Tuesday, September 18, 2012

ಕರ್ನಾಟಕ ಇತಿಹಾಸ ಅಕಾದೆಮಿಯ ಒಂದು ಪಕ್ಷಿನೋಟ



ಕರ್ನಾಟಕದ ಇತಿಹಾಸ ಮತ್ತು ಸಂಸ್ಕೃತಿಯ ಬಗ್ಗೆ ಜನಪ್ರಿಯತೆ ಬೆಳೆಸಲು ಹಾಗೂ ಯುವಕರನ್ನು ಸಂಶೋಧನೆ ಕಡೆಗೆ ಪ್ರೋತ್ಸಾಹಿಸುವ ಸಲುವಾಗಿ ೧೯೮೬ರಲ್ಲಿ ಆಸಕ್ತರು ಸೇರಿ ಕರ್ನಾಟಕ ಇತಿಹಾಸ ಅಕಾದೆಮಿಯನ್ನು ಬೆಂಗಳೂರಿನಲ್ಲಿ ಹುಟ್ಟುಹಾಕಲಾಯಿತು. ಇದನ್ನು ನೋಂದಣಿ ಮಾಡಿಸಿದ ನಂತರ ಮೊದಲ ಅಧ್ಯಕ್ಷರಾಗಿ ನಾಡಿನ ಹೆಸರಾಂತ ಇತಿಹಾಸ ವಿದ್ವಾಂಸರಾಗಿದ್ದ ಪ್ರೊ|| ಜಿ.ಎಸ್. ದೀಕ್ಷಿತ್ ಅವರು ಮೊದಲ ಕಾರ‍್ಯಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. ಹೀಗೆ ಆರಂಭವಾದ ಈ ಸಂಸ್ಥೆ ಸಂಶೋಧನೆಗೆ ಪ್ರೋತ್ಸಾಹ ನೀಡಲು ವಿಚಾರ ಸಂಕಿರಣ, ಕಾರ್ಯಾಗಾರ, ಸಮ್ಮೇಳನ ಮುಂತಾದ ಚಟುವಟಿಕೆಗಳನ್ನು ಬೇರೆ ಬೇರೆ ಸಂಸ್ಥೆಗಳ ಸಹಯೋಗದಲ್ಲಿ ನಡೆಸಲಾಯಿತು. ೧೪-೧೨-೧೯೮೬ರಂದು ಆರಂಭವಾದ ಈ ಸಂಸ್ಥೆಯ ಮೊದಲ ವಾರ್ಷಿಕ ಸಮ್ಮೇಳನವನ್ನು ೧೯೮೭ರಲ್ಲಿ ನಡೆಸಲಾಯಿತು. ಮೊದಲ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ|| ಎಂ. ಚಿದಾನಂದಮೂರ್ತಿಯವರಾಗಿದ್ದರು. ಸಮ್ಮೇಳನವನ್ನು ಡಾ|| ವಿ.ಕೃ. ಗೋಕಾಕರು ಉದ್ಘಾಟಿಸಿದರು.
ಸಮ್ಮೇಳನದಲ್ಲಿ ಮಂಡಿಸಲಾದ ಪ್ರಬಂಧಗಳನ್ನು ಮೊದಲ ಸಂಪುಟದ ರೂಪದಲ್ಲಿ ೧೯೮೮ರಲ್ಲಿ ಇತಿಹಾಸ ದರ್ಶನ ಎಂಬ ಹೆಸರಿನಲ್ಲಿ ಬಿಡುಗಡೆ ಮಾಡಲಾಯಿತು. ಅಂದಿನಿಂದ ಇಂದಿನವರೆಗೂ ಪ್ರತಿವರ್ಷ ಸಮ್ಮೇಳನದಲ್ಲಿ ಮಂಡಿಸುವ ಪ್ರಬಂಧಗಳನ್ನು ಸಂಪುಟರೂಪದಲ್ಲಿ ಪ್ರಕಟಿಸುತ್ತಿದ್ದು, ಇಂದು ೨೭ನೆಯ ಸಂಪುಟ ಶೃಂಗೇರಿಯಲ್ಲಿ ಬಿಡುಗಡೆಯಾಗುತ್ತಿದೆ. ಈ ಇತಿಹಾಸ ದರ್ಶನ ಸಂಪುಟಗಳನ್ನು ಕಾಲದಿಂದ ಕಾಲಕ್ಕೆ ಡಾ|| ಸೂರ್ಯನಾಥ ಯು. ಕಾಮತ್, ಪ್ರೊ|| ಲಕ್ಷ್ಮಣ ತೆಲಗಾವಿ, ಡಾ|| ದೇವರಕೊಂಡಾರೆಡ್ಡಿ, ಡಾ|| ಎಂ.ಜಿ. ನಾಗರಾಜ್, ಡಾ|| ಪಿ.ವಿ. ಕೃಷ್ಣಮೂರ್ತಿ, ಶ್ರೀ ದೇವರಾಜಸ್ವಾಮಿ ಮೊದಲಾದವರು ಸಂಪಾದಿಸಿದ್ದಾರೆ.
ಆರಂಭದ ವರ್ಷಗಳಲ್ಲಿ ಪದವಿಪೂರ್ವ ಅಂತಿಮ ತರಗತಿ ವಿದ್ಯಾರ್ಥಿಗಳಿಗೆ ಇತಿಹಾಸದ ವಿಷಯವಾಗಿ ಕರ್ನಾಟಕ ಇತಿಹಾಸ ಮತ್ತು ಸಂಸ್ಕೃತಿಯನ್ನು ಕುರಿತಂತೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ಪ್ರಾರಂಭಿಸಲಾಯಿತು. ಈ ಪರೀಕ್ಷೆ ೨೦೦೪ರವರೆಗೆ ನಡೆಯಿತು. ಬೆಂಗಳೂರು, ಮೈಸೂರು, ಧಾರವಾಡ, ಮಂಗಳೂರು, ತುಮಕೂರು, ಕಲ್ಬುರ್ಗಿಗಳಲ್ಲಿ ಏಕಕಾಲಕ್ಕೆ ನಡೆಸಲಾಗುತ್ತಿತ್ತು. ೨೦೦೩ರಲ್ಲಿ ಈ ಪರೀಕ್ಷೆಗೆ ೭೦೦೦ ಜನ ಕುಳಿತಿದ್ದುದು ಇದರ ಜನಪ್ರಿಯತೆಗೆ ಸಾಕ್ಷಿಯಾಗಿತ್ತು. ಪಿ.ಯು.ಸಿ. ಪಠ್ಯದಿಂದ ಕೆಲವರು ಹಠಮಾರಿತನದಿಂದ ಕರ್ನಾಟಕ ಇತಿಹಾಸವನ್ನು ತೆಗೆಸಿದಾಗ ಈ ಪರೀಕ್ಷೆಯನ್ನು ನಿಲ್ಲಿಸಲಾಯಿತು. ಬೆಂಗಳೂರು ನಗರಕ್ಕಿಂತ ಗ್ರಾಮಾಂತರ ವಿದ್ಯಾರ್ಥಿಗಳೇ ಈ ಪರೀಕ್ಷೆಯಲ್ಲಿ ಮೇಲುಗೈ ಸಾಧಿಸಿದ್ದರು.
ಕರ್ನಾಟಕ ಇತಿಹಾಸ ಅಕಾದೆಮಿ ನಡೆಸುತ್ತ ಬಂದಿರುವ ಇನ್ನೊಂದು ಪ್ರಮುಖ ಕಾರ್ಯಕ್ರಮವೆಂದರೆ ಐತಿಹಾಸಿಕ ಪರಂಪರೆ ಉಳಿಸಿ ಸಪ್ತಾಹ. ಪ್ರತೀವರ್ಷ ಆಗಸ್ಟ್ ೧೬ರಂದು ಈ ಕಾರ್ಯಕ್ರಮ ನಡೆಯುತ್ತದೆ. ಈ ಸಪ್ತಾಹದ ಮೂಲಕ ಕರ್ನಾಟಕದಾದ್ಯಂತ ಇರುವ ನಮ್ಮ ಸದಸ್ಯರ ಸಹಕಾರದೊಂದಿಗೆ, ಸ್ಥಳೀಯ ಸಂಸ್ಥೆಗಳ ಮೂಲಕ ಶಾಲಾ, ಕಾಲೇಜುಗಳ ಅಧ್ಯಾಪಕ-ವಿದ್ಯಾರ್ಥಿಗಳ ಸಹಯೋಗದೊಂದಿಗೆ ಇದರ ಆಚರಣೆ ಆಗುತ್ತಿದೆ. ಇದರ ಉದ್ದೇಶ ಕರ್ನಾಟಕದಲ್ಲಿ ಅವಜ್ಞೆಗೆ ಒಳಗಾಗಿರುವ ದೇವಾಲಯ, ಶಾಸನಗಳು, ತಾಮ್ರಪಟಗಳು, ನಾಣ್ಯಗಳು, ಓಲೆಗರಿಗಳು, ಹಳೆಯ ಕಾಗದಪತ್ರ ಮೊದಲಾದವುಗಳನ್ನು ಕಾಪಾಡುವ ಹಾಗೂ ಅವುಗಳ ಬಗ್ಗೆ ಸ್ಥಳೀಯರಿಗೆ ತಿಳುವಳಿಕೆ ನೀಡುವುದು. ಪ್ರತಿವರ್ಷ ಒಂದು ಆಕರ್ಷಕ ಭಿತ್ತಿಪತ್ರವನ್ನು ಮುದ್ರಿಸಿ ಹಂಚಲಾಗುತ್ತಿದೆ. ಆರಂಭದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಸಹಾಯದಿಂದ ಸೀಮಿತವಾಗಿ ನಡೆಯುತ್ತಿದ್ದ ಈ ಕಾರ್ಯಕ್ರಮ ಇಂದು ಸರ್ಕಾರದ ನೆರವಿನೊಂದಿಗೆ ವ್ಯಾಪಕವಾಗಿ ನಡೆಯುತ್ತಿದೆ. ಹಂಪಿಯಲ್ಲಿ ನಿರ್ಮಾಣವಾಗುತ್ತಿದ್ದ ಸೇತುವೆಯ ಬಗ್ಗೆ ಕರ್ನಾಟಕದ ಉಚ್ಛನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ, ಸೇತುವೆ ನಿರ್ಮಾಣಕ್ಕೆ ತಡೆ ಹಿಡಿಯಲಾಗಿತ್ತು. ಈ ಸೇತುವೆ ನಿರ್ಮಾಣದ ಬಗ್ಗೆ ಯುನೆಸ್ಕೋ ಕೂಡ ವಿರೋಧ ಸೂಚಿಸಿತ್ತು.
ಕರ್ನಾಟಕ ಇತಿಹಾಸ ಅಕಾದೆಮಿಯು ಇದುವರೆವಿಗೆ ೨೫ ಸಮ್ಮೇಳನಗಳನ್ನು ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ನಡೆಸಿದೆ. ಗುರುಮಠಗಳು, ವಿದ್ಯಾಸಂಸ್ಥೆಗಳು, ಸಮಾನ ಮನಸ್ಕ ಸಂಸ್ಥೆಗಳ ಸಹಯೋಗದಲ್ಲಿ ಸಮ್ಮೇಳನಗಳನ್ನು ನಡೆಸಲಾಗಿದೆ. ಸಮ್ಮೇಳನದಲ್ಲಿ ವಿಶ್ವವಿದ್ಯಾಲಯದ ವಿದ್ವಾಂಸರಿಂದ ಹಿಡಿದು ಆಸಕ್ತ ಜನರು, ಉತ್ಸಾಹಿ ತರುಣ ವಿದ್ವಾಂಸರು ಪ್ರಬಂಧಗಳನ್ನು ಮಂಡಿಸಿದ್ದಾರೆ ಹಾಗೂ ಈ ಸಮ್ಮೇಳನದ ಉಪಯೋಗವನ್ನು ಪಡೆದಿದ್ದಾರೆ. ಅನೇಕ ಅಪರಿಚಿತ ಸ್ಥಳಗಳ, ಅಪರೂಪದ ವಸ್ತುಗಳ, ಮೂರ್ತಿಗಳ ದೇವಾಲಯಗಳ ಪರಿಚಯವನ್ನು ನೀಡಿದ್ದಾರೆ. ಕರ್ನಾಟಕದ ಹೆಸರಾಂತ ವಿದ್ವಾಂಸರು, ಈ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿ ಅಧ್ಯಕ್ಷತೆ ವಹಿಸಿದ್ದಾರೆ. ಆಯಾ ವರ್ಷ ಪಿಎಚ್.ಡಿ. ಪಡೆದ ವಿದ್ವಾಂಸರನ್ನು ಗೌರವಿಸುವ ಕಾರ್ಯಕ್ರಮವನ್ನು ಸಮ್ಮೇಳನದಲ್ಲಿ ಹಮ್ಮಿಕೊಳ್ಳಲಾಗಿದೆ. ಈಗ ಅಕಾದೆಮಿಯ ಸದಸ್ಯರ ಸಂಖ್ಯೆ ೧೬೫೦ಕ್ಕೆ ಏರಿದ್ದು, ಸಮ್ಮೇಳನಕ್ಕೆ ದೂರದ ಸ್ಥಳಗಳಿಂದಲೂ ಪ್ರತಿನಿಧಿಗಳು ಬರುತ್ತಾರೆ.
ಖ್ಯಾತ ಶಾಸನತಜ್ಞರಾಗಿದ್ದ ಡಾ|| ಬಿ.ಆರ್. ಗೋಪಾಲ್ ಅವರ ನೆನಪಿನಲ್ಲಿ ಪ್ರತಿವರ್ಷ ಶಾಸನ ಕ್ಷೇತ್ರದಲ್ಲಿ ಕೆಲಸ ಮಾಡಿರುವ ವಿದ್ವಾಂಸರನ್ನು ಗುರುತಿಸಿ ಪ್ರಶಸ್ತಿಯ ಜೊತೆಗೆ ರೂ.೧೦,೦೦೦/-ಗಳ ಬಹುಮಾನವನ್ನು ನೀಡಲಾಗುತ್ತಿದೆ.
ಈ ವರ್ಷ ಬೆಂಗಳೂರಿನ ಬಿ.ಆರ್.ಆರ್. ಫ್ಯಾಮಿಲಿ ಟ್ರಸ್ಟ್‌ನವರು ಕರ್ನಾಟಕದಲ್ಲಿ ಇತಿಹಾಸ ಮತ್ತು ಸಂಸ್ಕೃತಿಯ ಮೇಲೆ ಕೆಲಸ ಮಾಡಿರುವ ವಿದ್ವಾಂಸರನ್ನು ಗುರುತಿಸಿ ಇತಿಹಾಸ ಸಂಸ್ಕೃತಿ ಶ್ರೀ ಎಂಬ ಹೆಸರಿನ ಪ್ರಶಸ್ತಿಯನ್ನು ಕರ್ನಾಟಕ ಇತಿಹಾಸ ಅಕಾದೆಮಿ ಮೂಲಕ ನೀಡಲು ಮುಂದೆ ಬಂದಿದೆ. ಇದು ಪ್ರಶಸ್ತಿಫಲಕ ಹಾಗೂ ಒಂದು ಲಕ್ಷ ರೂಪಾಯಿಗಳ ನಗದು ಬಹುಮಾನವನ್ನು ಒಳಗೊಂಡಿದೆ. ಈ ಮೊದಲ ಪ್ರಶಸ್ತಿಗೆ ಹಂಪೆಯ ಖ್ಯಾತ ವಿದ್ವಾಂಸರಾದ ಪ್ರೊ|| ಲಕ್ಷ್ಮಣ್ ತೆಲಗಾವಿಯವರು ಆಯ್ಕೆಯಾಗಿದ್ದಾರೆ. ಇದನ್ನು ಈ ವರ್ಷ (೨೦೧೨) ಶೃಂಗೇರಿಯಲ್ಲಿ ನಡೆಯುವ ಸಮ್ಮೇಳನದಲ್ಲಿ ಪ್ರದಾನ ಮಾಡಲಾಗುವುದು.
ಈ ಸಂಸ್ಥೆಯನ್ನು ನಡೆಸಿಕೊಂಡು ಹೋಗುವ ಜವಾಬ್ದಾರಿಯನ್ನು ಮೊದಲು ದಿವಂಗತ ಡಾ|| ಜಿ.ಎಸ್. ದೀಕ್ಷಿತ್ ಅಧ್ಯಕ್ಷರಾಗಿ ಹೊತ್ತಿದ್ದರು. ನಂತರ ಅವರನ್ನು ಸಂಸ್ಥೆಯ ಗೌರವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಡಾ|| ಸೂರ‍್ಯನಾಥ ಕಾಮತ್ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಈಗ ಅವರನ್ನು ಗೌರವಾಧ್ಯಕ್ಷರನ್ನಾಗಿಸಿ ಡಾ|| ದೇವರಕೊಂಡಾರೆಡ್ಡಿಯವರನ್ನು ಕಾರ‍್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಕಳೆದ ವರ್ಷ ಈ ಸಂಸ್ಥೆ ತನ್ನ ರಜತ ಮಹೋತ್ಸವವನ್ನು ಬೆಂಗಳೂರಿನಲ್ಲಿ ಆಚರಿಸಿತು. ಈಗ ತನ್ನ ೨೬ನೆಯ ಸಮ್ಮೇಳನವನ್ನು ಶೃಂಗೇರಿಯ ಶ್ರೀ ಶಾರದಾಪೀಠಮ್ ಸಹಯೋಗದೊಂದಿಗೆ ೨೦೧೨ರ ಸೆಪ್ಟೆಂಬರ್ ತಿಂಗಳ ೨೨, ೨೩ ಮತ್ತು ೨೪ರಂದು ನಡೆಸಲಾಗುವುದು.
ಇದೇ ಸಂದರ್ಭದಲ್ಲಿ ಆಸಕ್ತರು ಹಾಗೂ ಸದಸ್ಯರ ಅನುಕೂಲಕ್ಕಾಗಿ (blog) ಬ್ಲಾಗ್‌ವೊಂದನ್ನು ಅನಾವರಣ ಮಾಡಲಿದೆ. ಅದನ್ನು ಆಸಕ್ತರು ಬಳಸಿಕೊಳ್ಳಬೇಕಾಗಿ ವಿನಂತಿಸಿದೆ. ಈಗಾಗಲೇ ಅಕಾದೆಮಿಯ ಇ-ಮೇಲ್ ತನ್ನ ಕಾರ್ಯವನ್ನು ಆರಂಭಿಸಿದೆ.
ಇತಿಹಾಸ ದರ್ಶನದ ಪ್ರಕಟಣೆ ದಿನದಿಂದ ದಿನಕ್ಕೆ ದುಬಾರಿಯಾಗುತ್ತಿರುವ ಈ ಕಾಲದಲ್ಲಿ ೨೦೦೪ರಿಂದ ಶ್ರೀ ರಂಭಾಪುರೀ ವೀರಸಿಂಹಾಸನ ಮಠದ ಶ್ರೀ ಶ್ರೀ ಶ್ರೀ ಪ್ರಸನ್ನ ವೀರಸೋಮೇಶ್ವರ ರಾಜದೇಶಿಕೇಂದ್ರ ಮಹಾಸ್ವಾಮಿಗಳು ರೂ.೨೫,೦೦೦/-ವನ್ನು ಇತಿಹಾಸ ದರ್ಶನ ಪ್ರಕಟನೆಯ ನೆರವಾಗಿ ಆಶೀರ್ವಾದ ಪೂರ್ವಕವಾಗಿ ನೀಡುತ್ತಾ ಬಂದಿದ್ದಾರೆ. ಹಾಗೆಯೇ ಕರ್ನಾಟಕ ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳು ಹಾಗೂ ಪರಂಪರೆ ಇಲಾಖೆ ಐತಿಹಾಸಿಕ ಪರಂಪರೆ ಉಳಿಸಿ ಕಾರ್ಯಕ್ರಮ, ಇತಿಹಾಸ ದರ್ಶನದ ಪ್ರಕಟಣೆ ಮತ್ತು ಸಮ್ಮೇಳನದ ವೆಚ್ಚವಾಗಿ ಮೂರು ಲಕ್ಷ ರೂಪಾಯಿಗಳ ನೆರವನ್ನು ನೀಡಿದೆ. ಈ ಸಂಸ್ಥೆ ಬೆಳೆಯಲು ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕರಿಸುತ್ತಿರುವ ಎಲ್ಲ ಮಹನೀಯರಿಗೂ ಕೃತಜ್ಞತೆಗಳು.

No comments:

Post a Comment