Thursday, September 4, 2014

ಪ್ರಾಚೀನ ವಾಸ್ತುಶಿಲ್ಪ

4.1  ಪ್ರಾಚೀನ ವಾಸ್ತುಶಿಲ್ಪ
ಡಾ|| ಎಚ್. ಎಸ್. ಗೋಪಾಲ ರಾವ್
ರ್ನಾಟಕದಲ್ಲಿ ಇತಿಹಾಸಪೂರ್ವ ಕಾಲದ ಹಲವು ಕಲ್ಲಿನ ಸಮಾಧಿಗಳು ದೊರೆತಿವೆ. ಇವುಗಳನ್ನು ಕೆಲವೆಡೆ ಇಂದಿಗೂ ಪಾಂಡವರ ಗುಡಿಗಳು, ಮೋರಿಯರ ಮನೆಗಳು ಎಂದೂ ಕರೆಯಲಾಗುವುದನ್ನು ಗಮನಿಸಿದರೆ, ಈ ಸಮಾಧಿಗಳೇಅನಂತರದ ಕಾಲದಲ್ಲಿ ದೇವಾಲಯಗಳಿಗೆ ಮಾದರಿಯಾಗಿರುವ ಸಾಧ್ಯತೆಗಳಿವೆ. ಎಷ್ಟೋ ಕಡೆಗಳಲ್ಲಿ ಪಾಂಡವರ ಗುಡಿಗಳು ಎಂದು ಕರೆಸಿಕೊಳ್ಳುತ್ತಿದ್ದ ದೇವಾಲಯಗಳು ಅನಂತರದ ಕಾಲದಲ್ಲಿ ಶಿವಾಲಯಗಳಾಗಿ ಪರಿವರ್ತನೆಗೊಂಡಿವೆ. ಸಮಾಧಿಯ ಗುರುತಿಗೆ ಇಡಲಾಗಿದ್ದ ಗುಂಡುಕಲ್ಲುಗಳೇ ಲಿಂಗ ಎಂದು ಕರೆಸಿಕೊಂಡಿರಬಹುದು.
ಮೊದಲಿಗೆ ಇದ್ದ ಪಿತೃಪೂಜೆ ಈಗಲೂ ಒಂದಲ್ಲ ಒಂದು ರೀತಿ ಮುಂದುವರಿದಿದೆ. ದೀರ್ಘಕಾಲ ಮಲಗಿದವನು ಎಂದೋ ಒಂದು ದಿನ ಏಳುವನೆಂಬ ನಿರೀಕ್ಷೆ ಮತ್ತು ನಂಬಿಕೆಯಿಂದ ಕಲ್ಲಿನ ಕೋಣೆಗಳಲ್ಲಿ ಆಹಾರ, ನೀರು, ಆಯುಧ ಇತ್ಯಾದಿ ಜೀವನಾವಶ್ಯಕ ವಸ್ತುಗಳ ಸಹಿತ ಸಮಾಧಿ ಮಾಡಲಾದ ವ್ಯಕ್ತಿಯೇ ಮುಂದೆ ಒಂದು ದಿನ ಪೂಜೆಗೆ ಗುರಿಯಾದ ದೇವರಾಗಿರುವ ಸಾಧ್ಯತೆಗಳೂ ಇವೆ. ದೇವರ ಉಗಮದ ಬಗ್ಗೆ ಬಗೆಹರಿಯಲಾಗದ ಚರ್ಚೆಗಳಿರುವಂತೆ, ದೇವಾಲಯದ ಉಗಮದ ಬಗ್ಗೆಯೂ ನಿರಂತರ ಚರ್ಚೆ ನಡೆಯುತ್ತಿದೆ.
ದೇವರು ಮತ್ತು ದೇವಾಲಯದ ಬಗ್ಗೆ ಬಗೆಹರಿಯದ ಚರ್ಚೆ ಮುಂದುವರಿದಿರುವಂತೆಯೇ ಅನೇಕ ದೇವಾಲಯಗಳು ನಿರ್ಮಾಣವಾಗಿವೆ, ಆಗುತ್ತಿವೆ ಮತ್ತು ಆಗುತ್ತವೆ. ಸಮಾಧಿಗಳ ಮೇಲೆ ನಿರ್ಮಾಣಗೊಂಡ ಕಟ್ಟಡಗಳೇ ಕ್ರಮೇಣ ಮಂದಿರಗಳಾಗಿ, ಆ ಸಮಾಧಿ ಮಂದಿರಗಳು ದೇವರು ಎಂದು ಕರೆಸಿಕೊಂಡ ವ್ಯಕ್ತಿ ಅಥವಾ ಶಕ್ತಿಯ ನೆಲೆಯಾಗಿ, ಆಲಯಗಳಾಗಿವೆ. ಪ್ರಕೃತಿಯಲ್ಲಿ ತಾನು ಕಂಡ ಸುಂದರ, ವಿಶೇಷ ಮತ್ತು ಅದ್ಭುತಗಳಿಗೆ ಅಗೋಚರ ಶಕ್ತಿ ಕಾರಣ, ಅದನ್ನು ಒಲಿಸಿಕೊಳ್ಳಬೇಕು ಎಂಬ ಉದ್ದೇಶ ದಿಂದಲೋ ಅಥವಾ ಸಮಾಧಿ ಹೊಂದಿದ ವ್ಯಕ್ತಿಯೇ ಕಾರಣ ಎಂಬ ಅನುಮಾನದಿಂದಲೋ ಪ್ರೀತಿ, ಗೌರವ, ಭಯ ಇತ್ಯಾದಿ ಭಾವಗಳು ದೇವರ ಸೃಷ್ಟಿಗೆ ಕಾರಣವಾಗಿರಬಹುದು. ಈಗಲೂ ಕೆಲವು ಜನಾಂಗಗಳ ಗುರುಗಳು ಅಥವಾ ಗಣ್ಯರ ಸಮಾಧಿಗಳ ಮೇಲೆ ಲಿಂಗವನ್ನು ಇಟ್ಟು ಪೂಜಿಸುವ ಪದ್ಧತಿ ಇದೆ. ಕ್ರಮೇಣ ಇಂತಹ ಸಮಾಧಿಗಳೇ ದೇವಾಲಯಗಳಾಗಿರುವ ಸಾಧ್ಯತೆಗಳಿವೆ. ತಮಿಳುನಾಡಿನಲ್ಲಿ ಕೆಲವು ದಶಕಗಳ ಹಿಂದೆ ದೇವಾಲಯಗಳ ಜೀರ್ಣೋದ್ಧಾರ ಕಾರ್ಯ ಕೈಗೊಂಡಾಗ, ಕೆಲವು ದೇವಾಲಯಗಳ ಗರ್ಭಗೃಹದ ಕೆಳಗೆ ಮೂಳೆಗಳ ರಾಶಿ, ಶವಕರಂಡ, ಬೂದಿ ಇತ್ಯಾದಿಗಳು ಕಂಡುಬಂದವು. ಅಂದರೆ, ಒಂದು ಕಾಲಕ್ಕೆ ವ್ಯಕ್ತಿಯನ್ನು ಅಥವಾ ವ್ಯಕ್ತಿಗಳನ್ನು ಸಮಾಧಿ ಮಾಡಿದ್ದ ಸ್ಥಳವೇ ಕ್ರಮೇಣ ದೇವಾಲಯಗಳಾಗಿ ರೂಪುಗೊಂಡಿದ್ದವು. ಯಾರೇ ಆದರೂ ಮಲಗುವ ಜಾಗ `ಪಳ್ಳಿಪ್ಪಡೈ'. ಸತ್ತವನು ಮಲಗಿದ `ಪಳ್ಳಿಪ್ಪಡೈ'ಗಳೇ ದೇವಾಲಯಗಳಾಗಿವೆ ಎಂಬ ಅಭಿಪ್ರಾಯ ಇದೆ. ಇದು ಶಿವಾಲಯಗಳಿಗೆ ಮಾತ್ರ ಅನ್ವಯಿಸುವ ಮಾತು ಎಂದು ತಿಳಿಯಲಾಗುವುದಿಲ್ಲ. ಸಮಾಧಿಸ್ಥಿತಿಯು ಧ್ಯಾನಸ್ಥಿತಿಯೂ ಆಗುತ್ತದೆ. ಆದ್ದರಿಂದ ಧ್ಯಾನಸ್ಥಿತಿಯಲ್ಲಿ ಸಮಾಧಿಯಾದವನ ಮೇಲೆ ನಿರ್ಮಿತವಾದ ಕಟ್ಟಡವೇ ದೇವಾಲಯ ಎಂದು ತಿಳಿಯ ಬೇಕಾಗುತ್ತದೆ. ಈಗಲೂ ಗದ್ದುಗೆಗಳು ಮತ್ತು ಬೃಂದಾವನಗಳು ಧ್ಯಾನಸ್ಥ ಗುರುಗಳ ಸಮಾಧಿಗಳೇ ಆಗಿರುತ್ತವೆ. ಹೀಗೆ ಸಮಾಧಿ ಮಾಡುವುದು ಹಿಂದಿನಿಂದ ನಡೆದುಬಂದ ಪದ್ಧತಿ. ಎಲ್ಲ ಸಮಾಧಿಗಳೂ ದೇವಾಲಯಗಳಲ್ಲ , ಮತ್ತು ಎಲ್ಲ ದೇವಾಲಯಗಳೂ ಸಮಾಧಿಗಳಲ್ಲ ಎಂಬ ಸತ್ಯವನ್ನು ತಿಳಿದು ನಮ್ಮ ಅನುಮಾನಗಳಿಗೆ ಉತ್ತರ ಪಡೆಯುವುದು ಅವಶ್ಯಕ. ಬೆಂಗಳೂರು ಉತ್ತರ ತಾಲ್ಲೂಕಿನ ಹೆಸರುಘಟ್ಟದ ಸಮೀಪ ಇರುವ ಐವರುಕಂಡಪುರದಲ್ಲಿ ಪಾಂಡವರ ಗುಡಿಗಳಿವೆ. ಈಗ ಇವು ಶಿವಾಲಯಗಳು. ಹೆಸರು ಮಾತ್ರ ಪಾಂಡವರ ಗುಡಿಗಳು. ಕ್ರಿ.ಪೂ.ಸು. 800ರಿಂದ 500ರವರೆಗಿನ ಅವಧಿಯಲ್ಲಿ ಇದ್ದ ಬೃಹತ್ ಶಿಲಾಯುಗದ ಜನರು ಮಾಡಿಕೊಂಡ ಸಮಾಧಿಗಳೇ ಅನಂತರದ ಕಾಲದಲ್ಲಿ ಪಾಂಡವರ ಗುಡಿಗಳು ಎಂಬ ಹೆಸರು ಪಡೆದು, ಅನಂತರ ಅವುಗಳೇ ಸರಳ ದೇವಾಲಯಗಳಾಗಿ ರೂಪುಗೊಂಡಿರುವಂತೆ ಕಾಣುತ್ತವೆ.
ಸತ್ತವನನ್ನು ಅಥವಾ ಸತ್ತವನು ಉಪಯೋಗಿಸುತ್ತಿದ್ದ ವಸ್ತು ವಿಶೇಷಗಳನ್ನು ಮುಚ್ಚಿ ಮಾಡಿದ ಸ್ತೂಪಗಳು ಮತ್ತು ಚಿತಿಯ ಕಲ್ಪನೆಯಿಂದ ಮೂಡಿದ ಚೈತ್ಯಗಳು ದೇವಾಲಯಗಳ ಹುಟ್ಟಿಗೆ ಕಾರಣವಾಗಿವೆ ಎಂಬ ಅಭಿಪ್ರಾಯವೂ ಇದೆ. ಬೌದ್ಧ ಧರ್ಮವು ಚೈತ್ಯಗಳ ರಚನೆಗೆ ಹೆಚ್ಚಿನ ಮಹತ್ವವನ್ನು ನೀಡಿದೆ. ಅಶೋಕನು ಸಾವಿರಾರು ಬೌದ್ಧ ಸ್ತೂಪಗಳನ್ನು ನಿರ್ಮಿಸಿದ ವಿಷಯ ತಿಳಿದಿದೆ. ಸಮಾಧಿಗಳೇ ಚೈತ್ಯಗಳು; ಚೈತ್ಯಗಳೇ ಸಮಾಧಿಗಳು. ಈ ಸಮಾಧಿಗಳು ಹಾಗೂ ಚೈತ್ಯಗಳೇ ಕ್ರಮೇಣ ದೇವಾಲಯಗಳಾಗಿವೆ.
ಒಂದು ಜನವಸತಿ ಅಸ್ತಿತ್ವಕ್ಕೆ ಬಂದ ನಂತರ ಸ್ಮಶಾನವೂ ಕೂಡ ಅಸ್ತಿತ್ವಕ್ಕೆ ಬರಬೇಕು. ಆ ಸ್ಮಶಾನವೇ ಸಮಾಧಿಸ್ಥಾನ. ಶಿವನಿಗಂತೂ ಅಲ್ಲಿಯೇ ನೆಲೆ. ಸಾಮಾನ್ಯವಾಗಿ ಪ್ರಾಚೀನ ಶಿವಾಲಯಗಳೆಲ್ಲವೂ ಮೂಲ ಜನವಸತಿಯ ಈಶಾನ್ಯಕ್ಕೆ ಮತ್ತು ಕೆರೆಯ ಏರಿಗೆ ಹೊಂದಿಕೊಂಡಂತೆಯೇ ಇರುತ್ತವೆ. ಈಶಾನ್ಯ ದಿಕ್ಕು ಮತ್ತು ನೀರಿನ ಸಂಗ್ರಹ ಇರುವ ಸ್ಥಳವೇ ಲಯಕರ್ತ ಶಿವನ ಸ್ಥಾನ. ಸ್ಥಿತಿಕರ್ತ ವಿಷ್ಣುವಿಗೆ ಜನವಸತಿಯ ನಡುವಿನಲ್ಲಿ ಸ್ಥಾನ ಲಭಿಸುತ್ತದೆ. ಸೃಷ್ಟಿಕರ್ತ ಎನಿಸಿಕೊಂಡ ಬ್ರಹ್ಮನಿಗೆ ಪೂಜೆಯೇ ಅಪರೂಪ. ಆದ್ದರಿಂದ ಅವನ ಹೆಸರಿ ನಲ್ಲಿರುವ ದೇವಾಲಯಗಳ ಸಂಖ್ಯೆ ಕಡಿಮೆ. ದೇವಾಲಯದ ಭಿತ್ತಿ , ದೇವಕೋಷ್ಠ ಅಥವಾ ಗೂಡುಗಳಲ್ಲಿ ಬ್ರಹ್ಮನಿಗೆ ಅಲಂಕಾರದ ಸ್ಥಾನವಿರುತ್ತದೆ. ಮೊದಲಿಗೆ ಸಮಾಧಿ, ಅನಂತರ ಶಿವಾಲಯಗಳ ನಿರ್ಮಾಣ. ಅನಂತರ ವಿಷ್ಣು ಮತ್ತು ವಿಷ್ಣುವಿನ ನಾನಾ ಅವತಾರಗಳಿಗೆ ಸಂಬಂಧಿಸಿದ ದೇವಾಲಯಗಳು ನಿರ್ಮಾಣ ಆಗಿವೆ. ಇವು ಜನವಸತಿಯ ನಡುವೆ ಇದ್ದರೆ ಯಾವ ಅಭ್ಯಂತರವೂ ಇಲ್ಲ , ಬೌದ್ಧ ಸ್ತೂಪಗಳು ಮತ್ತು ಜೈನರ ನಿಸಿದಿಗಳು ಮತ್ತು ಬಸದಿಗಳೂ ಜನವಸತಿಗೆ ಸ್ವಲ್ಪ ದೂರದಲ್ಲೇ ನಿರ್ಮಾಣಗೊಂಡಿವೆ. ಭಾರತದಲ್ಲಿ ವೇದಕಾಲೀನ ಅಗ್ನಿದ್ರಿಯ1ಗಳನ್ನು ಹೊರತು ಪಡಿಸಿದರೆ ಪ್ರಾಚೀನ ದೇವಾಲಯ ಎಂದು ಸಿಗುವುದು ಬೌದ್ಧ  ಸ್ತೂಪಗಳು.
ವೇದಗಳ ಕಾಲದಲ್ಲಿ ಅಗ್ನಿದ್ರಿಯ ಎಂಬ ಸಮಾಧಿ ಮಂದಿರಗಳು ಇದ್ದವು ಎಂಬುದು ತಿಳಿದಿದೆ. ಅಗ್ನಿದ್ರಿಯಗಳ ಸ್ವರೂಪ ತಿಳಿದಿಲ್ಲ. ವೇದಗಳ ಕಾಲದಲ್ಲೇ ಇಂದ್ರ, ಅಗ್ನಿ , ಯಮ, ವರುಣ, ರುದ್ರ ಇತ್ಯಾದಿ ದೇವತೆಗಳನ್ನು ವಿಶೇಷವಾಗಿ ಆರಾಧಿಸಲಾಗುತ್ತಿದ್ದ ಸುಳಿವು ಸಿಕ್ಕರೂ, ಸಂಬಂಧಿಸಿದಂತೆ ಯಾವುದೇ ದೇವಾಲಯ ಉಳಿದಿಲ್ಲ. ಯಾಗ, ಯಜ್ಞ ಮತ್ತು ಇತರ ವೈದಿಕ ಆಚರಣೆಗಳ ಸಂದರ್ಭದಲ್ಲಿ ಮಾತ್ರ ವೈದಿಕ ದೇವತೆಗಳಿಗೆ ಪೂಜೆ ನಡೆಯುತ್ತಿತ್ತು ಎನ್ನಬಹುದು. ಬಹುತೇಕ ವೈದಿಕರಿಗೆ ದೇವತೆಯಾದ ರುದ್ರನು ಮಾತ್ರ ಅನಂತರವೂ ಮುಂದುವರಿದು, ಪ್ರತಿಮಾ ರೂಪ ಪಡೆದು ದೇವಾಲಯ ಗಳಲ್ಲಿ ಪ್ರತಿಷ್ಠಿತನಾಗಿರುವ ಸಾಧ್ಯತೆಗಳಿವೆ.
ತನ್ನ ಹುಟ್ಟಿಗೆ ಕಾರಣಳಾದ ತಾಯಿಯೂ ಮನುಷ್ಯನ ದೃಷ್ಟಿಗೆ ದೇವರಾಗಿದ್ದಾಳೆ. ಆ ಕಾರಣದಿಂದಲೇ ಲಜ್ಜಾಗೌರಿ, ಉಡಚವ್ವ, ಕಮಲವ್ವ ಎಂದು ಕರೆಯಲಾಗುವ ಕಬಂಧ ಯೋನಿ ಶಿಲ್ಪಗಳಿಗೂ ಪೂಜೆ ಸಲ್ಲುತ್ತದೆ. ಕರ್ನಾಟಕದಲ್ಲಿ ಇಂತಹ ಲಜ್ಜಾಗೌರಿಯ ಶಿಲ್ಪಗಳೂ ಪ್ರಾಚೀನ. ಈಗಿನ ಬಾಗಲಕೋಟೆ ಜಿಲ್ಲೆಯ ಸಿದ್ಧನಕೊಳ್ಳದ ಲಜ್ಜಾಗೌರಿಯು ಪೂಜೆಗೊಳ್ಳುತ್ತಾಳೆ. ಮಹಾಕೂಟದಲ್ಲೂ ಲಜ್ಜಾಗೌರಿಗೆ ಸ್ಥಾನವಿದೆ. ಬಳ್ಳಿಗಾವೆಯಲ್ಲೂ ಕಮಲವ್ವ ಇದ್ದಾಳೆ. ಮನುಷ್ಯ ತನ್ನ ಹುಟ್ಟಿನ ಸ್ಥಾನವಾದ ಯೋನಿಯನ್ನು ಪೂಜಿಸುವ ಕಲ್ಪನೆಯೇ ವಿಶೇಷ ಎನಿಸುತ್ತದೆ.
ಪಿತೃ ಮತ್ತು ಮಾತೃಪೂಜೆಗಳ ಮುಂದುವರಿಕೆಯಾಗಿ ದೇವರುಗಳ ಸೃಷ್ಟಿ ಮತ್ತು ಅವರ ಪೂಜೆ ಮುಂದುವರೆದಿದೆ. ದೇವರು ಎಂದು ಕಲ್ಪಿಸಿಕೊಳ್ಳಲಾದ ಮೂರ್ತಿಗೊಂದು ನೆಲೆಯಾದ ಮತ್ತು ಸಾರ್ವಜನಿಕ ಸಮಾವೇಶಕ್ಕೆ ಅವಕಾಶ ನೀಡಿದ ಸ್ಥಳವೇ ದೇವಾಲಯ.
ಕರ್ನಾಟಕದಲ್ಲಿಯೂ ಮಾತೃಪೂಜೆ, ಪಿತೃಪೂಜೆ ಮತ್ತು ಪ್ರಕೃತಿ ಪೂಜೆಗಳು ಪ್ರಾಚೀನ. ಈಗಾಗಲೇ ಹೇಳಿರುವಂತೆ ಬೃಹತ್ ಶಿಲಾಯುಗ ಅಥವಾ ಕಬ್ಬಿಣಯುಗದ ಕಲ್ಲಿನ ಕೋಣೆಯ ಸಮಾಧಿಗಳನ್ನು ಕೆಲವೆಡೆ ಪಾಂಡವರಗುಡಿ ಅಥವಾ ಮೋರಿಯರ ಮನೆಗಳು ಎಂದು ಕರೆಯಲಾಗಿದ್ದು , ಅವುಗಳಲ್ಲಿ ಕೆಲವು ಅನಂತರದ ಕಾಲದಲ್ಲಿ ನಿರ್ಮಿತ ದೇವಾಲಯಗಳಾಗಿ ರೂಪಾಂತರಗೊಂಡಿವೆ.
ಗುಲಬರ್ಗಾ ಜಿಲ್ಲೆಯ ಸನ್ನತಿಯಲ್ಲಿ ಕೆಲವು ವರ್ಷಗಳ ಹಿಂದೆ ನಡೆದ ಉತ್ಖನನದಲ್ಲಿ ಬೌದ್ಧಸ್ತೂಪವೊಂದು ಬೆಳಕಿಗೆ ಬಂದಿದೆ. ಹೆಚ್ಚಾಗಿ ಸುಣ್ಣದಕಲ್ಲನ್ನೇ ಬಳಸಿ ನಿರ್ಮಾಣ ಗೊಂಡಿರುವ ಈ ಸ್ತೂಪವು ಶಾತವಾಹನರ ಕಾಲದ್ದು ಎಂದು ಒಪ್ಪಿಕೊಳ್ಳಲಾಗಿದೆ. ಸನ್ನತಿಯಲ್ಲೇ ದೊರೆತಿರುವ ಅಶೋಕನ ನಾಲ್ಕು ಶಾಸನಗಳು ಮೌರ್ಯರ ಕಾಲದಲ್ಲಿ ಕರ್ನಾಟಕವು ಅವರ ಆಳ್ವಿಕೆಗೆ ಸೇರಿತ್ತು ಅಥವಾ ಅವರ ಗಡಿಭಾಗ ವಾಗಿತ್ತು ಎಂಬುದನ್ನು ಸೂಚಿಸುತ್ತವೆ. ಬೃಹತ್ ಶಿಲಾಯುಗಕ್ಕೆ ಹೊಂದಿಕೊಂಡ ಅನಂತರದ ಕಾಲವೇ ಇತಿಹಾಸಕಾಲ ಮತ್ತು ಅಲ್ಲಿ ಮೌರ್ಯರು ಮತ್ತು ಶಾತವಾಹನರು ಆಳುವ ವರ್ಗದಲ್ಲಿ ಕಾಣಿಸುತ್ತಾರೆ. ಆ ಹೊತ್ತಿಗೆ ಆಳುವ ಒಂದು ಪ್ರತ್ಯೇಕ ವರ್ಗ ಸ್ಪಷ್ಟವಾಗಿ ಅಸ್ತಿತ್ವಕ್ಕೆ ಬಂದಿತ್ತು. ಬನವಾಸಿಯಲ್ಲಿ ದೊರೆತಿರುವ ನಾಗ ಶಿಲ್ಪವು ಶಾತವಾಹನರ ಕಾಲದಲ್ಲಿ ನಾಗಮೂರ್ತಿಗೆ ಪೂಜೆ ಸಲ್ಲುತ್ತಿದ್ದ ಸುಳಿವು ನೀಡಿದೆ. ಆ ನಾಗಶಿಲ್ಪದ ಸುತ್ತಲೂ ಇರುವ ಬ್ರಾಹ್ಮೀಲಿಪಿ ಮತ್ತು ಪ್ರಾಕೃತಭಾಷೆಯ ಶಾಸನವು ಅದರ ಪ್ರಾಚೀನತೆಯ ದಾಖಲೆ ಯಾಗಿದೆ. ಬಹುತೇಕ ಇದೇ ಕಾಲಕ್ಕೆ ಸೇರಬಹುದಾದ ಬೌದ್ಧ ಸ್ತೂಪವೊಂದು ಇತ್ತೀಚೆಗೆ ಬೆಂಗಳೂರು ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ರಾಜಘಟ್ಟದಲ್ಲಿ ಪತ್ತೆಯಾಗಿದೆ. ಕರ್ನಾಟಕದ ದಕ್ಷಿಣ ಭಾಗದಿಂದ ಉತ್ತರ ಭಾಗದವರೆಗೆ ಬೌದ್ಧಧರ್ಮವು ಯಾವುದೋ ಒಂದು ಘಟ್ಟದಲ್ಲಿ ಅಸ್ತಿತ್ವದಲ್ಲಿತ್ತು. ಬೌದ್ಧ ಧರ್ಮವು ಗಂಗರಕಾಲದಲ್ಲೂ ದಕ್ಷಿಣ ಕರ್ನಾಟಕದಲ್ಲಿ ಅಸ್ತಿತ್ವದಲ್ಲಿತ್ತು ಎಂಬುದಕ್ಕೆ ಗಂಗರ ಕಾಲದ ಮೇಳೇಕೋಟೆ ತಾಮ್ರಶಾಸನದಲ್ಲಿದ್ದ ಸುಳಿವು ಮತ್ತು ಅದನ್ನು ಅನುಸರಿಸಿ ಈಚೆಗೆ ಗೌರಿಬಿದನೂರು ತಾಲ್ಲೂಕಿನ ಹರಳಕುಂಟೆಯಲ್ಲಿ ಪತ್ತೆ ಮಾಡಲಾದ ಸ್ತೂಪದ ಗುರುತುಗಳು ಸಾಕ್ಷಿಯಾಗಿವೆ.
ಸನ್ನತಿಯ ಬೌದ್ಧ ಸ್ತೂಪಗಳನ್ನು ಹೊರತುಪಡಿಸಿದರೆ ಕರ್ನಾಟಕದಲ್ಲಿ ನಿರ್ಮಾಣಗೊಂಡಿರುವ ದೇವಾಲಯಗಳಿಗೆ ಸಾಕ್ಷಿಯಾಗಿ ತಾಳಗುಂದದ ಪ್ರಣವೇಶ್ವರ ದೇವಾಲಯ ಇದೆ. ಇದನ್ನು ಸಮರ್ಥಿಸಲು ಯಾವುದೇ ಒಂದು ಸಮಕಾಲೀನ ದಾಖಲೆಗಳು ಇಲ್ಲವಾದರೂ ದೇವಾಲಯದ ಮುಂಭಾಗದಲ್ಲಿ ನೆಡಲಾಗಿರುವ ಕದಂಬ ಕಾಕುಸ್ಥವರ್ಮನ ಸ್ತಂಭಶಾಸನದಲ್ಲಿ `ಸುಕೃತಿಭಿರವನೀಶ್ವರೈರಾತ್ಮನಿಶ್ಶ್ರೇಯಸಂ ಪ್ರೇಪ್ಸುಭಿಸ್ಸಾತಕಣ್ರ್ಯಾ ಭಿಶ್ಶ್ರದ್ಧಯಾಭ್ಯರ್ಚಿತೇ ಇದಮುರುಸಲಿಲೋಪ ಯೋಗಾಶ್ರಯಂ ಭೂಪತಿಃ ಕಾರಯಾಮಾಸ ಕಾಕುಸ್ಥವರ್ಮಾ...' ಎಂಬ ಮಾತುಗಳು ಇರುವುದರಿಂದ ಕಾಕುಸ್ಥವರ್ಮನ ಕಾಲಕ್ಕಾಗಲೇ, ಶಾತಕರ್ಣಿ ಗಳಿಂದ ಅರ್ಚಿಸಲ್ಪಡುತ್ತಿದ್ದ ಮಹಾ ದೇವಸ್ಥಾನ ಕುಂದೂರಿನಲ್ಲಿ ಇತ್ತು ಎಂದು ಸ್ಪಷ್ಟವಾಗುತ್ತದೆ. ಕ್ರಿಸ್ತಶಕ ಸುಮಾರು 450ರ ಶಾಸನವು ತಾಳಗುಂದದ ಪ್ರಣವೇಶ್ವರನನ್ನು ಶಾತಕರ್ಣಿಗಳು ಪೂಜಿಸುತ್ತಿದ್ದರು ಎಂಬ ಸೂಚನೆ ನೀಡಿದೆ. ಕ್ರಿ.ಪೂ. 3ರಿಂದ ಕ್ರಿ.ಶ. 3ನೆಯ ಶತಮಾನದವರೆಗೂ ಆಳಿದ ಶಾತವಾಹನರ ಪೈಕಿ ಸಾತಕರ್ಣಿಯ ಕಾಲವನ್ನು ಕ್ರಿಸ್ತಶಕಾರಂಭಕ್ಕೆ ಸೇರಿಸಲಾಗಿದೆ. ಅಂದರೆ ಆ ಹೊತ್ತಿಗೆ ತಾಳಗುಂದದ ಪ್ರಣವೇಶ್ವರನಿಗೆ ಪೂಜೆ ಸಲ್ಲುತ್ತಿತ್ತು .
ಕ್ರಿ.ಶ. ಸು. 150ರ ಮಳವಳ್ಳಿ ಶಾಸನಗಳು ಮ¿ಪ¿Â ದೇವರನ್ನು ಉಲ್ಲೇಖಿಸಿವೆ. ಪ್ರಾಕೃತ ಭಾಷೆ ಮತ್ತು ಬ್ರಾಹ್ಮೀ ಲಿಪಿಯ ಎರಡೂ ಸ್ತಂಭ ಶಾಸನಗಳು ವೈಜಯಂತೀಪುರದ ರಾಜನಾದ ವಿಣ್ಹುಕಡ ಚುಟುಕುಲಾನಂದ ಶಾತಕರ್ಣಿಯು ಮ¿ಪ¿Âದೇವರ ಸೇವೆಗಾಗಿ ಕೊಂಡಮಾನ ಎಂಬುವವನಿಗೆ ನೀಡಿದ ಗ್ರಾಮದಾನವನ್ನು ಉಲ್ಲೇಖಿಸಿದೆ. ಆದರೆ ಶಾಸನದ ಉಲ್ಲೇಖವನ್ನು ಹೊರತುಪಡಿಸಿದರೆ ಮಳವಳ್ಳಿಯಲ್ಲಿ ಯಾವುದೇ ಪ್ರಾಚೀನ ದೇವಾಲಯದ ಗುರುತುಗಳಿಲ್ಲ.
ಕದಂಬರ ಕಾಲದಲ್ಲೂ ದೇವಾಲಯ ನಿರ್ಮಾಣಕಾರ್ಯ ಮುಂದುವರಿದಿದೆ. ಮಯೂರ ವರ್ಮನ ಚಂದ್ರವಳ್ಳಿ ಶಾಸನದಲ್ಲಿ ತಟಾಕದ ದುರಸ್ತಿಯ ಉಲ್ಲೇಖ ಮಾತ್ರ ಇದೆ. ಬನವಾಸಿಯ ಶಿವಸ್ಕಂದ ನಾಗಸಿರಿಯ ಶಾಸನವು ತಟಾಕದ ಜೊತೆಗೆ ವಿಹಾರ ಮತ್ತು ವಿಗ್ರಹಗಳ ನಿರ್ಮಾಣವನ್ನೂ ತಿಳಿಸಿರುವುದನ್ನು ಆಧರಿಸಿ, ಆ ಕಾಲಕ್ಕೆ ತಟಾಕ ಮತ್ತು ವಿಹಾರ ಅಥವಾ ದೇವಾಲಯಗಳ ನಿರ್ಮಾಣ ಒಟ್ಟಿಗೇ ಆಗುತ್ತಿತ್ತು ಎಂದು ಭಾವಿಸಿ, ಚಂದ್ರವಳ್ಳಿಯಲ್ಲೂ ಮಯೂರವರ್ಮನ ಕಾಲಕ್ಕೆ ಮೊದಲೇ ಅಥವಾ ಅವನ ಕಾಲದಲ್ಲಾದರೂ ಒಂದು ದೇವಾಲಯ ನಿರ್ಮಾಣ ಆಗಿರಬೇಕು ಎಂದು ಊಹಿಸಲಾಗಿದೆ. ಊಹೆಯನ್ನು ಸಮರ್ಥಿಸುವಂತೆ ಡಾ|| ಅ. ಸುಂದರ ಅವರು ಕ್ರಿ.ಶ. 3ನೆಯ ಶತಮಾನಕ್ಕೆ ಸೇರಬಹುದಾದ ಶಿವಲಿಂಗವನ್ನು ಚಂದ್ರವಳ್ಳಿಯಲ್ಲಿ ಪತ್ತೆಮಾಡಿದ್ದಾರೆ.
ಕದಂಬವಂಶದ ಮೃಗೇಶವರ್ಮನು ತನ್ನ ಆಳ್ವಿಕೆಯ ಎಂಟನೆಯ ವರ್ಷದಲ್ಲಿ ಶ್ರೀವಿಜಯ ಪಲಾಶಿಕೆಯಲ್ಲಿ , ಅಂದರೆ, ಈಗಿನ ಹಲಸಿಯಲ್ಲಿ ಯಾಪನೀಯ ನಿಗ್ರ್ರಂಥ ಕೂರ್ಚಕರಿಗೆ ಜಿನಾಲಯವನ್ನು ಕಟ್ಟಿಸಿಕೊಟ್ಟ ಉಲ್ಲೇಖ ಇದೆ. ಮೃಗೇಶವರ್ಮ ಅಧಿಕಾರ ವಹಿಸಿಕೊಂಡದ್ದು ಕ್ರಿ.ಶ. 455ರಲ್ಲಿ ಎಂದಾದರೆ, ಈ ಜಿನಾಲಯದ ನಿರ್ಮಾಣವಾಗಿರುವುದು ಕ್ರಿಸ್ತಶಕ 463ರಲ್ಲಿ ಎಂದು ಸ್ಪಷ್ಟವಾಗುತ್ತದೆ. ಅವನ ಮಗ ರವಿವರ್ಮನ ಕಾಲದಲ್ಲಿ ಗುಡ್ನಾಪುರದಲ್ಲಿ ಕಾಮಜಿನಾಲಯ ನಿರ್ಮಾಣ ಆಗಿದ್ದುದನ್ನು ಗುಡ್ನಾಪುರದ ಸ್ತಂಭಶಾಸನ ತಿಳಿಸಿದೆ. ಈ ದೇವಾಲಯದ ತಳಪಾಯದ ಭಾಗ ಮಾತ್ರ ಉತ್ಖನನದ ಸಂದರ್ಭದಲ್ಲಿ ಪತ್ತೆಯಾಗಿದೆ. ರವಿವರ್ಮನ ವೈದ್ಯನಾಗಿದ್ದ ನೀಲಕಂಠ ದೇಶಾಮಾತ್ಯನು ಬನವಾಸಿಯಲ್ಲಿ ಮಹಾದೇವಾಯತನವನ್ನು ನಿರ್ಮಿಸಿದ ವಿಚಾರವೂ ತಿಳಿದಿದೆ. ಕದಂಬರ ಕಾಲಕ್ಕೆ ದೇವಾಲಯ ನಿರ್ಮಾಣ ಪ್ರಕ್ರಿಯೆ ಕರ್ನಾಟಕದಲ್ಲಿ ಪ್ರಗತಿಯಲ್ಲಿತ್ತು. ಪಟ್ಟದಕಲ್ಲಿನಲ್ಲಿ ಭೂಶೋಧ ಮಾಡಿರುವ ಡಾ|| ಅ. ಸುಂದರ ಅವರು ಅಲ್ಲಿಯೂ ಬಾದಾಮಿ ಚಾಲುಕ್ಯರ ಕಾಲಕ್ಕೂ ಹಿಂದಿನ ಕಟ್ಟಡಗಳ, ಅದರಲ್ಲೂ ವಿಶೇಷವಾಗಿ ಇಟ್ಟಿಗೆ ಕಟ್ಟಡಗಳ ಅವಶೇಷಗಳನ್ನು ಪತ್ತೆ ಮಾಡಿದ್ದಾರೆ. ಚಾಲುಕ್ಯಪೂರ್ವಕಾಲದಲ್ಲೂ ದೇವಾಲಯಗಳ ನಿರ್ಮಾಣವಾಗುತ್ತಿತ್ತು ಮತ್ತು ಅದು ನಿರಂತರವಾಗಿ ಮುಂದುವರಿದಿದೆ ಎಂದು ಹೇಳಲು ಈಗ ಸಾಧ್ಯವಾಗಿದೆ.
ಕರ್ನಾಟಕದಲ್ಲಿ ನಮಗೆ ಕಾಣಸಿಗುವ ಪ್ರಾಚೀನ ದೇವಾಲಯಗಳು ಸಾಮಾನ್ಯವಾಗಿ ಶಿವಾಲಯಗಳು, ಇಲ್ಲವೇ ಬೌದ್ಧಸ್ತೂಪಗಳು ಮತ್ತು ಜೈನಬಸದಿಗಳು. ಶಿವಾಲಯಗಳಲ್ಲಿ ಪೂಜೆಗೊಳ್ಳುವುದು ಶಿವಲಿಂಗ; ಅದರ ಸ್ವರೂಪ ಮಾನವಾಕೃತಿ ಅಲ್ಲ , ಮೂರ್ತಿಪೂಜೆಯನ್ನು ನಿರಾಕರಿಸಿದ ಬುದ್ಧನನ್ನೂ ಅನಂತರದ ಬೌದ್ಧರು ಮೂರ್ತಿರೂಪದಲ್ಲೇ ಪೂಜಿಸಿದರು. ಜೈನಬಸದಿಗಳಲ್ಲಿ ತೀರ್ಥಂಕರನ ಸ್ಥಾನವು ವಿಶಿಷ್ಟವಾದುದು. ದೇವರ ಮೂರ್ತಿರೂಪದ ಬಗ್ಗೆ ಈ ಹಿನ್ನೆಲೆಯಲ್ಲಿ ಚರ್ಚಿಸುವುದು ಅವಶ್ಯಕ.
ಕರ್ನಾಟಕದಲ್ಲಿ ನಿರ್ಮಾಣಗೊಂಡ ಪ್ರಾಚೀನ ದೇವಾಲಯಗಳು ಈಗ ಮೂಲ ಸ್ವರೂಪದಲ್ಲಿ ಉಳಿದಿಲ್ಲ ; ನಾಶವಾಗಿವೆ ಅಥವಾ ಶಿಥಿಲಗೊಂಡು ಕೇವಲ ಗುರುತುಗಳಾಗಿ ಉಳಿದಿವೆ. ಶಾಸನೋಲ್ಲೇಖಗಳಿಂದ ಮತ್ತು ಉತ್ಖನನದ ಸಾಕ್ಷಿಗಳಿಂದಷ್ಟೇ ಈ ಪ್ರಾಚೀನ ದೇವಾಲಯಗಳ ಬಗ್ಗೆ ತಿಳಿಯಲು ಸಾಧ್ಯ. ಗಂಗರ ಶ್ರೀಪುರುಷನ ಕಾಲದ ಹೊನ್ನುಡಿಕೆಯ (ಒಂದು ಊರು) ಪೆÇನ್ನುಡಿಕೆ ಭಟರಕಿಯ ದೇವಾಲಯದ ಇಟ್ಟಿಗೆಯ ತಳಪಾಯದ ಗುರುತುಗಳು ಮಾತ್ರ ಸಿಕ್ಕಿವೆ. ಗಂಗರ ಪ್ರಾಚೀನ ದೇವಾಲಯಗಳ ತಳಪಾಯ ಎಂದರೆ ಅಧಿಷ್ಠಾನದ ಭಾಗ ಇಟ್ಟಿಗೆಯಿಂದ ನಿರ್ಮಾಣವಾಗುತ್ತಿತ್ತು ಎಂದು ಮಣ್ಣೆಯ ಕಪಿಲೇಶ್ವರ ದೇವಾಲಯದ ತಳಪಾಯ ಸ್ಪಷ್ಟಪಡಿಸಿದೆ. ಮಣ್ಣೆಯಲ್ಲಿ ಸೂರ್ಯ ದೇವಾಲಯವೊಂದು ಕ್ರಿಸ್ತಶಕ 801ರ ಜನವರಿ 25ರ ವೇಳೆಗೆ ನಿರ್ಮಾಣವಾಗಿತ್ತು. ಈಗ ಸೂರ್ಯನ ದೇವಸ್ಥಾನದ ಗುರುತುಗಳೂ ಇಲ್ಲ ; ಆದರೆ ಸೂರ್ಯನ ವಿಗ್ರಹ ದೊರೆತಿದೆ. ಅಲ್ಲೇ ಸೂರ್ಯದೇವಾಲಯದ ನಿರ್ಮಾಣದ ಹೊತ್ತಿಗೆ ಅಥವಾ ಅದಕ್ಕೆ ನಾಲ್ಕು ವರ್ಷಗಳ ಮೊದಲು ಕ್ರಿ.ಶ. 797ರ ಜನವರಿ 5ನೆಯ ತಾರೀಖಿನಂದು ಶ್ರೀವಿಜಯ ಎಂಬ ಅಧಿಕಾರಿ ಕಟ್ಟಿಸಿದ ಶ್ರೀವಿಜಯ ಜಿನಾಲಯದ ಪ್ರತಿಷ್ಠಾಪನೆ ಆಗಿತ್ತು. ಈ ಜಿನಾಲಯ ಈಗಲೂ ಜೀರ್ಣಾವಸ್ಥೆಯಲ್ಲಿ ಉಳಿದಿದೆ. ಇಟ್ಟಿಗೆಯ ತಳಪಾಯವೇ ಇದ್ದ ಈ ದೇವಾಲಯವು ಆರಂಭ ಕಾಲದಲ್ಲಿ ಕಟ್ಟಿದ ದೇವಾಲಯಗಳ ಪ್ರಾಚೀನ ಉದಾಹರಣೆಯಾಗಿದೆ.
ಕರ್ನಾಟಕದ ವಾಸ್ತುಶಿಲ್ಪದ ಅಧ್ಯಯನವನ್ನು ಸನ್ನತಿ, ತಾಳಗುಂದ, ರಾಜಘಟ್ಟ ಇತ್ಯಾದಿ ಸ್ಥಳಗಳಲ್ಲಿ ದೊರೆತಿರುವ ಪ್ರಾಚೀನಸ್ತೂಪ ಮತ್ತು ದೇವಾಲಯಗಳ ಮೂಲಕ ಆರಂಭಿಸ ಬಹುದಾದರೂ, ಇಲ್ಲಿನ ವಾಸ್ತುಗಳ ಬಗ್ಗೆ ಇನ್ನೂ ಅಧಿಕೃತ ಎನ್ನಬಹುದಾದ ವರದಿಗಳು ಲಭ್ಯವಿಲ್ಲವಾದ್ದರಿಂದ ಬಾದಾಮಿ, ಐಹೊಳೆ ಮತ್ತು ಪಟ್ಟದಕಲ್ಲುಗಳಿಂದಲೇ ಅಧ್ಯಯನವನ್ನು ಆರಂಭಿಸಬೇಕಾಗುತ್ತದೆ. ಬಾದಾಮಿಯು ಗುಹಾಲಯಗಳಿಗೆ ಪ್ರಸಿದ್ಧವಾದರೆ, ಐಹೊಳೆಯು ಕಟ್ಟಣೆದೇವಾಲಯಗಳಿಗೆ ಮತ್ತು ಪಟ್ಟದಕಲ್ಲು ದೇವಾಲಯ ಸಮುಚ್ಚಯಗಳ ವಿಕಾಸಕ್ಕೆ ಮಹತ್ವದ ಉದಾಹರಣೆಗಳಾಗಿವೆ.
ಐಹೊಳೆಯಲ್ಲಿ ಹೆಚ್ಚಾಗಿರುವುದು ದೇವಾಲಯ ಸಮುಚ್ಚಯಗಳು. ಅವುಗಳಿಗೂ ಮೊದಲಿನ ಕೆಲವು ಗುಹಾಲಯಗಳೂ ಐಹೊಳೆಯಲ್ಲಿವೆ. ಅವುಗಳಲ್ಲಿ ಜೈನಗುಹೆಯು ನೆಲಮಟ್ಟದಲ್ಲೇ ಇದೆ. ರಾವಳಫಡಿಯು ಎತ್ತರದ ಸ್ಥಳದಲ್ಲಿದೆ. ಮೀನಬಸದಿ ಎಂದೂ ಕರೆಯಲಾಗುವ ಜೈನಬಸದಿಯಲ್ಲಿ ಒಂದು ಗರ್ಭಗೃಹ ಮತ್ತು ಎರಡೂ ಬದಿಯಲ್ಲಿ ಒಂದೊಂದು ಕೊಠಡಿ ಇರುವ ಒಂದು ಹಜಾರವಿದೆ. ಗರ್ಭಗೃಹವನ್ನು ಕೊರೆದು ಮಾಡಲಾಗಿದೆ. ಆದರೂ ಹೊರಭಾಗ, ಅದರಲ್ಲೂ ವಿಶೇಷವಾಗಿ ಹಜಾರದ ಮುಂಭಾಗ ದಲ್ಲಿರುವ ಗೋಡೆಯು ಕಟ್ಟಣೆಯದು. ಹಜಾರದ ಎಡ ಮತ್ತು ಬಲಭಾಗಗಳಲ್ಲಿ ಕ್ರಮವಾಗಿ ಬಾಹುಬಲಿ ಮತ್ತು ಸುಪಾಶ್ರ್ವನಾಥರ ಕಾಯೋತ್ಸರ್ಗ ಭಂಗಿಯ ಶಿಲ್ಪಗಳಿವೆ. ಗರ್ಭಗೃಹದ ಮಧ್ಯೆ ಇರುವ ಸಿಂಹಪೀಠದ ಮೇಲೆ ಪದ್ಮಾಸನ ಮುದ್ರೆಯಲ್ಲಿ ಕುಳಿತಿರುವ ಮಹಾವೀರನ ಶಿಲ್ಪ ಇದೆ. ಇಲ್ಲಿನ ಶಿಲ್ಪಗಳು ಮತ್ತು ಹಜಾರದಲ್ಲಿನ ಕಂಬಗಳು ಹಾಗೂ ನೆಲಮಟ್ಟದಿಂದ ಏರುವ ಗರ್ಭಗೃಹ ಇತ್ಯಾದಿಗಳು ಗುಹಾದೇವಾಲಯಗಳ ಬೆಳವಣಿಗೆಯ ಹಂತವನ್ನು ಗುರುತಿಸಲು ನೆರವಾಗಿವೆ. ಇಲ್ಲಿನ ಬಾಹುಬಲಿಯ ಮೂರ್ತಿಗೆ ನೀಳವಾದ ಕೇಶ ಇರುವುದು ಒಂದು ವಿಶೇಷ. ಆ ಕಾರಣ ಈ ಗುಹೆಯು ಕಾಲದ ದೃಷ್ಟಿಯಿಂದ ಬಾದಾಮಿಯ ಗುಹಾಲಯಗಳಿಗಿಂತ ಹಿಂದಿನದು ಎಂಬುದು ಕೆಲವು ವಿದ್ವಾಂಸರ ಅಭಿಪ್ರಾಯ. ಇದರ ಕಾಲವನ್ನು ಕ್ರಿ. ಶ. ಸು. 6ನೆಯ ಶತಮಾನ ಎಂದು ತಿಳಿಯಲಾಗಿದೆ. ಇನ್ನೂ ಸ್ಪಷ್ಟಪಡಿಸಬೇಕೆಂದರೆ, ಈ ಗುಹಾಲಯವು ಆರನೆಯ ಶತಮಾನದ ಆರಂಭ ಕಾಲಕ್ಕೆ ಸೇರುತ್ತದೆ.
ಐಹೊಳೆಯಲ್ಲೇ ಇರುವ ರಾವಳಫಡಿ ಗುಹೆಯು ಸ್ವಲ್ಪ ಎತ್ತರದಲ್ಲಿ ಕೊರೆದು ಮಾಡಲಾಗಿರುವ ಗುಹೆ. ಶೈವ ಪರವಾದ ಈ ಗುಹೆಯು ಸಾಕಷ್ಟು ಪೂರ್ವಸಿದ್ಧತೆ ಯೊಂದಿಗೆ ನಿರ್ಮಾಣವಾಗಿದೆ. ಗರ್ಭಗೃಹ, ಸುಕನಾಸಿ ಮತ್ತು ಎರಡೂ ಬದಿಗಳಲ್ಲಿ ತಲಾ ಒಂದೊಂದು ಕೋಷ್ಠಗಳಿರುವ ಹಜಾರದ ರಾವಳಫಡಿಯು ಬೌದ್ಧ ಸ್ತೂಪದ ಮಾದರಿಯಿಂದ ಪ್ರೇರಣೆ ಪಡೆದಿದೆ ಎಂಬ ಅಭಿಪ್ರಾಯ ಡಾ|| ಬಾ. ರಾ. ಗೋಪಾಲ್ ಅವರದು. ಸುಮಾರು 30 ಅಡಿ ಉದ್ದ , 20 ಅಡಿ ಅಗಲ ಮತ್ತು 10 ಅಡಿ ಎತ್ತರ ಇರುವ ಈ ಗುಹೆಯಲ್ಲಿ ಪರಿಪೂರ್ಣತೆಯನ್ನು ಕಾಣಲು ಸಾಧ್ಯವಾಗಿದೆ. ದೇವಾಲಯದ ಮುಂಭಾಗದಲ್ಲಿ ಎರಡೂ ಪಾಶ್ರ್ವಗಳಲ್ಲಿರುವ ಶಂಖನಿಧಿ ಮತ್ತು ಪದ್ಮನಿಧಿಗಳ ಶಿಲ್ಪಗಳಿಂದ ಆರಂಭಿಸಿ ಗರ್ಭಗೃಹದೊಳಗಿನ ಲಿಂಗದವರೆಗೆ ಎಲ್ಲ ರಚನೆಯಲ್ಲೂ ಶಿಲ್ಪಿ ತನ್ನ ಕಲ್ಪನೆಯನ್ನು ಸಾಕಾರಗೊಳಿಸಲು ಪ್ರಯತ್ನಿಸಿರುವುದು ಗೋಚರವಾಗುತ್ತದೆ. ಗರ್ಭಗೃಹ ಮತ್ತು ಹಜಾರದ ಎರಡೂ ದೇವಕೋಷ್ಠಗಳು ಅನಂತರದ ತ್ರಿಕೂಟ ದೇವಾಲಯದ  ಬೆಳವಣಿಗೆಗೆ ಅವಕಾಶ ಕಲ್ಪಿಸಿರುವ ಸಾಧ್ಯತೆಗಳಿವೆ. ರಾವಳಫಡಿಯ ಹಜಾರದ ಎರಡೂ ಬದಿಗಳಲ್ಲಿ ಕೆತ್ತಲಾಗಿರುವ ಶಿಲ್ಪಗಳು ಶಿಲ್ಪಕಲೆಯ ಬೆಳವಣಿಗೆಯ ಹಂತವನ್ನು ಮಾತ್ರವಲ್ಲದೆ, ವಾಸ್ತುಶಿಲ್ಪದಲ್ಲಿ ಶಿಲ್ಪಗಳ ಸ್ಥಾನಮಾನಗಳ ಅಧ್ಯಯನಕ್ಕೆ ಅವಕಾಶ ಕಲ್ಪಿಸಿವೆ.
ನೆಲಮಟ್ಟದಲ್ಲೇ ಇರುವ ಜೈನಗುಹೆ ಮತ್ತು ಸ್ವಲ್ಪ ಎತ್ತರಕ್ಕೇರಿದ ಮತ್ತು ಹಜಾರದಲ್ಲಿ ಮೆಟ್ಟಿಲುಗಳೂ ಇರುವ ರಾವಳಫಡಿಗಳು ಗುಹಾವಾಸ್ತು ಮಾತ್ರವಲ್ಲದೆ, ಶಿಲ್ಪಕಲೆಯ ಪ್ರಯೋಗಶಾಲೆಗಳಾಗಿ ಮಹತ್ವ ಪಡೆದಿವೆ.
ನಿರ್ಮಾಣದ ಕಾಲದ ದೃಷ್ಟಿಯಿಂದ ಐಹೊಳೆಯ ಅನಂತರದ ಕಾಲಕ್ಕೆ ಬಾದಾಮಿಯ ಗುಹಾಲಯಗಳು ಸೇರುತ್ತವೆ. ಬಾದಾಮಿಯು ಗುಹಾ ದೇವಾಲಯಗಳಿಗೆ ಪ್ರಸಿದ್ಧವಾಗಿದೆ. ಇಲ್ಲಿ ಬಂಡೆಗಳನ್ನು ಕೊರೆದು ಮಾಡಿದ ಗುಹೆಗಳೇ ದೇವಾಲಯಗಳಾಗಿ ಮಾರ್ಪಟ್ಟಿವೆ. ಇಲ್ಲಿರುವ ನಾಲ್ಕು ಗುಹೆಗಳಲ್ಲಿ ಮೊದಲನೆಯದು ಶಿವಪರವಾಗಿಯೂ, ಎರಡು ಮತ್ತು ಮೂರನೆಯ ಗುಹೆಗಳು ವಿಷ್ಣುಪರವಾಗಿಯೂ, ನಾಲ್ಕನೆಯ ಗುಹೆಯು ಜಿನಪರವಾಗಿಯೂ ಇವೆ.ಇವುಗಳ ಪೈಕಿ ಮೂರನೆಯ ಗುಹೆಯ ನಿರ್ಮಾಣದ ಕಾಲ ತಿಳಿದಿದೆ. ಅದು ಕ್ರಿ. ಶ. 578. ಅದು ಮಂಗಳೇಶನು ತನ್ನ ಅಣ್ಣ ಕೀರ್ತಿವರ್ಮನಿಗಾಗಿ ನಿರ್ಮಿಸಿದ ವೈಷ್ಣವ ಗುಹೆ. ಮೂರನೆಯ ಗುಹೆಯ ನಿರ್ಮಾಣವನ್ನು ಕುರಿತ ಶಾಸನದ ಹಿನ್ನೆಲೆಯಲ್ಲಿ ಒಂದನೆಯ, ಅಂದರೆ ಶೈವ ಗುಹೆಯು ಮೊದಲನೆಯ ಗುಹೆ ಎಂದು ಒಪ್ಪಿಕೊಳ್ಳಬಹುದು. ಅದರ ಕಾಲ ಕ್ರಿ. ಶ. ಸು. 500 ಎಂದು ಊಹಿಸಿಕೊಳ್ಳಬಹುದು. ಈ ಬಗ್ಗೆ ಭಿನ್ನಾಭಿಪ್ರಾಯಗಳಿವೆ. ಮೊದಲನೆಯ ಗುಹೆಯು ಮೂರನೆಯ ಗುಹೆಯ ಅನಂತರದ ನಿರ್ಮಾಣ ಎಂಬ ಅಭಿಪ್ರಾಯವೂ ಇದೆ. ವಾಸ್ತುಶಿಲ್ಪ , ಮೂರ್ತಿಶಿಲ್ಪಗಳ ಲಕ್ಷಣಗಳು ಮತ್ತು ಗುಹೆಯಿಂದ ಗುಹೆಗೆ ಕಂಡುಬರುವ ಬೆಳವಣಿಗೆಯನ್ನು ಗಮನಿಸಿದರೆ, ಮೊದಲು ಒಂದನೆಯ ಗುಹೆ ಮತ್ತು ಕೊನೆಗೆ ನಾಲ್ಕನೆಯ ಗುಹೆ ನಿರ್ಮಾಣವಾಗಿವೆ ಎಂದು ತಿಳಿಯಬಹುದು. ಇವೆಲ್ಲವೂ ಕೊರೆದು ಮಾಡಿದ ಗುಹೆಗಳು. ಬಂಡೆಗಳನ್ನು ಕಷ್ಟಪಟ್ಟು ಕೊರೆದು, ಅವುಗಳಲ್ಲಿ ದೇವತೆಗಳ ಶಿಲ್ಪಗಳನ್ನು ಕೆತ್ತಿ ಪೂಜಾಗೃಹವನ್ನಾಗಿ ಮಾಡುವ ಅವಶ್ಯಕತೆ ಏನಿತ್ತು ಎಂಬ ಪ್ರಶ್ನೆ ಯಾರನ್ನಾದರೂ ಕಾಡಬಹುದು. ಪೂಜಾಗೃಹವೆಂದರೆ ಕೇವಲ ಗರ್ಭಗೃಹ. ಗರ್ಭಗೃಹದಲ್ಲಿ ಯಾವುದೇ ಅಲಂಕರಣ ಇರುವುದಿಲ್ಲ. ಅಲ್ಲಿನ ಭಿತ್ತಿ (ಗೋಡೆ)ಗಳಿಗೆ ಕಿಟಕಿಯೂ ಇರುವುದಿಲ್ಲ. ದೇವಾಲಯದಲ್ಲಿ ಅಲಂಕರಣ ಏನಿದ್ದರೂ ಅದು ನವರಂಗ, ಮುಖಮಂಟಪ ಮತ್ತು ಹೊರಭಿತ್ತಿಗಳಲ್ಲಿ ಮಾತ್ರ. ಕೆಲವು ಕಂಬಗಳಿಗೆ ಮಾತ್ರ ಅಲಂಕರಣದ ಅವಕಾಶ ಇರುತ್ತದೆ. ಈ ಹಿನ್ನೆಲೆಯಲ್ಲಿ ಐಹೊಳೆಯ ಮತ್ತು ಬಾದಾಮಿಯ ಗುಹಾಲಯಗಳು ಬಹಳ ಮುಂದುವರಿದ ಸ್ಥಿತಿಯಲ್ಲಿದ್ದವು. ಎರಡೂ ಸ್ಥಳಗಳ ಗುಹಾಲಯಗಳಲ್ಲಿ ಗರ್ಭ ಗೃಹವು ಮಾಮೂಲಿನಂತೆ ನಿರಾಡಂಬರವಾಗಿದ್ದು ಪೂಜಾಮೂರ್ತಿಯು ಶಿವಲಿಂಗ ಅಥವಾ ಜಿನಮೂರ್ತಿ ಆಗಿರುವುದನ್ನು ಕಾಣುತ್ತೇವೆ. ಆದರೆ, ಹಜಾರ ಅಥವಾ ಪಡಸಾಲೆ ಅಥವಾ ಮುಖಮಂಟಪ ಎಂದು ಕರೆಯಲಾಗುವ ಭಾಗದ ಕಂಬಗಳು, ಕಂಬದ ಮೇಲಿನ ಬೋದಿಗೆಗಳು, ಬೋದಿಗೆಗಳಿಗೆ ಹೊಂದಿ ಕೊಂಡ ಮದನಿಕಾ ಅಥವಾ ಮಿಥುನ ಶಿಲ್ಪಗಳು ಮತ್ತು ಕಂಬದ ಮೇಲೆ, ಒಳಭಿತ್ತಿಯ ವಿವಿಧ ಭಾಗಗಳಲ್ಲಿ ಕೆತ್ತಲಾಗಿರುವ ದೇವತಾ ಶಿಲ್ಪಗಳು, ದೇವಾಲಯದ ಹೊರಗೆ ಅಧಿಷ್ಠಾನದ ಪಟ್ಟಿಕೆಗಳಲ್ಲಿನ ಅಲಂಕರಣ ಶಿಲ್ಪಗಳು ಇತ್ಯಾದಿಗಳನ್ನು ಕಂಡಾಗ ಆರನೆಯ ಶತಮಾನದ ಕೊನೆಯ ಭಾಗದ ಹೊತ್ತಿಗೆ ಬಾದಾಮಿ ಚಾಲುಕ್ಯ ಶಿಲ್ಪಿಗಳು ವಾಸ್ತು ಮತ್ತು ಮೂರ್ತಿಶಿಲ್ಪ ಕಲೆಯಲ್ಲಿ ಸಾಧಿಸಿದ್ದ ಅದ್ಭುತ ಪ್ರಗತಿಯನ್ನು ಗುರುತಿಸಬಹುದು.
ಐಹೊಳೆಯ ಗುಹಾಲಯಗಳು ವಿಸ್ತೀರ್ಣದಲ್ಲಿ ಚಿಕ್ಕವು. ಬಾದಾಮಿಯ ಗುಹೆಗಳ ವಿಸ್ತಾರ ಹೆಚ್ಚಾದರೆ, ವಿನ್ಯಾಸಮಾತ್ರ ಒಂದೇ. ಗರ್ಭಗೃಹ, ವಿಶಾಲವಾದ ಮಂಟಪ ಮತ್ತು ಆಯತಾಕಾರದ ಮುಖಮಂಟಪಗಳು ಎಲ್ಲ ಗುಹಾಲಯಗಳ ಪ್ರಧಾನ ಭಾಗಗಳು. ಗುಹಾಲಯಗಳ ಬೆಳವಣಿಗೆಗೆ ಈ ವಿಸ್ತಾರವೂ ಸಾಕ್ಷಿಯಾಗಿದೆ. ಬಾದಾಮಿಯ ಮೊದಲ ಶೈವಗುಹೆಯ ಆರಂಭದಲ್ಲೇ ಇರುವ ಹದಿನೆಂಟು ಕೈಗಳ ಮಹಾನಟನ ಶಿಲ್ಪವು ಅತ್ಯಂತ ವಿಶಿಷ್ಟವಾದುದು. ಐಹೊಳೆಯ ಗುಹಾಲಯಗಳಲ್ಲಿನ ಶಿಲ್ಪಗಳಲ್ಲಿ ಬಾಹುಬಲಿ ಮೂರ್ತಿಯ ವಿನಾ ಉಳಿದ ಯಾವುದೇ ಮೂರ್ತಿಯಲ್ಲಿ ಹೆಚ್ಚಿನ ವೈಶಿಷ್ಟ್ಯವನ್ನೇನೂ ಕಾಣಲು ಸಾಧ್ಯವಿಲ್ಲವಾದರೂ, ಅಲ್ಲಿನ ನಟರಾಜ ಮತ್ತು ಸಪ್ತಮಾತೃಕೆಯರ ಶಿಲ್ಪಗಳಲ್ಲಿನ ಭಾವಾಭಿವ್ಯಕ್ತಿ ವಿಸ್ಮಯಗೊಳಿಸುತ್ತದೆ. ಆ ಭಾವ ಮತ್ತು ಭಂಗಿಗಳೇ ಅಲ್ಲಿನ ಶಿಲ್ಪಗಳ ವೈಶಿಷ್ಟ್ಯ. ಬಾದಾಮಿಯ ಗುಹೆಗಳಲ್ಲಿ ಮಹಾನಟ ಶಿಲ್ಪದ ವಿನಾ ಮತ್ತಾವ ಮೂರ್ತಿಶಿಲ್ಪವೂ ಐಹೊಳೆಯ ಮೂರ್ತಿಶಿಲ್ಪಗಳಷ್ಟು ವಿಶಿಷ್ಟ ಎನಿಸುವುದಿಲ್ಲ. ಬಾದಾಮಿಯ ಶೈವಗುಹೆಯಲ್ಲಿ ಅರ್ಧನಾರೀಶ್ವರ, ಮಹಿಷಾಸುರ ಮರ್ದಿನಿ, ಕಾರ್ತಿಕೇಯ, ಗಣೇಶ ಮತ್ತು ಹರಿಹರ ಶಿಲ್ಪಗಳಿವೆ. ಮೊದಲಿಗೆ ಲಿಂಗ ಸ್ವರೂಪದಲ್ಲಿ ಮಾತ್ರ ಅಣಿಗೊಂಡು, ಶಿವಪೂಜೆಗಷ್ಟೇ ಮೀಸಲಾಗಿತ್ತು. ಅನಂತರದ ಕಾಲದಲ್ಲಿ ಅರ್ಧನಾರೀಶ್ವರ (ಪ್ರಕೃತಿ ಮತ್ತು ಪುರುಷ), ಹರಿಹರ (ಸ್ಥಿತಿ ಮತ್ತು ಲಯ)ನಾಗಿ ಕಾಣಿಸಿ ಕೊಂಡಿದ್ದಾನೆ. ಆದರೆ ಈ ಮೂರ್ತಿಗಳು ಪೂಜೆಗೆಂದಲ್ಲ. ಎರಡನೆಯ ವೈಷ್ಣವ ಗುಹೆಯಲ್ಲಿನ ಭೂವರಾಹ, ತ್ರಿವಿಕ್ರಮ, ಹೆಚ್ಚು ವಿಸ್ತಾರವಾದ ಮೂರನೆಯ ವೈಷ್ಣವ ಗುಹೆಯೊಳಗಿನ ಅಷ್ಟಭುಜ ಅನಂತಾಸೀನ ವಿಷ್ಣು , ನರಸಿಂಹ ಇತ್ಯಾದಿ ಶಿಲ್ಪಗಳು, ಗುಹಾಲಯಗಳು ಕೇವಲ ದೇವರ ನೆಲೆಗಳಾಗಿ ಮಾತ್ರವಲ್ಲದೆ, ಮನುಷ್ಯನ ಸೃಜನಶೀಲ ಮನಸ್ಸು ಮತ್ತು ಕೈಗಳ ಕರ್ತೃತ್ವ ಶಕ್ತಿಯ ಪ್ರದರ್ಶನ ಕೇಂದ್ರಗಳಾಗಿಯೂ ಬೆಳೆದಿವೆ ಎಂದು ಖಚಿತಪಡಿಸುತ್ತವೆ. ಅಲ್ಲಿಯ ಮದನಿಕಾ ವಿಗ್ರಹಗಳು ಆ ಹೊತ್ತಿಗಾಗಲೇ ಶಿಲ್ಪಿಗಳ ಪ್ರತಿಭೆ ಮತ್ತು ಪ್ರೌಢಿಮೆಗಳ ಸಾಕ್ಷಿಗಳಾಗಿವೆ.
ಮೊದಲಿಗೆ ಮನುಷ್ಯನ ವಾಸಸ್ಥಾನಗಳಾಗಿದ್ದ ಗುಹೆಗಳು, ಮೃತರ ನೆಲೆಗಳಾಗಿ ಭಯ ಮತ್ತು ಗೌರವಗಳ ಕಾರಣದಿಂದ ಸಮಾಧಿ/ಚಿತಿಯ ಸ್ವರೂಪ ಪಡೆದು ಪಿತೃಪೂಜೆಯ ಸ್ಥಾನಗಳಾಗಿ ಮಹತ್ವ ಪಡೆದಾಗ, ಆ ಪಿತೃಗಳೇ ದೇವತೆಗಳಾಗಿ ಪರಿವರ್ತಿತರಾದಾಗ, ಗುಹೆಗಳಲ್ಲಿ ತಮ್ಮ ಕಲ್ಪನೆಯನ್ನು ವರ್ಣಚಿತ್ರಗಳ ಮೂಲಕ ಅಭಿವ್ಯಕ್ತಿಸುತ್ತಿದ್ದ ಕ್ರಮವು ಅನಂತರ ಪರಿಷ್ಕಾರಗೊಂಡು ದೇವತೆಗಳ, ಸಮಕಾಲೀನ ವ್ಯಕ್ತಿಗಳ ಮತ್ತು ತಮ್ಮ ಕಲ್ಪನೆಯ ಪಾತ್ರಗಳನ್ನು ಶಿಲ್ಪಗಳ ಮೂಲಕ ಅಭಿವ್ಯಕ್ತಿಗೊಳಿಸುವುದರಲ್ಲಿ ಮುಂದುವರಿದಿವೆ ಎಂದು ಭಾವಿಸ ಬಹುದಾಗಿದೆ. ಈ ಕಾರಣದಿಂದಲೇ ಅಧಿಷ್ಠಾನ ಅಥವಾ ಗೂಡುಗಳ ಕೆಳಗಿನ ಪಟ್ಟಿಕೆಗಳಲ್ಲಿ ಕುಬ್ಜರು ಮತ್ತು ಕಂಬಗಳ ಮೇಲಿನ ಪಟ್ಟಿಕೆ ಗಳಲ್ಲಿ ಅಲಂಕರಣ ಶಿಲ್ಪಗಳು ಸ್ಥಾನ ಪಡೆದಿರುವ ಸಾಧ್ಯತೆಗಳಿವೆ. ಇನ್ನೂ ಹೆಚ್ಚಿನ ಆಕರ್ಷಣೆ ಮತ್ತು ಬಹುತೇಕ ಕಂಬಗಳಿಗೂ ಬೋದಿಗೆಗಳಿಗೂ ನಡುವಿನ ಜಾಗ ಸದುಪಯೋಗ ಆಗಲಿ ಎಂಬ ಕಾರಣದಿಂದ ದಂಪತಿ ಶಿಲ್ಪಗಳು ಅವಕಾಶ ಪಡೆದಿವೆ.
ಬಾದಾಮಿಯಲ್ಲಿ ಎರಡನೆಯ ಮತ್ತು ಮೂರನೆಯ ಗುಹೆಗಳ ನಡುವೆ ಒಂದು ಸ್ವಾಭಾವಿಕ ಗುಹೆ ಇದೆ. ಇದನ್ನು ಬೌದ್ಧ ಗುಹೆ ಎಂದು ಕರೆಯಲಾಗುತ್ತಿದೆ. ಇಲ್ಲಿ ರಾಜೋಚಿತ ಉಡುಪುಗಳನ್ನು ಧರಿಸಿರುವ ಪದ್ಮಪಾಣಿ ಬುದ್ಧನ ಶಿಲ್ಪ ಇದೆ. ಭಗ್ನವಾಗಿರುವ ಮೂರ್ತಿಯ ಎಡ ಮತ್ತು ಬಲಬದಿಗಳಲ್ಲಿ ಕೈಮುಗಿದು ಕುಳಿತಿರುವ ಬೌದ್ಧ ಭಿಕ್ಷುಗಳ ಶಿಲ್ಪಗಳಿವೆ. ಬಾದಾಮಿಯ ಗುಹಾಲಯಗಳ ಕಾಲ ಕ್ರಿ. ಶ. ಸು. 500ರಿಂದ 600 ಎಂದು ಭಾವಿಸುವುದಾದರೆ, ಅದಕ್ಕೂ ಮೊದಲಿನ ಐಹೊಳೆಯ ಗುಹಾಲಯಗಳ ಕಾಲ ಕ್ರಿ. ಶ. ಸುಮಾರು ಐದನೆಯ ಶತಮಾನದ ಪೂರ್ವಾರ್ಧ ಎಂದು ಒಪ್ಪುವುದಾದರೆ, ಅದಕ್ಕೂ ಮೊದಲೇ ತಾಳಗುಂದದಲ್ಲಿ ದೇವಾಲಯ ಮತ್ತು ಸನ್ನತಿ, ರಾಜಾನುಕುಂಟೆ, ಹರಳಕುಂಟೆಗಳಲ್ಲಿ ಸ್ತೂಪಗಳಿದ್ದ ಗುರುತುಗಳು ಸಿಕ್ಕಿರುವುದರಿಂದ ಮಾತ್ರವಲ್ಲದೆ, ಸನ್ನತಿಯ ಸ್ತೂಪವು ಅನೇಕ ಕಾರಣಗಳಿಂದ ವಿಶಿಷ್ಟವೂ ಆಗಿರುವುದರಿಂದ ಕರ್ನಾಟಕದಲ್ಲಿ ಗುಹಾಲಯಗಳಿಗಿಂತ ಮೊದಲೇ ಕಟ್ಟಿದ ದೇವಾಲಯಗಳು ಅಸ್ತಿತ್ವದಲ್ಲಿದ್ದವು ಎಂದು ಒಪ್ಪಬೇಕಾಗುತ್ತದೆ.
ಬಾದಾಮಿಯ ಆರಂಭ ಕಾಲದ ವಾಸ್ತುಶಿಲ್ಪಗಳನ್ನು ಕುರಿತು ಚರ್ಚಿಸುವಾಗ ಸಾಮಾನ್ಯವಾಗಿ ತಪ್ಪದೆ ಎದುರಾಗುವ ಪ್ರಶ್ನೆ ಎಂದರೆ ಬಾದಾಮಿಯ ಚಾಲುಕ್ಯರು ಮತ್ತು ಪಲ್ಲವ ಅದರಲ್ಲೂ ವಿಶೇಷವಾಗಿ ವಿಚಿತ್ರಚಿತ್ತ ಎಂಬ ಬಿರುದು ಪಡೆದಿದ್ದ ನರಸಿಂಹವರ್ಮನ ಮಗ ಮಹಾಮಲ್ಲ (ಮಾಮಲ್ಲ ) ಎನಿಸಿಕೊಂಡ ಮೊದಲನೆಯ ನರಸಿಂಹ ವರ್ಮ (ಕ್ರಿ.ಶ. 630-668) ನಿರ್ಮಿಸಿರುವ ಮಾಮಲ್ಲಪುರಂನ ರಥಗಳು. ಹಿಂದಿನ ಮಾಮಲ್ಲಪುರಂ ಈಗಿನ ಮಹಾಬಲಿಪುರ. ಸಮುದ್ರತೀರದಲ್ಲಿರುವ ಮಹಾಬಲಿಪುರಂನಲ್ಲಿ ಒಂದೇ ಕಲ್ಲಿನಲ್ಲಿ ಕೆತ್ತಿ ಮಾಡಲಾಗಿರುವ ದೇವಾಲಯಗಳಿವೆ. ಇವುಗಳನ್ನು ರಥಗಳು ಎಂದು ಕರೆಯಲಾಗಿದೆ. ರಥ ಎಂದರೆ ವಾಹನ. ಮಾಮಲ್ಲಪುರಂನಲ್ಲಿ ನಿರ್ಮಾಣಗೊಂಡಿರುವ ರಥಗಳನ್ನು ಧರ್ಮರಾಜರಥ, ಭೀಮರಥ, ಅರ್ಜುನರಥ, ದ್ರೌಪದೀರಥ ಮತ್ತು ನಕುಲ-ಸಹದೇವರಥ ಎಂದು ಕರೆಯಲಾಗುತ್ತದೆ. ಇವೆಲ್ಲವೂ ಪ್ರತ್ಯೇಕವಾಗಿ ಒಂದೊಂದು ಕಲ್ಲನ್ನು ಕೆತ್ತಿ ಮಾಡಿದ ದೇವಾಲಯಗಳು. ಧರ್ಮರಾಜರಥದ ತಳ ಆಯತಾಕಾರವಾಗಿದ್ದು , ಮೇಲ್ಭಾಗ ಪಿರಮಿಡ್ ಆಕೃತಿಯನ್ನು (ಚೌಕಾಕೃತಿಯಿಂದ ಉನ್ನತಿಯಿರುವ) ಹೋಲುತ್ತದೆ. ಇಲ್ಲಿನ ಮೂರ್ತಿಶಿಲ್ಪಗಳು ಬಾದಾಮಿ ಅಥವಾ ಐಹೊಳೆಯ ದೇವಾಲಯ ಭಿತ್ತಿಗಳ ಮೇಲೆ ಕಂಡುಬರುವ ಶಿಲ್ಪಗಳನ್ನೇ ಹೋಲುತ್ತವೆ. ಕರ್ನಾಟಕದ ವಾಸ್ತುವು ಈ ವಾಸ್ತುವಿನಿಂದ ಪ್ರಭಾವಿತವಾಗಿದೆ ಅಥವಾ ಪ್ರೇರಿತವಾಗಿದೆ ಎಂಬ ಅಭಿಪ್ರಾಯ ಪ್ರಬಲವಾಗಿಯೇ ಇದೆ. ಕ್ರಿ.ಶ. 500ರ ಸುಮಾರಿಗೆ ನಿರ್ಮಾಣವಾದ ಮತ್ತು ಹೆಚ್ಚು ಖಚಿತವಾಗಿ ಕ್ರಿ.ಶ. 578ರಲ್ಲಿ ನಿರ್ಮಾಣವಾದ ಯಾವುದೇ ವಾಸ್ತುವು ಅನಂತರದ, ಅಂದರೆ ಕ್ರಿ.ಶ. 630ರ ನಂತರದ ಒಂದು ವಾಸ್ತುವಿನಿಂದ ಪ್ರೇರಣೆ ಪಡೆದಿದೆ ಅಥವಾ ಪ್ರಭಾವಿತವಾಗಿದೆ ಎಂದು ಹೇಳುವುದು ತರ್ಕಕ್ಕೆ ಮೀರಿದ ಮಾತಾಗುತ್ತದೆ. ಮಹಾಬಲಿಪುರದ ರಥಗಳಿಂದ ಪ್ರೇರಿತರಾಗಿ ಎಲ್ಲೋರದ ಕೈಲಾಸ ದೇವಾಲಯದ ನಿರ್ಮಾಣವಾಗಿದೆ ಎಂದು ಯಾರಾದರೂ ಹೇಳಿದರೆ ಅದನ್ನು ನಿರಾಕರಿಸುವುದು ಕಷ್ಟವಾಗಬಹುದು. ಆದ್ದರಿಂದ ಕರ್ನಾಟಕದ ಕದಂಬ ಮತ್ತು ಬಾದಾಮಿ ಚಾಲುಕ್ಯರ ಕಾಲದ ವಾಸ್ತುಶಿಲ್ಪವಾಗಲೀ, ಮೂರ್ತಿಶಿಲ್ಪವಾಗಲೀ ಪಲ್ಲವರಿಂದ ಪ್ರೇರಣೆ ಪಡೆದಿದೆ ಎಂಬ ಮಾತನ್ನು ಒಪ್ಪಲಾಗುವುದಿಲ್ಲ.
ಬಾದಾಮಿ ಚಾಲುಕ್ಯರು ಗುಹಾಲಯಗಳನ್ನು ಕೊರೆಸುತ್ತಿದ್ದ ಸಂದರ್ಭದಲ್ಲಿಯೇ ದೇವಾಲಯಗಳನ್ನು ಕಟ್ಟಿಸಿಯೂ ಇದ್ದಾರೆ. ಇವುಗಳಲ್ಲಿ ಬಾದಾಮಿಯಲ್ಲಿ ಪ್ರಾಚೀನ ಎಂದು ಪರಿಗಣಿತವಾಗಿರುವುದು ಮೇಗಣ ಶಿವಾಲಯ. ಎರಡನೆಯ ಪುಲಿಕೇಶಿಯ ಕಾಲದಲ್ಲಿ ನಿರ್ಮಾಣವಾಗಿರುವ ಈ ವಿಷ್ಣು ದೇವಾಲಯವು ಯಾವ ಕಾರಣಕ್ಕೋ ಮೇಗಣ ಶಿವಾಲಯ ಎಂಬ ಹೆಸರು ಪಡೆದಿದೆ. ಇದು ಪ್ರದಕ್ಷಿಣಾಪಥವುಳ್ಳ ಸಾಂಧಾರ ದೇವಾಲಯ. ಗರ್ಭಗೃಹದ ಮೇಲೆ ದ್ರಾವಿಡ ಶೈಲಿಯ ಗೋಪುರವಿದೆ. ಮೂಲತಃ ಗರ್ಭಗೃಹ, ಮುಚ್ಚಿದ ಪ್ರದಕ್ಷಿಣಾಪಥ, ಸಭಾಮಂಟಪ ಮತ್ತು ಕೈಸಾಲೆಗಳಿದ್ದು , ಈಗ ಸಭಾಮಂಟಪ ಮತ್ತು ಕೈಸಾಲೆಗಳು ಇಲ್ಲ . ಪ್ರದಕ್ಷಿಣಾಪಥದ ಹೊರಭಿತ್ತಿಯಲ್ಲಿರುವ ದೇವಕೋಷ್ಠಗಳಲ್ಲಿ ಹಿರಣ್ಯಕಶಿಪುವನ್ನು ವಧಿಸುತ್ತಿರುವ ನರಸಿಂಹ, ಗೋವರ್ಧನಧಾರಿ ಕೃಷ್ಣ , ಕಾಳಿಂಗಮರ್ದನ ಕೃಷ್ಣನ ಮೂರ್ತಿಗಳಿವೆ. ಈ ಭಾಗದಲ್ಲೇ ಗಾಳಿ ಮತ್ತು ಬೆಳಕಿಗಾಗಿ ಜಾಲಂಧ್ರಗಳನ್ನು ರಚಿಸಲಾಗಿದೆ. ಅಧಿಷ್ಠಾನದ ತಳದ ಭಾಗದಲ್ಲಿ ರಾಮಾಯಣ ಮತ್ತು ಭಾಗವತ ಕಥೆಗಳ ಕೆತ್ತನೆ ಇದೆ. ಈ ದೇವಾಲಯದ ತಳವಿನ್ಯಾಸವು ಬಹಳ ಸರಳವಾಗಿದೆಯಾದರೂ ಅತ್ಯಂತ ಉಪಯುಕ್ತವಾಗಿದೆ. ಆ ಹೊತ್ತಿಗಾಗಲೇ ದೇವಾಲಯ ವಾಸ್ತು ಸಾಧಿಸಿದ್ದ ಪ್ರಬುದ್ಧಾವಸ್ಥೆಗೆ ಈ ದೇವಾಲಯ ಮಹತ್ವದ ಉದಾಹರಣೆಯಾಗಿದೆ. ಮೇಗಣ ಶಿವಾಲಯದ ನಿರ್ಮಾಣಕ್ಕೆ ಬಳಸಿರುವುದು ಮರಳು ಗಲ್ಲನ್ನು . ಮರಳುಗಲ್ಲು ಸುಲಭವಾಗಿ ಸವೆಯುತ್ತದೆ. ಅದೇ ಕಾರಣದಿಂದ ದೇವಾಲಯದ ಸಭಾಮಂಟಪ ಮತ್ತು ಕೈಸಾಲೆಗಳು ಶಿಥಿಲವಾಗಿರುವ ಸಾಧ್ಯತೆಗಳಿವೆ.
ಬಹುತೇಕ ಅದೇ ಸುಮಾರಿಗೆ ಭಾರೀಬಂಡೆಯ ಮೇಲೆ ನಿರ್ಮಾಣವಾಗಿರುವ ಮಾಲೆಗಿತ್ತಿ ಶಿವಾಲಯವು ನಿರಂಧಾರವಾಗಿದ್ದು , ಇದರ ಹೊರಭಿತ್ತಿಯಲ್ಲಿ ದೇವಕೋಷ್ಠಗಳು, ಜಾಲಂಧ್ರಗಳು ಮತ್ತು ಅರ್ಧಕಂಬಗಳು ವಾಸ್ತುಶಿಲ್ಪದ ಬೆಳವಣಿಗೆಯ ಒಂದು ಮಹತ್ವದ ಹಂತವನ್ನು ಅರ್ಥಮಾಡಿಕೊಳ್ಳಲು ಸಹಕಾರಿಯಾಗಿವೆ. ಇದರ ನಿರ್ಮಾಣ ಕಾಲವು ಕ್ರಿ.ಶ. 595ರಿಂದ 630 ಎಂಬ ಅಭಿಪ್ರಾಯವೂ ಇದೆ. ಅಭಿಪ್ರಾಯ ಭಿನ್ನತೆ ಏನೇ ಇದ್ದರೂ, ದೇವಾಲಯದ ನಿರ್ಮಾಣವು ಏಳನೆಯ ಶತಮಾನದ ಪೂರ್ವಾರ್ಧ ಎಂದು ಸ್ಪಷ್ಟವಾಗುತ್ತದೆ. ದೇವಕೋಷ್ಠಗಳಲ್ಲಿ ಶಿವ, ನರಸಿಂಹ, ಗೋವರ್ಧನಧಾರಿ ಕೃಷ್ಣ ಮತ್ತು ಕಾಳಿಂಗ ಮರ್ದನ ಕೃಷ್ಣ ಮೂರ್ತಿ ಗಳಿವೆ. ಇಲ್ಲಿಯ ಅಧಿಷ್ಠಾನದ ಪಟ್ಟಿಕೆಗಳಲ್ಲಿ ಕುಬ್ಜರು, ರಾಮಾಯಣ ಮತ್ತು ಮಹಾಭಾರತದ ಕಥನ ಶಿಲ್ಪಗಳಿವೆ.
ಬಾದಾಮಿಯಲ್ಲಿ ಕಟ್ಟಲಾಗಿರುವ ಪ್ರಾಚೀನದೇವಾಲಯಗಳಲ್ಲಿ ನಿರ್ಮಾಣದ ಖಚಿತ ದಿನಾಂಕ ಲಭ್ಯವಾಗಿರುವುದು ಜಂಬುಲಿಂಗ ದೇವಾಲಯಕ್ಕೆ ಸಂಬಂಧಿಸಿದ್ದು. ವಿಜಯಾದಿತ್ಯನ ತಾಯಿ ರಾಣಿ ವಿನಯವತಿಯು ಕ್ರಿ.ಶ. 699ರಲ್ಲಿ ಈ ತ್ರಿಕೂಟ ದೇವಾಲಯವನ್ನು ಕಟ್ಟಿಸಿದ್ದು ಸ್ಪಷ್ಟವಾಗಿ ತಿಳಿದಿದೆ. ಇದು ಬಾದಾಮಿಯಲ್ಲಿ ಕಟ್ಟಲಾದ ಮೊದಲನೆಯ ತ್ರಿಕೂಟ ದೇವಾಲಯ. ಮೂರೂ ಗರ್ಭಗೃಹಗಳಿಗೆ ಸೇರಿದಂತೆ ಒಂದೇ ಸಭಾಮಂಟಪವಿದೆ. ಅದರ ಮುಂಭಾಗದಲ್ಲಿ ತೆರೆದ ಮುಖಮಂಟಪವಿದೆ. ಮಧ್ಯದ ಗರ್ಭಗೃಹದ ಸಭಾಮಂಟಪದ ಭುವನೇಶ್ವರಿಯಲ್ಲಿ ಶಿವ, ಬ್ರಹ್ಮ ಮತ್ತು ವಿಷ್ಣುವಿನ ಶಿಲ್ಪಗಳಿವೆ. ಉಳಿದೆರಡು ಗರ್ಭಗೃಹಗಳ ಮುಂದಿನ ಸಭಾಮಂಟಪದ ಒಳ ಛಾವಣಿಯಲ್ಲಿ ಮತ್ಸ್ಯಚಕ್ರ, ನಂದ್ಯಾವರ್ತ ಮತ್ತು ಸ್ವಸ್ತಿಕ ಚಿಹ್ನೆಗಳಿವೆ. ಅಲಂಕಾರ ಪಟ್ಟಿಕೆಗಳು, ಕಂಬದ ಮೇಲಿನ ಅಲಂಕರಣಗಳು ದೇವಾಲಯದ ಸೌಂದರ್ಯವನ್ನು ಹೆಚ್ಚಿಸಿವೆ.
ಬಾದಾಮಿ ಚಾಲುಕ್ಯಸಾಮ್ರಾಜ್ಯದ ರಾಜಧಾನಿಯಾದರೆ ಐಹೊಳೆಯು ಆ ಸಾಮ್ರಾಜ್ಯದ ವಾಣಿಜ್ಯ ಕೇಂದ್ರವಾಗಿತ್ತು. ಅದು ಅಯ್ಯಾವೊಳೆ ಐನೂರು ಎಂಬ ವರ್ತಕ ಶ್ರೇಣಿಯ ಕೇಂದ್ರಸ್ಥಾನ. ವ್ಯಾಪಾರಿಗಳು ಹೆಚ್ಚಾಗಿ ನೆಲೆಸಿದ್ದ ಐಹೊಳೆಯಲ್ಲಿ ಸಹಜವಾಗಿಯೇ ದೇವಾಲಯಗಳ ಸಂಖ್ಯೆ ಹೆಚ್ಚು . ವಿಶೇಷವೆಂದರೆ ಐಹೊಳೆಯಲ್ಲಿ ದೇವಾಲಯ ಸಮುಚ್ಚಯಗಳು ಹೆಚ್ಚಾಗಿವೆ. ಇವೆಲ್ಲವೂ ತಮ್ಮ ಹೆಸರಿನ ಮೂಲಕವೇ ಒಂದೊಂದು ವರ್ತಕ ಶ್ರೇಣಿ ಅಥವಾ ವೃತ್ತಿಯ ಜನರಿಗೆ ಸೇರಿದ್ದ ದೇವಾಲಯ ಸಮುಚ್ಚಯಗಳು ಎಂದು ಸ್ಪಷ್ಟವಾಗುತ್ತವೆ. ಈಗ ಐಹೊಳೆಯಲ್ಲಿ ದೇವಾಲಯಗಳಿಗೆ ಪ್ರಚಲಿತದಲ್ಲಿರುವ ಹೆಸರುಗಳು ಆಧುನಿಕವಾದವು. ಬಹುತೇಕ ಶಿಥಿಲವಾಗಿದ್ದ ಮತ್ತು ಸ್ಥಳೀಯವಾಗಿ ಯಾವುದೋ ಹೆಸರಿನಿಂದ ಕರೆಯಲಾಗುತ್ತಿದ್ದ ದೇವಾಲಯಗಳನ್ನು ಈಗ ಸ್ವಚ್ಛಗೊಳಿಸಿ, ದುರಸ್ತಿ ಮಾಡಿಸಿ, ಸಂರಕ್ಷಿಸಿ ಜನತೆಯ ಗಮನಕ್ಕೆ ತರಲಾಗುತ್ತಿದೆ. ಇಲ್ಲಿನ ಜೈನಗುಹೆ ಮತ್ತು ರಾವಳಫಡಿಗಳನ್ನು ಕುರಿತು ಈಗಾಗಲೇ ಪ್ರಸ್ತಾಪಿಸಲಾಗಿದೆ. ಇವು ಬಾದಾಮಿಯ ಗುಹಾಲಯಗಳಿಗಿಂತಲೂ ಹಿಂದಿನವು ಎಂದೂ ತಿಳಿಯಲಾಗಿದೆ. ಅಂತೆಯೇ ಕಟ್ಟಲಾಗಿರುವ ದೇವಾಲಯಗಳಲ್ಲೂ ಐಹೊಳೆಯ ಕೆಲವು ದೇವಾಲಯ ಗಳು ಬಾದಾಮಿಯ ದೇವಾಲಯಗಳಿಗಿಂತ ಪ್ರಾಚೀನ ಎಂದು ಒಪ್ಪಿತವಾಗಿವೆ.
ಗಜಪೃಷ್ಠಾಕಾರದ ತಳವಿನ್ಯಾಸವಿರುವ ದುರ್ಗಾ ದೇವಾಲಯವು ಸಾಂಧಾರವಾಗಿದ್ದು ಎತ್ತರವಾದ ಅಧಿಷ್ಠಾನದ ಮೇಲೆ ಭವ್ಯವಾದ ದೇವಾಲಯವನ್ನು ನಿರ್ಮಿಸಲಾಗಿದೆ. ದೇವಾಲಯದಲ್ಲಿ ಗರ್ಭಗೃಹ, ಸಭಾಮಂಟಪ ಮತ್ತು ತೆರೆದ ಮುಖಮಂಟಪ ಇದ್ದು , ಇದಕ್ಕೆ ಹೊಂದಿಕೊಂಡಂತೆ ತೆರೆದ ಒಳಪ್ರದಕ್ಷಿಣಾ ಪಥವಿದೆ. ತೆರೆದ ಮುಖಮಂಟಪದಲ್ಲಿನ ಕಂಬಗಳ ಮೇಲೆ ಬೋದಿಗೆಗೆ ಆನಿಸಿಕೊಂಡಂತೆ ಕೆತ್ತಲಾಗಿರುವ ದಂಪತಿಗಳ ಶಿಲ್ಪಗಳು ಇಡೀ ದೇವಾಲಯಕ್ಕೆ ವಿಶೇಷ ಆಕರ್ಷಣೆ ತಂದಿವೆ. ತೆರೆದ ಒಳ ಪ್ರದಕ್ಷಿಣಾಪಥದ ಹೊರಬದಿಯ ಕಂಬಗಳು ಅತ್ಯಂತ ಸರಳವಾಗಿದ್ದರೂ, ದೇವಾಲಯದ ನಿಲುವಿಗೆ ಗಾಂಭೀರ್ಯ ತಂದಿವೆ. ಹೊರಭಿತ್ತಿಯಲ್ಲಿ ಹನ್ನೊಂದು ದೇವಕೋಷ್ಠಗಳಿವೆ. ಅವುಗಳಲ್ಲಿ ದೇವತಾ ಶಿಲ್ಪಗಳು ಮಾತ್ರವಲ್ಲದೆ, ಹೂವು, ಸ್ವಸ್ತಿಕ, ಮತ್ಸ್ಯ, ಚಕ್ರ ಇತ್ಯಾದಿ ವಿನ್ಯಾಸಗಳ ಜಾಲಂಧ್ರಗಳಿವೆ. ಉಳಿದಿರುವ ಕೆಲವು ದೇವತಾಶಿಲ್ಪಗಳೆಂದರೆ ನರಸಿಂಹ, ವರಾಹ, ಹರಿಹರ, ಗರುಡವಾಹನ ವಿಷ್ಣು , ವೃಷಭವಾಹನ ಶಿವ ಮತ್ತು ಮಹಿಷಾಸುರ ಮರ್ದಿನಿ. ಗರ್ಭಗೃಹದ ದ್ವಾರಬಂಧದ ಲಲಾಟದಲ್ಲಿ ನಾಗಗಳ ಬಾಲಗಳನ್ನು ಹಿಡಿದ ಗರುಡ ಶಿಲ್ಪ ಇದೆ. ಕೈಸಾಲೆಯ ಮತ್ತು ಮುಖಮಂಟಪದ ಕಂಬಗಳ ಮೇಲೆ ದಂಪತಿ ಶಿಲ್ಪಗಳ ಜೊತೆಗೆ ಅರ್ಧನಾರೀಶ್ವರ ಮತ್ತು ನರಸಿಂಹ ಶಿಲ್ಪಗಳು ಇವೆ. ಗರ್ಭಗೃಹದ ಮೇಲೆ ಚಿಕ್ಕ ರೇಖಾನಾಗರ ಶಿಖರ ಇದೆ. ಸಭಾಮಂಟಪವನ್ನು ಪ್ರವೇಶಿಸುವ ಪ್ರವೇಶದ್ವಾರದ ಲಲಾಟದಲ್ಲಿ ನಾಗಗಳ ಬಾಲ ಹಿಡಿದ ಗರುಡ ಮತ್ತು ಬಾಗಿಲುವಾಡದಲ್ಲಿ ಯಮುನಾ ಮತ್ತು ಗಂಗೆಯರ ಶಿಲ್ಪಗಳಿವೆ. ಸಭಾಮಂಟಪದ ಒಳಗೆ ಎತ್ತರವಾಗಿರುವ ಕಂಬ ಗಳಿವೆ. ಇದರ ಒಳಛತ್ತಿನಲ್ಲಿ ಕಂಬಗಳಸಹಿತ ದ್ರಾವಿಡ ಮಾದರಿಯ ಶಿಖರಗಳ ಕೆತ್ತನೆ ಇದೆ. ಗರ್ಭಗೃಹದ ಸುತ್ತಲೂ ತೆರೆದ ಒಳ ಪ್ರದಕ್ಷಿಣಾಪಥವಿದೆ. ಈ ದೇವಾಲಯವು ಮೂಲತಃ ಸೂರ್ಯ ದೇವಾಲಯ ಎಂದು ಈಗ ಖಚಿತವಾಗಿದೆ. ಒಂದು ಕಾಲಕ್ಕೆ ಇದು ಜಿನಾಲಯವಾಗಿತ್ತು ಎಂಬ ಸೂಚನೆಯೂ ಇದೆ. ಇದು ಕ್ರಿ. ಶ. 6ನೆಯ ಶತಮಾನದ ಹೊತ್ತಿಗಾಗಲೇ ಅಸ್ತಿತ್ವದಲ್ಲಿದ್ದ ದೇವಾಲಯ ಎಂಬುದು ಒಂದು ಅಭಿಪ್ರಾಯವಾದರೆ, ಇದು ಚಾಲುಕ್ಯ ದೊರೆ ಎರಡನೆಯ ವಿಕ್ರಮಾದಿತ್ಯನ ಆಳ್ವಿಕೆಯ ಕಾಲದಲ್ಲಿ (ಕ್ರಿ. ಶ. 733-744) ನಿರ್ಮಾಣಗೊಂಡಿದೆ ಎಂಬ ಮತ್ತೊಂದು ಅಭಿಪ್ರಾಯವೂ ಇದೆ. ಈ ದೇವಾಲಯವು ಕೋಟೆಯ ಒಳಗೆ ಅಂದರೆ ದುರ್ಗದ ಪ್ರದೇಶದಲ್ಲಿ ಇದ್ದುದರಿಂದ ದುರ್ಗದ ಗುಡಿ ಎಂಬ ಹೆಸರು ಪಡೆದು, ಕ್ರಮೇಣ ದುರ್ಗಗುಡಿಯಾಗಿದೆ ಎಂಬ ಅಭಿಪ್ರಾಯವಿದೆ. ಬೌದ್ಧ ಚೈತ್ಯಗಳ ಪ್ರಭಾವ ಇರುವ ಈ ದೇವಾಲಯದ ಒಳಭಾಗ ಮತ್ತು ಹೊರ ಭಾಗಗಳೆರಡೂ ಕಂಬಗಳು, ಅವುಗಳ ಮೇಲಿನ ಬೋದಿಗೆಗಳು, ಬೋದಿಗೆಗಳಿಗೆ ಆಸರೆಯಾದ ಶಿಲ್ಪಗಳು, ದೇವಕೋಷ್ಠಗಳು, ಜಾಲಂಧ್ರಗಳು ಇತ್ಯಾದಿಗಳಿಂದ ಅಲಂಕೃತ ಗೊಂಡು ಆಕರ್ಷಣೆಯ ಕೇಂದ್ರವಾಗಿವೆ. ಕ್ರಿ. ಶ. 6ನೆಯ ಶತಮಾನದ ಹೊತ್ತಿಗೆ ಚಾಲುಕ್ಯ ಶಿಲ್ಪಿಗಳು ಸಾಧಿಸಿದ್ದ ಅದ್ಭುತ ಎನ್ನಬಹುದಾದ ಪ್ರಗತಿಗೆ ದುರ್ಗಗುಡಿಯು ಮಹತ್ವದ ಉದಾಹರಣೆಯಾಗಿದೆ.
ಗಜಪೃಷ್ಠಾಕಾರದ ತಳವಿನ್ಯಾಸವಿರುವ ಮತ್ತೊಂದು ದೇವಾಲಯದ ಅಧಿಷ್ಠಾನವು ಐಹೊಳೆಯಲ್ಲಿ ದುರ್ಗಗುಡಿಗೆ ಸ್ವಲ್ಪ ದೂರದಲ್ಲೇ ಸಿಕ್ಕಿದೆ. ಇದೂ ಸಹ ದುರ್ಗಗುಡಿಯ ಸಮಕಾಲೀನ ನಿರ್ಮಾಣವಾಗಿರಬಹುದು ಎಂಬ ಅಭಿಪ್ರಾಯವಿದೆ. ಬೌದ್ಧ ಚೈತ್ಯಗಳನ್ನು ಹೋಲುವ  ದೇವಾಲಯಗಳ ನಿರ್ಮಾಣಕ್ಕೆ ಚಾಲುಕ್ಯಶಿಲ್ಪಿಗಳು ಪ್ರಯೋಗ ನಡೆಸಿದ್ದ ಸುಳಿವನ್ನು ದುರ್ಗ ದೇವಾಲಯ ನೀಡುತ್ತದೆ.
ಎತ್ತರದ ಅಧಿಷ್ಠಾನದ ಮೇಲೆ ನಿರ್ಮಾಣವಾಗಿರುವ ಲಾಡಖಾನ್ ಗುಡಿಯು ನಾಲ್ಕು ಸಾಲು ಕಂಬಗಳಿರುವ ಒಂದು ವಿಶಾಲವಾದ ಹಜಾರ. ಚಚ್ಚೌಕವಾದ ಹಜಾರದ ಹಿಂದಿನ ಗೋಡೆಗೆ ಹೊಂದಿಕೊಂಡಂತೆ ಗರ್ಭಗೃಹವಿದೆ. ಹಜಾರದ ನಡುವಿನ ನಾಲ್ಕು ಕಂಬಗಳು ಉಳಿದ ಕಂಬಗಳಿಗಿಂತ ಎತ್ತರವಾಗಿದ್ದು ಅಲಂಕರಣಗೊಂಡಿವೆ. ಹಜಾರದ ಮುಂಭಾಗವೇ ಮುಖಮಂಟಪ. ಮುಖಮಂಟಪದ ಕೊನೆಯ ಕಂಬಗಳಿಗೆ ಹೊಂದಿಕೊಂಡಂತೆ ಕಕ್ಷಾಸನಗಳಿವೆ. ಮುಖಮಂಟಪದಿಂದ ಸ್ವಲ್ಪ ಎತ್ತರದಲ್ಲಿ ಮಂಟಪವಿದೆ. ಮಂಟಪವು ಮಧ್ಯಭಾಗದಲ್ಲಿ ಎತ್ತರವಾಗಿದ್ದು, ಮುಂದೆ ಸರಿದಂತೆ ಇಳಿಜಾರಾಗುತ್ತದೆ. ಇಲ್ಲಿನ ಕಂಬಗಳ ಮೇಲೂ ರಸಿಕ ದಂಪತಿಗಳು, ಕಾಮ-ರತಿ ಇತ್ಯಾದಿ ಶಿಲ್ಪಗಳಿವೆ. ಮಂಟಪದ ಮಧ್ಯದ ನಾಲ್ಕು ಕಂಬಗಳ ಮೇಲಿನ ಮಾಳಿಗೆಯಲ್ಲಿ ಒಂದು ಗರ್ಭಗೃಹವಿದ್ದು , ಅದಕ್ಕೆ ಹೋಗಲು ಮುಖ ಮಂಟಪದಲ್ಲಿ ಕಲ್ಲಿನ ಏಣಿ ಇದೆ. ಮೇಲಿನ ಗರ್ಭಗೃಹದ ಮಾಳಿಗೆಯು ಸಮತಟ್ಟಾಗಿದೆ. ಇದರ ಹೊರಭಿತ್ತಿಯಲ್ಲಿ ಚತುರ್ಭುಜ ವಿಷ್ಣು ಮತ್ತು ಸೂರ್ಯನ ಮೂರ್ತಿಗಳಿವೆ. ಆದ್ದರಿಂದ ಇದು ಸೂರ್ಯನಾರಾಯಣ ದೇವಾಲಯ ಎಂದು ತಿಳಿಯಲಾಗಿದೆ. ಕೆಳಗಿನ ಗರ್ಭ ಗೃಹದಲ್ಲಿ ಶಿವಲಿಂಗವಿದೆ. ಲಾಡಖಾನ್ ದೇವಾಲಯವನ್ನು ದೇವಾಲಯ ಎನ್ನುವುದಕ್ಕಿಂತ ಸಾರ್ವಜನಿಕ ಸಮಾವೇಶಕ್ಕೆ ಮೀಸಲಾಗಿದ್ದ ಕಟ್ಟಡ ಮತ್ತು ಇಲ್ಲಿನ ಸಾರ್ವಜನಿಕ ಸ್ವರೂಪದ ಚಟುವಟಿಕೆಗಳ ಸಾಕ್ಷಿಗಾಗಿ ಇಲ್ಲಿ ಸೂರ್ಯನಾರಾಯಣನ ಪ್ರತಿಷ್ಠೆ ಆಗಿತ್ತು ಎಂದು ಭಾವಿಸಬಹುದಾಗಿದೆ. ಇದರ ಕಾಲವನ್ನು ಕ್ರಿ. ಶ. ಸು. 450 ಎಂದು ಭಾವಿಸಲಾಗಿದೆ.
ಉತ್ಖನನದಿಂದ ಸಂಪೂರ್ಣವಾಗಿ ಕಾಣಿಸಿದ ಗೌಡರ ಗುಡಿಯು ಲಾಡಖಾನ್ ಗುಡಿಗಿಂತಲೂ ಪ್ರಾಚೀನ ಎಂಬ ಅಭಿಪ್ರಾಯ ಕೆಲವು ವಿದ್ವಾಂಸರದು. ಎತ್ತರವಾದ ಅಧಿಷ್ಠಾನದ ಮೇಲೆ ಮಂಟಪವಿದೆ. ಈ ಮಂಟಪದ ಹೊರ ಗೋಡೆಯು 16 ಚಚ್ಚೌಕ ಕಂಬಗಳನ್ನು ಆಧರಿಸಿದೆ. ಮಂಟಪದ ನಡುವೆ ಇರುವ ಎತ್ತರದ ನಾಲ್ಕು ಕಂಬಗಳು ಮಾಳಿಗೆಯನ್ನು ಎತ್ತಿಹಿಡಿದಿವೆ. ಈ ಭಾಗವೇ ಗರ್ಭಗೃಹ. ಇದರ ಮಾಳಿಗೆಯ ಮೇಲೆ ಇಳಿಜಾರಾಗಿ ಹಾಸುಗಲ್ಲುಗಳನ್ನು ಹಾಕಲಾಗಿದೆ. ಗೌಡರ ಗುಡಿಯ ಗರ್ಭಗೃಹದ ದ್ವಾರಬಂಧದ ಲಲಾಟದಲ್ಲಿ ನಾಗಗಳ ಬಾಲ ಹಿಡಿದ ಗರುಡನ ಶಿಲ್ಪವಿದೆ. ಇಲ್ಲಿನ ಶಿಲ್ಪಗಳನ್ನು ಗಮನಿಸಿದಾಗ ಇದು ದುರ್ಗಾದೇವಿಯ ದೇವಾಲಯ ಎನಿಸುತ್ತದೆ. ಬಹುತೇಕ ಲಕ್ಷ್ಮಿಗೆ ಮೀಸಲಾಗಿದ್ದ ಈ ದೇವಾಲಯದ ಕಾಲ ಕ್ರಿ.ಶ.ಸು. 5ನೆಯ ಶತಮಾನ ಎಂಬ ಅಭಿಪ್ರಾಯವಿದೆ. (ಆ ಕಾಲದಲ್ಲಿ ಶಕ್ತಿ ದೇವತೆ ಮತ್ತು ಲಕ್ಷ್ಮೀದೇವತೆಗಳಿಗೆ ವ್ಯತ್ಯಾಸ ಮಾಡುತ್ತಿರಲಿಲ್ಲ. ಎರಡರ ಮೂಲವೂ ಮಾತೃದೇವತೆ. ಇಲ್ಲಿ ಗರುಡ  ಗಮನಿಸಿ. ಆದ್ದರಿಂದ ಲಕ್ಷ್ಮೀ  ಎಂದು ಊಹೆ.)
ಈವರೆಗೆ ಗಮನಿಸಿದಂತೆ ಕ್ರಿ.ಶ. 5ನೆಯ ಶತಮಾನದಲ್ಲಿ ನಿರ್ಮಾಣವಾಗಿರಬಹುದಾದ ಗೌಡರ ಗುಡಿ ಮತ್ತು ಲಾಡಖಾನ್ ಗುಡಿ, ಕ್ರಿ.ಶ. 6ನೆಯ ಶತಮಾನದಲ್ಲಿ ನಿರ್ಮಾಣಗೊಂಡಿರ ಬಹುದಾದ ದುರ್ಗ ಗುಡಿಗಳಲ್ಲದೆ, ಕ್ರಿ.ಶ. 7ನೆಯ ಶತಮಾನದಲ್ಲಿ, ವಿಶೇಷವಾಗಿ ಪುಲಿಕೇಶಿಯ ಆಳ್ವಿಕೆಯ ಅವಧಿಯಲ್ಲಿ ನಿರ್ಮಾಣ ವಾಗಿ ಇರುವ ಮೇಗುತಿ ದೇವಾಲಯ, ಅನಂತರದ ಕಾಲದ ಚಕ್ರಗುಡಿ, ಬಡಿಗೇರ ಗುಡಿಯೇ ಮೊದಲಾದವು ಐಹೊಳೆಯಲ್ಲಿ ದೇವಾಲಯ ವಾಸ್ತು ಮತ್ತು ಸಂಸ್ಕøತಿ ಬೆಳೆದಿರುವ ಪರಿಯನ್ನು ಚೆನ್ನಾಗಿ ಮನದಟ್ಟು ಮಾಡಿಕೊಡುತ್ತವೆ. ಗುಡ್ಡದ ಮೇಲಿನ ದೇವಾಲಯವೇ ಮೇಗುತಿ ದೇವಾಲಯ. ಪುಲಿಕೇಶಿಯ ಆಸ್ಥಾನ ದಲ್ಲಿದ್ದ ಕವಿ ರವಿಕೀರ್ತಿಯು ಈ ದೇವಾಲಯವನ್ನು ಕ್ರಿ.ಶ. 634ರಲ್ಲಿ ಕಟ್ಟಿಸಿರುವುದಕ್ಕೆ ಸಮಕಾಲೀನ ಶಾಸನದ ದಾಖಲೆ ಇದೆ. ರವಿಕೀರ್ತಿಯೇ ಸಂಸ್ಕøತದಲ್ಲಿ ರಚಿಸಿರುವ ಶಾಸನವು ಮೇಗುತಿ ದೇವಾಲಯದ ಬಲಭಿತ್ತಿಯ ಮೇಲಿದೆ. ಪುಲಿಕೇಶಿಯ ವಿಜಯಯಾತ್ರೆಗಳ ಬಗ್ಗೆ ತಿಳಿಸುವ ಈ ಪ್ರಮುಖ ಶಾಸನದ ಮೂಲಕವೇ ಮೇಗುತಿ ದೇವಾಲಯವು ಒಂದು ಬಸದಿ ಎಂದು ಸ್ಪಷ್ಟಪಡಿಸಿದೆ. ಎರಡು ಅಂತಸ್ತಿನ ಈ ಬಸದಿಯು ಎತ್ತರದ
ಅಧಿಷ್ಠಾನದ ಮೇಲೆ ನಿರ್ಮಿತವಾಗಿದೆ. ಗರ್ಭಗೃಹ, ಅಂತರಾಳ ಮತ್ತು ಮುಖಮಂಟಪಗಳಿರುವ ಈ ಬಸದಿಯು ಸಾಂಧಾರವಾಗಿದ್ದು , ಪ್ರದಕ್ಷಿಣಾಪಥದ ಹೊರಭಿತ್ತಿಯಲ್ಲಿ ಜಾಲಂಧ್ರಗಳಿವೆ. ಗರ್ಭಗೃಹದಲ್ಲಿ ಮಹಾವೀರ ಎಂದು ಹೇಳಲಾಗುವ ತೀರ್ಥಂಕರನ ಮೂರ್ತಿ ಇದೆ. ಮಂಟಪದಲ್ಲಿರುವ ಕಲ್ಲಿನ ಏಣಿಯ ಮೂಲಕ ಮೇಲಿನ ಮಾಳಿಗೆಗೆ ಹೋಗಬಹುದು. ಅಲ್ಲಿ ಕೇವಲ ಗರ್ಭಗೃಹ ಮಾತ್ರ ಇದ್ದು , ಅದರಲ್ಲಿ ತೀರ್ಥಂಕರ ಶಿಲ್ಪ ಇದೆ. ಇಲ್ಲಿಯ ಅಧಿಷ್ಠಾನದ ಪಟ್ಟಿಕೆಗಳಲ್ಲಿ ಮಾತ್ರ ಸಾಮಾಜಿಕ ಬದುಕನ್ನು ಬಿಂಬಿಸುವ ಶಿಲ್ಪಗಳ ಕೆತ್ತನೆ ಇದೆ.
ಮೇಗುತಿಗೆ ಹೋಗುವ ದಾರಿಯಲ್ಲಿ ಕಲ್ಲನ್ನು ಕಡೆದು ಮಾಡಿರುವ ಗುಹೆಯು ಬೌದ್ಧಚೈತ್ಯವಾಗಿದೆ. ಮೇಲ್ನೋಟಕ್ಕೆ ಜೈನ ಬಸದಿ ಎನಿಸುವ ಈ ಬೌದ್ಧಚೈತ್ಯವು ಕ್ರಿ. ಶ. 5ನೆಯ ಶತಮಾನದ ನಿರ್ಮಾಣ ಎಂಬ ಅಭಿಪ್ರಾಯವಿದೆ. ಈ ಬಗ್ಗೆ ಇನ್ನೂ ಚರ್ಚೆಗಳಿಗೆ ಅವಕಾಶವಿದೆ.
ಬಾದಾಮಿಯಲ್ಲಿ ಹೆಚ್ಚಿನ ದೇವಾಲಯಗಳ (ಗುಹಾ ಮತ್ತು ನಿರ್ಮಿತ) ನಿರ್ಮಾಣಕ್ಕೆ ಆಳಿದ ದೊರೆಗಳು ಅಥವಾ ಅವರ ಸಂಬಂಧಿಗಳು ಕಾರಣರಾದರೆ, ಐಹೊಳೆಯಲ್ಲಿ ರಾಜರು ಮತ್ತು ರಾಜ ಕುಟುಂಬದವರು ದೇವಾಲಯ ಅಥವಾ ಮತ್ಯಾವುದೇ ವಾಸ್ತುವಿನ ನಿರ್ಮಾಣ ಮಾಡಿರುವುದು ಸ್ಪಷ್ಟವಿಲ್ಲ. ಐಹೊಳೆಯಲ್ಲಿ ವರ್ತಕಶ್ರೇಣಿಗಳಿದ್ದುದರಿಂದ ಅವರೇ ಹೆಚ್ಚು ದೇವಾಲಯಗಳನ್ನು ನಿರ್ಮಿಸಿದ್ದಾರೆ. ಅಯ್ಯಾವೊಳೆ ಐನೂರ್ವರ ಕೇಂದ್ರಸ್ಥಾನವಾದ ಐಹೊಳೆಯಲ್ಲಿ ಈಗಾಗಲೇ ಪ್ರಸ್ತಾಪಿಸಲಾದ ಬಿಡಿ ಬಿಡಿ ದೇವಾಲಯಗಳಲ್ಲದೆ, ಹಲವು ಗುಂಪು ದೇವಾಲಯಗಳಿವೆ. ಹೆಸರುಗಳೇ ಅವು ಯಾವ ವರ್ತಕ ಶ್ರೇಣಿಗೆ ಸೇರಿದವು ಎಂದು ಸ್ಪಷ್ಟಪಡಿಸುತ್ತವೆ. ಮೂರಕ್ಕೂ ಹೆಚ್ಚು ಗುಡಿಗಳಿರುವ ಕೊಂತಗುಡಿ ಎಂದು ಕರೆಯಲಾಗುವ ಮೂರು ಗುಂಪು ದೇವಾಲಯಗಳಿವೆ. ಹಾಗೇ ತ್ರ್ಯಂಬಕೇಶ್ವರ ಗುಡಿಗಳ ಗುಂಪು, ಚಿಕ್ಕಿ ಗುಡಿ, ಏಣಿಯರ ಗುಡಿ ಇತ್ಯಾದಿ ಗುಂಪು ದೇವಾಲಯಗಳು ಐಹೊಳೆಯಲ್ಲಿವೆ. ಸಾಮಾನ್ಯವಾಗಿ ಇವು ಗರ್ಭಗೃಹ, ಅಂತರಾಳ ಮತ್ತು ನವರಂಗ ಅಥವಾ ಸಭಾ ಮಂಟಪ ಎಂಬ ಭಾಗಗಳನ್ನು ಹೊಂದಿರುವ ದೇವಾಲಯಗಳು. ಅವಶ್ಯಕತೆಗೆ ತಕ್ಕಂತೆ ತೆರೆದ ಮುಖಮಂಟಪಗಳನ್ನು ಹೊಂದಿದ್ದ ಕೆಲವು ದೇವಾಲಯಗಳಲ್ಲಿ ಮುಖ ಮಂಟಪದಲ್ಲಿ  ಕಕ್ಷಾಸನಗಳಿರುವುದನ್ನು ಕಾಣಬಹುದು.
ಮೊದಲಿಗೆ ಕೇವಲ ಗರ್ಭಗೃಹಕ್ಕಷ್ಟೇ ಸೀಮಿತಗೊಂಡಿದ್ದ ದೇವಾಲಯಗಳು ಕ್ರಮೇಣ, ಅವಶ್ಯಕತೆಗೆ ತಕ್ಕಂತೆ ಅಂತರಾಳ ಅಥವಾ ಸುಕನಾಸಿ ಅಥವಾ ಅರ್ಧ ಮಂಟಪ ಎಂಬ ಭಾಗದ ಸೇರ್ಪಡೆಯೊಂದಿಗೆ ಮುಂದುವರಿದು ಅನಂತರ ಮಂಟಪ ಅಥವಾ ಸಭಾಮಂಟಪ ಅಥವಾ ನವರಂಗ ಎಂಬ ಭಾಗಕ್ಕೆ ಅವಕಾಶ ಕಲ್ಪಿಸಿಕೊಂಡವು. ಈ ಭಾಗವೂ ಕಡಿಮೆ ಎನಿಸಿದಾಗ ಮುಚ್ಚಿದ ಅಥವಾ ತೆರೆದ ಮುಖಮಂಟಪಗಳು ಸೇರ್ಪಡೆಗೊಂಡಿವೆ. ಕೊನೆಯ ಸೇರ್ಪಡೆ ಎಂದು ತೋರುವ ಮುಚ್ಚಿದ ಅಥವಾ ತೆರೆದ ಮುಖಮಂಟಪದಲ್ಲಿ ಭಕ್ತರು ಒರಗಿ ಕೂರಲು ಅನುಕೂಲವಾಗುವಂತೆ ಕಕ್ಷಾಸನಗಳಿಗೆ ಅವಕಾಶ ಕಲ್ಪಿಸಲಾಗಿದೆ. ಈ ಎಲ್ಲ ಸೇರ್ಪಡೆ ಮತ್ತು ಬದಲಾವಣೆಗಳ ಮುಂದುವರಿಕೆಯನ್ನು ಪಟ್ಟದಕಲ್ಲಿನ ದೇವಾಲಯ ಸಂಕೀರ್ಣದಲ್ಲಿ ಕಾಣಬಹುದು.
ಪಟ್ಟದಕಲ್ಲು ಬಾದಾಮಿ ಚಾಲುಕ್ಯ ರಾಜ ಕುಟುಂಬದ ನೆಲೆ. ಚಾಲುಕ್ಯ ವಂಶದ ಮೂವರು ದೊರೆಗಳಿಗಂತೂ ಪಟ್ಟದಕಲ್ಲಿನ ಸಂಪರ್ಕ ಅತ್ಯಂತ ನಿಕಟವಾಗಿದ್ದಂತೆ ತೋರುತ್ತದೆ. ಹಿಂದಿನ ಪಟ್ಟದಕಿಸುವೊಳಲ್ ಈಗ ಪಟ್ಟದಕಲ್ಲಾಗಿ ಉಳಿದಿದೆ. ಇಲ್ಲಿ ಬಹುತೇಕ ದೇವಾಲಯ ನಿರ್ಮಾಣದ ಪ್ರಗತಿಯ ಪ್ರತಿ ಹಂತವನ್ನೂ ಗುರುತಿಸಲು ಸಾಧ್ಯವಾಗುತ್ತದೆ. ದೇವಾಲಯಗಳ ಶೈಲಿಯನ್ನು ನಿರ್ಧರಿಸುವಲ್ಲಿ ಶಿಖರ ಅಥವಾ ವಿಮಾನಗಳು ಪ್ರಧಾನಪಾತ್ರ ವಹಿಸುತ್ತವೆ. ದ್ರಾವಿಡ, ನಾಗರ ಮತ್ತು ವೇಸರ ಶೈಲಿ ಎಂದು ಗುರುತಿಸಲಾಗುವ ಶೈಲಿಯ ಎಲ್ಲ ದೇವಾಲಯಗಳ ಮಾದರಿಗಳು ಇಲ್ಲಿವೆ. ಆದ್ದರಿಂದಲೇ ಪಟ್ಟದಕಲ್ಲಿಗೆ ದೇವಾಲಯ ವಾಸ್ತುವಿನ ತೊಟ್ಟಿಲು ಎಂಬ ಮಾತು ರೂಢಿಗೆ ಬಂದಿರುವಂತೆ ತೋರುತ್ತದೆ. ಕ್ರಿ.ಶ. 650ರಿಂದ 750ರವರೆಗೆ ಕಾಲಾನುಕ್ರಮದಲ್ಲಿ ಪಾಪನಾಥ, ಸಂಗಮೇಶ್ವರ ಅಥವಾ ವಿಜಯೇಶ್ವರ, ವಿರೂಪಾಕ್ಷ ಅಥವಾ ಲೋಕೇಶ್ವರ, ಮಲ್ಲಿಕಾರ್ಜುನ ಅಥವಾ ತ್ರೈಲೋಕೇಶ್ವರ, ಗಳಗನಾಥ, ಜಂಬುಲಿಂಗ, ಕಾಡ ಸಿದ್ಧೇಶ್ವರ ಮತ್ತು ಕಾಶಿವಿಶ್ವೇಶ್ವರ ದೇವಾಲಯಗಳು ಬೆಳೆದುಬಂದಿರುವ ಕ್ರಮವನ್ನು ಇಲ್ಲಿ ಗುರುತಿಸಲು ಸಾಧ್ಯವಿದೆ. ಬಹುತೇಕ ಇಲ್ಲಿನ ಎಲ್ಲ ದೇವಸ್ಥಾನಗಳಲ್ಲಿ ಶಾಸನಗಳಿದ್ದು , ಅವುಗಳ ನೆರವಿನಿಂದ ಇವುಗಳ ಕಾಲಮಾನವನ್ನು ನಿರ್ಧರಿಸಿ, ಆ ಕ್ರಮದಲ್ಲೇ ಇಲ್ಲಿನ ಬದಲಾವಣೆಗಳನ್ನು ಗುರುತಿಸಲು ಸಾಧ್ಯವಾಗುತ್ತದೆ.
ಪಾಪನಾಥ ದೇವಾಲಯದಲ್ಲಿ ಮೊದಲು ಗರ್ಭಗೃಹ ಮತ್ತು ಅಂತರಾಳಗಳನ್ನು ಮಾತ್ರ ನಿರ್ಮಿಸಿ, ಅನಂತರ ಸಭಾಮಂಟಪ ಅಥವಾ ನವರಂಗ ಮತ್ತು ಮುಖಮಂಟಪಗಳನ್ನು ಸೇರ್ಪಡೆ ಮಾಡಲಾಗಿದೆ. ಬಹುತೇಕ ಅದೇ ಕಾಲಕ್ಕೆ ನಾಗರಶೈಲಿಯ ಶಿಖರವೂ ಸೇರಿದೆ. ದ್ರಾವಿಡ ಮತ್ತು ನಾಗರಶೈಲಿಗಳು ಇಲ್ಲಿ ಒಂದಾಗುವ ಪ್ರಯತ್ನ ಮಾಡಿವೆ. ಸಂಗಮೇಶ್ವರ ದೇವಾಲಯ ದ್ರಾವಿಡ ಶೈಲಿಗೆ ಸೇರಿದೆ. ಎರಡನೆಯ ವಿಜಯಾದಿತ್ಯನ ಕಾಲದಲ್ಲಿ (ಕ್ರಿ.ಶ. 696-735) ಇದನ್ನು ಮೊದಲಿಗೆ ವಿಜಯೇಶ್ವರ ಎಂಬ ಹೆಸರಿನಿಂದಲೇ ಕರೆಯಲಾಗುತ್ತಿತ್ತು. ಈಗ ಇಲ್ಲಿ ಉಳಿದಿರುವುದು ಗರ್ಭಗೃಹ, ಅಂತರಾಳ ಮತ್ತು ಸಭಾಮಂಟಪ ಅಥವಾ ನವರಂಗ ಮಾತ್ರ. ಅದರ ಮುಂದೆ ಮುಖಮಂಟಪ ಇದ್ದ ಗುರುತುಗಳು ಮಾತ್ರ ಇವೆ. ಸಂಗಮೇಶ್ವರ (ವಿಜಯೇಶ್ವರ), ವಿರೂಪಾಕ್ಷ (ಲೋಕೇಶ್ವರ) ಮತ್ತು ಮಲ್ಲಿಕಾರ್ಜುನ (ತ್ರೈಲೋಕೇಶ್ವರ) ದೇವಾಲಯಗಳ ನಡುವೆ ನಿಲ್ಲಿಸಿರುವ ತ್ರಿಶೂಲ ಸ್ತಂಭವು ಕೀರ್ತಿ ವರ್ಮನ ಕಾಲಕ್ಕೆ ಗಂಗಾನದಿಯ ಉತ್ತರ ಭಾಗದ ಮೃಗಥಣಿಕಾ ವಿಹಾರದಿಂದ ಬಂದಿದ್ದ ಶಿವಾಚಾರ್ಯನನ್ನು ಉಲ್ಲೇಖಿಸಿದೆ.
ಶಿಖರ ಸಹಿತ ಗರ್ಭಗೃಹ ಮಾತ್ರ ಉಳಿದಿರುವ ಕಾಡಸಿದ್ಧೇಶ್ವರ ದೇವಾಲಯವು ರೇಖಾನಾಗರಶೈಲಿಯ ಶಿಖರಕ್ಕೆ ಉದಾಹರಣೆ ಯಾಗಿದೆ. ಜಂಬುಲಿಂಗನ ಗುಡಿಯ ಶಿಖರವೂ ರೇಖಾನಾಗರ ಶೈಲಿಗೇ ಸೇರುತ್ತದೆ. ಇದಕ್ಕೆ ಸಮೀಪವಿರುವ ಜಂಬುಲಿಂಗ ದೇವಾಲಯದಲ್ಲಿಯೂ ಗರ್ಭಗೃಹ ಮತ್ತು ಅಂತರಾಳ ಮಾತ್ರ ಉಳಿದಿದ್ದು ಹೊಂದಿಕೊಂಡ ಸಭಾಮಂಟಪ ಅಥವಾ ನವರಂಗ ಬಿದ್ದುಹೋಗಿದೆ. ಈ ದೇವಾಲಯದ ಗರ್ಭಗೃಹದ ಮೇಲೂ ರೇಖಾನಾಗರ ಶಿಖರ ಇದೆಯಾದರೂ ಗರ್ಭಗೃಹದ ದ್ವಾರ ಬಂಧದ ಲಲಾಟದಲ್ಲಿ ದ್ರಾವಿಡ ವಿಮಾನ ಪದ್ಧತಿಯ ಶಿಖರ ಇರುವ ದೇವಾಲಯದ ಮಾದರಿಯನ್ನು ಕೆತ್ತಲಾಗಿದೆ. ಇದರಿಂದ ಅಲ್ಲಿನ ಶಿಲ್ಪಗಳಿಗೆ ದ್ರಾವಿಡ ಮತ್ತು ಔತ್ತರೇಯ ಪ್ರಧಾನವಾದ ರೇಖಾನಾಗರ ಶೈಲಿಯ ಪರಿಚಯ ಇತ್ತೆಂದು ಸ್ಪಷ್ಟವಾಗುತ್ತದೆ.
ಪಟ್ಟದಕಲ್ಲಿನ ದೇವಾಲಯಗಳ ಪೈಕಿ ಎದ್ದುಕಾಣುವ ಮತ್ತು ಆಕರ್ಷಕವಾದ ಶಿಖರ ಇರುವುದೇ ಗಳಗನಾಥ ದೇವಾಲಯ. ರೇಖಾನಾಗರಶೈಲಿಯ ಶಿಖರಕ್ಕೆ ದೊರೆಯುವ ಮಹತ್ವದ ಉದಾಹರಣೆ ಗಳಗನಾಥ ದೇವಾಲಯದ ಶಿಖರ. ಸಾಂಧಾರ ದೇವಾಲಯವಾದ ಇಲ್ಲಿಯೂ ಗರ್ಭಗೃಹ ಮತ್ತು ಅಂತರಾಳಗಳು ಮಾತ್ರ ಉಳಿದಿವೆ.
ದೇವಾಲಯ ನಿರ್ಮಾಣದ ಪ್ರೌಢ ಹಂತವನ್ನು ಪಟ್ಟದಕಲ್ಲಿನ ಮಲ್ಲಿಕಾರ್ಜುನ, ವಿರೂಪಾಕ್ಷ ಮತ್ತು ಕಾಶಿವಿಶ್ವೇಶ್ವರ ದೇವಾಲಯಗಳಲ್ಲಿ ಕಾಣಬಹುದು. ಲೋಕೇಶ್ವರ (ವಿರೂಪಾಕ್ಷ ) ದೇವಾಲಯವು ಪರಿಪೂರ್ಣ ಮಾತ್ರವಲ್ಲದೆ ವಿಸ್ತಾರವಾಗಿಯೂ ಇದೆ. ಲೋಕೇಶ್ವರ ಮತ್ತು ತ್ರೈಲೋಕೇಶ್ವರ ದೇವಾಲಯ ಗಳೆರಡೂ ಸಮಕಾಲೀನ ನಿರ್ಮಿತಿಗಳು. ಗರ್ಭಗೃಹ, ಅಂತರಾಳ, ನವರಂಗ ಅಥವಾ ಸಭಾಮಂಟಪವಲ್ಲದೆ, ಮುಖಮಂಟಪಗಳ ಸೇರ್ಪಡೆ, ಎತ್ತರದ
ಅಧಿಷ್ಠಾನ, ಅದರ ಪಟ್ಟಿಕೆಗಳಲ್ಲಿ ರಾಮಾಯಣ ಮತ್ತು ಮಹಾಭಾರತದ ಕಥನಗಳ ಚಿತ್ರಣ, ಹೊರಭಿತ್ತಿಗಳಲ್ಲಿ ವಿವಿಧ ದೇವಮೂರ್ತಿಗಳ ಕೆತ್ತನೆ, ಒಳ ಕಂಬಗಳ ಮೇಲೆ ಪಟ್ಟಿಕೆಗಳಲ್ಲಿ ಕಥಾನಕಗಳ ಕೆತ್ತನೆ, ಅಲಂಕರಣ ಇತ್ಯಾದಿಗಳು ಕ್ರಿ.ಶ. 8ನೆಯ ಶತಮಾನದ ಪೂರ್ವಾರ್ಧದ ಹೊತ್ತಿಗೇ ದೇವಾಲಯ ನಿರ್ಮಾಣದಲ್ಲಿ ಸಾಧಿಸಿದ್ದ ಪ್ರೌಢಿಮೆಯನ್ನು ಸೂಚಿಸುತ್ತವೆ. ಇದು ಒಂದು ಸಾಂಧಾರ ದೇವಾಲಯವಾಗಿ ಇರುವುದರಿಂದ ಹಳೆಯದನ್ನು ಪೂರ್ಣವಾಗಿ ತ್ಯಜಿಸದೆ, ದೇವಾಲಯದ ಸೊಬಗನ್ನು ಮತ್ತು ಉಪಯುಕ್ತತೆಯನ್ನು ಹೆಚ್ಚಿಸುವ ಎಲ್ಲ ಪ್ರಯತ್ನಗಳೂ ಇಲ್ಲಿ ಸಫಲಗೊಂಡಿರುವುದನ್ನು ಕಾಣಬಹುದು. ನವರಂಗದಲ್ಲಿ ಎರಡು ದೇವಕೋಷ್ಠಗಳಿದ್ದು, ಅಲ್ಲಿ ಗಣೇಶ ಮತ್ತು ಮಹಿಷಾಸುರ ಮರ್ದಿನಿಯ ಮೂರ್ತಿಗಳಿಗೆ ಅವಕಾಶ ದೊರೆತಿದೆ. ದೇವಾಲಯದ ಮುಂಭಾಗದಲ್ಲಿ ಎತ್ತರದ ಅಧಿಷ್ಠಾನದ ಮೇಲೆ ದೇವಾಲಯದ ಎತ್ತರಕ್ಕೆ ಸಮಾನವಾಗಿ ನಂದಿಮಂಟಪವಿದೆ. ಮಂಟಪವು ಮೂರು ಕಡೆಗಳಲ್ಲಿ ತೆರೆದುಕೊಂಡಿದ್ದು , ಅಲ್ಲಿ ಪ್ರತಿಷ್ಠಿತನಾಗಿರುವ ಬೃಹತ್ ನಂದಿಯನ್ನು ಎಲ್ಲರೂ ನೋಡಬಹುದು. ಎರಡು ಕಡೆಗಳಿಂದ ಪ್ರವೇಶಿಸಬಹುದಾದ ತೆರೆದ ಮುಖ ಮಂಟಪದಲ್ಲಿರುವ ಶಿಲ್ಪಗಳು ವಿಶೇಷ ಗಮನ ಸೆಳೆಯುತ್ತವೆ. ಇಲ್ಲಿನ ಒಂದು ಶಾಸನವು ಅಚಲ ಎಂಬ ನಾಟ್ಯಾಚಾರ್ಯನನ್ನು ಪ್ರಸ್ತಾಪಿಸಿದೆ. ಇದರಿಂದ ಕ್ರಿ.ಶ. 8ನೆಯ ಶತಮಾನದ ಹೊತ್ತಿಗೆ ದೇವಾಲಯಗಳಲ್ಲಿ ನೃತ್ಯಕ್ಕೆ ದೊರೆತಿದ್ದ ಪ್ರಾಶಸ್ತ್ಯ ತಿಳಿಯುತ್ತದೆ. ಮಲ್ಲಿಕಾರ್ಜುನ ಅಥವಾ ತ್ರೈಲೋಕೇಶ್ವರ ದೇವಾಲಯವು ಲೋಕೇಶ್ವರ ಮತ್ತು ಸಂಗಮೇಶ್ವರ ದೇವಾಲಯಗಳ ಹಿಂದೆ ಇದ್ದು , ಅದು ವಿರೂಪಾಕ್ಷ ದೇವಾಲಯದ ಪಡಿಯಚ್ಚಿನಂತೆ ಕಂಡರೆ ಆಶ್ಚರ್ಯವಿಲ್ಲ.
ಪಟ್ಟದಕಲ್ಲಿನ ದೇವಾಲಯ ಸಂಕೀರ್ಣದಿಂದ ಪ್ರತ್ಯೇಕವಾಗಿ ನಿರ್ಮಾಣ ಗೊಂಡಿರುವಂತೆ ಕಂಡರೂ, ಅದೇ ಸಾಲಿನಲ್ಲಿರುವ ಪಾಪನಾಥ ದೇವಾಲಯವು ಕಾಲದ ದೃಷ್ಟಿಯಿಂದ ಇಲ್ಲಿನ ಉಳಿದ ಎಲ್ಲ ದೇವಾಲಯಗಳಿಗಿಂತ ಪ್ರಾಚೀನ ಎನ್ನಬೇಕಾಗುತ್ತದೆ. ಆದರೆ, ಮೊದಲಿಗೆ ಎರಡನೆಯ ಕೀರ್ತಿವರ್ಮನ ಕಾಲದಲ್ಲಿ ಕೇವಲ ಗರ್ಭಗೃಹವಿದ್ದ ದೇವಾಲಯವು ಅನಂತರ ಎರಡನೆಯ ವಿಕ್ರಮಾದಿತ್ಯನ ಕಾಲಕ್ಕೆ ವಿಸ್ತಾರಗೊಂಡಿರುವಂತೆ ತೋರುತ್ತದೆ. ಸಾಂಧಾರ ಗರ್ಭಗೃಹ, ಸುಕನಾಸಿ ಅಥವಾ ಅಂತರಾಳ, ಸಭಾಮಂಟಪ ಅಥವಾ ನವರಂಗ ಮತ್ತು ತೆರೆದ ಮುಖಮಂಟಪಗಳಿರುವ ಪಾಪನಾಥ ದೇವಾಲಯದ ಅಧಿಷ್ಠಾನ ಎತ್ತರವಾಗಿದೆ. ಮುಖ ಮಂಟಪದಲ್ಲಿನ ಕಂಬಗಳು, ಕಿನ್ನರದಂಪತಿಗಳ ಶಿಲ್ಪಗಳು, ಒಳಛತ್ತಿನಲ್ಲಿನ ನಟರಾಜ ಶಿಲ್ಪ , ನವರಂಗದಲ್ಲಿನ ನಂದಿ ಇತ್ಯಾದಿಗಳಲ್ಲದೆ ಹೊರಭಿತ್ತಿಯ ಮೇಲಿನ ಭಾಗವತ, ರಾಮಾಯಣ ಮತ್ತು ಮಹಾಭಾರತದ ಪ್ರಸಂಗಗಳ ನಿರೂಪಣಾ ಸಹಿತ ಶಿಲ್ಪಗಳು ದೇವಾಲಯ ನಿರ್ಮಾಣ ದಲ್ಲಿ ಸಾಧಿತವಾಗಿದ್ದ ಪರಿಪೂರ್ಣತೆಯ ಗುರುತು ಗಳಾಗಿವೆ. ಪಟ್ಟದಕಲ್ಲನ್ನು ಭಾರತೀಯ ವಾಸ್ತುಶಿಲ್ಪದ ತೂಗುತೊಟ್ಟಿಲು ಎನ್ನಲು ದೇವಾಲಯ ನಿರ್ಮಾಣದಲ್ಲಿ ಇಲ್ಲಿನ ಪ್ರಯೋಗಗಳು ಮತ್ತು ಅದರ ಫಲವಾಗಿ ಉಳಿದಿರುವ ದೇವಾಲಯಗಳು ಸಾಕ್ಷಿಗಳಾಗಿವೆ. ಕೇವಲ ಗರ್ಭಗೃಹ, ಅಂತರಾಳ ಅಥವಾ ಅರ್ಧಮಂಟಪ ಅಥವಾ ಸುಕನಾಸಿಯ ಸಹಿತ ಸಾಂಧಾರ ಗರ್ಭಗೃಹ, ಅದಕ್ಕೆ ಹೊಂದಿಕೊಂಡಂತಿರುವ ಸಭಾಮಂಟಪ ಅಥವಾ ನವರಂಗ, ಮುಚ್ಚಿದ ಅಥವಾ ತೆರೆದ ಮುಖಮಂಟಪ, ಕಂಬಗಳು, ಬೋದಿಗೆಗಳು, ಅವುಗಳ ಮೇಲಿನ ಅಲಂಕರಣ, ಮಿಥುನಶಿಲ್ಪಗಳು, ಹೊರಭಿತ್ತಿಯಲ್ಲಿನ ಕಥನಶಿಲ್ಪಗಳು, ಗರ್ಭಗೃಹದ ಮೇಲಿನ ದಾಕ್ಷಿಣಾತ್ಯ, ಔತ್ತರೇಯ ಮತ್ತು ಮಿಶ್ರ ಮಾದರಿಯ ಶಿಖರಗಳು ದೇವಾಲಯ ನಿರ್ಮಾಣ ಪ್ರಕ್ರಿಯೆಯಲ್ಲಿನ ಸಾಧನೆಯನ್ನು ಸ್ಪಷ್ಟಪಡಿಸುತ್ತವೆ. ಆದ್ದರಿಂದಲೇ ಪಟ್ಟದಕಲ್ಲನ್ನು ವಾಸ್ತು ಶಿಲ್ಪದ ಪ್ರಯೋಗಕೇಂದ್ರ ಎಂದು ಒಪ್ಪಿಕೊಳ್ಳುವುದು ಅನಿವಾರ್ಯ.
ಬಾದಾಮಿ, ಐಹೊಳೆ ಮತ್ತು ಪಟ್ಟದಕಲ್ಲುಗಳಲ್ಲಿ ಇರುವಂತೆಯೇ ಅವುಗಳಿಗೆ ಹೊಂದಿಕೊಂಡ ಮಹಾ ಕೂಟ ಮತ್ತು ಆಂಧ್ರಪ್ರದೇಶದ ಮೆಹಬೂಬ್ ನಗರ ಜಿಲ್ಲೆಯಲ್ಲಿ ಇರುವ ಆಲಂಪುರಗಳಲ್ಲಿ ದೇವಾಲಯ ನಿರ್ಮಾಣದ ಎಲ್ಲ ಹಂತಗಳನ್ನೂ ಗುರುತಿಸಲು ಸಾಧ್ಯವಾಗುತ್ತದೆ.
ಬಾದಾಮಿ ಚಾಲುಕ್ಯರ ಕಾಲದ ದೇವಾಲಯ ನಿರ್ಮಾಣ ಪ್ರಕ್ರಿಯೆ ರಾಷ್ಟ್ರಕೂಟರ ಕಾಲದಲ್ಲೂ ಮುಂದುವರಿದಿದೆ. ಪಟ್ಟದಕಲ್ಲಿನಲ್ಲೇ ರಾಷ್ಟ್ರಕೂಟರ ಕಾಲದಲ್ಲಿ ನಿರ್ಮಾಣಗೊಂಡಿರುವ ಜೈನ ನಾರಾಯಣ ಬಸದಿ ಇದೆ. ಐಹೊಳೆಯ ಮೇಗುತಿ ದೇವಾಲಯದ ಎರಡು ಅಂತಸ್ತಿನ ಬಸದಿಯನ್ನು ನೆನಪುಮಾಡುವ ಜೈನ ಬಸದಿಯು ಬಾದಾಮಿ ಚಾಲುಕ್ಯರಕಾಲದ ದೇವಾಲಯ ನಿರ್ಮಾಣದ ವಿಧಾನವೇ ರಾಷ್ಟ್ರಕೂಟರ ಕಾಲದಲ್ಲೂ ಮುಂದುವರಿದುಕೊಂಡು ಬಂದಿರುವುದಕ್ಕೆ  ಸಾಕ್ಷಿಯಾಗಿದೆ. ರಾಷ್ಟ್ರಕೂಟರ ಕಾಲದಲ್ಲಿ ಐಹೊಳೆಯಲ್ಲೂ ಕೆಲವು ದೇವಾಲಯಗಳು ನಿರ್ಮಾಣವಾಗಿವೆ. ಸಿರಿವಾಳ, ಲಕ್ಷ್ಮೇಶ್ವರ, ಕುಡತಿನಿ, ಸೊಂಡೂರು ಇತ್ಯಾದಿ ಸ್ಥಳಗಳಲ್ಲಿ ರಾಷ್ಟ್ರಕೂಟರ ಕಾಲದ ಅನೇಕ ದೇವಾಲಯಗಳಿವೆ. ಇವುಗಳಲ್ಲಿ ಅಲಂಕರಣಕ್ಕಿಂತ ಹೆಚ್ಚಾಗಿ ಸರಳತೆ, ವಿಸ್ತಾರ ಮತ್ತು ಕಂಬಗಳ ವೈವಿಧ್ಯದಿಂದ ದೇವಾಲಯಗಳಿಗೆ ಗಾಂಭೀರ್ಯ ಲಭಿಸಿದೆ. ರಾಷ್ಟ್ರಕೂಟರ ಕಾಲದ ವಾಸ್ತು ಶಿಲ್ಪದ ಬಗ್ಗೆ ಅಧ್ಯಯನ ಮಾಡುವ ಯಾರೇ ಆದರೂ ಎಲ್ಲೋರವನ್ನು ಮರೆಯಲು ಸಾಧ್ಯವಿಲ್ಲ. ಎಲ್ಲೋರದ 15ನೆಯ ಸಂಖ್ಯೆಯ ಗುಹೆ ದಶಾವತಾರ ಗುಹೆ ಎಂದು ಪ್ರಸಿದ್ಧಿ ಪಡೆದಿದೆ.
ರಾಷ್ಟ್ರಕೂಟ ದಂತಿದುರ್ಗನ ಕಾಲದಲ್ಲಿ (ಕ್ರಿಸ್ತಶಕ 735-756) ನಿರ್ಮಾಣವಾಗಿರುವ ಇದು ಎರಡು ಅಂತಸ್ತಿನ ವಿಶಾಲವಾದ ಗುಹಾಲಯ. ಇಲ್ಲಿರುವ ನಂದಿಮಂಟಪ ಪ್ರತ್ಯೇಕವಾಗಿದೆ. ಮೇಲಿನ ಅಂತಸ್ತಿನ ಸಭಾಮಂಟಪದಲ್ಲಿ ಆರು ಸಾಲುಕಂಬಗಳಿವೆ. ಪ್ರತಿಯೊಂದು ಸಾಲಿನಲ್ಲೂ ಒಂಬತ್ತು ಕಂಬಗಳಿದ್ದು , ಒಟ್ಟು 54 ಕಂಬಗಳಲ್ಲೂ ವೈವಿಧ್ಯ ಇದೆ. ಗರ್ಭಗೃಹದ ಮುಂದಿನ ಅಂತರಾಳದಲ್ಲೂ ಎರಡು ಅಲಂಕೃತ ಕಂಬಗಳಿರುವುದು ವಿಶೇಷ ಎಂದೇ ಭಾವಿಸಲಾಗಿದೆ. ದೇವಾಲಯದ ಹೊರಭಿತ್ತಿಯಲ್ಲಿ ದೊಡ್ಡ ಪ್ರಮಾಣದ ಶಿವ ಮತ್ತು ವಿಷ್ಣುಪರವಾದ ಶಿಲ್ಪಗಳಿವೆ.
ರಾಷ್ಟ್ರಕೂಟರ ಕಾಲದ ವಾಸ್ತುಶಿಲ್ಪದ ಬಗ್ಗೆ ಅಧ್ಯಯನ ಮಾಡುವ ಯಾರಿಗೇ ಆದರೂ ಪ್ರಮುಖವಾಗುವುದು ಎಲ್ಲೋರದ ಕೈಲಾಸ ದೇವಾಲಯ. ಕೊರೆದುಮಾಡಿದ ಗುಹಾಲಯಗಳ ನಡುವೆ ಕಡೆದುಮಾಡಿದ ಕೈಲಾಸ ದೇವಾಲಯವು ದೇವಾಲಯ ನಿರ್ಮಾಣದ ಇತಿಹಾಸದಲ್ಲಿ ಒಂದು ಮಹತ್ವದ ಸಾಧನೆ ಎಂದು ತಿಳಿಯಬೇಕಾಗುತ್ತದೆ. ಈಗ ಕರ್ನಾಟಕದಲ್ಲಿ ಇಲ್ಲವಾದರೂ, ಕೈಲಾಸದೇವಾಲಯ ನಿರ್ಮಾಣವಾದ ಕಾಲಕ್ಕೆ ಕರ್ನಾಟಕದ ರಾಜಮನೆತನವಾದ ರಾಷ್ಟ್ರಕೂಟರ ಪೆÇೀಷಣೆಯಲ್ಲೇ ಇದ್ದ ಎಲ್ಲೋರದಲ್ಲಿ ಆದ ದೇವಾಲಯ ನಿರ್ಮಾಣದ ಪ್ರಯೋಗಗಳು ಮಹತ್ವ ಪಡೆದಿವೆ. ಸುಮಾರು 31.12 ಮೀ. ಉದ್ದ , 46.92 ಮೀ. ಅಗಲ ಮತ್ತು 31.61 ಮೀ. ಎತ್ತರ ಇರುವ ಕೈಲಾಸ ದೇವಾಲಯವು ಏಕಶಿಲಾ ದೇವಾಲಯ. ಕಟ್ಟಿದ ದೇವಾಲಯದಂತೆ ಕಾಣುವ, ಗುಡ್ಡಗಳ ನಡುವೆ, ಗುಹೆಗಳಿಗೆ ಹೊಂದಿ ಕೊಂಡಂತೆಯೇ ಇರುವುದರಿಂದ ಗುಹಾಲಯ ಎಂಬ ಭ್ರಮೆ ಹುಟ್ಟಿಸುವ ಕೈಲಾಸದೇವಾಲಯವನ್ನು ಮೇಲಿನಿಂದ ಕಡೆದು ಮಾಡಲಾಗಿದೆ. ಎತ್ತರವಾದ ಅಧಿಷ್ಠಾನದ ಮೇಲೆ ರಥವನ್ನು ಹೋಲುವಂತೆ ನಿರ್ಮಿತವಾಗಿರುವ ಇದು ಎರಡು ಅಂತಸ್ತಿನ ದೇವಾಲಯ ಎಂಬುದೂ ಒಂದು ವಿಶೇಷ. ಗರ್ಭಗೃಹಗಳ ಮೇಲೆ ಮೂರು ಅಂತಸ್ತಿನ ಶಿಖರ ಇದೆ. ಇದಕ್ಕೆ ಹೊಂದಿ ಕೊಂಡಂತೆ ಅರ್ಧ ಕಮಾನಿನ ಸುಕನಾಸಿ ಇದೆ. ಇಡೀ ದೇವಾಲಯವನ್ನು ಆನೆಗಳು ಹೊತ್ತಂತೆ ನಿರ್ಮಿಸಲಾಗಿದೆ. ಕಟ್ಟಿದ ದೇವಾಲಯದ ಎಲ್ಲ ಲಕ್ಷಣಗಳೂ ಇರುವ ಕೈಲಾಸ ದೇವಾಲಯದ ಕೆಳಅಂತಸ್ತಿನಲ್ಲಿ ದೇವಾಲಯದ ಎದುರಿಗೆ ಪ್ರತ್ಯೇಕ ನಂದಿ ಮಂಟಪವಿದೆ. ಇದನ್ನು ದೇವಾಲಯದ ಜೊತೆಗೆ ಸೇತುವೆಯಂಥ ಭಾಗ ಸೇರಿಸಿದೆ. ಇದರ ಒಂದು ಬದಿಗೆ ಏಕಶಿಲಾ ಸ್ತಂಭ ಮತ್ತು ಆನೆಯವಿಗ್ರಹವಿದೆ. ದೇವಾಲಯದ ಹೊರಭಿತ್ತಿಯಲ್ಲಿ ರಾಮಾಯಣ ಮತ್ತು ಮಹಾಭಾರತಗಳ ಕಥಾಪ್ರಸಂಗಗಳನ್ನು ಕೆತ್ತಲಾಗಿದೆ. ಈ ಭಾಗದಲ್ಲೇ ಇರುವ ಕೈಲಾಸವನ್ನು ಎತ್ತುತ್ತಿರುವ ರಾವಣನ ಅದ್ಭುತ ಎನಿಸುವ ಶಿಲ್ಪವಿದೆ. ಬಹುತೇಕ ಈ ಶಿಲ್ಪದ ಕಾರಣದಿಂದಲೇ ಈ ದೇವಾಲಯಕ್ಕೆ ಕೈಲಾಸದೇವಾಲಯ ಎಂಬ ಹೆಸರು ಬಂದಿರಬೇಕು. ದೇವಾಲಯದ ಸುತ್ತಲೂ ಇರುವ ಪ್ರದಕ್ಷಿಣಾಪಥಕ್ಕೆ ಹೊಂದಿಕೊಂಡಂತಿರುವ ತೆರೆದ ಕೈಸಾಲೆಯಲ್ಲಿನ ಶಿಲ್ಪಗಳು ಅತ್ಯಂತ ವಿಶಿಷ್ಟವಾದುವು.
ಎಲ್ಲೋರದ ಕೈಲಾಸದೇವಾಲಯದ ನಿರ್ಮಾಣಕ್ಕೆ ಪಟ್ಟದಕಲ್ಲಿನ ವಿರೂಪಾಕ್ಷ ದೇವಾಲಯ ಪ್ರೇರಣೆ ನೀಡಿದೆ ಎಂಬ ಅಭಿಪ್ರಾಯ ಇದೆ. ಇದು ಮಹಾಬಲಿಪುರದ ರಥ ಗಳಿಂದ ಪ್ರಭಾವಿತವಾಗಿರಬಹುದು ಎಂಬ ಅಭಿಪ್ರಾಯವೂ ಇದೆ. ಆದರೆ, ಪಟ್ಟದಕಲ್ಲಿನ ಪ್ರಭಾವದ ಮಾತನ್ನು ತಳ್ಳಿ ಹಾಕುವುದು ಕಷ್ಟವಾದರೂ, ಇದು ಎರಡು ಅಂತಸ್ತಿನ ನಿರ್ಮಾಣ ಎಂಬುದನ್ನು ಮರೆಯುವಂತಿಲ್ಲ. ಅಲ್ಲದೆ, ಇದು ಕಡೆದು ಮಾಡಿದ ದೇವಾಲಯ. ಮಹಾಬಲಿಪುರದ ರಥಗಳ ಪೈಕಿ ದೊಡ್ಡದು ಎನಿಸಿಕೊಳ್ಳಬಹುದಾದ್ದು ಧರ್ಮರಾಜ ರಥ ಮಾತ್ರ. ಆ ರಥಗಳು ದೇವಾಲಯಗಳ ಸ್ವರೂಪವನ್ನು ಪಡೆಯಲೇ ಇಲ್ಲ. ಆದ್ದರಿಂದ ಕೈಲಾಸ ದೇವಾಲಯವನ್ನು ಯಾವುದರ ಜೊತೆಗೂ ಹೋಲಿಸಲು ಸಾಧ್ಯವಾಗುವುದಿಲ್ಲ. ಇದರ ನಿರ್ಮಾಣ ರಾಷ್ಟ್ರಕೂಟ ಒಂದನೆಯ ಕೃಷ್ಣನ ಕಾಲದಲ್ಲಿ (ಕ್ರಿಸ್ತಶಕ 756-774) ಆರಂಭವಾಯಿತು. ಇಂತಹ ಒಂದು ವಿಶಿಷ್ಟವಾದ ಬೃಹತ್ ದೇವಾಲಯದ ನಿರ್ಮಾಣಕ್ಕೆ ಹಲವು ವರ್ಷಗಳಾದರೂ ಬೇಕು. ಅಷ್ಟು ಬೃಹತ್ ಗಾತ್ರದ ಎರಡು ಅಂತಸ್ತಿನ ಏಕಶಿಲಾ ದೇವಾಲಯದ ನಿರ್ಮಾಣಕ್ಕೆ ಒಬ್ಬ ದೊರೆಯ ಸುಮಾರು 18 ವರ್ಷಗಳ ಆಳ್ವಿಕೆಯ ಅವಧಿ ಸಾಲದು. ಆದ್ದರಿಂದ ಇದು ಎರಡನೆಯ ಅಥವಾ ಮೂರನೆಯ ಕೃಷ್ಣನ ಕಾಲದಲ್ಲಿ ಪೂರ್ಣಗೊಂಡಿರುವ ಸಾಧ್ಯತೆಗಳಿವೆ. ಕರ್ನಾಟಕ ದೇವಾಲಯಗಳ ವಾಸ್ತುವು ಶಾತವಾಹನರಕಾಲಕ್ಕೇ ರೂಪುಗೊಂಡು, ಕದಂಬರ ಕಾಲದಲ್ಲಿ ನಿಧಾನವಾಗಿ ಬೆಳೆದು ಬಾದಾಮಿ ಚಾಲುಕ್ಯರ ಕಾಲದಲ್ಲಿ ಹಲವು ಪ್ರಯೋಗಗಳ ಮೂಲಕ ಒಂದು ಸಿದ್ಧರೂಪ ಪಡೆದು, ರಾಷ್ಟ್ರಕೂಟರ ಕಾಲಕ್ಕೆ ಒಂದು ಮಾದರಿಯನ್ನು ಕಂಡುಕೊಂಡಿತು.'
ಕಲ್ಯಾಣ ಚಾಲುಕ್ಯರ ಆಳ್ವಿಕೆಯ ಕಾಲಕ್ಕೆ ಕರ್ನಾಟಕದಲ್ಲಿ ತನ್ನದೇ ಎನ್ನುವಂತಹ ಒಂದು ವಾಸ್ತು ಶೈಲಿ ಸಿದ್ಧಿಸಿತ್ತು. ಬಾದಾಮಿ ಚಾಲುಕ್ಯರ ಕಾಲದಲ್ಲಿ ದ್ರಾವಿಡ, ನಾಗರ (ಕದಂಬ ಮತ್ತು ರೇಖಾನಾಗರ) ಮತ್ತು ವೇಸರ ಶೈಲಿಗಳ ಪ್ರಯೋಗ ನಡೆದು ದೇವಾಲಯಗಳ ಶಿಖರದ ಭಾಗವು ಒಂದು ನಿಶ್ಚಿತ ರೂಪ ಪಡೆದಿತ್ತು. ದೇವಾಲಯವು ಕೇವಲ ಗರ್ಭಗೃಹದ ಸ್ವರೂಪದಿಂದ ಕಕ್ಷಾಸನ ಸಹಿತ ತೆರೆದ ಮುಖಮಂಟಪದವರೆಗೆ ಬೆಳವಣಿಗೆ ಸಾಧಿಸಿತ್ತು. ಸೂಕ್ತ ಎನಿಸುವ ಸ್ಥಳಗಳಲ್ಲೆಲ್ಲಾ ಶಿಲ್ಪಗಳು ಅವಕಾಶ ಪಡೆದುವು. ದೇವಾಲಯಗಳ ಶೈಲಿಯನ್ನು ಆಳಿದ ರಾಜಮನೆತನಗಳ ಹೆಸರಿನಲ್ಲಿ ಗುರುತಿಸುವ ವಾಡಿಕೆ ರೂಢಿಗೆ ಬಂದದ್ದು , ಬ್ರಿಟಿಷರು ಭಾರತದಲ್ಲಿ ನೆಲೆಯೂರಿ ನಮ್ಮ ದೇವಾಲಯ ಗಳನ್ನು ಅಭ್ಯಸಿಸಲು ಆರಂಭಿಸಿದನಂತರ.
ಕಲ್ಯಾಣ ಚಾಲುಕ್ಯರು ಮತ್ತು ಅವರಿಗೆ ಸಮಕಾಲೀನರಾದ ಹೊಯ್ಸಳರ ಆಳ್ವಿಕೆಯ ಕಾಲದಲ್ಲಿ ದೇವಾಲಯಗಳ ನಿರ್ಮಾಣವು ಸ್ಥೂಲ ವಿನ್ಯಾಸದ ದೃಷ್ಟಿಯಿಂದ ಅಂತಹ ಬದಲಾವಣೆಗಳೇನನ್ನೂ ಮಾಡಿಕೊಳ್ಳಲಿಲ್ಲವಾದರೂ, ಗರ್ಭಗೃಹದ ಹೊರಭಿತ್ತಿಯನ್ನು ನಕ್ಷತ್ರಾಕಾರವನ್ನಾಗಿಸಿ, ಅಲಂಕರಣ ಶಿಲ್ಪಗಳಿಗೆ ಹೆಚ್ಚು ಸ್ಥಳಾವಕಾಶ ಮಾಡಿಕೊಂಡಿರುವುದು ಸ್ಪಷ್ಟ . ನಕ್ಷತ್ರಾಕಾರದ ವಿನ್ಯಾಸಕ್ಕಾಗಿ ಗೋಡೆಗಳ ಗಾತ್ರ ಹೆಚ್ಚುವುದು ಅನಿವಾರ್ಯವಾಗಿದೆ. ಅಲ್ಲದೆ ಹೊಯ್ಸಳ ಪ್ರದೇಶದ ದೇವಾಲಯಗಳಲ್ಲಿ ಬಳಸಿದ ಬಳಪದ ಕಲ್ಲಿಗೆ ಹೆಚ್ಚು ಭಾರವನ್ನು ಹೊರುವ ಸಾಧ್ಯತೆ ಇಲ್ಲದಿದ್ದ ಕಾರಣ ಗೋಡೆಗಳ ಎತ್ತರ ಕಡಿಮೆಯಾಗಿದೆ. ವೇದಿಕೆಯು ಹೆಚ್ಚು ಅಲಂಕೃತವಾಗದಿದ್ದರೂ, ಅಧಿಷ್ಠಾನದ ಭಾಗ, ಅದರಲ್ಲೂ ವಿಶೇಷವಾಗಿ ಗರ್ಭಗೃಹದ ಅಧಿಷ್ಠಾನದ ಭಾಗ ಹೆಚ್ಚು ಅಲಂಕೃತವಾಗಿದ್ದೇ ಅಲ್ಲದೆ, ಹೊರ ಭಾಗದ ಭಿತ್ತಿಯಲ್ಲಿ ದೇವಕೋಷ್ಠಗಳ ರಚನೆಗೆ ಅವಕಾಶ ದೊರೆತು, ಅಲ್ಲಿ ದೇವಾಲಯದಲ್ಲಿ ಪ್ರತಿಷ್ಠಾಪನೆಗೊಂಡ ದೇವರಿಗೆ ಸಂಬಂಧಿಸಿದ ವಿವಿಧ ಶಿಲ್ಪಗಳು ಅಲಂಕಾರಕ್ಕೆ ಸ್ಥಾಪಿತವಾದವು. ಗರ್ಭಗೃಹದ ಮೇಲಿನ ಶಿಖರಗಳು ಕಲ್ಲಿನಿಂದಲೇ ರೂಪುಗೊಂಡದ್ದರಿಂದ ಅವುಗಳ ಭಾರವನ್ನು ತಡೆಯಲು ಸಾಧ್ಯವಾಗುವಂತೆ ಗರ್ಭಗೃಹಗಳ ಗೋಡೆಗಳ ದಪ್ಪ ಹೆಚ್ಚಿತು. ಗರ್ಭಗೃಹ ಮತ್ತು ಅಂತರಾಳ/ಅರ್ಧಮಂಟಪ/ಸುಕನಾಸಿಗಳಲ್ಲಿ ಹೆಚ್ಚಿನ ಬದಲಾವಣೆಗಳು ಆಗಲಿಲ್ಲವಾದರೂ, ಅರ್ಧಮಂಟಪದ ದ್ವಾರಬಂಧದಿಂದ ಆಚೆಗೆ ಅನೇಕ ಬದಲಾವಣೆಗಳಾದವು. ಅರ್ಧಮಂಟಪವನ್ನು ಅವುಗಳ ಮುಂದಿನ ಮಕರತೋರಣ ಆಕರ್ಷಕಗೊಳಿಸಿತು. ಪ್ರಮಾಣದ ದೃಷ್ಟಿಯಿಂದಲೂ ಕಲ್ಯಾಣ ಚಾಲುಕ್ಯರ ಕಾಲವು ಮಹತ್ವದ ಸಾಧನೆ ಮಾಡಿದೆ. ಆಗ ಹೆಚ್ಚಾಗಿ ಅಸ್ತಿತ್ವದಲ್ಲಿದ್ದ ಶೈವ ಧರ್ಮೀಯರಾದ ಕಾಪಾಲಿಕರು ಮತ್ತು ಕಾಳಾಮುಖರು ಪ್ರಮುಖವಾಗಿ ಶೈವ ಮತ್ತು ಉಳಿದಂತೆ ವೈಷ್ಣವ ದೇವಾಲಯಗಳ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ಕೊಟ್ಟಿರುವುದು ಸ್ಪಷ್ಟ . ಆ ಕಾಲದಲ್ಲಿ ಜೈನಬಸದಿಗಳ ನಿರ್ಮಾಣವೂ ಆಗಿದೆ. ಆದರೆ, ಯಾವುದೇ ದೇವಾಲಯ ಅಥವಾ ಬಸದಿಯ ಸ್ಥೂಲ ಸ್ವರೂಪದಲ್ಲಿ ಹೆಚ್ಚಿನ ವ್ಯತ್ಯಾಸವನ್ನು ಗುರುತಿಸುವುದು ಸಾಧ್ಯವಿಲ್ಲ. ಬಾದಾಮಿಯಲ್ಲಿ ಭೂತನಾಥ ಗುಡಿಗಳು, ಐಹೊಳೆಯಲ್ಲಿ ಏಣಿಯರ ಗುಡಿಗಳು ನಿರ್ಮಾಣವಾದದ್ದು ಕಲ್ಯಾಣ ಚಾಲುಕ್ಯರ ಕಾಲದಲ್ಲಿ . ಆ ಕಾಲವು ಕರ್ನಾಟಕದಲ್ಲಿ ದೇವಾಲಯಗಳ ನಿರ್ಮಾಣದ ಸುಗ್ಗಿಯ ಕಾಲ. ಮೊದಲಿಗೆ ಕೇವಲ ರಾಜರು ಮತ್ತು ರಾಜಕುಟುಂಬಗಳವರು ದೇವಾಲಯ ನಿರ್ಮಾಣಕ್ಕೆ ಮುಂದಾಗುತ್ತಿದ್ದರು. ಕಲ್ಯಾಣ ಚಾಲುಕ್ಯರು ಮತ್ತು ಹೊಯ್ಸಳರ ಕಾಲಕ್ಕೆ ರಾಜರು ಮತ್ತು ರಾಜಕುಟುಂಬದವರು ಮಾತ್ರವಲ್ಲದೆ, ಅಧಿಕಾರಿಗಳು, ಶ್ರೀಮಂತರು ಮತ್ತು ಆಸಕ್ತರೆಲ್ಲರೂ ದೇವಾಲಯ ನಿರ್ಮಾಣಕ್ಕೆ ಮುಂದಾಗುತ್ತಿದ್ದರು. ದೇವಾಲಯ ನಿರ್ಮಾತೃಗಳಂತೆ ಭಕ್ತರ ಸಂಖ್ಯೆಯೂ ಹೆಚ್ಚುತ್ತಿತ್ತು. ಆದ್ದರಿಂದ ವಿವಿಧ ಸೇವೆಗಳಿಗಾಗಿ ದೊರೆಯುವ ದಾನಗಳ ಪ್ರಮಾಣವೂ ಹೆಚ್ಚಿತ್ತು. ಅವಕಾಶ ಮತ್ತು ಅನುಕೂಲಕ್ಕೆ ತಕ್ಕಂತೆ ದೇವಾಲಯಗಳು ಬೆಳೆದವು.
ಗಿಡುಗಡಿದುತ್ರ್ತು ಬಿತ್ತಿ ಫಲಮಂಪಡೆದುಣ್ನದೆ ಲಾಬಲೋಬದಿಂ
ಮಡಗಿ ಬಳಿಕ್ಕೆ ಗಾವಣಿಗೆ ಗೆಂಟಿಗೆ ಟೊಪ್ಪರವಿಟ್ಟುಕೊಳ್ವನಿ
ಗ್ಗಡಿ ನಿಪಜ್ಞತ್ತ ತೆತ್ತು ಬ¾Âದಾಗಿ ಬೆಳ್ಮೊಗದಿಂದವಿಪ್ರ್ಪಬೆ
ಳ್ಗುಡಿಯರನೇಕೆ ಪೆÇೀಲಿಸುವೆ ಬಮ್ರ್ಮಣ್ನನೊಲು ಹಿತಧರ್ಮಕಾರ್ಯನೊಳ್ ||
ತಾನುಣ್ನದೆ ಪೆ¾ಗ್ರ್ಗಿಕ್ಕದೆ
ಪೇನಿಯ ಪೆವ್ರ್ವುಡಕೆಯೆನಿಸಿ ಮಡಗದೆ ಧನಮಂ
ಮಾನವರತ್ನಂ ಬಮ್ರ್ಣ
ನಾನಂದದೆ ವಿಷ್ಣು ಭವನಮಂ ಮಾಡಿಸಿದಂ ||
ಮೇಲಿನ ಶಾಸನ ಪದ್ಯಗಳು ಅಂದಿನ ಸಾಮಾಜಿಕ ಪರಿಸ್ಥಿತಿಯ ಪರಿಚಯ ಮಾಡಿಸುತ್ತವೆ. ದೇವಾಲಯ ನಿರ್ಮಾಣವು ಅಂದಿನ ಅವಶ್ಯಕತೆಗಳಿಗೆ ತಕ್ಕಂತೆ ಮುಂದುವರಿದಿತ್ತು ಎಂದು ಸ್ಪಷ್ಟವಾಗುತ್ತದೆ. ಬಾದಾಮಿ ಚಾಲುಕ್ಯರ ಆಳ್ವಿಕೆಯ ಕೊನೆಯ ಕಾಲಕ್ಕೆ ನಿಶ್ಚಿತ ರೂಪ ಪಡೆದ ದೇವಾಲಯಗಳು ರಾಷ್ಟ್ರಕೂಟರ ಕಾಲದಲ್ಲಿ ಮತ್ತಷ್ಟು ಪರಿಷ್ಕಾರಗೊಂಡು ಕಲ್ಯಾಣ ಚಾಲುಕ್ಯರ ಕಾಲಕ್ಕೆ ಸಿದ್ಧಗೊಂಡ ರೂಪವು ದೀರ್ಘ ಕಾಲ ಮುಂದುವಯಿತು.
ಕಲ್ಯಾಣ ಚಾಲುಕ್ಯರ ಕಾಲದಲ್ಲಿ ದೇವಾಲಯ ವಾಸ್ತುವಿಗೆ ಸಂಬಂಧಿಸಿದಂತೆ ಹೆಚ್ಚು ಪ್ರಯೋಗಗಳಾದಂತೆ ಕಾಣುವುದಿಲ್ಲ. ಗರ್ಭಗೃಹದ ಹೊರಭಾಗದ ಆಯತಾಕಾರ ಅಥವಾ ಚತುರಸ್ರಾಕಾರ ಮಾತ್ರ ಹೆಚ್ಚು ಕೋನಗಳ ನಕ್ಷತ್ರಾಕಾರಕ್ಕೆ ಬದಲಾದದ್ದು ಮತ್ತು ಕಂಬಗಳಲ್ಲಿ , ಅದರಲ್ಲೂ ವಿಶೇಷವಾಗಿ ನವರಂಗದ ನಡುವಿನ ನಾಲ್ಕು ಕಂಬಗಳ ಅಲಂಕರಣ, ನವರಂಗದ ಭುವನೇಶ್ವರಿ ಮಾತ್ರವಲ್ಲದೆ ಉಳಿದ ಅಂಕಣಗಳ ಒಳ ಛತ್ತಿನ ಅಲಂಕರಣ ಇತ್ಯಾದಿಗಳು ಆಕರ್ಷಕವಾಗಿವೆ. ಡಂಬಳದ ದೊಡ್ಡಬಸಪ್ಪನ ಗುಡಿಯ ಗರ್ಭಗೃಹದ ಹೊರ ಭಾಗವು ನಕ್ಷತ್ರಾಕಾರಕ್ಕೆ ತಿರುಗಿದೆ. ಇಂತಹ ಪ್ರಯೋಗಗಳು ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಯಥೇಚ್ಛವಾಗಿಯೇ ನಡೆದಿದೆ. ಆದರೂ, ಮೂಲ ವಿನ್ಯಾಸದಲ್ಲಿ ಹೆಚ್ಚಿನ ವ್ಯತ್ಯಾಸವನ್ನೇನೂ ಕಾಣಲಾಗುವುದಿಲ್ಲ.
ಬಾದಾಮಿ ಚಾಲುಕ್ಯರ ಕಾಲಕ್ಕೆ ಲಾಡಖಾನ್ ಗುಡಿಯು ಕೇವಲ ಒಂದು ಸಾರ್ವಜನಿಕ ಸ್ಥಳ ಎನಿಸಿದರೂ, ಅಂತಹ ಉದಾಹರಣೆಗಳು ಕಡಿಮೆ ಎಂದು ಒಪ್ಪಿಕೊಳ್ಳಲೇಬೇಕು. ಅನಂತರದ ಕಾಲದಲ್ಲಿ ದೇವಾಲಯವು ಹೆಚ್ಚು ಸಾರ್ವಜನಿಕ ರನ್ನು ಆಕರ್ಷಿಸಿತು. ಅದಕ್ಕೆ ದೇವಾಲಯಗಳು ವಿಸ್ತಾರ ಗೊಳ್ಳಬೇಕಾಯಿತು ಮತ್ತು ಆಕರ್ಷಕವಾಗಬೇಕಾಯಿತು. ಬಾದಾಮಿ ಚಾಲುಕ್ಯರ ಕಾಲಕ್ಕೆ ಒಂದೇ ಒಂದು ತ್ರಿಕೂಟ ದೇವಾಲಯದ (ಜಂಬುಲಿಂಗ) ಉದಾಹರಣೆ ಸಿಕ್ಕರೆ ಕಲ್ಯಾಣ ಚಾಲುಕ್ಯರ ಕಾಲಕ್ಕೆ ತ್ರಿಕೂಟ ದೇವಾಲಯಗಳ ಸಂಖ್ಯೆ ಹೆಚ್ಚಿತು. ದೇವಾಲಯಗಳು ಸಾರ್ವಜನಿಕವಾಗಿ ಹೆಚ್ಚು ಬಳಕೆಗೆ ಬಂದವು. ಅದಕ್ಕೆ ಹೊಂದಿಕೊಂಡಂತೆ ಮಠಗಳು ಮತ್ತು ಶಾಲೆಗಳು ಸೇರ್ಪಡೆಯಾದವು. ಆದರೆ, ಇವು ದೇವಾಲಯಗಳಿಂದ ಪ್ರತ್ಯೇಕವಾಗಿಯೇ ಇರುತ್ತಿದ್ದವು. ದೇವಾಲಯದಲ್ಲಿ ಸೇವೆಗಳು ಹೆಚ್ಚಿದಂತೆ, ದಾನಗಳು ಹೆಚ್ಚಬೇಕಾಯಿತು. ದಾನಗಳು ಹೆಚ್ಚಿದಂತೆ ಪೂಜಾ ವಿಧಿ-ವಿಧಾನಗಳಲ್ಲಿ ಬದಲಾವಣೆಗಳಾದವು. ದೇವಾಲಯಕ್ಕೆ ಶ್ರೀಮಂತಿಕೆಯ ಶೋಭೆ ಬಂದಿತು. ದೇವಾಲಯಗಳು ಅನಾಥರ ಆಶ್ರಯದ ಸ್ಥಾನಗಳಾಗಿ, ಭೆಷಜ್ಯ ಸ್ಥಾನವಾಗಿ, ವಿದ್ಯಾಕೇಂದ್ರವಾಗಿ ಸಾರ್ವಜನಿಕ ಸೇವೆಯಲ್ಲಿ ತೊಡಗಿ ಕೊಂಡ ಹಲವು ಉದಾಹರಣೆಗಳಿವೆ. ಬಳ್ಳಿಗಾವೆಯ ಕೇದಾರೇಶ್ವರ ದೇವಾಲಯವು ಅಂತಹ ಒಂದು ಪ್ರಮುಖ ಕೇಂದ್ರವಾಗಿತ್ತು. ಐಹೊಳೆಯಲ್ಲಿರುವಂತೆ ಬಳ್ಳಿಗಾವೆಯಲ್ಲೂ ಹಲವು ದೇವಾಲಯಗಳು ನಿರ್ಮಾಣವಾಗಿದ್ದವು.
ಡಂಬಳ, ಲಕ್ಕುಂಡಿ, ಕುಕ್ಕನೂರು, ಗದಗ, ಹಾವೇರಿ, ಹಾನಗಲ್ಲು , ಕುರುವತ್ತಿ , ಇಟಗಿ, ಚೌಡದಾನಪುರ, ಲಕ್ಷ್ಮೇಶ್ವರ ಇತ್ಯಾದಿ ಸ್ಥಳಗಳಲ್ಲಿನ ಕಲ್ಯಾಣಚಾಲುಕ್ಯರ ಕಾಲದ ದೇವಾಲಯಗಳು ಆ ಹೊತ್ತಿಗೆ ದೇವಾಲಯ ವಾಸ್ತು ತಲುಪಿದ್ದ ಉಚ್ಛ್ರಾಯ ಸ್ಥಿತಿಯನ್ನು ಪರಿಚಯಿಸುತ್ತವೆ. ಅಲಂಕರಣಕ್ಕಾಗಿ ಬಾದಾಮಿ ಚಾಲುಕ್ಯರ ಕಾಲದಲ್ಲಿ ಮಿಥುನ ಶಿಲ್ಪಗಳಿದ್ದರೆ, ಕಲ್ಯಾಣ ಚಾಲುಕ್ಯರ ಕಾಲಕ್ಕೆ ಮದನಿಕಾ ಶಿಲ್ಪಗಳು ಬಳಸಲ್ಪಟ್ಟವು. ಅದರ ಸುಳಿವನ್ನು ಕುರುವತ್ತಿಯ ಮಲ್ಲಿಕಾರ್ಜುನ ದೇವಾಲಯದ ಪ್ರವೇಶ ದ್ವಾರದ ತೆರೆದ ಮುಖಮಂಟಪದ ಕಂಬಗಳಲ್ಲೇ ಕಾಣಬಹುದು. ಪಟ್ಟದಕಲ್ಲಿನ ವಿರೂಪಾಕ್ಷ ದೇವಾಲಯದಲ್ಲೇ ನಂದಿ ಮಂಟಪಕ್ಕೆ ಪ್ರತ್ಯೇಕ ಸ್ಥಾನ ದೊರೆತದ್ದು , ಅನಂತರ ಬಹುತೇಕ ಕಲ್ಯಾಣ ಚಾಲುಕ್ಯರ ಮತ್ತು ಅವರ ಸಮಕಾಲೀನ ಹೊಯ್ಸಳರ ಕಾಲದಲ್ಲೂ ಮುಂದುವರಿದಿದೆ. ಕೆಲವು ಸ್ಥಳಗಳಲ್ಲಿ ಮುಖಮಂಟಪಕ್ಕೆ ಹೊಂದಿಕೊಂಡಂತೆಯೇ ದೇವಾಲಯದ ಒಂದು ಭಾಗವಾಗಿ ಪ್ರತ್ಯೇಕ ನಂದಿಮಂಟಪ ಇರುವುದನ್ನು ಬಳ್ಳಿಗಾವೆ, ಇಟಗಿ ಮುಂತಾದ ಸ್ಥಳಗಳಲ್ಲಿ ಕಾಣಬಹುದು. ಕಲ್ಯಾಣಚಾಲುಕ್ಯ ಮತ್ತು ಹೊಯ್ಸಳರ ಕಾಲದ ದೇವಾಲಯಗಳಲ್ಲಿ ಹೊರಭಿತ್ತಿ ಮತ್ತು ದೇವಕೋಷ್ಠಗಳ ವಿಶೇಷ ಅಲಂಕರಣದ ಜೊತೆಗೇ ಕಪೆÇೀತಗಳ ಒಳಭಾಗವು ಮರದ ಕೆತ್ತನೆಯನ್ನು ನೆನಪಿಗೆ ತರುತ್ತವೆ. ಸೂಕ್ಷ್ಮ ಕುಸುರಿ ಕೆಲಸಕ್ಕೂ ಹೊಯ್ಸಳ ಶಿಲ್ಪಿಗಳು ಹೆಚ್ಚಿನ ಒತ್ತು ನೀಡಿದ್ದಾರೆ.
ಕಲ್ಯಾಣ ಚಾಲುಕ್ಯರ ದೇವಾಲಯಗಳಲ್ಲಿ ವಾಸ್ತುವಿನ ವೈವಿಧ್ಯವನ್ನು ಕಾಣಲು ಸಾಧ್ಯವಾದರೆ, ಹೊಯ್ಸಳರ ದೇವಾಲಯಗಳಲ್ಲಿ ಶಿಲ್ಪಗಳ ಸೂಕ್ಷ್ಮ ಅಲಂಕರಣವನ್ನು ಕಾಣಬಹುದು. ದೇವಾಲಯ ಚಕ್ರವರ್ತಿ ಎಂದೇ ಕರೆಸಿ ಕೊಂಡಿರುವ ಇಟಗಿಯ ಮಹಾದೇವ ದೇವಾಲಯವು
ಕ್ರಿ.ಶ. 1112ರಲ್ಲಿ ನಿರ್ಮಾಣಗೊಂಡಿದೆ. ವಿಸ್ತಾರವಾದ ಈ ದೇವಾಲಯ ಉಪಯುಕ್ತತೆಯ ದೃಷ್ಟಿಯಿಂದಲೂ ವಿಶೇಷ ವಾಗಿದೆ. ವಿಸ್ತಾರವಾದ ನವರಂಗದ ಮುಂದಿನ ತೆರೆದ ಮುಖಮಂಟಪದ ಭುವನೇಶ್ವರಿಗಳ ವಿನ್ಯಾಸಗಳು ವಾಸ್ತು ತಜ್ಞರ ಮತ್ತು ಶಿಲ್ಪಿಗಳ ಕಲಾಭಿರುಚಿಯ ಸಾರ್ಥಕ ಉದಾಹರಣೆಗಳು. ಕಲ್ಯಾಣ ಚಾಲುಕ್ಯರ ಕಾಲದಲ್ಲಿ 250ಕ್ಕೂ ಹೆಚ್ಚು ದೇವಾಲಯಗಳು ನಿರ್ಮಾಣವಾಗಿವೆ ಎಂಬ ಒಂದು ಸ್ಥೂಲ ಅಂದಾಜಿದೆ. ಸಾಮಾನ್ಯರೆಂದು ಗುರುತಿಸಬಹುದಾದ ಜನರಿಂದಲೇ 125ಕ್ಕೂ ಹೆಚ್ಚು ದೇವಾಲಯಗಳು ಕಲ್ಯಾಣ ಚಾಲುಕ್ಯರು ಮತ್ತು ಹೊಯ್ಸಳರ ಕಾಲದಲ್ಲಿ ನಿರ್ಮಾಣವಾಗಿವೆ.
ಹೊಯ್ಸಳರ ಆಳ್ವಿಕೆಯ ಪ್ರದೇಶದಲ್ಲಿ ನಿರ್ಮಾಣ ಗೊಂಡಿರುವ ದೇವಾಲಯಗಳ ಸಂಖ್ಯೆಯೂ ಅಧಿಕ. ಇವುಗಳಲ್ಲಿ ಅನೇಕ ದೇವಾಲಯಗಳು ಗುಣಾತ್ಮಕವಾಗಿಯೂ ಪ್ರಮುಖವಾಗಿವೆ. ಬೇಲೂರು, ಹಳೆಬೀಡು, ಸೋಮನಾಥ ಪುರ ಇತ್ಯಾದಿ ಸ್ಥಳಗಳಲ್ಲಿನ ದೇವಾಲಯಗಳು ಎತ್ತರ, ವಿಸ್ತಾರ, ಅಲಂಕರಣ ಇತ್ಯಾದಿ ಎಲ್ಲ ದೃಷ್ಟಿಯಿಂದಲೂ ಪರಿಪೂರ್ಣ ಎನ್ನುವ ಹಂತವನ್ನು ತಲುಪಿ, ಇವುಗಳ ರಕ್ಷಣೆಗೂ ಹೆಚ್ಚಿನ ಎಚ್ಚರ ವಹಿಸಬೇಕಾದ ಪರಿಸ್ಥಿತಿ ಇತ್ತು ಎಂದು ಭಾವಿಸಲು ಅವಕಾಶಗಳಿವೆ. ಇಂತಹ ರಕ್ಷಣೆ ವಿಜಯನಗರದ ಅರಸರ ಕಾಲದಲ್ಲಿ ದೊರೆತಿದೆ.
ವಿಜಯನಗರದ ಅರಸರ ಕಾಲಕ್ಕೆ ವೈದಿಕ ಧರ್ಮದ ಎಷ್ಟೋ ಆಚರಣೆಗಳು ದೇವಾಲಯದ ಒಳಕ್ಕೂ ಪ್ರವೇಶಿಸಿವೆ. ಅದಕ್ಕೆ ತಕ್ಕಂತೆ ಯಾಗಶಾಲೆ, ಪಾಕಶಾಲೆ, ಕಲ್ಯಾಣ ಮಂಟಪ ಇತ್ಯಾದಿಗಳ ಸೇರ್ಪಡೆ ಅನಿವಾರ್ಯವಾದಂತೆ ಕಾಣುತ್ತದೆ. ಕಲ್ಯಾಣ ಚಾಲುಕ್ಯರ ಕಾಲದಲ್ಲಿ ದೇವಾಲಯಗಳ ಜೊತೆಗಿದ್ದ ಮಠಗಳು/ಶಾಲೆಗಳು ವಿಜಯನಗರದ ಕಾಲದಲ್ಲಿ ಪ್ರತ್ಯೇಕ ಗೊಂಡವು. ದೇವಾಲಯಗಳ ಸುತ್ತ ವಿಸ್ತಾರವಾದ ಪ್ರಾಕಾರಗಳು ರಚನೆಗೊಂಡವು. ಇಡಿಯಾಗಿ ದಕ್ಷಿಣ ಭಾರತವು ವಿಜಯ ನಗರದ ಅರಸರ ಆಳ್ವಿಕೆಗೆ ಸೇರಿತ್ತು. ದಕ್ಷಿಣ ಭಾರತದಲ್ಲಿನ ಭಿನ್ನ ಸಂಪ್ರದಾಯ ಮತ್ತು ಶೈಲಿಗಳು ಸಮೀಕೃತಗೊಂಡ ಒಂದುಶೈಲಿ ರೂಪುಗೊಂಡಿತು. ಈ ಕಾಲಕ್ಕೆ ದೇವಾಲಯದ ನಿರ್ಮಾಣಕ್ಕೆ ಬಳಕೆಯಾದದ್ದು ಹೆಚ್ಚಾಗಿ ಗ್ರಾನೈಟ್ ಶಿಲೆ. ಆ ಶಿಲೆಯು ಹೆಚ್ಚಿನ ಅಲಂಕರಣಕ್ಕೆ ಅನುಕೂಲಕರವಲ್ಲ. ಆದ್ದರಿಂದ ದೇವಾಲಯಗಳ ಭವ್ಯತೆಯನ್ನು ಕಾಪಾಡಲು ಅವುಗಳ ಎತ್ತರವನ್ನು ಹೆಚ್ಚಿಸಬೇಕಾಯಿತು.
ಹಂಪೆಯಲ್ಲಿರುವ ಹಲವು ದೇವಾಲಯಗಳಲ್ಲಿ ಗರ್ಭ ಗೃಹ ಮತ್ತು ಅರ್ಧಮಂಟಪಗಳಿಗೆ ಮಾತ್ರ ಸೇರಿದಂತೆ ಪ್ರತ್ಯೇಕ ಪ್ರದಕ್ಷಿಣಾಪಥ ಇರುವುದರಿಂದ ಅದಕ್ಕೇ ಪ್ರತ್ಯೇಕ ಅಧಿಷ್ಠಾನ ಇರುತ್ತದೆ. ಮುಖಮಂಟಪವು ವಿಸ್ತಾರವಾಗಿದ್ದು , ಅದರಲ್ಲಿನ ಕಂಬಗಳ ವಿನ್ಯಾಸವು ವೈವಿಧ್ಯ ಪೂರ್ಣ ಮತ್ತು ಆಕರ್ಷಕ. ದೇವಾಲಯದ ಹೊರಭಿತ್ತಿಯ ಶಿಲ್ಪಗಳಿದ್ದರೂ, ಅವು ಕೇವಲ ನಿರೂಪಣಾತ್ಮಕವಾಗಿರುತ್ತವೆ.
ಎತ್ತರದ ಪ್ರಾಕಾರಗಳ ಜೊತೆಗೆ ಗೋಪುರಗಳ ರಚನೆಗೆ ವಿಜಯನಗರ ಕಾಲದಲ್ಲಿ ಪ್ರಾಧಾನ್ಯ ಲಭಿಸಿದೆ. ಮೊದಲಿಗೆ ಗರ್ಭಗೃಹದ ಮೇಲಿನ ವಿಮಾನ/ಶಿಖರಕ್ಕೆ ಪ್ರಾಧಾನ್ಯ ವಿದ್ದುದು, ವಿಜಯನಗರ ಕಾಲದಲ್ಲಿ ಪ್ರಾಕಾರದ ಆರಂಭದ ದ್ವಾರದ ಮೇಲೆ ನಿರ್ಮಿತವಾದ ಗೋಪುರಗಳಿಗೆ ಲಭಿಸಿತು. ಮೊದಲಿಗೆ ದೇವಾಲಯದ ಹೊರಭಿತ್ತಿಯಲ್ಲಿ ಅವಕಾಶ ಪಡೆದಿದ್ದ ದೇವತಾ ಶಿಲ್ಪಗಳು, ಮಿಥುನಶಿಲ್ಪಗಳು ಗೋಪುರದ ವಿವಿಧ ಭಾಗಗಳಲ್ಲಿ ಅವಕಾಶ ಪಡೆದವು. ಇಟ್ಟಿಗೆ ಮತ್ತು ಗಾರೆಯಿಂದ ನಿರ್ಮಾಣವಾಗುತ್ತಿದ್ದ ಗೋಪುರಗಳ ಎತ್ತರವನ್ನು ಹೆಚ್ಚಿಸಲು ಸಾಧ್ಯವಿತ್ತು. ಹೀಗೆ ದೇವಾಲಯದ ಪ್ರಾಕಾರಕ್ಕೇ ಹೊಂದಿಕೊಂಡ ಎತ್ತರವಾದ ಗೋಪುರಗಳನ್ನು ರಾಯಗೋಪುರ ಎನ್ನಲಾಗುತ್ತದೆ. ಇಂತಹ ಗೋಪುರಗಳ ನಿರ್ಮಾಣವು ಶ್ರೀ ಕೃಷ್ಣದೇವರಾಯನ ಕಾಲದಲ್ಲಿ ಹೆಚ್ಚಿಗೆ ಆದುದರಿಂದ ಇವುಗಳಿಗೆ ರಾಯಗೋಪುರ ಎಂಬ ಹೆಸರು ಬಂದಿರುವ ಸಾಧ್ಯತೆಗಳಿವೆ.
ಶೃಂಗೇರಿಯ ವಿದ್ಯಾಶಂಕರ, ಹಂಪೆಯ ವಿರೂಪಾಕ್ಷ , ಹಜಾರ ರಾಮಸ್ವಾಮಿ ಮತ್ತು ವಿಠ್ಠಲ ದೇವಾಲಯಗಳು
ಆ ಕಾಲದ ವಾಸ್ತು ವಿನ್ಯಾಸ ಮತ್ತು ಪ್ರಗತಿಗೆ ಸಾಕ್ಷಿಗಳಾಗಿವೆ. ಇದೇ ಪದ್ಧತಿಯನ್ನು ವಿಜಯನಗರೋತ್ತರ ಪಾಳೆಯಗಾರರು ಮತ್ತು ಮೈಸೂರು ಅರಸರು ಮುಂದುವರಿಸಿರುವುದಕ್ಕೆ ಕೆಳದಿಯ ರಾಮೇಶ್ವರ ಮತ್ತು ಇಕ್ಕೇರಿಯ ಅಘೋರೇಶ್ವರ ದೇವಾಲಯ, ಚಾಮರಾಜನಗರದ  ಚಾಮರಾಜೇಶ್ವರ ಇತ್ಯಾದಿ ದೇವಾಲಯಗಳು ಒಳ್ಳೆಯ ಉದಾಹರಣೆಗಳಾಗಿವೆ.
ದೇವಾಲಯಗಳ ನಿರ್ಮಾಣಕ್ಕೆ ಕಲ್ಲಿನ ಬದಲಿಗೆ ಇಟ್ಟಿಗೆ ಮತ್ತು ಗಾರೆಯ ಬಳಕೆ ಹೆಚ್ಚಿದಾಗ ಸಹಜವಾಗಿಯೇ ಅವುಗಳ ವಿಸ್ತಾರ ಹೆಚ್ಚಿತು. ಗೋಪುರಗಳ ಎತ್ತರವೂ ಹೆಚ್ಚಿತು. ಮೈಸೂರು ಒಡೆಯರ ಕಾಲಕ್ಕೆ ಇಂತಹ ದೇವಾಲಯಗಳು ಹೆಚ್ಚಾಗಿಯೇ ನಿರ್ಮಾಣಗೊಂಡವು.
ಇತ್ತೀಚಿನ ದಿನಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪುರಾತತ್ವ ಇಲಾಖೆಗಳು ಮತ್ತು ಧರ್ಮಸ್ಥಳದ ಧರ್ಮೋತ್ಥಾನ ಟ್ರಸ್ಟ್ ಮುಂತಾದುವು ಪ್ರಾಚೀನ ದೇವಾಲಯಗಳ ಸಂರಕ್ಷಣೆ ಮಾಡುತ್ತಿದ್ದರೆ, ಕೆಲವರು ಹಳೆಯ ದೇವಾಲಯಗಳನ್ನು ಆಧುನಿಕ ಸ್ವರೂಪಕ್ಕೆ ರೂಪಾಂತರಗೊಳಿಸಿ ನಿರ್ಮಿಸುವ ಮತ್ತು ಪ್ರತ್ಯೇಕವಾಗಿ ಹೊಸ ದೇವಾಲಯಗಳನ್ನೇ ನಿರ್ಮಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಇವುಗಳಲ್ಲಿ ಪ್ರಾಚೀನ ಶಾಸ್ತ್ರ ಗ್ರಂಥಗಳ ಪ್ರಕಾರ ಅಥವಾ ಪರಂಪರೆಯಿಂದ ಉಳಿದುಬಂದಿರುವ ರೀತಿಯಲ್ಲಿ ದೇವಾಲಯಗಳನ್ನು ನಿರ್ಮಿಸದೆ, ಆಧುನಿಕ ಸ್ವರೂಪದಲ್ಲಿ ದೇವಾಲಯಗಳ ನಿರ್ಮಾಣಕ್ಕೆ ತೊಡಗಿ ಕೊಂಡಿದ್ದಾರೆ. ಈಗಲೂ ಕಲ್ಲಿಗೆ ಬರ ಇಲ್ಲದಿದ್ದರೂ, ಇಟ್ಟಿಗೆ, ಜಲ್ಲಿ , ಕಬ್ಬಿಣ ಮತ್ತು ಸಿಮೆಂಟ್‍ಗಳು ಸುಲಭವಾಗಿ ದೊರೆಯುವುದರಿಂದ ಮತ್ತು ಈಗಿನ ವಾಸ್ತುಶಿಲ್ಪಿಗಳಿಗೆ ಪ್ರಾಚೀನ ಸ್ವರೂಪಕ್ಕಿಂತ ಆಧುನಿಕ ಸ್ವರೂಪವೇ ಸರಿಕಂಡದ್ದರಿಂದ ಈ ಹೊಸ ರೀತಿ ರೂಢಿಗೆ ಬಂದಿದೆ. ದೇವಾಲಯಗಳ ವಿಸ್ತಾರ ಕಡಿಮೆಯಾದರೂ, ಗರ್ಭಗೃಹದ ಮೇಲಿನ ಶಿಖರ ಕುಬ್ಜವಾಗಿದ್ದರೂ, ಪ್ರವೇಶ ದ್ವಾರದ ಗೋಪುರವಂತೂ ಎತ್ತರಕ್ಕೆ ಏರಿ ಭವ್ಯತೆಯನ್ನು ತಂದುಕೊಡುತ್ತದೆ. ಗೋಪುರದಲ್ಲಿ ಸಿಮೆಂಟ್ ನಿಂದಲೇ ಮಾಡಿದ ಶಿಲ್ಪಗಳು ಭಾರೀ ಗಾತ್ರದವಾಗಿರುತ್ತವೆ. ಯಾವ ಭಾವಾಭಿವ್ಯಕ್ತಿಗೂ ಅವಕಾಶವಿಲ್ಲದಂತೆ ವಿವಿಧ ಬಣ್ಣಗಳನ್ನು ತುಂಬಿ ಕೊಂಡ ಗೋಪುರಗಳು ಮಾತ್ರ ದೇವಾಲಯದಲ್ಲಿ ಪ್ರಮುಖವಾಗುತ್ತಿವೆ. ಮೊದಲಿನಂತೆ ಗರ್ಭಗೃಹ, ಅಂತರಾಳ, ನವರಂಗ ಮತ್ತು ಮುಖ ಮಂಟಪಗಳಿಗೆ ದೇವಾಲಯಗಳು ಸೀಮಿತಗೊಂಡಿಲ್ಲ. ಇಂದಿನ ಅವಶ್ಯಕತೆಗಳಿಗೆ ತಕ್ಕಂತೆ ದೇವಾಲಯ ವಾಸ್ತು ಬೆಳೆಯುತ್ತಿದೆ.
ಪ್ರಾಚೀನ ದೇವಾಲಯಗಳು ಮತ್ತು ಜೈನ ಬಸದಿಗಳ ಸ್ವರೂಪದಲ್ಲಿ ಯಾವ ವ್ಯತ್ಯಾಸಗಳೂ ಇರುವುದಿಲ್ಲ . ಆದರೆ ಇತ್ತೀಚಿನ ದೇವಾಲಯಗಳಂತೆ ಬಸದಿಗಳ ಸ್ವರೂಪದಲ್ಲಿ ಬದಲಾವಣೆಗಳಾಗಿವೆ. ಮೂಡಬಿದರೆಯ ಸಾವಿರ ಕಂಬದ ಬಸದಿಯು ತೀರಾ ಪ್ರಾಚೀನ ಅಲ್ಲದಿದ್ದರೂ, ಪ್ರಾಚೀನ ಸ್ವರೂಪವನ್ನು ಉಳಿಸಿಕೊಂಡಿದೆ. ಇಂದಿನ ವಾಸ್ತುಶಿಲ್ಪಿಗಳಿಗೆ ತಮ್ಮ ಕೃತಿಯು ಹೊರನೋಟಕ್ಕೆ ಚೆನ್ನಾಗಿ ಕಾಣಬೇಕೆಂಬ ಉದ್ದೇಶ ಇರುವಂತಿದೆ. ಆದ್ದರಿಂದ ಒಳಗಿನ ಪ್ರಶಾಂತತೆಗೆ ಭಂಗ ಬಂದಿರುವಂತಿದೆ. ಅಮೃತಶಿಲೆ ಅಥವಾ ಮತ್ತಾವುದೇ ಹೆಚ್ಚು ಬೆಲೆಯ ಕಲ್ಲು ಮತ್ತು ಸಿಮೆಂಟ್ ಬಳಕೆಯೊಂದಿಗೆ, ಇಂದಿನ ಅಗತ್ಯತೆಗಳಿಗೆ ತಕ್ಕಂತೆ ನಿರ್ಮಾಣವಾಗುತ್ತಿದೆ.
ಇಸ್ಲಾಂ ಧರ್ಮವು ಭಾರತಕ್ಕೆ ಪ್ರವೇಶಿಸಿದ ನಂತರ ಇಲ್ಲಿಯೂ ಮಸೀದಿಗಳು, ದರ್ಗಾಗಳು ನಿರ್ಮಾಣವಾದವು. ಆರಂಭದಲ್ಲಿ ದೇವಾಲಯಗಳನ್ನೇ ಮಸೀದಿಗಳನ್ನಾಗಿ ಪರಿವರ್ತಿಸಿಕೊಂಡು ಬಳಸಿಕೊಂಡಿರುವ ಉದಾಹರಣೆಗಳು ಇವೆ. ಕಾಲಕ್ರಮೇಣ ತಮ್ಮದೇ ಮಸೀದಿಗಳನ್ನು ಕಟ್ಟಿಕೊಂಡ ಮುಸಲ್ಮಾನರು ತಮ್ಮದೇ ಆದ ಒಂದು ವಿಶಿಷ್ಟ ಶೈಲಿಯ ಆವಿಷ್ಕಾರ ಮಾಡಿಕೊಂಡರು. ಅದರಲ್ಲಿ ಭಾರತೀಯ ಅಂಶಗಳೂ ಇರುತ್ತಿದ್ದವು. ಹಿಂದೂಶೈಲಿಯ ಜೊತೆಗೆ ಬೆರೆತ ಮುಸ್ಲಿಂಶೈಲಿಯನ್ನು ಇಂಡೋ-ಸಾರ್ಸೆನಿಕ್ ಶೈಲಿ ಎಂದು ಕರೆಯಲಾಗಿದೆ. ಎತ್ತರವಾದ ಜಗತಿಯ ಮೇಲೆ ಚಚ್ಚೌಕವಾದ ಕಟ್ಟಡವನ್ನು ಕಟ್ಟಲಾಗುತ್ತದೆ. ಇವುಗಳ ಕೆಳಭಾಗ ದಪ್ಪವಾಗಿದ್ದು , ಮೇಲೇರುತ್ತಾ ಕಿರಿದಾಗುತ್ತದೆ. ಮೇಲಿನ ಗುಮ್ಮಟವೂ ಕಿರಿದಾಗಿರುತ್ತದೆ. ಬಹಮನಿ ಸುಲ್ತಾನರ ಕಾಲದಲ್ಲಿ ಮುಸ್ಲಿಂ ವಾಸ್ತುಶೈಲಿಯಲ್ಲಿ ವಿಶೇಷ ಬದಲಾವಣೆ ಆಯಿತು. ಪರ್ಷಿಯನ್ ಶಿಲ್ಪಿಗಳ ಕೈಚಳಕದಿಂದ ಬಹಮನಿ ಶೈಲಿ ರೂಪುಗೊಂಡಿತು. ಗುಲಬರ್ಗಾದ ಕೋಟೆಯೊಳಗಿನ ಬಸದಿಯು ಇರಾನಿನ ರಫಿ ಎಂಬ ವಾಸ್ತುತಜ್ಞನಿಂದ ನಿರ್ಮಾಣ ಗೊಂಡಿದೆ. ಈ ವಾಸ್ತುಗಳಲ್ಲಿ ಮೇಲ್ಭಾಗದ ಗುಮ್ಮಟಗಳು, ಒಳಭಾಗದ ಕಮಾನುಗಳು ಮತ್ತು ಒಳಗೋಡೆಗಳ ಮೇಲಿನ ಚಿತ್ರಾಲಂಕರಣಗಳು ಪ್ರಮುಖವಾಗುತ್ತವೆ. ಗುಲಬರ್ಗಾದ ಹಫ್ತ್ ಗುಂಬಜ್ó ಮತ್ತು ಇನ್ನೂ ಹಲವು ಕಟ್ಟಡಗಳು ಇಸ್ಲಾಂ ವಾಸ್ತುಶೈಲಿಯ ಗುರುತುಗಳಾಗಿವೆ.
ಬಿಜಾಪುರದ ಗೋಳಗುಮ್ಮಟ, ಜಾಮೀಮಸೀದಿ, ಇಬ್ರಾಹಿಂ ರೋಜಾ, ಮಹ್ತಾರ್ ಮಹಲ್ ಮುಂತಾದವು ಆದಿಲ್‍ಷಾಹಿ ಸುಲ್ತಾನರ ಕಾಲದ ನಿರ್ಮಾಣ. ಇಲ್ಲಿನ ಗುಮ್ಮಟಗಳು ವರ್ತುಲಾಕಾರವಾಗಿರುತ್ತವೆ. ಇಲ್ಲಿ ಕಂಬಗಳ ಬಳಕೆ ಇಲ್ಲವೇ ಇಲ್ಲ ಎನ್ನುವಷ್ಟರಮಟ್ಟಿಗೆ ಕಡಿಮೆ. ಮಸೀದಿಗಳು ಪ್ರಾರ್ಥನಾಮಂದಿರಗಳಾದ್ದರಿಂದ, ಅಲ್ಲಿ ಪ್ರಾರ್ಥನಾಂಗಣವು ವಿಶಾಲವಾಗಿರುವುದು ಸಹಜ. ಈ ವೈಶಾಲ್ಯವನ್ನು ಯಾವುದೇ ಅಡೆತಡೆ ಇಲ್ಲದೆ ಸಾಧಿಸಬೇಕಾದ್ದರಿಂದ ಕಂಬಗಳನ್ನು ನಿವಾರಿಸುವುದು ಅನಿವಾರ್ಯ. ಪ್ರಾರ್ಥನಾ ಮಂದಿರದ ಒಳಭಾಗವು ಸರಳವಾಗಿರುತ್ತದೆಯಾದ್ದರಿಂದ ಹೊರಭಾಗದ ಮೀನಾರುಗಳು ಆಕರ್ಷಣೆಯ ಸಾಧನಗಳಾಗುತ್ತವೆ.
ಬಿಜಾಪುರದ ಜಾಮೀಮಸೀದಿ, ಮಸೀದಿ ಮತ್ತು ಸಮಾಧಿ ಎರಡೂ ಆಗಿರುವ ಇಬ್ರಾಹಿಂ ರೋಜಾ, ಮಹಮದ್ ಆದಿಲ್ ಷಾನ ಸಮಾಧಿ ಸ್ಮಾರಕವಾದ ಗೋಳಗುಮ್ಮಟಗಳು ಗುಲಬರ್ಗಾದಲ್ಲಿನ ಪ್ರಮುಖ ಇಸ್ಲಾಂ ವಾಸ್ತುಗಳು. ಹೆನ್ರಿ ಕಜಿóನ್ಸ್ ಅವರ ಪ್ರಕಾರ ಉತ್ತರದ ತಾಜ್‍ಮಹಲ್‍ನ ಹಾಗೆ ದಕ್ಷಿಣದಲ್ಲಿ ಇಬ್ರಾಹಿಂ ರೋಜಾ.
ಮಹಮದ್ ಆದಿಲ್ ಷಾನ ಸಮಾಧಿ ಸ್ಮಾರಕವಾದ ಬಿಜಾಪುರದ ಗೋಳಗುಮ್ಮಟವು ವಿಶಿಷ್ಟವಾದ ವಾಸ್ತು . ಇಟ್ಟಿಗೆ ಮತ್ತು ಗಾರೆಗಳ ಸುಮಾರು 10 ಅಡಿ ದಪ್ಪದ ಗೋಡೆಯ ಮೇಲೆ ನಿರ್ಮಾಣವಾಗಿರುವ ಗೋಳ ಗುಮ್ಮಟದಲ್ಲಿ ಪ್ರಧಾನವಾದದ್ದೇ ಗುಮ್ಮಟ. ಒಂದೊಂದು ಮೂಲೆಯಲ್ಲಿಯೂ ಗೋಪುರಗಳುಳ್ಳ ಕಂಬಗಳಿವೆ. ಕಂಬವನ್ನೇರಲು ಕಂಬಗಳಿವೆ. ಒಳಭಾಗದ ಉದ್ದ ಮತ್ತು ಅಗಲ ತಲಾ 135 ಅಡಿ, ಎತ್ತರ 110 ಅಡಿ. ಇಲ್ಲಿ ಯಾವುದೇ ಕಂಬಗಳಿಲ್ಲ. ಗುಮ್ಮಟದ ಒಳಭಾಗವು ಭವ್ಯತೆಗೆ ಉತ್ತಮ ಉದಾಹರಣೆಯಾಗಿದೆ.
ಬೀದರ್‍ನ ಸೋಲಾಕಂಬ ಮಸೀದಿಯ ಪ್ರಾರ್ಥನಾಂಗಣವೂ ವಿಶಾಲವಾಗಿದೆ. ಬೀದರ್‍ನಲ್ಲಿರುವ ಪ್ರಮುಖ ವಾಸ್ತುವೆಂದರೆ ಮದ್ರಸಾ. ಇದು ಒಂದು ಶಾಲೆ ಮತ್ತು ಗ್ರಂಥಾಲಯವಾಗಿ ಬಳಕೆಯಲ್ಲಿತ್ತು. ಮಹಮ್ಮದ್ ಗವಾನ್ ಎಂಬ ಮಂತ್ರಿಯ ನೆನಪಾಗಿ ಉಳಿದಿರುವ ಈ ಮದ್ರಸಾವು 242 ಅಡಿ ಉದ್ದ , 222 ಅಡಿ ಅಗಲ ಮತ್ತು 56 ಅಡಿ ಎತ್ತರದ ಮೂರು ಅಂತಸ್ತಿನ ಕಟ್ಟಡ. ಈಗ ಬಹು ಭಾಗ ಶಿಥಿಲವಾಗಿರುವ ಈ ಮದ್ರಸಾದ ಮಧ್ಯ ಭಾಗವು ಹಿಂದೆ ವಿಶಾಲವಾದ ಹಜಾರದಂತಿದ್ದು ಸುತ್ತಲೂ ಉಪನ್ಯಾಸ ಕೊಠಡಿಗಳು, ಗ್ರಂಥಾಲಯ, ವಿದ್ಯಾರ್ಥಿಗಳಿಗೆ ಮತ್ತು ಉಪಾಧ್ಯಾಯರಿಗೆ ವಸತಿ ಗೃಹಗಳಿಗೆ ಅವಕಾಶ ಕಲ್ಪಿಸಿತ್ತು.
ಶ್ರೀರಂಗಪಟ್ಟಣದಲ್ಲೂ ಇಸ್ಲಾಂ ವಾಸ್ತುವಿನ ಒಳ್ಳೆಯ ಉದಾಹರಣೆಗಳನ್ನು ಕಾಣಬಹುದು. ಕರ್ನಾಟಕದ ವಾಸ್ತುಶಿಲ್ಪದ ಇತಿಹಾಸದಲ್ಲಿ ಇಸ್ಲಾಂಧರ್ಮವು ಹಿಂದೂಧರ್ಮದ ಜೊತೆಗೆ ಸಂಯೋಜಿಸಿಕೊಂಡೇ ಮಾಡಿರುವ ಹಲವು ಸಾಧನೆಗಳು ಪ್ರಮುಖವಾಗಿವೆ.
ಬ್ರಿಟಿಷರು ಭಾರತವನ್ನು ಪ್ರವೇಶಿಸುವುದಕ್ಕೆ ಮೊದಲೇ ಕ್ರೈಸ್ತಧರ್ಮೀಯರು ಮತಪ್ರಚಾರಕ್ಕಾಗಿ ಕರ್ನಾಟಕವನ್ನು ಪ್ರವೇಶಿಸಿದ್ದರು. ಕ್ರಿ.ಶ. 1538ರ ಹೊತ್ತಿಗಾಗಲೇ ಕೆನರಾ ಮಿಷನ್ ಕರ್ನಾಟಕವನ್ನು ಪ್ರವೇಶಿಸಿತ್ತು. ಬೆಂಗಳೂರಿನ ಮಹಾತ್ಮಾ ಗಾಂಧಿ ರಸ್ತೆಯಲ್ಲಿರುವ ಸಂತ ಮಾಕ್ರ್ಸ್ ಕಥೀಡ್ರಲ್ ಕ್ರಿ.ಶ. 1808 ಮತ್ತು 1812ರ ನಡುವೆ ನಿರ್ಮಾಣವಾದ ಪ್ರಾಟೆಸ್ಟಂಟ್ ಚರ್ಚ್. ಇದೇ ರಸ್ತೆಯಲ್ಲಿರುವ ಹೋಲಿ ಟ್ರಿನಿಟಿ ಚರ್ಚ್‍ಅನ್ನು ಕ್ರಿ.ಶ. 1851ರಲ್ಲಿ ಕಟ್ಟಲಾಗಿದೆ. ಇದೂ ಸಹ ರಿನೇಸಾನ್ಸ್ ಶೈಲಿಯ ಕಟ್ಟಡ. ಇಲ್ಲಿನ ಮೊಗಸಾಲೆಯ ಅಯೋನಿಕ್ ಕಂಬಗಳಿಂದ ಚರ್ಚ್‍ಗೆ ವಿಶೇಷ ಆಕರ್ಷಣೆ ದೊರೆತಿದೆ. ಕ್ರಿ.ಶ. 1830ರ ಹೊತ್ತಿಗೆ ಬೆಂಗಳೂರಿನ ಸಂತ ಲೂಕ್ ಚರ್ಚ್ ನಿರ್ಮಾಣಗೊಂಡಿತ್ತು. ಕ್ರಿ.ಶ. 1851ರ ವೇಳೆಗೆ ನಿರ್ಮಾಣಗೊಂಡ ಸಂತ ಫ್ರಾನ್ಸಿಸ್ ಕ್ಸೇವಿಯರ್ ಚರ್ಚ್ ಯೂರೋಪಿನ ರಿನೇಸಾನ್ಸ್ ಶೈಲಿಯಲ್ಲಿದೆ. 19ನೇ ಶತಮಾನದ ಆರಂಭದಲ್ಲೇ ನಿರ್ಮಾಣಗೊಂಡಿದ್ದ ಬೆಂಗಳೂರಿನ ಸಂತ ಮೇರಿ ಬೆಸಿಲಿಕಾ ಚರ್ಚ್‍ಅನ್ನು 1875ರಲ್ಲಿ ಈಗಿರುವ ಗಾಥಿಕ್ ಶೈಲಿಯಲ್ಲಿ ಮರುನಿರ್ಮಾಣ ಮಾಡಲಾಗಿದೆ. ಪ್ರವೇಶದ್ವಾರದಲ್ಲೇ ಗಾಥಿಕ್ ಶೈಲಿಯ ಗೋಪುರವಿದೆ. ಚರ್ಚ್‍ನ ಒಳಗಿನ ಕಂಬಗಳ ಮೇಲೆ ಕೊರಿಂತಿಯನ್ ಬೋದಿಗೆಗಳಿವೆ. ಅವುಗಳ ಮೇಲೆ ವಿವಿಧ ಬಗೆಯ ಅಲಂಕಾರಗಳಿವೆ. ಈ ಕಂಬಗಳು ಕಮಾನುಗಳಿಗೆ ಆಸರೆಯಾಗಿವೆ. ವಿಶಾಲವಾದ ಪ್ರಾರ್ಥನಾ ಮಂದಿರ ಇರುವ ಚರ್ಚ್‍ನ ಭವ್ಯತೆಯನ್ನು ಗಾಥಿಕ್ ಶೈಲಿಯ ಗೋಪುರಗಳು ಹೆಚ್ಚಿಸಿದ್ದರೆ, ಸೌಂದರ್ಯವನ್ನು ಕಿಟಕಿಗಳು ಮತ್ತು ಅವುಗಳಿಗೆ ಹಾಕಲಾಗಿರುವ ಬಣ್ಣದ ಗಾಜುಗಳು ಹೆಚ್ಚಿಸಿವೆ.
ಮಂಗಳೂರಿನ ಕೊಡೆಯಾಲಬೈಲಿನಲ್ಲಿರುವ ಲೇಡಿ ಆಫ್ ಡಾಲರೆಸ್ ಛಾಪೆಲ್ ಪ್ರಾಚೀನವಾಗಿದ್ದು , ಅದನ್ನು
ಕ್ರಿ.ಶ. 1857ರಲ್ಲಿ ಮರುನಿರ್ಮಾಣ ಮಾಡಲಾಗಿದೆ. ಧಾರವಾಡದ ಪ್ರಾಚೀನ ಆಲ್ ಸೇಯ್ನ್‍ಟ್ಸ್ ಚರ್ಚ್‍ಅನ್ನು ಇಟ್ಟಿಗೆಯಿಂದ ಕಟ್ಟಲಾಗಿದೆ. ಗಾರೆಯನ್ನು ಬಳಸಿಲ್ಲ. ಪೂಜಾ ವೇದಿಕೆ (ಆಲ್ಟರ್)ಗೆ ಚೈನಾ ಚಪ್ಪಡಿಗಳನ್ನು ಬಳಸಲಾಗಿದೆ. ಮೈಸೂರಿನ ಸಂತ ಫಿಲೊಮಿನಾ ಚರ್ಚ್ ಮೊದಲಿಗೆ ಕ್ರಿ.ಶ. 1840ರಲ್ಲಿ ನಿರ್ಮಾಣಗೊಂಡರೂ, 20ನೆಯ ಶತಮಾನದಲ್ಲಿ ಅದರ ಜೀರ್ಣೋದ್ಧಾರ ಕಾರ್ಯ ನಡೆದಿದೆ. ಬೆಳಗಾವಿ, ತುಮಕೂರು ಮುಂತಾದ ಇನ್ನೂ ಅನೇಕ ಸ್ಥಳಗಳಲ್ಲಿ ಚರ್ಚುಗಳಿವೆ. ಇವುಗಳಲ್ಲಿ ಬಹುಪಾಲು ಪ್ರಾಚೀನ ಚರ್ಚುಗಳು ಗಾಥಿಕ್ ಅಥವಾ ರಿನೆಸಾನ್ಸ್ ಶೈಲಿಯಲ್ಲಿವೆ. ಭಾರತೀಯ ವಾಸ್ತುವಿನ ಪ್ರಭಾವ ಈ ಚರ್ಚುಗಳ ಮೇಲೆ ಆಗಿಲ್ಲ.
ಶ್ರೀ ರಾಮಕೃಷ್ಣ ಆಶ್ರಮದ ವಾಸ್ತು ಕಟ್ಟಣೆಗಳು ಧ್ಯಾನಕ್ಕೆ ಅನುಕೂಲವಾಗುವ ರೀತಿಯಲ್ಲಿ ನಿರ್ಮಾಣವಾಗಿವೆ. ಮೂರೂ ಭಾಗಗಳಲ್ಲಿ ತೆರೆಯಬಲ್ಲ ಬಾಗಿಲುಗಳಿರುವ ವಿಶಾಲ ಪ್ರಾರ್ಥನಾ ಮಂದಿರದ ಎದುರಿನ ಅಂಕಣದಲ್ಲಿ ರಾಮಕೃಷ್ಣ ಪರಮಹಂಸ, ಶಾರದಾ ದೇವಿ ಮತ್ತು ವಿವೇಕಾನಂದರ ಭಾವಚಿತ್ರಗಳನ್ನಿಡಲಾಗಿದೆ. ಇದರಂತೆಯೇ ಬಹಾಯಿ ಧರ್ಮದ ಪ್ರಾರ್ಥನಾ ಮಂದಿರಗಳು ಹಲವೆಡೆ ಇವೆ.

No comments:

Post a Comment