Thursday, July 3, 2014

ಚಿಕ್ಕಮಗಳೂರು ಜಿಲ್ಲೆಯ ಶಾಸನೋಕ್ತ ಅಗ್ರಹಾರಗಳು
ಡಾ. ಕೆ. ವಸಂತಲಕ್ಷ್ಮಿ
‘ಅಗ್ರಹಾರ’ಗಳು, ವೇದಸಂಪನ್ನರಾದ ಬ್ರಾಹ್ಮಣರಿಗೆ ಅವರ ಷಟ್ಕರ್ಮಗಳನ್ನು ಸಾಂಗವಾಗಿ ನಡೆಸಿಕೊಂಡು ಬಾಳಲೆಂದು ರಾಜರು ನೀಡುತ್ತಿದ್ದ ‘ಅಕರಗ್ರಾಮಗಳಾಗಿದ್ದವು’ ಪ್ರಾಚೀನ ಶಾಸ್ತ್ರಗ್ರಂಥಗಳು ರಾಜನಾದವನು ರಾಜ್ಯದಲ್ಲಿ ಶಾಂತಿ ನೆಲೆಸಿದ್ದು ಸುಭಿಕ್ಷವಾಗಿರಲು ರಾಜಧನದಿಂದ ವೇದೋಕ್ತ ಸಂಪನ್ನರಿಗೆ ಭೂದಾನ ನೀಡಬೇಕೆಂದು ತಿಳಿಸುತ್ತವೆ. ನಾಡಿನಲ್ಲಿ ಭೂಸುರರು ನೆಲೆಸಿದ್ದು, ಅವರು ನಡೆಸುತ್ತಿದ್ದ ಯಾಗಯಜ್ಞ ಗಳಿಂದ ನಾಡು ಧರ್ಮದ ಬೀಡಾಗುತ್ತದೆ. ಅವರು ಮಾಡುವ ಅಧ್ಯಯನ, ಅಧ್ಯಾಪನಗಳಿಂದ ಜನರು ಸುಶಿಕ್ಷಿತರು, ಸಜ್ಜನರು, ಸುಶೀಲರೂ ಆಗುತ್ತಾರೆ. ರಾಜನು ದಾನ ನೀಡಿ ಸತ್ಕರ್ಮಿ ಯಾಗಿ, ಶಾಂತಿ ಪ್ರಿಯನಾಗುವನೆಂದು ತಿಳಿಸಿದೆ. ಹೀಗೆ ದಾನ ನೀಡುವುದರಿಂದ ರಾಜನಿಗೆ ಪುಣ್ಯಪ್ರಾಪ್ತಿಯೂ ಆಗುತಿತ್ತು. ಡಾ|| ಡಿ.ಸಿ. ಸರ್ಕಾರ್‍ರವರು ವಾಚಸ್ಪತ್ಯ ಗ್ರಂಥವನ್ನಾಧರಿಸಿ-ವಿದ್ಯಾಭ್ಯಾಸವನ್ನು ಮುಗಿಸಿ ಬಂದ ಬ್ರಾಹ್ಮಣ ವಟುಗಳಿಗೆ ನೆಮ್ಮದಿಯಿಂದ ನೆಲೆಸಲು ಅನುವಾಗುವಂತೆ ರಾಜರು ಅಗ್ರಹಾರ ದಾನ ಕೊಡುತ್ತಿದ್ದರೆಂದು ತಿಳಿಸಿದ್ದಾರೆ. ಒಟ್ಟಿನಲ್ಲಿ ಅಗ್ರಹಾರವೆಂದರೇ- ಶ್ರೇಷ್ಠವಾದ ಭೂಮಿಯನ್ನು ಬ್ರಾಹ್ಮಣರಿಗೆ ಅಕರವಾಗಿ ಕೊಟ್ಟ ಭೂಭಾಗವಾಗಿರುತ್ತದೆ. ಈ ಭೂಭಾಗದ ಎಲ್ಲಾ ಆದಾಯಗಳೂ ದಾನ ಪಡೆದ ಬ್ರಾಹ್ಮಣರಿಗೆ ಸೇರುತ್ತಿದ್ದು, ಅವರನ್ನು ಶಾಸನಗಳಲ್ಲಿ ‘ಮಹಾಜನ’ರೆಂದು ಕರೆಯಲಾಗಿದೆ. ಡಾ. ಚಿದಾನಂದ ಮೂರ್ತಿಯವರು- ಶಾಸನಗಳಲ್ಲಿ ಬರುವ ಮಹಾಜನರ ವಿಶೇಷಣಗಳು ಬ್ರಾಹ್ಮಣರದ್ದಾಗಿದೆ. ಇವು ಬೇರೆಯಾರಿಗೂ ಹೊಂದುವುದಿಲ್ಲ ಎಂದು ಸ್ಪಷ್ಟಪಡಿಸುತ್ತಾರೆ. ಆದರೆ ಡಾ|| ಅಲ್ಟೇಕರರು- ಮಹಾಜನರೆಂದರೇ ಬ್ರಾಹ್ಮಣರೇ ಆಗಬೇಕಿಲ್ಲ, ಬ್ರಾಹ್ಮಣೇತರರು ಕಡಿಮೆ ಸಂಖ್ಯೆಯಲ್ಲಿ ಸೇರಿರು ತ್ತಾರೆ ಎಂದೂ ಅರ್ಥೈಸುತ್ತಾರೆ. ಇದರಂತೆ ಶಾಸನಗಳಲ್ಲಿ ಅಗ್ರಹಾರಗಳಲ್ಲಿ ನೆಲೆಸಿದ್ದ ಇತರ ಜನರ ಬಗೆಗೂ ಕೆಲವು ಉಲ್ಲೇಖಗಳೂ ಲಭ್ಯವಿವೆ.
ಶಾಸನಗಳಲ್ಲಿನ ‘ಅಗ್ರಹಾರ’ಗಳ ಬಗೆಗಿನ ವಿವರಗಳನ್ನು ಗಮನಿಸಿದರೆ ಅಕರವಾಗಿ ನೀಡಿದ ಗ್ರಾಮಗಳನ್ನು ‘ಅಗ್ರಹಾರ’, ‘ಬ್ರಹ್ಮಪುರಿ’, ‘ಸರ್ವಜ್ಞಪುರಿ’ ಎಂದೂ ಕರೆಯಲಾಗಿದೆ. ಇದರಂತೆ ದಾನ ನೀಡುವ ಸಂದರ್ಭದಲ್ಲಿ ದಾನ ನೀಡುವವರು ಆ ಭಾಗಕ್ಕೆ ಹೊಸ ಹೆಸರೊಂದನ್ನು ಇಟ್ಟು ದಾನ ನೀಡುತ್ತಿದ್ದರು. ಹೀಗೆ ಹೆಸರಿಸುವಲ್ಲಿ, ಆ ಪ್ರದೇಶದಲ್ಲಿನ ದೇವರ ಹೆಸರು ಅಥವಾ ದಾನ ನೀಡಿದ ರಾಜನ ಹೆಸರನ್ನು ಸೇರಿಸಿ ಪುರವಾಗಿ ಮಾಡಿ ದಾನ ನೀಡಿರುವುದನ್ನು ಗಮನಿಸಬಹುದು. ಚಿಕ್ಕಮಂಗಳೂರು ಜಿಲ್ಲೆಯ ಶಾಸನಗಳಲ್ಲಿ ಸುಮಾರು ನಲವತ್ತಕ್ಕೂ ಹೆಚ್ಚು ಅಗ್ರಹಾರಗಳು ಲಭ್ಯವಿದ್ದು, ಕೆಲವು ಪ್ರಮುಖ ಅಗ್ರಹಾರಗಳನ್ನು ಮಾತ್ರ ಅಧ್ಯಯನಕ್ಕೆ ಬಳಸಿಕೊಳ್ಳಲಾಗಿದೆ. ಜಿಲ್ಲೆಯ ಕೆಲವು ಶಾಸನಗಳನ್ನು ಗಮನಿಸಿದಾಗ ಆ ಕಾಲದಲ್ಲಿ ಅಗ್ರಹಾರಗಳ ಆಡಳಿತ, ನಿರ್ವಹಣೆ ಮತ್ತು ಅಲ್ಲಿನ ಚಟುವಟಿಕೆಗಳ ಬಗೆಗೂ ತಿಳಿದುಬರುತ್ತಿದೆ.
ಕಡೂರು ತಾಲೂಕಿನ ಆಸಂದಿ ಗ್ರಾಮದ ತಾಮ್ರ ಶಾಸನವೊಂದು (ಕಡೂರು-24) ಕ್ರಿ.ಶ. 795ರಲ್ಲಿ ಗಂಗರ ದೊರೆ 2ನೇ ಶಿವಮಾರನು ಆಸಂದಿ ವಿಷಯದ ತೋರಗಲ್ಲು ಗ್ರಾಮವನ್ನು ನಾನಾವೃತ್ತಿಗಳಾಗಿ ವಿಂಗಡಿಸಿ, ವಿವಿಧಗೋತ್ರದ ವೇದಭ್ಯಾಸಿಗಳಾದ ಬ್ರಾಹ್ಮಣರಿಗೆ ಸರ್ವಬಾಧ ಪರಿಹಾರವಾಗಿ ಬಿಟ್ಟಿದ್ದನ್ನು ತಿಳಿಸುತ್ತಿದೆ. ಈ ಜಿಲ್ಲೆಯ ಶಾಸನಗಳಲ್ಲಿ ಅಗ್ರಹಾರದ ಹಿನ್ನೆಲೆಯಲ್ಲಿ ಗಮನಿಸಿದಾಗ ಸಿಗುವ ಪ್ರಾಚೀನ ಅಕರ ಗ್ರಾಮದಾನದ ಶಾಸನವಿದು. ಆದರೆ ಇದರಲ್ಲಿ ‘ಗ್ರಾಮ’ವನ್ನು ‘ಅಗ್ರಹಾರ’ವೆಂದು ಕರೆದಿಲ್ಲ. ಬಹುಶಃ ಈ ಪರಿಸರದಲ್ಲಿ 8ನೇ ಶತಮಾನದಲ್ಲಿ ‘ಅಗ್ರಹಾರ’ ಪದದ ಬಳಕೆ ಇದ್ದಂತಿಲ್ಲ. ಆದರೆ 9ನೇ ಶತಮಾನದ ಚಿಕ್ಕನಾಯಕನಹಳ್ಳಿಯ ಶಾಸನವು (ಕ.94) ಅಗ್ರಹಾರ ಎಳಮ್ಬುಣುಸೆಯ ಬ್ರಹ್ಮದೇಯವನ್ನು ಮಾಸಾಮಿ ಎಂಬುವನಿಗೆ ಕೊಡಲಾಗದೇ, ಅವನೊಂದಿಗೆ ಹೋರಾಡಿ ಮಣದಿಯ, ಸಿರಿವಚ್ಚ ಮೊದಲಾದವರು ಸತ್ತದ್ದನ್ನು ತಿಳಿಸುವ ವೀರಗಲ್ಲು ಶಾಸನವಾಗಿದೆ. ಇದರಿಂದ 9ನೇ ಶತಮಾನದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಎಳ್‍ಪುಣಸೆ ಗ್ರಾಮ ಅಗ್ರಹಾರವಾಗಿತ್ತೆಂದು ತಿಳಿಯುತ್ತದೆ. ಈ ಜಿಲ್ಲೆಯ ಅತ್ಯಂತ ಪ್ರಾಚೀನ ಅಗ್ರಹಾರ ಇದಾಗಿದೆ.
ಚಿಕ್ಕಮಗಳೂರು ಜಿಲ್ಲೆಯು ಹೊಯ್ಸಳ ನಾಡಿನ ಪ್ರಮುಖ ಭಾಗಗಳಲ್ಲಿ ಒಂದಾಗಿದ್ದು ಈ ಜಿಲ್ಲೆಯಲ್ಲಿ ಹೊಯ್ಸಳರ ಶಾಸನಗಳು ಹೆಚ್ಚಿನ ಸಂಖ್ಯೆಯಲ್ಲಿ ಲಭಿಸಿವೆ. ಅಗ್ರಹಾರದ ಉಲ್ಲೇಖವಿರುವ ಸು. 40 ಶಾಸನಗಳು ದೊರೆಯುತ್ತವೆ. ಇವುಗಳಿಂದ ಹೊಯ್ಸಳರ ಕಾಲದಲ್ಲಿ ಈ ಜಿಲ್ಲೆಯಲ್ಲಿ ಅನೇಕ ಅಗ್ರಹಾರಗಳು ನಿರ್ಮಾಣವಾಗಿತ್ತೆಂದು ತಿಳಿಯುತ್ತಿದೆ. ಈ ಜಿಲ್ಲೆಯಲ್ಲಿ ಸು. 12ನೇ ಶತಮಾನದಿಂದ ಅಗ್ರಹಾರಗಳ ರಚನೆಯು ಆರಂಭವಾಗಿದ್ದು, ಸು. 17ನೇ ಶತಮಾನದವರೆಗೆ ಅಗ್ರಹಾರಗಳ ನಿರ್ಮಾಣವಾಗಿವೆ. ಈ ಜಿಲ್ಲೆಯ ಶಾಸನಗಳಿಂದ ಅಗ್ರಹಾರಗಳ ಸ್ಥಾಪನೆಯಾದ ಬಗೆ, ಅಗ್ರಹಾರಗಳಲ್ಲಿ ನಡೆಯುತ್ತಿದ್ದ ಕಾರಯ ಕಲಾಪಗಳು ಅಗ್ರಹಾರಗಳ ನಿರ್ವಹಣೆ, ಜೀರ್ಣೋದ್ಧಾರ ಮತ್ತು ಅಗ್ರಹಾರಗಳ ಸಂರಕ್ಷಣೆ ಬಗೆಗೆ ಶಾಸನಗಳು ಬೆಳಕು ಚೆಲ್ಲಿವೆ.
ಕ್ರಿ.ಶ. 1130ರ ಮರಲೆ ಗ್ರಾಮದ ಶಾಸನವು (ಚಿ.ಮಾ.108) ರಾಯಣದಂಡನಾಥನು ಧರ್ಮವೇ ದೃಷ್ಟಾದೃಷ್ಟ ಸುಖದಾಯಿಯೆಂದು ತಿಳಿದು, ದೇವಳಿಗೆ ನಾಡ ಮೊರಲೆಯನ್ನು ಅಗ್ರಹಾರವಾಗಿ ಮಾಡಿ, ಶ್ರೀ ಕೇಧಶವ ದೇವರ ಪ್ರತಿಷ್ಠೆ ಮಾಡಿಸಿದ್ದನ್ನು ಶಾಸನವು ತಿಳಿಸುತ್ತಿದೆ. ಆ ದೇವರಿಗೆ ನಮಸ್ಕರಿಸಲು ಬಂದ ದೊರೆ ವಿಷ್ಣುವರ್ಧನನು ದೇವರ ಅಂಗಭೋಗ, ಗೀತವಾದ್ಯ ನೃತ್ಯಕ್ಕೆಂದು, ಜೀರ್ಣೋದ್ಧಾರಕ್ಕೆಂದು ಗಂಜಿಗೆರೆ ಗ್ರಾಮವನ್ನು ಕೊಟ್ಟನಲ್ಲದೇ ಹಿರಿಮುಗಳಿ, ಮಾಗುಂಡಿಗಳಲ್ಲಿ ಗದ್ದೆಯನ್ನು ಬಿಟ್ಟನು. ರಾಯಣನು ಮೊರಲೆಯಲ್ಲಿ ಬಂಧುಗಳಿಗೆ, ಬ್ರಾಹ್ಮಣರ್ಗೆ ವೃತ್ತಿ ವಿಭಾಗ ಮಾಡಿ ಸರ್ವನಮಸ್ಯವಾಗಿ ಕೊಟ್ಟದ್ದನ್ನು ತಿಳಿಸಿದೆ. ಈ ದೇವರನ್ನು ನಂತರದ ಶಾಸನಗಳಲ್ಲಿ ರಾಯಕೇಶವ ದೇವರೆಂದು, ಅಗ್ರಹಾರವನ್ನು ‘ಶ್ರೀರಾಯಕೇಶವಾಪುರ’, ‘ವಿಷ್ಣುವರ್ಧನ ಕೇಶವಾಪುರು’ವೆಂದು ಕರೆಯಲಾಗಿದೆ.
ಕಡೂರು ತಾಲೂಕಿನ ಬ್ರಹ್ಮಸಮುದ್ರದ ಶಾಸನವು (ಕ.150) ಹೊಯ್ಸಳ ನಾರಸಿಂಹದೇವನಲ್ಲಿ ಶ್ರೀಕರಣದ ಹೆಗ್ಗಡೆಯಾಗಿದ್ದ ನಾಕಿಮಯ್ಯನು ‘ಯಶಸ್ಸು ಮತ್ತು ಧರ್ಮಗಳೇ ಶಾಶ್ವತಧನ’ವೆಂದು ತಿಳಿದು ರಾಜನಿಂದ ಬ್ರಹ್ಮಸಮುದ್ರ ಗ್ರಾಮವನ್ನು ಪಡೆದುಕೊಂಡನು. ನಾಕಿಮಯ್ಯನ ಕಾಲಗುಣ ದಿಂದ ಆ ಕಾಲ ಈ ಕಾಲವೆನ್ನದೇ ಸಮಸ್ತ ಧಾನ್ಯ, ಫಳ ವಾಪೀಗಳು ಸಂಪನ್ನವಾಗಿ ‘ಬಲಿರಾಜ್ಯದಂತೆ’ ಸಂಪದ್ಭರಿತ ವಾಯಿತು. ಈಶ ಭವನವೂ, ವೇದಧ್ವನಿ ಘೋಶ ಮಾಡುತ್ತಿದ್ದ ವಿಪ್ರರೂ, ವ್ಯಾಪಾರಿಗಳೂ, ನೆಲೆಸಿದ್ದ ಈ ಗ್ರಾಮಕ್ಕೆ ‘ಬ್ರಹ್ಮ ಸಮುದ್ರ’ವೆಂಬ ಹೆಸರು ಅನ್ವರ್ಥನಾಮವಾಗಿತ್ತು. (ಕ್ರಿ.ಶ. 1169ರಲ್ಲಿ) ನಾಕಿಮಯ್ಯನು ನಾಕೇಶ್ವರ ದೇವಾಲಯವನ್ನು ಕಟ್ಟಿಸಿ ದೇವರ ಅಂಗಭೋಗ, ನೈವೇದ್ಯ, ಪೂಜಕರಿಗೆ, ಪರಿಚಾರಿಕ ಜೀವಿತಕ್ಕೆಂದೂ, ವೇದಖಂಡಕ, ಶಾಸ್ತ್ರಖಂಡಿಕ, ತರ್ಕವಕ್ಷರ ಖಂಡಿಕರಿಗಳಿಗೆ ಅಗ್ರಾಸನ ನಡೆಸಲೆಂದು ದಾನ ನೀಡಿದ್ದಾನೆ. ಈ ಸ್ಥಾನವನ್ನು ‘ನೈಷ್ಠಿಕಸ್ಥಾನ’ವೆಂದೂ ತಿಳಿಸಿದ್ದು ಶುದ್ಧ ಶೈವರಾದ ಊಧ್ರ್ವಶ್ರೌತ್ರಿಯರಾದ, ಶಂಖಮಠಕ್ಕೆ ಸೇರಿದ ಶ್ರೀಮತ್ ತ್ರಿಲೋಚನಾಚಾರ್ಯರಿಗೆ ನೀಡಲಾಗಿದೆ. ನಂತರದ ಕಾಲದ ಶಾಸನಗಳಲ್ಲಿ ಬ್ರಹ್ಮಸಮುದ್ರವನ್ನು ‘ಶ್ರೀಮದನಾದಿ ಅಗ್ರಹಾರ’ವೆಂದೂ ಉಲ್ಲೇಖಿಸಿದೆ. ಕ್ರಿ.ಶ. 1219ರ ವೀರನಾರಾಯಣನ ದೇವಾಲಯದ ಶಾಸನವು (ಕ.157). ‘ಶ್ರೀಮದನಾದಿಯಗ್ರಹಾರ, ಶ್ರೀಲಕ್ಷ್ಮೀನಾರಾಯಣಪುರ’ವಾದ ಬ್ರಹ್ಮಸಮುದ್ರವೆಂದು ತಿಳಿಸಿದೆ. ಬ್ರಹ್ಮಸಮುದ್ರದ ಲಕ್ಷ್ಮಿನಾರಾಯಣದೇವ ಶಾಸನವು (ಕ.169) ಕ್ರಿ.ಶ. 1172ರಲ್ಲಿ ಹೊಯ್ಸಳ ದೊರೆ ನರಸಿಂಹದೇವನ ಶ್ರೀಕರಣಾಧಿಕಾರಿಯೂ, ಸರ್ವಾಧಿಕಾರಿಯಾದ ಆಚಿಮಯ್ಯನು ಲಕ್ಷ್ಮಿನಾರಾಯಣ ದೇವಾಲಯವನ್ನು ನಿರ್ಮಿಸಿದ್ದನ್ನು ತಿಳಿಸಿದೆ. ಈ ದೇವರ ಶ್ರೀ ಕಾರ್ಯಕ್ಕೆಂದು ದೊರೆ ನಾರಸಿಂಹದೇವನ ಕೈಯಿಂದ ಭೂದಾನವನ್ನು ಕೊಡಿಸಿದ್ದಾನೆ. ಹೀಗೆ ಬ್ರಹ್ಮ ಸಮುದ್ರವು ಶೈವ, ವೈಷ್ಣವ ಜನರೆಲ್ಲ ಒಟ್ಟಾಗಿ ನೆಲೆಸಿದ್ದ ಅಗ್ರಹಾರವಾಗಿತ್ತು.
ಚಿಕ್ಕಮಗಳೂರು ತಾಲೂಕಿನ ಖಾಂಡ್ಯದ ಶಾಸನವು (ಚಿ.ಮ.179) ಕ್ರಿ.ಶ. 1180ರಲ್ಲಿ ಹೊಯ್ಸಳ ದೊರೆ ವೀರಬಲ್ಲಾಳದೇವನು ಖಾಂಡೆಯದ ಮಾರ್ಕಂಡೇಶ್ವರ ದೇವರ ಶ್ರೀ ಕಾರ್ಯಕ್ಕೆಂದು ಖಾಂಡೆಯದಗ್ರಹಾರದ ಸಿದ್ದಾಯದಲ್ಲಿನ 50 ಗದ್ಯಾಣವನ್ನು, ಬನವಸೆ ನಾಡಗ್ರಹಾರದ ಶಿವಯೋಗಿ ಮಾಧವದೇವರಿಗೆ ಧಾರಾಪೂರ್ವಕವಾಗಿ ಕೊಟ್ಟನು. ಈ ಶಾಸನ ದಾನಕ್ಕೆ ಸೇರಿದ್ದ ಊರುಗಳನ್ನು ತಿಳಿಸುತ್ತಾ, ಕರಿಗಣಲೆ, ದೇಗುರವಳ್ಳಿಗಳನ್ನು ಹೆಸರಿಸಿದೆ. ಈ ದೇವರ ಭಂಢಾರಕ್ಕೆ, ಖಾಣಿಹೆಗ್ಗಡೆಯಾದ ಬಸವಣ್ಣನು ಅಗ್ಗಿಷ್ಠಿಗೆಗೆಂದು ದಾನ ಬಿಟ್ಟಿದ್ದನ್ನು ತಿಳಿಸಿದೆ. ಈ ಊರಿನ ಮತ್ತೊಂದು ಶಾಸನವು (ಚಿ.ಮ.180) ಕ್ರಿ.ಶ.1183ರಲ್ಲಿ ದೇವಣನು ವೀರಬಲ್ಲಾಳ ದೇವರ ಕೈಯಲ್ಲಿ ಅಗ್ನಿಷ್ಠಿಗೆಯ ಮಠಕ್ಕೆಂದು ಪಡೆದ ದಾನವನ್ನು ಉಲ್ಲೇಖಿಸಿದೆ. ಈ ಅಗ್ರಹಾರದ ಮಹಾಜನಗಳೆಂದು ದಾಮೆಯಹೆಬ್ಬಾರುವ, ಕೇಶವಹೆಬ್ಬಾರುವ, ಹೆಬ್ಬಾರುವ ಶಂಕರಯ್ಯ ಮೊದಲಾದವ ರನ್ನು ಹೆಸರಿಸಿದೆ. ಕಡೂರು ತಾಲೂಕಿನ ಕೆರೆಸಂತೆ ಗ್ರಾಮದ ಶಾಸನ ವೊಂದು (ಕ.66) ವೀರಬಲ್ಲಾಳದೇವನ ಕಾಲದ್ದಾಗಿದ್ದು (ಕ್ರಿ.ಶ. 1181) ಈ ಗ್ರಾಮವನ್ನು ಪಿರಿಯಗ್ರಹಾರ ಶ್ರೀವಿಷ್ಣುಸಮುದ್ರವೆಂದು ಕರೆದಿದೆ. ಶಾಸನವು ವಿಷ್ಣು ಸಮುದ್ರದ ಮಹತ್ವವನ್ನು- ಇದು ಅಗಸ್ತ್ಯನು ಸಮುದ್ರವನ್ನು ಕುಡಿದು ಬರಿದು ಮಾಡಿದಾಗ ಬ್ರಹ್ಮನು ಅದನ್ನು ಮತ್ತೆ ತುಂಬಿ ದಂತಿರುವ ಸಮುದ್ರದಂತೆ ಇತ್ತು ಎನ್ನುತ್ತಾ ಆ ಕೆರೆಯ ವಿಶಾಲತೆಯನ್ನು ಬಣ್ಣಿಸಿದೆ. ಈ ಭೂಭಾಗದಲ್ಲಿ ದೊರೆ ವಿಷ್ಣುವರ್ಧನನು ಋಗ್‍ಯಜುಸ್ಸಾಮರ್ಥವಣವೇದ ಪಾರಂಗತ ನಾನೂರು ಜನ ಬ್ರಾಹ್ಮಣರಿಗೆ ಪ್ರೀತ್ಯಾದರಗಳಿಂದ ಅಗ್ರಹಾರವಾಗಿ ಕೊಟ್ಟನೆಂದು ಶಾಸನ ತಿಳಿಸಿದೆ. ಹೀಗೆ ನಾನೂರು ಜನ ಚತುರ್ವೇದ ಪಾರಂಗತರಿದ್ದುದರಿಂದ ಇದನ್ನು ‘ಪಿರಿಯ ಗ್ರಹಾರ’ವೆಂದು ಕರೆದಿದೆ. ಈ ಮಹಾಜನಗಳು ಸಿದ್ದೇಶ್ವರ ದೇವಸ್ಥಾನವನ್ನು ಶೈವಾಗಮ ವಿಶಾರದರಾಗಿದ್ದ ಶಿವಬ್ರಾಹ್ಮಣ ಲಾಳವಂದಿಭಟ್ಟರಿಗೆ ವಹಿಸಿಕೊಟ್ಟದನ್ನು ತಿಳಿಸಿದೆ.
ಇದೇ ಗ್ರಾಮದ ಕ್ರಿ.ಶ.1224ರ ಮತ್ತೊಂದು ಶಾಸನವು (ಕ.64) ಹೊಯ್ಸಳ ದೊರೆ ವೀರನರಸಿಂಹದೇವರ ಕಾಲದಲ್ಲಿ ಚೌಂಡಿಸೆಟ್ಟಿಯು ಶಂಭುದೇವರ ದೇವಾಲಯವನ್ನು ಕಟ್ಟಿಸಿ, ದೇವರ ಪ್ರತಿಷ್ಠಾಪನೆ ಮಾಡಿಸಿದಾಗ, ವಿಷ್ಣುಸಮುದ್ರದ ಅಶೇಷ ಮಹಾಜನಂಗಳ ಅನುಮತಿ ಪಡೆದು ಶೈವಾಗಮ ವಿಶಾರದರಾಗಿದ್ದ ಶಿವಬ್ರಾಹ್ಮಣ ಬಮ್ಮೆಯದ ಅಳಿಭಟ್ಟರಿಗೆ ಆ ಸ್ಥಾನವನ್ನು ದಾನ ನೀಡುತ್ತಾನೆ. ಮಹಾಜನರು ದೇವರಂಗಭೋಗಕ್ಕೆಂದು ಭೂಮಿದಾನ ನೀಡಿದ್ದನ್ನು ತಿಳಿಸಿದೆ. ಇಲ್ಲಿಯ ಇನ್ನೊಂದು ಶಾಸನವು (ಕ.61) ಕ್ರಿ.ಶ.1259ರಲ್ಲಿ ಮಹಾವಡ್ಡಬೆವಹಾರಿ ಸೋವಾಸಿ ಮಾಧವಭಟ್ಟಯ್ಯನ ಮಗ ಅಲ್ಲಾಳದೇವನು ಶ್ರೀಮದ ನಾದಿಯಗ್ರಹಾರವಾದ ವಿಷ್ಣುಸಮುದ್ರವೆಂಬ ಕೆರೆಸಂತೆಯ ಕೆರೆಯ ಧರ್ಮಕ್ಕೆಂದು 200 ಗದ್ಯಾಣವನ್ನು ದಾನ ನೀಡಿದ್ದನ್ನು ತಿಳಿಸಿದೆ. ಈ ಹಣಕ್ಕೆ ಬಂದ ಬಡ್ಡಿಯಿಂದ ಪ್ರತಿ ವರ್ಷ 30 ಗದ್ಯಾಣವನ್ನು ಆ ಕೆರೆಯ ತೂಬನ್ನು ಸರಿಪಡಿಸುತ್ತಾ, ಮಹಾಜನರು ಸಧರ್ಮವನ್ನು ನಡಸುವರೆಂದು ಶಾಸನ ತಿಳಿಸಿದೆ; ಈ ವಿಷ್ಣುಸಮುದ್ರದ ಕೆರೆಯ ತೂಬನ್ನು ಈ ಊರಿನ ಮತ್ತೊಂದು ಶಾಸನದಲ್ಲಿ ‘ರಾಯರಾಯ ಪುರಂಗೊಣ್ಣ ತೂಬು’ ಎಂದು ಕರೆದಿದೆ (ಕ.67). ಕೆರೆಸಂತೆ ಗ್ರಾಮದ ಮತ್ತೊಂದು ಶಾಸನವು (ಕ.71) ವಿಷ್ಣಸಮುದ್ರದ ನಖರೇಶ್ವರ ದೇವರಿಗೆ ಪ್ರತಿವರ್ಷವೂ ಸಿದ್ದಾಯದ 1200 ಹೊನ್ನಿನೊಳಗೆ, 10 ಗದ್ಯಾಣವನ್ನು ಅಮೃತಪಡಿಗೆಂದು ಭೂಮಿಯನ್ನು ನಾನೂರ್ವರು ದಾನ ನೀಡಿದ್ದನ್ನು ತಿಳಿಸಿದೆ.
ಕಡೂರು ತಾಲೂಕಿನ ಮಾದಾಪುರ ಗ್ರಾಮದ ಕ್ರಿ.ಶ. 1218ರ ಶಾಸನವು (ಕ.185) ಮಗರೆ 200ರೊಳಗೆ ಚಳ್ಕಿ ವೃತ್ತಿಗೆ ಸೇರಿದ್ದ ಕೇಶಿಯಹಳ್ಳಿಯನ್ನು ‘ಉತ್ತಮ ಅಗ್ರಹಾರ’ ವೆಂದು ಉಲ್ಲೇಖಿಸುತ್ತಾ ಇದನ್ನು ‘ಪ್ರಸನ್ನ ಮಾಧವಪುರ’ವೆಂದು ಹೆಸರಿಸಿದೆ. ಈ ಅಗ್ರಹಾರದಲ್ಲಿ ಕ್ಷೀರಸಾಗರದಂತಹ ತಟಾಕಗಳು, ಸುಂದರವಾದ ಉದ್ಯಾನವನಗಳೂ, ಮುನಿ ಗಳಂತೆ ತೇಜಸ್ಸುಳ್ಳ ವಿಪ್ರವ್ರಜವೂ, ಲಕ್ಷ್ಮಿಯನ್ನು ಹೋಲು ವಂತಹ ಪುರಸ್ತ್ರೀಯರು ಇದ್ದು ಈ ನಾಡಿನಲ್ಲಿ ಯಾವಾಗಲೂ ವಸಂತಮಾಸವೇ ಇರುತ್ತಿತ್ತು ಎಂದು ಬಣ್ಣಿಸಿದೆ. ಮಾಧವಾ ಪುರದ ವಿಪ್ರರು- ಅಕಳಂಕಾಚಾರರಾರಾಧಿತರೂ, ಗುರು ಪಿತೃದೈವ ಅತಿಥಿ, ಬ್ರಾತರನ್ನು ಉನ್ನತಮಟ್ಟಕ್ಕೇರಿಸಲು ಅನೇಕ ಯಜ್ಞಗಳನ್ನು ಮಾಡುತ್ತ ಯಶಸ್ಸು ಗಳಿಸಿದವರೂ, ವೇದ ವೇದಾಂತಗಕೃತಾಭ್ಯಾಸರೂ, ವಿದ್ವಾಂಸರಾದ ಇವರು ಸದಾದಾನಮುದಿತರಾಗಿದ್ದರು, ಸತ್ಯರತ್ನಾಕರರಾಗಿದ್ದರು ಎಂಬ ಶಾಸನ ಬಣ್ಣಿಸಿದೆ. ಅಖಿಳ ನೀತಿನಿದಾನ ಸರ್ವಜ್ಞರೆನ್ನಿಸಿದ 42 ಜನ ವಿಪ್ರರು ನೆಲೆಸಿದ್ದರು. ಈ ಅಗ್ರಹಾರದಲ್ಲಿ ವೀರಬಲ್ಲಾಳದೇವನ ರಾಣಿ ಬೈಚಲಾದೇವಿಯು ಪ್ರಸನ್ನಮಾಧವ ದೇವಾಲಯನ್ನು ನಿರ್ಮಿಸಿ ಬ್ರಾಹ್ಮಣರಿಗೆ ದಾನ ಬಿಟ್ಟಿದ್ದನ್ನು ಶಾಸನ ದಾಖಲಿಸಿದೆ.
ಅಗ್ರಹಾರದಲ್ಲಿ ಹೊಸದಾಗಿ ದೇವಾಲಯವನ್ನು ನಿರ್ಮಿಸಿದಾಗ ಮಹಾಜನರೇ ಮುಂದಾಗಿ ತಮ್ಮ ವೃತ್ತಿಭಾಗದ ಕೆಲ ಭೂಮಿಯನ್ನು, ದೇವರ ಶ್ರೀ ಕಾರ್ಯಕ್ಕೆಂದು ದಾನ ನೀಡುತ್ತಿದ್ದರು. ಕಡೂರು ತಾಲೂಕಿನ ದೇವನೂರು ಗ್ರಾಮದಲ್ಲಿ ‘ಅಭಿನವರುದ್ರ’ ನೆನಿಸಿದ್ದ ಕುಮಾರದೇವರು ‘ಸಿದ್ಧೇಶ್ವರ ದೇವಾಲಯ’ವನ್ನು ಕಟ್ಟಿಸಿದರು (ಕ.106). ಆಗ ವರಲಕ್ಷ್ಮಿ ನಾರಾಯಣಪುರವೆನ್ನಿಸಿದ್ದ ದೇವನೂರಿನ ಬ್ರಾಹ್ಮಣರು ಭೂದಾನ ನೀಡಿದರಲ್ಲದೇ, ಸಿದ್ಧನಾಥ ದೇವರ ಗದ್ದೆಗಳ ಸಿದ್ದಾಯವನ್ನು ಎಂದೆಂದಿಗೂ ಸರ್ವನಮಸ್ಯವಾಗಿ ಸಲ್ಲಿಸಿದರು. ಹೀಗೆ ಅಗ್ರಹಾರದ ಮಹಾಜನರು ಆ ಗ್ರಾಮದ ಒಡೆಯರಂತಿದ್ದು, ಎಲ್ಲಾ ವ್ಯವಹಾರಗಳನ್ನು ನಿರ್ವಹಿಸು ತ್ತಿದ್ದದನ್ನು ಶಾಸನಗಳು ತಿಳಿಸಿವೆ. ಇದರಂತೆ, ಬ್ರಹ್ಮಸಮುದ್ರದ ಶಾಸನವೊಂದು (ಕ.153) ಕ್ರಿ.ಶ. 1232ರಲ್ಲಿ ಅನಾದಿ ಅಗ್ರಹಾರವಾದ ಬ್ರಹ್ಮಸಮುದ್ರದ ಅಶೇಷಮಹಾಜನರು ಕರೆಗಗೌಡ ಪೆರಮಾಳುಗೌಡರಿಗೆ ಕೀಳ್ಕೋಗಿನ ನೆತ್ತರು ಕೊಡಗಿಯ ಕೆಯಿಮತ್ತರು ಎರಡು, ಕಂಬ 230ಕ್ಕೆ ಸರ್ವಬಾಧಾ ಪರಿಹಾರವಾಗಿ ಮಾಡಿದ್ದನ್ನು ಶಾಸನ ತಿಳಿಸಿದೆ.
ತರಿಕೆರೆ ತಾಲೂಕಿನ ಅಮೃತಾಪುರದ ಶಾಸನವು (ತ.12) ಕ್ರಿ.ಶ.1198ರಲ್ಲಿ ಹೊಯ್ಸಳವೀರ ಬಲ್ಲಾಳದೇವರ ಬಲದೋಳಿನಂತಿದ್ದ ದಂಡನಾಯಕ ಅಮಿತಯ್ಯನು ಕಗ್ಗಿಯ ವೃತ್ತಿಗೆ ಸೇರಿದ ಅಮೃತಸಮುದ್ರದಲ್ಲಿ ಅಮೃತೇಶ್ವರ ದೇವಾಲಯವನ್ನು ನಿರ್ಮಿಸಿದನು. ಈ ದೇವರ ಅಂಗಭೋಗ, ರಂಗಭೋಗ, ಚೈತ್ರಪವಿತ್ರಗಳಿಗೆಂದು, ಆಸಂದಿ ನಾಡಿನ ಅಗ್ರಹಾರ ಹುಣಿಸೆಕಟ್ಟೆಯನ್ನು ಸರ್ವನಮಸ್ಯವಾಗಿ ಬಿಟ್ಟಿದ್ದನ್ನು ತಿಳಿಸಿದೆ. ಇದೇ ತಾಲೂಕಿನ ಕುಂಟನಮಡವು ಗ್ರಾಮದ ಶಾಸನವು (ತ.34) ಕ್ರಿ.ಶ. 1230ರಲ್ಲಿ ಶ್ರೀಮದನಾದಿಯ ಗ್ರಹಾರ ಯಮ್ರಿತಕೇಶವಪುರವಾದ ಕೂಟನಮಡುವಿನ ಅಶೇಷಮಹಾಜನರು ಸಭಾಸ್ಥಳಕ್ಕೆ ಬಂದು ಸೇರಿ ತಮ್ಮಲ್ಲಿ ಐಕಮತ್ಯದಿಂದ ಸುತ್ತಲ ಕೆಲವು ಹಳ್ಳಿಗಳನ್ನು ಧ್ರುವ ಉಂಡಿಗೆ ಯಾಗಿ ಹಂಚಿಕೊಂಡ ವಿಧಾನವನ್ನು ತಿಳಿಸಿದೆ. ಶಾಸನವು ಮಹಾಜನರು ವೊಕ್ಕುಂದ, ಮಾವಿನಕೆರೆಯ 95 ವೃತ್ತಿ, ದೊಡ್ಡೇರಿ, ಬೀಚನಮಾನಿಯ 98 ವೃತ್ತಿ, ವೊಳ್ಳೆಯಮಾನಿ, ವೊರವನಕೆರೆಯ 95 ವೃತ್ತಿ, ಸೀಗೆಯಕೋಟೆ, ತಟ್ಟೆಯಹಳ್ಳಿ, ಮಲ್ಲೆಯನಹಳ್ಳಿಯ 57 ವೃತ್ತಿ. ಒಟ್ಟು ವೃತ್ತಿ 300 ಕಂಬವನ್ನು ತಾವು ತೆಗೆದುಕೊಂಡು ತಮ್ಮ ಹಳ್ಳಿಗಳಲ್ಲಿ ಕೆರೆ ಕಾಲುವೆಗಳನ್ನು ಕಟ್ಟಿಸಿ, ತೋಟ ತುಡಿಕೆಯನ್ನು ನಡೆಸುವರು ತಮ್ಮ ತಮ್ಮ ಹಳ್ಳಿಗಳ ತಪ್ಪು, ಕಾತುಷ್ಟಿ, ಕಾಹು ಎಲ್ಲವೂ ಅವರವರೇ ನೋಡಿಕೊಳ್ಳುವರು ಎಂದು ಕಟ್ಟುಪಾಡನ್ನು ವಿಧಿಸಿದ್ದು ಇದನ್ನು ಮೀರಿದರೆ ಚಕ್ರವರ್ತಿ ವೀರನರಸಿಂಹದೇವರಸರಾಣಿ, ಸೋವಿಲಾದೇವಿಯರಾಣಿ ಎಂದಿದೆ- ಹೀಗೆ ಅಂದಿನ ಅಗ್ರಹಾರದ ಬ್ರಾಹ್ಮಣರು ಕೇವಲ ಧಾರ್ಮಿಕ ಆಚರಣೆಗಳಿಗೆ ಸೀಮಿತರಾಗದೇ, ಸುತ್ತಲ ಗ್ರಾಮಗಳ ಏಳಿಗೆಗೆ ಶ್ರಮಿಸುತ್ತಾ ಸಾಮಾಜಿಕ ಕಾರ್ಯಗಳನ್ನು ನಿರ್ವಹಿಸಿದ್ದನ್ನು ಶಾಸನವು ತಿಳಿಸುತ್ತಿದೆ.
ತರೀಕೆರೆಯ ಹಳೆಯೂರಿನ ಶಾಸನವು (ತ. 97) ಕ್ರಿ.ಶ. 1180ರಲ್ಲಿ ವೀರಬಲ್ಲಾಳದೇವರು ಆಳುತ್ತಿದ್ದಾಗ, ಶ್ರೀಮದಗ್ರಹಾರ ಅಮರಾವತಿಪುರವೆನ್ನಿಸಿದ್ದ ತರಿಯಕೆರೆಯಲ್ಲಿ ಯಮನಿಯಮ ಸ್ವಾಧ್ಯಾಯಧ್ಯಾನಧಾರಣ ಮೋನಾನುಷ್ಠಾನ ಜಪಸಮಾಧಿಶೀಲಸಂಪನ್ನರಾದ, ಔಪಸನಾ ಅಗ್ನಿಹೋತ್ರ ಮಾಡುವ ಗುರುದೇವ ಪೂಜಾತತ್ಪರರಾದ, ಸೂರ್ಯನಂತೆ ತೇಜಪ್ರತಾಪಿಗಳಾದ ಭೂಸುರರು ನೆಲೆಸಿದ್ದರು. ಈ ಅಗ್ರಹಾರವನ್ನು ಹೆಗ್ಗಡೆ ವಿಜೆಯಾದಿತ್ಯದೇವನು, ಹೆಗ್ಗಡತಿ ದೇಕವ್ವೆಯವರು ಮಹಾಪ್ರಧಾನರಾದ ಲಕ್ಮರಸರು ಮಾಡಿದ ಅಗ್ರಹಾರವೆಂದು ಶಾಸನ ತಿಳಿಸಿದೆ. ಈ ಅಗ್ರಹಾರದಲ್ಲಿ ಕೇಶವದೇವರ ಪ್ರತಿಷ್ಠೆ ಮಾಡಿದಾಗ ನೂರೆರೆಡು ಮಹಾಜನರು ದಾನ ನೀಡಿದ್ದನ್ನು ಶಾಸನ ದಾಖಲಿಸಿದೆ.
ತರಿಕೆರೆ ತಾಲೂಕಿನ ಸಮತಳ ಗ್ರಾಮದ ಶಾಸನವೊಂದು (ತ.88) ಹೆಗ್ಗಡೆ ಚಂದಿರಯ್ಯನು ಚೌಡವ್ವೆಯರು ಮುದ್ದೇಶ್ವರ ಲಿಂಗವ ಪ್ರತಿಷ್ಠೆ ಮಾಡಿದಾಗ ಚಂದಿರಯ್ಯನವರು ‘ಸರಸ್ವತಿಪುರ’ವೆಂದು 24 ಜನ ಬ್ರಾಹ್ಮಣರಿಗೆ ದಾನ ಬಿಟ್ಟದ್ದನ್ನು ದಾಖಲಿಸಿದೆ. ಶಾಸನವು ಈ ದೇವಾಲಯಕ್ಕೆ ನೀಡಿದ ದಾನವು ಸರಸ್ವತಿಪುರದ ಮಹಾಜನರೆದುರು ನಡೆಯಿತೆಂದು ತಿಳಿಸಿದೆ. ತರೀಕೆರೆಯ ತಾಮ್ರ ಶಾಸನವು (ತ.51) ವೀರಬಲ್ಲಾಳ ದೇವರು, ಆಸನ್ದಿ ನಾಡಿಗೆ ಸೇರಿದ ಮೊಲ್ಲೇಶ್ವರ ಗ್ರಾಮವನ್ನು ಅಗ್ರಹಾರವಾಗಿ ಮಾಡಿದ್ದನ್ನು ತಿಳಿಸಿದೆ. ಈ ಅಗ್ರಹಾರದ ಕಟ್ಟುಗುತ್ತಿಗೆ ಪಿಂಡದಾನವಾಗಿ ಗದ್ಯಾಣ 100ನ್ನು ತಿಳಿಸಿದ್ದು, ಸರ್ವಬಾಧಾ ಪರಿಹಾರವಾಗಿ ಬಿಟ್ಟಿದ್ದನ್ನು ತಿಳಿಸಿದೆ.
ಬ್ರಹ್ಮಸಮುದ್ರದ ವೀರನಾರಾಯಣ ದೇವಾಲಯದ ಶಾಸನವೊಂದು (ಕ.158) ಕ್ರಿ.ಶ.1240ರಲ್ಲಿ ಅನಾದಿ ಅಗ್ರಹಾರವಾದ ಬ್ರಹ್ಮಸಮುದ್ರದ ಮಹಾಜನಂಗಳು ತಮ್ಮೊಳೇಕಸ್ಥರಾಗಿ ಪ್ರಭುಮಂಟಪದಲ್ಲಿ ಕುಳಿತಿದ್ದಾಗ ಅವರಿಗೆ ದಾಮೋಜನು ಪಾದಪೂಜೆ ಮಾಡಿದ್ದನ್ನು ತಿಳಿಸಿದೆ. ಮಹಾಜನರು ದಾಮೋಜನ ಕಂಬ 100 ಭೂಮಿಯನ್ನು ಸರ್ವಬಾಧೆ ಪರಿಹಾರವಾಗಿ ಮಾಡಿಕೊಟ್ಟಿದ್ದನ್ನು ದಾಖಲಿಸಿದೆ; ಇದೇ ದೇವಾಲಯದ ಮತ್ತೊಂದು ಶಾಸನವು (ಕ.161) ನಾರಣದೇವನಿಗೆ 200 ಕಂಬ ಗದ್ದೆ ಬೆದ್ದಲನ್ನು ಕಾರುಣ್ಯದಿಂದ ಕೊಟ್ಟದ್ದನ್ನು ತಿಳಿಸಿದೆ. ಹೀಗೆ ತಮ್ಮ ಪರಿಸರದ ಜನರ ಕಷ್ಟನಷ್ಟಗಳಲ್ಲಿ ಭಾಗಿಯಾಗಿ ಮಹಾಜನರು ಊರಿನ ಜನರ ಆದರಕ್ಕೆ ಪಾತ್ರರಾಗಿದ್ದರು.
ತರೀಕೆರೆ ತಾಲೂಕಿನ ಬಗ್ಗವಳ್ಳಿಯ ಶಾಸನವೊಂದು (ತ.70) ಶ್ರೀಮದನಾದಿಯಗ್ರಹಾರ ಲಕ್ಷ್ಮಿನರಸಿಂಹಪುರವಾದ ಬಗ್ರ್ಗವಳ್ಳಿ ಮಹಾಜನರು ಮಾಡಿದ್ದ ‘ಗ್ರಾಮಸಮಯ’ದ ಬಗೆಗೆ ತಿಳಿಸಿದೆ. ಇದರಂತೆ, ಅವರು ನಿರ್ಧರಿಸಿದ್ದ ವಿವರವೆಂದರೆ- ಪ್ರಥಮ ನಿವೇಸನಕ್ಕೆ 11 ಕೆಯ್, ದ್ವಿತೀಯ ನಿವೇಸನಕ್ಕೆ 10 ಕೆಯ್, ತೋಂಟವ್ರಿತ್ತಿಗೆ ಎಂಟು ಕಂಬ, ಕಳನು ವ್ರಿತ್ತಿಗೆ 12 ಕೆಯ್ ಅಗಲ, ನಾಲ್ವತ್ತು ಕೆಯ್ ಅಗಲ ಈ ಮರಿಯಾದೆಯಲ್ಲಿ ಮಾಡಿದ ದ್ರುವ ಉಂಡಿಗೆ 11 ಗ್ರಾಮದ ಒಟ್ಟು 104 ವ್ರಿತ್ತಿಯಲ್ಲಿ 66 ವ್ರಿತ್ತಿ, 96 ಪ್ರಥಮ ಸ್ಥಳದಲ್ಲಿ ಶ್ರೀ ನರಸಿಂಹದೇವರದು, ಚೆನ್ನಕೇಶವದೇವರ ಶ್ರೀಕಾರ್ಯಕ್ಕೆ 4 ವ್ರಿತ್ತಿ, ವೇದಖಂಡಿಕಕ್ಕೆ 2 ವ್ರಿತ್ತಿ, ಸತ್ತಕ್ಕೆ 1 ವ್ರಿತ್ತಿ ಪಂಚಿಕೇಸ್ವರದೇವರಿಗೆ 1 ವ್ರಿತ್ತಿ ಎಂದು ಹಂಚಿದ್ದಾರೆ. ಇದಲ್ಲದೇ, ಪಂಚಿಕೇಸ್ವರದೇವರ ಧರ್ಮಕಾರ್ಯದ ಮೊದಲ ಹೊನ್ನು ಗದ್ಯಾಣ 40ಕ್ಕೆ ಆ ಬಡ್ಡಿ ಹೊನ್ನಿನಲ್ಲಿ ಪ್ರತಿ ವರ್ಷ 2 ಹಣವನ್ನು ತೆಗೆದುಕೊಂಡು ಧರ್ಮವನ್ನು ನಡೆಸಬೇಕೆಂದು ತಿಳಿಸಲಾಗಿದೆ. ಹೀಗೆ ಅಗ್ರಹಾರದ ಮಹಾಜನರೇ, ಆ ಗ್ರಾಮಗಳ ದೇವಾಲಯಗಳ ಚಟುವಟಿಕೆಗಳ ಹೊಣೆಹೊತ್ತು ನಿರ್ವಹಿಸಿದ್ದನ್ನು ಈ ಶಾಸನ ತಿಳಿಸುತ್ತಿದೆ. ಹೀಗೆ ಹೊಯ್ಸಳರ ಕಾಲದಲ್ಲಿ ಅಗ್ರಹಾರಗಳ ವ್ಯವಸ್ಥೆ ಸುಗಮವಾಗಿ ಸಾಗಿದ್ದನ್ನು ಕಾಣುತ್ತೇವೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ವಿಜಯನಗರದ ಅರಸರ ಕಾಲದ ಅಗ್ರಹಾರಗಳ ಬಗೆಗೆ ಗಮನಿಸಿದರೆ, ಶೃಂಗೇರಿ ಮಠದ ತಾಮ್ರ ಶಾಸನವೊಂದು (ಶೃ.32) ಕ್ರಿ.ಶ.1389ರಲ್ಲಿ ವಿಜಯನಗರದ ದೊರೆ ವೀರಹರಿಹರರಾಯನು ವಿದ್ಯಾರಣ್ಯ ಶ್ರೀ ಪಾದಂಗಳವರು ಪರಿಪೂರ್ಣರಾದಾಗ, ಸಿಂಗೇರಿಯ ಗ್ರಾಮಾಶ್ರಿತ ಮಹಾಜನಗಳಿಗೆ, ಕಿಕ್ಕುಂದ ನಾಡು ಮತ್ತು ಹಗಡೂರು ಗ್ರಾಮಗಳು ಸೇರಿದಂತೆ 500 ವರಹ ಗದ್ಯಾಣದ ಹೊನ್ನಿನ ಸ್ಥಲವನ್ನು ನೂರು ವೃತ್ತಿಗಳಾಗಿ ಮಾಡಿ, ‘ವಿದ್ಯಾರಣ್ಯಪುರ’ವೆಂದು ಹೆಸರಿಸಿ ಹಂಪೆಯ ಶ್ರೀ ವಿರೂಪಾಕ್ಷ ದೇವರ ಸನ್ನಿಧಿಯಲ್ಲಿ ದಾನ ಬಿಟ್ಟದ್ದನ್ನು ತಿಳಿಸಿದೆ. ಈ ನೂರು ವೃತ್ತಿಗಳಲ್ಲಿ ಸಿಂಗೇರಿಯ ಶ್ರೀ ವಿದ್ಯಾಶಂಕದೇವರಿಗೆ, ಭಾರತೀ ರಾಮನಾಥ ದೇವರಿಗೆ, ವಿದ್ಯಾವಿಶ್ವೇಶ್ವರದೇವರಿಗೆ ಮತ್ತು ಶ್ರೀ ಜನಾರ್ಧನದೇವರಿಗೆ ತಲಾ 1 ವೃತ್ತಿಯನ್ನು ಬಿಟ್ಟಿದ್ದು, ದೇವಸ್ಥಾನಗಳಿಗೆ 4 ವೃತ್ತಿ ಎಂದು ತಿಳಿಸಿದೆ. ಇದರಿಂದ ಅಗ್ರಹಾರದ ವೃತ್ತಿಗಳಲ್ಲಿ ದೇವದೇಯ, ಬ್ರಹ್ಮದೇಯ ಎರಡರ ಭಾಗವು ಇರುತಿತ್ತೆಂದು ತಿಳಿಯುತ್ತದೆ.
ಶೃಂಗೇರಿ ಮಠದ ತಾಮ್ರ ಶಾಸನವೊಂದು (ಶೃ.33) ಕ್ರಿ.ಶ. 1393ರಲ್ಲಿ ವಿಜಯನಗರದ ರಾಜ ಇಮ್ಮಡಿ ಹರಿಹರ ರಾಯನ ದಾನದ ಮಹತ್ವವನ್ನು ತಿಳಿಸಿದ್ದು, ಇವನು ಆರಂಗ ರಾಜ್ಯದ ಕಾರಕಳ ಸೀಮೆಯಲ್ಲಿರುವ ಭಾನುವಳ್ಳಿ ಗ್ರಾಮವನ್ನು ಯಜುರ್ವೇದದ ಆ ಪಸ್ತಂಭ ಸೂತ್ರಕ್ಕೆ ಸೇರಿದ ಕೌಶಿಕಗೋತ್ರದ ವೇದಾಂತನಿಷ್ಠರಾದ ಮಾಧವೇಂದ್ರರಿಗೆ ದಾನ ನೀಡಿದ್ದನ್ನು ತಿಳಿಸಿದೆ. ಇವರು ಭಾನುವಳ್ಳಿ ಗ್ರಾಮವನ್ನು ನಾನಾವೃತ್ತಿಗಳಾಗಿ ಮಾಡಿ ವೇದ ಪಾರಂಗತರಾದ ಬ್ರಾಹ್ಮಣರಿಗೆ ಹಂಚಿದ್ದಾರೆ. ಈ ಅಗ್ರಹಾರವು ಇಪ್ಪತ್ತು ವೃತ್ತಿಗಳ ಅಗ್ರಹಾರವೆಂದು ಪ್ರಸಿದ್ಧವಾಗಿತ್ತೆಂದು ತಿಳಿಸಿದೆ.
ಇದರಂತೆ ಬೊಮ್ಮಲಾಪುರದ ಶಿಲಾಶಾಸನವು (ಕೊಪ್ಪ.18) 2ನೇ ಹರಿಹರರಾಯನ ಕಾಲದಲ್ಲಿ ವಿಠ್ಠಣ ಒಡೆಯರು ಅರಗದ ರಾಜ್ಯವನ್ನು ಆಳುತ್ತಿದ್ದಾಗ, ತಮಗೆ ಸೇರಿದ ಮೆಣಸೂರ ಭಾಗವನ್ನು ಅಗ್ರಹಾರವಾಗಿಸಿ ‘ಬೊಮ್ಮಂಣ್ನಪುರ’ವೆಂದು ಹೆಸರಿಸಿ ದಾನಬಿಟ್ಟರೆಂದು ದಾಖಲಿಸಿದೆ. ಈ ಅಗ್ರಹಾರದ 54 ವೃತ್ತಿಗಳಲ್ಲಿ 4 ವೃತ್ತಿಗಳನ್ನು ದೇವಾಲಯಗಳಿಗೆ ಬಿಡಲಾಗಿದೆ. ಹಾಲಮತ್ತೂರಿನ ತಾಮ್ರ ಶಾಸನವು (ಕೊಪ್ಪ.38) ಕ್ರಿ.ಶ. 1404ರಲ್ಲಿ ಇಮ್ಮಡಿ ಬುಕ್ಕ ರಾಯನು ಕಾರಕಳ ಸೀಮೆಯ ಬೆಲ್ಲಾರ ಸ್ಥಳದಲ್ಲಿನ ತುಂಗಾ ನದಿ ತಟದಲ್ಲಿರುವ ಹಾಲಮತ್ತೂರು ಗ್ರಾಮವನ್ನು ‘ಷಕರೀಪುರ’ ವೆಂದು ಹೆಸರಿಸಿ, 52 ವೃತ್ತಿಗಳ ಅಗ್ರಹಾರವನ್ನಾಗಿ ಮಾಡಿ ನಾನಾಗೋತ್ರದ ನಾನಾಶಾಖೆಯ ವೈದಿಕ ಬ್ರಾಹ್ಮಣರಿಗೆ ದಾನ ನೀಡಿದ್ದನ್ನು ದಾಖಲಿಸಿದೆ. ಈ ಅಗ್ರಹಾರದ ದಾನದಲ್ಲೂ 4 ವೃತ್ತಿಗಳನ್ನು ದೇವಕಾರ್ಯಕ್ಕೆಂದು ಬಿಡಲಾಗಿದೆ. ಇದರಿಂದ ಅಗ್ರಹಾರ ರಚನೆಯಾದಾಗ, ಅಲ್ಲಿದ್ದ ದೇವಾಲಯಗಳಿಗೂ, ಬ್ರಾಹ್ಮಣರಿಗೆ ನೀಡಿದ ವೃತ್ತಿಗಳಲ್ಲಿ ಪಾಲಿರುತ್ತಿತ್ತೆಂದು ತಿಳಿಯು ತ್ತದೆ.
ಕಡೂರು ತಾಲೂಕಿನ ಮಚ್ಚೇರಿ ಗ್ರಾಮದ ತಾಮ್ರ ಶಾಸನವು (ಕ.175) ಕ್ರಿ.ಶ. 1409ರಲ್ಲಿ ಇಮ್ಮಡಿ ದೇವರಾಯನು ಸೂರ್ಯಗ್ರಹಣದಂದು ತುಲಾಭಾರ, ಬ್ರಹ್ಮಾಂಡ ಮಹಾದಾನಗಳ ಅಂಗವಾಗಿ ಬಾಸೂರು ಮತ್ತು ಚಿಕ್ಕ ಬಾಸೂರು ಗ್ರಾಮಗಳನ್ನು ಸೇರಿಸಿ. ‘ಅಭಿನವ ಪ್ರತಾಪ ದೇವರಾಯಪುರ’ವೆಂಬ 53 ವೃತ್ತಿಗಳುಳ್ಳ, 330 ವರಾಹ ಗದ್ಯಾಣ ಆದಾಯವುಳ್ಳ ‘ಅಗ್ರಹಾರ’ವನ್ನು ದಾನ ಮಾಡಿದ್ದನ್ನು ತಿಳಿಸಿದೆ. ಇದನ್ನು ದೇವರಾಯನು ಪಂಪಾಕ್ಷೇತ್ರದ ವಿರೂಪಾಕ್ಷ ದೇವರ ಸನ್ನಿಧಿಯಲ್ಲಿ ‘ಸರ್ವನಮಸ್ಯ ಅಗ್ರಹಾರ’ವನ್ನಾಗಿಸಿ ದಾನ ನೀಡಿದ್ದನ್ನು ತಿಳಿಸಿದೆ. ಕ್ರಿ.ಶ.1410ರ ಶಾಸನವು (ಶೃ.79) 2ನೇ ದೇವರಾಯನು ವೇದಾಂತಾಚಾರ್ಯನೂ, ವಿಷ್ಣುಪೂಜಾ ಪರಾಯಣನೂ, ಆಪಸ್ತಂಭ ಸೂತ್ರದ ಶ್ರೀವತ್ಸ ಗೋತ್ರದ ಮಾಯಣಾಚಾರ್ಯನಿಗೆ ಆರಂಗವೇಟೆಯಲ್ಲಿನ ವೋಟಗಾರು ಗ್ರಾಮವನ್ನು ‘ದೇವರಾಯನಪುರ’ವೆಂದು ಹೆಸರಿಟ್ಟು ಅಗ್ರಹಾರವಾಗಿ ಮಾಡಿ ದಾನ ನೀಡಿದ್ದನ್ನು ಕೊಡತಲೆಯೆ ತಾಮ್ರ ಶಾಸನ ತಿಳಿಸಿದೆ.
ಕ್ರಿ.ಶ. 1432ರಲ್ಲಿ ಇಮ್ಮಡಿ ದೇವರಾಯನು ಹೊಂನಾಪುರ ರಾಜ್ಯದ ‘ಮಂಜುಗುಣಿ’ ಗ್ರಾಮವನ್ನು ಶ್ರೀರಾಮಚಂದ್ರ ದೇವರ ನೈವೇದ್ಯಕ್ಕೆಂದು ಆನಂದವಾಲಾ ಪರಿಷತ್ತಿಗೆ ಸೇರಿದ ಶ್ರೀ ಪುರುಷೋತ್ತಮಾರಣ್ಯ ಯತಿಗಳಿಗೆ ದಾನ ನೀಡಿದ್ದು, ಇದು ‘ದೇವ ಬೋಗ್ಯ’ವೆನ್ನಿಸಿದರೂ, ಈ ಪ್ರದೇಶದಲ್ಲಿ ಯತಿಗಳೂ, ಅವರ ವೇದಾಭ್ಯಾಸಿ ಶಿಷ್ಯರೂ ನೆಲೆಸಿದ್ದ ಅಗ್ರಹಾರವೇ ಆಗಿತ್ತು. ಈ ಅಗ್ರಹಾರಕ್ಕೆ ಹೊಸ ಹೆಸರನ್ನು ಸೂಚಿಸಿಲ್ಲವಾದರೂ ಶಾಸನಾಂತ್ಯದಲ್ಲಿ ‘ಸೀಮಾ ನೋಸ್ಯ ಅಗ್ರಹಾರಸ್ಯ ಲಿಖ್ಯಂತೇ ದೇಶಭಾಷಾಯ’ ಎಂದಿದ್ದು ಇದು ಅಗ್ರಹಾರವೇ ಎಂದು ಸ್ಪಷ್ಟಪಡಿಸಿದೆ (ಶೃ.34).
ಶೃಂಗೇರಿಯ ಹರಾವರಿ ಗ್ರಾಮದ ಶಾಸನವು (ಶೃ.48) ಕ್ರಯದಾನದ ಶ್ರೋತ್ರುಗುತ್ತಿಗೆಯ ಪತ್ರ ಶಾಸನವಾಗಿದ್ದು, ವಿಶೇಷವಾಗಿ ಗಮನ ಸೆಳೆಯುತ್ತಿದೆ. ಕ್ರಿ.ಶ. 1518ರ ಈ ಶಾಸನವು ಬ್ರಾಹ್ಮಣರು ಪಡೆದಿದ್ದ ವೃತ್ತಿ ಭೂಮಿಯನ್ನು ಮಲ್ಲಣ್ಣನವರಿಗೆ ಶ್ರೋತ್ರು ಗುತ್ತಿಗೆಯಾಗಿ ಕೊಟ್ಟಿದ್ದನ್ನು ತಿಳಿಸುತ್ತಿದ್ದು, ಅಗ್ರಹಾರದ ಬ್ರಾಹ್ಮಣರಿಗೆ ಸಂಕಟ ಒದಗಿದಾಗ ತಮ್ಮ ಪಾಲಿನ ಭೂಮಿಯನ್ನು ಗುತ್ತಿಗೆಗೆ ಕೊಡುತ್ತಿದ್ದುದನ್ನು, ಆ ಭೂಮಿಯ ಸಿದ್ಧಾಯವನ್ನು ಗುತ್ತಿಗೆದಾರನೇ ನೀಡುತ್ತಿದ್ದು ದನ್ನು ತಿಳಿಸುತ್ತದೆ. ಇಂಥ ಕ್ರಯಪತ್ರ ಅಥವಾ ಗುತ್ತಿಗೆ ಪತ್ರ ಸಿದ್ಧವಾದಾಗ ಆ ಪತ್ರಕ್ಕೆ ಅಗ್ರಹಾರದ ಮಹಾಜನರ ಒಪ್ಪವೂ ಇರುತ್ತಿತ್ತೆಂದು ತಿಳಿದುಬರುತ್ತದೆ (ಶೃ.49).
ಅಗ್ರಹಾರವೊಂದು ಅಪರೂಪಕ್ಕೆ ‘ಗ್ರಾಮದಾನ’ವಾಗಿ ಪರಿಣಮಿಸಿದ ಸಂಗತಿಯು ಕೆಳಬೆಳ್ಳೂರು ಶಾಸನದಿಂದ (ಶೃ.52) ತಿಳಿಯುತ್ತಿದೆ. ಕ್ರಿ.ಶ. 1524ರ ಈ ಶಾಸನವು ಯತಿಗಳಾದ ಶ್ರೀ ರಾಮಚಂದ್ರಭಾರತಿ ಒಡೆಯರು ಕೆಳಬೆಳ್ಳೂರಿನ ಮೂಲಿಗಳಾದ ಕಜ್ಜರಸ, ಸಂಜಯ, ಬೊಂಮ್ಮೆಯವರಿಂದ ಶ್ರೀ ಮಠಕ್ಕೆ ಸಲ್ಲಬೇಕಾದ ಸಿದ್ಧಾಯವು ಸಲ್ಲದೇ ಉಳಿದುಬಂದು ನಿಮಿತ್ತರಾಗಿ, ಆ ಗ್ರಾಮವನ್ನು, ಕಾರಕಳದ ಭಾರದ್ವಾಜಗೋತ್ರ, ಋಕ್‍ಶಾಖೆಯ ಸೂರಪ್ಪ ಸೇನಬೋವರಿಗೆ ವಹಿಸಿಕೊಡುತ್ತಾರೆ. ಆ ಗ್ರಾಮದ ಮೂಲಿ ಗಳು ಭೂಮಿಯ ಕೆಲಭಾಗವನ್ನು ಅಡವಿಟ್ಟು ಹಣವನ್ನು ಪಡೆದಿದ್ದು, ಆ ಹಣವನ್ನೆಲ್ಲ ಸೂರಪ್ಪನವರ ಕೈಯಿಂದ ಕೊಡಿಸಿ, ಮೂಲಿಗರಿಗೂ ಸೂರಪ್ಪನವರಿಂದ ಉಡುಗೆರೆಯನ್ನು ಕೊಡಿಸಿ ಮೂಲಿಗರಿಂದಲೇ ಸೂರಪ್ಪನವರಿಗೆ ಅಗ್ರಹಾರವನ್ನು ದಾನವಾಗಿ ಧಾರೆ ಎರೆದು ಕೊಡಿಸುತ್ತಾರೆ. ಈ ದಾನದಲ್ಲೂ ‘ದೇವಸ್ವದ’ ಭಾಗವನ್ನು ಸೂಚಿಸಿದೆ. ಈ ಶಾಸನಾಂತ್ಯದಲ್ಲಿ ರಾಮಚಂದ್ರ ಭಾರತಿಯತಿಗಳ ಒಪ್ಪ, ಶ್ರೀ ವಿದ್ಯಾಶಂಕರ ಎಂಬ ಒಪ್ಪವಿದೆ. ಈ ಶಾಸನವು ಹಿಂದೆ ನಶಿಸುತ್ತಿದ್ದ ಅಗ್ರಹಾರ ಗಳನ್ನು ಹೀಗೆ ಸರಿಪಡಿಸಿ ಮತ್ತೆ ಅಗ್ರಹಾರ ನಿರ್ವಹಣೆ ಮಾಡುತ್ತಿದ್ದರೆಂದು ತಿಳಿಸುವ ಶಾಸನವಾಗಿದೆ.
ವಿಜಯನಗರೋತ್ತರ ಕಾಲದ ಶಾಸನಗಳನ್ನು ಗಮನಿಸಿದರೆ ಶೃಂಗೇರಿಯ ಶಾಸನವೊಂದು (ಶೃ.2) ಕ್ರಿ.ಶ. 1903ರಲ್ಲಿ ಶೃಂಗೇರಿಯ ಶ್ರೀ ನರಸಿಂಹ ಭಾರತಿ ಸ್ವಾಮಿಗಳು, ಅವರ ಗುರುಗಳು ಪೂಜಿಸುತ್ತಿದ್ದ ಶ್ರೀ ನೃಸಿಂಹೇಶ್ವರದೇವರ ಪ್ರೀತ್ಯರ್ಥವಾಗಿ ಶ್ರೀ ನರಸಿಂಹಪುರವೆಂಬ ಹೆಸರಿನ ಅಗ್ರಹಾರವನ್ನು, ಪಶ್ಚಿಮವಾಹಿನಿಯಾದ ತುಂಗಭದ್ರಾ ತೀರದ ವಸಿಷ್ಠಾಶ್ರಮದಲ್ಲಿ ನಿರ್ಮಿಸಿ, ನಾನಾಗೋತ್ರದ, ನಾನಾಸೂತ್ರದ ಅಶೇಷ ವಿದ್ವನ್ಮಹಾಜನರಿಗೆ ಸರ್ವಸಮಸ್ಯವಾಗಿ ಕೊಟ್ಟ ‘ಧರ್ಮಶಾಸನ’ವೆಂದು ಉಲ್ಲೇಖಿಸಿದೆ. ಈ ಶಾಸನದಲ್ಲಿ ಸು. 20 ಜನರಿಗೆ ಬಿಟ್ಟು ದಾನವಿದ್ದು ಒಟ್ಟು ಭತ್ತ ಖಂಡುಗ 20, ಅಡಕೆಮರ 5500ನ್ನು ಹಂಚಿಕೊಡಲಾಗಿದೆ. ಈ ದಾನದ ವಿವರವೂ ಆ ಅಗ್ರಹಾರದಲ್ಲಿ ನೆಲೆಸಿದ ವಿಪ್ರರ ಆರ್ಥಿಕ ಭದ್ರತೆಯನ್ನು ಸೂಚಿಸುತ್ತಿದೆ.
ಶೃಂಗೇರಿಯ ಮಠದ ತಾಮ್ರ ಶಾಸನವೊಂದು (ಶೃ.36) ಕೆಳದಿಯ ವೀರಭದ್ರ ವೆಂಕಣ್ಣನು ಕಟ್ಟಿಸಿದ್ದ ಮಠವನ್ನು ಶ್ರೀ ಸಚ್ಚಿದಾನಂದ ಭಾರತಿ ಸ್ವಾಮಿಗಳಿಗೆ ಒಪ್ಪಿಸಿ, ಮಠದ ದೇವಪೂಜೆ, ಅಮೃತಪಡಿ ನಂದಾದೀವಿಗೆಗೆಂದು ಚೌಡಿಸೆಟ್ಟಿ ಕೊಪ್ಪ ಗ್ರಾಮವನ್ನು ಬಿಟ್ಟದ್ದನ್ನು ತಿಳಿಸಿದೆ. ಈ ಶಾಸನವು ನಿತ್ಯಧರ್ಮ ಛತ್ರ ನಡೆಸಲು ವಿಶ್ವನಾಥಪುರ ಅಗ್ರಹಾರದ ವೃತ್ತಿಯ ಭಾಗವಾದ ಕುಂದನೂರಿನ ಕೆಲವು ವೃತ್ತಿಗಳನ್ನು ಬಿಟ್ಟಿದನ್ನು ತಿಳಿಸಿದೆ. ಭಲ್ಲಪ ಒಡೆಯರಿಗೆ ನಾರಸಿಂಹಭಟ್ಟರಿಗೆ ಕೊಟ್ಟ ವೃತಿಗಳನ್ನು ಮಾರಬಾರದೆಂದು ವಿಧಿಸಿದೆ. ನರಸಿಂಹ ದೀಕ್ಷಿತರಿಗೆ ಕೊಟ್ಟಿದ್ದ ವೃತ್ತಿಯು, ವೃತ್ತಿವಂತರು ನಷ್ಟವಾದರಿಂದ ಅದನ್ನು ಧರ್ಮಛತ್ರಕ್ಕೆ ಬಿಟ್ಟದ್ದನ್ನು ತಿಳಿಸಿದೆ. ಇದರಿಂದ ಅಗ್ರಹಾರದ ಮಹಾಜನರು ತಮ್ಮ ಪಾಲಿನ ವೃತ್ತಿಯನ್ನು ಅನುಭವಿಸಬಹುದು ಆದರೆ ಮಾರುವಂತಿರಲಿಲ್ಲ. ಅವರ ಸಂತಾನವು ಅಳಿದರೆ ಅದು ಮತ್ತೆ ದಾನಿಗೆ ಸೇರುತ್ತಿತ್ತೆಂದು ತಿಳಿಯುತ್ತದೆ.
ಶೃಂಗೇರಿ ಮಠದ ಮತ್ತೊಂದು ತಾಮ್ರ ಶಾಸನವು (ಶೃ.38) ಕ್ರಿ.ಶ. 1729ರದ್ದಾಗಿದ್ದು ಕೆಳದಿಯ ಸೋಮ ಶೇಖರ ನಾಯಕರು ಭಾರಧ್ವಾಜ ಗೋತ್ರದ ರುಕ್‍ಶಾಖೆಯ ಚೆಂನಣ್ಣನಿಗೆ ಕೊಟ್ಟ ಭೂದಾನ ಧರ್ಮಶಾಸನವಾಗಿದೆ. ಈ ಶಾಸನವು ತೀರ್ಥರಾಜಪುರದ ನದೀ ಆಚೆಯ ದಡದಲ್ಲಿನ ಮುತ್ತೂರು ಸೀಮೆಗೆ ಸೇರಿದ ಹರಳಿಪಾಲ ಮಲೆಯಾಳಮಠದ ಗ್ರಾಮದಲ್ಲಿ ತನ್ನ ತಂದೆ ವೆಂಕಟಪ್ಪಯ್ಯನು ದೇವಸ್ಥಾನ ಕಟ್ಟಿಸಿದ್ದು ಅಲ್ಲಿ ಅವಿಮುಕ್ತೇಶ್ವರ ದೇವರು, ಬಿಂದು ಮಾಧವದೇವರ ದೇವತಾವೆಚ್ಚಕ್ಕೆಂದು ದೇವಸ್ಥಾನದ ಬಳಿಯಲ್ಲೇ ಇದ್ದ ಚಂದ್ರಶೇಖರಪುರದ ಅಗ್ರಹಾರವನ್ನು ಬರೆಸಿಕೊಟ್ಟದ್ದನ್ನು ತಿಳಿಸಿದೆ. ಇದು ದೀರ್ಘ ಶಾಸನವಾಗಿದ್ದು ಈ ಅಗ್ರಹಾರದ ಒಟ್ಟು ಆದಾಯ ಗದ್ಯಾಣ 195, ವರಾಹಗಳು ಆರು ಹಣವನ್ನು ಕೊಟ್ಟು ಸೀಮಗೆ ವಾಮನ ಮುದ್ರೆಕಲ್ಲನ್ನು ನೆಡಿಸಿದ್ದನ್ನು ತಿಳಿಸಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಸು. 19ನೇ ಶತಮಾನ ದಿಂದ ಆರಂಭವಾಗಿರುವ ಅಗ್ರಹಾರ ದಾನ ಪದ್ಧತಿಯು ಸು. 18ನೇ ಶತಮಾನದವರೆಗೆ ನಡೆದುಬಂದಿರುವುದು ಈ ಜಿಲ್ಲೆಯ ಶಾಸನಗಳಿಂದ ತಿಳಿಯುತ್ತದೆ. ಅಗ್ರಹಾರಗಳನ್ನು ಶಾಸನಗಳು- ‘ಶ್ರೀ ಮದನಾದಿಅಗ್ರಹಾರ’, ‘ಮಹಾಅಗ್ರಹಾರ’, ‘ಪಿರಿಯಗ್ರಹಾರ’ವೆಂದೂ ಕರೆದಿವೆ. ಅಗ್ರಹಾರಗಳಾಗಿ ಮಾಡುವಲ್ಲಿ, ರಾಜರ ಹೆಸರನ್ನು ಸೇರಿಸಿ- ‘ವಿಷ್ಣುವರ್ಧನ ಕೆಶವಾಪುರ’ (ಚಿ.ಮ.108); ‘ಪ್ರತಾಪದೇವರಾಯಪುರ (ಕ.175)ಗಳೆಂಬ ಉಲ್ಲೇಖಗಳಿರುವಂತೆ, ‘ಸರಸ್ವತಿಪುರ’, ‘ವರಲಕ್ಷ್ಮಿನಾರಾಯಣಪುರ’ (ಕ.106), ‘ಲಕ್ಷ್ಮಿನರಸಿಂಹಪುರ’ (ತ.66), ‘ಹರಿಹರಪುರ’ (ಚಿ.ಮ.153)ಗಳೆಂದು ಹೆಸರಿಸಲಾಗಿದೆ. ಶೃಂಗೇರಿಗೆ ಸಂಬಂಧಿಸಿದಂತೆ ರೂಪಿಸಿರುವ ಅಗ್ರಹಾರಗಳು, ಯತಿಗಳ ಹೆಸರಿನೊಂದಿಗೆ ಉಕ್ತವಾಗಿದ್ದು, ‘ಶ್ರೀ ವಿದ್ಯಾರಣ್ಯಪುರ’ (ಶೃ.32), ‘ಶ್ರೀ ನರಸಿಂಹಪುರ’ (ಶೃ.2), ‘ಶ್ರೀ ಸ್ವಯಂಪ್ರಕಾಶಪುರ’ (ಚಿ.ಮ.81) ಮುಂತಾದವನ್ನು ಗಮನಿಸಬಹುದು.
ಹೀಗೆ ಒಂದು ಜಿಲ್ಲೆಯ ಅಗ್ರಹಾರಗಳ ವಿಸ್ತøತ ಅಧ್ಯಯನ ದಿಂದ ಅಂದಿನ ಕಾಲದ ಸಾಮಾಜಿಕ ಇತಿಹಾಸದ ಮಗ್ಗ ಲೊಂದನ್ನು ಗುರುತಿಸಲು ಸಾಧ್ಯವಾಗುತ್ತದೆ. ಈ ಕಾರಣದಿಂದ ಕರ್ನಾಟಕದ ಸಾಮಾಜಿಕ ಇತಿಹಾಸ, ಧಾರ್ಮಿಕ ಇತಿಹಾಸವನ್ನ ರಿಯಲು ಅಗ್ರಹಾರಗಳ ತಲಸ್ಪರ್ಷಿ ಅಧ್ಯಯನ ವನ್ನು ನಡೆಯ ಬೇಕಾಗಿದೆ.
[ವಿ.ಸೂ. :- ಈ ಪ್ರಬಂಧದಲ್ಲಿ ಬಳಸಿರುವ ಶಾಸನಗಳನ್ನು ಪರಿಷ್ಕøತ ಎಪಿಗ್ರಾಫಿಯ ಕರ್ನಾಟಿಕ ಸಂಪುಟ 11 ಮತ್ತು 12ರಿಂದ ತೆಗೆದು ಕೊಳ್ಳಲಾಗಿದೆ.]

 # 1676, 5ನೇ `ಎ’ ಕ್ರಾಸ್, 10ನೇ ಮುಖ್ಯರಸ್ತೆ, ಬನಶಂಕರಿ 1ನೇ ಹಂತ, ಬೆಂಗಳೂರು-560050

Tuesday, July 1, 2014

ಗ್ರೀನ್‌ವಿಚ್‌ ಟೀ ಪಾರ್ಟಿ

ಅಮೇರಿಕದ   ಹಳ್ಳಿಯಲ್ಲಿ  ವಿದೇಶಿ   ಟೀ     ದಹನ
ಎಚ್.ಶೇಷಗಿರಿರಾವ್‌
 ಅಮೇರಿಕಾದ ಸ್ವಾತಂತ್ರ್ಯ ಹೋರಾಟದ ತೊಟ್ಟಿಲು  ಮೆಸುಚೆಟ್ಸ  ರಾಜ್ಯ. ಚಳುವಳಿಗೆ ನಾಂದಿ ಹಾಡಿದ  ನಗರ ಬಾಸ್ಟನ್‌.  ಅಂದಿನ ಅಮೇರಿಕನ್‌ರು ಬ್ರಿಟಿಷ್‌ ಸಾಮ್ರಾಟರ ವಿಧೇಯ ಪ್ರಜೆಗಳಾಗಿದ್ದರು.  ವಸಾಹತಿನ ಪ್ರಜೆಗಳ   ಒಂದೇ ಬೇಡಿಕೆ ಸಂಸತ್ತಿನಲ್ಲಿ ತಮಗೂ ಪ್ರಾತಿನಿಧ್ಯ. ಅದು ಆಳರಸರ ಕಿವಿಗೆ ಬೀಳಲೇ ಇಲ್ಲ. ಆಗ ಮೊದಲಾದುದು ಪ್ರಾತಿನಿಧ್ಯ ವಿಲ್ಲದೆ ತೆರಿಗೆ ಕೊಡೆವು ಎಂಬ ಪ್ರತಿಭಟನೆ. 
ಯಾವಾಗ ಜನರ ಮಾತನ್ನು ತಿರಸ್ಕರಿಸಿ ಟೀಯನ್ನು ಹಡಗಿನಲ್ಲಿ ಅಮೇರಿಕಾಕ್ಕೆ ತಂದು ಅದರ ಬಳಕೆಗೆ ತೆರಿಗೆ ಹೇರಿದರೋ ಆಗ ಮೊದಲಾಯಿತು ಚಳುವಳಿ. ಅಮೇರಿಕಾದ ಎಲ್ಲ ಬಂದರುಗಳಲ್ಲಿ ಟೀ ತಂದ ಹಡುಗಗಳಿಗೆ ಪ್ರವೇಶ ನಿರಾಕರಿಸಲಾಯಿತು. ಹಟ ಮಾಡಿ ಬಾಸ್ಟನ್‌ ಬಂದರಿನಲ್ಲಿತಿಂ ಗಳುಗಟ್ಟಲೆ ಲಂಗರು ಹೂಡಿದ  ಹಡಗಿನಲ್ಲಿನ ಸುಮಾರು ಒಂದು ಮಿಲಿಯನ್‌ಮೌಲ್ಯದ ಟೀಯನ್ನು ೧೭೭೩ ರಲ್ಲಿ  ದೋಣಿಯಲ್ಲಿ ಹೋದ ಚಳುವಳಿಗಾರರು ಸಮುದ್ರಕ್ಕೆ ಚೆಲ್ಲಿದರು. ಅಲ್ಲಿಂದ ಮೊದಲಾಯಿತು ಸ್ವಾತಂತ್ರ್ಯಕ್ಕಾಗಿ ಚಳುವಳಿ.ಅದಕ್ಕಾಗಿಯೇ ಫಿಲೆಡೆಲಫಿಯಾವನ್ನುಸ್ವಾತಂತ್ರ್ಯ ಹೋರಾಟದ ತೊಟ್ಟಿಲು ಎನ್ನುವರು. ಅಲ್ಲಿರುವ  ಲಿಬರ್ಟಿ ಬೆಲ್‌ ಅದಕ್ಕೆ ಸಾಕ್ಷಿ. ಆದರೆ ಈ ಚಳುವಳಿಯ ಕಿಡಿ ಅಷ್ಟಕ್ಕೆ ಆರಲಿಲ್ಲ. ಅದು ನಾಲ್ಕಾರು ನ ಕಡೆ ಬೇರೆ ಬೇರೆ ರೂಪದಲ್ಲಿ ಹೊರಬಿದ್ದಿತು.ಅದರ ಕೊನೆಯ ಮತ್ತು ಅತ್ಯಂತ ಚಿಕ್ಕ  ಪ್ರತಿಬಟನೆ ನಡೆದುದು ಗ್ರೀನ್‌ವಿಚ್‌ನಲ್ಲಿ.


ಗ್ರೀನ್‌ವಿಚ್‌ ಎಂದರೆ ಸಾಮಾನ್ಯವಾಗಿ ನಾವುತಿ ಳಿದಿರುವುದು ಅಂತರಾಷ್ಟ್ರೀಯ   ಮಟ್ಟದಲ್ಲಿ ಅನುಸರಿಸುವ ಇಂಗ್ಲೇಂಡಿನ ಗ್ರೀನ್‌ವಿಚ್‌ ಎಂಬಲ್ಲಿನ  ಸಮಯದ ಊಹಾರೇಖೆ. ಆದರೆ ಅಮೇರಿಕಾದಲ್ಲೂ ಒಂದು ಗ್ರೀನ್‌ವಿಚ್‌ ಇದೆ. ಜನರಿಗೆ ತಾಯ್ನಾಡು ತೊರೆದರೂ ಮೂಲ ಬೇರಿನ ಮೋಹ ಬಿಡದು. ಕುಟುಂಬದಲ್ಲಿ   ಅಜ್ಜನ ಹೆಸರನ್ನುಮೊಮ್ಮೊಗುವಿಗೆ ಇಡುವ  ಪದ್ದತಿಯ ಹಾಗೆ. ಇಲ್ಲಿನ ಜನ ತಾವು ಬಿಟ್ಟುಬಂದ ಪ್ರದೇಶದ  ಹೆಸರನ್ನು ವಲಸೆಬಂದ ಜಾಗಕ್ಕೂ ಇಟ್ಟರು. ಅದಕ್ಕೆ ಇಲ್ಲಿ ನ್ಯೂ ಇಂಗ್ಲೆಂಡ್‌, ಲಂಡನ್‌,,ನ್ಯೂಯಾರ್ಕ್, ಸಾಮರ್‌ಸೆಟ್‌,ಲಿಸ್ಬನ್‌,ಮಿಡಲ್‌ಸೆಕ್ಸ್‌ , ಬ್ರಿಸ್ಟಲ್‌ , ಇಂಡಿಯಾಸ್ಟ್ರೀಟ್‌, ಚೈನಾಟೌನ್‌ ಮೊದಲಾದ ಹೆಸರನ್ನು ಹಲವಡೆ ಕಾಣಬಹುದು.  ಗ್ರೀನ್‌ವಿಚ್‌ ಸಹಾ ಫಿಲೆಡೆಲ್ಫಿಯಾಕ್ಕೆ ೪೦ ಮೈಲು ದೂರದಲ್ಲಿರುವ ಆದರೆ ನ್ಯೂಜರ್ಸಿ  ರಾಜ್ಯಕ್ಕೆ  ಸೇರಿದ  ಪುಟ್ಟ ಗ್ರಾಮ..ಅಲ್ಲಿನವರಿಗೆ ತಾವೂ ಸ್ವಾತಂತ್ರ್ಯ ಹೋರಾಟದ ಭಾಗವಾಗಿದ್ದೇವೆಂಬ ಹೆಮ್ಮೆ. ಅದಕ್ಕೆ ಕಾರಣ ಅಮೇರಿಕಾದ ಬಂದರುಗಳಲ್ಲಿ ಟೀ ತರುವ ಹಡುಗುಗಳಿಗೆ ಬಹಿಷ್ಕಾರ ಹಾಕಿದಾಗ ತೀರದಲ್ಲಿರುವ ಪುಟ್ಟ ಪ್ರದೇಶಗಳಲ್ಲಿ ದೋಣಿಯಲ್ಲಿ ತಂದು ಟೀ ಇಳಿಸುವ ಹುನ್ನಾರ  ಆಂಗ್ಲರು ನಡೆಸಿದರು..ಅವರು ನಡೆಸಿದ ಈ  ಕಾರ್ಯವನ್ನು ಪ್ರತಿಭಟಿಸಿದ ಕಟ್ಟ ಕಡೆಯ ಮತ್ತುಪುಟ್ಟಗ್ರಾಮ ಗ್ರೀನ್‌ವಿಚ್‌.  ಸರಿಸುಮಾರು  ಬಾಸ್ಟನ್‌  ಘಟನೆಯ  ಒಂದು  ವರ್ಷದ ನಂತರಅಂದರೆ ೧೭೭೪ ರ ಡಿಸೆಬರ್‌ ೨೨ನೆಯ ಗುರುವಾರದಂದು ಸಂಜೆ ಗ್ರೀನ್‌ವಿಚ್‌ಹಳ್ಳಿಗರಿಗೆ ತಮ್ಮ ಊರಿಗೆ  ಡೆಲವೇರ್‌ನದಿಯ ಮುಖಾಂತರ ಸಮದ್ರದಲ್ಲಿದ್ದ ಹಡಗಿನಿಂದ ಟೀ  ಬಂಡಲ್‌ಗಳು ದೋಣಿಯಲ್ಲಿ ಬಂದ ಸುದ್ದಿ ಗೊತ್ತಾಯಿತು. ಅದನ್ನುಬ್ರಿಟಿಷ್‌ರಿಗೆ ನಿಷ್ಠನಾಗಿದ್ದ ಡೇನಿಯಲ್‌ಬೋವೆನ್‌ಮನೆಯ ಬೇಸ್‌ ಮೆಂಟ್‌ನಲ್ಲಿ ಸಂಗ್ರಹಿಸಿದ್ದರು. ನಂತರ ನಾಮಮಾತ್ರ ತೆರಿಗೆ ಹಾಕಿ ಮಾರುವ ಯೋಜನೆಇ ತ್ತು.ಇಲ್ಲಿನ ಜನ ಮುಗ್ದರು    ಶಾಂತಿಪ್ರಿಯ ಪ್ರದೇಶ ಏನೂ ಆಗದು ಎಂಬ ನಂಬಿಕೆಯಿಂದ  ಈ ಕೆಲಸ ಸಾಗಿತ್ತು. ಆದರೆ ಜನ ಜಾಗೃತರಾಗಿದ್ದರು. ಅವರು ಪ್ರತ್ಯಕ್ಷವಾಗಿ ಯಾವುದೇ ಚಳುವಳಿಯಲ್ಲಿ ಭಾಗವಹಿಸದಿದ್ದರೂ ಮಾಹಿತಿಯಂತೂ ಇತ್ತು. ಅಂದು   ರಾತ್ರಿಯ ವೇಳೆಗೆ ಸುಮಾರು ೩೦ ಜನ ಟೀ ಸಂಗ್ರಹಿಸಿದ್ದ ಮನೆಯ ಮೇಲೆ ದಾಳಿ ಮಾಡಿ ಎಲ್ಲ ಬಂಡಲ್‌ಗಳನ್ನೂ ಗ್ರಾಮದ ಮಧ್ಯದ  ವೃತ್ತಕ್ಕೆ ತಂದು ಬೆಂಕಿಹಚ್ಚಿ ಸಂಭ್ರಮಿಸಿದರು.  ಅವರಲ್ಲಿ ಕೆಲವರು ಅಮೇರಿಕಾ ಇಂಡಿಯನ್‌ರ ವೇಷಭೂಷಣ ಧರಿಸಿದ್ದರು ಎಂಬ ಮಾತೂಇದೆ.ಈ ಘಟನೆಯನ್ನು ಇಲ್ಲಿನ ಜನ ಇಂದಿಗೂ ಪ್ರತಿವರ್ಷ ಆಚರಿಸುವರು. .ಇದಕ್ಕೆ ಯಾವುದೇ ಐತಿಹಾಸಿಕದಾಖಲೆಗಳು ಇಲ್ಲ. ಇದು ಮೌಖಿಕವಾಗಿ ಹೇಳಿಕೇಳಿ ಬಂದದ್ದು ಆದರೆ ಆಚರಣೆ ಮಾತ್ರ ನಡೆದಿದೆ. ಕಾರಣ ಇಲ್ಲಿನ ಜನರ ಇತಿಹಾಸಪ್ರಜ್ಞೆ ಮತ್ತು  ಸ್ವಾತಂತ್ರ್ಯಪ್ರೇಮ. 
ಇದು ಒಂದು ರೀತಿಯಲ್ಲಿ ಭಾರತದ  ಸ್ವಾತಂತ್ರ್ಯ  ಚಳುವಳಿಯ ಉಪ್ಪಿನ ಸತ್ಯಾಗ್ರಹ  ಮತ್ತು     ವಿದೇಶಿ  ವಸ್ತ್ರಗಳ ಸುಡುವುದಕ್ಕೆ ಸ್ಪೂರ್ತಿ  ಎನ್ನಬಹುದು.  ಸ್ವಾತಂತ್ರ್ಯದ  ಹಂಬಲ ದೇಶಕಾಲ ಮೀರಿದ್ದು  ಎನ್ನುವುದು ಇದರಿಂದ ಗೊತ್ತಾಗುತ್ತದೆ. ಅಂದು ಅಮೇರಿಕಾದಲ್ಲಿ ಮಾಡಿದ್ದ ಕಾರ್ಯವನ್ನು ಇನ್ನೊಂದು ರೂಪದಲ್ಲಿ ಭಾರತದಲ್ಲೂ  ಚಳುವಳಿಯ ಸಮಯದಲ್ಲಿ ಮಾಡಿರುವೆವು. 
ಗ್ರೀನ್‌ವಿಚ್‌ ಅಮೇರಿಕಾದಲ್ಲಿರುವ ಅತ್ಯಂತ ಪುರಾತನ ವಲಸಿಗರ ಕಾಲನಿಗಳಲ್ಲಿ ಒಂದು. ಇವರ ಹೋರಾಟವನ್ನು ೧೯೦೪ ರಲ್ಲಿ ಗುರುತಿಸಿ  ಆ ಸ್ಥಳದಲ್ಲಿ ಒಂದು ಸ್ಮಾರಕ ನಿರ್ಮಿಸಲಾಗಿದೆ.ಆದರೆ ಪ್ರತಿವರ್ಷ ಸಾಂಕೇತಿಕವಾಗಿ ಟೀ ಬಂಡಲ್‌ಗಳನ್ನು ಸುಡುವ ಉತ್ಸವ ನಿರಂತರ ಸಾಗಿಬಂದಿದೆ. ಅಷ್ಟೇ ಅಲ್ಲ ಆ ಹಸರಿನಲ್ಲಿ ಮೆರಥಾನ್‌ ಓಟ ಸೇರಿದಂತೆ ಇತರೆ ಕಾರ್ಯಕ್ರಮಗಳನ್ನು  ಸ್ಥಳೀಯರು ನಡೆಸುತ್ತಾರೆ. ಇಲ್ಲಿ ಗಣನೀಯ ಅಂಶವೆಂದರೆ ಕಂಬರ್‌ಲೇಂಡ್‌ ಕೌಂಟಿಯ  ಪುಟ್ಟ ಗ್ರಾಮದ ಜನರು ನೂರಾರು ವರ್ಷಗಳಿಂದ ಯಾವುದೇ ದಾಖಲೆ ಇಲ್ಲದೇ ಇರುವ ಘಟನೆಯನ್ನು ಆಚರಿಸಿಕೊಂಡು ಬಂದಿರುವುದು.ಈಗ ಅದಕ್ಕೆ ಮಾನ್ಯತೆ ದೊರಕಿದೆ. ಇತಿಹಾಸಕಾರರು  ದಾಖಲೆಇಲ್ಲದೆ ಇರುವುದರಿಂದ ಅನುಮಾನ ವ್ಯಕ್ತಪಡಿಸಿದರೂ ಮೌಖಿಕ ಪರಂಪರೆಯೂ ಜನಪದ ಆಚರಣೆಯೂ ಇತಿಹಾಸದ ಒಂದು ಭಾಗ ಎಂಬುದನ್ನು ಮರೆಯುವ ಹಾಗಿಲ್ಲ. ಈ ದಿಶೆಯಲ್ಲಿ  ಅಪರಂಪಾರ  ಐತಿಹಾಸಿಕ ಪರಂಪರೆಯುಳ್ಳ ಭಾರತದಲ್ಲಿ ಪ್ರತಿಯೊಂದು ಸ್ಮಾರಕವನ್ನೂ  ಸರ್ಕಾವೇ ಸಂರಕ್ಷಿಸಲಿ ಮತ್ತು  ಸರಕರಿ ವೆಚ್ಚದಲ್ಲಿ  ಆಚರಿಸಲಿ  ಅದಕ್ಕೂ ನಮಗೂ ಸಂಬಂಧವಿಲ್ಲ   ಎಂಬ ಮನೋಭಾವನೆ ಬೆಳಸಿಕೊಂಡಿರವವರು ಇದನ್ನು ಗಮನಿಸ  ಬೇಕಾದದ್ದು ಅತ್ಯಗತ್ಯವಾಗಿದೆ

Wednesday, June 25, 2014

ಭಾರತೀಯ ಮಹಾಕಾವ್ಯಗಳಲ್ಲಿ ವೈಜ್ಞಾನಿಕ ಹೊಳಹು

ರಾಮಾಯಣ ಮತ್ತು ಮಹಾಭಾರತದಲ್ಲಿ ಕಂಡುಬರುವ ಕೆಲವು ವಿಜ್ಞಾನಕಲ್ಪನೆಗಳು












  ಡಾ.  ಸಿ.ಎಂ. ರಾಮಕೃಷ್ಣ..Ph.D
4 Cricket Lane, Cherry Hill
, NJ 08003-1810

Tel. No: 856-751-0486 
e-mail : ramroja@gmail.com 

(   ಡಾ.ಸಿ..ಎಂ.ರಾಮಕೃಷ್ಣ  ಬೆಂಗಳೂರಲ್ಲಿ ಹುಟ್ಟಿ ಬೆಳೆದವರು.ಇಂಡಿಯನ್‌ ಇನಸ್ಟಿಟ್ಯೂಟ್‌ ಅಫ್ ಸೈನ್ಸ್‌ನಲ್ಲಿ ಎಂಎಸ್‌ ಮುಗಿಸಿ ಭಾಭಾ ಅಣುಶಕ್ತಿ   ಕೇಂದ್ರದಲ್ಲಿ  ಕೆಲಸ ಮಾಡಿ ಉನ್ನತ ಶಿಕ್ಷಣಕ್ಕಾಗಿ ಅಮೇರಿಕಕ್ಕೆ ಬಂದವರು  ಹಲವು ದಶಕಗಳಿಂದ ಅನಿವಾಸಿ ಭಾರತಿಯರು.ಮಾತೃಭಾಷೆ ತಮಿಳು, ಪತ್ನಿಭಾಷೆ ತೆಲುಗು,ಬಾಲ್ಯದ ಭಾಷೆಯಾದ ಕನ್ನಡದಲ್ಲಿ ಆಸಕ್ತಿ.  ಈಗ ಇಲ್ಲಿಯೇ ನಿವೃತ್ತ ಜೀವನ ಸಾಗಿಸುತಿದ್ದಾರೆ. ವಿಚಾರವಾದಿಯಾದ ಇವರ ಹಲವು ಬರಹಗಳು ಪ್ರಕಟವಾಗಿವೆ. ಅನಿವಾಸಿ ಕನ್ನಡಿಗರ ಕೂಟದಲ್ಲಿ ಸಕ್ರಿಯರು. ಇವರದೊಂದು ಲೇಖನ ನಿಮ್ಮಮುಂದಿದೆ.)


 ರಾಮಾಯಣ ಮತ್ತು ಮಹಾಭಾರತಗಳೆರಡೂ ಭಾರತದೇಶದ ಇತಿಹಾಸಗಳೆಂದು ಪ್ರಸಿದ್ಧವಾಗಿವೆ. ಇಲ್ಲಿ ಇತಿಹಾಸವೆಂದರೆ ಒಂದು (ವಾಸ್ತವಿಕ) ಚರಿತ್ರೆಯೇ ಆಗಿರಬೇಕಾಗಿಲ್ಲ. ಇತಿಹಾಸ (‘ಇತಿ-ಹ-ಆಸ = ಸಂಪ್ರದಾಯದ ಪ್ರಕಾರ ಹಾಗಿತ್ತು.) ಎಂದರೆ, ಪ್ರಾಚೀನ ಪ್ರಸಂಗಗಳ ಸಾಂಪ್ರದಾಯಿಕ ಉಪಾಖ್ಯಾನಗಳು, ಎಂದು. ಆದುದರಿಂದ, ಇತಿಹಾಸದಲ್ಲಿ ಕಾಲ್ಪನಿಕ ಕಥೆಗಳು, ಪೌರಾಣಿಕ ಕಥೆಗಳು, ಪ್ರಾಚೀನದ ಸಾಮಾನ್ಯ ಘಟನೆಗಳ ಸಾಂಪ್ರದಾಯಿಕ ನಿರೂಪಣೆ, ಇತ್ಯಾದಿ ಅಡಗಿರಬಹುದು. ರಾಮಾಯಣವೂ, ಮಹಾಭಾರತವೂ ಈ ಗುಂಪಿಗೆ ಸೇರಿದ ಕೃತಿಗಳು. ರಾಮಾಯಣ, ಮಹಾಭಾರತ ಕಥೆಗಳಲ್ಲಿ ಕೆಲವು ಭಾಗಗಳು, ಕೆಲವು ಪ್ರಸಂಗಗಳು ಯಥಾರ್ಥವಾಗಿರಬಹುದು. ಆದರೆ, ಅದು ನಮಗೆ ತಿಳಿಯದು; ಏಕೆಂದರೆ, ಆ ವಿಚಾರವಾಗಿ ನಿರ್ದಿಷ್ಟವಾದ ಯಾವ ಆಧಾರಗಳೂ ನಮಗೆ ದೊರೆತಿಲ್ಲ. ಅಲ್ಲಿ ಇಲ್ಲಿ ಸ್ಥಳಪುರಾಣಗಳೆಂದು ಪ್ರಸಿದ್ಧವಾದ ಕೆಲವು ಕಥೆಗಳನ್ನು ಕೇಳುತ್ತೇವೆ. ಆದರೆ ಅವುಗಳೂ ಸಹ ಕೇವಲ ಪುರಾಣಕಥೆಗಳೇ.  ಅವುಗಳಿಗೆ ’ಆರ್ಖಿಯಲಾಜಿಕಲ್’ ಪ್ರಾಪ್ತಿಗಳ ಆಸರೆಯಿಲ್ಲ. ಆದುದರಿಂದ, ರಾಮಾಯಣವೂ, ಮಹಾಭಾರತವೂ ಬಹುಮಟ್ಟಿಗೆ ಕಾಲ್ಪನಿಕ ಅಥವಾ ಪೌರಾಣಿಕ ಕಥೆಗಳೇ. ಈ ಕಥೆಗಳಲ್ಲಿ ಅನೇಕ ಅಪ್ರಾಕೃತ ಘಟನೆಗಳು, ಅಸಾಧ್ಯಕರವಾದ ದೃಷ್ಟಾಂತಗಳು ವರ್ಣಿಸಲ್ಪಟ್ಟಿವೆ. ಉದಾಹರಣೆಗೆ,

ರಾಮಾಯಣದಲ್ಲಿ:  ಸಗರ ಮಹಾರಾಜನ ಅರವತ್ತು ಸಾವಿರ ಮಕ್ಕಳು ಭೂಮಿಯನ್ನು ಅಗೆದು ಸಾಗರವನ್ನು ನಿರ್ಮಾಣ ಮಾಡಿದುದು, ಅಗ್ನಿಕುಂಡದಿಂದ ಅಗ್ನಿಪುರುಷನೆದ್ದುಬಂದು ದಶರಥನಿಗೆ "ದಿವ್ಯ" ಪಾಯಸವನ್ನು ಕೊಡುವುದು, ಶಿಶು ಆಂಜನೇಯನು ಉಷಃಕಾಲದ ಹೊಂಬಣ್ಣದ ಸೂರ್ಯವನ್ನು ಹಣ್ಣೆಂದು ಭ್ರಮಿಸಿ ಅದನ್ನು ಕೀಳಲು ಆಕಾಶಕ್ಕೆ ಹಾರಿದುದು, ಹತ್ತುತಲೆಗಳುಳ್ಳ ರಾವಣ, ಸಂಜೀವಿನಿ ಮೂಲಿಕೆಗಳು, ಅಂತರಿಕ್ಷದಲ್ಲಿ ಸಂಚರಿಸುವ ಶಕ್ತಿಯುಳ್ಳ ಪುಷ್ಪಕವಿಮಾನ, ಬ್ರಹ್ಮಾಸ್ತ್ರ, ಸರ್ಪಾಸ್ತ್ರ, ಮುಂತಾದ ನಾನಾ ಅಸ್ತ್ರಗಳು, ಇತ್ಯಾದಿ.   ಹಾಗೆಯೇ,
ಮಹಾಭಾರತದಲ್ಲಿ:  ಗಾಂಧಾರಿ ನೂರು ಮಕ್ಕಳನ್ನು ಪಡೆಯುವುದು, ಅರ್ಜುನನು ದೇವಲೋಕದಿಂದ ಐರಾವತವನ್ನು ಭೂಲೋಕಕ್ಕೆ ಕರೆತಂದುದು, ವಿಷಸರ್ಪಗಳಿಂದ ಕಚ್ಚಿಸಲ್ಪಟ್ಟರೂ ಭೀಮನು ಸುರಕ್ಷಿತವಾಗಿರುವುದು, ಸಂಜಯನು, ಕುರುಕ್ಷೇತ್ರ ರಣರಂಗದಲ್ಲಿ ನಡೆಯುತ್ತಿರುವ ಕೌರವ-ಪಾಂಡವರ ಯುದ್ಧವನ್ನು ಪ್ರತ್ಯಕ್ಷವಾಗಿಯೇ ನೋಡುತ್ತಿರುವನೋ ಎಂಬಂತೆ, ಅರಮನೆ ಯಲ್ಲಿಯೇ ಕುಳಿತು ಧೃತರಾಷ್ಟ್ರನಿಗೆ ಯುದ್ಧಘಟನೆಗಳ ಪ್ರವಹವರದಿಯನ್ನು (running commentary).ಕೊಡುವುದು, ಶಿಖಂಡಿ ಪ್ರಕರಣ, ಭೀಷ್ಮನ ಇಚ್ಛಾಮರಣ, ಇತ್ಯಾದಿ.

 
ಈ ಕಲ್ಪನಾಕಥೆಗಳಲ್ಲಿ ಕೆಲವು "ವಿಜ್ಞಾನಕಲ್ಪನೆಗಳು" ಎಂದು ವ್ಯಾಖ್ಯಾನಿಸುವುದೇ ಈ ಲಘು ಬರವಣಿಗೆಯ ಉದ್ದೇಶ. ಹಾಗೆಯೇ, ಈ ಕಥೆಗಳಲ್ಲಿ ಕಂಡುಬರುವ ಕೆಲವು ವೈಜ್ಞಾನಿಕಾಂಶಗಳ ಮತ್ತು ಮಾನವೀಯ ಮನಶ್ಶಾಸ್ತ್ರದ, ಅಂದರೆ ’ಹ್ಯೂಮನ್ ಸೈಕಾಲಜಿ’ಯ, ವಿಚಾರವಾಗಿಯೂ ಸ್ವಲ್ಪ ಚರ್ಚಿಸಲಾಗುವುದು.
 ರಾಮಾಯಣ-ಮಹಾಭಾರತ ಕಥೆಗಳನ್ನು ಓದಿದ ಅನೇಕರು, ಅದರಲ್ಲೂ ಸಂಪ್ರದಾಯಸ್ಥರು, ಮತಶ್ರದ್ಧೆಯುಳ್ಳವರು, ಮತ್ತು ಕೆಲವು ವಿದ್ವಾಂಸರು, ವಿಜ್ಞಾನಿಗಳೂ ಸಹ, ಅಲ್ಲಿ ವಿವರಿಸಿರುವ ಅಸಾಧ್ಯ ಘಟನೆಗಳು "ಆಗಿನ ಕಾಲದಲ್ಲಿ" ನಿಜವಾಗಿಯೂ ನಡೆದುವೆಂದು ನಂಬುತ್ತಾರೆ. ನಮ್ಮ ಹಿರಿಯರಿಂದ "ರಾಮಾಯಣಕಾಲದಲ್ಲಿ  (ತ್ರೇತಾಯುಗದಲ್ಲಿ)  ಕೋತಿ, ಕರಡಿ ಮೊದಲಾದ ಪ್ರಾಣಿಗಳು ಮಾತಾಡುತ್ತಿದ್ದುವು", "ರಾಮಾಯಣದ ಕಾಲದಲ್ಲಿ ಪುಷ್ಪಕ ವಿಮಾನವಿತ್ತು", "ಹಿಂದಿನ ಕಾಲದಲ್ಲಿ ಜನರೂ, ದೇವತೆಗಳೂ ಸ್ವರ್ಗಲೋಕಕ್ಕೂ ಭೂಲೋಕಕ್ಕೂ ಹೋಗಿಬಂದು ಮಾಡುತ್ತಿದ್ದರು" - ಇವೇ ಮುಂತಾದ ಹೇಳಿಕೆಗಳನ್ನು ನಾವೆಲ್ಲರೂ ಕೇಳಿದ್ದೇವೆ. ಸ್ವರ್ಗ ಎಂದರೇನು? ಸ್ವರ್ಗಲೋಕ ಇರುವುದು ನಿಜವೇ? ಇದ್ದರೆ, ಎಲ್ಲಿರಲು ಸಾಧ್ಯ? ನರಕವಂತೂ ಒಂದಲ್ಲ, ಎರಡಲ್ಲ! ಅತಲ, ವಿತಲ, ಸುತಲ, ತಲಾತಲ, ರಸಾತಲ, ಮಹಾತಲ, ಪಾತಾಲ ಎಂಬ ಏಳು ನರಕಗಳು ಭೂತಲದಲ್ಲಿರುವುದಾಗಿ ನಮ್ಮ ಶಾಸ್ತ್ರ, ಪುರಾಣಗಳಲ್ಲಿ ಹೇಳಿದೆ. ಇಂತಹ ಹೇಳಿಕೆಗಳು ಯಥಾರ್ಥವೇ, ಅಲ್ಲವೇ ಎನ್ನುವುದನ್ನು ಪರಿಶೀಲಿಸಬೇಕು. ಹಿಂದೆ, ಜನಗಳು ಭೂಮಿ ಚಪ್ಪಟೆಯಾಗಿದೆಯೆಂದೂ, ಆ ಚಪ್ಪಟೆ ನೆಲದಮೇಲೆ ಆಕಾಶವು ಒಂದು ದೊಡ್ಡ ಮೇಲ್ಛಾವಣಿಯೆಂದೂ ತಿಳಿದಿದ್ದರು. ಹಾಗೆ ಭಾವಿಸಿದ ಆಕಾಶದ ಮೇಲೆ ಸ್ವರ್ಗಾದಿ ದೇವಲೋಕಗಳೂ, ಚಪ್ಪಟೆಯಾದ ಭೂಮಿಯ ಕೆಳಗೆ ಎಲ್ಲಾ ನರಕಗಳೂ ಇರುವುವೆಂದು ಆಗಿನ ಜನರು ನಂಬಿದ್ದರು. ಈಗ ನಮಗೆ ವಿಜ್ಞಾನದಿಂದ ಸತ್ಯವು ತಿಳಿದಿದೆ. ಭೂಮಿಯು ಚಪ್ಪಟೆಯಾಗಿಲ್ಲ.  ಅದೊಂದು ಗೋಳ. ಆಕಾಶವು ಭೂಮಿಯ ಮೇಲೆ ಹೊದಿಸಿರುವ ಮೇಲ್ಛಾವಣಿಯಲ್ಲ; ವಸ್ತುತಃ, ಅದೊಂದು ಕೋಟಿಕೋಟಿ ಕೋಟ್ಯಾಂತರ ಸೂರ್ಯಗಳು, ಗ್ರಹಗಳು, ಗಾ~ಲಕ್ಸಿಗಳು, ಕ್ವೇಸ್ಹಾರ್ಗಳು, ಕಾಳರಂಧ್ರಗಳು, ಮುಂತಾದ ನಾನಾವಿಧ ನಭೋಮಂಡಲಗಳನ್ನು ಒಳಗೊಂಡ ಅಪಾರ ಶೂನ್ಯಪ್ರದೇಶ. ಆದುದರಿಂದ, ಸ್ವರ್ಗವು ಒಂದು ಕಾಲ್ಪನಿಕ ಪ್ರದೇಶ ಮಾತ್ರ. ಹಾಗೆಯೇ, ಭೂತಲದಲ್ಲಿರುವುದು ಕೇವಲ ದ್ರವೀಭೂತಶಿಲೆ, ಅಂದರೆ ’ಮ್ಯಾಗ್ಮ’, ಅಷ್ಟೆ; ನರಕಗಳಲ್ಲ! ಹಾಗೆಯೇ, ಇಂದಿನ ಆಕಾಶ - ಹಿಂದಿನ ಆಕಾಶ, ಇಂದಿನ ಭೂತಲ - ಹಿಂದಿನ ಭೂತಲ ಎಂದು ಬೇರೆ ಬೇರೆಯಾಗಿರುವುದು ಸಾಧ್ಯವೇ? ಪ್ರಕೃತಿನಿಯಮಗಳಿಗೆ ಆಗಿನ ಕಾಲ - ಈಗಿನ ಕಾಲ ಎಂಬ ಕಾಲಭೇದವುಂಟೆ? ಕೃತ, ತ್ರೇತಾ, ದ್ವಾಪರ ಮತ್ತು ಕಲಿಯುಗ ಎಂಬುವು ಸಹ ಕೇವಲ ಪೌರಾಣಿಕ ಕಾಲಭೇದವಲ್ಲದೆ ಚಾರಿತ್ರಿಕವಾದುವೇ? ಎಂಬೀ ಪ್ರಶ್ನೆಗಳನ್ನು "ನಂಬುವ" ಜನರು ಕೇಳುವುದೂ ಇಲ್ಲ, ಸ್ವತಃ ವಿಚಾರಿಸುವುದೂ ಇಲ್ಲ. ಈ ಕಾರಣದಿಂದ, ಮತ್ತೆ ಕೆಲವು ವೈಚಾರಿಕ ಚಿಂತನಶೀಲರು ಪುರಾಣ, ಇತಿಹಾಸಗಳಲ್ಲಿ ಸ್ವಲ್ಪವೂ ಯಥಾರ್ಥತೆ ಇಲ್ಲವೆಂದು ಅವುಗಳನ್ನು ಸಂಪೂರ್ಣವಾಗಿ ತೊರೆದು ಬಿಡುತ್ತಾರೆ. ಈ ಎರಡು ವಿಪರೀತ ಅಭಿಪ್ರಾಯಗಳೂ ಸರಿಯಾದುದಲ್ಲ.
 ಇತಿಹಾಸ, ಪುರಾಣಗಳಲ್ಲಿ ಬರುವ ಹಲವಾರು ಘಟನೆಗಳು, ಪ್ರಕರಣಗಳು ಅಸಾಧ್ಯವೂ, ಅಪ್ರಾಕೃತವೂ ಆದರೂ, ಅವುಗಳಲ್ಲಿ ಅರ್ಥವಿಲ್ಲದೇ ಇಲ್ಲ, ಅವುಗಳಿಂದ ನಮಗೆ ಪ್ರಯೋಜನವಿಲ್ಲದೆಯೂ ಇಲ್ಲ. ರಾಮಾಯಣ, ಮಹಾಭಾರತದಂತಹ ಮಹಾಕೃತಿಗಳಲ್ಲಿ, ಕವಿಗಳು ತಮ್ಮ ತಮ್ಮ ಕಲ್ಪನಾಶಕ್ತಿಯನ್ನೂ, ಕವಿಸ್ವಾತಂತ್ರ್ಯವನ್ನೂ ಯಥೇಚ್ಛವಾಗಿ ಉಪಯೋಗಿಸಿಕೊಂಡು, ಅನೇಕ ದೃಷ್ಟಾಂತಗಳನ್ನೂ, ಉಪಕಥೆಗಳನ್ನೂ ಅತಿ ಚಮತ್ಕಾರದಿಂದ ಸ್ವಾರಸ್ಯವಾಗಿ ವರ್ಣಿಸಿ, ಆ ಮೂಲಕ ಜನರಿಗೆ ಉಪದೇಶವನ್ನೂ, ಮಾರ್ಗದರ್ಶನವನ್ನೂ ನೀಡಿರುತ್ತಾರೆ. ಆ ಗತಕಾಲದಲ್ಲಿನ ಜನಗಳ ನಡೆನುಡಿ, ಜೀವನಕ್ರಮ, ಸಂಪ್ರದಾಯ, ಪದ್ಧತಿ ಇತ್ಯಾದಿಗಳನ್ನು ಓದುಗರಿಗೆ ಮಂದಟ್ಟಾಗುವಂತೆ ವರ್ಣಿಸಿದ್ದಾರೆ. ಅವುಗಳಲ್ಲಿ ಕೆಲವು ಉಪಮೇಯಗಳು, ಇನ್ನು ಕೆಲವು ರೂಪಕಗಳು, ಮತ್ತೆ ಕೆಲವು ಲಕ್ಷಣಗಳು , ಇತ್ಯಾದಿ. ಅಲ್ಲಿ ವರ್ಣಿಸಿರುವ ಅನೇಕ ಘಟನೆ, ಪ್ರಸಂಗಗಳಲ್ಲಿ, ಮಾನವನ ದೌರ್ಬಲ್ಯ, ಆಕಾಂಕ್ಷೆ, ಅಭಿಲಾಷೆ, ಮುಂತಾದ ಪ್ರಕೃತಿಸಹಜವಾದ ಸ್ವಭಾವಗಳು ಕಂಡುಬರುವುವು. ಅಂತಹ ದೌರ್ಬಲ್ಯಗಳನ್ನು ಜಯಿಸಲು, ಆಶಾಭಿಲಾಷೆಗಳನ್ನು ಪೂರೈಸಿಕೊಳ್ಳಲು, ಅಂದಿನ ಮಾನವನು ಕೈಗೊಳ್ಳುವ ಕಾಲ್ಪನಿಕ ಕಾರ್ಯಯೋಜನಾಕ್ರಮವನ್ನು ಕುರಿತಾದ ಕಥೆಗೆ  "ವೈಜ್ಞಾನಿಕ ಕಲ್ಪನಾಕಥೆ"  ಅಥವಾ  "ವಿಜ್ಞಾನಕಲ್ಪನೆ" " (science fiction)  ಎಂದು ಹೇಳುತ್ತೇವೆ.

ಮೊದಲು, ರಾಮಾಯಣದಲ್ಲಿ ಬರುವ ಕೆಲವು ವಿಜ್ಞಾನಕಲ್ಪನೆಗಳನ್ನು ಪರಾಮರ್ಶಿಸೋಣ:
 ಈಗಿನ ಕಾಲದಲ್ಲಿ, ಹೇಗೆ ಬಹು ಮಂದಿ ದಂಪತಿಗಳು ಮಕ್ಕಳಾಗಲಿಲ್ಲವೆಂದು ಕಳವಳಿಸುವರೋ, ಅದೇ ರೀತಿ, ಹಿಂದಿನ ಕಾಲದಲ್ಲಿಯೂ ಅನೇಕ ದಂಪತಿಗಳು ಸಂತಾನಪಡೆಯಲಾಗದೆ ಪರಿತಪಿಸುತ್ತಿದ್ದರು. ರಾಮಾಯಣದಲ್ಲಿ, ದಶರಥಮಹಾರಾಜನಿಗೆ ಮೂರು ಮಂದಿ ಮಡದಿಯರಿದ್ದರೂ, ಅವನು ಪುತ್ರಸಂತಾನವಿಲ್ಲದೆ ಕೊರಗುತ್ತಿದ್ದನು. ತನ್ನ ಕುಲಗುರು ವಸಿಷ್ಠಮಹರ್ಷಿಗಳ ಆದೇಶದಂತೆ, ಋಷ್ಯಶೃಂಗಮಹರ್ಷಿಗಳನ್ನು ತನ್ನರಮನೆಗೆ ಬರಮಾಡಿಕೊಂಡು, ಅವರ ಸಲಹೆಯ ಪ್ರಕಾರ, ದಶರಥರಾಜನು ಪುತ್ರಕಾಮೇಷ್ಠಿ ಯಾಗವನ್ನು ಮಾಡುತ್ತಾನೆ. ಆ ಯಾಗದಲ್ಲಿ ಪೂರ್ಣಾಹುತಿಯಾದಮೇಲೆ, ಅಗ್ನಿಕುಂಡದಿಂದ ಅಗ್ನಿದೇವನೇ ಪ್ರತ್ಯಕ್ಷನಾಗಿ ಬಂದು, ದಿವ್ಯಪಾಯಸದಿಂದ ತುಂಬಿದ ಒಂದು ಪಾತ್ರೆಯನ್ನು ದಶರಥನ ಕೈಗಿತ್ತು, ಆ ಪಾಯಸವನ್ನು ರಾಜನ ಮಡದಿಯರು ಭುಜಿಸಿದರೆ, ಅವನಿಗೆ ಅವರಲ್ಲಿ ಪುತ್ರಪ್ರಾಪ್ತಿಯಾಗುವುದೆಂದು ಹೇಳಿ ಅಂತರ್ಧಾನವಾಗುತ್ತಾನೆ. ಇದೊಂದು ಸಂಪೂರ್ಣ ಕಲ್ಪನಾಕಥೆ. ಆದರೆ, ಅದು ಸಾಮಾನ್ಯ ಕಲ್ಪನೆಯಲ್ಲ. ಅದೊಂದು ವಿಜ್ಞಾನಕಲ್ಪನೆ! ಅಗ್ನಿ ಇತ್ತ ಪಾಯಸವು ಆಧುನಿಕ ವೈದ್ಯಶಾಸ್ತ್ರದ "ಸಾಫಲ್ಯಮಾತ್ರೆ" ಅಂದರೆ ’ಫ಼ರ್ಟಿಲಿಟಿ ಪಿಲ್’ನ ಪುರೋಗಾಮಿ (forerunner). . ಈ ದೃಷ್ಟಾಂತವು ಯಥಾರ್ಥವಲ್ಲದಿದ್ದರೂ, ಆ ಪ್ರಾಚೀನ ಕಾಲದಲ್ಲಿಯೂ ಜನರಿಗೆ (ಹೆಂಗಸರ) ಅಫಲತೆಗೆ (infertility ಗೆ)  ಒಂದು ಪರಿಹಾರವನ್ನು ಕಂಡು ಹಿಡಿಯಬೇಕೆಂಬ ಅಭಿಲಾಷೆಯಿತ್ತೆಂದು ತೋರಿಸುವುದು. ಇಲ್ಲಿ, ಒಂದಂಶವನ್ನು ಗಮನಿಸಬೇಕು. ಅಗ್ನಿಯು ಪಾಯಸವನ್ನು ನಿನ್ನ "ಮಡದಿಯರಿಗೆ ಕೊಡು" ಎಂದು ಹೇಳಿದನೇ ಹೊರತು, ದಶರಥನಿಗೆ "ನೀನು ಸೇವಿಸು" ಎಂದು ಹೇಳಲಿಲ್ಲ! ಅದರಿಂದ, ಅಫಲತೆಗೆ ಹೆಂಡತಿಯೇ ಕಾರಣ, ಗಂಡನಲ್ಲ, ಎಂಬ ತಪ್ಪು ನಂಬಿಕೆ, ತಪ್ಪು ಅಭಿಪ್ರಾಯವು ರಾಮಾಯಣಕಾಲದಲ್ಲೂ ಇತ್ತು, ಅಥವಾ ಆ ಅಭಿಪ್ರಾಯವು ನಮಗೆ ರಾಮಾಯಣಕಾಲದಿಂದಲೂ ಬಂದಿದೆ, ಎಂದು ತಿಳಿಯುವುದು.  ಈಗ ವಿಜ್ಞಾನದಿಂದ ನಮಗೆ ಸತ್ಯವು ತಿಳಿದಿದೆ: ಒಂದು ದಾಂಪತ್ಯದ ಅಫಲತೆಗೆ ಹೆಂಡತಿಯಾದರೂ ಕಾರಣವಿರಬಹುದು ಅಥವಾ ಗಂಡನಾದರೂ ಕಾರಣವಿರಬಹುದು. ವಾಸ್ತವವಾಗಿ, ದಶರಥನ ಮೂರು ಹೆಂಡತಿಯರೂ ಒಟ್ಟಿಗೆ ಬಂಜೆಯರಾಗಿರುವುದು ಹೆಚ್ಚು ಅಸಂಭವ. (ಇದರ ಸಾಮಾನ್ಯ ಸಂಭಾವ್ಯತೆ: ೧೨.೫ %. ಅದೇ, ದಶರಥನು ಅಫಲವತ್ತಾಗಿರುವ ಸಂಭಾವ್ಯತೆ: ೫೦ %.) ಆದುದರಿಂದ, ಬಹುಶಃ, ದಶರಥನೇ ತನ್ನ ಆನಪತ್ಯಕ್ಕೆ ಅಥವಾ ಅಸಂತಾನತೆಗೆ ಕಾರಣನಾಗಿದ್ದಿರಬಹುದು. (ಉದಾ: ಅತಿಯಾಗಿ ಅಡಿಗಡಿಗೆ ಸಂಭೋಗಿಸುವುದರಿಂದ ವೀರ್ಯಕಣದೆಣಿಕೆಯು ಕಡಿಮೆಯಾಗಿ, ಪುರುಷನ ಆನಪತ್ಯದ ಸಂಭಾವ್ಯತೆಯು ಹೆಚ್ಚಾಗುವುದು.) ಇಲ್ಲಿ, ಇನ್ನೊಂದು ವಿಷಯವು ಗಮನಾರ್ಹ ವಾದುದು: ಅಗ್ನಿದೇವನು ದಶರಥರಾಜನಿಗೆ ಇತ್ತುದು ಮಾತ್ರೆಯಲ್ಲ, ಭಸ್ಮವಲ್ಲ, ಲೇಹ್ಯವೂ ಅಲ್ಲ; ಕೇವಲ ಪಾಯಸ, ಒಂದು ತಿನಿಸು, ಆಹಾರ. ಇತ್ತೀಚೆಗೆ, ಕೆಲವು ’ಹಾರ್‌ವರ್ಡ್’ ಸಂಶೋಧಕರು “ಹೇಗೆ ಸೂಕ್ತವಾದ ಆಹಾರಪದ್ಧತಿಯು ಸಫಲತೆಯನ್ನು (fertility) ) ಪರಿಣಾಮಿಸುವುದು (affects),  ಎಂಬುದನ್ನು ಕಂಡುಹಿಡಿದಿದ್ದಾರೆ  (Fertility & Diet – “Fat, Carbs And the Science of Conception”, Newsweek, December 10, 2007). ಕೆಲವು ವಿದ್ವಾಂಸರು ಅಗ್ನಿದತ್ತಪಾಯಸವನ್ನೇ ಪುರುಷವೀರ್ಯ ಎಂದು ಹೇಳುತ್ತಾರೆ. (ಹಾಗೆಂದರೆ, ದಶರಥನೇ ಅಫಲನೆಂದು ಹೇಳಿದಂತಾಯಿತು.) ಹಾಗೆ, ಪಾಯಸವನ್ನೇ ಪುರುಷವೀರ್ಯವೆಂದು ಭಾವಿಸಿದರೆ, ಅದು ದತ್ತವೀರ್ಯಗರ್ಭಾದಾನದ (conception by donor sperm)  ಅಥವಾ ಕೃತಕ ಗರ್ಭಾದಾನದ (artificial insemination ನಿನ) ಪುರೋಗ ಎಂದು ಪರಿಗಣಿಸಬಹುದು.
 ದಶರಥಮಹಾರಾಜನು ಗತಿಸಿದಾಗ, ರಾಮಲಕ್ಷ್ಮಣರು ದಂಡಕಾರಣ್ಯದ ಕಡೆಗೆ ಹೊರಟಿದ್ದರು. ಭರತಶತೃಘ್ನರು ಕೈಕೇಯಿಯ ತಂದೆ, ಕೇಕಯರಾಜನ ಮನೆಯಲ್ಲಿದ್ದರು. ಈ ಇಬ್ಬರು ಅಣ್ಣತಮ್ಮಂದಿರೂ ತಂದೆಯ ಅಂತ್ಯ ಸಂಸ್ಕಾರ ಮಾಡಲು ಕೇಕಯರಾಜ್ಯದಿಂದ ಅಯೋಧ್ಯೆಗೆ ಹಿಂತಿರುಗಿ ಬರುವವರೆಗೂ ರಾಜನ ದೇಹವನ್ನು ಕೊಳೆಯುವುದಕ್ಕೆ ಬಿಡದೆ ಕಾಪಾಡಬೇಕು. ಅದಕ್ಕಾಗಿ, ದಶರಥನ ದೇಹವನ್ನು ತೈಲದ್ರೋಣಿಯಲ್ಲಿ ಇಡುತ್ತಾರೆ.  ತೈಲವು ರಕ್ಷಣಕಾರಿ (preservative)  ಎನ್ನುವುದು ರಾಮಾಯಣಕಾಲದಲ್ಲಿ ಗೊತ್ತಿಲ್ಲದಿದ್ದ ಪಕ್ಷದಲ್ಲ್ಲಿ, ಮೇಲೆ ಹೇಳಿದಂತೆ ಮೃತದೇಹವನ್ನು ತೈಲದ್ರೋಣಿಯಲ್ಲಿ ಇಡುವುದು ಇಂದಿನ ಶವರಕ್ಷಣತಂತ್ರದ (embalming technique ನ) ಒಂದು ಪುರೋಗ ಆಗುವುದು. ಆದರೆ, ಬಹುಶಃ, ತೈಲವು ರಕ್ಷಣಕಾರಿ ಎನ್ನುವುದು ರಾಮಾಯಣದ ಕಾಲದಲ್ಲಿ ಜನರಿಗೆ ತಿಳಿದಿತ್ತೆಂದು ತೋರುವುದು. ಹಿಂದೆ, ಈಜಿಪ್ಟ್‍ನಲ್ಲಿಯೂ ಶವಗಳನ್ನು ’ಮಮ್ಮಿ’ಕರಿಸುವುದಕ್ಕೆ ಕಚ್ಚಾತೈಲದ ಭಟ್ಟಿಯನ್ನು (asphalt)  ಉಪಯೋಗಿಸುತ್ತಿದ್ದರು. ಈಗಲೂ, ಬೀಜಗಳಿಂದ ತೆಗೆದ ಎಣ್ಣೆಯನ್ನು ಕೆಲವು ರಾಸಾಯನಿಕ ಪದಾರ್ಥಗಳೊಡನೆ ಬೆರೆಸಿ, ಶವರಕ್ಷಣೆಗೆ ಉಪಯೋಗಿಸುತ್ತಾರೆ.
 ಲಂಕಾಯುದ್ಧದಲ್ಲಿ, ಮೊದಲು ರಾಮಲಕ್ಷ್ಮಣರಿಬ್ಬರೂ ಇಂದ್ರಜಿತುವಿನ ಬ್ರಹ್ಮಾಸ್ತ್ರಕ್ಕೆ ಮಣಿದು ಮರಣಮೂರ್ಛೆ ಹೊಂದಿದಾಗ, ನಂತರ ಲಕ್ಷ್ಮಣನು ರಾವಣನ ಶಕ್ತ್ಯಾಯುಧದಿಂದ ಘಾಸಿಪಟ್ಟು ಮೂರ್ಛೆಹೊಂದಿದಾಗ, ಆ ಮೂರ್ಛೆನಿವಾರಣೆಗೆ, ಜಾಂಬವಂತನಿಂದ ಪ್ರೇರಿತನಾದ ಆಂಜನೇಯನು, ಹಿಮವತ್ಪರ್ವತದ ತಪ್ಪಲಿನಿಂದ ತಂದ ಸಂಜೀವಿನಿ ಮೂಲಿಕೆಗಳು - ವಿಶಲ್ಯಕರಣಿ, ಸಂಧಾನಕರಣಿ, ಸಾವರ್ಣ್ಯಕರಣಿ ಮತ್ತು ಸಂಜೀವಕರಣಿ - ಸಹ ಒಂದು ವಿಜ್ಞಾನಕಲ್ಪನೆಯೇ. ಅದು ಇಂದಿನ ಸೈನಿಕವೈದ್ಯಶಾಸ್ತ್ರದ ಪುರೋಗಾಮಿ. ಆದರೆ, ನಮ್ಮ ಆಧುನಿಕ ವೈದ್ಯಶಾಸ್ತ್ರಕ್ಕೆ ಆ ಸಂಜೀವಿನಿ ಸಾಮರ್ಥ್ಯವು ಇನ್ನೂ ಸಂಪೂರ್ಣವಾಗಿ ಕರಗತವಾಗಿಲ್ಲ. ಆಧುನಿಕ ಶಸ್ತ್ರಚಿಕಿತ್ಸಾವಿಧಾನಗಳಿಂದ ವಿಶಲ್ಯಕರಣಿ ಮತ್ತು ಸಂಧಾನಕರಣಿಗಳು ಬಹುಮಟ್ಟಿಗೆ ಕರಗತವಾಗಿದೆ; ಇತ್ತೀಚಿನ ’ಪ್ಲಾ~ಸ್ಟಿಕ್ ಸರ್ಜರಿ’ ಆವಿಷ್ಕಾರದಿಂದ ಸಾವರ್ಣ್ಯಕರಣಿಯು ಸ್ವಲ್ಪ ಮಟ್ಟಿಗೆ ಕರಗತವಾಗಿರುವುದು. ಅಭೇದಜೀವಕಣಚಿಕಿತ್ಸೆ  (stem cells therapy)  ಸಮಗ್ರವಾದಾಗ, ಈ ಮೂರು ಕರಣಿಗಳೂ ಮತ್ತಷ್ಟು ಉತ್ತಮಗೊಳಬಹುದು. ಸಂಜೀವಕರಣಿಯಾದರೋ ಬಹುಶಃ ಎಂದಿಗೂ ಮಾನವನಿಗೆ ಕಾರ್ಯಗತವಾಗಲಾರದೆಂದು ತೋರುವುದು.
 ಮಾನವನು ಭೂರಂಗದ ಮೇಲೆ ಬಂದ ನಂತರ, ಎಂದು ಅವನು ಮೊಟ್ಟಮೊದಲಿಗೆ ಹಕ್ಕಿಗಳು ಸ್ವೇಚ್ಛೆಯಾಗಿ ಅಂತರಿಕ್ಷದಲ್ಲಿ ಹಾರಾಡುವುದನ್ನು ನೋಡಿದನೋ, ಅಂದಿನಿಂದಲೇ ತಾನೂ ಆ ಪಕ್ಷಿಗಳ ಹಾಗೆ ಆಕಾಶದಲ್ಲಿ ಸ್ವತಂತ್ರವಾಗಿ ಹಾರಾಡಬೇಕೆಂದು ಇಚ್ಛಿಸಿದನೆಂದು ತೋರುವುದು. ವ್ಯಕ್ತವಾಗಿ, ಆ ಆಕಾಂಕ್ಷೆಯು ನಮ್ಮ ಪೂರ್ವಜರನ್ನೂ ಬಿಟ್ಟಿರಲಿಲ್ಲ. ರಾಮಾಯಣದಲ್ಲಿ ಹೇಳಿರುವ ಪುಷ್ಪಕವಿಮಾನವು ಆ ಹಾರೈಕೆಯ ಪೂರೈಕೆಯಲ್ಲದಿದ್ದರೂ, ಆ ಪೂರೈಕೆಯ ಒಂದು ಮಹಾಕಲ್ಪನೆ, ಒಂದು ವಿಜ್ಞಾನಕಲ್ಪನೆಯೇನೋ ಹೌದು. ಅಂದಿನ ಪುಷ್ಪಕವಿಮಾನವು ಇಂದು ಪ್ರಪಂಚದಾದ್ಯಂತ ಬಳಕೆಯಲ್ಲಿರುವ ಆಕಾಶಯಾನಗಳನ್ನು ಅಧಿಕತರವಾಗಿ ಪ್ರವೇಕ್ಷಿಸಿತು(anticipated) ಎಂದರೆ ಅತಿಶಯೋಕ್ತಿಯಲ್ಲ. ಆದರೆ, ಆಧುನಿಕ ನಭೋಯಾನವು ಪುಷ್ಪಕ ವಿಮಾನದ ಅಪೂರ್ಣ ಪೂರೈಕೆ. ಏಕೆಂದರೆ, ರಾಮಾಯಣದಲ್ಲಿ ಹೇಳಿರುವ ಪುಷ್ಪಕ ವಿಮಾನದ ಮೇಲೆ ಎಷ್ಟು ಜನರು ಏರಿ ಕುಳಿತರೂ ಮತ್ತೂ ಒಬ್ಬರಿಗೆ ಕೂರಲು ಸ್ಥಳವಿರುವಂತೆ ಆ ವಿಮಾನವು ವಿಸ್ತರವಾಗುತ್ತಿತ್ತಂತೆ. ಆ ಸಾಧ್ಯತೆಯು ನಮ್ಮ ಈಗಿನ ಯಾವ ತೆರನಾದ ಆಕಾಶವಾಹದಲ್ಲೂ ಇಲ್ಲ. ಬಹು ಪ್ರಾಯಕವಾಗಿ, ಅದೊಂದು ಅಸಾಧ್ಯಕಾರ್ಯ.
 ಹೀಗೆಯೇ, ನಲನು ಸಮುದ್ರದ ಮೇಲೆ ಸೇತುವೆ ಕಟ್ಟಿದುದೂ ಒಂದು ವಿಜ್ಞಾನಕಲ್ಪನೆ. ಹಿಂದಿನ ಕಾಲದಲ್ಲಿ, ಸಣ್ಣ ಹೊಳೆ, ತೊರೆ, ಕಾಲುವೆಗಳ ಮೇಲೆ ಅಡ್ಡಲಾಗಿ ಮರದ ದಿಮ್ಮಿಗಳನ್ನು ಬೀಳಿಸಿ ನೀರನ್ನು ದಾಟುವ ಸೌಲಭ್ಯವನ್ನು ಏರ್ಪಡಿಸಿಕೊಳ್ಳುವ ಚಾತುರ್ಯವು ಆ ಕಾಲದ ಜನರಲ್ಲಿ ಸಾಮಾನ್ಯವಾಗಿದ್ದಿರಬಹುದು. ಆದರೆ, ದೊಡ್ಡ ನದಿ, ಅದೂ ಸಮುದ್ರದ, ಮೇಲೆ ಸೇತುವೆ ಕಟ್ಟುವುದು ಸಂಕಲ್ಪಮಾತ್ರವಾಗಿತ್ತೆಂದು ತೋರುವುದು. ಏಕೆಂದರೆ, ಸೇತುವೆಯನ್ನು ಕಟ್ಟಲು ಶ್ರೀರಾಮನು ಸಮುದ್ರದೇವನನ್ನು ಪ್ರಾರ್ಥಿಸಿ ಅವನ ಅನುಮತಿಯನ್ನು ಪಡೆಯುತ್ತಾನೆ. ಹಾಗೆಯೇ, ಶ್ರೀರಾಮನ ಕೋರಿಕೆಯಂತೆ, ಸಮುದ್ರರಾಜನ ಸ್ನೇಹಿತನಾದ ವರುಣನು, ನಲನು ಸಮುದ್ರದ ಮೇಲೆ ಜೋಡಿಸಿದ ಕಲ್ಲುಬಂಡೆಗಳು ನೀರಿನಲ್ಲಿ ಮುಳುಗದಂತೆ ನೋಡಿಕೊಳ್ಳುವೆನೆಂದು ಶ್ರೀರಾಮನಿಗೆ ಭರವಸೆ ಕೊಡುತ್ತಾನೆ. ಇಲ್ಲಿ ಸಮುದ್ರರಾಜ, ವರುಣದೇವ ಮುಂತಾದ ದೇವರುಗಳೇ ಕೇವಲ ಮಾನವಕಲ್ಪನೆ - ಪ್ರಾಕೃತಭೂತಗಳ ಮೂರ್ತೀಕರಣ. ಮತ್ತು, ಬಂಡೆಕಲ್ಲುಗಳನ್ನು ನೀರಿನ ಮೇಲೆ ತೇಲಿಬಿಟ್ಟು ಜೋಡಿಸುವುದು ಕೇವಲ ಅಸಾಧ್ಯ ಕಾರ್ಯ - ಭೌತಶಾಸ್ತ್ರ ನಿಯಮಗಳಿಗೆ ವಿರುದ್ಧವಾದುದು. ಆದುದರಿಂದ, ರಾಮಾಯಣದಲ್ಲಿನ ಸೇತುಬಂಧನಯೋಜನೆಯು ಸಂಪೂರ್ಣ ಸಾಂಕಲ್ಪಿಕ, ಆಭ್ಯಾಸಿಕವಲ್ಲ ಎಂದು ಖಚಿತವಾಗುವುದು. (ಇತ್ತೀಚೆಗೆ, ಕೆಲವು ಹಿಂದು ಮೂಲವಾದಿಗಳು, ಕೇವಲ ರಾಜಕೀಯ ಕಾರಣಕ್ಕಾಗಿ, ಈ ವೈಜ್ಞಾನಿಕ ಸತ್ಯವನ್ನು ಅಂಗೀಕರಿಸಲು ಒಪ್ಪುವುದಿಲ್ಲವೆನ್ನಿ!) ಇಲ್ಲಿ, ಇನ್ನೊಂದಂಶವನ್ನು ಗಮನಿಸಬೇಕು. ಹಿಂದೆ ಸೀತಾನ್ವೇಷಣೆಗೆ ಸಮುದ್ರೋಲ್ಲಂಘನ ಮಾಡಲು ಹನುಮಂತನು ಏಕಾಕಿಯಾಗಿ ಹಾರಿದ. ಅದು ಮಾನವನ ಸ್ವಯಂ ಉತ್ಪತನದ ಸ್ವಾಭಿಲಾಷೆಯ ವಿಜ್ಞಾನಕಲ್ಪನೆಯೆಂದು ಪರಿಗಣಿಸಬಹುದು. ಆದರೆ, ಅದು ಒಂದು ಸುದ್ದಿಸಂಗ್ರಾಹಕ ಕೌಶಲ್ಯವೂ (intelligence gathering strategy) ಹೌದು. ರಾವಣನ ಅರಮನೆಯನ್ನು ಗುಪ್ತವಾಗಿ ಹೊಕ್ಕು, ಗೂಢಚಾರನಾಗಿ ರಹಸ್ಯದಿಂದ ಸೀತೆಯನ್ನು ಕಂಡು ಬರುವುದಕ್ಕೆ ಒಬ್ಬನೇ ಹೋಗುವುದು ಉಚಿತವೂ, ಆವಶ್ಯಕವೂ ಆಗಿತ್ತು. ಆದರೆ ಪ್ರಸ್ತುತದಲ್ಲಿ, ಒಂದು ದೊಡ್ಡ ವಾನರಭಲ್ಲೂಕಸೈನ್ಯವನ್ನು ಭಾರತದ ದಕ್ಷಿಣದಡದಿಂದ ಲಂಕಾದ್ವೀಪದ ಉತ್ತರದಡಕ್ಕೆ ರವಾನಿಸಬೇಕಾಗಿದೆ. ಆದುದರಿಂದಲೇ ಸಮುದ್ರದ ಮೇಲೆ ಸೇತುವೆ ಕಟ್ಟುವ ಆವಶ್ಯಕತೆ ಮತ್ತು ಅದಕ್ಕೆ ತಕ್ಕ ಕಾಲ್ಪನಿಕ ಯೋಜನೆ.
  ಇನ್ನೊಂದು ಮಾತು. ಕಥೆ, ಕವನಗಳಲ್ಲಿ ಪ್ರಾಣಿಗಳನ್ನು ಪಾತ್ರಗಳನ್ನಾಗಿ ಉಪಯೋಗಿಸುವುದು ಪ್ರಾಚೀನಕಾಲದಿಂದಲೂ ಬಂದ ಒಂದು ಸಾಹಿತ್ಯ ವಿಧಾನ ಮತ್ತು ಸಂಪ್ರದಾಯ. ಸೋಮಾರಿಗಳಾದ ಕೆಲವು ರಾಜಪುತ್ರರನ್ನು ನೀತಿವಂತರನ್ನಾಗಿಯೂ, ರಾಜ್ಯಾಡಳಿತ ವಿಚಾರಗಳಲ್ಲಿ ನಿಪುಣರನ್ನಾಗಿಯೂ ಪರಿವರ್ತಿಸಲು ಹೇಳಿದ ಪಂಚತಂತ್ರ ಕಥೆಗಳಲ್ಲಿ ಬರುವ ಪಾತ್ರಗಳೆಲ್ಲವೂ ಪ್ರಾಣಿಗಳೇ. ಹೀಗೆ ಕಥೆಗಳಲ್ಲಿ, ನಾಟಕಗಳಲ್ಲಿ ಪ್ರಾಣಿಗಳನ್ನು ಪಾತ್ರಗಳನ್ನಾಗಿ ಉಪಯೋಗಿಸುವುದರಿಂದ ಕಥಾನಾಟಕಗಳಿಗೆ ಒಂದು ವಿಶೇಷ ಸೊಗಸನ್ನು ತಂದು, ಓದುಗರಲ್ಲಿ ಹೆಚ್ಚು ಆಸಕ್ತಿಯನ್ನುಂಟುಮಾಡುವುದು. ಅಷ್ಟೇ ಅಲ್ಲದೆ, ಕವಿಯು ಹೇಳ- ಬಯಸುವ ಮಾತು, ನೀತಿ ಹೆಚ್ಚು ಪರಿಣಾಮಕಾರಿ ಆಗುವಂತೆಯೂ ಮಾಡುವುದು. ಬಾಲ್ಯದಲ್ಲಿ ಪುಣ್ಯಕೋಟಿ ಕಥೆಯ ಗೋವಿನ ಹಾಡನ್ನು ಕೇಳಿ, ಓದಿ, ಕಣ್ಣೀರು ಬಿಟ್ಟು ಎಷ್ಟು ಮಂದಿ ಮಕ್ಕಳು ಮುಂದೆ ಪ್ರಾಣಿದಯೆ, ಸತ್ಯಶೀಲತೆಯಲ್ಲಿ ಪ್ರವರ್ತಕರಾಗಿ ಬೆಳೆದಿಲ್ಲ! ಆದುದರಿಂದ, ರಾಮಾಯಣದಲ್ಲಿ ಹೇಳಿರುವುದೆಂದ ಮಾತ್ರಕ್ಕೇ ಕೋತಿ, ಕರಡಿ ಮುಂತಾದ ಪ್ರಾಣಿಗಳು ಹಿಂದಿನ ಕಾಲದಲ್ಲಿ ಮಾತಾಡುತ್ತಿದ್ದುವೆಂದು ತೀರ್ಮಾನಿಸುವುದು ವ್ಯಕ್ತವಾಗಿ ಅನುಚಿತ. ವಿಕಸನಪ್ರಗತಿಯು ಹಿಂದಿನ ಕಾಲದಿಂದ ಮುಂದಿನ ಕಾಲಕ್ಕೆ ವೃದ್ಧಿಸುವುದೇ ಹೊರತು, ವ್ಯತ್ಯಸ್ತವಾಗುವುದಿಲ್ಲ.

ಈಗ, ಮಹಾಭಾರತದಲ್ಲಿ ಕಂಡುಬರುವ ಕೆಲವು ವಿಜ್ಞಾನಕಲ್ಪನಾಕಥೆಗಳನ್ನು ವಿಮರ್ಶಿಸೋಣ:
 ಧೃತರಾಷ್ಟ್ರನ ಮಕ್ಕಳಾದ ನೂರುಮಂದಿ ಕೌರವರು ಹುಟ್ಟಿದುದು ಒಂದು ಬಹು ಸ್ವಾರಸ್ಯವಾದ ವೈಜ್ಞಾನಿಕ ಕಲ್ಪನೆ. ವಾಸ್ತವವಾಗಿಯೂ, ಅದೊಂದು ವಿಜ್ಞಾನಕಲ್ಪನಾಸಮೂಹ! ಗಾಂಧಾರಿ ಗರ್ಭಿಣಿಯಾಗಿ ನವಮಾಸಗಳು ತುಂಬಿ ಬಹಳ ದಿವಸಗಳಾದರೂ ಪ್ರಸುವಾಗಲೇ ಇಲ್ಲ. ಆಗ, ಪ್ರಸೂತಿಕಾವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ಗರ್ಭವನ್ನು ಹೊರತೆಗೆಯಬೇಕಾಯಿತು. ಇದು ಇಂದಿನ ’ಸಿಸ್ಹೇರಿಯನ್ ಸೆಕ್ಷನ್’ನಿನ ಪುರೋಗ, ಒಂದು ವಿಜ್ಞಾನಕಲ್ಪನೆ. ಅಷ್ಟೇ ಅಲ್ಲ. ಗರ್ಭವನ್ನು ಹೊರತೆಗೆದಾಗ ಅದು ಸಾಮಾನ್ಯ ಶಿಶುವಾಗಿರದೆ, ಒಂದು ದುಂಡುಪಿಂಡವಾಗಿತ್ತು. ಅದನ್ನು ಶಸ್ತ್ರದಿಂದ ಭೇದಿಸಿ ನೂರು ಚೂರು ಮಾಡಿದರಂತೆ. ಆ ನೂರು ಚೂರುಗಳನ್ನೂ ನೂರು ಕುಡಿಕೆಗಳಲ್ಲಿಟ್ಟು, ಜಾಗರೂಕತೆಯಿಂದ ಬಹುಕಾಲ ಪೋಷಿಸಿ ಬೆಳೆಸಿದ ಮೇಲೆ ಒಂದೊಂದು ಚೂರೂ ಒಂದೊಂದು ಮಗುವಾಗಿ ಬೆಳೆಯಿತಂತೆ. ಇದು ಇಂದಿನ ಭ್ರೂಣಾಭೇದಜೀವಕಣ (’ಎಂಬ್ರೈಯಾನಿಕ್ ಸ್ಟೆಮ್ ಸೆಲ್ಸ್’)ಗಳಿಂದ ದೇಹದ ನಾನಾ ಜೀವಂತ ಭಾಗಗಳನ್ನು ಪ್ರತ್ಯೇಕ ಪ್ರತ್ಯೇಕವಾಗಿ ಬೆಳೆಸುವ ಪ್ರಯೋಗದ ಪುರೋಗ! ಆದರೆ, ಮಹಾಭಾರತದಲ್ಲಿ, ದೇಹದ ಒಂದು ನಿರ್ದಿಷ್ಟ ಭಾಗದ ಬದಲು, ಒಂದು ಜೀವಂತ ದೇಹವನ್ನೇ, ಒಂದು ಚೈತನ್ಯಪೂರ್ಣ ಶಿಶುವನ್ನೇ ಬೆಳೆಸಲಾಯಿತೆಂದು ಹೇಳಿದೆ. ಆ ಕಾರಣ, ಇದೊಂದು ರೀತಿಯ ’ಕ್ಲೋನಿಂಗ್ ಟೆಕ್ನಿಕ್’ನ ಪುರೋಗ ಎಂದೂ ಹೇಳಬಹುದು. ಅಷ್ಟೇ ಅಲ್ಲದೆ, ಮೇಲೆ ಹೇಳಿದ ಅಂದಿನ ಕುಂಭಪೋಷಣೆಯೂ ಸಹ ಒಂದು ವಿಜ್ಞಾನಕಲ್ಪನೆ - ಇಂದಿನ ಪ್ರನಾಳಶಿಶುವಿನ ( test tube baby ಯ), ಹಾಗೂ ಕಾವುಕೋಶಪೋಷಣೆಯ (incubation ನ) ಪುರೋಗ.
 ಒಂದು ಸಂದರ್ಭದಲ್ಲಿ, ದುರ್ಯೋಧನನು ಕುಯುಕ್ತಿಯಿಂದ ತನ್ನ ಪರಮ ವೈರಿಯಾದ ಭೀಮನನ್ನು ಕೊಲ್ಲಲು ವಿಷ ಸರ್ಪಗಳಿಂದ ಕಚ್ಚಿಸುತ್ತಾನೆ. ಆದರೂ, ಭೀಮನು ಸರ್ಪಗಳ ವಿಷದಿಂದ ಯಾವ ಬಾಧೆಯೂ ಇಲ್ಲದೆ, ಸುರಕ್ಷಿತವಾಗಿರುತ್ತಾನೆ. ಈಗಲೂ ಸಹ, ಕೆಲವು ವೈದ್ಯಪಂಡಿತರು ಚೇಳು ಕಡಿತಕ್ಕೆ, ಹಾವು ಕಡಿತಕ್ಕೆ ಮಂತ್ರಹಾಕಿ ವಿಷದ ಪರಿಣಾಮವನ್ನು ಹೋಗಲಾಡಿಸುವರೆಂದು ಕೆಲವು ಜನರು ನಂಬುತ್ತಾರೆ. ಇಂತಹ ಮಂತ್ರವೈದ್ಯವು ಎಷ್ಟು ಯಥಾರ್ಥವೋ ತಿಳಿಯದು. ಬಹುಶಃ ಈ ಮಂತ್ರವೈದ್ಯವು ಕೇವಲ ಮಾನಸಿಕ ಅಥವಾ ’ಪ್ಲಸೀಬೊ’ ಪರಿಣಾಮಕಾರಿ ಎಂದು ತೋರುವುದು. ಆದರೂ, ಭೀಮನ ದೇಹವು ಸರ್ಪಗಳ ವಿಷವನ್ನು ನಿರೋಧಿಸಿದುದು ಇಂದಿನ ವಿಷನಿವಾರಕ ವಾ~ಕ್ಸೀನ್ (vaccine)ನಿನ ಪುರೋಗಾಮಿ ಇರಬಹುದು. ಹಾಗಿಲ್ಲದಿದ್ದರೆ, ಹಿಂದಿನ ಕಾಲದಲ್ಲಿ ಜನಗಳಿಗೆ ವಿಷನಿರೋಧಕ್ರಮ ಅಥವಾ ವಿಷನಾಶಕವೈದ್ಯವು ತಿಳಿದಿತ್ತೆಂದು ಸೂಚಿತವಾಗುವುದು. ಉದಾಹರಣೆಗೆ: ಪ್ರತಿದಿವಸ ಬೇವಿನ ಸೊಪ್ಪನ್ನು ಅಥವಾ ಚಿಗುರನ್ನು ತಿಂದರೆ, ದೇಹದಲ್ಲಿ ನಾಗಸರ್ಪವಿಷನಿರೋಧಕಶಕ್ತಿಯು ಉಂಟಾಗುವುದೆಂದು ಕೆಲವರು ಹೇಳುತ್ತಾರೆ.
 ಬಹಳ ಹಿಂದಿನ ಕಾಲದಿಂದಲೂ ಮಾನವನಿಗೆ ತನ್ನ ದೃಷ್ಟಿಪರ್ಯಂತವನ್ನು ಆದಷ್ಟು ಹೆಚ್ಚಿಸಿ ಕೊಳ್ಳಬೇಕೆಂಬ ಆಸೆಯಿತ್ತು. ಆ ಆಸೆಯ ಸಂಪೂರ್ಣತೆಯೇ ಇಂದಿನ ದೂರದರ್ಶಕ ಅಥವಾ ’ಟೆಲೆಸ್ಕೋಪ್’.  ಹಾಗೆಯೇ, ಅವನಿಗೆ ಪಾರದೃಷ್ಟಿಸಾಧ್ಯತೆಯನ್ನು ಪಡೆಯಬೇಕೆಂಬ ಅಭಿಲಾಷೆಯೂ ಇತ್ತು. ಪಾರದೃಷ್ಟಿ ಎಂದರೆ, ದೃಷ್ಟಿಪಥದಲ್ಲಿ ಇರದ ವಸ್ತುಗಳನ್ನು ನೋಡುವ ಸಾಮರ್ಥ್ಯ. ಈ ಪಾರದೃಷ್ಟಿ ಸಾಧ್ಯತೆಯ ವಿಜ್ಞಾನಕಲ್ಪನೆಯು ಮಹಾಭಾರತದಲ್ಲಿ ಈ ರೀತಿ ಸಾಧಿಸಲ್ಪಟ್ಟಿದೆ:  ಪಾಂಡವರು ಪಗಡೆ ದ್ಯೂತದ ಒಪ್ಪಂದದ ಪ್ರಕಾರ ಹನ್ನೆರಡು ವರ್ಷ ವನವಾಸವನ್ನೂ, ಒಂದುವರ್ಷ ಅಜ್ಞಾತವಾಸವನ್ನೂ ಮುಗಿಸಿಬಂದರೂ, ಅವರ ಪಾಲಿನ ರಾಜ್ಯವನ್ನು ಹಿಂತಿರುಗಿ ಕೊಡಲು ದುರ್ಯೋಧನನು ನಿರಾಕರಿಸುತ್ತಾನೆ. ಧೃತರಾಷ್ಟ್ರನು ಹುಟ್ಟುಕುರುಡ. ಪುತ್ರವ್ಯಾಮೋಹದಿಂದ, ನ್ಯಾಯಕ್ಕೆ ವಿರುದ್ಧವಾಗಿ, ಹಟಮಾರಿ ಮಗ ದುರ್ಯೋಧನನ ಛಲವನ್ನು ಅನುಮೋದಿಸಿ, ತಮ್ಮನ ಮಕ್ಕಳಾದ ಪಾಂಡವರು ತಮ್ಮ ಪಾಲಿಗೆ ಹಕ್ಕಿನಿಂದ ಬಂದ ಅರ್ಧ ರಾಜ್ಯವನ್ನು, ತನ್ನ ಮಕ್ಕಳಾದ ಕೌರವರೊಂದಿಗೆ, ಯುದ್ಧಮಾಡಿ ಗೆದ್ದು ಪಡೆಯಬೇಕೆಂಬ ಮಗನ ಸಂಚಿಗೆ ಒಡಂಬಡುತ್ತಾನೆ. ಕುರುಕ್ಷೇತ್ರ ಮೈದಾನದಲ್ಲಿ, ಇನ್ನೇನು ಯುದ್ಧವು ಪ್ರಾರಂಭವಾಗಲಿದೆ. ಕುರುಕ್ಷೇತ್ರವು ಒಂದು ಧರ್ಮಕ್ಷೇತ್ರವೆಂದು ಪ್ರಸಿದ್ಧಿಯಾದುದು.  ಅಂದರೆ, ಅಲ್ಲಿ "ಧರ್ಮಕ್ಕೇ ಜಯವಾಗುವುದು ನಿಶ್ಚಯ"ಎಂದು ಪ್ರತೀತಿ. ತನ್ನ ಮಕ್ಕಳು ಧರ್ಮಬಾಹಿರರು, ಅನ್ಯಾಯಿಗಳು ಎನ್ನುವುದು ಧೃತರಾಷ್ಟ್ರನಿಗೆ ಚೆನ್ನಾಗಿ ತಿಳಿದಿದೆ. ಅದಕ್ಕೇ ಅವನಿಗೆ ಮನಸ್ಸಿನಲ್ಲಿ ಒಂದೇ ಆತಂಕ - ತನ್ನ ಮಕ್ಕಳಿಗೆ ಏನಾಗುವುದೋ, ಯಾವ ಸಮಯದಲ್ಲಿ ಪಾಂಡವರ ಕಡೆಯಿಂದ ಏನು ಅಪಾಯ ಒದಗುವುದೋ, ಎಂದು. ಕಣ್ಣಂತೂ ಕಾಣುವುದಿಲ್ಲ. ಕಿವಿಯಿಂದಲಾದರೂ ಯುದ್ಧದಲ್ಲಿ ನಡೆಯುವ ಘಟನೆಗಳನ್ನು ಆಗಾಗಲೇ ಕೇಳಿ ತಿಳಿದುಕೊಳ್ಳಬೇಕೆಂದು ಆಸೆ. ವ್ಯಾಸಮಹರ್ಷಿಗಳಿಗೆ ಆ ವಿಷಯವು ತಿಳಿದಾಗ, ಅವರು ಸಂಜಯನಿಗೆ "ದಿವ್ಯದೃಷ್ಟಿ"ಯನ್ನು ದಯಪಾಲಿಸಿ, ಸಂಜಯನು ಅರಮನೆಯಲ್ಲಿ ಕುಳಿತಲ್ಲಿಂದಲೇ ಯುದ್ಧಭೂಮಿಯಲ್ಲಿ ನಡೆಯುವ ಯಾವತ್ತೂ  ಘಟನೆಗಳನ್ನು ಪ್ರತ್ಯಕ್ಷವಾಗಿ ನೋಡುವಂತೆಯೇ ಆಗುವ ಸಾಮರ್ಥ್ಯವನ್ನು ಕರುಣಿಸುತ್ತಾರೆ. ಆ ದಿವ್ಯ ದೃಷ್ಟಿಯೇ ಈಗ ನಮ್ಮೆಲ್ಲರಿಗೂ ಚಿರಪರಿಚಿತವಾಗಿರುವ ದೂರದರ್ಶನದ ಅಂದರೆ ’ಟೆಲೆವಿಷನ್’ನಿನ ಪುರೋಗಾಮಿ. ಇಲ್ಲಿ ಒಂದು ಮನಶ್ಶಾಸ್ತ್ರದ ವಿಚಾರವೂ ಇದೆ. ವ್ಯಾಸರು ಧೃತರಾಷ್ಟ್ರನ ಆಸೆಯನ್ನು ತೃಪ್ತಿಪಡಿಸಲು ಏಕೆ ಒಪ್ಪಿದರೆಂದರೆ, ಯುದ್ಧದಲ್ಲಿ ತನ್ನ ಮಕ್ಕಳು ಅನುಭವಿಸುವ ಪರಂಪರ ಪರಾಜಯವನ್ನು ಕೇಳಿಯಾದರೂ, ರಾಜನು ದುರ್ಯೋಧನನಿಗೆ ಪಾಂಡವರೊಡನೆ ಒಪ್ಪಂದ ಮಾಡಿಕೊಳ್ಳುವಂತೆ ಬುದ್ಧಿ ಹೇಳಿ ಆ ಘೋರವಾದ ರಕ್ತಸಿಕ್ತಯುದ್ಧವನ್ನು ನಿಲ್ಲಿಸಬಹುದೆಂಬ ಅಪೇಕ್ಷೆಯಿಂದಿರಬಹುದು. ಇಲ್ಲಿ ಮತ್ತೊಂದು ಸೂಕ್ಷ್ಮವಿಷಯವನ್ನು ಗಮನಿಸಬೇಕು. ’ಸಂಜಯ’ (ಸಮ್ಯಕ್ ಜಯಃ ಯಸ್ಯ ಸಃ) ಅಂದರೆ, (ಕಾಮಕ್ರೋಧಾದಿ ಅರಿಷಡ್ವರ್ಗವನ್ನು) ’ಸಂಪೂರ್ಣವಾಗಿ ಗೆದ್ದವನು’, ಸ್ಥಿತಪ್ರಜ್ಞ, ನಿಸ್ಸ್ವಾರ್ಥಿ, ನಿಷ್ಪಕ್ಷಪಾತಿ ಎಂದರ್ಥ. ಆದುದರಿಂದ, ಪಕ್ಷಪಾತವಿಲ್ಲದೆ ಯುದ್ಧದಲ್ಲಿ ನಡೆದದ್ದನ್ನು ನಡೆದಂತೆಯೇ ಯಥಾರ್ಥವಾಗಿ ನಿರೂಪಿಸುತ್ತಾನೆ ಎಂಬ ಭರವಸೆಯಿಂದ ಧೃತರಾಷ್ಟ್ರನು ಸಂಜಯನನ್ನು ಆ ಕೆಲಸಕ್ಕೆ ನಿಯೋಜಿಸುತ್ತಾನೆ. (ಇದೇ ರೀತಿ, ಭೀಷ್ಮ, ಧರ್ಮರಾಯ, ದುರ್ಯೋಧನ, ಭೀಮ, ಶಕುನಿ, ಇತ್ಯಾದಿ ಅನ್ವರ್ಥನಾಮಗಳುಳ್ಳ ಪಾತ್ರಗಳಿಂದಲೂ ಈ ಕಥೆಗಳು ಕಾಲ್ಪನಿಕ ಎಂದು ಅನುಮಾನಿಸಬಹುದು.)
 ಮನುಷ್ಯನಿಗೆ ಕೆಲವು ಸಂದರ್ಭಗಳಲ್ಲಿ ತತ್‍ಕ್ಷಣ ಮರಣವನ್ನು ಹೊಂದಬೇಕೆಂದು ಇಚ್ಛೆಯಾಗುವುದು.   ಉದಾಹರಣೆಗೆ: ಸಹಮಾನವನಿಂದ ಚಿತ್ರಹಿಂಸೆಗೆ ಗುರಿಯಾದಾಗ (ಸ್ಪಾ~ನಿಷ್ ಇನ್‍ಕ್ವಿಸಿಷನ್, ಹೋಲೋಕಾಸ್ಟ್, ಇತ್ಯಾದಿ), ಭೂಕಂಪ, ತ್ಸುನಾಮಿ, ಮುಂತಾದ ಉಪದ್ರವಗಳಲ್ಲಿ ಸಾಯದೆಯೂ, ಯಾರೊಬ್ಬರ ಸಹಾಯವಿಲ್ಲದೆಯೂ ಕಟ್ಟಡಗಳ ಭಗ್ನಾವಶೇಷದ ಕೆಳಗೆ ಸಿಕ್ಕಿಬಿದ್ದಾಗ, ಯಾವುದಾದರೂ ಸಹಿಸಲಸಾಧ್ಯವಾದ ದೀರ್ಘಕಾಲೀನ ಯಾತನೆ, ಆಂತರೋಗ (terminal disease)  ಅಥವಾ ಅಚಿಕಿತ್ಸನೀಯ ವ್ಯಾಧಿಗಳಿಗೆ ತುತ್ತಾದಾಗ, ಇಚ್ಛಿಸಿದ ಕೂಡಲೇ ಸಾವು ಬರಬೇಕೆನ್ನಿಸುವುದು. ಹೀಗೆ, ಜೀವನವು ದುರ್ಭರವಾದಾಗ, ಮನುಷ್ಯನು ತನಗೆ ಬೇಕಾದ ಸಮಯದಲ್ಲಿ, ಇಷ್ಟಪಟ್ಟ ಕೂಡಲೇ ಮರಣ ಹೊಂದುವುದಕ್ಕೆ ಇಚ್ಛಾಮರಣ ಅಥವಾ ಸ್ವೇಚ್ಛಾಮರಣ ಎಂದು ಹೆಸರು. ಮಹಾಭಾರತದಲ್ಲಿ, ಕುರುಕುಲ ಪಿತಾಮಹ ಭೀಷ್ಮಾಚಾರ್ಯರು ಒಬ್ಬ ಇಚ್ಛಾಮರಣಿ. ಅವರಿಗೆ ಈ ಇಚ್ಛಾಮರಣಸಾಮರ್ಥ್ಯವು ತಂದೆ ಶಂತನು ಮಹಾರಾಜನಿಂದ ಒಂದು ವರಪ್ರದಾನವಾಗಿ ಬಂದಿತ್ತು. ಅದೊಂದು ವಿಜ್ಞಾನಕಲ್ಪನೆ. ಆ ವಿಜ್ಞಾನಕಲ್ಪನೆಯನ್ನು ಆಧುನಿಕ ವೈದ್ಯಶಾಸ್ತ್ರವು ಒಂದು ಪರಿವರ್ತಿತ ರೀತಿಯಲ್ಲಿ, ಅಂದರೆ ಸ್ವೇಚ್ಛಾಮರಣದ ಬದಲು ಪರೇಚ್ಛಾಮರಣವನ್ನಾಗಿಸಿದೆ. ಇದಕ್ಕೆ ಭೂವಿಖ್ಯಾತ ಉದಾಹರಣೆ: ೨೦೦೫ ರಲ್ಲಿ, ಅಮೆರಿಕದ ಫ಼್ಲಾರಿಡಾದಲ್ಲಿ ನಡೆದ ಟೆರಿ ಶಾವೋ (Terry Chiao) ಎಂಬ ಒಬ್ಬ ಮಹಿಳೆಯ ಸಾವಿನ ಜೀವನ ನಾಟಕ. ಮಸ್ತಿಷ್ಕಮೃತಳಾದ ಆ ಮಹಿಳೆಯನ್ನು, ಅವಳ ಮತಾಂಧತಾಯಿತಂದೆಯರೂ, ಕೆಲವು ಬಲಪಕ್ಷೀಯ ಸಂಪ್ರದಾಯನಿಷ್ಠ ಕ್ರೈಸ್ತಮತದವರೂ, ಅನುದಾತ್ತ ರಾಜಕಾರಣಿಗಳೂ ಮತ್ತು ಇತರ ಜೀವಪರ (’ಪ್ರೊ-ಲೈಫ಼್’) ಪಕ್ಷದವರೂ ಮೊಂಡುತನದಿಂದ ಹದಿನೈದು ವರ್ಷಗಳ ಕಾಲ, ಆಧುನಿಕ ವೈದ್ಯಕೀಯ ಸಾಧನಗಳಿಂದ ನಿಶ್ಚೇಷ್ಟ ಸ್ಥಿತಿಯಲ್ಲಿ ಇರಿಸಿದ್ದರು. ಆದರೆ, ಆ ಮಹಿಳೆಯು ಮಸ್ತಿಷ್ಕಮೃತಳಾದುದರಿಂದ ಯಾವ ಯಾತನೆಯನ್ನೂ ಅನುಭವಿಸಲಿಲ್ಲ, ಏಕೆಂದರೆ ಅವಳ ದೇಹದಲ್ಲಿ ಅನುಭವಶಕ್ತಿಯೇ ಇರಲಿಲ್ಲ!  ಆ ಕಾರಣ, ಅವಳ ವಿಷಯದಲ್ಲಿ ಸ್ವೇಚ್ಛಾಮರಣದ ಆವಶ್ಯಕತೆಯೂ ಇರಲಿಲ್ಲ, ಅದರ ಉಪಯುಕ್ತತೆಯೂ ಇರಲಿಲ್ಲ, ಏಕೆಂದರೆ ಅವಳಲ್ಲಿ ಮೊದಲಿಗೆ ಸ್ವೇಚ್ಛೆಯೇ ಇರಲಿಲ್ಲ. ಆದರೂ, ಆ ಮಹಿಳೆಯ (ಅಂತಿಮ) ಮರಣವು ಪರರ ಇಚ್ಛೆಗೆ ಅಧೀನ ವಾಗಿತ್ತು. ಕೊನೆಗೆ, ಸುಪ್ರೀಂ ಕೋರ್ಟ್ ತೀರ್ಮಾನದಿಂದ ಟೆರಿ ಶಾವೋವಿನ ಅಂತಿಮ ಮರಣವು ಸಾಧ್ಯವಾಯಿತು.
 ಅರ್ಜುನನು ಅಜ್ಞಾತವಾಸಕಾಲದಲ್ಲಿ ಬೃಹನ್ನಳೆಯಾಗಿ ವಿರಾಟರಾಜನ ರಾಣೀವಾಸದಲ್ಲಿರುವುದು, (ಭೀಷ್ಮನ ಪರಾಜಯಕ್ಕಾಗಿ,) ಶಿಖಂಡಿಯು ಹೆಣ್ಣಾಗಿ ಹುಟ್ಟಿ ಗಂಡಾಗುವುದು - ಈ ಪ್ರಸಂಗಗಳು ಲಿಂಗರೂಪಾಂತರದ ಸಮಸ್ಯೆ, ಅವಶ್ಯಕತೆ, ಅಭಿಲಾಷೆಗಳು ಹಿಂದಿನ ಕಾಲದಲ್ಲಿಯೂ ಇದ್ದುವೆಂದು ಸೂಚಿಸುವುವು. ಆ ಅಭಿಲಾಷೆಯ ಪುರೋಗದ ಸಾಫಲ್ಯವು ಈಗ ಆಧುನಿಕ ವೈದ್ಯಶಾಸ್ತ್ರದ ಕರಗತವಾಗಿದೆ. ಶಸ್ತ್ರಚಿಕಿತ್ಸೆಯಿಂದ (ಬಾಹ್ಯ) ಹೆಣ್ಣನ್ನು ಗಂಡಾಗಿ, (ಬಾಹ್ಯ) ಗಂಡನ್ನು ಹೆಣ್ಣಾಗಿ ರೂಪಾಂತರಿಸುವುದು ಈಗ ಸಾಮಾನ್ಯವಾಗಿದೆ. ಶಿಖಂಡಿಯ ವಿಷಯದಲ್ಲಿ ಲಿಂಗರೂಪಾಂತರ ಮಾತ್ರ ಆಯಿತು. ಆದರೆ, ಅರ್ಜುನನಿಗೆ ಮೊದಲು ಸಂದರ್ಭಕ್ಕೆ ಉಪಯುಕ್ತವಾದ ಸ್ತ್ರೀರೂಪಕ್ಕೆ ರೂಪಾಂತರ; ಮತ್ತೆ, ಅವನ ಸಂಧಿಗ್ಧ ಪರಿಸ್ಥಿತಿಯು ಪರಿಹಾರವಾದಮೇಲೆ, ಅವನ ನಿಜರೂಪಕ್ಕೆ ಪ್ರತಿರೂಪಾಂತರ, ಅಂದರೆ ಪರಿವರ್ತನಸಂಸ್ಕರಣ (’ರಿವರ್ಸ್ ಪ್ರೊಸೀಜರ್’) ಆದುದನ್ನು ಗಮನಿಸತಕ್ಕದ್ದು. ಇವೆಲ್ಲವೂ ಮಹಾ ವಿಜ್ಞಾನಕಲ್ಪನೆಗಳು.
 ಹೀಗೆಯೇ, ದುರ್ಯೋಧನನು ಜಲಸ್ಥಂಭಮಂತ್ರದಿಂದ ಕೆಲವು ದಿನಗಳು ವೈಶಂಪಾಯನ ಸರೋವರದ ಜಲದಲ್ಲಿ ಮುಳುಗಿ ಭೀಮನಿಗೆ ತಿಳಿಯದಂತೆ ಅವಿತುಕೊಂಡಿದ್ದುದ್ದು ಒಂದು ವಿಜ್ಞಾನಕಲ್ಪನೆ. ಅದು ಈಗಿನ ’ಡೈವಿಂಗ್ ಬೆಲ್’, ’ಡೈವಿಂಗ್ ಚೇಂಬರ್’, ’ಸ್ಕೂಬ ಡೈವಿಂಗ್’ ಸಲಕರಣೆ, ಮುಂತಾದುವುಗಳ ಪುರೋಗ.

ಈಗ, ರಾಮಾಯಣ ಮತ್ತು ಮಹಾಭಾರತದಲ್ಲಿರುವ ಕೆಲವು ವಿಜ್ಞಾನಾಂಶ ಮತ್ತು ಮನಶ್ಶಾಸ್ತ್ರದ
ವಿಚಾರಗಳನ್ನು ಪರಿಶೀಲಿಸೋಣ:
 ರಾಮಾಯಣದಲ್ಲಿ ಬರುವ ಅಹಲ್ಯಾವೃತ್ತಾಂತವು ನಮ್ಮೆಲ್ಲರಿಗೂ ತಿಳಿದ ಕಥೆಯೇ ಆಗಿದೆ. ಅಹಲ್ಯೆಯು ಇನ್ನೂ ಋತುವತ್ತಾದ ಅಥವಾ ಫಲವತ್ತಾದ (fertile) ಹೆಂಗಸು. ಆದುದರಿಂದ, ಅವಳಿಗೆ ಇನ್ನೂ ಲೈಂಗಿಕ ಚೋದನೆ ( libido), ರತ್ಯಾಸೆಯು ಬಹಳವಾಗಿದೆ. ಗಂಡ ಗೌತಮನು, ಹೆಂಡತಿಯನ್ನು ಆಶ್ರಮದಲ್ಲಿ ಬಿಟ್ಟು, ತಾನು ಇಂದ್ರಪದವಿಯನ್ನು ಪಡೆಯಬೇಕೆಂದು ತಪಸ್ಸಿನಲ್ಲಿ ನಿರತನಾಗಿದ್ದಾನೆ. (ಇದು, ಒಬ್ಬ ಆಧುನಿಕ ’ಕಾರ್ಪೊರೇಟ್ ಎಕ್ಸೆಕ್ಯುಟಿವ್’ ತನ್ನ ಪ್ರಗತಿ, ಪ್ರಖ್ಯಾತಿಗಳಲ್ಲಿ ಆಸಕ್ತನಾಗಿ, ಮನೆಯಲ್ಲಿ ಹೆಂಡತಿಯ ಸ್ತ್ರೀಸಹಜವಾದ ಆಸೆ, ಆಕಾಂಕ್ಷೆಗಳನ್ನು ಉಪೇಕ್ಷಿಸುವಂತೆ.) ಅದುಕಾರಣ, ಅಹಲ್ಯೆಯ ಕಾಮದಾಹಕ್ಕೆ ಉಪಶಮನವಿಲ್ಲದಾಗಿದೆ. ಆ ಸಂದರ್ಭಕ್ಕೆ ಸರಿಯಾಗಿ ಇಂದ್ರನು ಅಹಲ್ಯೆಯ ಸೌಂದರ್ಯಕ್ಕೆ ಮೋಹಗೊಂಡು, ಅವಳು ಏಕಾಂಗಿಯಾಗಿರುವ ಸಮಯವನ್ನು ನೋಡಿ ಆಶ್ರಮಕ್ಕೆ ಬರುತ್ತಾನೆ. ಕಾಮಾತುರಳಾದ ಅಹಲ್ಯೆಯು, ಇಂದ್ರನ ಪ್ರಣಯಸಂಧಾನಗಳಿಗೆ ಸುಲಭವಾಗಿ ಮನಸೋತು ಅವನಿಗೆ ವಶಳಾಗುತ್ತಾಳೆ. ಈ ಪ್ರಕರಣದಿಂದ, ರಾಮಾಯಣಕಾಲದಲ್ಲಿಯೂ ಹತಾಶೆಯ ಗೃಹಿಣಿಯರು (desperate housewives ) ಇದ್ದರು ಎನ್ನುವುದು ವಿದಿತವಾಗುವುದು. ಇಂತಹ ಮನೋವೃತ್ತಿಯು ಮುನಿಜನರಲ್ಲಿಯೇ ಇರಬೇಕಾದರೆ, ಇನ್ನು ಸಾಮಾನ್ಯಜನರ ಅವಸ್ಥೆಯೇನಾಗಿದ್ದೀತು? ಅಲ್ಲದೆ, ರಾಮಾಯಣದ ಕಾಲಕ್ಕೂ, ನಮ್ಮ ಆಧುನಿಕ ಕಾಲಕ್ಕೂ ಏನು ವ್ಯತ್ಯಾಸ? ಈ ಪ್ರಕರಣದಿಂದ, ಪ್ರಕೃತಿಗೆ, ಪ್ರಕೃತಿನಿಯಮಕ್ಕೆ, ಮಾನವಸ್ವಭಾವಕ್ಕೆ  ಕಾಲವ್ಯತ್ಯಾಸವಿಲ್ಲ ಎನ್ನುವುದು ಖಚಿತವಾಗುವುದು. ಮುಂದೆ, ಗೌತಮನ ಶಾಪದಿಂದ, ಇಂದ್ರನು ತನ್ನ ಎರಡು ವೃಷಣಗಳನ್ನೂ (testicles)  ಕಳೆದುಕೊಳ್ಳುತ್ತಾನೆ. ಅದಕ್ಕೆ ಪರಿಹಾರವಾಗಿ, ದೇವತೆಗಳು ಯಜ್ಞಪಶುವಾಗಿದ್ದಒಂದು ಮೇಕೆಯ ವೃಷಣಗಳನ್ನು ತಂದು ಇಂದ್ರನಿಗೆ ಅಂಟಿಸುತ್ತಾರೆ. ಇದನ್ನು ಇಂದಿನ ಪ್ರಾಣಿ-ಮಾನವ ಅಂಗವಿಕ್ಷೇಪದ (organ transplant ನ) ) ಪುರೋಗವೆಂದು ಪರಿಗಣಿಸಬಹುದು .
 ದ್ರೌಪದೀವಸ್ತ್ರಾಪಹರಣದ ಪ್ರಸಂಗದಲ್ಲಿ ಯಾವ ಕಲ್ಪನೆಯೂ ಇಲ್ಲ, ಯಾವ ಅಪ್ರಾಕೃತವೂ ಇಲ್ಲ. ಆದರೂ, ಆ ವೃತ್ತಾಂತದಲ್ಲಿ ಒಂದು ಪುಂಮನಶ್ಶಾಸ್ತ್ರವು  (male psychology ) ಅಡಗಿರುವುದನ್ನು ಕಾಣಬಹುದು. ತುಂಬಿದ ಕೌರವ ರಾಜಸಭೆಯಲ್ಲಿ, ಮಹಿಷಿಯಾದರೂ ಅಬಲೆಯಾದ ದ್ರೌಪದಿಯನ್ನು ಎಳೆತಂದು, ದುರುಳ ದುಶ್ಶಾಸನನು ಅವಳ ಸೀರೆಯನ್ನೆಳೆದು ಮಾನಭಂಗ ಮಾಡುತ್ತಿದ್ದಾಗ, ಭೀಷ್ಮ, ದ್ರೋಣ, ಕೃಪಾದಿ ಮಹಾಪ್ರಾಜ್ಞರು ಯಾವ ಕಾರಣ ಅಥವಾ ನೆಪದಿಂದಲೇ ಆಗಲಿ, ನೀತಿಬಾಹಿರರಂತೆ  ತೆಪ್ಪಗೆ ಕುಳಿತು ನೋಡುತ್ತಿದ್ದುದು, ಹೆಣ್ಣಿನ ನಗ್ನತೆಯನ್ನು ನೋಡಬೇಕೆಂಬ, ಪುರುಷರ ಸ್ವಭಾವಸಿದ್ಧ ವೀಕ್ಷಣವಾಂಛೆಯನ್ನು(voyeurism)  ಉದಾಹರಿಸುವುದು. ಈ ತೆರನಾದ ಖಂಡನೆಯನ್ನು ನಿವಾರಿಸಲೋಸುಗವೋ ಏನೋ, ಕೆಲವರು ದ್ರೌಪದೀವಸ್ತ್ರಾಪಹರಣದ ಪ್ರಸಂಗವು ಮಹಾಭಾರತದ ಮೂಲ, ಜಯಕಾವ್ಯದಲ್ಲಿ ಇಲ್ಲವೆನ್ನುತ್ತಾರೆ. ಆದರೆ, ಅದು ಯಥಾರ್ಥವೋ, ಇಲ್ಲವೋ, ಲೇಖಕರಿಗೆ ತಿಳಿಯದು, ಏಕೆಂದರೆ ಅವರು ಆ ಕಾವ್ಯವನ್ನು ಓದಿಲ್ಲ.
 ಶಂತನು ಮಹಾರಾಜನಿಗೆ ಗಂಗೆಯ ಗರ್ಭದಲ್ಲಿ ಭೀಷ್ಮನು ಜನಿಸಿದನು; ಸತ್ಯವತಿಯಲ್ಲಿ ಚಿತ್ರವೀರ್ಯ, ವಿಚಿತ್ರವೀರ್ಯ ಎಂಬ ಇಬ್ಬರು ಗಂಡುಮಕ್ಕಳು ಹುಟ್ಟಿದರು. ಚಿತ್ರವೀರ್ಯನು ಚಿಕ್ಕ ವಯಸ್ಸಿನಲ್ಲಿಯೇ ಖಾಯಿಲೆಯಿಂದ ಮೃತಿಹೊಂದುತ್ತಾನೆ. ವಿಚಿತ್ರವೀರ್ಯನಿಗೆ ಅಂಬಿಕೆ, ಅಂಬಾಲಿಕೆ ಎಂಬ ಇಬ್ಬರು ಹೆಂಡತಿಯರು. ಆದರೆ, ಅವನೂ ಸಹ ಸಂತಾನವಿಲ್ಲದೆಯೇ ಒಂದು ಯುದ್ಧದಲ್ಲಿ ಮಡಿಯುತ್ತಾನೆ. ತನ್ನ ತಂದೆ, ಶಂತನು ಮಹಾರಾಜನು ಸತ್ಯವತಿಯನ್ನು ಮದುವೆಯಾಗುವ ಮೊದಲು, ರಾಜನಿಗೆ ಸತ್ಯವತಿಯಲ್ಲಿ ಹುಟ್ಟುವ ಮಗನೇ ಮುಂದೆ ರಾಜನಾಗುವುದನ್ನು ಖಾತರಿಸಲು, ಭೀಷ್ಮನು ತಾನು ಎಂದೂ ರಾಜನಾಗುವುದಿಲ್ಲವೆಂದೂ ಮತ್ತು, ಆ ವಚನವನ್ನು ಸಾಧಿಸಲು, ಮದುವೆಯನ್ನು ಸಹ ಮಾಡಿಕೊಳ್ಳುವುದಿಲ್ಲವೆಂದೂ ಸತ್ಯವತಿಯ ತಂದೆಗೆ ಮಾತು ಕೊಟ್ಟಿದ್ದನು. ಆ ಕಾರಣ, ಈಗ ಕುರು ವಂಶದ ರಾಜ್ಯಕ್ಕೆ ಯಾರೂ ವಾರಸುದಾರರಿಲ್ಲವಾಯಿತು. ಹಿಂದೆ, ಸತ್ಯವತಿಗೆ ಪರಾಶರಮಹರ್ಷಿಯಿಂದ ಕೃಷ್ಣದ್ವೈಪಾಯನ ಎಂಬ ಇನ್ನೊಬ್ಬ ಮಗನಿದ್ದನು. ಅವನೇ ಮಹಾಭಾರತವನ್ನು (ಮಹಾಭಾರತದ ಮೂಲ, ಜಯಕಾವ್ಯವನ್ನು) ಬರೆದ ಮಹಾಕವಿ ವ್ಯಾಸಮಹರ್ಷಿ. ಸತ್ಯವತಿಯು, ತನ್ನ ಜ್ಯೇಷ್ಠ ಪುತ್ರ, ವ್ಯಾಸಮಹರ್ಷಿಯನ್ನು ಕರೆದು, ಅಂಬಿಕೆ, ಅಂಬಾಲಿಕೆಯರಲ್ಲಿ ಸಂತಾನೋತ್ಪತ್ತಿ ಮಾಡುವಂತೆ ಕೇಳಿಕೊಳ್ಳುತ್ತಾಳೆ. ತಾಯಿಯ ಆದೇಶಕ್ಕೆ ವ್ಯಾಸರು ಒಪ್ಪುತ್ತಾರೆ. (ಇಲ್ಲಿ, ವ್ಯಾಸರು ವಿಚಿತ್ರವೀರ್ಯನ ಇಬ್ಬರು ವಿಧವೆಯರನ್ನೂ ವಿವಾಹವಾದರು, ಎಂಬ ಪಾಠಾಂತರವಿದೆ.)  ವ್ಯಾಸರ ಶಯ್ಯಾಗೃಹಕ್ಕೆ ಹೋಗುವಾಗ, ಅಂಬಿಕೆ, ಅಂಬಾಲಿಕೆ ಇಬ್ಬರೂ ಹಿಂಜರಿದು, ತಮ್ಮ ಅಂತಃಪುರದ ದಾಸಿಯೊಬ್ಬಳನ್ನು ಒಳಕ್ಕೆ ಕಳುಹಿಸುತ್ತಾರೆ. ಆ ದಾಸಿಯು ಸ್ವಲ್ಪವೂ ಅಳುಕದೆ ಸಂತೋಷದಿಂದ ಭಕ್ತಿಯುತಳಾಗಿ ವ್ಯಾಸರ ಬಳಿಗೆ ಹೋಗುತ್ತಾಳೆ. ಅವಳು ಗರ್ಭವತಿಯಾಗಿ ಪರಮ ಭಾಗವತನಾದ ವಿದುರನನ್ನು ಪಡೆಯುತ್ತಾಳೆ. ಮಾರನೆಯ ದಿನ, ಅಂಬಿಕೆಯು ಒಳಕ್ಕೆ ಹೋಗಲು ಒಪ್ಪುತ್ತಾಳೆ. ಆದರೆ, ಸಂಸರ್ಗದ ಸಮಯದಲ್ಲಿ, ಎರಡು ಕಣ್ಣುಗಳನ್ನೂ ಗಟ್ಟಿಯಾಗಿ ಮುಚ್ಚಿಕೊಂಡು ಬಿಡುತ್ತಾಳೆ. ಆ ಕಾರಣ, ಮುಂದೆ ಅವಳಿಗೆ ಜಾತ್ಯಂಧನಾದ ಧೃತರಾಷ್ಟ್ರನು ಹುಟ್ಟುತ್ತಾನೆ. ಮೂರನೆಯ ದಿವಸ, ಅಂಬಾಲಿಕೆಯ ಸರದಿ. ವ್ಯಾಸರ ಬಳಿಗೆ ಹೋದಾಗ, ಅವಳು ಭಯಪಟ್ಟು ಬಿಳಿಚಿಕೊಂಡು ಬಿಡುತ್ತಾಳೆ; ಭಯಕ್ಕೆ ಅವಳ ಚರ್ಮದಿಂದ ರಕ್ತವೆಲ್ಲಾ ಶೋಷಿತವಾಗಿ ಬಿಡುವುದು. ಅದರಿಂದ, ಅವಳಿಗೆ ಪಾಂಡುರೋಗ, ಅಂದರೆ ಬಿಳಿತೊನ್ನು ರೋಗ, ಇರುವ ಪಾಂಡುರಾಯನು ಜನಿಸುತ್ತಾನೆ. ಇಲ್ಲಿ, ಕೆಲವು ಧರ್ಮಶುದ್ಧಿವಾದಿಗಳು   (puritans) , "ಪ್ರತ್ಯಕ್ಷ ಮೈಥುನವು ನಡೆಯಲಿಲ್ಲ; ವ್ಯಾಸರು ತಮ್ಮ ತಪೋಶಕ್ತಿಯಿಂದಲೇ ಆ ಮೂವರು ಹೆಂಗಸರನ್ನೂ ಗರ್ಭವತಿಯರನ್ನಾಗಿಸಿದರು." ಎಂದು ಅಭಿಪ್ರಾಯಪಡುತ್ತಾರೆ. ಹಾಗಾದರೆ, ಆ ಮಹಿಳೆಯರು ವ್ಯಾಸರ ಶಯ್ಯಾಗೃಹಕ್ಕೆ, ಅದೂ ಒಬ್ಬೊಬ್ಬರೇ, ಏಕೆ ಹೋಗಬೇಕಾಗಿತ್ತು? ಎನ್ನುವ ಪ್ರಶ್ನೆ ಏಳುವುದು. ಇರಲಿ, ಧರ್ಮಶುದ್ಧಿವಾದಿಗಳ ಅಭಿಪ್ರಾಯವನ್ನೇ ಅನುಮೋದಿಸಿದರೂ, ಅದನ್ನು ಇಂದಿನ ಅಸ್ವಾಭಾವಿಕ ಅಥವಾ ಕೃತಕ ವೀರ್ಯನಿಕ್ಷೇಪದ, ಅಂದರೆ artificial insemination ನ, ಪುರೋಗ ಎಂದು ಪರಿಗಣಿಸಬಹುದು.
 ಈಗ, ಇಲ್ಲಿ ವಿಜ್ಞಾನವನ್ನು ಪರಿಶೀಲಿಸುವ ಮೊದಲು, ಕೆಲವು ಸಾಮಾಜಿಕ ಅಂಶಗಳನ್ನು ಗಮನಿಸಬೇಕು. ಹಿಂದೆ ಸಮಾಜದಲ್ಲಿ ಎಷ್ಟು ನಮನೀಯತೆ ಇತ್ತು, ಎಷ್ಟು ಸಹನೆ, ಸಂಧಾನಭಾವ ಇತ್ತು ಎನ್ನುವುದು ಮೇಲೆ ಹೇಳಿರುವ ಪ್ರಸಂಗಗಳಿಂದಲೂ, ಮತ್ತು ಶಾಕುಂತಲೆಯ ಜನನ, ಕರ್ಣನ ಮತ್ತು ಪಾಂಡವರ ಜನನ, ಮುಂತಾದ ಇತರ ಸಂಭವಗಳಿಂದಲೂ ತಿಳಿದುಬರುವುದು. ಧರ್ಮಯುಗ, ಪವಿತ್ರಕಾಲ ಎನ್ನುವ ಆ ಪ್ರಾಚೀನಕಾಲದಲ್ಲಿಯೂ ಈಗಿನ ಕಾಲದ ಸಮಸ್ಯೆಗಳೆಂದು ಪರಿಗಣಿಸಲ್ಪಡುವ ಬಹಿರ್ದಾಂಪತ್ಯಪ್ರಣಯ (extra marital affair), , ವಿವಾಹಪೂರ್ವರತಿ (premarital sex),  ಹದಿವಯರತಿ (teenage sex),  ಹದಿವಯಬಸಿರು  (teenage pregnancy)  ಮುಂತಾದುವು ಸಾಧಾರಣವಾಗಿತ್ತು ಎನ್ನುವುದು ವಿಶದವಾಗುವುದು. ಅಷ್ಟೇ ಅಲ್ಲ. ಪರಸ್ತ್ರ್ರೀಯಲ್ಲಿ ಅಥವಾ ಪರಪುರುಷನಿಂದ ಹುಟ್ಟಿದ ಮಗುವನ್ನು ಅಧರ್ಮಜಶಿಶು, ಅನೌರಸಶಿಶು (illegitimate child)  ಎಂದು ಅನಾದರಿಸುವುದಾಗಲೀ, ನಿರಾಕರಿಸುವುದಾಗಲೀ ಇರಲಿಲ್ಲವೆಂದೂ ತೋರುವುದು. ಮಹರ್ಷಿ ವೇದವ್ಯಾಸರೇ ಒಬ್ಬ ಅನೌರಸ (ವಿವಾಹಪೂರ್ವಜನಿತ) ಶಿಶು! ನಮ್ಮ ಪ್ರಸ್ತುತ ಹಿಂದು ಸಮಾಜದಲ್ಲಿ ಕಾಣ್ಬರುವ ವೈಜಾತ್ಯ, ಹಾದರಜನ್ಮ, ಮತೋತ್ತಮತೆ, ಮೇಲುಜಾತಿ, ಕೀಳುಜಾತಿ ಎನ್ನುವುದೆಲ್ಲವೂ ಕೇವಲ ಇತ್ತೀಚಿನ ವಿದ್ಯಮಾನಗಳೆಂದು ತೋರುವುದು. ಇನ್ನೊಂದು ಗಮನಾರ್ಹವಾದ ವಿಷಯ: ಗಂಡಸರಿಗೆ ಸಾಮಾನ್ಯವಾಗಿ ಬಹುಪತ್ನೀಕಚಿಂತನೆ (polygamous thoughts), ಆಕರ್ಷಣೀಯ ತರುಣಿಯರಮೇಲೆ ತಾತ್ಕಾಲಿಕ ಮೋಹಾವಿಷ್ಟತೆ, ನಿರಂತರವಿಲಾಸಾಲೋಚನೆ ಮುಂತಾದ ಲೈಂಗಿಕವ್ಯಸನಗಳು ಇರುವುದು ಎಲ್ಲರಿಗೂ ತಿಳಿದಿರುವ ರಹಸ್ಯವೇ. ಅದರಂತೆಯೇ, ಹೆಂಗಸರಿಗೂ ಬಹುಪತಿಕಾಲೋಚನೆ (polyandrous  thoughts),  ಇರುವುದು, ದಷ್ಟಪುಷ್ಟ ಪುರುಷರನ್ನು, ಪ್ರತಿಭಾವಂತ, ಬುದ್ಧಿವಂತ ಅಥವಾ ಕಲಾವಂತ ಪುರುಷರನ್ನು ಕಂಡು, ಆಂತರ್ಯವಾಗಿಯಾದರೂ, ಅವರಲ್ಲಿ ಮೋಹಗೊಳ್ಳುವುದು, ಅವರನ್ನು ಇಚ್ಛೆಪಡುವುದು, ಮುಂತಾದ ಮನೋವಿಕಾರಗಳು ನಾವು ಯೋಚಿಸುವಷ್ಟು ಅಪರೂಪವೇನಲ್ಲ ಎನ್ನುವುದೂ ವಿದಿತವಾಗುವುದು. ಉದಾಹರಣೆಗೆ: ಕುಂತಿಯ ಮಾತಿನ ನೆಪಮಾತ್ರದಿಂದಲೇ ದ್ರೌಪದಿಯು, ಯಾವ ಪ್ರತಿಭಟನೆಯೂ ಇಲ್ಲದೆ, ಐದು ಮಂದಿ ಪಾಂಡವರನ್ನೂ ಮದುವೆಯಾಗಲು ಒಪ್ಪಿದುದು ಅವಳ ಬಹುಪತಿಕಾಭಿಲಾಷೆಯನ್ನು ಸೂಚಿಸುವುದು. ಅಷ್ಟೇ ಅಲ್ಲದೆ, ಮುಂದೆ, ಅವಳು ಕರ್ಣನನ್ನು ಕಂಡಾಗ, "ಅವನೂ ನನ್ನ ಗಂಡನಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು" ಎಂದುಕೊಂಡಳಂತೆ. ಇತ್ತೀಚಿನ ವೈಜ್ಞಾನಿಕ ಸಂಶೋಧನೆಗಳಿಂದ, ಅಂಡೋತ್ಸರ್ಜನ (ovulation)  ಸಮಯದಲ್ಲಿ ಹೆಂಗಸರು, ಅದರಲ್ಲೂ ದಾಂಪತ್ಯಸುಖದಲ್ಲಿ ಹತಾಶರಾದ ಅಥವಾ ಅತೃಪ್ತರಾದ ಹೆಂಗಸರು, ಬಾಲವಿಧವೆಯರು ಹಾದರಿಸುವುದು ಅಥವಾ ಮಾನಸಿಕವಾಗಿಯಾದರೂ ಹಾದರ ಯೋಚನೆ ಮಾಡುವುದು ಅವರ ಪ್ರಕೃತಿಸಹಜಶೀಲ ಎನ್ನುವುದು ವರದಿಯಾಗಿದೆ.  (Two New Studies Find Women More Likely to Cheat During Ovulation, ABC News, 4 Jan 2006). ). ದಾಂಪತ್ಯವಿರಸವಿದ್ದಾಗ, ಗಂಡನ ಪ್ರೇಮದಲ್ಲಿ ಅನುಮಾನವಿದ್ದಾಗ, ಗಂಡನಿಂದ ತನ್ನ ರತ್ಯಾಸೆಯು ತೃಪ್ತಿಕರವಾಗಿ ಈಡೇರದಿದ್ದಾಗ, ಇತ್ಯಾದಿ ಪರಿಸ್ಥಿತಿಗಳಲ್ಲಿ ಹೆಂಡತಿಗೆ ಪರಪುರುಷರ ಮೇಲೆ ಮನಸ್ಸಾಗುವುದು ಸಹಜ. ಆದರೆ, ಸಾಮಾಜಿಕ, ಸಾಂಸಾರಿಕ, ವೈಯ್ಯಕ್ತಿಕ ಮುಂತಾದ ನಾನಾ ಕಾರಣಗಳಿಂದಾಗಿ ಹೆಂಗಸರು ತಮ್ಮ ಬಹುಪತಿಕಚಿಂತನೆಯನ್ನಾಗಲೀ, ವಿಲಾಸಾಲೋಚನೆಯನ್ನಾಗಲೀ ಒಪ್ಪಿಕೊಳ್ಳುವುದೂ ಕಷ್ಟ, ವ್ಯಕ್ತಪಡಿಸುವುದು ಮತ್ತೂ ಕಷ್ಟ. ತನ್ನ ಮಕ್ಕಳ ಪುರೋಭಿವೃದ್ಧಿಗಾಗಿ, ತನ್ನ ಸಂಸಾರದ ಹಿತಕ್ಕಾಗಿ ಒಬ್ಬ ಹೆಣ್ಣು ದಾಂಪತ್ಯಸ್ಥಿರತೆಯನ್ನೂ, ಸಂಸಾರಭದ್ರತೆಯನ್ನೂ ಆಶಿಸುತ್ತಾಳೆ. ಆ ಕಾರಣಕ್ಕಾಗಿಯಾದರೂ ಅವಳು ಏಕಪತಿತ್ವವನ್ನು ಅನುಸರಿಸುತ್ತಾಳೆ. ಹಾಗೆಯೇ ಪುರುಷನೂ, ಸಮಾಜದಲ್ಲಿ ತನ್ನ ಗೌರವ, ಗಣ್ಯತೆಯನ್ನು ಕಾಪಾಡಿಕೊಳ್ಳಬೇಕೆಂದು ದಾಂಪತ್ಯಸ್ಥಿರತೆ, ಸಂಸಾರಭದ್ರತೆಯನ್ನಾಶಿಸುವುದು, ಅನುಸರಿಸುವುದು ಬಹಳ ಸಾಮಾನ್ಯವಾದುದು.
 ಇನ್ನು ವಿಜ್ಞಾನಾಂಶವನ್ನು ಪರಿಶೀಲಿಸೋಣ. ದಾಸಿಯು ಶುದ್ಧ ಮನಸ್ಕಳಾಗಿ ಶ್ರದ್ಧಾಭಕ್ತಿಯಿಂದ ವ್ಯಾಸರೊಂದಿಗೆ ಕೂಡಿ ಗರ್ಭಧಾರಣೆ ಮಾಡಿದಳು. ಅದಕ್ಕನುಗುಣವಾಗಿ ಅವಳಿಗೆ ಪ್ರಾಜ್ಞನೂ, ಮಹಾಮೇಧಾವಿಯೂ ಆದ ವಿದುರನು ಜನಿಸಿದನು. ಅದೇ ಅಂಬಿಕೆಯು ವ್ಯಾಸರೊಂದಿಗೆ ಸಂಸರ್ಗವನ್ನು ಕಣ್ಣುಮುಚ್ಚಿಕೊಂಡು ಸಹಿಸಿದಳೇ ಹೊರತು, ನಿರಾಳಮನಸ್ಸಿನಿಂದ, ಆನಂದದಿಂದ ರತಿಸುಖವನ್ನು ಅನುಭವಿಸಲಿಲ್ಲ. ತತ್ಪರಿಣಾಮವಾಗಿ, ಅವಳಿಗೆ ಧೃತರಾಷ್ಟ್ರನು ಅಂಧನಾಗಿ (ಅಲ್ಲದೆ, ಮಂದನೂ ಆಗಿ) ಹುಟ್ಟಿದನು. ಹಾಗೆಯೇ, ಅಂಬಾಲಿಕೆಯೂ ಸಹ ಸುರತಸಮಯದಲ್ಲಿ ಭಯಪಟ್ಟು ಬಿಳಿಚಿಕೊಂಡ ಕಾರಣ, ಅವಳು ದೇಹಾದ್ಯಂತ ಪಾಂಡುರೋಗ ಪೀಡಿತನಾದ ಪಾಂಡುರಾಯನನ್ನು ಹಡೆದಳು.
 ಈ ಮೇಲಿನ ಉದಾಹರಣೆಗಳಿಂದ, ಗರ್ಭಗ್ರಹಣಸಮಯದಲ್ಲಿ ಭಾವಿ ತಾಯಿಯ ಮನೋವೃತ್ತಿಯು ಒಳಗೆ ಬುದ್ಬುದಾಕಾರವನ್ನು ತಳೆಯುತ್ತಲಿರುವ ಶಿಶುವಿನ ಮೇಲೆ ಎಷ್ಟು ಮಟ್ಟಿಗೆ ಪರಿಣಾಮವನ್ನುಂಟುಮಾಡುವುದು ಎಂದು ತಿಳಿಯುವುದು. ಈ ತೆರನಾದ ಪರಿಣಾಮವು ರತಿಸಮಯದಲ್ಲಿನ ತಂದೆಯ ಮನೋಭಾವಕ್ಕೂ ಅನ್ವಯಿಸುವುದು ಎಂದು ಹೇಳಲವಶ್ಯಕತೆಯಿಲ್ಲ. ಈ ಕಾರಣದಿಂದಲೇ, ಶಯ್ಯಾಗೃಹದಲ್ಲಿ ಇರುವ ಯಾವ ವಸ್ತುವೂ ಮನೋಲ್ಲಾಸಕರವೂ, ಆನಂದದಾಯಕವೂ ಆಗಿರಬೇಕೆಂದು ಹಿರಿಯರು ಹೇಳುವುದು. ಇದೇ ಜ್ಞಾನವನ್ನು ಜೂಜು ಕುದುರೆಗಳ ಮತ್ತು ಸೈನ್ಯ ಕುದುರೆಗಳ ತಳಿವರ್ಧನೆಯಲ್ಲಿ ಉಪಯೋಗಿಸುತ್ತಾರೆಂದು ಹೇಳುತ್ತಾರೆ. ಗರ್ಭಧಾರಣೆಯಾದನಂತರವೂ ನಿರೀಕ್ಷಕ (expectant) ತಾಯಿಯ ಮನೋಧರ್ಮವೂ, ಅವಳ ಅಭ್ಯಾಸ, ನಡವಳಿಕೆಗಳೂ ಗರ್ಭದಲ್ಲಿರುವ ಶಿಶುವಿನ ಮೇಲೆ ಸಾಕಷ್ಟು ಪರಿಣಾಮವನ್ನು ಉಂಟುಮಾಡುವುದೆಂದು ತಿಳಿದಿದೆ. ಸುಭದ್ರಾರ್ಜುನರ ಮಗ ಅಭಿಮನ್ಯುವು ಮಹಾಭಾರತಯುದ್ಧದಲ್ಲಿ ಚಕ್ರವ್ಯೂಹವನ್ನು ಭೇದಿಸಿ ಒಳಹೊಕ್ಕು, ಶತ್ರುಗಳನ್ನು ಸದೆಬಡಿದಮೇಲೆ,  ವ್ಯೂಹದಿಂದ ಹೊರಕ್ಕೆ ಬರುವುದು ತಿಳಿಯದೆ, ಶತ್ರುಗಳ ಕೈಗೆ ಸಿಕ್ಕಿ ಮರಣಹೊಂದಿದುದು ಒಂದು ಉದಾಹರಣೆ. ಇದು ನಮ್ಮೆಲ್ಲರಿಗೂ ತಿಳಿದಿರುವ ಗರ್ಭಿಣಿಯಾದ ಸುಭದ್ರಾಳೊಂದಿಗೆ ಅವಳ ಅಣ್ಣ ಶ್ರೀಕೃಷ್ಣನು ಮಾಡಿದ ಸಂವಾದದ ಕಥೆ. ಅದೊಂದು ಪುರಾಣಕಥೆ. ಆದರೆ, ಇತ್ತೀಚಿಗೆ, ಅಂದರೆ ಮೇ ೨೦೦೬ ರಲ್ಲಿ, ಪ್ರಕಟವಾದ ಒಂದು ವಿಜ್ಞಾನ ಸಂಶೋಧನ ವರದಿಯಲ್ಲಿ, ನಿರೀಕ್ಷಕ ತಾಯಿಯ ಕೇವಲ ಅಶನಪದ್ಧತಿಯು ಸಹ ಹೇಗೆ ಅವಳ ಗರ್ಭದಲ್ಲಿರುವ ಶಿಶುವಿನ ಮುಂದಣ ಅಶನಪದ್ಧತಿಯನ್ನು ನಿರ್ಧರಿಸುವುದು ಎಂದು ಹೇಳಿದೆ. ಆದುದರಿಂದಲೇ, ಗರ್ಭಿಣಿಯರು ಸದಾ ಸದ್ಭಾವನೆ, ಸದ್ಯೋಚನೆ, ಸದ್ವರ್ತನೆ ಮತ್ತು ಯೋಗ್ಯಾಹಾರಪದ್ಧತಿಗಳಲ್ಲಿ ಪ್ರವರ್ತಿಸುವುದು ಅವಶ್ಯಕ. ಇಲ್ಲಿ ತಾಯಂದಿರ ಜವಾಬ್ದಾರಿ ಸ್ವಲ್ಪ ಗುರುತರ, ನಿಜ. ಆದರೆ ಅದು ಪ್ರಾದೇಶಿಕಫಲವಷ್ಟೆ.

*         *         *

 
ಮೇಲೆ ನಿರ್ದೇಶಿಸಿರುವುದು ಸರ್ವಸಾರಪಟ್ಟಿಯಲ್ಲ. ಇನ್ನೂ ಅನೇಕ ವಿಜ್ಞಾನಕಲ್ಪನೆಗಳು, ಮಾನವಮನಃಶಾಸ್ತ್ರಾಂಶಗಳು, ವೈಜ್ಞಾನಿಕ ಮತ್ತು ಸಾಮಾಜಿಕಾಂಶಗಳು, ರಾಮಾಯಣ, ಮಹಾಭಾರತ ಕಥೆಗಳಲ್ಲಿ, ಹೇರಳವಾಗಿವೆ. ಕೆಲವು ದೃಷ್ಟಾಂತಗಳು ಕಥೆಯ ಸ್ವಾರಸ್ಯವನ್ನು ಹೆಚ್ಚಿಸಿ, ಓದುಗರಲ್ಲಿ ಹೆಚ್ಚು ಕುತೂಹಲವನ್ನುಂಟುಮಾಡುವುವು. ಮತ್ತೆ ಕೆಲವು ಪ್ರಸಂಗಗಳು ಒಂದು ವ್ಯಕ್ತಿಯ ಅಥವಾ ಒಂದು ಸನ್ನಿವೇಶದ ಮಹತ್ವವನ್ನು ಎತ್ತಿ ತೋರಿಸುವುವು. ಹುಟ್ಟಿದ ಕೂಡಲೇ ಆಂಜನೇಯನು ಸೂರ್ಯವನ್ನು "ಕೀಳಲು" ಆಕಾಶಕ್ಕೆ ಹಾರಿದುದು ಯಥಾರ್ಥವಲ್ಲ. ಆದರೆ, ಅದು ಆಂಜನೇಯನ ವ್ಯಕ್ತಿತ್ವಕ್ಕೆ ಮತ್ತು ರಾಮಾಯಣಕಥೆಗೇ ಒಂದು ಬಗೆಯ ಸೊಗಸನ್ನು ತರುವುದು. ಅಲ್ಲದೆ, ಮುಂದೆ ರಾಮಾಯಣದಲ್ಲಿ ಸೀತಾನ್ವೇಷಣೆಗೆ ಮತ್ತು ಓಷಧಿಪರ್ವತವನ್ನು ತರುವುದಕ್ಕೆ ಉಪಯುಕ್ತವೂ, ಅವಶ್ಯವೂ ಆದ, ಹನುಮಂತನ ಉತ್ಪತನಶಕ್ತಿಯ ಮಹತ್ವವನ್ನು ಮುನ್ಸೂಚಿಸುವುದು. ಹಾಗೆಯೇ, ರಾವಣನಿಗೆ ಹತ್ತು ತಲೆಗಳಿರುವುದು ಒಂದು ಲಕ್ಷಣ ಮಾತ್ರ. ಆ ಹತ್ತು ತಲೆಗಳು ಮಾನವನ ಐದು ಜ್ಞಾನೇಂದ್ರಿಯಗಳನ್ನೂ ಮತ್ತು ಐದು ಕರ್ಮೇಂದ್ರಿಯಗಳನ್ನೂ ಪ್ರತಿನಿಧಿಸುವುವು. ರಾವಣವಧೆಯಾದನಂತರ, ಹನುಮಂತನು, ಸೀತೆಯನ್ನು ರಾಮನ ಸನ್ನಿಧಾನಕ್ಕೆ ಕರೆತರಲು, ಅವಳ ಬಳಿಗೆ ಹೋದಾಗ, ಆ ಸಾಧ್ವಿಯ ಸುತ್ತಲೂ ಕಾವಲಿದ್ದ ಮತ್ತು ಹಿಂದೆ ಅವಳಿಗೆ ಬಹಳವಾಗಿ ಕಿರುಕುಳ ಕೊಡುತ್ತಿದ್ದ, ರಾಕ್ಷಸಿಯರನ್ನು ನೋಡಿ, ಬಹು ರೋಷಯುಕ್ತನಾಗಿ ಅವರನ್ನೆಲ್ಲಾ ಕೊಲ್ಲಲು ಸಿದ್ಧಗೊಳ್ಳುತ್ತಾನೆ. ಆಗ ರಾಕ್ಷಸಿಯರೆಲ್ಲಾ ಭಯದಿಂದ ಸೀತಾದೇವಿಯಲ್ಲಿ ಶರಣು ಹೋಗುತ್ತಾರೆ. ಆ ಸಮಯದಲ್ಲಿ, ಸೀತೆಯು ಆಂಜನೇಯನನ್ನು ತಡೆದು, ಅವನ ಕೋಪಶಮನ ಮಾಡಲು, ಅವನಿಗೊಂದು ಕರಡಿ ಕಥೆಯನ್ನು ಹೇಳುತ್ತಾಳೆ. ಆ ಕಥೆಯು, ಪ್ರಾಣಿಮಾತ್ರವಾದ ಒಂದು ಕರಡಿಯ ನಡತೆಯ ಮೂಲಕ, ಶರಣಾಗತವಾತ್ಸಲ್ಯದ ಶ್ರೇಷ್ಠತೆಯನ್ನು ಒತ್ತಿ ಸಾರುವುದಲ್ಲದೆ, ಮಾನವನ ಸ್ವಾರ್ಥಪರತೆ ಮತ್ತು ಕೃತಘ್ನತೆಯನ್ನು ಎತ್ತಿ ತೋರಿಸುವುದು.
 ಈ ಪ್ರಾಚೀನ ಕೃತಿಗಳಲ್ಲಿ ಹಲವಾರು ಸಾರ್ವ್ವತ್ರಿಕ ಮತ್ತು ಸರ್ವಕಾಲಿಕ ಸತ್ಯಗಳೂ, ಸದ್ಬೋಧನೆಗಳೂ, ನೀತಿಗಳೂ ಹೇಗೆ ತುಂಬಿರುವುವೋ ಹಾಗೆಯೇ ಅನೇಕ ಅಸಂಬದ್ಧ ವೃತ್ತಾಂತಗಳೂ, ವಿರುದ್ಧವಚನಗಳೂ, ಪ್ರಾಕೃತ ಘಟನೆಗಳಿಗೆ ಕಲ್ಪಿತ ವಿವರಣೆಗಳೂ, ಮುಂತಾಗಿ ಸೇರಿಕೊಂಡಿರುವುವು. ಹಿಂದಿನ ಕಾಲದಲ್ಲಿ, ಪ್ರಕೃತಿವಿಚಾರವಾಗಿ ಜನಗಳಿಗಿದ್ದ ಸ್ವಾಭಾವಿಕ ಅಜ್ಞಾನದಿಂದ ಆ ರೀತಿಯ ತಪ್ಪು ತಿಳಿವಳಿಕೆ ಸಮಾಜದಲ್ಲಿದ್ದುದು ಅನಿವಾರ್ಯವಾದುದೇ; ಅದರಲ್ಲಿ ಆಶ್ಚರ್ಯವೇನಿಲ್ಲ. ಆದರೆ, ಈಗ ನಾವು ಅವುಗಳನ್ನೆಲ್ಲಾ ಕೂಲಂಕುಷವಾಗಿ ವಿಚಾರಿಸಿ, ವೈಜ್ಞಾನಿಕವಾಗಿ ವಿಶ್ಲೇಶಿಸಿ ಅರ್ಥಮಾಡಿಕೊಂಡರೆ, ಆ ಕೃತಿಗಳ ಮಹತ್ವವೂ, ಸೌಂದರ್ಯವೂ ಮತ್ತೂ ಹೆಚ್ಚು ವ್ಯಕ್ತವಾಗಿ, ಮನಸ್ಸಿಗೆ ಮಹದಾನಂದವಾಗುವುದು,