Saturday, October 25, 2014

ಹಸ್ತಪ್ರತಿ ಕುರಿತು ದೂರದರ್ಶನದಲ್ಲಿ ಪ್ರಸಾರದ ಸಂದರ್ಶನ

ಬಿ.ಎಂ ಶ್ರೀ . ಸ್ಮಾರಕಪ್ರತಿಷ್ಠಾನದಲ್ಲಿ ಹಸ್ತಪ್ರತಿ ಭಂಡಾರದಲ್ಲಿರುವ ಸುಮಾರು ೧೪೦೦ ಹಸ್ತಪ್ರತಿ ಗಳ ಸಂರಕ್ಷಣೆ ಮತ್ತು ಅಧ್ಯಯನ ಕಾರ್ಯದಲ್ಲಿ ಆಗುತ್ತಿರುವ ಕೆಲಸದ ಕಿರು ನೋಟವನ್ನು ಕೊಡಲಾಗಿದೆ. ಯಾವುದೇ ಅನುದಾನವಿಲ್ಲದೆ ಸ್ವಯಂ ಸೇವಕರ ನೆರವಿನಿಂದ ಪ್ರಾಚೀನ ಜ್ಞಾನ  ಸಂಪತ್ತನ್ನುಆಧುನಿಕ ತಂತ್ರ  ಜ್ಞಾನದ  ಅಳವಡಿಕೆಯಿಂದ  ಸಂರಕ್ಷಿಸಿ ಅಧ್ಯಯನಕ್ಕೆ ಅಣಿಮಾಡುವುದನ್ನು ಕುರಿತು  "ಹಸ್ತ ಪ್ರತಿ ಸಂರಕ್ಷಣೆ ಮತ್ತು ಅಧಯಯನ " ಅಭಿಯಾನದ ನಿರ್ದೇಶಕ ರೊಡಗಿನ  ಚಂದನ ವಾಹಿನಿಯ ಸಂವಾದದ ಕೊಂಡಿ ಕೆಳಗೆ ನೀಡಿದೆ. ದಯವಿಟ್ಟು ನೋಡಿ

ಹಸ್ತಪ್ರತಿ ಕುರಿತು ದೂರದರ್ಶನದಲ್ಲಿ ಪ್ರಸಾರವಾದ ಸಂದರ್ಶನದ ಭಾಗ ಇಲ್ಲಿದೆ..



Friday, October 24, 2014

ದೀಪಾವಳಿ ವಿಶಿಷ್ಟ ಗ್ರಾಮೀಣ ಆಚರಣೆ


   ದೀಪಾವಳಿ : ಆಣೀ ಪೀಣಿ ಆಚರಣೆ.
 ಡಾ.ಪ್ರಕಾಶ ಗ.ಖಾಡೆ,
          

ದೀಪಾವಳಿ ಜನಪದರ ದೊಡ್ಡ ಹಬ್ಬ. ಈ ಹಬ್ಬದಾಚರಣೆಯ ಸಂದರ್ಭದಲ್ಲಿ ಅನೇಕ ಉಪ ಆಚರಣೆಗಳನ್ನು ಕಾಣುತ್ತೇವೆ.ನೀರು ತುಂಬುವ ಹಬ್ಬ, ಆರತಿ ಬೆಳಗುವ ಹಬ್ಬ, ಪಾಂಡವರನ್ನು ಕೂಡಿಸುವ ಹಬ್ಬ, ಲಕ್ಷ್ಮೀ -ಸರಸ್ವತಿ ಪೂಜೆ ಮೊದಲಾದವುಗಳನ್ನು ಆಚರಿಸುತ್ತೇವೆ. ಈ ಆಚರಣೆಗಳಲ್ಲಿಯೇ ಒಂದು ವಿಶಿಷ್ಟ ಸಂಪ್ರದಾಯ ಆಣೀ ಪೀಣಿ ಹಬ್ಬ.ದೀಪಾವಳಿ ಹಬ್ಬದ ಕಾರ್ತಿಕ ಶುದ್ಧ ಪ್ರತಿಪದೆಯಿಂದ ಐದು ದಿನಗಳ ಕಾಲ ಅಂದರೆ ಪಂಚಮಿಯವರೆಗೆ ನಡೆಯುವದು.ದನಕರುಗಳ ಮೇಲಿದ್ದ ಪೀಡೆಯನ್ನು ದೂರಮಾಡಿ ರೋಗ ರುಜಿನಗಳು ಬಾರದಿರಲಿ, ಪಶು ಸಂತಾನ ಬೆಳೆಯಲಿ ಎಂಬುವುದೇ ಈ ಆಚರಣೆಯ ಮೂಲ ಉದ್ದೇಶ.
ಆಣೀ ಪೀಣಿ ಆಚರಣೆ ಬಾಗಲಕೋಟ,ಬಿಜಾಪುರ,ಗದಗ,ಧಾರವಾಡ,ಹಾವೇರಿ ಜಿಲ್ಲೆಗಳಲ್ಲಿ ಹೆಚ್ಚಾಗಿ ಆಚರಿಸುತ್ತಾರೆ.ಮಲೆನಾಡಿನಲ್ಲೂ ಈ ಆಚರಣೆಯಿದ್ದು  ಅಂಟಿಗೆ ಪಂಟಿಗೆ ಎಂದು ಆ ಕಡೆ ಕರೆಯುತ್ತಾರೆ. ಇನ್ನೂ ಕೆಲವು ಕಡೆ ಈ ಹಬ್ಬವನ್ನು ಅವಂಟಿಗೋ ಪವಂಟಿಗೋ,ಆಡಿ ಪಿಡೀ, ಅಂಟಿ ಸುಂಟಿ, ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ.
ಹಳ್ಳಿಯ ದನಗಾಹಿ ಯುವಕರು ದನಗಳ ಮುಖ್ಯ ಆಹಾರವಾದ ಹುಲ್ಲಿನಿಂದ ಗೂಡು ಮಾಡಿ ,ಗೂಡಿನಲ್ಲಿ ದೀವಿಗೆಯನ್ನಿಟ್ಟು ರಾತ್ರಿಯಲ್ಲಿ ಮನೆ ಮನೆಗೆ ತಿರುಗಿ ದನಗಳ ಕುರಿತು ಆಣೀ ಪೀಣಿ ಗೀತೆಗಳನ್ನು ಹೇಳುತ್ತ ಬೆಳಗಿ ಪ್ರತಿಫಲವಾಗಿ ದೀಪಕ್ಕೆ ಎಣ್ಣೆ, ಹಣ, ಕೊಬ್ಬರಿ ಪಡೆದುಕೊಳ್ಳುವುದಿದೆ.ಮನೆಯಿಂದ ಹೊರಡುವಾಗ ಆ ಮನೆಯ ದನ,ಕರು,ಬೆಳೆ,ಬೇಸಾಯಗಳಿಗೆ ಒಳ್ಳೆಯದಾಗಲೆಂದು ಹಾರೈಸಿ ಮುಂದಿನ ಮನೆಗೆ ತೆರಳುತ್ತಾರೆ.
ಹೆಡೆ ಆಕಾರದ ಹೆಣಿಕೆ :
ಆಣೀ ಪೀಣಿ ಹಾವಿನ ಹೆಡೆ ಆಕಾರದ ಹುಲ್ಲಿನ ಹೆಣಿಕೆಯಿಂದ ಕೂಡಿರುತ್ತದೆ. ಗಣಜಲಿ ಹುಲ್ಲಿನಿಂದ ,ಆಪದಿಂದಲೂ ಹೆಣೆಯುತ್ತಾರೆ.ಹುಲ್ಲಿನಿಂದ ತಯಾರಿಸಲಾದ ಈ ಪರಿಕ್ರಮಕ್ಕೆ ಗೊಗ್ಗೆಎಂದು ಕರೆಯುತ್ತಾರೆ.ಹೆಡೆಗಳ ಮಧ್ಯದಲ್ಲಾಗಲಿ, ಗೂಡಿನ ಮಧ್ಯದಲ್ಲಾಗಲಿ ಬೆಳಗುವ ದೀಪವನ್ನಿಟ್ಟಿರುತ್ತಾರೆ.ಮೊದಲ ದಿನ ಹಾವಿನ ಹೆಡೆ ಒಂದಾದರೆ 2,3,4,5 ನೆಯ ದಿನಗಳಿಗೆ ಸರತಿಯಂತೆ ಹೆಡೆಗಳನ್ನು ಮಾಡಿ ಏಳನೆಯ ಹೆಡೆಯ ಹಾವು ಪ್ರತಿ ಮನೆಗೂ ಬರಲೆಂದು ಎರಡು ದಿನಗಳವರೆಗೆ ಬೆಳಗುವದಿದೆ.ಪ್ರತಿ ಮನೆಗೂ ಸಾಗಿ ಬೆಳಗುವಾಗ ಪೀಡೆಯನ್ನು ದೂರ ಮಾಡುವ ಆಣೀ ಪೀಣಿ ಹಾಡುಗಳನ್ನು ಹಾಡುತ್ತಾರೆ.
ಅರಸನ ಕೈಯಾಗ , ಬೆಳ್ಳಿಯ ಕುಡಗೋಲ
ಬೆಳ್ಳಿಯ ಕುಡಗೋಲಿಗಿ ಮಾರ ಮಾರ ಹುಲ್ಲ
ಮಾರ ಮಾರ ಹುಲ್ಲಿಗಿ ಗೆಜ್ಜಿ ಕಟ್ಟಿದೆಮ್ಮಿ
ಗೆಜ್ಜಿ ಕಟ್ಟಿದೆಮ್ಮಿಗಿ ಸರ್ ಬುರ್ ಹಾಲು
ಸರ್ ಬುರ್ ಹಾಲಿಗೆ ಕೆನಿ ಕೆನಿ ಮಸರು
ಕೆನಿ ಕೆನಿ ಮಸರಿಗಿ ಗಮ್ ಗಮ್ ತುಪ್ಪ
ಗಮ್ ಗಮ್ ತುಪ್ಪಕ್ಕ ಬಳಕೊ ರೊಕ್ಕ .....
ಪೀಡೆ ಹೋಗಲಾಡಿಸುವುದೇ ಮೂಲ ಆಶಯವನ್ನಾಗಿಟ್ಟುಕೊಂಡ ಈ ಗೀತೆಗಳು ಕೆಲವು ಬಾರಿ ಮನರಂಜನೆಯಿಂದಲೂ ಕೂಡಿರುತ್ತವೆ.ಕನ್ನಡದ ಹೆಸರಾಂತ ಜನಪದ ತಜ್ಞ ಡಾ.ಅರವಿಂದ ಮಾಲU್ಪತ್ತಿ ಅವರ ಪ್ರಕಾರ ‘‘ಆಣೀ ಪೀಣಿ ಗೀತೆಗಳು ಮೂಲದಲ್ಲಿ ಪೀಡೆಯನ್ನು ಹೋಗಲಾಡಿಸುವುದರ ಆಶಯಗಳ ಹಿನ್ನೇಲೆಯಲ್ಲಿ ಹುಟ್ಟಿಕೊಂಡವುಗಳು.ಹೀಗಾಗಿ ಪೀಡೆಯನ್ನು ಹೊರತುಪಡಿಸಿ ಬೆಳೆಯಲು ಸಾಧ್ಯವಾಗಿಲ್ಲ. ಆದರೆ ಸಂಪ್ರದಾಯದಿಂದ ಮನರಂಜನೆಗೆ ತಿರುಗಿಕೊಂಡಿರುವುದು ಕಂಡುಬರುತ್ತದೆ. ಆಕಳು,ಎಮ್ಮೆ,ಆಡು, ಮನೆ ಮುಂತಾÀದವುಗಳ ಕುರಿತು ಬರುವ ಗೀತೆಗಳನ್ನು ಗಮನಿಸಿದರೆ ಪೀಡೆ ತೊಲಗುವಿಕೆಯ ಕುರಿತ ಸ್ಪಷ್ಟ ಲಕ್ಷಣ ಕಾಣುತ್ತಿವೆ.ಎನ್ನುತ್ತಾರೆ.
ಹಂಡಾಕಳಾ ಬಂಡಾಕಳಾ
ಕನಕಪ್ಪನ ಕರಿ ಆಕಳಾ
ಗುಡ್ಡಾವೇರಿ ಬರುವಾಗ ಕಳ್ಳಾರು ಕಂಡಾರೂ
ಕಳ್ಳರ ಕೈಯಾಗ ಬೆಳ್ಳಿಯ ಕುಡಗೋಲು
ಬೆಳ್ಳಿಯ ಕುಡಗೋಲು ಮಾರ ಮಾರ ಹುಲ್ಲು
ಮಾರ ಮಾರ ಹುಲ್ಲಿಗೆ ಬೋರ ಬೋರ ಹಾಲು
ಬೋರ ಬೋರ ಹಾಲಿಗೆ ಕಣ್ಣಿ ಕಣ್ಣಿ ಮೊಸರು
ಕಣ್ಣಿ ಕಣ್ಣಿ ಮಸರಿಗಿ ,ಕಳ ಕಳ ತುಪ್ಪ
ಕಳ ಕಳ ತುಪ್ಪಕ್ಕ ಬಳಾ ಬಳಾ ರೊಕ್ಕ
ಆಣೀ ಪೀಣಿ ಜಾಣೆಗೊ
ನಿಮ್ಮ ಎತ್ತಿ ಪೀಡಾ ಹೊಳೆಯಾಚಕೊ...
    ಹೀಗೆ ಹಾಡುತ್ತಾ ದನ,ಕರು,ಪಕ್ಷಿ,ಮನೆ, ಹೊಲ, ಹುಡುಗ, ದೇವರು ಮುಂತಾದವುಗಳ ಹೆಸರೆತ್ತಿ ದೀಪಬೆಳಗುತ್ತಾರೆ.ಇಲ್ಲಿ ದನಗಳಿಗೆ ಹೆಚ್ಚಿನ ಆದ್ಯತೆ ದೊರೆಯುತ್ತದೆ.ತಂಡವಾಗಿ ಸಾಗುವ ಈ ಆಚರಣೆಯಲ್ಲಿ ಐದಾರು ಯುವಕರಿರುತ್ತಾರೆ.ಅಲ್ಲದೇ ಕೇರಿಗೊಂದರಂತೆ ತಂಡಗಳು ಹುಟ್ಟಿಕೊಳ್ಳುತ್ತವೆ.ಹೊರಬಿದ್ದ ತಂಡಗಳು ದೀಪಗಳು ಒಂದಕ್ಕೊಂದು ಎದುರಾಗಬಾರದೆಂದು,ದೀಪ ಶಾಂತವಾಗಬಾರದೆಂದು ನಂಬಿಕೆ ಇದೆ.ಒಕ್ಕಲು ಮಕ್ಕಳ ಈ ಆಚರಣೆ ಇಂದು ಆಧುನಿಕ ಸಂದರ್ಭದಲ್ಲಿ ಮರೆಯಾಗುತ್ತಿದೆ. ಇಂಥ ಜನಪದರ ಆಚರಣೆಗಳು ನಾಳಿನ ಪೀಳಿಗೆಗೆ ಉಳಿಯಬೇಕಾಗಿದೆ.
-ಡಾ.ಪ್ರಕಾಶ ಗ.ಖಾಡೆ

 ಲೇಖಕರ ವಿಳಾಸ :
ಡಾ.ಪ್ರಕಾಶ ಗ.ಖಾಡೆ,
ಶ್ರೀ ಗುರು ನಿಲಯ, ಸರಸ್ವತಿ ಬಡಾವಣೆ,
ಸೆಕ್ಟರ್ ನಂ.63,ನವನಗರ,
ಬಾಗಲಕೋಟ.
 ಮೊ.9845500890

Thursday, October 9, 2014

ಶ್ರೀ ಎಫ್. ಟಿ ಹಳ್ಳಿಕೇರಿಯವರ ಪುಸ್ತಕ ಬಿಡುಗಡೆ






ಕಂಠ ಪತ್ರ -3 ಪುಸ್ತಕವನ್ನು ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಡಾ.ಬಿ.ಎ.ವಿವೇಕ ರೈ ಅವರು 26-9-2014ರಂದು ಉಡುಪಿ ಜಿಲ್ಲೆ ಶಿರ್ವಾದಲ್ಲಿ ನಡೆದ 28ನೆಯ ಕರ್ನಾಟಕ ಇತಿಹಾಸ ಅಕಾಡೆಮಿಯ ಸಮ್ಮೇಳನದಲ್ಲಿ ಲೋಕಾರ್ಪಣೆ ಮಾಡಿದರು.       













 

Wednesday, October 8, 2014

ಪ್ರೊ.ರಾಮಭಟ್ಟ ನಿಧನಕ್ಕೆ ಇತಿಹಾಸ ಅಕಾಡೆಮಿ ಸಂತಾಪ



                                                              ಪ್ರೊ.ರಾಮಭಟ್ಟ


ಶಿವಮೊಗ್ಗ: ಸ್ವಾತಂತ್ರ್ಯ ಹೋರಾಟಗಾರರೂ, ನಾಡಿನ ಪ್ರಸಿದ್ಧ ಇತಿಹಾಸ ಸಂಶೋಧಕರಲ್ಲೊಬ್ಬರಾಗಿದ್ದ ಪ್ರೊ.ಬಿ.ಎಸ್.ರಾಮ ಭಟ್ಟ ಅವರ ನಿಧನಕ್ಕೆ ಕರ್ನಾಟಕ ಇತಿಹಾಸ ಅಕಾಡೆಮಿಯ ರಾಜ್ಯ ಕಾರ್ಯಕಾರಿ ಮಂಡಳಿಯ ಸದಸ್ಯರಾದ ಕಮಲಾ ನೆಹರು ಮಹಿಳಾ ಕಾಲೇಜಿನ ಡಾ.ಬಾಲಕೃಷ್ಣ ಹೆಗಡೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
 ಅಕಾಡೆಮಿಯ ಆಜೀವ ಸದಸ್ಯರಾಗಿದ್ದ ದಿವಂಗತರು ಬಾಳೆಹೊನ್ನೂರಿನ ಶ್ರೀಮದ್ ರಂಭಾಪುರಿ ಮಹಾಸಂಸ್ಥಾನವು ನೀಡುವ “ಸಾಹಿತ್ತಯ ನಿಧಿ” ಪುರಸ್ಕಾರಕ್ಕೂ ಭಾಜನರಾಗಿದ್ದರು. ಇತಿಹಾಸಕ್ಕೆ ಸಂಬಂಧಿಸಿದ ಅನೇಕ ಲೇಖನಗಳು, ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿರುವ ಅವರು ಶಿವಮೊಗ್ಗ ಇತಿಹಾಸ, ಸಂಸ್ಕøತಿ, ಪರಂಪರೆಗೆ ಸಂಬಂಧಿಸಿದ ‘ಸೀಮೊಗೆ’, ‘ಸೀಮೊಗೆಯ ಸಿರಿ’, ‘ಶಿವಶ್ರೀ’ ಮೊದಲಾದ ಕೃತಿಗಳನ್ನು ರಚಿಸಿ ಇತಿಹಾಸಾಸಕ್ತರ ಮೆಚ್ಚುಗೆಗೆ ಪಾತ್ರರಾಗಿದ್ದರು ಎಂದು ಭಟ್ಟರ ಕಾರ್ಯವನ್ನು ಸ್ಮರಿಸಿದ್ದಾರೆ.
ಶಿವಮೊಗ್ಗ ನಗರ, ಬಿದನೂರು, ನಗರ, ತೀರ್ಥಹಳ್ಳಿಯ ಅರಗ, ಹೀಗೆ ಹತ್ತು ಹಲವಾರು ಐತಿಹಾಸಕ ಸ್ಥಳಗಳ ಕುರಿತು ಇವರು ನಡೆಸಿದ ಅಧ್ಯಯನ, ಸಂಶೋಧನೆ ಸ್ಥಳೀಯ ಇತಿಹಾಸ ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ ಕೈಪಿಡಿಯಾಗಿದೆ. ಇವರ ಅಗಲಿಕೆಯಿಂದ ಇತಿಹಾಸ ಕ್ಷೇತ್ರಕ್ಕೆ, ಉದಯೋನ್ಮುಖ ಇತಿಹಾಸ ಸಂಶೋಧಕರಿಗೆ ತುಂಬಲಾರದ ಹಾನಿಯಾಗಿದೆ ಎಂದು ಅವರು ಕಂಬನಿ ಮಿಡಿದಿದ್ದಾರೆ.
ಇವರನ್ನು ಕಳೆದುಕೊಂಡ ಕುಟುಂಬ ವರ್ಗಕ್ಕೆ, ಅಭಿಮಾನಿ ಬಳಗಕ್ಕೆ ದು:ಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಡಾ.ಹೆಗಡೆ ಪ್ರಾರ್ಥಿಸಿದ್ದಾರೆ.