್ತು.
ಆ ಪ್ರದೇಶಗಳು ಆರ್ಥಿಕ ಮತ್ತು ಕೈಗಾರಿಕಾ ಕ್ಷೇತ್ರಗಳಲ್ಲಿಮಾತ್ರವಲ್ಲ ಇನ್ನಿತರ ರಂಗದಲ್ಲೂ ಸರಿದೊರೆಯಾಗಿ ಸಾಗಬೇಕಿತ್ತು. ಆ ಕೊರತೆಯನ್ನು ತಕ್ಕ ಮಟ್ಟಿಗೆ.ಆರ್‌.ಎಸ್‌ .ಪಂಚಮುಖಿಯವರು ತುಂಬಿದರು. ಅವರ ಪೂರ್ಣ ಹೆಸರು ರಾಘವೇಂದ್ರಾಚಾರ್ ಸ್ವಾಮಿರಾಯಾಚಾರ್ ಪಂಚಮುಖಿ. ಅವರು ಜನಿಸಿದುದು ಕಟ್ಟು ನಿಟ್ಟಿನ ಸಂಪ್ರದಾಯಸ್ಥ ಮಧ್ವ ಬ್ರಾಹ್ಮಣರ ಕುಟುಂಬದಲ್ಲಿ. ಅವರ ಹಿರಿಯರು ಶಾಸ್ತ್ರ ಕೋವಿದರು. ೧೮೯೮ ಮೇ ತಿಂಗಳ ೪ರಂದು ಬಿಜಾಪುರ ಜಿಲ್ಲೆಯ ಜಾಲಿಹಾಳು ಗ್ರಾಮದಲ್ಲಿ ಅವರು ಜನಿಸಿದರು
 ಅವರ ಪ್ರಾಥಮಿಕ ಶಿಕ್ಷಣ ಹುಟ್ಟಿದ ಊರಿನಲ್ಲಿಯೇ ಆಯಿತು. ಜತೆ ಜತೆಗೆ ಸಂಸ್ಕೃತ , ಸಾಹಿತ್ಯ ಮತ್ತು ವೇದಾಂತದ ಬೋಧನೆ ಮನೆಯಲ್ಲಿಯೇ ನಡೆಯುತಿತ್ತು. ಹೈಸ್ಕೂಲ ಶಿಕ್ಷಣ ಬಾಗಲಕೋಟೆಯಲ್ಲಿ ಆಯಿತು. ಇಂಟರ್‌ಮಿಡಿಯಟ್‌ ಶಿಕ್ಷಣ ಅದೇತಾನೆ ಮುಂಬೈ ಸರ್ಕಾರ ಧಾರವಾಡದಲ್ಲಿ ಸ್ಥಾಪಿಸಿದ ಕರ್ನಾಟಕ ಕಾಲೇಜಿನಲ್ಲಿ. ಅವರು ಮೊದಲ ಬ್ಯಾಚಿನ ವಿದ್ಯಾರ್ಥಿ. ನಂತರ ಪೂನಾದ ಡೆಕ್ಕನ್‌ ಕಾಲೇಜಿನಲ್ಲಿ ಪದವಿಗಾಗಿ ಸೇರಿದರು. ಪದವಿ ಮುಗಿಯುಲು ಒಂದು ವರ್ಷ ಇರುವಾಗ ಮಹಾತ್ಮ ಗಾಂಧಿಯವರ ಕರೆಗೆ ಓಗೊಟ್ಟು ಅಸಹಕಾರ ಚಳುವಳಿಯಲ್ಲಿ ಭಾಗವಹಿಸಲು ಕಾಲೇಜು ಬಿಟ್ಟರು. ಅನೇಕ ಗೆಳೆಯರೊಂದಿಗೆ ಸೇರಿ ಬಾಗಲಕೋಟೆಯಲ್ಲಿ ರಾಷ್ಟ್ರೀಯತೆಗೆ ಒತ್ತು ಕೊಡುವ ಶಿಕ್ಷಣ ನೀಡಲು ನ್ಯಾಷನಲ್‌ ಸ್ಕೂಲು ಸ್ಥಾಪಿಸಿದರು. ಅದು ಒಂದು ವರ್ಷ ಯಶಸ್ವಿಯಾಗಿ ನಡೆದರೂ ನಂತರ ಮುಚ್ಚ ಬೇಕಾಯಿತು. ಮತ್ತೆ ೧೯೨೩ ರಲ್ಲಿ ಕರ್ನಾಟಕ ಕಾಲೇಜಿನಲ್ಲಿ ಪದವಿ ಶಿಕ್ಷಣ ಮುಂದುವರಿಸಿದರು.ಕನ್ನಡದಲ್ಲಿ ವಿಶ್ವ ವಿದ್ಯಾಲಯಕ್ಕೆ ಪ್ರಥಮ ಸ್ಥಾನ ಪಡೆದರು ಬಂಗಾರದ ಪದಕ ವಿಜೇತರಾದರು. ಎಂ .ಎ ಓದಲು ಶಿಷ್ಯವೇತನವೂ ಸಿಕ್ಕಿತು. ಕನ್ನಡ,ಸಂಸ್ಕೃತ ಮತ್ತು ವೇದಾಂತ ವಿಷಯಗಳನ್ನು ಆಯ್ದುಕೊಂಡು ಎಂ. ಎ. ಪಾಸಾದರು.


ಅವರದು ಶಿಸ್ತು ಬದ್ಧ ಸಂಯಮದ ಜೀವನ. ಹೊತ್ತು ಬಂದಂತೆ ಕೊಡೆ ಹಿಡಿಯುವ ಜಾಯಮಾನವಲ್ಲ. ಅಸತ್ಯ, ಅನ್ಯಾಯ ಮತ್ತು ಅನೀತಿಗಳಣ್ನು ಕಂಡರೆ ಮೈಲುದೂರ. ಅವರು ಎಂದೂ ತಮ್ಮ ತತ್ವ ಮತ್ತು ನಂಬಿಕೆಗಳೊಂದಿಗೆ ರಾಜಿ ಮಾಡಿಕೊಂಡವರಲ್ಲ. ಹಾಗಾಗಿ ನಿಷ್ಠುರಿ ಎಂಬ ಬಿರುದು ಬಂದರೂ ಹಿಂಜರಿಯಲಿಲ್ಲ. ಜೀವನವನ್ನು ವ್ಯವಸ್ಥಿತವಾಗಿ ನಡೆಸುವುದು ಅವರ ಗುರಿ. ಮಕ್ಕಳಿಗೂ ಅವರು ತಮ್ಮ ನಡೆಯಿಂದಲೇ ಮಾದರಿಯಾಗಿದ್ದರು. ಮಳೆ ಇರಲಿ, ಚಳಿ ಇರಲಿ ಬೆಳಗ್ಗೆ ನಾಲ್ಕು ಗಂಟೆಗೆ ಹಾಸಿಗೆಯಿಂದ ಎದ್ದರೆ ಅವರ ದಿನಚರಿ ಗಡಿಯಾರದಂತ ನಿಖರ. ವಾಯು ಸೇವನೆ ತಪ್ಪಿಸುವವರಲ್ಲ.ಮಕ್ಕಳಿಗೆ ವಿದ್ಯಾರ್ಥಿಗಳಿಗೆ ಸತತ ಮಾರ್ಗದರ್ಶನ. ತಮ್ಮಲ್ಲಿ ಬರುವ ಪಿಎಚ್‌ ಡಿ ವಿದ್ಯಾರ್ಥಿಗಳೊಂದಿಗೆ ಮೂರು ನಾಲಕ್ಕು ತಾಸು ಚರ್ಚಿಸಿ ಮಾರ್ಗದರ್ಶನ ನೀಡುತಿದ್ದರು. ಎಲ್ಲಿಯೇ ಇರಲಿ ದಿನಚರಿಗೆ ಭಂಗಬಾರದು. ರಾತ್ರಿ ೯.೩೦ಕ್ಕೆ ಮಲಗಿದ ತಕ್ಷಣ ನೆಮ್ಮದಿಯ ನಿದ್ರೆ. ಈ ಅಭ್ಯಾಸವನ್ನು ಅವರು ಎಂಬತ್ತು ವರ್ಷದವರಾದರೂ ಅನುಸರಿಸಿದರು.
ನೀತಿ ನಿಯಮಗಳ ವಿಷಯ ಬಂದಾಗ ಎಳ್ಳಷ್ಟೂ ಅಲುಗದ ನಿಷ್ಠೆ. ಅನುಕೂಲವಾಗಲೀ ಪ್ರತಿ ಕೂಲವಾಗಲೆ ಹೊಂದಾಣಿಕೆ ಮಾಡಿಕೊಂಡು ಹೋಗುವುದು ಅವರ ಸ್ವಭಾಕ್ಕೆ ಸಲ್ಲದ ವಿಷಯ. ಇದರ ಪರಿಣಾಮವಾಗಿ ಅವರು ಹೊರ ನೋಟಕ್ಕೆ ವಿಕ್ಷಿಪ್ತ ವ್ಯಕ್ತಿಯಂತೆ ಹಲವರಿಗೆ ಕಂಡರೂ ಅವರಿಗೆ ಅದರ ಯೋಚನೆ ಇರಲಿಲ್ಲ. ಸಮಯಪಾಲನೆ, ನಿಖರತೆ.ಪಾಲಿಸುವಲ್ಲಿ ಇವರು ತಲ್ಲೀನರು.ಅವರದು ದೊಡ್ಡ ಸಂಸಾರ. ಮೂರು ಜನ ಗಂಡು ಮಕ್ಕಳು ನಾಲಕ್ಕು ಜನ ಹೆಣ್ಣು ಮಕ್ಕಳು. ಮಕ್ಕಳು, ಮೊಮ್ಮಕ್ಕಳು ಮಕ್ಕಳು ಸೇರಿದಾಗ ಮನೆ ನಂದ ಗೋಕುಲ. ಎಲ್ಲರಿಗೂ ಅವರದೆ ಮಾರ್ಗದರ್ಶನ. ಅವರು ಎಂದೂ ಮಕ್ಕಳನ್ನು ದಂಡಿಸಿದವರಲ್ಲ. ಆದರೆ ಕಣ್ಣು ಹೆದರಿಕೆಯಿಂದಲೇ ಎಲ್ಲ ಸಲೀಸಾಗಿ ಸಾಗುತಿತ್ತು. ಅವರೆಲ್ಲರೂ ಸುಶಿಕ್ಷಿತರಾದರು. ಜೀವನದಲ್ಲಿ ಉನ್ನತಿ ಸಾಧಿಸಿದರು.ಮಕ್ಕಳ ಮಾತು ಹಾಗಿರಲಿ ಅಜ್ಜ ಏನೆಂದುಕೊಂಡಾರು ಎಂಬ ಭಾವನೆಯು ಮೊಮ್ಮಕ್ಕಳನ್ನೂ ಸನ್ಮಾರ್ಗದಲ್ಲಿ ನಡೆಸುತಿತ್ತು.
ಶಿಕ್ಷಣ ಮುಗಿದೊಡನೆ ೧೯೨೫ ರಲ್ಲಿ ಉದಕಮಂಡಲದಲ್ಲಿ ಸಹಾಯಕ ಸಂಶೋಧಕರಾಗಿ ನೇಮಕವಾಯಿತು. ಪುರಾತತ್ವ ಇಲಾಖೆಯಲ್ಲಿ ಸೇವೆಗೆ ಸೇರಿದ . ಉತ್ತರ ಕರ್ನಾಟಕ ಪ್ರದೇಶದ ಪ್ರಪ್ರಥಮ ಸಂಶೋಧಕರು ಎಂಬ ಕೀರ್ತಗೆ ಭಾಜನರು ಪಂಚಮುಖಿ. ವೃತ್ತಿ. ನಿಮಿತ್ತ ಹಳ್ಳಿ ತಿರುಗಾಟ ಮತ್ತು ವ್ರತ ನಿಷ್ಠ ಜೀವನ ಶೈಲಿಗೆ ತಡೆಯಾಗಲಿಲ್ಲ. ಆದರೆ ಜೀವನ ಶೈಲಿಯಲ್ಲಿ ಹೊಂದಾಣಿಕೆ ಇಲ್ಲ. ಹಾಗೆಂದು ಕರ್ತವ್ಯ ಪಾಲನೆಯಲ್ಲೂ ನಿಷ್ಠರು-೧೯೨೬ರಿಂದ ೧೯೩೯ ರವರೆಗೆ ಪುರಾತತ್ತ್ವ ವಸ್ತುಗಳ ಸಂಶೋಧನೆಗಾಗಿ ಹಳ್ಳಿ ಹಳ್ಳಿ ತಿರುಗಾಟ ಅಲ್ಲಿ ಸ್ವಯಂ ಪಾಕ. ಇಲ್ಲವಾದರೆ ಹಣ್ಣು ಹಂಪಲು ತಿಂದು ಕೆಲಸದಲ್ಲಿ ಮಗ್ನರಾಗುತಿದ್ದರು. ಅವಲಕ್ಕಿ ಬೆಲ್ಲವಂತೂ ಆಪದ್ಭಾಂವನಾಗುತಿತ್ತು.
ಉದ್ಯೋಗಕ್ಕೆ ಸೇರಿದ ಹೊಸದರಲ್ಲಿ ಜರ್ಮನ್‌ ಪ್ರಾಚ್ಯ ತಜ್ಞರಿಂದ ತರಬೇತಿ ಪಡೆದು ಸಂಶೋಧನಾ ವಿಧಾನವನ್ನು ಅರೆದು ಕುಡಿದರು. ಮೂಲತಃ ಉತ್ತರ ಕರ್ನಾಟಕದವರಾದ್ದರಿಂದ ತಮ್ಮ ಪ್ರದೇಶದ ಇತಿಹಾಸ ಸಂಶೋಧನೆಯು ಅವರಿಗೆ ಸಂತೋಷ ಮತ್ತು ಸಂತೃಪ್ತಿಯನ್ನು ಕೊಡುತಿತ್ತು. ಅವರ ಮೊದಲ ಆದ್ಯತೆ ಯಾರ ಕಣ್ಣಿಗೂ ಬೀಳದ , ನಿರ್ಲಕ್ಷ್ಯಕ್ಕ ಒಳಗಾದ ಶಾಸನಗಳ ನಕಲು ಪ್ರತಿ ತೆಗೆಯುವುದು.ಅವುಗಳ ವರ್ಣನಾತ್ಮಕ ಸೂಚಿಯ ತಯಾರಿ, ವಾರ್ಷಿಕ ವರದಿಯ ತಯಾರಿ , ಅವುಗಳ ಅಧ್ಯಯನ ಮತ್ತು ಶಾಸನ ಸಂಪುಟಗಳ ಪ್ರಕಟನೆಗೆ ಸಿದ್ಧ ಪಡಿಸುವಲ್ಲಿ ಅವರು ಸದಾ ಮಗ್ನರು.ಉದಕಮಂಡಲದಲ್ಲಿ ದಕ್ಷಿಣ ಭಾರತದ ಎಲ್ಲ ಭಾಷೆಯ ಶಾಸನಗಳೂ ಸಂಗ್ರಹವಾಗುತಿದ್ದುದರಿಂದ ಅವರಿಗೆ ತಮಿಳು ಮತ್ತು ತೆಲಗು ಭಾಷೆಗಳ ಶಾಸನಗಳ ಪರಿಚಯವೂ ತಾನಾಗಿಯೇ ಆಯಿತು.
ಮುಂಬಯಿಸರ್ಕಾರ೧೯೩೯ ರಲ್ಲಿ ಪುರಾತ್ತತ್ವದ ಮಹತ್ವನ್ನು ಮನಗಂಡು ಪ್ರಾದೇಶಿಕ ಸಂಸ್ಥೆಗಳನ್ನುಸ್ಥಾಪಿಸಿದರು. ಉದಕಮಂಡಲದಲ್ಲಿದ್ದ ಒಂದೇ ಕಚೇರಿಯಲ್ಲಿ ಕೆಲಸದ ಒತ್ತಡ ಹೆಚ್ಚಿದುದರಿಂದ ಗುಜರಾತ್‌, ಮಹಾರಾಷ್ಟ್ರ ಮತ್ತು ಕರ್ನಾಟಕದ ಧಾರವಾಡಗಳಲ್ಲೂ ಪ್ರಾದೇಶಿಕ ಕೇಂದ್ರಗಳು ತಲೆ ಎತ್ತಿದವು. ಕೇಂದ್ರ ಸರ್ಕಾರವು ಕರ್ನಾಟಕದ ಧಾರವಾಡದಲ್ಲಿ ಕರ್ನಾಟಕ ಕಾಲೇಜಿನಲ್ಲಿ ಕನ್ನಡ ಸಂಶೋಧನಾ ಕೇಂದ್ರ ತೆರೆಯಿತು. ಪಂಚಮುಖಿಯವರೆ ಕೇಂದ್ರದ ಪ್ರಥಮ ನಿರ್ದೇಕರಾಗಿ ನೇಮಕವಾದರು. ಒಂದು ಚಿಕ್ಕ ಕೋಣೆಯಲ್ಲಿ ಇವರ ಕಚೇರಿ. ಜೊತೆಗೆ ಒಬ್ಬ ಗುಮಾಸ್ತ. ಹೀಗೆ ಏಕವ್ಯಕ್ತಿಯ ಸೈನ್ಯವಾಗಿತ್ತು ಕನ್ನಡ ಅಧ್ಯಯನ ಕೇಂದ್ರ. ಆದರೆ ಅವರ ನಿಷ್ಠೆ ಮತ್ತು ಕರ್ತವ್ಯ ಪರತೆಯಿಂದ ಬಹುಬೇಗ ಧಾರವಾಡದ ಕೇಂದ್ರ ಮಾದರಿ ಎನಿಸಿತು. ಅವರು ಕಡ್ಡಾಯವಾಗಿ ಎರಡು ತಿಂಗಳು ಕ್ಷೇತ್ರ ಕಾರ್ಯಮಾಡುತಿದ್ದರು. ಹಳ್ಳಿಗೆ ಹೋಗಿ ಹಸ್ತಪ್ರತಿ, ಶಾಸನ ಪ್ರತಿ, ಲೋಹ ಮುದ್ರೆ, ಶಿಲ್ಪಗಳು ಸಂಗ್ರಹಣೆ ಮತ್ತು ನಿರ್ಲಕ್ಷಿತ ಸ್ಮಾರಕಗಳ ಪರಿಶೀಲನೆ ಕೆಲಸ ಮಾಡಿದರು. ಕೇಂದ್ರದಿಂದ ಅವರಿಗೆ ಬಿಡುಗಡೆಯಾದ ಹಣ ಕಡಿಮೆಯಾದರೂ, ತಮ್ಮ ಕೈಯಿಂದಲೇ ಖರ್ಚುಮಾಡಿ ಪ್ರಾಚೀನ ಶಿಲಾಯುಗದ ನಂತರದ ಎಲ್ಲ ಹಂತಗಳ ಸಂಸ್ಕೃತಿಯ ಸಂಶೋಧನೆಗೆ ಹೊಸ ಸ್ಥಳ ಗಳನ್ನು ಗುರುತಿಸಿ ಕೆಲಸ ಕೈ ಗೊಂಡರು.ಕೃಷ್ಣಾ, ಘಟಫ್ರಭಾ, ಮಲಪ್ರಭಾ ಮತ್ತು ಭೀಮಾನದಿ ದಂಡೆಯ ಪ್ರದೇಶಗಳಾದ ಹೆರಕಲ್‌, ವಡಗಾಂವ್ ಮಾಧವ ಪುರ,ಇಟಗಿ ,ಬ್ಯಾಡ,ಮೆಣಸಗಿಗಳನ್ನು ಗುರುತಿಸಿ ಉತ್ಖನನಕಾರ್ಯ ಮೊದಲುಮಾಡಿದರು. ಅಲ್ಲಿ ಬ್ರಾಹ್ಮಿ ಮಾದರಿಯ ಶಿಲಾಲೇಖಗಳನ್ನು ಗುರುತಿಸಿದರು.ಇಟಗಿಯಲ್ಲಿ ಮಣ್ಣಿನಲ್ಲಿ ಹೂತುಹೋದ ಉಕ್ಕಾಪಾತ್ರೆಯನ್ನು ಶೋಧಿಸಿದರು.ಅವರ ಸಂಗ್ರಹಿಸಿದ ನಾಣ್ಯ ಲೋಹ ವಿಗ್ರಹ, ಹಿಂದೂ ಜೈನ, ಬೌದ್ಧ ವಾಸ್ತು ಶಿಲಪದ ಮಾದರಿ, ಚಿತ್ರಕಲೆ, ಅಪರೂಪದ ಹಸ್ತಪ್ರತಿಗಳು, ಪುರಾತನ, ಮಣ್ಣಿನ ಪಾತ್ರೆಯತುಣುಕುಗಳು, ಶಿಲಾಶಾಸನಗಳು, ತಾಮ್ರ ಪಟಗಳು ,ಮಣಿಗಳೂ ಪುರಾತನ ಅವಶೇಷಗಳನ್ನು ಗಮನಿಸಿದ ಭಾರತ ಸರ್ಕಾರದ ಪ್ರಾಚ್ಯ ಸಂಸ್ಥೆಯಮಹಾನಿರ್ದೇಶಕರು, ಸಂಸ್ಥೆ ಗೆ ಹೆಚ್ಚಿನ ಹಣಕಾಸು ನೀಡಿ ಧಾರವಾಡದಲ್ಲಿ ಒಂದು ವಸ್ತು ಸಂಗ್ರಹಾಲಯ ತೆರೆಯಲು ಶಿಫಾರ್ಸುಮಾಡಿದರು. ಇದರಿಂದ ಭಾರತೀಯ ಪುರಾತತ್ತ್ವ ನಕಾಶೆಯಲ್ಲಿ ಧಾರವಾಡದ ಹೆಸರು ಮೊದಲಬಾರಿಗೆ ನಮೂದಾಯಿತು. ಅದಕ್ಕೆ ಕಾರಣ ಪಂಚಮುಖಿಯವರು. ಸಂಸ್ಥೆಯ ಮೂಲಕ ಸಂಶೋಧನ ಉಪನ್ಯಾಸ ಮಾಲೆಯನ್ನು ಪ್ರಾಂಭಿಸಿದರು.ಅದರಿಂದ ಭಾರತದ ಶ್ರೇಷ್ಠ ಸಂಶೋಧಕರ ಸಂಪರ್ಕ ದೊರೆಯಿತು. ರಾಷ್ಟ್ರ ಮಟ್ಟದಲ್ಲಿ ಮನ್ನಣೆ ದೊರೆಯಿತು. ಅವರ ಕಾಣಿಕೆ ಬರಿ ಶಾಸನಗಳಿಗೆ ಮಾತ್ರ ಸೀಮಿತವಾಗಿರಲಿಲ್ಲ. ಸಂಶೋಧನಕಲೆ, ವಾಸ್ತು ಶಿಲ್ಪ ಪ್ರತಿಮಾಲಕ್ಷಣ, ಜಾನಪದ, ಕನ್ನಡ ಮತ್ತು ಸಂಸ್ಕೃತ ಭಾರತೀಯ ತತ್ವಜ್ಞಾನ ಅದರಲ್ಲೂ ದ್ವೈತ ತತ್ವ, ಧರ್ಮ, ಭಕ್ತಿಸಾಹಿತ್ಯ, ಹೀಗೆ ಹಲವಾರು ರಂಗಗಳಿಗೆ ಅವರ ಕೊಡುಗೆ ಗಣನೀಯ. ಅವರು ಉತ್ತಮ ಮಾರ್ಗದರ್ಶಿಯಾಗಿದ್ದರು ಸುಮಾರು ಹತ್ತಕ್ಕೂ ಹೆಚ್ಚುಜನರ ಪಿ ಎಚ್‌ಡಿ ಪದವಿ ಪಡೆಯಲು ಮಾರ್ಗದರ್ಶನ ಮಾಡಿದರು. ಅವರ ಬಳಿಗೆ ರಾಷ್ಟ್ರಮಟ್ಟದ ಸಂಶೋಧನಾ ವಿದ್ಯಾರ್ಥಿಗಳನ್ನು ತರಬೇತಿಗಾಗಿ ಕಳುಹಿಸುತಿದ್ದರು ಎನ್ನುವುದು ಅವರ ಹಿರಿಮೆಗೆ ಸಾಕ್ಷಿ.
ಭಾರತದ ೧೮೫೭ ರ ಮೊದಲೇ ಸ್ವಾತಂತ್ರ್ಯ ಸಂಗ್ರಾಮವನ್ನು ಅವರು ಪೂರ್ವ-ಪಶ್ಚಿಮ ಸಂಸ್ಕೃತಿಗಳ ಸಂಘರ್ಷಣೆ ಎಂದು ಬಣ್ಣಿಸಿರುತ್ತಾರೆ. ಅವರದು ಏಕಕಾಲಕ್ಕೆ ಸಂಗ್ರಹ ಮತ್ತು ಸಂಶೋಧನೆ ಮಾಡಿದ ಹೆಗ್ಗಳಿಕೆ. ಅದರಲ್ಲೂ ಉತ್ತರ ಕರ್ನಾಟಕದ ನಿರ್ಲಕ್ಷಿತ ವಿಷಯಗಳ ಅನಾವರಣಕ್ಕೆ ಸತತ ಪ್ರಯತ್ನ ಮಾಡಿದರು. ಅವರ ನಿರಂತರ ಪರಿಶ್ರಮದಿಂದಾಗಿ ಧಾರವಾಡದ ಕನ್ನಡ ಸಂಶೋಧನ ಸಂಸ್ಥೆಯು ಮೂಲ ಸಾಮಗ್ರಿಗಳನ್ನು ಒದಗಿಸುವ ಮಾದರಿ ಕೇಂದ್ರವಾಯಿತು.
ಅವರು ಕನ್ನಡದಲ್ಲಿ ಕರ್ನಾಟಕ ಅರಸು ಮನೆತನಗಳು, ಐರಾವತ, ಕವಿ ಜಿಹ್ವಾಬಂಧನ, ಕರ್ನಾಟಕ ಹರಿದಾಸ, ಸಾಹಿತ್ಯಕರ್ನಾಟಕ ಜನಪದ ಗೀತಗಳು,ಕರ್ನಾಟಕದ ಶಾಸನಗಳು ಸೇರಿದಂತೆ ೧೬ ಕೃತಿಗಳನ್ನು ಸಂಸ್ಕೃತದಲ್ಲಿ ತಂತ್ರ ದೀಪಿಕಾ, ಬ್ರಹ್ಮ ಸೂತ್ರ ಭಾಷ್ಯ, ಮೊದಲಾದ ೫ ಕೃತಿಗಳನ್ನು, ಇಂಗ್ಲಿಷ್‌ನಲ್ಲಿ ಸುಮಾರು ೩೦ ಗ್ರಂಥಗಳನ್ನು ಹೊರತಂದರು. ಅಲ್ಲದೆ ವಿವಿಧ ವಿದ್ವತ್‌ಪತ್ರಿಕೆಗಳಲ್ಲಿ ಪ್ರಕಟಿಸಿದ ಸಂಶೋಧನಾ ಪ್ರಬಂಧಗಳು ನೂರಕ್ಕೂ ಹೆಚ್ಚು.
ಅವರ ಅಪಾರ ಪಾಂಡಿತ್ಯ ಮತ್ತು ಸಾಧನೆಯಿಂದ ಆಗಿ ಅನೇಕ ಸಂಘ ಸಂಸ್ಥೆಗಳ ಸದಸ್ಯರಾಗಿ ಕಾರ್ಯ ನಿರ್ವಹಿಸಿದರು. ಭಾರತೀಯ ಐತಿಹಾಸಿಕ ದಾಖಲೆಗಳ ಆಯೋಗ, ಕನ್ನಡ ವಿಶ್ವಕೋಶ ಸಮಿತಿ ,ಪ್ರಾದೇಶಿಕ ಐತಿಹಾಸಿಕ ದಾಖಲೆಗಳ ಸ್ಮಾರಕ ಸಮಿತಿ, ಪ್ರಾಚ್ಯ ವಸ್ತು ಸಂಗ್ರಹಾಲಯ ಕಮಿಟಿ,ಸಂಶೋಧನ ಮತ್ತು ಪ್ರಕಟಣಾ ಸಮಿತಿ , ಹೊಸ ದೆಹಲಿ, ಕನ್ನಡ ಸ್ನಾತಕೋತ್ತರ ಶಿಕ್ಷಕಆಂಗಿಕೃತ ಸಮಿತಿ ಇತ್ಯಾದಿಗಳಲ್ಲಿ ಸೇವೆ ಸಲ್ಲಿಸಿದರು. ಅವರಿಗೆ ಬಂದ ಪ್ರಶಸ್ತಿ ಮತ್ತು ಸನ್ಮಾನಗಳೂ ಅನೇಕ. ಸಂಸ್ಕೃತ ಸಾಹಿತ್ಯ ಮತ್ತು ಶಾಸ್ತ್ರ ಪಾಂಡಿತ್ಯಗೌರವಿಸಿ, " ವಿದ್ಯಾರತ್ನ " ಪ್ರಶಸ್ತಿ ದೊರೆಯಿತು.ಮತ್ತು ,ದ್ವೈತ ಸಿದ್ಧಾಂತ ಕುರಿತ ಸೇವೆಗೆ "ವಿದ್ಯಾಭೂಷಣ '" ಎಂಬ ಪ್ರಶಸ್ತಿಗೆ ಪಾತ್ರರಾಗಿದ್ದರು. ಅವರದು ಹೆಸರು ಮತ್ತು ಹಣದ ಬಗೆಗೆ ಸದಾ ಉಪೇಕ್ಷೆಯ ಮನೋಭಾವ. ಅವರದು ಕೊನೆ ತನಕ . "ವೃತ್ತಿಯೇ ವೈಕುಂಠ ". ಎಂಬ ಪ್ರವೃತ್ತಿ. ಪಂಚಮುಖಿಯವರಿಗೆ ಇತಿಹಾಸವೆಂದರೆ ,"ರಾಜರ ಬದುಕು ಮತ್ತು ವಿಜಯಗಳ ಕಥನವಲ್ಲ ಆಯಾಕಾಲದ ಜನರ , ಜನ ಜೀವನದ , ಸಂಸ್ಕೃತಿಯ ಕನ್ನಡಿ " .ಸಂಶೋಧನೆಯು ಇತಿಹಾಸ ಕಾಲದ ಸಾಧನೆ ಮತ್ತು ಸೋಲಿನ ಕಾರಣ ಮತ್ತು ಪರಿಣಾಮಗಳ ವಿಶ್ಲೇಷಣೆಯಾಗಿರಬೇಕು ಎಂಬುದು ಅವರ ದೃಢನಂಬಿಕೆ.. ಅದೇ ಹಾದಿಯಲ್ಲಿ ಸಂಶೋಧನೆ ಮಾಡಿದರು, ಮತ್ತು ಹೊಸ ಸಂಶೋಧಕರಿಗೆ ದಾರಿ ದೀಪವಾದರು. ಎಂಟು ದಶಕ್ಕೂ ಅಧಿಕ ತುಂಬು ಜೀವನ ನಡೆಸಿ, ಪ್ರಾಚ್ಯ ಪ್ರಪಂಚಕ್ಕೆ ಸಾರ್ಥಕ ಸೇವೆ ಸಲ್ಲಿಸಿದರು.
.



ಚಾಮರಾಜನಗರ ಜಿಲ್ಲೆಯ ಜೈನಧರ್ಮ

ಚಾಮರಾಜನಗರ ಜಿಲ್ಲೆಯ ಜೈನಧರ್ಮ
ಡಾ. ಬಿ.ಸಿ. ಸುರೇಶ
ರ್ನಾಟಕಕ್ಕೆ ಜೈನಧರ್ಮವು ಕ್ರಿ.ಪೂ.ದಲ್ಲಿಯೇ ಬಂದಿತ್ತೆಂದು ಹಲವು ಆಧಾರಗಳಿಂದ ತಿಳಿದುಬರುತ್ತದೆ. ಜೈನಧರ್ಮದ ಇತಿಹಾಸವನ್ನು ಹೊಂದಿರುವ ಕರ್ನಾಟಕದ ದಕ್ಷಿಣ ಭಾಗಗಳಲ್ಲಿ ಚಾಮರಾಜನಗರ ಜಿಲ್ಲೆಯು ಒಂದು. ಈ ಜಿಲ್ಲೆಯು ನೈಸರ್ಗಿಕವಾಗಿ ಪ್ರಕೃತಿದತ್ತವಾದಂತಹ ಭಾಗಗಳಿಂದ ಕೂಡಿದೆ. ಕರ್ನಾಟಕ, ಕೇರಳ, ತಮಿಳುನಾಡು ಗಡಿಪ್ರಾಂತ್ಯದ ಆಯಾಕಟ್ಟಿನ ಸ್ಥಳಗಳನ್ನು ಹೊಂದಿದೆ. ಈ ಪ್ರದೇಶವನ್ನು ಗಂಗರು, ಚೋಳರು, ರಾಷ್ಟ್ರಕೂಟರು, ಹೊಯ್ಸಳರು, ವಿಜಯನಗರದ ದೊರೆಗಳು, ಉಮ್ಮತ್ತೂರು ಪಾಳೆಯಗಾರರು, ತೆರಕಣಾಂಬಿ ಪಾಳೆಯಗಾರರು, ಮೈಸೂರು ಅರಸರು ಪ್ರಮುಖವಾಗಿ ಆಳಿದವರಾಗಿದ್ದಾರೆ. ಇಂತಹ ರಾಜರ, ಪ್ರಧಾನರ, ಸಾಮಂತರ, ದಂಡನಾಯಕರ ಪೋಷಣೆಯಲ್ಲಿ ಜೈನಾಚಾರ್ಯರ ಮಾರ್ಗದರ್ಶನದಲ್ಲಿ ಜೈನಧರ್ಮವು ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಇವುಗಳ ಕುರುಹಾಗಿ ಹಲವು ಶಾಸನಗಳು ದೊರೆತಿವೆ. ಈ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಜೈನಬಸದಿಗಳು ನಿರ್ಮಾಣವಾಗಿವೆ. ಅನೇಕ ಜೈನಕವಿಗಳು ಸಾಹಿತ್ಯ ರಚನೆ ಮಾಡಿರುವುದು ಕಂಡು ಬರುತ್ತದೆ. ಈ ನಿಟ್ಟಿನಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ಜೈನ ಧರ್ಮದ ಪ್ರಭಾವದ ಹಂತಗಳನ್ನು ಗುರುತಿಸಬಹುದು. ಜಿಲ್ಲೆಯಲ್ಲಿ ಹಲವು ಜೈನಶಾಸನಗಳಿವೆ. ಈ ಲೇಖನದ ಪ್ರಮುಖ ಉದ್ದೇಶವೆಂದರೆ ಈ ಜಿಲ್ಲೆಯಲ್ಲಿ ದೊರೆಯುವ ಜೈನಶಾಸನಗಳು ಹಾಗೂ ಬಸದಿಗಳ ಆಧಾರದ ಮೇಲೆ ಜಿಲ್ಲೆಯಲ್ಲಿದ್ದ ಜೈನಧರ್ಮ ಬಗ್ಗೆ ತಿಳಿಸುವುದೇ ಆಗಿದೆ.
          ಗುಂಡ್ಲುಪೇಟೆಯ ಕ್ರಿ.ಶ.೧೧೯೬ರ ಶಾಸನವೊಂದರಲ್ಲಿ ಹೊಯ್ಸಳ ವೀರಬಲ್ಲಾಳನನ್ನು ಸಮ್ಯಕ್ತ್ವ ಚೂಡಾಮಣಿ ಎಂದು ಕರೆಯಲಾಗಿದೆ. ಕುಡುಗನಾಡ ಸಮಸ್ತ ಪ್ರಭುಗಾವುಂಡಗಳು ತುಪ್ಪೂರ ಬಿಟ್ಟಿ ಜಿನಾಲಯಕ್ಕೆ ಮಡಹಳ್ಳಿಯನ್ನು ದತ್ತಿ ಬಿಟ್ಟಿದ್ದಾರೆ. ವಜ್ರನಂದಿ ಸಿದ್ಧಾಂತದೇವರ ಶಿಷ್ಯ, ನಾಗಪಂಡಿತರ ಮಗ ಕನಕನಂದಿಪಂಡಿತರ ಕಾಲು ತೊಳೆದು ಸಮಸ್ತ ಗಾವುಂಡರು ಜಿನಾಲಯದ ಜೀರ್ಣೊದ್ಧಾರ, ದೇವರ ಅಷ್ಟವಿಧಾರ್ಚನೆ ಮತ್ತು ಮುನಿಗಳ ಆಹಾರದಾನಕ್ಕೆ ದತ್ತಿ ಕೊಟ್ಟಿರುವುದನ್ನು ತಿಳಿಸುತ್ತದೆ. ಇದರ ಪಕ್ಕದಲ್ಲಿರುವ ಮತ್ತೊಂದು ಶಾಸನವು ಸಹ ವಿಜಯಪುರದ ಅನಂತದೇವರಿಗೆ ಕೆಲವು ಗೌಡಪ್ರಜೆಗಳು ದತ್ತಿಯನ್ನು ನೀಡಿರುವುದನ್ನು ತಿಳಿಸುತ್ತದೆ. ಶಾಸನ ದೊರೆತಿರುವ ತುಪ್ಪೂರು ಗ್ರಾಮದಲ್ಲಿ ಯಾವುದೇ ಬಸದಿ ಕಂಡುಬರುವುದಿಲ್ಲ. ಬಹುಶಃ ಬಸದಿ ಸಂಪೂರ್ಣವಾಗಿ ನಾಶವಾಗಿರಬಹುದು.
ಗುಂಡ್ಲುಪೇಟೆ ತಾಲ್ಲೂಕಿನ ರಾಘವಪುರದ ಕ್ರಿ.ಶ.೧೩೨೦ರ ಶಾಸನವು ಜೈನಶಾಸನವಲ್ಲದಿದ್ದರೂ ಸಹ ಜೈನಧರ್ಮದ ಸ್ಥಿತಿಗತಿಯ ಪರಿಶೀಲನೆಗೆ ನೆರವಾಗಿದೆ. ಈ ಶಾಸನ ಹೊಯ್ಸಳ ಮುಮ್ಮಡಿ ವೀರಬಲ್ಲಾಳನ ಕಾಲಕ್ಕೆ ಸೇರಿದುದಾಗಿದೆ. ಇದರಲ್ಲಿ ಕೇತಯ ದಂಡನಾಯಕನು ದೊರೆಯಿಂದ ಗುಮ್ಮಟಹಳ್ಳಿ ಮತ್ತು ಮಾಡ್ರಹಳ್ಳಿಗಳನ್ನು ಪಡೆದುಕೊಂಡು ತನ್ನ ಬಳಿ ಶ್ರೀಕರಣನಾಗಿದ್ದ ನಾರಣ ದೇವಣ್ಣನಿಗೆ ದತ್ತಿಕೊಟ್ಟನು. ಇವೆರಡು ಹಳ್ಳಿಗಳು ಅಗ್ರಹಾರವಾಗಿ ಪರಿವರ್ತಿತವಾದವು. ಗೊಮ್ಮಟಹಳ್ಳಿಗೆ ನಾರಣದೇವಣ್ಣನ ತಂದೆ ರಾಘವಾದೇವನ ಹೆಸರಿನಲ್ಲಿ ರಾಘವಪುರ ಎಂದು ಹೆಸರಾಯಿತು.        ಕೆಲಸೂರಿನಲ್ಲಿ ಪಾರ್ಶ್ವನಾಥ ಬಸದಿಯೊಂದಿದೆ. ಇಲ್ಲಿ ನಾಲ್ಕು ಶಾಸನಗಳಿವೆ. ಬಸದಿಯ ಉತ್ತರ ಭಾಗದಲ್ಲಿರುವ ಶಾಸನದಲ್ಲಿ ಆ ಬಸದಿಯನ್ನು ಸರ್ವಲೋಕಾಶ್ರಯ ಎಂದು ಕರೆದಿದೆ. ತಮಿಳಿನ ಶಾಸನದಲ್ಲಿ ಆ ನಾಡಿನ ಗಾವುಂಡನಾದ ವಿಕ್ರಮಚೋಳ ಪೆರ್ಮಾಡಿಯು ಕೆಲವು ದತ್ತಿ ಬಿಟ್ಟಿರುವುದನ್ನು ತಿಳಿಸುತ್ತದೆ. ಪಶ್ಚಿಮ ದಿಕ್ಕಿನ ಶಾಸನ ಕೆಲವು ಭಕ್ತರು ಬಸದಿಗೆ ಬಿಟ್ಟ ದತ್ತಿಯನ್ನು ತಿಳಿಸುತ್ತದೆ. ಬಸದಿಯ ಗೋಡೆಯ ಮೇಲಿರುವ ೧೮೨೯ರ ಶಾಸನದಲ್ಲಿ ಶಾಂತಪಂಡಿತನ ಮಗನ ವಿಜ್ಞಾಪನೆಯ ಮೇರೆಗೆ ಮುಮ್ಮಡಿ ಕೃಷ್ಣರಾಜ ಒಡೆಯರು ಕೆಲಸೂರಿನ ಚೈತ್ಯಾಲಯಕ್ಕೆ ಚಂದ್ರಪ್ರಭ ಮತ್ತು ವಿಜಯ ಪಾರ್ಶ್ವನಾಥ ತೀರ್ಥಂಕರರ ಮತ್ತು ಜ್ವಾಲಿನಿದೇವಿಯ ಶಿಲ್ಪಗಳನ್ನು ಪ್ರತಿಷ್ಠಾಪಿಸಿ ಬಸದಿಯನ್ನು ಜೀರ್ಣೊದ್ಧಾರ ಮಾಡಿದ್ದಾರೆ. ಬಸದಿಯು ಗರ್ಭಗೃಹ, ಅರ್ಧಮಂಟಪ, ನವರಂಗವನ್ನು ಹೊಂದಿದೆ. ಈ ಬಸದಿಯು ಸಂಪೂರ್ಣವಾಗಿ ಜೀರ್ಣೊದ್ಧಾರವಾಗಿದೆ. ಇಲ್ಲಿ ನಿಷಧಿ ಕಲ್ಲುಗಳಿವೆ. ಬಸದಿಯು ಚೆನ್ನಾಗಿದೆ.
          ತೆರಕಣಾಂಬಿಯ ಪ್ರವಾಸಿ ಮಂದಿರದ ಬಳಿ ಬಿದ್ದಿದ್ದ ಪಾರ್ಶ್ವನಾಥ ವಿಗ್ರಹದ ಪೀಠದ ಮೇಲೆ ರಾಜಗುರು ಮಂಡಲಾಚಾರ್ಯರಾದ ಸಮಯಾಭರಣ ಲಲಿತಕೀರ್ತಿ ಭಟಾರರು ಮಾಡಿಸಿದ ಪ್ರತಿಮೆ ಎಂಬ ಬರಹವಿದೆ ಇದು ಕ್ರಿ.ಶ.೧೪ನೆಯ ಶತಮಾನದ ಬರಹವಾಗಿದೆ. ಪ್ರಸ್ತುತ ತೆರಕಣಾಂಬಿಯಲ್ಲಿ ಪಾರ್ಶ್ವನಾಥ ಬಸದಿಯಿಲ್ಲ. ಆದರೆ ಪಾರ್ಶ್ವನಾಥನ ವಿಗ್ರಹ ಸಂತೇಮಾಳದಲ್ಲಿ ಅನಾಥವಾಗಿ ನಿಂತಿದೆ. ಇದೇ ಬಸದಿಯಲ್ಲಿದ್ದ ಪದ್ಮಾವತಿ ಯಕ್ಷಿಯ ವಿಗ್ರಹವನ್ನು ಚಾಮರಾಜನಗರದ ಬಸದಿಗೆ ಸಾಗಿಸಿರುವುದಾಗಿ ತಿಳಿದುಬರುತ್ತದೆ.
ಹಂಗಳ ಗ್ರಾಮದ ಭೂಮಿಯೊಳಗೆ ಹಲವಾರು ಲೋಹದ ವಸ್ತುಗಳು ದೊರೆತಿವೆ. ದೊರೆತ ಅನೇಕ ಪೂಜಾ ವಸ್ತುಗಳಲ್ಲಿ ೧೮ ವಸ್ತುಗಳ ಕೆಳಭಾಗದಲ್ಲಿ ಬರಹವಿದೆ. ಇವುಗಳು ಕ್ರಿ.ಶ.೧೦ನೆಯ ಶತಮಾನದ ಲಿಪಿಲಕ್ಷಣಗಳನ್ನು ಹೊಂದಿದೆ. ಚವ್ವೀಸ ತೀರ್ಥಂಕರರ ಬಿಂಬದ ಹಿಂಬದಿಯ ಪಾದಪೀಠದಲ್ಲಿರುವ ಬರವಣಿಗೆಯಿಂದ ಚಿಕ್ಕಜೋಗಚ್ಚಿಯ ತಾಯಿ ಮಾಚಿಕಬ್ಬೆಯು ದಾಮನಂದಿ ಭಟ್ಟಾರಕರ ಶಿಷ್ಯೆ ಎಂದು ತಿಳಿಯುತ್ತದೆ. ಮಿಕ್ಕ ವಸ್ತುಗಳ ಮೇಲೆ ಸರ್ವಲೋಕಾಶ್ರಯನ ಪ್ರಿಯಭಾರ್ಯೆ ಚಿಕ್ಕಜೋಗಬ್ಬೆಯ ಹೆಸರುಗಳಿವೆ. ಚಿಕ್ಕಜೋಗಬ್ಬೆ ಒಬ್ಬ ಜೈನ ಮಹಿಳೆಯಾಗಿದ್ದಳು. ಅವಳು ಮಾಡಿಸಿದ ಲೋಹದ ಪೂಜಾಸಾಮಗ್ರಿಗಳು ಮೈಸೂರು ಶಾಸನ ಇಲಾಖೆಯ ಪ್ರಾಚ್ಯವಸ್ತು ವಿಭಾಗದಲ್ಲಿವೆ.
ಚಾಮರಾಜನಗರ ತಾಲ್ಲೂಕಿನ ಮಲೆಯೂರು (ಕನಕಗಿರಿ) ಎಂಬಲ್ಲ್ಲಿ ಪಾರ್ಶ್ವನಾಥ ಬಸದಿಯಿದೆ. ಬೆಟ್ಟದ ಮೇಲಿರುವ ಈ ಬಸದಿ ಪೂರ್ವಾಭಿಮುಖವಾಗಿದೆ. ಗಂಗ ಮತ್ತು ಚೋಳರ ಕಾಲದ ದ್ರಾವಿಡ ಶೈಲಿಯಲ್ಲಿರುವ ಈ ಬಸದಿಯು ದ್ರಾವಿಡ ವಿಮಾನವನ್ನು ಹೊಂದಿದ್ದು, ಗರ್ಭಗೃಹ, ಸುಖನಾಸಿ, ನವರಂಗ ಮತ್ತು ಮಹಾಮಂಟಪವನ್ನು ಹೊಂದಿದೆ. ನವರಂಗದ ಮುಂದೆ ಮತ್ತೆರಡು ಮಂಟಪಗಳಿವೆ. ಗರ್ಭಗೃಹ, ಸುಖನಾಸಿ ಮತ್ತು ನವರಂಗ ಮಾತ್ರ ಪ್ರಾಚೀನ ಕಾಲದ್ದವಾಗಿವೆ. ಮಂಟಪಗಳೆರಡು ವಿಜಯನಗರ ಮತ್ತು ಅನಂತರದ ಕಾಲದ್ದಾಗಿವೆ. ಗರ್ಭಗೃಹದಲ್ಲಿ ಏಳು ಹೆಡೆಯ ಸರ್ಪದ ಕೆಳಗಡೆ ಧ್ಯಾನಮುದ್ರೆಯಲ್ಲಿ ಕುಳಿತಿರುವ ಸುಮಾರು ಐದು ಅಡಿ ಎತ್ತರದ ಪಾರ್ಶ್ವನಾಥನ ಶಿಲ್ಪವಿದೆ. ಪ್ರಭಾವಳಿಯಲ್ಲಿ ಪದ್ಮಾವತಿ ಮತ್ತು ಧರಣೇಂದ್ರ ಯಕ್ಷನನ್ನು ಚಿತ್ರಿಸಲಾಗಿದೆ. ನವರಂಗದಲ್ಲಿ ಯಕ್ಷ ಮತ್ತು ಯಕ್ಷಿಯ ಬಿಡಿಶಿಲ್ಪಗಳಿವೆ. ಈ ಬಸದಿ ಮೂಲಸಂಘ, ದೇಸಿಯಗಣ ಮತ್ತು ಪುಸ್ತಕಗಚ್ಚ ಸಂಪ್ರದಾಯಕ್ಕೆ ಸೇರಿದ್ದಾಗಿದೆ. ಇಲ್ಲಿ ಕ್ರಿ.ಶ.೧೧೮೧ರ ದಾನಶಾಸನವಿದೆ. ಅಚ್ಚುತ ವೀರೇಂದ್ರ ಎಂಬ ರಾಜ ಪ್ರಮುಖರು ಇಲ್ಲಿನ ವಿದ್ಯಾನಂದಸ್ವಾಮಿಯ ಮೂಲಕ ಬಸದಿಯನ್ನು ಆಚಾರ್ಯರಿಗೆ ದಾನ ನೀಡಿದ ವಿವರವಿದೆ. ವಿಜಯನಗರದ ದೊರೆ ಹರಿಹರನ ಶಾಸನದಲ್ಲಿ ಕನಕಗಿರಿಯ ವಿಜಯ ಪಾರ್ಶ್ವನಾಥನ ಪೂಜೆಗಾಗಿ ನೀಡಿದ ದಾನ ಧರ್ಮಗಳನ್ನು ಉಲ್ಲೇಖಿಸುತ್ತದೆ.
ಚಾಮರಾಜನಗರ ತಾಲ್ಲೂಕಿನಲ್ಲಿ ಕುದೇರು ಎಂಬ ಚಿಕ್ಕ ಗ್ರಾಮವಿದ್ದು ಇಲ್ಲಿ ಆದಿನಾಥ ಬಸದಿಯಿದೆ. ಇಲ್ಲಿನ ಕ್ರಿ.ಶ.೧೨೪೮-೪೯ರ ಹೊಯ್ಸಳ ಶಾಸನವು ವೀರಸೋಮೇಶ್ವರನ ಕಾಲದ್ದು. ಬಸದಿಯು ಗರ್ಭಗೃಹ, ಸುಖನಾಸಿ, ಅರ್ಧಮಂಟಪ ಮತ್ತು ನವರಂಗವನ್ನು ಹೊಂದಿದೆ. ದ್ರಾವಿಡ ಶೈಲಿಯಲ್ಲಿರುವ ಈ ಬಸದಿಯು ಏಕಕೂಟವಾಗಿದೆ. ಗರ್ಭಗೃಹದಲ್ಲಿ ಆದಿನಾಥನ ಶಿಲ್ಪವಿದೆ. ಪ್ರಭಾವಳಿಯ ಇಕ್ಕೆಲಗಳಲ್ಲಿ ಚತುರ್ಬಾಹು ಯಕ್ಷಿಣಿಯರ ಶಿಲ್ಪಗಳಿವೆ. ಲಲಾಟಬಿಂಬದಲ್ಲಿ ತೀರ್ಥಂಕರರ ಬಿಂಬವಿದೆ. ನವರಂಗದಲ್ಲಿ ಜೈನ ಸಂಪ್ರದಾಯಕ್ಕೆ ಸಂಬಂಧಿಸಿದಂತೆ ಕುದುರೆ ಮೇಲೆ ಕುಳಿತ ಬ್ರಹ್ಮ, ಜ್ವಾಲಾಮಾಲಿನಿ, ಯಕ್ಷಿ, ಸರಸ್ವತಿ ಮತ್ತು ತೀರ್ಥಂಕರರ ಶಿಲ್ಪ ಮತ್ತು ಇನ್ನಿತರ ಕಂಚಿನ ಶಿಲ್ಪಗಳಿವೆ. ಈಗೀಗ ಬಸದಿ ಶಿಥಿಲವಾಗುತ್ತಿದೆ. ಇದೆ ತಾಲ್ಲೂಕಿನ ಉಮ್ಮತ್ತೂರಿನಲ್ಲಿ ಬಸದಿಯೊಂದಿದೆ. ಇಲ್ಲಿನ ಕ್ರಿ.ಶ.೧೮ನೆಯ ಶತಮಾನದ ಶಾಸನದಲ್ಲಿ ಪಾಯಣಪಂಡಿತರು ವರ್ಧಮಾನಸ್ವಾಮಿಯ ಸೇವೆ ಎಂದಿದೆ. ಕುಲಗಾಣದಲ್ಲಿರುವ ಕ್ರಿ.ಶ.೧೨೪೧ರ ಶಾಸನದಲ್ಲಿ ಎಡೆನಾಡ ಕುಲಗಾಣದ ಬಸದಿಗೆ ಮಹಾಪ್ರಧಾನ, ಸೇನಾಧಿಪತಿ, ಸರ್ವಾಧಿಕಾರಿಯಾದ ಕೇತಯ್ಯ ದಂಡನಾಯಕನು ತೆರಿಗೆಗಳಿಂದ ಬಂದ ಹಣವನ್ನು ದಾನವನ್ನಾಗಿ ನೀಡಿರುವ ಉಲ್ಲೇಖವಿದೆ ಆದರೆ ಪ್ರಸ್ತುತವಾಗಿ ಈ ಗ್ರಾಮದಲ್ಲಿ ಯಾವುದೇ ಬಸದಿ ಇರುವುದಿಲ್ಲ. ಇದೇ ಗ್ರಾಮದ ಕ್ರಿ.ಶ.೭-೮ನೆಯ ಶತಮಾನದ ಗಂಗರ ಕಾಲದ ತಾಮ್ರಶಾಸನದಲ್ಲಿಯೂ ಚೈತ್ಯಾಲಯಕ್ಕೆ ದಾನ ನೀಡಿದ ಉಲ್ಲೇಖವಿದೆ. ಇದೇ ತಾಲ್ಲೂಕಿನ ಹರವೆ ಗ್ರಾಮದಲ್ಲಿ ಆದೀಶ್ವರ ಬಸದಿಯೊಂದಿದೆ. ಇಲ್ಲಿನ ಕ್ರಿ.ಶ.೧೪೮೨ರ ಶಾಸನದಲ್ಲಿ ವೀರಸೋಮೇಶ್ವರರಾಯ ಒಡೆಯರ ಕರಣಿಕನಾದ ದೇವರಸನು ಹರವೆಯಲ್ಲಿ ಚೈತ್ಯಾಲಯ ಮತ್ತು ಪಾಕಶಾಲೆಯನ್ನು ಮಾಡಿಸಿ ಆದಿ ಪರಮೇಶ್ವರನನ್ನು ಪ್ರತಿಷ್ಠಾಪಿಸಿದರು. ಕ್ರಿ.ಶ.೧೪೮೬ರ ನಿಷದಿ ಕಲ್ಲೊಂದಿದೆ. ಇದು ಶಾಸನೋಕ್ತವಾಗಿದ್ದು ಇದರಲ್ಲಿ ದೇವರಸರ ಹಿರಿಯ ಹೆಂಡತಿ ಸೋಮಾಯಿಯು ನಿಷದಿಯಾದ ಬಗ್ಗೆ ಉಲ್ಲೇಖವಿದೆ. ಪ್ರಸ್ತುತ ಈ ಗ್ರಾಮದಲ್ಲಿ ಯಾವುದೇ ಬಸದಿ ಇರುವುದಿಲ್ಲ. ಯಳಂದೂರಿನ ಯರಗಂಬಳ್ಳಿಯ ಹೊರವಲಯದ ಜಮೀನಿನಲ್ಲಿ ಜಿನ ಶಿಲ್ಪಗಳಿವೆ. ಇವುಗಳು ಅಲ್ಪಪ್ರಮಾಣದಲ್ಲಿ ಭಗ್ನವಾಗಿವೆ. ಬಹುಶಃ ಇಲ್ಲಿ ಹಿಂದೆ ಬಸದಿಯಿದ್ದಿರಬಹುದೆಂದು ಹೇಳಬಹುದು.
ಚಾಮರಾಜನಗರ ಪಟ್ಟಣದ ಮಧ್ಯಭಾಗದಲ್ಲಿರುವ ಚಾಮರಾಜೇಶ್ವರ ದೇವಾಲಯದ ಆಗ್ನೇಯ ಭಾಗದಲ್ಲಿ ಪಾರ್ಶ್ವನಾಥ ಬಸದಿಯಿದೆ. ಕ್ರಿ.ಶ.೧೧೧೬ರ ಶಾಸನದಲ್ಲಿ ಎಣ್ಣೆನಾಡಿನ ಪ್ರಾಂತ್ಯದ ಅರಕೊಠಾರದಲ್ಲಿ ತ್ರಿಕೂಟ ಬಸದಿಯನ್ನು ಪುಣಿಸರಾಜ ದಂಡಾದೀಪ ಎಂಬುವವನು ಪುಣಿಸಜಿನಾಲಯವನ್ನು ಕಟ್ಟಿಸಿದನು. ಪ್ರಸ್ತುತವಾಗಿ ಈ ಬಸದಿಯು ಜೀರ್ಣೋದ್ಧಾರವಾಗಿದ್ದು ಪೂಜಾಕಾರ್ಯಗಳು ನಡೆಯುತ್ತಿವೆ. ಇಲ್ಲಿನ ಕ್ರಿ.ಶ.೧೫೧೮ರ ಮತ್ತೊಂದು ಶಾಸನದಲ್ಲಿ ಚಾಮರಾಜನಗರವನ್ನು ಅರಿಕೊಠಾರ ಎಂದು ಕರೆಯಲಾಗಿದೆ. ಇಲ್ಲಿಯ ಮಹಾಪ್ರಭು ಕಾಮಯ್ಯನಾಯಕರ ಮಗ ವೀರಯ್ಯನಾಯಕನು ವಿಜಯನಾಥ ದೇವರಿಗೆ ಮುಣಚಣಹಳ್ಳಿಯನ್ನು ದಾನವಾಗಿ ನೀಡಿರುವ ಉಲ್ಲೇಖವಿದೆ. ಇಲ್ಲಿನ ಕ್ರಿ.ಶ.೧೨೦೩ರ ಶಾಸನದಲ್ಲಿ ಉತ್ತರಾಯಣ ಸಂಕ್ರಮಣದ ದಿನ ಅರಿಕುಠಾರದ ಬಸದಿಗೆ ಕೇತಗಾವುಂಡನ ಮಗ ಬಿಟ್ಟಿಗಾವುಂಡ, ಅಲ್ಲಾಳಗಾವುಂಡನ ಮಗ ದಾಸೆಗಾವುಂಡರು, ನೀರಿನ ಕರ, ಮನೆಕರ ಮುಂತಾದವುಗಳಿಂದ ಬಂದ ಹಣವನ್ನು ಬಸದಿಗೆ ನೀಡಿರುವ ಉಲ್ಲೇಖವಿದೆ.
ಕೊಳ್ಳೇಗಾಲದಿಂದ ಸುಮಾರು ೫ ಕಿ.ಮೀ. ದೂರದಲ್ಲಿ ಧನಗೆರೆ ಎಂಬ ಹಳ್ಳಿಯಿದೆ ಈ ಗ್ರಾಮದ ಪೂರ್ವ ಭಾಗದಲ್ಲಿರುವ ಒಂದು ಜಮೀನಿನಲ್ಲಿ ಜೈನ ಅವಶೇಷಗಳು ದೊರೆತಿವೆ. ಇಲ್ಲಿಯ ಒಂದು ಶಿಲ್ಪವನ್ನು ಪ್ರಾಚ್ಯವಸ್ತು ಸಂಗ್ರಹಾಲಯ ಶ್ರೀರಂಗಪಟ್ಟಣ ಇಲ್ಲಿ ಇಡಲಾಗಿದೆ. ಕೊಳ್ಳೇಗಾಲದ ಪಕ್ಕದಲ್ಲಿರುವ ಬಸ್ತಿಪುರ (ಬಸದಿಪುರ) ಎಂಬುದು ಸಹ ಒಂದು ಜೈನ ಕೇಂದ್ರವಾಗಿತ್ತು. ಇಲ್ಲಿ ಪೂಜ್ಯಪಾದನು ಹಲವು ಕಾಲದವರೆಗೆ ಜೀವಿಸಿದ್ದನು. ದೇವನಂದಿ ಎಂಬ ಹೆಸರಿನ ಈ ಆಚಾರ್ಯನಿಗೆ ಪೂಜ್ಯಪಾದನೆಂದು ಸಹ ಕರೆಯುತ್ತಿದ್ದರು. ಕೊಳ್ಳೇಗಾಲದ ಮನುಗನಹಳ್ಳಿ ಎಂಬ ಗ್ರಾಮದ ಹೊರವಲಯದಲ್ಲಿರುವ ಒಂದು ಜಮೀನಿನಲ್ಲಿ ಜಿನಶಿಲ್ಪಗಳು ಕಂಡುಬಂದಿವೆ. ಇಲ್ಲಿ ನಿಷದಿ ಕಲ್ಲುಗಳು ಸಹ ಇವೆ. ಕೊಳ್ಳೇಗಾಲ ರಾಘವೇಂದ್ರಸ್ವಾಮಿ ದೇವಾಲಯದ ಎದುರುಗಡೆ ಪಾಳುಬಿದ್ದಿರುವ ಮಂಟಪದಲ್ಲಿ ಪಾರ್ಶ್ವನಾಥನ ಶಿಲ್ಪವಿದೆ ಮತ್ತು ಪಟ್ಟಣದ ಕೊಳದ ಪಕ್ಕದಲ್ಲಿ ನಿಷದಿ ಶಿಲ್ಪವಿದೆ. ಮೇಲಿನ ಅಂಶಗಳನ್ನು ಗಮನಿಸಿದರೆ ಚಾಮರಾಜನಗರ ಜಿಲ್ಲೆಯಾದ್ಯಂತ ಕ್ರಿ.ಶ. ಸುಮಾರು ೬-೭ನೆಯ ಶತಮಾನಗಳಿಂದಲೂ ಸಹ ಜೈನಧರ್ಮವಿತ್ತೆಂದು ಹೇಳಬಹುದು.

ಆಧಾರಸೂಚಿ
೧.         ಮೈಸೂರು ಜಿಲ್ಲೆಯ ಗ್ಯಾಸೆಟಿಯರ್, ಕರ್ನಾಟಕ ಸರ್ಕಾರ, ಬೆಂಗಳೂರು.
೨.         ಮೈಸೂರು ಆರ್ಕಿಯಲಾಜಿಕಲ್ ರಿಪೋರ್ಟ್ಸ್, ಮೈಸೂರು ಸರ್ಕಾರ, ಬೆಂಗಳೂರು.
೩.         ಸೋಮಸಿರಿ, ಮಲೆಯೂರು ಗುರುಸ್ವಾಮಿ, ಗುಂಡ್ಲುಪೇಟೆ, ೨೦೦೦.
೪.         ಎಪಿಗ್ರಾಫಿಯ ಕರ್ನಾಟಿಕ, ಸಂಪುಟ ೩, (ಪರಿಷ್ಕೃತ), ಗುಂಡ್ಲುಪೇಟೆ ಶಾಸನ ಸಂಖ್ಯೆ ೩, ೪೦, ೧೦೦, ೧೦೧, ೧೦೨, ೧೦೩, ೨೦೩ ಮತ್ತು ೨೧೮.
೫.         ಎಪಿಗ್ರಾಫಿಯ ಕರ್ನಾಟಿಕ, ಸಂಪುಟ ೪, (ಪರಿಷ್ಕೃತ), ಶಾಸನ ಸಂಖ್ಯೆ ೨, , ೬೦, ೬೧, ೯೧, ೨೧೫, ೩೪೪, ೩೪೭, ೩೫೮-೩೭೫, ೩೮೯, ೩೯೦.
೬.         ದೇವರಕೊಂಡಾರೆಡ್ಡಿ, ತಲಕಾಡಿನ ಗಂಗರ ದೇವಾಲಯಗಳು ಒಂದು ಅಧ್ಯಯನ, ಬೆಂಗಳೂರು, ಕನ್ನಡ ಸಾಹಿತ್ಯ ಪರಿಷತ್ತು, ೧೯೯೪.

? ಸಹಾಯಕ ಪ್ರಾಧ್ಯಾಪಕ, ಶ್ರೀ ಮದ್ದಾನೇಶ್ವರ ಸರ್ಕಾರಿ ಪ್ರ.ದ. ಕಾಲೇಜು, ಕಬ್ಬಹಳ್ಳಿ, ಗುಂಡ್ಲುಪೇಟೆ ತಾ, ಚಾಮರಾಜನಗರ-೫೭೧೩೧೯.




Wednesday, June 5, 2013

ಸೂಡಿಯ ಕಳಕೇಶ್ವರ ಯತಿಗಳು

ಕಾಳಾಮುಖ ಪರಂಪರೆಯ ಸೂಡಿಯ ಕಳಕೇಶ್ವರ ಯತಿಗಳು
ಡಾ. ಮಲ್ಲಿಕಾರ್ಜುನ ಕುಂಬಾರ
ವಚನ, ರೋಣ ತಾಲ್ಲೂಕು,
ಗದಗ ಜಿಲ್ಲೆ, ರಾಜೂರ-೫೮೨೨೩೦.


ಶೈವ ಯತಿಗಳ ಕಾಳಾಮುಖ ಸಂಪ್ರದಾಯವು ೧೧, ೧೨ ಹಾಗೂ ೧೩ನೆಯ ಶತಮಾನದ ಪೂರ್ವಾರ್ಧದವರೆಗೆ ಕನ್ನಡ ನಾಡಿನಲ್ಲಿ ನೆಲೆಸಿತ್ತು. ಅವರು ನಾಡಿನ ತುಂಬೆಲ್ಲಾ ಪ್ರಭಾವಶಾಲಿಗಳಾಗಿದ್ದರು. ದುರ್ದೈವದ ಸಂಗತಿ ಎಂದರೆ ಅವರ ನಂಬಿಕೆ ಹಾಗೂ ಮತಾಚಾರಗಳನ್ನು ಕುರಿತು ಶಾಸನಗಳಿಂದ ಹೆಚ್ಚಿನ ಹೆಚ್ಚಿನದೇನೂ ತಿಳಿದುಬರುವುದಿಲ್ಲ. ಕಾಳಾಮುಖ ಸಂಪ್ರದಾಯದಲ್ಲಿ ಶಕ್ತಿಪರಿಷೆ ಹಾಗೂ ಸಿಂಹಪರಿಷೆಗಳು ಎಂಬ ಎರಡು ಮುಖ್ಯ ಶಾಖೆಗಳಿದ್ದವು. ಇದರಲ್ಲಿ ಸಿಂಹಪರಿಷೆ ಶಾಖೆಯು ಆಂಧ್ರ-ಕರ್ನಾಟಕ ಪ್ರಾಂತಗಳ ವಿಸ್ತೃತ ಭೂಭಾಗದಲ್ಲಿ ಕಂಡುಬಂದರೆ, ಶಕ್ತಿಪರಿಷೆಯು ಹೆಚ್ಚಾಗಿ ಧಾರವಾಡ, ಮೈಸೂರು ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ಸೀಮಿತಗೊಂಡಿದ್ದಿತು.
ಕಾಳಾಮುಖರೆಂದರೆ ಯಾರು? ಶಾಸನಗಳು ಇವರನ್ನು ಪರಮಾಪ್ತಗಮ, ಅಸಿತವಕ್ತ್ರ, ಮಹಾಕಾಲ ಎಂದು ಕರೆದಿವೆ. ಶಿವನ ೫ ಮುಖಗಳು ಕಲೆಗೆ ಸಂಬಂಧಿಸಿವೆಯೇ ಅವು ಕಲಾಮುಖ, ಈ ಕಲಾಮುಖಗಳನ್ನು ಅನುಷ್ಠಾನ ಮಾಡುವವರು ಕಾಳಾಮುಖರು ಎಂದು ಹೆಸರು. ಅವುಗಳೆಂದರೆ ಪರಾಶಕ್ತಿ, ಆದಿಶಕ್ತಿ, ಜ್ಞಾನಶಕ್ತಿ, ಇಚ್ಚಾಶಕ್ತಿ ಮತ್ತು ಕ್ರಿಯಾಶಕ್ತಿಗಳು. ಈ ತತ್ವಗಳನ್ನೇ ಎತ್ತಿಹಿಡಿದು ಲಿಂಗಪೂಜೆಯನ್ನು ಮುಂದೆ ತಂದ ಖ್ಯಾತಿ ಕಾಳಾಮುಖ ಮತ್ತು ಪಾಶುಪತರಿಗೆ ಸಲ್ಲುತ್ತದೆ. ಇವರಿಂದಲೇ ಲಿಂಗವೆಂಬುದು ಶಿವನ ರೂಪ, ಜ್ಯೋತಿ ಸ್ತಂಭ ಎಂಬ ಅಭಿಪ್ರಾಯ ಎತ್ತಿಹಿಡಿಯಲ್ಪಟ್ಟಿತು. ಅವರ ಪ್ರತಿಯೊಂದು ಶಾಸನಗಳು “ನಮಸ್ತುಂಗ ಶಿರಶ್ಚುಂಬಿ ಚಂದ್ರ ಚಾಮರ ಚಾರವೇ ತ್ರೈಲೋಕ್ಯ ನಗರಾರಂಭ ಮೂಲ ಸ್ತಂಭಾಯ ಶಂಭುವೇ ||’’ ಎಂದು ಆರಂಭವಾಗುತ್ತದೆ. ಈ ಮತವು ಹೇಗೆ ಭೂಮಿಗಿಳಿದು ಬಂದಿತು ಎಂಬುದರ ಬಗ್ಗೆ ‘ಪಂಪಾಮಹಾತ್ಮೆ ಎಂಬ ಗ್ರಂಥದಲ್ಲಿ ಬಹಳಷ್ಟು ವಿವರಗಳಿವೆ.
“ಕಾಪಾಲಿಕರು ಸಂಪೂರ್ಣವಾಗಿ ವಾಮಾಚಾರಿಗಳ ಪಂಥವಾದರೆ, ಕಾಳಾಮುಖರದ್ದು ಶುದ್ಧಸಾತ್ವಿಕಾಚರಣೆ ಪಂಥ ಎಂದು ಸಂಶೋಧಕರಾದ ಡಾ. ಎಂ. ಚಿದಾನಂದಮೂರ್ತಿ ಅಭಿಪ್ರಾಯಪಡುತ್ತಾರೆ. ಶಿವ ಹಾಗೂ ಶಕ್ತಿ, ಭೈರವ ಮತ್ತು ಮಹಾಕಾಳಿಯ ಅವತಾರಗಳ ನಿಷ್ಠಾವಂತ ಆರಾಧಕರು. ಹಾಗೂ ಉದ್ದಾಮ ಪಂಡಿತರು ಇವರ ಪೂಜಾವಿಧಾನ ಮತ್ತು ಧಾರ್ಮಿಕ ಜೀವನವು ಬಹಳಷ್ಟು ಕಠೋರವಾದದ್ದರಿಂದ ಸಾಮಾನ್ಯ ಜನರಿಗೆ ಅವು ಹಿಡಿಸುವುದಿಲ್ಲ. ಇಂದ್ರಿಯ ನಿಗ್ರಹವನ್ನು ಸಾಧಿಸಿದವನಿಗೆ ಮಾತ್ರ ಇವರ ಮಾರ್ಗ ಹಿಡಿಸುತ್ತದೆ. ಪಾಶುಪಾತರು ಹಣೆಗೆ ಬಿಳಿಗೆರೆಯ ಭಸ್ಮವನ್ನು ಧರಿಸಿದರೆ, ಅದಕ್ಕೆ ವಿರುದ್ಧವಾಗಿ ಕಾಳಾಮುಖರು ಭೈರವನ ಸಂಕೇತವಾದ ಕಪ್ಪು ಗೆರೆಗಳನ್ನು ಹಣೆಗೆ ಬಳಿದುಕೊಳ್ಳುತ್ತಿದ್ದರು. ಶಾಸನಗಳು ಇವರನ್ನು ‘ತಪೋಧನ ಎಂದು ಕರೆದಿವೆ.
ಗದಗ ಜಿಲ್ಲೆಯ ಕಾಳಾಮುಖರ ಪ್ರಮುಖ ಸ್ಥಾನವಾಗಿದ್ದ ರೋಣ ತಾಲ್ಲೂಕಿನ ಪರ್ವತಾವಳಿಯಲ್ಲಿ ಬರುವ ‘ಸೂಡಿ ಎಂಬ ಊರಿನ ಶಾಸನಗಳಲ್ಲಿ ಕಳಕೇಶ್ವರ ಯತಿಯ ಹೆಸರು ಬರುತ್ತದೆ. ಕಳೇಶ್ವರದೇವ, ಕಳೇಶ್ವರ ಬೃತಿಪತಿ, ಕಳೇಶ್ವರ ಬೃತಿರಾಜ, ಕಳೇಶ್ವರ ಬೃತೀಂದ್ರ, ಕಳೇಶ್ವರರಾರ್ಯ್ಯ, ಕಳೇಶ್ವರಾಚಾರ‍್ಯ ಹಾಗೂ ಕಳೇಶ್ವರ ಸೈದ್ದಾಂತಿ, ಎಂಬ ಹಲವಾರು ಹೆಸರುಗಳಿಂದ ಆ ಶಾಸನಗಳು ಇವರನ್ನು ಮನದುಂಬಿ ವರ್ಣಿಸುತ್ತವೆ.
೧೨ನೆಯ ಶತಮಾನ ಸಿಂದ ಅರಸರ ರಾಜಧಾನಿ ಯರಂಬರವಿಗೆ (ಯಲಬುರ್ಗಿ) ಮೂಲಸ್ಥಾನ ಶಿಂಗೇಶ್ವರ, ರಾಜೇಶ್ವರ, ಚೌಡೇಶ್ವರ, ವಿಕ್ರಮೇಶ್ವರ ದೇಗುಲಗಳ ಮಠದ ಆಚಾರ‍್ಯತ್ವವನ್ನು ಈ ಯತಿಗಳು ಹೊಂದಿದ್ದರು. ಇವರು ಮಹಾಮಂಡಳೇಶ್ವರ ಚಾವುಂಡರಾಯನಿಗೆ ರಾಜಗುರುಗಳಾಗಿದ್ದರು. ಸೂಂಡಿಯ ವ್ಯಾಪಾರಸ್ಥರ ದೈವವಾದ  ನಗರೇಶ್ವರ ದೇವಾಲಯದ ಕಾಳಾಮುಖರಲ್ಲಿ ಆಚಾರ‍್ಯರಾಗಿ ಪ್ರಖ್ಯಾತರಾಗಿದ್ದರು. ಸಿಂದಾನ್ವಯ ಕಾಳಾಮುಖರಲ್ಲಿನ ಸಿಂಹ ಪರಿಷೆಯ ಕರ್ಣಾಟಕ ಶಾಖೆಯ ಶಾಸನಗಳು ಇವರ ಯತಿ ಪರಂಪರೆಯನ್ನು ಮಳಿಯಾಳಪಂಡಿತ> ಜ್ಞಾನೇಶ್ವರ>ಸೋಮೇಶ್ವರ>ಶಾಂತರಾಶಿ>ಕಳೇಶ್ವರ, ಎಂದು ಹೇಳುತ್ತದೆ. ಸಿಂದ ಅರಸರ ಗುರುವಾದ ಇವರು ಶಾಂತಿಯನ್ನು ಹೊಂದಿ ಶೈವ ಸಿದ್ದಾಂತವನ್ನು ಸ್ವೀಕರಿಸಿ, ಪಾಂಡಿತ್ಯ, ಸದ್ಗುಣಗಳಿಗೆ ಹೆಸರಾದ ಲೋಕಗುರುವಾಗಿದ್ದರು. ತಮ್ಮ ಪಾಂಡಿತ್ಯ ಹಿರಿಮೆಯಿಂದಾಗಿ ಇವರು ‘ಸಿದ್ದಾಂತಿ ಎಂದು ಕರೆಯಲ್ಪಡುತ್ತಿದ್ದರು.
ಕುಕನೂರಿನ ಮಹಾಮಾಯೆ ದೇವಾಲಯದ ಶಾಸನದಲ್ಲಿ ‘ಶ್ರೀಮನ್ಮಹಾಮಂಡಳೇಶ್ವರ ಚಾವುಂಡ ನಗರೇಶ್ವರರಿಗೆ ಗುರುಗಳು ವಿಖ್ಯಾತಿಯಂ ತಾಳಿದ್ದರ್ || ಸ್ಥಿರಮತಿ ಸೂಂಡಿಯ ನಗರೇಶ್ವರ ಕಾಳಾಮುಖನ್ವಯ ಮಾನ್ಯಾವಳಿಯೊಳು ದೊರೆ ವೆತ್ತ ಮುನಿಶ್ವರರೊಳ್ದೆರೆವೆತ್ತಂ ಶ್ರೀಕಳೇಶ್ವರ ಬೃತಿರಾಜಂ ||’’ ಎಂದು ಹೊಗಳಲಾಗಿದೆ. ಇವರು ಅರಿಯದ ವಿದ್ಯೆಯೇ ಇರಲಿಲ್ಲ “ಅಜ್ಞಾಧರನೆನೆ ಧರೆ ಮಂತ್ರಜ್ಞಂ ತ್ರೈಕಾಲದರ್ಶಿಯೆನೆ ಧಾರಣೆ ದೈವಜ್ಞಂ ಶೈವಾಗಮ ಸರ್ಬ್ಬಜ್ಞಂ ಶ್ರೀರಾಜ ಗುರು ಕಳೇಶ್ವರದೇವಂ || ತಜ್ಞರ್ಪ್ಪರೀಕ್ಷಿಸಲು ಶಬ್ದಜ್ಞಂ ಶಾಸ್ತ್ರಜ್ಞಂ ನಖಿಳತರ್ಕಜ್ಞಂ ಕಾವ್ಯಜ್ಞಂ ದೈವಜ್ಞಂ ಸಬ್ಬಜ್ಞಂ ಶ್ರೀ ರಾಜಗುರು ಕಳೇಶ್ವರದೇವಂ’’ ಎಂದು ಹೊಗಳಲಾಗಿದೆ. ಇದರಲ್ಲಿ ಬಹಳಷ್ಟು ಸಲ ಶೈವಾಗಮ ಸರ್ವಜ್ಞ ಶ್ರೀ ರಾಜಗುರು ಕಳೇಶ್ವರದೇವಂ, ಎಂದು ಬಣ್ಣಿಸಲಾಗಿದೆ.
ಕರ್ನಾಟಕ ತಾಂತ್ರಿಕ ಪಂಥದ ಶೋಧನೆಗೆ ಕುಕ್ಕನೂರು ಒಂದು ಕೇಂದ್ರಸ್ಥಾನ. ಇಲ್ಲಿರುವ ಜೇಷ್ಠಾದೇವಿಗೆ ಅಗ್ರಹಾರದ ಬ್ರಾಹ್ಮಣರು ಭಯದಿಂದ ಗಡಗಡ ನಡುಗುತ್ತಿದ್ದರು. ಈಕೆ ಮಹಾ ಪ್ರಳಯಾಂಬೆ, “ಆಕೆಯ ಗಸಣೆಯೇ ಬೇಡವೆಂದು ದ್ವಿಜರು ಅಳ್ಕುತಿರ್ಪರು’’ ಎಂದು ಶಾಸನಗಳು ಹೇಳುತ್ತವೆ. ಕ್ರಿ.ಶ.೧೫೬೧ರ ಶಾಸನವು ಜೇಷ್ಠಾದೇವಿಯ ಮಹಾಲಕ್ಷ್ಮಿಯಾಗಿ ನಂತರ ಮಹಾಮಾಯೆಯಾದಳೆಂದು ಹೇಳುತ್ತದೆ. ಇಂತಹ ಉಗ್ರದೇವತೆಗೆ ಸೂಡಿಯ ಕಾಳಾಮುಖ ಕಳಕೇಶ್ವರ ಯತಿಗಳು ಉಪಾಸಕರಾಗಿದ್ದರು. ಕುಕನೂರಿನ ಶಾಸನವು ಮುಂದುವರೆದು ಕಳಚೂರಿ ಅರಸ ಸಂಕಮದೇವನು ಮೊದೆಗನೂರು ನೆಲೆವೀಡಿನಲ್ಲಿದ್ದನು. ಆಗ ಇವನ ದಂಡನಾಯಕನಾದ ‘ದನ್ನುಗಿ ಕುಕನೂರ ಅಗ್ರಹಾರದ ದೊರೆ, ಈತನ ಸಂಕಲ್ಪದಂತೆ ಎಲ್ಲವೂ ಈಡೇರಿದಾಗ ರಾಜಗುರು ಕಳಕೇಶ್ವರರ ಪಾದ ತೊಳೆದು ಈ ಜೇಷ್ಠಾದೇವಿಗೆ ದಾನ ಕೊಡುತ್ತಾನೆ. ಅಲ್ಲಿನ ತಪೋಧನರ ಆಹಾರಕ್ಕೂ ಈ ದಾನ ಸಲ್ಲುತ್ತದೆ. ಹೀಗೆ ಅದ್ಭುತವಾದ ಮಾಹಿತಿಯನ್ನು ಒದಗಿಸುವ ತಾಂತ್ರಿಕ ಪಂಥದ ಜೊತೆಗೆ ಕಾಳಾಮುಖಕ್ಕಿದ್ದ ಸಂಬಂಧವನ್ನು ತಿಳಿಸುವ ಈ ಕುಕನೂರ ಶಾಸನವು (ಕ್ರಿ.ಶ.೧೧೭೮)ವು ಅಧ್ಯಯನಕ್ಕೆ ಅಮೂಲ್ಯವಾದ ಆಕರವಾಗಿದೆ. ಕಳಕೇಶ್ವರ ಯತಿಗಳು ಈ ಭಾಗದಲ್ಲಿ ಸಂಚರಿಸಿರಬಹುದು. ಕಾಳಾಮುಖರ ತಾಣವಾದ ಸೂಡಿ ಪಕ್ಕದಲ್ಲಿ ಈ ಪರಂಪರೆಯ ಒಂದು ಭಾಗವಾದ ಇಟ್ಟಗಿ ಸಂತತಿಯಿಂದಲೇ ‘ಇಟಗಿ ಎಂಬ ಊರಿನ ಹೆಸರು ಬಂದಿರಬಹುದಾಗಿದೆ.
ಈವರೆಗೆ ಸೂಡಿಯಲ್ಲಿ ದೊರೆತ ೯ ಶಾಸನಗಳಲ್ಲಿ ಕಳಕೇಶ್ವರ ಯತಿಗಳಂತೆ ಸೋಮೇಶ್ವರ ಪಂಡಿತರು, ಕಲ್ಯಾಣಶಕ್ತಿ, ಶಿವಮೂರ್ತಿ ಶಿವಾಚಾರ‍್ಯರಂತಹ ಪಂಡಿತರಿದ್ದರೆಂದು ಉಲ್ಲೇಖಿತರಾಗಿದ್ದಾರೆ. ಕಳಕೇಶ್ವರರಂತೆ ಸೂಡಿ ಸೋಮೇಶ್ವರರು ಕೂಡಾ ಸೂಡಿಯ ನಾಗೇಶ್ವರ, ಅಚಲೇಶ್ವರ, ಪಂಚಲಿಂಗೇಶ್ವರ ದೇವಸ್ಥಾನಗಳ ಸ್ಥಾನಾಚಾರ‍್ಯರಾಗಿದ್ದರು. ಇವರು ಕಳಕೇಶ್ವರ ಪ್ರಕಾಂಡ ಪಂಡಿತರಾಗಿದ್ದರು. ಇವರು ಕಳಕೇಶ್ವರ ಯತಿಗಳಂತೆ ಪ್ರಕಾಂಡ ಪಂಡಿತರಾಗಿದ್ದರು. ಇವರನ್ನು ಎರಡನೆ ಶಿವನೆಂದು ಶಾಸನಗಳಲ್ಲಿ ವರ್ಣಿಸಲಾಗಿದೆ. ಅದೇ ರೀತಿ ಕಲ್ಯಾಣಶಕ್ತಿಯನ್ನು ಕೂಡಾ ಹೊಗಳಲಾಗಿದೆ. ಇದೆಲ್ಲವನ್ನು ಗಮನಿಸಿದಾಗ ಅಂದಿನ ಸೂಡಿ ಪಂಡಿತರ ವಾಸಸ್ಥಾನವಾಗಿತ್ತೆಂದು ಇದರಿಂದ ಸ್ಪಷ್ಟವಾಗುತ್ತದೆ.

ಆಧಾರಸೂಚಿ ಮತ್ತು ಟಿಪ್ಪಣಿಗಳು
೧.         ಕಾಪಾಲಿಕರು ಮತ್ತು ಕಾಳಾಮುಖರು - ಕಣ್ಮರೆಯಾದ ಎರಡು ಶೈವ ಸಂಪ್ರದಾಯಗಳು, ಮೂಲ: ಡಿ.ಎನ್. ಲಾರೆಂಜೆನ್, ಅನು: ವಿರೂಪಾಕ್ಷ ಕುಲಕರ್ಣಿ, ಕನ್ನಡ ಪುಸ್ತಕ ಪ್ರಾಧಿಕಾರ, ೨೦೦೫, ಪುಟ ೧೩೧.
೨.         ಕರ್ನಾಟಕದಲ್ಲಿ ಲಾಕುಳ ಶೈವ ಜಕ್ಕಣಾಚಾರ‍್ಯರು, ಡಾ. ವಸುಂಧರಾ ಫಿಲಿಯೋಜಾ, ಪುಟ ೧೭, ೧೯, ೨೩.
೩.         ಕಾಳಾಮುಖ ದರ್ಶನ, ಎಸ್.ಎಸ್. ಹಿರೇಮಠ, ಸಮತಾ ಪ್ರಕಾಶನ ಹರಪನಹಳ್ಳಿ, ೨೦೦೪, ಪುಟ ೩೩.
೪.         ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ ೨, ಕೊಪ್ಪಳ ಜಿಲ್ಲೆ, ೧೯೯೯, ಪುಟ ೪೦೫.
೫.         ಕಾಳಾಮುಖ ದರ್ಶನ, ಎಸ್.ಎಸ್. ಹಿರೇಮಠ, ಸಮತಾ ಪ್ರಕಾಶನ, ಹರಪನಹಳ್ಳಿ, ಪುಟ ೭೨.
೬.         ಕಾಪಾಲಿಕರು ಮತ್ತು ಕಾಳಾಮುಖರು, ಕಣ್ಮರೆಯಾದ ಎರಡು ಶೈವ ಸಂಪ್ರದಾಯಗಳು, ಮೂಲ: ಡಿ.ಎನ್. ಲಾರೆಂಜೆನ್, ಅನು: ವಿರೂಪಾಕ್ಷ ಕುಲಕರ್ಣಿ, ಕನ್ನಡ ಪುಸ್ತಕ ಪ್ರಾಧಿಕಾರ, ೨೦೦೫, ಪುಟ ೧೯೩.
೭.         ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ ೨, ಕೊಪ್ಪಳ ಜಿಲ್ಲೆ, ೧೯೯೯, ಯಲಬುರ್ಗಿ ತಾಲ್ಲೂಕು, ಕುಕನೂರು ಶಾಸನ, ೫೨.
೮.         ಅದೇ ಶಾಸನ. 
೯.         ಕಾಳಾಮುಖ ದರ್ಶನ, ಎಸ್.ಎಸ್. ಹಿರೇಮಠ ಪುಟ ೭೨-೭೩.