ತುರವಿಹಾಳ ಗ್ರಾಮದಲ್ಲಿ ಹಾಲುಮತ ದಾಖಲೆಗಳ ಶೋಧ
ಡಾ. ಎಫ್.ಟಿ. ಹಳ್ಳಿಕೇರಿ
ಹಾಲುಮತ ಗುರುಪರಂಪರೆಯಲ್ಲಿ ರೇವಣಸಿದ್ಧ-ಸಿದ್ಧರಾಮ-ಅಮೋಘಸಿದ್ಧ ಎಂಬ ಮೂರು ಸಂಪ್ರದಾಯಗಳಿವೆ. ಕ್ರಮವಾಗಿ ಸರೂರ(ರೇವಣಸಿದ್ಧ)-ಸೊಲ್ಲಾಪುರ (ಸಿದ್ಧರಾಮ)-ಅರಕೇರಿ (ಅಮೋಘಸಿದ್ಧ) ಗ್ರಾಮಗಳು ಈ ಮೂರು ಸಂಪ್ರದಾಯಗಳ ಮುಖ್ಯಕೇಂದ್ರಗಳು. ನಂತರದಲ್ಲಿ ಈ ಸಂಪ್ರದಾಯಕ್ಕೆ ಗುರುಗಳಾಗಿ ಬಂದವರು ಶಾಂತ ಮುತ್ತಯ್ಯ-ಸಿದ್ಧಮಂಕ-ಅಮೋಘಸಿದ್ಧ ಒಡೆಯರು. ಈ ಮೂರು ಸಂಪ್ರದಾಯಗಳನ್ನು ಪರಂಪರಾನುಗತವಾಗಿ ಮುಂದುವರೆಸಿಕೊಂಡು ಬರುತ್ತಿರುವ ಗುರುಗಳಿಗೆ ಒಡೆಯರು, ಗುರುವಿನವರು ಎಂದು ಕರೆಯಲಾಗುತ್ತಿದೆ. ಕುರುಬರ ಈ ಗುರುಪರಂಪರೆಗಳು ಕರ್ನಾಟಕ ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶಗಳುದ್ದಕ್ಕೂ ಈಗಲೂ ಮುಂದುವರೆದಿವೆ. ಇದಕ್ಕೆ ಈಗಲೂ ಹಳ್ಳಿಗಳಲ್ಲಿ ಅಸ್ತಿತ್ವದಲ್ಲಿರುವ ರೇವಣಸಿದ್ಧ-ಸಿದ್ಧರಾಮ-ಅಮೋಘಸಿದ್ಧ ಮಠಗಳು ನಿದರ್ಶನಗಳಾಗಿವೆ. ಈ ಮಠಗಳ ಪೀಠಾಧಿಪತಿಗಳಾಗಿ ಕುರುಬರಿಗೆ ಗುರುಗಳಾಗಿ ಒಡೆಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ಅಂಥವರಲ್ಲಿ ತುರವಿಹಾಳದ ಮಾದಪ್ಪಯ್ಯ ಒಡೆಯರ ಅವರು ಪ್ರಮುಖರಾಗಿದ್ದಾರೆ.
1. ತುರವಿಹಾಳದ ಮಾದಪ್ಪಯ್ಯ ಒಡೆಯರು
ತುರವಿಹಾಳ, ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಒಂದು ಗ್ರಾಮ. ಸಿಂಧನೂರನಿಂದ ಪಶ್ಚಿಮಕ್ಕೆ 18 ಕಿ.ಮೀ. ಅಂತರ (ಸಿಂಧನೂರು-ಕುಷ್ಟಗಿ ಮುಖ್ಯರಸ್ತೆ)ದಲ್ಲಿರುವ ಈ ಗ್ರಾಮದಲ್ಲಿ ಕುರುಬರ ಗುರುಪರಂಪರೆಗೆ ಸೇರಿದ ರೇವಣಸಿದ್ಧ ಮತ್ತು ಅಮೋಘಸಿದ್ಧ ಸಂಪ್ರದಾಯದ ಒಡೆಯರ ಮನೆತನಗಳಿವೆ. ಈ ಮನೆತನಗಳಲ್ಲಿ ನೂರು ವರ್ಷಗಳ ಹಿಂದೆ ಆಗಿಹೋದ ಮಾದಪ್ಪಯ್ಯ ತಂದೆ ಓಗಪ್ಪಯ್ಯ ಗುರುವಿನ ಅವರು ಕುರುಬರ ಗುರುಪರಂಪರೆಯಲ್ಲಿ ಒಂದಾದ ಅಮೋಘಸಿದ್ಧ ಸಂಪ್ರದಾಯಕ್ಕೆ ಸೇರಿದವರು. ಮಾದಪ್ಪಯ್ಯ ಅವರು ಬಿಜಾಪುರ ಜಿಲ್ಲಾ ಮುದ್ದೇಬಿಹಾಳ ತಾಲೂಕಿನ ತಂಗಡಗಿ ಮತ್ತು ತುರವಿಹಾಳದಲ್ಲಿರುವ ಅಮೋಘಸಿದ್ಧ ಶಾಖಾಮಠಗಳೆರಡಕ್ಕೂ ಗುರುಗಳಾಗಿದ್ದರು. ಮಾದಪ್ಪಯ್ಯ (ಮರಣ:10-8-1964)ನವರಿಗೆ ಗಂಗಮ್ಮ ಮತ್ತು ನಾಗಮ್ಮ ಎಂಬ ಇಬ್ಬರು ಹೆಂಡಂದಿರಿದ್ದರು. ಇವರ ಮಗ ಸಿದ್ಧಯ್ಯ (ಮರಣ:21-4-2006). ಇವರಿಗೂ ಗಂಗಮ್ಮ ಮತ್ತು ನೀಲಮ್ಮ ಎಂಬಿಬ್ಬರು ಹೆಂಡಂದಿರು. ನೀಲಮ್ಮನವರಿಗೆ ಮಾದಯ್ಯ-ಗಂಗಾಧರಯ್ಯ-ಯೋಗಪ್ಪಯ್ಯ ಎಂಬ ಮೂವರು ಮಕ್ಕಳಿದ್ದಾರೆ.
ಮದುವೆ, ಉಡಕಿ, ಬಿಡಕಿ ಮೊದಲಾದ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳಿಗೆ ಹಾಗೂ ವಾರ್ಷಿಕವಾಗಿ ಭಕ್ತರು ಆತ್ಮಸಂತೋಷದಿಂದ ಇಂತಿಷ್ಟು ಕಾಣಿಕೆಯನ್ನು ಮಠಕ್ಕೆ ಸಲ್ಲಿಸಬೇಕೆಂಬುದನ್ನು ಮೇಲಿನ ಉಲ್ಲೇಖದಿಂದ ತಿಳಿದು ಬರುತ್ತದೆ. ಭಕ್ತರು ಕೊಟ್ಟಂಥ ಹಣ ದವಸ-ಧಾನ್ಯ-ವಸ್ತ್ರ ರೂಪದ ಕಾಣಿಕೆಯ ವಿವರಗಳನ್ನು ಖಾತೆಕೀರ್ದಿ (ರಜಿಸ್ಟರ ಬುಕ್) ಪುಸ್ತಕದಲ್ಲಿ ಮಾದಪ್ಪಯ್ಯನವರು ದಾಖಲಿಸಿದ್ದಾರೆ. ಆ ಪುಸ್ತಕದ ಪ್ರತಿಯೊಂದು ಪುಟದ ಮೇಲ್ಭಾಗದಲ್ಲಿ ಈ ಕೆಳಗಿನ ವಿವರಗಳು ಮುದ್ರಿತವಾಗಿವೆ.
“ಶ್ರೀ ಭೂರಮಾಧೃತ ನವಖಂಡಪೃಥ್ವೀ ರತ್ನಹಾರ ನಾಯಕಶಿಖಾರತ್ನ ಪರಿರಮ್ಯೋದಕ ದಶದಿಗ್ಭಾಗ ಮಣಿಚಂಡಕಿರಣ ರಾಜಾತಮಪ್ಪ ಭರತಾಖ್ಯ ಭೂಮಾನಿನೀಸಿ ಮಂತದಂತಿಪ್ಪ ವಿಂದ್ಯಾಚಲ ದಕ್ಷಿಣ ದೆಶೆಯೊಳ್ ಸೇರಿದ ವಿಜಾಪುರ ಜಿಲ್ಲಾ ವ, ತಾಲೂಕು ಪೈಕಿ ಹರಕೇರಿ ವ, ಮಂಕಣಾಪೂರ ಅಮೋಗಸಿದ್ಧೇಶ್ವರ ಸಿಂಹಾಸನ ಶಾಖಾ ಮಲಪ್ರಭಾ, ಕೃಷ್ಣ ಸಂಗಮವಾಹಿನಿ ಧಡದೋಳ್ ಶೋಭಿಸುತಿರ್ಪ ತಂಗಡಗಿ ಮತ್ತು ನಿಜಾಮ ಇಲಾಖೆಗೆ ಸೇರಿದ ರಾಯಚೂರು ಜಿಲ್ಲಾ ಸಿಂಧನೂರ ತಾಲೂಕ ಪೈಕಿ ತುರ್ವಿಹಾಳ ಹಾಲಮತದ ಧರ್ಮಗುರು ಮಠಾಧ್ಯಕ್ಷರಾದ ಸೃಷ್ಟಿ-ಸ್ಥಿತಿಲಯ ಕಾರ್ಯ ಕೃತಕೃತ್ಯರಾದ ಪರತರ ಪರಂಜ್ಯೋತಿ ಪರಬ್ರಹ್ಮ ಪರಶಿವ ಸ್ವರೂಪಿಗಳಾದ ಶ್ರೀ ಮಾದಪ್ಪಯ್ಯ ಓಘಪ್ಪಯ್ಯ ಮಹಾಸ್ವಾಮಿ ಒಡೆಯರು ಇವರಿಗೆ ಕೆಳಗೆ ನಮೂದಿಸಲ್ಪಟ್ಟ ಯಾವತ್ತೂ ಶಿಷ್ಯಮಂಡಳಿಯವರು ತಮ್ಮ ಧರ್ಮಕಾರ್ಯಗಳಿಗೆ ಆತ್ಮಸಂತೋಷದಿಂದ ಒಪ್ಪಿ ಬರಕೊಟ್ಟ ಕಾಣಿಕೆಯ ವಿವರ: ವಿವಾಹ ಕಾರ್ಯಕ್ಕೆ ವರಪಕ್ಷದಿಂದ 2 ರೂಪಾಯಿ ವಧುಪಕ್ಷದಿಂದ 1 ರೂಪಾಯಿ, ಉಡಕೀ ಕಾರ್ಯಕ್ಕೆ ಪ್ರತಿಪಕ್ಷದಿಂದ 3 ರೂಪಾಯಿ ಬಿಡಕೀ ಕಾರ್ಯಕ್ಕೆ ಪ್ರತಿಪಕ್ಷದಿಂದ 6 ರೂಪಾಯಿ ಮತ್ತು ವರ್ಷಾಶನ ಕಾಣಿಕೆ 1 ರೂಪಾಯಿ, 25 ನಯಾಪೈಸೆ ಈ ಪ್ರಕಾರ ಮಠಕ್ಕೆ ಸಲ್ಲಿಸತಕ್ಕದ್ದು.”
ಓದಲು ಮತ್ತು ಬರೆಯಲು ಬರುವಷ್ಟು ವಿದ್ಯೆಯನ್ನು ಸಂಪಾದಿಸಿ ತಂದೆ ಓಗಪ್ಪಯ್ಯನವರ ನಿಧನದ ನಂತರ ಗುರುಪಟ್ಟವನ್ನು ಸ್ವೀಕರಿಸಿದರು. ರಾಯಚೂರು ಬಿಜಾಪುರ ಬಾಗಲಕೋಟ ಜಿಲ್ಲೆಗಳ 135 ಹಳ್ಳಿಗಳ ಕುರುಬರ ಮನೆತನಗಳು ಇವರ ವ್ಯಾಪ್ತಿಯಲ್ಲಿದ್ದವು. ಆ ಮೂಲಕ ಶಿಷ್ಯರನ್ನು ಕಟ್ಟಿಕೊಂಡು ಸಾಮಾಜಿಕವಾಗಿ ಮತ್ತು ಧಾರ್ಮಿಕವಾಗಿ ಕುರುಬ ಸಮುದಾಯವನ್ನು ಜಾಗೃತಗೊಳಿಸಲು ನಿರಂತರವಾಗಿ ಶ್ರಮಪಟ್ಟರು. ಸಮುದಾಯದ ಮನೆತನ ಅಥವಾ ಸದಸ್ಯರಲ್ಲಿ ವಾದವಿವಾದಗಳು ನಡೆದಾಗ ಅವುಗಳನ್ನು ಬಗೆಹರಿಸಿದ್ದು, ತಪ್ಪು ಮಾಡಿದವರಿಗೆ ಶಿಕ್ಷೆ ವಿದಿsಸಿದ್ದು, ದಂಡ ಹಾಕಿದ್ದು, ಶಿಕ್ಷೆ ಮುಗಿದ ನಂತರ ಮತ್ತೆ ಸಮಾಜದೊಳಗೆ ಅವರಿಗೆ ಪ್ರವೇಶ ನೀಡಿದ್ದು, ಬಡವರಿಗೆ ಹಣ ದವಸ ದಾನ್ಯಗಳ ರೂಪದಲ್ಲಿ ಸಹಾಯ ಮಾಡಿದ್ದಾರೆ. ಈ ಕುರಿತು ತುರವಿಹಾಳದ ಒಡೆಯರ ಮನೆಯಲ್ಲಿ ಸನದು ನಿರೂಪಗಳಂಥ ನೂರಾರು ದಾಖಲೆಗಳ ಸಂಗ್ರಹವಿದೆ. ಆ ಸಂಗ್ರಹದಲ್ಲಿರುವ ಕೆಲವು ದಾಖಲೆಗಳನ್ನು ಅಧ್ಯಯನಕ್ಕೊಳಪಡಿಸಿ, ಅವುಗಳ ಸಾಂಸ್ಕøತಿಕ ಮತ್ತು ಚಾರಿತ್ರಿಕ ಮಹತ್ವವನ್ನು ಅರಿತುಕೊಳ್ಳುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ.
2. ದಾಖಲೆಗಳ ಸ್ವರೂಪ ಮತ್ತು ಮಹತ್ವ
ತುರವಿಹಾಳದಲ್ಲಿ ಲಭ್ಯವಾದ ದಾಖಲೆಗಳು ಕೋರಿ ಕಾಗದ, ಆಧುನಿಕ ಕಾಗದ ಮತ್ತು ಸ್ಟಾಂಫ್‍ಪೇಪರಗಳ ರೂಪದಲ್ಲಿವೆ. ಎ4 ಅಳತೆಯ ಒಂದು ಪುಟದಿಂದ ಹಿಡಿದು ನಾಲ್ಕೈದು ಪುಟಗಳಷ್ಟು ಮಾಹಿತಿಯಿರುವ ಸನದು ನಿರೂಪಗಳಿವೆ. ವಿಷಯ ದೀರ್ಘವಾಗಿದ್ದರೆ ಕಾಗದಗಳನ್ನು ಒಂದಕ್ಕೊಂದು ಅಂಟಿಸಲಾಗಿದೆ. ವಸ್ತುವಿನ ದೃಷ್ಟಿಯಿಂದ ಇಲ್ಲಿನ ದಾಖಲೆಗಳನ್ನು ಈ ಕೆಳಗಿನಂತೆ ವಿಂಗಡಿಸಬಹುದು.
1. ಕುರುಬರ ಗುರು ಯಾರು ಎಂಬುದಕ್ಕೆ ವಾದ-ವಿವಾದ ಮಾಡಿ ನಿರ್ಣಯಿಸಿದ ದಾಖಲೆಪತ್ರಗಳು.
2. ಮಾದಪ್ಪಯ್ಯ ಒಡೆಯರು ಶಿಷ್ಯಸಮೂಹಕ್ಕೆ ಬರೆದ ದಾಖಲೆಪತ್ರಗಳು.
3. ಕುರುಬ ಸಮುದಾಯದ ಶಿಷ್ಯಬಳಗವು ಒಡೆಯರಿಗೆ ಬರೆದ ದಾಖಲೆಪತ್ರಗಳು.
4. ಕುಲಾಚಾರಕ್ಕೆ ಸಂಬಂಧಿಸಿದ ನಿರ್ಣಯದ ದಾಖಲೆಪತ್ರಗಳು.
5. ಸುಡುಗಾಡ ಸಿದ್ಧನ ಮಜೂರಿಯನ್ನು ತಿಳಿಸುವ ದಾಖಲೆಪತ್ರ.
6. ಇತರೆ ದಾಖಲೆಗಳು

ಕುರುಬರ ಗುರು ಯಾರು ಎಂಬುದು 19ನೆಯ ಶತಮಾನದ ಮಧ್ಯಭಾಗದಿಂದ 20ನೆಯ ಶತಮಾನದ ಮಧ್ಯಭಾಗದವರೆಗೆ ಸಾಕಷ್ಟು ವಾದ-ಪ್ರತಿವಾದಗಳು ನಡೆದಿವೆ. ರೇವಣಸಿದ್ಧ ಅಥವಾ ಸಿದ್ಧರಾಮ, ಶಾಂತಮುತ್ತಯ್ಯ ಅಥವಾ ಸಿದ್ಧಮಂಕ, ಸಿದ್ಧಮಂಕ ಅಥವಾ ಅಮೋಘಸಿದ್ಧ, ರೇವಣಸಿದ್ಧ ಅಥವಾ ಅಮೋಘಸಿದ್ಧ,-ಇವರಲ್ಲಿ ಯಾರು ಗುರುಗಳು ಎಂಬುದನ್ನು ನಿರ್ಣಯಿಸುವ ದಾಖಲೆಗಳು ಅಧಿಕ ಪ್ರಮಾಣದಲ್ಲಿ ಪತ್ರಗಳು ನಾಡಿನಾದ್ಯಂತ ದೊರೆಯುತ್ತವೆ. ಅಂಥ ಪತ್ರಗಳು ತುರವಿಹಾಳದ ಈ ಸಂಗ್ರಹದಲ್ಲಿವೆ. ವಿಶೇಷವಾಗಿ ಅಮೋಘಸಿದ್ಧ ಮತ್ತು ರೇವಣಸಿದ್ಧ-ಸಿದ್ಧಮಂಕ ಸಂಪ್ರದಾಯದವರ ನಡುವೆ ನಡೆದ ವಾದಗಳ ವಿವರಗಳು ಇಲ್ಲಿವೆ. ಕುರುಬರಿಗೆ ಗುರುಗಳಾಗಿ ಅರಕೇರಿ ಸಿದ್ಧಯ್ಯ ವಡೆಯರು-ಮಕಣಾಪುರದ ಅಮ್ಮಣ್ಣ ವಡೆಯರು ಹಾಗೂ ಸರವೂರಿನ ಮಂಕಣ್ಣ-ರೇವಣ್ಣ ವಡೆಯರಲ್ಲಿ ಯಾರಾಗಬೇಕು ಎಂಬುದರ ಬಗೆಗೆ ಸರ್ವಸಭಾನಾಯಕರಲ್ಲಿ ಚರ್ಚೆ ನಡೆದು ಹೀಗೆ ತೀರ್ಮಾನಿಸಿದರು.
“ಕುರುಬಯೆಂಬ ಕುಲದೊಳಗೆ ಶಿವಾಚಾರ ವಡಿಯ ಅರಕೇರಿ ಮಕಣಾಪುರದ ಅಮ್ಮಣ್ಣ ಸಿದ್ಧಯ್ಯ ಒಡೆಯರು ಗುರುಮುಖ್ಯ ಕರ್ತರು | ಭಿಕ್ಷಾವರ್ತಿಚಂತಿದೈವದ ಮುಂದೆ ನಿರ್ನಯ ಮಾಡಿ ಸನದು ಬರಸಿದರು | ಸರವರೆಲ್ಲ ಹರಕತ್ತ ಮಾಡಿದರೆ ದಿವಾಣ ದೈವದ ಗುನ್ನೆಗಾರಿ ಸರವಸಿತಾ ಪರಿಹಾರಯೆತ್ತಲಾಗದು | ಕುಲಾಚಾರದಲ್ಲಿ ದೈವದ ವಡಿಯರು ಕರಿಸಿ ವಿಭೂತಿ ಧರಿಸೆಂದರೆ ಧರಿಸಬೇಕು | ಬ್ಯಾಡಯೆಂದರೆ ಬಿಡಬೇಕು | ಹಾಲುಮತದೊಳು ಯಾವನಾದರೆ ಸರವರವರು ಗುರುವೆಂದು ನುಡಿದವ ಶಿವಾಚಾರಕ್ಕೆ ಹೊರಗುಯೆಂದರು | ಇದು ಹುಸಿಯೆಂದರೆ ನರಕ ತಪ್ಪದು |”
ಇಂಥ ದಾಖಲೆಗಳು ಸ್ಥಳೀಯ ಸಂಸ್ಕøತಿ ಅಧ್ಯಯನಕ್ಕೆ ಅನೇಕ ಮಾಹಿತಿಗಳನ್ನು ಒದಗಿಸುತ್ತವೆ.
2. ಮಾದಪ್ಪಯ್ಯ ಒಡೆಯರು ಶಿಷ್ಯಸಮೂಹಕ್ಕೆ ಬರೆದ ದಾಖಲೆಪತ್ರಗಳು
ಸಮುದಾಯದ ಶ್ರೇಯೋಭಿವೃದ್ಧಿಗಾಗಿ ಒಡೆಯರು ಆಜ್ಞೆಗಳನ್ನು ಹೊರಡಿಸುತ್ತಿದ್ದರು. ಅಂಥ ಆಜ್ಞೆಯನ್ನು ಒಳಗೊಂಡ ಪತ್ರಗಳು ಮಾದಪ್ಪಯ್ಯನವರು ಹೊರಡಿಸಿದ್ದರು. ಉದಾಹರಣೆಗೆ ಈ ಪತ್ರವನ್ನು ಗಮನಿಸಬಹುದು
“||ಶ್ರೀಗುರು|| ಶ್ರೀಮತ್ ಸಂಸ್ಥಾನ ವಿಜಾಪೂರ ತಾಲೂಕು ಪೈಕಿ ಪರಕೇರಿ ಮಂಕಣಾಪುರ ಅಮೋಘಸಿದ್ಧೇಶ್ವರ ಸಿಂಹಾಸನ ಹಾಲುಮತ ಅಧ್ಯಕ್ಷರಾದ ಶ್ರೀಮಾದಪ್ಪಯ್ಯ ಒಡೆಯರ ಕಡೆಯಿಂದಾ ಯಾವತ್ತು ಭಕ್ತಮಂಡಳಿಗೆ ಈ ನೋಟಿಸದ್ವಾರಾ ತಿಳಿಸುವದೇನೆಂದರೆ £ೀವು ಯಾವತ್ತರೂ ಮೇಲೆ ಕಾಣಿಸಿದ ಸಿಂಹಾಸನಕ್ಕೆ ಶಿಷ್ಯರಾಗಿದ್ದು ಸದಾ ಆಶೀರ್ವಾದ ಹೊಂದುತ್ತ ಬಂದಿದ್ದೀರಿ | ಆದರೆ ನಾನು ಇಷ್ಟು ದಿವಸ ಬಾಲ್ಯಾವಸ್ಥೆಯಲ್ಲಿದ್ದೆನು | ಆ ಕಾಲಕ್ಕೆ ಶಿದ್ದಯ್ಯ ವ|| ಮದ್ದವೀರಯ್ಯನವರು ನಮ್ಮ ಯಾವತ್ತೂ ಭಕ್ತಾದಿಗಳಿಗೆ ಹೋಗಿ ನಿಷ್ಕಾರಣ ಅಧಿಕಾರದ ದರ್ಪ ತೋರಿಸಿ ಕಾಣಿಕೆ ವಗೈರೆ ವಸೂಲ ಮಾಡುತ್ತ ಬಂದಿರುವರು | ಆದರೆ ಈಗ ನಾವು ವಯಸ್ಸಿಗೆ ಬಂದ ಮೇಲೆ ಯಾವತ್ತು ಅಧಿಕಾರಿಗಳು ಕೈಯಲ್ಲಿ ತೆಗೆದುಕೊಂಡು ಭಕ್ತಾದಿಗಳಿಗೆ ಆಶೀರ್ವಾದ ಮಾಡುತ್ತ ಪ್ರಸಾದ ಜರುಗಿಸಿರುವೆವು | ಸದ್ರಿ ಸಿದ್ದಯ್ಯನವರು ಇದುವರಿಗೂ ನಮ್ಮ ಹೆಸರಿನ ಮೇಲೆ ಎನ್ಕಿ ಕಾಣಿಕೆ ವಗೈರೆ ವಸೂಲ ಮಾಡುತ್ತ ಬಂದರು | ಅದು ತಪ್ಪು ಇರುತ್ತದೆ | ಮುಂದೆ ಅವರು ಯಾವ ಗ್ರಾಮಕ್ಕೆ ಬಂದರೂ ನೀವು ನಮ್ಮ ಗುರುಸ್ಥಳಕ್ಕೆ ಯಾವ ತರಹದ ಸಂಬಂಧವಿಟ್ಟಿರು ವದಿಲ್ಲವೆಂದು ನಿರಾಕರಿಸಿ ಅವರಿಗೆ ಯಾವ ತರಹದ ಕಾಣಿಕೆ ವಗೈರೆ ಸಲ್ಲಿಸಕೂಡದು | ಆಕಸ್ಮಾತ ನೀವು ಸಲ್ಲಿಸಿದ್ದರೆ ಸಂಸ್ಥಾನ ಜವಾಬ್ದಾರಿ ಅಲ್ಲಾ | ಮೇಲೆ ಬರೆದ ನೋಟಿಸಿನ ಪ್ರಕಾರ ಪಾಲಿಸುವದಕ್ಕಾಗಿ ಸಿಂಹಾಸನದ ಕಡಿಯಿಂದ ಯಾವತ್ತು ಭಕ್ತ ಮಂಡಳಿಗೆ ಆಗ್ನೆ ಇರುತ್ತದೆ || ಫಕ್ತ||”
3. ಭಕ್ತರು ಒಡೆಯರಿಗೆ ಬರೆದ ದಾಖಲೆಪತ್ರಗಳು
ಸಮುದಾಯದ ಭಕ್ತರು ತಮ್ಮ ಮಧ್ಯ ಉದ್ಭವಿಸಿದಂಥ ತಂಟೆ ತಕರಾರುಗಳನ್ನು ಅಥವಾ ಕೌಟುಂಬಿಕ-ಸಾಮಾಜಿಕ-ವಯಕ್ತಿಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಗುರುಗಳಲ್ಲಿ ಮನವಿ ಮಾಡಿಕೊಂಡು ಅವರ ಸಮ್ಮುಖದಲ್ಲಿ ಬಗೆಹರಿಸಿಕೊಳ್ಳುತ್ತಿದ್ದರು. 23-11-1914ರಂದು ಹುನಗುಂದ ಸೀಮೆಯ ಗೋಸಲ ಮಾಘೆ ಬಾನರಾಮ ಸೋಮಪ್ಪ ನಾಯಕದೇಸಾಯಿ ಪರಗಣೆ ಹುನಗುಂದದರ ಜಾಗಾಲ್ವಿಹೊಳ್ಳಯಿವರು ಬರೆದುಕೊಟ್ಟ ಕರಾರು ಪತ್ರದ ಸಾರಾಂಶ ಹೀಗಿದೆ.
“ವಿಜಾಪುರ ಜಿಲ್ಹಾ ತಾಲುಕು ಪೈಕಿ ಅರಕೇರಿ ಮಂಕಮಾ ಪುರದ ತಂಗಡಗಿ ಮಠಕ್ಕೆ ವಡಿಯರಾದ ಶಿದ್ದಪ್ಪಯ್ಯ ತಂದಿ ಮಾದಪ್ಪಯ್ಯ ಯಿವರಿಗೆ ಬರಿಸುವದೇನೆಂದರೆ-ವಳಗಡೆ ಉಜ್ಜನಿ ಸಿಂಹ್ಮಾಸನದಲ್ಲಿ ನೀವು ನಿಮ್ಮ ಪ್ರತಿವಾದಿ ಮಂಕಯ್ಯನು ಸಹ ವುಭಯರು ಸದರಿ ಸಂಸ್ಥಾನದಲ್ಲಿ ನಿಮ್ಮ ನಿಮ್ಮ ನ್ಯಾಯ ವಿಚಾರಾಗಿ ಆದ ಹುಕುಂ ನಮಗೆ ಮತ್ತು ಅಲಮ್ಮಗೀರಬಾದಶಹನ ಸನದು-ವ-ಏನಕೆ ಕಾಗದಪ್ರತಿಗಳು ತೋರಿಸಿದ್ದರಿಂದ ನಾವು ವಡಂಬಟ್ಟು ಯೀ ಹೊತ್ತಿನ ದಿವಸ ಹಾಲುಮಥ ಕುರುಬ ಮುಂತಾದ ಸರ್ವರು ಯಿವರಿಗೆ ನಡಕೊಳ್ಳುವದಕ್ಕೆ ನಮ್ಮ ವಡಂಬಡಿಕೆಯಿರುತ್ತದೆ. ಅದರಂತೆ ನೀವು ತಡಕೊಳ್ಳಲಿಕ್ಕೆ ಜೀಕು-ಜೀರ ನೀವು ನಡಕೊಳ್ಳದಿದ್ದರೆ ಶಿವಾಚಾರ ಕುಲಾಚಾರಕ್ಕೆ ಹೊರ್ತಾಗಬೇಕಾದೀತು. ಹೀಗೆ ತಿಳಿದು ಈಗ ಬಂದ ಗುರುಗಳು ಅಂದರೆ ಶಿದ್ದಪ್ಪಯ್ಯ ಯಿವರಿಗೆ ನಡಕೊಳ್ಳಲಿಕ್ಕೆಬೇಕು. ಯಿವರು ಹುನಗುಂದ ಶೀಮೆ ಕಿರಸೂರು ಕಟ್ಟೆಗೆ ಯಿವರೇ ಬಾಧ್ಯರು ಮತ್ತು ದೀಕ್ಷಾ-ವ-ಕಾಣಿಕಾ ಮುಂತಾದವುಗಳನ್ನು ಮಾಡಲಿಕ್ಕೆ ಯಿವರೆ ಬಾಧ್ಯಸ್ಥರುಯಿರುತ್ತಾರೆ. ನೀವು ಆಯಾ ಸಮಂಧ ಬಾಬು ನಮಗೆ ಮುಟ್ಟಿಸಬೇಕು. ಅವ್ವಳ್ಳಿ-ಕಳ್ಳಿಗುಡ್ಡ ವ. ನಿಂಬಲಗುಂದಿ ವ. ಮುಳ್ಳೂರು ವ. ಹೂವಿನಳ್ಳಿ ವ. ಕ್ಯಾದಿಗ್ಗೇರಿ ವ. ಚೀಲಾಪೂರ ವ. ಕುಣಿಬೆಂಚಿ ಯೀ ಗ್ರಾಮಗಳಲ್ಲಿ ಯಿರುವ ಹಾಲುಮಥದ ಜನರು ಸದರಿ ಮೇಲೆ ನಮೋದಿಶಿದ ಗುರುಗಳಿಗೆ ಯೇಕನಿಷ್ಟೆಯಿಂದ ನಡಕೊಳ್ಳತಕ್ಕದ್ದು ಎಂದು ಯೀ ಹೊತ್ತಿನ ದಿವಸ ಬರಕೊಟ್ಟ ಪತ್ರ ಸಹಿ...”.
ಇಂಥ ಅನೇಕ ಸಮಸ್ಯೆಗಳನ್ನು ತಂಟೆ-ತಕರಾರುಗಳನ್ನು ಮಾದಪ್ಪಯ್ಯ ಮತ್ತು ಸಿದ್ದಯ್ಯ ಒಡೆಯರ ಅವರು ಬಗೆಹರಿಸಿದ್ದುಂಟು. ಭಕ್ತರು ತಪ್ಪು ಮಾಡಿದಾಗ ಕ್ಷಮಾಪಣೆ ಕೋರಿ ಬರೆದ ಪತ್ರಗಳೂ ಇಲ್ಲಿವೆ.
4. ಕುಲಾಚಾರಕ್ಕೆ ಸಂಬಂಧಿಸಿದ ನಿರ್ಣಯದ ದಾಖಲೆಪತ್ರಗಳು
ಸಮಾಜದ ಯಾವುದೇ ವ್ಯಕ್ತಿ ತಪ್ಪು ಮಾಡಿದಾಗ ಆ ವ್ಯಕ್ತಿ ಮತ್ತು ಆತನ ಮನೆತನದ ಎಲ್ಲ ಸದಸ್ಯರನ್ನು ಕುಲದಿಂದ ದೈವದಿಂದ ಹಾಗೂ ಗುರುಸನ್ನಿಧಿಯಿಂದ ಹೊರಗಿಡುವ ಪದ್ದತಿ ಇದೆ. ಮತ್ತೆ ಕೆಲವು ದಿವಸಗಳ ನಂತರ ಆ ವ್ಯಕ್ತಿಗೆ ಕ್ಷಮಾದಾನ ನೀಡಿ ಒಳಗೆ ಕರೆದುಕೊಳ್ಳುವ ನಿಯಮವು ಬಹುಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಅಂಥ ಸಂದರ್ಭದಲ್ಲಿ ಹೊರಗಿಟ್ಟ ಆ ವ್ಯಕ್ತಿ ದೈವದರಿಗೆ ಕ್ಷಮಾಪಣೆ ಅಥವಾ ಮಾಡಿದ ತಪ್ಪನ್ನು ಮನ್ನಿಸಬೇಕೆಂಬ ಪತ್ರವನ್ನು ನೀಡುತ್ತಾನೆ. ದಾಖಲೆಗಳಲ್ಲಿ ಅಂಥ ಪತ್ರಕ್ಕೆ “ಶರಣಾಗತ ಪತ್ರ” ಎಂದು ಕರೆಯಲಾಗಿದೆ. ಆ ಶರಣಾಗತ ಪತ್ರವನ್ನು ಪರಿಶೀಲಿಸಿದ ದೈವದವರು ಅಂಥ ವ್ಯಕ್ತಿಗಳನ್ನು ಸಮಾಜದೊಳಗೆ ಮತ್ತೆ ಬರಮಾಡಿಕೊಳ್ಳಲು ಒಪ್ಪಿ ಪತ್ರವನ್ನು ಗುರುಸನ್ನಿಧಿಗೆ ಕೊಡುತ್ತಾರೆ. ಆ ಪತ್ರಕ್ಕೆ “ಸಮ್ಮತಿ ಪತ್ರ”ಎಂದು ಕರೆಯಲಾಗಿದೆ. ಆ ಸಮ್ಮತಿ ಪತ್ರದ ಆಧಾರದಿಂದ ಕುಲಗುರುಗಳು ಆ ವ್ಯಕ್ತಿಯನ್ನು ಕುಲದೊಳಗೆ ತೆಗೆದುಕೊಳ್ಳಲು ಅನುಮತಿ ಪತ್ರವನ್ನು ನೀಡುತ್ತಾರೆ. ಅದಕ್ಕೆ “ಶುದ್ಧಿಸಂಸ್ಕಾರ ಪತ್ರ” ಎಂದು ಕರೆಯಲಾಗಿದೆ. ಸಮುದಾಯದಲ್ಲಿ ದೈವಸ್ಥರು ಮತ್ತು ಕುಲಗುರುಗಳು ಸಮುದಾಯದಲ್ಲಿ ಶಿಸ್ತು ಬರಬೇಕೆಂಬ ಉದ್ದೇಶದಿಂದ ಕೆಲವು ನಿಯಮಗಳನ್ನು ಜಾರಿಗೆ ತರಲಾಗಿದೆ. ಇಂಥ ಮಾಹಿತಿಯನ್ನು ನೀಡುವ ದಾಖಲೆಪತ್ರಗಳು ತುರ್ವಿಹಾಳದ ಒಡೆಯರ ಮನೆಯಲ್ಲಿ ಲಭ್ಯವಾಗಿವೆ. 1948ರಲ್ಲಿ ಗಂಜಿಹಾಳ ಗ್ರಾಮದ ಲಕ್ಕಪ್ಪ ವ. ಬಸ್ಸಪ್ಪ ರಾಘಾಪುರ ಅವರು ಯಾವುದೋ ಕಾರಣದಿಂದ ಸಮಾಜದಿಂದ ಬಹಿಷ್ಕøತಗೊಂಡಿರುತ್ತಾರೆ. ಕೆಲವು ದಿವಸಗಳ ನಂತರ ಲಕ್ಕಪ್ಪ ಅವರು-
“ತಾವು ಮತ್ತು ನಮ್ಮ ದೈವದವರು ಕೂಡೆ ನಮ್ಮ ಮನೆಯವರನ್ನೆಲ್ಲ ದೀಕ್ಷಾದಿಂದ ಶುದ್ಧಿ ಸಂಸ್ಕಾರ ಕೊಟ್ಟು ಉದ್ಧಾರ ಮಾಡಬೇಕೆಂದು ಬಿದ್ದುಬೇಡಿಕೊಳ್ಳುತ್ತೇವೆ ಮತ್ತು ಮುಂದಾದರೂ ಶ್ರೀಗಳವರ ದೈವದವರ ಅನುಮತಿ ಪ್ರಕಾರ ನಡೆದುಕೊಂಡು ಹೋಗುತ್ತೇವೆ.”
ಎಂದು ಸ್ವಸಂತೋಷದಿಂದ ದೈವದವರಿಗೆ ಮತ್ತು ಶ್ರೀ ಮಾದಪ್ಪಯ್ಯ ಒಡೆಯರ ಅವರಿಗೆ ಶರಣಾಗತ ಪತ್ರವನ್ನು ಕೊಡುತ್ತಾರೆ. ಆ ಪತ್ರವನ್ನು ಪರಾಮರ್ಶಿಸಿದ ದೈವದವರು ಗುರುಸನ್ನಿಧಿಗೆ-
“ಈ ದಿವಸ ತಮ್ಮ ಸನ್ನಿಧಿಯಲ್ಲಿ ನಮ್ಮ ಸಮಕ್ಷಮ ಸದರಿ ಘರಾಣೆದವರು(ಲಕ್ಕಪ್ಪ ವ.ಬಸ್ಸಪ್ಪ) ಇವರು ಶರಣಾಗತ ಪತ್ರದಿಂದ ದೈವದ ಸನ್ನಿಧಿಯಲ್ಲಿ ಬಿದ್ದುಬೇಡಿಕೊಂಡಿದ್ದರಿಂದ ಮತ್ತು ತಾವಾದರೂ ನಮ್ಮೆಲ್ಲರ ಕಬೂಲ ಕೇಳಿದ್ದರಿಂದ ನಾವೆಲ್ಲರೂ ನಮ್ಮ ಸ್ವಸಂತೋಷದಿಂದ ಲಕ್ಕಪ್ಪ ವ. ಬಸ್ಸಪ್ಪ ರಾಘಾಪುರ ಇವರ ಮನೆಯವರನ್ನೆಲ್ಲಾ ದೀಕ್ಷಾ ಮಾಡಿಕೊಳ್ಳಲಿಕ್ಕೆ ಅಡ್ಡಿಯಿಲ್ಲೆಂದು ಮತ್ತು ಮುಂದೆ ತಮ್ಮ ಆಜ್ಞೆಯ ಪ್ರಕಾರ (ಲಕ್ಕಪ್ಪ ವ. ಬಸ್ಸಪ್ಪ) ಇವರ ಸಂಗಡ ಬಳಕೆ ಭೋಜನ ವ ಹವ್ಯಕವ್ಯ ಕಾರ್ಯದಲ್ಲಿ ಕೂಡಿಕೊಂಡು ನಡೆಯಲಿಕ್ಕೆ ನಮ್ಮೆಲ್ಲರ ಕಬೂಲ ಮಾಡಿ ಸಮ್ಮತಿ ಪತ್ರ ಬರಕೊಟ್ಟಿರುತ್ತೇವೆ.”
ಈ ಎರಡು ಪತ್ರಗಳನ್ನು ಗಮನಿಸಿದ ಕುಲಗುರುಗಳು ಶುದ್ಧಿಸಂಸ್ಕಾರ ಪತ್ರವನ್ನು ನೀಡುತ್ತಾರೆ. ಆ ಪತ್ರದ ವಿವರಗಳು ಹೀಗಿವೆ.
“ಶ್ರೀಮತ್ ಸಂಸ್ಥಾನ ವಿಜಾಪುರ ತಾಲುಕು ಪೈಕಿ ಅರಕೇರಿ ವ. ಮೊಂಕಣಾಪುರದ ಅಮೋಘಶಿದ್ದೇಶ್ವರ ಸಿಂಹಾಸನದ ವ. ತಂಗಡಗಿ ಮಠದ ಹಾಲುಮತಕ್ಕೆ ಅಧ್ಯಕ್ಷರಾದ ಶ್ರೀಮಾದಪ್ಪಯ್ಯಸ್ವಾಮಿ ಮೊಕ್ಕಾಂ ಗಂಜಿಹಾಳ ಇವರ ಸನ್ನಿಧಿಯಿಂದಾ-ಶುದ್ಧಿಸಂಸ್ಕಾರ ಪತ್ರ ಬೈ|| ಗಂಜಿಹಾಳ ಹಾಲುಮತ ದೈವದವರಿಗೆ ವ. ಇನ್ನುಳಿದ ಪರಸ್ಥಲದ ಸಮಸ್ತ ಹಾಲುಮತ ದೈವಾಚಾರದವರಿಗೆ ಈ ಶುದ್ಧಿ ಸಂಸ್ಕಾರ ಪತ್ರದಿಂದ ತಿಳಿಸುವದರಲ್ಲಿ ಬರುತ್ತದಲ್ಲಾ. ಗಂಜಿಹಾಳ ಹಾಲುಮತ ದೈವದ ಪೈಕಿ ಅಂದರೆ (ಲಕ್ಕಪ್ಪ ವ.ಬಸ್ಸಪ್ಪ ತಂದಿ ಹನುಮಪ್ಪಾ ರಾಘಾಪೂರ) ಇವರನ್ನು ಸ್ಥಾನಿಕ ದೈವದವರು ಮತ್ತು (ಶ್ರೀಗಳವರು) ಕೂಡೆ ಏನಿಕೆ ಸಂಸರ್ಗ ದೋಷದಿಂದ ಅವರನ್ನು ಬಹುದಿವಸಗಳ ಲಾಗಾಯತ ಬಹಿಷ್ಕøತರನ್ನಾಗಿ ಮಾಡಿದ್ದು ಈಗ ತಾರೀಖು 22-6-1948 ದಿವಸ ಸದರಿ ಲಕ್ಕಪ್ಪ ವ.ಬಸ್ಸಪ್ಪ ತಂದಿ ಹನುಮಪ್ಪ ರಾಘಾಪೂರ ಇವರು ಸ್ಥಾನಿಕ ದೈವ ಮತ್ತು ಶ್ರೀಗಳವರ ಸನ್ನಿಧಿಯಲ್ಲಿ ಶರಣಾಗತ ಪತ್ರದಿಂದ ನಮ್ಮನ್ನು ಶುದ್ಧಿಸಂಸ್ಕಾರ ಕೊಟ್ಟು ಉದ್ಧಾರ ಮಾಡಬೇಕೆಂದು ಬಿದ್ದು ಬೇಡಿಕೊಂಡಿದ್ದಕ್ಕೆ ಸ್ಥಾ£ಕ ದೈವದವರು ಸದರಿಯವರನ್ನು ಉದ್ಧಾರ ಮಾಡಲಿಕ್ಕೆ ಎಲ್ಲರೂ ಸಮ್ಮತಿ ಕೊಟ್ಟದ್ದರ ಮೇಲಿಂದ ಸದರಿಯವರನ್ನು ಈ ದಿವಸ ಅಂದರೆ ತಾರೀಖು 28-6-1948 ಇಶ್ವಿ ದಿವಸ ಸದರಿಯವರ ಘರಾಣೆದಲ್ಲಿ ಸ್ಥಾನಿಕ ದೈವದವರನ್ನು ಕೂಡಿಕೊಂಡು ಪಂಚಗವ್ಯ ವಿಧಿಪ್ರಕಾರ ಶುದ್ಧಿ ಸಂಸ್ಕಾರ ಕೊಟ್ಟು ಉದ್ಧಾರ ಮಾಡಿರುತ್ತದೆ. ಕಾರಣ ಇನ್ನು ಮೇಲೆ ಸದರಿಯವರ ಸಂಗಡ ಸಮಾಜದಲ್ಲಿ ಕೂಡಿಕೊಂಡು ಬಳಕೆ ಭೋಜನ ಕಾರ್ಯಗಳಲ್ಲಿ ಕೂಡಿಕೊಂಡು ಹೋಗಬೇಕು. ಜೇರ ತಪ್ಪಿದಲ್ಲಿ ಸದರಿ (ಲಕ್ಕಪ್ಪ ವ.ಬಸ್ಸಪ್ಪ ರಾಘಾಪೂರ)ಇವರಿಗೆ ಆದ ಪ್ರಾಯಶ್ಚಿತ ನಿಮಗೆ ಮಾಡುವದರಲ್ಲಿ ಬರುವದೆಂದು ಸ£್ನಧಿಯಿಂದಾ ತಿಳಿಸಿದ ಶುದ್ಧಿಸಂಸ್ಕಾರ ಪತ್ರ ಸಹಿ||
ತಾರೀಖು: 29-6-1948 ಇಶ್ವಿ
ದ| ಶ್ರೀ ಮಾದಪ್ಪಯ್ಯಸ್ವಾಮಿ ಒಡೆಯರು
ಶ್ರೀಮಾದಪ್ಪಯ್ಯಸ್ವಾಮಿ ಒಡೆಯರು ಮೊಕ್ಕಾಮು ಗಂಜಿಹಾಳ.
ಇದರ ಪ್ರತಿ ಒಂದು ಬರಿಸಿ ಬಸ್ಸಪ್ಪ ರಾಘಾಪುರ ಇವರಿಗೆ ಕೊಟ್ಟಿರುತ್ತದೆ. ತಾರೀಖು: 1-7-1948
ಇಶ್ವಿ.
ಇನ್ನು ಕೆಲವು ಸಂದರ್ಭಗಳಲ್ಲಿ ದೈವದವರು ಕುಲ ಗುರುಗಳಿಂದಲೂ ಬಗೆಹರಿಯಲಾದ ಸಮಸ್ಯೆಗಳನ್ನು ಬೇರೆ ಸಮುದಾಯದ ಗುರುಗಳಿಂದ ಬಗೆಹರಿಸಿಕೊಂಡಿರುವುದಕ್ಕೆ ಕೆಲವು ದಾಖಲೆಗಳು ಸಾಕ್ಷಿಯಾಗಿದೆ. ಅಂಥ ದಾಖಲೆಗಳು ತುರ್ವಿಹಾಳದಲ್ಲಿ ದೊರೆತಿವೆ. ಹುನಗುಂದ ತಾಲೂಕಿನ ಪ್ರತಿಯೊಂದು ಗ್ರಾಮದಲ್ಲಿರುವ ಹಾಲುಮತ ಸಮುದಾಯದ ದೈವದವರಿಗೆ ಸರೂರ ಮಂಕಯ್ಯ ಮತ್ತು ತಂಗಡಗಿ ಮಾದಯ್ಯ ಇವರಿಬ್ಬರಲ್ಲಿ ಕುಲಗುರುಗಳು ಯಾರು ಎಂಬ ಬಗ್ಗೆ ಉಜ್ಜನಿಪೀಠದ ಸ್ವಾಮಿಗಳ ಸಮ್ಮುಖದಲ್ಲಿ ನ್ಯಾಯವನ್ನು ನಿರ್ಣಯಿಸಲಾಗಿದೆ. ಆ ನ್ಯಾಯನಿರ್ಣಯ ಮಾಡಿದ ವಿವರಗಳು ಹೀಗಿವೆ-
“ಶ್ರೀಮತ್ಪರಶಿವ ದಕ್ಷಿಣಲನೋದ್ಭವ ಜಗದ್ಗುರು ದಾರುಕಾಚಾರ್ಯ ಪರಂಪರಾಗತ ಶ್ರೀಮತ್ರಮಪಾವನ ಭೂಸುರಕ್ಷೇತ್ರ ಶ್ರೀಮದ್ದುಜ್ಜನೀಶ ಧರ್ಮ ಸಾಂಹ್ಮಾಸನಸ್ಯ ಸರ್ವಸ್ವತಂತ್ರಾವತಾರ ಶಿಖಾಮುದ್ರಾಧೃತಾರಾದ ಮೌಕ್ತಿಕಾಸನವರ್ಷ ಲಾಂಛನ ಪರಿಶೋಭಿತ ಶಿವಚರ ಪಟ್ಟಾಧ್ಯಕ್ಷ ಮರುಳಶಿದ್ಧರಾಜದೇಶಿಕೇಂದ್ರ ಮಹಾಸ್ವಾಮಿ ಸನ್ನಿಧಿ ಅಧಿಕಾರ ಸ್ಥಾನದಿಂದಾ--
ಕೇವಲಾಸ್ಮದೀಯ ಕಾರುಣ್ಯಾಮೃತ ಸರಸೀಬಾಲ ಮರುಳೋಪಮಾನರಾದ ಹುನಗುಂದ ತಾಲೂಕು ಗೂಡೂರು ಆಜುಬಾಜು ಗ್ರಾಮಗಳ ಪಟ್ಟಚರಂತರು ಮಠದಮಹತ್ತು ದೇಸಾಯಿ ದೇಶಪಾಂಡ್ಯೆ ನಾಡಗೌಡರು ಶಟ್ರುಗೌಬಾ ಯಜಮಾನರು ಯಿನ್ನೂರು ಮುಂತಾದ ಸಮಸ್ತ ವೀರಶೈವ ಭಕ್ತಾವಳಿಗಳಿಗೆ ಮತ್ತು ಹಾಲುಮಥ ದೈವದವರಿಗೆ ಲಿಖಿಸಿದ ಅಮೋಘ ಆಶೀರ್ವಾಚನ ನಿರೂಪಸ್ತದು ಪರಿವಯಂ ಶ್ರೀ ಶಿವಯೋಗಾನಂದ ತಪಸಾಮ್ರಾಜ್ಯ ವೈಭವೈವ್ವಾಸಾಮಃಯುಷೋದಾ ಶುಭಾಂಗ ಯೋಗಾಕ್ಷೇಮಾತಿ ಶಯನಾಂ ಪದೇಪದೇ ಬಿನ್ನಹ ಪತ್ರಿಕಾಪ್ರೆಷಣೀಯತ್ರತಃ--
ಯೀಗ ನಿಮ್ಮಗೆ ಅಪ್ಪಣೆ ಕೊಡಿಸುವದೇನಂದರೆ ಸದರೀ ಹಾಲುಮಥ ದೈವಕ್ಕೆ ಸರೂರು ಮಂಕಯ್ಯ-ತಂಗಡಗಿ ಮಾದಯ್ಯ-ಯೀವುಭಯರು ಹುನಗುಂದ ತಾಲೂಕು ಪ್ರತಿಗ್ರಾಮಗಳಲ್ಲಿರುವ ಹಾಲುಮಥದ ದೈವದವರಿಗೆ ಗುರುಗಳೆಂಬೊ ಹಂಶದಲ್ಲಿ ಉಭಯರಿಗೆ ನ್ಯಾಯದಿಂದ ಸದರೀ ದೈವಕ್ಕೆ ತಸ್ತಿ ಕೊಡುವ ಅಂಶವನ್ನೂ ಸನ್ನಿಧಿಗೆ ಶೃತವಾಗಿ ಸದರೀ ಮಂಕಯ್ಯನಿಗೆ ಮಾದಯ್ಯನಿಗೆ ಗೂಡೂರು ಮೊಕ್ಕಾಮಿಗೆ ಹಾಜರಾಗಿ ನಿಮ್ಮ ನಿಮ್ಮ ಕಾಗದ ಪತ್ರಗಳು ಹಾಜರಪಡಿಸಿ ನ್ಯಾಯ ಹೊಂದಿದ್ದಕ್ಕೆ ಯರಡನೇ ಹುಕುಂ ಪಡದೇ ಹೋಗುವಂತೆ ಸನ್ನಿಧಿಯಿಂದಾ ಹುಕೂಂ ಅಪ್ಪಣೆಯಾದಕ್ಕೆ ಸದರೀ ಮುದ್ದತ್ತಿಗೆ ಸರಿಯಾಗಿ ಓಮಾದಯ್ಯನು ಮಾತ್ರ ಹಾಜರಾಗಿರುತ್ತಾನೆ. ಮಂಕಯ್ಯ ಯೆಂಬುವನು ತಾನು ಗ್ರಾಮದಲ್ಲಿ ಯಿದ್ದು ಗೈರಾಜರೆನಿಶಿ ಕೊಂಡು ಮುದ್ದತ್ತು ತಪ್ಪಿಶಿರುತ್ತಾನೆ. ಆದ ಕಾರಣಾ ಸದರೀ ಮಂಕಯ್ಯಯೆಂಬುವನು ಸನ್ನಿಧಿರೂಬರೂಬ ಹಾಜರಾಗಿ ಮುದ್ದತ್ತು ತಪ್ಪಿಶಿದ್ದಕ್ಕೆ ತಕ್ಕ ಸಂಜಾಯಿಷಿ ಕೊಟ್ಟು ಯೆರಡನೇ ಹುಕೂಂ ತಂದ ನಿಮ್ಮಲ್ಲಿ ಭಯಾನ ಪಡಿಸೋವರಿಗೂ ಸದರ ಮಂಕಯ್ಯನಿಗೆ ಯಾವದೊಂದು ಮರ್ಯಾದೆ ಕೊಡದೆ ಸದರ ಮಾದಯ್ಯನಿಗೆ ಗುರುಮನೆ ಹುಕೂಂ ಪ್ರಕಾರ ಮಾನಸನ್ಮಾನ ವಗೈರೆ ಕೊಟ್ಟು ಯೇನೊಂದು ಅಭ್ಯಂತರವಿಲ್ಲದೆ ಆಚರಿಸಿಕೊಂಡು ಹೋಗ ತಕ್ಕದ್ದು. ಏತದ್ವಿಷಯ ಗುರುಸಂಸ್ಥಾನವಾಂಛಾಸುಶೀಲರಾದ ಗುರುಪುತ್ರರಿಗೆ ಬಾಹುಲ್ಯವಾಗಿ ಲಿಖಿಸತಕ್ಕನಿರುತ್ತೆ.
ಮೊಕ್ಕಾಮು ಗೂಡೂರು ತಾಲೂಕು ಹುನಗುಂದ
ಮಿತಿ ಕೀಲಕನಾಮ ಸಂ||ರದ ಬಾದ್ರಪದ ಶು||4||
ತಾ|| 31-8-1708ನೇ ಯಿಸ್ವಿ.”
5. ಸುಡುಗಾಡ ಸಿದ್ಧನ ಕಥೆಯನ್ನು ನಿರೂಪಿಸುವ ದಾಖಲೆಪತ್ರ
ಅಲೆಮಾರಿ ಜನಸಮುದಾಯಗಳಲ್ಲಿ ಒಂದಾದ ಸುಡುಗಾಡ ಸಿದ್ಧರ ಕುರಿತು ಒಂದು ದಾಖಲೆ ಲಭ್ಯವಾಗಿದೆ. ಕುರುಬ ಸಮಾಜದ ಸಿದ್ಧ ಎಂಬ ಹೆಸರಿನ ವ್ಯಕ್ತಿಯು ಬಸವಣ್ಣನ ಸಮ್ಮುಖದಲ್ಲಿ ಸುಡುಗಾಡ ಸಿದ್ಧನಾಗಿ ಪ್ರಸಿದ್ಧನಾದದ್ದನ್ನು ಪವಾಡ ಕಥನದ ಮುಖಾಂತರ ದಾಖಲೆಯೊಂದು ನಿರೂಪಿಸುತ್ತದೆ. ಆರಂಭದಲ್ಲಿ ಶ್ರೀಗುರುಬಸವ ಲಿಂಗಾಯನಮಃ ಎಂದು ಆರಂಭವಾಗುತ್ತದೆ. ನಂತರದಲ್ಲಿ “ಕಲ್ಯಾಣಪುರದೊಳಗೆ ಶುಡುಗಾಡ ಶಿದ್ಧನು ನಿರ್ಮಾಣ ಆದದ್ದು ಬರಿಯುವದಕ್ಕೆ ಶುಭಮಸ್ತು” ಎಂದಿದೆ. ಬಿಜ್ಜಳನು ಬಸವಣ್ಣನನ್ನು ಪರೀಕ್ಷೆ ಮಾಡಬೇಕೆಂದು ಯೋಚಿಸಿದನು. ಒಂದು ದಿನ ಬಿಜ್ಜಳನು ಸಿದ್ಧನ ಹೆಂಡತಿಯನ್ನು ಕರೆಯಿಸಿ “ಗಂಡನು ಸ್ವರ್ಗವಾಶಿಯಾಗಿಯಿದಾನೆ’’ ಎಂದು ಬಸವಣ್ಣನಿಗೆ ಹೇಳಬೇಕೆಂದು ತಾಕೀತು ಮಾಡಿದನು. ಅದರಂತೆ ಅವಳು “ಮುಂದೆ ನನಗೇನು ಗತಿ ನಂನ್ನ ಉದ್ದಾರ ಮಾಡಬೇಕು” ಎಂದು ಕಪಟತನದಿಂದ ಬಸವಣ್ಣನಿಗೆ ಹೇಳಿದಳು. ಬಸವಣ್ಣನು ಆಕೆಯ ಕಪಟತನವನ್ನು ಅರಿತು “ನಿನ್ನ ಗಂಡಾ ಸತ್ತುಯಿದ್ದಾನೆ ರುದ್ರಭೂಮಿಗೆವೈದು ಸಮಾಧಿ ತ್ಯೆಗೆದು ಮಣ್ಣ ತೋಡು” ಎಂದು ಹೇಳಿದನು. ಈ ವಾಕ್ಯವನ್ನು ಕೇಳಿದ ಆಕೆ ಮನೆಗೆ ಬಂದು ಗಂಡನನ್ನು ಮಾತನಾಡಿಸಲು, ಆತ ಸತ್ತು ಹೋಗಿದ್ದನು. ಬಸವಣ್ಣನು ನುಡಿದ ಮಾತು ಸತ್ಯವಿದೆ ಅಂದುಕೊಂಡು ರೋಧಿಸುತ್ತ ಬಿಜ್ಜಳನಲ್ಲಿಗೆ ಬಂದು “ಯಲೋ ರಾಜನೇ, ಮಕ್ಕಳು ಮರಿಗೆ ಯೇನು ಗತಿ ಮಾಡಲಿ. ತಾವು ಸತ್ಪುರುಷರ ಸಂಗಡ ಜಿದ್ದು ಮಾಡಿದ್ದೀರಿ. ಅದೇ ಕರೇವು ಆಯಿತ್ತು” ಎನ್ನಲು ಬಿಜ್ಜಳರಾಯನು ನಾಲ್ಕು ಸಾವಿರ ವರಹಗಳ ಕೊಟ್ಟು ಕಳಿಸಿದನು. ಕುರುಬರ ಮಂಡಳಿ ಕೂಡಿ ಶವಕ್ಕೆ ಶೃಂಗಾರ ಮಾಡಿ ಸ್ಮಶಾನಕ್ಕೆ ಹೋಗಿ ಸಮಾಧಿಯನ್ನು ತೋಡುವ ಸಂದರ್ಭದಲ್ಲಿ ಬಸವಣ್ಣನು ಮನೆಯೊಳಗಿದ್ದನು. ಆತನ ಬಳಿಗೆ ಮಂಡಳಿಯು ಬಂದು ದೀರ್ಘದಂಡ ನಮಸ್ಕಾರವನ್ನು ಮಾಡಿ “ತಾವು ಮೂರು ಲೋಕಕ್ಕೆ ಕರ್ತೃಯಿದ್ದೀರಿ. ಯಿಂದು ವಂದು ಅಪರಾಧವನ್ನು ಮನಶಿಗೆ ತಾರದೆ ಕುರುಬರ ಶಿದ್ದನು ಸತ್ತದ್ದು ಲೋಕಗೆ ಸಂಜೀವನವ ಮಾಡಿ ತೀರ್ಥ ತೆಗೆದುಕೊಳ್ಳಬೇಕು” ಎಂದು ಬೇಡಿಕೊಂಡರು. ಬಸವಣ್ಣನು ಮಸ್ತಕದ ಮೇಲೆ ಹಸ್ತವನ್ನಿಡಲು ಶಿದ್ಧನು ಎದ್ದು ನಿಂತನು. ಆಗ ಸರ್ವರು “ಹೇ ಸ್ವಾಮಿ ನಿಮ್ಮ ಕೀರ್ತಿದೂರ ಬೇಳೋಣವಾಯಿತ್ತು’’ ಎನ್ನುತ್ತ ದೀರ್ಘದಂಡ ನಮಸ್ಕಾರವ ಮಾಡಿದರು. ಸಮಾಧಿಗೆ ಕುರಿಹಾರವನ್ನು ಕೊಟ್ಟು ಸಮಾಧಿ ಮುಚ್ಚಿಸಿದರು. ಸ್ಮಶಾನದಲ್ಲಿ ಜೀವಂತವಾದವರು ಮರಳಿ ಮನೆಗೆ ಬರುವಂತಿಲ್ಲ. ಹೀಗಾಗಿ ಅವರಿಗೆ ಅಲ್ಲಿಯೇ ಒಂದು ಮಠ ಕಟ್ಟಿಕೊಂಡು ಪೂಜೆಪುನಸ್ಕಾರಗಳನ್ನು ಮಾಡುತ್ತ ಇರಬೇಕು. ಹಾಲುಮತದ ಕುಲ ಕುರುಬರಟ್ಟಿಗೆ ಒಂದು ಕೋಡಿನ ಮರಿ, ಗೊಲ್ಲರಟ್ಟಿಗೆ ಒಂದು ಕೋಡಿನ ಮರಿಯನ್ನು ಜೀವನಾಧಾರಕ್ಕಾಗಿ ಸಿದ್ದನಿಗೆ ಕೊಡಬೇಕು. ಆ ಸಿದ್ಧನಿಗೆ ಸುಡುಗಾಡ ಸಿದ್ಧ ಎಂದು ಹೆಸರಿಟ್ಟು ಬಸವಣ್ಣನು ಕಲ್ಯಾಣಕ್ಕೆ ಹೋದನು.
ಬಳ್ಳಾರಿ ಜಿಲ್ಲಾ ಕೂಡ್ಲಗಿ ತಾ|| ಮೌಜೆ ದಸುಮಾಪುರ ದೊಳಗಿರುವ ಸುಡುಗಾಡ ಶಿದ್ಧರ ವೀರಭದ್ರಶಿದ್ಧ ಶಿದ್ಧರಾಮ ಶಿದ್ಧ ಇವರು ಹರಪನಹಳ್ಳಿ ಹಡಗಲಿ ತಾಲೂಕುಗಳಲ್ಲಿ ಪ್ರಯಾಣ ಮಾಡುತ್ತಿದ್ದರು. ಆಗ ಅಲ್ಲಿನ ದೇಶಾಯಿ ಅಮಲ್ದಾರ ಶಿರಸ್ತೆದಾರು ಕುಲಕರಣಿ ಮುಂತಾದ ಸಮಸ್ತ ದೈವಾಚಾರ ದವರು ಮನಿವಂದಕ್ಕೆ ಒಂದು ದುಡ್ಡಿನ ಪ್ರಕಾರ ಕೊಡುತ್ತ ಹೋಗಬೇಕು. ಈ ಪ್ರಕಾರ ನಿಯಮಗಳನ್ನು ರೂಪಿಸಲಾಗಿದೆ. “ಸಂ 900 ಫಸಲಿ ಶ್ರೀಮನೃಪ ಶ್ಯಾಲಿವಾಹನ ಶಖ ವರುಷಂಗಳು ಹದಿನಾರುನೂರಾ ಹನ್ನೆರಡು” ಅಂದರೆ ಕ್ರಿ.ಶ.1690ರಲ್ಲಿ ಈ ಪತ್ರವು ಸಿದ್ಧವಾಗಿದೆ.
ಈ ವರೆಗಿನ ಶಾಸನ-ನಿರೂಪ-ಸನದುರೂಪದ ದಾಖಲೆಪತ್ರಗಳ ಪರಾಮರ್ಶನದಿಂದ ಕಂಡುಬರುವ ಸಂಗತಿಗಳನ್ನು ಕೆಳಗಿನಂತೆ ಕ್ರೋಢೀಕರಿಸಿ ಹೇಳಬಹುದು.
1. ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ತುರವಿಹಾಳ ಹಾಗೂ ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ತಂಗಡಗಿಯಲ್ಲಿ ಅಮೋಘಸಿದ್ಧ ಪರಂಪರೆಯ ಮಠಗಳಿದ್ದವು. ಈ ಎರಡೂ ಮಠಗಳಿಗೆ ಶ್ರೀ ಮಾದಪ್ಪಯ್ಯ ಒಡೆಯರ ಅವರು ಗುರುಗಳಾಗಿದ್ದುದು ಇಲ್ಲಿನ ದಾಖಲೆಗಳು ಸ್ಪಷ್ಟಪಡಿಸುತ್ತವೆ.
2. ಅರಕೇರಿ ಅಮೋಘಸಿದ್ಧ ಸಂಪ್ರದಾಯದ ಒಡೆಯ ರಿಗೂ ಸರೂರ ರೇವಣಸಿದ್ಧ ಸಂಪ್ರದಾಯದ ಒಡೆಯರಿಗೂ ಆಗಾಗ ವಾದವಿವಾದಗಳು ನಡೆಯುತ್ತಿದ್ದವು. ಆ ವಿವಾದಗಳನ್ನು ಗುರುಹಿರಿಯರ ಸಮ್ಮುಖದಲ್ಲಿ ಬಗೆಹರಿಸಿ ಕೊಳ್ಳುತ್ತಿದ್ದರೆಂಬುದಕ್ಕೆ ಅನೇಕ ದಾಖಲೆ ಪತ್ರಗಳು ಸಾಕ್ಷಿಯಾಗಿವೆ.
3. ಬಿಜಾಪುರ ಮತ್ತು ಬಾಗಲಕೋಟ ಜಿಲ್ಲೆಯ ಅನೇಕ ಗ್ರಾಮಗಳ ಕುರುಬ ಮನೆತನಗಳ ಕುರಿತು ಅನೇಕ ಮಾಹಿತಿಗಳನ್ನು ಈ ದಾಖಲೆಗಳು ಒದಗಿಸುತ್ತವೆ.
4. ಮಾದಪ್ಪಯ್ಯ ಒಡೆಯರ ಹಾಗೂ ಸಿದ್ದಯ್ಯ ಒಡೆಯರ ಅವರು ಹಳ್ಳಿ-ಹಳ್ಳಿಗಳನ್ನು ಸುತ್ತಾಡಿ ಸಾಮಾಜಿಕವಾಗಿ ಮತ್ತು ಧಾರ್ಮಿಕವಾಗಿ ಕುರುಬ ಸಮುದಾಯವನ್ನು ಜಾಗೃತಗೊಳಿಸುವಲ್ಲಿ ಹಾಗೂ ಅಭಿವೃದ್ಧಿ ಮಾಡುವಲ್ಲಿ ಸಾಕಷ್ಟು ಪರಿಶ್ರಮವಹಿಸಿದ್ದರೆಂಬುದು ಲಭ್ಯವಾದ ದಾಖಲೆಗಳು ತಿಳಿಸುತ್ತವೆ.
5. ಮಾದಪ್ಪಯ್ಯನವರು ಭಕ್ತರು ಕಾಣಿಕೆರೂಪದಲ್ಲಿ ಕೊಡುತ್ತಿದ್ದ ಹಣ ದವಸಧಾನ್ಯ ವಸ್ತ್ರ ಇತ್ಯಾದಿಗಳ ಮಾಹಿತಿಯನ್ನು ರಜಿಸ್ಟರ್ ಬುಕ್‍ನಲ್ಲಿ ದಾಖಲಿಸುತ್ತಿದ್ದರು. ಗ್ರಾಮದ-ತಾಲೂಕು-ಜಿಲ್ಲೆಯ ಹೆಸರು, ಗ್ರಾಮಕ್ಕೆ ಆಗಮಿಸಿದ ದಿನಾಂಕ, ನಿರ್ಗಮಿಸಿದ ದಿನಾಂಕ, ಶಿಷ್ಯರ ಪೂರ್ಣಹೆಸರು, ಶಿಷ್ಯರ ಗೋತ್ರ-ಮನೆದೇವರು, ಹಿಂದಿನ ರಜಿಸ್ಟರ್ ನಂಬರು, ಪೂಜಾಕಾಣಿಕೆ ರಕಮು, ಕಾಣಿಕೆ ರಕಮು, ಫಡಿಕಾಣಿಕೆ, ಅಂತೂ ಒಟ್ಟು ರಕಮು, ಕಾಣಿಕೆ ಕೊಟ್ಟವರ ಹಸ್ತೆ(ಸಹಿ), ಕಾಣಿಕೆ ಕೊಟ್ಟ ತಾರೀಖು, ಶರಾ ಹೀಗೆ ಹನ್ನೊಂದು ಕಾಲಂಗಳಲ್ಲಿ ಸಮಗ್ರ ಮಾಹಿತಿಯನ್ನು ರಜಿಸ್ಟರ್(ಖಾತೆಕೀರ್ದಿ) ಪುಸ್ತಕದಲ್ಲಿ ದಾಖಲಿಸಿರುವುದು ಮಾದಪ್ಪಯ್ಯನವರ ಪ್ರಾಮಾಣಿಕತೆಗೆ ಮತ್ತು ಲೆಕ್ಕಪತ್ರಗಳ ಪಾರದರ್ಶಕತೆಗೆ ನಿದರ್ಶನವಾಗಿದೆ.
6. ಕುಲಬಾಂಧವರ ನಡುವೆ ತಂಟೆ-ತಕರಾರುಗಳು ಬಂದರೆ ದೈವದವರು ಮತ್ತು ಒಡೆಯರ ಸಮ್ಮುಖದಲ್ಲಿ ಬಗೆಹರಿಸಿಕೊಳ್ಳುತ್ತಿದ್ದರು. ತಪ್ಪು ಮಾಡಿದವರಿಗೆ ಶಿಕ್ಷೆಯನ್ನು ನೀಡುತ್ತಿದ್ದರು. ಆ ಶಿಕ್ಷೆಯು ಕುಲಬಾಂಧವರಿಂದ ಬಹಿಷ್ಕಾರ, ದಂಡವನ್ನು ಕಟ್ಟುವುದು ಇತ್ಯಾದಿ ರೂಪದಲ್ಲಿರುತ್ತಿತ್ತು. ಮಾಡಿದ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಯಾಚಿಸಿದರೆ ಅಂಥವರನ್ನು ಮತ್ತೆ ಸಮುದಾಯದೊಳಗೆ ಸೇರಿಸಿಕೊಳ್ಳುವ ಪದ್ದತಿಯಿತ್ತು. ಆ ಪದ್ದತಿ ಮೂರು ಹಂತಗಳಲ್ಲಿ ನಡೆಯುತ್ತಿತ್ತೆಂಬುದು ಇಲ್ಲಿನ ದಾಖಲೆಗಳು ತಿಳಿಸುತ್ತವೆ. ತಪ್ಪು ಮಾಡಿದ ವ್ಯಕ್ತಿ ಶರಣಾಗತ ಪತ್ರವನ್ನು ದೈವದವರಿಗೆ ನೀಡುವುದು, ಆ ಪತ್ರವನ್ನು ಪರಿಶೀಲಿಸಿ ಆ ವ್ಯಕ್ತಿಗೆ ಕ್ಷಮಾಪಣೆ ನೀಡಬೇಕೆಂಬ ಸಮ್ಮತಿ ಪತ್ರವನ್ನು ಕೊಡುತ್ತಾರೆ. ಆ ಶರಣಾಗತ ಪತ್ರ ಹಾಗೂ ಸಮ್ಮತಿ ಪತ್ರವನ್ನು ಪರಿಶೀಲಿಸಿ ಮಾದಪ್ಪಯ್ಯ ಒಡೆಯರು ಕ್ಷಮಾಪಣೆ ಮಾಡಿ ಶುದ್ಧಿ ಸಂಸ್ಕಾರ ಪತ್ರವನ್ನು ನೀಡಿದ್ದನ್ನು ಇಲ್ಲಿನ ಮೂರು ದಾಖಲೆ ಪತ್ರಗಳು ತಿಳಿಸುತ್ತವೆ.
7. ಎಲ್ಲ ದಾಖಲೆಗಳನ್ನು ಸಮಗ್ರವಾಗಿ ಪರಿಶೀಲನೆಗೊಳಪಡಿಸಿದಾಗ ಇನ್ನೂ ಅನೇಕ ವಿಷಯಗಳು ತಿಳಿದು ಬರುತ್ತವೆ. ಈ ನಿಟ್ಟಿನಲ್ಲಿ ಈ ಸಂಪ್ರಬಂಧ ಮೊದಲ ಪ್ರಯತ್ನವಾಗಿದೆ.
** ಮಾದಪ್ಪಯ್ಯನವರ ವಂಶಸ್ಥರೂ, ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಚಿದಾನಂದಯ್ಯ ಗುರುವಿನ ಅವರ ಸೂಚನೆಯ ಮೇರೆಗೆ ನಾನು 2010 ಡಿಸೆಂಬರ್ ತಿಂಗಳಲ್ಲಿ ತುರವಿಹಾಳಕ್ಕೆ ಭೇಟಿ ಕೊಟ್ಟೆನು. ಆ ಸಂದರ್ಭದಲ್ಲಿ ಚಿದಾನಂದಯ್ಯ ಅವರು ತಮ್ಮ ವಂಶಸ್ಥರ ಬಗೆಗೆ, ತಮ್ಮ ಮನೆತನಗಳಲ್ಲಿ ಕಾಪಾಡಿಕೊಂಡು ಬಂದಿದ್ದ ಅನೇಕ ದಾಖಲೆ ಪತ್ರಗಳನ್ನು ತೋರಿಸಿ ಸಾಕಷ್ಟು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ನನ್ನೊಂದಿಗೆ ತುರವಿಹಾಳಕ್ಕೆ ಬಂದು ಸಹಕರಿಸಿದವರು, ಗಂಗಾವತಿಯ ಸರಕಾರಿ ಪದವಿ ಕಾಲೇಜಿನ ಕನ್ನಡ ಅಧ್ಯಾಪಕ ಡಾ.ಜಾಜಿ ದೇವೇಂದ್ರಪ್ಪ ಮತ್ತು ನನ್ನ ಸಂಶೋಧನ ವಿದ್ಯಾರ್ಥಿ ಮಿತ್ರ ಎನ್. ವಿರೂಪಾಕ್ಷಿ. ಇವರೆಲ್ಲರ ನೆರವನ್ನು ನಾನು ಕೃತಜ್ಞತೆಯಿಂದ ಸ್ಮರಿಸುತ್ತೇನೆ.
ಪ್ರಾಧ್ಯಾಪಕ, ಹಸ್ತಪ್ರತಿ ಶಾಸ್ತ್ರ ವಿಭಾಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ, ಬಳ್ಳಾರಿ ಜಿಲ್ಲೆ-583276.

No comments:
Post a Comment