Sunday, November 18, 2012

ಗುಬ್ಬಿ ತಾಲ್ಲೂಕು ಬಿಕ್ಕೆಗುಡ್ಡದ ಅಪ್ರಕಟಿತ ಕ್ರಯಪತ್ರ ಶಾಸನ

                                                                          
                                                                        







                                                              
                                                                                                     ಡಾ || ಪಿ.ವಿ.ಕೃಷ್ಣಮೂರ್ತಿ

                                                                       # ೩೭, ಶ್ರೀಕೃಷ್ಣ ಕೃಪ, ೩ ನೆಯ ಅಡ್ಡರಸ್ತೆ, 
                                                                                                                             ಸುಬ್ಬಣ್ಣ ಲೇಔಟ್, ಹರಿನಗರಕ್ರಾಸ್, 
                                                                                                                             ಬೆಂಗಳೂರು-೫೬೦೦೬೨


ತುಮಕೂರು ಜಿಲ್ಲೆ, ಗುಬ್ಬಿ ತಾಲ್ಲೂಕು, ಬಿಕ್ಕೆಗುಡ್ಡ ಗ್ರಾಮದಲ್ಲಿ ದೊರೆತ ಈ ಶಾಸನವು ಈಗ ತುಮಕೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ ಸಂರಕ್ಷಿತವಾಗಿದೆ. ಈ ಶಾಸನವು ನಮ್ಮ ಗಮನಕ್ಕೆ ಬಂದಂತೆ ಇದುವರೆಗೂ ಅಪ್ರಕಟಿತವಾಗಿದೆ. ಇದೊಂದು  ಕ್ರಯಪತ್ರ ಶಾಸನವಾಗಿದ್ದು ಕೋನಾಕಾರದ ಕಂಬದಂಥ ನಿಲುಗಲ್ಲಿನ  ಕೂಸಿನಮೇಲೆ ಕೆತ್ತಲಾಗಿದೆ. ಈ ಶಾಸನದ ಶಿಲೆಯು ಸುಮಾರು ೧೦/೩೫ ಸೆಂ.ಮೀ. ಅಗಲ, ೧೪೦ ಸೆಂ.ಮೀ. ಎತ್ತರ ಹಾಗೂ ಸುಮಾರು ೧೦/೧೮ ಸೆಂ.ಮೀ. ದಪ್ಪನೆಯ ಕಲ್ಲಿನದಾಗಿದ್ದು ಶಾಸನದ ಅಕ್ಷರಗಳನ್ನು ಮುಂಭಾಗ ಮತ್ತು ಶಾಸನದ ಬಲಬದಿಯಲ್ಲಿ ಕೊರೆಯಲಾಗಿದೆ. ಹತ್ತೊಂಬತ್ತನೆಯ ಶತಮಾನದ ಕನ್ನಡ ಲಿಪಿ ಮತ್ತು ಭಾಷೆಯಲ್ಲಿರುವ ಈ ಶಾಸನದ ಅಕ್ಷರಗಳ ಗಾತ್ರ ಸರಾಸರಿ ೫/೩.೫ ಸೆಂ.ಮೀ. ಪ್ರಮಾಣದಲ್ಲಿದ್ದು ಸಾಕಷ್ಟು ಆಳವಾಗಿ ಕೊರೆಯಲಾಗಿದೆ. ಈ ಶಾಸನದ ಭಾಷಾ ಪ್ರಯೋಗದಲ್ಲಿ ಸಮಕಾಲೀನವಾಗಿ ಪ್ರಚಲಿತವಿದ್ದ ರೀತಿಯನ್ನು ಅಂದರೆ ಪದ ಮಧ್ಯದಲ್ಲಿ ಸ್ವರಗಳ ಬಳಕೆ  ಪದಾದಿಯಲ್ಲಿ ‘ಈ’, ‘ಉ’ ಸ್ವರಗಳ ಬದಲಾಗಿ ವ್ಯಂಜನ ‘ಯೀ’ ‘ವು’ ಗಳ ಪ್ರಯೋಗ, ಇಂತಹ  ಪ್ರಯೋಗಗಳು ಸಮಕಾಲೀನ ಹಸ್ತಪ್ರತಿ, ಕೈಫಿಯತ್ತು ಇತ್ಯಾದಿ ಬರಹಗಳಲ್ಲಿ ವಿಶೇಷವಾಗಿ ಕಂಡುಬರುವುದು ಸರಿಯಷ್ಟೆ. ಉದಾ: ತಾಉ (ತಾವು), ನಿಲಿಸಿದೆಉ (ನಿಲ್ಲಿಸಿದೆವು), ಗಉಡ (ಗೌಡ), ಕೆಂಪೈಯ (ಕೆಂಪಯ್ಯ), ಯಿಂತಿ (ಇಂತಿ), ಯಿವರ (ಇವರ) ಇತ್ಯಾದಿ.
ಈ ಶಾಸನದಲ್ಲಿ ವಿಶ್ವಾವಸು ಸಂವತ್ಸರ ಚೈತ್ರ ಶುದ್ಧ ಪಂಚಮಿ ಎಂದು ಮಾತ್ರ ಕಾಲ ಸೂಚಿತವಾಗಿದೆ. ಭಾಷೆ ಮತ್ತು ಲಿಪಿ ೧೯ ನೆಯ ಶತಮಾನದ್ದಾಗಿದೆ. ಈ ಆಧಾರದಿಂದ ಶಾಸನೋಕ್ತ ಕಾಲವು ೧೨-೪-೧೮೪೫, ಶುಕ್ರವಾರಕ್ಕೆ ಸರಿಹೊಂದುತ್ತದೆ.
ಇದು ಶ್ರೀಮನ್ ಮಹಾನಾಯಕನ iಕ್ಕಳು ಬಡ ತಿಮ್ಮಯ್ಯನು ಹೆಂಜೆರೀ ಲೆಕ್ಕಯ್ಯನ ಮಗ ಹೆಂಜೆರೀ ಲಕ್ಕಯ್ಯನಿಗೆ ಕೊಟ್ಟ ಕ್ರಯಪತ್ರವಾಗಿದೆ. ಇದರಲ್ಲಿ ಮಲ್ಲಪ್ಪನಹಳ್ಳಿಯಲ್ಲಿರುವ ಹೊಲ, ಗದ್ದೆ, ಹೊರೆ ಹುಲ್ಲು, ಬೀಜ, ಎತ್ತು, ಸುವರ್ಣಾದಾಯ ಎಲ್ಲವನ್ನೂ ಕ್ರಯವಾಗಿ ನಿರಯಸವಾಗಿ ನೀಡಿದ ವಿವರವಿದೆ. ಈ ಸಂದರ್ಭದಲ್ಲಿ ಮಲ್ಲಪ್ಪನಹಳ್ಳಿಯ ಚಿಣ್ಣಪ್ಪಗೌಡನ ಮಗ ನಿಂಗೇಗೌಡ, ಸುರಗಿಹಳ್ಳಿಯ ಮಾಳೇಗೌಡನ ಮಗ ದೊಡ್ಡಕೆಂಪಯ್ಯ, ತೆನಹಳ್ಳಿಯ ಸಿಂಗಯ್ಯ - ಇವುರುಗಳು ಸಾಕ್ಷಿಯಾಗಿರುತ್ತಾರೆ.
ಈ ಕ್ರಯಪತ್ರ ಶಾಸನವನ್ನು ಕೊಟ್ಟಿರುವವರು  ಮಹಾನಾಯಕನ ಮಕ್ಕಳೆಂದು ಉಲ್ಲೇಖಗೊಂಡಿರುವುದು ಗಮನಾರ್ಹ ಅಂಶ. ಮಹಾನಾಯಕ, ನಾಯಕಾಚಾರ್ಯ, ಎಂಬುದು ಸಾಮಾನ್ಯವಾಗಿ ವಿಜಯನಗರ ಅರಸರ ಕಾಲದ ನಾಯಕ ಪಾಳೆಯಗಾರ ವಂಶೀಯರಿಗಿದ್ದ ಬಿರುದಾಗಿತ್ತು. ಹಾಗಾಗಿ ಪ್ರಸ್ತುತ ಕ್ರಯಪತ್ರ ಶಾಸನವನ್ನು ಕೊಟ್ಟವರು ನಾಯಕವಂಶಕ್ಕೆ ಸೇರಿದ ಬಡತಿಮ್ಮಯ್ಯ. ಕೊಂಡುಕೊಂಡವರು ಅಥವಾ ಪಡೆದವರು ಹೆಂಜೇರು (ಇಂದಿನ ಆಂಧ್ರದ ಮಡಕಶಿರಾ ತಾಲ್ಲೂಕಿನ ಹೇಮಾವತಿ) ಸ್ಥಳದ ಲೆಕ್ಕಯ್ಯನ ಮಗ ಲಕ್ಕಯ್ಯ. ಕ್ರಯಕ್ಕೆ ಕೊಟ್ಟಿರುವ ಪ್ರದೇಶ ಮಲ್ಲಪ್ಪನಹಳ್ಳಿಯ ಹೊಲ, ಗದ್ದೆ, ಇತ್ಯಾದಿ. ಅವಾದರೂ ಮಹಾನಾಯಕ ಬಡತಿಮ್ಮಯ್ಯನ ಮಕ್ಕಳ ‘ಅಶೀಕೀ’ಗೆ ಸಂದಂತಹದ್ದು. ಇಲ್ಲಿ ಪ್ರಯೋಗವಾಗಿರುವ ‘ಅಶೀಕೀ ಎಂಬುದು ಪ್ರಾಯಶಃ ‘ಅಸಿಕ’ ಎಂಬುದರ ಅಪಭ್ರಂಶ ರೂಪವೆಂದು ತೋರುತ್ತದೆ. ‘ಅಸಿಕ’ವೆಂದರೆ ಸಣ್ಣ ಕತ್ತಿ, ಕಠಾರಿ ಎಂಬ ಅರ್ಥಗಳಿವೆ. ಬಹುಶಃ ಬಡತಿಮ್ಮಯ್ಯನ ಮಕ್ಕಳು ಹಿಂದೆ ಯಾವುದೋ ಹೋರಾಟದಲ್ಲಿ ಹೋರಾಡಿರಬೇಕು. ಆ ಕಾರಣವಾಗಿ ಅವರಿಗೆ ಈ ಮಲ್ಲಪ್ಪನಹಳ್ಳಿ (ಮಲಪನಹಳ್ಳಿ) ಗ್ರಾಮವು ಬಾಳ್ಗಚ್ಚು ರೀತಿಯ ಅಂದರೆ ಕತ್ತಿ ಕಾಳೆಗಕ್ಕೆ ನೀಡಲಾಗಿದ್ದ ರಕ್ತಗೊಡಗೆ ರೀತಿಯ ದತ್ತಿ ಭೂಮಿಯಾಗಿದ್ದಿತೆಂದು ತೋರುತ್ತದೆ. ಪ್ರಸ್ತುತ ಆ ಗ್ರಾಮದ ಭೂಮಿಯನ್ನು ಹೆಂಜೇರಿ ಲಕ್ಕಯ್ಯನಿಗೆ ಕ್ರಯಕ್ಕೆ ನೀಡಿರುವ ಸಂಗತಿ ಈ ಕ್ರಯಪತ್ರ ಶಾಸನದಿಂದ ತಿಳಿದುಬರುತ್ತದೆ.
ಈ ಶಾಸನದ ಕ್ರಯಪತ್ರದಲ್ಲಿ ಮಾರೆಂತೆಂದರೆ ಎಂಬ ಪ್ರಯೋಗವಿದೆ. ಇದು ಸಾಮಾನ್ಯವಾಗಿ ಇಂತಹ ದಾನಶಾಸನ ಗಳಲ್ಲಿ ಕಂಡುಬರುವ ಕ್ರಮವೆಂತೆಂದರೆ ಎಂಬುದರ ಪರ್ಯಾಯವೆಂದು ತಿಳಿಯಬಹುದು. ಮಾರು ಎಂದರೆ ವಿಕ್ರಯ ಎಂದು ಕೇಶಿರಾಜನ ಶಬ್ದಮಣಿದರ್ಪಣದ ಧಾತು ಪಾಠದಲ್ಲಿ ಉಕ್ತವಾಗಿದೆ. ಈ ಅರ್ಥವು ಕೂಡಾ ಪ್ರಕೃತ  ಶಾಸನದ ದಾಖಲಾತಿಗೆ ಸರಿಹೊಂದುತ್ತದೆ.
ಈ ಶಾಸನದಲ್ಲಿ ಉಕ್ತವಾಗಿರುವ ಮಲ್ಲಪ್ಪನಹಳ್ಳಿಯು ಪ್ರಸ್ತುತ ಶಾಸನ ದೊರೆತ ಬಿಕ್ಕೇಗುಡ್ಡ ಗ್ರಾಮದ ನೆರೆಯಲ್ಲೇ ಇರುವ ಗ್ರಾಮವಾಗಿದೆ. ಶಾಸನೋಕ್ತ ಸುರಗಿಹಳ್ಳಿ, ತೆನಹಳ್ಳಿಗಳು ಗುಬ್ಬಿ ತಾಲ್ಲೂಕಿನ ಗ್ರಾಮಗಳೇ ಆಗಿವೆ.

ಶಾಸನಪಾಠ
೧        ವಿಶ್ವವಸು ಸಂವತ್ಸರದ ಚ
೨        ಯಿತ್ರ ಶುದ್ಧ ೫ ರಲು ಶ್ರೀಮನು
೩        ಮಹಾನಾಯಕನ ಮಕಳು ಬ
೪        ಡ ತಿಂಮಯ್ಯನೂ ಹೆಂಜೆರೀ
೫        ಲೆಕ್ಕಯ್ಯನ ಮಗ ಹೆಂಜೆರೀ
೬        ಲಕ್ಕಯ್ಯಕೆ ಕೊಟ್ಟ ಕ್ರಯಪ
೭        ತ್ರದ ಮಾರೆಂತೆಂದರೆ ತಂಮ
೮        ಮಕ್ಕಳ ಅಶೀಕೀಗೆ ಸಲುವ
೯        ಮಲ್ಲಪನಹಳಿಯೊಳಗೆ
೧೦     ಸಲುವಂತ ಹೊಲ ಗದ್ದೆ ಹೀ
೧೧     ಯ್ಯ ಚೌಟ್ಯು ಹೊರೆ ಹುಲ್ಲು
೧೨     ವೊರ ಭತ್ತ ಚಳಿಕಂತ್ತೆ ಆ
೧೩     ಯದಾಯ ಬೀಜ ಎತ್ತಿನ
೧೪     ಕು ಸುವರ್ಣದಾಯವೆಲ್ಲ
೧೫     ವನು ತಾಉ ನಿಮಗೆ ಕ್ರಯ
೧೬     ವಾಗಿ ಗ ೪ ಅಕ್ಷರದಲು ನಾಲ್ಕು
೧೭     ವರಹಕ್ಕೆ ಕೊಟ್ಟು ನಿರಯಸ
೧೮     ತಾಉ ನಿಲಿಸಿದ[ಕ]ಲು ಯಿಂತಾ
೧೯     ದುದಕ್ಕೆ ಸಾಕ್ಷಿಗಳು ಮಲ್ಲಪ
೨೦     ನಹಳ್ಳಿಯ ಸ್ಥಳದ ಗಉಡ
೨೧     ಚಿಂಣ್ಣಪಗಉಡನ ಮಗ
೨೨     ನಿಂಗೇಗಉಡ ಸುರಗಿಹ
೨೩     ಳ್ಳಿಯ ಮೊಳೆಗಉಡನ ಮಗ
೨೪     ದೊಡ ಕೆಂಪೈಯನು ತೆನಹ
೨೫     ಳ್ಳಿಯ ಪಟಣದ ಸಿಂಗಯ್ಯ
೨೬     ಯಿಂತಿ ಯಿವರ ಉಭೇಯಾನ
೨೭     ತದಿರೇ ಸಾಕ್ಷಿಗಳೊಪ್ಪಿತ ಮುಲ
೨೮     ಕ . . . ಕಪಟವಿನೊಪ್ಪಿತ ಸಂತ್ತೆ
೨೯     ಯನ ಸಹನಿದ . . .
೩೦     ಹಯಗಕ್ಕಾ  ಪೂರ್ಣದಾ
೩೧     ಯ್ಯಾ ಅಪರಾಧಿ ಸಲು[ವ ಕ್ರ]
ಶಾಸನದ ಬಲಭಾಗದಲ್ಲಿರುವ ಬರಹ
೩೨     ಯ ಪತ್ರ
೩೩     ತದ ಪೀ
೩೪     [ತ ?]  ಸಾಕಾಲ್ಯ
೩೪     ವಾಗಿ ಸಂತ್ತು
೩೫     ಬಡತಿಂಮ
೩೬     ಯ್ಯನಾ ದೈವ
೩೭     ಹು ಕೈಯ್ಯ
೩೮     ಲದೆ
೩೯     ನಡೆವಾರೂ
೪೦     ಲಕ್ಷ್ಮೀದೇವರು
೪೧     ದಾಯಾದ ಸಾ
೪೨     ವಂತರ ವೊ
೪೩     ಪಿಸಿ ಮಾರಿದೆ
೪೪     ಉ ಶ್ರೀ ಹರಿಹ
೪೫     ರಾದಿಗಳೂ

[ಈ ಶಾಸನದ ಪಡಿಯಚ್ಚು ತೆಗೆದುಕೊಳ್ಳಲು ಎಲ್ಲಾ ವಿಧದ ಅನುಕೂಲಗಳನ್ನು ಮಾಡಿಕೊಟ್ಟು, ಸಹಕಾರವನ್ನು ನೀಡಿದ ತುಮಕೂರು ವಿಶ್ವವಿದ್ಯಾನಿಲಯದ ಡಾ|| ಡಿ.ವಿ. ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರದ ಉಪಪ್ರಾಧ್ಯಾಪಕರಾದ ಡಾ|| ಶ್ರೀಪಾದಭಟ್ಟರಿಗೂ ಮತ್ತು ವಿಭಾಗದ ಮುಖ್ಯಸ್ಥರಿಗೂ ನಾವು ತುಂಬಾ ಕೃತಜ್ಞರಾಗಿದ್ದೇವೆ].
ಡಾ || ಪಿ.ವಿ.ಕೃಷ್ಣಮೂರ್ತಿ
# ೩೭, ಶ್ರೀಕೃಷ್ಣ ಕೃಪ, ೩ ನೆಯ ಅಡ್ಡರಸ್ತೆ, ಸುಬ್ಬಣ್ಣ ಲೇಔಟ್, ಹರಿನಗರಕ್ರಾಸ್, ಬೆಂಗಳೂರು-೫೬೦೦೬೨







Friday, November 16, 2012

ಡಿ. ಸ್ಮಿತಾರೆಡ್ಡಿ ಲೇಖನ


ಘಾಟಿ ಪರಿಸರದ ಪ್ರಾಗೈತಿಹಾಸಿಕ ನೆಲೆಗಳು ಒಂದು ಶೋಧ

ಡಿ. ಸ್ಮಿತಾರೆಡ್ಡಿ
ನಂ. ೭೦೨, ಬಿ-೨, ಕೃಷ್ಣಾ ಬ್ಲಾಕ್ ರಾಷ್ಟ್ರೀಯ ಕ್ರೀಡಾಗ್ರಾಮ ವಸತಿ ಸಂಕೀರ್ಣ ಕೋರಮಂಗಲ, ಬೆಂಗಳೂರು-೫೬೦೦೪೭.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ದಕ್ಷಿಣ ಭಾರತದ ಪ್ರಮುಖ ನಾಗಾರಾಧನಾ ಸ್ಥಳವಾಗಿದ್ದು, ಪುಣ್ಯ ಕ್ಷೇತ್ರವೆಂದು ಪರಿಗಣಿತವಾಗಿದೆ. ಸುತ್ತಲೂ ಬೆಟ್ಟಗುಡ್ಡಗಳನ್ನೊಳಗೊಂಡ ಕಣಿವೆಯಲ್ಲಿ ಸುಬ್ರಹ್ಮಣ್ಯ ದೇವಾಲಯವಿರುವುದರಿಂದ, ಈ ಗ್ರಾಮವನ್ನು ಘಾಟಿ ಸುಬ್ರಹ್ಮಣ್ಯವೆಂದೂ ಸಹ ಕರೆಯುತ್ತಾರೆ. ಪ್ರಕೃತಿಯ ಸೊಬಗಿನಿಂದ ಮನೊಂಹರವಾದ ಸ್ಥಳದಲ್ಲಿರುವ ಈ ಗ್ರಾಮ ಆಸ್ತಿಕರನ್ನು ಮಾತ್ರವಲ್ಲದೆ, ನಿಸರ್ಗಪ್ರಿಯರನ್ನೂ ಸಹ ಆಕರ್ಷಿಸುತ್ತಿದೆ. ಇದು ಉತ್ತರ ಪಿನಾಕಿನಿ ನದಿಯ ವ್ಯಾಪ್ತಿಯಲ್ಲಿ ಬರುವುದರಿಂದ ಈ ಸ್ಥಳ ವ್ಯವಸಾಯಕ್ಕೆ ತಕ್ಕಂತಹ ವಾತಾವರಣವನ್ನು ಹೊಂದಿದೆ. ಹಾಗಾಗಿ ಘಾಟಿ ಮತ್ತು ಅದರ ಕಣಿವೆಯಲ್ಲಿ ಬರುವ ಗ್ರಾಮಗಳು ಹಿಂದೊಮ್ಮೆ ಪ್ರಾಗೈತಿಹಾಸಿಕ ಮಾನವನ ನೆಲೆಯಾಗಿತ್ತೆಂಬುದರಲ್ಲಿ ಸಂಶಯವೇ ಇಲ್ಲ.
ಘಾಟಿ ಗ್ರಾಮಕ್ಕೆ ಸುಮಾರು ಎರಡು ಕಿ.ಮೀ.ಗಳ ಅಂತರದಲ್ಲಿ ಲಗುಮೇನಹಳ್ಳಿ ಎಂಬ ಒಂದು ಪುಟ್ಟ ಗ್ರಾಮವಿದೆ. ಗ್ರಾಮಕ್ಕೆ ಹೊಂದಿಕೊಂಡಂತಿರುವ ಹೊಲಗಳಲ್ಲಿ ಹಾಗೂ ಮನೆಗಳ ಅಕ್ಕಪಕ್ಕದಲ್ಲಿಯೇ ಹಲಾವರು ಚೌಕಾಕಾರದ ಕಿಂಡಿಕೋಣೆಯ (ಸ್ವಲ್ಪ ಮಟ್ಟಿಗೆ ಸ್ವಸ್ತಿಕ ಆಕಾರದ) ಶಿಲಾ ಗೋರಿಗಳಿವೆ ಇವು ಸುಮಾರು ಅರ್ಧ ಕಿ.ಮೀ. ಸುತ್ತಳತೆಯಲ್ಲಿ ಪ್ರಸರಿಸಿವೆ. ಆದರೆ ವ್ಯವಸಾಯ ಕಾರ್ಯ ಮನೆಗಳ ನಿರ್ಮಾಣ, ಅವುಗಳ ಬಗೆಗಿನ ಅವಜ್ಞೆ ಹಾಗೂ ನಿಧಿಗಳ್ಳರಿಂದಾಗಿ ಬಹುತೇಕ ಎಲ್ಲಾ ಶಿಲಾಗೋರಿಗಳೂ ನಾಶವಾಗಿ ಅವಶೇಷಗಳ ರೂಪದಲ್ಲಿ ಉಳಿದಿವೆ. ಗ್ರಾಮಕ್ಕೆ ಹೊಂದಿಕೊಂಡ ಹೊಲದಲ್ಲಿ ಇಂತ ಭಗ್ನಾವಸ್ಥೆಯಲ್ಲಿರುವ ಸುಮಾರು ಹದಿನಾರು ಬೃಹತ್ ಶಿಲಾ ಗೋರಿಗಳನ್ನು ಕಾಣಬಹುದು. (ಹೊಲಗಳಲ್ಲಿ ಈ ಶಿಲಾಸಮಾಧಿಗಳಿರುವುದರಿಂದ ಹೆಚ್ಚಿನವು ಕಣ್ಮರೆಯಾಗಿವೆ.) ಇವುಗಳ ಉದ್ದ ಸುಮಾರು ಎಂಟು ಅಡಿ ಇದ್ದು ಅಗಲ ಸುಮಾರು ಮೂರು ಅಡಿಗಳಷ್ಟಿದೆ. ಆದರೆ ಮೇಲ್ಭಾಗದ ಚಪ್ಪಡಿಕಲ್ಲು ಎಷ್ಟು ವಿಸ್ತೀರ್ಣವಿತ್ತು ಎಂಬುದನ್ನು ಹೇಳುವುದು ಕಷ್ಟವಾದರೂ ಅಲ್ಲಿ ಚದುರಿ ಬಿದ್ದಿರುವ ಅವಶೇಷಗಳ ಆಧಾರದ ಮೇಲೆ ಅವು ಸುಮಾರು ಎಂಟು ಅಡಿ ಉದ್ದ ಹಾಗೂ ಐದು ಅಡಿ ಅಗಲವನ್ನು ಹಾಗೂ ಸುಮಾರು ೧ ೧/೨ ಅಡಿ ದಪ್ಪವನ್ನು ಹೊಲದಿದ್ದಿರಬಹುದೆಂದು ಊಹಿಸ ಬಹುದು. ಗ್ರಾಂದ ಬಹುತೇಕ ಎಲ್ಲ ಶಿಲಾಗೋರಿಗಳೂ ಇದೇ ಸ್ವರೂಪದಲ್ಲಿವೆ. ಶಿಲಾಗೋರಿಗಳ ಕೋಣೆ ಕಿಂಡಿಯು ಸುಮಾರು ಒಂದು ಅಡಿ ವ್ಯಾಸವನ್ನು ಹೊಂದಿದೆ.
ಲಗುಮೇನಹಳ್ಳಿಯಿಂದ ಪೂರ್ವದಿಕ್ಕಿನ ಕಡೆಗಿರುವ ಬೆಟ್ಟದ ಮೇಲೆ ಬೃಹತ್ತಾದ ನೈಸರ್ಗಿಕವಾದ ಒಂದು ಕಲ್ಮನೆಯಿದ್ದು, ಇದು ಸುಮಾರು ೧೪ ಅಡಿಗಳಷ್ಟು ಉದ್ದ, ಹತ್ತು ಅಡಿಗಳಷ್ಟು ಅಗಲವಿದೆ. ಹಾಗೂ ಬಂಡೆಯ ದಪ್ಪವೂ ಸಹ ಸುಮಾರು ೨ ೧/೨ ಅಡಿಗಳಷ್ಟು ದಪ್ಪವಿದೆ. ಮುಂಭಾಗವು ಸುಮಾರು ಮೂರು ಅಡಿಗಳಿಗಿಂತಲೂ ಹೆಚ್ಚು ದಪ್ಪವನ್ನು ಹೊಂದಿದೆ. ಈ ಕಲ್ಮನೆಯ ಕೆಳಗೆ ಸುಮಾರು ೬ ಮಂದಿ ಮಲಗಬಹು ದಾದಷ್ಟು ಸ್ಥಳಾವಕಾಶವಿದೆ. (ಇದರ ಆಸುಪಾಸಿನಲ್ಲೇ ಇನ್ನೂ ನಾಲ್ಕು ಶಿಲಾಸಮಾಧಿಗಳಿವೆ.) ಹಾಗೆಯೇ ಸ್ವಲ್ಪ ಮುಂದೆ ಬೆಟ್ಟದ ನಡುನೆತ್ತಿಯನ್ನು ತಲುಪಿದರೆ, ಅಲ್ಲಿ ಸ್ವಾಭಾವಿಕವಾದ ಬೃಹತ್ ಕಲ್ಲುಬಂಡೆಗಳಿವೆ. ಒಂದಕ್ಕೊಂದು ತಗುಲಿ ಕೊಂಡಿರುವ ಎಡರು ಬಂಡೆಕಲ್ಲುಗಳ ಕೆಳಭಾಗದಲ್ಲಿ ನುಸುಳಿ ದರೆ, ಎಡಭಾಗದ ದೊಡ್ಡ ಬಂಡೆಯ ಕೆಳಗೆ ಒಬ್ಬ ವ್ಯಕ್ತಿ ಒಳಗೆ ನುಸುಳಬಹುದಾದಷ್ಟು ಸಣ್ಣ ಕಿಂಡಿಯಿದೆ. ಈ ಕಿಂಡಿಯ ಮೂಲಕ ಒಳಗೆ ಹೋದರೆ ಆ ಬಂಡೆಯ ಕೆಳಗೆ ಸುಮಾರು ೧೨ ಜನ ಮಲಗುವಷ್ಟು ವಿಶಾಲವಾದ ಸ್ಥಳವಿದೆ. ಆ ಸ್ಥಳದಲ್ಲಿ ಇಂದಿಗೂ ಮಡಿಕೆ ಕುಡಿಕೆಗಳನ್ನಿಟ್ಟು ಪೂಜೆ ಮಾಡುವ ಪದ್ಧತಿಯಿದೆ.  ಪದ್ಧತಿ ಗಮನಿಸಿದರೆ ಹಿಂದೆ ಆ ಸ್ಥಳದಲ್ಲಿ ಪ್ರಾಗೈತಿಹಾಸಿಕ ಕಾಲದ ಮಾನವರು ವಾಸಿಸುತ್ತಿದ್ದು, ಅವನಿಗೆ ಸಂಬಂಧಿಸಿದ ಅವಶೇಷಗಳು ಅಲ್ಲಿ ಇದ್ದಿರಲೂ ಬಹುದು. ಈ ಜಾಗದಲ್ಲೆ ನವಶಿಲಾಯುಗದ ಕಾಲಕ್ಕೆ ಸೇರಿರುವ ಒಂದು ಒರಟಾದ ಶಿಲಾಯುಧ (ಕಲ್ಲಿನ ಗುಂಡು) ಸಹ ಇದೆ (ಈ ಶಿಲಾಯುಧವು ಬೆಣಚುಕಲ್ಲಿನದ್ದಾಗಿದ್ದು, ಚೌಕಾಕಾರದಲ್ಲಿದೆ. ಇದನ್ನು ಅಲ್ಲಲ್ಲಿ ಚಕ್ಕೆ ಎಬ್ಬಿಸಿ ಬಳಸಿರುವುದು ಚಿತ್ರದಿಂದ ಸ್ಪಷ್ಟವಾಗುತ್ತದೆ. ಇದು ಸುಮಾರು ೬”x೩” ಇದೆ.)  ಈಗ  ಅಲ್ಲಿ ಸೋಮವಾರ ಮುನೇಶ್ವರ ದೇವರ ಹೆಸರಿನಲ್ಲಿ ಪೂಜೆ ಮಾಡುತ್ತಾರೆ. ಬೆಟ್ಟದಿಂದ ಗ್ರಾಮಕ್ಕೆ ಇಳೀಯುವಾಗ ಒಂದು ಕಡೆ ಕಲ್ಲುಗಳನ್ನಿಟ್ಟು ಪೂಜಿಸ ಲಾಗುತ್ತದೆ. ಅಲ್ಲಿ ಒಂದು ಕಲ್ಲಿನ ಮೇಲೆ ಒಂದು ರೇಖಾ ಚಿತ್ರವಿದ್ದು ಅದು ಗೂಳಿಯ ರೇಖಾಚಿತ್ರವಿರಬಹುದೆಂದು ಊಹಿಸಬಹುದು.
ಲಗುಮೇನಹಳ್ಳಿ ಗ್ರಾಮದಿಂದ ದಕ್ಷಿಣಕ್ಕೆ ಸುಮಾರು ೨.ಕಿ.ಮೀ ದೂರ ಕ್ರಮಿಸಿದರೆ ಅಲ್ಲಿ ಮತ್ತೊಂದು ಬೆಟ್ಟವಿದೆ. ಬೆಟ್ಟವನ್ನು ಹತ್ತುತ್ತಿದ್ದಂತೆಯೇ ಪ್ರಾರಂಭದಲ್ಲಿಯೇ ಉತ್ತರಾಭಿ ಮುಖವಾಗಿ ಒಂದು ಸ್ವಾಭಾವಿಕವಾದ ಗುಹೆಯಿದ್ದು, ಗುಹೆಯ ಒಳಗೆ ದೊಡ್ಡದಾದ ಸುರಂಗ ಮಾದರಿಯ ರಚನೆಯಿದೆ. ಗುಹೆಯ ಸ್ವಾಭಾವಿಕ ರಚನೆಯಾಗಿದೆ. ಗುಹೆಯ ಬೆಟ್ಟದ ಕೆಳಗಿದ್ದರೂ, ಗುಹೆಯ ಮೇಲ್ಭಾಗವನ್ನು ದೊಡ್ಡ ದೊಡ್ಡ ಕಲ್ಲು ಚಪ್ಪಡಿಗಳನ್ನು ಒಂದರ ಮೇಲೊಂದು ಜೋಡಿಸಿರು ವಂತಿದೆ. ಬೆಟ್ಟದ ಆ ಭಾಗದ ರಚನೆಯೂ ಸಹ ವಿಶಿಷ್ಟ ವಾಗಿದ್ದು, ಅದನ್ನು ನೋಡಿದಾಕ್ಷಣವೇ ಅದು ಹಿಂದೊಮ್ಮೆ ಮಾನವನ ನೆಲೆಯಾಗಿತ್ತೆಂದು ಸ್ಪಷ್ಟವಾಗುತ್ತದೆ.
ಗುಹೆಯಿರುವ ಭಾಗದಿಂದ ಬೆಟ್ಟದ ಮೇಲೆಯೇ ಹಿಂದಕ್ಕೆ ಸಾಗಿದರೆ ಬೆಟ್ಟ ಸಮತಟ್ಟಾಗಿದ್ದು, ವಿಶಾಲವಾದ ಬಯಲು ಪ್ರದೇಶವಿದೆ. ಈ ಪ್ರದೇಶ ಪ್ರಾಗೈತಿಹಾಸಿಕ ಮಾನವನ ನಿವಾಸವಾಗತ್ತೆಂಬುದಕ್ಕೆ ಪೂರಕವಾಗಿ ಈ ಬೆಟ್ಟದ ಮೇಲೆ ಎರಡು ಪ್ರಾಕೃತಿಕ ದೊಣೆಗಳಿದ್ದು, ಎಲ್ಲಾ ಋತುಗಳಲ್ಲಿಯೂ ಅಲ್ಲಿ ನೀರು ಇರುತ್ತದೆಂದು ಸ್ಥಳೀಯರು ಹೇಳುತ್ತಾರೆ. ಆ ದೊಣೆಯ ಮೇಲ್ಭಾಗದಲ್ಲಿ ಒಂದು ಭಗ್ನಾವಸ್ಥೆಯ ನಿಲುವುಗಲ್ಲು ಸಹ ಇದೆ. ಪ್ರಾಗೈತಿಹಾಸಿಕ ಕುರುಹುಗಳಿರುವ ಬೆಟ್ಟದ ಪ್ರದೇಶಗಳಲ್ಲಿ ಸರ್ವೇಸಾಧಾರಣವಾಗಿ ಕಂಡು ಬರುವಂತೆ ಇಲ್ಲಿಯೂ ಸಹ ಕಲ್ಲುಗಳ ಮೇಲೆ ಕಲ್ಲುಗಳನ್ನು ಪೇರಿಸುವ ವ್ಯವಸ್ಥೆಯನ್ನು ಕಾಣಬಹುದು. ಮದುವೆ ಯಾಗದಿರುವವರು, ಮಕ್ಕಳಾಗದಿರುವವರು ಹಾಗೂ ಮನೆಯನ್ನು ಕಟ್ಟಬೇಕೆಂಬ ಆಕಾಂಕ್ಷೆ ಇರುವವರು ತಮ್ಮ ಆಸೆಗಳು ಈಡೇರುತ್ತವೆಂಬ ಆಶಯದಿಂದ ಈಗಲೂ ಇದೇ ಪದ್ಧತಿಯನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ. ಬೆಟ್ಟದ ಮೇಲೆ ಅಲ್ಲಲ್ಲಿ ಕಲ್ಮನೆಗಳು ಭಗ್ನಗೊಂಡಿರುವ ಕುರುಹುಗಳು ಕಂಡು ಬರುತ್ತದೆ.
ರಮಣೀಯವಾದ ಸುತ್ತಲೂ ಬೆಟ್ಟಗುಡ್ಡಗಳ ನ್ನೊಳಗೊಂಡ ಕಣಿವೆಯಲ್ಲಿರುವ ಘಾಟಿ ಸುಬ್ರಹ್ಮಣ್ಯ ಕ್ಷೇತ್ರವು ಇಲ್ಲಿಯವರೆಗೆ ಪುಣ್ಯಕ್ಷೇತ್ರವೆಂದು ಪರಿಗಣಿಸಲ್ಪಟ್ಟಿತ್ತು. ಈ ಶೋಧದಿಂದ ಈ ಪರಿಸರವು ಕ್ರಿ.ಸ್ತಶಕದ  ಪ್ರಾರಂಭದ ವೇಳೆಗಾಗಲೇ ಮಾನವನಿಗೆ ಆವಾಸಸ್ಥಾನವಾಗಿತ್ತೆಂದು ಇಲ್ಲಿನ ಶಿಲಾಗೋರಿ, ಕಲ್ಮನೆ, ಗುಹೆಗಳು ಹಾಗೂ ನಿಲುವುಗಳಿಂದ ಸ್ಪಷ್ಟವಾಗುತ್ತದೆ.
[ಕ್ಷೇತ್ರ ಕಾರ್ಯಕ್ಕೆ ನನ್ನೊಂದಿಗೆ ಬಂದು ನೆರವು ನೀಡಿದ ಪತಿ ಎನ್.ಸಿ. ಬಾಬುರೆಡ್ಡಿಯವರಿಗೆ ಹಾಗೂ ಮಗಳು ಎಸ್.ಬಿ. ಸೃಷ್ಟಿಗೆ ಕೃತಜ್ಞತೆಗಳು.]



Wednesday, November 14, 2012

ಇತಿಹಾಸಕಾರರ ಸರಣಿ-೧




ಇತಿಹಾಸಕಾರರ -ಸರಣಿ

 ಎಲ್ಲರಿಗೂ ದೀಪಾವಳಿಯ ಶುಭಾಶಯಗಳು .ಕನ್ನಡ  ಇತಿಹಾಸಲೋಕದಲ್ಲಿ  ಹಿರಿಯ ಸಾಧಕರ ಪರಿಚಯ ಮಾಡಿಕೊಡಲು ದೀಪಾವಳಿಯಿಂದ ಒಂದು ಸರಣಿ ಪ್ರಾರಂಭಿಸಿದೆ. ಇತಿಹಾಸಪ್ರಿಯರಿಗೆ  ಆಸಕ್ತಿ ಮೂಡಿಸುವ ಪ್ರಯತ್ನದಲ್ಲಿ ತಮ್ಮೆಲ್ಲರ ಸಹಕಾರ ಕೋರಿದೆ  ಸರಣಿಯ ಬರಹಕ್ಕೆ ಅನೇಕ  ಅಭಿನಂದನ ಗ್ರಂಥಗಳು, ಎಪಿಗ್ರಾಫಿಯಾಕರ್ನಾಟಕ, ವಿಶ್ವಕೋಶ ಮತ್ತು ಅನೇಕ ಅಂತರ್‌ಜಾಲ ತಾಣಗಳನೆರವಿನಿಂದ   ಮಾಹಿತಿ  ಮತ್ತು ಚಿತ್ರಗಳನ್ನು ಪಡೆಯಲಾಗಿದೆ.ಡಾ. ಪಿ.ವಿ.ಕೆ ಸಲಹೆ, ಸಹಕಾರ ನೀಡಿದ್ದಾರೆ ಅವರಿಗೆಲ್ಲರಿಗೂ ಋಣಿಯಾಗಿರುವೆ.
.- ಎಚ್‌. ಶೇಷಗಿರಿರಾವ್





                               ಕನ್ನಡ ಖಜಾನೆ ಕೀಲಿ ಕೈ ಬೆಂಜಮಿನ್‌  ಲೂಯಿ ರೈಸ್‌
 ಕನ್ನಡ ಭಾಷೆ, ಸಾಹಿತ್ಯ, ಶಾಸನ ಎಂದೊಡನೆ ತಟ್ಟನೆ ನೆನಪಿಗೆ ಬರುವ ಹೆಸರು ಬಿ.ಎಲ್‌. ರೈಸ್‌ ಅವರದು.ಅವರು ನಮ್ಮ ನಾಡಿನ ಶಾಸನಶಾಸ್ತ್ರದ ಪಿತಾಮಹ ಎನ್ನಬಹುದು. ರೈಸ್‌  ಕುಟುಂಬವು ಕನ್ನಡನಾಡಿನೊಡನೆ  ಒಂದು ಶತಮಾಕ್ಕೂ ಹೆಚ್ಚು ಒಡನಾಟ ಹೊಂದಿದೆ.  ಬಿ ಎಲ್‌ರೈಸ್‌  ಬೆಂಗಳೂರಿಗರು ಎನ್ನಬಹುದು. ಅವರ  ತಂದೆ ಬೆಂಜಮಿನ್ ಹೋಲ್ಟ್ಚ್‌.ರೈಸರು ಇಂಗ್ಲೆಂಡಿನಿಂದ ಭಾರತಕ್ಕೆ  ಬಂದಿದ್ದು  ಧರ್ಮೋಪದೇಶಕರಾಗಿ.ಅವರ ಕಾರ್ಯಕ್ಷೇತ್ರ ಹಳೇ ಮೈಸೂರು ಪ್ರಾಂತ್ಯ. ಮನೆ ಮಾಡಿ ನೆಲಸಿದ್ದು ಬೆಂಗಳೂರಿನಲ್ಲಿ. ಧರ್ಮಬೋಧೆಗೆ ಅನುವಾಗಲಿ ಎಂದು ಕನ್ನಡ ಕಲಿತರು. ಅವರ ಮಡದಿಯೂ ಪತಿಗೆ ನೆರವಾಗಲು ಕನ್ನಡ ಕಲಿತರು.  ಅವರ ಮಗ  ಬೆಂಜಮಿನ್‌ ೧೮೩೭ರಲ್ಲಿ ಬೆಂಗಳೂರಿನಲ್ಲೇ ಜನಿಸಿದ. ಕನ್ನಡ ಪರಿಸರದಲ್ಲಿ  ಮಗು ಬೆಳೆಯಿತು. ಬಿ.ಎಲ್‌. ರೈಸ್‌. ಬಾಲ್ಯವೆಲ್ಲಾ ಬೆಂಗಳೂರಿನಲ್ಲಿಯೇ ಹಾಗಾಗಿಕನ್ನಡವನ್ನು ಅವರು ಇಂಗ್ಲಿಷ್‌ಗಿಂತ ಚೆನ್ನಾಗಿ ಮಾತನಾಡಬಲ್ಲವರಾಗಿದ್ದರು.         


 ಅವರು ಶಿಕ್ಷಣ ಪಡೆದಿದ್ದು ಇಂಗ್ಲಂಡಿನ ಹ್ಯಾರೋ ನಗರದಲ್ಲಿ. ಪದವಿಧರರಾದಮೇಲೆ. ಕೆಲಕಾಲ ಅಲ್ಲಿಯೇ ಕೆಲಸ ಮಾಡುತ್ತಾ ಐಸಿಎಸ್‌ ಪರೀಕ್ಷೆಗೆ ತಯಾರಿ ನಡೆಸಿರುವಾಗಲೇ ೧೮೬೦ ರಲ್ಲಿ ಬೆಂಗಳೂರಿಗೆ ಬರಬೇಕಾಯಿತು. ಮೈಸೂರುರಾಜ್ಯ ಶಿಕ್ಷಣ ಇಲಾಖೆಯಲ್ಲಿ ಅವರಿಗೆ ಉದ್ಯೋಗದ ಕರೆ ಬಂದಿತು.ಬೆಂಗಳೂರಿನ ಸೆಂಟ್ರಲ್‌ಹೈಸ್ಕೂಲಿನ ೨೩ ನೇ    ವಯಸ್ಸಿನಲ್ಲೇ ಮುಖ್ಯೋಪಧ್ಯಾಯ ಹುದ್ದೆ ಅವರದಾಯಿತು.ಸೇವೆಯ ಕುರಿತು ಅವರ ಬದ್ದತೆ ಅಪಾರ. ಜನಸಂಪರ್ಕದ ಮಹತ್ವ ಅರಿತ ಅವರು ತಮ್ಮ ಕಾರ್ಯ ಕ್ಷೇತ್ರದ ಜನರ ಭಾಷೆಯಮೇಲಿನ ಪ್ರಭುತ್ವದ   ಅಗತ್ಯವನ್ನು ಮನಗಂಡರು. ಬಂದ ಒಂದೇ ವರ್ಷದಲ್ಲಿ ಹೈಯರ್‌ ಸೆಕೆಂಡರಿ ಕನ್ನಡ ಪರೀಕ್ಷೆಗೆ ಕುಳಿತು ಉತ್ತೀರ್ಣರಾದರು.
 ಅವರು ೧೯೬೫ ರಿಂದ ಮೂರುವರ್ಷಗಳ ಕಾಲ ಮೈಸೂರು ಮತ್ತು ಕೊಡಗು ಸೀಮೆಯ ಶಾಲಾ ಇನಸ್ಪೆಕ್ಟರ್‌ಆಗಿ ಕೆಲಸ ಮಾಡಿದರು. ನಂತರ ಇಂಗ್ಲೇಂಡಿಗೆ ಹೋಗಿ ಮದುವೆಯಾಗಿ ವಾಪಸ್ಸು ಬೆಂಗಳೂರಿಗೆ ಬಂದರು. ಆಸಮಯದಲ್ಲಿ ಮೇಜರ್‌ ಡಿಕ್ಸನ್‌  ಹಲವು ಶಾಸನಗಳ ಭಾವಚಿತ್ರ ನೀಡಿ ಅದರ ಭಾಷಾಂತರ ಮಾಡುವಂತೆ ಕೋರಿದರು. ಅವರ ಶಾಸನ ಅಧ್ಯಯನಕ್ಕೆ ಅದು ನಾಂದಿಯಾಯಿತು.ಅವರು ಹೈಗ್ರಂಡನನಿವೇಶನದಲ್ಲಿ  ತಮ್ಮವಾಸಕ್ಕಾಗಿ ಸುಸಜ್ಜಿತ ಮನೆ ನಿರ್ಮಿಸಿಕೊಂಡರು.ಅವರ ಮೊದಲ ಮಗು ಅಲ್ಲಿಯೇ ಜನಿಸಿತು.ಆ ಅವಧಿಯಲ್ಲಿಯೇ ಅವರ ಶಾಸನ ಸಂಗ್ರಹದ ಆಸಕ್ತಿ ಚಿಗುರೊಡೆಯಿತು ಹೋದ ಊರುಗಳಲ್ಲೆಲ್ಲ ಶೈಕ್ಷಣಿಕ ತಪಾಸಣೆ ಜತೆ ಹಸ್ತ ಪ್ರತಿ ಸಂಗ್ರಹ, ಶಾಸನಗಳ ಸಮೀಕ್ಷೆ, ಅಧ್ಯಯನ ಮೊದಲುಮಾಡಿದರು. ಕನ್ನಡ ನುಡಿಗೆ ಅವರು ಸಲ್ಲಿಸಲಿದ್ದ ಮಹಾನ್‌ಕೊಡುಗೆಗೆ  ಈ ಕೆಲಸವೇ ಮುನ್ನುಡಿ ಬರೆಯಿತು. ನಂತರ ೧೫ ವರ್ಷಗಳ ಕಾಲ ಮೈಸೂರು ಸಂಸ್ಥಾನದ ಶಿಕ್ಷಣ ಇಲಾಖೆಯನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ಆಗಂತೂ ತಮ್ಮವ್ಯಾಪ್ತಿಯಲ್ಲಿ ಬರುವ ಎಲ್ಲ  ಪ್ರದೇಶಗಳಲ್ಲಿ ಶಾಸನ ಮತ್ತು  ಹಸ್ತಪ್ರತಿಗಳನ್ನು ಹುಡುಕುವುದೇ ಆದ್ಯ ಕೆಲಸವಾಯಿತು. ಅವುಗಳನ್ನು  ಸಂಗ್ರಹಿಸಿ  ಅಧ್ಯಯನಕ್ಕೆ ಮೊದಲು ಮಾಡಿದರು.ಅವರ ಶಿಕ್ಷಣಾಸಕ್ತಿಯನ್ನು ಗಮನಿಸಿ  ಹಂಟರ್‌  ಶಿಕ್ಷಣ ಆಯೋಗದ ಕಾರ್ಯದರ್ಶಿ ಸ್ಥಾನ ಕೊಡಲಾಯಿತು. ಒಂದೇ ವರ್ಷದಲ್ಲಿ ಶಿಕ್ಷಣ ವರಿದಿ ಸಿದ್ಧ ವಾಯಿತು. ಮೈಸೂರು ಸಂಸ್ಥಾನದಲ್ಲಿ ಪ್ರಾರಂಭಗೊಂಡ ಪುರಾತತ್ವ ಇಲಾಖೆಯನಿರ್ದೇಶಕರಾಗಿ ವಿದ್ಯಾಇಲಾಖೆಯ ಹೊಣೆಯ ಜೊತೆಯಲ್ಲಿಯೇ ನೋಡಿಕೊಳ್ಳಲು ನೇಮಿಸಿದರು.ಹೊಸ ಹುದ್ದೆಯ ಕಾರ್ಯವನ್ನು ಅವರು ಯಶಸ್ವಿಯಾಗಿನಿರ್ವಹಿಸಿದರು.. ಈ ಇಲಾಖೆಯ ಮಹತ್ವವನ್ನು ಮನಗಂಡ ಸರ್ಕಾರವು ಅವರನ್ನು ಪುರಾತತ್ವ ಇಲಾಖೆಗೆ ಪೂರ್ಣಾವಧಿ ನಿರ್ದೇಶಕರಾಗಿ ೧೮೯೦ರಲ್ಲಿ ನೇಮಿಸಿತು. ಅಲ್ಲಿಂದ ೧೬ ವರ್ಷಗಳ ಕಾಲ ಅವರು ನಿವೃತ್ತಿಯಾಗುವವರೆಗೂ ಅವಿರತವಾಗಿ ದುಡಿದು ಅಮೂಲ್ಯ ಕೊಡುಗೆ ನೀಡಿದರು. ಅವರು ಒಟ್ಟು ೮೮೬೯ ಶಾಸನಗಳನ್ನು ಸಂಗ್ರಹಿಸಿ, ಅಧ್ಯಯನಮಾಡಿ, “ ಎಪಿಗ್ರಾಫಿಯಾ ಕರ್ಣಾಟಕ”  ಎಂಬ ಹೆಸರಿನ ೧೨ ಸಂಪುಟಗಳನ್ನು ಪ್ರಕಟಿಸಿದರು. ಅದರಲ್ಲಿನ ಮೊದಲ ಸಂಪುಟ ಕೊಡಿಗಿನದಾದರೆ,೨ನೇ ಸಂಪುಟವು ಶಾಸನಗಳ ಆಗರವಾದ  ಶ್ರವಣಬೆಳಗೊಳಕ್ಕೆ ಮೀಸಲಾಯಿತು. ಅದರಲ್ಲಿ ೧೪೪ ಶಾಸನಗಳು ಪ್ರಕಟಗೊಂಡಿದ್ದವು.  ಅದು ಶ್ರವಣಬೆಳಗೊಳದಲ್ಲಿ ದೊರೆತ ೬೦೦ ಶಾಸನಗಳ  ಸಂಪಾದನಾ ಮತ್ತು ಅಧ್ಯಯನ ಕಾರ್ಯಕ್ಕೆ ಅಡಿಪಾಯವಾಯಿತು..


ಇವರು ಈಗಾಲೆ ಮೈಸೂರು ಇನಸ್ಕ್ರಿಪ್ಷನ್‌” ಎಂಬ ಶಾಸನ ಕುರಿತಾದ ಕೃತಿಪ್ರಕಟಿಸಿದ್ದರು.ಮೈಸೂರು ಮತ್ತು ಕೊಡಗು ಸೀಮೆಯ ಗೆಜೆಟಿಯರ್‌ಗಳನ್ನು ಮೂರು ಸಂಪುಟಗಳಲ್ಲಿ ೧೮೮೭ರಲ್ಲಿಯೇ ಸಿದ್ಧಪಡಿಸಿ ಪ್ರಕಟಿಸಿದ್ದರು. ಪ್ರಥಮ ಜನಗಣತಿ ವರದಿಯೂ ಇವರದೇ. ಇವರ ಗೆಜೆಟಿಯರ್‌ಗಳು ಬರಿ ಅಂಕೆಸಂಖ್ಯೆಗಳ ದಾಖಲೆಗಳಾಗಿರದೆ  ಐತಿಹಾಸಿಕ ಮತ್ತು ಸಾಂಸ್ಕೃತಿಕ  ಅಂಶಗಳನ್ನೂ ಒಳಗೊಂಡು ಓದುಗರ ಆಸಕ್ತಿ ಕೆರಳಿಸುವಂತೆ ಇವೆ. ಆದ್ದರಿಂದ ಅವು  ಇಂದಿಗೂ ಆಡಳಿತ ಸಂಶೋಧನೆಯ  ಉತ್ತಮ ಮಾದರಿಗಳಾಗಿವೆ ಎನ್ನಬಹುದು.

ಇವರು ಬರಿ ಗೆಜೆಟಿಯರ್‌ ಮತ್ತು ಶಾಸನ ಸಂಪುಟಗಳ ರಚನೆಗೆ ಮಾತ್ರ ತಮ್ಮ ಆಸಕ್ತಿಯನ್ನು ಸೀಮಿತಗೊಳಿಸದೆ ಕನ್ನಡ ಹಸ್ತಪ್ರತಿಗಳ ಸಂಗ್ರಹಣ ,ಸೂಚೀಕರಣ, ಹಾಗೂ ಸಂಪಾದನೆಯ ಕಡೆಗೂ ಗಮನ ಹರಿಸಿದ್ದರು. ಸಾಹಿತ್ಯೋಪಸನೆಗೆ ಉಪಯುಕ್ತವಾದ “ ಬಿಬ್ಲಿಯೋಥಿಕಾ ಕರ್ಣಾಟಿಕಾ” ಎಂಬ ಗ್ರಂಥ ಮಾಲೆಪ್ರಾರಂಭಿಸಿ, ಅದರಲ್ಲಿ  ’ಪಂಪ ರಾಮಾಯಣ, ಕರ್ನಾಟಕ ಭಾಷಾಭೂಷಣ , ಪಂಪ ಭಾರತ, ಶಬ್ದಾನುಶಾಸನ, ಅಮರಕೋಶ, ಕವಿರಾಜಮಾರ್ಗ ಮೊದಲಾದ ಕೃತಿಗಳನ್ನು ಪ್ರಕಟಿಸಿದರು. ಕನ್ನಡ ಸಾಹಿತ್ಯ ಮತ್ತು ಇತಿಹಾಸ ಅಧ್ಯಯನಕ್ಕೆ ಈಕೃತಿಗಳು ಅಡಿಪಾಯ ಹಾಕಿದವು.ಅವರು ತಮ್ಮ ೭೦ನೇ ವಯಸ್ಸಿನಲ್ಲಿ ನಿವೃತ್ತರಾಗಿ ಇಂಗ್ಲೆಂಡಿಗೆ ಹೋಗಿ ಹ್ಯಾರೋದಲ್ಲಿ ನೆಲಸಿದರು.ಅಲ್ಲಿಯೂ ಕನ್ನಡ ಸೇವೆ ಮುಂದುವರಿಸಿದರು. ನಿವೃತ್ತರಾದ ಮೂರುವರ್ಷದ ನಂತರ ತಮ್ಮ ಅಧ್ಯಯನದ ಫಲವಾದ “ ಮೈಸೂರು ಅಂಡ್‌ ಕೂರ್ಗ ಇನ್‌ಸ್ಲ್ರಿಪ್ಷನ್ಸ” ಕೃತಿ ಪ್ರಕಟಿಸಿದರು.  ಅದನ್ನು ದಕ್ಷಿಣ ಕರ್ನಾಟಕದ ಅಧಿಕೃತ ಚಾರಿತ್ರಿಕ ಕೃತಿ ಎನ್ನಬಹುದು. ತಮ್ಮ ೭೮ನೇ ವಯಸ್ಸಿನಲ್ಲೂ “ ಎಪಿಗ್ರಾಫಿಯಾ ಕರ್ನಾಟಕ” ದ ಮೊದಲನೆ ಸಂಪುಟವನ್ನು ಭಾರತ ಸಕಾರದ ಮನವಿಯ ಮೇರೆಗೆ ಪರಿಷ್ಕರಿಸಿ ಕೊಟ್ಟರು. ತೊಂಬತ್ತು ವರ್ಷದ ತುಂಬು ಜೀವನ ನಡೆಸಿ೧೯೨೭ರಲ್ಲಿ ಕಾಲವಶರಾದು. ಅವರ ಹೆಸರು ಕರ್ನಾಟಕದ ಜನರ ಹೃದಯಲ್ಲಿ ಚಿರಸ್ಥಾಯಿಯಾಗಿದೆ.

 ಕಾಲವಾಗುವ ಕೆಲವೇ ಸಮಯದ ಮುಂಚೆ ವೆಂಬರ್ಲಿಯಲ್ಲಿ ನಡೆದ ಅಂತರಾಷ್ಟ್ರೀಯ ವಸ್ತು ಪ್ರದರ್ಶನದ ಕನ್ನಡ ಮಳಿಗೆಗೆ ತಮ್ಮ ಮಕ್ಕಳ ಸಹಾಯದಿಂದ  ಭೇಟಿನೀಡಿದ್ದರು. ಅಲ್ಲಿರುವ ಗರಳೆಪುರಿ ಶಾಸ್ತ್ರಿಗಳು ಇಂಗ್ಲಿಷ್‌ನಲ್ಲಿ ಮಾತನಾಡಿದಾಗ, ಕನ್ನಡದ ಸವಿಯನ್ನು ಕೇಳಲೆಂದೆ ಬಂದಿರುವೆ ಕನ್ನಡದಲ್ಲೇ ಮಾತನಾಡಿ ಎಂದು ಅಲ್ಲಿನವರಿಗೆ ವಿನಂತಿಸಿದರು. ಅವರ ಜತೆ ಕನ್ನೆಡದಲ್ಲೆ ಗಂಟೆಗಟ್ಟಲೇ ಬಾಯ್ತುಂಬ ಮಾತನಾಡಿದರು ’ ಕುವೆಂಪು ಅವರು ಬರೆದ ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು ’.ಎಂದು ಬರೆಯುವ ಅನೇಕ ದಶಕಗಳ ಮೊದಲೇ  ಅದರಂತೆ ಬಾಳಿ ಬದುಕಿದ ಹಿರಿಯಜೀವ ಅವರು.ಅವರ ಅಪಾರ ಕನ್ನಡಾಭಿಮಾನದ ಪ್ರತೀಕ. ಅದಕ್ಕಾಗಿಯೇಅವರು ಗತಿಸಿ ನೂರಾರು ವರ್ಷಗಳಾದರೂ ಕನ್ನಡಿಗರಿಗೆ ಪ್ರಾಥಃಸ್ಮರಣೀಯರಾದ ಅನೇಕ ಮಹನೀಯರಲ್ಲಿ  ಅವರೂ ಒಬ್ಬರಾಗಿರುವುರು.

Tuesday, October 23, 2012

ಶುಭಾಶಯಗಳು

                                                               



                                         ಎಲ್ಲರಿಗೂ ದಸರಾಹಬ್ಬದ ಶುಭಾಶಯಗಳು

     
                                          ಬನ್ನಿ  ತೆಗೆದುಕೊಂಡು ಬಂಗಾರದ ಹಾಗಿರಿ

ಹಬ್ಬದ ವಿಶೇಷಕ್ಕೆ ನಮ್ಮ ಮೇಲು ಕೋಟೆಯೊಂದಿಗೆ ಸಂಬಂಧವಿರುವ ಶ್ರೀ ಪೆರಂಬೂದೂರಿನಬಗೆಗಿನ ಲೇಖನ ಓದಲು ಕೆಳಗಿನ ಕೊಂಡಿಯನ್ನು ಕ್ಲಿಕ್‌ಮಾಡಿ-

                                             http://appaaji.blogspot.in/

Thursday, October 18, 2012

ಐತಿಹ್ಯ ಮತ್ತು ಇತಿಹಾಸ




ಇತ್ತೀಚೆಗೆ ಶೃಂಗೇರಿಯಲ್ಲಿ ನಡೆದ ಕರ್ನಾಟಕ ಇತಿಹಾಸ ಸಮ್ಮೇಳನದಲ್ಲಿ ಐತಿಹ್ಯದ ವಿಷಯ ವ್ಯಾಪಕ ಚರ್ಚೆಗೆ ಒಳಗಾಯಿತು.ಒಬ್ಬ ಪ್ರತಿನಿಧಿ “ ಶಾಸನ ಆಧಾರಿತ ಐತಿಹ್ಯಗಳು “  ಎಂಬ ಸಂಪ್ರಬಂಧ ಮಂಡಿಸಿದರು. ಆಗ ಗಂಭೀರ ಚರ್ಚೆಯಾಗಿ ಪ್ರಬಂಧದ ಶೀರ್ಷಿಕೆಯನ್ನೆ ಬದಲಾಯಿಸಲು ಸಲಹೆ ಮಾಡಲಾಯಿತು. ಕಾರಣ ಐತಿಹ್ಯವನ್ನು ಇತಿಹಾಸಕ್ಕೆ ಏಕ ಮೇವ ಆಧಾರವಾಗಿ ಪರಿಗಣಿಸುವ ಹಾಗಿಲ್ಲ. ಅದು ಇತಿಹಾಸವಲ್ಲ. ಅದುಬರಿ ಬಾಯಿ ಮಾತಿನಿಂದ ಪ್ರಚಲಿತವಾದ ವಿಚಾರ..ಅದಕ್ಕೆ ಖಚಿತವಾದ ಶಾಸನ, ಲಿಖಿತ ಹಾಗೂ ನಾಣ್ಯದ ಆಧಾರವಿದ್ದರೆ ಅದನ್ನು ಐತಿಹ್ಯ ಎನ್ನಲಾಗದು ಎಂದು ಇತಿಹಾಸ ತಜ್ಞರು ಅಭಿಪ್ರಾಯ ವ್ಯಕ್ತ ಪಡಿಸಿದರು. ಇತಿಹಾಸದಲ್ಲಿ ಐತಿಹ್ಯ ಇರಬಹುದು ಆದರೆ ಐತಿಹ್ಯವು ಇತಿಹಾಸವಲ್ಲ .ಐತಿಹ್ಯವು ಸತ್ಯವಾಗಿರಬಹುದು ಇಲ್ಲವೆ ಕಪೋಲ ಕಲ್ಪಿತವಾಗಿ ಒಬ್ಬರಿಂದ ಒಬ್ಬರಿಗೆ ಹರಡುವಾಗ ಉತ್ಪ್ರೇಕ್ಷೆಗಳಿಂದ ಕೂಡಿದ ಮಾಹಿತಿಯಾಗಬಹುದು. ಬಹುತೇಕವಕ್ಕೆ ಪೌರಾಣಿಕ ಇಲ್ಲವೆ ಜಾನಪದ ಹಿನ್ನೆಲೆ ಇರುತ್ತವೆ
 ಬಹಳಷ್ಟು ಸ್ಥಳ ಪುರಾಣಗಳು ಇವೆ ಮಾದರಿಯವು. ಅದೆನೋ ನಮ್ಮಲ್ಲಿ ಒಂದು ವಾಡಿಕೆ ಬಂದಿದೆ. ಯಾವುದೆ ಪ್ರಸಿದ್ಧ ಸ್ಥಳವಾದರೂ ರಾಮಾಯಣ ಅಥವ ಮಹಾಭಾರತಕ್ಕೆ ಒಂದಿಲ್ಲೊಂದು ರೀತಿಯ ಸಂಪರ್ಕವಿದೆ ಎಂದು ಐತಿಹ್ಯವಿರುವುದು.  


ಶೃಂಗೇರಿ  ಪಟ್ಟಣದ ಮಧ್ಯದಲ್ಲಿರುವ ಮಲ್ಲಿಕಾರ್ಜುನ ಬೆಟ್ಟಕ್ಕೆ ಭೇಟಿ ನೀಡಿದೆ. ಅದು ಅಂಥಹ ದೊಡ್ಡ ಬೆಟ್ಟವೇನೂ ಅಲ್ಲ. ಬರಿ ನೂರಕ್ಕೂ ತುಸು ಹೆಚ್ಚಿನ ಸಂಖ್ಯೆಯ ಮೆಟ್ಟಿಲುಗಳು . ಬೆಟ್ಟದ ಮೇಲೆ ಸುಂದರ ಈಶ್ವರ ದೇವಾಲಯ.  ಪೂಜೆ ನಡೆಯುತ್ತಿರುವಾಗ ಒಬ್ಬ  ವಯೋ ವೃದ್ಧರು ದೇವರ ಮುಂದೆ ನಿಂತು,  “ಸ್ವಾಮಿ ನಿನ್ನೆ ಕಿಗ್ಗಕ್ಕೆ ಹೋಗಿ ಬಂದೆ ಅಲ್ಲಿ ನಿನ್ನ ಮಗ ಸೊಸೆ  ಕ್ಷೇಮವಾಗಿದ್ದಾರೆ” ಎನ್ನುತ್ತಾ ಕೈ ಮುಗಿದು ನಮಸ್ಕಾರ ಹಾಕಿದ್ದು ನನಗೆ ಕುತೂಹಲ ಮೂಡಿಸಿತು. ಅವರು ದೇವಸ್ಥಾನದ ಹೊರಗೆ ಬರುವವರೆಗೆ ಕಾದು ನಂತರ ಮಾತನಾಡಿಸಿದೆ.
ಸ್ವಾಮಿ  ಅದೇನು ಮಗ, ಸೊಸೆ ಚೆನ್ನಾಗಿದ್ದಾರೆ . ಎಂದು ದೇವರಲ್ಲಿ ನಿವೇದನೆ ಮಾಡಿದಿರಲ್ಲ? ಯಾರ ಮಗ ?  ಯಾರ   ಸೊಸೆ. ಅದಕ್ಕೂ ಕಿಗ್ಗಕ್ಕೂ ಏನು ಸಂಬಂಧ ದಯಮಾಡಿ ತಿಳಿಸುವಿರಾ? ಎಂದು ವಿನಂತಿ ಮಾಡಿಕೊಂಡೆ.
ಅವರು ನೀವು ಈ ಭಾಗದವರಲ್ಲವೋ?  ಎಂದು ಪ್ರಶ್ನಿಸಿದರು. ಅಲ್ಲ , ಎಂದೆ.  ಯಾವ ಊರು?  ಎಂಧಾಗ ನಾನು ಹಂಪೆಯ ಹತ್ತಿರದವನು ಎಂದೆ.
 ಅದಕ್ಕೆ ನಿಮಗೆ ಇಲ್ಲಿನ ಸ್ಥಳದ ಮಹತ್ವ ಗೊತ್ತಿಲ್ಲ. ಇದು ಇಲ್ಲಿನ  ಐತಿಹ್ಯ. ಈ ಬೆಟ್ಟ  ವಿಭಾಂಡಕ ಮುನಿಯ ವಾಸ ಸ್ಥಳವಾಗಿತ್ತು. ಅವರು ನಿತ್ಯ ಬೆಟ್ಟದಿಂದ ಇಳಿದು ತುಂಗೆಯಲ್ಲಿ ಸ್ನಾನ ಮಾಡಿ ಮತ್ತೆ ಇಲ್ಲಿ ಬಂದು ತಪಸ್ಸು ಮಾಡುತಿದ್ದರು. ಒಂದು ದಿನ ಅವರ ರೇತಸ್ಸು ನೀರಿನಲ್ಲಿ ವಿಸರ್ಜನೆಯಾದಾಗ  ಅಲ್ಲೊಂದು ಹೆಣ್ಣು ಜಿಂಕೆ ನೀರಿನ ಜೊತೆ ಅದನ್ನು ಕುಡಿಯಿತು. ಅದರ ಫಲವಾಗಿ ಅದು ಒಂದು ಗಂಡು ಮಗುವಿಗೆ ಜನ್ಮ ನೀಡಿತು. ಆ ಮಗುವಿನ ತಲೆಯಲ್ಲೆ ಒಂದು ಪುಟ್ಟ ಕೋಡಿತ್ತು. ಅದರಿಂದ ಅವನನ್ನು ಋಷ್ಯ ಶೃಂಗ ಎಂದು ಕರೆದರು. ಅವನು ಮಹಾಮುಗ್ದ. ಸದಾ ಜಪ,ತಪದಲ್ಲಿ ಮಗ್ನನಾದ ಜ್ಞಾನಿ . ಲೋಕಾಚಾರವನ್ನೆ ಅರಿಯದೆ ತನ್ನ ಪಾಡಿಗೆ ತಾನು ತಪಸ್ಸು ಮಾಡಿಕೊಂಡು ಇಲ್ಲಿಗೆ ಇಪ್ಪತೆಂಟು ಮೈಲುದೂರದ ಕಿಗ್ಗದಲ್ಲಿ  ನೆಮ್ಮದಿಯಿಂದ ಇದ್ದ. ಆ ಸಮಯದಲ್ಲಿ ರೋಮಪಾದನೆಂಬ ಅರಸನ ರಾಜ್ಯದಲ್ಲಿ ಭೀಕರ ಬರ ಕಾಣಿಸಿ ಕೊಂಡಿತು. ಮಳೆಯೆ ಇಲ್ಲದಾಯಿತು. ಏನು ಮಾಡ ಬೇಕೆಂದು ತೋಚದೆ ಪ್ರಾಜ್ಞರನ್ನು  ವಿಚಾರಿಸಿದಾಗ  ಋಷ್ಯ ಶೃಂಗ ಮುನಿ  ಆ ನಾಡಿನಲ್ಲಿ ಕಾಲಿಟ್ಟರೆ ಮಳೆ ಬರುವುದೆಂದು ನುಡಿದರು. ಅದಕ್ಕೆ ಅವನು ರಾಜಕುಮಾರಿಯಾದ ತನ್ನ ಮಗಳನ್ನೆ ಅವರನ್ನು ಕರೆತರಲು ನೇಮಿಸಿದ. ಅವಳು ಅವರನ್ನೆ ಮದುವೆಯೂ ಆದಳು. ಅವರಿಬ್ಬರೂ ಕಿಗ್ಗದ ಪ್ರದೇಶದಲ್ಲಿ ಸಂಸಾರ ನಡೆಸಿದರು. ಅದಕ್ಕೆ ಅಲ್ಲಿರುವ ಲಿಂಗದ ಮೇಲೆ ಶೃಂಗವಿದೆ. ಇಲ್ಲಿಯೇ ವಿಂಭಾಂಡಕ ಮುನಿ ಐಕ್ಯವಾದರು. ಅವರೆ ಪೂಜಿಸಿದ ಲಿಂಗವೆ ಮಲಪರಿಹಾರಕ ಕೇಶ್ವರ ಎಂದು ಪ್ರಸಿದ್ಧಿ ಪಡೆದಿದೆ. ಆದ್ದರಿಂದ ಮೊದಲು ಕಿಗ್ಗಕ್ಕೆ ಹೋಗಿ ದರ್ಶನ ಪಡೆದು ನಂತರ ಇಲ್ಲಿ ಬಂದು ಅವರ ಕುಶಲ ಸಮಾಚಾರ ಅರುಹಿದರೆ, ಸಂಪ್ರೀತನಾಗಿ ಕೇಳಿದ ವರ ನೀಡುವರೆಂಬ ಪ್ರತೀತಿ  ಇದೆ. ಎಂದು ವಿವರಿಸಿದರು ಮಾನವ ಸಂಬಂಧಗಳು ಹೇಗೆ ಪೌರಾಣಿಕ ಐತಿಹ್ಯವಾದ ಬಗೆ ನನಗೆ ಎಂದು ಅಚ್ಚರಿಯಾಯಿತು.. ಅವರ ಹೇಳಿದ ಕಥೆ ನನಗೆ ಚಿಂತನೆಗೆ ಆಹಾರವಾಯಿತು.

ನಮ್ಮ ಪುರಾಣ ಇತಿಹಾಸಗಳೆಲ್ಲ ವಿಭಿನ್ನ ಸಂತಾನ ಪ್ರಾಪ್ತಿಯ ವಿಧಾನ ಕುರಿತಾದ ವಿವರಗಳಿಂದ ಕೂಡಿವೆ. ರಾಮಾಯಣದಲ್ಲಿ ರಾಮ,ಲಕ್ಷ್ಮಣ, ಭರತ ಮತ್ತು ಶತೃಜ್ಞರು ಯಾಗದ ಫಲವಾಗಿ ದೊರೆತ ಪ್ರಸಾದ ಸೇವನೆಯಿಂದ ಜನಿಸಿದರು, ಕರ್ಣ ಕುಂತಿದೇವಿಗೆ ಕಿವಿಯಿಂದ ಸೂರ್ಯನ ವರಪ್ರಸಾದದಿಂದ ಜನಿಸಿದವ,. ಪಾಂಡವರು ಐವರು ದೇವರ ವರ ಸಂಜಾತರು, ಕೌರವರು ಪಾತವಾದ  ಭ್ರೂಣವನ್ನು ತುಪ್ಪ ತುಂಬಿದ ಕೊಡದಲ್ಲಿ ಅವಧಿ ಪೂರ್ಣವಾಗುವವರೆಗೆ ಇರಿಸಿದ  ನಂತರ ಜನನವಾದವರು, ದ್ರೋಣರು ಕುಂಭ ಸಂಭವರು, ದ್ರೌಪತಿ ಅಗ್ನಿಸಂಜಾತೆ.ಹೀಗೆ ಹುಡುಕುತ್ತಾ ಹೋದರೆ  ನೈಸರ್ಗಿಕವಲ್ಲದ ಹುಟ್ಟಿನ ವಿವರ ಸಾಕಷ್ಟು ಸಿಗುತ್ತದೆ. ಇದೆಲ್ಲ ಅನೇಕ ಜಿಜ್ಞಾಸೆಗೆ ಕಾರಣವಾಗಿದೆ. ಇದು ಬರಿ ಸಾಂಕೇತಿಕವಾಗಿದೆಯೋ  ಅಥವ ಒಂದು ರೀತಿಯಲ್ಲಿ ಇಂದಿನ ಪ್ರನಾಳ ಶಿಶು, ಕ್ಲೌನಿಂಗ್‌ ಮತ್ತು ಇತ್ತೀಚೆಗೆ  ಲಂಡನ್ನನಲ್ಲಿ ಭಾರತೀಯ ಸಂಜಾತೆ ವೈದ್ಯೆಯೊಬ್ಬಳು ವೀರ್ಯದ ಸಹಾಯವಿಲ್ಲದೆ ಮಗುವಿನ ಜನನಸಾಧ್ಯತೆ ಇದೆ, ಎಂದು ಸಿದ್ಧ ಮಾಡಿರುವುದು  ಈ ಮೊದಲೆ ಇದ್ದ ಜ್ಞಾನದ ಮುಂದುವರಿಕೆಯಾಗಿ ಇರಬಹುದೆ? ಎಂಬಅನುಮಾನ ಹುಟ್ಟಿಸುತ್ತದೆ.
ಇನ್ನು ಸ್ಥಳ ಪುರಾಣಗಳನ್ನು ಗಮನಿಸಿದರೆ ಅವೂ ಕುತೂಹಲ ಹುಟ್ಟಿಸುತ್ತವೆ. ಶೃಂಗೇರಿಯಲ್ಲಿ ಶಂಕರರು ಶಾರದಾಪೀಠ ಸ್ಥಾಪನೆ ಮಾಡಲು ಇರುವ ಐತಿಹ್ಯ ಆಸಕ್ತಿದಾಯಕವಾಗಿದೆ. ಅವರು ಉತ್ತರ ಭಾರತದಿಂದ ಬಂದು ತುಂಗೆಯ ತಟದಲ್ಲಿ ತಪಸ್ಸು ಮಾಡುತಿದ್ದಾಗ ನದಿಯ ದಡದಲ್ಲಿ ತುಂಬುಗರ್ಭಿಣಿಯಾದ ಕಪ್ಪೆಗೆ ಹಾವು ಹೆಡೆಬಿಚ್ಚಿ ಬೆರಳು ನೀಡುವುದನ್ನು ನೋಡಿದರಂತೆ. ಅದರ ಶಿಲ್ಪವೂ ಅಲ್ಲಿ ಇದೆ. ಇಲ್ಲಿ ಆಜನ್ಮ ಶತೃವಿಗೂ ಕಷ್ಟಕಾಲದಲ್ಲಿ  ರಕ್ಷಣೆ  ನೀಡುವ ಗುಣಕ್ಕೆ  ಕಾರಣ ಈ ಸ್ಥಳದ ಮಹಿಮೆ ಅದಕ್ಕೆ ಶಂಕರಾಚಾರ್ಯರು ಇಲ್ಲಿಯೆ ಮಠ ಸ್ಥಾಪಿಸಿದರು ಎಂಬ ಕಥೆ ಇದೆ.. ಇದು ಪೌರಾಣಿಕ ಐತಿಹ್ಯ. ಬಾಯಿಂದ ಬಾಯಿಗೆ ಹರಿದು ಈಗ ನಂಬಿಕೆಯ ರೂಪ ಪಡೆದಿದೆ.
 ಇದೆರೀತಿಯಲ್ಲಿ ನಮ್ಮ ಹಂಪೆಯಹತ್ತಿರ ಹಕ್ಕ ಬುಕ್ಕರು ಬೇಟೆಗೆ ಹೋದಾಗ  ಬೇಟೆ ನಾಯಿಗಳಿಗೆ ಅಂಜಿ ಓಡುತಿದ್ದ ಮೊಲವೊಂದು ತುಸು ದೂರ ಹೋದ ನಂತರ ತಿರುಗಿನಿಂತು ನಾಯಿಗಳನ್ನು ಎದುರಿಸಿ ಕಾದಾಡಲು ಮೊದಲು ಮಾಡಿತಂತೆ. ಈ ಅಚ್ಚರಿಯನ್ನು ಕಂಡ ಅವರು ಹಕ್ಕ ಬುಕ್ಕರು ತಮ್ಮ ಗುರುಗಳಾದ ವಿದ್ಯಾರಣ್ಯರಿಗೆ ತಿಳಿಸಿದರು. . ಈ ವಿಚಿತ್ರಕ್ಕೆ  ಕಾರಣ ಅದು ಭೂಮಿಯ ಗುಣ ಇದು ವೀರಭೂಮಿ.  ಇಲ್ಲಿನ ಅತಿಮೃದು ಸ್ವಭಾವದವರೂ ಸಮಯ ಬಂದರೆ ದೃಢತೆಯಿಂದ ಕಾದಾಡಬಲ್ಲರು . ಇದೆ ವಿಜಯ ನಗರ ಸಾಮ್ರಾಜ್ಯ  ಸ್ಥಾಪನೆಗೆ ಸೂಕ್ತ ಸ್ಥಳ ಎಂದು ಅಲ್ಲಿಯೆ ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಮಾಡಿಸಿದರು  ಎಂಬ ಐತಿಹ್ಯವೂ ಪ್ರಚಲಿತವಿದೆ.
 ಹಂಪೆಯ ಚಕ್ರ ತೀರ್ಥದ ಹತ್ತಿರ ಒಂದುಗುಹೆ ಇದೆ. ಅದರಿಂದ ಸುಮಾರು ದೂರದ ವರೆಗ ಕಲ್ಲಿನ ಮೇಲೆ ಸೆರಗಿನೋಪಾದಿಯ ಗುರುತು ಕಾಣುತ್ತದೆ. ರಾವಣನು ಸೀತೆಯನ್ನು ಅಪಹರಿಸಿದಾಗ ಅವಳ ಸೆರಗಿನಿಂದ ಮೂಡಿದ ಗುರುತು ಅದು.  ಅದಕ್ಕೆ ಅದನ್ನು ಸೀತೆಯ ಸೆರಗು ಎನ್ನುವರು. ಮಾಲ್ಯವಂತ ಬೆಟ್ಟದ ಮೇಲೆ  ಎರಡು ದೊಣೆಗಳಿವ. ಅದರಲ್ಲಿನೀರು ಬತ್ತುವುದೆ ಇಲ್ಲ. ಅವು ರಾಮಲಕ್ಷ್ಮಣರು ತಮ್ಮ ತಂದೆಯ ಶ್ರಾಧ್ಧದ ಸಲುವಾಗಿ ನೀರು ಬೇಕಾದಾಗ ಬಾಣ ಬಿಟ್ಟು ಕಲ್ಲಿನಲ್ಲಿ ನೀರು ಬರುವಂತೆ ಮಾಡಿದರು ಎನ್ನುವುದು ಒಂದು ಐತಿಹ್ಯ.
         ಅದೆ ರೀತಿ ವನವಾಸದ ಸಮಯದಲ್ಲಿ  ರಾಮಲಕ್ಮಣ ಸೀತೆಯರು ಹೋಗುತಿದ್ದಾಗ  ರಾಮನು ತಮ್ಮ ಲಕ್ಮಣನಿಗೆ , ತಮ್ಮಾ ಲಕ್ಷ್ಮಣಾ , ಬಾಯಾರಿಕೆಯಾಗಿದೆ,  ನೀರು ತಾ, ಎಂದರೆ ವಿನಯ ಮೂರ್ತಿಯಾದ ಲಕ್ಷ್ಮಣನು , ಬೇಕಾದರೆ ನೀನೆ ಹೋಗಿ ಕುಡಿ ಎಂದು ಬಿಮ್ಮನೆ ಕುಳಿತಿದ್ದನು. ಅಣ್ಣನ  ಮೇಲಿನ ಪ್ರೀತಿ ,ಗೌರವದಿಂದ ಮಡದಿಯನ್ನು ತೊರೆದು ಕಾಡಿಗೆ ನೆರಳಿನಂತೆ ಹಿಂಬಾಲಿಸಿರುವ ಲಕ್ಷ್ಮಣನ ಈ ನಡೆ ರಾಮನಿಗೂ ಅರೆ ಕ್ಷಣ ಅಚ್ಚರಿ ಮೂಡಿಸಿತು. ಮರು ಮಾತನಾಡದೆ ಅಲ್ಲಿಂದ ತುಸು ದೂರ ಹೋದರು. ನಂತರ ಲಕ್ಷ್ನಣನು ಅಣ್ಣಾ !, ನಿನಗೆ ಆಯಾಸವಾದಂತಿದೆ. ತುಸು ವಿಶ್ರಮಿಸು, ನೀರು ತರುವೆ, ಎಂದು ವಿನಯದಿಂದ ಹೇಳಿದಾಗ. ರಾಮನು ಮುಗಳ್ನಕ್ಕನಂತೆ. ಅವನಿಗೆ ಆಗಲೆ ತಿಳಿದಿತ್ತು ತಮ್ಮನ ಪೆಡಸಿನ ಮಾತಿಗೆ ಕಾರಣ ಆ  ಸ್ಳಳದ ಪ್ರಭಾವ ಎಂದು.ಇದು ಪೌರಾಣಿಕ ಐತಿಹ್ಯ.
 ಈ  ಎಲ್ಲ ನನಗೆ ಚಿಂತನೆಗೆ ಹಚ್ಚಿತು. ಶೃಂಗೇರಿಯಿದ್ದ ಸ್ಥಳದಲ್ಲಿ ಮಾನವ ಮತ್ತು ಪಶುಪಕ್ಷಿಗಳು ಸಾಮರಸ್ಯದಿಂದ ಬಾಳುತಿದ್ದವು.  ಮಾನವ ಶಿಶುವನ್ನು ಒಂದು ಜಿಂಕೆಯ  ತಾಯಿಯೋಪಾದಿಯಲ್ಲಿ ನೋಡಿಕೊಂಡಿರುವುದೆ ಈ ಋಷ್ಯಶೃಂಗರ  ಕಥೆಯ ಉಗಮಕ್ಕೆ ಕಾರಣವಾಗಿರಬಹುದೆ? ಎನಿಸಿತು..
ಇನ್ನುಹಾವುಕಪ್ಪೆಯ ರಕ್ಷಣೆಗೆ ಧಾವಿಸಿರುವುದು ಸಹಾ ನೆಲ ಮತ್ತು ನೀರಿನ ಗುಣವೆ ಆಗಿರಬಹುದು.. ಆದು ಈಗಲೂ ಅಲ್ಲಿನ ಜನರ ಸುಸಂಸ್ಕೃತ ನಡವಳಿಕೆ ಕಂಡಾಗ  ಅದು ಸಹಜವೇನೋ ಅನಿಸಿದೆ.
ಈ ರೀತಿಯ ಐತಿಹ್ಯಗಳು ಎಲ್ಲ ಪುಣ್ಯಕ್ಷೇತ್ರಗಳಲ್ಲೂ ಕೇಳಿ ಬರುತ್ತವೆ. ತಿರುಪತಿಯಲ್ಲಿ ಮೊದಲು ವರಾಹ ಸ್ವಾಮಿದರ್ಶನ ಮಾಡಿದರೆ ಮಾತ್ರ ಫಲ ಪ್ರಾಪ್ತಿ , ಎನ್ನುವ ನಂಬಿಕೆ, ಧರ್ಮಸ್ಥಳದಲ್ಲಿ ಅಪ್ಪಣ್ಣನನ ದರ್ಶನ. ಮಂತ್ರಾಲಯದಲ್ಲಿ ಮಂಚಾಲಮ್ಮನ ದರ್ಶನ ಮಾಡಿಕೊಳ್ಳದಿದ್ದರೆ ಫಲ ಪ್ರಾಪ್ತಿಯಾಗದು ಎನ್ನುವ ಸಂಪ್ರದಾಯ ಆಸ್ಥಳದ  ಮೂಲನಿವಾಸಿಗಳಿಗೂ ಆದ್ಯತೆ ನೀಡ ಬೇಕು ಎನ್ನುವ ಆಶಯದ ಪ್ರತೀಕ ಇರಬಹುದೆ ಎನಿಸಿತು.
ಹಂಪೆಯಲ್ಲಿ ವಿರೂಫಕ್ಷೇಶ್ವರನ ದರ್ಶನ ಮಾಡಿದ ಮೇಲೆ ಚಂಡಿಕೇಶ್ವರನಿಗೆ ಚಪಾಳೆ ಹೊಡೆದು ಕೈ ಮುಗಿದು, ಬಟ್ಟೆಯದಾರದ ತುಂಡನ್ನು ಕಿತ್ತಿ ಏರಿಸುವುದ ಸಹಾ ಇದೇ ರೀತಿಯ ಆಚರಣೆ ಗಮನಿಸಿದ್ದೆ. ಬಹುತೇಕ ಪ್ರಸಿದ್ಧ ಶಿವಾಲಯಗಳ ಆಸು ಪಾಸಿನಲ್ಲಿ ಚಂಡಿಕೇಶ್ವರನ ಚಿಕ್ಕ ಗುಡಿ ಇದ್ದೆ ಇರುವುದು ಗಮನಕ್ಕೆ ಬಂದಿತು. ಶಿವನು ಲಿಂಗಾಕಾರ ದಲ್ಲಿರುವುದರಿಂದ ಮತ್ತು  ಧ್ಯಾನ ಮಗ್ನ ನಾಗಿರುವುದರಿಂದ ಭಕ್ತರು ಬಂದಿರುವುದನ್ನು ಗಮನಿಸಿರುವುದಿಲ್ಲ ಅದಕ್ಕೆ ಚಂಡಿಕೇಶ್ವರನ ಹತ್ತಿರ ವರದಿ ಮಾಡಿಕೊಂಡರೆ ಅವನು ತಿಳಿಸುವನು ಎಂಬ ಐತಿಹ್ಯ..
ಸೊಂಡೂರಿನ ಕುಮಾರಸ್ವಾಮಿಯ ಕುರಿತಾದ ಐತಿಹ್ಯವಿದೆ ಒಂದಿದೆ.ಕುಮಾರಸ್ವಾಮಿಯದರ್ಶನಕ್ಕೆ ಇತ್ತೀಚಿನ ಮಹಿಳೆಯರಿಗೆ ಅವಕಾಶವೆ ಇರಲಿಲ್ಲ.ಅದಕ್ಕೆ ಕಾರಣ ಪಾರ್ವತಿಯ ಮಗನಿಗೆ ಮದುವೆ ಮಾಡಲು  ಕನ್ಯಾಕುಮಾರಿಯನ್ನು ಆಯ್ಕೆ ಮಾಡಿ ಬಂದು ಮಗನಿಗೆ ಅವಳ ಸೌಂದರ್ಯವನ್ನು ಅತಿಶಯವಾಗಿ ವರ್ಣಿಸಿದಳು.. ಕುಮಾರನು ಕುತೂಹಲದಿಂದ ಅವಳು ಯಾರ ಹಾಗಿದ್ದಾಳೆ ? ಎಂದು ಕೇಳಿದ. ಅದಕ್ಕೆ ಉತ್ಸಾಹದ ಭರದಲ್ಲಿ ತಾಯಿ ಅವಳು  ಖೂಬೆ ಖೂಬು ನನ್ನ ಹಾಗೆ ಇದ್ದಾಳೆ. ಅತಿಲಾವಣ್ಯ ವತಿ ಎಂದು ತುಸು ಗರ್ವದಿಂದಲೆ ಹೇಳಿದಳು. ಅದಕ್ಕೆ ಕಾರ್ತಿಕೇಯನು ಆ ಹುಡುಗಿ ನಿನ್ನ ಹಾಗಿದ್ದರೆ ತಾಯಿಯ ಸಮಾನ , ಮದುವೆ ಯಾಗಲಾರೆ ಎಂದು ನಿರಾಕರಿಸಿದ.ಕುಪಿತಳಾದ ಪಾರ್ವತಿ ಎಲ್ಲ ಹೆಣ್ಣುಗಳಲ್ಲೂ ನನ್ನ ಅಂಶ ಇದ್ದೆ ಇರುವುದು ಎಂದಾಗ ನಾನು ಮದುವೆಯನ್ನೆ ಆಗುವುದಿಲ್ಲ ಎಂದು ನಿರ್ಧಾರ ಮಾಡಿದ. ಅಷ್ಟೆ ಅಲ್ಲ ಹೆಣ್ಣಿನ ದರ್ಶನವೆ ಬೇಡ ಎಂದು ನಿರ್ಧರಿಸಿದ. ಅದಕ್ಕೆ ಮಹಿಳೆಯರಿಗೆ ಕುಮಾರ ಸ್ವಾಮಿಯ ದರ್ಶನ ನಿಷೇಧವಿತ್ತು ಜೊತೆಗೆ ಹೆಂಗಸರು ನೋಡಿದರೆ ರಕ್ತ ಕಾರಿ ಸಾಯುವರು ಎಂಬ ನಂಬಿಕೆಯನ್ನೂ ಹಬ್ಬಿಸಿದರು. ಪರಿಣಾಮವಾಗಿ ಶತಮಾನಗಳವರೆಗೆ ಅದನ್ನು ಪಾಲಿಸಲಾಯಿತು. ಆದರೆ ಕೆಲವೆ ವರ್ಷಗಳ ಹಿಂದೆ ವಿಚಾರವಂತ ಮಹಿಳೆಯರು ಚಳುವಳಿ ಮಾಡಿ ದೇವರ ದರ್ಶನ ಪಡೆದರು.ನಂಬಿಕೆ ಬರಿ ಮಿಥ್ಯ ಎಂದು ಸಿದ್ಧ ಮಾಡಿದರು. ಇಂದಿಗೂ ಆ ಮಹಿಳೆಯರು ಆರಾಮಾಗಿ ಇದ್ದಾರೆ. ಅವರ ಪ್ರಯತ್ನದ ಫಲವಾಗಿ ಈಗ ಎಲ್ಲ ಮಹಿಳೆಯರಿಗೂ ದರ್ಶನದ ಅವಕಾಶ ಲಭಿಸಿದೆ.
ಸೊಂಡೂರಿನ ಹೆಸರಾಂತ ಭಸ್ಮದ ಬಗೆಗೂ ಒಂದು ಐತಿಹ್ಯವಿದೆ. ಅದರ ಪ್ರಕಾರ ಅಲ್ಲಿ ದೊರೆವ ಭಸ್ಮ ಪರ್ವತಿಯ ಹಾಲು.  ಕುಮಾರಸ್ವಾಮಿ ಮದುವೆಯಾಗಲು ನಿರಾಕರಿಸಿದಾಗ, ಪಾರ್ವತಿಯು ಮಗನಾಗಿ ತಾಯಿಯ ಮಾತು ಮೀರುವೆಯಾದರೆ ನಾನು ಹಾಲುಕುಡಿಸಿ ನಿನ್ನನ್ನು ಬೆಳಸಿದ್ದು ವ್ಯರ್ಥವಾಯಿತು ಎಂದು ಹಲುಬಿದಳು. ಮನನೊಂದ ಕುಮಾರಸ್ವಾಮಿ ,ನನಗೆ ಹಾಲಿನ ಹಂಗೂ ಬೇಡ ಎಂದು ಕುಡಿದ ಹಾಲನ್ನೆಲ್ಲ ಕಕ್ಕಿ ಕೊಂಡ. ಅದೆ ಹಳ್ಳವಾಗಿ ಹರಿದು ಭಸ್ಮದ ಗುಡ್ಡ ವಾಯಿತು. ಕೊನೆಕೊನೆಗೆ ಹಾಲಿನ ಜೊತೆ ರಕ್ತ ಬರಲುಶುರುವಾದಾಗ ತಾಯಿ ಅವನನ್ನು ಕಾಡಿ ಬೇಡಿ ವಾಂತಿ ಮಾಡಿಕೊಳ್ಳದಂತೆ ತಡೆದಳಂತೆ. ಅದಕ್ಕೆ ಕೆಲಭಾಗದಲ್ಲಿ ಭಸ್ಮದ ಜೊತೆ ಕೆಂಪುಗೆರೆಗಳೂ ಕಾಣುತ್ತವೆ. ಸಂಡೂರಿನ ನಿರ್ಧಿಷ್ಟ ಭಾಗದಲ್ಲಿ ವರ್ಷಕೊಮ್ಮೆಮಾತ್ರ ನಿಗದಿತ ಪ್ರದೇಶದಲ್ಲಿ  ಅಗೆದರೆ ಭಸ್ಮ ದೊರೆಯುವುದು. ಅದನ್ನು ಸಂಗ್ರಹಿಸಿದು ಮತ್ತೆ ಆಭಾಗವನ್ನು ಮಣ್ಣನಿಂದ ಮುಚ್ಚುವರು . ಮುಂದಿನ ವರ್ಷದ ತನಕ ಅದನ್ನು ತೆರೆಯುವುದೆ ಇಲ್ಲ ಎಂಬ ಪ್ರತೀತಿ ಇದೆ.ಭಸ್ಮವು ಅಲ್ಯಮ್ಯುನಿಯಂನ ಅದಿರು , ಅದರಲ್ಲಿ ಮೆಂಗನೀಸ್‌ ಅಂಶವಿದ್ದರೆ ಕೆಂಪುಕಾಣುತ್ತದೆ ಎಂಬುದ ವೈಜ್ಞಾನಿಕ ಸತ್ಯ.
ಅದೂ ಅಲ್ಲದೆ ಕುಮಾರಸ್ವಾಮಿಯು ತನ್ನ ದರ್ಶನಕ್ಕೆ ಬರುವವರಿಗೆ ಅವರಷ್ಟೆ ಎತ್ತರವಿರುವಂತೆ ಗೋಚರಿಸುತ್ತಾನೆ. ಚಿಕ್ಕವರಿಗೆ ಚಿಕ್ಕವನಾಗಿ ಪ್ರೌಢರಿಗೆ ಪ್ರೌಢನಾಗಿ ಕಾಣುವನು ಎಂದು ಹೇಳುವರು ಅವನ ಎತ್ತರವನ್ನುನಿಖರವಾಗಿ ಅಳೆಯುವುದು ಕಷ್ಟದ ಕೆಲಸವೇನಲ್ಲ. ಆದರೆ ಜನರ ನಂಬಿಕೆಗೆ.ಭಂಗ ತರುವ ಅಗತ್ಯ ಕಾಣುತ್ತಿಲ್ಲ.
ಕುಮಾರಸ್ವಾಮಿಯಿಂದ  ತಿರಸ್ಕೃತಳಾದ ಕನ್ಯಾಕುಮಾರಿಯೂ ಮದುವೆಯಾಗದೆ ಹಾಗೆ ಚಿರಕನ್ಯಯಾಗಿ ಉಳಿದಳು, ಎನ್ನುವರು.
ಆದರೆ ಕೆಲವು ಪುರಾಣಗಳ ಪ್ರಕಾರ ಕಾರ್ತಿಕೇಯನಿಗೆ ಸತಿಯರಿದ್ದಾರೆ.
ಹಂಪೆಯ ವಿಜಯ ವಿಠಲದೇವಸ್ಥಾನದಲ್ಲಿ ಕಲ್ಲು ತೇರು ಇದೆ. ಮತ್ತು ಅಲ್ಲಿ ಒಂದು ಕಲ್ಲಿನ ಹುಂಜವೂ ಹಿಂದೆ  ಇತ್ತಂತೆ. ಈಗ ಅದನ್ನು ಯಾರೋ ಅಪಹರಿಸಿದ್ದಾರೆ. ಕಲ್ಲು ಕೋಳಿ ಕೂಗಿದಾಗ ಕಲ್ಲುತೇರು ಚಲಿಸಿದಾಗ ಪ್ರಪಂಚದಲ್ಲಿ ಪ್ರಳಯವಾಗುವುದು ಎಂಬ ಮಾತನ್ನು ಹಳಬರು ನಂಬುತಿದ್ದರು
ಆಂಧ್ರ ಪ್ರದೇಶದ ಮಂಗಳಗಿರಿಯಲ್ಲಿ ಪಾನಕದ ನರಸಿಂಹನ ಐತಿಹ್ಯವು ಇಂದಿಗೂ ಜ್ವಲಂತವಾಗಿದೆ. ಅಲ್ಲಿ ಮೇಲುನೋಟಕ್ಕೆ ಕಂಡುಬರುವ ಹಾಗೆ ಭಕ್ತರು, ಬಾಯಿತೆರೆದು ಕೊಂಡಿರುವ ಲಕ್ಷ್ಮಿ ನರಸಿಂಹ ದೇವನಿಗೆ ಅರ್ಪಿಸಿದ ಪಾನಕನ್ನು ಅದರ ಪ್ರಮಾಣ ಎಷ್ಟೆ ಇರಲಿ ಅರ್ದ ಭಾಗವನ್ನು ಮಾತ್ರ ನರಸಿಂಹನು ಸ್ವೀಕರಿಸುವನು ಉಳಿದರ್ಧವನ್ನು ತನ್ನ ಕಟವಾಯಿಯಿಂದ ಹೊರ ಹಾಕುವನು . ಒಂದು ಲೋಟ ಪಾನಕ ಅರ್ಪಿಸಿದರೆ, ಅರ್ಧ ಲೋಟ ಮಾತ್ರ ದೇವನು ಸ್ವೀಕಾರ ಮಾಡುವನು . ಒಂದು ಕೊಡ ಪಾನಕ ನೀಡಿದರೆ ಅರ್ಧಕೊಡ ಪಾನಕ ಕುಡಿದು ಬಿಡುವನು.ಇದನ್ನು ವೈಜ್ಞಾನಿಕ  ಪರಿಶಿಲನೆಗೆ ಒಳಪಡಿಸುವುದು ಕಷ್ಟಸಾಧ್ಯ. ಆದರೆ ಈ ಐತಿಹ್ಯವನ್ನು ಆಸ್ತಿಕರು ಇಂದಿಗೂ ನಂಬಿರುವರು.. ಅದಕ್ಕೆ ಭಂಗತರುವ ಕೆಲಸ ಸಲ್ಲ. ಧರ್ಮದ ಅಡಿಪಾಯವೆ ನಂಬಿಕೆ. ಈ ರೀತಿಯ ಐತಿಹ್ಯಗಳು ಈಗಲೂ ಸ್ವೀಕಾರಾರ್ಹವಾಗಿವೆ. ಮತ್ತು ಆಚರಣೆಯ ಅಂಗವಾಗಿ ಹೋಗಿವೆ.ಅವು ಜೀವ ವಿರೋಧಿ ಅಲ್ಲದಿದ್ದರೆ ಅವುಗಳನ್ನು ಪ್ರಶ್ನಿಸಿ, ಸುಳ್ಳು ಎಂದು ಸಿದ್ಧಮಾಡಿ   ಅವರ ಧಾರ್ಮಿಕ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಅಗತ್ಯವೂ ಇಲ್ಲ  ಎನಿಸಿದೆ.  ಐತಿಹ್ಯಕ್ಕೆ ಅದರದೆ ಆದ ಸ್ಥಾನವಿದೆ. ಆದರೆ ಅದನ್ನೆ ಇತಿಹಾಸ ಎಂದು ಬಿಂಬಿಸ ಬೇಕಿಲ್ಲ.
                                                       ಲೇಖನ - ಎಚ್‌..ಶೇಷಗಿರಿರಾವ್‌ 

ಸದಸ್ಯರು  ಯಾವುದೆ ಇತಿಹಾಸಕ್ಕೆ ಸಂಬಂಧಿಸಿದ ಲೇಖನವಿದ್ದರೆ ಕೆಳಗಿನ ಇ. ಮೇಲ್‌ವಿಳಾಸಕ್ಕೆ ಕಳುಹಿಸಿದರೆ ಪ್ರಕಟನೆಗೆ ಪರಿಶೀಲಿಸಲಾಗುವುದು
appaaji@gmail.com

Friday, October 12, 2012

ಕರ್ನಾಟಕ ಇತಿಹಾಸ ಅಕಾದೆಮಿಯ 26ನೇ ಸಮ್ಮೇಳನ


ಕರ್ನಾಟಕ ಇತಿಹಾಸ ಅಕಾದೆಮಿಯ ೨೬ನೇ  ವಾರ್ಷಿಕ ಸಮ್ಮೇಳನವು, ಸೆಪ್ಟಂಬರ್‌ ೨೨, ೨೩ ಮತ್ತು ೨೪ರಂದು ಮೂರು ದಿನ ಶ್ರೀಮದ್‌ಶಂಕರಾಚಾರ್ಯರ ದಕ್ಷಿಣಾಮ್ನಾಯ ಪೀಠದ ಸಹಯೋಗದಲ್ಲಿ ಶೃಂಗೇರಿಯಲ್ಲಿ ಜರುಗಿತು. ಡಾ.ಎಸ್‌.ವಿ. ವೆಂಕಟೇಶಯ್ಯನವರು ಸಮ್ಮೇಳನದ  ಸರ್ವಾಧ್ಯಕ್ಷರಾಗಿ ಮೂರು ದಿನದ ಕಾರ್ಯಕ್ರಮ ನಡೆಸಿಕೊಟ್ಟರು.

ಡಾ. ಡಿ.ಎಚ್‌. ಶಂಕರಮೂರ್ತಿ,  ಕರ್ನಾಟಕ ವಿಧಾನ ಪರಿಷತ್‌ ಸಭಾಪತಿಗಳು,  ಶೃಂಗೇರಿ ಮಠದ ಆಡಳಿತಾಧಿಕಾರಿಗಳಾದ ಪದ್ಮಶ್ರೀ ಡಾ.ಗೌರಿಶಂಕರ ಅವರು, ಅಕಾದೆಮಿಯ ಅಧ್ಯಕ್ಷರಾದ ಡಾ. ದೇವರಕೊಂಡಾರೆಡ್ಡಿ, “ಇತಿಹಾಸ ಸಂಸ್ಕೃತಿ” ಪ್ರಶಸ್ತಿಯ ಪುರಸ್ಕೃತರಾದ ಪ್ರೊ. ಲಕ್ಷ್ಮಣ ತೆಲಗಾವಿ ಮತ್ತು ಡಾ. ಬಾ.ರಾ. ಗೋಪಾಲ್ ಪ್ರಶಸ್ತಿ ಪಡೆದ ಡಾ. ಸೀತಾರಾಮ ಜಾಗೀರದಾರ್‌  ಮತ್ತು, ನಿಕಟಪೂರ್ವ ಸರ್ವಾಧ್ಯಕ್ಷರಾದ ಡಾ. ಎಚ್‌.ಎಸ್. ಗೋಪಾಲರಾವ್‌, ಅನೇಕ ಹಿರಿಯ ಇತಿಹಾಸ ತಜ್ಞರು ಮತ್ತು ಅಕಾದೆಮಿಯ ಪದಾಧಿಕಾರಿಗಳು ವೇದಿಕೆಯ ಮೇಲಿದ್ದರು.

ಈ ಕಾರ್ಯಕ್ರಮದ ವಿಭಿನ್ನತೆ ಎಂದರೆ ಸಮಯಕ್ಕೆ ಸರಿಯಾಗಿ ಆದ ಉದ್ಘಾಟನೆ. ಕರ್ನಾಟಕದ ಮೂಲೆಮೂಲೆಗಳಿಂದ ಬಂದ ಪ್ರತಿನಿಧಿಗಳಿಗೆ ಉತ್ತಮ ವಸತಿ ಸೌಕರ್ಯ ದೊರಕಿತು. ಸುಮಾರು ಅರವತ್ತೈದು ಸುಸಜ್ಜಿತ ಕೋಣೆಗಳ ವ್ಯವಸ್ಥೆಯಾಗಿತ್ತು.. ಬೆಳಗ್ಗೆ ಎಂಟೂವರೆಗೆ ಸರಿಯಾಗಿ ಬೆಳಗಿನ ಉಪಹಾರ ಸಹಪ್ರಾಯೋಜಕರಾದ ಶ್ರೀ ಮಠದಿಂದ ಏರ್ಪಾಡಾಗಿತ್ತು. ಹಾಗಾಗಿ ರಾತ್ರಿ ಪ್ರಯಾಣ ಮಾಡಿ ದಣಿದು ಬಂದವರು ಬಿಸಿ ನೀರ ಸ್ನಾನ ಮಾಡಿ ಗಡದ್ದು ತಿಂಡಿ ತಿಂದು ಕಾರ್ಯಕ್ರಮ ನಡೆವ ವೇದಿಕೆಗೆ ಬಂದು ನೋಂದಾವಣೆ ಮಾಡಿಕೊಳ್ಳಲು ಸರತಿಗಾಗಿ ಕಾದಿದ್ದರು. ಅದೃಷ್ಟ ಎಂದರೆ ಅತಿಥಿಗಳಿಗಾಗಿ ಕಾಯುವ ಗೋಜಿರಲಿಲ್ಲ. ಹೇಳಿ ಕೇಳಿ ದೇವಸ್ಥಾನ. ಎಲ್ಲರೂ ಪಾದರಕ್ಷೆಗಳನ್ನು ಅದರ ಜೊತೆ ತಮ್ಮ ದುಶ್ಚಟಗಳನ್ನು ಆವರಣದ ಹೊರಗೆ ಬಿಟ್ಟು ಶ್ರದ್ಧೆಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸಮ್ಮೇಳನವನ್ನು ವಿಧಾನ ಪರಿಷತ್ತಿನ ಸಭಾಪತಿ ಡಿ.ಎಚ್.ಶಂಕರಮೂರ್ತಿಯವರು ಉದ್ಘಾಟಿಸಿದರು. ತಮ್ಮ ಉದ್ಘಾಟನಾ ಭಾಷಣದಲ್ಲಿ ಸುದೀರ್ಘವಾಗಿ ಪರಂಪರೆಯನ್ನು ಉಳಿಸಿಕೊಳ್ಳುವ ಅಗತ್ಯದ ಬಗೆಗೆ ಮಾತನಾಡಿದರು. ಯುವಜನರ ಜಾಗೃತಿಗೆ ಇತಿಹಾಸದ ಅಧ್ಯಯನದ ಅಗತ್ಯವನ್ನು ಒತ್ತಿ ಹೇಳಿದರು. ಸರಿಯಾದ ಇತಿಹಾಸದ ಪುನರ‍್ರಚನೆಯ ಅಗತ್ಯವನ್ನು ತಿಳಿಸಿದರು.

ಶ್ರೀಮಠದ ಆಡಳಿತಾಧಿಕಾರಿಗಳಾದ ಪದ್ಮಶ್ರೀ ಡಾ. ಗೌರಿಶಂಕರ್‌ ಅವರು ೨೬ನೇ ವಾರ್ಷಿಕ “ಇತಿಹಾಸ ದರ್ಶನ” ಗ್ರಂಥವನ್ನು ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಪದ್ಮಶ್ರೀ ಡಾ. ಗೌರಿಶಂಕರ ಅವರು ಸಮ್ಮೇಳನದ ಸಹಯೋಗ ತಮ್ಮ ಸೌಭಾಗ್ಯ ಎಂದು ತಿಳಿಸಿದರು. ಶ್ರೀಮಠ ಒಂದು ಶ್ರದ್ಧಾಕೇಂದ್ರ. ಇಲ್ಲಿ ಇತಿಹಾಸ ಮತ್ತು ಪರಂಪರೆಗಳು ಒಂದುಗೂಡಿವೆ. ಆದ್ದರಿಂದ ಇತಿಹಾಸ ಸಮ್ಮೇಳನ ನಡೆಸುವಲ್ಲಿ ಕೈಜೋಡಿಸುವುದು ತಮ್ಮ ಕರ್ತವ್ಯ. ಆದ್ದರಿಂದ ತಮಗೆ ಅತೀವ ಆನಂದವಾಗಿದೆ ಎಂದು ಹೇಳಿದರು. ಅಲ್ಲದೆ ಈ ಕೆಲಸ ಮಾಡಲೆಂದೇ ತಾವಿರುವುದು.  ಈ ರೀತಿಯ ಸಹಕಾರ ಭವಿಷ್ಯದಲ್ಲಿಯೂ ನೀಡಲು ಸಿದ್ಧ ಎಂದರು.

ಇದೇ ಸಂದರ್ಭದಲ್ಲಿ ಇತಿಹಾಸತಜ್ಞರಾದ ಪ್ರೊ. ಲಕ್ಷ್ಮಣ ತೆಲಗಾವಿಯವರಿಗೆ “ಇತಿಹಾಸ ಸಂಸ್ಕೃತಿ ಶ್ರೀ”  ಪ್ರಶಸ್ತಿ ಪ್ರದಾನ ಮಾಡಿ, ಜೊತೆಗೆ ಒಂದು ಲಕ್ಷ ರೂಪಾಯಿ ನಗದು ನೀಡಲಾಯಿತು. ಈ ಪ್ರಶಸ್ತಿಯ ಪ್ರಾಯೋಜಕರಾದ ಲಕ್ಷ್ಮಿ ಪ್ರಿಂಟರ್ಸನ ಶ್ರೀ ಅಶೋಕ ಕುಮಾರ್‌ ಅವರು, ತಮ್ಮ ಬಿ.ಆರ್.ಆರ್. ಟ್ರಸ್ಟ್ ವತಿಯಿಂದ ಬಹುಶಃ ದೇಶದಲ್ಲಿಯೆ ಅತಿ ಹೆಚ್ಚು ಮೌಲ್ಯಯುತವಾದ ಇತಿಹಾಸ ಪ್ರಶಸ್ತಿಯನ್ನು ಪ್ರತಿವರ್ಷ ‘ಕರ್ನಾಟಕ ಇತಿಹಾಸ ಅಕಾದೆಮಿ’ಯ ಮೂಲಕ ನೀಡುವುದಾಗಿ ಘೋಷಿಸಿದರು.
ಇದೇ ಸಮಯದಲ್ಲಿ  ಡಾ. ಬಾ.ರಾ. ಗೋಪಾಲ್ ‘ಶಾಸನ ದತ್ತಿ’ ಪ್ರಶಸ್ತಿಯನ್ನು ಶ್ರೀ ಸೀತಾರಾಮ ಜಾಗೀರದಾರ್‌ ಅವರಿಗೆ ಪ್ರದಾನ ಮಾಡಲಾಯಿತು.

 ಶ್ರೀ ಕೆ.ಆರ್.ರಾಮಕೃಷ್ಣ, ಆಯುಕ್ತರು, ಪ್ರಾಚ್ಯವಸ್ತು, ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರ್ಕಾರ,  ಅವರು ಹಿಂದಿನ ವರ್ಷದಲ್ಲಿ ಪಿಎಚ್.ಡಿ.  ಪಡೆದ ಅಕಾದೆಮಿ ಸದಸ್ಯರಿಗೆ ಸನ್ಮಾನ ಮಾಡಿದರು.
ಈ ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ. ಎಸ್.ವಿ. ವೆಂಕಟೇಶಯ್ಯನವರು ತಮ್ಮ ೩೩ ವರ್ಷದ ಸುದೀರ್ಘ ಮತ್ತು ಸಾರ್ಥಕ ಸೇವೆಯಲ್ಲಿ ಪ್ರಾಚೀನ ಸ್ಮಾರಕಗಳ ರಕ್ಷಣೆ, ಉತ್ಖನನ ಮತ್ತು ಪ್ರಾಚ್ಯವಸ್ತು ಇಲಾಖೆಯ ಮೂಲಕ ಮಾಡಿದ ಕೆಲಸದ ವಿವರ ನೀಡಿದರು. ಪುರಾತತ್ವ ಇಲಾಖೆಯ ಕಾರ್ಯವೈಖರಿ, ಪರಂಪರೆಯ ಸ್ಮಾರಕಗಳ ಸಂರಕ್ಷಣೆಗೆ ಇಲಾಖೆಯ ಕಳಕಳಿ ಮತ್ತು ಕಾಳಜಿ ಕುರಿತು ಮಾಹಿತಿ ನೀಡಿದರು. ಇತಿಹಾಸ ಅಕಾದೆಮಿಯ ಅಧ್ಯಕ್ಷರಾದ ಡಾ. ದೇವರಕೊಂಡಾರೆಡ್ಡಿಯವರು ಸಮ್ಮೇಳನದ ಹಿನ್ನೆಲೆ ಅದರ ಯಶಸ್ಸಿಗೆ ಕೈಜೋಡಿಸಿದವರ ವಿವರ ನೀಡಿ ಎಲ್ಲರನ್ನೂ ಸ್ವಾಗತಿಸಿದರು. ಸರಿಸುಮಾರು ಮೂರು ನೂರು ಪ್ರತಿನಿಧಿಗಳು ಭಾಗವಹಿಸಿದ್ದರು. ಅದರಲ್ಲಿ ಮಹಿಳೆಯರ ಸಂಖ್ಯೆಯೂ ಗಣನೀಯವಾಗಿತ್ತು. ಇತಿಹಾಸ ಮತ್ತು ಸಾಹಿತ್ಯರಂಗದಲ್ಲಿನವರ ಜೊತೆಜೊತೆಗೆ ಸಮಾಜದ ವಿವಿಧ ರಂಗದಲ್ಲಿನ ಇತಿಹಾಸ ಆಸಕ್ತರು ಭಾಗವಹಿಸಿದ್ದು ವಿಶೇಷವಾಗಿತ್ತು. ಅರವತ್ತು-ಎಪ್ಪತ್ತು ವಯೋಮಾನದ ಹಿರಿಯ ತಲೆಗಳೊಡನೆ ಅವರ ಮಾರ್ಗದರ್ಶನ ಪಡೆಯಲು, ಸಂವಾದ ನಡೆಸಲು, ಸಂಪ್ರಬಂಧ ಮಂಡಿಸಲು ಹೆಚ್ಚಿನ ಸಂಖ್ಯೆಯ ಯುವಜನರು ಭಾಗವಹಿಸಿದುದು ಭವಿಷ್ಯದ ಭರವಸೆಯ ಸಂಕೇತವಾಗಿತ್ತು. ಅಂದಾಜು ೧೪೦ಕ್ಕೂ ಹೆಚ್ಚು ಮಂದಿ ತಮ್ಮ ಸಂಪ್ರಬಂಧ ಮಂಡಿಸಲು ನೋಂದಾಯಿಸಿ ಕೊಂಡಿದ್ದರು. ಅದಕ್ಕಾಗಿ ಮುಖ್ಯ ವೇದಿಕೆಯ ಜೊತೆಗೆ ಸಮಾಂತರವಾಗಿ ಕಾರ್ಯಕ್ರಮ ನಡೆಸಲು ಇನ್ನೊಂದು ವೇದಿಕೆಯನ್ನು ಸಿದ್ಧಮಾಡಲಾಗಿತ್ತು. ಅಲ್ಲಿ ಪವರ್‌ ಪಾಯಿಂಟ್‌ ಪ್ರಾತ್ಯಕ್ಷಿಕೆ ಕೊಡಲು ಸೂಕ್ತ ವ್ಯವಸ್ಥೆ ಮಾಡಿದುದು, ಸಂಪ್ರಬಂಧಗಳನ್ನು ಪರಿಣಾಮಕಾರಿಯಾಗಿ ಚಿತ್ರ ಸಮೇತ ಮಂಡಿಸಲು ಅನುಕೂಲವಾಗಿತ್ತು.

ಉದ್ಘಾಟನೆಯ ನಂತರ ಗೋಷ್ಠಿಗಳು ಪ್ರಾರಂಭವಾದವು. ಪ್ರತಿ ಗೋಷ್ಠಿಗೂ ತಜ್ಞರೊಬ್ಬರು ಅಧ್ಯಕ್ಷರು, ಜೊತೆಗೆ ಒಬ್ಬ ನಿರೂಪಕರು. ಹೆಚ್ಚಿನ ಸಂಖ್ಯೆಯ ಪ್ರಬಂಧಗಳ ಮಂಡನೆ ಆಗಬೇಕಾದುದರಿಂದ ಪ್ರತಿ ಪ್ರಬಂಧ ಮಂಡನೆಗೆ ೮-೧೦ ನಿಮಿಷ ಕಾಲಾವಧಿ ನಿಗದಿ ಮಾಡಲಾಗಿತ್ತು. ಜೊತೆಗೆ ೨-೩ ಪ್ರಶ್ನೆಗಳಿಗೂ ಅವಕಾಶವಿತ್ತು.

ಹಲವು ಗೋಷ್ಠಿಗಳು ಬಹು ಆಸಕ್ತಿದಾಯಕವಾಗಿದ್ದವು. ಇತಿಹಾಸದ ಮೇಲೆ ಹೊಸ ಬೆಳಕು ಚೆಲ್ಲುವ ಪ್ರಯತ್ನ ಆ ಸಂಪ್ರಬಂಧಗಳಲ್ಲಿ ಕಂಡುಬಂದಿದ್ದು ಉತ್ತಮ ಭವಿಷ್ಯದ ಭರವಸೆ ಮೂಡಿಸಿತು.

ಆಯ್ದ ಗೋಷ್ಠಿಗಳ ವಿವರವನ್ನು ಒಂದೊಂದಾಗಿ ಬ್ಲಾಗ್‌ನಲ್ಲಿ ಮುಂಬರುವ ದಿನಗಳಲ್ಲಿ ನೀಡುವ ಯೋಜನೆ ಇದೆ. ಆಸಕ್ತರು ತಮ್ಮ ಸಂಪ್ರಬಂಧ, ಚಿತ್ರಗಳು (ಇದ್ದರೆ), ಸ್ವವಿವರವನ್ನು ಭಾವಚಿತ್ರ ಸಮೇತ ಇ-ಮೇಲ್‌ ಮುಖಾಂತರ ಕಳುಹಿಸಿದರೆ, ಪ್ರಕಟಿಸಬಹುದಾಗಿದೆ.  
ಮಿಂಚಂಚೆ (ಇ-ಮೇಲ್) ವಿಳಾಸ :  appaaji@gmail.com ಗೆ ದಯವಿಟ್ಟು ಕಳುಹಿಸಿ.


                                        ಸದಸ್ಯರ ಪ್ರತಿಕ್ರಿಯೆ ಮತ್ತು ಸಹಕಾರ ನಿರೀಕ್ಷಿಸಿದೆ




Monday, October 8, 2012

ಕರ್ಣಾಟಕ ಇತಿಹಾಸ ೨೬ನೆ ಸಮ್ಮೇಳನ, ಶೃಂಗೇರಿ
ದಿನಾಂಕ ೨೨, ೨೩ ಮತ್ತು ೨೪ ನೆ ಸೆಪ್ಟಂಬರ್‌ ೨೦೧೨


ಡಾ. ದೇವರ ಕೊಂಡಾರೆಡ್ಡಿಯವರಿಂದ ಆಶಯು ಭಾಷಣ 






                                                        ಸಮ್ಮೇಳನದ ಉದ್ಘಾಟನೆ
                                                         
                             ಶ್ರೀ. ಡಿ.ಎಚ್‌. .ಶಂಕರ ಮೂರ್ತಿ, ಸಭಾಪತಿಗಳು, ಕರ್ನಾಟಕ ರಾಜ್ಯ , ವಿಧಾನ ಪರಿಷತ್‌                                                        


                    ಇತಿಹಾಸ ದರ್ಶಿನಿ ಬಿಡುಗಡೆ      ಪದ್ಮಶ್ರೀ ಡಾ. ಗೌರಿಶಂಕರ್‌., ಆಡಳಿತಾಧಿಕಾರಿಗಳು






                                          "  ಇತಿಹಾಸ ಸಂಸ್ಕೃತಿ  ಶ್ರೀ" ಪ್ರಶಸ್ತಿ ಪ್ರದಾನ  


ಪ್ರೊ. ಲಕ್ಷ್ಮಣ ತೆಲಗಾವಿ ಅವರಿಗೆ 







                                           ಬಾ.ರಾ. ಗೋಪಾಲ ಪ್ರಶಸ್ತಿ ಪ್ರದಾನ
ಡಾ. ಸೀತಾರಾಮ್‌ ಜಾಗಿರದಾರ



                                   












Monday, October 1, 2012

ಸಹಕಾರ ಕೋರಿದೆ

ಕರ್ನಾಟಕ ಇತಿಹಾಸ  ಅಕಾದಮಿಯ ಶೃಂಗೇರಿಯಲ್ಲಿ ನಡೆದ ೨೬ನೆ ಸಮ್ಮೇಳನದಲ್ಲಿ ಬಾಗವಹಿಸಿದ ಸದಸ್ಯರು ತಾವು ತೆಗೆದ ವಿಶೇಷ ಫೋಟೊ  ಮತ್ತು ಅನುಭವಗಳನ್ನು ದಾಖಲಿಸಲು ಮತ್ತು ಇತರರೊಂದಿಗೆ ಹಂಚಿಕೊಳ್ಳಲು ಈ ಬ್ಲಾಗ್‌ಅನ್ನುವೇದಿಕೆಯಾಗಿ ಬಳಸಿಕೊಳ್ಳ ಬಹುದು . ದಯಮಾಡಿ ನಿಮ್ಮ ಸಲಹೆ ಸಹಕಾರ, ನೀಡಿದರೆ ಇದನ್ನು ನಮ್ಮ ನಡುವೆ ಸಶಕ್ತ ಸಂವಹನ ಮಾಧ್ಯಮವಾಗಿ  ಬಳಸಿಕೊಳ್ಳುವ ಸಾಧ್ಯತೆ   ಹೆಚ್ಚುವುದು. ತಮ್ಮ ಪ್ರತಿಕ್ರಿಯೆ ನಿರೀಕ್ಷಿಸಿದೆ.
ಮೊದಲನೆಯದಾಗಿ  ಈ  ಕುರಿತ ಸದಸ್ಯರೊಬ್ಬರ ಲೇಖನವನ್ನು ವೀಕ್ಷಿಸಲು ಕೆಳಗಿನ ಬ್ಲಾಗ್‌ಸಂದರ್ಶಿರಿ. ನೀವು ಮತ್ತು ನಿಮ್ಮಗೆಳೆಯರು ಭಾಗವಹಿಸಿ. ಈವರೆಗೆ  ಮಿಂಚಂಚೆ ವಿಳಾಸ ಇಲ್ಲದವರಿಗೆ ಅದನ್ನು    ಪಡೆಯಲು ಸಹಕರಿಸಿ. ಅದನ್ನು ತೆರೆದು ತಿಳಿಸಿದರೆ ಪ್ರತಿ ಲೇಖನವೂ ನಿಮ್ಮ ಇನ್  ಬಾಕ್ಸಗೆ  ಬರುವ ವ್ಯವಸ್ಥೆ ಮಾಡ ಲಾಗುವುದು
 http://appaaji.blogspot.in/ ಬ್ಲಾಗ್‌ಗೆ ಭೇಟಿಕೊಡಿ