Wednesday, May 28, 2014

ಬೆಳಗಾವಿ ಜಿಲ್ಲಾ ಪ್ರದೇಶದ ದೇವಾಲಯ ವಾಸ್ತುಶಿಲ್ಪ

ಬೆಳಗಾವಿ ಜಿಲ್ಲಾ ಪ್ರದೇಶದ ದೇವಾಲಯ ವಾಸ್ತುಶಿಲ್ಪ ಒಂದು ವಿಶ್ಲೇಷಣೆ
ಡಾ. ಸ್ಮಿತಾ ಸುರೇಬಾನಕರ
ಪೀಠಿಕೆ
ಮನಮೋಹಕ ಪ್ರಾಕೃತಿಕ ರಚನೆ, ಹಿತಕರವಾದ ಹವಾಗುಣ, ಸುಸಂಸ್ಕøತ ಜನಸಮುದಾಯದ ಹೂರಣವಾದ ಬೆಳಗಾವಿ ಮಿಶ್ರ ಸಂಸ್ಕøತಿಯ ಆಗರ. ಐತಿಹಾಸಿಕ, ಧಾರ್ಮಿಕ, ಸಾಮಾಜಿಕ ಶ್ರೀಮಂತಿಕೆಯಂತೆಯೇ ಸಾಂಸ್ಕøತಿಕ ಶ್ರೀಮಂತಿಕೆಯ ಕರ್ನಾಟಕಂತರ್ಗತ ಬೆಳಗಾವಿ ಜಿಲ್ಲಾ ಪ್ರದೇಶ ವಾಸ್ತುಶಿಲ್ಪ ಪರಂಪರೆಯಲ್ಲಿಯೂ ಶ್ರೀಮಂತ, ಸಮೃದ್ಧ ನಾಡು. ಜಿಲ್ಲೆಯಾದ್ಯಂತ ಪಸರಿಸಿರುವ ಅಸಂಖ್ಯ ಸ್ಮಾರಕಗಳು ಬೆಳಗಾವಿಯ ಸಾಂಸ್ಕøತಿಕ ನೆಲೆಗಟ್ಟನ್ನು ಸಾರಿ ಹೇಳುತ್ತವೆ.
ಇತಿಹಾಸದ ಹೆಜ್ಜೆಗುರುತುಗಳು, ಸಂಸ್ಕøತಿಯ ಪಡಿಯಚ್ಚುಗಳು, ನಾಗರೀಕತೆಯ ಕುರುಹುಗಳು ಎನಿಸಿದ ನಾಡಿನ ಸ್ಮಾರಕಗಳು ಬೆಳಗಾವಿ ಜಿಲ್ಲಾ ಪ್ರದೇಶದಲ್ಲಿ ಗಾತ್ರ, ಸಂಖ್ಯೆ, ಗುಣವೈಶಿಷ್ಟ್ಯ, ವಾಸ್ತುಶಿಲ್ಪ ಶೈಲಿ, ವೈವಿಧ್ಯತೆ, ಸಾಂಸ್ಕøತಿಕ ಮೌಲ್ಯ-ಈ ಎಲ್ಲ ದೃಷ್ಟಿಯಿಂದ ಕುತೂಹಲ ಮೂಡಿಸಿವೆ. ವಾಸ್ತುಶಿಲ್ಪ ಪರಂಪರೆಯ ಅಧ್ಯಯನವನ್ನು ಪ್ರಾದೇಶಿಕ ಮಟ್ಟದಲ್ಲಿ ಕೈಗೊಳ್ಳುವುದರಿಂದ ಪ್ರಾದೇಶಿಕ ಭಿನ್ನತೆ, ವೈವಿಧ್ಯತೆಯನ್ನು ಬಿಂಬಿಸುವುದರ ಜೊತೆಗೆ ಪ್ರಾದೇಶಿಕ ಸೊಗಡನ್ನು ಈ ಸ್ಮಾರಕಗಳು ಸೂಸುತ್ತವೆ. ಆದರೆ ಬೆಳಗಾವಿ ಜಿಲ್ಲಾ ಪ್ರಾದೇಶಿಕ ವಾಸ್ತುಶಿಲ್ಪದ ಅವಲೋಕನಾತ್ಮಕ ವಿಶ್ಲೇಷಣೆ ಮಾಡುವ ಸಂದರ್ಭದಲ್ಲಿ ಸಮುದ್ರವನ್ನು ಕಲಶದಲ್ಲಿ ಹಿಡಿದಂತೆನಿಸಿ ಅಧ್ಯಯನದ ಅನುಕೂಲತೆಗಾಗಿ ಪ್ರಸ್ತುತ ಪ್ರಬಂಧ ವನ್ನು ದೇವಾಲಯ ವಾಸ್ತುಶಿಲ್ಪಕ್ಕೆ ಸೀಮಿತಗೊಳಿಸಲಾಗಿದೆ.
ಬೆಳಗಾವಿ ಜಿಲ್ಲೆಯ ವಾಸ್ತುಶಿಲ್ಪ ಪರಂಪರೆಯನ್ನು ಕಾಲಕ್ರಮಣಿಕೆ ಆಧಾರವಾಗಿ ಅಭ್ಯಸಿಸಬಹುದು. ಪ್ರಾಗೈತಿಹಾಸ ಕಾಲ, ಪ್ರಾಚೀನ ಕಾಲ, ಮಧ್ಯಯುಗೀನ ಕಾಲ ಮತ್ತು ಆಧುನಿಕ ಕಾಲವೆಂದು ವರ್ಗೀಕರಿಸಬಹುದು. ಅದರಲ್ಲಿ ಪ್ರಾಗೈತಿಹಾಸ ಯುಗದ ಕಲ್ಗೋರಿಗಳು, ಇತಿಹಾಸ ಪ್ರಾರಂಭಯುಗದ ಶಾತವಾಹನ ಕಾಲದ ವಡಗಾವ್-ಮಾದವಪುರದ ವಾಸ್ತುಶಿಲ್ಪ ಕುರುಹುಗಳು, ಜೈನಚೈತ್ರವೆನಿಸಿದ ಹಲಸಿಯ ಆದಿ ಕದಂಬಕಾಲೀನ ದೇವಾಲಯ, ಬಸದಿಗಳು, ಚಾಲುಕ್ಯ ಕಾಲೀನ ಅಸಂಖ್ಯಾತ ಶೈವ ದೇವಾಲಯಗಳು. ಮಧ್ಯಯುಗೀನ ಮುಸ್ಲಿಂ ಸ್ಮಾರಕಗಳಾದ, ದರ್ಗಾ, ಗೋರಿ, ಬುರುಜು ಮತ್ತು ಮಸೀದಿಗಳು, ಯುರೋಪಿಯನ್ ವಸಾಹತು ವಾಸ್ತುಶಿಲ್ಪ ಪ್ರತಿಬಿಂಬಿಸುವ ಅನೇಕಾನೇಕ ಇಗರ್ಜಿ, ಚರ್ಚುಗಳು, ಗೋಥಿಕ್ ಶೈಲಿಯ ಆಡಳಿತ ಕಚೇರಿ ಕಟ್ಟಡಗಳು, ಕಾರ್ಯನಿರ್ವಾಹಕ ಸೌಧಗಳಾದ ಅಂಚೆ-ಕಚೇರಿ, ರೈಲು ನಿಲ್ದಾಣ, ನ್ಯಾಯಾಲಯಗಳು ಮತ್ತು ಮಿಲಿಟರಿ ಸೌಧಗಳು ಇದಲ್ಲದೆ ರಕ್ಷಣಾವಾಸ್ತುಶಿಲ್ಪದ ವೈವಿಧ್ಯ ಬಿಂಬಿಸುವ ಜಿಲ್ಲೆಯಾದ್ಯಂತ ಹರಡಿಸುವ ವೈವಿಧ್ಯಮಯವಾದ ಕೋಟೆ ಕೊತ್ತಲಗಳು, ರಕ್ಷಣಾ ಗೋಡೆ ಮತ್ತು ಬುರುಜುಗಳು ಒಂದೆಡೆಯಾದರೆ ಇನ್ನೊಂದೆಡೆ ಪ್ರದೇಶವನ್ನಾಳಿದ ದೇಶಗತಿಯ ದೇಸಾಯಿ, ದೇಶಪಾಂಡೆ, ಸರದೇಶಪಾಂಡೆ, ಕುಲಕರ್ಣಿ, ಇನಾಮದಾರ, ನಾಯಕ, ಶಿಂಧೆ, ಭೋಸಲೆ ಅಧಿನಾಯಕರ ಭವ್ಯ ವಾಡೆಗಳು, ಅಚ್ಚ ದೇಶಿ ಪರಂಪರೆ ಸೂಸುವ ಜಮೀನದಾರರ ಭವ್ಯಸೌಧಗಳು, ಶೈಕ್ಷಣಿಕ ಸೌಧಗಳು ಇವೇ ಎಂಬಿತ್ಯಾದಿಯಾಗಿ ಅಭ್ಯಸಿಸುವ ಅವಶ್ಯಕತೆ ಇದೆ.
ಪ್ರಸ್ತುತ ಸಂದರ್ಭದಲ್ಲಿ ಬೆಳಗಾವಿ ಪ್ರಾದೇಶಿಕ ವಾಸ್ತುಶಿಲ್ಪ ಪರಂಪರೆಗೆ ದೇವಾಲಯ ವಾಸ್ತುಶಿಲ್ಪ 10-14ನೆಯ ಶತಮಾನದ ಕಾಲಘಟ್ಟದಲ್ಲಿ ಕಲ್ಯಾಣ ಚಾಲುಕ್ಯರ ಮತ್ತು ಅವರ ಅಧೀನತ್ವದ ಸಾಮಂತ ರಾಜರಿಂದ ನಿರ್ಮಾಣವಾದ ಜೈನ, ಶೈವ ಮತ್ತು ವೈಷ್ಣವ ದೇವಾಲಯಗಳ ವಾಸ್ತುಶಿಲ್ಪಶೈಲಿ, ವೈವಿಧ್ಯತೆ, ವೈಶಿಷ್ಟ್ಯತೆಗಳ ವಿಭಿನ್ನ ನಿಲುವಿನಲ್ಲಿ ಸಮೀಕ್ಷಾ ಸ್ವರೂಪದಲ್ಲಿ ಚಿಂತಿಸುವ ಪ್ರಯತ್ನ ಮಾಡಲಾಗಿದೆ. ದೇವಾಲಯ ವಾಸ್ತುಶಿಲ್ಪಶೈಲಿ, ಪ್ರಭೇದ, ಪ್ರಯೋಗ, ಸಂವಿಧಾನ, ಬೆಳಗಾವಿ ಪ್ರಾದೇಶಿಕ ವಾಸ್ತುಶಿಲ್ಪದ ಹರವು ಗುರುತಿಸಲಾಗಿದೆ.
ಬೆಳಗಾವಿ ಜಿಲ್ಲಾ ಪ್ರದೇಶದಲ್ಲಿ ವಾಸ್ತುಶಿಲ್ಪ ಪರಂಪರೆ
ಕುಂತಲನಾಡು, ಕುಹುಂಡಿ ಮಂಡಲ, ಕುಂದರ ನಾಡೆಂದು ಹೆಸರಿಸಿಕೊಂಡ ಬೆಳಗಾವಿ ಪ್ರದೇಶದಲ್ಲಿ ಕಳಚದ ಇತಿಹಾಸದ ಕೊಂಡಿಯನ್ನು ಗುರುತಿಸಬಹುದು. ಪ್ರಾಗೈತಿಹಾಸ ಕಾಲದಲ್ಲಿ ಮಾನವ ನೆಲೆಯ ಕುರುಹುಗಳನ್ನು ಜಿಲ್ಲೆಯ ಗೋಕಾಕ, ಕೊಣ್ಣೂರು, ತೋರಗಲ್, ಬೂದಿಹಾಳ, ಎಕ್ಷಂಬಾ, ಸತ್ತಿ, ಮಂಗಸೂಳಿ, ಖಾನಾಪೂರ ಸಮೀಪದ ಹಲಸಿ, ಹುಕ್ಕೇರಿ, ರಾಯಬಾಗ ಮುಂತಾದೆಡೆ ಶೋಧಿಸಲಾಗಿದೆ. ಕ್ರಿ.ಪೂ.800ರ ಕಾಲದ ಬೃಹದಾಕಾರದ ಕಲ್ಲು ಚಪ್ಪಡಿಗಳನ್ನು ಬಳಸಿ ನಿರ್ಮಿಸಿದ ಬೃಹತ್ ಶಿಲಾಯುಗದ ಕಂಡಿಕೋಣಿ ಗೋರಿಗಳು ನಿರ್ವಾಣಹಟ್ಟಿ, ಕೊಣ್ಣೂರು, ಹಲಸಿ ಮುಂತಾದೆಡೆ ದೊರೆಯುತ್ತವೆ. ಇವು ಸಾಂಸ್ಕøತಿಕವಾಗಷ್ಟೇ ಅಲ್ಲದೇ ನಿರ್ಮಾಣ ತಂತ್ರಗಾರಿಕೆಗೂ ಉತ್ತಮ ಉದಾಹರಣೆಗಳು. ಇದೇ ರೀತಿ ಬೆಳಗಾವಿ ನಗರದ ಕೇಂದ್ರಭಾಗದಲ್ಲಿರುವ ಶಾತವಾಹನರ ನೆಲೆಯಾದ ವಡಗಾಂವ್ ಮಾಧವಪುರದ ಉತ್ಖನಗಳಲ್ಲಿ ಎರಡು ಕೊಠಡಿಗಳು ಹಾಗೂ ಅವುಗಳಿಗೆ ಹೊಂದಿಕೊಂಡಿರುವ ಮೊಗಸಾಲೆಯಿದ್ದ ಮನೆಯ ಅಡಿಪಾಯದ ಅವಶೇಷಗಳು ಮತ್ತು ಇದರ ಪಕ್ಕದಲ್ಲಿರುವ ವೃತ್ತಾಕಾರದ ಗುಳಿ, ವಿಸ್ತಾರವಾದ ಸಭಾಂಗಣ ಮತ್ತು ಅದಕ್ಕೆ ಹೊಂದಿಕೊಂಡಿರುವ ವಾಸದ ಕೊಠಡಿಗಳು, ಧಾನ್ಯ ಶೇಖರಣೆಯ ಉಗ್ರಾಣ, ವೃತ್ತಾಕಾರದ ಬಾವಿ, ವಿವಿಧ ಬಗೆಯ ಕಟ್ಟಡಗಳ ಅವಶೇಷಗಳು ಮುಂತಾದವುಗಳು ಕಂಡುಬಂದಿವೆ. ಶಾತವಾಹನ ಕಾಲದ ಇಟ್ಟಿಗೆ ಕಟ್ಟಡಗಳಿದ್ದ ಒಂದು ಪ್ರಾಚೀನ ಜನವಸತಿ ನಗರ 2000 ವರ್ಷಗಳಷ್ಟು ಮೊದಲೇ ಇತ್ತೆಂಬುದನ್ನು ಸಂಶೋಧನೆಗಳು ದೃಢಪಡಿಸಿವೆ. ಕ್ರಿ.ಶ.2ನೆಯ ಶತಮಾನಕ್ಕೆ ಸೇರಿದ ಈ ಕಟ್ಟಡಗಳ ಅವಶೇಷಗಳು ಜೊತೆಗೆ ಜೇಡಿಮಣ್ಣಿನಿಂದ ನಿರ್ಮಿಸಿದ ಪ್ರಾಚೀನ ಬೀದಿಯನ್ನು ಗುರುತಿಸಲಾಗಿದೆ. ಇದು ವಾಸ್ತುನಿರ್ಮಿತಿಯ ಜೊತೆಗೆ ನಗರ ಯೋಜನೆಯ ಸಿರಿವಂತ ಸಂಸ್ಕøತಿಯ ಮೇಲೆ ಬೆಳಕು ಬೀರುತ್ತದೆ. ಮುಂದೆ ಕ್ರಿ.ಶ.4-6ನೆಯ ಶತಮಾನದವರೆಗೆ ಆಳ್ವಿಕೆ ನಡೆಸಿದ ಬನವಾಸಿ ಕದಂಬರ ಸಾಂಸ್ಕøತಿಕ ಪ್ರತೀಕವಾದ ದೇವಾಲಯ, ಬಸದಿ ಮತ್ತು ಕೋಟೆಗಳು ಹಲಸಿ ಮತ್ತು ಬೆಳಗಾವಿಯಲ್ಲಿ ದೊರೆಯುತ್ತವೆ. ಕರ್ನಾಟಕದ ಪ್ರಾಚೀನ ಜೈನಬಸದಿ ಎನಿಸಿದ ಹಲಸಿಯ ಜೈನಬಸದಿ ಗರ್ಭಗೃಹ ಮತ್ತು ಸುಕನಾಸಿಗಳನ್ನೊಳಗೊಂಡಿದ್ದು ಸರಳ ವಾಸ್ತುಶಿಲ್ಪ ಹೊಂದಿದೆ. ಇದಲ್ಲದೆ ಆದಿಕದಂಬರ ಕಾಲದಲ್ಲಿ ನಿರ್ಮಾಣಗೊಂಡ ನರಸಿಂಹನ ಇಟ್ಟಿಗೆಯ ದೇವಾಲಯವಿದ್ದ ಪ್ರತೀಕವಾಗಿ ದ್ವಿಭುಜನರಿಸಂಹನ ಶಿಲ್ಪ ಹಲಸಿಯಲ್ಲಿದೆ. ಹೂಲಿಯ ಪಂಚಲಿಂಗೇಶ್ವರ ಹೂಲಿಯ ಪಂಚಲಿಂಗೇಶ್ವರ ದೇವಾಲಯ ಮೂಲತಃ ಬಾದಾಮಿ ಚಾಲುಕ್ಯರ ಕಾಲದಲ್ಲಿ ಜೈನಬಸದಿಯಿದ್ದ ಉಲ್ಲೇಖ ಮಂಗಳೇಶನ ಹೂಲಿ ಶಾಸನದಿಂದ ವಿದಿತವಾಗುತ್ತದೆ.
ಆದರೆ ಬೆಳಗಾವಿ ಪ್ರದೇಶದಲ್ಲಿ ಹೇರಳ ಪ್ರಮಾಣದಲ್ಲಿ ದೊರೆಯುವ ದೇವಾಲಯಗಳು ಅದರಲ್ಲೂ ಶೈವ ದೇವಾಲಯಗಳು ಕಲ್ಯಾಣ ಚಾಳುಕ್ಯರ ಮತ್ತು ಅವರ ಮಾಂಡಲಿಕರಾದ ಗೋವೆ ಕದಂಬರು, ಸವದತ್ತಿ ರಟ್ಟರು ಮತ್ತು ಕೊಲ್ಹಾಪುರದ ಶೀಲಾಹಾರರ ಕಾಲದಲ್ಲಿ ನಿರ್ಮಾಣಗೊಂಡದ್ದಾಗಿವೆ.
ಐತಿಹಾಸಿಕ ಹಿನ್ನೆಲೆ : ಇತಿಹಾಸಪೂರ್ವ ಕಾಲದ ಮಾನವನ ಚಟುವಟಿಕೆಯ ನೆಲೆವೀಡಾದ ಬೆಳಗಾವಿ ಪ್ರದೇಶ, ಕರ್ನಾಟಕದ ವಿವಿಧ ಅರಸುಮನೆತನಗಳ ಆಳ್ವಿಕೆಯಲ್ಲಿ ಅಭಿವೃದ್ಧಿ ಹೊಂದಿ, ಕರ್ನಾಟಕದ ಸಂಸ್ಕøತಿ ಕುಸುಮವಾಗಿ ವಿಕಸನಗೊಂಡು, ಸಮೃದ್ಧಿ ಹೊಂದುವಲ್ಲಿ ಪ್ರಮುಖಪಾತ್ರ ವಹಿಸಿದೆ. ಶಾತವಾಹನ, ಆದಿ ಕದಂಬ,  ಬಾದಾಮಿ ಚಲುಕ್ಯ, ರಾಷ್ಟ್ರಕೂಟ, ಕಲ್ಯಾಣ ಚಾಲುಕ್ಯ, ಗೋವೆ ಕದಂಬ, ಸುಗಂಧವರ್ತಿಯ ರಟ್ಟರು, ದೇವಗಿರಿಯ ಸೇವುಣರು ಮುಂತಾದ ಅರಸು ಮನೆತನಗಳ ಆಳ್ವಿಕೆಯ ಕುರುಹಾಗಿ ಅನೇಕ ಸ್ಮಾರಕಗಳು ಜಿಲ್ಲೆಯ ವಿವಿಧೆಡೆ ಲಭ್ಯವಾಗಿವೆ. ಈ ಅರಸು ಮನೆತನಗಳ ವಿವಿಧ ದೊರೆಗಳು ಸರ್ವಧರ್ಮ ಸಹಿಷ್ಣುತಾ ನೀತಿಯನ್ನು ಅನುಸರಿಸಿ ಶೈವ, ವೈಷ್ಣವ ಜೈನಮತಗಳಿಗೆ ರಾಜಾಶ್ರಯ ನೀಡಿದ್ದಲ್ಲದೆ, ಅವರಡಿಯ ಅಧಿಕಾರಿಗಳು, ಮಂತ್ರಿಗಳು, ಮಾಂಡಲಿಕರಾದಿಯಾಗಿ ದೇಗುಲ ನಿರ್ಮಾಣದ ಕೈಂಕರ್ಯಗೈದರು. ಇವರು ಹಲಸಿ, ದೇಗಾಂವೆ, ದೇಗುಲಹಳ್ಳಿ, ಕಿತ್ತೂರು, ಒಕ್ಕುಂದ, ದೊಡವಾಡ, ಕಾದರೊಳ್ಳಿ, ನೇಸರಗಿ, ಹಣ್ಣಿಕೇರಿ, ಹೂಲಿ, ಸವದತ್ತಿ, ಮುನವಳ್ಳಿ, ಮುರಗೋಡ, ಮಮದಾಪುರ, ಗೋಕಾಕ, ಕೋಣ್ಣೂರು, ಬೆಳಗಾವಿ, ರಾಮದುರ್ಗ, ತೋರಗಲ್ಲ, ಸೊಗಲ, ಸುರೇಬಾನ, ಕುಂದರಗಿ, ಶಿರಸಂಗಿ, ಗೊಡಚಿ, ನಂದಗಾಂವ, ಮಂಗಸೂಳಿ, ಅಥಣಿ, ರಾಯಬಾಗ ಮುಂತಾದೆಡೆ ನಿರ್ಮಾಣಗೊಂಡ ಅಸಂಖ್ಯ ದೇವಾಲಯಗಳು ತಲವಿನ್ಯಾಸ, ಬಾಹ್ಯರೂಪ, ಆಂತರಿಕ ಅಲಂಕಾರ, ವಿನ್ಯಾಸ, ಶೈಲಿ, ಪ್ರಬೇಧ, ರಚನಾ ತಂತ್ರಗಾರಿಕೆ ಇತ್ಯಾದಿ ದೃಷ್ಟಿಕೋನಗಳಿಂದ ಗಮನಾರ್ಹವಾಗಿದ್ದು ಪ್ರಾದೇಶಿಕ ವಾಸ್ತುಶಿಲ್ಪ ವೈವಿಧ್ಯವನ್ನು ಪ್ರತಿಬಿಂಬಿಸುತ್ತವೆ. 10-14ನೆಯ ಶತಮಾನಗಳ ಕಾಲಾವಧಿಯಲ್ಲಿ ನಿರ್ಮಾಣಗೊಂಡ ಮಹತ್ವದ ಕೆಲವು ದೇವಾಲಯಗಳನ್ನು ವಾಸ್ತುಶಿಲ್ಪ ಶೈಲಿಯ ದೃಷ್ಟಿಕೋನದಿಂದ ವರ್ಗೀಕರಿಸಿ, ವಿಶ್ಲೇಷಿಸಿ, ಪರಿಶೀಲಿಸುವ ಪ್ರಯತ್ನವನ್ನು ಪ್ರಸ್ತುತ ಪ್ರಬಂಧದಲ್ಲಿ ಮಾಡಲಾಗಿದೆ.
ಬೆಳಗಾವಿ ಪ್ರದೇಶದ ದೇವಾಲಯ ವಾಸ್ತುಶಿಲ್ಪದ ಪ್ರಕಾರಗಳು
ದೇವಾಲಯ ವಿಮಾನಗಳ ಶೈಲಿಯನ್ನವಲಂಬಿಸಿ ದೇವಾಲಯ ವಾಸ್ತುಶಿಲ್ಪಶೈಲಿ-ಪ್ರಭೇದಗಳನ್ನು ವಿಂಗಡಿಸಲಾಗಿದೆ. ದೇವಾಲಯ ವಾಸ್ತುಶಿಲ್ಪದಲ್ಲಿ ಮುಖ್ಯವಾಗಿ ನಾಗರ, ಕಲಿಂಗ, ದ್ರಾವಿಡ, ವೇಸರ ಎಂಬ ಶೈಲಿಗಳಿದ್ದು ಇವು ಬಹುಮಟ್ಟಿಗೆ ಭೌಗೋಳಿಕ ಪ್ರದೇಶಗಳಿಗೆ ಸೀಮಿತವಾದಂತೆ ತೋರುತ್ತದೆ. ನಾಗರಶೈಲಿ ಉತ್ತರ ಭಾರತದಲ್ಲಿ, ವೇಸರ ವಿಂಧ್ಯಪರ್ವತಗಳಿಗೂ ಕೃಷ್ಣಾ ನದಿಗೂ ನಡುವಣ ಪ್ರದೇಶದಲ್ಲಿಯೂ ಹಾಗೂ ಕೃಷ್ಣೆಯ ದಕ್ಷಿಣದ ದಕ್ಷಿಣ ಭಾರತದಲ್ಲಿ ದ್ರಾವಿಡಶೈಲಿ ಪ್ರಚಲಿತವಾಗಿದ್ದ ಪ್ರಾದೇಶಿಕ ಶೈಲಿಗಳೆಂದು ಪರಿಗಣಿಸಲ್ಪಟ್ಟಿದೆ. ಈ ಶೈಲಿಗಳು ಮೂಲತಃ ಶಿಖರದ ಆಕಾರದ ಆಧಾರದ ಮೇಲೆ ವರ್ಗೀಕೃತಗೊಂಡಿವೆ. ಈ ಶೈಲಿಗಳು ಪ್ರಾದೇಶಿಕವೆಂದರೂ ಅನ್ಯ ಪ್ರದೇಶಗಳಲ್ಲಿ ನಿರ್ಮಾಣಗೊಂಡಿದೆ. ದ್ರಾವಿಡಶೈಲಿಯ ದೇವಾಲಯಗಳು ಮಹಾರಾಷ್ಟ್ರದಲ್ಲಿ ನಾಗರಶೈಲಿಯ ದೇವಾಲಯಗಳು ಆಂಧ್ರ-ಕರ್ನಾಟಕದಲ್ಲಿ, ಭೂಮಿಜ/ವೇಸರ ಶೈಲಿಯ ದೇವಾಲಯಗಳು ಯಾದವರು ಮುಂತಾದವರು ಅನುಸರಿಸಿದರು.
ದೇವಾಲಯಗಳನ್ನು ವಿವಿಧ ಅರಸು ಮನೆತನಗಳಿಗೆ ಸೇರಿದ ವಿವಿಧ ರಾಜರು, ಅವರ ಸಾಮಂತರು, ಅಧಿಕಾರ ವರ್ಗ, ವ್ಯಾಪಾರಸ್ಥರು, ಶ್ರೀಮಂತ ಪ್ರಜೆಗಳು ಆಯಾ ರಾಜ್ಯಗಳಲ್ಲಿ ಕಟ್ಟಿಸಿದ್ದರಾದ್ದರಿಂದ ಆಯಾ ಅರಸರ, ಮಾಂಡಲಿಕ ಮನೆತನದ ಹೆಸರನ್ನೇ ಆಯಾ ದೇವಾಲಯ ಶೈಲಿಗಳಿಗೂ ಇಡಲಾಗಿದೆ. ಉದಹರಣೆಗೆ ಚಾಲುಕ್ಯಶೈಲಿ, ಹೊಯ್ಸಳ ಶೈಲಿ, ನೊಳಂಬ-ಪಲ್ಲವಶೈಲಿ ಮುಂತಾದವುಗಳು. ಅನೇಕ ಸಲ ಈ ವಿವಿಧ ಶೈಲಿಗಳ ಪ್ರಭಾವ, ಪರಿಣಾಮ ಈ ದೇವಾಲಯ ವಾಸ್ತುಶಿಲ್ಪ ನಿರ್ಮಾಣದಲ್ಲಿ ಪ್ರತ್ಯೇಕ ಮತ್ತು ಪೂರಕವಾಗಿರುವುದು ಗಮನಾರ್ಹ.
ಆದರೆ ಕರ್ನಾಟಕ ವಾಸ್ತುಶಿಲ್ಪದ ಉಚ್ಛ್ರಾಯ ಕಾಲವೆನಿಸಿದ್ದ 10-15ನೆಯ ಶತಮಾನದವರೆಗಿನ ಕಾಲವನ್ನು ಬಾದಾಮಿ ಚಾಲುಕ್ಯರಿಂದ ವಿಕಸನಗೊಂಡ ಮುಂದಿನ ಹಂತದ ಶೈಲಿಯು ಬೆಳೆದು ಬಂದಿತು. ಬಳಸುವ ಕರಿಕಲ್ಲಿನಲ್ಲಿ ಎತ್ತರದ ಬದಲಿಗೆ ವಿಸ್ತಾರದಲ್ಲಿ, ವಿಸ್ತೀರ್ಣ ಹೆಚ್ಚಿಸಲು ಕಂಬಗಳ ಸಂಖ್ಯೆಯಲ್ಲಿ ಹೆಚ್ಚಳ, ಅಲಂಕರಣಕ್ಕೆ, ನಾಜೂಕತೆಯ ನಿರ್ಮಾಣಕ್ಕೆ ಕೊಟ್ಟ ಒತ್ತು ಇವೇ ಮುಂತಾದ ಬದಲಾವಣೆಗಳಾದವು. ಬಂಧನ ಸಾಮಗ್ರಿಗಳ ಬಳಕೆಯಲ್ಲದೆ ಚಪ್ಪಡಿ ಕಲ್ಲುಗಳನ್ನು ಒಂದರ ಮೇಲೊಂದರಂತೆ ಜೋಡಿಸಿ ತಂತ್ರಜ್ಞಾನದಲ್ಲೂ ಮಾರ್ಪಾಡುಗಳಾದದ್ದು ಗಮನಾರ್ಹ.
ಪ್ರಸ್ತುತ ಅಧ್ಯಯನದಲ್ಲಿ ಕಲ್ಯಾಣ ಚಾಲುಕ್ಯ, ಅವರ ಮಾಂಡಲಿಕರು, ಅಧಿಕಾರವರ್ಗ ಮತ್ತು ಶ್ರೀಮಂತ ಪ್ರಜೆಗಳಿಂದ ನಿರ್ಮಾಣಗೊಂಡ ಅನೇಕ ದೇವಾಲಯಗಳನ್ನು ಅಧ್ಯಯನ ಮಾಡಲಾಗಿದೆ. ಬೆಳಗಾವಿ ಪ್ರದೇಶದಲ್ಲಿ ಇಟಗಿಯ ಮಹಾದೇವ, ಡಂಬಳದ ಶಿವಾಲಯ, ಕುಕನೂರಿನ ಕಲ್ಲೇಶ್ವರ, ಕುರುವತ್ತಿಯ ಮಲ್ಲಿಕಾರ್ಜುನ ದೇವಾಲಯಗಳ ವಾಸ್ತುಶಿಲ್ಪ ವೈಭವ ಸೂಸುವಂತಹ ದೇವಾಲಯಗಳು ವಿರಳವೆಂದೇ ಹೇಳಬಹುದು.
ಕದಂಬನಾಗರ/ಸೋಪಾನ ಶೈಲಿಯ ದೇವಾಲಯಗಳು
ಬೆಳಗಾವಿ ಪ್ರದೇಶದಲ್ಲಿ ಸೋಪಾನ ಶೈಲಿಯ ದೇವಾಲಯ ಹೆಚ್ಚಿನ ಸಂಖ್ಯೆಯಲ್ಲಿವೆ. ಸರಳೀಕರಣ ಈ ಶೈಲಿಯ ದೇವಾಲಯಗಳ ವೈಶಿಷ್ಟ್ಯವಾಗಿದ್ದು ತೀರ ಸರಳವಾದ ಶಿಖರವನ್ನು ಹೊಂದಿರುತ್ತವೆ. ಮಡಿಕೆಗಳುಳ್ಳ ಅಧಿಷ್ಠಾನ, ಅಲಂಕಾರರಹಿತ ಭಿತ್ತಿ, ಒಂದರ ಮೇಲೊಂದರಂತೆ ಇರಿಸಿರುವ, ಮೇಲೆ ಹೋದಂತೆ ಪಿರಾಮಿಡ್ಡಿನ ಆಕಾರದಲ್ಲಿ ಕಿರಿದಾಗುತ್ತ ಸಾಗುವ ಕಪೆÇೀತ, ಗ್ರೀವಗಳ ಅಡ್ಡಪಟ್ಟಿಕೆಗಳು, ಆ ಪಟ್ಟಿಗಳ ಅಂಚಿನ ಗ್ರೀವದಲ್ಲಿ ಕಾಣುವ ಅಲಂಕರಣ, ಮೇಲ್ಗಡೆ ಗಂಟೆಯಾಕಾರದ ಶಿಖರ ಹಾಗೂ ಕಲಶ ಇವು ಕದಂಬಸಾಗರ ಶೈಲಿಯ ದೇವಾಲಯ ವಾಸ್ತುಶಿಲ್ಪದ ಮುಖ್ಯ ಲಕ್ಷಣಗಳು. ಕೆಲವು ದೇವಾಲಯಗಳು ಪರಿವಾರ ದೇವತೆಗಳಾಗಿ ನಿರ್ಮಿಸಿರುವ ದೇವಕೋಷ್ಠಗಳನ್ನು ಹೊಂದಿರುತ್ತವೆ. ಬಾಂಧನಾಪಟ್ಟಿಯಲ್ಲಿ ಶಿಲ್ಪಗಳ ಸಾಲುಗಳನ್ನು ಗುರುತಿಸಬಹುದು. ಅನೇಕ ವಿಶಿಷ್ಟ ವಿನ್ಯಾಸದ ಶುಕನಾಸಗಳನ್ನು ಹೊಂದಿರುತ್ತವೆ.
ಕಲ್ಯಾಣ ಚಾಳುಕ್ಯರ ಮಾಂಡಲೀಕರಾದ ಸುಗಂಧವರ್ತಿಯ ರಟ್ಟರು ಮತ್ತು ಗೋವೆಯ ಕದಂಬರು ಆಳಿದ ಪ್ರದೇಶಗಳಲ್ಲಿ ಸೋಪಾನ ಶೈಲಿಗೆ ಆದ್ಯತೆಯನ್ನು ನೀಡಲಾಯಿತು. ಬೆಳಗಾವಿ ಪ್ರದೇಶದಲ್ಲಿರುವ ಏಕಕೂಟ (ಒಂದೇ ಗರ್ಭಗೃಹ) ದೇವಾಲಯಗಳಲ್ಲಿ ಮಹತ್ವವಾದವುಗಳೆಂದರೆ ದೇಗುಲಹಳ್ಳಿಯ ರಾಮಲಿಂಗೇಶ್ವರ, ಹಲಸಿಯ ಕಲ್ಮೇಶ್ವರ, ಸುವಣೇಶ್ವರ ಮತ್ತು ರಾಮೇಶ್ವರ ದೇವಾಲಯಗಳು, ಬೆಳಗಾವಿ ನಗರದಲ್ಲಿರುವ ಕಮಲಬಸದಿ, ಗೋಕಾಕ ಜಲಪಾತದ ಬದಿಗಿರುವ ಮಹಾಲಿಂಗೇಶ್ವರ ದೇವಾಲಯ ಮುಂತಾದವುಗಳು. ಕೊಣ್ಣೂರಿನ ಚಿಕಲೇಶ್ವರ ಮತ್ತು ಪಾಶ್ರ್ವನಾಥ ಬಸದಿ, ತೋರಗಲ್ ಕೋಟೆಯಲ್ಲಿರುವ ಭೂತನಾಥ ದೇವಾಲಯ, ಮುನವಳ್ಳಿಯ ಮಲ್ಲಿಕಾರ್ಜುನ ಮತ್ತು ಪಂಚಲಿಂಗೇಶ್ವರ ನೇಸರಿಗೆಯ ವೀರಭದ್ರ ಗುಡಿ (ಮೂಲತಃ ಜೈನಬಸದಿ), ಹಲಸಿಯ ಭೂವರಾಹನರಸಿಂಹ ದೇಗುಲ ಮತ್ತು ಸುಪ್ರಸಿದ್ಧ ಜೋಡುಗುಡಿ ದ್ವಿಕೂಟ (ಎರಡು ಗರ್ಭಗೃಹ) ಮಾದರಿಗೆ ಉತ್ತಮ ಉದಾಹರಣೆಗಳಾದರೆ ಹತ್ತರಗಿಯ ಶಿಖರೇಶ್ವರ, ಸವದತ್ತಿಯ ಪುರದೇಶ್ವರ, ಗೋಕಾಕದ ಕಾಡಸಿದ್ದೇಶ್ವರ, ಮುರಗೋಡದ ಮಲ್ಲಿಕಾರ್ಜುನ ಮತ್ತು ನಾರಾಯಣ ಗುಡಿಗಳು, ದೇಗಾಂವದ ಕಲನಾರಾಯಣ ದೇವಾಲಯ ಮುಂತಾದವುಗಳು ತ್ರಿಕೂಟ (ಮೂರು ಗರ್ಭಗೃಹ) ದೇವಾಲಯಗಳು. ಬೆಳಗಾವಿಯಲ್ಲಿ ಕದಂಬ ನಾಗರಶೈಲಿಯ ದೇವಾಲಯಗಳು ಅಪಾರವಾಗಿವೆ.
ತೋರಗಲ್ ಕೋಟೆಯ ಆವರಣದೊಳಗಿರುವ ಭೂತನಾಥ ದೇವಾಲಯ ಸಮೂಹ ಫಾಂಸನ ಶೈಲಿಯಲ್ಲಿದ್ದು ಶಿಖರವನ್ನು ರೂಪಿಸಿರುವ ಕಪೆÇೀತ ಪಟ್ಟಿಗಳ ಮಧ್ಯಭಾಗದಲ್ಲಿ ದೊಡ್ಡ `ನಾಸಿ’ಗಳನ್ನು ರಚಿಸಿ ದೇವತೆಗಳ ಚಿಕಣಿಶಿಲ್ಪಗಳನ್ನು ಕೆತ್ತಲಾಗಿದೆ. ಸರಳ ಸುಂದರವಾದ ಈ ದೇವಾಲಯದ ಭಿತ್ತಿ ಅಲಂಕಾರರಹಿತವಾಗಿದ್ದು ದೇವಕೋಷ್ಠಗಳಿವೆ. ಮುಖಮಂಟಪದ ಕಕ್ಷಾಸನದ ಹೊರಭಾಗದಲ್ಲಿ ಮಿಥುನ ಶಿಲ್ಪಗಳಿದ್ದು ಶಿಥಿಲಗೊಂಡಿವೆ. ಇಡೀ ದೇವಾಲಯ ಸಮೂಹ ಹೆಚ್ಚು ಕಡಿಮೆ ಒಂದೇ ಮಾದರಿಯಲ್ಲಿದ್ದು ಪಡಿಯಚ್ಚಿನಿಂದ ತಯಾರಿಸಿದಂತೆ ಭಾಸವಾಗುತ್ತದೆ. ಇದು ಪುರಾತತ್ವ ಇಲಾಖೆಯ ರಕ್ಷಿತ ಸ್ಮಾರಕವಾಗಿದೆ. ಮುರಗೋಡದ ತ್ರಿಕೂಟ ಮಲ್ಲಿಕಾರ್ಜುನ ದೇಗುಲದ ಸಭಾಮಂಪಟದ ಮೂರು ಶಿಖರಗಳೂ ಫಾಂಸನಶೈಲಿಯಲ್ಲಿದ್ದು ವಿಮಾನದಲ್ಲಿ ಬಾಂಧನಾ ಪಟ್ಟಿ ಮತ್ತು ದೇವಕೋಷ್ಠಗಳಿವೆ. ಸಂವರಣ ರೀತಿಯ ಶಿಖರಗಳು ನಾರಾಯಣ ದೇವಾಲಯದ ಮಹಾಮಂಟಪದ ಮೇಲಿವೆ. ಈ ವಾಸ್ತುಶಿಲ್ಪಿ ವೈಶಿಷ್ಟ್ಯ ಮುರಗೋಡದಲ್ಲಿ ಮಾತ್ರ ಕಂಡುಬರುವುದು ಗಮನಾರ್ಹ. ವಿಮಾನದ ಗೋಡೆಗಳಲ್ಲಿ ಅಲಂಕಾರರಹಿತ ಶಿಖರವಿರುವ ದೇವಕೋಷ್ಠವಿದೆ. ಈ ದೇವಾಲಯದ ಶುಕನಾಸಿಯಲ್ಲಿರುವ ಹದಿನಾರು ಕೈಗಳ ನಟರಾಜಶಿಲ್ಪ ಮನಮೋಹಕವಾಗಿದ್ದು ಜಿಲ್ಲೆಯಲ್ಲಿಯೇ ವಿಶಿಷ್ಟವಾದುದಾಗಿದೆ. ದೇವಾಲಯದ ಹೊರಪ್ರಾಂಗಣ ದಲ್ಲಿರುವ ನಂದಿ ಶಿಲ್ಪ ಆಕರ್ಷಣೀಯವಾಗಿದೆ.
ಬೆಳಗಾವಿ ನಗರದ ಕೋಟೆ ಆವರಣದಲ್ಲಿರುವ ರಟ್ಟರ ಕಾಲೀನ ಉತ್ತರಾಭಿಮುಖವಾದ ಬಸದಿ ಶಾಸನೋಲ್ಲೇಖಿತವಾಗಿದ್ದು ಗರ್ಭಗೃಹ ಮತ್ತು ಮಹಾಮಂಟಪದ ಮೇಲೆ ಫಾಂಸನ ಮತ್ತು ಶೈಲಿಯ ಛಾವಣಿಯಿದೆ. ಗರ್ಭಗೃಹ, ಅಂತರಾಳ, ಗೂಢ ಮಂಟಪ, ಮುಖಮಂಟಪಗಳನ್ನು ಹೊಂದಿದ ಕಮಲಬಸದಿಯಲ್ಲಿ ದೇವಕೋಷ್ಠ, ನಾಜೂಕು ಕೆತ್ತನೆಯ ಸಪ್ತಶಾಖಾ ದ್ವಾರಬಂಧ ಜಿನಬಿಂಬವಿರುವ ಲಲಾಟ, ನೃತ್ಯಗಾರ್ತಿಯರು ಮತ್ತು ಸಂಗೀತವಾದ್ಯ ನುಡಿಸುವವರ ಕಿರು ಶಿಲ್ಪವನ್ನೊಳಗೊಂಡ ಮಹಾಮಂಟಪದ ಕಕ್ಷಾಸಸ, ಶುಕನಾಸದ ಮೇಲಿರುವ ಶಿಖರದ ಕೋಷ್ಠ ಇವು ಕಮಲಬಸದಿಯ ವಾಸ್ತುಶಿಲ್ಪ ಲಕ್ಷಣಗಳು. ಈ ಬಸದಿಯ ಮಹಾಮಂಟಪದ ಭುವನೇಶ್ವರ ದೇವಾರಿಯ ಕಲಾನೈಪುಣ್ಯತೆ ಎತ್ತಿ ತೋರಿಸುತ್ತದೆ. ಈ ಭುವನೇಶ್ವರಿಯಲ್ಲಿ ಏಕಕೇಂದ್ರ ಕಲದಿಂದಾಗಿ ಇದಕ್ಕೆ ಕಮಲಬಸದಿ ಎಂಬ ಹೆಸರು ಬಂದಿದೆ. ಭುವನೇಶ್ವರದಲ್ಲಿ ವಿವಿಧ ತೀರ್ಥಂಕರರ ಕಿರುಶಿಲ್ಪಗಳಿವೆ. ಈ ಬಸದಿಯ ಜಾಲಂದರಗಳು ಗಮನಾರ್ಹವಾಗಿವೆ. ಇಲ್ಲಿಯ ನವರಗಂದ ನಾಲ್ಕು ಕಂಬಗಳ ಮೇಲ್ಭಾಗದಲ್ಲಿ ಚಚ್ಚಾಕಾದಲ್ಲಿ ಲತಾ ಸುರುಳಿಗಳಿದ್ದು ಇವುಗಳಲ್ಲಿ ಹಂಸ, ಪದ್ಮ ಮುಂತಾದವುಗಳನ್ನು ಕಾಣಬಹುದು. ನುಣುಪು ಹೊಳಪಿನ 14 ಕಂಬಗಳನ್ನು ಮಹಾಮಂಟಪದಲ್ಲಿ ಕಾಣಬಹುದು. ಗರ್ಭಗೃಹದ ಪೀಠದ ಮೇಲೆ ಹಿಂದೆ ಶಾಂತಿನಾಥ ತೀರ್ಥಂಕರ ಶಿಲ್ಪವಿತ್ತು. ಈಗ 22ನೆಯ ತೀರ್ಥಂಕರ ನೇಮಿನಾಥರ ಶಿಲ್ಪವಿದೆ.
ನೇಸರಗಿಯ ವೀರಭದ್ರರ ದೇವಾಲಯ ಮೂಲತಃ ಜೈನಬಸದಿಯಾಗಿದ್ದು ಉಪಪೀಠವನ್ನು, ಲಲಾಟದಲ್ಲಿ ಜೈನಬಿಂಬವನ್ನು ಹೊಂದಿದೆ. ಪೀಡಾ ದೇಗುಲಗಳಿಗೆ ಹೋಲುವ ಅಲಂಕಾರಿತ ವಿವರ ಮತ್ತು ಗೋಡೆಯ ಮಡಿಕೆಗಳನ್ನು ಇಲ್ಲಿ ಕಾಣಬಹುದು. ನವರಂಗದ ಮೇಲ್ಛಾವಣಿಯ ಭುವನೇಶ್ವರದಲ್ಲಿ ತೀರ್ಥಂಕರ ಶಿಲ್ಪಗಳಿವೆ.
ಬೆಳಗಾವಿಯ ಸೈನಿಕಪಾಳ್ಯದಲ್ಲಿರುವ ಶಾಸನೋಲ್ಲೇಖಿತವಾದ ಯಾದವಕಾಲೀನ ಹಾಳು ಬಿದ್ದ ಶಿವಾಲಯದಲ್ಲಿಯ ಕಂಬಗಳು ಹದಿನಾರು ಮುಖಗಳ ಕಾಂಡಭಾಗದಲ್ಲಿ ಹೂ, ಲತೆ ಮತ್ತು ಮುತ್ತಿನಾಕಾರದ ಅಲಂಕಾರ ಹೊಂದಿದೆ. ಹೊರಗೋಡೆಯ ಅರ್ಧಗಂಬದ ಮೇಲೆ ಮದನಿಕೆಯರ ಶಿಲ್ಪಗಳು ಮತ್ತು ನವರಂಗದಲ್ಲಿ ಮೇಲೆ ಶಿಖರವನ್ನು ಹೊಂದಿದ ಎಂಟು ದೇವಕೋಷ್ಟಗಳು ವಿಶಿಷ್ಟವಾಗಿವೆ. ಇದು ನಾಜೂಕು ಕೆತ್ತನೆಗೆ ಕಲಾ ಕುಸುರಿಗೆ ಮತ್ತು ಅಲಂಕರಣಕ್ಕೆ ಖ್ಯಾತವಾಗಿದೆ.
ಕ್ರಿ.ಶ.1175ರಲ್ಲಿ ಗೋವೆ ಕದಂಬರಿಂದ ರಚಿತವಾದ ದೇಗಾಂವೆಯ ಕಮಲನಾರಾಯಣ ದೇವಾಲಯ ಬೆಳಗಾವಿ ಜಿಲ್ಲೆಯ ವಾಸ್ತುಶಿಲ್ಪಶೈಲಿಯ ದೃಷ್ಟಿಯಿಂದ ಕಳಶಪ್ರಾಯವಾದ ದೇಗುಲ. ಬೆಳಗಾವಿಯ ಕೆಲವೇ ವೈಷ್ಣವದೇಗುಲ ಗಳಲ್ಲೊಂದಾದ ಇದು ಸಮಾನಾಂತರವಾದ ಮೂರು ಗರ್ಭಗೃಹಗಳನ್ನು ಹೊಂದಿದ್ದು, ಅಂತರಾಳ ಸಹಿತವಾಗಿ ಸಭಾಮಂಟಪದೊಂದಿಗೆ ಜೋಡಿಸಲ್ಪಟ್ಟಿದೆ. ವಿನ್ಯಾಸ ಹೊಂದಿದ ಈ ರೀತಿಯ ತಲವಿನ್ಯಾಸ ಇನ್ನೊಂದೆಡೆ ಕಂಡುಬರುವದು ವಿರಳ. ಫಾಂಸನ ಮಾದರಿಯ ಇದರ ಶಿಖರ ಬರಿ ಮೂರು ಸ್ಥರದಲ್ಲಿ ಮಾತ್ರ ಉಳಿದಿದ್ದು ವಿಮಾನದ ಮೇಲ್ಗಡೆ ಬಿದ್ದುಹೋಗಿದೆ. ಆದರೆ ಅಲ್ಲಲ್ಲಿ ಅಲಂಕರಣಕ್ಕಾಗಿ ಶಿಖರಗಳನ್ನು ಬಿಂಬಿಸಾಗಿದೆ. ಇದು ತ್ರಿಕೂಟ ಮಾದರಿಗೆ ಉತ್ತಮ ಉದಾಹರಣೆ. ಆಭರಣದ ವಿನ್ಯಾಸದ ಕುಸುರಿ ಕೆತ್ತನೆಯಿಂದ ಕೂಡಿದ ಎಂಟು ಕಂಬಗಳ ಸಾಲಿದ್ದು ಕಕ್ಷಾಸನದ ಹೊರಭಾಗದಲ್ಲಿ ಬೇರೆ ಬೇರೆ ಶಿಲ್ಪಾಕೃತಿಯ ಅಲಂಕರಣವಿದೆ. ತಿಮ್ಮೋಜ ಮುಂತಾದ ಶಿಲ್ಪಿಗಳ ಹೆಸರನ್ನೊಳಗೊಂಡ ಶಿಲಾಶಾಸನಗಳನ್ನು ಕಂಬದ ಮೇಲೆ ಕೆತ್ತಲಾಗಿದೆ. ಗರ್ಭಗೃಹದ ಇಕ್ಕೆಲಗಳಲ್ಲಿರುವ ಜಯ-ವಿಜಯದ ಶಿಲ್ಪಗಳು ಸೂಕ್ಷ್ಮ ಕೆತ್ತನೆಯ ವಿನ್ಯಾಸದ ಜಾಲಂಧರಗಳು, ಹಳೆಬೀಡಿನ ಮಾದರಿಯ ಶಿಲ್ಪಗಳು, ವಿಭಿನ್ನ ಭಂಗಿಯ ನೃತ್ಯಗಾತಿಯರು, ಗಾಯಕಿಯರು ರಾಜ್ಯಚಿನ್ಹೆಯ ರೂಪದಲ್ಲಿರುವ ಸಾಲು ಸಿಂಹಗಳ ಶಿಲ್ಪಗಳು ಮಂತ್ರಮುಗ್ಧಗೊಳಿಸುವಂತಿವೆ. ಚಾಲುಕ್ಯ ಗೋವೆಕದಂಬರ ಕಾಲದ ಈ ದೇವಾಲಯದ ಮೇಲೆ ಚಾಲುಕ್ಯ-ಹೊಯ್ಸಳಶೈಲಿಯ ಪ್ರಭಾವ ಎದ್ದು ಕಾಣುತ್ತದೆ. ದೇವಾಲಯದ ಹೊರಾಂಗಣದಲ್ಲಿರುವ ಗೂಢಮಂಟಪದಲ್ಲಿರುವ ಚಿಕ್ಕ ಮಂಟಪಗಳು ಇಂದು ಶಿಲ್ಪರಹಿತವಾಗಿವೆ. ಆದರೆ ಎಡಪಾಶ್ರ್ವದಲ್ಲಿರುವ ಮಂಟಪದಲ್ಲಿ ಹಲವು ಹೆಡೆಗಳ ಆಕರ್ಷಕ ನಾಗಶಿಲ್ಪವಿದೆ. ಬನವಾಸಿಯ ಮಧುಕೇಶ್ವರ ದೇವಾಲಯದ ನಾಗಶಿಲ್ಪವನ್ನು ಹೋಲುತ್ತದೆ. ಪೌರಾಣಿಕ ಪ್ರಸಂಗಗಳನ್ನು ಬಿಂಬಿಸುವ ನಿರೂಪಣಾ ಶಿಲ್ಪಗಳಾದ ಗೋವರ್ಧನಗಿರಿಧಾರಿ, ರಾಮಲೀಲಾ ಪ್ರಸಂಗಗಳು, ಮಿಥುನ ಶಿಲ್ಪಗಳು, ಪ್ರಾಣಿಗಳ ಸಮಾಗಮ ಮುಂತಾದವುಗಳು ಮನಮೋಹಕವಾಗಿವೆ. ಇದು ಕೇಂದ್ರ ಪುರಾತತ್ತ್ವ ಸರ್ವೇಕ್ಷಣಾ ಇಲಾಖೆಯ ಸಂರಕ್ಷಿತ ಸ್ಮಾರಕವಾಗಿವೆ.
ನೇಸರಗಿಯ ಪ್ರಸಿದ್ಧ ಜೋಡುಗುಡಿ ರಟ್ಟರ ನಿರ್ಮಾಣವಾಗಿದ್ದು ಕದಂಬನಾಗರಶೈಲಿಯ ಉತ್ಕøಷ್ಟ ಉದಾಹರಣೆ, ಗರ್ಭಗೃಹ, ಶುಕನಾಶಗಳನ್ನು ಮಾತ್ರ ಹೊಂದಿದ್ದು ನವರಂಗ ಮತ್ತು ಮುಖಮಂಪಟಗಳಿದ್ದ ದ್ಯೋತಕವಾಗಿ ಅವುಗಳ ಅಧಿಷ್ಠಾನದ ಅವಶೇಷಗಳಿವೆ. ಹನ್ನೊಂದು ಹಂತದ ಕದಂಬನಾಗರ ಶೈಲಿಯ ಶಿಖರ ಎರಡು ಗರ್ಭಗೃಹಗಳ ಮೇಲಿದ್ದು ಇದು ಶೈವ ದೇವಾಲಯವಾಗಿದೆ. ಹಲಸಿಯ ಭೂವರಾಹನರಸಿಂಹ ದೇವಾಲಯ ಕಲ್ಯಾಣ ಚಾಲುಕ್ಯ ಶೈಲಿಯ ಲಕ್ಷಣಗಳನ್ನೊಳಗೊಂಡ ಮುಕುಟಪ್ರಾಯವಾದ ನಯನ ಮನೋಹರ ದೇವಾಲಯ. ಬೆಣಚುಕಲ್ಲಿನಿಂದ ನಿರ್ಮಾಣ ಗೊಂಡ ದ್ವಿಕೂಟ ಮಾದರಿಯ ಶಾಸನೋಲ್ಲೇಖಿತ ಈ ದೇವಾಲಯ ಸಂಕೀರ್ಣ ಮಾದರಿಯ ದೇವಾಲಯ ವಾಗಿದೆ. ತಳವಿನ್ಯಾಸದಲ್ಲಿ ಎರಡು ಗರ್ಭಗೃಹಗಳು, ಎರಡು ಅಂತರಾಳಗಳು, ನವರಂಗ, ನಾಲ್ಕು ದ್ವಾರವುಳ್ಳ ಪ್ರಾಕಾರಕ್ಕೆ ಹೊಂದಿಕೊಂಡು ಒಳಗಡೆ ಶಂಕರನಾರಾಯಣ, ಲಕ್ಷ್ಮೀನಾರಾಯಣ, ಈಶ್ವರ ಮತ್ತು ಗರುಡ ದೇವಾಲಯಗಳಿವೆ. ಆರು ಶಾಖೆಗಳ ದ್ವಾರಬಂಧ ಗರ್ಭಗೃಹಕ್ಕಿದ್ದು, ಅಂತರಾಳ ದ್ವಾರದಲ್ಲಿ ಪುಷ್ಪಾಲಂಕೃತ ಜಾಲಂಧರಗಳಿವೆ. ನವರಂಗದಲ್ಲಿ ನಾಲ್ಕು ಚೌಕ ಕಂಬಗಳಿದ್ದು ಒಳಗೋಡೆಯಲ್ಲಿ ಆರು ಮತ್ತು ಹೊರಗೋಡೆಗಳಿಗೆ ಹತ್ತಿಕೊಂಡಂತೆ ಹದಿನಾರು ಕಂಬಗಳಿವೆ. ಪೂರ್ವಾಭಿಮುಖವಾದ ಗರ್ಭಗೃಹದ ಮೇಲೆ ಕದಂಬ ನಾಗರಶೈಲಿಯ ಹನ್ನೊಂದು ಹಂತಗಳಿರುವ ಗೋಪುರವಿದೆ.
ಹಲಸಿ ಗ್ರಾಮದ ಉತ್ತರಕ್ಕಿರುವ ಕಲ್ಮೇಶ್ವರ ದೇವಾಲಯ ಪೂರ್ವಾಭಿಮುಖವಾಗಿದ್ದು, ಏಕಕೂಟ ಮಾದರಿಯಲ್ಲಿರುವ ಶೈವಾಲಯದ ಅಧಮಂಟಪದಲ್ಲಿ ಎರಡು ಕೋಷ್ಠಗಳು ಹಾಗೂ ಎರಡು ಕಂಬಗಳಿವೆ. ನವರಂಗದಲ್ಲಿ ನಾಲ್ಕು ಕಂಬಗಳಿದ್ದು ಛತ್ತು ಬಿದ್ದುಹೋಗಿದೆ. ಇಲ್ಲಿರುವ ಕದಂಬ ನಾಗರ ಅಥವಾ ಫಾಂಸನಶೈಲಿಯ ಇನ್ನೊಂದು ಉತ್ತಮ ಉದಾಹರಣೆ ಎಂದರೆ ರಾಮತೀರ್ಥ ಬೆಟ್ಟದ ಮೇಲಿರುವ ರಾಮೇಶ್ವರ ದೇವಾಲಯ. ಕದಂಬನಾಗರಶೈಲಿಯ ವಿಮಾನವನ್ನು ಗರ್ಭಗೃಹದ ಮೇಲೆ ಹೊಂದಿರುವ ಇದು ಈ ಪ್ರದೇಶದ ದೇವಾಲಯ ವಾಸ್ತುಶಿಲ್ಪದ ವಿಕಸಿತ ಹಂತವನ್ನು ನಿರೂಪಿಸುತ್ತದೆ.
ಬೆಳಗಾವಿ ಪ್ರದೇಶದಲ್ಲಿ ಮುಕುಟಪ್ರಾಯವೆನಿಸಿದ ದೇವಾಲಯಗಳಲ್ಲಿ ನಂದಗಾಂವದ ಅತ್ಯದ್ಭುತ ಶೈವ ದೇವಾಲಯ ಉಲ್ಲೇಖಾರ್ಹವಾದುದು. ಕಲ್ಯಾಣ ಚಾಲುಕ್ಯ ಕಾಲ ಮತ್ತು ಶೈಲಿಯಲ್ಲಿರುವ ಕ್ರಿ.ಶ.11-12ನೆಯ ಶತಮಾನದ ಡೆಕ್ಕನ್ ಟ್ರಾಪ್ ಶಿಲೆಯಿಂದ ನಿರ್ಮಿತವಾದ ಈ ದೇವಾಲಯ ರಾಜ್ಯ ಪುರಾತತ್ತ್ವ ಇಲಾಖೆಯಲ್ಲಿದ್ದರೂ ದುಸ್ಥಿತಿಯಲ್ಲಿದೆ. ಇದು ತ್ರಿಕೂಟಚಲವಾಗಿದ್ದು ಮೂರು ಗರ್ಭಗೃಹ, ಪ್ರತ್ಯೇಕ ಮೂರು ಅಂತರಾಳ, ಒಂದು ಸಭಾಮಂಟಪ ಮತ್ತು ಮುಖಮಂಟಪವನ್ನು ಹೊಂದಿದ್ದು, ಮುಖಮಂಟಪ ಮತ್ತು ಸಭಾಮಂಟಪವನ್ನು ಜೋಡಿಸುವ ಕಿರುಮಂಟಪವಿದೆ. ಗರ್ಭಗೃಹದ ದ್ವಾರಬಂಧದ ಲಲಾಟದಲ್ಲಿ ಕ್ರಮವಾಗಿ ಗಣೇಶ ಮತ್ತು ವಿಷ್ಣುವಿನ ಚಿಕಣಿ ಶಿಲ್ಪಗಳಿವೆ. ಗರ್ಭಗೃಹ ಪ್ರವೇಶದ್ವಾರದ ಮೇಲೆ ಅಷ್ಟದಿಕ್ಪಾಲಕರು, ಮಕರತೋರಣ ಮತ್ತು ಎಲ್ಲಕ್ಕೂ ಮುಖ್ಯವಾಗಿ ಸುಂದರವಾದ ನಟರಾಜನ ಶಿಲ್ಪವಿದೆ. ಅಂತರಾಳದಲ್ಲಿ ಜಾಲವಾತಾಯನವಿದೆ. ಮುಖಮಂಟಪದ ನಾಲ್ಕು ಗೋಡೆಗಳ ಮೇಲೆ ಜಾಲಂಧರಗಳನ್ನು ಹೋಲುವ ಹೂವಿನ ವಿನ್ಯಾಸದ ಕೆತ್ತನೆಯಿದೆ.
ತಿರುಳಗನ್ನಡ ನಾಡೆಂಬ ಖ್ಯಾತಿಯ ಒಕ್ಕುಂದದ ಮುಕ್ತೇಶ್ವರ ದೇವಾಲಯ ಮೂಲತಃ ಜೈನ ಬಸದಿ. ಶಿಥಿಲಾವಸ್ಥೆಯಲ್ಲಿರುವ ಪೂರ್ವಾಭಿಮುಖವಾದ ಕ್ರಿ.ಶ.12ನೆಯ ಶತಮಾನದ ಈ ದೇವಾಲಯ ಗರ್ಭಗೃಹ, ಅಂತರಾಳ ಮತ್ತು ನಾಶ ಹೊಂದಿರುವ ಸಭಾಮಂಟಪವಿದೆ. ಗರ್ಭಗೃಹದ್ವಾರದ ಲಲಾಟದಲ್ಲಿ ಜಿನಬಿಂಬವಿದ್ದು ಅಂತರಾಳದ ಮೇಲ್ಛಾವಣಿ ನಕ್ಷತ್ರಾಕಾರದಲ್ಲಿದೆ. ಒಕ್ಕುಂದದ ಇನ್ನೊಂದು ಮಲ್ಲಿಕಾರ್ಜುನ ದೇವಾಲಯ ಬೆಳಗಾವಿ ಪ್ರದೇಶದಲ್ಲಿ ವಿರಳವಾಗಿರುವ ಸಾಂಧಾರ ದೇವಾಲಯ ಉತ್ತರಾಭಿಮುಖವಾಗಿರುವ ಇದರ ಗರ್ಭಗೃಹ ಮತ್ತು ಅಂತರಾಳದ ದ್ವಾರದಲ್ಲಿ ಪಂಚಶಾಖೆಗಳಿವೆ. ಅಂತರಾಳದ ಛಾವಣಿಯಲ್ಲಿ ಪದ್ಮವಿದೆ. ಗರ್ಭಗೃಹದ್ವಾರದ ಲಲಾಟದಲ್ಲಿ ಜೀನಬಿಂಬವಿದೆ. ಮುಖಮಂಟಪದ ಕಕ್ಷಾಸನ, ಸಭಾಮಂಟಪ ದಲ್ಲಿ ವಾತಾಯನಗಳು, ಬಿದ್ದುಹೋದ ಶಿಖರ ಈ ದೇವಾಲಯದ ಇತರ ಲಕ್ಷಣಗಳಾಗಿವೆ.
ಹನ್ನೆರಡನೆಯ ಶತಮಾನದ ನಿರ್ಮಿತವಾದ ಕಲ್ಯಾಣ ಚಾಲುಕ್ಯ ಶೈಲಿಯಲ್ಲಿರುವ ಬೆಳಗಾವಿ ಪ್ರದೇಶದ ಇನ್ನಿತರ ದೇವಾಲಯಗಳೆಂದರೆ: ಯಡೂರಿನ ವೀರಭದ್ರ ದೇವಾಲಯ, ಸಂಕೇಶ್ವರದ ಶಂಕರಲಿಂಗ ದೇವಾಲಯ, ಕಾಗವಾಡದ ಕಗ್ಗೋಡುರಾಯ ಅಥವಾ ಬ್ರಹ್ಮನಾಥದೇವಾಲಯ, ಅಥಣಿಯ ಅಮೃತೇಶ್ವರ ದೇವಾಲಯ ಮುಂತಾದವುಗಳು ಉಲ್ಲೇಖ ನೀಯ.
ಉತ್ತರದ ನಾಗರಶೈಲಿಯ ಮತ್ತು ಅದರ ಉಪಶೈಲಿಯ ದೇವಾಲಯಗಳು
ಉತ್ತರಭಾರತದ ದೇವಾಲಯ ವಾಸ್ತುಶೈಲಿ ಎನಿಸಿದ ರೇಖಾನಾಗರಶೈಲಿಯ ಪ್ರಾಸಾದಗಳು ಹೆಚಿನ ಸಂಖ್ಯೆಯಲ್ಲಿಲದಿದ್ದರೂ ಪ್ರಚಲಿತವಿದ್ದವು. ಇದರ ಉಪಶೈಲಿಗಳೆಂದರೆ `ಶೇಖರ’ `ಲತೀನ’ ಮತ್ತು `ಭೂಮಿಜ’ ಮಾದರಿಗಳು. `ರಥ’ ವಿನ್ಯಾಸದ ಮೇಲೆ ರಚಿತವಾಗಿರುವ `ಲತೀನ’ ಶಿಖರವು ರೇಖಾರೀತಿಯಲ್ಲಿ ಅಂದರೆ ಮೇಲಕ್ಕೆ ಹೋದಂತೆ ಕ್ರಮೇಣ ಒಳಬಾಗುತ್ತ ಹೋಗುವಂತೆ ನಿರ್ಮಿತವಾಗಿದೆ. ಮಸ್ತಕದಲ್ಲಿ `ಗಳ’ `ಆಮಲಕ’ ಕಲಶವಿದೆ. ಶಿಖರದ ಕೋನಗಳಲ್ಲಿ ಹಂತ ಹಂತದಲ್ಲಿ `ಕರ್ಣಾಮಲಕ’ಗಳಿವೆ. ಶಿಖರದ ಪ್ರತಿಯೊಂದು ಮಗ್ಗಲಿನ ಮಧ್ಯಭಾಗ ಮುಂಚಾಚಿದ್ದು ಬಳ್ಳಿಗಳ ಆಕಾರವಿದೆ.
ಗಮನಾರ್ಹವಾದ ಶಿಖರ ಶೈಲಿಯಿಂದಾಗಿ ಶಿಖರೇಶ್ವರ ಎಂದು ಹೆಸರು ಪಡೆದ ಹತ್ತರಗಿಯ ಶಿಖರೇಶ್ವರ ದೇವಾಲಯ, `ಲತೀನ’ ಶೈಲಿಗೆ ಉತ್ತಮ ಉದಾಹರಣೆ. ಆದರ ಶಿಖರದಲ್ಲಿ ಕರ್ಣಾಮಲಕಗಳಿಗೆ ಬದಲಾಗಿ ಹಲ್ಲಿನ ಆಕಾರದ ಕಚ್ಚುಗಳಿರುವುದು ವಿಶೇಷವಾಗಿದೆ. ಇದು ಸಮಕಾಲೀನ ದೇವಾಲಯಗಳಲ್ಲಿ ಗೋಕಾಕ, ದೇಗಾಂವ, ಹೂಲಿ ಮುಂತಾದೆಡೆ ಹೊರಗೋಡೆಯ ಮೇಲೆ ಅಲಂಕರಣಕ್ಕಾಗಿ ಮಾಡಿರುವ ಮಾದರಿಗಳನ್ನು ನೆನಪಿಸುತ್ತದೆ. ರೇಖಾನಾಗರ ಶೈಲಿಯ ಈ ಶಿಖರದಲ್ಲಿ ಚೈತ್ಯಗೂಡುಗಳಿಂದ ಕೆತ್ತಿದ ಉದ್ದ ಪಟ್ಟಿಕೆಗಳಿವೆ. ಮೂಲತಃ ತ್ರಿಕೂಟಾಚಲವಾದ ಈ ದೇಗುಲದ ದೊಡ್ಡ ದೊಡ್ಡ ಕಲ್ಲುಗಳನ್ನು ಜೋಡಿಸಿ ಎಬ್ಬಿಸಲಾದ ಗೋಡೆಗಳಲ್ಲಿರುವ ಗೂಡುಗಳು ನಿರಾಡಂಬರವಾಗಿವೆ. ನವರಂಗ ಮತ್ತು ಗರ್ಭಗೃಹದ ದ್ವಾರಗಳ ಮೇಲೆ ಅಲಂಕರಣಕ್ಕಾಗಿ ನಿರ್ಮಿಸಿದ ದ್ರಾವಿಡ ಮತ್ತು ಫಾಂಸನ ಮಾದರಿಯ ಸಾಲು (ಐದು) ಶಿಖರಗಳಿದ್ದುದನ್ನು ಗಮನಿಸಬಹುದು. ಬೆಳಗಾವಿ ಪ್ರದೇಶದ ಅನೇಕ ದೇವಾಲಯಗಳಲ್ಲಿರುವಂತೆ ಇದ ಕೂಡ ನಿರಂಧರ/ಹೊರ ಪ್ರದಕ್ಷಿಣಾ ಪಥವನ್ನು ಹೊಂದಿದೆ. ಬಂಧನ ಸಾಮಗ್ರಿಗಳನ್ನು ಬಳಸದೆ ಚಪ್ಪಡಿಗಳನ್ನು ಒಂದರ ಮೇಲೊಂದರಂತೆ ಜೋಡಿಸಿಕೊಂಡು ಹೋಗುವ ತಂತ್ರಜ್ಞಾನವನ್ನು ಬಳಸಲಾಗಿದೆ. ಶಿಖರೇಶ್ವರ ದೇವಾಲಯ ವಾಸ್ತುಶಿಲ್ಪಶೈಲಿಯ ದೃಷ್ಟಿಯಿಂದ ಇಡಿ ಬೆಳಗಾವಿ ಜಿಲ್ಲಾ ಪ್ರದೇಶದಲ್ಲೇ ಏಕಮೇವಾದ್ವಿತಿಯ ಎನಿಸಿದೆ.
ಕಪ್ಪುಮಿಶ್ರಿತ ಹಸಿರು ಛಾಯೆಯ ನುಣುಪು ಕಲ್ಲು (ಕ್ಲೊರೈಟಕ್ ಷಿಸ್ಟ) ಬೆಳಗಾವಿ ಪ್ರದೇಶದಲ್ಲಿ ಮಧ್ಯಯುಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಳಸಿದ್ದನ್ನು ಕಾಣಬಹುದು. ಅಲಂಕರಣಕ್ಕೆ ಅನುಕೂಲಕರವಾದ ಈ ಶಿಲೆ ವಾಸ್ತುಶೈಲಿಯ ಕಲಾಪ್ರೌಢಿಮೆಗೆ ಸಹಾಯವಾಯಿತು. ಅಲ್ಲದೆ ಬಳಪದ ಕಲ್ಲಿನ ಹೊರತಾಗಿ ಅಪರೂಪಕ್ಕೆ ಬೆಣಚುಕಲ್ಲು, ಮರಳು ಶಿಲೆಗಳನ್ನೂ ಬಳಸಲಾಗಿದೆ. ಪರಿಸರದ ಸೌಲಭ್ಯ, ಸ್ಥಳೀಯ ಲಭ್ಯತೆ, ಸಾಗಾಣಿಕೆಯ ಅನುಕೂಲ, ಪೆÇೀಷಕರ ಆರ್ಥಿಕ ಸಾಮಥ್ರ್ಯ ಮುಂತಾದವುಗಳ ಮೇಲೆ ವಾಸ್ತುಶಿಲ್ಪದ ಗುಣವತ್ತೆ ಅವಲಂಬಿತವಾಗಿತ್ತು.
ರೇಖಾನಾಗರ ಪ್ರಾಸಾದದ ಉಪಶೈಲಿಯಾದ `ಶೇಖರಿ’ ಮಾದರಿಯಲ್ಲಿ (ಪ್ರಾಕಾರದಲ್ಲಿ) ಕೇಂದ್ರದಲ್ಲಿ ದೊಡ್ಡ ಶೈಲಿಯ ಶಿಖರದ ಸುತ್ತ ಅದೇ ಮಾದರಿಯ ಶಿಖರಗಳ ಸಮೂಹ ಸುತ್ತುವರಿದು ಪರ್ವತಾವಳಿಯಂತೆ ಕಾಣುತ್ತದೆ. (ಖಜುರಾಹೊ ಕಂಡರಾಯ ಮಹಾದೇವ ದೇವಾಲಯ ಮಾದರಿಯದು). ಹೂಲಿಯ ಬೆಟ್ಟದಡಿಯಿರುವ ದೇವಾಲಯ ಸಮೂಹಗಳಲ್ಲಿ ಮತ್ತು ದೇಗಾಂವೆಯ ಕಮಲನಾರಾಯಣ ದೇವಾಲಯದ ಪಾಶ್ರ್ವಗೋಡೆಯ ಹೊರಭಾಗದ ದೇವಕೋಷ್ಠದ ಮೇಲೆ `ಶೇಖರಿ’ ಮಾದರಿಯ ಶಿಖರ ಮತ್ತು ಇನ್ನುಳಿದ ಕೋಷ್ಠಗಳ ಮೇಲೆ ರೇಖಾನಾಗರ ಮಾದರಿಗಳನ್ನು ನಿರೂಪಿಸಲಾಗಿದೆ.
ರೇಖಾನಾಗರ ಪ್ರಾಸಾದದ ಉಪಶೈಲಿಯಾದ `ಭೂಮಿಜ’ ಶೈಲಿಯಲ್ಲಿ ಮಹಡಿಯೋಪಾದಿಯಲ್ಲಿ ಶಿಖರವು ಸಾಲಾಗಿ, ಸುವ್ಯವಸ್ಥಿತವಾಗಿ ಉಬ್ಬುಶಿಲ್ಪ ರೀತಿಯಲ್ಲಿ ಜೋಡಿಸಲಾಗಿರುತ್ತದೆ. ಬೆಳಗಾವಿ ಜಿಲ್ಲಾ ಪ್ರದೇಶದಲ್ಲಿ ಭೂಮಿಜ ಶೈಲಿಯ ಏಕಮೇವ ಉದಾಹರಣೆ ಎಂದರೆ ಗೋಕಾಕ ಸಮೀಪದ ಮಮದಾಪುರದಲ್ಲಿರುವ 14ನೆಯ ಶತಮಾನಕ್ಕೆ ಸೇರಿದ ಅಂಬಾಬಾಯಿ ದೇವಾಲಯ ಎಂಬುದು ಇಲ್ಲಿ ಉಲ್ಲೇಖನೀಯ. ವಾಸ್ತುವಿಶಿಷ್ಟತೆಯಿಂದ ಕೂಡಿದ ಇನ್ನೊಂದು ಗಮನಾರ್ಹ ದೇವಾಲಯವೆಂದರೆ ರಾಮದುರ್ಗ ತಾಲ್ಲೂಕಿನ ಸುರೇಬಾನದಲ್ಲಿರುವ ಶಬರಿದೇವಾಲಯ. ವಾಸ್ತುಶಾಸ್ತ್ರ ಗ್ರಂಥಗಳಲ್ಲಿ ಉಲ್ಲೇಖಿತವಾದ ಬಂಡಿಯ ಛಾವಣಿಯ ಆಕಾರದ `ಶಾಲಾಕಾರ’ ದೇಗುಲಕ್ಕೆ ಉತ್ತಮ ನಿರ್ದೇಶನ ಇದು. ದೇವಿಯ ದೇಗುಲಗಳಿಗೆ ಮಾತ್ರ ಈ ಆಕಾರದ ದೇಗುಲಗಳು ನಿರ್ಮಾಣವಾಗುತ್ತಿದ್ದದು ಇಲ್ಲಿ ಗಮನಿಸಬೇಕಾದ ಅಂಶ. ಆಯಾತಾಕಾರದ ವಿನ್ಯಾದಲ್ಲಿರುವ ಗರ್ಭಗೃಹ, ವಿಸ್ತಾರವಾದ ಮತ್ತು ಚೌಕಾಕಾರದ ಕಂಬಗಳಿಂದ ಕೂಡಿದ ನವರಂಗ, ತಲವಿನ್ಯಾಸ ಮತ್ತು ಬಾಹ್ಯನೋಟದ ವಿವರಗಳು ಈ ಶಬರಿ ದೇವಾಲಯವನ್ನು ಅಪರೂಪದ್ದಾಗಿಸಿವೆ.
ಬೆಳಗಾವಿ ಪ್ರದೇಶದಲ್ಲಿ ರೇಖಾನಗರ ವಿಮಾನವನ್ನು ಮೂಲಗರ್ಭಗೃಹದಲ್ಲಿ ಹೊಂದಿದ ಶಿಖರಗಳು (ಶಿಖರೇಶ್ವರ ದೇವಾಲಯ ಹೊರತುಪಡಿಸಿ) ಇಲ್ಲದೇ ಹೋದರು ಅಲಂಕರಣ ವಿನ್ಯಾಸವಾಗಿ ದೇವಾಲಯದ ವಿವಿಧ ಭಾಗದಲ್ಲಿ-ದೇವಕೋಷ್ಠದ ಮೇಲೆ, ದ್ವಾರಬಂಧಗಳಲ್ಲಿ, ಕಕ್ಷಾಸನದ ಹೊರಭಾಗದಲ್ಲಿ, ಅರೆಗಂಬಗಳ ಮೇಲೆ ಬಿಂಬಿತವಾಗಿದ್ದು ಉಲ್ಲೇಖನೀಯ. ಬಹುಶಃ ದೇವಾಲಯ ನಿರ್ಮಾಣದಲ್ಲಿ ಮುಖ್ಯಸ್ಥಪತಿ ಹಾಗೂ ಆತನ ಸಹಾಯಕರಿಗೆ ಪ್ರಚಲಿತವಿದ್ದ ಸಮಕಾಲೀನ ದೇವಾಲಯ ವಾಸ್ತುಶಿಲ್ಪಶೈಲಿಯ ಪೂರ್ಣ ನಿರ್ಮಿತಿಯ ಮುಖ್ಯ ಶೈಲಿಯ ಚೌಕಟ್ಟನ್ನು ಉಪಯೋಗಿಸಿಕೊಂಡೇ ಪ್ರಯೋಗಾತ್ಮಕವಾಗಿ ಸಾಂದರ್ಭಿಕವಾಗಿ ಬದಲಾವಣೆಗಳನ್ನು ಸ್ಥಪತಿಗಳು ಅಳವಡಿಸಿಕೊಂಡದ್ದು ಶ್ಲಾಘನೀಯ.
ಕರ್ನಾಟಕ ದ್ರಾವಿಡಶೈಲಿಯ ದೇವಾಲಯಗಳು
ದಾಕ್ಷಿಣಾತ್ಯ ಶೈಲಿ ಅಂತರ್ಗತ ಕರ್ನಾಟಕ ದ್ರಾವಿಡ ದೇವಾಲಯಗಳು ಮಡಿಕೆಗಳುಳ್ಳ ಅಧಿಷ್ಠಾನ, ಕುಡ್ಯಸ್ಥಂಬಗಳ ಅಲಂಕಾರವುಳ್ಳ ಗೋಡೆ/ಭಿತ್ತಿ ಕೂಟ, ಪಂಜರ, ಶಾಲ ಘಟಕಗಳುಳ್ಳ ಹಾರ ಪ್ರತಿಯೊಂದು ಮಹಡಿಯ ಮೇಲಂಚಿನ ಗುಂಟ ಹೊಂದಿರುವುದು ಈ ಶೈಲಿಯ ಕೆಲ ಮುಖ್ಯ ಲಕ್ಷಣಗಳು. ಮೆಟ್ಟಿಲುಗಳು ಮೇಲೇರಿದಂತೆ ಕಿರಿದಾಗುತ್ತ ಪಿರಾಮಿಡ್ಡಿನ ಆಕಾರದಲ್ಲಿರುವುದು, ಮೇಲ್ಗಡೆ ಕಲಶವನ್ನು ಹೊಂದಿರುವ ಘಟ ಆಕಾರದ ಶಿಖರ-ಇವೇ ಮೊದಲಾದ ಪ್ರಧಾನ ಅಂಶಗಳನ್ನು ಹೊಂದಿರುತ್ತವೆ. ಆದರೆ ದೇವಾಲಯಗಳೆಲ್ಲವೂ ಒಂದೇ ಮಾದರಿಯದಾಗಿರಲಿಲ್ಲ. ವಿನ್ಯಾಸದಲ್ಲಿ, ಜೋಡಣೆಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುವ ಸ್ವಾತಂತ್ರ್ಯ ಸ್ಥಪತಿಗಳಿಗಿತ್ತು. ಶಿಲ್ಪಶಾಸ್ತ್ರದಷ್ಟು ಕಟ್ಟುನಿಟ್ಟಿನಿಂದ ವಾಸ್ತುಶಾಶ್ತ್ರದ ಆದೇಶಗಳನ್ನು ಅನುಸರಿಸಲೇಬೇಕೆಂದು ನಿಯಮಗಳಿಗೆ ಬದ್ಧರಾಗಿರಲಿಲ್ಲ. ಇದನ್ನು ಜಾಲಂಧರ, ದ್ವಾರಶಾಖೆ, ದೇವಕೋಷ್ಠ, ಗೋಡೆಗಳ ಅಲಂಕಾರ ಮುಂತಾದವುಗಳನ್ನು ಶಾಸ್ತ್ರಗಳ ಚೌಕಟ್ಟಿನಲ್ಲಿ ಸೇರಿಸದೇ ಸ್ಥಪತಿಯ ಕಲ್ಪನಾ ಚಾತುರ್ಯದ ರೂಪಕಗಳಾಗಿರುವುದನ್ನು ಕಾಣಬಹುದು. ಕಂಬಗಳು ತಿರುಗಣಿಯಿಂದ ಮಾಡಿದಂತಿವೆ.
ಕಂಬಗಳ ಬೋದುಗೆಗಳಿಗೆ ಅಥವಾ ಹೊರಗೋಡೆಯ ಅರ್ಧಗಂಬಗಳಿಗೆ ಅನಿಸಿ ಮದನಿಕೆಯರ ಶಿಲ್ಪಗಳನ್ನು ನಿಲ್ಲಿಸಿರುವ ಸಂಪ್ರದಾಯ ಚಾಲುಕ್ಯರ, ತದನಂತರ ಹೊಯ್ಸಳರ ಕಾಲದಲ್ಲಿ ಮುಂದುವರೆಯಿತು. ಇದನ್ನು ಬೆಳಗಾವಿಯ ಸೈನ್ಯ ಪಾಳ್ಯ ಮೈದಾನದ ಪಕ್ಕಕ್ಕಿರುವ ಶಾಸನೋಲ್ಲೇಖಿತ ದೇವಗಿರಿ ಯಾದವಕಾಲೀನ ದೇವಾಲಯದ ಅವಶೇಷಗಳಲ್ಲಿ ಕಾಣಬಹುದು. ಬರಿ ನವರಂಗ ಮಾತ್ರ ಉಳಿದುಕೊಂಡಿರುವ ಈ ದೇವಾಲಯದಲ್ಲಿ ಉತ್ತಮ ಶಿಲಾಬಾಲಿಕೆಯರ ಶಿಲ್ಪವನ್ನು ಅರ್ಧಗಂಬದಲ್ಲಿ ಕಾಣಬಹುದು.
ಮೂರ್ತಿಶಿಲ್ಪ, ಪೂರ್ಣಕುಂಭ ಮುಂತಾದ ಕೆತ್ತನೆಯ ಕಂಬಗಳನ್ನು ದೇವಾಲಯಗಳ ನವರಂಗದಲ್ಲಿ ಕಾಣಬಹುದು. ಉದಾಹರಣೆಗೆ ಹೂಲಿಯ ತಾರಕೇಶ್ವರ ಮತ್ತು ನಂದಗಾಂವದ ಈಶ್ವರದೇವಾಲಯ ಕೆಲಕಡೆ ಅರ್ಧಸ್ತಂಬಗಳ ಮೇಲೆ ಮಕರತೋರಣ ಕೆತ್ತಲಾಗಿದೆ. ಇದನ್ನು ಹೂಲಿಯ ಅಂಧಕಾಸುರ ದೇವಾಲಯದಲ್ಲಿ ಕಾಣಬಹುದು. ಫಾಂಸನ ಶೈಲಿಯ ದೇವಾಲಯಗಳಿಗೆ ಹೋಲಿಸಿದರೆ ಬೆಳಗಾವಿ ಪ್ರದೇಶದಲ್ಲಿ ದ್ರಾವಿಡಶೈಲಿಯ ದೇವಾಲಯಗಳ ಸಂಖ್ಯೆ ಕಡಿಮೆ ಎಂದೇ ಹೇಳಬಹುದು. ರಾಷ್ಟ್ರಕೂಟಾಂತ್ಯ ಹಾಗೂ ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಇವು ನಿರ್ಮಾಣಗೊಂಡಿದೆ. ಗೋಕಾಕ ಜಲಪಾತದ ತೂಗುಸೇತುವೆಯಾಚೆ ಉತ್ತರಕ್ಕಿರುವ ದತ್ತಾತ್ರೇಯ ದೇವಾಲಯ ಕರ್ನಾಟಕ ದ್ರಾವಿಡ ಶೈಲಿಯ ದ್ವಿತಲ (ಎರಡು ಮಹಡಿಯ ಮೇಲ್ಕಟ್ಟಡವಿರುವ) ವಿಮಾನ ಹೊಂದಿದೆ. ಸುಮಾರು ಹತ್ತನೆಯ ಶತಮಾನದ ಕೊನೆಯ ಭಾಗದಲ್ಲಿ ನಿರ್ಮಾಣವಾದ ಈ ದೇಗುಲದ ಭದ್ರಗಳಲ್ಲಿ ಶಾಲಾ, ನಾಸಿಗಳಲ್ಲಿ ದೇವಿ, ವೈಶ್ರವಣ ಮುಂತಾದ ಚಿಕಣಿ ಶಿಲ್ಪಗಳಿವೆ. ಕಪೆÇೀತಬಂಧ ಮಾದರಿಯ ಅಧಿಷ್ಠಾನ, ಭದ್ರಕ ರೀತಿಯ ಕಂಬಗಳುಳ್ಳ ಅಂತರಾಳ, ಕಡಿಮೆ ಎತ್ತರವುಳ್ಳ ಶಿಖರ, ಅಂತರಾಳದ ಸಮತಲ ಛಾವಣಿಯಲ್ಲಿ ವರ್ತಿಸುತ್ತಿರುವ ಚಾಮುಂಡಿ, ಅದನ್ನು ಸುತ್ತುವರೆದ ಸಪ್ತಮಾತೃಕೆಯರ, ಗಣೇಶ ಮತ್ತು ವೀರಭದ್ರರ ಉಬ್ಬುಶಿಲ್ಪಗಳಿವೆ. ಆರುಶಾಖೆಗಳುಳ್ಳ ಗರ್ಭಗೃಹ ದ್ವಾರಬಂಧದಲ್ಲಿ ರತ್ನ, ವಲ್ಲಿ, ಸ್ತಂಭ ಮತ್ತು ಪದ್ಮಪತ್ರಗಳ ವಿನ್ಯಾಸವಿದೆ.
ಕ್ರಿ.ಶ.1172ರಲ್ಲಿ ರಟ್ಟ ಮುಮ್ಮಡಿ ಕಾರ್ತವೀರ್ಯನಿಂದ ನಿರ್ಮಾಣಗೊಂಡ ಜಲಪಾತದ ಪಕ್ಕಕ್ಕಿರುವ ಮಹಾಲಿಂಗೇಶ್ವರ ದೇವಾಲಯ ತ್ರಿತಲ ವಿಮಾನವನ್ನು ಹೊಂದಿದೆ. ಗೋಪುರದ ಗೋಡೆಯಲ್ಲಿ ಭದ್ರ, ಉಪಭದ್ರ, ಕರ್ಣ ಪ್ರತಿರಥ ಮುಂತಾದ ಚಾಚುಗಳಿದ್ದು, ದೇವಕೋಷ್ಠದ ಮೇಲೆ ಲತೀನ ಶೈಲಿಯ ಶಿಖರವಿದೆ. ಸ್ಥಂಭ ಪಂಜರ ದಲ್ಲಿಯೂ ಈ ರೀತಿಯ ಶಿಖರ ಮಾದರಿಗಳಿವೆ.
ಮೂಲತಃ ಜೈನಬಸದಿಯಾದ, ಸು. 10-11ನೆಯ ಶತಮಾನದ ನಿರ್ಮಿತಿಯಾದ ವಣ್ಣೂರಿನ ಪ್ರಭುದೇವರ ಗುಡಿ ದ್ರಾವಿಡಶೈಲಿಗೆ ಇನ್ನೊಂದು ನಿದರ್ಶನ. ಈ ದೇವಾಲಯದ ಹೊರಗೋಡೆಯ ಮೇಲೆ ಅಲಂಕಾರಿಕವಾಗಿ ಶೇಖರಿ, ದ್ರಾವಿಡ, ಲತೀನ ಮುಂತಾದ ಶೈಲಿಯ ಶಿಖರಗಳಿದ್ದದ್ದು ಗಮನಿಸಬೇಕಾದ ಅಂಶ. ಹೊರಭಿತ್ತಿಯಲ್ಲಿ ಅರೆಗಂಬಗಳ ಅಲಂಕರಣವಿದ್ದರೂ ಶಿಲ್ಪರಹಿತವಾಗಿವೆ. ಕೊಣ್ಣೂರಿನ ಜೈನಬಸದಿ (11ನೆಯ ಶತಮಾನ)ಯ ಹೊರಗೋಡೆಯ ಅರ್ಧಕಂಬಗಳು ಮೇಲೆಯೂ ವಿವಿಧ ಶಿಖರ ಮಾದರಿಗಳನ್ನು ಕಾಣಬಹುದು. ದ್ರಾವಿಡಶೈಲಿಯ ದೇವಾಲಯಗಳಿಗೆ ಬೆಳಗಾವಿ ಪ್ರದೇಶದ ಕಲ್ಲೂರಿನ ಸಿದ್ದೇಶ್ವರ, ಅವರಾದಿಯ ಕಲ್ಮೇಶ್ವರ, ತೋರಗಲ್ ಭೂತನಾಥ ಮುಂತಾದವುಗಳು ಇನ್ನಿತರ ಉದಾಹರಣೆಗಳು.
ಬೆಳಗಾವಿ ಜಿಲ್ಲೆಯಲ್ಲಿ ಕರ್ಣಾಟ ದ್ರಾವಿಡ ವಿಮಾನಗಳುಳ್ಳ (ಐದು ಶಿಖರಗಳು) ಐದು ಗರ್ಭಗೃಹಗಳುಳ್ಳ ಪಂಚಕೂಟ ಮಾದರಿಯ ಉತ್ಕøಷ್ಟ ದೇವಾಲಯವೆಂದರೆ ಹೂಲಿಯ ಪಂಚಲಿಂಗೇಶ್ವರ. ಆಯಾತಾಕಾರ ಸಭಾಮಂಟಪದ ಮೂರು ಪಾಶ್ರ್ವಗಳಲ್ಲಿ ಐದು ಗರ್ಭಗೃಹಗಳಿವೆ. ಪರಸ್ಪರ ಹೊಂದಿಕೊಂಡಿರುವ ಒಂದೇ ಸಾಲಿನಲ್ಲಿರುವ ಮೂರು ಗರ್ಭಗೃಹಗಳು ಮತ್ತು ಎರಡು ಪಾಶ್ರ್ವಗಳಲ್ಲಿ ಇನ್ನೆರಡು ಸಭಾಮಂಟಪ್ಕೆ ಹೊಂದಿಕೊಂಡಿರುವ ವಿಶಾಲ ಮಹಾ ಮಂಟಪವಿದ್ದು ಐದು ಗರ್ಭಗೃಹಗಳ ಮೇಲೆ ಐದು ದ್ರಾವಿಡಶೈಲಿಯ ವಿಮಾನಗಳಿವೆ. ಮುಖಮಂಟಪದ ಮೇಲ್ಛಾವಣಿ ಇಳಿಜಾರಾಗಿದೆ. ಐದು ಶಿಖರಗಳನ್ನು ಬೆಸೆದಿರುವ ರೀತಿ ಅಮೋಘವಾಗಿದ್ದು ಕಣ್ಮನ ಸೆಳೆಯುತ್ತದೆ. ಇದು ಬಾದಾಮಿ ಚಾಲಕ್ಯರ ಕಾಲದ ಜೈನ ಬಸದಿಯಾಗಿದ್ದು ತದನಂತರ ಸುಮಾರು 12ನೆಯ ಶತಮಾನದಲ್ಲಿ ಈಗಿದ್ದ ರೂಪ ತಳೆದಿದೆ.
ಬೆಳಗಾವಿ ಜಿಲ್ಲಾ ಪ್ರದೇಶದಲ್ಲಿ ದೇವಾಲಯ ವಾಸ್ತುಶಿಲ್ಪ ಪರಂಪರೆಯ ಪ್ರಮುಖ ಅಂಶಗಳು
ಬೆಳಗಾವಿ ಜಿಲ್ಲಾ ಪ್ರದೇಶದಲ್ಲಿ ದೇವಾಲಯ ವಾಸ್ತುಶಿಲ್ಪ ಪರಂಪರೆಯ ಕುರಿತಾದ ಮೇಲಿನ ವಿಶದವಾದ ವಿವರಣೆ ಮತ್ತು ವಿಶ್ಲೇಷಣೆಯಿಂದಾಗಿ ಗುರುತಿಸಬಹುದಾದ ಪ್ರಮುಖ ಅಂಶಗಳೆಂದರೆ:
1) ದ್ರಾವಿಡ, ರೇಖಾನಾಗರ ಮತ್ತು ಫಾಂಸನ ಶೈಲಿಯ ದೇವಾಲಯಗಳು ಜಿಲ್ಲೆಯಲ್ಲಿವೆ.
2) ಏಕಕೂಟ, ದ್ವಿಕೂಟ, ತ್ರಿಕೂಟ ಮತ್ತು ಅಪರೂಪವಾಗಿ ಪಂಚಕೂಟ ಮಾದರಿಯ ದೇವಾಲಯಗಳು ಇಲ್ಲಿ ಕಂಡುಬರುತ್ತವೆ.
3) ಸಮಕೋನಗಳ ಬಳಕೆ ಗಮನಾರ್ಹವಾಗಿದೆ.
4) ನೇರವಾದಂತಹ ಗೋಡೆಗಳನ್ನು ಹಿಂಚಾಚು-ಮುಂಚಾಚುಗಳಿಂದ ಒಡೆಯಲಾಗಿದೆ.
5) ತಳವಿನ್ಯಾಸವಿರುವ ದೇವಾಲಯಗಳು ಅಧಿಕವಾಗಿದ್ದು, ನಕ್ಷತ್ರಾಕಾರದ ದೇವಾಲಯಗಳು ವಿರಳ.
6) ಬಹುತೇಕ ದೇವಾಲಯಗಳು ಗರ್ಭಗೃಹ, ಅಂತರಾಳ, ನವರಂಗ ಮತ್ತು ಮುಖಮಂಟಪಗಳನ್ನು ಹೊಂದಿವೆ.
7) ದೇವಾಲಯಗಳ ಅದರಲ್ಲೂ ಪ್ರವೇಶದ್ವಾರ ಮತ್ತು ಗರ್ಭಗೃಹದ ದ್ವಾರಬಂಧಗಳು ಬಹುಶಾಖೆಗಳನ್ನು ಹೊಂದಿದ್ದು ಸೂಕ್ಷ್ಮ ಕೆತ್ತನೆಯ ಅಲಂಕರಣವಿದೆ.
8) ಹೊರಭಿತ್ತಿಯಲ್ಲಿ ಅರೆಗಂಬಗಳು, ಕೋಷ್ಠಗಳು, ಅರೆಕಂಬಗಳ ಮೇಲೆ ನಾಗರ, ಫಾಂಸನ ಮತ್ತು ದ್ರಾವಿಡಶೈಲಿಯ ಶಿಖರಗಳ ಅಲಂಕರಣವಿದೆ.
9) ದ್ವಾರಬಂಧದ ಇಕ್ಕೆಲಗಳಲ್ಲಿ ವಿವಿಧ ಅಲಂಕರಣದ ಜಾಲಂಧರಗಳಿವೆ.
10) ಬೆಳಗಾವಿ ಪ್ರದೇಶದ ಬಹುತೇಕ ದೇವಾಲಯಗಳು ಹೊರ ಪ್ರದಕ್ಷಿಣಾಪಥವನ್ನು ಹೊಂದಿದ್ದು ನಿರಂಧರ ದೇವಾಲಯಗಳಾಗಿವೆ.
11) ತಿರುಗಣೇಯಿಂದ ಹೊಳಪು ಪಡೆದ ವಿವಿಧ ಆಕಾರ ಮತ್ತು ವಿನ್ಯಾಸದ ಕಂಬಗಳನ್ನು ಹೊಂದಿವೆ.
12) ಮುಖಮಂಟಪ ಅಥವಾ ನವರಂಗದ ಭುವನೇಶ್ವರಿಯು ಸೂಕ್ಷ್ಮಕೆತ್ತನೆಯ ಅಲಂಕರಣ ಮತ್ತು ಚಿತ್ತಾಕರ್ಷಕ ಕುಸುರಿ ಕೆಲಸಕ್ಕೆ ನಿದರ್ಶನಗಳಾಗಿವೆ. ಆಳವಾದ ಗುಮ್ಮಟದಲ್ಲಿ ಕಮಲವಿದ್ದು ನಕ್ಷತ್ರಾಕಾರದ ಲೋಲಕ ಇಳಿಬಿದ್ದಿರುತ್ತದೆ.
13) ನವರಂಗದ ಒಳಗೋಡೆಯಲ್ಲಿ ಅಳವಡಿಸಿರುವ ಎರಡು, ನಾಲ್ಕು, ಎಂಟು ದೇವಕೋಷ್ಠಗಳಿವೆ.
14) ಬೆಳಗಾವಿ ಪ್ರದೇಶದ ಮಧ್ಯಕಾಲೀನ ದೇವಾಲಯಗಳಲ್ಲಿ ಉಳಿದ ಪ್ರದೇಶಗಳಿಗೆ ಹೋಲಿಸಿದರೆ ಶಿಲ್ಪ ಸಂಪತ್ತು ಕಡಿಮೆ ಎಂದು ಹೇಳಬಹುದು.
ಉಪಸಂಹಾರ
ಮೇಲಿನ ವಿಶ್ಲೇಷಣೆ ಬೆಳಗಾವಿ ಜಿಲ್ಲಾ ಪ್ರದೇಶದಲ್ಲಿ ಬೆಳೆದು ಬಂದ ದೇವಾಲಯ ವಾಸ್ತುಶಿಲ್ಪ ಪರಂಪರೆಯ ಉಗಮ, ಇತಿಹಾಸ, ಜಾಯಮಾನ, ಸಾಂದರ್ಭಿಕ ಅಂಶ, ವಸ್ತು, ಗುಣವೈಶಿಷ್ಟ್ಯಗಳ ಜೊತೆಗೆ ವಾಸ್ತುಶಿಲ್ಪ ಶೈಲಿಯ ಉಗಮ, ಬೆಳವಣಿಗೆ ಮತ್ತು ಮಧ್ಯಯುಗದಲ್ಲಿ ವಾಸ್ತುಶಿಲ್ಪ ಹೊಂದಿದ ಪರಾಕಾಷ್ಠತೆಯನ್ನು ಬಿಂಬಿಸುತ್ತದೆ. ದೇವಾಲಯ ವಾಸ್ತುಶಿಲ್ಪ ನಿರ್ಮಾಣದ ಸಾಂಪ್ರದಾಯಿಕ ಚೌಕಟ್ಟು, ಸಾಂಸ್ಕøತಿಕ ಪ್ರತಿಬಿಂಬ, ವಾಸ್ತುಶಿಲ್ಪ ಶೈಲಿಯ ಅಭಿವ್ಯಕ್ತಿ, ಕ್ರಿಯಾತ್ಮಕತೆ ಮತ್ತು ಸೃಜನಶೀಲತೆ, ಅಧ್ಯಾತ್ಮಿಕ ಚೌಕಟ್ಟು, ಕಲಾಪರಂಪರೆ ಮತ್ತು ಪೆÇೀಷಕರ ಅಭಿರುಚಿ ಗೋಚರಿಸುತ್ತವೆ. ಕರ್ನಾಟಕದ ವಿವಿದೆಡೆ ಬೆಳೆದು ಬಂದ ವಾಸ್ತುಶಿಲ್ಪ ಪರಂಪರೆ ವಿಭಿನ್ನವಾಗಿಲ್ಲ ಎಂದು ಮೇಲ್ನೋಟಕ್ಕೆ ಅನಿಸಿದರೂ ಸೂಕ್ಷ್ಮವಾದ ಪರಿಶೀಲನೆಯಿಂದ ಬೆಳಗಾವಿ ಜಿಲ್ಲೆಯಲ್ಲಿ ಪ್ರಾದೇಶಿಕ ಭಿನ್ನತೆ ಎದ್ದು ಕಾಣುತ್ತದೆ. ಈ ರೀತಿ ಕರ್ನಾಟಕಾಂತರ್ಗತ ವಿವಿಧ ಜಿಲ್ಲಾ ಪ್ರದೇಶಗಳ ವಾಸ್ತುಶಿಲ್ಪ ಪರಂಪರೆಯ ಅಧ್ಯಯನದ ಅವಶ್ಯಕತೆಯಿದೆ.
[ವಿಶ್ವವಿದ್ಯಾಲಯ ಅನುದಾನ ಆಯೋಗದ ಹಣಕಾಸಿನ ನೆರವಿನಿಂದ ಕೈಗೊಂಡ ಂಡಿಛಿhiಣeಛಿಣuಡಿಚಿಟ ಊeಡಿiಣಚಿge oಜಿ ಃeಟgಚಿum ಖegioಟಿ-ಂಟಿ ಂಟಿಚಿಟಥಿಣiಛಿಚಿಟ sಣuಜಥಿ ಎಂಬ ಪ್ರಾಜೆಕ್ಟಿನ ಒಂದು ಭಾಗವಾದ ಈ ಸಂಶೋಧನಾ ಪ್ರಬಂಧ ಬೆಳಗಾವಿ ಜಿಲ್ಲೆಯಾದ್ಯಂತ ಕೈಗೊಂಡ ಕ್ಷೇತ್ರ ಕಾರ್ಯಗಳ ಆಧಾರದಿಂದ ರಚಿಸಲಾಗಿದೆ.]

ಆಧಾರಸೂಚಿ
1. ಡಾ. ಸಿಂದಿಗಿ ರಾಜಶೇಖರ, ಕರ್ನಾಟಕದ ವಾಸ್ತುಶಿಲ್ಪ ಮತ್ತು ಚಿತ್ರಕಲೆ, ಧಾರವಾಡ, 1988.
2. ಡಾ. ಟಿ.ವಿ. ಮಹಾಲಿಂಗಮ್, Souಣh Iಟಿಜiಚಿಟಿ ಖಿemಠಿಟe ಅomಠಿಟex, ಆhಚಿಡಿತಿಚಿಜ.
3. ಡಾ. ಕಾಮತ ಸೂರ್ಯನಾಥ, ಃeಟgಚಿum ಆisಣಡಿiಛಿಣ ಉಚಿzeಣಣeಡಿ, ಃಚಿಟಿgಚಿಟoಡಿe, 1986.
4. ಡಾ. ಎ. ಗುಂಜೆಟ್ಟಿ (ಸಂ.), ಬೆಳಗಾವಿ ಬೆಳಕು, ಬೆಳಗಾವಿ, 2003.
5. ಡಾ. ಸ್ಮಿತಾ ಸುರೇಬಾನಕರ, ಊಚಿಟಚಿsi 12000-ಂ Sಣuಜಥಿ, uಟಿಠಿubಟisheಜ. Ph.ಆ. ಖಿhesis, ಏUಆ, 2001.
6. ಡಾ. ಬಾ.ರಾ. ಗೋಪಾಲ, ಕರ್ನಾಟಕದ ಕಲೆಗಳು-ವಾಸ್ತು, (ಮೂರನೆಯ ಆವೃತ್ತಿ) ಬೆಂಗಳೂರು, 2010.
7. ಡಾ. ಆರ್. ಗೋಪಾಲ (ಸಂ.) ಬೆಳಗಾವಿ ಜಿಲ್ಲೆಯ ಇತಿಹಾಸ ಮತ್ತು ಪುರಾತತ್ತ್ವ, ಬೆಂಗಳೂರು, 2010.

 ಮುಖ್ಯಸ್ಥರು, ಇತಿಹಾಸ ವಿಭಾಗ, ರಾಣಿ ಪಾರ್ವತಿದೇವಿ ಮಹಾವಿದ್ಯಾಲಯ, ಬೆಳಗಾವಿ-590006.

No comments:

Post a Comment