Wednesday, February 13, 2013

ಕುರುಡು ಮಲೆ ಶಾಸನ


ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕಿನ ಕುರುಡುಮಲೆ ಶ್ರೀ ವಿನಾಯಕ ದೇವಾಲಯದ ಅಪ್ರಕಟಿತ ಶಾಸನ

ಕೆ.ಆರ್. ನರಸಿಂಹನ್
ನಂ. ೨೦೩, ಸಿಂಚನ,
ಮೊದಲನೇ ‘ಎ’ ಮೇನ್,
ಮಾರುತಿನಗರ, ಯಲಹಂಕ,
ಬೆಂಗಳೂರು-೫೬೦೦೬೪

ವಿಘ್ನಗಳ ಪರಿಹಾರಕನಾದ ಮಂಗಳಮೂರ್ತಿ ವಿನಾಯಕನು ನೆಲೆಸಿರುವ ಗ್ರಾಮ ಕುರುಡುಮಲೆ. ಕೋಲಾರ ಜಿಲ್ಲೆಯ ಮುಳಬಾಗಿಲಿಗೆ ಸುಮಾರು ಹನ್ನೊಂದು ಕಿ.ಮೀ. ದೂರದಲ್ಲಿರುವ ಈ ಗ್ರಾಮವು ಐತಿಹಾಸಿಕ ಸ್ಥಳವೂ ಆಗಿದೆ. ಪ್ರಕೃತಿದತ್ತವಾದ ಬೆಟ್ಟಗುಡ್ಡಗಳಿಂದ ಕೂಡಿದ ಇಲ್ಲಿರುವ ಬೆಟ್ಟವನ್ನು ‘ಕೌಂಡಿಣ್ಯಗಿರಿ’ ಎಂದು ಸಂಬೋಧಿಸಲಾಗುತ್ತಿದೆ. ಇದೇ ಹೆಸರಿನ ಹೊಳೆಯು ಇಲ್ಲಿನ ಬೆಟ್ಟದಲ್ಲಿ ಉಗಮವಾಗಿ ‘ನಂಗಲಿ ಹೊಳೆ’ ಎಂದು ಪ್ರಸಿದ್ಧವಾಗಿದ್ದು ಮುಂದಕ್ಕೆ ಹರಿದು ಪಾಲಾರ್ ನದಿಯನ್ನು ಸೇರುತ್ತದೆ. ಕರ್ನಾಟಕದ ಕೆಲವೇ ಪ್ರಸಿದ್ಧವಾದ ವಿನಾಯಕ ದೇವಾಲಯಗಳಲ್ಲಿ ಕುರುಡುಮಲೆಯಲ್ಲಿರುವ ಆಲಯವನ್ನು ವಿಶಿಷ್ಟವಾದದ್ದೆಂದು ಪರಿಗಣಿಸಲಾಗಿದ್ದು, ಗ್ರಾಮದಲ್ಲಿ ಇನ್ನೂ ಕೆಲವೊಂದು ದೇವಾಲಯಗಳಿವೆ. ಇವುಗಳಲ್ಲಿ ಈಗಲೂ ಪೂಜೆಗೊಳ್ಳುತ್ತಿರುವ ಶಿವ-ಪಾರ್ವತಿಯರ ದೇವಾಲಯವಿರುತ್ತದೆ. ಕುರುಡುಮಲೆಗೆ ಐತಿಹಾಸಿಕ ಪರಂಪರೆಯನ್ನು, ಜನಪ್ರಿಯತೆಯನ್ನು ತಂದುಕೊಟ್ಟಿರುವುದೇ ವಿನಾಯಕ ದೇವಾಲಯ.
ವಿನಾಯಕನ ವಿಶಾಲವಾದ ಪೂಜಾಮಂದಿರವನ್ನು ಎರಡು ಕಾಲಘಟ್ಟಗಳಲ್ಲಿ ನಿರ್ಮಿಸಲಾಗಿದೆ. ಇಲ್ಲಿನ ಗರ್ಭಗೃಹ ಮತ್ತು ಶುಕನಾಸಿಗಳನ್ನು ಬಹುಶಃ ಹೊಯ್ಸಳ ಅರಸರ ಆಳ್ವಿಕೆಗೆ ಸೇರಿಸಬಹುದಾದರೆ ಮುಂದಿನ ನವರಂಗವು ವಿಜಯನಗರದ ಅರಸರ ಕಾಲದ ಕೊಡುಗೆಯೆಂಬುದು ನಿರ್ವಿವಾದ. ಇಲ್ಲಿನ ನವರಂಗದ ಕಂಬಗಳ ಮೇಲಿನ ಉಬ್ಬುಶಿಲ್ಪಗಳನ್ನು ಇತಿಹಾಸ ಬರಹಗಾರರು ತಮ್ಮ ಕೃತಿಗಳಲ್ಲಿ ವಿವರಣಾತ್ಮಕವಾಗಿ ದಾಖಲಿಸಿರುವುದು ಈ ಆಲಯದ ಚಾರಿತ್ರಿಕ ಹಿರಿಮೆಗೆ ನಿದರ್ಶನವಾಗಿದೆ.
ವಿನಾಯಕ ದೇವಾಲಯವು ಪೂರ್ವಾಭಿಮುಖವಾಗಿದ್ದು ಮುಂಭಾಗದಲ್ಲಿ ವಿಶಾಲವಾದ ಮಂಟಪವಿದೆ. ದಕ್ಷಿಣ ದಿಕ್ಕಿಗೆ ಮತ್ತೊಂದು ದ್ವಾರವನ್ನು ಆಲಯಕ್ಕೆ ಅಳವಡಿಸಲಾಗಿದೆ. ದಕ್ಷಿಣ ದಿಕ್ಕಿನ ಬಾಗಿಲು ಸಹಾ ಪೂರ್ವದ ಬಾಗಿಲಿನಂತೆಯೇ ಕಲಾತ್ಮಕವಾದ ಬಾಗಿಲವಾಡವನ್ನು ಹೊಂದಿದೆ. ಇಲ್ಲಿಂದ ಹೊರಗೆ ಹೋಗಲು ಪುಟ್ಟ ಮೆಟ್ಟಿಲುಗಳಿವೆ. ಈ ದಕ್ಷಿಣ ದಿಕ್ಕಿನ ದ್ವಾರದಲ್ಲಿರುವ ಪ್ರಸ್ತುತ ಶಾಸನವು ಹಲವಾರು ಮಹತ್ವದ ಸಂಗತಿಗಳನ್ನು ತಿಳಿಸಿಕೊಡುತ್ತದೆ.
ಆಲಯದ ದಕ್ಷಿಣ ದಿಕ್ಕಿನ ದ್ವಾರದ ಹೊರಗಡೆ ಗೋಡೆಯ ಬಲಭಾಗದಲ್ಲಿರುವ ಕನ್ನಡ ಶಾಸನವು ವಿಜಯನಗರದ ಅರಸರ ಕಾಲದ ಲಿಪಿ-ಬರಹಗಳಿಂದ ಕೂಡಿದೆ. ಅಧಿಷ್ಠಾನ ಹಾಗೂ ಭಿತ್ತಿಗಳ ಮೂರು ದೀರ್ಘವಾದ ಶಿಲಾಪಟ್ಟಿಕೆಗಳನ್ನು ಆವರಿಸಿಕೊಂಡಿರುವ ಶಾಸನದಲ್ಲಿ ಹನ್ನೊಂದು ಸಾಲುಗಳಿವೆ. ಪ್ರತಿ ಸಾಲಿನ ಕೊನೆಯಲ್ಲಿರುವ ಹಲವೊಂದು ಅಕ್ಷರಗಳನ್ನು ದುರಸ್ತಿಯ ಕಾರಣ ಕಟ್ಟಲಾಗಿರುವ, ಬೃಹತ್ ಗೋಡೆಯು ಮುಚ್ಚಿಕೊಂಡಿರುವ ಕಾರಣದಿಂದ ದಾಖಲಿಸಲು ಸಾಧ್ಯವಾಗಿಲ್ಲ. ಆದರೆ ಇದರಿಂದ ಶಾಸನದ ಅರ್ಥಗ್ರಹಿಕೆಗೆ ತೊಂದರೆಯಾಗಿಲ್ಲ. ವಿನಾಯಕ ದೇವಾಲಯದ ನವರಂಗದ ಅಧಿಷ್ಠಾನ ಮತ್ತು ಭಿತ್ತಿಗಳಲ್ಲಿ ಸ್ಪಷ್ಟವಾಗಿ ಪ್ರಕಟಗೊಂಡ ಕನ್ನಡ ಶಾಸನವು ಕುರುಡುಮಲೆಯ ತಮಿಳು ಶಾಸನ ಸಮೂಹದಲ್ಲಿ ಸದ್ಯಕ್ಕೆ ಲಭ್ಯವಾಗಿರುವ ಏಕೈಕ ಕನ್ನಡ ಭಾಷಿಕ ಶಿಲಾಶಾಸನವೆಂಬ ಕಾರಣದಿಂದ ಇದೀಗ ಮಹತ್ವದ್ದಾಗಿರುತ್ತದೆ.
ಅಧಿಷ್ಠಾನ ಹಾಗೂ ಗೋಡೆಯ ಮೇಲೆ ಮೂರು ಶಿಲಾಪಟ್ಟಿಕೆಗಳ ಮೇಲೆ ಮೂರು ಭಾಗದಲ್ಲಿ ಶಾಸನವನ್ನು ಹಾಕಲಾಗಿದೆ. ಮೊದಲನೇ ಮತ್ತು ಎರಡನೇ ಶಿಲಾಪಟ್ಟಿಕೆಗಳ ಮೇಲೆ ನಾಲ್ಕು ಸಾಲುಗಳಿದ್ದರೆ ಮೂರನೆಯ ಪಟ್ಟಿಕೆಯು ಮೂರು ಸಾಲುಗಳನ್ನೊಳಗೊಂಡಿದೆ. ಕಡೆಯ ಮೂರು ಸಾಲುಗಳು ತಮಿಳು ಗ್ರಂಥಲಿಪಿಯಲ್ಲಿರುವುದು ವಿಶೇಷ. ಕಡೆಯ ಸಾಲುಗಳು ಬಹುಪಾಲು ಶಿಲಾಬರಹವನ್ನು ಬರೆದವರ ಮತ್ತು ಸಾಕ್ಷಿಯಾದವರ ಹೆಸರು ಇಲ್ಲವೇ ರುಜುವನ್ನು ತಿಳಿಸುವಂತಿದೆ. ಶಾಸನವನ್ನು ಹಾಕಿಸಿದ ಗಣ್ಯರು, ಸ್ಥಾನಿಕರು, ತಮಿಳು ಮೂಲದವರೇ ಆಗಿದ್ದರೆಂಬುದು ಇದರಿಂದ ಹೊರಪಡುವಂತಿದೆ.
ಈಗಾಗಲೇ ಬಿ.ಎಲ್. ರೈಸ್‌ರವರು ದಾಖಲಿಸಿರುವ ‘ಎಪಿಗ್ರಾಫಿಯಾ ಕರ್ನಾಟಿಕ’ದ ಹತ್ತನೇ ಸಂಪುಟದಲ್ಲಿರುವ ಮುಳಬಾಗಿಲು ತಾಲೂಕಿನ ಸಿದ್ದಘಟ್ಟ ಗ್ರಾಮದ ೨೫೯ ಮತ್ತು ೨೬೦ನೇ ಸಂಖ್ಯೆಯ ಎರಡು ಶಾಸನಗಳ ಹಿನ್ನೆಲೆಯಲ್ಲಿ ಪ್ರಸ್ತುತ ಕುರುಡುಮಲೆಯ ಹೊಸ ಶಾಸನವನ್ನು ಪರಿಶೀಲಿಸಬಹುದಾಗಿದೆ. ಸಿದ್ದಘಟ್ಟ ಗ್ರಾಮವು ಕುರುಡುಮಲೆಯ ವಿಶಾಲವಾದ ಬೆಟ್ಟದ ಹಿಂಭಾಗದಲ್ಲಿರುವ ಗ್ರಾಮವಾಗಿದೆ. ಕುರುಡಮಲೆಯನ್ನು ತಮಿಳು ಶಾಸನಗಳಲ್ಲಿ ‘ಕುಡುರಿಮಲೈ’ ಇಲ್ಲವೇ ‘ಕೂತ್ತಾಂಡದೇವನಲ್ಲೂರು’ ಎಂದು ಸಂಬೋಧಿಸಲಾಗಿದೆ. ಹೊಯ್ಸಳ ದೊರೆ ನರಸಿಂಹನ ಕಾಲದ ತಮಿಳು ಪ್ರದೇಶದ ಮುಖ್ಯ ಭಾಗವಾಗಿ ಅಥವಾ ಸ್ಥಳೀಯ ರಾಜಧಾನಿಯಾಗಿ ಇದು ಪ್ರಸಿದ್ಧಿ ಪಡೆದಿತ್ತೆಂಬ ವಿಚಾರ ಇತಿಹಾಸದ ಪುಟಗಳಲ್ಲಿದೆ. ಚೋಳ-ಹೊಯ್ಸಳ ಮನೆತನಗಳ ಸಂಬಂಧವನ್ನು ಉತ್ತಮಗೊಳಿಸಿ ಪ್ರಮುಖ ದೇವಾಲಯಗಳ ಸಂರಕ್ಷಣೆ ಮಾಡಿದ ಹಾಗೂ ಕೆಲವು ಹೊಸ ದೇವಾಲಯಗಳನ್ನು ನಿರ್ಮಿಸಿದ ‘ಕೂತ್ತಾಡುನ್‌ದೇವ’ನ ದೇವಾಲಯ ಸಂಸ್ಕೃತಿಗೆ ಕಿರೀಟವಿಟ್ಟಂತಿರುವ ಕುರುಡುಮಲೆಯ ವಿನಾಯಕ ದೇವಾಲಯದ ಕನ್ನಡ ಶಾಸನವನ್ನು ಇಲ್ಲಿ ಪ್ರಸ್ತುತಪಡಿಸಲಾಗಿದೆ.
ಶಾಸನಪಾಠ
೧        ಶುಭಮಸ್ತು ಸ್ವಸ್ತಿಶ್ರೀ ವಿಜಯಾಭ್ಯುದಯ ಶಕವರುಷ ೧೩೬೪ನೆಯ ದುಂಧುಭಿ ಸಂವತ್ಸರದ ಮಾರ್ಗಸಿರ ಸು೧೦ಲೂ ಸಿದ್ದಪ್ಪಗಳ ಮಕ್ಕಳು ತಿಂಮಣಗಳಿಗೆ ಕುರುಡುಮಲೆಯ ಸ್ತಾನಿ.......
೨        ನಿಉ ವಿನಾಯಕ ದೇವರ ಸಂನಿದಿಯಲಿ ಛತ್ರವನ್ನಿಕ್ಕಿ ಸೋದಕೆ ನಾಉ ಕ್ರಯವ ಕೋಟ ಸೀಮೆಗೆ ಸಿದ್ದಸಮುದ್ರದ ಒಳಗಣ ಸಿಮೆ.....
೩        ಆ ಸಿಮೆಗೆ ಕ್ರಯವಾಗಿ ೧೦ ಉಭಯಂ ನೆಲಕಂ ಸೆರಿಸಿಕೊಟ್ಟ ಸಿಮೆಯ ವಳೆಯ ಶಾಸನದ ವಿವರ ಮೇಳಾದೇವಿ ಹಳಿಯ ಸಿಮೆಗೆ ಪಡುವಲು ಮುಳವಾಯಿ ನಾಚಿಯಾರಿಗೆ ಸ....
೪        ಕುಂಟೆಯ ಕೆಳಗಣ ಗದೆಗೆ ಬಡಗಲು ತಾಳೆಕುಂಟೆ ಒಳಗೆ ಯ ವ(ಪ)ಡು ಬಲಕೆ ಮೂಡಲು ಆನೆಕುಂಟೆಯ ಕೆರೆಯ ಕೀಳೇರಿಯ ವುಭಯಮಾಗೆ ದಾರಿಗೆ ಮೂಡಲ ಕುಂ
೫        ಟೆಗೆ ಬಡಗಲು ಅಸಿದ ಬಂಕಣಿಕೆ ಕುಂಟೆ ಸಹ ತಾವರೆಕೆರೆಯ ಹುಣಿಸೆಯ ಕುಂಟೆಗೆ ತೆಂಕಲು ನಡುವೆ ಸಲುವ ಸಿಮೆಗೆ ಬಡಗಲಾಗಿ ಚರುಸಿಮೆಯ ಒಳಗಣ ಕುಂಟೆ ಕೆರೆ ಹಳ್ಳ ಕೋ
೬        ಡಿ ಸಹವಾಗಿ ಕ್ರಯವನೂ ಕೊಟ್ಟುಕಲ್ಲನಡೆಸಿ ಕೊಟೆವಾಗಿಯೀ ಕ್ರಯಶಾಸನವನೂ ಮಾಡಿಸಿ ಸಿಮೆಯನು ಅನುಭವಿಸುದುಯೆಂದು ಪ್ರಾಮಾಣಿಸ ಲಾಗಿ ದಿನಂಪ್ರತಿ ದೇವರ ಸಂನಿದಿಯಲೂ ಆರು ಮಂದಿ ಬ್ರಾ....
೭        ಯಿಕ್ಕಿಸಿ ನಿಮ್ಮ ಪುತ್ರ ಪೌತ್ರ ಪರಂಪರೆ ಆಗಿ ಆಚಂದ್ರರ್ಕಸ್ತಾಯಿ ಆಗಿ ದಾನಾದಿ ಕ್ರಯಗಳಿಗೆ ಯೋಗ್ಯತಾದಿ ಅನಭವಿಸುದುಯಂದು ಕೊಟ್ಟ ಶಾಸನ ಸ್ಥಾನ ಮಾಂನ್ಯ ಸೂತ್ರ....
೮        ರುತಪ್ಪಿದರು ವಿನಾಯಕದೇವರ ಶ್ರೀಪಾದಕೆ ತಪ್ಪಿದವರು ವಾರಣಸಿಯಲಿ ತಂಮ ಮಾತಾ ಪಿತೃಗಳನೂ ವದಿಸಿದ ಪಾಪದಲಿ ಹೊ.... ಯೆಂಬುದಕೆ ಸ್ತಾನಿಕರವೊಪ್ಪ ವಿನಾಯಕ ದೇ
೯        ವರವೊಪ್ಪ ನಾಯನಾರ ಮಕ್ಕಳು ಅಪ್ಪಣ್ಣ ನಾಯನಾರ ಬರಹ* ಅಳಗಿಯ ನಾಯನಾರ್ ರಕ್ಷೈ....
೧೦     ಉತ್ತಮ ನಂಜೈನಾಯನಾರಳುತ್ತು ವಿನಾಯಕ ದೇವರ ಎಳುದು
          [* ಇಲ್ಲಿಂದ ಮುಂದಿನ ಭಾಗ ಗ್ರಂಥ ತಮಿಳು ಲಿಪಿಯಲ್ಲಿದೆ]
ಕುರುಡುಮಲೆಯಲ್ಲಿ ಆರು ಬ್ರಾಹ್ಮಣರಿಗೆ ಅನ್ನಸತ್ರವನ್ನಿಕ್ಕಿಸುವ ಕಾರ್ಯವು ಈ ಶಾಸನದ ಆಶಯವೆಂದು ಹೇಳಬೇಕು. ಸಿದ್ದಘಟ್ಟದಲ್ಲಿ ಕಟ್ಟಿದ ‘ಕನ್ನೆಕೆರೆ’ಯ ಕೀಳೇರಿಯಲ್ಲಿನ ಗದ್ದೆ ಹುಟ್ಟುವ ನೆಲವು ಮಾದಘಟ್ಟದ ಸೀಮೆಗೆ ಸೇರಿದ ಕಾರಣ ಕುರುಡುಮಲೆಯ ಸೀಮೆಯ ಒಳಗೆ ಮಾದಘಟ್ಟದವರಿಗೆ ಕೆಲವು ಹೊಲ ಗದ್ದೆಗಳನ್ನು ಕೊಡುವ ಸಂಬಂಧದಲ್ಲಿ ಈ ಶಾಸನವನ್ನು ಪ್ರಮುಖವೆಂಬುದಾಗಿ ತಿಳಿಯಬಹುದು. ಶಾಸನೋಕ್ತ ಕೆರೆ ಕುಂಟೆಗಳು ಕುರುಡು ಮಲೆಯ ಆಸುಪಾಸಿನಲ್ಲಿದ್ದು ಬೇಸಾಯದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತವೆ. ಉದಾಹರಣೆಗೆ: ಆನೆಕುಂಟೆ, ತಾಳೆಕುಂಟೆ ಇತ್ಯಾದಿ. ದಾನ ನೀಡಿದ ಇಲ್ಲವೇ ಪರ್ಯಾಯ ವಾಗಿ ಬಿಟ್ಟುಕೊಟ್ಟ ಜಮೀನಿನ ಎಲ್ಲೆಗಳನ್ನು ಇದರಲ್ಲಿ ಗುರುತಿಸಲಾಗಿದೆ. ಮೇಳಾದೇವಿಹಳ್ಳಿಯ ಹೆಸರು ಶಾಸನೋಕ್ತವಾಗಿದೆ. ಮುಳಬಾಗಿಲಿನ ಪ್ರಸಿದ್ಧ
ಗ್ರಾಮದೇವತೆ ಮುಳುವಾಯ ನಾಚ್ಚಿಯಾರಳ ಉಲ್ಲೇಖವೂ ಇದರಲ್ಲಿದೆ.
ಈ ಶಾಸನದ ಅರ್ಥಸ್ಪಷ್ಟತೆಗೆ ಸಿದ್ದಘಟ್ಟದಲ್ಲಿ ಹಾಕಲಾಗಿರುವ ಎರಡು ಶಾಸನಗಳ ನೆರವನ್ನು ಪಡೆಯಬಹುದು. ಸಿದ್ದಘಟ್ಟದ ಒಂದು ಶಾಸನವು (ಕ್ರಮಸಂಖ್ಯೆ ೨೫೦ ‘ಎಪಿಗ್ರಾಫಿಯಾ ಕರ್ನಾಟಿಕ’ ಸಂಪುಟ: ಹತ್ತು. ಮುಳಬಾಗಿಲು ತಾಲೂಕು) ಕುರುಡುಮಲೆ ಹೊಸ ಶಾಸನದ ದಿನಾಂಕಕ್ಕೆ (೧೪೪೨) ಸೇರುತ್ತದೆ. ಇದೊಂದು ಕ್ರಮಧರ್ಮ ಶಾಸನವಾಗಿರುತ್ತದೆ. ಕುರುಡಿಮಲೆಯ ಸೀಮೆಯಲ್ಲಿ ಕಸುಗೋಡ ಬಡಗಣ ಹಳ್ಳವನ್ನು ಸಿದ್ದಸಮುದ್ರವೆಂಬ ಹೆಸರಿನ ‘ಕನ್ನೆಗೆರೆ’ ಕಟ್ಟುವ ವಿಚಾರವಾಗಿರುತ್ತದೆ. ಕೆರೆಯ ಕೀಳೇರಿಯಲ್ಲಿ ಗದ್ದೆ ಹುಟ್ಟುವ ನೆಲವು ಮಾದಘಟ್ಟದ ಸೀಮೆಗೆ ಸೇರಿದ ಹಲವು ಗದ್ದೆ-ಹೊಲಗಳನ್ನು ಬಿಟ್ಟುಕೊಟ್ಟು ಈ ಸಂಬಂಧ ಸೀಮೆಯ ಕಲ್ಲನ್ನು ನೆಡಲಾಗಿದೆ. ಈ ಗದ್ದೆ ಹೊಲಗಳಲ್ಲಿ ದಸವಂದದ ಗದ್ದೆಯನ್ನು ಕಳೆದು (ಉಳಿದ) ಮಿಕ್ಕ ಗದ್ದೆಹೊಲಗಳನ್ನು ಕ್ರಯಕ್ಕೆ ಕೊಂಡುಕೊಳ್ಳಬೇಕೆಂದು (ಹೇಳಲಾಗಿ) ಇದರ ಧರ್ಮವಾಗಿ ವಿನಾಯಕ ದೇವರ ಸನ್ನಿಧಿಯಲ್ಲಿ ಛತ್ರವನ್ನು ಇಕ್ಕಿಸಬೇಕೆಂದು ಹೇಳಿದ ಕಾರಣ ಅಯಿವತ್ತು ಹೊನ್ನಿಗೆ ಕ್ರಯವ ಕೊಂಡು ಹೊನ್ನನ್ನು ಸಲ್ಲಿಸಿಕೊಳ್ಳಲಾಗಿದೆ. ವಳಯ ಶಾಸನವನ್ನು ಬರೆದು ಕೊಟ್ಟಿರುವುದನ್ನು ಈಗ ಲಭ್ಯವಿರುವ ಕುರುಡುಮಲೆಯ ಹೊಸ ಶಾಸನ ಶೋಧದಿಂದ ಮನದಟ್ಟಾಗುತ್ತದೆ. ಅಷ್ಟಭೋಗ ತೇಜಸ್ವಾಮ್ಯವನ್ನು ಅನುಭವಿಸಿಕೊಂಡು ವಿನಾಯಕ ದೇವರ ಸನ್ನಿಧಿಯಲ್ಲಿ ದಿನಂಪ್ರತಿ ಆರು ಮಂದಿ ಬ್ರಾಹ್ಮಣರಿಗೆ ಛತ್ರವನ್ನು ಇಕ್ಕಿಸಿ ಹೋಗಬೇಕೆಂದು ಈ ಕ್ರಯ ಶಾಸನದಲ್ಲಿ ತಿಳಿಸಲಾಗಿದೆ.
‘ವಿನಾಯಕ ದೇವರ ಸಂನಿಧಿಯಲಿ ಆರು ಮಂದಿ ಬ್ರಾಹ್ಮರಿಗೆ ಛತ್ರವನಿಕ್ಕಿಸೋದಕ್ಕೆ ತಿಮ್ಮಣ್ಣನಿಗೆ ಕುರುಡುಮಲೆಯ ಸ್ತಾನಿಕರು ಕ್ರಯವ ಕೊಟ್ಟ ಸೀಮೆಯ ವಿವರಗಳನ್ನು’ ಒಳಗೊಂಡಿರುವುದೇ ಕುರುಡುಮಲೆಯ ಶಾಸನ. ವಳಯ ಶಾಸನದ ವಿವರವೆಂದು ಹೇಳಿರುವುದು ಇಲ್ಲಿ ಗಮನಾರ್ಹ. ಈ ವಿವರಗಳು ಅಪೂರ್ಣವಾದ ಸಿದ್ದಘಟ್ಟದ ಮತ್ತೊಂದು ಶಾಸನದ ವಿವರಗಳಿಗೆ ಸರಿಹೊಂದುತ್ತದೆ. (ಕ್ರಮ ಸಂಖ್ಯೆ ೨೬೦ ‘ಎಪಿಗ್ರಾಫಿಯಾ ಕರ್ನಾಟಿಕ’ ಸಂಪುಟ: ಹತ್ತು, ಮುಳಬಾಗಿಲು ತಾಲೂಕು)
ವಿನಾಯಕ ದೇವಾಲಯದ ಸ್ತಾನತ್ತಾರರ ವಿಷಯ ಕುರುಡುಮಲೆಯ ೧೯೧ನೇ ಕ್ರಮಸಂಖ್ಯೆಯ ಶಾಸನದಿಂದ ತಿಳಿದುಬರುತ್ತದೆ. ‘ಕೋಯಿಲಿಲ್ ತಾನತ್ತಾರ್ ದಕ್ಷಿಣಾಮೂರ್ತಿ ವಿನಾಯಕರ್’ ಎಂದು ಉಲ್ಲೇಖವಿರುವ ಈ ತಮಿಳಿನ ಶಾಸನದ ಕಾಲವನ್ನು ಕ್ರಿ.ಶ.೧೩೭೩ ಎಂದು ಶಾಸನದಲ್ಲಿ ಉಲ್ಲೇಖಿಸಿರುವುದನ್ನನುಸರಿಸಿ ಅಭಿಪ್ರಾಯಪಡಲಾಗಿದೆ. ದೇವಾಲಯದ ಅಭಿವೃದ್ಧಿಯಲ್ಲಿ ಇವರದ್ದು ನಿರ್ಣಾಯಕ ಪಾತ್ರವಾಗಿದ್ದು ಹೊಸ ಶಾಸನದಲ್ಲಿ ಹೇಳಲಾಗಿರುವಂತೆ ಇಲ್ಲಿನ ಸ್ತಾನಿಕರು ತಿಮ್ಮಣ್ಣನಿಗೆ ನೀಡಿದ ಕ್ರಯಧರ್ಮದ ವಿಚಾರವು ಗಮನಾರ್ಹವಾದದ್ದೆಂದು ಅಭಿಪ್ರಾಯಪಡಬಹುದು.
[ಈ ಶಾಸನದಲ್ಲಿ ಶಕವರ್ಷ ೧೩೬೪ ದುಂಧುಬಿ ಸಂವತ್ಸರ, ಮಾರ್ಗಶಿರ ಶುದ್ಧ ೧೦ ಎಂದು ಮಾತ್ರ ಕಾಲ ಸೂಚಿತವಾಗಿದೆ. ವಾರಸೂಚಿತವಾಗಿಲ್ಲ. ಇದು ಕ್ರಿ.ಶ. ೧೪೪೨ ನವೆಂಬರ್ ೨೨, ಸೋಮವಾರಕ್ಕೆ ಸರಿಹೊಂದುತ್ತದೆ. (ಸಂ)]


.


Tuesday, February 12, 2013

ಸೂಡೂರಿನ ಅಪ್ರಕಟಿತ ಶಾಸನ


ಶಿವಮೊಗ್ಗ ಜಿಲ್ಲೆ ಸೂಡೂರಿನ ಅಪ್ರಕಟಿತ ಶಾಸನ
ಮಧುಗಣಪತಿರಾವ್ ಮಡೆನೂರು

ಶಿವಮೊಗ್ಗ ತಾಲ್ಲೂಕು ಸುಡೂರು ಗ್ರಾಮದ ಸರ್ಕಾರಿ ಅರಣ್ಯ ಪ್ರದೇಶದಲ್ಲಿ ವಿಜಯನಗರದ ಒಂದನೆಯ ದೇವರಾಯನ ಕಾಲಕ್ಕೆ ಸೇರಿದ, ವೀರ ಬಾಗಿಯೂರ ಕುಮಾರ ಬಸವಂಣನ ವೀರಗಲ್ಲು ಪತ್ತೆಯಾಗಿದೆ. ಕುಮುದ್ವತಿ ನದಿ ಎಡದಂಡೆಯ ಪಶ್ಚಿಮಕ್ಕೆ ಆಯನೂರು ಹೊಸನಗರ ಹೆದ್ದಾರಿಯ ಎಡಭಾಗದ ಮುನ್ನೂರು ಮೀಟರ್ ದೂರದಲ್ಲಿದೆ. ೧೯೦೦ರ ಸುಮಾರಿಗೆ ಇದ್ದ ಊರು ಪ್ರಕೃತಿ ವಿಕೋಪದಿಂದ ನಾಶವಾಗಿರುವುದಾಗಿ ಗೋಚರಿಸುತ್ತದೆ. ಪ್ರಸ್ತುತ ಅರಣ್ಯ ಪ್ರದೇಶವಾಗಿದ್ದು ಶಿವಮೊಗ್ಗ ಹಾಗು ಹೊಸನಗರ ತಾಲ್ಲೂಕಿನ ಗಡಿಭಾಗದಲ್ಲಿ ಈ ಕಲ್ಲು ದೊರೆತಿದೆ. ೧೯೫೯ರ ಮೊದಲು ಸೂಡೂರು ಬೇಚರಾಕ್ ಗ್ರಾಮವಾಗಿದ್ದು ಸಾಗರ ತಾಲ್ಲೂಕಿನ ಶರಾವತಿ ಕಣಿವೆ ಜಲವಿದ್ಯುತ್ ಯೋಜನೆಯು ೧೯೫೯-೬೦ರಲ್ಲಿನ ಪುನರ್ವಸತಿಯಿಂದಾಗಿ ಜನವಸತಿ ಊರಾಗಿ ಬೆಳೆದಿದೆ. ಗ್ರಾಮದ ನಡುವೆ ಕುಮುದ್ವತಿ ನದಿ ಹರಿದು ಹೋಗುತ್ತಿದೆ. ಸೂಡೂರು ಪ್ರಾಗೈತಿಹಾಸಿಕ ನೆಲೆಯಾಗಿದ್ದು ನವಶಿಲಾಯುಗದ ಪಳೆಯುಳಿಕೆಗಳಾದ ಕಲ್ಲಿನ ಮರಿಗೆ, ಬೆಣಚುಗಲ್ಲಿನ ಕೈಕೊಡಲಿಗಳು ನದಿ ಬಲದಂಡೆಯ ದಿಬ್ಬದಲ್ಲಿ ನೆಲ ಬಗೆದಂತೆಲ್ಲ ಹೇರಳವಾಗಿ ದೊರೆಯುತ್ತಿವೆ. ಈ ದಿಬ್ಬದಲ್ಲಿ ಅನೇಕ ಕುಟುಂಬಗಳು ವಾಸವಿದ್ದು, ನದೀ ಪಾತ್ರದ ತಗ್ಗು ಭೂಪ್ರದೇಶವಾಗಿರುವುದರಿಂದ ಅತಿವೃಷ್ಟಿಯಾದಾಗ ಆ ಕುಟುಂಬಗಳು ತೇಲಿಕೊಂಡು ಹೋಗಿರುವ ಸಾಧ್ಯತೆಗಳಿವೆ. ಅಲ್ಲಿ ನೆರೆ ಹತ್ತಿದ ಕುರುಹುಗಳೂ ಕಂಡುಬರುತ್ತಿವೆ.
ವೀರಗಲ್ಲು
ಶಿಲೆಯು ೪.೬ ಅಡಿ ಎತ್ತರ ಹಾಗು ಎರಡು ಅಡಿ ಅಗಲವಿದ್ದ ನಾಲ್ಕು ಹಂತಗಳಲ್ಲಿ ಕೆತ್ತಲಾಗಿದೆ. ತಳದ ಹಂತದಲ್ಲಿ ಮೃತವೀರ ಹಾಗು ಆತನ ಮಡದಿಯ ವಿಗ್ರಹಗಳೆರಡನ್ನೂ ಕೆತ್ತಲಾಗಿದೆ. ಇದು ವೀರನೊಡನೆ ಸತಿ ಹೋಗಿರುವುದನ್ನು ತಿಳಿಸುತ್ತದೆ. ಬಹುಶಃ ಕಾಡಿನ ಬೆಂಕಿಯಿಂದ ವೀರನ ಚಿತ್ರ ಚಕ್ಕೆ ಎದ್ದುಹೋಗಿದ್ದು ಸತಿಯಿರುವ ಭಾಗ ತುಂಡಾಗಿದೆ. ಸತಿಯು ಅಗಲವಾದ ಕರ್ಣಕುಂಡಲ [ಓಲೆ] ಹಾಗು ಕಿರೀಟಧಾರಿಣಿಯಾಗಿದ್ದು ಕೊರಳಹಾರ ಧರಿಸಿರುವಳು. ಬಲಗೈಯನ್ನು ಮೇಲಕ್ಕೆ ಎತ್ತಿದ್ದು ಎಡಗೈಯನ್ನು ಕೆಳಕ್ಕೆ ಚಾಚಲಾಗಿದೆ. ಕೈಯಲ್ಲಿ ಬಳೆ ಹಾಗು ತೋಳಬಂಧಿ ಧರಿಸಿರುವಳು. ಸಣ್ಣದಾದ ಕಟಿ ಹಾಗು ಸೀರೆಯನ್ನು ತೊಟ್ಟಿದ್ದು, ಶಿಲ್ಪಿಯು ಸತಿಯನ್ನು ಸುಂದರವಾಗಿ ಕೆತ್ತಿರುವುದು ಅಂದಿನ ಸ್ತ್ರೀಯರ ವೇಷಭೂಷಣವನ್ನು ನಿದೇರ್ಶಿಸುತ್ತದೆ. ಎರಡನೇ ಹಂತದಲ್ಲಿ ವೀರ ಮತ್ತು ಸತಿಯನ್ನು ಸುರಾಂಗನೆಯರು ಸಂಗೀತ, ನೃತ್ಯ ವಾದ್ಯಮೇಳದೊಂದಿಗೆ ಸ್ವಾಗತಿಸುತ್ತಿದ್ದಾರೆ. ಮೂರನೇ ಹಂತದಲ್ಲಿ ವೀರನನ್ನು ವಿಮಾನದಲ್ಲಿ ಕುಳ್ಳಿರಿಸಿ ಸ್ವರ್ಗಕ್ಕೆ ಕರೆದೊಯ್ಯುತ್ತಿರುವರು. ನಾಲ್ಕನೇ ಹಂತದಲ್ಲಿ ವೀರ ಮತ್ತು ಸತಿ ಶಿವ ಸನ್ನಿಧಿಯಲ್ಲಿರುವುದನ್ನು ಚಿತ್ರಿಸಲಾಗಿದೆ. ನೆತ್ತಿಯಲ್ಲಿ ಸೂರ್ಯ, ಚಂದ್ರರನ್ನು ಕೆತ್ತಿದ್ದು ಮಧ್ಯೆ ಎರಡು ಗೆರೆ ಎಳೆಯಲಾಗಿದೆ. ಚಂದ್ರನಿದ್ದ ಭಾಗ ಮುಕ್ಕಾಗಿದೆ.
ಬಸವಣ್ಣ
ಪ್ರಸ್ತಾವಿತ ಶಾಸನವು ವಿಜಯನಗರದ ಅರಸ ಎರಡನೇ ಹರಿಹರನ ಮಗ ಒಂದನೆಯ ದೇವರಾಯನ [೧೪೦೬-೧೪೨೨] ಆಡಳಿತ ಕಾಲದ್ದಾಗಿರುತ್ತೆ.೧ ಇವನ ರಾಜ್ಯಪಾಲನಾಗಿ ಆರಗವನ್ನು ವೀರಮಾರಪ್ಪ ಒಡೆಯರ ಕುಮಾರ ಸೋವಣ್ಣವೊಡೆಯ ಆಡಳಿತ ನಡೆಸುತ್ತಿದ್ದ.೨ ಅಂದು ಸೂಡೂರು ಸಮೃದ್ದಿಯಿಂದ ತುಂಬಿರಬಹುದು. ಶತ್ರುಗಳು ಊರಿಗೆ ನುಗ್ಗಿ ಕೊಳ್ಳೆಹೊಡೆದು, ದೋಚಿದ ನಂತರ ಊರನ್ನು ನಾಶಪಡಿಸಲು ಬೆಂಕಿಯನ್ನು ಹಚ್ಚಿರಬೇಕು. ಊರಳಿವನ್ನು ತಡೆಗಟ್ಟಲು ಬಾಗಿಯಾದ ಕುಮಾರ ಬಸವಂಣನು ಶತ್ರುಗಳೊಡನೆ ಹೋರಾಡಿ....ಸಂವತ್ಸರದ ಆಶ್ವೀಜ ಬ. ೧೧ರ ಆದಿವಾರದಂದು ಮೃತನಾಗುವನು. ಕಲ್ಲು ಮಾಸಿರುವುದರಿಂದ ಸಂವತ್ಸರ ಹಾಗು ವರ್ಷ ತಿಳಿಯುವುದಿಲ್ಲ. ಆರಗದ ಸೋಮಂಣನು ಮೃತ ವೀರನಿಗೆ ದಾನ ನೀಡುವನು.
ಬಾಗಿಯಾರ ಬಸವಣ್ಣನ ಶಾಸನ ಪಾಠ
ಪಟ್ಟಿಕೆ-೧
೧        ಬಾಗಿಯಾರ ಕುಮಾರ ಬಸವಂಣನು ಚ
೨        ಹೋ.. .. ..ಸಲಿಸಿ ಊರು [ಊರಳಿದ]
ಪಟ್ಟಿಕೆ-೨
೩        ಳುತ ಸಂವತ್ಸರದ ಆಶ್ವೀಜ ಬ ೧೧ ಆದಿವಾರ
೪        ಶ್ರೀಮತು ದೇವರಾಯರ ಕಾಲದಲ್ಲಿ ಆ
೫        ರಗದ ರಾಜ್ಯವನಾಳಿದ ಹೊಳ ಸೋಮಂಣ.
ಆನೆಗಳ ತಾಣ
ಸೂಡೂರು ಸುತ್ತೆಲ್ಲ ಕಾಡು ಮತ್ತು ಕುಮದ್ವತಿ ನದಿಯು ಬೇಸಿಗೆಯಲ್ಲೂ ಸದಾ ನೀರಿರುವುದರಿಂದ ಇದು ಆನೆಗಳ ವಾಸದ ತಾಣ. ಭದ್ರಾ ಅಭಯಾರಣ್ಯದಿಂದ ಶಂಕರಗುಡ್ಡದ ತಪ್ಪಲಿನಲ್ಲಿ ಹಾಯ್ದು ಸೂಡೂರಿಗೆ ಇಂದಿಗೂ ಆಗಾಗ್ಗೆ ಆನೆಗಳು ವಲಸೆ ಬಂದು ಬೆಳೆಹಾನಿ ಮಾಡುತ್ತಿರುತ್ತವೆ. ಇದೇ ದೇವರಾಯನ ಕಾಲದಲ್ಲಿ [೧೪೦೭] ಬೆಳೆ ಹಾನಿ ಮಾಡುತ್ತಿದ್ದ ಆನೆಯನ್ನು ಎದುರಿಸಿದ ವೀರನಿಗೆ ಸಂಬಂಧಿಸಿದ ಶಾಸನವೊಂದು ಕುಮದ್ವತಿಯ ಬಲದಂಡೆಯಲ್ಲಿದೆ.
ಸೂಡೂರಿನಲ್ಲಿನ ಚೀಲಗೊಂಡರಸನ ಜಮೀನಿಗೆ ಆನೆಯು ನುಗ್ಗಿ ಬೆಳೆ ನಾಶಪಡಿಸುತ್ತಿದ್ದ ವೇಳೆ ಅದನ್ನು ಓಡಿಸುವ ಪ್ರಯತ್ನದಲ್ಲಿ ತೊಡಗುವರು. ಆನೆಯು ಬೆನ್ನಟ್ಟಿ ಒಂದು ಚೀಲಗೊಂಡರಸನನ್ನು ಮುಗಿಸಿಯೇ ಬಿಟ್ಟಿತು ಎನ್ನುವಷ್ಟರಲ್ಲಿ ಬೊಮ್ಮಣ್ಣನೆಂಬುವನು ಆನೆಗೆ ಅಡ್ಡಬಂದು ಎದುರಿಸಿ ಚೀಲಗೊಂಡರಸನನ್ನು ಪ್ರಾಣಾಪಾಯದಿಂದ ರಕ್ಷಿಸುವನು. ಆದರೆ ಬೊಮ್ಮಣನು ಆನೆಯ ಧಾಳಿಗೆ ಸಿಕ್ಕು ಹತನಾಗುವನು. ಇದರ ಕಾಲ ಶಕ ವರುಷ ೧೩೨೯ ಅಂದರೆ ಕ್ರಿ.ಶ.೧೪೦೭, ಸರ್ವಜಿತು ಸಂವತ್ಸರದ ಕಾರ್ತೀಕ ಬಹುಳ ೧೧ ಆಗಿರುತ್ತದೆ.೩ ಪ್ರಾಣವ ಕಾಪಾಡಿದ ಮೃತ ಬೊಂಮ್ಮಣ್ಣನ ವಂಶಸ್ತರಿಗೆ ಚೀಲಗೊಂಡರಸನು ಉಂಬಳಿ ನೀಡುವನು.
ಮಲೆಯಶಂಕರ ಗುಡ್ಡದಿಂದ ಅಂಬಲಿಗೊಳದವರೆಗೆ ಹಾದುಹೋದ ಪರ್ವತ ಶ್ರೇಣಿಗಳು ೧೯೦೦ರ ಸುಮಾರಿನಲ್ಲಿ ಇದ್ದ ಜನವಸತಿಯು ಪ್ರಕೃತಿ ವಿಕೋಪ ಹಾಗು ಅನಾವೃಷ್ಟಿಯಿಂದ ಜನಸಂಖ್ಯೆ ನಾಶವಾಗಿ ಕಾಡು ಬೆಳೆದುಕೊಂಡಿತ್ತು. ಈ ಭಾಗದಲ್ಲಿ ಆನೆಗಳು ಓಡಾಡುವ ದಾರಿಯೂ ಆಗಿತ್ತು. ಇಂತಹದರಲ್ಲಿ ಸೂಡೂರು ಗ್ರಾಮವೂ ಒಂದು. ಮೇಲಿನಂತೆ ಸೂಡೂರಿನಲ್ಲಿ ವಿಭಿನ್ನ ಘಟನೆಗಳಿಗೆ ಸಂಬಂಧಿಸಿದಂತೆ ವಿಜಯನಗರದ ಒಂದನೇ ದೇವರಾಯನ ಕಾಲದ ಎರಡು ವೀರಗಲ್ಲುಗಳನ್ನು ಕಾಣುತ್ತೇವೆ. ಬೇಚರಾಕ್ ಗ್ರಾಮವು ಶರಾವತಿ ಮುಳುಗಡೆ ರೈತರ ಪುನರ್ವಸತಿಯಿಂದಾಗಿ ಸೂಡೂರು ಮತ್ತೆ ಜನವಸತಿಯನ್ನು ಕಂಡಿದೆ. ಸೂಡೂರು ಅಂದು ಆರಗ ಆಡಳಿತ ವ್ಯಾಪ್ತಿಗೆ ಒಳಪಟ್ಟಿತ್ತು.

ಆಧಾರಸೂಚಿ ಮತ್ತು ಟಿಪ್ಪಣಿಗಳು
೧.         ಎಪಿಗ್ರಾಫಿಯಾ ಕರ್ನಾಟಿಕ, ಸಂಪುಟ ೮, (ರೈಸ್ ಆವೃತ್ತಿ), ಭಾಗ-೨, ತೀರ್ಥಹಳ್ಳಿ ೧೨೨.
೨.         ಎಪಿಗ್ರಾಫಿಯಾ ಕರ್ನಾಟಿಕ, ಸಂಪುಟ ೮, (ರೈಸ್ ಆವೃತ್ತಿ), ಭಾಗ-೨, ತೀರ್ಥಹಳ್ಳಿ ೧೩೨.
೩.         ಎಂ.ಎ.ಆರ್. ೧೯೨೩, ತೀರ್ಥಹಳ್ಳಿ ೬೦, ಕಾಲ ೧೪೦೭, ಪುಟ ೭೨-೭೩.








Sunday, February 10, 2013

ಪ್ರಪಂಚದ ಅತಿಪುರಾತನ ಲಿಪಿ

ಎಚ್‌..ಶೇಷಗಿರಿರಾವ್‌

ಪ್ರಪಂಚದ ಅತ್ಯಂತ ಪ್ರಾಚೀನ ಲಿಪಿ ಆಗ್ನೇಯ ಯುರೋಪಿನಲ್ಲಿ !

ಪ್ರಾಚೀನ ನಾಗರೀಕತೆಗಳು ನದಿ ದಡದಲ್ಲಿ ತಲೆಎತ್ತಿರುವುದು ಎಲ್ಲರೂ ಬಲ್ಲ ಸಂಗತಿ. ಈಜಿಪ್ಟ,ಮೆಸಪಟೋಮಿಯಾ  ಹರಪ್ಪ ಮತ್ತು ಮೆಹಂಜದಾರೋ ಮತ್ತು  ಚೀನಾನಾಗರೀಕತೆಗಳು ನದೀ ತೀರದ ಪುರಾತನ ಮಾನವನ ಸಾಧನೆಯ ಪುರಾವೆಗಳನ್ನು ಸಾಕಷ್ಟು ಒದಗಿಸಿವೆ.ನಾಗರೀಕ ಸಮಾಜದ ಮೊದಲ ಸಾಧನೆಎಂದರೆ ಭಾಷೆಯಬಳಕೆ ನಂತರದ್ದು ಲಿಪಿ. ಅವಿಷ್ಕಾರ. ಉತ್ಖನನದಿಂದ   ಪೂರ್ಣ ಮಾಹಿತಿ ತಿಳಿದಿಲ್ಲವಾದರೂ ಸಾಕಷ್ಟು ಮಾಹಿತಿ ದೊರಕಿದೆ.ಅಲ್ಲಿಯೇ ಒಂದೆ ಸಮಯದಲ್ಲಿ ಆದಿಮ ಲಿಪಿಗಳ ಬಳಕೆ  ಮೊದಲಾದುದ್ದು..  ಅನುಕರಣೆ  ಅಥವ ಅನುಸರಣೆ ಮಾಡದೆ  ಸುಮಾರು ಕ್ರಿ. ಪೂ. ೩ನೆಯ ಸಹಸ್ರಮಾನದಿಂದ ೨ನೆಯ ಸಹಸ್ರಮಾನದ ಅವಧಿಯಲ್ಲಿ ಲಿಪಿಗಳ ಬಳಕೆ ದಾಖಲಾಗಿದೆ.
 ಇವಕ್ಕಿಂತಲೂ ಸಹಸ್ರಮಾನದಷ್ಟು ಪುರಾತನ ಸಂಸ್ಕೃತಿಯೊಂದು ಯುರೋಪಿನಲ್ಲಿದ್ದು ಕೆಲವು ದಶಕಗಳ ಹಿಂದಿನ ಡ್ಯೂನಬ್‌ ನದಿ  ದಡದ ಪ್ರದೇಶದ ಉತ್ಖನನದಿಂದ ಕಂಡುಬಂದಿದೆ. ಅಲ್ಲಿ ದೊರಕಿದ ಪುರಾತತ್ವ ವಸ್ತುಗಳ ಮೇಲೆ ಲಿಪಿ ಎನ್ನ ಬಹುದಾದ ಬರಹಗಳೂ ದೊರಕಿವೆ.ಆಗ್ನೇಯ ಯುರೋಪಿನಲ್ಲಿ ಡೆನ್ಯೂಬ್‌ ನದಿ ದಡದಲ್ಲಿ ನೂರಾರು ಮೈಲು ವ್ಯಾಪ್ತಿಯಲ್ಲಿ ದೊರೆತ ಪ್ರಾಚ್ಯ ಅವಶೇಷಗಳು ಹೊಸ ಚರ್ಚೆ ಹುಟ್ಟು ಹಾಕಿವೆ.ಈಪ್ರಾಚೀನ ಯುರೋಪು ಸಂಸ್ಕೃತಿಯನ್ನು ವಿಂಕಾ ಸಂಸ್ಕೃತಿ ಎನ್ನಲಾಗಿದೆ.ಅಲ್ಲಿ ಬರಹಗಳೇ ವಿಂಕಾ/ ಡೆನ್ಯೂಬ್‌ಬರಹಗಳು
ಮೂಲ
ಆಗ್ನೇಯ ಯುರೋಪಿನಲ್ಲಿ ನಡೆಸಿದ ಉತ್ಖನನದಲ್ಲಿ ದೊರೆತ ಪುರಾತತ್ವ ವಸ್ತುಗಳ ಮೇಲೆ ಬರಹಗಳು ಅದರಲ್ಲೂ ವಿಶೇಷವಾಗಿ ಬೆಲ್‌ಗ್ರೇಡ್‌  ಸಮೀಪದ ವಿಂಕಾದಲ್ಲಿ ದೊರಕಿದ ಪ್ರಾಚ್ಯಮಾನವ ನಿರ್ಮಿತ  ವಸ್ತುಗಳ ಮೇಲೆ ಅತಿಪ್ರಾಚೀನ ಸಂಕೇತಗಳು ಕಂಡು ಬಂದಿದೆ. ಅದಲ್ಲದೆ ಗ್ರೀಸ್‌, ಬಲ್ಗೇರಿಯಾ ,ರೊಮಾನಿಯಾ, ಪೂರ್ವ ಹಂಗರಿ,ಮೊಲ್ಡೊವಾ, ದಕ್ಷಿಣ ಉಕ್ರೇನ್‌  ಮತ್ತು ಹಿಂದಿನ ಯುಗೊಸ್ಲೋವಿಯಾಗಳ ಅನೇಕ ತಾಣಗಳಲ್ಲಿ ಅವುಗಳು ಲಭ್ಯವಾಗಿವೆ. ಆ ಪುರಾತತ್ವ ವಸ್ತುಗಳ ಕಾಲ ಸುಮಾರು ಕ್ರಿ.ಪೂ ೭ನೇ ಸಹಸ್ರ ಮಾನದಿಂದ ೬ ನೆಯ ಸಹಸ್ರ ಮಾನದ ವರೆಗ ಎಂದು ನಿರ್ಧರಿಸಲಾಗಿದೆ.  ಅಲ್ಲದೊರೆತ ಬಹುತೇಕ ವಸ್ತುಗಳ ಮೇಲಿನ ಅಲಂಕಾರಿಕ ಗುರುತುಗಳು 8,000 ದಿಂದ  6,500 ವರ್ಷದಷ್ಟು ಪುರಾತನವಾದವು ..
ಕೆಲವು ವಿದ್ವಾಂಸರ ಪ್ರಕಾರ  ಇಲ್ಲಿ ದೊರೆತ ವಸ್ತುಗಳ ಮೇಲಿನ ಬರಹಗಳೇ  ಜಗತ್ತಿನಲ್ಲಿ ದೊರೆತಿರುವ ಅತ್ಯಂತ ಪ್ರಾಚೀನ ಲಿಪಿಗಳುಅವು ಈಗ ಅತ್ಯಂತ ಹಳೆಯ ಲಿಪಿಗಳು ಎಂದು ನಿರ್ಧರಿತವಾಗಿರುವ ಪ್ರಾಚೀನ ಸುಮೇರಿಯನ್‌ ಮತ್ತು ಈಜಿಪ್ಷಿಯನ್‌ ಲಿಪಿಗಳಿಗಿಂತ ಸಾವಿರ ವರ್ಷಕ್ಕೂ ಹೆಚ್ಚು  ಪುರಾತನವಾದವು ಎನ್ನಬಹುದು.. ಈ ಎಲ್ಲ ವಸ್ತುಗಳೂ ಸಮಾಧಿಗಳಲ್ಲಿ ದೊರೆತಿವೆ. ಅವುಗಳ ಮೇಲಿನ ಬರಹಗಳು ಚಿಕ್ಕದಾಗಿವೆ.ಈ ವರೆಗೂ ಅವು ಯಾವ ಭಾಷೆಯಲ್ಲಿ ಬರೆದ ಲಿಪಿಗಳು ಎಂಬುದನ್ನು ತಿಳಿಯಲಾಗಿಲ್ಲ.ಇದರಿಂದ ಅವುಗಳನ್ನು ಅರ್ಥೈಸುವ ಸಂಭವ ಬಹಳ ಕಡಿಮೆ .
ಪ್ರಾಚೀನ ವಿಂಕ ಸಂಸ್ಕೃತಿಯ ಕಾಲದಿಂದ ಬಂದ ಸಂಕೇತಗಳು


ಇತ್ತೀಚಿನ ವರ್ಷಗಳಲ್ಲಿ ವಿಂಕಾ ಸಂಸ್ಕೃತಿ  ಕೊರೆದ ಲಿಪಿಗಳಂತಿರುವ ಸಂಕೇತಗಳಲ್ಲಿ (((( (ಈಗ ಅವುಗಳನ್ನು ಪುರಾತನ ಯುರೋಪಿಯನ್‌ ಲಿಪಿಗಳು ಎನ್ನಲಾಗಿದೆ) ಆಸಕ್ತಿ   ಹೆಚ್ಚಿದೆ. ಆ ಪ್ರಾಚ್ಯ ವಸ್ತುಗಳು ಯುಗೊಸ್ಲೋವಿಯಾ ಮತ್ತು ಪಶ್ಚಿಮರೊಮಾನಿಯಾಗಳಲ್ಲಿನ ಮಧ್ಯಕಾಲೀನ ಶಿಲಾಯುಗದ ವಿಂಕಾ –ಟೊರ‍್ಡೋಸ  ಸಂಸ್ಕೃತಿಯ ಅವಶೇಷಗಳು.  ಈ ಸಂಕೇತಗಳು ಪುರಾವೆಗಳು ೧೯ನೇ ಶತಮಾನದಲ್ಲಿ  ಟ್ರಾನ್ಸಲ್ವೇನೀಯದ ಟರ್ದೋಸ್‌ ತಾಣದಲ್ಲಿ ನಡೆಸಿದ  ಉತ್ಖನನದಲ್ಲಿಯೇ  ದೊರೆತರೂ, ಸಮೀಪದಲ್ಲಿಯ ಆರ್ಟರಿಯಾದಲ್ಲಿ ೧೯೬೪ ನ ಉತ್ಖನನದಲ್ಲಿ ೩ ಇಸ್ವಿಯಲ್ಲಿದೊರೆತ ಮಣ್ಣಿನ ಫಲಕಗಳು  ಆ ಪ್ರಾಚ್ಯ ವಸ್ತುಗಳ ಮೇಲಿನ ಸಂಕೇತಗಳಮೂಲ ಮತ್ತು ಕಾಲದ ಬಗ್ಗೆ ವಿವಾದದ ಅಲೆಯನ್ನೇಎಬ್ಬಿಸಿದವು.
ಕೆಲ ವಿದ್ವಾಂಸರು ಈ ಸಂಕೇತಗಳು ಪ್ರಾಂಭದ ಮೆಸಪೊಟೋಮಿಯಾ ಲಿಪಿಗಳಿಂದ ಪ್ರಭಾವಿತವಾಗಿವೆ (ಕ್ರಿ. ಪೂ 3000 ) ಎಂದುಕೊಂಡು ಯುರೋಪಿಯನ್‌ ಸ್ವತಂತ್ರ ಚಿತ್ರ ಲಿಪಿಯ ಬಳಕೆಯ ಸಾಧ್ಯತೆಯನ್ನು ತಳ್ಳಿ ಹಾಕಿರುವರು.ಅವರು ಇದರ ಮೂಲ ಮೆಸಪಟೋಮಿಯಾ ಎಂದೇ ವಾದಿಸುವರು.ಅವರು ಆಗ್ನೇಯ ಯುರೋಪಿನ ರೇಡಿಯೋ ಡೇಟಿಂಗ್‌ ಆಧಾರಿತ  ನವಶಿಲಾಯುಗದ ಘಟನಾ ಕಾಲುನುಕ್ರಮವನ್ನು ಮರೆತಿರುವರು
ಬೆಲ್‌ಗ್ರೇಡ್‌ ಸಮೀಪದ ಡೇನ್ಯುಬ್‌ ನದಿ ತಟದಲ್ಲಿನ ವಿಂಕಾ ಮತ್ತು ಅದಕ್ಕೆ ಸಂಬಂಧಿಸಿದ ಸುಮಾರು 50 ತಾಣಗಳಿಗೆ ವಿಂಕಾ ಸಂಸ್ಕೃತಿ ಎಂದೇ ಹೆಸರಿಸಲಾಯಿತು.ಇವುಗಳ ಕಾಲ ಮಾನವನ್ನುಟ್ರಾನ್ಸಿಲ್‌ವೇನಿಯಾದ ಟೊರೊಡೊಸನಲ್ಲಿ ದೊರೆತವಸ್ತುಗಳಿಂದಕಾರ್ಬನ್‌ಡೇಟಿಂಗ್‌ನಿಂದ ನಿಖರಗೊಳಿಸಲಾಗಿದೆ. 



.ವಿಂಕಾ ಸಂಕೇತಗಳನ್ನು ಆಗ್ನೇಯ ಯುರೋಪಿನ  ವಿಂಕಾ ಸಂಸ್ಕೃತಿಯ ಆದಿಮ ಬರಹ ಎಂದು ಪರಿಗಣಿಸಲಾಗಿದೆ.ಬಹುಶಃ ಅವು ಮಾಹಿತಿ ರವಾನೆ ಮಾಡಲುಬಳಸಲಾಗಿರಬಹುದು. ಆದರೆ ಭಾಷೆಯಾಗಿ ಅರ್ಥೈಸಲಾಗಿಲ್ಲ.. ಅವು ಈಗ ಗೊತ್ತಿರುವ ಆದಿಮ ಲಿಪಿವಿಕಾಸದ ಒಂದು ಸಹಸ್ರಮಾನ ಕ್ಕೂ ಅಧಿಕ ಕಾಲದ    ಮೊದಲೇಇದ್ದವು.


                                  
ವಿಂಕಾದಲ್ಲಿ ೨೬ ಅಡಿ ಆಳದಲ್ಲಿ ದೊರೆತಮಣ್ಣಿನ ಪಾತ್ರೆಯ ರೇಖಾಚಿತ್ರ
ರಾತತ್ವ ಶೋದಕರು  1875ರಲ್ಲಿ ರೊಮೇನಿಯಾದ ಟಾರ್ಟಆಸ್‌ನಲ್ಲಿ ಉತ್ಖನನ ನಡೆಸುವಾಗ , ಹಂಗೇರಿಯನ್‌ ಪುರಾತತ್ವ ಪರಿಣಿತನಾದ ಝೊಸಫಿಯಾ  ತೊರ್ಮಾ(Zsófia Torma 1840–1899) ನಿಗೆ ನೆಲದಡಿಯಲ್ಲಿ ಅದುವರೆಗೂ ಅಪರಿಚಿತವಾದ ಸಂಕೇತಗಳಿರುವ ವಸ್ತುಗಳು  ದೊರೆತವು  ಮಿಲೋಯಿ ವಾಸಿಕ್‌ ಬೆಲ್‌ಗ್ರೇಡ್‌(ಸರ್ಬಿಯಾದ ಬಳಿಯ ವಿಂಕಾದಲ್ಲಿ ಉತ್ಖನನ ನಡೆಸಿದಾಗ 1908  ರಲ್ಲಿ , ಅದೇ ತರಹದ ಅಪರಿಚಿತ ಲಿಪಿಗಳಿರುವ ವಸ್ತುಗಳು ಸಿಕ್ಕವು. ಅದು ಟರ್ಡಾದಿಂದ ೧೨೦ ಕಿ. ಮೀಟರ್‌ ದೂರದಲ್ಲಿತ್ತು. ಅದಾದ ಮೇಲೆ ಸುಮಾರು೧೫೦ ತಾಣಗಳಲ್ಲಿ ಪುರಾತತ್ವ ವಸ್ತುಗಳು ದೊರೆತಿವೆ.ಆದರೆ ವಿಂಕಾವು ಸೇರಿದಂತೆ ಯಾವುದೇ ತಾಣದಲ್ಲಿ ಉತ್ಖನನವನ್ನು ಪೂರ್ಣ ಪ್ರಮಾಣದಲ್ಲಿ ಜರುಗಿಸಿಲ್ಲ. ಈ ಎಲ್ಲವನ್ನೂ ವಿಂಕಾ ಸಂಸ್ಕೃತಿ ಎಂದು ಕರೆಯಲಾಗುವುದು. ಮತ್ತು ಅಲ್ಲಿನ ಲಿಪಿಯನ್ನುವಿಂಕಾ-ಟರ್ಡಾಷ್‌ ಲಿಪಿ ಎನ್ನುವರು..
ನಿಕೊಲಾಯ್ ವ್ಲಾಸ್ಸಾನ  ೧೯೬೧ ರಲ್ಲಿ ರುಮೇನಿಯಾದಲ್ಲಿ ಟಾರ್ಟರಿಯಾ ಮಣ್ಣಿನ ಫಲಕಗಳ ಶೋಧವು ದೊಡ್ಡ ಚರ್ಚೆಯನ್ನೆ ಹುಟ್ಟು ಹಾಕಿತು. ವ್ಲಾಸ್ಸಾ ಆ ಸಂಕೇತಗಳು ಚಿತ್ರ ಲಿಪಿ ಎಂದುನಂಬಿದ್ದ. ಅವುಗಳನ್ನು ನಂತರ ಕಾರ್ಬನ್‌ ಡೇಟಿಂಗ್‌ಗೆ ಒಳ ಪಡಿಸಿದಾಗ ಅವುಗಳ ಕಾಲ ಕ್ರಿ. ಪೂ. ೪೦೦೦ ವರ್ಷಗಳಿಗಿಂತಲೂ ಪುರಾತನ ಎಂದು ತಿಳಿಯಿತು. ಆತನು ಅಂದುಕೊಂಡಿದ್ದ ಕಾಲಕ್ಕಿಂತ ೧೩೦೦ ವರ್ಷ ಹಿಂದಿನದಾಗಿದ್ದವು.ಅಲ್ಲದೆ ಸುಮೇರಿಯನ್‌ ಮತ್ತು ಮಿನೋವನ್‌ರ ಲಿಪಿಒಗಳಿಗಿಂತಲೂ ೧೩೦೦ ವರ್ಷ ಪುರಾತನವಾಗಿದ್ದವು .
ಈವರೆಗೆ ೧೦೦೦ಕ್ಕೂ ಹೆಚ್ಚು ಅದೇರೀತಿಯ ತುಣುಕುಗಳು ಆಗ್ನೇಯ ಯುರೋಪಿನ  ಗ್ರೀಸ್,( ಡಿಸ್ಪಿಲಿಯೋ ಫಲಕ) , ಬಲ್ಗೇರಿಯಾ, ಹಿಂದಿನ ಯುಗೊಸ್ಲಾವಿಯಾ,ರೊಮೆನಿಯಾ,ಪೂರ್ವ ಹಂಗರಿ, ಮೋಲ್ಡೋವ ಮತ್ತು ದಕ್ಷಿಣ ಉಕ್ರೇನಿನಲ್ಲಿ ದೊರಕಿವೆ.. ಬಹುತೇಕ ಅವು ಮಡಕೆಗಳ ಮೇಲಿವೆ.ಸುಮಾರು 85% ನಷ್ಟಯ ಏಕ ಸಂಕೇತಗಳಾಗಿವೆ.. ಅವು ಅಮೂರ್ತವಾದ ವೈವಿದ್ಯಮಯ ಚಿತ್ರಲಿಪಿಗಳಾಗಿವೆ.ಕೆಲವುಪ್ರಾಣಿಗಳನ್ನೂ, ಬಾಚಣಿಕೆ, ಅಥವ ಬ್ರಷ್‌ ಸ್ವಸ್ತಿಕ, ಕ್ರಾಸ್‌ ಹೋಲುತ್ತವೆ, ಜೊತೆಗೆ ಇನ್ನೂ ಕೆಲವುಗುಂಪಾದ ಸಂಕೇತಗಳಿವೆ. ಅವುಗಳಿಗೆ ನಿರ್ಧಿಷ್ಟ ವಿನ್ಯಾಸ ಅಥವ ದಿಕ್ಕು ಇಲ್ಲ. ಅವುನಿರ್ಣಾಯಕಗಳಾಗಿರಬಹುದು.  ಸ್ವತಂತ್ರ ಸಂಕೇತಗಳು ಮಡಿಕೆಗಳ ಮೇಲಿವೆ. ಗುಂಪಾಗಿರುವವು ಸುರಳಿಗಳ ಮೇಲಿವೆ..
 M  ಗುರುತಿರುವ ಮಣ್ಣಿ ಪಾತ್ರೆಯ ಚೂರು.

                                              
ವಿಂಕಾಸಂಕೇತಗಳ ಪ್ರಾಮುಖ್ಯತೆ ಇರುವುದು, ಅವುಗಳಲ್ಲಿ ಬಹಳಷ್ಟು ಕ್ರಿ .ಪೂ4500 ಮತ್ತು 4000 ದಲ್ಲಿ ನಿರ್ಮಾಣವಾಗಿವೆ.ಟಾರ್ಟರಿಯ ಫಲಕವೊಂದು ಕ್ರಿಪೂ. 5300 ವರ್ಷಗಳಷ್ಟು ಹಳೆಯದು.ಅದರ ಅರ್ಥ ಯುರಕ್‌(  (ಆದುನಿಕ ಇರಾಕ್‌) ನಲ್ಲಿ ದೊರೆತ  ಜಗತ್ತಿನಲ್ಲಿದೊರೆತ ಅತ್ಯಂತ ಪ್ರಾಚೀನ ಕಾಲದ ಆದಿಕಾಲದ ಸುಮೇರಿಯನ್‌ ಚಿತ್ರ ಲಿಪಿಗಳಿಗಿಂತ ಒಂದು ಸಾವಿರ ವರ್ಷ   ಪ್ರಾಚೀನ . ವಿಶ್ಲೇಷಣೆಯಿಂದ  ಅವುಗಳಿಗೂ ಹತ್ತಿರದ ಪೂರ್ವದಲ್ಲಿನ ಲಿಪಿಗಳಿಗೂ ತುಸುವೂ ಹೋಲಿಕೆಇಲ್ಲ. ಅದರಿಂದ ಈ ಸಂಕೇತಗಳು ಮತ್ತು ಸುಮೇರಿಯನ್‌ ಲಿಪಿಗಳು ಸ್ವತಂತ್ರವಾಗಿಯೇ ಉಗಮವಾದವು ಎಂದು ನಿರ್ಧರಿಸಬಹುದು.ಆದರೆ ವಿಂಕಾ ಬರಹಕ್ಕೂ ನೂತನ ಶಿಲಾಯುಗದ ಇತರೆ ಲಿಪಿಗಳಿಗೂ ಸ್ವಲ್ಪ ಸಾಮ್ಯವಿರುವುದ ಕಂಡು ಬಂದಿದೆ.ಈಜಿಪ್ಟ್‌, ಕ್ರೀಟ್‌ ಮತ್ತು ಚೀನಾದಲ್ಲಿ ಕೂಡಾ ಲಿಪಿಗಳ ಸಾಮ್ಯತೆ ಕಂಡು ಬರುವುದು. ಬಹುಶಃ ಆದಿಮ ಲಿಪಿಯ ಬೇರೆ ಬೇರೆ ಸಮಾಜಗಳಲ್ಲಿ ಪಡೆದುಕೊಂಡ ವಿಭಿನ್ನವಾದ ವಿಕಾಸವೇ ಇದಕ್ಕೆ ಕಾರಣ ಎಂದು ವಿದ್ವಾಂಸರ ಅಭಿಪ್ರಾಯ . ಅತಿ ಹೆಚ್ಚಿನ ಸಂಖ್ಯೆಯ ಸಂಕೇತಗಳು ತಿಳಿದಿದ್ದರೂ, ಬಹುತೇಕ ಪುರಾತತ್ವ ವಸ್ತುಗಳು ಕೆಲವೇ ಸಂಕೇತಗಳನ್ನು ಹೊಂದಿವೆ.ಅವುಗಳಿಂದ ಪೂರ್ಣ ಪಾಠವನ್ನು ಓದಲಾಗುವುದಿಲ್ಲ. ಬಲ್ಗೇರಿಯಾದಲ್ಲಿ ದೊರೆತ ಲಿಪಿಗಳು ಓದುವ ಸಾಧ್ಯತೆ ಇರುವುದಾದರೂ ಅವುಗಳ ಕಾಲಮಾನ ನಿಖರವಾಗಿಲ್ಲ.. ಅದಲ್ಲದೇ ಅದರಲ್ಲಿ ಕೂಡಾ ಬರಿ ೫೦ ಸಂಕೇತಗಳಿವೆ.ಅವು ಯಾವ ಭಾಷೆಯವು ಎಂಬುದು ತಿಳಿದಿಲ್ಲ. ಅವು ಭಾಷೆಯೊಂದನ್ನು ಪ್ರತಿನಿಧಿಸುವವೇ ಎಂಬುದೂ ಖಚಿತವಿಲ್ಲ
ರೊಮೇನಿಯಾದ ಟಾರ್ಟರರಿಯಾ ಹತ್ತಿರ ನಡೆದ ಉತ್ಖನನದಲ್ಲಿ ದೊರೆತ
 ಕ್ರಿ. ಪೂ. ೫೩೦೦ನೇ ಕಾಲದ ಮಣ್ಣಿನ ತಾಯಿತ
dd 


ಸಂಕೇತಗಳ ಸ್ವರೂಪ ಮತ್ತು ಉದ್ದೇಶವು ಅಸ್ಪಷ್ಟ.. ಆದರೆ ಅವು ಲಿಪಿಪದ್ದತಿಯ ಭಾಗ ಎಂಬುದಂತೂ ಸತ್ಯ.. ಅವುಗಳನ್ನು ಅರ್ಥೈಸಲು ಹಲವು ಪ್ರಯತ್ನಗಳು ನಡೆದಿವೆ. ಆದರೆ ಅವುಗಳ ಅರ್ಥದ  ಬಗ್ಗೆ ಒಮ್ಮತ ಮೂಡಿಲ್ಲ.ಮೊದಲಲ್ಲಿ ಅವು ಮಾಲಿಕನ  ಆಸ್ತಿಯ  ಸರಳ ಸಂಕೇತವೆಂದು ಎಂದು ಪುರಾತತ್ವ ತಜ್ಞಪೀಟರ್‌ಬೆಹ್ಲ್ ಭಾವಿಸಿದ್ದರು ಆದರೆ ಈ ವಾದವು ಈಗ ತಿರಸ್ಕೃತವಾಗಿದೆ. ಕಾರಣ ಇದೇ ಸಂಕೇತಗಳು ವಿಂಕಾದ ಸಂಸ್ಕೃತಿಯ  ಇತರೆ ಪ್ರದೇಶಗಳಲ್ಲೂ ಪದೇ ಪದೇದೊರಕಿವೆ.ಅವುಗಳು ನೂರಾರು ಮೈಲು ಅಂತರದಲ್ಲಿವೆ. , ಅಲ್ಲದೆ ಅವುಗಳ ಕಾಲದಲ್ಲೂ ಅನೇಕ ವರ್ಷಗಳ ವ್ಯತ್ಯಾಸ ಹೊಂದಿವೆ. .ಈಗಿರುವ ವಿಚಾರದಂತೆ ಅವು ಕೃಷಿ ಆಧಾರಿತ ಸಮಾಜದ ಧಾರ್ಮಿಕ ಆಚರಣೆಯ ಸಂಕೇತವಾಗಿರಬಹುದು. ಈ ಸಂಕೇತಗಳು ನೂರಾರು ವರ್ಷವಾದರೂ ತುಸುವೂ ಬದಲಾಗದೇ ಒಂದೇ ರಿತಿಯಲ್ಲಿರುವುದರಿಂದ ಆಸಂಸ್ಕೃತಿಯ ಆಚರಣೆ ಇರುವ ತನಕ ಬದಲಾಗದೇ ಉಳಿದಿಬಹುದು . ಈ  ಸಂಕೇತಗಳ ಬಳಕೆ ಕಂಚಿನಯುಗ ಪ್ರಾರಂಭವಾದ ಕಂಡುಬಂದಿಲ್ಲ.. ಹೊಸ ತಂತ್ರಜ್ಞಾನವು  ಸಾಮಾಜಿಕ ವ್ಯವಸ್ಥೆಯ ನಂಬಿಕೆ ಮತ್ತು ಆಚರಣೆಯಲ್ಲಿ ಗಣನೀಯ ಬದಲಾಬಣೆಯನ್ನು ತಂದಿರುವುದನ್ನು ಗುರುತಿಸಬಹುದು
ಧಾರ್ಮಿಕ ಆಚರಣೆಯ ಸಿದ್ಧಾಂತದ ಪ್ರಕಾರ ಸಂಕೇತಗಳನ್ನು ಮೂಡಿಸಿದ ವಸ್ತುಗಳು ಬಹಳ ಕಾಲ ಬಳಸುವಂಥಹವಲ್ಲ..ಅವು ವ್ಯರ್ಥ ವಸ್ತುಗಳ ಜೊತೆ  ಪಾಳು ಮನೆಯಡಿಯ ದೊರಕಿವೆ.ಅದರಿಂದ ಅವು ಮನೆಯಲ್ಲಿನ ಆಚರಣೆಯ ಅಂಗವಾಗಿದ್ದವು ಎಂದು ಊಹಿಸಬಹುದು.  ಆ ವಸ್ತುಗಳು ವಿವಿಧ ಭಾವನೆಗಳಾದ ಆಸೆ, ನಿರ್ಧಾರ, ಬೇಡಿಕೆ ಇತ್ಯಾದಿಗಳನ್ನು ಪ್ರತಿನಿಧಿಸುತಿರಹುದು.ಆ ಕೆಲಸ ಮುಗಿದ ಮೇಲೆ  ಅವನ್ನು ನೆಲದಲ್ಲಿ ಹುಗಿಯುವ ಆಚರಣೆ ಇಂದಿಗೂ ಕೆಲವೆಡೆ ಇದೆ.( ಇದನ್ನು ಹರಕೆಯ ಪೂರೈಕೆ ಎನ್ನಬಹುದು)
ಅಲ್ಲಿ ಬ್ರಷ್ ಮತ್ತು ಹಣಿಗೆಯಾಕಾರದ ಸಂಕೇತಗಳು ಅಧಿಕವಾಗಿ ದೊರೆತಿವೆ. ಅವು ದೊರಕಿರುವ ಎಲ್ಲ ಸಂಕೇತಗಳ ಸಂಖ್ಯೆಯ  ಆರನೇಯ ಒಂದು ಭಾಗದಷ್ಟು ಇವೆ.ಅವು ಸಂಖ್ಯಾ ಸೂಚಕಗಳಾಗಿರಬಹುದು. ವಿದ್ವಾಂಸರ ಪ್ರಕಾರ  ದೊರೆತಿರುವ ಲಿಪಿಗಳ ಕಾಲುಭಾಗ ಮಡಕೆಯ ತಳ ಭಾಗದಲ್ಲಿರುವುದರಿಂದ ಅವು ಪವಿತ್ರ ಬರಹಗಳು ಅಲ್ಲ ಎಂಬ ಅಭಿಪ್ರಾಯವಿದೆ.. ವಿಂಕಾ ಸಂಸ್ಕೃತಿಯ ಕಾಲದಲ್ಲಿ ಅವರು ಇತರೆ ಸಂಸ್ಕೃತಿಯ ಜನರೊಡನೆ ವ್ಯಾಪಕ ವ್ಯಾಪಾರ ಸಂಬಂಧ ಹೊಂದಿದ್ದರು ( ಲಿಪಿಯುಕ್ತ ಮಡಕೆಗಳು ದೂರಪ್ರದೇಶದಲ್ಲಿ ದೊರೆತಿವೆ) ಆದ್ದರಿಂದ ಮಡಕೆಗಳ ಮೇಲಿನ ಬರಹವು ಮಡಕೆಯಲ್ಲಿರುವ ವಸ್ತುಗಳ ಸ್ವರೂಪ ಅಥವ ಸಂಖ್ಯೆಯ  ಸಂಕೇತಗಳಾಗಿರಬಹುದು.ಇತರೆ ಸಂಸ್ಕೃತಿಗಳಾದ  ಮಿನೋವನ್ನರು ಮತ್ತು ಸುಮೇರಿಯನ್ನರು ಲಿಪಿಗಳನ್ನು ಎಣಿಕೆಯ ಸಾಧನವಾಗ ಬಳಸಿರುವುದರಿಂದ ವಿಂಕಾ ಸಂಕೇತಗಳೂ ಅದೇ ಉದ್ದೇಶಕ್ಕೆ ಬಳಕೆಯಾಗಿರಬಹುದು.
ಇತರೆ ಸಂಕೇತಗಳು (  ಮಡಕೆಯ ತಳದಲ್ಲಿರುವವು)  ಅನನ್ಯವಾಗಿವೆ.. ಆ  ಸಂಕೇತಗಳು ಮಡಕೆಯಲ್ಲಿನ ವಸ್ತು, ಪ್ರದೇಶ/ತಲುಪಿಸಬೇಕಾದ ಸ್ಥಳ,, ಉತ್ಪಾದಕ / ಮಾಲಿಕನ ಮಾಹಿತಿ ಹೊಂದಿರಬಹುದು. 
ಮಾರಿಯ ಗಿಂಬುಟಸ್‌ (೧೯೨೪-೧೯೯೪) ಈ ಗುರುತಿಗಳು ಲಿಪಿಗಳೆಂದು ಹೇಳಿದ ಪ್ರಥಮ ೨೦ನೆಯ ಶತಮಾನದ ಪುರಾತತ್ವ ಕೋವಿದೆ. “ ಪ್ರಾಚೀನ ಯುರೋಪಿನ ಲಿಪಿ” ಎಂಬ ಪದವನ್ನು ಟಂಕಿಸಿದವಳು..ಮಧ್ಯ ಏಷಿಯಾದ ಕುರ‍್ಗಾನ್ ಸಂಸ್ಕೃತಿಯುಇಂಡೊ ಯುರೋಪಿಯನ್‌ ಆದಿ ಸಂಸ್ಕೃತಿಯ ಲಿಪಿ. ಅವಳು ತನ್ನ ಪುರಾತನ ಯುರೋಪಿನ ಮಾದರಿಯಲ್ಲಿವಿಂಕಾ ಗುರುತುಗಳನ್ನು ಅಳವಡಿಸಿಕೊಂಡವಳು. ಅವು ಪ್ರಾಚೀನ ಯುರೋಪಿನ ಭಾಷೆಯ  ಲಿಪಿ ಪದ್ದತಿಯಾಗಿರಬಹುದು ಅಥವ ಲಿಪಿಪೂರ್ವದ ಸಂಕೇತಗಳಾಗಿರ ಬಹುದು ಎಂಬ ಸಲಹೆ ಮಾಡಿದಳು. ಆದರೆ  ವಿಂಕಾ ಚಿತ್ರಲಿಪಿಗಳು ಆಗ್ನೇಯ ಹಂಗೆರಿ ದಕ್ಷಿಣ ರೊಮೆನಿಯಾ ಮತ್ತು ಪಶ್ಚಿಮ ಬಲ್ಗೇರಿಯಾಗಳನ್ನು ಹೊರತು ಪಡಿದಸಿ ಬೇರೆ ಕಡೆ ಕಂಡು ಬಂದಿಲ್ಲ.

ನ್ಯಾಷನ್‌ಮ್ಯೂಜಿಯಂ ಅಫ್ ಟ್ರಾನ್ಸವಾಲಿಯನ್‌ ಹಿಸ್ಟರಿಯ, ಪುರಾತತ್ವ ತಜ್ಞ  ನಿಕೊಲಾಯ ವ್ಲಾಸ್ಸಾ ನ ನೇತೃತ್ವದ ತಂಡ 1961  ರಲ್ಲಿ, ಮಾಡಿದ ಉತ್ಖನನದಲ್ಲಿ ಚಿತ್ರಗಳಿರುವ  ಮಣ್ಣಿನ ಫಲಕಗಳನ್ನು ಶೋಧಿಸಿದ. ಅವುಗಳನ್ನು ಸುಟ್ಟಿರಲಿಲ್ಲ.. ಅದರ ಜೊತೆ ಚಿಪ್ಪಿನ ಬಳೆ, ೨೬ ಮಣ್ಣಿನ ಮತ್ತು ಕಲ್ಲಿ  ಆಕೃತಿಗಳು, ವಯಸ್ಕ ಗಂಡಸಿನ ಸುಟ್ಟ , ಮುರಿದ ಮೂಳೆಗಳೂ ದೊರೆತವು. ಎರಡು ಫಲಕಗಳು ಆಯತಾಕಾರದಲ್ಲಿವೆ. ಮತ್ತು ಮೂರನೆಯದು ಗುಂಡಗಿದೆ.. ಅವು ಚಿಕ್ಕವು ದುಂಡಗಿರುವುದ ೬ ಸೆ,ಮೀ ವ್ಯಾಸವನ್ನು ಹೊಂದಿದೆ. ಅವುಗಳ ನಡುವೆ ರಂದ್ರವನ್ನು ಮಾಡಲಾಗಿದೆ. ಮೂರರ ಮೇಲೂ ಒಂದು ಭಾಗದಲ್ಲಿ ಸಂಕೇತಗಳನ್ನು ಬರೆಯಲಾಗಿದೆ. ರಂದ್ರವಿರದ ಆಯಾತಾಕಾರದ ಫಲಕದಲ್ಲಿ ಕೊಂಬಿರುವ ಪ್ರಾಣಿಯ ಚಿತ್ರವಿದೆ.ಮತ್ತು ಅಸ್ಪಷ್ಟ ಚಿತ್ರಣ ವಿದೆ..ಉಳಿದವುಗಳ ಮೇಲೆ ಅಮೂರ್ತವಾದಸಂಕೇತಗಳಿವೆ.ಈ ರೀತಿಸಮಾಧಿ ಮಾಡಿದ ಉದ್ದೇಶ ತಿಳಿಯದು. ಆದರೆ ಆ ದೇಹವು ಅರಸ  ಅಥವ ಅರ್ಚಕನಾಗಿರದಿದ್ದರೂ  ಗೌರವಾನ್ವಿತನೊಬ್ಬನ ದೇಹ ವಾಗಿರಬಹುದ ಎಂದು ಊಹಿಸಲಾಗಿದೆ.
 ಆ ಸಂಕೇತಗಳ ಅರ್ಥ  ಈ ವರೆಗೆ ತಿಳಿದಿಲ್ಲ. ಅವುಗಳ ಸ್ವರೂಪವೂ ವಿವಾದಕ್ಕೆ ಒಳಗಾಗಿದೆ. ವಸ್ತುಗಳ ಮೇಲೆ ಬರೆದ ಈ ಸಂಕೇತಗಳು ಲಿಪಿಗಳು ಎಂದು ಗುರುತಿಸಿದ ವಿದ್ವಾಂಸರು ತಮ್ಮ ತೀರ್ಮಾನ ತೆಗೆದುಕೊಳ್ಳುವಲ್ಲಿ ಪ್ರಪಂಚಾದ್ಯಂತ ಒಪ್ಪಿತವಾಗಿರುವ ವಿಧಾನಗಳನ್ನು ಅನುಸರಿಸಿಲ್ಲ. ಮೊದಲನೆಯದಾಗಿ ಇದೇ ರೀತಿಯ ಸಂಕೇತಗಳು ಡೆನ್ಯಬ್‌ನದಿ ತೀರದ ಇತರೆ ನಾಗರೀಕತೆಯ ಪ್ರದೇಶದಲ್ಲಿ ಕೂಡಾ ದೊರಕಿವೆ. ಅದರಿಂದ ನಿಗದಿತ ಆಕೃತಿಯ  ಈ ಪ್ರಾಚ್ಯ ವಸ್ತುಗಳ ಪಟ್ಟಿಯೇಇದ್ದು ಅವುಗಳನ್ನು ಲಿಪಿಕಾರರು  ಬಳಸಿದಂತೆ ಕಾಣುತ್ತದೆ. ಎರಡನೆಯದಾಗಿ ಸಂಕೇತಗಳು ಅಧಿಕ ಸಂಖ್ಯೆಯಲ್ಲಿ ಪ್ರಮಾಣೀಕೃತ  ಮತ್ತು ಸರಳರೇಖಾಕೃತಿಯು ಪುರಾತನ ಲಿಪಿ ಪದ್ದತಿಗಳನ್ನು ಹೋಲುತ್ತವೆ..ಮೂರನೆಯದಾಗಿ ಪ್ರತಿ ವಸ್ತುವಿನ ಮೇಲಿರುವ ಸಂಕೇತ ನೀಡುವ ಮಾಹಿತಿಯು  ನಿರ್ಧಿಷ್ಟವಾಗಿದ್ದು  ನಿಗದಿತ ಅರ್ಥ ಕೊಡುವುದು
 ಲಿಪಿಗಳನ್ನು ಉದ್ದ ಸಾಲಿನಲ್ಲಿ, ಅಡ್ಡಸಾಲಿನಲ್ಲಿ ಅಥವ ವೃತ್ತಾಕಾರವಾಗಿ  ರಚಿಸಲಾಗಿದೆ.ಅದು ಲಿಪಿಯೇ ಆಗಿದ್ದಲ್ಲಿ ಯಾವ ರೀತಿಯ ಪದ್ದತಿಯನ್ನು ಪ್ರತಿನಿಧಿಸಿದೆ ಎನ್ನುವುದು  ತಿಳಿದಿಲ್ಲ. ಆದ್ದರಿಂದ ಸಂಕೇತಗಳು ಅತ್ಯಂತ ಪುರಾತನವಾದರೂ ಅವುಗಳು ಲಿಪಿ ಎಂಬುದಕ್ಕೆ ನಿಖರ ಪುರಾವೆಯ ಬೇಕಿದೆ.

ಆಧಾರ:- ಅಂತರ್‌ಜಾಲತಾಣಗಳು ಮತ್ತು ಷಾನ್‌ಎಂ. ಎಂ.  ಅವರ  ಲೇಖನ
..




Friday, February 8, 2013

ಕೈಗೋನ ಹಳ್ಳಿ ವೀರಗಲ್ಲುಶಾಸನ


ಕೃಷ್ಣರಾಜಪೇಟೆ ತಾಲ್ಲೂಕಿನ ಕೈಗೋನಹಳ್ಳಿ ಗ್ರಾಮದ ಅಪ್ರಕಟಿತ ವೀರಗಲ್ಲು ಶಾಸನ
ಡಾ. ಆರ್. ರಂಗಸ್ವಾಮಿ
ಮುಖ್ಯಸ್ಥರು, ಇತಿಹಾಸ ವಿಭಾಗ,
ಸರ್ಕಾರಿ ಪ್ರಥಮ ದರ್ಜೆ ಕಾಲೇಜು,
ಶ್ರೀರಂಗಪಟ್ಟಣ-೫೭೧೪೩೮.


ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಕೈಗೋನಹಳ್ಳಿ ಗ್ರಾಮ ಕೆ.ಆರ್. ಪೇಟೆಯಿಂದ ಉತ್ತರಕ್ಕೆ ೬ ಕಿ.ಮೀ. ಅಂತರದಲ್ಲಿದೆ. ಈ ಗ್ರಾಮದಲ್ಲಿ ಹೊಯ್ಸಳರ ಕಾಲದ ಈಶ್ವರ ದೇಗುಲವಿದೆ. ಈ ದೇಗುಲದ ಪರಿಸರದಲ್ಲಿ ಕೃಷ್ಣರಾಜಪೇಟೆಯ ಕಲ್ಪತರು ಕಾಲೇಜಿನ ಎನ್.ಎಸ್.ಎಸ್. ವಿದ್ಯಾರ್ಥಿಗಳು ವಿಶೇಷ ಶಿಬಿರ ಕೈಗೊಂಡು, ದೇಗುಲವನ್ನು ಸ್ವಚ್ಚಗೊಳಿಸುತ್ತಿದ್ದ ಸಂದರ್ಭದಲ್ಲಿ ಪ್ರಸ್ತುತ ಶಾಸನ ಬೆಳಕಿಗೆ ಬಂದಿದೆ೧. ಈ ಗ್ರಾಮದಿಂದ ಈಗಾಗಲೇ ಎರಡು ಶಾಸನಗಳು ಎಪಿಗ್ರಾಫಿಯ ಕರ್ನಾಟಕ (ಪರಿಷ್ಕೃತ) ಸಂಪುಟ ೬ರಲ್ಲಿ ಪ್ರಕಟವಾಗಿವೆ೨. ಆ ಸಂಗ್ರಹಕ್ಕೆ ಈ ಶಾಸನ ಹೊಸದಾಗಿ ಸೇರ್ಪಡೆಯಾಗಿದೆ. ಕಪ್ಪುಶಿಲೆಯಿಂದ ಕಂಡರಿಸಲ್ಪಟ್ಟ ಈ ಶಾಸನದ ಶಿಲ್ಪದ ಎರಡು ಅಡ್ಡ ಪಟ್ಟಿಯಲ್ಲಿ ೭ ಸಾಲುಗಳಿರುವ ಶಾಸನದ ಪಾಠವಿದೆ. ಈ ಶಾಸನ ೧೬೦ ಸೆಂ.ಮೀ. ಎತ್ತರ ಮತ್ತು ೮೦ ಸೆ.ಮೀ. ಅಗಲವಾಗಿದೆ. ಈ ತಾಲ್ಲೂಕಿನಲ್ಲಿ ಈವರೆಗೆ ವರದಿಯಾಗಿರುವ ಶಾಸನಗಳಲ್ಲಿ ಕೈಗೋನಹಳ್ಳಿಯ ಅಪ್ರಕಟಿತ ಶಾಸನ ೧೨೯ನೆಯದು.
ವೀರಗಲ್ಲು ಶಿಲ್ಪದ ವಿವರಗಳು : ಈ ವೀರಗಲ್ಲಿನಲ್ಲಿ ನಾಲು ಶಿಲ್ಪ ಪಟ್ಟಿಕೆಗಳಿವೆ.
ಮೊದಲನೆಯ ಪಟ್ಟಿಕೆಯಲ್ಲಿ ವೀರನು ತನ್ನ ಎಡಗಾಲನ್ನು ಮುಂದಕ್ಕಿಟ್ಟು, ವೈರಿಯ ವಿರುದ್ಧ ಹೋರಾಡುತ್ತಿರುವನು. ವೀರನ ಹಿಂಭಾಗದಲ್ಲಿ ಇಬ್ಬರು ಸೈನಿಕರು ಹಾಗೂ ಎಂಟು ಹಸುಗಳ ಚಿತ್ರಗಳಿವೆ. ತಳಭಾಗದಲ್ಲಿ ಸೈನಿಕನೊಬ್ಬನು ಸತ್ತುಬಿದ್ದಿರುವ ದೃಶ್ಯವಿದೆ. ವೈರಿಯು, ಬಲಗಾಲನ್ನು ಮುಂದಿಟ್ಟು ವೀರನ ವಿರುದ್ಧ ಹೋರಾಡುತ್ತಿರುವನು. ಇವನ ಹಿಂಭಾಗದಲ್ಲಿ ಇಬ್ಬರು ಸೈನಿಕರು ಗುರಾಣಿಯನ್ನು ಹಿಡಿದುಕೊಂಡು ನಿಂತಿದ್ದಾರೆ.
ಎರಡನೆಯ ಪಟ್ಟಿಕೆಯಲ್ಲಿ ಯುದ್ಧದಲ್ಲಿ ಮಡಿದ ವೀರನ್ನು ಅಪ್ಸರೆಯರು ದೇವಲೋಕಕ್ಕೆ ಕೊಂಡೊಯ್ಯುತ್ತಿರುವ ದೃಶ್ಯವಿದೆ. ಅಪ್ಸರೆಯರು ಕೈಗಳಲ್ಲಿ ಹೂಮಾಲೆಯನ್ನು ಹಿಡಿದುಕೊಂಡಿದ್ದಾರೆ. ವೀರನು ವಿಮಾನದಲ್ಲಿ ಪದ್ಮಾಸನದಲ್ಲಿ ಕುಳಿತಿದ್ದಾನೆ.
ಮೂರನೆಯ ಪಟ್ಟಿಕೆಯ ಮಧ್ಯದಲ್ಲಿರುವ ಶಿವಲಿಂಗವನ್ನು ಇಬ್ಬರು ಯತಿಗಳು ಪೂಜಿಸುತ್ತಿರುವ ದೃಶ್ಯವಿದೆ. ಬಲಪಾರ್ಶ್ವದಲ್ಲಿ ವೀರನು ಕೈಮುಗಿದು ಕುಳಿತಿರುವನು. ಎಡಪಾರ್ಶ್ವದಲ್ಲಿ ಕುಳಿತ ನಂದಿ ಶಿಲ್ಪವಿದೆ.
ನಾಲ್ಕನೆಯ ಪಟ್ಟಿಕೆಯಲ್ಲಿ ಬ್ರಹ್ಮ, ಮಹೇಶ್ವರ ಮತ್ತು ವಿಷ್ಣು ಶಿಲ್ಪಗಳಿವೆ. ಎಡ ಮತ್ತು ಬಲ ಪಾರ್ಶ್ವದಲ್ಲಿ ಭಕ್ತರಿಬ್ಬರು ಕೈಮುಗಿದು ಕುಳಿತಿದ್ದಾರೆ. ಶಿಲ್ಪದ ಮೇಲ್ಭಾಗದಲ್ಲಿ ಸಾಮಾನ್ಯವಾದ ಸೂರ್ಯ ಮತ್ತು ಚಂದ್ರರ ಸಂಕೇತಗಳಿವೆ.
ಶಾಸನದ ಸಾರಾಂಶ : ವೀರಗಲ್ಲಿನ ಎರಡು ಅಡ್ಡಪಟ್ಟಿಯಲ್ಲಿ ಕನ್ನಡ ಭಾಷೆ ಮತ್ತು ೧೨ನೆಯ ಶತಮಾನದ ಕನ್ನಡ ಅಕ್ಷರಗಳಿವೆ. ಪ್ರಸ್ತುತ ಶಾಸನದಲ್ಲಿ ಹೊಯ್ಸಳ ಚಕ್ರವರ್ತಿ ವೀರನರಸಿಂಹದೇವನ ಹೆಸರು ಉಲ್ಲೇಖಿತವಾಗಿದೆ. ಇದರಲ್ಲಿ ತೇದಿಯ ಉಲ್ಲೇಖವಿಲ್ಲ. ಛಾಯಾಚಿತ್ರ ಮತ್ತು ಪಡಿಯಚ್ಚು ಸಹಾಯದಿಂದ ಶಾಸನವನ್ನು ಓದಲಾಗಿದೆ. ಪ್ರಸ್ತುತ ಶಾಸನ ಮತ್ತು ಶಿಲ್ಪದ ಮಹತ್ವವನ್ನು ಪರಿಚಯಿಸುವ ಪ್ರಯತ್ನ ನಮ್ಮದಾಗಿದೆ. ನಮಗೆ ತಿಳಿದ ಮಟ್ಟಿಗೆ ಶಾಸನದ ಸಾರಾಂಶ ಅಥವಾ ಪಾಠ ಈವರೆಗೆ ಪ್ರಕಟವಾಗಿಲ್ಲ.
ಹೊಯ್ಸಳ ಮನೆತನದ ವೀರನರಸಿಂಹದೇವನ ಆಳ್ವಿಕೆಯಲ್ಲಿ ವೀರನೊಬ್ಬನು ತುರುಗೋಳ್ ಯುದ್ಧದ ಸಂದರ್ಭದಲ್ಲಿ ವೀರ ಮರಣವನ್ನಪ್ಪಿದ ಉಲ್ಲೇಖವಿದೆ. ಐದು, ಆರು ಮತ್ತು ಏಳನೆಯ ಸಾಲಿನ ಅಕ್ಷರಗಳು ಮಾಸಿ ಹೋಗಿರುವುದರಿಂದ ವಿವರಗಳು ಅಸ್ಪಷ್ಟವಾಗಿದೆ. ಈ ವೀರಗಲ್ಲು ಶಾಸನಶಿಲ್ಪ ನಾಲ್ಕು ಪಟ್ಟಿಕೆಗಳಿಂದ ಕೂಡಿದೆ. ನಾಲ್ಕನೆಯ ಪಟ್ಟಿಕೆಯಲ್ಲಿ ಬ್ರಹ್ಮ, ಮಹೇಶ್ವರ ಮತ್ತು ವಿಷ್ಣು ಶಿಲ್ಪಗಳಿರುವುದು ವೈಶಿಷ್ಟ್ಯ. ಧರ್ಮಸಮನ್ವಯದ ತತ್ವವನ್ನು ಶಿಲ್ಪದಲ್ಲಿ ಸಾಂಕೇತಿಕವಾಗಿ ಬಿಡಿಸಲಾಗಿದೆ.
ಶಾಸನದ ಪಾಠ
೧        ಸ್ವಸ್ತಿ ಸಮಸ್ತಭುವನಾಶ್ರಯ[ಶ್ರೀ] ಪ್ರಿಥ್ವೀವಲ್ಲಭಂ ಮಹಾರಾಜಾಧಿರಾಜ ಪರಮೇಶ್ವರಂ ದ್ವಾರಾವತೀ
೨        ಪುರವರಾಧೀಶ್ವರಂ ಯಾದವ ಕುಲಾಂಬರದ್ಯಮಣಿ ಸಮ್ಯಕ್ ಚೂಡಾಮಣಿ ಮಲೆರಾಜ
೩        ರಾಜಮಲಪರೊಳುಗುಂಡ ಕದನ ಪ್ರಚಂಡನಸಹಾಯಸೂರ ಸನಿವಾರಸಿದ್ದಿ ಗಿರಿದುರ್ಗಮ
೪        ಲ್ಲ ಚಲದಂಕರಾಮನೇಕಾಂಗವೀರ ನಿಸ್ಸಂಕಪ್ರತಾಪ ಚಕ್ರವರ್ತಿ ಹೊಯ್ಸಳ ಶ್ರೀ ವೀರನರಸಿಂಹ ದೇವರು ಪಿಥ್ವೀ
೫        . . . . ದಲಿ ಕಹಿಗೊಂಡನ ಹಳಿಯ ತುಱುವನು [ಜಳೂರ ? ಮನು[ಗೊಂಡ] ಮಾ[ಳಾ ?] . . . . . .
೬        ಕಾಮಯ ಸುರಲೋಕ . . . . . . . . . . . . .
೭        . . . . . . . . . . . . . . . . ಶ್ರೀ ಶ್ರೀ


[ಕೃತಜ್ಞತೆಗಳು : ಸಂಪಾದಕರು, ಮಂಡ್ಯ ಜಿಲ್ಲೆ ಗ್ಯಾಸೆಟಿಯರ್ ಇವರಿಗೆ. ಲಿಪಿ ತಜ್ಞರಾದ ಡಾ. ಎಸ್.ವಿ. ಪಾಡಿಗಾರ್ ಮತ್ತು ಡಾ. ಡಿ.ಎಂ. ನಾಗರಾಜುರವರಿಗೆ ಹಾಗೂ ಕಲ್ಪತರು ಕಾಲೇಜಿನ ವ್ಯವಸ್ಥಾಪಕರನ್ನು ಮತ್ತು ಕೈಗೋನಹಳ್ಳಿ ಗ್ರಾಮದ ಮುಖ್ಯಸ್ಥರನ್ನು ನೆನೆಯುತ್ತೇನೆ.]