ಶಾಸನೋಕ್ತ ಬಾಲಚಂದ್ರ ಜೈನಯತಿಗಳು
ಡಾ. ಎಸ್. ನಂಜುಂಡಸ್ವಾಮಿ
ಬಾಲಚಂದ್ರ ಎಂಬ ಹೆಸರಿನ ಅನೇಕ ಜೈನಯತಿಗಳು
ಶಾಸನೋಕ್ತರಾಗಿದ್ದಾರೆ. ಸಂಘ, ಗಚ್ಛ, ಗಣ ಮತ್ತು ಕಾಲ, ಗುರುಪರಂಪರೆ, ಅವರಿಗಿರುವ ವಿಶೇಷಣಗಳ ಆಧಾರದ ಮೇಲೆ ಶಾಸನೋಕ್ತ ಬಾಲಚಂದ್ರರು ಯತಿಗಳು ಎಷ್ಟು ಜನ
ಎಂಬುದನ್ನು ಗುರುತಿಸಬೇಕಾಗುತ್ತದೆ. ಬಾಲಚಂದ್ರ ಎಂಬ ಹೆಸರಿನ ಕೆಲವರು ಜೈನಯತಿಗಳಲ್ಲದೇ ಇದ್ದರೂ
ಇರಬಹುದು. ಕರ್ನಾಟಕದ ಜೈನ ಶಾಸನಗಳನ್ನು ಆಮೂಲಾಗ್ರವಾಗಿ ಹುಡುಕಿದರೆ ಇನ್ನೂ ಕೆಲವು ಬಾಲಚಂದ್ರ
ಯತಿಗಳು ದೊರೆಯಬಹುದು.
ಇದುವರೆಗೆ ಗುರುತಿಸಲ್ಪಟ್ಟಿರುವ
ಬಾಲಚಂದ್ರಯತಿಗಳು
ಕವಿಚರಿತೆಕಾರರು ಮೂರು ಜನ ಬಾಲಚಂದ್ರರನ್ನು
ಗುರುತಿಸಿದ್ದಾರೆ. (1) ನಯಕೀರ್ತಿಯ ಶಿಷ್ಯ ಬಾಲಚಂದ್ರ (ಕ್ರಿ.ಶ. 1170)
ಇವನು ಬರೆದಿರುವ ಕೆಲವು ಕೃತಿಗಳ ಹೆಸರುಗಳನ್ನು
ನೀಡಿದ್ದಾರೆ. ಈತನು ಮೂಲಸಂಘದ ದೇಶೀಯಗಣದ ಪುಸ್ತಕ ಗಚ್ಛದ ಕುಂದಕುಂದಾನ್ವಯಕ್ಕೆ ಸೇರಿದವನು. ಇವನ
ಗುರು ಕ್ರಿ.ಶ. 1176ರಲ್ಲಿ ಗತಿಸಿದ ನಯಕೀರ್ತಿ. ಇವನ ಅಣ್ಣ
ದಾಮನಂದಿ. ಇವನಿಗೆ ಆಧ್ಯಾತ್ಮಿ ಬಾಲಚಂದ್ರ ಎಂದು ಹೆಸರಿತ್ತು. ಈತನು ಕ್ರಿ.ಶ. 1181ರಲ್ಲಿ ಬದುಕಿದ್ದನು. ಬೊಪ್ಪಣ್ಣ ಪಂಡಿತನಿಂದ ಜಿನಸುತ್ತಿಯನ್ನು ಬರೆಸಿದನು. (2)
ಬಾಲಚಂದ್ರ ಕವಿಕಂದರ್ಪ (1204): ಕವಿಕಂದರ್ಪ ಬಾಲಚಂದ್ರನು ಜನ್ನನ ಪತ್ನಿ ಲಕುಮಾದೇವಿಯ ಗುರು. ಸಕಲಚಂದ್ರನ ಮಗನಾದ
ಮಾಧವಚಂದ್ರನ ಶಿಷ್ಯ. ಪಾಶ್ರ್ವಪಂಡಿತನು ಸ್ತುತಿಸಿರುವ ಬಾಲಚಂದ್ರನೂ ಇವನೇ ಆಗಿರಬಹುದು.
ಬೆಳಗಾವಿಯ ಎರಡು ಶಾಸನಗಳನ್ನು ಬಾಲಚಂದ್ರಕಂದರ್ಪನು ಬರೆದಿದ್ದು ಇವನು ಮಾಧವಚಂದ್ರ ತ್ರೈವಿದ್ಯನ
ಶಿಷ್ಯನೆಂದು ತಿಳಿದುಬರುತ್ತದೆ. ಈತನ ಸೌದತ್ತಿಯ ರಟ್ಟರ ನಾಲ್ಕನೇ ಕಾರ್ತವೀರ್ಯ ಮತ್ತು ಅವನ
ಶ್ರೀಕರಣ ಬೀಚಿರಾಜನ ಗುರು ಎಂದು ಹೇಳಿದ್ದಾರೆ. (3) ಬಾಲಚಂದ್ರಪಂಡಿತ (1273). ಈತನು
ದ್ರವ್ಯಸಂಗ್ರಹ ಸೂತ್ರ ಕರ್ಣಾಟಕ ಟೀಕೆಯನ್ನು, ಪಂಚಪರಮೇಷ್ಠಿಗಳ
ಬೊಲ್ಲಿಯನ್ನು ಬರೆದಿದ್ದಾನೆ. ಇವನು ಜೈನ ಕವಿ. ಈ ಟೀಕೆಯನ್ನು ಕ್ರಿ.ಶ. 1273ರಲ್ಲಿ ಬರೆದಿದ್ದಾನೆ. ಈತ ಗುರುಗಳು ನೇಮಿಚಂದ್ರ ಮತ್ತು ಅಭಯಚಂದ್ರ ಎಂದು
ಬರೆದಿದ್ದಾರೆ. ಈತನು ಕ್ರಿ.ಶ. 1275ರಲ್ಲಿ ಗತಿಸಿದಂತೆ ತಿಳಿದುಬರುತ್ತದೆ ಎಂದು
ಬೇಲೂರು ಶಾಸನದಿಂದ ತಿಳಿದುಬರುತ್ತದೆ ಎಂದು ಹೇಳಿದ್ದಾರೆ.
ಡಾ. ಎ. ವೆಂಕಟಸುಬ್ಬಯ್ಯನವರು ರಾಜಾದಿತ್ಯ
ದುರ್ಗಸಿಂಹಾದಿ ಕೆಲವು ಕನ್ನಡ ಕವಿಗಳ ಜೀವನ ಕಾಲ ವಿಚಾರದಲ್ಲಿ ಕವಿಚರಿತೆಕಾರರ ಅಭಿಪ್ರಾಯಕ್ಕೆ
ತಿದ್ದುಪಡಿ ಸೂಚಿಸುತ್ತಾ ಪ್ರಾಭೃತಕ ತ್ರಯ, ಪರಮಾತ್ಮ
ಪ್ರಕಾಶಿಕೆ, ಸಮಯಸಾರ ಮೊದಲಾದ ಗ್ರಂಥಗಳಿಗೆ ಕನ್ನಡ
ವ್ಯಾಖ್ಯಾನ ವನ್ನು ಬರೆದ ಬಾಲಚಂದ್ರನು ನಯಕೀರ್ತಿಯ ಮಗನಲ್ಲ ವೆಂದೂ ಅವನ ಶಿಷ್ಯ ಬಾಲಚಂದ್ರನೆಂದು
ಇವನಿಗೆ ಅಧ್ಯಾತ್ಮಿ ಬಾಲಚಂದ್ರನೆಂದು ಹೆಸರಿದ್ದು ಇವನು 1231 ರವರೆಗೆ ಬದುಕಿದ್ದನೆಂದು ಹೇಳಿದ್ದಾರೆ. ಉದ್ಯೋಗಸಾರ ಕವಿಯು ನೇಮಿಚಂದ್ರನ
ಶಿಷ್ಯನಾದ ಬಾಲಚಂದ್ರನೆಂದು ಹೇಳಿರುವುದು ಸರಿಯಲ್ಲ ಇದಕ್ಕೆ ಯಾವ ಆಧಾರವೂ ಇಲ್ಲ ಎಂದು
ಹೇಳಿದ್ದಾರೆ.
ಹಂಪನಾ ಅವರು ‘ಕಾಣೂರ್ಗಣ ಒಂದು ಟಿಪ್ಪಣಿ’ ಲೇಖನದಲ್ಲಿ
ನಾಲ್ಕು ಜನ ಬಾಲಚಂದ್ರ ಯತಿಗಳನ್ನು ಗುರುತಿಸಿದ್ದಾರೆ. ಹಳೇಬೀಡು ಶಾಸನದ ಮೂಲಸಂಘದ
ಕೊಂಡಕುಂದಾನ್ವಯದ ಕಾಣೂರ್ಗಣದ ತಿಂತ್ರಿಣೀಕ ಗಚ್ಚದ ಮಾಧವಚಂದ್ರದೇವನ (ಸು1090) ಶಿಷ್ಯ - ಬಾಲಚಂದ್ರ ಸಿದ್ಧಾಂತ ದೇವ (ಸು. 1130) - ಅವನ ಶಿಷ್ಯ ಬಾಲಚಂದ್ರ ತ್ರೈವಿದ್ಯದೇವ (ಸು. 1150) ಈ ಇಬ್ಬರನ್ನು ಗುರುತಿಸಿದ್ದಾರೆ. ಮದ್ದೂರು ತಾಲ್ಲೂಕು ತಿಪ್ಪೂರು ಶಾಸನದ ಉಭಯ
ಭಾಷಾ ಕವಿಚಕ್ರವರ್ತಿ ಕಂದರ್ಪದೇವರ ಮದವಳಿಗೆ ಸೊಂನಾದೇವಿಯರ ಮಗ ಕಾಣೂಗ್ರ್ಗಣ ತಿಳಕ ಬಾಲಚಂದ್ರದೇವ
ಶಿವಮೊಗ್ಗ ಜಿಲ್ಲೆಯ (ಎಕ 7 ಶಿವ 4 - 1122) ಶಾಸನದಲ್ಲಿ ಬರುವ ಮೂಲಸಂಘದ ಕಾಣೂಗ್ರ್ಗಣದ ಮೂಲಸಂಘದ ಬೆಟ್ಟದ ದಾಮನಂದಿಯ ಶಿಷ್ಯ
ಬಾಲಚಂದ್ರ ಭಟ್ಟಾರಕ 1.
ಹಂಪ ನಾಗರಾಜಯ್ಯನವರು “ಯಾಪನೀಯ ಸಂಘ” ಕೃತಿಯಲ್ಲಿ ಯಾಪನೀಯ ಸಂಘದ ನಾಲ್ಕು
ಬಾಲಚಂದ್ರರನ್ನು ಗುರುತಿಸಿದ್ದಾರೆ. (1) ಕಂಬದಹಳ್ಳಿ ಶಾಸನೋಕ್ತ ಸೂರಸ್ಥ ಗಣದ
ಬಾಲಚಂದ್ರ (2) ಬೇಲೂರು ಶಾಸನೋಕ್ತ ಕಾಣೂಗ್ರ್ಗಣದ
ತಿಂತ್ರಿಣೀಕ ಗಚ್ಛದ ಮಾಧವಚಂದ್ರದೇವರ ಶಿಷ್ಯರಾದ ಬಾಲಚಂದ್ರ ಸಿದ್ಧಾಂತದೇವ ಮತ್ತು ಬಾಲಚಂದ್ರ
ತ್ರೈವಿದ್ಯದೇವ (3) ಹೂಲಿ ಶಾಸನದ ಬಾಲಚಂದ್ರ ಭಟ್ಟಾರಕ ಹೀಗೆ
ಮೂವರನ್ನು ಗುರುತಿಸಿದ್ದಾರೆ. ಡಾ|| ಷ. ಶೆಟ್ಟರ್ ಅವರು “ಸಾವಿಗೆ ಆಹ್ವಾನ” ಕೃತಿಯಲ್ಲಿ ನಯಕೀರ್ತಿಯ ಶಿಷ್ಯ
ಬಾಲಚಂದ್ರದೇವನು ಅಕ್ಕನ ಬಸದಿಯನ್ನು ನಿಭಾಯಿಸಲು ಆಚಿಯಕ್ಕನಿಂದ ಬೊಮ್ಮನಹಳ್ಳಿಯನ್ನು ದತ್ತಿಯಾಗಿ
ಪಡೆದನು, ಇವನು ಬೊಪ್ಪಣ್ಣ ಪಂಡಿತನ ಗುರು ಈತ 12ನೇ ಶತಮಾನದ ಅಂತ್ಯದವರೆಗೆ ಜೀವಿಸಿದ್ದನು ಎಂದು ಹೇಳಿದ್ದಾರೆ. ಶ್ರವಣಬೆಳಗೊಳದ
ವಕ್ರಗಚ್ಛದ ಬಸದಿಗಳನ್ನು ಮತ್ತು ಬಾಲಚಂದ್ರನನ್ನು ಗುರುತಿಸಿದ್ದಾರೆ. ಬಿ.ಆರ್.ಹಂದೂರ್ ಅವರು
ಜೈನಪರಂಪರೆಗೆ ಬೆಳಗಾವಿ ಪ್ರಾದೇಶಿಕ ಕೊಡುಗೆ ಎಂಬ ಕೃತಿಯಲ್ಲಿ 1) ಕ್ರಿ.ಶ. 1145ರ ಕಲ್ಯಾಣದ ಚಾಲುಕ್ಯರ ನಾಲ್ಕನೆಯ ಸೋಮೇಶ್ವರ
ಹೂಲಿ ಗ್ರಾಮದ ಶಾಸನೋಕ್ತ ಯಾಪನೀಯ ಸಂಘದ ಪುನ್ನಾಗ ವೃಕ್ಷದ ಮೂಲ ಗಣದ ಬಾಲಚಂದ್ರ ಭಟ್ಟಾರಕ ದೇವ 2)
ಬೈಲಹೊಂಗಲ ಗ್ರಾಮದ ಉಗರಖೋಡ್ ಗ್ರಾಮದ ಯಾಪನೀಯ ಸಂಘದ
ಕಂಡೂರು ಗಣದ ಬಾಲಚಂದ್ರಮುನಿ.
ತಮಿಳು ಸೆಲ್ವಿ ಅವರು ತಮ್ಮ ಲೇಖನದಲ್ಲಿ
ತಿಪ್ಪೂರು ಶಾಸನೋಕ್ತ ಕಾಣೂರ್ಗಣದ ಬಾಲಚಂದ್ರನನ್ನು ಗುರುತಿಸಿದ್ದಾರೆ.1
ಈ ಪೂರ್ವಪೀಠಿಕೆಯೊಂದಿಗೆ ಬಾಲಚಂದ್ರರ ಬಗ್ಗೆ
ಶಾಸನೋಕ್ತವಾದ ಹೆಚ್ಚಿನ ವಿವರಗಳನ್ನು ಈ ಕೆಳಗಿನಂತೆ ಪರಿಶೀಲಿಸಬಹುದು.
ಕಾಣೂರ್ಗಣದ ಬಾಲ(ಳ)ಚಂದ್ರರು
ಜೈನಧರ್ಮದ ಯಾಪನೀಯ ಪಂಥಕ್ಕೆ ಸೇರಿದ ಒಂದು
ಪ್ರಬಲವಾದ ಗಣ ಕಾಣೂರ್ಗಣ. ಇದರ ಸಂಸ್ಕøತ ರೂಪ ಕಾಲೋಗ್ರಗಣ. ಶ್ರವಣಬೆಳಗೊಳದ ಯಾವುದೇ
ಶಾಸನದಲ್ಲೂ ಈ ಕಾಣೂರ್ಗಣದ ಪ್ರಸ್ತಾಪವಿಲ್ಲ. ಮದ್ದೂರು, ಮಳವಳ್ಳಿ, ಮಂಡ್ಯ ಮತ್ತು ನಾಗಮಂಗಲ ಪರಿಸರದಲ್ಲಿ ಯಾಪನೀಯ
ಸಂಘದ ಕಾಣೂರ್ಗಣದ ತಿಂತ್ರಿಣೀಕ ಗಚ್ಛದ ಪ್ರಾಬಲ್ಯ ಇದ್ದಿತು. ಬೆಳಗಾವಿ ಜಿಲ್ಲೆಯ ಜೈನಶಾಸನಗಳಲ್ಲೂ
ಈ ಕಾಣೂ ರ್ಗಣದ ಪ್ರಸ್ತಾಪವಿದೆ. ಈ ಗಣದಲ್ಲಿ ತಿಂತ್ರಿಣೀಕಗಚ್ಛ, ತಗರಿ ಗಲ್ ಗಚ್ಛ, ಮೇಷಪಾಷಾಣ ಗಚ್ಛ ಎಂಬ ಮೂರು ಗಚ್ಛಗಳು
ಶಾಸನೋಕ್ತವಾಗಿವೆ.2 ಎಂದು ವಿದ್ವಾಂಸರು ಹೇಳಿದ್ದಾರೆ.
1. ತಿಪ್ಪೂರು ಶಾಸನೋಕ್ತ ಕಾಣೂಗ್ರ್ಗಣ ತಿಳಕ,
ಉಭಯಭಾಷಾ ಕವಿ ಚಕ್ರವರ್ತಿ ಬಾಳಚಂದ್ರ
ಮದ್ದೂರು ತಾಲ್ಲೂಕಿನ ತಿಪ್ಪೂರು ಗ್ರಾಮದ
ಗುಡ್ಡದ ಮೇಲೆ ಬಿದ್ದುಹೋಗಿರುವ ಬಸದಿಯ ಬಳಿ ಇರುವ ಪಾಶ್ರ್ವನಾಥ ಜಿನಬಿಂಬದ ಪೀಠದ ಮೇಲಿನ
ಶಾಸನದಲ್ಲಿ ಕಾಣೂರ್ಗಣದ ಬಾಳಚಂದ್ರ ದೇವನ ಉಲ್ಲೇಖವಿದೆ. ‘ಉಭಯಭಾಷಾ ಕವಿಚಕ್ರವರ್ತಿ ಕಂದರ್ಪ ದೇವರ ಮದವಳಿಗೆ ಸೊಂನ್ನಾದೇವಿಯರ ಮಗ
ಕಾಣೂಗ್ರ್ಗಣ ತಿಳಕ ಬಾಲಚಂದ್ರದೇವನು ತನ್ನ ಗುರುಗಳಿಗೆ ಪರೋಕ್ಷವಾಗಿ ಮಾಡಿದ ಪ್ರತಿಷ್ಠೆ’
ಎಂದು ಹೇಳಿದೆ.3 ಕವಿಕಂದರ್ಪನು ಗೃಹಸ್ಥ ನಾಗಿರುವುದರಿಂದ ಅವನು ಜೈನಯತಿಯಂತೂ ಅಲ್ಲವೆಂದೇ
ಹೇಳಬಹುದು.
ತಿಪ್ಪೂರಿನ ಇನ್ನೊಂದು ಶಾಸನದಲ್ಲಿ ‘ತಿಪ್ಪೂರು ಶ್ರೀ ವೀರಬಲ್ಲಾಳ ದೇವನು ಪೃಥ್ವೀ ರಾಜ್ಯಂಗೆಯ್ಯುತ್ತಿರಲು......ದ
ತಿಪ್ಪೂರ ಕವಿ ಕಂದಪ್ರ್ಪರ ಸಿಷ್ಯ ಬಾಲಚಂದ್ರದೇವರ ಮಕ್ಕಳ ಗುಂಮ(ಟಂಣ)ನು’ (ಕವಿ) ಕಂದರ್ಪ.....ನ ಮಕ್ಕಳು ಬೋವಂಣನು ಚಂನಂಣನ ಉಲ್ಲೇಖವಿದೆ. 4 ಇದರಿಂದ ಬಾಲಚಂದ್ರರು ಕವಿಕಂದರ್ಪನ ಶಿಷ್ಯ ಎಂದೂ, ಈ ಬಾಲಚಂದ್ರನ ಶಿಷ್ಯ ಗುಂಮಟಂಣ ಎಂದು ಹೇಳಬಹುದು.
ಕವಿಕಂದರ್ಪ + ಸೊನ್ನಾದೇವಿ
|
| | |
(ಶಿಷ್ಯ) ಬಾಲಚಂದ್ರ (ಮಕ್ಕಳ) ಬೊಂವಂಣ್ಣ (ಬೊಂಮಂಣ) ಚಂನಂಣ
|
(ಮಗ-ಶಿಷ್ಯ)
ಗುಂಮ(ಂಣ) (ಟಣ್ಣ)
2. ಬೆಳಗಾವಿ ಜಿಲ್ಲೆಯ ಶಾಸನೋಕ್ತ ಕವಿಕಂದರ್ಪ
ಬಾಲಚಂದ್ರ
ಕವಿಕಂದರ್ಪ ಮತ್ತು ಬಾಲಚಂದ್ರರಿಬ್ಬರೂ ಬೇರೆ
ಬೇರೆ ಎಂಬುದು ತಿಪ್ಪೂರು ಶಾಸನದಿಂದ ಖಚಿತವಾಗಿ ತಿಳಿದು ಬರುತ್ತದೆ. ಕಾಣೂಗ್ರ್ಗಣ ತಿಳಕ
ಬಾಲಚಂದ್ರನು ತನ್ನ ಗುರು ಕವಿಕಂದರ್ಪನ ಹೆಸರನ್ನು ವಿಶೇಷವಾಗಿ ಬಳಸಿಕೊಂಡು ಕವಿಕಂದರ್ಪ ಬಾಲಚಂದ್ರ
ಎಂಬ ಹೆಸರನ್ನು ಇಟ್ಟುಕೊಂಡಿರಬಹ್ಮುದು. ತಿಪ್ಪೂರಿನ ಕಡೆಯಿಂದ ಬೆಳಗಾವಿಯ ಕಡೆಗೆ ಹೋಗಿರಬಹುದು. Wಪ್ಪೂಉತ
ಕವಿಕಂದರ್ಪ ಬಾಲಚಂದ್ರ ಎಂಬ ಹೆಸರನ್ನು ಇಟ್ಟುಕೊಂಡಿರ
ಬಹುದು. ತಿಪ್ಪೂರಿನ ಕಡೆಯಿಂದ ಬೆಳಗಾವಿಯ ಕಡೆಗೆ ಹೋಗಿರಬಹುದು. ತಿಪ್ಪೂರು ಪ್ರದೇಶವನ್ನು
ಆಳುತ್ತಿದ್ದ ಸಗರವಂಶದವರು ಅಂದರೆ ಮಣಲೇರನ ವಂಶದವರು ಬೆಳುವಲ ನಾಡಿಗೆ ಹೋದಂತೆ ಕೂಡಾ ಬೆಳಗಾವಿಯ
ಕಡೆಗೆ ಹೋಗಿ ನೆಲೆಸಿರಬಹುದು. ಬಾಳಚಂದ್ರ ಕವಿಕಂದರ್ಪನು ಜೈನಯತಿ ಯಾಗಿದ್ದಂತೆ ತೋರುವುದಿಲ್ಲ.
ಕವಿಕಂದರ್ಪ ಬಾಳಚಂದ್ರನು ಯಾವ ಗಣ ಗಚ್ಛದವನು ಎಂಬ ವಿವರಗಳು ಸಿಗುವುದಿಲ್ಲ.
ಕವಿಚರಿತೆಕಾರರು ಬಾಳಚಂದ್ರಕಂದರ್ಪನ ಗುರು
ಮಾಧವಚಂದ್ರ ತ್ರೈವಿದ್ಯರೆಂದು ತಿಳಿದುಬರುತ್ತದೆ ಎಂದು ಹೇಳಿದ್ದಾರೆ. ಆದರೆ ಬಾಲಚಂದ್ರನು
ಬರೆದಿರುವ ಶಾಸನದಲ್ಲಿ ಶ್ರೀಮನ್ಮಾಧವ ತ್ರೈವಿದ್ಯಚಕ್ರವರ್ತಿ ಎಂದು ಹೇಳಿದೆಯೇ ಹೊರತು ಅವನ ಗಣ
ಗಚ್ಛಗಳನ್ನು ನೀಡಿಲ್ಲ.
ಅನೇಕ ಮಾಧವಚಂದ್ರರು ಅಥವಾ ಮಾಧವೇಂದು ಯತಿಗಳು
ಶಾಸ ನೋಕ್ತರಾಗಿದ್ದಾರೆ. (ಯಲಬುರ್ಗ (5)ಶಾಸನದ, ಮೂಲಸಂಘ, ದೇಸೀಗಣ, ಪುಸ್ತಕ ಗಚ್ಛದ ಯಿಂಗಳೀಶ್ವರ
ಬಳಿಯ ಮಾಧವ ಚಂದ್ರಭಟ್ಟಾರಕ, ಹಳೇಬೀಡು (381) ಶಾಸನೋಕ್ತ ಮೂಲಸಂಘ, ಕೊಂಡಕುಂದಾನ್ವಯ, ದೇಶೀಯಗಣದ ಪದ್ಮಪ್ರಭ ಮುನಿಯ ಶಿಷ್ಯ ಮಾಧವೇಂದುಮುನಿ ಅಥವಾ ಮಾಧವಭಟ್ಟಾಕರ,
ಶ್ರವಣಬೆಳಗೊಳ (532) ಶಾಸನೋಕ್ತ ಮೂಲಸಂಘ ದೇಸಿಗಣ ಪುಸ್ತಗಚ್ಛದ ಶುಭಚಂದ್ರ ಸಿದ್ದಾಂತ ದೇವರ ಶಿಷ್ಯ
ಮಾಧವಚಂದ್ರದೇವ, ಹುಂಚ ಶಾಸನದ (91) ಮಾಧವಚಂದ್ರ ವಿದ್ಯದೇವ, ಶ್ರವಣಬೆಳಗೊಳದ (70) ದೇವಕೀರ್ತಿಪಂಡಿತನ ಶಿಷ್ಯ ಲಖ್ಘಣಂದಿಯ ಸಾಧರ್ಮಿ ಮಾಧವೇಂದು ಅಥವಾ ಮಾಧವಚಂದ್ರ
ಮುನಿ (ಕ್ರಿ.ಶ. 1163) ಈ ರೀತಿ ಇನ್ನೂ ಅನೇಕ ಮಾಧವಚಂದ್ರರಿದ್ದಾರೆ.
ಇವರಲ್ಲಿ ಸಾಗರ ತಾಲ್ಲೂಕು ಮಳಲಿ ಗ್ರಾಮದ 12-13ನೇ ಶತಮಾನದ ಲಿಪಿಯಲ್ಲಿರುವ ಶಾಸನೋಕ್ತ ಮೂಲಸಂಘದ ಕಾಣೂಗ್ರ್ಗಣದ ಮಾಧವಚಂದ್ರನು
ಕವಿಕಂದರ್ಪ ಬಾಳಚಂದ್ರನ ಗುರು ಆಗಿರಬಹುದು.
ಆದುದರಿಂದ ತಿಪ್ಪೂರು ಶಾಸನೋಕ್ತ ಕವಿಕಂದರ್ಪನ
ಶಿಷ್ಯ(ಮಗ) ಕಾಣೂರ್ಗಣದ ಬಾಳಚಂದ್ರನೂ, ಬೆಳಗಾವಿಯ ಶಾಸನೋಕ್ತ ಕವಿಕಂದರ್ಪ
ಬಾಳಚಂದ್ರನೂ ಭಿನ್ನರೇ ಅಭಿನ್ನರೇ ಎಂಬ ಸಂಶಯ ಹಾಗೇ ಉಳಿಯುತ್ತದೆ. ಆದರೆ ಕವಿಕಂದರ್ಪರ ಶಿಷ್ಯ
ಕಾಣೂಗ್ರ್ಗಣದ ಬಾಳಚಂದ್ರನೇ, ಕವಿಕಂದರ್ಪ ಬಾಳಚಂದ್ರ ಆಗಿರುವ
ಸಾಧ್ಯತೆಗಳಿವೆ.
3. ಕಾಣೂರ್ಗಣದ ತಿಂತ್ರಿಣೀಕಗಚ್ಛದ ಮಾಧವ ಚಂದ್ರ ದೇವರ ಶಿಷ್ಯಪರಂಪರೆಯ
ಬಾಳಚಂದ್ರ ಸಿದ್ಧಾಂತ ಮತ್ತು ಬಾಳಚಂದ್ರ ತ್ರೈವಿದ್ಯದೇವರು.
ಜವಳಿಗೆಯ ಮುನಿಭದ್ರಸಿದ್ಧಾಂತನ ಜೈನಮುನಿ
ಪರಂಪರೆಯನ್ನು ಉಲ್ಲೇಖಿಸುವ 1266 ರ ಬೇಲೂರು ತಾಲ್ಲೂಕಿನ ಹಳೇಬೀಡು
ವಸ್ತುಸಂಗ್ರಹಾಲಯದ ಆವರಣದಲ್ಲಿರುವ ಶಾಸನ ನೀಡುವ ಕೊಂಡಕುಂದಾನ್ವಯದ ಕಾಣೂರ್ಗಣದ ತಿಂತ್ರಿಣೀಕ
ಗಚ್ಛದ ಜೈನಯತಿಪರಂಪರೆಯನ್ನು ನೀಡಿದೆ.5
ಮೂಲಸಂಘದ ಕ್ರಾಣೂರ್ಗಣದ ಜಟಾಸಿಂಹ ನಂದ್ಯಾಚಾರ್ಯರಿಂದ
- ಪುಂನಮಯ್ಯನ ಗುರುಗಳು ಇಂದ್ರನಂದಾಚಾರ್ಯರಿಂದ ಹಿಡಿದು - ಹೇಮಚಂದ್ರ ತ್ರೈವಿದ್ಯದೇವರ ವರೆಗೆ
ಗುರು ಪರಂಪರೆಯನ್ನು ನೀಡಿದೆ.
ಈ ಶಾಸನದಲ್ಲಿ ಮಾಧವಚಂದ್ರ ಸಿದ್ಧಾಂತ ದೇವರ
ಶಿಷ್ಯರಾದ ಬಾಳಚಂದ್ರ ಸಿದ್ಧಾಂತ ದೇವರು - ಅವರ ಶಿಷ್ಯ ಬಾಳಚಂದ್ರ ತ್ರೈವಿದ್ಯ ದೇವರು ಎಂದು
ಇಬ್ಬರು ಬಾಳಚಂದ್ರರು ಬರುತ್ತಾರೆ. ಇವರ ಶಿಷ್ಯ ಪರಂಪರೆಯಲ್ಲಿ ಕೊನೆಯವನಾದ ಹೇಮಚಂದ್ರ
ತ್ರೈವಿದ್ಯದೇವನು ಕ್ರಿ.ಶ. 1266 ಜುಲೈ 15 ರಂದು ಸಮಾಧಿ ಮರಣವನ್ನು ಹೊಂದಿದನೆಂದು ಈ ಶಾಸನ ತಿಳಿಸುತ್ತದೆ.
ಒಂದು ತಲೆಮಾರಿಗೆ 25 ವರ್ಷ ಎಂದು ಇಟ್ಟುಕೊಂಡು ಹೇಮಚಂದ್ರ ತ್ರೈವಿದ್ಯ ದೇವನಿಂದ ಹಿಂದಕ್ಕೆ
ಲೆಕ್ಕಹಾಕಿದರೆ, ದಡಗ ಶಾಸನೋಕ್ತ ಜಾವಳಿಯ ಮುನಿಚಂದ್ರ
ಸಿದ್ಧಾಂತ ದೇವನ ಕಾಲ ಸುಮಾರು. ಕ್ರಿ.ಶ. 1130 ರಿಂದ 1160 ಆಗಬಹುದು. ಅದೇ ರೀತಿ ಬಾಳಚಂದ್ರರ ತ್ರೈವಿದ್ಯ ಮತ್ತು ಬಾಳಚಂದ್ರಯತಿಗಳ ಕಾಲ ಸು.
1100 ರಿಂದ 1125 ಆಗಬಹುದು. ಅದೇ ರೀತಿ ಹಂಪನಾ ಅವರು ಲೆಕ್ಕಹಾಕಿ ನೀಡಿದ್ದಾರೆ.
“ಬಾಳಚಂದ್ರ ತ್ರೈವಿದ್ಯ ದೇವನನ್ನು ಕವಿತ್ವೇ
ಗಮಕಿತ್ವೇಚ ವಾದಿತ್ವೇಚ ವಾಗ್ಮೀಯತೇ ತ್ರೈವಿದ್ಯಾಬಾಳಚಂದ್ರಸ್ಯ ಸದೃಕ್ಷೋ ನಾಸ್ತಿಃ” ಎಂದು ಶಾಸನಗಳು ಸ್ತುತಿಸಿವೆ.6
4. ಕಾಣೂರ್ಗಣದ ಸಿಂಹನಂದಿಯ ಶಿಷ್ಯ ಬಾಲಚಂದ್ರ
ಕ್ರಿ.ಶ. 1112ರ ಶಿವಮೊಗ್ಗ ಜಿಲ್ಲೆ ಪುರಲೆ ಶಾಸನವೂ ಕೂಡಾ ಕಾಣೂರ್ಗಣದ ಜೈನ
ಯತಿಪರಂಪರೆಯನ್ನು ಉಲ್ಲೇಖಿಸುತ್ತದೆ. ಈ
ಶಾಸನದಲ್ಲಿ ಮೊದಲನೆಯ ಗುರು ಸಿಂಹನಂದಿಯ ಶಿಷ್ಯ ಬಾಳಚಂದ್ರ ಮುನಿಯೊಬ್ಬನ ಉಲ್ಲೇಖವಿದೆ. ಹಾಗೂ ತ್ರೈವಿದ್ಯ
ಬಾಳಚಂಧ್ರ ಮುನೀಂದ್ರ ಮತ್ತು ಬಾಳಚಂದ್ರಬ್ರತಿಪತಿ ಇವರುಗಳನ್ನು ಮಾಧವ ಚಂದ್ರ ಸಧರ್ಮರು ಎಂದು
ಹೇಳಿದೆ.
5. ಕಾಣೂಗ್ರ್ಗಣದ ಮೇಷಪಾಷಾಣ ಗಚ್ಛದ ಬಾಲಚಂದ್ರ
ಶಿವಮೊಗ್ಗ ಜಿಲ್ಲೆ ಕಲ್ಲೂರುಗುಡ್ಡ
ಶಾಸನದಲ್ಲಿ ಕಾಣೂಗ್ರ್ಗಣದ ಮೇಷಪಾಷಾಣ ಗಚ್ಛಕ್ಕೆ ಸೇರಿದ ಜೈನಮುನಿ ಪರಂಪರೆಯನ್ನು ನೀಡಲಾಗಿದೆ. ಈ
ಶಾಸನದಲ್ಲಿ ಇಬ್ಬರು
ಬಾಲಚಂದ್ರರು ಬರುತ್ತಾರೆ. ಇಬ್ಬರ ಕಾಲಕ್ಕೂ
ಬಹಳ ಅಂತರವಿದೆ. ಬಾಳಚಂದ್ರ ತ್ರೈವಿದ್ಯ ದೇವನು ಕ್ರಿ.ಶ. 1100ರ ಹೊತ್ತಿಗೆ ಇದ್ದನೆಂದು ಊಹಿಸಬಹುದು.7
ಸಿಂಹನಂದಿಮುನಿ - ಅರ್ಹದ್ಬಲಾಚಾರ್ಯರು -
ಬೆಟ್ಟದ ದಾಮನಂದಿ ಭಟ್ಟಾರಕರು - ಬಾಳಚಂದ್ರ ಭಟ್ಟಾರಕರು - ಮೇಘಚಂದ್ರ ತ್ರೈವಿದ್ಯ ದೇವರು -
ಗುಣಚಂದ್ರ ಪಂಡಿತ ದೇವರು - ಶ್ರೀ ಮೂಲಸಂಘದ ಕೊಂಡಕುಂದಾನ್ವಯದ ಕ್ರಾಣೂಗ್ರ್ಗಣದ ಮೇಷಪಾಷಾಣ ಗಚ್ಛದ
ಪ್ರಭಾವಚಂದ್ರ ಸಿದ್ಧಾಂತ ದೇವರು - ಮಾಘನಂದಿ ಸಿದ್ಧಾಂತ ದೇವರು - ಪ್ರಭಾಚಂದ್ರ ಸಿದ್ಧಾಂತ ದೇವರು
[ಅವರ ಸಾಧರ್ಮಿಗಳು ಮುನಿಚಂದ್ರ ದೇವರು] - ಶ್ರುತಿಕೀರ್ತಿ - ಕನಕನಂದಿ ತ್ರೈವಿದ್ಯದೇವ(ವಾದಿರಜ)
[ಅವರ ಸಾಧರ್ಮಿಗಳು ಕಾಣೂಗ್ರ್ಗಣದ ಅಗ್ರಗಣ್ಯ ಮಾಧವಚಂದ್ರ]
- ಬಾಳಚಂದ್ರ ತ್ರೈವಿದ್ಯ ದೇವರು - ಪ್ರಭಾವಚಂದ್ರ ಸಿದ್ಧಾಂತ ದೇವರು - ಬುಧಚಂದ್ರದೇವರು.
ಪ್ರಭಾಚಂದ್ರ ಸಿದ್ಧಾಂತ ದೇವರ ಗುಡ್ಡ
ಬರ್ಮದೇವ ಭುಜಬಳಗಂಗ ಪೆರ್ಮಾಡಿ ದೇವನು ದಡಿಗ ಮಾಧವರು ಮಾಡಿಸಿದ್ದ ಬಸದಿಯನ್ನು ಕ್ರಿ.ಶ. 1122 ರಲ್ಲಿ ಜೀರ್ಣೋದ್ಧಾರ ಮಾಡಿ ದತ್ತಿಯನ್ನು ಬಿಡುತ್ತಾನೆ. ಮಂಡಲಿಯ ಪಟ್ಟಣದ
ತೀರ್ಥಬಸದಿಗೆ ಹೆಗ್ಗಣಿಗಲೆ ಗ್ರಾಮವನ್ನು ದತ್ತಿಯಾಗಿ ಬಿಡುತ್ತಾನೆಂದು ಈ ಶಾಸನದಲ್ಲಿ ಹೇಳಿದೆ.
ಇಂದು ಈ ಶಾಸನವು ಸಿದ್ಧೇಶ್ವರಗುಡಿಯ ಪಕ್ಕದಲ್ಲಿ ಬಿದ್ದಿದೆ. ಕಾಣೂಗ್ರ್ಗಣದ ತಗರಿಗಲ್ಗಚ್ಛದ
ಗಂಡವಿಮುಕ್ತ ದೇವನ ಪ್ರಸ್ತಾಪ ಸುಳಗೋಡು ಸೋಮವಾರ ಶಾಸನದಲ್ಲಿದೆ. ಇವರ ಗುರು ಪ್ರಭಾಚಂದ್ರ
ಸಿದ್ಧಾಂತನೆಂದು ಕಂಡುಬರುತ್ತದೆ.8
6. ಅಧ್ಯಾತ್ಮಿ ಬಾಳಚಂದ್ರ
ಮೂಲಸಂಘ ದೇಸಿಯ ಗಣದ ಪುಸ್ತಕಗಚ್ಛದ
ಕೊಂಡಕುಂದಾನ್ವಯದ ನಯಕೀರ್ತಿ ಸಿದ್ಧಾಂತ ಚಕ್ರವರ್ತಿಗಳ ಶಿಷ್ಯ ಬಾಳಚಂದ್ರದೇವ. ಇವನಿಗೆ
ಅಧ್ಯಾತ್ಮಿ ಬಾಳಚಂದ್ರ ಎಂದು ಹೆಸರಿತ್ತು. ಈತನು ಶ್ರವಣಬೆಳಗೊಳದ ಸುಮಾರು 12 ಶಾಸನ, ಸುತ್ತಮುತ್ತಲ ಊರಿನ 3 ಶಾಸನ, ಬೇಲೂರಿನ ಒಂದು, ಮಂಡ್ಯ ಜಿಲ್ಲೆಯ ಹಟ್ಟಣ ಮತ್ತು ತೊಣ್ಣೂರು ಶಾಸನಗಳಲ್ಲಿ ಉಲ್ಲೇಖಿತನಾಗಿದ್ದಾನೆ.
ಇಷ್ಟೊಂದು ಶಾಸನ ಗಳಲ್ಲಿ ಉಲ್ಲೇಖಿತನಾದ ಜೈನಯತಿ ಇವನೊಬ್ಬನೇ ಎಂದು ತೋರುತ್ತದೆ.
ಶ್ರವಣಬೆಳಗೊಳದ ದೊಡ್ಡಬೆಟ್ಟದಲ್ಲಿ ಇವನ 9 ಶಾಸನಗಳು ದೊರೆಕಿವೆ. ಸುತ್ತಾಲಯ ನಿರ್ಮಾಣ, ಸುತ್ತಾಲಯದಲ್ಲಿ ಚವ್ವೀಸ ತೀರ್ಥಂಕರರ ವಿಗ್ರಹ ಸ್ಥಾಪನೆ, ಕೂಷ್ಮಾಂಡಿನಿ ವಿಗ್ರಹ, ಗೊಮ್ಮಟನ ಅಷ್ಟವಿಧಾರ್ಚನೆಗೆ ದತ್ತಿ,
ಬೊಪ್ಪಣ್ಣ ಪಂಡಿತನಿಂದ ಗೊಮ್ಮಟ ಸ್ತುತಿ ರಚನೆ,
ಮೊದಲಾದ ಕಾರ್ಯಗಳನ್ನು ಇವನು ಮಾಡಿದನು.
ಚಿಕ್ಕಬೆಟ್ಟದಲ್ಲಿ ಇವನ ಮೂರು ಶಾಸನಗಳಿವೆ. ಕಂಚಿನದೊಣೆಗೆ ಹೋಗುವ ದಾರಿಯಲ್ಲಿ ಒಂದು ತುಂಡಾಗಿರುವ
ತೇದಿರಹಿತ ಶಾಸನ ಇದ್ದು, ಬಾಲಚಂದ್ರನಸ್ತುತಿಯನ್ನು ಒಳಗೊಂಡಿರುವುದರಿಂದ
ಅದು ಇವನ ನಿಸಿದಿ ಶಾಸನವಾಗಿರಬಹುದು.
ಶ್ರವಣಬೆಳಗೊಳ ಊರಿನಲ್ಲಿ ಇವನ ಎರಡು ಶಾಸನಗಳು
ದೊರಕಿವೆ. ಊರಿನ ನಿರ್ಮಾಣದಲ್ಲೂ ಇವನ ಪಾಲಿದೆ. ನಗರ ಜಿನಾಲಯದ ನಿರ್ಮಾಣದಲ್ಲಿ ಇವನು ಮಹತ್ವದ
ಪಾತ್ರ ಹೊಂದಿದ್ದಾನೆ. ಆಚಲ ದೇವಿಯಿಂದ ಪಾಶ್ರ್ವನಾಥ ಬಸದಿಯನ್ನು ನಿರ್ಮಿಸಿ ದತ್ತಿ
ಬಿಡಿಸಿದ್ದಾನೆ.
ಶ್ರವಣಬೆಳಗೊಳದ ಹತ್ತಿರ ಇರುವ ಬೊಮ್ಮೇನ
ಹಳ್ಳಿಯಲ್ಲಿ ಕೂಡಾ ಬಸದಿಯನ್ನು ನಿರ್ಮಿಸಿದ್ದಾನೆ. ಮತ್ತು ಕಾಂತರಾಜಪುರದ ಜಿನಾಲಯವನ್ನು ಎಕ್ಕೋಟಿ
ಜಿನಾಲಯ ವನ್ನಾಗಿ ಮಾಡಿಸಿದ್ದಾನೆ.
ಕ್ರಿ.ಶ. 1133ರ ಬೇಲೂರು ತಾಲ್ಲೂಕು ಬಸ್ತಿಹಳ್ಳಿ ಶಾಸನದಲ್ಲಿ ಶ್ರೀಮನ್ನಯಕೀರ್ತಿ ಸಿದ್ಧಾಂತ
ಚಕ್ರವರ್ತಿಗಳ ಶಿಷ್ಯರು ನೇಮಿಚಂದ್ರ ಪಂಡಿತದೇವರು ಎಂದು ಹೇಳಿದ್ದು, ಇದು ಇವನ ಮೊದಲ ಶಾಸನವೆಂದು ಹೇಳಬಹುದು. ಕ್ರಿ.ಶ. 1145ರ ಶ್ರವಣಬೆಳಗೊಳದ ಚಿಕ್ಕಬೆಟ್ಟದ ಗಂಧವಾರಣ ಬಸದಿಯ ಶಾಸನ, ಕ್ರಿ.ಶ. 1176ರ ಏಪ್ರಿಲ್ 24ರ ಮಹಾನವಮಿ ಮಂಟಪದ ನಯಕೀರ್ತಿ ಮುನಿಯ ನಿಸಿದಿಗೆ ಶಾಸನ, ಕ್ರಿ.ಶ. 1181 ರ ಬೊಮ್ಮೇನಹಳ್ಳಿ ಶಾಸನ, ಕ್ರಿ.ಶ1185ರ ಚನ್ನರಾಯಪಟ್ಟಣ ಶಾಸನ, ಕ್ರಿ.ಶ. 1195ರ ಶ್ರವಣಬೆಳ ಗೊಳದ ನಗರ ಜಿನಾಲಯ ಶಾಸನ ಇವನ
ತೇದಿ ಇರುವ ಶಾಸನಗಳು.
ನಗರ ಜಿನಾಲಯ ಶಾಸನ, ಮತ್ತು ಚಿಕ್ಕಬೆಟ್ಟದ ಶಾಸನದಲ್ಲಿ ನಯಕೀರ್ತಿಯ ಶಿಷ್ಯರುಗಳ ಹೆಸರನ್ನು
ಉಲ್ಲೇಖಮಾಡಲಾಗಿದೆ. ಬೆಳ್ಗೊಳತೀರ್ಥದ ಮಹಾ ಮಂಡಲಾಚಾರ್ಯ ಸಿದ್ಧಾಂತ ಚಕ್ರೇಶ ನಯಕೀರ್ತಿ
ಬತ್ರಿರಾಜನ ಶಿಷ್ಯರು-ದಾಮನಂದಿ ತ್ರೈವಿದ್ಯದೇವ, ಬಾನುಕೀರ್ತಿ
ಸಿದ್ಧಾಂತ ದೇವ, ಬಾಳಚಂದ್ರದೇವ, ಪ್ರಭಾಚಂದ್ರದೇವ, ಮಾಘನಂದಿ ಭಟಾರಕ, ಮಂತ್ರವಾದಿ ಪದ್ಮನಂದಿ ದೇವ, ನೇಮಿಚಂದ್ರ
ಪಂಡಿತರು ಎಂದು ಹೇಳಿದೆ.
ಕ್ರಿ.ಶ. 1176ರ ಏಪ್ರಿಲ್ 24ರ ಮಹಾನವಮಿ ಮಂಟಪದ ನಯಕೀರ್ತಿ ಮುನಿಯ
ನಿಸಿದಿಗೆ ಶಾಸನದಲ್ಲಿ ಅವನ ಶಿಷ್ಯ ಪರಂಪರೆಯನ್ನು ನೀಡಿದೆ. ಮೇಘಚಂದ್ರ, ಅಣ್ಣಿತಟಾಕವಾಸಿ ಮಲಧಾರಿದೇವ, ಶ್ರೀಧರದೇವ,
ದಾಮನಂದ ತ್ರೈವಿದ್ಯದೇವ, ಭಾನಕೀರ್ತಿ ಬಾಳಚಂದ್ರಮುನಿ.
ಕ್ರಿ.ಶ. 1231ರ ಸುತ್ತಾಲಯದಲ್ಲಿರುವ ಶಾಸನ. ಗೊಮ್ಮಟದೇವರ ಚವ್ವೀಸ ತೀರ್ಥಂಕರರ
ಅಷ್ಟವಿಧಾರ್ಚನೆಗೆ 12 ಗದ್ಯಾಣ ದತ್ತಿ ನೀಡಿದ ಶಾಸನವೇ ಇವನ ತೇದಿ
ಇರುವ ಕೊನೆಯ ಶಾಸನ.
ನಯಕೀರ್ತಿಯ ಶಿಷ್ಯ ಬಾಳಚಂದ್ರನು 12ನೇ ಶತಮಾನದ ಅಂತ್ಯದವರೆಗೆ ಜೀವಿಸಿದ್ದನು ಎಂದು ಪ್ರೊ. ಷ. ಶೆಟ್ಟರ್ ಅವರು
ಹೇಳಿದ್ದಾರೆ. ಆದರೆ ಅವನ ತೇದಿ ಇರುವ ಶಾಸನ 1231 ಆಗಿರುವುದರಿಂದ
ಅವನು ಹದಿಮೂರನೆಯ ಶತಮಾನದ ಆದಿಭಾಗದವರೆಗೆ ಜೀವಿಸಿದ್ದನೆಂದು ಹೇಳಬಹುದು.
ಬಾಲಚಂದ್ರನು ಗೊಮ್ಮಟೇಶ್ವರನ ಸುತ್ತಾಲವನ್ನು
ಮಾಡಿಸುವಲ್ಲಿ, ಅಲ್ಲಿ ಚವ್ವೀಸ ತೀರ್ಥಂಕರ ಮೂರ್ತಿಯನ್ನು
ಮಾಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದನೆಂಬುದನ್ನು ಆ ಪ್ರತಿಮೆಗಳ ಕೆಳಗಿರುವ 4-5 ಶಾಸನಗಳಿಂದ ತಿಳಿದುಬರುತ್ತದೆ.
ಶ್ರ.ಬೆ (81) ಚಂದ್ರಗುಪ್ತಬಸದಿಯ ಶಾಸನದಲ್ಲಿ ಭಾನಿಕೀರ್ತಿಯು ಕೂಂಡಿನಾಡ ಪೂವಿನಬಾಗೆಯಲ್ಲಿ
ಸನ್ಯಸನ ವಿಧಯಿಂದ ಮರಣಹೊಂದಿದಾಗ ಅವನ ಅಗ್ರಶಿಷ್ಯ ಬಾಳಚಂದ್ರದೇವನ ಶಿಷ್ಯೆ ಬಾಗಣಬ್ಬೆ
ಸಂದಿವಿಗ್ರಹಿ ಮಲ್ಲಿಯಣ್ಣ ನಿಸಿದಿಗೆ ಮಾಡಿದಸಿದರೆಂದು ಹೇಳಿದೆ. ಭಾನುಕೀರ್ತಿಯು
ಬಾಳಚಂದ್ರದೇವನಿಗಿಂತ ಹಿರಿಯ ಶಿಷ್ಯನಾಗಿದ್ದರಿಂದ ಬಾಳಚಂದ್ರನನನ್ನು ಅವನ ಶಿಷ್ಯ ಎಂದು ಹೇಳಿದೆ.
ಪಟ್ಟಣಸ್ವಾಮಿ ಸೋವಿಸೆಟ್ಟಿಯ
ನಿಜಗುರುವಾಗಿದ್ದ ಅಧ್ಯಾತ್ಮಿ ಬಾಳಚಂದ್ರಮುನೀಂದ್ರನು ಪಟ್ಟಣ ಶಾಸನದಲ್ಲಿ ಸ್ತುತ್ಯನಾಗಿದ್ದಾನೆ.
ಈ ಶಾಸನದಲ್ಲಿ ಅವನ ಗುರುಪರಂ ಪರೆಯನ್ನು ನೀಡಿದೆ.9 ಈ ಶಾಸನದಲ್ಲಿ
ದಾಮನಂದಿಯ ಅನುಜ ಅಧ್ಯಾತ್ಮಿ ಬಾಲಚಂದ್ರ ಎಂದು ಹೇಳಿದ್ದು ಅನುಜ ಎಂದರೆ ಕಿರಿಯ ಸಹಪಾಠಿ ಎಂದು
ಹೇಳಬಹುದು.
ಇವನು ಜಿನಸ್ತುತಿಯನ್ನು ಬರೆದಿದ್ದಾನೆ.
ಇದಲ್ಲದೆ ಕುಂದಕುಂದಾಚಾರ್ಯರ ಪಂಚಾಸ್ತಿಕಾಯ, ಪ್ರವಚನಸಾರ,
ಸಮಯಸಾರ, ಪ್ರಾಭೃತಗಳಿಗೂ ಉಮಾಸ್ವಾಮಿಯ ತತ್ವಾರ್ಥಸೂತ್ರಕ್ಕೂ ಕನ್ನಡ ಟೀಕೆಗಳನ್ನು
ಬರೆದಿದ್ದಾನೆಂದು ಕವಿಚರಿತೆಕಾರರು ಹೇಳಿದ್ದಾರೆ. ಆದರೆ ಇವುಗಳನ್ನು ಬರೆದಿರುವುದಕ್ಕೆ ಯಾವ
ಆಧಾರವೂ ಇಲ್ಲ ಎಂದು ಆ.ನೆ. ಉಪಾಧ್ಯ ಅವರು ಹೇಳಿದ್ದಾರೆ. ಪರಮಾತ್ಮ ಪ್ರಕಾಶಕ್ಕೆ ಮಲಧಾರಿ
ಬಾಲಚಂದ್ರದೇವನೆಂಬುವವನು ಒಂದು ಕನ್ನಡ ಟೀಕೆಯನ್ನು ಬರೆದಿದ್ದಾನೆಂದು ಆನೆ ಉಪಾಧ್ಯೆ
ಹೇಳಿದ್ದಾರೆ. (ಕನ್ನಡ ಅಧ್ಯಯನ ಸಂಸ್ಥೆಯ ಕನ್ನಡ ಸಾಹಿತ್ಯ ಚರಿತ್ರೆ, ಭಾಗ 4 ಸಂಪುಟ 1 ಪುಟ 889-890)
7. ಸೂರಸ್ಥಗಣದ ಬಾಲಚಂದ್ರ
ಸೂರಸ್ಥಗಣದ ಅನಂತವೀರ್ಯನ ಶಿಷ್ಯ ಬಾಲಚಂದ್ರ
ಅವನ ಶಿಷ್ಯ ಪ್ರಭಾಚಂದ್ರರ ಪ್ರಸ್ತಾಪ ಕಂಬದಹಳ್ಳಿ ಶಾಸನದಲ್ಲಿದೆ.10 ಪಲ್ಲಪಂಡಿತನ ಜೈನಮುನಿಪರಂಪರೆಯನ್ನು ನೀಡುವ ಈ ಶಾಸನದ ಕಾಲ ಕ್ರಿ.ಶ. 900 ಎಂದು ಹೇಳಬಹುದು. ಕ್ರಿ.ಶ. 1118. ರ ಗಂಗರಾಜನ ಶಾಸನವನ್ನು ಕೆಳಗೆ ಬರೆದಿದೆ.
8. ಮೂಲಸಂಘದ ದೇಸಿಯಗಣದ ಪುಸ್ತಕಗಚ್ಛದ
ಇಂಗಳೇಶ್ವರ ಬಳಿಯ ಸಮುದಾಯದ ಮಾಘನಂದಿ ಭಟ್ಟಾರಕ ದೇವರ ಶಿಷ್ಯ ಬಾಳಚಂದ್ರ ಪಂಡಿತ ದೇವ (1213)
ಕ್ರಿ.ಶ. 1213ರ ಜಿನನಾಥಪುರದ ಶಾಸನದಲ್ಲಿ ಮಹಾಮಂಡಳಾಚಾರ್ಯ ರಾಜಗುರು ಬೆಳಿಕುಂಬದ ನೇಮಿಚಂದ್ರ
ಪಂಡಿತದೇವರ ಪ್ರಿಯಶಿಷ್ಯ ಬಾಳಚಂದ್ರ ದೇವರ ಉಲ್ಲೇಖವಿದೆ.11 ಅದೇ ರೀತಿ ಕ್ರಿ.ಶ. 1282ರ ಶ್ರವಣ ಬೆಳಗೊಳದ
ನಗರ ಜಿನಾಲಯದ ಶಾಸನದಲ್ಲೂ ಕೂಡಾ ಮೂಲಸಂಘದ ದೇಸಿಯಗಣದ ಇಂಗಳೇಶ್ವರ ಬಳಿಯ ರಾಜಗುರು ಮಾಘನಂದಿ
ಸೈದ್ಧಾಂತ ಚಕ್ರವರ್ತಿಯ ಶಿಷ್ಯ ನೇಮಿಚಂದ್ರ ಪಂಡಿತದೇವರ ಶಿಷ್ಯ ಬಾಳಚಂದ್ರದೇವನ ಉಲ್ಲೇಖವಿದೆ.12 ಮಾಘನಂದಿಗೆ ಸಮುದಾಯದ ಮಾಘನಂದಿ ಎಂಬ ಹೆಸರಿತ್ತು.13 ಈ ಬಾಳಚಂದ್ರ ಪಂಡಿತ ದೇವನಿಗೆ ಸಂಬಂಧಿಸಿದ ಅನೇಕ ಶಾಸನಗಳು ಬೇಲೂರು ತಾಲ್ಲೂಕು
ಬಸ್ತಿಹಳ್ಳಿಯಲ್ಲಿವೆ.14 ಈತನು ಅಲ್ಲಿಯೇ ಸಮಾಧಿಮರಣವನ್ನು ಹೊಂದಿದ
ವಿಚಾರ ತಿಳಿದುಬರುತ್ತದೆ. ಬಸ್ತಿಹಳ್ಳಿಯ ಕ್ರಿ.ಶ. 1274ರ ಶಾಸನವು ಮೂಲಸಂಘದ ದೇಸಿಯ ಗಣದ ಪುಸ್ತಕ ಗಚ್ಛದ ಕೊಂಡಕುಂದಾನ್ವಯದ ಇಂಗಳೇಶ್ವರ
ಬಳಿಯ ಶ್ರೀ ಸಮುದಾಯದ ಮಾಘನಂದಿಗಳ ಪ್ರಿಯಶಿಷ್ಯರಾದ ನೇಮಿಚಂದ್ರಭಟ್ಟಾರಕ ದೇವರು ಮತ್ತು ಶ್ರೀಮದ
ಭಯಚಂದ್ರ ಸೈದ್ಧಾಂತ ಚಕ್ರವರ್ತಿಗಳ ಶಿಷ್ಯ ತಪಶ್ರುತಗಳಿಂದ ಜಗದೊಳು ವಿಖ್ಯಾತಿಯನ್ನು ಪಡೆದ
ಶ್ರೀಮದ್‍ಬಾಳಚಂದ್ರ ಪಂಡಿತ ದೇವರು ಸಮಾಧಿಮರಣ ಹೊಂದಿದರೆಂದು ಹೇಳುತ್ತದೆ. ಈ ಶಾಸನದಲ್ಲಿ
ಸಮಾಧಿಮರಣದ ಮೊದಲು ಯತಿಗಳು ಅನುಸರಿಸುತ್ತಿದ್ದ ಕೆಲವು ಕ್ರಮಗಳನ್ನು ನಿರೂಪಿಸ ಲಾಗಿದೆ.
ಬಾಲಚಂದ್ರ ಪಂಡಿತದೇವನಿಗೆ ನೇಮಿಚಂದ್ರ ಭಟ್ಟಾರಕರು ಮತ್ತು ಅಭಯಚಂದ್ರ ಸೈದ್ಧಾಂತಿಕರು ಕ್ರಮವಾಗಿ
ದೀಕ್ಷಾಗುರುಗಳು ಮತ್ತು ಶ್ರುತುಗುರುಗಳೂ ಆಗಿದ್ದರೆಂಬುದು ಈ ಶಾಸನದಿಂದ ತಿಳಿದುಬರುತ್ತದೆ.15 ಈ ಬಾಲಚಂದ್ರ ಪಂಡಿತದೇವನ ಶಿಷ್ಯ ಶ್ರೀ ರಾಮಚಂದ್ರ ಮಲಧಾರಿದೇವನು
ಸಮಾಧಿಮರಣವನ್ನು ಹೊಂದಿದ ವಿಚಾರವನ್ನು ಇಲ್ಲಿರುವ ಇನ್ನೊಂದನ್ನು ಶಾಸನ ತಿಳಿಸುತ್ತದೆ.16 ಇವನನ್ನೇ ದ್ರವ್ಯಸಂಗ್ರಹ ಸೂತ್ರಕ್ಕೆ ಕರ್ನಾಟಕ ಟೀಕೆಯನ್ನು ಬರೆದ ಬಾಳಚಂದ್ರ
ಪಂಡಿತನೆಂದು ಕವಿಚರಿತೆಕಾರರು ಗುರುತಿಸಿದ್ದಾರೆ. ಈ ಟೀಕೆಯನ್ನು 1273ರಲ್ಲಿ ಬರೆದಿದೆ ಎಂದು ಹೇಳಿದ್ದಾರೆ.17
ಕುಷ್ಟಗಿ ತಾಲ್ಲೂಕಿನ ಅಂಟೂರ್‍ಠಾಣಾದ
ಕ್ರಿ.ಶ. 1276ರ ಶಾಸನದಲ್ಲಿ ಮಹಾಪ್ರದಾನ ಸರ್ವಾಧಿಕಾರಿ
ತಿಪ್ಪರಸರ ಹೆಂಡತಿ ಗೋನಮಾದೇವಿಯ ಸೋದರಳಿಯ ಮಾರಸೆಟ್ಟಿ, ಮಾಯಿಸೆಟ್ಟಿ, ಪದುಮಸೆಟ್ಟಿ ಇವುರಗಳು ಚೌವೀಸ ತೀರ್ಥಂಕರರ
ಪ್ರತಿಮೆಯನ್ನು ಮಾಡಿಸಿದಾಗ, ವರ್ಧಮಾನ ತೀರ್ಥಂಕರರ ಪ್ರಭಾವಳಿಯ ಬಲಭಾಗಕ್ಕೆ
ಶ್ರೀಮೂಲಸಂಘದ ದೇಸಿಯಗಣದ ಪೊಸ್ತಕಗಚ್ಛದ, ಕೊಂಡಕುಂದಾನ್ವಯದ ಯಿಂಗಳೀಶ್ವರಬಳಿಯ
ಬಾಳಚಂದ್ರತ್ರೈವಿದ್ಯದೇವನ ಪ್ರತಿಮೆಯನ್ನು ಮಾಡಿಸಿದರೆಂದು ಹೇಳಿದೆ.18 ಈ ಬಾಲಚಂದ್ರನು ಅಷ್ಟೊಂದು ಪ್ರಸಿದ್ಧನಾಗಿದ್ದನೆಂದು ಇದರಿಂದ ತಿಳಿದುಬರುತ್ತದೆ.
ಕವಿಚರಿತೆಕಾರರು ಗುರುತಿಸಿರುವ
ಬಾಲಚಂದ್ರಪಂಡಿತ ಇವನೇ ಇರಬಹುದು. ಬಸ್ತಿಹಳ್ಳಿಯ ಶಾಸನದಲ್ಲಿ ಶ್ರೀಮದ್ಭಾಲಚಂದ್ರನ ಪಂಡಿತದೇವರು
ಸಾರಚತುಷ್ಟಯಾದಿ ಗ್ರಂಥಗಳ ವ್ಯಾಖ್ಯಾನ ಮಾಡಿದರು ಎಂದು ಹೇಳಿದ. ಕವಿಚರಿತೆಕಾರರು ಅಧ್ಯಾತ್ಮಿ
ಬಾಲಚಂದ್ರನ ಹೆಸರಿಗೆ ಆರೋಪಿಸಿರುವ ಕುಂದಕುಂದಾಚಾರ್ಯರ ಪಂಚಾಸ್ತಿಕಾಯ, ಪ್ರವಚನಸಾರ, ಸಮಯಸಾರ, ಪ್ರಭೃತಗಳಿಗೂ ಉಮಾಸ್ವಾಮಿಯ ತತ್ವಾರ್ಥಸೂತ್ರಕ್ಕೂ ಗ್ರಂಥಗಳನ್ನು ಬಾಲಚಂದ್ರನೇ
ಬರೆದಿರುವ ಸಾಧ್ಯತೆ ಇದೆ. ಕಾರಣ ಇಲ್ಲಿ ಚತುಷ್ಟಯಾದಿ ಗ್ರಂಥಗಳು ಎಂದರೆ ನಾಲ್ಕು ಗ್ರಂಥಗಳು ಎಂದೂ
ಹೇಳಬಹುದು. (ಕನ್ನಡ ಸಾಹಿತ್ಯ ಚರಿತ್ರೆ, ಸಂಪುಟ 4 ಭಾಗ 2 ಪುಟ 1668-69)
9. ಮೂಲಸಂಘದ ವಕ್ರಗಚ್ಛದ ತಿಳಕ ಮಾಂಡವಿಯ ಬಾಳಚಂದ್ರಸಿದ್ಧಾಂತ
ದೇವ (1315)
ಬೇಲೂರು ತಾಲ್ಲೂಕು ಬಸ್ತಿಹಳ್ಳಿಯಲ್ಲಿರುವ
ಪಾಶ್ರ್ವನಾಥ ಬಸದಿಯಲ್ಲಿರುವ ಮೂರನೆಯ ಬಲ್ಲಾಳನ ಕಾಲದ ಶಾಸನವು ವಕ್ರಗಚ್ಛದ ಬಾಲಚಂದ್ರನನ್ನು
ಉಲ್ಲೇಖಿಸು ತ್ತದೆ. ಮೂಲಸಂಘ ಕಮಲಾಕರ ರಾಜಹಂಸ, ದೇಶೀಯ
ಸದ್ಗಣಗುಣೇಂದ್ರ, ವಕ್ರಗಚ್ಛದ ತಿಳಕಮುನಿ ಬಾಲಚಂದ್ರ ದೇವನನ್ನು
ಶ್ರೀಮನ್ಮಹಾಮಂಡಲಾಚಾರ್ಯ ಮಾಂಡವೀಯ ಬಾಳಚಂದ್ರ ಸಿದ್ಧಾಂತ ದೇವನೆಂದು ಈ ಶಾಸನ ವರ್ಣಿಸಿದೆ. ಈತನು
ಶಿಷ್ಯನ ಹೆಸರೂ ರಾಮಚಂದ್ರದೇವ.19 ಈ ಶಾಸನದಲ್ಲಿ ಇವರ ಗುರುಪರಂಪರೆಯನ್ನು
ನೀಡಿರುವುದಿಲ್ಲ.
10. ದ್ರಮಿಳ ಸಂಘದ ಬಾಲಚಂದ್ರ
ದ್ರಮಿಳ ಸಂಘದ ಶ್ರೀಪಾಳ ತ್ರೈವಿದ್ಯದೇವರ
ಶಿಷ್ಯರಾದ ವಾಸುಪೂಜ್ಯ ಸಿದ್ಧಾಂತ ದೇವ ಮತ್ತು ಬಾಲಚಂದ್ರ ದೇವರ ಉಲ್ಲೇಖ ಮಕ್ರ್ಕುಲಿ
ಶಾಸನದಲ್ಲಿದೆ.20
11. ಯಾಪನೀಯ ಸಂಘದ ಪುನ್ನಾಗ ವೃಕ್ಷದ ಬಾಲಚಂದ್ರ
ಭಟ್ಟಾರಕ
ಸವದತ್ತಿ ತಾಲೂಕಿನ ಹೂಲಿ ಗ್ರಾಮದ ಕ್ರಿ.ಶ.1145ರ ಶಾಸನದಲ್ಲಿ ಯಾಪನೀಯ ಸಂಘದ, ಪುನ್ನಾಗ ವೃಕ್ಷದ
ಮೂಲಗಣದ ಶ್ರೀ ಬಾಲಚಂದ್ರ ಭಟ್ಟಾರಕ ದೇವನ ಹೆಸರಿದ್ದು ಅವನ ಶಿಷ್ಯ ಪರಂಪರೆಯನ್ನು ನೀಡಿದೆ.
ಬಾಳಚಂದ್ರ ಭಟ್ಟಾರಕ - ರಾಮಚಂದ್ರ - ಜಿನದೇವ.21
12. ಯಾಪನೀಯ ಸಂಘದ ಕಂಡೂರ ಗಣದ ಬಾಲಚಂದ್ರ
ಕ್ರಿ.ಶ. ಸು. 12ನೇ ಶತಮಾನದ ಶಾಸನದಲ್ಲಿ ಯಾಪನೀಯ ಸಂಘದ ಕಂಡೂರ ಗಣದ ಬಾಲಚಂದ್ರನ ಉಲ್ಲೇಖವಿದೆ.22
13. ಮೂಲಸಂಘದ ದೇಶೀಯಗಣದ ವಕ್ರಗಚ್ಛದ
ಕೊಂಡಕುಂದಾನ್ವಯದ ಪರಿಯಳಿಯ ಬಡ್ಡದೇವರಬಳಿಯ ಮಾಘನಂದಿ ಸಿದ್ಧಾಂತ ದೇವರ ಶಿಷ್ಯ ಬಾಳಚಂದ್ರ
ಸಿದ್ಧಾಂತ ದೇವ (1176)
ಚಿಕ್ಕಮಗಳೂರು ಜಿಲ್ಲೆಯ ಕಳಸಾಪುರ ಶಾಸನದಲ್ಲಿ
ಮೂಲಸಂಘದ ಕೊಂಡ ಕುಂದಾನ್ವಯದ, ದೇಶಿಗಣದ ವಕ್ರಗಚ್ಛದ ಜೈನಪರಂಪರೆಯೊಂದು
ಉಲ್ಲೇಖಿತವಾಗಿದೆ. ಈ ಜೈನಮುನಿ ಪರಂಪರೆಯಲ್ಲೂ ಕೂಡಾ ಬಾಲಚಂದ್ರಮುನಿ ಎಂಬುವವನು
ಕಾಣಿಸಿಕೊಳ್ಳುತ್ತಾನೆ.23 ಈ ಶಾಸನದ ಜೈನಮುನಿ ಪರಂಪರೆ ಈ ರೀತಿ ಇದೆ.
ದೇವೇಂದ್ರ ಸೈದ್ಧಾಂತಿಕ ಮುನಿ - ವೃಷಭನಂದಿ (ಕಾರ್ಯೋತ್ಸರ್ಗದಿಂದ ಮರಣ ಹೊಂದುತ್ತಾನೆ) ಅವನ
ಅಗ್ರಶಿಷ್ಯ ಗೋಪನಂದಿ ಪಂಡಿತದೇವ - ಮಾಘನಂದಿ ಸೈದ್ಧಾಂತಿಕ - ರತ್ನನಂದಿ ಮುನಿ - ಬಾಲಚಂದ್ರಮುನಿ
- . . . . ಹ¾õÁಚಾರ್ಯ. ಇವರ ಗುಡ್ಡ ಶ್ರೀಮನ್ ಮಹಾವಡ್ಡವ್ಯವಹಾರಿ ಕವಡಮಯ್ಯದೇವಿಸೆಟ್ಟಿ
ವೀರಬಲ್ಲಾಳ ಜಿನಾಲಯವನ್ನು ಮಾಡಿಸುತ್ತಾನೆ.
ಶ್ರವಣಬೆಳಗೊಳದ ಚಿಕ್ಕಬೆಟ್ಟದ ಮೇಲಿರುವ ಸು.12ನೇ ಶತಮಾನದ ಕತ್ತಲೆಯ ಬಸದಿಯಲ್ಲಿರುವ ಜೈನಯತಿ ಪರಂಪರೆಯನ್ನು ಹೇಳುವ ಶಾಸನದಲ್ಲಿ
ಶ್ರೀಮನ್ ಮೂಲ ಸಂಘದ, ದೇಶೀಯಗಣದ, ವಕ್ರಗಚ್ಛದ, ಕೊಂಡಕುಂದಾನ್ವ ಯದ ಪರಿಯಳಿಯ ವಡ್ಡದೇವರ ಬಳಿಯ
ದೇವೇಂದ್ರ ಸಿದ್ಧಾಂತ ದೇವರ ಶಿಷ್ಯ ಪರಂಪರೆಯಲ್ಲಿ ಬರುವ ಮಾಘನಂದಿ ಸಿದ್ಧಾಂತ ದೇವರ ಶಿಷ್ಯ
ಬಾಳಚಂದ್ರ ಸಿದ್ಧಾಂತ ದೇವನೆಂದು ಹೇಳಿದೆ. ತ್ರಿರತ್ನನಂದಿಭಟ್ಟಾರಕರು, ಕಲ್ಯಾಣಕೀರ್ತಿಭಟ್ಟಾರಕರು, ಮೇಘಚಂದ್ರ
ಪಂಡಿತದೇವರು ಇವರ ಸಾಧರ್ಮಿಗಳೆಂದು ಹೇಳಿದೆ.24 ಕತ್ತಲೆ
ಬಸದಿಯನ್ನು ವಕ್ರಗಚ್ಛದ ಬಸದಿ ಎಂದು ಶೆಟ್ಟರ್ ಅವರು ಗುರುತಿಸಿದ್ದಾರೆ.
14. ನಂದಿಸಂಘದ ದೇಸಿಗಣದ ಪುಸ್ತಕಗಚ್ಛದ
ಇಂಗುಳೇಶ್ವರ ಬಳಿಯ ಬಾಲಚಂದ್ರ (1398)
ಶ್ರವಣಬೆಳಗೊಳದ ದೊಡ್ಡಬೆಟ್ಟದ ಸಿದ್ಧರ ಬಸದಿ
ಯಲ್ಲಿರುವ ಶಾಸನದಲ್ಲಿ ನಂದಿಸಂಘದ, ದೇಸಿಗಣದ, ಪುಸ್ತಕ ಗಚ್ಛದ ಇಂಗುಳೇಶ್ವರ ಬಳಿಯ ನಾಗಚಂದ್ರನ ಮುನಿ ಪರಂಪರೆಯನ್ನು ಹೇಳಿದ್ದು,
ಇದರಲ್ಲಿ ಪ್ರಭಾಚಂದ್ರನ ಶಿಷ್ಯ
ಬಾಲಚಂದ್ರ-ಜಿನಚಂದ್ರ-ಮೇಘಚಂದ್ರ-ಪ್ರಭಾಚಂದ್ರ-ಬಾಲಚಂದ್ರ.25
15. ಮೂಲಸಂಘದ ದೇಶೀಯಗಣದ ಪುಸ್ತಗಚ್ಛದ
ಬೆಳ್ಳಿಕುಂಬದ ನೇಮಿಚಂದ್ರಪಂಡಿತ ದೇವರ ಶಿಷ್ಯ ಬಾಳಚಂದ್ರದೇವರು
ಕ್ರಿ.ಶ.1213ರ ಜಿನನಾಥಪುರ ಶಾಸನದಲ್ಲಿ ಮಹಾಮಂಡಳಾಚಾರ್ಯ ರಾಜಗುರು ಬೆಳ್ಳಿಕುಂಬದ (ಇಂದಿನ
ತಿಪಟೂರು ತಾಲ್ಲೂಕು ಬೆಳಗುಂಬ-ಅರಸೀಕೆರೆ ಬಳಿ ಇದೆ) ಶ್ರೀ ನೇಮಿಚಂದ್ರಪಂಡಿತ ದೇವರ ಶಿಷ್ಯ
ಬಾಳಚಂದ್ರದೇವರ ಉಲ್ಲೇಖವಿದೆ. ಕ್ರಿ.ಶ. 1214 ಬೆಳ್ಳಿಕುಂಬದ
ನೇಮಿಚಂದ್ರ ಪಂಡಿತರು ದಿವಿಜವಧುಗೆ ವಲ್ಲಭನಾದನೆಂದು ಇದರಲ್ಲಿ ಹೇಳಿದೆ.26 ಕ್ರಿ.ಶ. 1282ರ ಶ್ರವಣಬೆಳಗೊಳದ ನಗರ ಜಿನಾಲಯದ ಶಾಸನದಲ್ಲಿ
ಕೂಡಾ ಶ್ರೀಮನ್ಮಹಾಮಂಡಳಾಚಾರ್ಯ ಶ್ರೀ ಮೂಲಸಂಘದ ಇಂಗಳೇಶ್ವರಬಳಿಯ ದೇಸಿಯಗಣದ ರಾಜಗುರುಗಳುಮಪ್ಪ
ನೇಮಿಚಂದ್ರಪಂಡಿತ ದೇವರ ಶಿಷ್ಯರು ಬಾಳಚಂದ್ರ ದೇವರು ಎಂದು ಹೇಳಿದೆ. ಇವನ ಸಮ್ಮುಖದಲ್ಲಿ ನಗರ
ಜಿನಾಲಯಕ್ಕೆ ರಾಚೇನಹಳ್ಳಿಯನ್ನು ಬಲಾತ್ಕರ ಗಣಕ್ಕೆ ಸೇರಿ ನಖರರು ನಖರ ಜಿನಾಲಯದ ಆದಿದೇವರಿಗೆ
ದತ್ತಿ ಬಿಟ್ಟರೆಂದು ಹೇಳಿದೆ.27 ಜಿನನಾಥಪುರದ ಇನ್ನೊಂದು ಶಾಸನದಲ್ಲಿ
ರಾಜಗುರು ಬೆಳ್ಳಿಕುಂಬದ ಶ್ರೀನೇಮಿಚಂದ್ರ ಪಂಡಿತ ದೇವರ ಪ್ರಿಯಶಿಷ್ಯ ಶ್ರೀಮದ್ ಬಾಳಚಂದ್ರ ದೇವರು
ಎಂದು ಹೇಳಿದ್ದು, ಬಾಳಚಂದ್ರದೇವರ ಗುಡ್ಡನೊಬ್ಬ ಸನ್ಯಸನ
ವಿಧಿಯಿಂದ ಮರಣ ಹೊಂದಿದನೆಂದೂ ಅವನ ಶರೀರವನ್ನು ಅಲ್ಲೇ ಸಮಾಧಿ ಮಾಡಲಾಯಿತೆಂದು ಹೇಳಿದೆ.28
16. ಮೂಲಸಂಘದ ದೇಶಿಯಗಣದ ಪುಸ್ತಕಗಚ್ಛದ
ಕೊಂಡಕುಂದಾನ್ವಯದ ಇಂಗಳೇಶ್ವರ ಬಳಿಯ ಸಮುದಾಯದ ಮಾಘನಂದಿ ಭಟ್ಟಾರಕ ದೇವರ ಮತ್ತು ಅಭಯಚಂದ್ರ
ಸೈದ್ಧಾಂತಿಕರ ಶಿಷ್ಯ ಬಾಲಚಂದ್ರಪಂಡಿತ.
ಬೇಲೂರು ತಾಲ್ಲೂಕು ಬಸ್ತಿಹಳ್ಳಿಯ ಕ್ರಿ.ಶ. 1274ರ ಶಾಸನದಲ್ಲಿ ಮೂಲಸಂಘದ ದೇಶಿಯಗಣದ ಪುಸ್ತಕಗಚ್ಛದ ಕೊಂಡಕುಂದಾನ್ವಯದ ಇಂಗಳೇಶ್ವರ
ಬಳಿಯ ಶ್ರೀ ಸಮುದಾಯದ ಮಾಘನಂದಿ ಭಟ್ಟಾರಕರ (ದೀಕ್ಷಾಗುರು) ಮತ್ತು ಶ್ರೀಮದಭಯಚಂದ್ರ ಸೈದ್ಧಾಂತಿಕ
ಚಕ್ರವರ್ತಿಗಳ (ಶ್ರುತಗುರು) ಶಿಷ್ಯ ಬಾಲಚಂದ್ರಪಂಡಿತನ ಉಲ್ಲೇಖವಿದೆ.29
ಈ ಶಾಸನದಲ್ಲಿ ಎರಡು ಉಬ್ಬು ಪ್ರತಿಮೆಗಳಿದ್ದು,
ಒಂದರ ಕೆಳಗೆ ಬಾಲಚಂದ್ರ ಪಂಡಿತದೇವರು ಸಾರಚತುಷ್ಟಯ ಗ್ರಂಥಗಳನ್ನು
ವ್ಯಾಖ್ಯಾನ ಮಾಡಿದರೆಂದೂ, ಇನ್ನೊಂದು ಉಬ್ಬುಶಿಲ್ಪದ ಕೆಳಗೆ
ನೇಮಿಚಂದ್ರಪಂಡಿತ ದೇವರು ಕೇಳಿದರೆಂದೂ ಹೇಳಿದೆ. ನಂತರ ಬಾಳಚಂದ್ರಪಂಡಿತ ದೇವರು
ಸನ್ಯಸನಪೂರ್ವಕವಾಗಿ ಸಕಲ ನಿವೃತ್ತಿ ಮಾಡಿ ಪಲ್ಯಂಕಾಸನದೊಳುಪಂಚಪರಮೇಷ್ಟಿಗಳ ಸ್ವರೂಪವನ್ನು
ಧ್ಯಾನಿಸುತ್ತಾ ಸಮಾಧೀಮರಣ ಹೊಂದಿದರೆಂದು ಹೇಳಿದೆ.
ಅಲ್ಲಿಯೇ ಇರುವ ಇನ್ನೊಂದು ಶಾಸನ ಶಿಲ್ಪದಲ್ಲಿ
ಶ್ರುತಗುರುಗಳಾದ ಅಭಯಚಂದ್ರ ಪಂಡಿತರು ವ್ಯಾಖ್ಯಾನ ಮಾಡಿದರು ಬಾಳಚಂದ್ರಪಂಡಿತ ದೇವರು ಕೇಳಿದರೆಂದು
ಹೇಳಿದೆ. ಇದು ಸನ್ಯಸನ ವಿಧಿಗೆ ಮೊದಲಿನ ಘಟನೆ ಇರಬಹುದು. ಅಥವಾ ಅಭಯಚಂದ್ರಪಂಡಿತರು ಮೊದಲಿಗೆ
ಇವರಿಗೆ ವಿದ್ಯಾಭ್ಯಾಸ ಮಾಡಿಸಿದರ ಸಂಕೇತ ಇರಬಹುದು.30
ಇಲ್ಲೇ ಇರುವ ಕ್ರಿ.ಶ. 1280ರ ಶಾಸನದಲ್ಲಿ ಬಾಳಚಂದ್ರದೇವನ ಗುರು ಅಭಯಚಂದ್ರ ಸೈದ್ಧಾಂತಿಕ ದೇವರು
ಪರ್ಯಂಕಾಸನದಲ್ಲಿ ಸನ್ಯಸನ ವಿಧಿಯಿಂದ ಹೊಂದಿದ ವಿಚಾರವಿದೆ.31
ಇಲ್ಲೇ ಇರುವ ಇನ್ನೊಂದು ಕ್ರಿ.ಶ. 1300ರ ಶಾಸನದಲ್ಲಿ ಬಾಳಚಂದ್ರಪಂಡಿತನ ಪ್ರಿಯ ಅಗ್ರ ಶಿಷ್ಯ ಶ್ರೀಮದ್ ರಾಮಚಂದ್ರ
ಮಲಧಾರಿದೇವನ ಉಲ್ಲೇಖವಿದ್ದು, ಬಾಳಚಂದ್ರ ಪಂಡಿತನು ರಾಮಚಂದ್ರ ಮಲಧಾರಿ
ದೇವನಿಗೆ ಸಾರಚತುಷ್ಟಯ ಮೊದಲಾದ ಗ್ರಂಥಗಳನ್ನು ವ್ಯಾಖ್ಯಾನ ಮಾಡಿದನೆಂದು ಹೇಳಿದೆ.32
ಬಾಲಚಂದ್ರನ ಉಬ್ಬುಶಿಲ್ಪವಿರುವುದು ಇಲ್ಲಿನ
ವಿಶೇಷ.
ಆಧಾರಸೂಚಿ ಮತ್ತು ಅಡಿಟಿಪ್ಪಣಿಗಳು
1. ತಮಿಳ್‍ಸೆಲ್ವಿ, ಕವಿಕಂದರ್ಪ ಮತ್ತು ಬಾಳಚಂದ್ರಮುನಿ-ಒಂದು
ಪರಿಶೀಲನೆ, ಇತಿಹಾಸದರ್ಶನ ಸಂ.13, ಪುಟ 217-18.
2. ನಾಗರಾಜಯ್ಯ ಡಾ|| ಹಂ.ಪ. ಕಾಣೂರ್ಗಣ ಒಂದು ಟಿಪ್ಪಣಿ, ಚಂದ್ರಕೊಡೆ, ಪುಟ 234-248.
3. ಎಕ 7 ಮ 53 ತಿಪ್ಪೂರು ಸು. 12-13ನೇ ಶ.
4. ಎಕ 7 ಮ 52 ತಿಪ್ಪೂರು 12-13ನೇ ಶ.
5. ಎಕ 9 ಹಾಸನ 383 ಬೇಲೂರು.
6. ಎಕ 15 ಹೊಸನಗರ 100 ಹುಂಚ 1177.
7. ಎಕ 13 ಶಿವಮೊಗ್ಗ 14 ಕಲ್ಲೂರ ಗುಡ್ಡ 1122.
8. ಎಕ 8 ರ 133 ಸುಳಗೋಡು ಸೋಮವಾರ 1080.
9. ಎಕ 7 ನಾಮಂ 118 ಹಟ್ಟಣ 1178.
10. ಎಕ 7 ನಾಮಂ 33 ಕಂಬದಹಳ್ಳಿ 1118.
11. ಎಕ 2 ಶ್ರಬೆ 539 ಜಿನನಾಥಪುರ 1213.
12. ಎಕ 2 ಶ್ರಬೆ 456 ನಗರಜಿನಾಲಯ 1282.
13. ಎಕ 9 ಬೇ 406 ಬಸ್ತಿಹಳ್ಳಿ 1300.
14. ಎಕ 9 ಬೇ 402, 405.
15. ಎಕ 9 ಬೇ 401 ಬಸ್ತಿಹಳ್ಳಿ 1274.
16. ಎಕ 9 ಬೇ 406 ಬಸ್ತಿಹಳ್ಳಿ 1300.
17. ನರಸಿಂಹಾಚಾರ್ ಆರ್., ಕರ್ನಾಟಕ ಕವಿಚರಿತೆ, ಪ್ರಥಮ ಸಂಪುಟ, ಪುಟ 453.
18. ಕವಿವಿಶಾ ಸಂ 2, ಕುಷ್ಟಗಿ 26 ಅಂಟೂರ್ ಠಾಣಾ 1267.
19. ಎಕ 9 ಬೇ 394 ಬಸ್ತಿಹಳ್ಳಿ 1315.
20. ಎಕ 8 ಹಾಸನ 174 ಮರ್ಕುಲಿ 1173.
21. ಹಂದೂರ ಡಾ|| ಬಿ.ಆರ್., ಜೈನಪರಂಪರೆಗೆ ಬೆಳಗಾವಿಯ ಪ್ರಾದೇಶಿಕ ಕೊಡುಗೆ, ಪುಟ 236.
22. ಅದೇ, ಪುಟ 244.
23. ಎಕ 11 ಚಿಮಂ 218 ಕಳಸಾಪುರ 1176.
24. ಎಕ 2 ಶ್ರಬೆ 79 ಚಿಕ್ಕಬೆಟ್ಟ ಕತ್ತಲೆಯ ಬಸದಿ 12ನೇ ಶ.
25. ಎಕ 2 ಶ್ರಬೆ 360 ದೊಡ್ಡಬೆಟ್ಟ, ಸಿದ್ಧರ ಬಸದಿ 1398.
26. ಎಕ 2 ಶ್ರಬೆ 539 ಜಿನನಾಥಪುರ 1214.
27. ಎಕ 2 ಶ್ರಬೆ 456 ನಗರ ಜಿನಾಲಯ 1282.
28. ಎಕ 2 ಶ್ರಬೆ 539 ಜಿನನಾಥಪುರ 1214.
29. ಎಕ 9 ಬೇಲೂರು 401 ಬಸ್ತಿಹಳ್ಳಿ 1274.
30. ಎಕ 9 ಬೇಲೂರು 402 ಬಸ್ತಿಹಳ್ಳಿ 13ನೇ ಶ.
31. ಎಕ 9 ಬೇಲೂರು 405 ಬಸ್ತಿಹಳ್ಳಿ 1280.
32. ಎಕ 9 ಬೇಲೂರು 406 ಬಸ್ತಿಹಳ್ಳಿ 1300.
ನಾಗಾರ್ಜುನ ಪದವಿ ಕಾಲೇಜು, ಯಲಹಂಕ, ಬೆಂಗಳೂರು-560064.