Sunday, January 25, 2015

ಲಾಳಸಂಗಿ ಬಕ್ಕಯ್ಯನಮಠದ ಅಪ್ರಕಟಿತ ಶಾಸನ



ಇಂಡಿ ತಾಲ್ಲೂಕು ಲಾಳಸಂಗಿ ಬಕ್ಕಯ್ಯನಮಠದ ಅಪ್ರಕಟಿತ ಶಾಸನ ಮತ್ತು ಪ್ರಾಚ್ಯಾವಶೇಷಗಳು
ಆದಪ್ಪ ಪಾಸೋಡಿವಿಜಾಪುರ ಜಿಲ್ಲೆಯ ಇಂಡಿ ಪಟ್ಟಣದಿಂದ ಪೂರ್ವಕ್ಕೆ 26 ಕಿ.ಮೀ ದೂರದಲ್ಲಿ ಲಾಳಸಂಗಿ ಗ್ರಾಮವಿದೆ. ತರ್ದವಾಡಿ ನಾಡನ್ನಾಳುತ್ತಿದ್ದ ಕಲಚುರಿ ದೊರೆ ರಾಯಮುರಾರಿ ಸೋವಿದೇವನ ಆಡಳಿತಾವಧಿಯ (ಕ್ರಿ.ಶ. 1167-76) ಶಾಸನವೊಂದನ್ನು ಈ ಗ್ರಾಮದ ಅಗಸಿ ಬಾಗಿಲಿನ ಬಲಭಾಗದಲ್ಲಿ ನಿಲ್ಲಿಸಲಾಗಿದ್ದು, ಇದರಲ್ಲಿ ಪೆರಮಿದೇವ-ಸೋಯಿದೇವ ರಾಣಿಯರು ಆರವೆ (ಉದ್ಯಾನ)ಗಾಗಿ ಹೊಲ-ಮನೆ ಬಿಟ್ಟುಕೊಟ್ಟರೆಂಬ ಅಪರೂಪದ ಮಾಹಿತಿ ಇದೆ.1 ಇಂಥಹುದೇ ಧರ್ಮದಾರವೆಯನ್ನು ‘ಕ್ಷಿತಿರುಹ ನೋಂಪಿ’ ವ್ರತದ ಭಾಗವಾಗಿ ಬೆಳೆಸಿದ ಇನ್ನೊಂದು ಉಲ್ಲೇಖ ಇದೇ ತಾಲ್ಲೂಕಿನ ಹಿರೇಬೇವಿನೂರಿನ ಕ್ರಿ.ಶ.1190ರ ಶಾಸನದಲ್ಲಿ ಉಕ್ತವಾಗಿದೆ. ಇಲ್ಲಿ ಬೊಪ್ಪಣಯ್ಯನ ಅರ್ಧಾಂಗಿ ಸಿರಿದೇವಿಯಕ್ಕ ವನಸ್ಪತಿಗಳನ್ನು ನೆಟ್ಟು ವ್ರತವನ್ನು ಆಚರಿಸುತ್ತಾಳೆ2. ಲಾಳಸಂಗಿ ಮತ್ತು ಹಿರೇಬೇವಿನೂರು ಗ್ರಾಮಗಳ ಅಂದಿನ ಸ್ಥಳೀಯ ಆಡಳಿತ ಮತ್ತು ಸಾರ್ವಜನಿಕರು ಹೊಂದಿದ ಆಸ್ಥೆಯನ್ನು ಮೆಚ್ಚಲೇಬೇಕು.
ಲಾಳಸಂಗಿ ಗ್ರಾಮದ ಕಂದಾಯ ವ್ಯಾಪ್ತಿಗೊಳಪಡುವ ಗೋಳಸರದ ಶ್ರೀಮತಿ ಶಾಂತಾಬಾಯಿ ನಿಂಬರಗಿಯವರ ಹೊಲದಲ್ಲಿರುವ 13ನೇ ಶತಮಾನದ ಪೂರ್ವಾರ್ಧ ಕಾಲಮಾನದ ಒಂದು ಶಾಸನವು ‘ಲಾಳಸಂಗವಿಗೆಯ ಸಂಕರಸೆಟ್ಟಿ’ ಯನ್ನು ಉಲ್ಲೇಖಿಸುತ್ತದೆ3. ಪ್ರಸ್ತುತ ಲಾಳಸಂಗಿ ಸ್ಥಳನಾಮವು ನಾಡಿನೊಳಗೆ ಕಲಹಗಳನ್ನು ನಿವಾರಿಸಿ ಶಾಂತಿ-ಸುವ್ಯವಸ್ಥೆ ಕಾಪಾಡುತ್ತಿದ್ದ ನಾಡಸಂಧಿವಿಗ್ರಹಿಯ ವಾಸದ ನೆಲೆಯಿಂದಾಗಿ ಅದು ನಾಡಸಂಧಿವಿಗ್ರಹಿ > ನಾಳಸಂದಿವಿಗ್ರಹಿ > ಲಾಳಸಂಗಿವಿಗವಿ > ಲಾಳಸಂಗವಿಗೆ > ಲಾಳಸಂಗಿ ಎಂಬುದಾಗಿಯೂ, ಕೆಲವೊಮ್ಮೆ ಮಾತಿನ ಭರದಲ್ಲಿ ಸ್ಥಳೀಯರು ಲಾಸಂಗಿ ಎಂದೂ ಹೇಳಿಬಿಡುತ್ತಾರೆ.
ಬಕ್ಕಯ್ಯನ ಮಠದ ಶಾಸನ: ಗ್ರಾಮದ ಪೂರ್ವಕ್ಕೆ ಊರ ಹೊರಭಾಗದಲ್ಲಿ ‘ಬಕ್ಕಯ್ಯನ ಮಠ’ ಇದೆ. ಉತ್ತರ ದಿಕ್ಕಿಗೆ ಮುಖ ಮಾಡಿರುವ ಕರಿಕಲ್ಲಿನ ಇಂಡೋ-ಇಸ್ಲಾಮಿಕ್ ಮಾದರಿಯ ಕಟ್ಟಡವಿದಾಗಿದೆ. ಮಠದ ಪಡಸಾಲೆಗೆ ಮೂರೂ ಕಮಾನುಗಳ ಮೂಲಕ ಪ್ರವೇಶವಿದೆ. ಈ ಕಮಾನುಗಳು ಮತ್ತು ಇಡೀ ಬಕ್ಕಯ್ಯನ ಮಠದ ಹೊರನೋಟವು ವಿಜಾಪುರದ ಇಬ್ರಾಹಿಂರ ಹಳೆಯ ಜಾಮೀ ಮಸೀದಿ ಮತ್ತು ಹೈದರಯ್ಯನ ಮಸೀದಿಗಳಂತೆ ಕಾಣಿಸುತ್ತದೆ. ಮುಂದೆ ಈ ರಾಚನಿಕ ವಿನ್ಯಾಸವು ಈ ಭಾಗದ ಎಲ್ಲ ಧರ್ಮದವರ ನಿರ್ಮಿತಿಗಳಿಗೂ ವಿಸ್ತರಣೆಯಾಗಿರುವುದನ್ನು ಇಲ್ಲಿ ಕಾಣಬಹುದು. ಕಮಾನುಗಳು, ಮಿನಾರ್‍ಗಳು ಇಲ್ಲಿ ಸರ್ವೇಸಾಮಾನ್ಯವಾಗಿ ಉಳಿದುಕೊಂಡಿವೆ. ಪಡಸಾಲೆಯು ಪೂರ್ವ-ಪಶ್ಚಿಮದಲ್ಲಿ 28 ಅಡಿ, ದಕ್ಷಿಣೋತ್ತರ 10 ಅಡಿಗಳ ವಿಸ್ತೀರ್ಣವನ್ನು ಹೊಂದಿದೆ. ಪಡಸಾಲೆಯ ಮಧ್ಯಮ ಕಮಾ£ನ ಮೂಲಕ ಮಧ್ಯದಂಕಣದಲ್ಲಿ ಒಳಗೆ ಚಿಕ್ಕ ಗರ್ಭಗೃಹದಂತಹ ಒಂದು ಕೋಣೆ ಇರುತ್ತದೆ. ಇದರ ಬಾಗಿಲು 3’9" ಎತ್ತರ ಹಾಗೂ 2’ ಅಗಲವಾಗಿದೆ. ಈ ಕೋಣೆಯ ದ್ವಾರಬಂಧಗಳ ಮೇಲೆ ಇರುವ ಲಲಾಟದಲ್ಲಿ ಶಿವಲಿಂಗದ ರೇಖಾಚಿತ್ರ ಬಿಡಿಸಿದ್ದು, ಲಿಂಗದ ಸುತ್ತಲೂ ಅಯತಾಕಾರದ ಎರಡು ಗೆರೆಗಳನ್ನು ಎಳೆಯಲಾಗಿದೆ. ಶಿವಲಿಂಗದ ಎಡ-ಬಲಕ್ಕೆ ಶಾಸನದ ಸಾಲುಗಳಿದ್ದು, ಬಣ್ಣ ಬಳಿದಿರುವುದರಿಂದ ಅಕ್ಷರಗಳು ಮಾಸಿರುತ್ತವೆ. ಚಿಕ್ಕ ಕೋಣೆಯ ಎಡಭಾಗದಿಂದ ಮಠದ ಮಾಳಿಗೆಯ ಮೇಲೆ ಹೋಗಲು ಕಲ್ಲಿನ ಮೆಟ್ಟಿಲುಗಳನ್ನು ಕಟ್ಟಲಾಗಿದೆ. ಪಡಸಾಲೆಯ ಛತ್ತಿನ ಮುಂಭಾಗಕ್ಕೆ 18 ಅಲಂಕಾರಿಕ ಬುಗುರೆಗಲ್ಲುಗಳನ್ನು ಕೂಡ್ರಿಸಲಾಗಿದೆ. ಇವುಗಳ ಹಿಂಬಾಲಗಳು ಗೋಡೆಯಲ್ಲಿ ಸಿಕ್ಕಿಕೊಂಡಿರುತ್ತವೆ. ಬುಗುರೆಗಲ್ಲುಗಳು ಗಡಿಗೆಬೋದಿನ ಮನೆಯ ಕಾಷ್ಠಬೋದಿಗೆಗಳನ್ನು ನೆನಪಿಸುತ್ತವೆ ಮತ್ತು ಆನೆಯ ಮೇಲೆತ್ತಿದ ಸೊಂಡಿಲಿನಂತೆಯೂ ಕಾಣಿಸುತ್ತವೆ. ಅವುಗಳ ಮೇಲೆ ಕಲ್ಲುಚಪ್ಪಡಿಗಳನ್ನು ಹೊದಿಸಲಾಗಿದೆ. ಇನ್ನು ಪಡಸಾಲೆಯಲ್ಲಿ ನಡೆಯುತ್ತಿದ್ದ ಚಟುವಟಿಕೆಗಳ ಬಗ್ಗೆ ಊರಿನ 85-90 ವರ್ಷದ ವಯೋವೃದ್ಧರನ್ನು  ವಿಚಾರಿಸಿದಾಗ, ಅವರು ಇದನ್ನು ಬಕ್ಕಯ್ಯನ ಮಠವೆಂದೂ, ತಾವು ಇಲ್ಲಿಯೇ ಶಾಲೆ ಕಲಿತ್ತದ್ದು ಎಂದು ಹೇಳುತ್ತಾರೆ. ಮಠದ ಮಧ್ಯದ ಕಮಾನಿನ ಎಡಕಂಬಕ್ಕೆ ಒರಗಿಸಿದ ಸ್ಥಿತಿಯಲ್ಲಿ 18 ಇಂಚು ಅಗಲ 11ಳಿ ಇಂಚು ಎತ್ತರವಿರುವ ಶಿಲಾಶಾಸನವಿದೆ. ಶಾಸನಕಲ್ಲಿನ ಸುತ್ತಲೂ ಒಂದು ಇಂಚು ಅಂಚನ್ನು ಬಿಟ್ಟು ಗೆರೆ ಹಾಕಲಾಗಿದೆ. ಆಯತಾಕಾರದ ಕಲ್ಲಿನ ಮೇಲೆ ಆಯತಾಕಾರದ ಗೆರೆ ಹಾಕಿಕೊಂಡು ಆರು ಸಾಲುಗಳ ಶಾಸನವನ್ನು ಇದರ ಮೇಲೆ ಬರೆಯಲಾಗಿದೆ.
ಶಾಸನ ಪಾಠ
1 ಶ್ರೀ ಯಂಕಂಚಿ ನಿಂಗಪ್ಪನ ಪುತ್ರನಾ
2 ದ ಶಂಕರಪ್ಪ . . . . ಸಿದ್ದಲಿಂಗಪ್ಪ
3 ನ ಪುತ್ರನಾದ ಶಿವಲಿಂಗಪ್ಪ ಯಿಬ್ಬ
4 ರು ಕೂಡಿ ಆನಂದ ನಾಮ ಸಂವತ್ಸ
5 ರದಲ್ಲಿ ತಂಮ ಭಕ್ತಿಯಿಂದ
6 ಕಟ್ಟಿಸಿ ಶರಣು ಮಾಡಿದ ಮಟ
ಯಂಕಂಚಿ ಗ್ರಾಮದ ನಿಂಗಪ್ಪನ ಪುತ್ರ ಶಂಕರಪ್ಪ ಮತ್ತು ಸಿದ್ಧಲಿಂಗಪ್ಪನ ಪುತ್ರ ಶಿವಲಿಂಗಪ್ಪನ ಇಬ್ಬರೂ ಕೂಡಿಕೊಂಡು ಭಕ್ತಿಯಿಂದ ಲಾಳಸಂಗಿ ಗ್ರಾಮದ ಈ ಮಠವನ್ನು ಕಟ್ಟಿಸಿ ಶರಣು ಮಾಡಿದರು ಎಂಬುದು ಶಾಸನದ ಸಾರಾಂಶವಾಗಿರುತ್ತದೆ. ಸಿಂದಗಿ ತಾಲ್ಲೂಕಿನ ಯಂಕಂಚಿಯಿಂದ ಇಂಡಿ ತಾಲ್ಲೂಕಿನ ಲಾಳಸಂಗಿಯು ಸುಮಾರು 55 ಕಿ.ಮೀ. ದೂರದಲ್ಲಿದೆ. ಅಷ್ಟೊಂದು ದೂರದಿಂದ ಬಂದ ಶರಣರಿಬ್ಬರು ಮಠ ಕಟ್ಟಿಸಲು ಮುಂದಾದದ್ದು ಅವರ ಭಕ್ತಿಯ ವಿಷಯವಾಗಿದೆ. ಮಠದ ಕಟ್ಟಡದ ಖರ್ಚು-ವೆಚ್ಚಗಳನ್ನು ಇಬ್ಬರೂ ಭರಿಸಿ ಆನಂದನಾಮ ಸಂವತ್ಸರದಲ್ಲಿ ನಿರ್ಮಾಣಗೊಳಿಸಿರುತ್ತಾರೆ. ಶಂಕರಪ್ಪ-ಶಿವಲಿಂಗಪ್ಪ ಇವರಿಬ್ಬರೂ ಸಮಕಾಲೀನರಾಗಿದ್ದು, ಇವರಿಬ್ಬರ ತಂದೆಯವರಾದ ಯಂಕಂಚಿ ನಿಂಗಪ್ಪ ಮತ್ತು ಸಿದ್ಧಲಿಂಗಪ್ಪನವರೂ ಸಮವಯಸ್ಕರಾಗಿದ್ದಿರಬಹುದು. ‘ಶರಣು ಮಾಡುವುದು’ ಎಂದರೆ ಸಮರ್ಪಿಸುವುದು ಎಂಬರ್ಥ ಬರುತ್ತದೆ. ‘ಮಠ’ ಎಂಬ ಪದಕ್ಕೆ ‘ಯತಿಗಳ ವಾಸಸ್ಥಾನ’ ಎಂಬುದು ಮೂಲಾರ್ಥ. ಅಂತಹ ವಾಸಸ್ಥಾನಗಳಲ್ಲಿ ವಿದ್ಯಾದಾನ ನಡೆಯುತ್ತಿದ್ದುದರಿಂದ ವಿದ್ಯಾಕೇಂದ್ರ, ಪಾಠಶಾಲೆ ಎಂಬ ಅರ್ಥಗಳೂ ಇವೆ. ಅಮರಕೋಶದಲ್ಲಿ ‘ಶಿಷ್ಯರಿರುವ ಸ್ಥಳ’ ಎಂಬ ಅರ್ಥವನ್ನು ಕೊಟ್ಟಿದೆಯಾದರೂ ಈಗಲೂ ಹಳ್ಳಿಗಳಲ್ಲಿ ಪಾಠಶಾಲೆಗಳನ್ನು ‘ಮಠ’, ‘ಸಾಲೆಮಠ’ ಎಂದು ಕರೆಯಲು ಬಹುಮಟ್ಟಿಗೆ ಪ್ರಾಚೀನ ದೇವಸ್ಥಾನಗಳೇ ಕಾರಣ4. ಇತ್ತೀಚಿನವರೆಗೂ ಲಾಳಸಂಗಿಯಲ್ಲಿ ಪಾಠ ಪ್ರವಚನಗಳು ಇದೇ ಮಠದಲ್ಲಿ ನಡೆಯುತ್ತಿದ್ದವೆಂಬುದನ್ನು ಇಲ್ಲಿಯ ವಯೋವೃದ್ಧರು ನೆನಪಿಸಿಕೊಳ್ಳುತ್ತಾರೆ. ಜನರ ಬಾಯಿಯಲ್ಲಿ ಇದು ‘ಬಕ್ಕಯ್ಯನ ಮಠ’ವಾಗಿ ಉಳಿದುಕೊಂಡಿದೆ. ಬಹುಶಃ ಈ ಮಠಕ್ಕೆ ಹೊಂದಿಕೊಂಡಂತೆ ಹಿಂಭಾಗದಲ್ಲಿ ಬಕ್ಕಯ್ಯನ ದೇವಸ್ಥಾನವಿದ್ದಿರಬಹುದು, ಏಕೆಂದರೆ ಈ ಮಠದ ಹಿಂದೆ ಮರಗಳ ಕೆಳಗೆ ಇಟ್ಟಿರುವ ಬೃಹತ್ ಶಿವಲಿಂಗದ ಪಾಣಿಪೀಠವು ಈ ಅಂಶವನ್ನು ದೃಢೀಕರಿಸುತ್ತದೆ.
ಬಕ್ಕಯ್ಯನ ಮಠದ ದುರಸ್ತಿ ಕೆಲಸ 15-20 ವರ್ಷಗಳ ಹಿಂದೆ ನಡೆಯಿತು. ಆಗ ಪಡಸಾಲೆಯ ಗೋಡೆಗಳು ಮತ್ತು ಕಮಾನುಗಳಿಗೆ ಸಿಮೆಂಟ್ ಹಚ್ಚಿ, ಮಧ್ಯದ ಕಮಾನಿನ ಮೇಲೆ ‘ಶ್ರೀ ನೂರಂದೇಶ್ವರ ಜ್ಞಾನಮಂದಿರ ಲಾಳಸಂಗಿ’ ಎಂಬ ಬರಹ ಬರೆಸಲಾಗಿದೆ. ಆದಾಗ್ಯೂ ಗ್ರಾಮಸ್ಥರು ‘ಬಕ್ಕಯ್ಯನ ಮಠ’ವೆಂದೇ ಹೇಳುತ್ತಾರೆ. ಹಿಂದೆ ಈ ಮಠದೊಳಗೆ ಮನೆಗಳಿದ್ದವು, ಮನೆ ಮತ್ತು ಮಠಗಳನ್ನೊಳಗೊಂಡು ದೊಡ್ಡ ಆವರಣ ಗೋಡೆಯೂ ಇರುವುದನ್ನು ಪಾಯದ ಕಲ್ಲುಗಳಿಂದ ಇಂದಿಗೂ ಗುರುತಿಸಬಹುದಾಗಿದೆ. ಬಕ್ಕಯ್ಯನ ಮಠಕ್ಕೆ ‘ನೂರಂದೇಶ್ವರ ಜ್ಞಾನಮಂದಿರ’ ಎಂಬ ಹೆಸರಿಡುವ ಪ್ರಯತ್ನ ಹೇಗೆ ನಡೆಯಿತು? ಎಂದು ಪ್ರಶ್ನಿಸಿದಾಗ ಲಾಳಸಂಗಿಯ ಕೆಲ ಗ್ರಾಮಸ್ಥರು ಈ ಮಠ ಸಿಂದಗಿ ತಾಲ್ಲೂಕು ಮೋರುಟಗಿಯ ನೂರಂದೇಶ್ವರ ಮಠದ ಆಡಳಿತಕ್ಕೊಳಪಟ್ಟಿದೆ ಎಂದು ತಿಳಿಸಿದರು. ಇನ್ನು ಕೆಲವರು ನೂರಂದೇಶ್ವರ ಮಠದಿಂದ ಒಬ್ಬ ಯತಿ ಬಂದು ಇಲ್ಲಿ ತಂಗಿದ್ದರು. ಅವರ ಇರುವಿಕೆಗಾಗಿ ಇದನ್ನು ‘ನೂರಂದೇಶ್ವರ ಜ್ಞಾನಮಂದಿರ’ ಎನ್ನಲಾಗಿದೆ ಎಂಬ ವಿವರಣೆ ನೀಡುತ್ತಾರೆ. ಹಾಗಾದರೆ ಮೋರುಟಗಿಯ ನೂರಂದೇಶ್ವರರು ಯಾರು? ಎಂಬ ಪ್ರಶ್ನೆ ಎದುರಾದಾಗ ಮೋರುಟಗಿಯ ಬಸಲಿಂಗಯ್ಯ ತೆಗ್ಗಿನಮಠರವರು ಹೀಗೆ ಹೇಳುತ್ತಾರೆ - ‘ರಾಮಗಿರಿ ಮಠದ ವಂಶಸ್ಥರಾದ ನೂರಂದಯ್ಯ (1879-1974)ನವರು ತಾಯಿ ಬಸಮ್ಮ ಮತ್ತು ತಂದೆ ಗುರುಬಸಯ್ಯನವರ ಜೇಷ್ಠ ಪುತ್ರರು. ಇವರು ಸಿಂದಗಿ ತಾಲ್ಲೂಕಿನ ಮೋರುಟಗಿ, ಅಫಜಲಪುರ ತಾಲ್ಲೂಕಿನ ಶಿವೂರ, ಇಂಡಿ ತಾಲ್ಲೂಕಿನ ಚಿಕ್ಕಬೇವನೂರು, ಚಿತ್ತಾಪುರ ತಾಲ್ಲೂಕಿನ ಪೆಂಗಳಿ, ಅಕ್ಕಲಕೋಟ ತಾಲ್ಲೂಕಿನ ಸುಲೇರ ಜವಳಗಿ,  ಹಂಜಗಿ ಗ್ರಾಮಗಳಲ್ಲಿ ಮಠಗಳನ್ನು ಸ್ಥಾಪಿಸಿದ್ದರು. ಈ ಎಲ್ಲ ಮಠಗಳು ನೂರಂದೇಶ್ವರ ವಿರಕ್ತಮಠ ಗಳೆಂದು ಕರೆಯಲ್ಪಡುತ್ತಿವೆ’. ಇವರ ಈ ಮಾತಿನಲ್ಲಿ ಲಾಳಸಂಗಿ ಮಠದ ಪ್ರಸ್ತಾಪವೇ ಇರುವುದಿಲ್ಲ. ಹಾಗಾಗಿ ಲಾಳಸಂಗಿಯ ಬಕ್ಕಯ್ಯನ ಮಠಕ್ಕೂ ಮೋರುಟಗಿಯ ನೂರಂದೇಶ್ವರ ಮಠಕ್ಕೂ ಸಂಬಂಧವಿರುವುದಿಲ್ಲ. ಬಕ್ಕಯ್ಯನ ಮಠದ ಇಂಡೋ-ಇಸ್ಲಾಮಿಕ್ ವಾಸ್ತುಶೈಲಿ (ಕಮಾನು) ಹಾಗೂ ಯಂಕಂಚಿ ಶರಣರು ಹಾಕಿಸಿದ ಶಿಲಾಶಾಸನ (ಫಲಕದ) ಲಕ್ಷಣಗಳನ್ನಾಧರಿಸಿ ಬಕ್ಕಯ್ಯನ ಮಠವು ಸುಮಾರು 150 ವರ್ಷಗಳ ಹಿಂದಿನ ಅಂದರೆ ಕ್ರಿ.ಶ.1864-65ರ ನಿರ್ಮಿತಿಯೆಂದು ಹೇಳಬೇಕಾಗುತ್ತದೆ. ನಿಂಗಪ್ಪನ ಪುತ್ರ ಶಂಕರಪ್ಪ ಹಾಗೂ ಸಿದ್ಧಲಿಂಗಪ್ಪನ ಪುತ್ರ ಶಿವಲಿಂಗಪ್ಪನವರ ವಂಶಸ್ಥರು ಯಂಕಂಚಿ ಗ್ರಾಮದಲ್ಲಿ ಇದ್ದಿರುವ ಬಗ್ಗೆ, ಈ ಕುಟುಂಬದವರಿಂದ ನಡೆದ ಇಂಥ ಧರ್ಮ ಕಾರ್ಯಗಳ ಹೆಚ್ಚಿನ ಮಾಹಿತಿಗಳನ್ನು ಪಡೆಯುವುದರ ಜೊತೆಗೆ ಸದರಿ ಕುಟುಂಬದ ವಂಶವೃಕ್ಷವನ್ನು ಲಭ್ಯ ಆಕರಗಳಿಂದ ಸಂಗ್ರಹಿಸಬೇಕಾಗಿದೆ. ಶಾಸನೋಕ್ತ ‘ಯಂಕಂಚಿ’ ಸ್ಥಳನಾಮವು ಕ್ರಿ.ಶ.1146ರ ಯರಗಲ್ಲು ಶಾಸನದಲ್ಲಿ ‘ಎಕ್ಕಂಚಿ’ ಎಂದು ಉಲ್ಲೇಖಿಸಲ್ಪಟ್ಟಿರುತ್ತದೆ. ಬದ್ಧರೂಪದಲ್ಲಿ ಕಾಣಿಸಿಕೊಳ್ಳುವ ‘ಎಕ್ಕಂಚಿ’ ಸ್ಥಳನಾಮದ ಅಂತ್ಯಸ್ವರ ‘ಇ’ ಎಂಬ ಸ್ಥಳವಾಚಕದ ಮೂಲ ನಿರ್ಧರಿಸಲು ಹೊರಟರೆ, ಅದು ಗ್ರಾಮ > ಗಾಮ > ಗಾವ > ಗಾ > ಗೆ > ಗಿ (ಗ್+ಇ=ಗಿ, ಚ್+ಇ=ಚಿ) ಆಗಿದೆಯೆನ್ನಲಾಗುತ್ತದೆ. ಸಿಂದಗಿ ತಾಲ್ಲೂಕಿನ ಇಂಥ ಇತರ ಸ್ಥಳನಾಮಗಳೆಂದರೆ ಚಟ್ಟರಕಿ, ಹೊನ್ನುಟಕಿ, ಇಂಗಳಗಿ, ಕುಮಸಗಿ, ಕುಳೆಕುಮಟಗಿ, ಚಿಕ್ಕರೂಗಿ, ಹಿಪ್ಪರಗಿ ಇತ್ಯಾದಿ5.
ಅಜಾತಸ್ವಾಮಿ ಮಠದ ಕಮಾನುಬಾವಿ: ಲಾಳಸಂಗಿ ಗ್ರಾಮದ ಪಶ್ಚಿಮಕ್ಕೆ ಊರ ದಂಡೆಯಲ್ಲಿ ಅಜಾತಸ್ವಾಮಿ ಮಠವಿದೆ. ಈ ಮಠದ ಆವರಣದಲ್ಲಿ ಒಂದು ಕಮಾನು ಬಾವಿಯಿದ್ದು, ಹೊರನೋಟಕ್ಕೆ ಅದೊಂದು ನೀರಿನ ತೊಟ್ಟಿಯಂತೆ ಕಾಣಿಸುತ್ತದೆ. ಬಾವಿಯ ಈಶಾನ್ಯ ದಿಕ್ಕಿನಿಂದ ಒಳಗೆ ಇಳಿಯಲು ನಾಲ್ಕು ತಿರುವುಗಳಲ್ಲಿ 4+4+5+3 ಹೀಗೆ ಒಟ್ಟು 16 ಮೆಟ್ಟಿಲುಗಳಿರುತ್ತವೆ. ಕ್ರಿ.ಶ.1530ರ ಕಮಲಾಪುರದ ಶಾಸನವು ನಾಡಬಾವಿ ಮತ್ತು ಕಪಿಲೆಯ ಬಾವಿಯೆಂಬ ಎರಡು ರೀತಿಯ ಬಾವಿಗಳನ್ನು ಉಲ್ಲೇಖಿಸು ತ್ತವೆ. ಮೆಟ್ಟಿಲುಗಳ ಮೂಲಕ ನೀರಿಗೆ ಇಳಿಯಬಹುದಾದ ಬಾವಿಯನ್ನು ನಾಡಬಾವಿ ಅಥವಾ ನಡದಬಾವಿಯಾದರೆ, ಮೆಟ್ಟಿಲುಗಳಿಲ್ಲದ ಬಾವಿಗಳಿಂದ ನೀರನ್ನು ಚರ್ಮದ ಅಥವಾ ತಗಡಿನ ಸಾಧನ (ಕಪಿಲೆ)ದಿಂದ ನೀರೆತ್ತುವ ಪ್ರಕಾರದವುಗಳನ್ನು ಕಪಿಲೆಯ ಬಾವಿ ಎನ್ನಲಾಗುತ್ತದೆ6. ಹಾಗಾಗಿ ಮೆಟ್ಟಿಲುಗಳಿರುವ ಈ ಕಮಾನುಬಾವಿಯನ್ನು ನಾಡಬಾವಿ ಎಂದು ಕರೆಯಬೇಕಾಗುತ್ತದೆ. ತಮಿಳಿನಲ್ಲಿ ಇದನ್ನು ‘ನಡೈಬಾವಿ’ ಎನ್ನುತ್ತಾರೆ. ಬಾವಿಗೆ ಇಳಿಯುವ ಮೆಟ್ಟಿಲು ಹಾಗೂ ಎಡ-ಬಲ ಗೋಡೆಗಳಿಗೆ ಬೃಹತ್ ಗಾತ್ರದ ಚೌಕಾದ ಕರಿಕಲ್ಲುಗಳಿದ್ದು, ಮೇಲ್ಛಾವಣಿಗೆ ಜೋಡಿಸಿರುವ ಕಲ್ಲುಗಳ ಮಧ್ಯದಲ್ಲಿ ಗಾರೆ (ಗಚ್ಚು) ಹಾಕಿ ಕಟ್ಟಲಾಗಿರುತ್ತದೆ. ಎಷ್ಟೇ ಎತ್ತರದ ವ್ಯಕ್ತಿಯೂ ಒಬ್ಬ ನಿರಾಯಾಸವಾಗಿ ಒಳಗೆ ಹೋಗಿ ಬರಬಹುದು. ನೆಲವನ್ನು ವೃತ್ತಾಕಾರದಲ್ಲಿ ಅಗೆದು ಗಟ್ಟಿಭಾಗದಿಂದ ಮೇಲೆ ಕರಿಕಲ್ಲಿನಿಂದ ಚೌಕಾಕಾರದಲ್ಲಿ ಗೋಡೆಕಟ್ಟಿ, ಅದರ ಮೇಲೆ ಪೂರ್ವ-ಪಶ್ಚಿಮ 19 ಅಡಿ, ದಕ್ಷಿಣೋತ್ತರ 17 ಅಡಿ ಸ್ಥಳಾವಕಾಶ ಕಲ್ಪಿಸಿಕೊಡು ಒಟ್ಟು 10 ಕಮಾನಾಕೃತಿಗಳನ್ನು ನಿರ್ಮಿಸಲಾಗಿದೆ. ಈ ಕಮಾನುಗಳ ಅಡಿಯಲ್ಲಿ ವಿಶಾಲವಾದ ಸಮತಟ್ಟು ಮಾಡಿ ತಂಗಲು ಸ್ಥಳಾವಕಾಶ ಒದಗಿಸಲಾಗಿದೆ. ಈ ತಂಗುದಾಣಗಳು ವಿಜಾಪುರ ಹತ್ತಿರದ ಕುಮಟಗಿಯ ಬಾವಿಗಳಲ್ಲಿರುವಂತೆಯೇ ಇರುತ್ತವೆ7. ಕುಮಟಗಿಯಲ್ಲಿರುವಂತೆ ಅಲಂಕಾರಿಕ ಚಿತ್ರಗಳು ಇರುವುದಿಲ್ಲ. ಕಮಾನು ಬಾವಿಯ ಪೂರ್ವದ ಗೋಡೆಗೆ ಎರಡು ಚೌಕಾಕಾರದ ಕೋಷ್ಠಗಳು, ಪಶ್ಚಿಮದ ಗೋಡೆಗೆ ಎರಡು ಕಮಾನಿನಾಕಾರದ ಕೋಷ್ಠಗಳು ಹಾಗೂ ಉತ್ತರ ದಿಕ್ಕಿನ ಗೋಡೆಯಲ್ಲಿ ಎರಡು ಚೌಕಾಕಾರದ ಕೋಷ್ಠ(ಮಾಡು)ಗಳಿರುತ್ತವೆ. ದಕ್ಷಿಣ ದಿಕ್ಕಿಗೆ ಸ್ಥಳಾವಕಾಶ ಇಲ್ಲದಿರುವುದರಿಂದ ಕೋಷ್ಠಗಳನ್ನು ಮಾಡಿರುವುದಿಲ್ಲ. ಲಾಳಸಂಗಿಯ ಈ ಬಾವಿ ನೆಲಮಟ್ಟದಿಂದ ಕೆಳಗೆ ನಿರ್ಮಾಣವಾದ ಕಮಾನುಗಳು, ಅವುಗಳ ಮೇಲೆ ಹಾಕಿದ ಕಲ್ಲಿನ ಛಾವಣಿಗಳು ಇದ್ದು, ಹೊರಗಿನಿಂದ ನೋಡಿದರೆ ನೆಲದೊಳಗೆ ಬಾವಿಯ ಸುತ್ತ ಕಮಾನುಗಳಿವೆಯೆಂದು ಗೊತ್ತಾಗುವುದೇ ಇಲ್ಲ. ಆದಾಗ್ಯೂ ಕಮಾನುಗಳ ರಚನಾ ವಿನ್ಯಾಸ ಕಟ್ಟಡ ಶೈಲಿಗಳು ವಿಜಾಪುರದ ಚಾಂದ್‍ಬಾವಡಿಯನ್ನು ಹೋಲುವುದರಿಂದ ಈ ಬಾವಿಯ ಕಾಲಮಾನವನ್ನು ಕ್ರಿ.ಶ.1550-1600ರ ನಂತರದ ಅವಧಿಗೆ ಹಾಕಬಹುದು.
ಬಾವಿಯಿಂದ ಒಂದು ಕಿ.ಮೀ. ದೂರದಲ್ಲಿರುವ ಕೆರೆ ತುಂಬಿದರೆ ಬಾವಿಗೆ ನೀರು ಒಸರುತ್ತದೆ. ಕಮಾನುಬಾವಿ ಯೊಂದಿಗೆ ಬೆಸೆದುಕೊಂಡಿರುವ ಅಜಾತಸ್ವಾಮಿ ಮಠದ ಬಗ್ಗೆ ತಿಳಿಯಲೆತ್ನಿಸಿದಾಗ ಅಜಾತಸ್ವಾಮಿಗಳು ಆಲಮೇಲದಿಂದ ಲಾಳಸಂಗಿ ಗ್ರಾಮಕ್ಕೆ ಬಂದು ಇಲ್ಲಿ ಮಠ ಸ್ಥಾಪಿಸಿದರಂತೆ. ಇವರ ಸಹೋದರ ಗೋಸಯ್ಯನವರು ಆಲಮೇಲದ ಕೆರೆ ಹಿಂಭಾಗದಲ್ಲಿ ಮಠವನ್ನು ಕಟ್ಟಿಸಿದ್ದರೆ, ಇನ್ನೊಬ್ಬ ಸಹೋದರ ಲಗಳಯ್ಯ ಸ್ವಾಮಿಗಳು ಆಲಮೇಲದ ಕಡಣಿ ಅಗಸಿಯ ಹತ್ತಿರವಿರುವ ಬಡಿಗೇರ ಓಣಿಯಲ್ಲಿ ಮಠ ಮಾಡಿಕೊಂಡಿದ್ದ ಮಾಹಿತಿ ತಿಳಿದು ಬಂತು. ಇನ್ನು ಅಜಾತಸ್ವಾಮಿಗಳು ಜಾತ್ಯಾತೀತ ತತ್ವದವರಾಗಿದ್ದು, ಎಲ್ಲ ಜಾತಿಗಳ ಜನರ ಮನೆಗೂ ಭಿಕ್ಷೆಗೆ ಹೋಗುತ್ತಿದ್ದರಂತೆ. ಒಂದು ದಿನ ಮಾಂಸಾಹಾರಿಯ ಮನೆಗೆ ಭಿಕ್ಷೆ ಬೇಡಲು ಹೋದಾಗ ಅವರು ಮಾಂಸಭಿಕ್ಷೆ ನೀಡಿದರಂತೆ. ಇದರಿಂದ ಶಾಖಾಹಾರಿ ಜನರು ರೊಚ್ಚಿಗೆದ್ದು ಧ್ಯಾನಕ್ಕೆ ಕುಳಿತಿದ್ದ ಅಜಾತಸ್ವಾಮಿಗಳನ್ನು ಮಾಂಸಭಿಕ್ಷೆ ಬೇಡಿರುವುದೇಕೆ? ಎಂದು ಕೇಳಬೇಕೆನ್ನುವಷ್ಟರಲ್ಲಿ ಅವರು ಲಿಂಗೈಕ್ಯರಾಗಿದ್ದರಂತೆ, ಹೀಗೆ ಜನರು ಮಾತನಾಡಿಕೊಳ್ಳುತ್ತಾರೆ.
ಬಸವಂತನ ಕಮಾನುಬಾವಿಯ ದಂಡೆ ಮೇಲಿರುವ ಸೂರ್ಯ ಮತ್ತು ನರಸಿಂಹ ಶಿಲ್ಪಗಳು: ಗ್ರಾಮದ ಹಡಪದರ ಓಣಿಯೆದುರು ಲಾಳಸಂಗಿ-ಶಿವಪುರ ಮುಖ್ಯ ರಸ್ತೆಯಲ್ಲಿ ಬಸವಂತನ ಬಾವಿಯೆಂದು ಹೇಳಲಾಗುವ ಇನ್ನೊಂದು ಕಮಾನುಬಾವಿಯಿದೆ. ಅಜಾತಸ್ವಾಮಿ ಮಠದ ಆವರಣ ದಲ್ಲಿರುವ ಬಾವಿಗಿಂತ ಇದು ದೊಡ್ಡದಾಗಿದೆ. ಬಾವಿಯ ದಕ್ಷಿಣ ದಿಕ್ಕಿನಿಂದ ಮೆಟ್ಟಿಲುಗಳ ಮೂಲಕ ನೀರಿಗೆ ಇಳಿಯಬೇಕಾಗುತ್ತದೆ. ಇದೂ ಸಹ ನಾಡಬಾವಿ ಅಥವಾ ನಡದ ಬಾವಿಯ ಪ್ರಾಕಾರವಾಗಿರುತ್ತದೆ. ಗೋಡೆಗೆ ಬಳಸಿದ ಚೌಕಾಕಾರದ ಕರಿಕಲ್ಲುಗಳ ನಡುವೆ ಗಾರೆ ಬಳಸಲಾಗಿದೆ. ಈ ಹಿಂದೆ ಎರಡು ಕಪಿಲೆ(ಬಾರಿ)ಗಳ ಮೂಲಕ ಬಾವಿಯ ನೀರನ್ನು ಮೇಲೆತ್ತಲಾಗುತ್ತಿತ್ತು.
ಬಾವಿಯನ್ನು ಪ್ರವೇಶಿಸುವಾಗ ನಮ್ಮ ಬಲಭಾಗಕ್ಕೆ ಪೂರ್ವಾಭಿಮುಖವಾಗಿ ಗಣೇಶನ ಗುಡಿಯಿದೆ. ಈ ಗುಡಿಯ ಬಲಗೋಡೆಗೆ ಅಪರೂಪದ ಸೂರ್ಯ ಶಿಲ್ಪವೊಂದನ್ನು ನಿಲ್ಲಿಸಲಾಗಿದೆ. ಇದರಲ್ಲಿ ಸೂರ್ಯನು ಸಮಭಂಗಿಯಲ್ಲಿ ನಿಂತು ಕೈಗಳಲ್ಲಿ ನೀಳವಾದ ತಾವರೆಯ ಮೊಗ್ಗುಗಳನ್ನು ಲಘುವಾಗಿ ಹಿಡಿದಿರುತ್ತಾನೆ. ಸೂರ್ಯಶಿಲ್ಪವು ವಿಜಯ ನಗರೋತ್ತರ ಕಾಲದ್ದೆಂದು ತಿಳಿದುಬರುತ್ತದೆ. ಗಟ್ಟಿಯಾದ ಕರಿಕಲ್ಲಿನಲ್ಲಿ ತುಂಬಾ ಒರಟಾಗಿ ಶಿಲ್ಪಿಸಲ್ಪಟ್ಟ ಸೂರ್ಯ ಬಿಂಬವನ್ನು ಪೂರ್ವಕ್ಕೆ ಮುಖಮಾಡಿ ನಿಲ್ಲಿಸಲಾಗಿದೆ. ಸೂರ್ಯನಿಗೆ ಎರಡೂ ಕಾಲುಗಳಲ್ಲಿ ಕಾಲ್ಕಡಗ, ನಡುಪಟ್ಟಿಯಿಂದ ಇಳಿಬಿದ್ದಿರುವ ಬಟ್ಟೆ, ಎಡಭುಜದಿಂದ ಎದೆಯ ಬಲಕ್ಕೆ ಇಳಿಬಿದ್ದಿರುವ ಯಜ್ಞೋಪವೀತ, ಕರ್ಣಕುಂಡಲ, ಕರಂಡಕಗಳನ್ನು ಕಂಡರಿಸಲಾಗಿದೆ. ಸೂರ್ಯನ ಇಕ್ಕೆಲಗಳಲ್ಲಿ ಉಷಾ-ಪ್ರತ್ಯುಷಾರ ಚಿಕಣಿ ಶಿಲ್ಪಗಳನ್ನು ಮೂಡಿಸಲಾಗಿದೆ8. ಗಣೇಶನ ಗುಡಿಯ ಎಡಗೋಡೆಗೆ ಸಮಭಂಗಿಯಲ್ಲಿ ನಿಂತಿರುವ ನರಸಿಂಹನ ಶಿಲ್ಪವಿದೆ. ನಾಲ್ಕು ಕೈಗಳಿದ್ದು ಒಂದು ಬಲಗೈಯಲ್ಲಿ ಶಂಖ, ಇನ್ನೊಂದು ಬಲಗೈ ಕೆಳಗೆ ಬಿಡಲಾಗಿದೆ. ಒಂದು ಎಡಗೈಯಲ್ಲಿ ಗದೆಯನ್ನು ಕೆಳಮುಖ ಮಾಡಿ ಹಿಡಿದುಕೊಂಡಿದ್ದು, ಇನ್ನೊಂದು ಎಡಗೈಯಲ್ಲಿರುವ ವಸ್ತು ಅಸ್ಪಷ್ಟವಾಗಿದ್ದು ಅದು ತೃಟಿತವಾಗಿದೆ. ಕೊರಳಲ್ಲಿ ಅರ್ಧ ಚಂದ್ರಾಕಾರದ ಆಭರಣವಾದ ಅಡ್ಡಿಗೆ, ಎಡಭುಜದಿಂದ ಹಾದು ಬಲತೋಳಿನ ಕೆಳಗೆ ಇಳಿದಿರುವ ಎರಡೆಳೆಯ ಯಜ್ಞೋಪವೀತ, ನಡುವನ್ನು ಬಿಗಿದು ಮುಂಭಾಗದಲ್ಲಿ ಗಂಟು ಬಿದ್ದಿರುವ ನಡುಬಂಧ, ಇಳಿಬಟ್ಟೆ, ಕೈಕಡಗ ಮತ್ತು ಅಲಂಕಾರಿಕ ಕಾಲ್ಕಡಗಗಳನ್ನು ತೋರಿಸಲಾಗಿದೆ. ಮುಖಲಕ್ಷಣಗಳನ್ನು ಗಮನಿಸಿದಾಗ ನರಸಿಂಹನಂತೆಯೂ, ಆಯುಧಗಳನ್ನು ಪರಿಗಣಿಸಿದಾಗ ವಿಷ್ಣುವಿನಂತೆಯೂ9 ಕಾಣಿಸುವ ಈ ಶಿಲ್ಪವು ಗಟ್ಟಿಯಾದ ಕರಿಕಲ್ಲಿನಲ್ಲಿ ಒರಟಾಗಿ ಕೆತ್ತಲ್ಪಟ್ಟಿದೆ. ಶಿಲ್ಪದ ಎಡಬಲಗಳಲ್ಲಿ ಮನುಷ್ಯರಿಬ್ಬರ ಚಿಕಣಿ ಶಿಲ್ಪಗಳಿರುತ್ತವೆ. ಇದೂ ಕೂಡ ವಿಜಯನಗರೋತ್ತರ ಕಾಲಮಾನದ್ದಾಗಿರುತ್ತದೆ.
ಆರೇರ ಓಣಿಯಲ್ಲಿರುವ ಸಿಂಹಪೀಠ: ಲಾಳಸಂಗಿ ಗ್ರಾಮದ ಆರೇರ ಓಣಿಯಲ್ಲಿ ಉತ್ತರಕ್ಕೆ ಮುಖ ಮಾಡಿರುವ ಸಿಂಹಪೀಠವು 14 ಇಂಚು ಎತ್ತರ 36ಳಿ ಇಂಚು ಉದ್ದವಿದೆ. 16 ಇಂಚು ಅಗಲವಿರುವ ಕರಿಕಲ್ಲು ಚಪ್ಪಡಿಯನ್ನು ಇದಕ್ಕಾಗಿ ಬಳಸಲಾಗಿದೆ. ಪೀಠವನ್ನು ಸರಿಯಾಗಿ ಮೂರು ಭಾಗಗಳನ್ನಾಗಿ ಗುರುತಿಸಿಕೊಂಡು ಮೂರು ಸಿಂಹಗಳನ್ನು ಇದರ ಮೇಲೆ ಕಂಡರಿಸಲಾಗಿದೆ. ಪೀಠದ ಬಲಭಾಗದಲ್ಲಿರುವ ಸಿಂಹವು ತನ್ನ ಮುಂದಿನ ಎಡಗಾಲು ಎತ್ತಿಹಿಡಿದಿದ್ದು ಬಾಲವನ್ನು ಬೆನ್ನಿನ ಮೇಲೆ ತೆಗೆದುಕೊಂಡಿದೆ. ಮುಖವನ್ನು ಎದುರುಗಡೆ ತಿರುಗಿಸಿ ಬಾಯಿ ತೆರೆದು ನಿಂತಿರುತ್ತದೆ. ನಡುವೆಯಿರುವ ಸಿಂಹವು ತನ್ನ ಹಿಂಗಾಲುಗಳ ಮೇಲೆ ಕುಳಿತು ಮುಂಗಾಲುಗಳ ಮೇಲೂ ಭಾರ ಹಾಕಿದೆ. ಕಣ್ಣರಳಿಸಿ, ಬಾಯ್ತೆರೆದು ಕುಳಿತಿದೆ. ಇನ್ನು ಪೀಠದ ಎಡಭಾಗದಲ್ಲಿರುವ ಸಿಂಹವು ಮುಂದಿನ ಬಲಗಾಲನ್ನು ಮೇಲೆ ಎತ್ತಿದ್ದು, ಬಾಲವನ್ನು ಬೆನ್ನಿನ ಮೇಲೆ ತೆಗೆದುಕೊಂಡಿದೆ. ಶಿಲ್ಪಿಯು ಸಿಂಹಪೀಠದ ಮೇಲೆ ಹಾಗೂ ಕೆಳಗೆ ಅಂಚಿನಲ್ಲಿ ಪಟ್ಟಿಕೆ ಹಾಕಿಕೊಂಡಿರುತ್ತಾನೆ. ಈ ಸಿಂಹಪೀಠದ ನೆತ್ತಿಯ ಮೇಲೆ 5x5 ಇಂಚು ಅಳತೆಯ ಚೌಕಾದ ರಂಧ್ರವನ್ನು ಕೊರೆಯಲಾಗಿದೆ. ಪೀಠಕ್ಕೆ ಹೀಗೆ ರಂಧ್ರ ಕೊರೆದು ಮೂರ್ತಿಯನ್ನು ಪೀಠದ ಮೇಲೆ ಸ್ಥಿರೀಕರಿಸುತ್ತಿದ್ದ ಮಾಹಿತಿ ಇದರಿಂದ ತಿಳಿದುಬರುತ್ತದೆ. ಸಿಂಹಪೀಠದ ಹತ್ತಿರದಲ್ಲಿ ಬಿದ್ದಿರುವ ತೃಟಿತವಾದ ಏಳುಹೆಡೆಗಳ ಕಿರೀಟದಂತಹ ಭಾಗ ಹಾಗೂ ಸಿಂಹಪೀಠ - ಈ ಎರಡನ್ನೂ ಪರಾಮರ್ಶಿಸಿದಾಗ ಪಾರ್ಶ್ವನಾಥ ತೀರ್ಥಂಕರ ಹಾಗೂ ಜಿನಬಸದಿಯೊಂದು ಲಾಳಸಂಗಿಯಲ್ಲಿದ್ದಿತ್ತೆಂದು ತಿಳಿದುಬರುತ್ತದೆ. ಆ ಜಿನಾಲಯವು ಯಾವುದೋ ಒಂದು ಕಾಲಘಟ್ಟದಲ್ಲಿ ಸಮೂಲನಾಶವಾಗಿದೆ. ಮಸೀದಿಯ ಇಂದಿನ ಜಾಗವು ಆಳೆತ್ತರದ ದಿಬ್ಬದ ಮೇಲಿದೆ. ಅಲ್ಲಿ ಜಿನಾಲಯದ ಕುರುಹುಗಳನ್ನು ಇಂದಿಗೂ ಮಸೀದಿಯ ಮೆಟ್ಟಿಲುಗಳಿಗೆ ಹಾಕಿದ ಕಲ್ಲಿನ ಕಂಬ, ಮತ್ತಿತರ ತೃಟಿತ ಶಿಲ್ಪಗಳಲ್ಲಿ ನೋಡಬಹುದಾಗಿದೆ. ಅಂದರೆ ವಿಜಾಪುರದ ಆದಿಲ್‍ಶಾಹಿ, ಹೈದ್ರಾಬಾದಿನ ನಿಜಾಮರ ದಾಳಿಗೆ ಸಿಲುಕಿ ನಲುಗಿದ ಸ್ಥಳ ಇದಾಗಿದೆ.
ಲಾಳಸಂಗಿ ಗ್ರಾಮವೂ ಕೂಡ ಒಂದು ಜೈನನೆಲೆಯಾಗಿತ್ತೆಂದು ನಾವು ಪರಿಗಣಿಸಲೇಬೇಕಾಗುತ್ತದೆ. ತರ್ದವಾಡಿ ನಾಡಿನ ಶಾಸನಗಳಲ್ಲಿ ಕೆಲ ಜಿನಬಸದಿಗಳನ್ನು ಕಟ್ಟಿಸಿದ ಮತ್ತು ಜಿನಪ್ರತಿಮೆಗಳನ್ನು ಮಾಡಿಸಿದ ಉಲ್ಲೇಖಗಳು ಬಂದಿವೆ. ಅವು ಅಂದಿನ ಜೈನಸಮಾಜದ ಮೇಲೆ ಹೆಚ್ಚಿನ ಬೆಳಕನ್ನು ಬೀರುತ್ತಿದ್ದು, ಆ ಜನರ ಜಿನಭಕ್ತಿ, ನಿಷ್ಠೆ, ಶ್ರದ್ಧೆಗಳ ಸಂಕೇತವಾಗಿವೆ. ಅಗರಖೇಡದಲ್ಲಿ ಪಾರಿಸ್ವರ ದೇವರ ಉಲ್ಲೇಖ, ರೂಗಿ ಶಾಸನದ ಸೀಮಾನಿರ್ದೇಶನದಲ್ಲಿ ಬರುವ ಬಸದಿಯ ಉಲ್ಲೇಖ, ಸಿಂದಗಿ ಶಾಸನದಲ್ಲಿ ಬರುವ ಬಸದಿಯ ಗಡಿಂಬದ ಕೋಲ ಪ್ರಸ್ತಾಪ - ಇವೆಲ್ಲವೂ ಅಲ್ಲಿ ಬಸದಿಗಳಿದ್ದುದನ್ನು ಸೂಚಿಸುತ್ತವೆ10. ಲಾಳಸಂಗಿಯಲ್ಲಿ ಪಾರ್ಶ್ವನಾಥ ತೀರ್ಥಂಕರನ ಪೀಠ, ಪಾರ್ಶ್ವನಾಥ ತೀರ್ಥಂಕರನ ತಲೆಯ ಮೇಲಿರುವ ಏಳು ಹೆಡೆಗಳ ಸರ್ಪದ ತೃಟಿತಶಿಲ್ಪ & ಮಸೀದಿಯ ಆವರಣದಲ್ಲಿರುವ ಬಸದಿಯ ಕಂಬಗಳು ಜೈನಾವಶೇಷಗಳೆ£ಸುತ್ತವೆ. ಇಂಥ ಜಿನಾಲಯ-ಬಸದಿಗಳು ಮೊದ ಮೊದಲು ದೇಶ ಪರ್ಯಟನದಲ್ಲಿದ್ದ ಜಿನಮುನಿಗಳ ತಾತ್ಕಾಲಿಕ ವಾಸಸ್ಥಾನಗಳಾಗಿದ್ದು, ನಂತರ ಅವರ ಸದಾ ನೆಲೆಸುವ ತಾಣಗಳಾದಂತೆ ತೋರುತ್ತವೆ. ಸದ್ಯ ಲಾಳಸಂಗಿಯಲ್ಲಿ ಜೈನ ಕುಟುಂಬಗಳಿರುವುದಿಲ್ಲ. ಬದಲಾಗಿ ಮುಸ್ಲಿಂ ಕುಟುಂಬಗಳಲ್ಲಿ ಜೈನಮ್ಮ, ಜೈನುಲ್ ಎಂಬ ಹೆಸರಿನವರಿದ್ದಾರೆ. ಸೂರ್ಯೋದಯದೊಂದಿಗೆ ತಲೆ ಮೇಲೆ ಎಣ್ಣೆಬುಟ್ಟಿ ಹೊತ್ತು ಸುತ್ತಲಿನ ಊರುಗಳಿಗೆ ಹಲ್ಲುಪುಡಿ, ಕುಂಕುಮ, ಎಲೆ-ಅಡಿಕೆ, ನಿಂಬೆಹಣ್ಣು ಮಾರುತ್ತಿದ್ದ ಲಾಳಸಂಗಿಯ ಜೈನಮ್ಮ (ನನ್ನ ತಾಯಿಗೆ ಚಿರಪರಿಚಯದವರು) ಇತ್ತೀಚೆಗೆ ತೀರಿಕೊಂಡರು.
ಪೂರ್ಣಕುಂಭಗಳ ಶಿಲ್ಪ: ದೇವಾಲಯಗಳ ಕಕ್ಷಾಸನದಲ್ಲಿ ಕಂಡುಬರುವ ಪೂರ್ಣಕುಂಭಗಳ ಶಿಲ್ಪವು ಲಾಳಸಂಗಿ ಗ್ರಾಮದ ಬಕ್ಕಯ್ಯನ ಮಠದ ಹಿಂಭಾಗದಲ್ಲಿರುವ ಶಾಂತಪ್ಪ ಅವ್ವಪ್ಪ ಪಾಟೀಲ ಅವರ ತೋಟದ ಬಾವಿಯ ದಂಡೆ ಮೇಲಿದೆ. 4 ಇಂಚು ದಪ್ಪ, 20 ಇಂಚು ಎತ್ತರ ಹಾಗೂ 36 ಇಂಚು ಉದ್ದನೆಯ ಕಪ್ಪುಶಿಲಾ (ಃಟಚಿಛಿಞ ಖಿಡಿಚಿಠಿ) ಫಲಕದಲ್ಲಿ ಎರಡು ಪೂರ್ಣಕುಂಭಗಳನ್ನು ಕಂಡರಿಸಿದ್ದು, ಮೂರನೆಯ ಪೂರ್ಣಕುಂಭ ತೃಟಿತವಾಗಿರುತ್ತದೆ. ಶಿಲಾಫಲಕದ ಅಂಚಿನಲ್ಲಿ ಪಟ್ಟಿಕೆಯನ್ನು ಹಾಕಿಕೊಂಡು ಪ್ರತಿ ಪೂರ್ಣಕುಂಭದ ನಂತರ ಒಂದೊಂದು ಕಂಬ ಮಾದರಿಯನ್ನು ಮಾಡಲಾಗಿದೆ. ಕಂಬ ಮಾದರಿಯಲ್ಲಿ ಪಿಂಡಿ, ಶಲಾಕ, ಕಂಠ, ಮುಚ್ಚಳ, ಕಂಠ, ಬೋದಿಗೆಗಳನ್ನು ತೋರಿಸಲಾಗಿದೆ. ಪೂರ್ಣಕುಂಭದ ಅಡಿಯಲ್ಲಿ ಸಿಂಬಿ (ನಿಲುಗಡೆ) ಇದ್ದು, ಕುಂಭದ ಮಧ್ಯದಲ್ಲಿ ಒಂದು ಸುತ್ತು ಅಲಂಕಾರ ಪಟ್ಟಿಕೆ ಹಾಕಿ ಕಟ್ಟಲಾಗಿದೆ. ಕುಂಭಗಳ ಕಂಠಕ್ಕೆ ಮೇಲೆ ಎರಡೆರಡು ಎಲೆಗಳನ್ನು ಹಾಕಿ, ಎಲೆ ಮೇಲೆ ಫಲವನ್ನಿರಿಸಲಾಗಿದೆ. ಇಂತಹ ಪೂರ್ಣಕುಂಭಗಳು ಐಹೊಳೆಯ ಲಾಡಖಾನ್ ದೇವಾಲಯದ ಕಕ್ಷಾಸನದಲ್ಲಿದ್ದು, ಇವು 8-9ನೇ ಶತಮಾನದಲ್ಲಿ ಯಥೇಚ್ಛವಾಗಿ ಬಳಸಲ್ಪಟ್ಟಿರುತ್ತವೆ11. ಹಾಗಾಗಿ ಆ ಕಾಲಮಾನದ ವಾಸ್ತುಲಕ್ಷಣಗಳನ್ನೊಳಗೊಂಡ ಆಲಯವೊಂದು ಲಾಳಸಂಗಿಯಲ್ಲಿ ಇತ್ತೆಂಬುದು ಸ್ಪಷ್ಠವಾಗುತ್ತದೆ.
ಲಾಳಸಂಗಿ ಊರಿನ ಸುತ್ತಲೂ ಮಣ್ಣಿನ ಕೋಟೆ ಗೋಡೆಯಿತ್ತು. ಎರಡು ಪ್ರವೇಶ ದ್ವಾರ (ಅಗಸಿಬಾಗಿಲು)ಗಳು ಇದ್ದವು. ಗ್ರಾಮದಿಂದ ಉತ್ತರ ದಿಕ್ಕಿಗೆ ಬಸವಂತನ ಬಾವಿಯ ಹತ್ತಿರ ಒಂದು ಅಗಸಿ ಬಾಗಿಲು ಇತ್ತು. ಅದನ್ನು ಕೆಡವಿ ಗ್ರಾಮದ ಸರ್ಕಾರಿ ಶಾಲಾ ಕಟ್ಟಡ ಕಟ್ಟಿಸಲಾಯಿತೆಂದು ಹೇಳಲಾಗುತ್ತದೆ. ಇನ್ನೊಂದು ಅಗಸಿ ಬಾಗಿಲು ಈಗಿನ ಹನುಮಂತದೇವರ ಗುಡಿಯ ಮುಂಭಾಗದಲ್ಲಿ ಅಲ್ಪಸ್ವಲ್ಪ ದುರಸ್ತಿಹೊಂದಿ ತನ್ನ ರೂಪವನ್ನು ಬದಲಿಸಿಕೊಂಡಿದೆ. ಮಣ್ಣಿನ ಗೋಡೆಗಳ ಅರಮನೆಯ ಅವಶೇಷಗಳೂ ಇದ್ದವು. ಆದಿಲ್‍ಶಾಹಿ ಕಾಲದಲ್ಲಿ ಸಂಸ್ಥಾನಿಕ ಲಾಲ್‍ಸಿಂಗ್‍ನೆಂಬ ಸರ್ದಾರನು ಇಲ್ಲಿ ಆಳ್ವಿಕೆ ನಡೆಸಿ, ನೀರಿಗಾಗಿ ಅಸಂಖ್ಯಾತ ಬಾವಿಗಳನ್ನು ಕೊರೆಸಿ ಕಲ್ಲುಗೋಡೆ ಕಟ್ಟಿಸಿದ್ದನು. ಗ್ರಾಮದಲ್ಲಿ ಮನೆಗಳ ಪಾಯ ತೋಡುವಾಗ ಶಾಹಿ ಕಾಲದ ನಾಣ್ಯಗಳು, ಪೆÇೀರ್ಚುಗೀಸರ ನಾಣ್ಯಗಳು ಈ ಹಿಂದೆ ಸಿಕ್ಕಿವೆ. ಅಲ್ಲದೆ ಗ್ರಾಮದ ಯಾವುದೇ ಭಾಗದಲ್ಲಿ ಅಗೆದರೂ ಒಂದು ಕಡೆ ಒಂದು ಅಡಿ, ಕೆಲವೆಡೆ ಒಂದೂವರೆ ಅಡಿ ಆಳದ ಮಣ್ಣಿನಲ್ಲಿ ನಾಲ್ಕು ಇಂಚಿನಷ್ಟು ಬೂದಿ ಪದರಿನ ಸ್ತರವೊಂದು  ಕಂಡುಬರುತ್ತದೆ13.
8ನೇ ಶತಮಾನದ ಪೂರ್ಣಕುಂಭ ಶಿಲ್ಪ, ತರ್ದವಾಡಿ ನಾಡಾಳಿತ 9, 10ನೇ ಶತಮಾನದ ಪಾರ್ಶ್ವನಾಥ ತೀರ್ಥಂಕರನ ಸಿಂಹಪೀಠ, ತೃಟಿತವಾದ ಏಳು ಹೆಡೆಗಳ ಸರ್ಪ ಮತ್ತು ಬಸದಿಯ ಕಂಬಗಳು, ಕ್ರಿ.ಶ. 1167-76ರ ಕಲಚುರಿ ಅರಸರ ರಾಣಯರು ಬಿಟ್ಟ ಧರ್ಮ-ಇಟ್ಟ ಅರವೆಗೆ ಕೊಟ್ಟ ಕೆಯಿ ಮನೆ ಎಂಬ ಶಾಸನದ ಸಾಲು, 13ನೇ ಶತಮಾನದ ಪೂರ್ವಾರ್ಧದಲ್ಲಿ ಶಾಸನೋಕ್ತ ಲಾಳಸಂಗವಿಗೆ ಗ್ರಾಮನಾಮ ಹಾಗೂ ಸುಮಾರು ಕ್ರಿ.ಶ. 1864-65ರ ಬಕ್ಕಯ್ಯನ ಮಠದ ಶಾಸನ, ಕಮಾನು ಬಾವಿಗಳು-ಈ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ಲಾಳಸಂಗಿ ಗ್ರಾಮವು ಸುಮಾರು 8ನೇ ಶತಮಾನದಿಂದಲೂ ಇತಿಹಾಸದಲ್ಲಿ ಗುರುತಿಸಲ್ಪಡುವ ಸ್ಥಳವಾಗಿದೆ.
[ಕ್ಷೇತ್ರಕಾರ್ಯದಲ್ಲಿ ನೆರವಾದ ವಿದ್ಯಾರ್ಥಿ ರವಿ ಆಳೂರ, ಶಿಲ್ಪಗಳ ಭಾವಚಿತ್ರ ಒದಗಿಸಿದ ಮಹಂತೇಶ್ ಹಿಕ್ಕನಗುತ್ತಿರವರ ಸಹಕಾರ ಸ್ಮರಿಸುತ್ತ, ಅನುಭವ ಹಂಚಿಕೊಂಡ ತೇಜಸ್ವಿ ಕಲ್ಲೂರ ಗುರುಗಳಿಗೆ, ಶಿಕ್ಷಕ ವಿ.ಬಿ. ಭೋಗುಂಡಿಯವರಿಗೆ ಧನ್ಯವಾದಗಳು.]

ಆಧಾರಸೂಚಿ
1. ಇತಿಹಾಸ ದರ್ಶನ, ಸಂ.16, ಕರ್ನಾಟಕ ಇತಿಹಾಸ ಅಕಾಡೆಮಿ (ರಿ) ಬೆಂಗಳೂರು, 2001, ಪುಟ 29-30.
2. ಕನ್ನಡ ವಿಶ್ವವಿದ್ಯಾಲಯ, ಶಾಸನ ಸಂಪುಟ-10, ಬಿಜಾಪುರ ಜಿಲ್ಲೆ, ಶಾಸನ ಸಂಖ್ಯೆ-77, ಕನ್ನಡ ವಿ.ವಿ.ಹಂಪಿ, 2011, ಪುಟ 227-228.
3. ಇತಿಹಾಸ ದರ್ಶನ, ಸಂ.17, ಕರ್ನಾಟಕ ಇತಿಹಾಸ ಅಕಾಡೆಮಿ (ರಿ) ಬೆಂಗಳೂರು, 2001, ಪುಟ 69-70.
4. ಡಾ. ಚಿದಾನಂದಮೂರ್ತಿ ಎಂ., ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ, ಸಪ್ನ ಬುಕ್ ಹೌಸ್, ಬೆಂಗಳೂರು 2011, ಪುಟ 211.
5. ಡಾ. ಕೊಪ್ಪಾ ಎಸ್.ಕೆ., ತರ್ದವಾಡಿ ನಾಡು - ಒಂದು ಅಧ್ಯಯನ, ಪ್ರತಿಭಾ ಪ್ರಕಾಶನ ಇಂಡಿ, 1990, ಪುಟ 36.
6. ವಿನೋದಾ ಪಾಟೀಲ., ಕರ್ನಾಟಕದ ಪ್ರಾಚೀನ ಬಾವಿಗಳು, ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯ, ಮೈಸೂರು-2006, ಪುಟ-23.
7. ಂSI ಗಿoಟ–37, ಃiರಿಚಿಠಿuಡಿ ಚಿಟಿಜ Iಣs ಂಡಿಛಿhiಣeಛಿಣuಡಿಚಿಟ ಖemಚಿiಟಿs, ಖಿoಠಿiಛಿ: ಖಿhe Wಚಿಣeಡಿ Woಡಿಞs oಜಿ ಣhe ಅiಣಥಿ, 1976, Pಚಿge 120, 121.
8. ಪೂಜ್ಯ ಗುರುಗಳಾದ ಡಾ. ಅ. ಸುಂದರ ಅವರು ಸೂರ್ಯಶಿಲ್ಪದ ಇಕ್ಕೆಲಗಳಲ್ಲಿ ಕಂಡರಿಸಿದ್ದ ಅಸ್ಪಷ್ಟ ಚಿಕಣಿ ಶಿಲ್ಪಗಳ ಮಾಹಿತಿ ನೀಡಿದರು.
9. ಗುರುಗಳಾದ ಡಾ. ರು.ಮ. ಷಡಕ್ಷರಯ್ಯನವರು ಶಂಖ, ಚಕ್ರ, ಗದೆಯಿರುವುದರಿಂದ ಈ ಶಿಲ್ಪ ವಿಷ್ಣುವಿನದ್ದಾಗಿರಬಹುದೆಂದು ಸೂಚಿಸಿದ್ದಾರೆ.
10. ಸೌ.ಇ.ಇ-20, 215 (ಇಂಡಿ ತಾ), ಕ್ರಿ.ಶ. 1248, 45 (ಇಂಡಿ ತಾ) ಕ್ರಿ.ಶ. 1071, 80 (ಸಿಂದಗಿ ತಾ) ಕ್ರಿ.ಶ. 1120.
11. ಪ್ರಬಂಧ ಮಂಡನೆ ಸಂದರ್ಭದಲ್ಲಿ ಗುರುಗಳಾದ ಡಾ. ಅ.ಸುಂದರ ಅವರ ಮಾರ್ಗದರ್ಶನ.
12. ಈ ಪ್ಯಾರಾದಲ್ಲಿ ನಮೂದಿಸಿದ ಎಲ್ಲ ಪುರಾತತ್ವದ ಅಂಶಗಳನ್ನು ತಾವು ಗೋಡೆ ಕಟ್ಟುವ ಕೆಲಸ ಮಾಡುತ್ತಿದ್ದಾಗ ಸ್ವಂತ ಅನುಭವಗಳಿಂದ ಸ್ಥಳೀಯ ಜ್ಞಾನವೃದ್ದರಾದ ಶ್ರೀ ತೇಜಸ್ವಿ ಕಲ್ಲೂರ ಅವರು ವಿವರಿಸಿದ್ದಾರೆ.

 ಆಂಗ್ಲಭಾಷಾ ಶಿಕ್ಷಕ, ಸರ್ಕಾರಿ ಪ್ರೌಢಶಾಲೆ, ಅಗರ, ಸರ್ಜಾಪುರ ರಸ್ತೆ, ಬೆಂಗಳೂರು-560102.

Friday, January 23, 2015

ಸೂರನಹಳ್ಳಿಯ ವೀರಗಲ್ಲುಗಳು ಮತ್ತು ಮಹಾಸತಿ ಕಲ್ಲುಗಳು



ಚಳ್ಳಕೆರೆ ತಾಲ್ಲೂಕಿನ ಸೂರನಹಳ್ಳಿಯ ವೀರಗಲ್ಲುಗಳು ಮತ್ತು ಮಹಾಸತಿ ಕಲ್ಲುಗಳು
ಬಿ. ಪರಮೇಶ
ಗಂಡುಮೆಟ್ಟಿನ ನೆಲ ಪ್ರಾಗೈತಿಹಾಸದ ನೆಲೆಯಾದ ಚಿತ್ರದುರ್ಗ ಜಿಲ್ಲೆ ಆಂಧ್ರ ಮತ್ತು ಕರ್ನಾಟಕ ಗಡಿನಾಡಿನ ಜಿಲ್ಲೆಯಾಗಿದ್ದು ಇದೇ ಜಿಲ್ಲೆಯ ಚಳ್ಳಕೆರೆ ತಾಲ್ಲೂಕು ಪರಶುರಾಮಪುರ ಹೋಬಳಿ ಗ್ರಾಮವೆ ಸೂರನಹಳ್ಳಿ. ಇದು ಚಳ್ಳಕೆರೆಯಿಂದ ದೊಡ್ಡೇರಿ ಪುರ್ಲಳ್ಳಿ ಮಾರ್ಗವಾಗಿ ಇಪ್ಪತ್ತನಾಲ್ಕು ಕಿ.ಮೀ. ದೂರದಲ್ಲಿದೆ. ಗ್ರಾಮದ ಉತ್ತರ ಮತ್ತು ದಕ್ಷಿಣಕ್ಕೆ ಪುರ್ಲಳ್ಳಿ ಮತ್ತು ಒಡೇರಳ್ಳಿ ಪೂರ್ವಕ್ಕೆ ಚೌಳೂರು ಪಶ್ಚಿಮಕ್ಕೆ ದೇವರ ಮರಿಕುಂಟೆ ಇದೆ. ಯಾವುದೇ ಬೆಟ್ಟ ಗುಡ್ಡಗಳಿಲ್ಲದೆ ಚಿಕ್ಕ ಚಿಕ್ಕ ಕಣ ಶಿಲೆಯ ಬೆಟ್ಟಗಳಿವೆ. ವೇದಾವತಿ ನದಿಯ ಎಡದಂಡೆ ಮೇಲಿರುವ ಗ್ರಾಮವಾಗಿದೆ. ಈ ಗ್ರಾಮವು ಇತಿಹಾಸ ಪ್ರಸಿದ್ಧ ಬ್ರಹ್ಮಗಿರಿ ಮತ್ತು ಚಂದ್ರವಳ್ಳಿಯಿಂದ ಸುಮಾರು 68 ಕಿ.ಮೀ. ದೂರದಲ್ಲಿದೆ. ಸೂರನಹಳ್ಳಿ ಸೂರಪ್ಪನಾಯಕನೆಂಬುವವನು ಈ ಭಾಗದಲ್ಲಿ ಆಳ್ವಿಕೆ ಮಾಡುತ್ತಿದ್ದ ಹಾಗಾಗಿ ಸೂರನಹಳ್ಳಿ ಎಂದು ಹೆಸರಾಯಿತು.
ಸೂರನಹಳ್ಳಿಯಲ್ಲಿ ಮತ್ತು ಚಳ್ಳಕೆರೆ ತಾಲ್ಲೂಕಿನಲ್ಲಿ ಕೆಲವು ವಿಶಿಷ್ಟ ಹಾಗೂ ಮಹತ್ವವವಾದ ವೀರಗಲ್ಲುಗಳು ಮತ್ತು ಮಹಾಸತಿ ಕಲ್ಲುಗಳನ್ನು ನೋಡಬಹುದು. ನೊಳಂಬ, ಪಲ್ಲವ, ರಾಷ್ಟ್ರಕೂಟ, ಕಲ್ಯಾಣ ಚಾಲುಕ್ಯ, ವಿಜಯನಗರ ಹಾಗೂ ಚಿತ್ರದುರ್ಗ ಪಾಳೆಗಾರರ ಕಾಲಕ್ಕೆ ಸೇರಿದವುಗಳಾಗಿವೆ. ಸೂರನಹಳ್ಳಿಯಲ್ಲಿ ದೊರೆತಿರುವ ವೀರಗಲ್ಲುಗಳು ಹನ್ನೊಂದನೆ ಶತಮಾನಕ್ಕೆ ಸೇರಿದವಾಗಿವೆ. ಇವು ಊರಿನ ಉತ್ತರಕ್ಕೆ ವಿರುಪಾಕ್ಷಪ್ಪನವರ ಹೊಲದಲ್ಲಿ ನಾಲ್ಕು ವೀರಗಲ್ಲುಗಳಿವೆ.
ಒಂದನೆ ವೀರಗಲ್ಲು
ಈ ವೀರಗಲ್ಲು ಮಣ್ಣಿನಲ್ಲಿ ಸಿಲುಕಿಕೊಂಡಿದ್ದು ತುರುಗಳ್ಳರ ಬಗ್ಗೆ ಮಾಹಿತಿ ವೀರಗಲ್ಲಾಗಿದೆ. ಈ ವೀರಗಲ್ಲು ಮೂರು ಹಂತಗಳನ್ನು ಹೊಂದಿದ್ದು, ನಾಲ್ಕುವರೆ ಅಡಿ ಉದ್ದ ಎರಡುವರೆ ಅಡಿ ಅಗಲವಿದೆ. ಮೂರು ಹಂತಗಳಲ್ಲಿ ಶಿಲ್ಪಗಳನ್ನು ಬಿಡಿಸಲಾಗಿದೆ. ಒಂದನೆ ಹಂತದಲ್ಲಿ ಬಿಲ್ಲುಧಾರಿಯಾದ ವೀರನು ಬಲಗೈಯಲ್ಲಿ ಬಿಲ್ಲನ್ನು ಹಿಡಿದಿದ್ದು ಎಡಗೈಯನ್ನು ಮೇಲಕ್ಕೆತ್ತಿದ್ದಾನೆ. ಎಡಗೈ ಕೆಳಗಡೆ ಎರಡು ಗೋಪುರಗಳನ್ನು ಬಿಡಿಸಲಾಗಿದೆ. ವೀರರ ತಲೆಯ ಮೇಲೆ ತುರುಬು ಇದೆ. ಕೊರಳಲ್ಲಿ ಹಾರ ಸೊಂಟದಲ್ಲಿ ಪಟ್ಟಿ ಎರಡು ತೊಡೆಗಳ ಮಧ್ಯೆ ಇಳಿಬಿದ್ದಿರುವ ವಸ್ತ್ರವಿದೆ. ವೀರನ ಬಲಗಾಲಿನ ಕೆಳಗೆ ಶತ್ರು ಸತ್ತುಬಿದ್ದಿರುವ ಶಿಲ್ಪವಿದೆ. ಈ ಹಂತವಾದ ಮೇಲೆ ಶಾಸನದ ಸಾಲು ಇದೆ. ಎರಡನೆ ಹಂತದಲ್ಲಿ ವೀರ ಹೋರಾಡಿ ಮರಣ ಹೊಂದಿದ್ದ ವೀರನನ್ನು ಇಬ್ಬರು ಅಪ್ಸರೆಯರು ವೀರನ ಎರಡು ಕೈಗಳನ್ನು ತನ್ನ ಭುಜಗಳ ಮೇಲೆ ಹೊತ್ತು ದೇವಲೋಕಕ್ಕೆ ಕರೆದೊಯ್ಯುತ್ತಿರುವ ದೇವಕನ್ಯೆಯ ಚಿತ್ರಗಳಿವೆ. ಮೂರನೆ ಹಂತದಲ್ಲಿ ವೀರ ಪೀಠದ ಮೇಲೆ ಕುಳಿತಿರುವ ಶಿಲ್ಪವಿದೆ. ವೀರನ ಎರಡೂ ಕಡೆ ದೇವಕನ್ಯೆಯರು ಸೊಂಟವನ್ನು ಭಾಗಿಸಿರುವಂತೆ ನಿಂತಿದ್ದಾರೆ.
ಎರಡನೆ ವೀರಗಲ್ಲು
ಈ ವೀರಗಲ್ಲು ನೈಸ್‍ಕಲ್ಲಿನಲ್ಲಿ ಈ ಶಿಲ್ಪವನ್ನು ಬಿಡಿಸಲಾಗಿದೆ. ಈ ವೀರಗಲ್ಲು ಮೂರು ಹಂತಗಳನ್ನು ಹೊಂದಿದೆ. ಈ ವೀರಗಲ್ಲು ಮೂರುವರೆ ಅಡಿ ಉದ್ದ ಒಂದುವರೆ ಅಡಿ ಅಗಲ 53 ಸೆ.ಮೀ. ಸುತ್ತಳತೆ ಇದೆ. ಮೂರನೆ ಹಂತದ ಭಾಗ ಮುರಿದುಹೋಗಿದೆ ಹಾಗು ಎಡಭಾಗದ ಅಂಚಿನಲ್ಲಿ ಶಾಸನದ ಸಾಲು ಇದೆ. ಮೊದಲನೆ ಹಂತದಲ್ಲಿ ವೀರನು ತನ್ನ ಎಡಕೈಯಲ್ಲಿ ಬಿಲ್ಲನ್ನು ಹಿಡಿದು ಹೋರಾಡುತ್ತಿರುವ ಶಿಲ್ಪವಿದೆ. ಬಲಗಾಲನ್ನು ಹಿಂದಕ್ಕೆ ಇಟ್ಟು ಮಡಿಚಿರುವಂತೆ ಪಾದದ ಕೆಳಗೆ ಶತ್ರುವನ್ನು ತುಳಿದು ಸಾಯಿಸುತ್ತಿರುವ ಶಿಲ್ಪವಿದೆ. ವೀರನ ಕೆಳಗಡೆ ಮೂರು ಕರುಗಳನ್ನು ಚಿತ್ರಿಸಲಾಗಿದೆ. ದೇವಲೋಕಕ್ಕೆ ಕರೆದೊಯ್ಯು ತ್ತಿರುವ ಚಿತ್ರವಿದೆ. ಮೂರನೆ ಹಂತದಲ್ಲಿ ವೀರನು ದೇವಲೋಕದಲ್ಲಿ ಪೀಠದ ಮೇಲೆ ಕುಳಿತಿರುವ ಚಿತ್ರದಲ್ಲಿದೆ. ವೀರನ ಎರಡು ಕಡೆ ದೇವಕನ್ಯೆಯರು ಸೊಂಟವನ್ನು ಬಾಗಿಸಿರುವಂತೆ ನಿಂತಿದ್ದಾರೆ. ಬಲಭಾಗದ ಸ್ತ್ರೀಯ ಶಿಲ್ಪ ಹಾಳಾಗಿದೆ. ವೀರನು ದೇವಲೋಕವನ್ನು ಸೇರಿದ್ದಾನೆ ಎಂಬುದನ್ನು ತಿಳಿಯಬಹುದು. ಅಂಚಿನಲ್ಲಿ ಶಾಸನದ ಸಾಲು ಇದೆ. ಅಸ್ಪಷ್ಟದಿಂದ ಕೂಡಿದೆ.
ಮೂರನೆ ವೀರಗಲ್ಲು
ಈ ವೀರಗಲ್ಲು ಬಿಳಿ ಕಲ್ಲಿನಲ್ಲಿ ಬಿಡಿಸಲಾಗಿದೆ ಇದು ಮೂರು ಹಂತಗಳನ್ನು ಹೊಂದಿದ್ದು, ಮೂರುವರೆ ಅಡಿ ಅಗಲ ಮೂರುವರೆ ಅಡಿ ಉದ್ದ ಎರಡು ಅಡಿ ಅಗಲ ಹೊಂದಿದೆ 52 ಸೆ.ಮೀ. ಸುತ್ತಳತೆ ಇದೆ. ಈ ವೀರಗಲ್ಲಿನ ಬಲಭಾಗದಲ್ಲಿ ಶಾಸನದ ಸಾಲು ಇದೆ. ಅದು ``ಳುಗುರಾವಳ್ಳಿ ಗೋಳು ಗೊರಾರೊಲ್ಲಿ’’ ಎಂದು ಶಾಸನದ ಪಾಠ ಇದೆ. ಸು. ಹನ್ನೊಂದನೆ ಶತಮಾನಕ್ಕೆ ಹೋಲುತ್ತವೆ. ಮೊದಲನೆ ಹಂತದಲ್ಲಿ ವೀರನು ಬಲಗೈಯಲ್ಲಿ ಸುರಿಗೆ ಹಿಡಿದಿರುವಂತೆ ಹಾಗೂ ಎಡಗೈಯಲ್ಲಿ ಶತ್ರುವನ್ನು ಹಿಡಿದು ಕತ್ತನ್ನು ಹಿಚುಕಿ ಹೋರಾಡುವ ಶಿಲ್ಪವನ್ನು ವೈರಿತಲೆಯನ್ನು ಹಿಂದಕ್ಕೆ ನೋಡುವಂತೆ ವೀರನಿಗೆ ಹೆದರಿ ಬಾಗಿರುವ ಭಂಗಿಯಲ್ಲಿ ತನ್ನ ಎರಡು ಕೈಗಳನ್ನು ಬಾಗಿರುವಂತೆ ಶತ್ರುವಿನ ಬಲಗೈಯಲ್ಲಿ ಖಡ್ಗವನ್ನು ಹಿಡಿದಿರುವಂತೆ ಚಿತ್ರಿಸಲಾಗಿದೆ. ವೀರನ ಕೊರಳಲ್ಲಿ ಹಾರ ಸೊಂಟಪಟ್ಟಿ ಇರುವ ವಸ್ತ್ರವನ್ನು ಮೊಣಕಾಲಿನ ಭಾಗದವರೆಗೂ ಧರಿಸಿದ್ದಾನೆ. ಬಲಭಾಗದಲ್ಲಿ ತುರುಗಳನ್ನು ಚಿತ್ರಿಸಲಾಗಿದೆ. ಇದೂ ತುರುಗೋಳ್ ವೀರಗಲ್ಲಾಗಿದೆ. ಎರಡನೆ ಹಂತದಲ್ಲಿ ಹೋರಾಡಿದ ವೀರನನ್ನು ದೇವಕನ್ಯೆಯರು ದೇವಲೋಕಕ್ಕೆ ಕೊಂಡೊಯ್ಯುವ ಶಿಲ್ಪಗಳನ್ನು ಬಿಡಿಸಲಾಗಿದೆ. ವೀರನ ಎರಡೂ ಕೈಗಳನ್ನು ಸ್ತ್ರೀಯರು ತಮ್ಮ ಭುಜಗಳ ಮೇಲೆ ಹೊತ್ತು ಕರೆದೊಯ್ಯುತ್ತಿರುವ ಶಿಲ್ಪವಿದೆ. ಮೂರನೆ ಹಂತದಲ್ಲಿ ವೀರನು ಸ್ವರ್ಗಲೋಕದಲ್ಲಿ ಪೀಠದ ಮೇಲೆ ಕುಳಿತಿರುವ ಶಿಲ್ಪವಿದೆ. ವೀರನ ಎರಡೂ ಕಡೆ ದೇವಕನ್ಯೆಯರು ಸೊಂಟವನ್ನು ಭಾಗಿಸಿರುವಂತೆ ನಿಂತಿದ್ದಾರೆ. ವೀರನು ಸ್ವರ್ಗವನ್ನು ಸೇರಿದ್ದಾನೆಂಬುದನ್ನು ಈ ರಚನೆಗಳಿಂದ ತಿಳಿಯಬಹುದು.
ನಾಲ್ಕನೆ ವೀರಗಲ್ಲು
ಈ ವೀರಗಲ್ಲು ಸೀಣಿಕಲ್ಲಿನಲ್ಲಿ ಕೊರೆಯಲಾಗಿದೆ. ಈ ವೀರಗಲ್ಲು ಒಂದೇ ಹಂತದಲ್ಲಿದೆ. ಮೂರುವರೆ ಅಡಿ ಎತ್ತರ ಮೂರು ಅಡಿ ಅಗಲವಿದೆ, 87 ಸೆ.ಮೀ. ಸುತ್ತಳತೆ ಇದೆ. ವೀರನು ಹುಲಿಯನ್ನು ಕೊಲ್ಲುತ್ತಿರುವ ಶಿಲ್ಪವಿದೆ. ಹುಲಿಯನ್ನು ಎಡಗೈಯಲ್ಲಿ ಹುಲಿಯ ಮುಂಗಾಲು ಮತ್ತು ಬಾಯಿಯನ್ನು ಹಿಡಿದಿರುವಂತೆ ವೀರನ ಎಡಪಾದಕ್ಕೆ ಹುಲಿ ತನ್ನ ಹಿಂಗಾಲುಗಳ ಉಗುರುಗಳಿಂದ ಹೊದೆಯುವಂತೆ ಚಿತ್ರವಿದೆ. ವೀರನ ಪಕ್ಕದಲ್ಲಿ ಚಿಕ್ಕವೀರನ ಶಿಲ್ಪವಿದೆ. ಬಲಕೈಯಲ್ಲಿ ಚಾಕು ಹಿಡಿದು ವೀರನಿಗೆ ಸಹಾಯಕನಂತೆ ಚಿತ್ರಿಸಲಾಗಿದೆ. ಇದನ್ನು ಸ್ಥಳೀಯರು ಹುಲಿಕಲ್ಲುಗುಡ್ಡ ಎಂದು ಕರೆಯುತ್ತಾರೆ.
ಐದನೆ ವೀರಗಲ್ಲು
ಇದು ಊರಿನ ಪಶ್ಚಿಮ ಭಾಗದಲ್ಲಿದೆ. ಕರಿಕಲ್ಲಿನಲ್ಲಿ ಕೆತ್ತಲಾಗಿದೆ. ಇದು ಸು. 16 ಮತ್ತು 17ನೇ ಸಾಲಿಗೆ ಸೇರಿದ್ದಾಗಿದೆ. ಇದು ನಾಲ್ಕು ಅಡಿ ಉದ್ದ ಒಂದೂವರೆ ಅಡಿ ಅಗಲವಿದೆ. ಮೊದಲ ಹಂತದಲ್ಲಿ ವೀರನು ಬಿಲ್ಲುಬಾಣಗಳನ್ನು ಹಿಡಿದು ಹೋರಾಡುತ್ತಿರುವ ಶಿಲ್ಪವಿದೆ. ಎರಡನೆ ಹಂತದಲ್ಲಿ ದೇವತಾಸ್ತ್ರೀಯರು ಸ್ವರ್ಗಲೋಕಕ್ಕೆ ಕರೆದೊಯ್ಯುತ್ತಿರುವ ಶಿಲ್ಪವಿದೆ. ಮೇಲಿನ ಭಾಗದಲ್ಲಿ ಸೂರ್ಯ ಚಂದ್ರರ ಶಿಲ್ಪಗಳನ್ನು ಬಿಡಿಸಲಾಗಿದೆ. ಇದು ಬೇಟೆಯ ವೀರಗಲ್ಲಾಗಿದೆ.
ವೀರ ಮಾಸ್ತಿಕಲ್ಲುಗಳು
ಪುರುಷನ ಹಾಗೆ ಸ್ತ್ರೀಯು ಕೂಡ ಕದನದಲ್ಲಿ ಹೋರಾಡಿರುವ ಪರಾಕ್ರಮದ ಪತಿಯ ಮರಣದ ನಂತರ ತಾನು ಕೊಂದುಕೊಂಡ ತ್ಯಾಗದ ಸಂಕೇತವಾಗಿ ಕಂಡುಬರುವ ಸ್ಮಾರಕಗಳು ವೀರಗಲ್ಲುಗಳ ಸಾಲಿನಲ್ಲಿ ನಿಲ್ಲುತ್ತವೆ.
ಈ ವೀರ ಮಹಾಸತಿ ಕಲ್ಲು ಪಶ್ಚಿಮ ಭಾಗದಲ್ಲಿದೆ ಒಂದೇ ಹಂತದಲ್ಲಿ ಪೂರ್ವಾಭಿಮುಖವಾಗಿ ನಿಲ್ಲಿಸಲಾಗಿದೆ. ಇದು ಕಪ್ಪು ಶಿಲೆಯ ಬಂಡೆಯಲ್ಲಿ ಕೊರೆಯಲಾಗಿದೆ. ಇದು ತೀರ ಇತ್ತೀಚಿನ 17-18ನೇ ಶತಮಾನಕ್ಕೆ ಸೇರಿದೆ. ಇದು 2 1/2 ಉದ್ದ 2 1/2 ಅಡಿ ಅಗಲ ಬಲಗೈಯನ್ನು ಮೇಲಕ್ಕೆ ಎತ್ತಿಲ್ಲ. ಸತಿ ಕೈ ಮುಗಿಯುತ್ತಿರುವ ಪಾದದವರೆಗು ಹಾರವನ್ನು ಬಿಡಿಸಲಾಗಿದೆ. ತನ್ನ ಎರಡು ಕೈಗಳನ್ನು ಜೋಡಿಸಿರುವ ಭಂಗಿಯಲ್ಲಿದ್ದಾಳೆ. ತಲೆಯಲ್ಲಿ ತುರುಬು ಇದೆ. ಬಲಭಾಗದಲ್ಲಿ ಖಡ್ಗ ಹಿಡಿದು ನಿಂತಿದ್ದಾಳೆ. ಪಾದದ ಕೆಳಗೆ ಬಾಲಕನ ಚಿತ್ರ ಬಿಡಿಸಲಾಗಿದೆ. ಸತಿ ಬೆಂಕಿಯ ಹೊಂಡಕ್ಕೆ ಜಿಗಿಯುವಾಗ ಒಂದು ಭಂಗಿ ಇರಬಹುದು. ಶಿಲ್ಪಗಳ ಮೇಲೆ ಸೂರ್ಯ ಚಂದ್ರರ ಚಿತ್ರಗಳನ್ನು ಬಿಡಿಸಲಾಗಿದೆ.

  ಇತಿಹಾಸ ಉಪನ್ಯಾಸಕರು, ಹೆಚ್.ಪಿ.ಪಿ.ಸಿ. ಪ್ರಥಮ ದರ್ಜೆ ಕಾಲೇಜು, ಚಳ್ಳಕೆರೆ.

Tuesday, January 20, 2015

ಉಜಿನಿ ಅಪ್ರಕಟಿತ ಶಿಲಾಶಾಸನ

ಉಜಿನಿ ಅಪ್ರಕಟಿತ ಶಿಲಾಶಾಸನ ಮತ್ತು ಪ್ರಾಚ್ಯಾವಶೇಷಗಳು
ಡಾ. ಎಚ್.ಎಸ್. ಗೋಪಾಲರಾವ್ವೇದಾವತಿ ಎಸ್. ಬಾಲಸುಬ್ರಹ್ಮಣ್ಯ 
ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೊಡ್ಡಬಳ್ಳಾಪುರ ತಾಲ್ಲೂಕು, ಸಾಸಲು ಹೋಬಳಿ, ಉಜಿನಿ ಗ್ರಾಮದಲ್ಲಿ ಶಿಥಿಲ ಚೆನ್ನಕೇಶವ ದೇವಾಲಯದ ಎದುರಿಗಿರುವ ಗರುಡ/ಮತ್ಸ್ಯ ಕಂಬದ ಪಕ್ಕದಲ್ಲಿ ನೆಟ್ಟಿರುವ ಕಲ್ಲಿನ ಮೇಲಿನ ಶಿಲಾಶಾಸನದ ಪಾಠ ಈ ಕೆಳಕಂಡಂತಿದೆ.
ಶಾಸನದ ಪಾಠ
1 [ರ]ಕತಾಕ್ಷಿ ಸಂವತ್ಸರದ ಮಾಗ ಬಹು[ಳ]
2 - ಐವತು ನಂ ವಿಪಾಳಿತಗೂ ಸಿಂ
3 ಗಯನ ಮಕ್ಕಳು ಗೋಸಲ ಕವಿಲೆ ಗೋರ-ನು
4 ಉಜಿನಿಸೀಮೆಯ ಗಉಡಿ ಕುಕೂಣ ಬಿ
5 ಕ್ಷೆಯ ಕೊಂಡ ವಿವರ ಕತ್ತಗೊಂಡ ಬಸವಿಗೆ
6 ವಿರಗಉಡನ ಮಗ ಚಿಕ್ಕಗಳಿಣರಸ ಬಸ
7 ವರಸರಮಗ ಪುಟ್ಟಚನ್ನಪ್ಪನ ಮಗನ
8 ವರು ವೀರಬೋವಗೆ ಕೊಟ್ಟ ಕಾಣಿಕೆ
9 ಯ ಕೊಟ್ಟ ಶಸನ ಮಂಗಳಮಹಾ
10 ಶ್ರೀ ಶ್ರೀ ಶ್ರೀ ಶ್ರೀ
ಶಾಸನದ ಪಾಠ ಅಸ್ಪಷ್ಟ. ಸಿಂಗಯನ ಮೂವರು ಮಕ್ಕಳ ಹೆಸರು ಪ್ರಸ್ತಾಪವಾಗಿದೆ. ಬಹುತೇಕ ಇವರಿಂದ ಉಜಿನಿ ಸೀಮೆಯ ಗವುಡಿ ಕುಕೂಣಬಿಯು ಪಡೆದ ಶಿಕ್ಷೆಯ ವಿವರವನ್ನು ದಾಖಲಿಸಲು ಶಾಸನ ಸಿದ್ಧವಾಗಿರುವಂತಿದೆ. ಬಹುಶಃ ತಪ್ಪುಕಾಣಿಕೆಯಾಗಿ ಬಸವರಸರ ಮಗ ಪುಟ್ಟಚನ್ನಪ್ಪನ ಮಗ ವೀರಬೋವನಿಗೆ ಗಉಡಿಯು ಕೊಟ್ಟ ಕಾಣಿಕೆಯ ವಿವರವಿದ್ದು, ಅದು ಕೈತಪ್ಪಿರುವಂತಿದೆ.
ಲಿಪಿಸ್ವರೂಪದ ಆಧಾರದ ಮೇಲೆ ಶಾಸನದ ಕಾಲವನ್ನು ಕ್ರಿ.ಶ. 17ನೆಯ ಶತಮಾನ ಎಂದು ಭಾವಿಸಬಹುದು. ಅದು ಒಪ್ಪಿತವಾದರೆ ಶಾಸನದ ಕಾಲವು ಕ್ರಿ.ಶ. 1685ರ ಫೆಬ್ರವರಿ 14ರಿಂದ 27ರವರೆಗಿನ ಯಾವುದಾದರೂ ಒಂದು ದಿನವಾಗುತ್ತದೆ.
ಸಾರಾಂಶ
ದೊಡ್ಡಬಳ್ಳಾಪುರ ತಾಲ್ಲೂಕು ಸಾಸಲು ಹೋಬಳಿ ಉಜಿನಿಯಲ್ಲಿ ಶಿಥಿಲ ಚೆನ್ನಕೇೀಶವ ದೇವಾಲಯವಿದ್ದು, ಪೂರ್ವಾಭಿಮುಖವಾಗಿದ್ದ ದೇವಾಲಯದ ಮುಖ್ಯ ದ್ವಾರದ ಮೂಲಕ ಈಗ ಪ್ರವೇಶವಿಲ್ಲ. ಬದಲಿಗೆ ದಕ್ಷಿಣದಲ್ಲಿ ಒಳಪ್ರವೇಶಿಸಲು ವ್ಯವಸ್ಥೆ ಇದೆ. ಈಗ ದೇವಾಲಯದಲ್ಲಿ ಮೂರ್ತಿಯೂ ಇಲ್ಲ. ದೇವಾಲಯದ ಪೂರ್ವಕ್ಕಿರುವ ಗರುಡಗಂಬ(ಇದರ ಕೆಳಭಾಗದಲ್ಲಿ ಮತ್ಸ್ಯ ಇರುವುದರಿಂದ ಇದನ್ನು ಮತ್ಸ್ಯ ಕಂಬ ಎನ್ನಲೂ ಅವಕಾಶಗಳಿವೆ. ಪಕ್ಕದಲ್ಲಿನ ಕ್ರಿ.ಶ.ಸು. 17ನೆಯ ಶತಮಾನದ ಅಪ್ರಕಟಿತ ಶಾಸನದ ಪ್ರಕಾರ ಉಜಿನಿ ಒಂದು ಸೀಮೆಯ ಕೇಂದ್ರವಾಗಿತ್ತು.
ಉಜಿನಿ ಸ್ಥಳನಾಮವನ್ನು ‘ಉದಕಜನಿ’ಯ ಮೂಲಕ ಹುಡುಕಲು ಅವಕಾಶಗಳಿವೆ. ಉಜಿನಿಗೆ ಹೊಂದಿಕೊಂಡಂತೆಯೇ ಇರುವ ಗುಡ್ಡದಲ್ಲಿ ಹಲವು ನೀರಿನ ಚಿಲುಮೆಗಳಿವೆ ಎಂದು ಸ್ಥಳೀಯರು ಹೇಳುತ್ತಾರೆ. ಈ ಗುಡ್ಡದಲ್ಲಿ ಹಸಿರು ತುಂಬಿದೆ. ಇದರಿಂದ ಇದು ಜನವಸತಿಗೆ ತಕ್ಕ ಪ್ರದೇಶ ಎಂಬುದರಲ್ಲಿ ಸಂಶಯವಿಲ್ಲ.
ಸಾಮಾನ್ಯವಾಗಿ ಬೀರಗಾರರ ಗುಡಿಗಳು ಇರುವ ಪ್ರದೇಶದಲ್ಲಿ ಪ್ರಾಗಿತಿಹಾಸದ, ಅದರಲ್ಲೂ ವಿಶೇಷವಾಗಿ ಬೃಹತ್ ಶಿಲಾಯುಗದ ನೆಲೆಗಳನ್ನು ಹುಡುಕುವ ಪ್ರಯತ್ನ ಮಾಡುವುದು ಸ್ವಾಭಾವಿಕ. ಇವು ಇತಿಹಾಸ ಕಾಲದ ನೆಲೆಗಳೂ ಆಗಿರುತ್ತವೆ. ವೀರಗಾರರ ಗುಡಿಗಳ ಜೊತೆಗೆ ಬೀರೇಶ್ವರನ ಗುಡಿಯೂ ಇರುತ್ತದೆ. ನಾನು ಕಂಡಿರುವಂತೆ, ಕರ್ನಾಟಕದಲ್ಲಿ ವೀರಗಾರರ ಗುಡಿಗಳಿರುವ ಯಾವುದೇ ಗ್ರಾಮದಲ್ಲಿ ಬೀರೇಶ್ವರನ ಗುಡಿ ಇದ್ದೇ ಇರುತ್ತದೆ. ಇದು ಪಶುಪಾಲಕ ಮತ್ತು ಕೃಷಿಯ ಆರಂಭ ಕಾಲದ ಸ್ವರೂಪ.
ವೀರಗಾರರ ಗುಡಿಗಳನ್ನು ಹಿಂದೆಯೇ ತಿಳಿಸಿರುವಂತೆ ಇತಿಹಾಸದ ಆರಂಭಕಾಲದಿಂದಲೂ ನಿರಂತರವಾಗಿ ಕಾಣಬಹುದು. ಇದು ಬೃಹತ್ ಶಿಲಾಯುಗದ ಪಳೆಯುಳಿಕೆ. ವೀರಗಾರರ ಗುಡಿಗಳು ಸಾಮಾನ್ಯವಾಗಿ  ಚಿಕ್ಕವು.  ಒಬ್ಬ ವ್ಯಕ್ತಿ ನುಸುಳುವಷ್ಟು ಜಾಗವೂ ಅಲ್ಲಿರುವುದಿಲ್ಲ. ಚಿಕ್ಕ ಗೂಡಿನಂತಹ ಮಂಟಪದಲ್ಲಿ ಒಂದು ವೀರಗಲ್ಲನ್ನು ಇಟ್ಟು, ಅದಕ್ಕೆ ವರ್ಷದ ನಿರ್ದಿಷ್ಟ ಅಥವಾ ತಮಗೆ ಇಷ್ಟ ಅಥವಾ ಅವಕಾಶ ದೊರೆತ ದಿನದಂದು ಒಂದು ಕುಟುಂಬದವರು ಸಾಮೂಹಿಕವಾಗಿ ಪೂಜೆ ಸಲ್ಲಿಸುವ ಪದ್ಧತಿ ಇರುತ್ತದೆ. ಆ ಪೂಜೆಯಲ್ಲಿ ಪ್ರಾಣಿ ಬಲಿ ಇರಬಹುದು ಅಥವಾ ಇಲ್ಲದೆಯೂ ಇರಬಹುದು. ಉಜಿನಿ ಗ್ರಾಮದ ಊರಿನಿಂದ ಸ್ವಲ್ಪ ದೂರದಲ್ಲಿರುವ ಬೀರೇಶ್ವರ ದೇವಾಲಯವು ಹೆಂಚು ಮತ್ತು ಮಾಳಿಗೆಯ ಕಟ್ಟಡ. ದೂರಕ್ಕೆ ಮನೆಯಂತೆಯೇ ಕಾಣುವ ಇದರ ಮೂರು ಭಾಗಗಳಲ್ಲೂ ಗುಂಪುಗುಂಪಾಗಿ ವೀರಗಾರರ ಗುಡಿಗಳಿವೆ. ಈಗಾಗಲೇ ತಿಳಿಸಿರುವಂತೆ ಇವು ಗೂಡಿನಂತಹ ರಚನೆಗಳು. ಇವುಗಳಲ್ಲಿ ಕೆಲವು ಗುಂಪಿನವು ಸುಸ್ಥಿತಿಯಲ್ಲಿ ರಕ್ಷಿತವಾಗಿವೆ. ಇನ್ನು ಕೆಲವು ರಕ್ಷಣೆಯ ನಿರೀಕ್ಷೆಯಲ್ಲಿವೆ. ಸ್ಥಳೀಯರು ಹೇಳುವ ಪ್ರಕಾರ ಇವು ಹಲವು ಕುಟುಂಬಗಳಿಗೆ ಸೇರಿದ ವೀರಗಾರರ ಗುಡಿಗಳು. ಆಯಾ ಕುಟುಂಬದವರು ತಮಗೆ ಅನುಕೂಲ ಆದ ದಿನ ಅಥವಾ ಮೊದಲೇ ಗೊತ್ತುಪಡಿಸಿದ ದಿನ ಸಾಮೂಹಿಕವಾಗಿ ಬಂದು ಪೂಜೆಯನ್ನು ಸಲ್ಲಿಸಿ, ಪ್ರಸಾದ ಸ್ವೀಕರಿಸಿ ಹೋಗುತ್ತಾರೆ. ಅದೇ ದಿನ ಉಳಿದ ವೀರಗಾರರ ಗುಡಿಗಳಿಗೆ ಸಂಬಂಧಿಸಿದ ಕುಟುಂಬಗಳವರೂ ಬಂದಿರಬಹುದು. ನಿರ್ದಿಷ್ಟ ಗುಂಪಿನ ವೀರಗಾರರ ಗುಡಿಗಳಿಗೆ ನಡೆದುಕೊಳ್ಳುವ ಕುಟುಂಬಗಳವರು ಮತ್ತೊಂದು ಕುಟುಂಬದವರ ವೀರಗಾರರ ಗುಡಿಗಳಿಗೆ ನಡೆದುಕೊಳ್ಳುವುದಿಲ್ಲ. ಆದರೂ ಬಹುತೇಕ ಎಲ್ಲಾ ಕುಟುಂಬಗಳಲ್ಲೂ ಆಚರಣೆಯ ವಿಷಯದಲ್ಲಿ ಸಾಮರಸ್ಯವಿದೆ. ಹಿರಿಯರು ಮಾಡಿದ ನಿರ್ಣಯವನ್ನು ಯಾರೂ ಮೀರುವುದಿಲ್ಲ. ಇದು ಶಿಷ್ಟ ಪಂಗಡಗಳಲ್ಲಿನ ಗೋತ್ರ ಪದ್ದತಿಯನ್ನು ನೆನಪಿಗೆ ತರುತ್ತದೆ.
ಸರ್ವೇಕ್ಷಣೆಯ ಮೂಲಕ ಉಜಿನಿ ಗ್ರಾಮದ ಪ್ರಾಚೀನತೆಯ ಶೋಧsಕ್ಕೆ ತೊಡಗುವುದರಿಂದ ಒಳ್ಳೆಯ ಫಲಿತಾಂಶ ದೊರಕಬಹುದೆಂಬ ಅಂದಾಜಿದೆ. ಬೀರೇಶ್ವರನ ಗುಡಿ, ಅದಕ್ಕೆ ಹೊಂದಿಕೊಂಡ ಬೀರಗಾರರ ಗುಡಿಗಳ ಮೂಲಕ ಶೋಧ ಕಾರ್ಯ ಆರಂಭ ಆಗಬಹುದು.
ಇನ್ನು ಉಜಿನಿ ಗ್ರಾಮದಲ್ಲಿ ಮೇಲೆ ಪ್ರಸ್ತಾಪಿಸಿದ ಅಪ್ರಕಟಿತ ಶಾಸನವಲ್ಲದೆ, ಅದನ್ನು ಕಾಪಾಡಿಕೊಂಡು ಬಂದಿದ್ದ ಗರುಡಗಂಭ (ಮತ್ಸ್ಯ ಕಂಬ)ದ ಎದುರಿಗೆ ಚೆನ್ನಕೇಶವ ದೇವಾಲಯವಿದೆ. ಮೂಲದಲ್ಲಿ ಪೂರ್ವಕ್ಕಿದ್ದ ಇದರ ಮುಖ್ಯ ದ್ವಾರಕ್ಕೆ ಅಡ್ಡಲಾಗಿ ಈಗ, ಬಹುತೇಕ ಇದೇ ದೇವಾಲಯದ ಗರ್ಭಗೃಹದಲ್ಲಿದ್ದ ಪಾಣಿಪೀಠವನ್ನು ಇಟ್ಟು, ಮುಚ್ಚುವ ಪ್ರಯತ್ನ ಮಾಡಲಾಗಿದೆ. ಈಗ ದೇವಾಲಯದ ದಕ್ಷಿಣ ಭಾಗದಲ್ಲಿ ಪ್ರವೇಶ ದ್ವಾರವಿದೆ. ಗರ್ಭಗೃಹದಲ್ಲಿ ಪಾಣಿಪೀಠವೂ ಇಲ್ಲ; ಯಾವುದೇ ಮೂರ್ತಿಯೂ ಇಲ್ಲ. ಗರ್ಭಗೃಹದ ಮುಂದಿನ ಸುಖನಾಸಿಯಲ್ಲದೆ, ನವರಂಗವೂ ಮತ್ತೊಂದು ಸುಖನಾಸಿಯಂತೆಯೇ ಆಗಿದೆ. ದೇವಾಲಯವು ಸ್ವಲ್ಪವೇ ಎತ್ತರದ ಅಧಿಷ್ಠಾನದ ಮೇಲಿದೆ. ದೇವಾಲಯದ ಮುಖ್ಯ ದ್ವಾರ ಮುಚ್ಚಿ, ಗರ್ಭಗೃಹದಲ್ಲಿ ಯಾವ ದೇವರೂ ಇಲ್ಲವಾದ್ದರಿಂದ ರೇಷ್ಮೆ ತಟ್ಟೆಗಳನ್ನು ಇಡಲಾಗಿದೆ. ಬಹುತೇಕ ರೇಷ್ಮೆ ಹುಳುಗಳ ಸಾಕಣೆಗೆ ದೇವಾಲಯ ಬಳಕೆಯಾಗುತ್ತಿದೆ.
ಊರಿನಿಂದ ಆಚೆ ಸ್ವಲ್ಪ ದೂರದಲ್ಲಿ ಬಂಡಿ ಮಾಂಕಾಳಮ್ಮನ ದೇವಾಲಯ ಇದೆ. ಇದು ಆಧುನಿಕ ಕಟ್ಟಡ. ಇಲ್ಲಿರುವುದು ದುರ್ಗಿಯ ಮೂರ್ತಿ. ದುರ್ಗಿಯ ಮೂರ್ತಿಯ ಹಿಂದೆ ವೀರಭದ್ರನ ಮೂರ್ತಿ ಇದೆ. ಕಟ್ಟಡವು ಆಧುನಿಕವಾದರೂ, ಮೂರ್ತಿಗಳು ಆಧುನಿಕವಲ್ಲ. ಅವು ಕನಿಷ್ಟ ನೂರು ವರ್ಷಗಳಷ್ಟಾದರೂ ಹಳೆಯವು. ಇದಕ್ಕೆ ಸ್ವಲ್ಪ ಮುಂದೆ ತೆರದ ಬಯಲಿನಲ್ಲಿ ಒಂದು ಬಾಣಲಿಂಗ ಮತ್ತು ಅದರ ಎದುರಿಗೆ ಒಂದು ಬಸವನ ಮೂರ್ತಿ ಇದೆ. ಇಲ್ಲಿ ಈಗ ದೇವಾಲಯದ ಗುರುತುಗಳು ಇಲ್ಲವಾದರೂ, ಒಂದು ಕಾಲಕ್ಕೆ ಇಲ್ಲಿ ದೇವಾಲಯ ಇದ್ದಿರಬಹುದು. ಬಾಣ ಲಿಂಗಗಳು ಸಾಮಾನ್ಯವಾಗಿ ಪ್ರಾಚೀನವಾಗಿರುವುದರಿಂದ ಈ ಲಿಂಗ ಮತ್ತು ಅದಕ್ಕೆ ಇದ್ದಿರಬಹುದಾದ ದೇವಾಲಯವು ಕ್ರಿ.ಶ. 10ನೆಯ ಶತಮಾನಕ್ಕೂ ಹಿಂದಿನದು ಎನ್ನಬಹುದು. ಇಲ್ಲಿನ ಕೆಲವು ವೀರಗಲ್ಲುಗಳು ಮತ್ತು ಗಡಿಕಲ್ಲುಗಳು ಈ ಸ್ಥಳದ ಕಾಲವನ್ನು ಕ್ರಿ.ಶ. 10ನೆಯ ಶತಮಾನಕ್ಕೆ ಕೊಂಡೊಯ್ಯುತ್ತವೆ.
ಈಗ ಉಜಿನಿಯ ಈವರೆಗೆ ಅಪ್ರಕಟಿತವಾಗಿದ್ದ ಶಾಸನ ಪ್ರಕಟವಾಗಿದೆ. ಇಲ್ಲಿ ಇತಿಹಾಸಕ್ಕೆ ಸಂಬಂಧಿಸಿದಂತೆ ಇನ್ನೂ ಸಾಕಷ್ಟು ಕೆಲಸಗಳು ಆಗಬೇಕಾಗಿದೆ.


ಆಧಾರಸೂಚಿ ಮತ್ತು ಅಡಿಟಿಪ್ಪಣಿ
1. ಕನ್ನಡ ವಿಷಯ ವಿಶ್ವಕೋಶ, ಪ್ರಸಾರಾಂಗ, ಮೈ.ವಿ.ವಿ. ಮೈಸೂರು, 2005.
2. ಮಂಡ್ಯ ಜಿಲ್ಲಾ ಗ್ಯಾಸೆಟಿಯರ್, 2003, ಕರ್ನಾಟಕ ಪುಸ್ತಕ ಮುದ್ರಣಾಲಯ, ಮೈಸೂರು.
3. ಎಪಿಗ್ರಾಫಿಯಾ-ಕರ್ನಾಟಿಕ, ಸಂಪುಟ 7, ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು.
4. ಚಿದಾನಂದಮೂರ್ತಿ.ಎಂ., ಕನ್ನಡ ಶಾಸನಗಳ ಸಾಂಸ್ಕøತಿಕ  ಅಧ್ಯಯನ, 2008, ಪ್ರಸಾರಾಂಗ, ಮೈ.ವಿ.ವಿ. ಮೈಸೂರು.
5. ಶೇಷಶಾಸ್ತ್ರಿ ಆರ್., ಕರ್ನಾಟಕದ ವೀರಗಲ್ಲುಗಳು, ಧಾರವಾಡ-1982.
6. ಪರಮಶಿವಮೂರ್ತಿ ಡಿ.ವಿ., ಕನ್ನಡ ಶಾಸನಶಿಲ್ಪ, 1999, ಹಂಪಿ.
7. ಫೋಟೋದಲ್ಲಿನ ಚಿತ್ರವನ್ನು ಗಮನಿಸಿ, 1, 2, 3, 4, 5, 6, 7.
 144, `ಸ್ವಸ್ತಿಶ್ರೀ ಸ್ಕಂದ’, ಐ.ವೈ.ಡಿ. ರಸ್ತೆ, ಅರಸಿನಕುಂಟೆ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ-562123.

Saturday, January 17, 2015

ಕೆಳಗೆರೆ ಗ್ರಾಮದ ವೀರಗಲ್ಲುಗಳು



ಕೆಳಗೆರೆ ಗ್ರಾಮದಲ್ಲಿ ದೊರೆತ ಅಪ್ರಕಟಿತ ವೀರಗಲ್ಲುಗಳು
ಡಾ. ಜಿ. ಕರಿಯಪ್ಪ
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕು ಕೇಂದ್ರದಿಂದ ಸು. 12 ಕಿ.ಮೀ. ದೂರದಲ್ಲಿರುವ ಕೆಳಗೆರೆ ಗ್ರಾಮವು ಐತಿಹಾಸಿಕವಾಗಿ ಮತ್ತು ಚಾರಿತ್ರಿಕವಾಗಿ ತನ್ನದೇ ಆದ ಮಹತ್ವವನ್ನು ಪಡೆದುಕೊಂಡಿದೆ. ಪ್ರಾಚೀನ ಶಾಸನಗಳಲ್ಲಿ ಈ ಗ್ರಾಮವನ್ನು “ಕೆಲ್ಲನ್‍ಗೆರೆ” ಎಂದು ಉಲ್ಲೇಖಿಸಲಾಗಿದ್ದು, ನಾಗಮಂಗಲ ತಾಲೂಕನ್ನೊಳಗೊಂಡಂತೆ ಗಂಗ, ಹೊಯ್ಸಳ ಮತ್ತು ವಿಜಯನಗರ ಕಾಲದ ರಾಜಕೀಯ ಮತ್ತು ಸಾಂಸ್ಕøತಿಕ ಇತಿಹಾಸ ವೈವಿಧ್ಯಮಯವಾಗಿದ್ದು, ಇಲ್ಲಿನ ಸ್ಮಾರಕಗಳಾದ ವೀರಗಲ್ಲು, ಸತಿಕಲ್ಲು, ಮಹಾಸತಿಕಲ್ಲುಗಳು, ವೀರರ ಗುಡಿಗಳು ಹಾಗೂ ಇನ್ನಿತರ ಸ್ಮಾರಕಗಳ ಬಗ್ಗೆ ಈಗಾಗಲೇ ವಿದ್ವಾಂಸರು ತಮ್ಮ ಕೃತಿ-ಲೇಖನಗಳಲ್ಲಿ ಪರಿಶೀಲಿಸಿದ್ದಾರೆ. ಆದರೆ ಅವುಗಳ ಸಮಗ್ರ ಅಧ್ಯಯನ ನಡೆದಿರುವುದಿಲ್ಲ. ಹೀಗಾಗಿ ಈ ಕೆಳಗೆರೆ ಗ್ರಾಮದಲ್ಲಿ ದೊರೆತಿರುವ ವೀರಗಲ್ಲುಗಳ ಬಗ್ಗೆ ಜಿಲ್ಲಾ ಗ್ಯಾಸೆಟಿಯರ್, ಎಪಿಗ್ರಾಫಿಯಾ ಕರ್ನಾಟಿಕ ಸಂಪುಟಗಳು, ಇತಿಹಾಸ ದರ್ಶನ, ಎಂ.ಎ.ಆರ್. ರಿಪೋರ್ಟ್ ಹಾಗೂ ಇನ್ನಿತರ ನಿಯತಕಾಲಿಕೆಗಳಲ್ಲಿ ವರದಿಯಾಗಿ ಪ್ರಕಟವಾಗಿರುವುದಿಲ್ಲ. ಗ್ರಾಮದ ಪೂರ್ವಕ್ಕೆ ಇರುವ ಈಶ್ವರ ದೇವಾಲಯದ ಬಳಿ ಈ ವೀರಗಲ್ಲುಗಳಿವೆ.
ಒಂದನೇ ವೀರಗಲ್ಲು: ಈ ವೀರಗಲ್ಲನ್ನು ಗೋವುಗಳನ್ನು ಕದಿಯುತ್ತಿರುವ ಗೋವುಗಳ್ಳರೊಡನೆ ಹೋರಾಡಿ ಗೋವುಗಳನ್ನು ರಕ್ಷಿಸಿ ವೀರಮರಣವನ್ನಪ್ಪಿದ ವೀರಪುರುಷನ ಸ್ಮರಣಾರ್ಥಕವಾಗಿ ಸ್ಥಾಪನೆ ಮಾಡಲಾಗಿರುವ ವೀರಗಲ್ಲು ಇದಾಗಿದೆ. ಇದನ್ನು ಸುಮಾರು ನಾಲ್ಕು ಅಡಿ ಎತ್ತರ ಮೂರು ಅಡಿ ಅಗಲ ಮತ್ತು ನಾಲ್ಕು ಇಂಚು ದಪ್ಪನಾಗಿರುವ ಬಳಪದ ಕಲ್ಲಿನಲ್ಲಿ ರಚನೆ ಮಾಡಲಾಗಿದೆ. ಇದರಲ್ಲಿ ಮೂರು ಹಂತದಲ್ಲಿರುವ ಪಟ್ಟಿಕೆಗಳಲ್ಲಿ ಶಿಲ್ಪಗಳನ್ನು ಕಂಡರಿಸಲಾಗಿದೆ.
ಕೆಳಹಂತದ ಪಟ್ಟಿಕೆಯಲ್ಲಿ ಗೋವುಗಳನ್ನು ಕದಿಯುತ್ತಿರುವ ಗೋವುಗಳ್ಳರೊಡನೆ ಹೋರಾಟ ಮಾಡಲು ಸಜ್ಜಾಗಿ ಕುದುರೆಯನ್ನೇರಿ ಕುಳಿತಿರುವ ವೀರಪುರುಷನು ತನ್ನ ಮೈಮೇಲೆ ವಿವಿಧ ಬಗೆಯ ವಸ್ತ್ರಾಭರಣಗಳನ್ನು ಧರಿಸಿಕೊಂಡಿದ್ದಾನೆ. ಈತನು ತನ್ನ ಎಡಗೈಯಲ್ಲಿ ಕುದುರೆಯ ಲಗಾಮನ್ನು ಹಿಡಿದು ಬಲಗೈಯಲ್ಲಿ ಸುರುಳಿಯೋಪಾದಿಯಲ್ಲಿ ಅಲಂಕರಿಸಲಾಗಿರುವ (ಈಟಿ?) ಆಯುಧವನ್ನು ಹಿಡಿದುಕೊಂಡು ತನ್ನ ಬಲಗೈಯನ್ನು ಮೇಲಕ್ಕೆ ಎತ್ತಿ ಹಿಡಿದಿದ್ದಾನೆ, ಅಲ್ಲದೇ ಕುದುರೆಯನ್ನು ಸಹ ವಿವಿಧ ವಸ್ತ್ರಾಭರಣಗಳನ್ನು ಹಾಕಿ ಅಲಂಕರಣ ಮಾಡಲಾಗಿದೆ, ಈ ಕುದುರೆಯ ಹಿಂಭಾಗದಲ್ಲಿ ತನ್ನ ಪತ್ನಿಯು ಹೋರಾಟಕ್ಕೆ ಸನ್ನದ್ಧನಾಗಿರುವ ವೀರನನ್ನು ಬೀಳ್ಕೊಡುತಿರುವಂತೆ ನಿಂತಿರುವ ಸ್ತ್ರೀಯ ಶಿಲ್ಪವನ್ನು ಸಹ ಬಹಳ ಸುಂದರವಾಗಿ ಬಿಡಿಸಲಾಗಿದೆ. ಈ ಸ್ತ್ರೀಯು ಮೈಮೇಲೆ ವಿವಿಧ ಬಗೆಯ ವಸ್ತ್ರಾಭರಣಗಳನ್ನು ಧರಿಸಿ ತಲೆಗೆ ಹೂವನ್ನು ಮುಡಿದುಕೊಂಡಿದ್ದಾಳೆ. ಕೈಯಲ್ಲಿ ನೀರಿನ ಕಮಂಡಲ ಬಲಗೈಯಲ್ಲಿ ಪುಷ್ಟವೊಂದನ್ನು ಹಿಡಿದು ನಿಂತಿದ್ದಾಳೆ. ಈ ಸ್ತ್ರೀಯ ಹಿಂಭಾಗದಲ್ಲಿ ಗೋವುಗಳು ತಮ್ಮ ತಲೆಯನ್ನು ಮೇಲೆತ್ತಿ ನೋಡುತ್ತಿರುವಂತೆ ಶಿಲ್ಪಗಳನ್ನು ಕೆತ್ತನೆ ಮಾಡಲಾಗಿದೆ.
ಎರಡನೇ ಹಂತದ ಪಟ್ಟಿಕೆಯಲ್ಲಿ ಗೋವುಗಳೊಡನೆ ವೀರವೇಶದಿಂದ ಹೋರಾಡಿ ಮರಣಹೊಂದಿದ ವೀರ ಪುರುಷನನ್ನು ಕೀರ್ತಿಮುಖವುಳ್ಳ ಮಂಟಪದಲ್ಲಿರಿಸಿಕೊಂಡು ದೇವಲೋಕಕ್ಕೆ ಕರೆದೊಯ್ಯುತ್ತಿರುವ ದೇವಕನ್ಯೆಯರು ಕೈಗಳಲ್ಲಿ ಛಾಮರವನ್ನು ಹಿಡಿದಿದ್ದಾರೆ. ಮತ್ತೊಂದು ಕೈಯಲ್ಲಿ ಮಂಟಪವನ್ನು ಹಿಡಿದುಕೊಂಡು ದೇವಲೋಕಕ್ಕೆ ಎತ್ತಿಕೊಂಡು ಹೋಗುತ್ತಿರುವಂತೆ ಬಹಳ ಕಲಾತ್ಮಕವಾಗಿ ಕೆತ್ತಲಾಗಿದೆ.
ಮೂರನೇ ಪಟ್ಟಿಕೆಯಲ್ಲಿ ದೇವಲೋಕದ ಕಲ್ಪನೆಯ ಶಿಲ್ಪಗಳನ್ನು ಬಹಳ ಸುಂದರವಾಗಿ ಕೆತ್ತನೆ ಮಾಡಲಾಗಿದೆ. ಇದರಲ್ಲಿ ಶಿವಲಿಂಗ ಒಂದಕ್ಕೆ ಪೂಜೆಯನ್ನು ಸಲ್ಲಿಸುತ್ತಿರುವ ಪುರೋಹಿತ, ಶಿವಲಿಂಗದ ಮುಂದೆ ನಂದಿಯ ಶಿಲ್ಪ, ಪುರೋಹಿತರ ಹಿಂಬದಿಯಲ್ಲಿ ಪದ್ಮಾಸನದಲ್ಲಿ ಕೈಮುಗಿದು ದೇವರ ಪ್ರಾರ್ಥನೆಯಲ್ಲಿ ಮಗ್ನನಾಗಿರುವ ವೀರಪುರುಷನ ಶಿಲ್ಪವನ್ನು ಕೆತ್ತನೆ ಮಾಡಲಾಗಿದೆ. ಅಂತ್ಯದಲ್ಲಿ ಸೂರ್ಯಚಂದ್ರರ ಶಿಲ್ಪಗಳನ್ನು ಸಹ ಸುಂದರವಾಗಿ ಮೂಡಿ ಬರುವಂತೆ ಕೆತ್ತನೆ ಮಾಡಲಾಗಿದೆ.
ಎರಡನೇ ವೀರಗಲ್ಲು: ಇದು ಸಹ ಯಾವುದೋ ಹೋರಾಟದಲ್ಲಿ ತೊಡಗಿ ವೀರ ಮರಣವನ್ನಪ್ಪಿದ ಮಹಾನ್ ವೀರಪುರುಷನ ಸ್ಮರಣಾರ್ಥಕವಾಗಿ ನಿಲ್ಲಿಸಲಾಗಿರುವಂತಹ ವೀರಗಲ್ಲಾಗಿದೆ. ಈ ವೀರಗಲ್ಲು ಸುಮಾರು ನಾಲ್ಕು ಅಡಿಗಳ ಎತ್ತರವಾಗಿ ಎರಡುವರೆ ಅಡಿಗಳ ಅಗಲವಾಗಿ ಮತ್ತು ನಾಲ್ಕು ಇಂಚು ದಪ್ಪನಾಗಿರುವ ಬಳಪದ ಕಲ್ಲಿನ ಚಪ್ಪಡಿಯ ಮೇಲೆ ರಚಿಸಲಾಗಿದೆ. ಇದರಲ್ಲಿ ಮೂರು ಹಂತದಲ್ಲಿರುವ ಪಟ್ಟಿಕೆಗಳು ಕಾಣಬರುತ್ತವೆ. ಈ ವೀರಗಲ್ಲಿನ ಕೆಳಭಾಗವು ಸ್ವಲ್ಪ ಭೂಮಿಯಲ್ಲಿ ಹೂತುಹೋಗಿದೆ.
ಕೆಳಹಂತದಲ್ಲಿರುವ ಪಟ್ಟಿಕೆಯಲ್ಲಿ ವೀರನೋರ್ವನು ಅಲಂಕರಿಸಲ್ಪಟ್ಟ ಕುದುರೆಯನ್ನೇರಿ ಕುಳಿತಿದ್ದಾನೆ. ಈ ವೀರನು ಮೈಮೇಲೆ ವಿವಿಧ ಬಗೆಯ ವಸ್ತ್ರಾಭರಣಗಳನ್ನು ಧರಿಸಿದ್ದಾನೆ. ಈತನು ತನ್ನ ಎಡಗೈಯಲ್ಲಿ ಕುದುರೆಯ ಲಗಾಮನ್ನು ಹಿಡಿದುಕೊಂಡು ಬಲಗೈಯಲ್ಲಿ ಉದ್ದನೆಯ ಖಡ್ಗವನ್ನು ಹಿಡಿದುಕೊಂಡು ತನ್ನ ಭುಜದ ಮೇಲೆ ಇರಿಸಿಕೊಂಡಿದ್ದಾನೆ. ಈ ವೀರಪುರುಷನು ಏರಿರುವ ಕುದುರೆಯ ಹಿಂಭಾಗದಲ್ಲಿ ಕೈಯಲ್ಲಿ ನೀರಿನ ಕಮಂಡಲ ಮತ್ತು ಪುಷ್ಟವನ್ನು ಹಿಡಿದು ತನ್ನ ಪತಿಯನ್ನು ಬೀಳ್ಕೊಡುವಂತೆ ಕೆತ್ತನೆ ಮಾಡಲಾಗಿರುವ ಸ್ತ್ರೀಯ ಶಿಲ್ಪವಿದೆ. ಈ ಸ್ತ್ರೀಯು ಸಹ ಮೈಮೇಲೆ ವಿವಿಧ ಬಗೆಯ ವಸ್ತ್ರಾಭರಣಗಳನ್ನು ಧರಿಸಿಕೊಂಡಿದ್ದಾಳೆ.
ಎರಡನೇ ಹಂತದ ಪಟ್ಟಿಕೆಯಲ್ಲಿ ಹೋರಾಟದಲ್ಲಿ ತೊಡಗಿ ವೀರಮರಣವನ್ನಪ್ಪಿದ ಪುರುಷನನ್ನು ಕೀರ್ತಿಮುಖದಂತಿರುವ ಮಂಟಪದಲ್ಲಿ ಕೂರಿಸಿಕೊಂಡು ದೇವಲೋಕಕ್ಕೆ ಕರೆದೊಯ್ಯತ್ತಿರುವ ಸ್ತ್ರೀಯರಿಬ್ಬರ ಶಿಲ್ಪಗಳನ್ನು ಬಿಡಿಸಲಾಗಿದೆ. ಈ ಸ್ತ್ರೀಯರು ತಮ್ಮ ಕೈಗಳಲ್ಲಿ ಚಾಮರ ಮತ್ತು ಮಂಟಪವನ್ನು ಹಿಡಿದು ದೇವಲೋಕಕ್ಕೆ ಕರೆದೊಯ್ಯುತ್ತಿರುವ ದೃಶ್ಯ ಸನ್ನಿವೇಶವನ್ನು ಬಹಳ ಸೊಗಸಾಗಿ ಕೆತ್ತನೆ ಮಾಡಲಾಗಿದೆ.
ಮೂರನೇ ಪಟ್ಟಿಕೆಯಲ್ಲಿ ಶಿವನ ಸಾನಿಧ್ಯದ ದೃಶ್ಯ ಸನ್ನಿವೇಶವನ್ನು ಬಹಳ ಸೊಗಸಾಗಿ ಕೆತ್ತನೆ ಮಾಡಲಾಗಿದೆ. ಇದರಲ್ಲಿ ಹೂವಿನ ಹಾರಗಳಿಂದ ಅಲಂಕರಿಸಲ್ಪಟ್ಟ ಶಿವಲಿಂಗಕ್ಕೆ ಪೂಜೆಯನ್ನು ಸಲ್ಲಿಸುತ್ತಿರುವ ಪುರೋಹಿತ ಲಿಂಗದ ಎಡಭಾಗದಲ್ಲಿ ನಂದಿಯನ್ನು ಪ್ರತಿಷ್ಠಾಪಿಸಲಾಗಿದೆ. ಪುರೋಹಿತರ ಹಿಂಭಾಗದಲ್ಲಿ ಪದ್ಮಾಸನದಲ್ಲಿ ಕುಳಿತು ಕೈಮುಗಿದು ದೇವರ ಪ್ರಾರ್ಥನೆಯಲ್ಲಿ ತೊಡಗಿರುವ ವೀರಪುರುಷನ ಶಿಲ್ಪವನ್ನು ಬಿಡಿಸಲಾಗಿದೆ. ಅಂತ್ಯದಲ್ಲಿ ಸೂರ್ಯಚಂದ್ರರನ್ನು ಸಹ ಬಿಡಿಸಲಾಗಿದೆ.
ಮೂರನೇ ವೀರಗಲ್ಲು: ಈ ವೀರಗಲ್ಲನ್ನು ಬಳಪದ ಕಲ್ಲಿನಲ್ಲಿ ರಚಿಸಲಾಗಿದೆ. ಇದು ಸುಮಾರು ನಾಲ್ಕು ಅಡಿಗಳ ಎತ್ತರ ಎರಡುವರೆ ಅಡಿ ಅಗಲ ಮತ್ತು ನಾಲ್ಕು ಇಂಚು ದಪ್ಪನಾಗಿದೆ. ಇದರಲ್ಲಿ ಮೂರು ಹಂತಗಳಲ್ಲಿ ಪಟ್ಟಿಕೆಗಳನ್ನು ಮಾಡಿ ಶಿಲ್ಪಗಳನ್ನು ಕಂಡರಿಸಲಾಗಿದೆ.
ಕೆಳಹಂತದ ಪಟ್ಟಿಕೆಯಲ್ಲಿ ವೀರನೋರ್ವನು ಎರಡು ಕೈಗಳಲ್ಲಿ ಖಡ್ಗಗಳನ್ನು ಹಿಡಿದುಕೊಂಡಿದ್ದಾನೆ. ಬಲಗೈ ಯಲ್ಲಿರುವ ಕತ್ತಿಯನ್ನು ಮೇಲಕ್ಕೆ ಎತ್ತಿ ಹಿಡಿದಿದ್ದಾನೆ. ಎಡಗೈಯಲ್ಲಿರುವ ಕತ್ತಿಯನ್ನು ಕೆಳಮುಖವಾಗಿ ಹಿಡಿದುಕೊಂಡಿದ್ದಾನೆ. ಈ ವೀರನು ಮೈ ಮೇಲೆ ವಿವಿಧ ಬಗೆಯ ವಸ್ತ್ರಾಭರಣಗಳನ್ನು ಧರಿಸಿರುವಂತೆ ಬಹಳ ಸುಂದರವಾಗಿ ಕೆತ್ತನೆ ಮಾಡಲಾಗಿದೆ. ಈ ವೀರ ಪುರುಷನ ಮುಂಬದಿಯಲ್ಲಿ ಎರಡು ತಾಳೆಯ ಮರಗಳನ್ನು ಕೆತ್ತನೆ ಮಾಡಲಾಗಿದೆ. ಅಲ್ಲದೆ ವೀರಪುರುಷನ ಹಿಂಬದಿಯಲ್ಲಿ ಸ್ತ್ರೀಯೋರ್ವಳು ನೀರಿನ ಕಮಂಡಲ ಮತ್ತು ಬಲಗೈಯಲ್ಲಿ ಕತ್ತಿಯನ್ನು ಹಿಡಿದು ನಿಂತಿದ್ದಾಳೆ. ಇವಳು ಸಹ ಮೈ ಮೇಲೆ ವಿವಿಧ ಬಗೆಯ ಸುಂದರವಾದ ವಸ್ತ್ರಾಭರಣಗಳನ್ನು ಧರಿಸಿರುವಂತೆ ನಯನ ಮನೋಹರವಾಗಿ ಕೆತ್ತನೆ ಮಾಡಲಾಗಿದೆ.
ಎರಡನೇ ಹಂತದ ಪಟ್ಟಿಕೆಯಲ್ಲಿ ಚಾಮರವನ್ನು ಹಿಡಿದುಕೊಂಡು ಮತ್ತೊಂದು ಕೈಯಲ್ಲಿ ಕೀರ್ತಿಮುಖವುಳ್ಳ ಮಂಟಪವನ್ನು ಹಿಡಿದುಕೊಂಡಿರುವ ದೇವಕನ್ಯೆಯರಿಬ್ಬರು ಹೋರಾಟದಲ್ಲಿ ತೊಡಗಿ ವೀರಮರಣವನ್ನೊಂದಿದ ವೀರಪುರುಷನನ್ನು ಮಂಟಪದ ಒಳಗೆ ಕೂರಿಸಿಕೊಂಡು ದೇವಲೋಕಕ್ಕೆ ಕರೆದೊಯ್ಯುತ್ತಿರುವ ದೃಶ್ಯ ಸನ್ನಿವೇಶವನ್ನು ಬಿಡಿಸಲಾಗಿದೆ.
ಮೂರನೇ ಹಂತದ ಪಟ್ಟಿಕೆಯಲ್ಲಿ ಶಿವಲಿಂಗಕ್ಕೆ ಪೂಜೆಯನ್ನು ಸಲ್ಲಿಸುತ್ತಿರುವ ಪುರೋಹಿತರು ಕಚ್ಚೆಪಂಚೆಯನ್ನು ಧರಿಸಿ ತಲೆಯ ಕೂದಲನ್ನು ಹಿಂದಕ್ಕೆ ಕಟ್ಟಿಕೊಂಡಿದ್ದಾರೆ. ಶಿವನ ಮುಂದೆ ನಂದಿಯನ್ನು ಇರಿಸಲಾಗಿದೆ. ಪುರೋಹಿತರ ಹಿಂಬದಿಯಲ್ಲಿ ವೀರಮರಣವನ್ನೊಂದಿದ ಪುರುಷನು ಪದ್ಮಾಸನದಲ್ಲಿ ಕೈಮುಗಿದು ಕುಳಿತುಕೊಂಡು ದೇವರ ಪ್ರಾರ್ಥನೆಯಲ್ಲಿ ತೊಡಗಿರುವಂತೆ ಕೆತ್ತನೆ ಮಾಡಲಾಗಿದೆ. ಮೇಲ್ಭಾಗದಲ್ಲಿ ಎಡ ಮತ್ತು ಬಲಭಾಗದಲ್ಲಿ ಸೂರ್ಯ ಚಂದ್ರರನ್ನು ಬಿಡಿಸಲಾಗಿದೆ.
ನಾಲ್ಕನೇ ವೀರಗಲ್ಲು: ಇದೂ ಸಹ ಬಳಪದ ಕಲ್ಲಿನಲ್ಲಿ ಕೆತ್ತನೆ ಮಾಡಲಾಗಿರುವಂತಹ ವೀರಗಲ್ಲಾಗಿದೆ. ಇದು ಸುಮಾರು ನಾಲ್ಕು ಅಡಿ ಎತ್ತರವಾಗಿದೆ. ಎರಡುವರೆ ಅಡಿ ಅಗಲವಾಗಿದೆ ಮತ್ತು ಐದು ಇಂಚು ದಪ್ಪನಾಗಿದೆ. ಇದರಲ್ಲಿ ಮೂರು ಹಂತಗಳಲ್ಲಿ ಪಟ್ಟಿಕಾ ಶಿಲ್ಪಗಳನ್ನು ಬಿಡಿಸಲಾಗಿದೆ. ಈ ವೀರಗಲ್ಲಿನ ಕೆಳಭಾಗವು ಅರ್ಧಭಾಗ ಭೂಮಿಯಲ್ಲಿ ಹೂತುಹೋಗಿದೆ. ಕೆಳಹಂತದ ಪಟ್ಟಿಕೆಯಲ್ಲಿ ವೀರಪುರುಷ ನೋರ್ವನು ಬಿಲ್ಲನ್ನು ಹಿಡಿದು ಬಾಣವನ್ನು ಬಿಡುತ್ತಿರುವಂತೆ ಕೆತ್ತನೆ ಮಾಡಲಾಗಿದೆ. ಈ ವೀರನ ಮುಖ ಭಾಗವು ಪ್ರಕೃತಿಯ ವಿಕೋಪಕ್ಕೆ ಬಲಿಯಾಗಿ ಕಲ್ಲಿನ ಚಕ್ಕೆ ಎದ್ದು ಹೋಗಿದೆ. ಇವನ ತಲೆಯ ಕೂದಲನ್ನು ಮೇಲೆತ್ತಿ ತುರುಬಿನಂತೆ ಕಟ್ಟಿಕೊಂಡಿರುವಂತೆ ಕೆತ್ತನೆ ಮಾಡಲಾಗಿದೆ.
ಎರಡನೇ ಹಂತದ ಪಟ್ಟಿಕೆಯಲ್ಲಿ ಚಾಮರವನ್ನು ಹಿಡಿದು ವೀರ ಮರಣಹೊಂದಿದ ಪುರುಷನನ್ನು ದೇವಕನ್ಯೆಯರು ವೀರಪುರುಷನ ಕೈಗಳನ್ನು ತಮ್ಮ ಭುಜದ ಮೇಲಿರಿಸಿಕೊಂಡು ದೇವಲೋಕಕ್ಕೆ ಕರೆದೊಯ್ಯುತ್ತಿರುವಂತೆ ಕೆತ್ತನೆ ಮಾಡಲಾಗಿದೆ.
ಮೂರನೇ ಹಂತದ ಪಟ್ಟಿಕೆಯಲ್ಲಿ ಸಿಂಹಾಸನದ ಮೇಲೆ ಕುಳಿತಿರುವ ದೇವಮಾನವ ಶಿಲ್ಪವನ್ನು ಬಿಡಿಸಲಾಗಿದೆ. ಇವನು ತನ್ನ ಬಲಗಾಲನ್ನು ಮಡಿಸಿಕೊಂಡು ಎಡಗಾಲನ್ನು ಮಡಿಚಿಕೊಂಡು ಆ ಕಾಲಿನ ಮೇಲೆ ತನ್ನ ಎಡಗೈಯನ್ನು ಇರಿಸಿದ್ದಾನೆ. ಈ ಶಿಲ್ಪದ ಭಾಗ ಸ್ವಲ್ಪ ಮುರಿದು ಹೋಗಿದೆ. ಈ ದೇವಮಾನವನ ಎಡ ಬಲದಲ್ಲಿ ಚಾಮರ ಮತ್ತು ಫಲವನ್ನು ಹಿಡಿದು ನಿಂತಿರುವ ಸ್ತ್ರೀಯರ ಶಿಲ್ಪಗಳನ್ನು ಕೆತ್ತನೆ ಮಾಡಲಾಗಿದೆ.
ಐದನೇ ವೀರಗಲ್ಲು: ಇದನ್ನು ಬಳಪದ ಕಲ್ಲಿನಲ್ಲಿ ರಚಿಸಲಾಗಿದೆ. ಇದು ಸುಮಾರು ಮೂರು ಅಡಿ ಎತ್ತರವಾಗಿದ್ದು, ಎರಡು ಅಡಿಗಳ ಅಗಲವಾಗಿದೆ ಮತ್ತು ಮೂರು ಇಂಚು ದಪ್ಪನಾಗಿದೆ. ಇದರಲ್ಲಿ ಮೂರು ಹಂತಗಳಲ್ಲಿ ಪಟ್ಟಿಕಾ ಶಿಲ್ಪಗಳನ್ನು ಬಿಡಿಸಲಾಗಿದೆ. ಇದರ ಮೇಲ್ಭಾಗವು ಪ್ರಕೃತಿಯ ವಿಕೋಪಕ್ಕೆ ಬಲಿಯಾಗಿ ಯಾವುದೇ ರೀತಿಯ ರಚನೆ ಕಾಣಬರುವುದಿಲ್ಲ. ಕೆಳಹಂತದ ಪಟ್ಟಿಕೆಯಲ್ಲಿ ಮತ್ತು ಎರಡನೇ ಹಂತದ ಪಟ್ಟಿಕೆಗಳಲ್ಲಿ ಮೂರು ಭಾಗಗಳಾಗಿ ಮಾಡಿ ಮಧ್ಯದಲ್ಲಿ ಚಿಕ್ಕ ಚಿಕ್ಕ ಶಿಲ್ಪಗಳನ್ನು ಬಿಡಿಸಲಾಗಿದೆ. ಇದರಲ್ಲಿ ಇಬ್ಬರು ಪುರುಷರು ಆಯುಧಗಳನ್ನಿಡಿದು ಹೋರಾಟದಲ್ಲಿ ತೊಡಗಿದ್ದಾರೆ. ಎಡಭಾಗದಲ್ಲಿ ಸ್ತ್ರೀಯೋರ್ವಳು ಸಹ ಹೋರಾಟದಲ್ಲಿ ತೊಡಗಿರುವಂತೆ ಬಿಡಿಸಲಾಗಿದೆ. ಇವರ ಮುಖಗಳು ಸ್ಪಷ್ಟವಾಗಿ ಕಾಣಬರುವುದಿಲ್ಲ.
ಎರಡನೇ ಹಂತದ ಪಟ್ಟಿಕೆಯಲ್ಲಿ ಮಧ್ಯದ ಭಾಗದಲ್ಲಿ ಪುರುಷನೋರ್ವನು ನೃತ್ಯ ಭಂಗಿಯಲ್ಲಿ ನಿಂತಿದ್ದಾನೆ. ಇವನ ಎಡ ಮತ್ತು ಬಲಭಾಗದಲ್ಲಿ ಸ್ತ್ರೀಯರು ನಿಂತಿದ್ದಾರೆ.
ಆರನೇ ವೀರಗಲ್ಲು: ಇದೊಂದು ಮೂರು ಅಡಿ ಎತ್ತರ ಎರಡು ಅಡಿ ಅಗಲ ಮತ್ತು ಅರ್ಧ ಅಡಿ ದಪ್ಪನಾಗಿರುವ ಬೆಣಚುಕಲ್ಲಿನಲ್ಲಿ ರಚಿಸಲಾಗಿರುವ ವೀರಗಲ್ಲಾಗಿದೆ ಇದರಲ್ಲಿ ಮೂರು ಹಂತಗಳಲ್ಲಿ ಪಟ್ಟಿಕೆಗಳಿವೆ. ಕೆಳಗಿನ ಹಂತದ ಪಟ್ಟಿಕೆಯಲ್ಲಿ ವೀರಾವೇಶದಿಂದ ಹೋರಾಡಿ ಮಡಿದು ನೆಲದ ಮೇಲೆ ಮಲಗಿರುವಂತಹ ಶಿಲ್ಪವನ್ನು ಬಿಡಿಸಲಾಗಿದೆ. ಹೋರಾಟದಲ್ಲಿ ಜಯಶೀಲನಾದ ವೀರನು ಎರಡನೇ ಹಂತದಲ್ಲಿ ತನ್ನ ಪತ್ನಿಯ ಜೊತೆಗೂಡಿ ಬಲಗೈಯಲ್ಲಿ ಕತ್ತಿಯನ್ನು ಮೇಲಕ್ಕೆ ಎತ್ತಿ ಹಿಡಿದು ನಿಂತಿದ್ದಾನೆ. ಇವರಿಬ್ಬರು ವಿವಿಧ ಬಗೆಯ ವಸ್ತ್ರಾಭರಣಗಳನ್ನು ಧರಿಸಿರುವಂತೆ ಬಿಡಿಸಲಾಗಿದೆ. ಆದರೆ ಮುಖದ ಭಾಗವು ಕಾಲಪುರುಷರ ದಾಳಿಗೆ ಬಲಿಯಾಗಿ ಸ್ಪಷ್ಟವಾಗಿ ಕಾಣದಂತಾಗಿದೆ. ಮೇಲ್ಭಾಗದಲ್ಲಿ ಸೂರ್ಯ ಚಂದ್ರರನ್ನು ಬಿಡಿಸಲಾvದೆ.
ಏಳನೇ ವೀರಗಲ್ಲು: ಇದೊಂದು ಹಸಿರು ಛಾಯವುಳ್ಳ ಬಳಪದ ಕಲ್ಲಿನಲ್ಲಿ ರಚಿಸಲಾಗಿದೆ. ಇದು ಸುಮಾರು ಮೂರು ಅಡಿಗಳ ಎತ್ತರ ಮೂರು ಅಡಿ ಅಗಲ ಮತ್ತು ಅರ್ಧ ಅಡಿ ದಪ್ಪನಾಗಿದೆ. ಇದರಲ್ಲಿ ಮೂರು ಹಂತಗಳಲ್ಲಿ ಶಿಲ್ಪಗಳನ್ನು ಕೆತ್ತನೆ ಮಾಡಲಾಗಿದೆ. ಕೆಳಹಂತದ ಪಟ್ಟಿಕೆಯಲ್ಲಿ ಕುದುರೆಯನ್ನೇರಿ ಹೊರಟಿರುವ ವೀರಪುರುಷ ಅವನ ಮುಂದೆ ಮತ್ತೊಬ್ಬ ಪುರುಷನು ಸೋತು ತನ್ನೆರಡು ಕೈಗಳನ್ನು ಕೆಳಗಿಳಿಸಿ ಸುಸ್ತಾದಂತೆ ಬಿಡಿಸಲಾಗಿದೆ. ಎಡಭಾಗದಲ್ಲಿ ಸ್ತ್ರೀಯೋರ್ವಳ ಶಿಲ್ಪವನ್ನು ಬಿಡಿಸಲಾಗಿದೆ.
ಎರಡನೇ ಹಂತದ ಪಟ್ಟಿಕೆಯಲ್ಲಿ ಹೋರಾಡಿ ವೀರಮರಣವನ್ನೊಂದಿದ ವೀರನನ್ನು ಮಂಟಪವೊಂದರಲ್ಲಿ ಕೂರಿಸಿಕೊಂಡು ದೇವಲೋಕಕ್ಕೆ ಕರೆದೊಯುತ್ತಿರುವ ದೇವಕನ್ಯೆಯರ ಶಿಲ್ಪಗಳನ್ನು ಕೆತ್ತನೆ ಮಾಡಲಾಗಿದೆ. ಮೇಲ್ಭಾಗದಲ್ಲಿ ಶಿವನಲಿಂಗಕ್ಕೆ ಪೂಜೆ ಸಲ್ಲಿಸುತ್ತಿರುವ ಪುರೋಹಿತರು ಪುರೋಹಿತರ ಹಿಂಬದಿಯಲ್ಲಿ ಪದ್ಮಾಸನದಲ್ಲಿ ಕೈಮುಗಿದು ದೇವರ ಧ್ಯಾನದಲ್ಲಿ ತೊಡಗಿರುವ ವೀರಪುರುಷ ಶಿವಲಿಂಗದ ಎಡಭಾಗದಲ್ಲಿ ನಂದಿಯ ಶಿಲ್ಪವನ್ನು ಬಿಡಿಸಲಾಗಿದೆ.
ಈ ವೀರಗಲ್ಲಿನ ಮೇಲ್ಭಾಗವು ಮಳೆಯ ನೀರಿ£ಂದ ಪಾಚಿಕಟ್ಟಿ ಮೇಲೆಲ್ಲಾ ಕಲ್ಲುಹೂ ಬೆಳೆದು ಶಿಲ್ಪಗಳು ಸ್ಪಷ್ಟವಾಗಿ ಕಾಣವುದಿಲ್ಲ.
ಈ ಮೇಲೆ ತಿಳಿಸಿದ ಎಲ್ಲಾ ಅಂಶಗಳನ್ನು ಗಮನಿಸಿದಾಗ ಕೆಳಗೆರೆ ಗ್ರಾಮದಲ್ಲಿ ದೊರೆತ ಎಲ್ಲ ವೀರಗಲ್ಲುಗಳಲ್ಲೂ ಅದರದೇ ಆದ ವೈಶಿಷ್ಟ್ಯತೆಯಿದ್ದು, ಎಲ್ಲದರಲ್ಲೂ ಶಿವಲಿಂಗ, ಸೂರ್ಯ, ಚಂದ್ರ ಮತ್ತು ನಂದಿಯ ಶಿಲ್ಪವಿದ್ದು, ಜೊತೆಗೆ ತಾಳೆಮರಗಳ ಚಿತ್ರ ಕೆತ್ತಿರುವುದು ಹಾಗೂ ಕೆಲವು ಕಡೆ ವೀರರು ಹೋರಾಡುತ್ತಿರುವುದು ಇವುಗಳೆಲ್ಲವೂ ತುಂಬ ಅಲಂಕರಣೆಯಲ್ಲಿ ಸುಂದರವಾಗಿರುವುದನ್ನು ಕಾಣಬಹುದು. ಒಟ್ಟಾರೆ ಇವುಗಳನ್ನು ನೋಡಿದಾಗ ಶೈವಧರ್ಮದ ಆಚರಣೆ ಹೆಚ್ಚಾಗಿ ಪ್ರಚಲಿತದಲ್ಲಿದ್ದು ಶೈವಪರಂಪರೆಯ ಸಂಸ್ಕøತಿಯನ್ನು ಸಾರುತ್ತದೆ ಎಂದು ಹೇಳಬಹುದಾಗಿದೆ.


ಆಧಾರಸೂಚಿ ಮತ್ತು ಅಡಿಟಿಪ್ಪಣಿ
1. ಕನ್ನಡ ವಿಷಯ ವಿಶ್ವಕೋಶ, ಪ್ರಸಾರಾಂಗ, ಮೈ.ವಿ.ವಿ. ಮೈಸೂರು, 2005.
2. ಮಂಡ್ಯ ಜಿಲ್ಲಾ ಗ್ಯಾಸೆಟಿಯರ್, 2003, ಕರ್ನಾಟಕ ಪುಸ್ತಕ ಮುದ್ರಣಾಲಯ, ಮೈಸೂರು.
3. ಎಪಿಗ್ರಾಫಿಯಾ-ಕರ್ನಾಟಿಕ, ಸಂಪುಟ 7, ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು.
4. ಚಿದಾನಂದಮೂರ್ತಿ.ಎಂ., ಕನ್ನಡ ಶಾಸನಗಳ ಸಾಂಸ್ಕøತಿಕ  ಅಧ್ಯಯನ, 2008, ಪ್ರಸಾರಾಂಗ, ಮೈ.ವಿ.ವಿ. ಮೈಸೂರು.
5. ಶೇಷಶಾಸ್ತ್ರಿ ಆರ್., ಕರ್ನಾಟಕದ ವೀರಗಲ್ಲುಗಳು, ಧಾರವಾಡ-1982.
6. ಪರಮಶಿವಮೂರ್ತಿ ಡಿ.ವಿ., ಕನ್ನಡ ಶಾಸನಶಿಲ್ಪ, 1999, ಹಂಪಿ.
7. ಫೋಟೋದಲ್ಲಿನ ಚಿತ್ರವನ್ನು ಗಮನಿಸಿ, 1, 2, 3, 4, 5, 6, 7.
 ಸಹ ಪ್ರಾಧ್ಯಾಪಕರು, ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗ, ಮಾನಸಗಂಗೋತ್ರಿ, ಮೈಸೂರು.

Tuesday, January 13, 2015

ಸಂಕ್ರಾಂತಿಯ ಶುಭಾಶಯಗಳು

 


         ಸರ್ವರಿಗೂ  ಸಂಕ್ರಾಂತಿಯ ಶುಭಾಶಯಗಳು











‌ಎಚ್‌. ಶೇಷಗಿರಿರಾವ್



Sunday, January 11, 2015

ಕ್ಯಾಸನೂರು ಮತ್ತು ದೇವಿಕೊಪ್ಪದ ಹೊಸ ಶಾಸನಗಳು


ಕ್ಯಾಸನೂರು ಮತ್ತು ದೇವಿಕೊಪ್ಪದ ಹೊಸ ಶಾಸನಗಳು
ಡಾ. ಹನುಮಾಕ್ಷಿ ಗೋಗಿ
ಹಾನುಗಲ್ಲು ತಾಲೂಕಿನ ನೈಋತ್ಯ ದಿಕ್ಕಿನಲ್ಲಿ ತಾಲೂಕಿನ ಕೊನೆಯ ಮೇರೆಯಾಗಿರುವ ಮಲೆನಾಡಿನ ಒಂದು ಸುಂದರ ಹಳ್ಳಿ ಕ್ಯಾಸನೂರು. ಸುತ್ತಲೂ ಹಚ್ಚಹಸಿರು ಕಾಡು, ಗದ್ದೆಗಳು, ತೆಂಗು ಹಾಗೂ ಅಡಕೆ ತೋಟಗಳ ಮಧ್ಯೆ ಇರುವ ಊರು. ಊರ ಕೊನೆಯಲ್ಲಿರುವ ಕೆರೆಯನ್ನು ಇಂದು ದೇವರಹೊಂಡ ಎಂದು ಕರೆಯುತ್ತಿದ್ದು, ಅದರ ಅಂಚಿನಲ್ಲಿ ರಾಮೇಶ್ವರ ಮತ್ತು ಈಶ್ವರ ದೇವಾಲಯಗಳಿದ್ದು, ಈಶ್ವರ ದೇವಾಲಯದಲ್ಲಿ ಶಿವಲಿಂಗ ಹಾಗೂ ನಂದಿಗಳು ಮಾತ್ರ ಇವೆ. ದೇವಸ್ಥಾನದ ಗರ್ಭಗುಡಿಯನ್ನು ಇತ್ತೀಚೆಗೆ ಕಟ್ಟಲಾಗಿದೆ. ಅದರ ಹೊರಭಾಗದಲ್ಲಿ ಎರಡು ಕಂಬಗಳನ್ನು ತಂದು ನಿಲ್ಲಿಸಿದ್ದು, ಎರಡರ ಮೇಲೆಯೂ ಶಾಸನಗಳಿವೆ. ರಾಮೇಶ್ವರ ದೇವಾಲಯದ ಗರ್ಭಗುಡಿ ಮತ್ತು ಸುಕನಾಸಿಗಳು ಮಾತ್ರ ಈಗ ಉಳಿದಿದ್ದು, ಅಲ್ಲಿ ಕೇಶವನ ಶಿಲ್ಪವಿದೆ. ಸ್ತ್ರೀ ದೇವತೆಯೊಬ್ಬಳ ಭಗ್ನಶಿಲ್ಪವಿದೆ. ಉಳಿದೆಲ್ಲ ಭಾಗಗಳು ಬಿದ್ದುಹೋಗಿವೆ. ದೇವಾಲಯದ ಯಾವುದೇ ಅವಶೇಷಗಳು ಸುತ್ತಮುತ್ತಲೆಲ್ಲೂ ಇಲ್ಲ. ಹೊಂಡದಲ್ಲಿ ಸ್ವಲ್ಪ ನೀರಿದ್ದು, ಅದರಲ್ಲಿ ದೊರೆತ ಶಾಸನಗಳನ್ನು ತಂದು ರಾಮೇಶ್ವರ ದೇಗುಲದ ಮುಂದೆ ನಿಲ್ಲಿಸಲಾಗಿದೆ. ಇವುಗಳಲ್ಲಿ ಎರಡು ಈ ಹಿಂದೆ ಇಐ 5ರಲ್ಲಿ ಪ್ರಕಟಿತ ಶಾಸನಗಳಿವೆ. ಊರೊಳಗೆ ವೀರಭದ್ರ ದೇವಾಲಯವಿದ್ದು, ಕಟ್ಟಡವು ಇತ್ತೀಚಿನದಾಗಿದೆ. ಮುಂದೆ ಕಂಬವೊಂದನ್ನು ನಿಲ್ಲಿಸಿದ್ದು, ಕಲ್ಯಾಣ ಚಾಲುಕ್ಯರ ಕಾಲದ ಸುಂದರ ಕಂಬವಿದಾಗಿದೆ. ಅದರ ಹತ್ತಿರವೇ 18-19ನೆಯ ಶತಮಾನದ ಮಾಸ್ತಿಕಲ್ಲೊಂದನ್ನು ನಿಲ್ಲಿಸಿದ್ದು, ಲಿಪಿ ಇದೆ. ಊರ ಮಧ್ಯದಲ್ಲಿ ಮನೆಯೊಂದರ ಬೇಲಿಯಲ್ಲಿ ಪಠ್ಯ ಪ್ರಕಟಿತವಾದ ಗೋಸಾಸವೊಂದನ್ನು ನಿಲ್ಲಿಸಿದೆ. ಇನ್ನೊಂದು ಮನೆಯ ಬೇಲಿಯಲ್ಲಿ ಲಿಪಿರಹಿತ ವೀರಗಲ್ಲೊಂದಿದೆ. ವಿಜಯಕಾಂತ ಪಾಟೀಲರ ಮನೆಯ ಹಿತ್ತಲಿನಲ್ಲಿ ಮರದಡಿ ಶಾಸನವೊಂದಿದ್ದು, ಈಗ ಅದನ್ನು ಪೂಜಿಸಲಾಗುತ್ತಿದೆ. ಐತಿಹಾಸಿಕವಾಗಿ ಹಾಗೂ ಸಾಂಸ್ಕøತಿಕವಾಗಿ ಸಮೃದ್ಧವಾಗಿರುವ ಈ ಊರ ಸುತ್ತಲೂ ಇನ್ನೂ ಹೊಸ ಶಾಸನಗಳು ಬಹುಶಃ ಇರುವ ಸಾಧ್ಯತೆ ಇದೆ. ಇದಲ್ಲದೇ ಆನೆಗಳು ಮತ್ತು ಕೃಷಿ ಸಂಸ್ಕøತಿಯ ನಾಡಾಗಿರುವುದರಿಂದ ಇಲ್ಲಿ ಅಪರೂಪದ ಗೋಸಾಸ ಕಲ್ಲುಗಳೂ ದೊರೆತಿವೆ ಎನ್ನುವುದನ್ನು ಗಮನಿಸಬೇಕು.
ಕರ್ನಾಟಕದಾದ್ಯಂತ ಇದುವರೆಗೆ ಸು. 230 ಗೋಸಾಸ ಕಲ್ಲುಗಳು ದೊರೆತಿದ್ದು, ಅವುಗಳಲ್ಲಿ 57 ಲಿಪಿ ಸಹಿತ ಇವೆ. ಇವುಗಳ ಕುರಿತು ಈಗಾಗಲೇ ಡಾ. ಎಂ.ಎಂ. ಕಲಬುರ್ಗಿಯವರು ಮತ್ತು ಡಾ. ಎಂ.ಬಿ. ನೇಗಿನಹಾಳ ಅವರು ಲೇಖನಗಳನ್ನು ಬರೆದು, ಅವುಗಳ ಪಟ್ಟಿ ಮಾಡಲು ಪ್ರಯತ್ನಿಸಿದ್ದಾರೆ. ತದನಂತರ ಡಾ. ಭೋಜರಾಜ ಪಾಟೀಲರು ತಮ್ಮ ಮಹಾಪ್ರಬಂಧದಲ್ಲಿ ಇವುಗಳ ಪ್ರಸ್ತಾಪ ಮಾಡಿದ್ದಾರೆ. ಇತ್ತೀಚೆಗೆ ಬಸಪ್ಪ ಹುಬ್ಬಳ್ಳಿ ಎನ್ನುವವರು ಎಂ.ಫಿಲ್. ಕೂಡ ಮಾಡಿದ್ದಾರೆ.
ಪಟ್ಟದಕಲ್ಲು, ಐಹೊಳೆಯ ಪ್ರಾಚೀನ ಗೋಸಾಸಗಳಿಂದ ಹಿಡಿದು, ಕುಬಟೂರು, ಕುಪ್ಪಗಡ್ಡೆ, ಮಲ್ಲೇನಹಳ್ಳಿ, ಅಸೂಟಿ, ಹೂಲಿ, ಬೆಟಕೆರೂರು, ಎಸಳೆ, ಸೋಮನಹಳ್ಳಿ, ಹುಸ್ನಿ, ಮುತ್ತಳ್ಳಿ, ಕರಿನೆಲ್ಲಿ, ಸಾತೇನಹಳ್ಳಿ, ತಿಳವಳ್ಳಿಗಳಲ್ಲಿ ಎಂದರೆ ಉತ್ತರದ ಹುನಗುಂದ ತಾಲೂಕಿ£ಂದ ದಕ್ಷಿಣದ ಸೊರಬ, ಸಾಗರ ತಾಲೂಕುಗಳವರೆಗೆ ಇವುಗಳ ವ್ಯಾಪ್ತಿ ಹಬ್ಬಿದೆ. ಇತ್ತೀಚೆಗೆ ನಾನು ಹಾನುಗಲ್ಲು ತಾಲೂಕಿನ ನರೇಗಲ್ಲು, ಸಾವೀಕೇರಿ, ಯಳವಟ್ಟಿ, ಹಿರೂರುಗಳಲ್ಲಿ ಇವುಗಳನ್ನು ಗಮನಿಸಿದ್ದೇನೆ. ಈಗ ಮತ್ತೆ ಎರಡು ಗೋಸಾಸಗಳನ್ನು ಕ್ಯಾಸನೂರಿನಲ್ಲಿ ಪತ್ತೆ ಮಾಡಲಾಗಿದೆ.
ರಾಷ್ಟ್ರಕೂಟ ಅರಸರು ಕೃಷಿ ಪ್ರಧಾನ ಸಂಸ್ಕøತಿಗೆ ಒತ್ತನ್ನು ಕೊಟ್ಟವರು. ಕೃಷಿ ವಿಸ್ತರಣೆ ಅವರ ಪ್ರಿಯ ವಿಷಯವಾಗಿತ್ತು ಎನ್ನುವುದಕ್ಕೆ ಅವರು ಇಟ್ಟುಕೊಂಡಿರುವ ಬಿರುದುಗಳೇ ಸಾಕ್ಷಿಯನ್ನು ನೀಡುತ್ತವೆ. ಅಕಾಲವರ್ಷ, ಧಾರಾವರ್ಷ, ನಿತ್ಯವರ್ಷ, ಪ್ರಭೂತವರ್ಷ, ಅಮೋಘವರ್ಷ, ಸುವರ್ಣವರ್ಷ ಎಂಬ ಬಿರುದುಗಳನ್ನೇ ಅವರು ಬಳಸಿದ್ದಾರೆ. ಕರ್ನಾಟಕದ ಅಷ್ಟೇ ಏಕೆ ಭಾರತದ ಯಾವ ಅರಸರೂ ಇಂತಹ ಬಿರುದುಗಳನ್ನು ಬಳಸಿಲ್ಲ. ಇನ್ನು ಅವರ ಶುಭತ್ತುಂಗ, ಜಗತ್ತುಂಗ, ನೃಪತುಂಗಗಳಿಗೆ ಏನು ಅರ್ಥವಿದೆ ಎನ್ನುವುದನ್ನು ಶೋಧಿಸಬೇಕಿದೆ. ಮಳೆಗೆ ಅವರು ಮಹತ್ವ ಕೊಟ್ಟಷ್ಟೇ ಕೃಷಿಗೂ ಪ್ರಾಮುಖ್ಯತೆ ನೀಡಿದರು ಎನ್ನುವುದಕ್ಕೆ ಅವರು ನೇಗಿಲನ್ನು ಲಾಂಛನವಾಗಿ ಬಳಸಿದ್ದೇ ಭಾಷ್ಯ ಬರೆಯುತ್ತದೆ. ಅವರು ಬರೆಸಿದ ಬಹುತೇಕ ಎಲ್ಲ ಶಾಸನಗಳ ಕೊನೆಯಲ್ಲಿ ನೇಗಿಲಿನ ಗುರುತಿದೆ. ಕ್ವಚಿತ್ತಾಗಿ ಪ್ರಾರಂಭದಲ್ಲಿಯೂ ಚಿತ್ರಿಸಿದ್ದಾರೆ. ಕೆಲವೆಡೆ ನೇಗಿಲಿಗೆ ಎತ್ತುಗಳನ್ನೂ ಹೂಡಲಾಗಿದೆ. ಅತ್ಯಂತ ಅಧಿಕ ಸಂಖ್ಯೆಯ ಶಾಸನಗಳಲ್ಲಿ ಕೆರೆ ಕಟ್ಟಿಸಿದ ವಿವರಗಳು ಇವರ ಕಾಲದಲ್ಲಿವೆ. ಕೆರೆ ಕಟ್ಟಿಸಿದ ನಂತರ ನೀಡುವ ಗೋಸಹಸ್ರದಾನದ ಪ್ರಸ್ತಾಪ ಮತ್ತು ಗೋಸಾಸ ಕಲ್ಲುಗಳೂ ಇದೇ ರಾಷ್ಟ್ರಕೂಟರ ಕಾಲದಲ್ಲಿ ದೊರೆಯುತ್ತವೆ. ಇನ್ನೂ ಮುಂದುವರೆದು ಹೇಳಬೇಕೆಂದರೆ ಗೋಗ್ರಹಣ ಪ್ರಸಂಗಗಳು ಮತ್ತು ತುರುಗೊಳ್ ವೀರಗಲ್ಲುಗಳೂ ಸಾಕಷ್ಟು ಪ್ರಮಾಣದಲ್ಲಿ ಸಿಗುವುದು. ಗೋಗ್ರಹಣವೆಂದರೆ ಅವರ ಸ್ವಾಭಿಮಾನ ಮತ್ತು ಶೌರ್ಯಗಳನ್ನು ಕೆಣಕಿದಂತೆ ಆಗುತ್ತಿತ್ತೆಂದು ಬೇರೆ ಹೇಳಬೇಕಿಲ್ಲ. ಇವೆಲ್ಲವುಗಳು ಅವರ ಕೃಷಿ ಸಂಸ್ಕøತಿಯನ್ನು ಎತ್ತಿ ಸಾರುತ್ತವೆ. ಇಂತಹ ಕೆರೆ ಕಟ್ಟಿಸಿದ ಮತ್ತು ಅದೇ ಸಂದರ್ಭದಲ್ಲಿ ಸಾವಿರ ಗೋವುಗಳನ್ನು ದಾನವಾಗಿ ಕೊಟ್ಟು ಮೇಂಟಿಕಲ್ಲನ್ನು ನಿಲ್ಲಿಸಿದ ಎರಡು ಸಾಕ್ಷಿಗಳು ಕ್ಯಾಸನೂರಿನಲ್ಲಿ ದೊರೆತಿವೆ.
ಕ್ಯಾಸನೂರಿನ ಶಾಸನಗಳು
1
ಈಶ್ವರ ಗುಡಿ ಮುಂದೆ ನಿಂತಿರುವ ಗೋಸಾಸÀ 1
ಸು. 9-10ನೆಯ ಶ.
3’ ಎತ್ತರ 1.6" ಅಗಲದ ಈ ಗೋಸಾಸದ ಮೇಲ್ಭಾಗದಲ್ಲಿ ಯಾವುದೇ ಚಿತ್ರಗಳಿಲ್ಲ. ಅರ್ಧ ಕೋನಾಕೃತಿಯ ಕೆಳಭಾಗದ ಚೌಕಾಕಾರದ ಭಾಗದಲ್ಲಿ ಮತ್ತು ಅದರ ಕೆಳಗಿನ ಚೌಕಾಕಾರದ ಭಾಗದಲ್ಲಿ ಕೆತ್ತಿದ ಈ ಶಾಸನವು ಇನ್ನೊಂದು ಪಟ್ಟಿಕೆಯಲ್ಲಿಯೂ ಒಂದು ಸಾಲು ಮುಂದುವರೆದಿದೆ. ಶಾಸನದ ಕೆಳಭಾಗವನ್ನು ಅಗೆಸಿದಾಗ ಯಾವುದೇ ಶಾಸನವು ಕಂಡುಬಂದಿರುವುದಿಲ್ಲ. ಶಾಸನದ ಎರಡೂ ಪಕ್ಕಗಳಲ್ಲಿಯೂ ಅಕ್ಷರಗಳಿಲ್ಲ. ಹಿಂಭಾಗದಲ್ಲಿ ಮೇಲೆ ಪೂರ್ಣ ಕುಂಭದ ಉಬ್ಬುಶಿಲ್ಪವಿದ್ದು, ಕೆಳಗೆ ನೇಗಿಲಿಗೆ ಹೂಡಿದ ಜೋಡೆತ್ತುಗಳಿವೆ.
ತ್ರುಟಿತ ಮತ್ತು ಅಪೂರ್ಣವಾದ ಪ್ರಸ್ತುತ ಶಾಸನವು ಮಣ್ಡಗೆಡೆಯಲ್ಲಿ ಕೆರೆಯನ್ನು ಕಟ್ಟಿಸಿ, ಗೋಸಹಸ್ರ ದಾನವನ್ನು ಮಾಡಿದ ಗಾಮುಣ್ಡನೊಬ್ಬನನ್ನು (ಸರಗೊವ . ಟ್ಟಯ?) ಹೆಸರಿಸುತ್ತದೆ.
ಮೊದಲನೆಯ ಪಟ್ಟಿಕೆ
1 ರ ಪ್ರವತ್ರ್ತಿಸೆ ಪವುಷ್ಯ ಮ(ಮಾ)ಸ-
2 ಮು ಪಞ್ಚಮೆಯು ಬೃಹಸ್ಪ-
3 ತಿ ವಾರದನ್ದು ಮಣ್ಡಗೆಡೆಯ
4 ಮಹಾಟರ ಭಟಕ್ಕೆ ಕೆ¾õÉಯ
5 ಕೇದಮ್ರ್ಮಮೊಕೋನ್
ಎರಡನೆಯ ಪಟ್ಟಿಕೆ
6 ದ್ದು ಗೋಸಹಶ್ರಮ-
7 ನಿ¿್ದ ಸರಗೊವ .
ಮೂರನೆಯ ಪಟ್ಟಿಕೆ
8 ಟ್ಟಯ ಗಮುಣ್ಡ ಮಙ್ಗಳ [||*]
2
ಈಶ್ವರ ಗುಡಿ ಮುಂದೆ ಇರುವ ಗೋಸಾಸ 2
ಸು. 9-10ನೆಯ ಶ.
3’ ಎತ್ತರ 1.6" ಅಗಲದ ಈ ಗೋಸಾಸದ ಮೇಲ್ಭಾಗದಲ್ಲಿ ಯಾವುದೇ ಚಿತ್ರಗಳಿಲ್ಲ. ಅರ್ಧ ಕೋನಾಕೃತಿಯ ಕೆಳಭಾಗದ ಚೌಕಾಕಾರದ ಭಾಗದಲ್ಲಿ ಕೆತ್ತಿದ ಈ ಶಾಸನವು ಇನ್ನೊಂದು ಗೋಸಾಸ ಕಲ್ಲಿನಲ್ಲಿಯೂ ಮುಂದುವರೆದಿರಬಹುದು. ಶಾಸನದ ಕೆಳಭಾಗವನ್ನು ಅಗೆಸಿದಾಗ ಯಾವುದೇ ಶಾಸನವು ಕಂಡುಬಂದಿರುವುದಿಲ್ಲ. ಎರಡೂ ಪಕ್ಕಗಳಲ್ಲಿಯೂ ಅಕ್ಷರಗಳಿಲ್ಲ. ಹಿಂಭಾಗದಲ್ಲಿ ಆನೆಯ ಉಬ್ಬುಶಿಲ್ಪವಿದೆ. ಕೆಲವು ಗೋಸಾಸಗಳು ಅಪೂರ್ಣವಾಗಿದ್ದಾಗ ಅಲ್ಲಿಯೇ ದೊರೆಯುವ ಇನ್ನೊಂದು ಗೋಸಾಸ ಕಲ್ಲಿನಲ್ಲಿ ಪಠ್ಯ ಮುಂದುವರೆದ ಉದಾಹರಣೆಗಳಿವೆ. ಸದ್ಯ ದೊರೆತ ಇನ್ನೊಂದು ಗೋಸಾಸದಲ್ಲಿ ಗೋಸಾಸ ದಾನ ಮಾಡಿದ ಕಾಲ ಮತ್ತು ವ್ಯಕ್ತಿಯ ಹೆಸರುಗಳಿದ್ದರೂ ಅಕ್ಷರಗಳ ಸ್ವರೂಪ ಭಿನ್ನವಾಗಿದೆ ಎನ್ನುವುದನ್ನು ಗಮನಿಸಬೇಕು.
ಮಹಾ ಸಾಮಂತ ಕನ್ನಯ್ಯನು ಬನವಾಸಿ 12000ವನ್ನು ಆಳುತ್ತಿರುವಾಗ, ಎಡೆವೊಳಲೆಳ್ಪತ್ತು ವಿಭಾಗವನ್ನು ಪೊಲೆಗ ನಾಳ್ಗಾವುಂಡನಾಗಿ ಆಳುತ್ತಿದ್ದ ಮತ್ತು ಊರ ಗಾವುಂಡನಾಗಿ ಸಿಂಗ ಎನ್ನುವವ ಆಳುತ್ತಿದ್ದನೆಂಬ ಉಲ್ಲೇಖಗಳನ್ನು ತಿಳಿಸುತ್ತ ಅಪೂರ್ಣಗೊಳ್ಳುತ್ತದೆ. ಶಾಸನವು ತ್ರುಟಿತ ಮತ್ತು ಅಪೂರ್ಣವಾಗಿ ಕೊನೆ ಕಾಣುವುದರಿಂದ ವಿವರಗಳು ಲಭ್ಯವಿಲ್ಲ.
1 . . . . ಮಹಾಸಬ್ದ ಮಹಾ ಸಾಮನ್ತನ-
2 ಧಿಪತಿ ಶ್ರೀಮತ್ಕನ್ನಯ್ಯ ಬನವಾಸೀ ಪ-
3 ನ್ನಿ¿õÁ್ಛಸಿರಮನಾಳೆ @ ಶ್ರೀಮತ್ ಎಡೆ-
4 ವೊ¿ಲೆ¿್ಪತ್ತಕ್ರ್ಕೆ ಪೊಲೆಗ ನ(ನಾ)¿್ಗಮುಣ್ಡು-
5 ಗೆಯ್ಯೆ ಸಿಙ್ಗನೂಗ್ರ್ಗಮುಣ್ಡುಗೆಯ್ಯೆ
3
ಈಶ್ವರ ಗುಡಿ ಮುಂದೆ ಬಿದ್ದಿರುವ ಶಾಸನ
ಕ್ರಿ.ಶ. 1132
3’ ಅಗಲ ಮತ್ತು 5’ ಎತ್ತರದ ಕರಿಕಲ್ಲಿನ ಶಾಸನವಿದಾಗಿದೆ. ಮೇಲಿನ 1’ಯ ಭಾಗದಲ್ಲಿ ಸೂರ್ಯ-ಚಂದ್ರ, ಶಿವಲಿಂಗವನ್ನು ಪೂಜಿಸುತ್ತಿರುವ ಪೂಜಾರಿ, ಕುಳಿತ ನಂದಿ ಮತ್ತು ಕರುವಿಗೆ ಹಾಲೂಡುತ್ತಿರುವ ಆಕಳಿನ ಉಬ್ಬುಶಿಲ್ಪಗಳಿವೆ.
ಕಲ್ಯಾಣಚಾಲುಕ್ಯ ಚಕ್ರವರ್ತಿ ತ್ರಿಭುವನಮಲ್ಲ 6ನೆಯ ವಿಕ್ರಮಾದಿತ್ಯನ ಆಳ್ವಿಕೆಯ ಕಾಲದಲ್ಲಿ, ಕದಂಬ ಮಹಾ ಮಂಡಳೇಶ್ವರ ತೈಲಪದೇವರ ಕುಮಾರ ಮಲ್ಲಿಕಾರ್ಜುನದೇವರು ಬನವಾಸೆ ಪ£್ನಚ್ರ್ಛಾಸಿರ ಮತ್ತು ಪಾನುಂಗಲ್ಲೈ ನೂರುಗಳನ್ನು ಪಾಲಿಸುತ್ತಿದ್ದಾಗ, ಎಡೆವೊಳಲೆಪ್ಪತ್ತರ ಕೆಸಲೂರಿಗೆ ಬಂದು ಅಲ್ಲಿಯ ರಾಮೇಶÀ್ವರ ದೇವರಿಗೆ ಮತ್ತು ಅಮೃತೇಶ್ವರ ದೇವರಿಗೆ ಬೊಪ್ಪೆಯಜೀಯರ ಕಾಲನ್ನು ತೊಳೆದು ಕೈಧಾರೆ ಎರೆದು ಹೊಲತಿಕೆರೆಯ ಕೆಳಗಿನ ಭೂಮಿಯನ್ನು ದಾನವಾಗಿ ಬಿಟ್ಟದ್ದನ್ನು ತಿಳಿಸುತ್ತದೆ. ಇದಲ್ಲದೆ ಸೆಗರ ಬರ್ಮಗಾಮುಣ್ಡ, ಚಾವಗಾಮುಣ್ಡ ಮತ್ತು ಕೊಣ್ಡಗಾಮುಣ್ಡರು ಹಾಗೂ ಅರುವತ್ತೊಕ್ಕಲು ಸೇರಿ ಬೊಪ್ಪೆಯಜೀಯ ಪಂಡಿತರಿಗೆ ಬಿಟ್ಟ ಮತ್ತೊಂದು ದತ್ತಿಯನ್ನು ದಾಖಲಿಸುತ್ತದೆ.
ಶಾಸನದಲ್ಲಿ ಬರುವ “ಯೈವತ್ತೆ[ಂ*]ಟನೆಯ ಪರಿಧಾವಿ ಸಂವಚ್ಚರದ ಚೈತ್ರ ಸುದ್ಧ ಪಂಚಮಿ ಬ್ರೆಹಸ್ಪತಿವಾರದನ್ದು” ಎಂಬ ಮಿತಿಯು ಕ್ರಿ.ಶ. 1132 ಮಾರ್ಚ್ 23 ಬುಧವಾರವಾಗಿದೆ. ಆದರೆ ಕಲ್ಯಾಣಚಾಲುಕ್ಯ ತ್ರಿಭುವನಮಲ್ಲದೇವನ ಕಾಲವು ಕ್ರಿ.ಶ.1126 ಕ್ಕೆ ಕೊನೆಗೊಂಡಿದೆ.      
1 @ ನಮಸ್ತುಂಗ ಸಿರಸ್ತುಂಗ ಚನ್ದ್ರ ಚಾಮರ ಚಾರವೇ ತ್ರೈಳೋಕ್ಯ ನಗರಾರಂಭ
2 ಮೂಲಸ್ತಂಭಾಯ ಸಂಭವೇ || ನಮಃ ಶಿವಾಯ ||
3 ಸ್ವಸ್ತಿ ಸಮಸ್ತ ಪ್ರಸಸ್ತಿ ಸಹಿತಂ ಶ್ರೀ ಪ್ರಿಥ್ವೀವಲ್ಲಭಂ ಮಹಾರಾಜಾಧಿ-
4 ರಾಜಂ ಪರಮೇಸ್ವರಂ ಪರಮ ಭಟಾರಕಂ ಸತ್ಯಾಸ್ರಯ
5 ಕುಳತಿಳಕಂ ಚಾಳುಕ್ಯಾಭರಣಂ ಸ್ರೀಮತ್ರಿಭುವನಮಲ್ಲ-
6 ದೇವರ ವಿಜಯರಾಜ್ಯಮುತ್ತರೋತ್ತರಾಭಿವ್ರಿದ್ಧಿ ಪ್ರವದ್ರ್ಧಮಾನ-
7 ಮಾಚನ್ದ್ರಾಕ್ರ್ಕ ತಾರಂಬರಂ ಸಲುತ್ತಮಿರೆ ತತ್ಪಾದ ಪದ್ಮೋ-
8 ಪಜೀವಿ || ಸ್ವಸ್ತಿ ಸಮಧಿಗತ ಪಞ್ಚಮಹಾಸಬ್ದಂ ಮ-
9 ಹಾಮಣ್ಡಳೇಸÀ್ವರಂ ಬನವಾಸಿ ಪುರವರಾಧೀಸ್ವರಂ ಜಯ-
10 ನ್ತಿ ಮಧುಕೇಸ್ವರದೇವರ ಲಬ್ಧ ವರಪ್ರಸಾದ ಮ್ರಿಗಮದಾಮೋದಂ ತ್ರಿ(ತ್ರ್ಯ)-
11 ಕ್ಷ ಕ್ಷ್ಮಾಸಂಭವಂ ಚತುರಾಶೀತಿ ನಗರಾಧಿಷ್ಟಿತಂ ಲ-
12 ಲಾಟ ಲೋಚನಂ ಚತುಬ್ರ್ಭುಜ ಜಗದ್ವಿ[ದಿ*]ತಾಷ್ಠಾ ದಸಾಸ್ವಮೇಧ ದೀಕ್ಷಾ
13 ದೀಕ್ಷಿತಂ ಹಿಮವದ್ಗಿರೀನ್ದ್ರರುನ್ದ್ರ ಸಿಕರೀಸಕ್ತಿ ಸಂಸ್ಥಾಪಿತ ಸಿಳಾಸ್ಥಂಭಂ ಬದ್ಧಮ-
14 ದಗಜ ಮಹಾಮಹಿಮಾಭಿರಾಮಂ ಕಾಡಂಬಚಕ್ರಿ ಮಯೂರವಮ್ರ್ಮ ಮಹಾ ಮ-
15 ಹೀಪಾಳ ಕುಳಭೂಷಣಂ ಪೆಮ್ರ್ಮಟ್ಟಿತೂಯ್ರ್ಯ ನಿಗ್ರ್ಘೋಷಣಂ ಸಾಕಾಚರೇನ್ದ್ರ ಧ್ವಜ
16 ವಿರಾಜಮಾನಂ ಮಾನೋತ್ತುಂಗ ಸಿಞ್ಗಲಾಂಚನ ದತ್ತಾತ್ರ್ತಿ ಕಾಂಚನ ಸಮರ ಜಯಕಾರಣಂ
17 ಕಡಂಬರಾಭರಣಂ ಮಾಕ್ರ್ಕೊಳುವರ ಗಂಣ್ಡಂ ಪ್ರತಾಪಮಾತ್ರ್ತಣ್ಡಂ ಮಣ್ಡಳಿಕಗಣ್ಡ ಬ
18 ಂಗಾ¾ಂ £ತ್ಯಖಿಳ ನಾಮಾವಳಿ ವಿರಾಜಿತರಪ್ಪ ಸ್ರೀಮನ್ಮಹಾಮಂಣ್ಡಳೇಸ್ವರಂ ತೈ-
19 ಲಪದೇವರ ಕುಮಾರ ವೀರಗಂಣ್ಡೇಭ ಮಲ್ಲಿಕಾಜ್ರ್ಜುನದೇವರು ಬನವಾಸೆ ಪ£್ನಚ್ರ್ಛಾಸಿರಮಂ ಪಾ-
20 ನುಂಗಲ್ಲೈನೂ¾ುಮಂ ಸುಕಸಂಕತಾವಿನೋದದಿಂ ರಾಜ್ಯಂಗೆಯುತ್ತಮಿದ್ರ್ದು ಎಡೆವೊ
21 ಳಲೆಪ್ಪ[ತ್ತ*]ಕಂ ತಲೆವನ್ದು ಕೆಸಲೂರ ರಾಮೇಸ್ವರದೇವಗ್ರ್ಗಾ ಅಮ್ರಿತೇಸ್ವರ ದೇವಗ್ರ್ಗೆ ಬೊಪ್ಪೆಯಜೀಯಗ್ರ್ಗೆ ಕಾಲಂ
22 ಕಚ್ರ್ಚಿ ಕೈಯಿ ಧಾರೆಯೆ¾ದು ಬಿಟ್ಟ ಧಮ್ರ್ಮಂ ಹೊಲತಿಕೆ¾õÉಯ ಕೆಳಗೆ ಮುಗುಳಿ ಕಟ್ಟದೊಳಗೆ ಬಿಟ್ಟ ಧಮ್ರ್ಮ ಗದೆ(ದ್ದೆ) ಮತ್ತರೆ[ರ*]ಡು
23 ಯೈವತ್ತೆ[ಂ*]ಟನೆಯ ಪರಿಧಾವಿ ಸಂವಚ್ಚ್ಸರದ ಚೈತ್ರ ಸುದ್ಧ ಪಂಚಮಿ ಬ್ರೆಹಸ್ಪತಿವಾರದನ್ದು ಬಿಟ್ಟ ಧಮ್ರ್ಮ
24 ಸೆಗರ ಬಮ್ರ್ಮ ಗಾಮುಣ್ಡನು ಚಾವ ಗಾಮುಂಣ್ಡನು ಕೊಣ್ಡ ಗಾಮುಣ್ಡನುಂ ಅ¾ುವತೆ(ತ್ತೊ)ಕ್ಕಲುಂ
25 ಮಿರ್ದು ಬೊಪ್ಪೆಯಜೀಯ ಪಂಡಿತರಿಗೆ ಇ ಸ್ಥಾನಮಂ ಕ(ಕಾ)ಲಂ ಕಚ್ರ್ಚಿ ಕೈಧಾರೆ ಎ¾ದು ಕೊಟ್ಟರು
26 ಯೀ ಧಮ್ರ್ಮಮಂನಳಿದಂಗೆ ವಾರಣಾಸಿಯ ಗುರುಕ್ಷೇತ್ರ ಗಂಗೆಯ ತಡಿಯಲು ಸಾಯಿರ ಕ-
27 ವಿಲೆಯುಮಂ ಸಾಯಿರ ಬ್ರಾಮಣರುಮಂ ಅಳಿದ ಪಂಚ ಮಹಾಪಾತಕನಕ್ಕು ||
4
ಊರಿಗೆ ಉತ್ತರ ಮಾರ್ಗದಲ್ಲಿ ಮಿಟ್ಟಿಯ ಮ್ಯಾಲೆಯಿರುವ ವೀರಗಲ್ಲು ||
ಕ್ರಿ.ಶ. 1176
ಮೆಕೆಂಝಿ ಸಂಗ್ರಹ
ಕದಂಬ ಚಕ್ರವರ್ತಿ ಸೋವಿದೇವರಸನು ಆಳುತ್ತಿರುವಾಗ, ಕ್ಯಾಸನೂರ ಠಾವಿನಲ್ಲಿ ಮುದ್ದವ್ವೆಯ ಮಗನಾದ ಸುರವೈಯ್ಯ ಕ್ಯಾಸನೂರ ತುರುಗೋಳಿನಲ್ಲಿ ಹೋರಾಟ ಮಾಡಿ, ತುರುಗಳನ್ನು ಮರಳಿ ತಂದು ಸುರಲೋಕ ಪ್ರಾಪ್ತನಾದನೆಂದು ಶಾಸನವು ತಿಳಿಸುತ್ತದೆ.
“ಸೋವಿದೇವರಸರೆರಡನೆಯ ದುರ್ಮುಖಿ ಸಂವತ್ಸರದ ಜೇಷ್ಟ ಶುದ್ಧ 10 ಮಂಗಳವಾರದಂದು” ಎಂಬ ಶಾಸನೋಕ್ತ ಮಿತಿಯು ಕ್ರಿ.ಶ. 1176ರ ಮೇ 20 ಗುರುವಾರವಾಗಿದೆ.
ಸ್ವಸ್ತಿ ಸಮಸ್ತ ಪ್ರಶಸ್ತಿ ಸಹಿತಂ ಶ್ರೀಮನ್ಮಹಾಮಂಡಲೇಶ್ವರಂ | ಬನವಾಸಿ ಪುರವರಾಧೀಶ್ವರಂ | ಜಯಂತಿ ಮಧುಕೇಶ್ವರ ಲಬ್ಧ ವರಪ್ರಸಾದರುಂ | ಸಾಹಸೋತ್ತುಂಗನುಂ | ಸತ್ಯ ರಾಧೇಯನುಂ | ಕದಂಬ ಕುಲಕಮಲ ಮಾರ್ತಾಂಡನುಂ | ಕಲಿಗಳಂಕುಶಂ | ಸೋವಿದೇವರಸರೆರಡನೆಯ ದುರ್ಮುಖಿ ಸಂವತ್ಸರದ ಜೇಷ್ಟ ಶುದ್ಧ 10 ಮಂಗಳವಾರದಂದು ಕ್ಯಾಸನೂರ ಠಾವಿನಲು ಮುದ್ದವ್ವೆಯ ಸುರವೈಯ್ಯ ಕ್ಯಾಸನೂರೋತ್ತರದ ತುರುವಂ ಮರಳ್ಚಿ ಸುರಲೋಕ ಪ್ರಾಪ್ತನಾದಂ || ಮಂಗಳ ಮಹಾಶ್ರೀ ಶ್ರೀ ಶ್ರಿ [||*]
5
ಊರಿಗೆ ಉತ್ತರ ಮಾರ್ಗದಲ್ಲಿ ಮಿಟ್ಟಿಯ ಮ್ಯಾಲೆಯಿರುವ ವೀರಗಲ್ಲು ||
ಕ್ರಿ.ಶ. 1241
ಮೆಕೆಂಝಿ ಸಂಗ್ರಹ
ಹಾನುಗಲ್ಲಿನ ಕದಂಬ ವೀರಮಲ್ಲಿದೇವ ಆಳುತ್ತಿರುವಾಗ, ಯಡೆವೊಳಲ ಕಂಪಣದಲ್ಲಿರುವ ಕ್ಯಾಸನೂರ ಅಕ್ಕಸಾಲೆ ಬೀರೋಜನ ಮಗ ಬೊಪ್ಪೋಜನು ತಾವಸೆ(ತಾವಂಶಿ)ಯ ಸಿರಿಗೆರೆವೊಳೆಯ ಹಲಶಿನಡಗೆಯಲ್ಲಿ ಹೋರಾಡಿ, ವಂಟೆಯ ಕುಳ್ಳಕದಂಬರೆ(?)ಯನ್ನು ಮತ್ತು ಕುಂದವರ (ಕುಂದೂರು)ಗಳನ್ನು ಗೆದ್ದು ಸುರಲೋಕಪ್ರಾಪ್ತನಾದನೆಂದು ಶಾಸನವು ವಿವರಿಸುತ್ತದೆ. ಬಾವೋಜನ ಮಗನಾದ ಬೀರೋಜ ಮಗನಿಗಾಗಿ ವೀರಗÀಲ್ಲನ್ನು ನಿಲ್ಲಿಸಿದನಂತೆ.
“ವೀರಮಲ್ಲಿದೇವರ ವಿಜಯರಾಜ್ಯಾಭುದಯದ ಶಖ 1163ನೆಯ ಪ್ಲವ ಸಂವತ್ಸರದ ಪುಷ್ಯ ಶುಧ ಪುಂಣಮಿ ಬೃಹಸ್ಪತಿವಾರದಂದು” ಎಂಬ ಶಾಸನೋಕ್ತ ಮಿತಿಯು ಕ್ರಿ.ಶ.1241ರ 19 ಡಿಸೆಂಬರ್ ಗುರುವಾರವಾಗಿದೆ.
ಸ್ವಸ್ತಿ ಸಮಧಿಗತ ಪಂಚಮಹಾಶಬ್ದ ಮಹಾ ಮಂಡಲೇಶ್ವರಂ | ಬನವಾಸಿ ಪುರ ವರಾಧೀಶ್ವರಂ | ಜಯಂತಿ ಮಧುಕೇಶ್ವರ ಲಬ್ಧ ವರಪ್ರಸಾದಂ | ಕಲಿಗಳಂಕುಶ ವೀರಮಲ್ಲಿದೇವರ ವಿಜಯರಾಜ್ಯಾಭುದಯದ ಶಖ(ಕ) 1163ನೆಯ ಪ್ಲವಸಂವತ್ಸರದ ಪುಷ್ಯ ಶುಧ(ದ್ಧ) ಪುಂಣಮಿ ಬೃಹಸ್ಪತಿವಾರದಂದು ಯಡೆವೊಳಲ ಕಂಪಣದೊಳು . . . . . ಕೇಸನೂರ ಅಕ(ಕ್ಕ)ಸಾಲೆ ಬೀರೋಜನ ಮಗ ಬೊಪ್ಪೋಜ ತಾವಸೆಯ ಸಿರಿಗೆರೆವೊಳೆಯ ಹಲಶಿನಡಗೆಯಲ್ಲಿ ವಂಟೆಯ ಕುಳ್ಳ ಕದಂಬರೆಯರಗಿಸಿ ಕುಂದವರಂ ಗೆಲ್ದು ತಳ್ತಿರಿದು ಸುರಲೋಕಪ್ರಾಪ್ತನಾದಂ || ಜಿತೇನ ಲಭ್ಯತೇ ಲಕ್ಷ್ಮೀ ಮೃತೇನಾಪಿ ಸುರಾಂಗನಾ | ಕ್ಷಣ ವಿಧ್ವಂಶಿ(ಸಿ)ನೀ ಕಾಯೇ ಕಾ ಚಿಂತಾ ಮರಣೇ ರಣೇ || ಬಾವೋಜನ ಮಗಂ ಬೀರೋಜಂ ಮಾಡಿಸಿದಂ | ಮಂಗಳ ಮಹಾ ಶ್ರೀ ಶ್ರೀ ಶ್ರೀ [||*]
6
ಈಶ್ವರ ಗುಡಿ ಮುಂದಿರುವ ಕಂಬದ ಮೇಲಿನÀ ಶಾಸನ
ಯಾದವ ಚಕ್ರವರ್ತಿ ವೀರ ರಾಮಚಂದ್ರದೇವನು ಆಳುತ್ತಿರುವಾಗ, ಆತನ ಮಹಾಪ್ರಧಾನ ಸರ್ವಾಧಿಕಾರಿ ನಾಳೊಯ್ಯ, ಅಮರಸೇನ ಪಂಡಿತರು, ನಾಳ್ಪ್ರಭು ಕೆಸಲೂರ ಸಿಂಗ ಗಾಮುಂಡರನ್ನು ಹೆಸರಿಸುತ್ತ ಆತನ ತಮ್ಮ ಮುದಿಗಾಮುಂಡನ ಮಗ ಮಾಡಿಸಿದ ಎಂದಿದೆ.
1 ಸ್ವಸ್ತಿ ಶ್ರೀಮತು ಯಾದವ ನಾರಾಯ-
2 ಣ ಭುಜಬಳ ಪ್ರವುಢ ಪ್ರತಾಪ ಚಕ್ರ-
3 ವತ್ರ್ತಿ ಶ್ರೀ ವೀರ ರಾಮಚಂದ್ರದೇವ ಜ-
4 ಯ ರಾಜ್ಯೋದಯದ 24ನೆಯ ವಾ .
5 . ಸಂವತ್ಸ[ರ*] ಪುಷ್ಯ ಸು 8 ಆದಿವಾರದಂ-
6 ದು ಸ್ವಸ್ತಿ ಶ್ರೀಮನು ಮಹಾಪ್ರಧಾನ
7 ಸವ್ರ್ವಾಧಿಕಾರಿ ನಾಳೊಯ್ಯ ಶ್ರೀಯಭ-
8 ಮರಸೇನಪಂಡಿತರು ಶ್ರೀಮಂನಾ
9 ಳ್ಪ್ರಭು ಕೆಸಲೂರ ಸಿಂಗ [ಗ*]ಮುಡನ ತಂ-
10 ಮ ಮುದಿಗಮುಡನ ಮಗನ್ ಕೆಸಲೂ-
11 ರ ವಿಲಾಕುಮಳಭೆಯರ ಲೊದೇರ ಹೆಗ-
12 ಕ(ಲ)ನೊಡ್ಡಿ ಸವಾಲ್ಪಿ ಮಾಡ್ಸಿದ [||*]*
* ಕೊನೆಯ 2 ಸಾಲುಗಳ ಅಕ್ಷರಗಳು ಅಸ್ಪಷ್ಟವಾಗಿವೆ.
7
ಹನುಮಂತದೇವರ ಗುಡಿಯ ಮುಂದಿನ ಮಾಸ್ತಿಶಾಸನ
ಸು. 17-18ನೆಯ ಶ.
ಕೆಸನೂರ ಮಲ್ಲಗೌಡರ ಮಗ ಹಲಿಗೌಡನು ಊರಳಿವಿನಲ್ಲಿ ಸತ್ತಾಗ, ಬಹುಶಃ ಆತನ ಹೆಂಡತಿ ಸಹಗಮನ ಮಾಡಿದುದನ್ನು ಸೂಚಿಸುತ್ತದೆ. ಆದರೆ ಶಾಸನವು ಅಸ್ಪಷ್ಟವಾಗಿ ಸವೆದು ಹೋಗಿರುವುದರಿಂದ ವಿವರಗಳು ತಿಳಿಯುವುದಿಲ್ಲ.
1 . . . . . . . . . . . .
2 . . . . . (ಸಯರ) . .
3 . . . . . . . (ಸೆ ರಣ)
4 (ನು ಊರು ಹಳಿ) . .
5 (ಮಾಡಿಸಿ ಕೊಟ) . . .
6 ಕೆಸನೂರ ಮಲ್ಲ
7 ಗಉಡರ ಮ-
8 ಗ ಹಲಿ ಗಉಡನು
9 ಸುರಲೋಕ ಪ್ರಾ[ಪ್ತ*]-
10 ನಾದನು ಮಂಗಳ
11 ಮಹಾ ಶ್ರೀ ಶ್ರೀ*
* ಮೊದಲಿನ 5 ಸಾಲುಗಳು ಸವೆದು ಅಸ್ಪಷ್ಟವಾಗಿವೆ.
8
ಈಶ್ವರ ಗುಡಿ ಮುಂದಿರುವ ಕಂಬದ ಮೇಲಿನÀ ಶಾಸನ
ಸು. 17-18ನೆಯ ಶ.
ಈಶ್ವರನ ಪ್ರತಿಷ್ಟಾಪನೆ ಮಾಡಿ ಬಿಟ್ಟ ದತ್ತಿಯನ್ನು ತಿಳಿಸುವಂತಿದೆ. ಶಾಸನ ಅಸ್ಪಷ್ಟವಾಗಿರುವುದರಿಂದ ವಿವರಗಳು ತಿಳಿಯುವುದಿಲ್ಲ.
1 ಶಿವಚಾರವಾದ ಪ್ರತಿಷ್ಟೆಯ
2 ಮಾಡುವಗ್ರ್ಗೆ ನಿವೇದ್ಯಯಭಿಷೇಕ
3 ಕ್ಕೆ ಕೊಳನೂರ . . . . ಕಾ . . .
4 ಆ . . . . . . || ಪ್ರತಿಪಾ-
5 ಳಿಸೂದು ಮಂಗಳ ಮಾಹಾ
6 ಶ್ರೀ ಶ್ರೀ ಶ್ರೀ || ಸ್ವದತ್ತಂ ಪರದತ್ತಂ
7 ವಾ ಯೋ ಹರೇತಿ ವಸುಂಧರಾ
8 ಷಷ್ಟಿರ್ವಷ್ ಸಹಸ್ರಾಣಿ ವಿಷ್ಟಾ-
9 ಯಾಂ ಜಾಯತೇ ಕ್ರಿಮಿ ||
9
ವಿಜಯಕಾಂತ ಪಾಟೀಲರ ಮನೆಯ ಹಿತ್ತಲಿನಲ್ಲಿರುವ ಶಾಸನ
ಸು. 19-20 ಶ.
1 ಹಾ(ವಾ)ಲೆಕಣಿ(ವೆ)ವತಿ ಮ-
2 ಟದ ಸ್ತಳಕೆ £ೀಡಿದ
3 ಮಟದ ದತ್ತಿಯ ಸೀಮೆ
4 ಯ ಕಲ್ಲು
10
ಹನುಮಂತದೇವರ ಗುಡಿ ಮುಂದೆ ನಿಲ್ಲಿಸಿದ ಶಾಸನ
ಸು. 19-20 ಶ.
ಇತ್ತೀಚಿನ ಈ ಶಾಸನವು ಕವಾರ ಬಧನಾಯಕನ ಮಾನ್ಯದ ಹೊಲವಿದೆಂದು ದಾಖಲಿಸುತ್ತದೆ.
1 ತಸರಾ ಶ್ರಾವಣ ಬ . ಚಮಿ
2 ಕವಾ¾ ಬಧನಾಯ-
3 ಕನ ಮಾಂನ್ಯ ಕೊಟ ಪೊ
4 ಸೆ(ಲ) 1
ದೇವಿಕೊಪ್ಪದ ಹೊಸ ಶಾಸನಗಳು
ಹಾನುಗಲ್ಲು ತಾಲೂಕಿನ ಕ್ಯಾಸನೂರು ಮತ್ತು ಹಿರೇಕಾಂಶಿಗಳ ಮಧ್ಯದಲ್ಲಿರುವ ಬೇಚಿರಾಕ್ ಹಳ್ಳಿಯೇ ದೇವಿಕೊಪ್ಪ. ಬಹುಶಃ ಅಲ್ಲಿ ದೊರೆತಿರುವ ದೇವಿ ವಿಗ್ರಹವೇ ಇದಕ್ಕೆ ಕಾರಣವಾಗಿದೆ ಎನಿಸುತ್ತದೆ. ಹೊಂಡದ ಅಂಚಿನ ದಿಬ್ಬದ ಮೇಲೆ ಇರುವ ಈ ಗುಡಿಯನ್ನು ಇತ್ತೀಚೆಗೆ ಕಟ್ಟಲಾಗಿದ್ದು, ಈ ರುದ್ರ ಸುಂದರ ವಿಗ್ರಹವು 4-5 ನೂರು ವರ್ಷಗಳಷ್ಟು ಹಳೆಯದೆನಿಸುತ್ತದೆ. ನಾಲ್ಕಡಿ ಎತ್ತರದ ವಿಗ್ರಹಕ್ಕೆ ಹಣೆಗಣ್ಣು ಇರುವುದು ವಿಶೇಷವಾಗಿದೆ. ದೇಗುಲದ ಎದುರಿಗೆ ಕೆಳಗಿನ ಶಾಸನಗಳನ್ನು ತಂದು ಇಡಲಾಗಿದೆ.
1
ಲೋಕೇಶ್ವರಿ ದೇವಸ್ಥಾನದ ಮುಂದಿನ ಶಾಸನ
ಸು. ಕ್ರಿ. ಶ. 750
ಶಾಸನದ ಮೇಲ್ಭಾಗ ಒಡೆದಿದೆ ಮತ್ತು ಮೇಲ್ಭಾಗದ ಬಲಭಾಗವೂ ತ್ರಿಕೋನಾಕಾರದಲ್ಲಿ ಒಡೆದಿದೆ. ಪೃಥುವೀಸೇನ ಬನವಾಸಿ ಪನ್ನಿಚ್ರ್ಛಾಸಿರವನ್ನು ಆಳುತ್ತಿರುವಾಗ, ಅರಕಸೇನ ಬಹುಶಃ ಏನನ್ನೋ ಆಳುತ್ತಿರುವಾಗ, ಕಗಸಾಸಿಯ ಮಾಳಾದನ ನಾಳ್ಗಾವುಂಡನಾಗಿದ್ದಾಗ, ಬಾದ್ದಗಿಯರ ಬಾಯಿ ದಾನ ನೀಡಿದುದನ್ನು ತಿಳಿಸುತ್ತದೆ. ಸೇನವರಸ ದೋಸಿಯರಸ ಈ ಶಾಸನವನ್ನು ಮಾಡಿಸಿದನಂತೆ.
ಈ ಶಾಸನದಲ್ಲಿ ಬರುವ ಸೇನವರಸ ದೋಸಿಯರಸನ (ದೋಸಿ, ದೋಸಿಗ, ದೋಸಿಯರ) ಕುರಿತಾಗಿ ಈಗಾಗಲೇ ಚಿಕ್ಕ ನಂದೀಹಳ್ಳಿಯ ಬಾದಾಮಿ ಚಾಲುಕ್ಯ 2ನೆಯ ವಿಕ್ರಮಾದಿತ್ಯನ 2 ಶಾಸನಗಳು (8ನೆಯ ಶ.), 2ನೆಯ ಕೀರ್ತಿವರ್ಮನ ದಿಡಗೂರ ಮತ್ತು ಮಲ್ಲೇನಹಳ್ಳಿ ಶಾಸನಗಳು (ಸು. ಕ್ರಿ.ಸ. 750), ವಕ್ಕಲೇರಿ ತಾಮ್ರಪಟಗಳು (ಶ್ರೀ ದೋಸಿರಾಜ ವಿಜ್ಞಾಪನಯಾ ಬಿಟ್ಟ ದತ್ತಿಯ ಉಲ್ಲೇಖ. ಕ್ರಿ.ಶ. 757), ಸಿಡೇನೂರ ಶಾಸನ (ಸು. ಕ್ರಿ.ಶÀ.760)ಗಳಲ್ಲಿ ಉಲ್ಲೇಖಗಳಿವೆ. ಚಿಕ್ಕ ನಂದೀಹಳ್ಳಿ ಶಾಸನದÀಲ್ಲಿ ಮುಗುಂದನಾಡನ್ನು ಆಳುತ್ತಿದ್ದ ಈತ ಮುಂದಿನ ಶಾಸನಗಳಲ್ಲಿ ಪದೋನ್ನತಿ ಹೊಂದಿ ಬನವಸೆ 12000ದ ಮಂಡಲೇಶ್ವರನೆಂದು ಕರೆಸಿಕೊಳ್ಳುತ್ತಾನೆ. ಬಾದಾಮಿ ಚಾಲುಕ್ಯ 2ನೆಯ ವಿಕ್ರಮಾದಿತ್ಯ ಮತ್ತು 2ನೆಯ ಕೀರ್ತಿವರ್ಮರಿಬ್ಬರ ಕಾಲದಲ್ಲಿ ಸೇವೆ ಸಲ್ಲಿಸಿದ ಈತ ಬಾದಾಮಿ ಚಾಲುಕ್ಯರು ಮತ್ತು ರಾಷ್ಟ್ರಕೂಟರ ಮಧ್ಯೆ ನಡೆದ ಕಾಳಗದಲ್ಲಿ ಸೇಂದ್ರಕ ಶ್ರೀ ಪೊಗಿಲ್ಲಿಯೊಂದಿಗೆ ಮರಣವನ್ನು ಹೊಂದಿದುದನ್ನು ಸಿಡೇನೂರ ಶಾಸನವು ದಾಖಲಿಸುತ್ತದೆ.
ದೋಸಿಯರನÀನ್ನು ಕುರಿತು ಡಾ. ಶ್ರೀನಿವಾಸ ಪಾಡಿಗಾರ ಅವರು ತಮ್ಮ ಕೃತಿ ‘ಅhಚಿಟuಞಥಿಚಿs oಜಿ ಃಚಿಜಚಿmi’ ಯ ಅಡಿ ಟಿಪ್ಪಣಿಯೊಂದರಲ್ಲಿ “ಖಿhis ಛಿhieಜಿ is ಞಟಿoತಿಟಿ ಜಿಡಿom sಣoಟಿe iಟಿsಛಿಡಿiಠಿಣioಟಿs oಜಿ ಏiಡಿಣivಚಿಡಿmಚಿ ಚಿಟಿಜ he ತಿಚಿs iಟಿಛಿhಚಿಡಿge oಜಿ ಃಚಿಟಿಚಿvಚಿse ಟಿಚಿಜu. ಊe beಟoಟಿgeಜ ಣo ಣhe mಚಿಣuಡಿಚಿ vಚಿmsಚಿ ಚಿs ಞಟಿoತಿಟಿ ಜಿಡಿom iಟಿsಛಿಡಿiಠಿಣioಟಿs oಜಿ his ಜesಛಿeಟಿಜeಟಿಣs. ಆosi ಜಿiguಡಿes ಚಿs ಣhe goveಡಿಟಿoಡಿ oಜಿ ಃಚಿಟಿಚಿvಚಿsi 12000 iಟಿ some moಡಿe iಟಿsಛಿಡಿiಠಿಣioಟಿs.” ಎಂದು ಹೇಳಿದ್ದು, ಮೇಲ್ಕಾಣಿಸಿದ ಶಾಸನಗಳನ್ವಯ ಈತ ಮಾಟೂರ ವಂಶದವನಲ್ಲ, ಸೇನವಾರ ವಂಶಕ್ಕೆ ಸೇರಿದವನೆಂಬುದು ಖಚಿತವಾಗುತ್ತದೆ.
ಈ ಸೇನವರರು ಸೇನವಾರ, ಸೇನಾವರ, ಸೇಣವಾರ ಇತ್ಯಾದಿ ಹೆಸರುಗಳಿಂದ ಕರೆಸಿಕೊಳ್ಳುತ್ತಿದ್ದರೆಂದು ಅವರ ಕುರಿತು ಲೇಖನವೊಂದನ್ನು ಬರೆದ ಡಾ. ಎಂ.ಬಿ. ನೇಗಿನಹಾಳ ಅವರು ತಿಳಿಸುತ್ತ, 7ನೆಯ ಶತಮಾನದಿಂದ 12ನೆಯ ಶತಮಾನದವರೆಗಿನ ಶಾಸನಗಳಲ್ಲಿ ಇವರ ಉಲ್ಲೇಖವಿದೆ ಎಂದು ವಿವರಗಳನ್ನು ನೀಡುತ್ತಾರೆ. ಕನತಿ ಶಾಸನವು ಇವರನ್ನು ಕೂಡಲೂರ ಪರಮೇಶ್ವರ, ಮೃಗೇಂದ್ರ ಲಾಂಛನ, ಫಣಿಧ್ವಜ ವಿರಾಜಮಾನ, ಖಚರ ತ್ರಿಣೇತ್ರರು ಎಂಬ ಬಿರುದುಗಳಿಂದ ವರ್ಣಿಸುತ್ತದೆ.
ಈ ಸೇನವಾರ ವಂಶಕ್ಕೆ ಸೇರಿದ ಇನ್ನೊಬ್ಬ ಪ್ರಮುಖ ವ್ಯಕ್ತಿ ಮಾರಕ್ಕೆ ಅರಸ. ಇವನನ್ನು ಕುರಿತು 10ಕ್ಕೂ ಹೆಚ್ಚು ಶಾಸನಗಳು ಹಾನಗಲ್ಲು ಮತ್ತು ಹಿರೇಕೆರೂರು ತಾಲೂಕುಗಳÀಲ್ಲಿ ದೊರೆಯುತ್ತವೆ. ಈತ ರಾಷ್ಟ್ರಕೂಟ 1ನೆಯ ಕೃಷ್ಣ ಮತ್ತು ಧ್ರುವರ ಕಾಲದಲ್ಲಿ ಸೇವೆ ಸಲ್ಲಿಸಿ ‘ಅಕಾಲವರ್ಷ ಶ್ರೀ ಪೃಥುವೀ ವಲ್ಲಭ ಸೇನಾವರ’ ಎಂದು ಕರೆಸಿಕೊಂಡ ನಂತರ ಸು. ಕ್ರಿ.ಶ.780ರಲ್ಲಿ ಮರಣ ಹೊಂದುತ್ತಾನೆ. ಇವರಿಬ್ಬರೂ ಬಹುಶಃ ತಂದೆ ಮಕ್ಕಳಾಗಿರಬಹುದು ಎಂದು ತೋರುತ್ತದೆ. ಆದರೆ ಇದಕ್ಕೆ ಸಂಬಂಧಿಸಿ ಪೂರಕವಾದ ಯಾವುದೇ ದಾಖಲೆಗಳಿಲ್ಲ. ಶಾಸನದ ಲಭ್ಯ ಪಠ್ಯ ಇಂತಿದೆ-
1 . . . . . . ಕನ್ನವಳ . . . ಕರಾ
2  . . . . ಸ ರಾಟ್ಟಗರನ್ ಪೃಥುವೀಸೇನ
1 . . . . ನ್ನಿ¿õÁ್ಛಸಿರಕಮಾಳೆ ಅರಕಸೇನ
2 . . . . ಗೆಯೆ ಕಗಸಾಸಿಯಾ ಮಾಳಾದನಕ್ಕೆ
3 . . . . ದನಟರ ನಳ್ಗಮುಣ್ಡುಗೆಯೆ ಎ¿್ಪತ
4 . . . . ಸಾಸಿರವರ ಸಹಿತಮಾಗೆ ಕೊ¿್ಗದಿರನೆ
5 . . . . ನಾ¿õÁ್ಗಮು[ಣ್ಡು*]ಗೆಯೆ ಕಮ ಬಾದ್ದಗಿಯರ ಬಾಯಿ
6 . . . . ಲ್ಗಿಟ್ಟಣಿಬದ್ದತ್ಕಾ ಪ¿Âಗೆಯ್ದೊ ನೊಳ
7 . . . . ನಪ್ಪುಮೊ ಕನ್ದುಪ ನುರುಂದ ದಣ್ಡ ಕೊಳ್ಗೆ
8 ರಳಿದೊಗೆ ಕರ¿õÉ್ತ ಇಲ್ಲಿ ಸಾಬೊರ ಜಕೆನ
9 ವೊ¿ಲ್ಕಿದ . ಮರದಗಿಯರ ಪಿಣ್ದುಗರ¿õÉ್ತ-
10 ಯನ್ದಿದಿಸಿದನ್ ಬುದೊಕಜಸ್ನಾನ್ ಮಾಸಿಯುಟ-
11 ನ್ ಯಿಲ್ಗಿದಣಮಾನ್ನಿದಿ(¾Â)ಸಿದನ್ ದೋಸಿಯ-
12 ರಸ ಕದೇಸಟದೊ ಸೇನವರಸ ಕೇದೋರಿದ-
13 ನ¿Âದೋ (ಗುಳಿ) ಮಹಾಪಾತಕನಾದೊಂ [||*]
2
ಲೋಕೇಶ್ವರಿ ದೇವಸ್ಥಾನದ ಮುಂದಿನ ಶಾಸನ
ಸು. ಕ್ರಿ. ಶ. 870
ರಾಷ್ಟ್ರಕೂಟ ಚಕ್ರವರ್ತಿ ಇಮ್ಮಡಿ ಇಂದ್ರನು ಆಳುತ್ತಿರುವಾಗ, ಬನವಾಸಿ ನಾಡನ್ನು ಶಂಕರಗಂಡನು ಪಾಲಿಸುತ್ತಿದ್ದನು. ಕೇಸವಯ್ಯನು ಜಮ್ಬೂರ ಆಡಳಿತವನ್ನು ನೋಡಿಕೊಳ್ಳುತ್ತಿದ್ದನು. ಮಾಸೆಯರ ಮಾರಮ್ಮ ಊರ ಗಾವುಂಡನಾಗಿದ್ದನು. ಆ ಸಮಯದಲ್ಲಿ ತು¾ುವಳ್ಳರ ದೊರವಣ್ಣ ಎನ್ನುವವನು ತು¾ುಗೋಳಿನಲ್ಲಿ ಸತ್ತು ಸ್ವÀರ್ಗಕ್ಕೆÉ ಸನ್ದನೆಂದು ಶಾಸನವು ತಿಳಿಸುತ್ತದೆ.
ಮೊದಲ ಪಟ್ಟಿಕೆ
1 [ಸ್ವ*]ಸ್ಥಿ(ಸ್ತಿ) ಶ್ರೀ ಇನ್ದರವಲ್ಲ[ಹ*] ಪೃಥುವಿ ರ(ರಾ)ಜ್ಯ
ಎರಡನೆಯ ಪಟ್ಟಿಕೆ
2 [ಗೆ*]ಯ್ಯೆ ಸಂಕರಗಣ್ಡ ಬನವಾಸಿ ನ(ನಾ)ಡಾಳೆ ಒದ
3 . ಗು ಕೇಸವಯ್ಯನು ಜಮ್ಬೂರುವುಗೆಯ್ಯೆ ಮಾಸೆಯರ ಮೂರನೆಯ ಪಟ್ಟಿಕೆ
4 ಮಾರಮ್ಮ ಊರುಗವುಡುಗೆಯ್ಯೆ ಕಾಗುಗೆÉರ ತು¾ುವ
5 ಳ್ಳರ ದೊರವಣ್ಣ ತು¾ುಗೊಳ್ಸತ್ತು ಸಗ್ರ್ಗಕೆ ಸನ್ದ [||*]
3
ಲೋಕೇಶ್ವರಿ ದೇವಸ್ಥಾನದ ಮುಂದಿನ ಇನ್ನೊಂದು ಶಾಸನ
ಸು. 9ನೆಯ ಶ.
ರಾಷ್ಟ್ರಕೂಟ ಚಕ್ರವರ್ತಿಗಳ ಕಾಲದ ಈ ಶಾಸನವು ಸವೆದು ಅಸ್ಪಷ್ಟವಾಗಿರುವುದರಿಂದ ವಿವರಗಳು ತಿಳಿದು ಬರುವುದಿಲ್ಲ. ವನವಾಸಿ ನಾಡ ಉಲ್ಲೇಖವಿದೆ. ಆ ಸಮಯದಲ್ಲಿ ವಿಜಯರಸ, ನಾ¿õÉ್ಬೂಯ್ಯ ಎನ್ನುವ ಅಧಿಕಾರಿಗಳು, ಜಯ್ಬುರಾ ಸ¿Â್ಬಯ ಎನ್ನುವ ಗಾಮುಂಡನ ಹೆಸರುಗಳಿವೆ. ಸ್ತ್ರೀ ದೇವತೆ(ಎ¾ತಿ) ಒಬ್ಬಳಿಗೆ ಬರುವ ಧನವೆಲ್ಲವನ್ನೂ ದಾನವಾಗಿ ಬಿಟ್ಟ ಕುರಿತು ಉಲ್ಲೇಖ ಮತ್ತು ಫಲಶ್ರುತಿಯೂ ಇದೆ.
1 . . . . . . . . . . . . . . ್ಟ
2 . . ಟೆ ಪೃಥುವೀ ರಾಜ್ಯ[ಗೆ*]ಯೆ ಪೃಥಿ-
3 ವೀ ವಲ್ಲಭ ಮಹಾರಾಜರಾ ವನವಾಸಿ ಮ-
4 ಣ್ಡಲಮಾಳೆ ವಿಜಯರಸರಾ ರಾಜ್ಯ
5 ದು ರೆಟಳ್ಳೆ £ಲ್ಪಿ ಮಣ್ಗಿಬ್ಬೊನಾ ನಾ-
6 ¿õÉ್ಬೂಯ್ಗು(ಯ್ಯ) ಕೆಯೆ ಜಯ್ಬ್ಬುರಾ ಸ¿Â್ಬಯ
7 ಗಾಮುಡು ಕೆಯೆ ಕಾಗುಮಾಸಿಯಾನಾಳೆ-
8 ¾ತಿಯರ್ಕೆ ಬಪ್ರ್ಪ ಧನಮೆಲ್ಲಮಾ£್ವ-
9 ಟ್ಟ(ಟ್ಟಾ)ರ್ [|||*] ಇದ ಕೆಡುವೊಪ್ರ್ಪಞ್ಚ ಮಹಾ ಪಾ-
10 ತಕರಪ್ಪೋರ್*
* ಮುಂದಿನ ಕೆಲವು ಅಕ್ಷರಗಳು ಅಸ್ಪÀಷ್ಟವಾಗಿವೆ.
4
ನಾಗನಗೌಡ ಸಂಕನಗೌಡ ಪಾಟೀಲ ದೇವಿಕೊಪ್ಪ ಅವರ ಹೊಲದಲ್ಲಿ
ಕ್ರಿ.ಶ.1270
55" ಎತ್ತರ 20" ಅಗಲ ಗಾತ್ರದ ಕರಿಕಲ್ಲಿನಲ್ಲಿ ಈ ಮಾಸ್ತಿಕಲ್ಲನ್ನು ಕೆತ್ತಿದೆ. ಮೊದಲನೆಯ ಸ್ತರದ 10"   ಭಾಗದಲ್ಲಿ ಚಂದ್ರ-ಆಕಳು-ಸೂರ್ಯನ ಉಬ್ಬುಶಿಲ್ಪಗಳಿವೆ. ಎರಡನೆಯ ಸ್ತರದ 6" ಭಾಗದಲ್ಲಿ ಕೈಮುಗಿದು ಕುಳಿತ ದಂಪತಿ, ಶಿವಲಿಂಗ, ಪೂಜಾರಿ ಮತ್ತು ನಂದಿಗಳ ಉಬ್ಬುಶಿಲ್ಪಗಳಿವೆ. ಮೂರನೆಯ ಸ್ತರದಲ್ಲಿ  ಕಂಬದಿಂದ ಹೊರಬಂದ ತೋಳು, ತೋಳಿನ ಮೇಲ್ಭಾಗದಲ್ಲಿ ದಂಪತಿಗಳು, ದಂಪತಿಗಳ ಮೇಲ್ಭಾಗದಲ್ಲಿ ಕೈಮುಗಿದುಕೊಂಡು ಸತಿ ಕುಳಿತಿದ್ದಾರೆ.  ತೋಳಿನ ಕೆಳಗೆ ಬಿಲ್ಲು ಹಿಡಿದ ವೀರ ಮತ್ತು ಅವನ ಸೊಂಟ ಹಿಡಿದು ನಿಂತÀ ಸತಿ ಇದ್ದಾರೆ. ಕೆಳಗೆ ಎರಡು ಸಾಲುಗಳ ಅಪೂರ್ಣ ಶಾಸನ ವಿದೆ. ಕೇವಲ ಮಿತಿಯನ್ನು ಮಾತ್ರ ತಿಳಿಸಿ ನಿಂತುಹೋಗುತ್ತದೆ.
“ಸಕವರುಷ 1192ನೆಯ ರಉ(ರೌ)ದ್ರ ಸಂವತ್ಸರದ ಮಾ*” ಎನ್ನುವ ಅಪೂರ್ಣ ಮಿತಿಯು ಕ್ರಿ.ಶ. 1270ರಲ್ಲಿ ಬರುತ್ತದೆ.
1  ಸ್ವಸ್ತಿ ಸಕವರುಷ 1192ನೆಯ ರಉ(ರೌ)-
2  ದ್ರ ಸಂವತ್ಸರದ ಮಾ
5
ಲೋಕೇಶ್ವರಿ ದೇವಸ್ಥಾನದ ಮುಂದಿನ ಮತ್ತೊಂದು ಶಾಸನ
ಸು. 18-19 ಶ.
ಸೋನಯ್ಯ ವೊಡೆಯರಿಗೆ ತಾಮರ ನಾಣಿಕೆಯ ನಾಗೆಯನಾಯಕ ಕೊಟ್ಟ ಭೂಮಿಯ ಕುರಿತು ಸುಮಾರು 18-19ನೆಯ ಶತಮಾನದ ಅಕ್ಷರಗಳಲ್ಲಿ ತಿಳಿಸುತ್ತದೆ.
1 0 ಸೋನಯ್ಯ ವೊ-
2 0 ಡೆಯರಿಗೆ ತಾಮ-
3 0 ರ ನಾಣಿಕೆಯ ನಾ-
4 0 ಗೆಯ ನಾಯಕ ಕೊ-
5 0 ಟ್ಟ ಭೂಮಿ ಸುಭ-
6 0 ಮಸ್ತು
[ದೇವಿಕೊಪ್ಪದ ಶಾಸನಗಳ ಪಠ್ಯವನ್ನು ಪರಿಶೀಲಿಸಿ, ಪರಿಷ್ಕರಿಸಿಕೊಟ್ಟ ಡಾ. ಬಿ. ರಾಜಶೇಖರಪ್ಪನವರಿಗೆ ಅನಂತ ಕೃತಜ್ಞತೆಗಳು.]

 ಎಚ್.ಐ.ಜಿ. 27, ನವನಗರ, ಹುಬ್ಬಳ್ಳಿ.

Friday, January 9, 2015

ಕಂಚಿನ ವಜ್ರಸತ್ವದ ಹಿಂಭಾಗದಲ್ಲಿರುವ ಅಪ್ರಕಟಿತ ಶಾಸನ


ಮಂಗಳೂರಿನ ಶ್ರೀಮಂತಿಬಾಯಿ ಸರ್ಕಾರಿ ವಸ್ತುಸಂಗ್ರಹಾಲಯದಲ್ಲಿರುವ ಕಂಚಿನ ವಜ್ರಸತ್ವದ ಹಿಂಭಾಗದಲ್ಲಿರುವ ಅಪ್ರಕಟಿತ ಶಾಸನ
ಶೇಜೇಶ್ವರ ಆರ್.
ಕರ್ನಲ್ ಮಿರಾಜ್‍ಕರ್‍ರವರು ಮಂಗಳೂರಿನ ಬಿಜೈನಗುಡ್ಡದಲ್ಲಿ 1939ರಲ್ಲಿ ಮುಂಬೈನ ನುರಿತ ಇಂಜಿನಿಯರು ಹಡಗಿನ ಆಕಾರದಲ್ಲಿ ಕಟ್ಟಡ ನಿರ್ಮಿಸಿದರು. 1955ರಲ್ಲಿ ತನ್ನ ತಾಯಿಯ ನೆನಪಿಗೋಸ್ಕರ ಸರ್ಕಾರಕ್ಕೆ ದಾನ ನೀಡಿದ ನಂತರ ತಾಯಿಯ ಹೆಸರಿನಲ್ಲಿಯೇ ದಿನಾಂಕ: 04-05-1960ರಲ್ಲಿ ಅಧಿಕೃತವಾಗಿ ಆಗಿನ ಉಪರಾಷ್ಟ್ರಪತಿಯಾಗಿದ್ದ ಶ್ರೀಮಾನ್ ಬಿ.ಡಿ. ಜತ್ತಿಯವರು ಶ್ರೀಮಂತಿಬಾಯಿ ಸರ್ಕಾರಿ ವಸ್ತುಸಂಗ್ರಹಾಲಯ ಎಂಬ ನಾಮಕರಣದೊಂದಿಗೆ ವಸ್ತುಸಂಗ್ರಹಾಲಯವನ್ನು ಉದ್ಘಾಟನೆ ಮಾಡಿದರು. ಈ ಬಂಗಲೆಯನ್ನು ಯಥಾಸ್ಥಿತಿಯಾಗಿ ಕಾಪಾಡಿಕೊಂಡು ವಸ್ತುಸಂಗ್ರಹಾಲಯವನ್ನು ಮಾಡಲಾಗಿದೆ, ಇಲ್ಲಿ ಹೆಚ್ಚಿನದಾಗಿ ಮಿರಾಜ್‍ಕರ್‍ರವರು ದೇಶವಿದೇಶದಿಂದ ಸಂಗ್ರಹಿಸಿದ ವಸ್ತುಗಳನ್ನು ಪ್ರದರ್ಶನಕ್ಕಿಡಲಾಗಿದೆ, ಇದು ದಕ್ಷಿಣ ಕನ್ನಡ ಜಿಲ್ಲೆಯ ಏಕೈಕ ಸರ್ಕಾರಿ ವಸ್ತುಸಂಗ್ರಹಾಲಯವಾಗಿದೆ.
ಕರ್ನಲ್ ಮಿರಾಜ್‍ಕರ್‍ರವರು ಸಂಗ್ರಹಿಸಿದ ಪ್ರಾಚ್ಯವಸ್ತುಗಳಲ್ಲಿ ನೇಪಾಳದಿಂದ 08-05-1957ರಲ್ಲಿ ಸಂಗ್ರಹಿಸಿದ ಕಂಚಿನ ವಜ್ರಸತ್ವ ವಿಗ್ರಹವು ಸಹಾ ಒಂದು, ಬೌದ್ಧ ಧರ್ಮದಲ್ಲಿ ನಾವು ಪ್ರಮುಖವಾಗಿ ಮೂರು ಶಾಖೆಗಳನ್ನು ನೋಡಬಹುದು, ಹೀನಯಾನ, ಮಹಾಯಾನ, ಮತ್ತು ವಜ್ರಯಾನ. ಹೀನಯಾನದಲ್ಲಿ ಬುದ್ಧನ ತತ್ವಗಳಿಗೆ ಮಹತ್ವ ಕೊಟ್ಟರೆ, ಮಹಾಯಾನಲ್ಲಿ ಬುದ್ಧನನ್ನು ಅವತಾರ ಪುರುಷನೆಂದು ಪರಿಗಣಿಸಿ ದೇವತ್ವಪಟ್ಟವನ್ನು ಕಟ್ಟಲಾಯಿತು. ಮಹಾಯಾನದಿಂದ ಮುಂದುವರಿದ ಶಾಖೆಯೇ ವಜ್ರಯಾನ (ತಾಂತ್ರಿಕ ಬೌದ್ಧಧರ್ಮ) ಎಂದು ಕರೆದರು, ಹೀನಯಾನವು ನಿರ್ವಾಣವನ್ನು ಶೂನ್ಯವೆಂದು ಕರೆದರೆ, ಮಹಾಯಾನವು ಶೂನ್ಯ ಮತ್ತು ವಿಜ್ಞಾನವೆಂದು, ವಜ್ರಯಾನವು ಶೂನ್ಯ, ವಿಜ್ಞಾನ, ಮಹಾಸುಖ ಎಂದು ಹೇಳುತ್ತದೆ.
ವಜ್ರಯಾನದಲ್ಲಿ ಅಸಂಖ್ಯಾತ ದೇವತೆಗಳು, ಅವರ ಪೂಜಾವಿಧಾನಗಳು ಮುಖ್ಯ, ಈ ವಜ್ರಸತ್ವ (ಅಥವಾ ಆದಿಬುದ್ಧನ)ನ ಪಂಚಗುಣಗಳಿಂದ ಪಂಚಧ್ಯಾನಗಳೂ ಈ ಪಂಚಧ್ಯಾನಗಳಿಂದ ಐವರು ಧ್ಯಾನಬುದ್ಧರು ಉದಯಿಸಿದರು, ವೈರೋಚನ, ರತ್ನಸಂಭವ, ಅಮಿತಾಭ, ಅಮೋಘ ಸಿದ್ಧಿ, ಅಕ್ಷೋಬ್ಯ ಈ ಐವರಿಗೂ ಕ್ರಮವಾಗಿ ವಜ್ರಧಾತೇಶ್ಚರಿ, ಲೋಚನಾ, ಮಾಮಕಿ, ಪಾಂಡರಾ, ತಾರಾ ಎಂಬ ಐವರು ಶಕ್ತಿ ದೇವತೆಗಳುಂಟು, ಬೌದ್ಧರ ದೇವತೆಗಳೆಲ್ಲ ಈ ಧ್ಯಾನಿಬುದ್ಧರ ಕುಲಗಳಿಗೆ ಸೇರಿದವರು, ಈ ದೇವತೆಗಳನ್ನು ತಾಂತ್ರಿಕ ವಿಧಾನಗಳಿಂದ ಅರ್ಚಿಸಿದವರು ವಜ್ರಸತ್ವರಾಗುತ್ತಾರೆ, ಪ್ರಜ್ಞಾ ಎಂಬ ವಧು ಉಪಾಯ ಎಂಬ ವರ ಇವರಿಬ್ಬರ ಮಿಲನದಿಂದಲೇ ಮನುಷ್ಯ ಪೂರ್ಣನಾಗುವುದು, ಇದನ್ನೇ ನೇಪಾಳದಲ್ಲಿ ಕಮಲದಿಂದೇಳುವ ಅಗ್ನಿಯ ಮೂಲಕ ತೋರಿಸಲಾಗಿದೆ, ವಜ್ರಯಾನದ ಪ್ರಕಾರ ಸ್ತ್ರೀ ಪುರುಷರಾಗಿ ಕಾಣಿಸಿಕೊಂಡಿವೆ. 500 ಸುಮಾರಿಗೆ ತಂತ್ರದ ಪ್ರಭಾವದಿಂದ ತಾಂತ್ರಿಕ ಬೌದ್ಧ ಪಂಥ ನೇಪಾಳದಲ್ಲಿ ಬೆಳೆಯಿತು ಎನ್ನಬಹುದು.
ಈ ಕಂಚಿನ ವಜ್ರಸತ್ವವು ನೇಪಾಳದಿಂದ ಸಂಗ್ರಹಿಸಿದಾಗಿದ್ದು, 57 ಸೆ.ಮೀ. ಉದ್ದ, 22 ಸೆ.ಮೀ. ಆಗಲವಿದೆ. ಹೂವಿನ ಪ್ರಭಾವಳಿಯನ್ನು ಹೊಂದಿದ್ದು, ಕಮಲದ ಪೀಠದಮೇಲೆ ಪದ್ಮಾಸನದಲ್ಲಿ ಕುಳಿತಿದೆ, ಎಡಗೈಯಲ್ಲಿ ಘಂಟೆಯನ್ನು, ಕೊರಳಲ್ಲಿ ಮಾಲೆಯನ್ನು ಧರಿಸಿದೆ, ತಲೆಯು ಹಾಗೂ ಮುಂಭಾಗದ ಪೀಠವು ಅಲಂಕಾರದಿಂದ ಕೂಡಿದೆ, ಪೀಠದ ಹಿಂಭಾಗದ ಮೇಲೆ ಹನ್ನೆರಡು ಸಾಲಿನ ಶಾಸನವಿದ್ದು, ಇದು ಸಂಸ್ಕøತ ಭಾಷೆ ಹಾಗೂ ನಾಗರಿಲಿಪಿಯಲ್ಲಿದೆ.
ಶಾಸನದ ಪಾಠ
1 ಸಿದ್ಧಮಂ ಓಂ ನಮಃ ಶ್ರೀ ರಜಸತ್ವಾಯ || ಶ್ರೀ ಗುರುಕರಾತ್ ನಾಯದಹಿ
2 ಮಹಿಸತಗುರೂಂ ಧ್ಯಾನಯಾಗತನುಮನುಬುದ್ಧಿ ಗುಹಿ
3 ಸನವಾಕ್ರಿತಃ ರಾಗ(ಶೋಕ) ಕಸೂದ್‍ಃ ಖದಾರಿ
4 ಜಾಸನಂ ತ್ವಂತಜಾಮಿ ತ್ವಂತಜಾಮಿ ಶ್ರೀ ಗುರು || ಶ್ರೀ ವಜಸ್
5 ಭೂಯಗಮ್ ಕ್ರಿತ ಕ್ರಿಲಾ ತಥಾ ನಿಮಿತಿನಂ ಚಾನಉ ಯಾಜಿಪಿ ಸಂಪನ್ನೂಂ
6 ರಾಜಾಯ ಕ£ದಾನ ಶ್ರೇಯಸ್ತು ಸಂವತೂ 1023 ಗಿ ಆಷಾರ್ ಮಾಸೆ ಶುಕ್(ಲ)
7 ಪಕ್ಷಃ ಪತಿ ಪದಿ ಪರ್ ದ್ವಿತಿಯಾಷು ಸ್ವಪಿತಾ ವಿಜಯಾಚಾರ್ಯೆ ಶ್ರೀ ಹರ್ಷ್ ದಿವಂಗತ ಜ
8 . . . . . . . ನಾಮನಂ ಸವರ್ಗರ್ ಪಿತ್ ಶ್ರೀ ವಜಸತ್ವಸ್ಯಾಮೂರ್ತಿ ದೇಯ ಕಾ(ಡಾ)   ಪಾನ್ ಪತಿಸ್ಯಾಪಾ
9 ನಾ ದೀ ನೇಜಲ್ || ಥ್ವಮಾದಾನ್ ಪತಿ ಪಯ್ ಪುತ್ರ್ ಹರ್ಷ್ ಜಾತಿ ಪುತ್ರ್ ಶ್ರೀ ಹರ್ಷದ್ವಜಃ ಪುತ್ರ್ ಶ್ರೀ ದಯಾಮುನಿ
10 ಪುತ್ರ್ ಶ್ರೀ ಪಚಾನಮುನಿ ಪಾತು ಸಿದ್ಧಿಪತಿಪಾತು ಜಲಾಜಪಾತು ರ್ದುರಮರರ್ತ್‍ನ ಪಾತು ಧಮುನಿಪಮ್
11 ಸ್ರ್ವಸ್ವ(ಸ್ವ) ತಾರ್ಯಾದಿಂ ಸಕ¯ ಪಾವಮಚಿತ್ರ ಜಯಾಜಾಂದೇವಕಾಜಲ್ || ಸ್ವದಂತ್ ಪರದಂತೆ ವಾಯೋ ಹರೇ
12 . . . . . ಷಷ್ಟಿವರ್ಷ್ ಸಹಸ್ರಾಣಿ . . ವಿಷ್ತಾಯಂ ಜಾಯತೇ ಕ್ರಿಮಿಃ ಶ್ರೀ . . . . .

ಶಾಸನದ ಸಾರಂಶ
ಈ ಶಾಸನದಲ್ಲಿ ಶ್ರೀ ಗುರುವಿನ ಶರಚರಣಗಳಿಗೆ ವಂದಿಸುತ್ತ, ವiಹಾಸತ್ವಶಾಲಿಯಾದ ಗುರುವಿಗೆ ಧ್ಯಾನದಿಂದ ಯಾಗದಿಂದ ತನುಮನಬುದ್ಧಿಯನ್ನು ಪ್ರಚೋದಿಸಿ ಶೋಕಗಳಿಂದ ಮುಕ್ತನಾಗಿ ದಾರಿಯನ್ನು ತೋರಿಸುವ ಗುರುವಿನ ಆಸನಗಳಿಗೆ ತಲೆಬಾಗುತ್ತೇನೆ. ಭೂಮಿಯಲ್ಲಿರುವ ಸಂಪನ್ಮೂಲಗಳು ಹಾಗೆಯೇ ಉಳಿಯಲಿ ರಾಜನಿಗೆ ಶ್ರೇಯಸ್ಸು ದೊರೆಯುವುದಕ್ಕೋಸ್ಕರ 1023ನೇ ಕನಿದಾನ ಸಂವತ್ಸರದ ಅಷಾಡಮಾಸ ಶುಕ್ಲಪಕ್ಷದ ಮೊದಲನೆ ದಿನದ ನಂತರ ಮರಣವನ್ನಪ್ಪಿದ ತಂದೆ ವಿಜಯಾಚಾರ್ಯ ಶ್ರೀ ಹರ್ಷಧÀ್ವಜನ ಯಶಸ್ವಿಗಾಗಿ ಶ್ರೀ ಹರ್ಷದ್ವಜನ ಮಗ ದಯಾಮುನಿಯು ವಜ್ರಸತ್ವಮೂರ್ತಿಯನ್ನು ತನ್ನ ಗುರುವಿಗೆ ದಾನ ನೀಡುತ್ತಾನೆ, ಅವರಿಗೆ ಸಿದ್ಧಿ ದೊರೆಯಲಿ ಜಲಚರ ಪ್ರಾಣಿಗಳಿಂದಲೂ ಧರ್ಮ ಅರ್ಥ ಮೋಕ್ಷ ಸರ್ವಸ್ವ ಎಲ್ಲವೂ ಇಹಲೋಕ ಪರಲೋಕದಲ್ಲಿ ಸಿಗಲಿ ಎಂದು ನದಿನೀರಿನಲ್ಲಿ ತರ್ಪಣ ಬಿಡುತ್ತಾನೆ, ಕೊನೆಯಲ್ಲಿ ಇದನ್ನು ನಾಶ ಮಾಡಿದರೆ ಕ್ರಿಮಿಯಾಗುವೆ ಎಂಬ ಶಾಪಾಶಯದೊಂದಿಗೆ ಕೊನೆಗೊಳ್ಳುತ್ತದೆ.
[ಕೃತಜ್ಞತೆ: ಈ ಪ್ರಬಂಧವನ್ನು ರಚನೆ ಮಾಡುವಲ್ಲಿ ಸಹಕರಿಸಿದ ಡಾ. ಎಸ್.ಜಿ. ಸಾಮಕ್, ಡಾ. ಜಗದೀಶ, ಹಾಗೂ ನನ್ನ ಗುರುಗಳು ಸಂಶೋಧನಾ ಮಾರ್ಗದರ್ಶಕರಾದ ಡಾ.ಹನುಮನಾಯಕರವರಿಗೆ, ಶಾಸನಶಾಸ್ತ್ರ ವಿಭಾಗ, ಭಾರತೀಯ ಪುರಾತತ್ತ್ವ ಸರ್ವೇಕ್ಷಣ ಇಲಾಖೆ ಮೈಸೂರು, ಹಾಗೂ ಆಯುಕ್ತರು, ಪ್ರಾಚ್ಯವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಮೈಸೂರು, ಇವರುಗಳಿಗೆ ನಾನು ಅಭಾರಿಯಾಗಿರುತ್ತೇನೆ]
ಆಧಾರಸೂಚಿ
1. ಚಿದಾನಂದ ಸಮಗ್ರ ಸಂಪುಟ-1, ಕನ್ನಡ ಶಾಸನಗಳ ಸಾಂಸ್ಕøತಿಕ ಅಧ್ಯಯನ (ಕ್ರಿ,ಶ.450-1150) ಸ್ವಪ್ನ ಬುಕ್ ಹೌಸ್ ಗಾಂಧಿನಗರ, ಬೆಂಗಳೂರು-9, 2002.
2. ಬುದ್ಧ ನಡೆದ ಹಾದಿ, ಕೆ,ರಾಮು, ಶ್ರೀನಿಧಿ ಪಬ್ಲಿಕೇಷನ್ಸ್ ಬೆಂಗಳೂರು-53, 2013.
 ಕ್ಯುರೇಟರ್, ಶ್ರೀಮಂತಿ ಬಾಯಿ ಸ್ಮಾರಕ ಸರ್ಕಾರಿ ವಸ್ತುಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ, ಬಿಜೈ, ಮಂಗಳೂರು-04.

Tuesday, January 6, 2015

ನುಣ್ಣೂರು ಗ್ರಾಮದಲ್ಲಿ ಹೊಯ್ಸಳ ನರಸಿಂಹನ ಕಾಲದ ಶಾಸನ

ನುಣ್ಣೂರು ಗ್ರಾಮದಲ್ಲಿ ದೊರೆತ ಹೊಯ್ಸಳ ನರಸಿಂಹನ
ಕಾಲದ ಅಪ್ರಕಟಿತ ಶಾಸನ
ಕೂಡ್ಲೂರು ವೆಂಕಟಪ್ಪ ಮುರಳಿ ಮಂಜುನಾಥ ಎಂ.ಕೆ.
ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ನುಣ್ಣೂರು ಗ್ರಾಮದ ಹೊರವಲಯದಲ್ಲಿನ ಹೊಲವೊಂದರಲ್ಲಿ ಶಿಲಾಶಾಸನವೊಂದು ಪತ್ತೆಯಾಯಿತು. ಅರ್ಧಕ್ಕಿಂತ ಹೆಚ್ಚು ಭಾಗ ಭೂಮಿಯಲ್ಲಿ ಹೂತುಹೋಗಿದ್ದ ಈ ಶಾಸನವನ್ನು ಅಗೆದು ತೆಗೆದು ಪರಿಶೀಲಿಸಿದಾಗ ಅಪ್ರಕಟಿತ ಶಾಸನವೆಂದು ತಿಳಿಯಿತು. ಐದು ಅಡಿ ಉದ್ದ. ಎರಡುವರೆ ಅಡಿ ಅಗಲ ಹಾಗೂ ಅರ್ಧ ಅಡಿ ದಪ್ಪವಾದ ಕಣಶಿಲೆಯ ಫಲಕದ ಮೇಲೆ ಈ ಶಾಸನವನ್ನು ಕಂಡರಿಸಲಾಗಿದೆ. ಈ ಶಾಸನದ ಭಾಷೆ ಹಾಗೂ ಲಿಪಿಯು ಕನ್ನಡವಾಗಿದೆ. ಈ ಲಿಪಿಯು ಹೊಯ್ಸಳರ ಕಾಲದ್ದಾಗಿದ್ದು, ಸುಂದರವಾಗಿದೆ. ಕಣಶಿಲೆಯ ಕಲ್ಲಿನ ಮೇಲೆ ಗುಂಡಾಗಿ, ಆಕರ್ಷಕವಾಗಿ ಶಾಸನವನ್ನು ಕೊರೆದಿರುವುದು ವಿಶೇಷ.
ಶಾಸನದ ಶಿಲ್ಪ
ಶಾಸನ ಪಾಠದ ಮೇಲ್ಭಾಗದಲ್ಲಿ ಸುಮಾರು ಒಂದು ಅಡಿ ಎತ್ತರವಾದ ಉಬ್ಬುಶಿಲ್ಪವನ್ನು ಕಡೆಯಲಾಗಿದೆ. ಶಾಸನ ಫಲಕದ ತೀರಾ ಮೇಲ್ಭಾಗದಲ್ಲಿ ಸೂರ್ಯ ಚಂದ್ರರ ಶಿಲ್ಪಗಳ ಕೆಳಭಾಗದಲ್ಲಿ ಇಬ್ಬರು ವ್ಯಕ್ತಿಗಳು ಪ್ರತ್ಯೇಕವಾದ ಪೀಠಗಳ ಮೇಲೆ ಪದ್ಮಾಸನದಲ್ಲಿ ಕುಳಿತಿದ್ದಾರೆ. ಅವರ ಮಧ್ಯದಲ್ಲಿರುವ ಗಂಡಸಿನ ಉಡುಗೆ ಧರಿಸಿರುವ ಗಂಡಭೇರುಂಡದ ತಲೆಯನ್ನುಳ್ಳ ವ್ಯಕ್ತಿಯೊಬ್ಬ, ತನ್ನ ಎರಡೂ ಕೈಗಳನ್ನು ಎರಡೂ ಬದಿಗೆ ಚಾಚಿ ಇಕ್ಕೆಲಗಳಲ್ಲಿ ಕುಳಿತಿರುವ ವ್ಯಕ್ತಿಗಳ ತಲೆಯ ಮೇಲೆ ಇರಿಸಿ ಆಶೀರ್ವದಿಸುತ್ತಿದ್ದಾನೆ. ಬಲಗಡೆ ಕುಳಿತ ವ್ಯಕ್ತಿಯ ಮೇಲೆ ಹುಲಿಯೊಂದು ತನ್ನ ಎಡಮುಂಗಾಲನ್ನು ಮೇಲೆತ್ತಿ ಆಕ್ರಮಣ ಮಾಡುವ ಭಂಗಿಯಲ್ಲಿದೆ. ಹುಲಿಯ ಪಕ್ಕದಲ್ಲಿ ಪೂರ್ಣಕುಂಭ ಹಾಗೂ ಅಂಕುಶದ ಶಿಲ್ಪವಿದೆ. ಈ ರೀತಿಯ ಶಾಸನ ಶಿಲ್ಪಗಳು ಚನ್ನಪಟ್ಟಣ ತಾಲ್ಲೂಕಿನ ಹೊಯ್ಸಳರ ಕಾಲದ ಶಾಸನಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತವೆ. ಈ ಶಿಲ್ಪವನ್ನು ಗಮನಿಸಿದರೆ ವೀರತನಕ್ಕೆ ನೀಡಿದ ದಾನ ಎನ್ನುವುದನ್ನು ಸೂಚಿಸುತ್ತದೆ. ಒಟ್ಟಾರೆ ಶಾಸನದ ಶಿಲ್ಪ ಅಭೂತಪೂರ್ವವಾದದ್ದು ಎಂದು ಹೇಳಬಹುದು. ನಿಪುಣ ಶಿಲ್ಪಿಯೊಬ್ಬನ ಕೈಚಳಕದ ಫಲಿತವಾದ ಈ ಶಿಲ್ಪವು ಆಕರ್ಷಕವಾಗಿಯೂ ಇದೆ.
ಶಾಸನ ಪಾಠ
1 ಶ್ರೀಸ್ವಸ್ತಿ ಸಮಸ್ತ ಭುವನಾಶ್ರಯ
2 ಶ್ರೀಪ್ರಿಥ್ವೀವಲ್ಲಭ ಮಲೆರಾಜರಾಜ
3 ಮಲಪರೊಳ್‍ಗಂಡ ಗಂಡ
4 ಭೇರುಂಡ ಕದನಪ್ರಚಂಡ ಶನಿ
5 ವಾರಸಿದ್ಧಿ ಗಿರಿದುರ್ಗಮಲ್ಲ ಚಲದಂಕ
6 ರಾಮ ಮಗರರಾಯಸ್ಥಾಪನಾಚಾರಿಯ
7 ಪಾಂಡ್ಯರಾಯಪ್ರತಿಷ್ಟಾಚಾರ್ಯ ನಿಶ್ಶಂ
8 ಕ ಪ್ರತಾಪ ಹೊಯಿಸಳ ಭುಜಬಳ ವೀರ
9 ನಾರಸಿಂಹದೇವರಸರು ಕವಿಕುಮುದ
10 ಚಂದ್ರಲೋಭಿರಾಯ ಗಜಾಂಕುಶ ಶ್ರೀವಾರಜನ
11 ಗಂಡ. ತ್ರಿಭುವನ ವಂದಿಜನ ಚಕ್ರವ
12 ತ್ರ್ತಿ ಕೀರ್ತಿದೇವರಸರಿಗೆ ನುಣ್ಣನೂರ ಚತುಃ
13 ಸೀಮೆಯ ಭೂಮಿಯನು ಅಚ್ರ್ಚಾಗತಿ ಕಿ¾ು
14 ಕುಳ ಕಾಣಿಕೆ ಹಣವನು ವ1ದು ಅಮು
15 . . . ಪಂಚಕಾರುಕ. ಲೆಡಿಯೊಳಗಾದ ನಮ
16 . ಕೆ¾õÉಯನೂ ಬಿಟ್ಟು ಧಾರೆಯನೆ¾ದು ಸಬ್ರ್ಬ
17 ನಮಸ್ಯವಾಗಿ ಕೀರ್ತಿದೇವರಸರಿಗೆ ಕೊಟ್ಟೆವು
18 ಯೀ ಮರಿಯಾದೆಯಲು ಸೂರಿ(ಯ) ಚಂದ್ರನುಳೊನಕ
19 ವು ನಡವುದು ಇವರ ಒಡವೆ. ಂಡಿನೆ ಸಿಮೋಲ್ಲ(ಂ) ಘ
20 . ಳ ದೇವನ ಲಿಂಗ ಅಳಿಪಿದವನು ತಾಯ...
21 . ಕತೆÀ್ತಗೇದ ಕವಿಲೆಯ ಕೊಂದ ಪಾಪ(ದಲಿ ಹೋಹರು)
ಶಾಸನದ ವಿಶ್ಲೇಷಣೆ
ಶಾಸನದಲ್ಲಿ ಒಟ್ಟು 21 ಸಾಲುಗಳ ಪಾಠವಿದೆ. ಶಾಸನದ ಆರಂಭದಲ್ಲಿ ಸ್ವಸ್ತಿಸಮಸ್ತಭುವನಾಶ್ರಯ, ಪೃಥ್ವೀವಲ್ಲಭ, ಮಲೆರಾಜರಾಜ, ಮಲಪರೊಳ್ ಗಂಡ, ಗಂಡಭೇರುಂಡ, ಶನಿವಾರ ಸಿದ್ದಿ, ಗಿರಿದುರ್ಗಮಲ್ಲ, ಛಲದಂಕರಾಮ, ಮಗರರಾಯ ಸ್ಥಾಪನಾಚಾರ್ಯ, ಪಾಂಡ್ಯರಾಯ ಪ್ರತಿಷ್ಠಾಪನಾಚಾರ್ಯ ಮುಂತಾದ ವೀರನರಸಿಂಹನ ಬಿರುದಾವಳಿಗಳಿವೆ. ಶಾಸನದ ಮುಂದಿನ ಭಾಗದಲ್ಲಿ ಕವಿಕುಮುದಚಂದ್ರ, ಲೋಭಿರಾಯ, ಗಜಾಂಕುಶ, ಶ್ರೀವಾರಜನಗಂಡ, ತ್ರಿಭುವನ ವಂದಿಜನ ಚಕ್ರವರ್ತಿ ಎಂದು ಕೀರ್ತಿದೇವರಸ ಎಂಬುವರಿಗೆ ವೀರನರಸಿಂಹನು ನುಣ್ಣನೂರು ಗ್ರಾಮದ ಚತುಃಸ್ಸೀಮೆಯ ಭೂಮಿಯನ್ನು ಧಾರೆಯೆರೆದು ಯಾವುದೇ ರೀತಿಯ ತೆರಿಗೆಗಳಿಲ್ಲದಂತೆ ದಾನವಾಗಿ ಕೊಟ್ಟ ವಿವರಗಳಿವೆ. ಶಾಸನದ ಅಂತ್ಯದಲ್ಲಿ ಶಾಪಾಶಯಗಳಿವೆ.
ಈ ಶಾಸನದಲ್ಲಿ ಕಾಲದ ಉಲ್ಲೇಖವಿಲ್ಲದಿದ್ದರೂ, ಈ ಶಾಸನದಲ್ಲಿ ಉಕ್ತನಾಗಿರುವ ಕೀರ್ತಿದೇವರಸನ ಇತರ ಶಾಸನಗಳು (ಇತಿಹಾಸ ದರ್ಶನ, ಸಂ.26, ಪು 189) ಹಾಗೂ ಶಾಸನದಲ್ಲಿ ಉಲ್ಲೇಖಿತನಾಗಿರುವ ವೀರನರಸಿಂಹನ ಬಿರುದುಗಳ ಆಧಾರದಿಂದ ಹೊಯ್ಸಳ ಚಕ್ರವರ್ತಿ ಸೋಮೇಶ್ವರನ ಪುತ್ರನಾದ ಮೂರನೇ ವೀರನರಸಿಂಹನೆಂದು ಗುರುತಿಸಬಹುದು. ಕ್ರಿ.ಶ. 1253ರಿಂದ 1292ರವರೆಗೆ ಆಳ್ವಿಕೆ ನಡೆಸಿದ ಮೂರನೇ ವೀರನರಸಿಂಹನ ಕಾಲಕ್ಕೆ ಈ ಶಾಸನ ಸೇರುತ್ತದೆ. ಮೂರನೇ ನರಸಿಂಹನ ಕಾಲದಲ್ಲಿ ಕೀರ್ತಿದೇವರಸನು ಈ ಪ್ರದೇಶವನ್ನು ಆಳುತ್ತಿದ್ದ ಮಾಂಡಲಿಕನೆಂಬುದು ಸ್ಪಷ್ಟವಾಗುತ್ತದೆ. ಶಾಸನದಲ್ಲಿ ಅಚ್ಚಾರ್ಗತಿ, ಕಿರುಕುಳ, ಕಾಣಿಕೆ, ಪಂಚಕಾರುಕ ಮೊದಲಾದ ತೆರಿಗೆಗಳ ಪ್ರಸ್ತಾಪವಿದೆ. ಈ ಎಲ್ಲಾ ತೆರಿಗೆಗಳಲ್ಲದೇ, ಈ ಗ್ರಾಮದ ಕೆರೆಯನ್ನೂ ವೀರನರಸಿಂಹನು ಕೀರ್ತಿದೇವರಸನಿಗೆ ಸರ್ವ ನಮಸ್ಯವಾಗಿ ಧಾರೆಯೆರೆದು ಕೊಟ್ಟ ವಿವರ ಶಾಸನದಲ್ಲಿದೆ.
[ಈ ಶಾಸನವನ್ನು ಓದಲು ನಮಗೆ ನೆರವಾದ ಪ್ರೀತಿಯ  ಗುರುಗಳಾದ ಪ್ರೊ. ಎಂ.ಜಿ. ಮಂಜುನಾಥ್ ಹಾಗೂ ಸೀತಾರಾಮ ಜಾಗೀರ್‍ದಾರ್ ಅವರಿಗೆ ನಮ್ಮ ಕೃತಜ್ಞತೆಗಳು ಸಲ್ಲುತ್ತವೆ.]

  ಕೂಡ್ಲರು ಗ್ರಾಮ, ಚನ್ನಪಟ್ಟಣ ತಾಲ್ಲೂಕು,ರಾಮನಗರ ಜಿಲ್ಲೆ.
 # 41, ಮಾಕಳಿ ಗ್ರಾಮ, ಚನ್ನಪಟ್ಟಣ ತಾಲ್ಲೂಕು, ರಾಮನಗರ ಜಿಲ್ಲೆ.


Sunday, January 4, 2015

ಶ್ರೀ ಸಾಹಿತ್ಯ ಪ್ರಶಸ್ತಿ ಪ್ರದಾನ-ಚಿತ್ರಸಂಪುಟ


ಶ್ರೀ ಪ್ರಶಸ್ತಿ ಚಿತ್ರ ಸಂಪುಟ

                  ಬಿ. ಎಸ್  ಸಣ್ಣಯ್ಯ ಅವರಿಗೆ  ಶ್ರೀಸಾಹಿತ್ಯ ಪ್ರಶಸ್ತಿ                                                    


ಎಚ್‌.ಶೇಷಗಿರಿರಾವ್, ನಿರ್ದೇಶಕರು, ಹಸ್ತಪ್ರತಿವಿಭಾಗ














ಹಿರಿಯ ಸಂಶೋಧಕ, ಹಸ್ತ ಪ್ರತಿ ಸಂಗ್ರಾಹಕ , ಸಂಪಾದಕ ಮತ್ತು ಕೃತಿಕಾರ ಶ್ರೀ. ಬಿ.ಎಸ್‌ ಸಣ್ಣಯ್ಯ ಅವರಿಗೆ ಬಿ. ಎಂ. ಶ್ರೀ ಸ್ಮಾರಕ ಪ್ರತಿಷ್ಠಾನವು  ಶ್ರೀ ಸಾಹಿತ್ಯ ಪ್ರಶಸ್ತಿಯನ್ನು ಶನಿವಾರ  ಬಿ.ಎಂ.ಶ್ರೀ  ಅವರ ಜನುಮ  ದಿನದಂದು   ಇಂಡಿಯನ್‌ ಇನಸ್ಟಿಟ್ಯೂಟ್‌ ಅಫ್ ವರ್ಲ್ದ ಕಲ್ಚರ್‌ಸಭಾಂಗಣದಲ್ಲಿ  ನಾಡೋಜ ಡಾ. ಕಮಲಾ ಹಂಪನಾ ಪ್ರದಾನ ಮಾಡಿದರು..ತಮ್ಮ ಮತ್ತು  ಪುರಸ್ಕೃತರ ಅರವತ್ತು ವರ್ಷದ ಒಡನಾಟವನ್ನು ನೆನಪಿಸಿಕೊಂಡು ಎಲೆಯ ಮರೆಯ ಕಾಯಿಯಂತೆ ಪ್ರಚಾರದ ಹಂಬಲವಿಲ್ಲದೆ  ಶ್ರಮ,ಶ್ರದ್ಧೆ ಮತ್ತು ಆಳವಾದ ಪಾಂಡಿತ್ಯ ಅಗತ್ಯವಿರುವ ಕೆಲಸದಲ್ಲಿ ಜೀವನವನ್ನೇ ಮುಡುಪಾಗಿಟ್ಟು ಮಾಡಿದ ಅಪಾರ ಸಾಧನೆಯನ್ನು ಎತ್ತಿ ತೋರಿಸಿದರು.
ಡಾ. ವೈ.ಸಿ. ಭಾನುಮತಿಯವರು ಕನ್ನಡ ಅಧ್ಯಯನ ಸಂಸ್ಥೆಯಲ್ಲಿನ ತಮ್ಮ ನಾಲ್ಕು ದಶಕದ ಅನುಭವದಿಂದ ಬಿ.ಎಸ್‌ ಸಣ್ಣಯ್ಯ ಅವರು ಹೇಗೆ ಹಸ್ತಪ್ರತಿ ಸಂಗ್ರಹಣೆ, ಸಂಪಾದನೆ ಮತ್ತು ಕೃತಿ ರಚನೆಗಾಗಿ ೩೨ ವರ್ಷ ಇಲಾಖೆಯಲ್ಲಿ ನಂತರ ೨೨ ವರ್ಷ ಸಂಶೋಧನಾ  ಸಂಸ್ಥೆಯಲ್ಲಿ ಅವಿರತ ಶ್ರಮಮಾಡಿ   ಹಸ್ತಪ್ರತಿಗಳಲ್ಲಿದ್ದ ಸಾಹಿತ್ಯ ಮತ್ತು ಶಾಸ್ತ್ರ ಗ್ರಂಥಗಳನ್ನು  ಬೆಳಕಿಗೆ ತಂದು  ಮಾಡಿರುವ ಸಾಹಿತ್ಯ ಸೇವೆಯಿಂದ ಸಂಶೋಧನ ಮತ್ತು ಸಂಪಾದನಾ  ರಂಗದ ದೊಡ್ಡಣ್ಣನಾಗಿರುವರು ಎಂದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡುತ್ತಾ   ಎಂಬತ್ತೇಳರ ಹರಯದಲ್ಲೂ ಕೆಲಸ ಮಾಡಲು ಸಾಧ್ಯವಾಗಿರುವುದು ಗುರುಗಳಾದ ಡಿ.ಎಲ್‌ಎನ್ ಮತ್ತು ತ.ಸು. ಶಾಮರಾಯರ ಬೋಧನೆ, ಯಾವುದೇ ಕೆಲಸವಾದರೂ ನಿಷ್ಠೆ ಮತ್ತು ಶ್ರದ್ಧೆ ಯಿದ್ದರೆ ಸಾಧನೆ ಸಾಧ್ಯ, ಅದರಿಂದಾಗಿಯೇ ಮಿತ ಆದಾಯದಲ್ಲಿಯೂ ಮರಿಮಕ್ಕಳಾದಿಯಾಗಿ ಎಲ್ಲರೂ ನೆಮ್ಮದಿಯಿಂದಿರುವ  ಕುಟುಂಬ ತಮ್ಮದು ಎಂದರು. ಅಲ್ಲದೆ ಪ್ರತಿಷ್ಠಾನ ಮಾಡುತ್ತಿರುವ  ಉತ್ತಮ ಸೇವೆಗೆ ಒತ್ತಾಸೆಯಾಗಿ ತಮ್ಮಕೃತಿಗಳನ್ನು ಮತ್ತು ೨೫ ಸಾವಿರ ರೂಪಾಯಿಗಳ ಕೊಡುಗೆ ನೀಡಿದರು
ಕರುಣಾಳು ಬಾ ಬೆಳಕೆ ಎಂಬ ಬಿ.ಎಂ.ಶ್ರೀ ಯವರ  ಪ್ರಾರ್ಥನೆಯೊಂದಿಗೆ ಸಮಾರಂಭ ಪ್ರಾಂಭವಾಯಿತು.  ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಪಿ.ವಿ. ನಾರಾಯಣ ಅವರು ಎರಡನೆಯ  ಶ್ರೀಸಾಹಿತ್ಯ ಪ್ರಶಸ್ತಿಯ  ಆಯ್ಕೆಯ ವಿಧಾನವನ್ನುವಿವರಿಸುತ್ತಾ.  ಈ ಪ್ರಶಸ್ತಿಗೆ ಕಾಣರಾದ ಶ್ರೀಮತಿ ಕಮಲಿನಿ  ಶಾ. ಬಾಲುರಾವ್‌  ಅವರ ಔದಾರ್ಯ ನೆನೆಯುತ್ತಾ ಪ್ರತಿಷ್ಠಾನದ ಕಾರ್ಯ ಚಟುವಟಿಕೆಗಳನ್ನು ವಿವರಿಸಿದರು. ಕಾರ್ಯದರ್ಶಿಗಳಾದ ರವೀಂದ್ರನಾಥ ಅವರು ಕಾರ್ಯಕ್ರಮ ನಿರೂಪಿಸಿದರು, ಡಾ.ಅಬ್ದುಲ್‌ ಬಷೀರ್ ಅವರು ಅಭಿನಂದನೆ ಪತ್ರ ವಾಚನ ಮಾಡಿದರು.
 ಕನ್ನಡ ಅಬಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಎಲ್‌. ಹನುಮಂತಯ್ಯನವರು ಇಂಥಹ  ಅಪರೂಪದ ಸಮಾರಂಭಕ್ಕೆ ಕಾರಣವಾದ ಪ್ರತಿಷ್ಠಾನವನ್ನು ಅಭಿನಂದಿಸಿ , ಕನ್ನಡದ ವಿದ್ವತ್‌ ಕೆಲಸ ಮಾಡುತ್ತಿರುವ ಸಂಸ್ಥೆಗೆ ಪ್ರಾಧಿಕಾರ ಮತ್ತು ಸರ್ಕಾರ ಜೊತೆಯಾಗಿರುವು ದೆಂದು ಅಧ್ಯಕ್ಷ ಭಾಷಣದಲ್ಲಿ ಹೇಳಿದರು.
ಕನ್ನಡ ಸಾಹಿತ್ಯ ಲೋಕದ ಹಿರಿಯರು,, ಬಿ.ಎಂ ಶ್ರೀಯವರ ಮೊಮ್ಮಗಳಾದ ಶ್ರೀಮತಿ ಕಮಲಿನಿ ಶ.ಬಾಲುರಾವ್ , ಕಳೆದ ವರ್ಷ  ಪ್ರಥಮ ಪ್ರಶಸ್ತಿ ವಿಜೇತ ಡಾ.ಎನ್‌ಎಸ್ ಲಕ್ಷ್ಮ ನಾರಾಯಣ ಭಟ್ಟ ಮತ್ತು ಅಪಾರ ಸಂಖ್ಯೆಯ ಸಾಹಿತ್ಯಾಭಿಮಾನಿಗಳು  ಸಮಾರಂಭದಲ್ಲಿ ಭಾಗವಹಿಸಿದ್ದರು
 ಶ್ರೀ ರಾಮಪ್ರಸಾದ, ಖಜಾಂಚಿ ಅವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.










  





               


                                                 
          
       
ಅಭಿನಂದನಾ ಪತ್ರ

                                                   





 








ಶ್ರೀಸಾಹಿತ್ಯ ಪ್ರಶಸ್ತಿ  ಸ್ಮರಣ ಫಲಕ













                                                                                                   






ಡಾ.ಪಿ ವಿ ಎನ್‌, ಡಾ. ಕಮಲಾಹಂಪನಾ, ಡಾ. ಎಲ್  ಹನುಮಂತಯ್ಯ,ಶ್ರೀ ಬಿ.ಎಸ್‌ ಸಣ್ಣಯ್ಯ, ಡಾ. ವೈಸಿ .ಭಾನುಮತಿ  ಮತ್ತು ಪ್ರೊ. ಎಂ ಎಚ್‌.ಕೃಷ್ಣಯ್ಯ



ಪ್ರಸ್ತಾವನಾ ನುಡಿ  ಆಡಿದ ಅಧ್ಯಕ್ಷ ಡಾ. ಪಿವಿ.ನಾರಾಯಣ




ಶ್ರೀ ಸಾಹಿತ್ಯ ಪ್ರಶಸ್ತಿ ಪ್ರದಾನ


ಸಣ್ಣ ಯ್ಯ ನವರನ್ನು ಸ್ವಾಗತಿಸುತ್ತಿರುವ ಅದ್ಯಕ್ಷರು








ಡಾ.ಎಲ್‌ ಹನುಮಂತಯ್ಯನವರಿಗೆ ಸ್ವಾಗತ ನೀಡಿಕೆ


ಡಾ. ಕಮಲಾ ಹಂಪನಾ ಅವರಿಗೆ ಸ್ವಾಗತ




ಪ್ರಶಸ್ತಿ ಪ್ರದಾನ ಮಾಡಿದ ಡಾ. ಕಮಲಾ ಹಂಪನಾರ ಮಾತು

ಅಭಿನಂದನಾ ಪತ್ರ ವಾಚಿಸುತ್ತಿರುವ ಕಾರ್ಯದರ್ಶಿ ಡಾ ಜಿ. ಅಬ್ದುಲ್‌ ಬಷೀರ್




ಅಭಿನಂದನಾ ಪತ್ರ ವಾಚಿಸುತ್ತಿರುವ ಡಾ. ಜಿ. ಅಬ್ದುಲ್‌ ಬಷೀರ್




ಸಕುಟುಂಬಿಯಾಗಿ ಶ್ರೀ ಸಣ್ಣಯ್ಯನವರು