Tuesday, November 19, 2013

ಡಾ.ಎಂ.ಎಂ. ಕಲಬುರ್ಗಿ

 
ಎಚ್‌.ಶೇಷಗಿರಿರಾವ್‌













ಬಹುಮುಖಿ ವಿದ್ವಾಂಸ  ಡಾ. ಎಂ.ಎಂ. ಕಲಬುರ್ಗಿ
 ಕರ್ನಾಟಕ ಏಕೀಕರಣವಾಗಿ ಅರವತ್ತು ವರ್ಷದ ಮೇಲೆ ಆದರೂ ಹೈದ್ರಾಬಾದ್‌ ಕರ್ನಾಟಕ, ಮುಂಬಯಿ ಕರ್ನಾಟಕ ಮತ್ತು ಹಳೆಮೈಸೂರು ವಿಭಾಗಗಳ ಅಬಿವೃದ್ಧಿಯಲ್ಲಿ ಅಸಮಾನತೆಯ ದೂರು ಇದ್ದೇಇದೆ. ಡಾ. ಡಿ.ಎಂ.ನಂಜುಂಡಪ್ಪ ವರದಿಯ ಪ್ರಕಾರ ಕೈಗಾರಿಕೆ ನೀರಾವರಿ, ತಲಾಆದಾಯದಲ್ಲಿ ಹಳೆಯಮೈಸೂರು ವಿಭಾಗವು ಮುನ್ನೆಡೆ ಸಾಧಿಸಿದೆ. ಉತ್ತರ ಕರ್ನಾಟಕ ಅನೇಕ ವಿಷಯಗಳಲ್ಲಿ ಹಿಂದುಳಿದಿದೆ. ಆದರೆ ಮೊದಲಿನಿಂದಲೂ   ಉತ್ತರಕಕರ್ನಾಟಕವು  ಸಾಹಿತಿಕ ಮತ್ತು ಸಾಂಸ್ಕೃತಿಕವಾಗಿ ಎಂದೂ ಹಿಂದೆ ಬಿದ್ದಿಲ್ಲ ಅಂದು ಹಳೆ ಮೈಸೂರು ಭಾಗದಲ್ಲಿ ಕುವೆಂಪು ಇದ್ದರೆ ಉತ್ತರಕರ್ನಾಟಕದಲ್ಲಿ ದ.ರಾ.ಬೇಂದ್ರೆ. ಅಲ್ಲಿ ಮೈಸೂರು ಸಾಂಸ್ಕೃತಿಕ ರಾಜಧಾನಿಯಾದರೆ ಈ ಭಾಗದಲ್ಲಿ ಧಾರವಾಡಕ್ಕೆ ಆ ಹೆಸರು ಮೀಸಲು ಎರಡೂ ಕವಿಗಳ,ಸಾಹಿತಿಗಳ ಸಂಗಿತಗಾರ ನೆಲೆಬೀಡು  ಧಾರವಾಡದಲ್ಲಿ ನಿಂತು ಎಲ್ಲಿ ಕಲ್ಲು ಎಸೆದರೂ ಯಾರೋ ಒಬ್ಬ ಸಾಹಿತಿಯ ಮನೆಯ ಮೇಲೆ ಬೀಳುವುದು ಎನ್ನುವುದು ಉತ್ಪ್ರೇಕ್ಷೆಯ ಮಾತು ಅಲ್ಲ. ಅಷ್ಟೇ ಏಕೆ  ರಾಜ್ಯದಲ್ಲಿ ಪ್ರತಿಷ್ಠಿತ  ಜ್ಞಾನಪೀಠಪ್ರಶಸ್ತಿ ಪುರಸ್ಕತರಲ್ಲಿ ಸಿಂಹಪಾಲು ಉತ್ತರ ಕರ್ನಾಟಕದ ಸಾಹಿತಿಗಳಿಗೆ. ಇಂದೂ ಕೂಡಾ ನಮ್ಮ ನಾಡಿನ   ಪ್ರಮುಖ ಸಂಶೋಧಕರು ಎಂದರೆ ನೆನಪಿಗೆ ಬರುವುದು ಇಬ್ಬರು . ಹಳೆ ಮೈಸೂರು ಭಾಗದಲ್ಲಿ ಡಾ.ಎಂ. ಚಿದಾನಂದ ಮೂರ್ತಿ ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ಡಾ.ಎಂ. ಎಂ. ಕಲಬುರ್ಗಿ.

ಡಾ.ಕಲಬುರ್ಗಿಯವರು, ಕರ್ನಾಟಕದ ಬಹುಪ್ರಸಿದ್ಧ ವಿದ್ವಾಂಸರಲ್ಲಿ ಒಬ್ಬರು ಅವರದು ಬಹುಮುಖಿ ವಿದ್ವತ್‌. ಅವರ ಅಧ್ಯಯನ ಮತ್ತು ಕೊಡುಗೆಗಳು, ಶಾಸನಶಾಸ್ತ್ರ, ಸಾಹಿತ್ಯ, ಚರಿತ್ರೆ, ಛಂದಸ್ಸು, ಇತಿಹಾಸ, ವಾಸ್ತುಶಿಲ್ಪ, ಗ್ರಂಥಸಂಪಾದನೆ, ಹಸ್ತಪ್ರತಿಶಾಸ್ತ್ರ, ಜಾನಪದ, ಸ್ಥಳನಾಮಗಳ ಅಧ್ಯಯನ, ಸಾಹಿತ್ಯ ವಿಮರ್ಶೆ ಮುಂತಾದ ಹತ್ತು ಹಲವು ಕ್ಷೇತ್ರಗಳಲ್ಲಿ ಹರಡಿಕೊಂಡಿವೆ. ಇವೆಲ್ಲದರ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ಅಧ್ಯಯನದ ವಿಶಾಲವಾದ ಹರಿವಿದೆ.. ಸೃಜನಶೀಲ ಸಾಹಿತ್ಯದಲ್ಲೂ ಆಸಕ್ತಿಯಿರುವ ಕಲಬುರ್ಗಿಯವರು ಎರಡು ನಾಟಕಗಳು ಮತ್ತು ಒಂದು ಕವನ ಸಂಕಲವನ್ನು ಪ್ರಕಟಿಸಿದ್ದಾರೆ.
ಡಾ.ಎಂ.ಎಂ.ಕಲಬುರ್ಗಿಯವರ ಪೂರ್ಣ ಹೆಸರು ಮಲ್ಲೇಶಪ್ಪ ಮಡಿವಾಳಪ್ಪ ಕಲಬುರ್ಗಿ. ಅವರು ಹುಟ್ಟಿದ್ದು 28-11-1938 . ಬಿಜಾಪುರ ಜಿಲ್ಲೆಯ ಸಿಂಧಗಿತಾಲೂಕಿನ ಯರಗಲ್ಲ ಅವರ ಜನ್ಮ ಸ್ಥಳ.  ತಂದೆ ಮಡಿವಾಳಪ್ಪ. ತಾಯಿ ಗುರಮ್ಮ. ಅವರದು ಅವಿಭಕ್ತ ಕುಟುಂಬ. ಅವರ  ಪ್ರಾಥಮಿಕ ಶಿಕ್ಷಣ ಯರಗಲ್ಲಿನಲ್ಲಿ. ಮಾಧ್ಯಮಿಕ ಶಿಕ್ಷಣ ಸಿಂಧಗಿಯಲ್ಲಿ ಆಯಿತು ಪದವಿಪೂರ್ವ ಶಿಕ್ಷಣ ಬಿಜಾಪುರದಲ್ಲಿ.. ಧಾರವಾಡದಲ್ಲಿ ಕಾಲೇಜು ಕಲಿಕೆ. ೧೯೬೦ ರಲ್ಲಿ ಕರ್ನಾಟಕ ಕಾಲೇಜಿನಿಂದ ಬಂಗಾರದ ಪದಕ ಸಮೇತ ಪದವಿ ಪಡೆದರು.೧೯೬೨ ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪ್ರಥಮ ಸ್ಥಾನದೊಂದಿಗೆ ಪಡೆದರು. ತಕ್ಷಣವೇ ಕಲಿತ ಕಾಲೇಜಿನಲ್ಲಿಯೇ ಉಪನ್ಯಾಸಕ ಹುದ್ದೆ 1962ರಲ್ಲಿ ದೊರೆಯಿತು. 1966 ರಲ್ಲಿಕನ್ನಡ ಅಧ್ಯಯನ ಪೀಠದಲ್ಲಿ ಆಧ್ಯಾಪಕರಾಗಿ ನೇಮಕವಾಯಿತು.ಅವರಿಗೆ 1968 ರಲ್ಲಿ” ಕವಿರಾಜ ಮಾರ್ಗ ಪರಿಸರದ ಕನ್ನಡಸಾಹಿತ್ಯ”  ಮಹಾಪ್ರಬಂಧಕ್ಕೆ  ಪಿಎಚ್‌,ಡಿ. ದೊರೆಯಿತು. ಪ್ರಾಧ್ಯಾಪಕರಾಗಿ ಹತ್ತೊಂಬತ್ತುವರ್ಷ ಕಾರ್ಯನಿರ್ವಹಿಸಿದ ಅವರು ಅನೇಕ ಆಡಳಿತಾತ್ಮಕ ಹುದ್ದೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದರು. ಆ ಅವಧಿಯಲ್ಲಿ ಅನೇಕ ಸಂಶೋಧನೆಗೆ ಕಾರಣರಾದರು ಜೊತೆಗೆ ಅನೇಕರಿಗೆ ಮಾರ್ಗದರ್ಶನ ನೀಡಿದರು. ನಿವೃತ್ತಿಯ ನಂತರ ಮೂರುವರ್ಷ ಹಂಪಿಯ ಕನ್ನಡ ವಿಶ್ವ ವಿದ್ಯಾಲಯದ ಉಪಕುಲಪತಿಗಳಾಗಿ ಮುನ್ನೆಡಸಿದರು. ಈಗಲೂ ಸಕ್ರಿಯವಾಗಿ ಸಂಶೋಧನಾಕಾರ್ಯ ಮಾಡುತ್ತಿರುವರು. ಕರ್ನಾಟಕ ಸರ್ಕಾರವು ಪ್ರಕಟಿಸಿದ “ವಚನಸಾಹಿತ್ಯ ಸಂಪುಟ”  ಮಾಲೆಗೆ ಪ್ರಧಾನ ಸಂಪಾದಕರಾಗಿ ಹದಿನೈದು ಸಂಪುಟಗಳನ್ನು ಹೊರ ತಂದರು ಹಾಗೂ “ ಸಮಗ್ರ ಕೀರ್ತನೆ ಸಂಪುಟಗಳ”  ಸಂಪಾದಕ ಮಂಡಳಿಯ ಸದಸ್ಯರಾಗಿದ್ದರು.
ಶಿಷ್ಟ ಸಾಹಿತ್ಯಕ್ಕೆ ಜನಪದ ಶಿಸ್ತನ್ನು  ಮತ್ತು ಜನಪದ ಸಾಹಿತ್ಯಕ್ಕೆ ಶಿಷ್ಟ ಸಾಹಿತ್ಯದ ಶಿಸ್ತನ್ನು ಅಳವಡಿಸಿ ಆರ್ಥವನ್ನು ವಿಸ್ತರಿಸಿರುವರು.ಬಹುಶಿಸ್ತೀಯ ಅಧ್ಯಯನದಿಂದ ಸಮಗ್ರ ಸಂಶೋಧನ ಮಾಡಿರುವರು.ಅವರ ಪ್ರಕಾರ ಸಂಶೋಧನೆ ಮತ್ತು ವಿಮರ್ಶೆ ವಿಭಿನ್ನವಲ್ಲ ಎರಡರ ಗುರಿ ಸತ್ಯಶೋಧನೆ. ಅವರ ಸಂಶೋಧನೆಯಲ್ಲಿ ಚರಿತ್ರೆ,ಸಮಾಜ ಮತ್ತು ಕಲೆ ಸಂಗಮಿಸುತ್ತವೆ. ಸಾಂಸ್ಕೃತಿಕ ಅಧ್ಯಯನದೊಂದಿಗೆ ಗ್ರಂಥ ಸಂಪಾದನಾಕ್ಷೇತ್ರ, ಭಾಷಾಶಾಸ್ತ್ರ, ಜಾನಪದಕ್ಷೇತ್ರ ಮತ್ತು ನಾಮಶಾಸ್ತ್ರಗಳಲ್ಲಿ ದುಡಿಯುತ್ತಾ ಅವುಗಳನ್ನು ದುಡಿಸಿಕೊಂಡು ಉನ್ನತ ಪರಂಪರೆ ಕಾಪಿಟ್ಟಿರುವುರು.
 ಇವರ ಕನ್ನಡ ಗ್ರಂಥಸಂಪಾದನಶಾಸ್ತ್ರ “ಡಿ.ಎಲ್ಎನ್‌ ರವರ ಕೃತಿಯನಂತರ ಬಂದ ಅಪರೂಪದ ಕೃತಿ.  ಆರು ಕಾಂಡಗಳನ್ನು ಹೊಂದಿದ್ದು. ಇತಿಹಾಸ,ಲೇಖನ ಕಾಂಡ,  ಸ್ಖಾಲಿತ್ಯ ಕಾಂಡ, ಹಸ್ತಪ್ರತಿಕಾಂಡ ,ಸಂಪಾದನ ಕಾಂಡ, ಮತ್ತು  ಶೇಷ ಕಾಂಡಗಳಲ್ಲಿ ಸಮಗ್ರ ನಿರೂಪಣೆ ಇದೆ.
ಬರಿ ಬರೆದುದು ಮಾತ್ರವಲ್ಲ ಅದಕ್ಕನುಗುಣವಾಗಿ ಕನ್ನಡ ಕೃತಿಗಳ ಶಾಸ್ತ್ರೀಯ ಸಂಪಾದನೆ ಮಾಡಿರುವರು
ಸಂಶೋಧನ ಶಾಸ್ತ್ರದಲ್ಲಿ ಅವರ ಅಪಾರ ಅನುಭವದ ರಸಗಟ್ಟಿಯಾಗಿದೆ. ನಿಯಮ-ನಿದರ್ಶನ ಎರಡೂ ಒಂದಾಗಿ ಅವರಲ್ಲಿ ಮೇಳೈಸಿವೆ.
 ಹಸ್ತಪ್ರತಿಗಳ ಸಂಗ್ರಹಣದಲ್ಲಿ ಆಕರಣ, ಸೂಚೀಕರಣ, ವರ್ಗೀಕರಣ, ಸಂಪಾದನ, ಪರಿಚಲನ, ಅಧ್ಯಯನ ಸಂರಕ್ಷಣ ಗಳಲ್ಲದೆ ಗ್ರಂಥಾಲಯ, ಯಂತ್ರೋಪಕರಣ,ಪ್ರದರ್ಶನ ಸಮಾಲೋಚನ,ಸಭಗೃಹ ಮತ್ತು ವಿಶ್ರಾಂತಿಗಳನ್ನು ಸೇರಿರುವರು. ಇದು ಇಂದಿನ ಆಧುನಿಕ ಯುಗದಲ್ಲಿ ಕ್ರಮಗಳೇ ಆಗಿವೆ.
ಕನ್ನಡ ನಾಮವಿಜ್ಞಾನ-ಭಾಷಾ ಸ್ತರದಲ್ಲಿ ಮೊದಲಾಗಿ ಚಾರಿತ್ರಿಕ, ಭೌಗೋಲಿಕ, ಸಾಂಸ್ಕೃತಿಕ ಸ್ಥರಗಳ ಸಂಯೋಜನೆ ಹೊಂದಿದೆ.ಅದರಲ್ಲಿ ಒಂದು ಜನಾಂಗದ ಭಾಷಿಕ, ರಾಜಕೀಯ, ಸಾಮಾಜಿಕ ,ವ್ಯಾಕರಣ,ಧಾರ್ಮಿಕ ಸ್ವರೂಪ ಅರ್ಥೈಸುವು

ಇವರ ಕೃತಿಯಲ್ಲಿ ಉತ್ತರಕರ್ನಾಟಕದ ಅಡ್ಡಹೆಸರುಗಳು ಹೇಗೆ ಗ್ರಾಮ, ಕುಟುಂಬ,ವಂಶ,ಜಾತಿವೃತ್ತಿ ,ಪ್ರತಿನಿಧಿಯಾಗಿ ಮಾನಸಿಕವಾಗಿ  ಬೆಸೆದು ಸಾಂಘೀಕ ನಿಷ್ಠೆಯನ್ನು ಬೆಳಸುತ್ತವೆ  ಎಂಬುದರ ವಿಶ್ಲೇಷಣೆ ಇದೆ.ಹೀಗೆ ಅವರು ಶೋಧಕ್ಕೆ ಸಾಮಾಜಿಕ ಮುಖ ಜೊಡಿಸಿರುವರು.      
ಅವರ ಶಾಸ್ತ್ರ ಸಂಶೋಧನೆಯಲ್ಲಿನ ವ್ಯಾಪ್ತಿ ಮತ್ತು ವೈವಿಧ್ಯ  ಬೆರಗು ಮೂಡಿಸುವುದು.  ಅವರ ಸಂಶೋಧನೆ ಮತ್ತು ವಿಮರ್ಶೆಗಳು ಶಾಸ್ತ್ರದ ಭಾರದಿಂದ ಜಡವಾಗದೇ, ತಮ್ಮ ರಸವಂತಿಕೆಯಿಂದ  ಆತ್ಮೀಯತೆ ಮೂಡಿಸುವುದು
ಆವರ ಸಂಶೋಧನೆಯ ಮೂರು ಮೂಲಸೆಲೆಗಳು ಶಾಸನ, ಹಳಗನ್ನಡ ಮತ್ತು ವಚನಸಾಹಿತ್ಯ.
ಡಾ| ಎಂ.ಎಂ.ಕಲಬುರ್ಗಿಯವರು ಸೃಜನಶೀಲ ಹಾಗು ಸಂಶೋಧನೆ ಈ ಎರಡೂ ಪ್ರಕಾರಗಳಲ್ಲಿ ಎಪ್ಪತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.ಈ ಅವರು ಶಾಸನ ಸಂಬಂಧಿವಾದ . ಶಾಸನ ವ್ಯಾಸಂಗ, ಭಾಗ 1 ಮತ್ತು ಭಾಗ 2,  ಶಾಸನ ವ್ಯಾಸಂಗ: ಸಮಾಧಿ, ಬಲಿದಾನ, ವೀರಮರಣ ಸ್ಮಾರಕಗಳು,. ಶಾಸನ ಸಂಪದ,. ಧಾರವಾಡ ಜಿಲ್ಲೆಯ ಶಾಸನಸೂಚಿ ಮೊದಲಾದ  ೧೪ ಕೃತಿ ರಚಿಸಿರುವರು
 ಹಳೆಗನ್ನಡದಲ್ಲಿ  ಮಾರ್ಗ (೧,೨,೩,೪), ಕನ್ನಡ ಹಸ್ತಪ್ರತಿ ಶಾಸ್ತ್ರ,  ಕನ್ನಡ ಗ್ರಂಥ ಸಂಪಾದನ ಶಾಸ್ತ್ರ, ಕನ್ನಡ ಸಂಶೋಧನ ಶಾಸ್ತ್ರ, ಕನ್ನಡ ನಾಮವಿಜ್ಞಾನ,ಧಾರವಾಡ ಜಿಲ್ಲೆಯ ಶಾಸನಸೂಚಿ, ಮಹಾರಾಷ್ಟ್ರದ ಕನ್ನಡ ಶಾಸನಗಳು,  ಶಾಸನಗಳಲ್ಲಿ ಶಿವಶರಣರು, ಶಬ್ದಮಣಿದರ್ಪಣ ಸಂಗ್ರಹ,  ಕನ್ನಡ ಕೈಫಿಯತ್ತುಗಳು,  ಕೆಳದಿ ಸಂಸ್ಥಾನ ಸಮಗ್ರ ಅಧ್ಯಯನ,  ಸ್ವಾದಿ ಅರಸು ಮನೆತನ,, ಸಾರಂಗಶ್ರೀ ಅವರ ಕೃತಿಗಳು.
ಈ ಶತಮಾನದ ಶ್ರೇಷ್ಠಚಿಂತಕರಲ್ಲೊಬ್ಬರು ಎಂದು ಹೆಸರುವಾಸಿಯಾದ ಕಲಬುರ್ಗಿಯವರು ಸದಾ ಓದು,ಬರಹ,ಚಿಂತನೆ,ಪ್ರಕಟಣೆ,ಮಾರ್ಗದರ್ಶನ ಮತ್ತು ಇತರ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಅತ್ಯಂತ ಸರಳವ್ಯಕ್ತಿತ್ವದ ವಿನಯಶೀಲರಾದ ಅವರು ಕನ್ನಡದ ಕ್ರಿಯಾಶೀಲ ಚೇತನವೆಂದು ಹೆಸರಾಗಿದ್ದಾರೆ. ಸಾಹಿತ್ಯ, ಶಾಸನ, ಜಾನಪದ, ನಾಮವಿಜ್ಞಾನ, ಗ್ರಂಥ ಸಂಪಾದನೆ, ಹಸ್ತಪ್ರತಿಶಾಸ್ತ್ರ, ಮೊದಲಾದ ಕ್ಷೇತ್ರಗಳಲ್ಲಿ ಅಮೂಲ್ಯ ಕೊಡುಗೆಯನ್ನು ಕೊಟ್ಟಿದ್ದಾರೆ. ಜೀವನ ಓದಿ ಎಸೆಯುವ ವರ್ತಮಾನಪತ್ರಿಕೆಯಲ್ಲ ಅನುದಿನವೂ ಗಮನ ಸೆಳೆವ ಮಹಾಕಾವ್ಯಎಂಬುದು ಅವರ ಗಾಢ  ನಂಬಿಕೆ
ಜನ ಮೆಚ್ಚಿ ನಡೆಕೊಂಡರೇನುಂಟು ಲೋಕದಿ ಮನ ಮೆಚ್ಚಿ ನಡಕೊಂಬುದೆ  ಚಂದ ಎಂಬುದು ಅವರ ಧ್ಯೇಯವಾಕ್ಯ
ಪಾಶ್ಚಾತ್‌ ಚೌಕಟ್ಟಿಗೆ ಸಿಕ್ಕ ಜಾನಪದವನ್ನು ಬಂದನದಿಂದ ಬಿಡಿಸಿ ,ದೇಶೀಯ ಹಿನ್ನೆಲೆಯಲ್ಲಿ ಪರಿಶೀಲಿಸಿದ ಸಂಶೋಧಕರು ಕಲಬುರ್ಗಿ. ವರ್ಗ,ವರ್ಣ, ಲಿಂಗ ಬೇಧವಿಲ್ಲದೆ , ವ್ಯಕ್ತಿ ಕೇಂದ್ರಿತವಾಗದೇ ಸಮೂಹದ ದನಿಯಾಗಿ, ಕವಿ ಮತ್ತು ಕೃತಿಗಳ ನಡುವೆ ಕಂದರ ಬಹು ಕಡಿಮೆ ಇರುವುದೇ   ಅಲಿಖಿತ  ಸಾಮಗ್ರಿಯೇ ಹೆಚ್ಚಾಗಿರುವದು., ಭಾಷೆಯಷ್ಟೇ ಪ್ರಾಚೀನವಾಗಿರುವುದೇ    ಜನಪದ ಸಾಹಿತ್ಯ  ಎಂದು ಪ್ರತಿಪಾದನೆ  ಸಮಗ್ರ ಮತ್ತು ಸರ್ವಗ್ರಾಹ್ಯ.   
ಸಂಪಾದಿತ ಕೃತಿಗಳು ಗ್ರಂಥರೂಪದಲ್ಲಿ ಮತ್ತು ಲೇಖನ ರೂಪದಲ್ಲಿ ಇವೆ. ಗ್ರಂಥ ರೂಪದಲ್ಲಿ ವಚನ, ಶಿಷ್ಟ, ದಾಖಲು ಜನಪದ ಮತ್ತು ಇತರೆ ಎಂದು ಐದು ವಿಭಾಗದಲ್ಲಿ ಕೆಲಸವಾಗಿದೆ ಶಿಷ್ಟದಲ್ಲಿ ಕಾವ್ಯ ಮತ್ತು ಶಾಸ್ತ್ರ ಎಂಬ ಗುಂಪಿವೆ. ಕಾವ್ಯದಲ್ಲೂ ಶುದ್ಧ ಮತ್ತು ಐತಿಹಾಸಿಕ ಎಂದು  ವಿಭಜನೆ ಮಾಡಬಹುದು. ದಾಖಲುಸಾಹಿತ್ಯದ ಅಡಿಯಲ್ಲಿ ಶಾಸನ ಹಾಗೂ   ಐದು ವಿಭಾಗಗಳಿವೆ

ಕಳೆದ ನಾಲ್ಕು ದಶಕಗಳಿಗೂ ಹೆಚ್ಚು ಕಾಲದಿಂದ ಸಂಶೋಧನೆಯು ಕಲಬುರ್ಗಿಯವರ ಪ್ರಧಾನ ಆಸಕ್ತಿಯಾಗಿದೆ. ಅವರು ಎಪ್ಪತ್ತೈದಕ್ಕೂ ಹೆಚ್ಚು ಪುಸ್ತಕಗಳನ್ನೂ ನಾನೂರಕ್ಕೂ ಹೆಚ್ಚು ಸಂಶೋಧನ ಲೀಖನಗಳನ್ನೂ ಪ್ರಕಟಿಸಿದ್ದಾರೆ. ಈ ಬರವಣಿಗೆಯ ವ್ಯಾಪ್ತಿ ಮತ್ತು ಆಳಗಳು ಗಮನೀಯವಾಗಿವೆ. ಕರ್ನಾಟಕದ ಸಂಸ್ಕೃತಿಯನ್ನು ಕುರಿತ ಅನೇಕ ಸಂಶೋಧನ ಲೇಖನಗಳನ್ನು ಒಳಗೊಂಡಿವೆ. ಕಲಬುರ್ಗಿಯವರಲ್ಲಿ ಉತ್ತರ ಕರ್ನಾಟಕದ ಹಿರಿಯ ವಿದ್ವಾಂಸರ ವಿಶಿಷ್ಟ ಲಕ್ಷಣಗಳು ಮತ್ತು ಹಳೆಯ ಮೈಸೂರಿನ ಕಡೆಯ ವಿದ್ವತ್ ಪರಂಪರೆಯ ಅನನ್ಯ ಲಕ್ಷಣಗಳ ಸಂಯೋಜನೆಯನ್ನು ಕಾಣಬಹುದು. ತನ್ನ ಸಂಶೋಧನೆಯ ಫಲಿತಗಳ ನಿಖರತೆಯ ಬಗ್ಗೆ ನಂಬಿಕೆಯಿದ್ದಾಗ, ಅವರು ವಿವಾದಗಳನ್ನು ಹುಟ್ಟುಹಾಕಲು ಎಂದಿಗೂ ಹಿಂಜರಿದಿಲ್ಲ. ಅವರು ತಮ್ಮ ಆಕರಗಳನ್ನು ಖಚಿತಪಡಿಸಿಕೊಂಡಿರುತ್ತಾರೆ ಮತ್ತು ಮಹತ್ವದ ಒಳನೋಟಗಳನ್ನು ನೀಡುತ್ತಾರೆ. ವಿಶ್ವವಿದ್ಯಾಲಯ ಧನಸಹಾಯ ಆಯೋಗದಿಂದ ರಾಷ್ಟ್ರೀಯ ಅಧ್ಯಾಪಕರೆಂಬ ಗೌರವಕ್ಕೆ ಪಾತ್ರರಾದ ಅವರು ಹಸ್ತಪ್ರತಿ ಶೋಧಕ್ಕೆಂದು ಲಂಡನ್ ಆಕ್ಸಫರ್ಡ್ ಮತ್ತು ಕೆಂಬ್ರಿಜ್‌ಗಳಿಗೆ ಪ್ರವಾಸ ಮಾಡಿರುವರು.
.ಕರ್ನಾಟಕ ವಿಶ್ವ ವಿದ್ಯಾಲುದಲ್ಲಿ  ಜಾನಪದಸಮ್ಮೇಲನವನ್ನು ರೂಪಿಸಿದವರಲ್ಲಿ ಒಬ್ಬರು. ಹಂಪೆಯ ಕನ್ನಡ ವಿಶ್ವ ವಿದ್ಯಾಲಯದಲ್ಲಿ ದೇಸಿ ಸಮ್ಮೇಳನವನ್ನು ಸಂಘಟಿಸಿದವರು ಡಾ| ಕಲಬುರ್ಗಿ . ಗದುಗಿನ ಶ್ರೀ ತೋಂಟದಾರ್ಯ ಮಠದ ವೀರಶೈವ ಅಧ್ಯಯನ ಸಂಸ್ಥೆಯ ಸಂಸ್ಥಾಪಕರು. ಇದಲ್ಲದೆ  ಮೈಸೂರಿನ ಸುತ್ತೂರು ಮಠದ ಸಮಗ್ರ ವಚನ ಸಾಹಿತ್ಯ ಪ್ರಕಟಣಮಾಲೆಯ ,ಬೆಳಗಾವಿಯ ನಾಗನೂರು ಮಠದ ವೀರಶೈವ ಅಧ್ಯಯನ ಅಕಾಡೆಮಿಯ ಹಾಗು ಶಿವಮೊಗ್ಗೆಯ ಆನಂದಪುರ ಮಠದ ಮಲೆನಾಡು ವೀರಶೈವ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿ ಅಮೂಲ್ಯ ಸೇವೆ ಸಲ್ಲಿಸಿದ್ದಾರೆ.
ಡಾ| ಎಂ.ಎಂ. ಕಲಬುರ್ಗಿಯವರ ಸೇವೆಯನ್ನು ಅನುಲಕ್ಷಿಸಿ ಅನೇಕ ಗೌರವಗಳು ಅವರಿಗೆ ಸಂದಿವೆ. ತಂಜಾವೂರಿನಲ್ಲಿ ನಡೆದ All India Place name Conference ಗೆ  ಕಲಬುರ್ಗಿಯವರು ಅಧ್ಯಕ್ಷರಾಗಿದ್ದರು. ಮಹಾಲಿಂಗಪುರದಲ್ಲಿ ನಡೆದ ಅಖಿಲ ಕರ್ನಾಟಕ ಪ್ರಥಮ ಶ್ರೀಕೃಷ್ಣ ಪಾರಿಜಾತ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಧರ್ಮಸ್ಥಳದ ಸಾಹಿತ್ಯಸಮ್ಮೇಳನದ ಅಧ್ಯಕ್ಷ್ಯತೆ, ಮೂಡಬಿದಿರೆಯ ನಡೆದ "ಆಳ್ವಾಸ್ ನುಡಿಸಿರಿ 2011"  ಸರ್ವಾಧ್ಯಕ್ಷರಾಗಿದ್ದರು. ಕರ್ನಾಟಕ ಇತಿಹಾಸ ಅಕಾದಮಿಯ ವಾರ್ಷಿಕ ಸಮ್ಮೇಳನದ ಸರ್ವಾಧ್ಯಕ್ಷ ಗೌರವವೂ ಸಂದಿದೆ. ಇವರಿಗೆ ಬಂದಿರುವ ಪ್ರಶಸ್ತಿಗಳು ಹಲವು. ಅವರ ಏಳು ಕೃತಿಗಳಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿವೆ.  ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಪಂಪ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ,  'ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಜಾನಪದ ಪ್ರಶಸ್ತಿ', 'ವರ್ಧಮಾನ ಪ್ರಶಸ್ತಿ', ವಿಶ್ವಮಾನವ ಪ್ರಶಸ್ತಿ',2006ನೆಯ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು  ನೃಪತುಂಗಪ್ರಶಸ್ತಿ ಪಡೆದಿರುವರು..
      ಡಾ.ಕಲಬುರ್ಗಿಯವರು ಖ್ಯಾತ ವಿದ್ವಾಂಸರು ಮತ್ತು ಸಂಶೋಧಕರು ಮಾತ್ರವಲ್ಲ. ಕನ್ನಡ ನೆಲ, ಜಲ, ನುಡಿ ಸಾಹಿತ್ಯಗಳಿಗೆ   ಕುತ್ತು ಬಂದಾಗ ಬೀದಿಗೆ ಇಳಿದು ಚಳುವಳಿ ಮಾಡಿರುವರು. ಗೋಕಾಕ್‌ ಚಳುವಳಿಯಲ್ಲಿ ಧಾರವಾಡದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಯಾಗಿ ಉತ್ತರ ಕರ್ನಾಟಕ ಪ್ರದೇಶದಲ್ಲಿ ಚಳುವಳಿಯ ಕಿಚ್ಚು ಹೆಚ್ಚಿಸಿದ್ದಾರೆ.
ಅವರದು ನಿರ್ಭೀತ ನಿಲವು. ಸತ್ಯಕ್ಕೆ ಅಪಚಾರವಾದರೆ ಸಹಿಸರು. ಸಂಶೋಧನೆಯಿಂದ ಜನಪ್ರಿಯವಾಗ ಬೇಕೆಂಬ ಹಂಬಲದವರಲ್ಲ. ಜನವಿರೋದದ ನಡುವೆಯೂ ಸತ್ಯ ನಿಷ್ಠರಾಗಿ ಕಷ್ಟ ನಷ್ಟಗಳನ್ನು ಎದುರಿಸಿ ದಿಟ್ಟ ನಿಲವು ತಳೆದವರು.



ಕನ್ನಡ  ಸಾಹಿತ್ಯ  ಪರಂಪರೆ ಕಾಲದ  ಅಗತ್ಯಗಳನ್ನು  ಪೂರೈಸಿಕೊಂಡು  ಹೇಗೆ  ತನ್ನತನವನ್ನು  ಮೆರೆದಿದೆ.  ಎಂಬುದರ  ಪೂರ್ಣ ಚಿತ್ರಣವನ್ನು  ಬಲ್ಲವರಾಗಿದ್ದಾರೆ.  ಶಾಸನಶಾಸ್ತ್ತ್ರ, ಜಾನಪದ, ಗ್ರಂಥ ಸಂಪಾದನೆ, ಹಸ್ತಪ್ರತಿ ಶಾಸ್ತ್ತ್ರ, ವ್ಯಾಕರಣ, ಛಂದಸ್ಸು  ನಾಮ ವಿಜ್ಞಾನ ಹೀಗೆ ಎಲ್ಲಾ ಕ್ಷೇತ್ರಗಳ ಜೊತೆಗೆ ಒಡನಾಟವನ್ನು  ಇಟ್ಟುಕೊಂಡು ತಲಸ್ಪರ್ಶಿಯಾಗಿ ವಿಷಯವನ್ನು ತಿಳಿದು ಕೃತಿ ರಚನೆಗೈದಿರುವ ಕಲಬುರ್ಗಿ ಅವರು ವಿಭಿನ್ನವಾಗಿ ನಿಲ್ಲುತ್ತಾರೆ. ’ನೀರು  ನೀರಡಸಿತ್ತ”. ಕವನ ಸಂಕಲನ, ’ಕೆಟ್ಟಿತ್ತು ಕಲ್ಯಾ”  ನಾಟಕ ,   ಖರೇ ಖರೇ, ಸಂಗ್ಯಾಬಾಳ್ಯಾ  ಸಣ್ಣಾಟಗಳನ್ನು  ರಚಿಸುವ ಮೂಲಕ ಸೃಜನಾತ್ಮಕ ಪ್ರತಿಭೆಯನ್ನು  ಮೆರೆದಿರುವ ಇವರದು ಯಾವ ವಿಷಯದ  ಬಗೆಗೂ  ಮಡಿವಂತಿಕೆಯನ್ನು ಮಾಡುವ ಸ್ವಭಾವವಲ್ಲ. ಅವರು  ಕೃತಿರಚನೆ  ಮಾಡದ ಕ್ಷೇತ್ರವಿಲ್ಲ. ಕನ್ನಡದಲ್ಲಿ ಬಹುಮುಖಿ ವಿದ್ವತ್‌ ಇರುವ ದೈತ್ಯ ಪ್ರತಿಭೆ ಡಾ. ಎಂ.ಎಂ ಕಲಬುರ್ಗಿ  .ಅವರ ಸಾಧನೆಯನ್ನು ಗುರುತಿಸಿ ಮಹಾಮಾರ್ಗ ಎಂಬ ಮೌಲಿಕ ಅಭಿನಂದನ ಗ್ರಂಥ ಅರ್ಪಿಸಲಾಗಿದೆ. .ಅದು ಕನ್ನಡದ ಬಹುಮುಖ್ಯ ಆಕರಗ್ರಂಥವೆಂಬ ಹೆಗ್ಗಳಿಕೆ ಪಡೆದಿದೆ.;.
                     
(  ಚಿತ್ರ ಕೃಪೆ   ಅಂತರ್‌ಜಾಲ ಮತ್ತು ಮಹಾಮಾ ರ್ಗ)

Sunday, November 17, 2013

ಪಾವಗಡ ತಾಲೂಕಿನ ಪ್ರಾಗೈತಿಹಾಸಿಕ ನೆಲೆಗಳು

ಪಾವಗಡ ತಾಲ್ಲೂಕಿನಲ್ಲಿ ಇತ್ತೀಚೆಗೆ ದೊರೆತ ಕೆಲವು ಪ್ರಾಗೈತಿಹಾಸದ ನೆಲೆಗಳು
ರವೀಶ್ ಜಿ.ಎನ್

ಪಾವಗಡ ತಾಲ್ಲೂಕು ತುಮಕೂರು ಜಿಲ್ಲೆಯಲ್ಲಿದ್ದು, ಈಗಾಗಲೇ ಇಲ್ಲಿ ಹಲವು ಪ್ರಾಗೈತಿಹಾಸ ಕಾಲದ ನೆಲೆಗಳನ್ನು ವಿವಿಧ ಕಾಲಘಟ್ಪದ ಸಂಸ್ಕೃತಿಗಳೆಂದು ವಿಂಗಡಿಸಿ ಶೋಧಿಸ ಲಾಗಿದೆ. ಯಲ್ಲಪ್ಪನಾಯಕನ ಹಳ್ಳಿಯಲ್ಲಿ ಆದಿ ಹಳೇ ಶಿಲಾಯುಗ, ನಿಡುಗಲ್ಲಿನಲ್ಲಿ ಮಧ್ಯ ಹಳೇ ಶಿಲಾಯುಗ, ನಾಗಲಾಪುರದಲ್ಲಿ ಅಂತ್ಯ ಮತ್ತು ಸೂಕ್ಷ್ಮತೆಯುಗ, ಬೂದಿಬೆಟ್ಟ, ನವಶಿಲಾಯುಗ, ಕಣಿಕಲಬಂಡೆ, ಬೃಹತ್ ಶಿಲಾಯುಗ, ಪಾವಗಡ ಇತಿಹಾಸ ಆರಂಭ ಕಾಲ ಎಂದು ಇನ್ನು ಹಲವು ನೆಲೆಗಳನ್ನು ಶೋಧಿಸಲಾಗಿದೆ.
ಪಾವಗಡ ತಾಲ್ಲೂಕಿನಲ್ಲಿ ಇತ್ತೀಚಿನ ಹಲವು ಸ್ಥಳಗಳ ಅನ್ವೇಷಣೆಯಲ್ಲಿ ಕೆಲವು ನೆಲೆಗಳು ಪತ್ತೆಯಾಗಿವೆ.
ಕನ್ನಮೇಡಿ : ಇದು ಪಾವಗಡ ತಾಲ್ಲೂಕಿನ ಕಸಬಾ ಹೋಬಳಿಯಲ್ಲಿದ್ದು, ಪಾವಗಡದಿಂದ ಸುಮಾರು ೧೬ ಕಿ.ಮೀ. ದೂರದಲ್ಲಿದೆ. ಕನ್ನಮೇಡಿ ಬೆಟ್ಟದ ತಪ್ಪಲಿನಲ್ಲಿ ವೆಂಕಾವಧೂತ ಸ್ವಾಮಿ ಗುಹೆಗೆ ಹೋಗುವ ದಾರಿಯಲ್ಲಿ ನವಶಿಲಾಯುಗದ ವಸತಿ ನೆಲೆಯಿದ್ದು, ಸಗಣಿಯ ಕಿಟ್ಟ ಅಥವಾ ಬೂದಿಯ ದಿನ್ನೆಯು ಸುಮಾರು ಮೂರು ಎಕರೆಯಲ್ಲಿ ಹರಡಿಕೊಂಡಿದೆ. ಈ ನೆಲೆಯಲ್ಲಿ ನವಶಿಲಾಯುಗಕ್ಕೆ ಸಂಬಂಧಿಸಿದ ಕೈಗೊಡಲಿ, ಸುತ್ತಿಗೆ, ಹೆರೆಚೆಕ್ಕೆ, ಕಲ್ಲಿನ ಬಿಲ್ಲೆ, ಕವಣೆಕಲ್ಲು, ರೆಡ್ ಓಕರ್ ಸ್ಟೋನ್ ಮೊದಲಾದ ಉಪಕರಣಗಳು ಹಾಗೂ ಬೂದು, ಕಂದುಬಣ್ಣ, ನುಣುಪುಗೊಳಿಸಿದ ಬೂದು ಬಣ್ಣದ ಮೃತ್‌ಪಾತ್ರೆಗಳು ದೊರೆಯುತ್ತವೆ. ಮಡಕೆ ತಯಾರಿಕೆಗೆ ಬಳಸುತ್ತಿದ್ದ ಮಣ್ಣಿನ ಡಾಬರ್ ದೊರೆತಿರುವುದು ವಿಶೇಷ. ಜೊತೆಗೆ ಒಂದು ಮಡಕೆ ಚೂರಿನ ತಳಭಾಗದಲ್ಲಿ ಈಚಲು ಚಾಪೆಯ ಗುರುತುಗಳಿರುವುದು ಪತ್ತೆಯಾಗಿದ್ದು, ಇವರಿಗೆ ಚಾಪೆ ಹೆಣೆಯುವ ಜ್ಞಾನವಿತ್ತೆಂದು ಇದು ತಿಳಿಸುತ್ತದೆ.
ಈ ನೆಲೆಯಲ್ಲಿ ಬೃಹತ್ ಶಿಲಾಯುಗಕ್ಕೆ ಸಂಬಂಧಿಸಿದ ನುಣುಪುಗೊಂಡ ಕಪ್ಪು, ಕಪ್ಪು ಮತ್ತು ಕೆಂಪು ಬಣ್ಣದ ಮೃತ್‌ಪಾತ್ರೆಗಳು ಹಾಗೂ ಕಬ್ಬಿಣದ ಕಿಟ್ಟ ಸಿಗುತ್ತವೆ. ಆರಂಭ ಇತಿಹಾಸ ಕಾಲಕ್ಕೆ ಸಂಬಂಧಿಸಿದ ಕೆಂಪು ಬಣ್ಣದ ಸಾಕಷ್ಟು ಮೃತ್‌ಪಾತ್ರೆಗಳು ದೊರೆತಿದ್ದು, ಅವುಗಳ ಮೇಲ್ಭಾಗ ಕಪ್ಪು ಮಿಶ್ರಿತ ಕಂದು ಬಣ್ಣ ಮತ್ತು ಸುಣ್ಣದಿಂದ ಅಲಂಕರಿಸಲ್ಪಟ್ಟಿದೆ.
ಕನ್ನಮೋಡಿಯ ಪಶ್ಚಿಮ ದಿಕ್ಕಿನಲ್ಲಿರುವ ವೆಂಕಾವಧೂತ ಗುಹೆಯ ಬಳಿ ಇರುವ ಹೆಬ್ಬಂಡೆಯಲ್ಲಿ ಬಿಳಿ ಮತ್ತು ಕೆಂಪು ಬಣ್ಣದಲ್ಲಿ ಮನುಷ್ಯರ, ಗೂಳಿಯ, ಬಿಲ್ಲುಹಿಡಿದ ವ್ಯಕ್ತಿ, ದನಗಳನ್ನು ಒಡೆಯಲು ಕೋಲು ಹಿಡಿದಿರುವ ವ್ಯಕ್ತಿ, ಮೆರವಣಿಗೆ ಹೊರಡುತ್ತಿರುವ ದೃಶ್ಯ, ಕೋತಿ ಮೊದಲಾದ ದೃಶ್ಯಗಳನ್ನು ಚಿತ್ರಿಸಿದ್ದಾನೆ. ಈ ಗೀರು ಚಿತ್ರಗಳ ಬಳಿ ನವಶಿಲಾಯುಗದ ಎರಡು ಆಯುಧಗಳಿವೆ.
ನಲಿಗಾನಹಳ್ಳಿ : ಇದು ಪಾವಗಡ ತಾಲ್ಲೂಕಿನ ಕಸಬಾ ಹೋಬಳಿಯಲ್ಲಿದ್ದು, ಪಾವಗಡದಿಂದ ೬ ಕಿ.ಮೀ. ದೂರದಲ್ಲಿದೆ. ನಲಿಗಾನಹಳ್ಳಿ ಗ್ರಾಮದಿಂದ ಪೂರ್ವಕ್ಕೆ ಭತ್ತದ ಗುಂಡು ಎಂಬ ಹೆಬ್ಬಂಡೆಯ ಬಳಿ ನವಶಿಲಾಯುಗಕ್ಕೆ ಸಂಬಂಧಿಸಿದ ಕೈಗೊಡಲಿ, ಹೆರೆಚೆಕ್ಕೆಗಳು, ಮೈಕ್ರೋಲಿತಿಕ್ ಬ್ಲೇಡ್, ತಿರುಳ್ಗಲ್ಲು [miಛಿಡಿoಣihiಛಿ bಟಚಿಜe ಚಿಟಿಜ ಛಿoಡಿe] ಕವಣೆಕಲ್ಲು ಮೊದಲಾದ ಉಪಕರಣಗಳು ಡೈಕ್, ಒಸಾಲ್ಟ್, ಚರ್ಟ್ ಶಿಲೆಯಲ್ಲಿರುವುದು ದೊರೆತಿವೆ. ಜೊತೆಗೆ ಬೂದುಬಣ್ಣದ ಮೃತ್‌ಪಾತ್ರೆಗಳು ಸಿಕ್ಕಿವೆ. ಬೃಹತ್ ಶಿಲಾಯುಗಕ್ಕೆ ಸಂಬಂಧಿಸಿದ ಸ್ವಸ್ತಿಕ್, ವೃತ್ತಾಕಾರದ ಕಲ್ಲುಮಾದರಿ, ಚಪ್ಪಟೆಯಾಕಾರದ ಕಲ್ಲು ಮಾದರಿ, ನಿಲುವು ಮಾದರಿ ಹೀಗೆ ನಾಲ್ಕು ಮಾದರಿಗಳಲ್ಲಿ ಒಟ್ಟು ೨೮ ಸಮಾಧಿಗಳಿವೆ. ಭತ್ತದ ಗುಂಡಿನ ತುದಿಯ ಭಾಗದಲ್ಲಿ ಚಪ್ಪಟೆ ಬಂಡೆಯ ಕೆಳಭಾಗದಲ್ಲಿ ಬಿಳಿಬಣ್ಣದ ಮನುಷ್ಯನ ವಿವಿಧ ರೀತಿಯಲ್ಲಿರುವ ಗೀಟು ಚಿತ್ರಗಳಿವೆ. ಈ ನೆಲೆಯಿಂದ ಉತ್ತರ ದಿಕ್ಕಿಗೆ ಒಂದು ಕಿ.ಮೀ. ದೂರದಲ್ಲಿ ಚಪ್ಪಟೆಯಾಕಾರದ ಕಲ್ಲುಮಾದರಿಯ ಒಂದು ಸಮಾಧಿಯಿದ್ದು, ಇಲ್ಲಿ ಇತಿಹಾಸ ಆರಂಭಕ್ಕೆ ಸೇರುವ ಕೆಂಪು ಮೃತ್‌ಪಾತ್ರೆಗಳು ಸಿಗುತ್ತವೆ.

? S/o ನಾರಾಯಣಪ್ಪ, ಗುಂಡಾರ‍್ಲಹಳ್ಳಿ, ಬ್ಯಾಡನೂರು ಅಂಚೆ, ಪಾವಗಡ ತಾಲ್ಲೂಕು, ತುಮಕೂರು ಜಿಲ್ಲೆ-೫೬೧೨೦೨.




Wednesday, November 13, 2013

ಕೊಂಡ್ಲ ಹಳ್ಳಿಹಟ್ಟಿಯ ಬೃಹತ್‌ ಶಿಲಾಯುಗದ ನೆಲೆ

ಚಳ್ಳಕೆರೆ ತಾಲ್ಲೂಕು ಕೊಂಡ್ಲಹಳ್ಳಿ ಹಟ್ಟಿಯಲ್ಲಿ ಬೃಹತ್ ಶಿಲಾಯುಗದ ನೆಲೆಯ ಶೋಧ
ಮಂಜಣ್ಣ ಪಿ.ಬಿ. *  ಮತ್ತು  ಕೆ.ಎಸ್. ಶರತ್‌ಬಾಬು **
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕು ಪ್ರಾಗೈತಿ ಹಾಸಿಕ ದೃಷ್ಟಿಯಿಂದ ವಿಶಿಷ್ಟ ಸ್ಥಾನವನ್ನು ಪಡೆಯುತ್ತದೆ. ಚಳ್ಳಕೆರೆಯಿಂದ ವಾಯವ್ಯಕ್ಕೆ ೩೦ ಕಿ.ಮೀ. ಅಂತರದಲ್ಲಿರುವ ಕೊಂಡ್ಲಹಳ್ಳಿ ಹಟ್ಟಿ ಗ್ರಾಮ ಚಿನ್ನಹಗರಿನದಿ ಬಲದಂಡೆ ಮೇಲಿದೆ.
ಕೊಂಡ್ಲಹಳ್ಳಿ ಹಟ್ಟಿ ಪರಿಸರದಲ್ಲಿ ಒಟ್ಟು ಒಂಬತ್ತು ಬೃಹತ್ ಶಿಲಾ ಸಮಾಧಿಗಳು ಚಿನ್ನಹಗರಿ ನದಿ ಬಲ ದಂಡೆಯ ಮೇಲಿವೆ. ಕೊಂಡ್ಲಹಳ್ಳಿ ಹಟ್ಟಿಯ ಆಗ್ನೇಯಕ್ಕೆ ಎರಡು, ಈಶಾನ್ಯಕ್ಕೆ ಆರು, ನಾಯಕನಹಟ್ಟಿಯ ಉತ್ತರಕ್ಕೆ ಒಂದು ಸಮಾಧಿಗಳಿವೆ. ಇವುಗಳಲ್ಲಿ ಮೂರು ಸಮಾಧಿಗಳು ಶಿಲಾವೃತ್ತ, ಆರು ಕಲ್ಗುಪ್ಪೆ ಸಮಾಧಿಗಳು. ಇವುಗಳನ್ನು ಸ್ಥಳೀಯರು ಪಾಂಡವರ ಮಟ್ಟಿ, ಕೊಂಡ್ಲಹಳ್ಳಿ ಹಟ್ಟಿ ಮಟ್ಟಿ, ಗದುಗಿನ ತಿಪ್ಪಯ್ಯನ ಮಟ್ಟಿ ಎಂಬುದಾಗಿ ಕರೆಯುತ್ತಾರೆ. ಈ ಸಮಾಧಿಗಳ ವ್ಯಾಸ ಒಂದೇ ಆಗಿರದೆ ಬೇರೆ ಬೇರೆ ಆಗಿರುವುದು ವಿಶೇಷವಾಗಿದೆ. ಇವುಗಳಲ್ಲಿ ನಾಲ್ಕು ಸಮಾಧಿಗಳು ೪೦x೪೦ ಅಡಿ, ಮೂರು  ೨೦x೨೦ ಅಡಿ, ಮತ್ತೊಂದು ಸಮಾಧಿ ೧೫x೧೫ ಅಡಿ ಒಂದು ೫x೫೦ ಅಡಿ ವ್ಯಾಸ ಹೊಂದಿದೆ.  ಇವುಗಳಲ್ಲಿ ಮೂರು ಸಮಾಧಿಗಳನ್ನು ಎರಡರಿಂದ ಮೂರು ಅಡಿ ಎತ್ತರದ ಮಣ್ಣಿನ ಗುಡ್ಡೆಯ ಮೇಲೆ ಕಲ್ಲುಗಳನ್ನು ವೃತ್ತಾಕಾರವಾಗಿ ಇಟ್ಟು ಸಮಾಧಿ ಮಾಡಲಾಗಿದೆ.  ಕೊಂಡ್ಲಹಳ್ಳಿ ಹಟ್ಟಿಯ ಈಶಾನ್ಯಕ್ಕಿರುವ ಆರು ಕಲ್ಗುಪ್ಪೆ ಸಮಾಧಿಗಳು ತುಂಬಾ ವಿಶೇಷವಾಗಿವೆ. ಇವು ಒಂದೇ ವ್ಯಾಸವಾಗಿರದೆ ಬೇರೆ ಬೇರೆಯಾಗಿದ್ದು ನೆಲದ ಮೇಲೆ ಎರಡರಿಂದ ಮೂರು ಅಡಿ ಎತ್ತರವಿದ್ದು ಸ್ಥಳೀಯವಾಗಿ ದೂರೆಯುವ ಚಿಕ್ಕ ಕಲ್ಲುಗಳನ್ನು ಬಳಸಿ ಸಮಾಧಿ ಮಾಡಲಾಗಿದೆ. ಇವುಗಳ ಮಧ್ಯೆ ವಿಶಾಲವಾದ ಬಯಲಿರುವುದು ವಿಶೇಷವಾಗಿದೆ. ಇದರಲ್ಲಿ ಎರಡು ಸಮಾಧಿ ಗಳನ್ನು ನಿಧಿಗಳ್ಳರು ಅಗೆದಿದ್ದು, ಅಲ್ಲಿ ಕಪ್ಪು ಬಣ್ಣದ ಮಡಕೆ ಚೂರುಗಳು ದೂರೆತಿವೆ. ಈ ರೀತಿಯ ಸಮಾಧಿಗಳು ಅದೇ ಪರಿಸರದ ಕೂನಬೇವು, ಚಿಪ್ಪಿನಕೆರೆ, ಬ್ರಹ್ಮಗಿರಿ, ನೆರೆನಹಾಳು ಪರಿಸರದಲ್ಲೂ ದೂರೆತಿವೆ.
ಂ.ಹೆಚ್. ಕೃಷ್ಣ, ಮಾರ್ಟಿಮ್ಹರ್ ವೀಲ್ಹರ್ ಬ್ರಹ್ಮಗಿರಿ ಮತ್ತು ಚಂದ್ರವಳ್ಳಿಗಳಲ್ಲಿ ನಡೆಸಿದ ಉತ್ಖನನಗಳಲ್ಲಿ ದೊರೆತ ಅವಶೇಷಗಳಿಂದ ಹಾಗೂ ಚಿತ್ರದುರ್ಗ ತಾಲ್ಲೂಕು ಕೂನಬೇವು, ಚಿಪ್ಪಿನಕೆರೆಯಲ್ಲಿ ಎಸ್.ವೈ. ಸೋಮಶೇಖರ್ ಶೋಧಿಸಿದ ಪ್ರಾಕ್ಚಾರಿತ್ರಿಕ ಕುರುಹುಗಳು ಈ ನೆಲೆಗೆ ಹೋಲಿಕೆ ಆಗುವುದ ರಿಂದ ಈ ಪ್ರದೇಶವು ಬೃಹತ್ ಶಿಲಾಯುಗ ಅಥವಾ ಕಬ್ಬಿಣ ಯುಗ ಕಾಲಕ್ಕೆ ಸೇರಿದ ನೆಲೆಯಾಗಿರಬಹುದೆಂದು ತರ್ಕಿಸ ಬಹುದಾಗಿದೆ.


ಆಧಾರಸೂಚಿ
೧.         ಷೇಕ್ ಅಲಿ.ಬಿ [ಪ್ರ.ಸಂ], ೧೯೯೭,  ಕರ್ನಾಟಕ ಚರಿತ್ರೆ, ಸಂಪುಟ ೧, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
೨.         ಶಿವತಾರಕ್ ಕೆ.ಬಿ, ೨೦೦೧, ಕರ್ನಾಟಕದ ಪುರಾತತ್ತ್ವ ನೆಲೆಗಳು, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
೩.           ಇತಿಹಾಸ ಮತ್ತು ಪುರಾತತ್ತ್ವ, ಕನ್ನಡ ವಿಷಯ ವಿಶ್ವಕೋಶ, ೨೦೦೯, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು.
೪.         ಗೋಪಾಲ್ ಆರ್. [ಸಂ]., ೨೦೦೫, ಚಿತ್ರದುರ್ಗ ಜಿಲ್ಲೆಯ ಇತಿಹಾಸ ಮತ್ತು ಪುರಾತತ್ತ್ವ, ಕರ್ನಾಟಕ ಪ್ರಾಚ್ಯವಸ್ತು ಸಂಗ್ರಹಾಲಯಗಳ ನಿರ್ದೇಶನಾಲಯ, ಹೊಸಪೇಟೆ.
೫.       ಕ್ಷೇತ್ರ ಕಾರ್ಯದ ವರದಿ.
* ಪಿಎಚ್.ಡಿ., ಸಂಶೋಧನಾರ್ಥಿ, ಪ್ರಾಚೀನ ಇತಿಹಾಸ ಮತ್ತು ಪುರಾತತ್ತ್ವ ಅಧ್ಯಯನ ವಿಭಾಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ-೫೮೩೨೭೬.
  **  ಕಲೂನಬೇವು, ಚಿತ್ರದುರ್ಗ ತಾಲ್ಲೂಕು-೫೭೭೫೧೭.

ತಿ ಪಿಎಚ್.ಡಿ., ಸಂಶೋಧನಾರ್ಥಿ, ಪ್ರಾಚೀನ ಇತಿಹಾಸ ಮತ್ತು ಪುರಾತತ್ತ್ವ ಅಧ್ಯಯನ ವಿಭಾಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ-೫೮೩೨೭೬.

Saturday, November 9, 2013

ಹಸ್ತ ಪ್ರತಿ ಸಮಾವೇಶದ ಸರ್ವಾದ್ಯಕ್ಷರು



ಎಚ್‌.ಶೇಷಗಿರಿರಾವ್‌



ಹಸ್ತಪ್ರತಿರಂಗದ ಹಿರಿಯತಲೆಪ್ರೊ.ಜಿ.ಜಿ. ಮಂಜುನಾಥನ್‌.







       ಹೆಸರಿನ ಹಪಾಹಪಿ ಇಲ್ಲದೆ,ಅಧಿಕಾರ ಆಸೆ ಇಲ್ಲದೆ ಎಲೆಯ ಮರೆಯ ಕಾಯಿಯಂತೆ ಜನಸಂಪರ್ಕಕ್ಕೆಬಾರದೆ  ತಾಳೆಗರಿಗಳ ನಡುವೆ ತನ್ಮಯಯರಾಗಿ ಕಾರ್ಯ ನಿರ್ವಹಿಸುವವರು ಹಸ್ತಪ್ರತಿ ವಿದ್ವಾಂಸರು. ಬಿ.ಎಲ್‌ರೈಸ್‌ರವರ ಕಾಲದಲ್ಲಿ ನಾಡಿನ  ಸರಸ್ವತಿಬಂಢಾರವನ್ನು  ತುಂಬಲು ಹಸ್ತಪ್ರತಿಗಳನ್ನುಸಂಗ್ರಹಿಸುವ, ಸಂರಕ್ಷಿಸುವ, ಅಧ್ಯಯನಮಾಡುವ ಸಂಸ್ಥೆಯೆಂದರೆ ಮೈಸೂರಿನ ಓರಿಯಂಟಲ್‌ ರಿಸರ್ಚ ಇನಸ್ಟಿಟ್ಯೂಟ್‌ ಸಂಸ್ಥೆ ಅದರಲ್ಲಿ ಬಿ.ಎಲ್.ರೈಸ್‌  ಆರ್‌.ನರಸಿಂಹಾಚಾರ್,ಡಾ.ಶಾಮಾಶಾಸ್ತ್ರಿ ಮೊದಲಾದ ಮಹನೀಯರು ದುಡಿದು  ಪ್ರಾಚೀನ ಕೃತಿಗಳನ್ನು ಬೆಳಕಿಗೆ ತಂದಿರುವರು. ಆ ದಿಶೆಯಲ್ಲಿ ಹೆಜ್ಜೆ ಹಾಕಿ ಮೂರು ದಶಕಕ್ಕೂ ಹೆಚ್ಚು  ಕಾಲ ಕುವೆಂಪು ಕನ್ನಡ ಅಧ್ಯಯನಸಂಸ್ಥೆಯಲ್ಲಿ  ಸೇವೆ ಸಲ್ಲಿಸಿ ವೃತ್ತಿಯಿಂದ ನಿವೃತ್ತರಾದ ಮೇಲೂ ಹಸ್ತಪ್ರತಿಗಳ ಹಳೆಯನಂಟನ್ನು ಮುಂದುವರಿಸಿರುವ ವಿದ್ವಾಂಸರೆಂದರೆ ಡಾ.ಜಿ,ಜಿ, ಮಂಜುನಾಥನ್.

ಡಾ. ಜಿ.ಜಿ. ಮಂಜುನಾಥನ್‌

 ಗುಂಡ್ಲುಪೇಟೆ ಗುಂಡಪ್ಪಯ್ಯ್ತಮಂಜುನಾಥನ್‌ ಅವರ ಪೂರ್ಣಹೆಸರು .,ಇವರ ಜನನ 06-8-1941 ರಲ್ಲಿ.ಹುಟ್ಟೂರು ಚಾಮರಾಜನಗರ ಜಿಲ್ಲೆಯಗುಂಡ್ಲುಪೇಟೆ.ತಂದೆ ಜಿ.ಎನ್‌.ಗುಂಡಪ್ಪಯ್ಯ ಇವರದು ತಳಲೆ ಶಾನುಭೋಗರ ವಂಶ. ತಂದೆ ಬಹುಬಾಷಾ ಪರಿಣಿತರು.ಸಾಹಿತ್ಯಾಸಕ್ತರು ಸಾರ್ವಜನಿಕ ಸೇವೆಯಲ್ಲಿ ತೊಡಗಿದವರು. ಪುರಸಭಾ ಸದಸ್ಯರಾಗಿ ಜನಾನುರಾಗಿಗಳಾಗಿದ್ದರು.. ತಾಯಿ ಸುಬ್ಬಮ್ಮ ಸಹೃದಯಿ ಸುತ್ತಲ ಜನರಿಗೆ ಸಹಾಯಮಾಡಲು ಸದಾ ತುಡಿಯುವ ತಾಯಿ.  ಹೀಗಾಗಿ ಮಂಜುನಾಥನ್‌ ಬಾಲ್ಯದಿಂದಲೇ ಜನರ ನಡುವೆ,ಅವರ ಒಡನಾಟದಲ್ಲಿ ಬೆಳೆದವರು. ಈಗಲೂ  ಊರು ಬಿಟ್ಟ ಹಲವು ದಶಕಗಳಾದರೂ ಅವರೊಡನೆ  ಸತತ ಸಂಪರ್ಕವಿದೆ.
ಇವರ ಪ್ರಾಥಮಿಕ ಶಿಕ್ಷಣ ಮನೆಯಲ್ಲಿಯೇ ಆಯಿತು. .ಅವರ ತಾತನೇ ಮೊದಲ ಗುರು. ಅವರಿಂದಲೆ ಅಕ್ಷರ ಮತ್ತು  ಲೆಕ್ಕ  ಕಲಿಕೆ. ಅವರಲ್ಲಿ ಕಲಿತು ನೇರವಾಗಿ ಮಾಧ್ಯಮಿಕ ಶಾಲೆಗೆ ಸೇರಿದರು ೧೯೫೭ ರಲ್ಲಿ ಹೈಸ್ಕೂಲು ಶಿಕ್ಷಣ ಮುಗಿಸಿ ಕಾಲೇಜು ಕಲಿಯಲು ಮೈಸೂರಿಗೆ ಬಂದರು. ಯುವರಾಜ ಕಾಲೇಜಿನಲ್ಲಿ ಪಿ.ಯುಸಿಗೆ ಸೇರಿದರು. ಅಲ್ಲಿ ಜಿ.ಎಸ್‌ಶಿವರುದ್ರಪ್ಪ ಮತ್ತು ಚಿದಾನಂದ ಮೂರ್ರಿ*ಗಳೀಂ*ದ ಕನ್ನಡ ಕಲಿಯುವ ಅವಕಾಶ ದೊರೆಯಿತು. ನಂತರ, ಮಹಾರಾಜಕಾಲೇಜಿನಲ್ಲಿ ಪದವಿಗೆ ಅಬ್ಯಾಸಮಾಡಿದರು..ಅರ್ಥಶಾಸ್ತ್ರ ಮತ್ತು ಕನ್ನಡ  ಐಚ್ಛಿಕವಿಷಯಗಳಾಗದ್ದವು.. ಕಾಲೇಜಿನಲ್ಲಿ ಪ್ರೊ.ತಿ.ನಂ ಶ್ರೀ,ಪ್ರೊ.ಡಿ.ಎಲ್‌.ಎನ್,ಎಸ್‌.ವಿ..ಪರಮೇಶ್ವರಭಟ್ಟರು, ಪ್ರೊ.ವರದರಾಜರಾವ್‌, ಡಾ. ಹಾ.ಮಾ.ನಾಯಕ್‌ ಗುರುಗಳಾಗಿ ದೊರೆತರು. ನಂತರ ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ,ಎಂ.ಎ ಗೆ ಸೇರಿದರು. ಮಾನಸ ಗಂಗೋತ್ರಿಯಲ್ಲಿ ತಿ.ನಂ ಶ್ರೀ., ಡಿ.ಜವರೇಗೌಡ, ಎಲ್‌.ಬಸವರಾಜು ಅವರ ಮಾರ್ಗದರ್ಶನ ದೊರೆಯಿತು ಹೀಗೆ ಅವರ ಕಾಲೇಜು ಶಿಕ್ಷಣ ಅವಧಿಯಲ್ಲಿ ಸಂಪೂರ್ಣ ವಿದ್ವತ್‌ ವಾತಾವರಣ ದೊರೆಯಿತು.. ಇವರೆಲ್ಲರ ಸ್ಪೂರ್ತಿದಾಯಕ ಬೋಧನೆಯಿಂದ ಅವರ ಕಾರ್ಯಕ್ಷಮತೆ ಹೆಚ್ಚಿತು.
ಎಂ. ಎ ಪರೀಕ್ಷೆ ಕಾರಣಾಂತರದಿಂದ ಮುಂದೆ ಹೋಯಿತು.ಆ ಅವಧಿಯಲ್ಲಿ ಮಳವಳ್ಳಿ ತಾಲೂಕಿನ ಪೂರಿಗಾಲಿಯಲ್ಲಿ ಗಾಂಧಿವಾದಿ ತಗಡೂರುಸುಬ್ಬಣ್ಣನವರು ಸ್ಥಾಪಿಸಿದ್ದ ಸಾರ್ವಜನಿಕ ಪ್ರೌಢಶಾಲೆಯಲ್ಲಿ ಉಪಾಧ್ಯಾಯರಾದರು .ಅಲ್ಲಿ ತಮ್ಮ ಬೋಧನಾ ವಿಧಾನ ಮತ್ತು ಬದ್ದತೆಯಿಂದ ಜನಪ್ರಿಯರಾದರು. ಸೇವೆ ಸಲ್ಲಿಸಿದ ಒಂದೇ ವರ್ಷದಲ್ಲಿ ಸಂಸ್ಥೆಯ ಆಸ್ತಿ ಎಂಬ ಹೆಸರು ಪಡೆದರು. ಆದರೆ ಗುರುಗಳಾದ ಪ್ರೊ. ಜವರೇಗೌಡರು ಮೈಸೂರಿನಲ್ಲಿ ಸಂಪಾದನಾ ವಿಭಾಗಕ್ಕೆ ಅವರನ್ನು ಆಹ್ವಾನಿಸಿ ಉದ್ಯೋಗ ನೀಡಿದರು. ಸಹಾಯಕ ಸಂಪಾದಕನೆಂದು ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟು ಕಚೇರಿಯಲ್ಲಿ ವೃತ್ತಿಜೀವನ ಪ್ರಾರಂಭವಾಯಿತು. ಆಗಎನ್‌.ಬಸವಾರಾಧ್ಯರು ಸಂಪಾದಕರು .ಪ್ರೊ. ಡಿ .ಎಲ್‌.ಎನ್‌ .ಮತ್ತು  ತಿ.ನಂ.. ಶ್ರೀ ಸಲಹೆಗಾರರು. ನಿಘಂಟು ರಚನೆಯ ಸಮಯದಲ್ಲಿ ಹಲವಾರು ಪ್ರಾಚೀನ ನಿಘಂಟುಗಳನ್ನು, ಪುರಾಣ ಕೃತಿಗಳನ್ನೂ ಅವಲೋಕಿಸ ಬೇಕಾಗುತಿತ್ತು ತಾಳೆಗರಿ, ಹಸ್ತ ಪ್ರತಿ, ಕೋರಿ ಕಾಗದದ ಪ್ರತಿಗಳನ್ನು ಓದ ಬೇಕಿತ್ತು.ನಂತರ  ನಿಘಂಟಿನ ಕರಡು ರಚಿಸಿ ಅದನ್ನು ಪ್ರತಿ ತಿಂಗಳ ಸಭೆಗೆ ಮೊದಲು  ಮೈಸೂರಿಗೆ ಹೋಗಿ  ಪ್ರೊ. ಡಿ .ಎಲ್‌.ಎನ್‌ ಮತ್ತು ಪ್ರೊ. ತಿ.ನಂ ಶ್ರೀ. ಅವರ ಮಾರ್ಗದರ್ಶನ ಪಡೆಯಲಾಗುತಿತ್ತು .ನಂತರ ನಿಘಂಟಿನ ಸಮಿತಿಯ ಸಭೆಯಲ್ಲಿ ಚರ್ಚಿತವಾಗುತಿತ್ತು. ನಾಡಿನ ಖ್ಯಾತ ವಿದ್ವಾಂಸರಾದ. ದೇಜೆ ಗೌ,, ಮರಿಯಪ್ಪಭಟ್ಟರು, ಸಿದ್ದಯ್ಯಪುರಾಣಿಕ,.ಡಿ.ಕೆ. ಭೀಮಸೇನರಾವ್, ಕೆ.ಎಸ್.ಧರಣೇಂದ್ರಯ್ಯ ಬಿ. ಶಿವಮೂರ್ತಿಶಾಸ್ತ್ರಿ, ಮತ್ತು ಸ..ಸ. ಮಾಳವಾಡ,  ಚರ್ಚೆಯಲ್ಲಿ ಭಾಗವಹಿಸಿ ಅಂತಿಮ ರೂಪ ಕೊಡುತಿದ್ದರು. ಒಂದು ಶಬ್ದ. ಅದರ ಭಿನ್ನರೂಪಗಳು, ಅರ್ಥ, ಪ್ರದೇಶಿಕ ಭಿನ್ನತೆ,  :ಅಭಿಪ್ರಾಯ ಬೇಧ, ಸಮರ್ಥನೆ ಹೀಗೆ ಹಲವು ಸ್ತರದಲ್ಲಿ ಚರ್ಚೆ ನಡೆಯುತಿತ್ತು. ಇದರ ಪರಿಣಾಮವಾಗಿ ಗ್ರಂಥ ಸಂಪಾದನಾ ಕಾರ್ಯದಲ್ಲಿ ಉತ್ತಮ ಮಾರ್ಗದರ್ಶನ ದೊರೆಯಿತು. ಇದರಿಂದ “ಕೆಲಸ ಸಂಸ್ಕೃತಿ” ಯ ಮಟ್ಟ ಹೆಚ್ಚಿತು.
 ಅವರ ಕಲಿಕೆಯ ಮಹತ್ವದಘಟ್ಟ ಡಿ ಎಲ್ ಎನ್‌ ಅವರಿಗೆ ಸಹಾಯಕನಾಗಿ ಅವರ ಮನೆಯಲ್ಲಿಯೇ ಕೆಲಸ ನಿರ್ವಸಿದ ಮೂರು ವರ್ಷದ ಅವಧಿ.  ನಿಘಂಟು ಶಾಸ್ತ್ರ, ಗ್ರಂಥ ಸಂಪಾದನೆ ಮತ್ತು ಹಸ್ತಪ್ರತಿಶಾಸ್ತ್ರ, ಬಾಷೆಯ ಬಳಕೆ ವಿಷಯದಲ್ಲಿ ನಿಖರತೆ ದೊರೆತದ್ದು ಆಗಲೇ. ನಂತರ ಕ.ವೆಂ. ರಾಘವಾಚಾರ್‌ಮತ್ತು ಡಾ.ಜಿ.ಎಸ್‌ಗಾಯಿ ಅವರೊಂದಿಗೆ ಕೆಲಸ ಮಾಡುವ ಸಮಯದಲ್ಲಿ ಸಾಹಿತ್ಯ ವಿವೇಚನೆಯಲ್ಲ್ಲಿಶಾಸನಗಳ ಬಳಕೆಯ ಸಾದ್ಯತೆಯ ಅರಿವಾಯಿತು.
ಉದ್ಘಾಟನೆ
ಹಿರಿಯರ ಮಾರ್ಗದರ್ಶನ ಅವರ ಮುಂದಿನ ಕಾರ್ಯಕ್ಕೆ ದಾರಿ ದೀಪವಾಯಿತು. ಬಹುತೇಕ ವಿದ್ವಾಂಸರು ಜನಪ್ರಿಯ ಕೃತಿಗಳ ಸಂಪಾದನಾ ಕೆಲಸಕ್ಕೆ ಕೈಹಾಕುವರು.. ಆದರೆ ಮಂಜುನಾಥನ್‌ ಯಾರೂ ಗಮನಿಸದ ವಿರಳ ಲೌಕಿಕ ಶಾಸ್ತ್ರಕೃತಿಗಳ ಸಂಪಾದನೆಗೆ ಮುಂದಾದರು. ವೈದ್ಯ ಶಾಸ್ತ್ರ, ಕಾಮಶಾಸ್ತ್ರ, ಗೃಹಶಾಸ್ತ್ರ,ಗಜ ಶಾಸ್ತ್ರ, ಅಶ್ವ ಶಾಸ್ತ್ರ, ಜೋತಿಷ್ಯ ಶಾಸ್ತ್ರಗಳು ನಿರ್ಲಕ್ಷ್ಯಕ್ಕೆ ಒಳಗಾಗಿದ್ದವು. ಕಾರಣ ಹೆಚ್ಚಿನ ಸಂಖ್ಯೆಯ ಪ್ರತಿಗಳ ಕೊರತೆ ಮತ್ತು ಅದಕ್ಕೆ ಬೇಕಾದ ವಿಶೇಷ ಜ್ಞಾನದ ಅಭಾವ.ಅನೇಕರು  ಹಿಂಜರಿಯುವ ಕೆಲಸಕ್ಕೆ ಡಾ. ಮಂಜುನಾಥನ್‌ ಮುಂದಾದರು. ಅದರ ಫಲವಾಗಿ ವಿರಳ ಕೃತಿಗಳ ಹೊರತರುವ ಸಾಹಸ ಮೊದಲಾಯಿತು.. ಜನವಶ್ಯ,ಯೋಗರತ್ನಾಕರ,ಸುಜ್ಞಾನಚಿಂತಾಮಣಿ, ಅಶ್ವಶಾಸ್ತ್ರ ಸಂಪಾದಿಸಿದರು.” ಜನವಶ್ಯ” ಎಂಬುದು ಶರ,ಕುಸುಮ ಮತ್ತು ಭೋಗ ಷಟ್ಪದಿಯಲ್ಲಿರುವ ಕಾವ್ಯ. ವಿಜಯನಗರದ ರಾಜವಂಶಸ್ಥನಾದ ಕಲ್ಲರಸನ ಕೃತಿ. .ಇದರಲ್ಲಿ ಕಾಮಶಾಸ್ತ್ರಕ್ಕೆ ಸಂಬಂಧಿಸಿದ ವಿವರಗಳು ಇವೆ. ಅದರ ರಚನೆಯಲ್ಲಿ ಅದರ ನಿಖರತೆಗಾಗಿ ಅನೇಕ ಇಂಗ್ಲಿಷ್‌ಗ್ರಂಥಗಳನ್ನೂ ಪರಿಶೀಲಿಸಿದರು. ಇದು ಒಂದು ವೈಜ್ಞಾನಿಕ ದೃಷ್ಟಿಕೋನದ ನಿಖರ ಮಾಹಿತಿ ಇರುವ ಕೃತಿ. ಇತ್ತೀಚೆಗ ಶಾಲಾ ಪಠ್ಯ ಕ್ರಮದಲ್ಲಿ ಲೈಂಗಿಕ ಶಿಕ್ಷಣ ಸೇರಿಸ ಬೇಕೆಂಬ ಯೋಜನೆ ಇರುವಾಗ “ಜನವಶ್ಯ”  ಗ್ರಂಥವು ಮಹತ್ವ ಪಡೆಯುವುದು.

ಓರಿಯಂಟಲ್‌ ಇನಸ್ಟಿಸ್ಟೂಟನಲ್ಲಿ ಇದ್ದಾಗ ಅವರು ಸಂಚಾರಿಪಂಡಿತರಾಗಿ ಕಾರ್ಯ ನಿರ್ವಹಿಸಿದರು. ಹಸ್ತಪ್ರತಿಗಳ ಸಂಗ್ರಹ ಅವರ ಮುಖ್ಯ ಉದ್ದೇಶ. ಆಗಿನ ಅವರ ಹಸ್ತಪ್ರತಿ ಸಂಗ್ರಹದ ಓಡಾಟದ ಅನುಭವ ಬಹಳ ರೋಚಕ. ಅನೇಕ ಸಲ ಅವರಿಗೆ ಹುಡುಕಿಕೊಂಡು ಹೋದ ಹಸ್ತಪ್ರತಿ ದೊರೆಯದು, ಕಣ್ಣಿಗೆ ಕಂಡದ್ದು ಕೈಗೆ ಬಾರದ ನಿರಾಶೆಯ ದಿನಗಳೂ ಇದ್ದವು  ಆದರೆ  ಆ  ಕೆಲಸದ ಜೊತೆ ಜೊತೆಯಲ್ಲಿಯ ಅಪೂರ್ವ ಪ್ರಾಚ್ಯವಸ್ತುಗಳ ಸಂಗ್ರಹಣೆಯನ್ನೂ ಮಾಡಿದರು.. ಓರಿಯಂಟಲ್‌ಇನಸ್ಟಿಟೂಟ್‌ ಕುವೆಂಪು ಅಧ್ಯಯನಸಂಸ್ಥೆಯ ಪ್ರಾಚ್ಯವಿದ್ಯಾ ಸಂಶೋಧನಾಲಯದಲ್ಲಿ ವಿಲೀನ ಗೊಂಡಮೇಲೆ ಸಂಶೋಧನಾ ಸಹಾಯಕರೆಂಬ ಹೊಸ ಹೆಸರಿನೊಂದಿಗೆ ಕೆಲಸ ಮಾಡಿದರು.ಆಗಲೂ ಹಾಸನ,ಮಧುಗಿರಿ,ಮಾಗಡಿ,ಕೊಳ್ಳೆಗಾಲ,ತೀರ್ಥಹಳ್ಳಿ ತಾಲೂಕಗಳಲ್ಲಿ ಹಸ್ತಪ್ರತಿ ಸಂಗ್ರಹಕ್ಕೆ ಪ್ರವಾಸ ಮಾಡಿದರು. ಆದರೆ ಅಂಥಹ ಯಶಸ್ಸು ದೊರೆಯಲಿಲ್ಲ.
ಸನತ್ಕುಮಾರ ಚರಿತೆ, ಜೀವಂಧರ ಚರಿತೆ, ಚಂದ್ರಪ್ರಭ ಚರಿತೆ,ಹಾಲಾಸ್ಯ ಪುರಾಣಂ. ನಂದಿ ಮಹಾತ್ಮಂ, ,ಗಿರಿರಮಣವಿಲಾಸ,ನನ್ನಯ್ಯಗಳ ಚಾರಿತ್ರೆ ಅಶ್ವಶಾಸ್ತ್ರ,ಈ ಮೊದಲಾದ ಜೈನ, ಶೈವ, ಶಾಸ್ತ್ರಮತ್ತು ಚಾರಿತ್ರಿಕ ಕೃತಿಗಳನ್ನು ಸಂಪಾದಿಸಿರುವರು. ಅಲ್ಲದೆ ಅಳಿಯ ಲಿಂಗರಾಜ ಬರೆದ ಯಕ್ಷಗಾನ ಸಾಹಿತ್ಯ ಮೊದಲಾದ ೪೪ ಕೃತಿಗಳು ಕುವೆಂಪು ಕನ್ನಡ ಅಧ್ಯಯನಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ,ಹಂಪಿ ವಿಶ್ವ ವಿದ್ಯಾಲಯ, ಕನ್ನಡ ಸಾಹಿತ್ಯ ಪರಿಷತತ್ತಿನಂಥಹ ಪ್ರತಿಷ್ಠಿತ ಸಂಸ್ಥೆಗಳಿಂದ ಪ್ರಕಟವಾಗಿವೆ.
ಹುಟ್ಟೂರಿನ ಮೇಲೆ ಅವರಿಗೆ ಅಪಾರ  ಅಭಿಮಾನ. ಅವರು ಗ್ರಂಥಸಂಪಾದನೆ ಮಾಡಲು ಪ್ರಥಮವಾಗಿ ಆರಿಸಿದ ಕೃತಿ  ಅವರ ಹುಟ್ಟೂರಿಗೆ  ಹತ್ತಿರವಿರುವ ತೆರಕಣಾಂಬಿಯ ಬೊಮ್ಮರಸ ನಸನತ್ಕುಮಾರ  ಚರಿತೆ ಆಯ್ದುಕೊಂಡರು  .ಅವರ ಆಸಕ್ತಿಯ ಫಲವಾಗಿ ಕೌಂಡಿನ್ಯ ವನಶ್ರೀ, ಇಂಗುಳವಾಡಿ ಮಾದೇಶ್ವರ,  ಶ್ರೀಗಂದ ಮೊದಲಾದ ಕೃತಿಗಳುಬೆಳಕು ಕಂಡು ಗುಂಡ್ಲುಪೇಟೆ ತಾಲೂಕಿನ ಸವಿವರ ಚಿತ್ರ ನೀಡುತ್ತವೆ. ಮೈಸೂರು ಜಿಲ್ಲೆಯ ಸಾಹಿತ್ಯ ಸಮ್ಮೇಳನ ಅಂಗವಾಗಿ ಗುಂಡ್ಲು ಪೆಟೆ ತಾಲೂಕಿನಭೂಪ್ರದೇಶ, ಇತಿಹಾಸ, ಮಠಮಾನ್ಯಗಳುತೀರ್ಥ ಕ್ಷೇತ್ರಗಳು, ಜಾನಪದ, ಶಾಸನ ಪರಂಪರೆ, ಕವಿರಾಜ ಮಾರ್ಗದಿಂದ ಹಿಡಿದು ದೇವನೂರು ಮಹಾದೇವನ ವರೆಗಿನ ಸಾಹಿತ್ಯ ವಿವೇಚನೆ ಒಳ ಗೊಂಡ “ ಸ್ಕಂದ ಗಿರಿ” ಎಂಬ 500 ಪುಟಗಳ ಸ್ಮರಣ ಸಂಚಿಕೆ ಅವರ ಮೆಚ್ಚಿನ ಕೃತಿಯಾಗಿದೆ
ಇವರ ವಿದ್ವತ್‌ಸಾಧನೆ ಗಮನಿಸಿ ಮೂಡುಬಿದರೆಯಲ್ಲಿ ನಡೆದ ೭೧ ನೆಯ ಸಾಹಿತ್ಯ ಸಮ್ಮೇಳನದಲ್ಲಿ ’”ಕರ್ನಾಟಕಶ್ರೀ“ಪ್ರಶಸ್ತಿ ದೊರೆತಿದೆ. ಹಂಪಿ ಕನ್ನಡ ವಿಶ್ವವಿದ್ಯಾಲಯವೂ ೨೦೦೬ ಲ್ಲಿ ಸನ್ಮಾನಿಸಿದೆ. ೨೦೧೩ ರಲ್ಲಿ ಸೆಡಿಯಾಪು ಕೃಷ್ಣ ಭಟ್ಟರ ಪ್ರಶಸ್ತಿ ಸಂದಿದೆ. ಪ್ರತಿಷ್ಠಿತ ತೀ.ನಂ ಶ್ರೀ ಪ್ರಶಸ್ತಿಗೂ ಭಾಜನರಾಗಿರುವರು. .ಕಲ್ಲರಸನ “ಜನವಶ್ಯ” . ಮತ್ತು ಮಾದಣ್ಣನ “ ನನ್ನಯ್ಯಗಳ ಚಾರಿತ್ರ’ ರಾಜ್ಯ ಸಾಹಿತ್ಯ ಅಕಾಡೆಮಿಯು ಆಯಾ ವರ್ಷದ ಶ್ರೇಷ್ಟ ಕೃತಿಗಳೆಂದು   ಗೌರವ  ಪಡೆದಿವೆ.
 ಅಲ್ಲದೆ ಬಿ..ಎಂ. ಶ್ರೀ. ಸ್ಮಾರಕ ಪ್ರತಿಷ್ಠಾನವು ತುಮುಕೂರುವಿಶ್ವ ವಿದ್ಯಾನಿಲಯದಲ್ಲಿ ೨೦೧೩ನೆಯನವಂಬರ್‌ ೮ ರಂದು ನಡೆಸಿದ ರಾಷ್ಟ್ರೀಯ ಹಸ್ತಪ್ರತಿ ಅಧ್ಯಯನ ಸಮಾವೇಶದ ಸರ್ವಾಧ್ಯಕ್ಷ ಸ್ಥಾನವನ್ನೂ ನೀಡಿ ಗೌರವಿಸಿದೆ .
ಸ್ಮರಣ ಸಂಚಿಕೆ ಬಿಡುಗಡೆ
ಡಾ. ಜಿ .ಜಿ. ಮಂಜುನಾಥನ್‌ ಅವರದು ಸುಖಿ ಕುಟುಂಬ. ಅವರ ವಿವಾಹ ೧೯೬೪ ರಲ್ಲಿ  ಶ್ರೀಮತಿ ಸಿ.ಶಾರದಮ್ಮ ಅವರೊಂದಿಗೆ ಆಯಿತು.  ಅವರ ದಾಂಪತ್ಯ  ಜೀವನವು ಸುವರ್ಣ ಮಹೋತ್ಸವ ಆಚರಣೆ ಹತ್ತಿರ ಬಂದಿದೆ. ಅವರಿಗೆ ಇಬ್ಬರು ಪುತ್ರಿಯರು ಶ್ರೀಮತಿ ಎಂ.ನಾಗರತ್ನ ಮತ್ತು ಎಂ. ಮೀನಾಕ್ಷಿ . ಅವರಿಬ್ಬರೂ ಸುಮಾರು ಒಂದು ದಶಕದ ವಿದೇಶವಾಸದ ನಂತರ ಮತ್ತೆ ಹೆತ್ತವರ ಹತ್ತಿರವೇ ಇರಲು  ತಾಯ್ನಾಡಿಗೆ ಬಂದು  ನೆಲಸಿರುವರು.
ಮಡದಿಯೊಂದಿಗೆ ಮಂಜುನಾಥನ್‌
ಹುದ್ದೆಯಿಂದ ನಿವೃತ್ತರಾದರೂ ಕಾರ್ಯಭಾರ ಅವರ ಬೆನ್ನು ಬಿಟ್ಟಿಲ್ಲ. ಕಚೇರಿಯಲ್ಲಿ ಮಾಡುವ ಹಸ್ತಪ್ರತಿಗಳ ಅವಲೋಕನವು ಈಗ ಮನೆಯಲ್ಲಿಯೇ ನಡೆಯುತ್ತಿದೆ.. ನಿವೃತ್ತರಾದ ನಂತರ ಜಗನ್ನಾಥ ವಿಜಯ, ಮೋಹನ ತರಂಗಿಣಿ, ಸಿದ್ಧಾಂತ ಶಿಖಾಮಣಿ, ಒಡೆಯರ ಕಾಲದ ಹಾಡುಗಳು ಮೊದಲಾದ  8 ಕೃತಿಗಳನ್ನು ಸಂಪಾದಿಸಿರುವರು. , ನೋಂಪಿಯ ಕಥೆಗಳು ಈಗ ಅಚ್ಚು ಮನೆಯಲ್ಲಿದೆ. ಯಾವುದೆ ಹಸ್ತಪ್ರತಿಗೆ ತುರ್ತಾಗಿ ಅಧ್ಯಯನದ ಅಗತ್ಯಬಿದ್ದರೆ ಅದು ನೇರವಾಗಿ ಬರುವುದು ಡಾ, ಜಿ.ಜಿ .ಮಂಜುನಾಥನ್‌ರ ಬಳಿಗೆ. ಅವರು ಈ ಮಾಗಿದ ವಯಸ್ಸಿನಲ್ಲಿ ತಡಮಾಡದೆ ಸಂಶೋಧನೆ ಮಾಡಲು ತುಡಿಯುತಿದ್ದಾರೆ. ತಾವು ಬರೆಯುವುದಲ್ಲದೆ ಇತರರಿಗೂ ಬರೆಯಲು ಉತ್ತೇಜನ ನೀಡುವರು. ಕನ್ನಡ ಗ್ರಂಥಸಂಪಾದನಾ ರಂಗದ ಮೂಲಪುರುಷ ಡಿ..ಎಲ್. ಎನ್‌ ಅವರ  ಪರಂಪರೆಯನ್ನು ಯಶಸ್ವಿಯಾಗಿ ಮುಂದುವರಿಸಿರುವರು.








Thursday, November 7, 2013

National Seminar




ಹಸ್ತ ಪ್ರತಿ ಅಧ್ಯಯನ   ೩ನೆಯ  ರಾಷ್ಟ್ರೀಯ ಸಮಾವೇಶ ತುಮಕೂರು
೦೮-೧೧-೨೦೧೩
















Posted by Picasa

Tuesday, November 5, 2013

ಭೈರವಭಕ್ತರು

 ಡಾ|| ಪಿ.ವಿ. ಕೃಷ್ಣಮೂರ್ತಿ





ಭೈರವಭಕ್ತ - ಗಂಗ ವಂಶೀಯರು
         ಕೊಂಗುಣಿವರ್ಮ ಧರ್ಮಮಹಾಧಿರಾಜನ ಸಂತತಿಯವರಾದ ಗಂಗವಂಶೀಯರು, ಕುವಳಾಲ ಪುರವರಾಧೀಶ್ವರ, ನಂದಗಿರಿನಾಥರೆಂದು ಪ್ರಸಿದ್ಧರಾಗಿದ್ದರು. ಕುವಳಾಲ ಅಥವಾ ಕೋಳಾಲ ಎಂಬುದು ಇಂದಿನ ಕೋಲಾರ. ಇದನ್ನು ಗಂಗರು ತಮ್ಮ ಮೊದಲ ಹಾಗೂ ಮುಖ್ಯ ರಾಜಧಾನಿಯನ್ನಾಗಿ ಮಾಡಿಕೊಂಡು ದಕ್ಷಿಣ ಕರ್ನಾಟಕದ ಬಹುಭಾಗವನ್ನು ಒಳಗೊಂಡಿದ್ದಂಥ ‘ಗಂಗವಾಡಿ’ಯನ್ನು ಆಳಿದರು. ಅವರ ಕಾಲದಲ್ಲಿ ಅನೇಕ ದೇವಾಲಯಗಳು ನಿರ್ಮಾಣವಾದವು. ಸೀತಿಯ ಸೀಪತೀಶ್ವರ (ಶ್ರೀಪತಿ) ಲಿಂಗ, ದುರ್ಗಾಶಿಲ್ಪ ಹಾಗೂ ಕ್ಷೇತ್ರಪಾಲ ದೇವರಾದ ಭೈರವದೇವರ ಶಿಲ್ಪಗಳು ಗಮನಾರ್ಹವಾಗಿದ್ದು, ಅವು ಗಂಗರ ಕಾಲದ ಶಿಲ್ಪ ಲಕ್ಷಣಗಳಿಂದ ಕೂಡಿವೆಯೆಂದು ವಿದ್ವಾಂಸರು ಅಭಿಪ್ರಾಯಪಟ್ಟಿರುತ್ತಾರೆ. ಗಂಗರ ಆಳಿಕೆಯ ಕಾಲಕ್ಕಾಗಲೇ ಸೀತಿಯಲ್ಲಿ ಭೈರವದೇವರ ಆರಾಧನೆ ಆರಂಭವಾಗಿದ್ದಿತು, ಅಲ್ಲದೆ ಕೊವಳಾಲ (ಕೋಲಾರ) ಪ್ರದೇಶದ ಒಡೆಯರಾಗಿದ್ದ ಗಂಗ ಅರಸರ ಆರಾಧ್ಯದೈವವಾಗಿಯೂ ನೆಲೆಗೊಂಡಿದ್ದ ಅಂಶ, ಮುಂದೆ ಅವರು ಚೋಳರ ಮಾಂಡಲಿಕರಾಗಿ ಕೊವಳಾಲ ಪ್ರದೇಶವನ್ನು ಆಳತೊಡಗಿದಾಗ ಸೀತಿಯ ಭೈರವದೇವರಿಗೆ ಅವರಿಂದ ಸಲ್ಲಿಸಲಾಗಿರುವ ದಾನದತ್ತಿಗಳ ವಿವರಗಳಿಂದ ಮನಗಾಣಬಹುದಾಗಿದೆ. ಚೋಳರ ಮಾಂಡಲಿಕರಾಗಿದ್ದ (ನಂತರ ಕಾಲದ ಈ) ಗಂಗರನ್ನು ಚರಿತ್ರಕಾರರು ‘ತಮಿಳುಗಂಗ’ರೆಂದೂ ಕರೆದಿರುವುದು ಕಂಡು ಬರುತ್ತದೆ. ಪ್ರಸ್ತುತ ಇವರ ನೆಲೆ, ಹಿನ್ನೆಲೆ ಮತ್ತು ಸೀತಿಯ ಭೈರವದೇವರಿಗೆ ಇವರಿಂದ ಸಂದ ಪೂಜಾ ಕೈಂಕರ್ಯ ಇತ್ಯಾದಿಗಳ ಒಂದು ಸ್ಥೂಲ ಪರಿಚಯವನ್ನು ನೀಡುವ ಪ್ರಯತ್ನ ಇಲ್ಲಿ ಮಾಡಲಾಗಿದೆ.
ಕರ್ನಾಟಕ ಇತಿಹಾಸದಲ್ಲಿ ಗಂಗರದು ವಿಶಿಷ್ಟ ಸ್ಥಾನ. ದಕ್ಷಿಣ ಕರ್ನಾಟಕಕ್ಕೆ ಗಂಗವಾಡಿ ಎಂಬ ಹೆಸರು ಬಂದುದು ಅವರಿಂದಲೇ ‘ಗಂಗಡಿಕಾರ ಒಕ್ಕಲಿಗ’ ಅಂದರೆ ಈ ಗಂಗವಾಡಿ ಪ್ರದೇಶದವರು ಎಂದು ಅರ್ಥ. ಗಂಗ ಅರಸರಲ್ಲಿ ಶ್ರೀಪುರಷ ಬಹು ಪ್ರಖ್ಯಾತನಾದ ದೊರೆ. ಅವನ ಮಗ ಇಮ್ಮಡಿ ಶಿವಮಾರ ಮಹಾ ಸ್ವಾಭಿಮಾನಿ. ಈತನು ರಾಷ್ಟ್ರಕೂಟರ ಬಂಧಿಯಾಗಿಯೇ ತನ್ನ ಜೀವಿತದ ಬಹುಭಾಗವನ್ನು ಕಳೆದನು. ಈತನ ಮಗ ಮಾರಸಿಂಹನು ಯುವರಾಜನಾಗಿ ಗಂಗ ರಾಜ್ಯವನ್ನು ಆಳಿದನು. ಈತನ ಹಿರಿಯ ಮಗ ಒಂದನೇ ಪ್ರಿಥಿವೀಪತಿ, ಇನ್ನೂ ಚಿಕ್ಕವನಿದ್ದುದರಿಂದ ಶಿವಮಾರನ ಸೋದರನಾದ ವಿಜಯಾಧಿತ್ಯನು ರಾಜ್ಯವಾಳಿದನು. ಇವನ ನಂತರ ಇವನ ಮಗನಾದ ಒಂದನೇ ರಾಚಮಲ್ಲನು ಗಂಗ ರಾಜ್ಯಾಧಿಪತಿಯಾದನು. ಗಂಗ ಸಿಂಹಾಸನಕ್ಕೆ ನಿಜವಾದ ವಾರುಸುದಾರನಾದ ಒಂದನೆಯ ಪ್ರಿಥಿವೀಪತಿಯ ಹಕ್ಕನ್ನು ರಾಜಮಲ್ಲನು ತಳ್ಳಿಹಾಕಲು ಸಾಧ್ಯವಾಗಲಿಲ್ಲ. ಅದರಿಂದಾಗಿ ಗಂಗ ರಾಜ್ಯವನ್ನು ಎರಡು ಭಾಗ ಮಾಡಿ, ಕೋಲಾರ ಜಿಲ್ಲೆಯನ್ನೊಳಗೊಂಡಂಥ ಗಂಗಱುಸಾಸಿರ ಪ್ರದೇಶದ ಅಧಿಪತಿಯನ್ನಾಗಿ ಪ್ರಿಥಿವೀಪತಿಯನ್ನು ನೇಮಿಸಿದನು. ಪ್ರಿಥಿವೀಪತಿಗೆ ಅಖಂಡ ಗಂಗವಾಡಿಯ ಅಧಿಪತಿಯಾಗುವ ಮೋಹ ಇದ್ದೇ ಇದ್ದಿತು. ಅದಕ್ಕಾಗಿ ಅವನು ತನ್ನ ನೆರೆಯವರಾದ ಬಾಣರು, ವೈದುಂಬರು-ತನ್ಮೂಲಕ ಪಲ್ಲವರ ಮೈತ್ರಿಯನ್ನು ಸಂಪಾದಿಸಿದನು. ಹಾಗೇ ಕಾಲಾಂತರದಲ್ಲಿ ಚೋಳರ ಮೈತ್ರಿಯನ್ನೂ ಗಳಿಸಿದನು. ಚೋಳದೊರೆ ಪರಾಂತಕನ ಮೂಲಕ ಬಾಣ ರಾಜ್ಯದ ಅಧಿಪತಿಯಾಗಿ ‘ಹಸ್ತಿಮಲ್ಲ’ನೆಂಬ ಹೆಸರಿನಿಂದ ಅದನ್ನು ಆಳಿದವನು ಇವನೇ ಎಂದು ತಿಳಿದು ಬರುತ್ತದೆ. ಬಾಣಕುಲದ ಮಾಂಡಲಿಕರೊಡನೆ ಬಾಂದವ್ಯ ಬೆಳಸಿದ್ದನು. ಈತನಿಗೆ ನನ್ನಿಯ-ಗಂಗನೆಂಬ ಮಗನಿದ್ದ. ಪಲ್ಲವರ ಮಿತ್ರನೂ ಆಗಿದ್ದ ಈ ಪ್ರಿಥಿವೀಪತಿಯು ಶ್ರೀಪುರಾಂಬಿಯಲ್ಲಿ ನಡೆದ ಕದನದಲ್ಲಿ ಕಾದು ಮಡಿದನು.
ಪ್ರಥಿವೀಪತಿಯ ಮಗನಾದ ನನ್ನಿಯಗಂಗನು, ತನಗೆ ಕ್ರಮಾಗತವಾಗಿ ಸಲ್ಲಬೇಕಾಗಿದ್ದ ಗಂಗಮಂಡಲವನ್ನು ಗಳಿಸಲು ಬಾಣರ ಹಾಗೂ ವೈದುಂಬರ ನೆರವನ್ನು ಪಡೆದನು. ಇವರೆಲ್ಲರೂ ಕೂಡಿ ಗಂಗ ಹಾಗೂ ಅವರ ಸಹಾಯಕರಾಗಿದ್ದ ನೊಳಂಬರ ವಿರುದ್ಧ ದಂಡೆತ್ತಿ ಬಂದು ಮಣ್ಣೆ, ಗಂಗಱುಸಾಸಿರ ಪ್ರದೇಶಗಳನ್ನಲ್ಲದೆ ವೈದುಂಬರಿಗೆ ಸೇರಿದ್ದ ಪುಲಿಯನಾಡೂ ಇವರ ವಶವಾಯಿತು. ಬಾಣರು ಅಧಿಪತಿಗಳಾದರು. ಈ ಜಯ ತಾತ್ಕಾಲಿಕವಾದುದಾಗಿದ್ದಿತು. ನೊಳಂಬ ಮಹೇಂದ್ರನು ಬಾಣರನ್ನು ಸೋರೆಮಡಿ ಎಂಬಲ್ಲಿ ನಡೆದ ಭೀಕರ ಕಾಳಗದಲ್ಲಿ ಸೋಲಿಸಿ ಓಡಿಸಿದನು. ಹೀಗಾಗಿ ನನ್ನಿಯಗಂಗನು ಗಂಗರಾಜ್ಯದ ಅಧಿಪತಿಯಾಗುವ ಆಸೆ ಈಡೇರದೇ ಕೊನೆಗೆ ಚೋಳರ ನಿಷ್ಠಾವಂತ ಮಾಂಡಲಿಕನಾಗಿಯೇ ಮುಂದುವರೆಯುವುದು ಅನಿವಾರ್ಯವಾಯಿತು.

ಚೋಳರ ಅಧೀನರಾಗಿ
            ಚೋಳರು ನಂತರದಲ್ಲಿ ಅಂದರೆ ರಾಜರಾಜಚೋಳನ ಕಾಲದಲ್ಲಿ ಪ್ರಬಲರಾಗಿ ರಾಜ್ಯ ವಿಸ್ತರಣಾಕಾಂಕ್ಷಿಗಳಾಗಿ ಗಂಗವಾಡಿಯ ಹಲವು ಪ್ರದೇಶಗಳನ್ನು ಕ್ರಮಕ್ರಮವಾಗಿ ಆಕ್ರಮಿಸಿ ಅಂತಿಮವಾಗಿ ಕ್ರಿ.ಶ. ೧೦೦೪ ರಲ್ಲಿ ತಲಕಾಡನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುವ ಮೂಲಕ ಗಂಗವಾಡಿಯಲ್ಲಿ ಗಂಗರ ಆಳಿಕೆಯನ್ನು ಅಳಿಸಿಹಾಕಿದರು. ಚೋಳರ ಇಂಥ ರಾಜ್ಯ ವಿಸ್ತರಣಾ ಕಾರ್ಯದಲ್ಲಿ ಮೂಲತಃ ಗಂಗವಂಶೀಯರಾದ ಪ್ರಿಥಿವೀಪತಿ-ನನ್ನಿಯಗಂಗರ ಸಂತತಿಯವರು ವಿಶೇಷವಾಗಿ ನೆರವಾಗಿದ್ದಿರಬೇಕು.
          ಕ್ರಿ.ಶ. ೧೧೧೭ ರಲ್ಲಿ ಹೊಯ್ಸಳ ವಿಷ್ಣುವರ್ಧನನು, ಚೋಳರ ವಶವಾಗಿದ್ದ ತಲಕಾಡನ್ನು ತನ್ನದಾಗಿಸಿಕೊಳ್ಳುವುದರ ಮೂಲಕ ಚೋಳರನ್ನು ಕರ್ನಾಟಕದಿಂದ ಓಡಿಸಿದನು. ಆದರೆ ಕೋಲಾರ ಪ್ರದೇಶದಲ್ಲಿ ಕ್ರಿ.ಶ. ೧೧೨೦ ರಿಂದ ೧೧೩೦ ರ ಅವಧಿಯಲ್ಲಿ ವಿಕ್ರಮ ಚೋಳನ ಹಲವು ಶಾಸನಗಳು ಕಂಡು ಬಂದಿರುವುದರಿಂದ ವಿಷ್ಣುವರ್ಧನನ ವಿಜಯದ ನಂತರದ ಕೆಲವೇ ವರ್ಷಗಳಲ್ಲಿ ಕೋಲಾರ ಪ್ರದೇಶದಲ್ಲಿ ಚೋಳರ ಆಳಿಕೆ ಮುಂದುವರಿದಿರುವುದನ್ನು ಗಮನಿಸಬಹುದಾಗಿದೆ. ಮತ್ತೆ ಕ್ರಿ.ಶ. ಸು. ೧೧೫೦ ರಿಂದ ೧೧೬೯ ರವರೆಗೆ ಹೊಯ್ಸಳರ ಶಾಸನಗಳು ಈ ಪ್ರದೇಶದಲ್ಲಿ ಕಾಣಿಸಿಕೊಂಡಿವೆ. ಅನಂತರದಲ್ಲಿ ಸುಮಾರು ಒಂಬತ್ತು ವರ್ಷಗಳ ಕಾಲ ಶಾಸನಗಳು ಮೌನ ವಹಿಸಿರುವುದು ಆಶ್ಚರ್ಯ ಸಂಗತಿಯಾಗಿದೆ. ಆದರೂ ಕ್ರಿ.ಶ. ೧೧೭೮ ರ ಮುಮ್ಮಡಿ ಕುಲೋತ್ತುಂಗ ಚೋಳನ ಶಾಸನದಿಂದ ಈ ಪ್ರದೇಶದ ಮೇಲೆ ಆತನ ಅಧಿಕಾರವಿದ್ದುದು ತಿಳಿದುಬರುತ್ತದೆ. ಆದರೆ ಅದೇ ಶಾಸನದ ಮುಂದಿನ ಸಾಲಿನಲ್ಲೇ ಹೊಯ್ಸಳ ವೀರಬಲ್ಲಾಳನ ಉಲ್ಲೇಖವಿದ್ದು, ಆತನೂ ರಾಜ್ಯವಾಳುತ್ತಿರುವಂತೆ ಉಕ್ತವಾಗಿದೆ. ಇದರಿಂದ, ಸಮಕಾಲೀನವಾಗಿ ಈ ಪ್ರದೇಶದಲ್ಲಿದ್ದ ರಾಜಕೀಯ ಪರಿಸ್ಥಿತಿಯ ಅಸ್ತವ್ಯಸ್ಥತೆಯನ್ನು ಮನಗಾಣಬಹುದಾಗಿದೆ. ಅಂದರೆ ರಾಜ್ಯಾಧಿಕಾರವು ಈ ಎರಡೂ ಶಕ್ತಿಗಳ ಮಧ್ಯೆ ತೊಳಲಾಡುತ್ತಿದ್ದಿತು.


ವೀರ ಸೆಲ್ವ ಗಂಗ
          ಇದೇ ಸಂದರ್ಭದಲ್ಲಿ ಪ್ರಾಚೀನ ಗಂಗರ ಬಿರುದುಗಳನ್ನು ಧರಿಸಿರುವ ಗಂಗ ವಂಶದ ವ್ಯಕ್ತಯೋರ್ವನು ಮಹಾಮಂಡಳೇಶ್ವರನಾಗಿ ಕಾಣಿಸಿಕೊಳ್ಳುತ್ತಾನೆ. ಈತನಿಗೆ ಶಾಸನಗಳಲ್ಲಿ ಸಾಮಂತ ಸ್ಥಾನದ ಉಲ್ಲೇಖವಿದ್ದರೂ ಇವನ ಯಾವ ಶಾಸನದಲ್ಲೂ ಅಧಿರಾಜನ ಉಲ್ಲೇಖವಿರುವುದಿಲ್ಲ. ಅಂದರೆ ಇವನು ಬಹುಮಟ್ಟಿಗೆ ಸ್ವತಂತ್ರನಾಗಿಯೇ ಆಳುತ್ತಿದ್ದಂತೆ ಕಂಡುಬರುತ್ತದೆ. ಈತನೇ ‘ವೀರಗಂಗ’. ಈತನನ್ನು ಶಾನವೊಂದು ‘ಅಧೃಷ್ಟ ದೇವತೆಯ ಸಂಗಾತಿ’, ‘ವಿಜಯಶ್ರೀಯವಲ್ಲಭ’, ‘ಗಜಲಾಂಛನಾಲಂಕೃತ’, ‘ಮುಚುಕುಂದಗಿರಿವರಾದೀಶ್ವರ’, ‘ಪಾಂಡ್ಯರ ಹುಟ್ಟನ್ನಡಗಿಸಿ ಕಾವೇರಿಯನ್ನು ದಾಟಿ ವೆಂಗಾಲಿಯನ್ನು ಸ್ವಬಲದಿಂದ ಆಕ್ರಮಿಸಿದವನು’ ಎಂದು ಕೀರ್ತಿಸಿದೆ (ಕೋಲಾರ ೧೩೨). ಅಷ್ಟೇ ಅಲ್ಲದೆ ಈತನು ಮೂರು ತೆರನಾದ ತಮಿಳಿನಲ್ಲಿ ವಿದ್ವತ್ತನ್ನು ಸಂಪಾದಿಸಿದ್ದನೆಂದೂ ಅದೇ ಶಾಸನದಿಂದ ತಿಳಿದುಬರುತ್ತದೆ. ಈತನ ೪೬ನೇ ಆಡಳಿತ ವರ್ಷದ ಶಾಸನವು ಕ್ರಿ.ಶ. ೧೨೨೫ ಕ್ಕೆ ಸೇರಿರುವುದರಿಂದ ಈತನ ಆಡಳಿತವು ಕ್ರಿ.ಶ. ೧೧೭೯ ರಲ್ಲೇ ಪ್ರಾರಂಭವಾಯಿತೆಂದು ಹೇಳಬಹುದಾಗಿದೆ. ಈತನು ಚೋಳರ ನಿಕಟವರ್ತಿಯಾಗಿದ್ದ ಅಂಶ ಈತನ ಹೆಸರಿನೊಂದಿಗೆ ಸೇರಿರುವ ‘ಸೆಲ್ವನ್, ಹಾಗೂ ‘ಉತ್ತಮ ಚೋಳಗಂಗ ಸೆಲ್ವಗಂಗರ್’ ಎಂಬ ಉಲ್ಲೇಖಗಳಿಂದಲೂ ಮನಗಾಣಬಹುದಾಗಿದೆ.
          ‘ಕುವಳಾಲ ಪುರಪರಮೇಶ್ವರನ್, ಗಂಗಕುಲೋದ್ಭವನ್, ಕಾವೇರಿವಲ್ಲಭನ್, ನಂದಿಗಿರಿನಾಥನ್ ಉತ್ತಮ ಚೋಳಗಂಗನ್ ಎಂಬ ಸೆಲ್ವಗಂಗನ್ (ಎಂಬ) ವೀರಗಂಗನ್’ ಎಂದು ಬಿರುದುಗಳನ್ನೊಳಗೊಂಡ ಇವನ ಹೆಸರು ಶಾಸನಗಳಲ್ಲಿ ದಾಖಲಾಗಿದೆ. ಈತನು ಚೋಳರ ಸೇವೆಯಲ್ಲಿದ್ದಾಗಲೇ ಪಾಂಡ್ಯರ ಮೇಲಿನ ವಿಜಯ ಹಾಗೂ ದಕ್ಷಿಣ ಕಾವೇರಿಯನ್ನು ದಾಟಿದ ಘಟನೆಗಳು ಸಂಭವಿಸಿರಬೇಕು. ಕುಲೋತ್ತುಂಗ ಚೋಳನು ಈ ವೀರಗಂಗನಿಗೆ, ಅವನ ನಿಷ್ಠಾವಂತ ಸೇವೆಯ ಪ್ರತಿಫಲವಾಗಿ ಕುವಳಾಲ ಪ್ರದೇಶವನ್ನು ಉಂಬಳಿಯಾಗಿ ನೀಡಿರಬಹುದು. ಅಂದರೆ ಕ್ರಿ.ಶ. ೧೧೭೯ ರಿಂದಲೇ ಈತನು ಕೋಲಾರ ಪ್ರದೇಶದ ಮೇಲೆ ತನ್ನ ಅಧಿಕಾರವನ್ನು ಸ್ಥಾಪಿಸಿದ್ದನೆನ್ನಬೇಕು. ಈತನು ತನ್ನ ಆಡಳಿತದ ಕೊನೆ ಕೊನೆಯ ವರ್ಷಗಳಲ್ಲಿ ಹೊಯ್ಸಳರೊಂದಿಗೆ ಮಧುರ ಸಂಬಂಧವಿರಿಸಿಕೊಂಡಿದ್ದನೆಂದು ಹೇಳಬಹುದಾಗಿದೆ. ಪ್ರಸಿದ್ಧ ಹೊಯ್ಸಳ ಸೇನಾನಿ ಪೋಳಾಲ್ವದಂಡನಾಯಕನ ಓರ್ವ ಮಗಳನ್ನು ವೀರಗಂಗನು ವಿವಾಹವಾಗಿದ್ದನು. ಇವನ ಆಳಿಕೆಗೆ ನಿಗಿರಿಲಿ ಚೋಳಮಂಡಲದ ಭಾಗಗಳಾಗಿದ್ದ ಕುವಳಾಲನಾಡು ಮತ್ತು ಅವನಿನಾಡುಗಳು ಒಳಪಟ್ಟಿದ್ದವು. ಆದರೆ ಕ್ರಿ.ಶ. ೧೨೨೫ರ ನಂತರದಲ್ಲಿ ಅವನಿ ಪ್ರದೇಶದಲ್ಲಿ ಜಯಗೊಂಡಚೋಳ ಇಳವಂಜಿರಾಯರರೆಂಬುವವರು ಕಾಣಿಸಿಕೊಳ್ಳುತ್ತಾರೆ.
          ವೀರಗಂಗನಿಗೆ ಸೋಮಲಾದೇವಿ ಎಂಬ ಮಗಳು ಹಾಗೂ ಗಂಗಪೆರುಮಾಳ್ ಎಂಬ ಮಗನಿದ್ದನು. ಈತನಿಗೂ ಗಂಗರ ಸಾಂಪ್ರದಾಯಿಕ ಬಿರುದುಗಳಿದ್ದು ‘ಉತ್ತಮ ಚೋಳಗಂಗನ್ ಗಂಗಪೆರುಮಾಳ್’ ಎಂದು ಅವನ ಪೂರ್ಣ ಹೆಸರನ್ನು ಶಾಸನಗಳು ನೀಡುತ್ತವೆ. ಇವನ ರಾಜ್ಯದ ಪೂರ್ವ ಭಾಗ (ಆವನಿನಾಡು) ‘ಜಯಗೊಂಡ ಚೋಳ ಇಳವಂಜಿರಾಯ’ ಎಂಬುವವನ ಆಳ್ವಿಕೆಗೆ ಒಳಪಟ್ಟು, ಕೇವಲ ಕುವಳಾಲ ಪ್ರದೇಶ ಮಾತ್ರ ಇವನ ವಶದಲ್ಲಿತ್ತು. ಇವನ ಹೆಂಡತಿಯ ಹೆಸರು ‘ಅರುಣವಲ್ಲಿ’, ಮೇಲೆ ಉಕ್ತವಾಗಿರುವ ಜಯಗೊಂಡ ಚೋಳನು ಮೊದಲಿಗೆ ಗಂಗಪೆರುಮಾಳನ ಮಾಂಡಲಿಕನಾಗಿದ್ದನೆಂಬ ಅಂಶ ಶಾಸನವೊಂದರಿಂದ ತಿಳಿದು ಬರುತ್ತದೆ.
          ನಂತರದ ಕಾಲದಲ್ಲಿ (ಕ್ರಿ.ಶ. ೧೨೬೦) ವೀರಗಂಗ ವಿಕ್ರಮ ಗಂಗನ ಉಲ್ಲೇಖಗಳು ಶಾಸನಗಳಲ್ಲಿ ಕಂಡಬರುತ್ತದೆ. ಈತನಿಗೆ ‘ತಲೈಸಿರಾಯನ್’ ಎಂಬ ಮಂತ್ರಿಯೂ ಇದ್ದನು. ಅನಂತರದ ಕಾಲದಲ್ಲಿ ಗಂಗರ ಸಾಂಪ್ರದಾಯಕ ಬಿರುದುಗಳನ್ನು ಧರಿಸಿರುವ ‘ವೆಟ್ಟುಮಾರ ಬಾಣ’ ಎಂಬ ಹೆಸರಿನ ವ್ಯಕ್ತಿಯೊಬ್ಬನು ಪ್ರಧಾನವಾಗಿ ಕಂಡುಬರುತ್ತಾನೆ. ಬಹುಮಟ್ಟಿಗೆ ಇವನ ಆಡಳಿತ ಕುವಳಾಲ ನಾಡಿಗೇ ಸೀಮಿತವಾಗಿದ್ದಂತೆ ಕಂಡಬರುತ್ತದೆ. ಮುಂದೆ ಕ್ರಿ.ಶ. ೧೨೭೩ ರ ಶಾಸನವೊಂದರಲ್ಲಿ ‘ಉತ್ತಮ ಚೋಳಗಂಗನ್’ ಪದುಮಿದೇವರ್, ಅವನ ಮಗ ಗಂಗಪೆರುಮಾಳರ ಉಲ್ಲೇಖಗಳು ಶಾಸನಗಳಲ್ಲಿ ಕಂಡುಬರುತ್ತವೆ.

ಸೀತಿ ಬೆಟ್ಟಕ್ಕೆ ಭಕ್ತಿ
            ಮೂಲತಃ ಗಂಗವಂಶೀಯರಾದ ಈ ವೀರಗಂಗನ ಸಂತತಿಯವರು, ತಮ್ಮ ಅಧಿರಾಜರಾಗಿದ್ದ ಚೋಳರಂತೆ ಸೀತಿಯ ಭೈರವದೇವರಿಗೆ ಅನೇಕ ದಾನದತ್ತಿಗಳನ್ನು ಬಿಟ್ಟು ತಮ್ಮ ಅನನ್ಯ ಭಕ್ತಿಯನ್ನು ವಿಶೇಷವಾಗಿ ಪ್ರದರ್ಶಿಸಿದ್ದಾರೆ. ಮುಂದೆ ಕುವಳಾಲ ಮತ್ತು ಕೈವಾರನಾಡುಗಳ ಮೇಲೆ ಅಧಿಕಾರವನ್ನು ಸ್ಥಾಪಿಸಿದ ಬ್ರಹ್ಮಾದಿರಾಜ ಗಂಗಪೆರುಮಾಳರು ಕೂಡ ಬಹುಮಟ್ಟಿಗೆ ಗಂಗವಂಶೀಯರೇ ಆಗಿದ್ದರೆಂದು ತೋರುತ್ತದೆ. ಶಾಸನವೊಂದರಲ್ಲಿ ‘ಶ್ರೀ ನರಸಿಂಹ ಪೊಯ್ಸಳ ಬ್ರಹ್ಮಾಧಿರಾಯ’ ಎಂಬ ಉಲ್ಲೇಖವಿದೆ. ಅಂದರೆ ಇವರು ಹೊಯ್ಸಳರ ಮಾಂಡಲಿಕರಾಗಿದ್ದರೆಂದು ಮನಗಾಣಬಹುದಾಗಿದೆ. ಈ ಸಂತತಿಯವರ ಮೊದಲ ಆಡಳಿತಗಾರನೆಂದರೆ ದುಷ್ಟರಾಧಿತ್ಯ ರಾಜನಾರಾಯಣ ಬ್ರಹ್ಮಾದಿರಾಯ ಗಂಗಪೆರುಮಾಳ್ ಕ್ರಿ.ಶ. ೧೨೬೨ರ ಶಾಸನವು ಕೈವಾರನಾಡಿನ ಈ ಬ್ರಹಾದಿರಾಯರಿಗೂ ಅವನಿನಾಡಿನ ಇಳವಂಜಿರಾಯರಿಗೂ ಕೌಟುಂಬಿಕ ಸಂಬಂಧಗಳಿದ್ದುದನ್ನು ತಿಳಿಸುತ್ತದೆ. ಪ್ರಾಯಶಃ ಇವರಿಬ್ಬರೂ ಒಗ್ಗೂಡಿಯೇ ವೀರಗಂಗ ವಂಶೀಯರನ್ನು ಮೂಲೆಗೊತ್ತಿದರೆಂದು ತೋರುತ್ತದೆ. ಕುವಳಾಲ ನಾಡಿನ ಉತ್ತರದ ಭಾಗಗಳು ಬ್ರಹ್ಮಾದಿರಾಯರಿಗೂ, ದಕ್ಷಿಣದ ಭಾಗಗಳು ಇಳವಂಜಿರಾಯರ ವಶದಲ್ಲಿದ್ದ ವಿವರ ಶಾಸನಗಳಿಂದ ಗ್ರಹಿಸಬಹುದಾಗಿದೆ.
          ಕ್ರಿ.ಶ. ೧೨೬೮ರ ಶಾಸನ (ಕೋಲಾರ ೪೧) ದಲ್ಲಿ ‘ತಮ್ಮಜಯನ್’ ಎಂಬುವವನ ಉಲ್ಲೇಖವಿದ್ದು ಆತನಿಗೆ ಶಂಬುಕುಲೋದ್ಭವನ್, ಗೋದಾವಿರಿವಲ್ಲವನ್, ವಿರುದರಾಜ ಭಯಂಕರನ್, ತ್ರಿಲೋಕ್ಯರಾಯನ್ ಎಂಬ ಬಿರುದುಗಳಿದ್ದವು. ಆತನು ಸೀತಿಯ ಭೈರವದೇವರ ಉಚ್ಛಿ ಸಂಧಿ (ಮಧ್ಯಾಹ್ನದ ನೈವೇದ್ಯ) ಗಾಗಿ ಹಾಗೂ ಅಮೃತಪಡಿಗಾಗಿ ಶಿಱೆನಲ್ಲಾಳ ಸ್ಥಳದ ಹೊಲ ಗದ್ದೆಯ ಭೂಮಿಯನ್ನು ದತ್ತಿ ಬಿಟ್ಟಿರುತ್ತಾನೆ. ಈತನು ಯಾರು? ಎಂಬುದು ಸ್ಪಷ್ಟವಾಗುವುದಿಲ್ಲ. ಇವನ ಪ್ರವೇಶದೊಂದಿಗೆ ಬ್ರಹ್ಮಾದಿರಾಯರ ಆಳಿಕೆ ತಾತ್ಕಾಲಿಕವಾಗಿ ಹಿಂದೆ ಸರಿಯತೆನ್ನಬಹುದು.
          ಕ್ರಿ.ಶ. ೧೨೭೧ರ ವೇಳೆಗೆ ಬ್ರಹ್ಮಾದಿರಾಯರ ವಂಶೀಯನೇ ಆದ ಕುಪ್ಪಾಂಡೆಯ ಮಗ ಶೆಲ್ವಗಂಗನ ಆಳಿಕೆ ಕಂಡುಬರುತ್ತದೆ (ಕೋಲಾರ ೩೨೬). ಈತನು ಸೀತಿಯ ಭೈರವದೇವರ ನಂದಾದೀವಿಗೆಗೆ ದತ್ತಿಬಿಟ್ಟಿರುತ್ತಾನೆ. ಅಣ್ಣನಂಕಕಾರ ದುಷ್ಟರಾಧಿತ್ಯ ರಾಜನಾರಾಯಣ ಬ್ರಹ್ಮಾಧಿರಾಜ ಎಂಬ ಬಿರುದುಗಳನ್ನು ಈತನು ಹೊಂದಿದ್ದ ವಿವರ ಇತರ ಶಾಸನಗಳಿಂದ ತಿಳಿಯುತ್ತದೆ. ಕ್ರಿ.ಶ. ೧೨೮೦ರ ವೇಳೆಗೆ ಈ ಬ್ರಹ್ಮಾದಿರಾಯರವಂಶೀಯರು ಹೊಯ್ಸಳರ ನೇರ ಆಡಳಿತಕ್ಕೆ ಒಳಪಟ್ಟಂತೆ ತೋರುತ್ತದೆಯಾದರೂ ಅವರ ಯಾವ ಶಾಸನಗಳಲ್ಲೂ ಅಧಿರಾಜರ ಪ್ರಸ್ತಾಪವಿರುವುದಿಲ್ಲ. ಆದರೆ ಹೊಯ್ಸಳ ವೀರಬಲ್ಲಾಳನ ಮಗ ಪೆರಿಯವಲ್ಲಪ್ಪ ದಣ್ಣಾಯಕನನ್ನು ಪ್ರಸ್ತಾಪಿಸುವ ಶಾಸನವೊಂದು (ಕೋಲಾರ ೫೪) ಸೀತಿ ಬೆಟ್ಟದಲ್ಲಿದ್ದು ಆತನ ಖಡ್ಗ ಹಾಗೂ ಭುಜಕ್ಕೆ ಜಯವಾಗಲೆಂದು ಕೊಡಂಪುಲಿಯೂರಿನ ದೇವಪ್ಪನೆಂಬ ಸ್ಥಳೀಯ ಅಧಿಕಾರಿಯು ಸೀತಿ ಮತ್ತು ಕಳಪಲ್ಲಿ ಎಂಬ ಎರಡು ಗ್ರಾಮಗಳ ಭೂಮಿಯನ್ನು ಸರ್ವಮಾನ್ಯವಾಗಿ ದತ್ತಿಬಿಟ್ಟ ವಿವರವನ್ನು ನೀಡುತ್ತದೆ.
          ಕರಿಯಗಂಗ ಪೆರುಮಾಳನನ್ನು ಪ್ರಸ್ತಾಪಿಸುವ ಶಾಸನವೊಂದು ಕ್ರಿ.ಶ. ೧೨೮೦ಕ್ಕೆ ಸೇರಿದ್ದು (ಕೋಲಾರ ೪೯) ಆತನನ್ನು ಶೆಲ್ವಗಂಗನೆಂದು ಹೇಳಿದೆ. ಅಲ್ಲದೆ, ಶ್ರೀಪತಿಯ ತ್ರಿಭುವನ ವಿಡಂಗ ಕ್ಷೇತ್ರಪಾಲ ಪಿಳ್ಳೆಯಾರಿಗೆ ಮಂಟಪವನ್ನು ಕಟ್ಟಿಸಿ ಕೊಟ್ಟು ಅದರ ನಿರ್ವಹಣೆಗಾಗಿ ಕೈವಾರ ನಾಡಿನ ಪುಳ್ಳಿಯಂಪಳ್ಳಿ ಎಂಬ ಸ್ಥಳದ ಹೊಲಗದ್ದೆಗಳನ್ನು ದತ್ತಿಬಿಡಲಾಗಿದೆ. ಇಲ್ಲಿ ಪ್ರಸ್ತಾಪಿತವಾಗಿರುವ ಮಂಟಪವೇ ಇಂದು ಅಸ್ತಿತ್ವದಲ್ಲಿರುವ ಪ್ರಧಾನ ದೇವಾಲಯವಾಗಿದೆ.

ಪುಳಿಯಂಪಳ್ಳಿ - ಮಾಡಕ್ಕಿರೈಗಳಿಂದ ಭೂದಾನ
          ಕ್ರಿ.ಶ. ೧೨೮೦ರ ಕೊನೆಯ ವೇಳೆಗೆ ಕರಿಯಗಂಗನ ಮಗನಾದ ವಾಸುದೇವನನ್ನು ಪ್ರಸ್ಥಾಪಿಸುವ ಶಾಸನಗಳು ಕಾಣಸಿಗುತ್ತವೆ. ಅವುಗಳಲ್ಲಿ ಆತನನ್ನು ಅಯ್ಯನಂಕಕಾರ, ದುಷ್ಟರಾಧಿತ್ಯ, ರಾಜನಾರಾಯಣ ಬ್ರಹ್ಮಾದಿರಾಜ ಎಂದು ಮುಂತಾಗಿ ವರ್ಣಿಸಿವೆಯಲ್ಲದೆ ಶ್ರೀಪತಿಯ ತ್ರಿಭುವನ ವಿಡಂಗ ಕ್ಷೇತ್ರಪಾಲ ಪಿಳ್ಳೆಯಾರರ ಅಮೃತಪಡಿಗಾಗಿ ಮುದುಗೆರೆ ಹಾಗೂ ಕೈವಾರನಾಡಿನ ಪುಳಿಯಂಪಳ್ಳಿ ಗ್ರಾಮಗಳ ಹೊಲಗದ್ದೆಗಳನ್ನು ದತ್ತಿಬಿಟ್ಟಿರುವ ವಿವರ ಬಂದಿದೆ. ಈತನ ಮಗನ ಹೆಸರು ಗಂಗಪೆರುಮಾಳ್, ಈತನಿಗೂ ಅಯ್ಯನಂಕಕಾರ ಎಂಬ ಬಿರುದಿದ್ದಿತು. ಈ ಗಂಗಪೆರುಮಾಳನನ್ನು ಕೆಲವು ಶಾಸನಗಳಲ್ಲಿ ಮಾಮನಂಕಕಾರನೆಂದೂ ಕರೆಯಲಾಗಿದೆ. ಕ್ರಿ.ಶ. ೧೨೮೪ರ ಶಾಸನವು (ಕೋಲಾರ ೪೬) ಸೀತಿ ಬೆಟ್ಟದಲ್ಲಿದ್ದು ಭೈರವದೇವರಿಗೆ ಮಾಡಕ್ಕಿರೈ ಎಂಬ ಸ್ಥಳದ ಸಮೀಪದ ಹೊಲಗದ್ದೆಗಳನ್ನು ದತ್ತಿಬಿಟ್ಟ ವಿವರ ನೀಡುತ್ತದೆ. ಈತನ ಶಾಸನಗಳಲ್ಲಿ ಪ್ರಯುಕ್ತವಾಗಿರುವ ‘ಮಾಮನಂಕಕಾರ’ ಎಂಬುದು ಏನನ್ನು ಸೂಚಿಸುತ್ತದೆ? ‘ಅಂಕಕಾರ’ ಎಂದರೆ ಯುದ್ಧಯೋಧ, ಸಹಾಯಕ ಅಥವಾ ಆಶ್ರೀತ ಎಂಬ ಸಾಮಾನ್ಯ ಅರ್ಥಗಳಿವೆ. ಅಯ್ಯನಂಕಕಾರ ಎಂಬುದು ತಂದೆಗೆ ಬಲಗೈಯಂತಿದ್ದವನು ಎಂದೂ ಅರ್ಥೈಸಬಹುದು. ಇದು ತನ್ನ ತಂದೆ ಜೀವಂತವಾಗಿರುವಾಗ ಧರಿಸಿದ್ದಿರಬಹುದಾದ ಬಿರುದೆನ್ನಬಹುದು. ಪ್ರಾಯಶಃ ನಂತರದಲ್ಲಿ ಈತನು ತನ್ನ ನೆರವನ್ನು ಒಬ್ಬ ಬಲಿಷ್ಟನಾದ ಅಧಿಪತಿಗೆ ನೀಡಿದ್ದು, ಆತನು ಹೆಣ್ಣುಕೊಟ್ಟ ಮಾವನೋ, ಅಥವಾ ತಾಯಿಯ ಸೋದರನೋ ಆಗಿದ್ದಿರಬಹುದು. ಆ ಕಾರಣದಿಂದಲೇ ‘ಮಾಮನಂಕಕಾರ’ ಎಂಬ ಬಿರುದನ್ನು ಧರಿಸಿದ್ದಿರಬೇಕು. ಹಾಗಾದರೆ ಈ ಮಾಮ (ಮಾವ) ನೆನಿಸಿಕೊಂಡ ವ್ಯಕ್ತಿ ಯಾರಿರಬಹುದು? ಕ್ರಿ.ಶ. ೧೨೮೫ರ ಶಾಸನವೊಂದು ಕೈವಾರದಲ್ಲಿದ್ದು ಅಲ್ಲಿನ ಅಮರನಾರಾಯಣಸ್ವಾಮಿ ದೇವರಿಗೆ ಹೊಯ್ಸಳ ರಾಮನಾಥನೇ ಖುದ್ದಾಗಿ ಆಗಮಿಸಿ ದತ್ತಿಬಿಟ್ಟಿರುವ ವಿವರವಿದೆ. ಪ್ರಾಯಶಃ ಹೊಯ್ಸಳ ರಾಮನಾಥನು ತಮಿಳುನಾಡಿನಲ್ಲಿದ್ದ ತನ್ನ ರಾಜಧಾನಿಯನ್ನು ಕೋಲಾರಕ್ಕೆ ಸಮೀಪದ ಕುಂದಾಣಿಗೆ ವರ್ಗಾಯಿಸಿ, ಆ ಪ್ರದೇಶದ ಮಾಂಡಲಿಕರ ಮೇಲೆ ಹಿಡಿತವನ್ನು ಸಾಧಿಸಲು ನಡೆಯೆಸಿದ ರಾಜಕೀಯ ಪ್ರಾವೀಣ್ಯತೆಯ ಭಾಗವಾಗಿ ಗಂಗ ಪೆರುಮಾಳನನ್ನು ತನ್ನ ಅಳಿಯನನ್ನಾಗಿ ಮಾಡಿಕೊಂಡಿರಬಹುದೆಂದು ಊಹಿಸಬಹುದಷ್ಟೇ ಹೊರತು ನಿರ್ದಿಷ್ಟ ಆಧಾರಗಳಿಲ್ಲ. ಇವನ ಆಳಿಕೆ ಕ್ರಿ.ಶ. ೧೨೮೬ರ ಪೂರ್ವಾರ್ಧದ ವೇಳೆಗೆ ಕೊನೆಗೊಂಡಿರಬೇಕು.
          ಕ್ರಿ.ಶ. ೧೨೮೬ ಉತ್ತರಾರ್ಧದಲ್ಲಿ ವಾಸುದೇವರ್ ಎಂಬ ಅಯ್ಯನಂಕಕಾರ ದುಷ್ಟರಾಧಿತ್ಯ ರಾಜನಾರಾಯಣ ಬ್ರಹ್ಮಾದಿರಾಯ ಎಂಬುವವನು ಸಿಂಹಾಸನಸ್ಥನಾಗಿದ್ದನು. ಈ ವಾಸುದೇವನ ಶಾಸನವೊಂದು ಸೀತಿಯಲ್ಲದ್ದು, ಭೈರವದೇವರಿಗೆ ಸರ್ವಮಾನ್ಯನಾಗಿ ಮೂವಾಟ್ರು ಎಂಬ ಸ್ಥಳದಲ್ಲಿನ ಹೊಲಗದ್ದೆಗಳನ್ನು ನೀಡಿರುವುದನ್ನು ಉಲ್ಲೇಖಿಸುತ್ತದೆ.
          ಗಂಗಪೆರುಮಾಳನ ಕಾಲದ ನಂತರ ಈ ಪ್ರದೇಶದ ಶಾಸನಗಳ ಸ್ವರೂಪದಲ್ಲೇ ಮಾರ್ಪಾಟಾಗಿರುವುದು ಕಂಡುಬರುತ್ತದೆ. ಅವು ಹೊಯ್ಸಳ ರಾಮನಾಥನನ್ನು ನಿಯತವಾಗಿ ಉಲ್ಲೇಖಿಸತೊಡಗಿರುವುದು ಅಂದರೆ ಅವರೆವಿಗೂ ಸ್ವತಂತ್ರರಂತೆವರ್ತಿಸುತ್ತಿದ್ದ ಬ್ರಹ್ಮಾದಿರಾಯರೇ ಮೊದಲಾದ ಮಾಂಡಲಿಕರ ಮೇಲೆ ಹೊಯ್ಸಳ ರಾಮನಾಥನು ಹಿಡಿತವನ್ನು ಸಾಧಿಸಿರುವುದನ್ನು ಬಿಂಬಿಸುತ್ತವೆ. ಈ ಅವಧಿಯಲ್ಲಿ ಗಂಗಪೆರುಮಾಳನ ಅಧಿಕಾರ ತೇಕಲ್‌ನಾಡಿನವರೆಗೂ ವಿಸ್ತಾರಗೊಂಡಿದ್ದ ಅಂಶವನ್ನು ಮನಗಂಡರೆ, ಆತನು ರಾಮನಾಥನ ವಿಧೇಯ ಸಾಮಂತನಾಗಿದ್ದನೆನ್ನಬಹುದಾಗಿದೆ. ಈತನನ್ನು ಉಲ್ಲೇಖಿಸುವ ಕೊನೆಯ ಶಾಸನದ ಕಾಲ ಕ್ರಿ.ಶ. ೧೨೮೯ ರದ್ದಾಗಿದೆ.
          ಸುಮಾರು ಕ್ರಿ.ಶ. ೧೨೮೫ರ ವೇಳೆಗೆ ಹೊಯ್ಸಳ ರಾಮನಾಥನು ತನ್ನ ಆಡಳಿತ ನೀತಿಯನ್ನು ಮತ್ತೂ ವಿಶಿಷ್ಟವಾಗಿ ಬದಲಿಸಿರುವಂತೆ ಕಂಡುಬರುತ್ತದೆ. ಹಿಂದೆ ಪ್ರಚಲಿತವಿದ್ದ, ವಂಶಪಾರಂಪರ‍್ಯವಾಗಿ ಸಾಗಿಬರುತ್ತಿದ್ದ ಅಧಿಕಾರಕ್ಕೆ ಧಕ್ಕೆ ಒದಗಿ, ಸಮ್ರಾಟನ ಇಚ್ಛೆ ಮತ್ತು ಅನುಕೂಲಕ್ಕೆ ತಕ್ಕಂತೆ ಅಧಿಕಾರಿ, ಸಾಮಂತ ಮಾಂಡಲಿಕರನ್ನು ವರ್ಗಾಯಿಸುವ ಇಲ್ಲವೆ ಬದಲಿಸುವ ಕ್ರಿಯೆ, ವ್ಯಾಪಕವಾಗಿ ಉಂಟಾಗಿರುವುದನ್ನು ಶಾಸನಗಳಿಂದ ಮನನವಾಗುತ್ತದೆ. ಈ ಕ್ರಿಯೆಯಲ್ಲಿ, ಹಿಂದೆ ಅಧಿಕಾರ ಕಳೆದುಕೊಂಡಿದ್ದ ಹಲವು ರಾಜವಂಶೀಯರಿಗೂ ಆಡಳಿತದಲ್ಲಿ ಅವಕಾಶವನ್ನು ಕಲ್ಪಿಸಿಕೊಟ್ಟಿರುವುದು ಕಂಡು ಬರುತ್ತದೆ.
          ಕ್ರಿ.ಶ. ಸುಮಾರು ೧೨೮೮ರ ಉತ್ತರಾರ್ಧದಲ್ಲಿ ಕೋಲಾರ ಪ್ರದೇಶವನ್ನು ರಾಜನಾರಾಯಣ ಬ್ರಹ್ಮಾಧಿರಾಜ ವೀರಗಂಗನ ಮಗ ಮಲೈಪೆರುಮಾಳನು ಆಳುತ್ತಿದ್ದನು. ನಂತರದಲ್ಲಿ ಹೊಯ್ಸಳರ ಮಾಂಡಲಿಕರಾಗಿ ತೆಯ್ಯಕ್ಕೂರನಾಡ ವಂಶೀಯರು ಪ್ರಬಲರಾದರು. ಅವರಲ್ಲಿ ರಾಘವದೇವ ಎಂಬುವವನು ಬ್ರಹ್ಮಾದಿರಾಯನ ವಂಶೀಯರನ್ನು ಮೂಲೆಗುಂಪಾಗಿಸಿದಂತೆ ತೋರುತ್ತದೆ. ಈ ತೆಯ್ಯಕ್ಕೂರ ವಂಶೀಯರು ಹೊಯ್ಸಳ ರಾಮನಾಥನ ಬಿರುದುಗಳನ್ನು ಧರಿಸಿ ರಾಮನಾಥನ ಪರವಾಗಿ ತಾನೇ ಸಾಮ್ರಾಟನಂತೆ ಗಂಗಪೆರುಮಾಳನ ಮೇಲೆ ಅಧಿಕಾರ ಚಲಾಯಿಸಿರುವುದು ಕಂಡು ಬರುತ್ತದೆ.

ಭೈರವನಿಗೆ ವಿಪುಲದಾನ
          ಹೊಯ್ಸಳ ರಾಮನಾಥನ ಮರಣನಂತರ ಅವನ ಪ್ರಾಂತ್ಯವು ಮುಮ್ಮಡಿ ವೀರಬಲ್ಲಾಳನ ಆಳಿಕೆಗೆ ಒಳಪಟ್ಟಿತು. ಇಲ್ಲಿಂದ ಮುಂದೆ ಈ ಪ್ರದೇಶದ ಶಾಸನಗಳಲ್ಲಿ ಯಾವುದೇ ವಂಶೀಯರ ಶಾಸನಗಳು ನಿಯತವಾಗಿ ಮುಂದುವರೆದಿಲ್ಲ. ಅಂತೆಯೇ ಸೀತಿಬೆಟ್ಟದ ಭೈರವದೇವರಿಗೆ ಸಂದ ದಾನ ದತ್ತಿಗಳು ಆ ಅಂಶವನ್ನೇ ಪ್ರತಿಬಿಂಬಿಸುತ್ತವೆ. ವೀರಬಲ್ಲಾಳನ ಅಧೀನನಾಗಿದ್ದ ಮರೈಪುಕ್ಕರಾಮನ್‌ನಾದ ಸೊಣ್ಣಯನ್ ಎಂಬುವವನ ಉಲ್ಲೇಖ ಕ್ರಿ.ಶ. ೧೩೦೩ರ ಶಾಸನದಲ್ಲಿ ಬಂದಿದೆ (ಕೋಲಾರ ೩೫೨), ಮುಂದೆ ಕ್ರಿ.ಶ. ೧೩೧೦ರಲ್ಲಿ ವಟ್ಟರಸರ್ ಕೂಳದೇವರ್ (ಕೋಲಾರ ೩೫೭), ಕ್ರಿ.ಶ. ೧೩೩೨ ರಲ್ಲಿ ಶಿರಪ್ರಧಾನಿ . . . ದುರುಗೈಯನ್, ಕಟಾರಿಸಾಳುವನರಸಯ್ಯ ನಾಯಕನ್, ಕ್ರಿ.ಶ. ೧೩೩೪ ರ ವೇಳೆಗೆ ಸೊಪ್ಪೆಯನಾಯಕನ್ (ಕೋಲಾರ ೩೪೪) ಹಾಗೂ ಕ್ರಿ.ಶ. ೧೩೩೮ ರಲ್ಲಿ ವಲ್ಲಪ್ಪ ದಣ್ಣಾಯಕರಗಳು ಹೀಗೆ ಹೊಯ್ಸಳ ವೀರಬಲ್ಲಾಳನ ಅಳಿಕೆಯ ಕಾಲದಲ್ಲಿ ಸೀತಿಯ ಬೆಟ್ಟದ ಭೈರವದೇವರಿಗೆ ಬೇರೆ ಬೇರೆ ಅಧಿಕಾರಿಗಳಿಂದಲೂ ಎಂದಿನಂತೆ ವಿಪುಲವಾದ ದಾನ-ದತ್ತಿಗಳು, ಪೂಜಾ-ಕೈಂಕರ್ಯಗಳು ಮುಂದುವರಿದಿರುವುದು ಕಂಡು ಬರುತ್ತದೆ.
          ಮುಂದೆ ವಿಜಯನಗರದ ಅರಸರಕಾಲದಲ್ಲೂ ಕಂಪಣ್ಣ ಒಡೆಯ (ಬುಕ್ಕರಾಯನ ಮಗ), ಲಕ್ಕರಸರ ಕುಮಾರ ದೇವಮಹಾರಾಯ (ಕೋಲಾರ ೩೨೨), ಮಹಾಸಾಮಂತಾಧಿಪತಿ ಮಂಜಯನಾಯಕ್ಕರ ಮಗ ಶ್ರೀಪತಿನಾಯಕ (ಕೋಲಾರ ೩೨೩; ೧೩೭೩), ವೆಂಗಡನ ಮಗ ಅಳಗಿಯ ವಂದ (ಕೋಲಾರ ೩೨೪; ೧೩೭೭), ಪರಾಕ್ರಮ ಪಾಂಡಿಯನ್, ಕೆಂದಾಮರೈ ಕಣ್ಣನ್ (ಕೋಲಾರ ೩೪೭; ೧೪೩೧) ಮುಂತಾದವರ ಸೇವೆಯು ಸೀತಿಯ ಭೈರವದೇವರಿಗೆ ಸಂದಿದೆ.
          ಗಂಗರ ಕಾಲದಲ್ಲಿ ಅಸ್ತಿತ್ವವನ್ನು ಪಡೆದ ಸೀಪತಿಯ ಭೈರವದೇವರ ಆರಾಧನೆ, ಗಂಗರ ನಂತರ ಬಂದ ಚೋಳರು ಹಾಗೂ ಅವರ ಅಧೀನರಾಗಿ ಬಂದ ಮೂಲತಃ ಗಂಗ ವಂಶೀಯರೇ ಆಗಿದ್ದ ವೀರಗಂಗ ಹಾಗೂ ಬ್ರಹ್ಮಾದಿರಾಯರ ಸಂತತಿಯವರು ಆಳಿಕೆಯ ಕಾಲದಲ್ಲಿ ಪೂಜಾಕೈಂಕರ್ಯಗಳ ಹೆಚ್ಚಳದೊಂದಿಗೆ ಅನೇಕ ವಾಸ್ತು, ರಚನಾ ಕಾರ್ಯಗಳು ವಿಶೇಷವಾಗಿ ನಡೆಯಿತು. ಮುಂದೆ ಹೊಯ್ಸಳ ಹಾಗೂ ವಿಜಯನಗರದ ಅಧೀನರಾಗಿದ್ದ ಸ್ಥಳೀಯ ಮಾಂಡಲಿಕರು ಕೂಡ ಭೈರವದೇವರ ಪ್ರಖರವಾದ ಪ್ರಭೆಯಿಂದ ಹೊರಗುಳಿಯಲಿಲ್ಲ ಎಂಬುದು ಮೇಲಿನ ಶಾಸನೋಕ್ತ ವಿವರಗಳ ವಿವೇಚನೆಯಿಂದ ಮನಗಾಣಬಹುದಾಗಿದೆ.


ಅನುಬಂಧ-೧
ವಿವೀರಗಂಗನ ವಂಶ

ವೀರಗಂಗ ಶೆಲ್ವಗಂಗ                   (ಪೋಳಾಲ ದಂಡನಾಯಕನ ಮಗಳನ್ನು ವಿವಾಹವಾಗಿದ್ದನು)
(೧೧೭೯-೧೨೨೫)
¯
ಗಂಗಪೆರುಮಾಳ್ (೧೨೨೫-?)      ಸೋಮಲಾದೇವಿ
¯
ವಿಕ್ರಮಗಂಗನ್ (?-೧೨೬೦-?)
¯
ವೇಡುಮ್ಮಾರಬಾಣನ್ (?-೧೨೬೦-೧೨೬೨)
¯
?
¯
ಪದುಮಿಶೇಯನ್
¯
ಗಂಗಪೆರುಮಾಳ್ (೧೨೭೩)


ಅನುಬಂಧ-೨
ಬ್ರಹ್ಮಾಧಿರಾಜರ ವಂಶ


ನರಸಿಂಗ ಪೊಯ್ಸಳ ಬ್ರಹ್ಮಾಧಿರಾಯ
¯
?
¯
ಗಂಗಪೆರುಮಾಳ್ (೧೨೫೮-೧೨೬೭)
¯
?
¯
ಸೆಲ್ವಗಂಗನ್ (೧೨೬೭ ಮತ್ತು ೧೨೭೮ರ ಮಧ್ಯಾವಧಿ)
¯
ಕುತ್ತಾಂಡುದೇವ / ಕರಿಯಗಂಗ ಗೋಪಾಲ / ಕರಿಯಗಂಗ ಪೆರುಮಾಳ್ (?-೧೨೭೮-೧೨೮೧-?)
¯
ವಾಸುದೇವ (೧೨೮೦-೧೨೮೧)
¯
ಗಂಗಪೆರುಮಾಳ್ (೧೨೮೩-೧೨೮೬)
¯
ವಾಸುದೇವ (೧೨೮೬)
¯
?
¯
ಗಂಗಪೆರುಮಾಳ್ (೧೨೮೬)


zzz