Tuesday, October 23, 2012

ಶುಭಾಶಯಗಳು

                                                               



                                         ಎಲ್ಲರಿಗೂ ದಸರಾಹಬ್ಬದ ಶುಭಾಶಯಗಳು

     
                                          ಬನ್ನಿ  ತೆಗೆದುಕೊಂಡು ಬಂಗಾರದ ಹಾಗಿರಿ

ಹಬ್ಬದ ವಿಶೇಷಕ್ಕೆ ನಮ್ಮ ಮೇಲು ಕೋಟೆಯೊಂದಿಗೆ ಸಂಬಂಧವಿರುವ ಶ್ರೀ ಪೆರಂಬೂದೂರಿನಬಗೆಗಿನ ಲೇಖನ ಓದಲು ಕೆಳಗಿನ ಕೊಂಡಿಯನ್ನು ಕ್ಲಿಕ್‌ಮಾಡಿ-

                                             http://appaaji.blogspot.in/

Thursday, October 18, 2012

ಐತಿಹ್ಯ ಮತ್ತು ಇತಿಹಾಸ




ಇತ್ತೀಚೆಗೆ ಶೃಂಗೇರಿಯಲ್ಲಿ ನಡೆದ ಕರ್ನಾಟಕ ಇತಿಹಾಸ ಸಮ್ಮೇಳನದಲ್ಲಿ ಐತಿಹ್ಯದ ವಿಷಯ ವ್ಯಾಪಕ ಚರ್ಚೆಗೆ ಒಳಗಾಯಿತು.ಒಬ್ಬ ಪ್ರತಿನಿಧಿ “ ಶಾಸನ ಆಧಾರಿತ ಐತಿಹ್ಯಗಳು “  ಎಂಬ ಸಂಪ್ರಬಂಧ ಮಂಡಿಸಿದರು. ಆಗ ಗಂಭೀರ ಚರ್ಚೆಯಾಗಿ ಪ್ರಬಂಧದ ಶೀರ್ಷಿಕೆಯನ್ನೆ ಬದಲಾಯಿಸಲು ಸಲಹೆ ಮಾಡಲಾಯಿತು. ಕಾರಣ ಐತಿಹ್ಯವನ್ನು ಇತಿಹಾಸಕ್ಕೆ ಏಕ ಮೇವ ಆಧಾರವಾಗಿ ಪರಿಗಣಿಸುವ ಹಾಗಿಲ್ಲ. ಅದು ಇತಿಹಾಸವಲ್ಲ. ಅದುಬರಿ ಬಾಯಿ ಮಾತಿನಿಂದ ಪ್ರಚಲಿತವಾದ ವಿಚಾರ..ಅದಕ್ಕೆ ಖಚಿತವಾದ ಶಾಸನ, ಲಿಖಿತ ಹಾಗೂ ನಾಣ್ಯದ ಆಧಾರವಿದ್ದರೆ ಅದನ್ನು ಐತಿಹ್ಯ ಎನ್ನಲಾಗದು ಎಂದು ಇತಿಹಾಸ ತಜ್ಞರು ಅಭಿಪ್ರಾಯ ವ್ಯಕ್ತ ಪಡಿಸಿದರು. ಇತಿಹಾಸದಲ್ಲಿ ಐತಿಹ್ಯ ಇರಬಹುದು ಆದರೆ ಐತಿಹ್ಯವು ಇತಿಹಾಸವಲ್ಲ .ಐತಿಹ್ಯವು ಸತ್ಯವಾಗಿರಬಹುದು ಇಲ್ಲವೆ ಕಪೋಲ ಕಲ್ಪಿತವಾಗಿ ಒಬ್ಬರಿಂದ ಒಬ್ಬರಿಗೆ ಹರಡುವಾಗ ಉತ್ಪ್ರೇಕ್ಷೆಗಳಿಂದ ಕೂಡಿದ ಮಾಹಿತಿಯಾಗಬಹುದು. ಬಹುತೇಕವಕ್ಕೆ ಪೌರಾಣಿಕ ಇಲ್ಲವೆ ಜಾನಪದ ಹಿನ್ನೆಲೆ ಇರುತ್ತವೆ
 ಬಹಳಷ್ಟು ಸ್ಥಳ ಪುರಾಣಗಳು ಇವೆ ಮಾದರಿಯವು. ಅದೆನೋ ನಮ್ಮಲ್ಲಿ ಒಂದು ವಾಡಿಕೆ ಬಂದಿದೆ. ಯಾವುದೆ ಪ್ರಸಿದ್ಧ ಸ್ಥಳವಾದರೂ ರಾಮಾಯಣ ಅಥವ ಮಹಾಭಾರತಕ್ಕೆ ಒಂದಿಲ್ಲೊಂದು ರೀತಿಯ ಸಂಪರ್ಕವಿದೆ ಎಂದು ಐತಿಹ್ಯವಿರುವುದು.  


ಶೃಂಗೇರಿ  ಪಟ್ಟಣದ ಮಧ್ಯದಲ್ಲಿರುವ ಮಲ್ಲಿಕಾರ್ಜುನ ಬೆಟ್ಟಕ್ಕೆ ಭೇಟಿ ನೀಡಿದೆ. ಅದು ಅಂಥಹ ದೊಡ್ಡ ಬೆಟ್ಟವೇನೂ ಅಲ್ಲ. ಬರಿ ನೂರಕ್ಕೂ ತುಸು ಹೆಚ್ಚಿನ ಸಂಖ್ಯೆಯ ಮೆಟ್ಟಿಲುಗಳು . ಬೆಟ್ಟದ ಮೇಲೆ ಸುಂದರ ಈಶ್ವರ ದೇವಾಲಯ.  ಪೂಜೆ ನಡೆಯುತ್ತಿರುವಾಗ ಒಬ್ಬ  ವಯೋ ವೃದ್ಧರು ದೇವರ ಮುಂದೆ ನಿಂತು,  “ಸ್ವಾಮಿ ನಿನ್ನೆ ಕಿಗ್ಗಕ್ಕೆ ಹೋಗಿ ಬಂದೆ ಅಲ್ಲಿ ನಿನ್ನ ಮಗ ಸೊಸೆ  ಕ್ಷೇಮವಾಗಿದ್ದಾರೆ” ಎನ್ನುತ್ತಾ ಕೈ ಮುಗಿದು ನಮಸ್ಕಾರ ಹಾಕಿದ್ದು ನನಗೆ ಕುತೂಹಲ ಮೂಡಿಸಿತು. ಅವರು ದೇವಸ್ಥಾನದ ಹೊರಗೆ ಬರುವವರೆಗೆ ಕಾದು ನಂತರ ಮಾತನಾಡಿಸಿದೆ.
ಸ್ವಾಮಿ  ಅದೇನು ಮಗ, ಸೊಸೆ ಚೆನ್ನಾಗಿದ್ದಾರೆ . ಎಂದು ದೇವರಲ್ಲಿ ನಿವೇದನೆ ಮಾಡಿದಿರಲ್ಲ? ಯಾರ ಮಗ ?  ಯಾರ   ಸೊಸೆ. ಅದಕ್ಕೂ ಕಿಗ್ಗಕ್ಕೂ ಏನು ಸಂಬಂಧ ದಯಮಾಡಿ ತಿಳಿಸುವಿರಾ? ಎಂದು ವಿನಂತಿ ಮಾಡಿಕೊಂಡೆ.
ಅವರು ನೀವು ಈ ಭಾಗದವರಲ್ಲವೋ?  ಎಂದು ಪ್ರಶ್ನಿಸಿದರು. ಅಲ್ಲ , ಎಂದೆ.  ಯಾವ ಊರು?  ಎಂಧಾಗ ನಾನು ಹಂಪೆಯ ಹತ್ತಿರದವನು ಎಂದೆ.
 ಅದಕ್ಕೆ ನಿಮಗೆ ಇಲ್ಲಿನ ಸ್ಥಳದ ಮಹತ್ವ ಗೊತ್ತಿಲ್ಲ. ಇದು ಇಲ್ಲಿನ  ಐತಿಹ್ಯ. ಈ ಬೆಟ್ಟ  ವಿಭಾಂಡಕ ಮುನಿಯ ವಾಸ ಸ್ಥಳವಾಗಿತ್ತು. ಅವರು ನಿತ್ಯ ಬೆಟ್ಟದಿಂದ ಇಳಿದು ತುಂಗೆಯಲ್ಲಿ ಸ್ನಾನ ಮಾಡಿ ಮತ್ತೆ ಇಲ್ಲಿ ಬಂದು ತಪಸ್ಸು ಮಾಡುತಿದ್ದರು. ಒಂದು ದಿನ ಅವರ ರೇತಸ್ಸು ನೀರಿನಲ್ಲಿ ವಿಸರ್ಜನೆಯಾದಾಗ  ಅಲ್ಲೊಂದು ಹೆಣ್ಣು ಜಿಂಕೆ ನೀರಿನ ಜೊತೆ ಅದನ್ನು ಕುಡಿಯಿತು. ಅದರ ಫಲವಾಗಿ ಅದು ಒಂದು ಗಂಡು ಮಗುವಿಗೆ ಜನ್ಮ ನೀಡಿತು. ಆ ಮಗುವಿನ ತಲೆಯಲ್ಲೆ ಒಂದು ಪುಟ್ಟ ಕೋಡಿತ್ತು. ಅದರಿಂದ ಅವನನ್ನು ಋಷ್ಯ ಶೃಂಗ ಎಂದು ಕರೆದರು. ಅವನು ಮಹಾಮುಗ್ದ. ಸದಾ ಜಪ,ತಪದಲ್ಲಿ ಮಗ್ನನಾದ ಜ್ಞಾನಿ . ಲೋಕಾಚಾರವನ್ನೆ ಅರಿಯದೆ ತನ್ನ ಪಾಡಿಗೆ ತಾನು ತಪಸ್ಸು ಮಾಡಿಕೊಂಡು ಇಲ್ಲಿಗೆ ಇಪ್ಪತೆಂಟು ಮೈಲುದೂರದ ಕಿಗ್ಗದಲ್ಲಿ  ನೆಮ್ಮದಿಯಿಂದ ಇದ್ದ. ಆ ಸಮಯದಲ್ಲಿ ರೋಮಪಾದನೆಂಬ ಅರಸನ ರಾಜ್ಯದಲ್ಲಿ ಭೀಕರ ಬರ ಕಾಣಿಸಿ ಕೊಂಡಿತು. ಮಳೆಯೆ ಇಲ್ಲದಾಯಿತು. ಏನು ಮಾಡ ಬೇಕೆಂದು ತೋಚದೆ ಪ್ರಾಜ್ಞರನ್ನು  ವಿಚಾರಿಸಿದಾಗ  ಋಷ್ಯ ಶೃಂಗ ಮುನಿ  ಆ ನಾಡಿನಲ್ಲಿ ಕಾಲಿಟ್ಟರೆ ಮಳೆ ಬರುವುದೆಂದು ನುಡಿದರು. ಅದಕ್ಕೆ ಅವನು ರಾಜಕುಮಾರಿಯಾದ ತನ್ನ ಮಗಳನ್ನೆ ಅವರನ್ನು ಕರೆತರಲು ನೇಮಿಸಿದ. ಅವಳು ಅವರನ್ನೆ ಮದುವೆಯೂ ಆದಳು. ಅವರಿಬ್ಬರೂ ಕಿಗ್ಗದ ಪ್ರದೇಶದಲ್ಲಿ ಸಂಸಾರ ನಡೆಸಿದರು. ಅದಕ್ಕೆ ಅಲ್ಲಿರುವ ಲಿಂಗದ ಮೇಲೆ ಶೃಂಗವಿದೆ. ಇಲ್ಲಿಯೇ ವಿಂಭಾಂಡಕ ಮುನಿ ಐಕ್ಯವಾದರು. ಅವರೆ ಪೂಜಿಸಿದ ಲಿಂಗವೆ ಮಲಪರಿಹಾರಕ ಕೇಶ್ವರ ಎಂದು ಪ್ರಸಿದ್ಧಿ ಪಡೆದಿದೆ. ಆದ್ದರಿಂದ ಮೊದಲು ಕಿಗ್ಗಕ್ಕೆ ಹೋಗಿ ದರ್ಶನ ಪಡೆದು ನಂತರ ಇಲ್ಲಿ ಬಂದು ಅವರ ಕುಶಲ ಸಮಾಚಾರ ಅರುಹಿದರೆ, ಸಂಪ್ರೀತನಾಗಿ ಕೇಳಿದ ವರ ನೀಡುವರೆಂಬ ಪ್ರತೀತಿ  ಇದೆ. ಎಂದು ವಿವರಿಸಿದರು ಮಾನವ ಸಂಬಂಧಗಳು ಹೇಗೆ ಪೌರಾಣಿಕ ಐತಿಹ್ಯವಾದ ಬಗೆ ನನಗೆ ಎಂದು ಅಚ್ಚರಿಯಾಯಿತು.. ಅವರ ಹೇಳಿದ ಕಥೆ ನನಗೆ ಚಿಂತನೆಗೆ ಆಹಾರವಾಯಿತು.

ನಮ್ಮ ಪುರಾಣ ಇತಿಹಾಸಗಳೆಲ್ಲ ವಿಭಿನ್ನ ಸಂತಾನ ಪ್ರಾಪ್ತಿಯ ವಿಧಾನ ಕುರಿತಾದ ವಿವರಗಳಿಂದ ಕೂಡಿವೆ. ರಾಮಾಯಣದಲ್ಲಿ ರಾಮ,ಲಕ್ಷ್ಮಣ, ಭರತ ಮತ್ತು ಶತೃಜ್ಞರು ಯಾಗದ ಫಲವಾಗಿ ದೊರೆತ ಪ್ರಸಾದ ಸೇವನೆಯಿಂದ ಜನಿಸಿದರು, ಕರ್ಣ ಕುಂತಿದೇವಿಗೆ ಕಿವಿಯಿಂದ ಸೂರ್ಯನ ವರಪ್ರಸಾದದಿಂದ ಜನಿಸಿದವ,. ಪಾಂಡವರು ಐವರು ದೇವರ ವರ ಸಂಜಾತರು, ಕೌರವರು ಪಾತವಾದ  ಭ್ರೂಣವನ್ನು ತುಪ್ಪ ತುಂಬಿದ ಕೊಡದಲ್ಲಿ ಅವಧಿ ಪೂರ್ಣವಾಗುವವರೆಗೆ ಇರಿಸಿದ  ನಂತರ ಜನನವಾದವರು, ದ್ರೋಣರು ಕುಂಭ ಸಂಭವರು, ದ್ರೌಪತಿ ಅಗ್ನಿಸಂಜಾತೆ.ಹೀಗೆ ಹುಡುಕುತ್ತಾ ಹೋದರೆ  ನೈಸರ್ಗಿಕವಲ್ಲದ ಹುಟ್ಟಿನ ವಿವರ ಸಾಕಷ್ಟು ಸಿಗುತ್ತದೆ. ಇದೆಲ್ಲ ಅನೇಕ ಜಿಜ್ಞಾಸೆಗೆ ಕಾರಣವಾಗಿದೆ. ಇದು ಬರಿ ಸಾಂಕೇತಿಕವಾಗಿದೆಯೋ  ಅಥವ ಒಂದು ರೀತಿಯಲ್ಲಿ ಇಂದಿನ ಪ್ರನಾಳ ಶಿಶು, ಕ್ಲೌನಿಂಗ್‌ ಮತ್ತು ಇತ್ತೀಚೆಗೆ  ಲಂಡನ್ನನಲ್ಲಿ ಭಾರತೀಯ ಸಂಜಾತೆ ವೈದ್ಯೆಯೊಬ್ಬಳು ವೀರ್ಯದ ಸಹಾಯವಿಲ್ಲದೆ ಮಗುವಿನ ಜನನಸಾಧ್ಯತೆ ಇದೆ, ಎಂದು ಸಿದ್ಧ ಮಾಡಿರುವುದು  ಈ ಮೊದಲೆ ಇದ್ದ ಜ್ಞಾನದ ಮುಂದುವರಿಕೆಯಾಗಿ ಇರಬಹುದೆ? ಎಂಬಅನುಮಾನ ಹುಟ್ಟಿಸುತ್ತದೆ.
ಇನ್ನು ಸ್ಥಳ ಪುರಾಣಗಳನ್ನು ಗಮನಿಸಿದರೆ ಅವೂ ಕುತೂಹಲ ಹುಟ್ಟಿಸುತ್ತವೆ. ಶೃಂಗೇರಿಯಲ್ಲಿ ಶಂಕರರು ಶಾರದಾಪೀಠ ಸ್ಥಾಪನೆ ಮಾಡಲು ಇರುವ ಐತಿಹ್ಯ ಆಸಕ್ತಿದಾಯಕವಾಗಿದೆ. ಅವರು ಉತ್ತರ ಭಾರತದಿಂದ ಬಂದು ತುಂಗೆಯ ತಟದಲ್ಲಿ ತಪಸ್ಸು ಮಾಡುತಿದ್ದಾಗ ನದಿಯ ದಡದಲ್ಲಿ ತುಂಬುಗರ್ಭಿಣಿಯಾದ ಕಪ್ಪೆಗೆ ಹಾವು ಹೆಡೆಬಿಚ್ಚಿ ಬೆರಳು ನೀಡುವುದನ್ನು ನೋಡಿದರಂತೆ. ಅದರ ಶಿಲ್ಪವೂ ಅಲ್ಲಿ ಇದೆ. ಇಲ್ಲಿ ಆಜನ್ಮ ಶತೃವಿಗೂ ಕಷ್ಟಕಾಲದಲ್ಲಿ  ರಕ್ಷಣೆ  ನೀಡುವ ಗುಣಕ್ಕೆ  ಕಾರಣ ಈ ಸ್ಥಳದ ಮಹಿಮೆ ಅದಕ್ಕೆ ಶಂಕರಾಚಾರ್ಯರು ಇಲ್ಲಿಯೆ ಮಠ ಸ್ಥಾಪಿಸಿದರು ಎಂಬ ಕಥೆ ಇದೆ.. ಇದು ಪೌರಾಣಿಕ ಐತಿಹ್ಯ. ಬಾಯಿಂದ ಬಾಯಿಗೆ ಹರಿದು ಈಗ ನಂಬಿಕೆಯ ರೂಪ ಪಡೆದಿದೆ.
 ಇದೆರೀತಿಯಲ್ಲಿ ನಮ್ಮ ಹಂಪೆಯಹತ್ತಿರ ಹಕ್ಕ ಬುಕ್ಕರು ಬೇಟೆಗೆ ಹೋದಾಗ  ಬೇಟೆ ನಾಯಿಗಳಿಗೆ ಅಂಜಿ ಓಡುತಿದ್ದ ಮೊಲವೊಂದು ತುಸು ದೂರ ಹೋದ ನಂತರ ತಿರುಗಿನಿಂತು ನಾಯಿಗಳನ್ನು ಎದುರಿಸಿ ಕಾದಾಡಲು ಮೊದಲು ಮಾಡಿತಂತೆ. ಈ ಅಚ್ಚರಿಯನ್ನು ಕಂಡ ಅವರು ಹಕ್ಕ ಬುಕ್ಕರು ತಮ್ಮ ಗುರುಗಳಾದ ವಿದ್ಯಾರಣ್ಯರಿಗೆ ತಿಳಿಸಿದರು. . ಈ ವಿಚಿತ್ರಕ್ಕೆ  ಕಾರಣ ಅದು ಭೂಮಿಯ ಗುಣ ಇದು ವೀರಭೂಮಿ.  ಇಲ್ಲಿನ ಅತಿಮೃದು ಸ್ವಭಾವದವರೂ ಸಮಯ ಬಂದರೆ ದೃಢತೆಯಿಂದ ಕಾದಾಡಬಲ್ಲರು . ಇದೆ ವಿಜಯ ನಗರ ಸಾಮ್ರಾಜ್ಯ  ಸ್ಥಾಪನೆಗೆ ಸೂಕ್ತ ಸ್ಥಳ ಎಂದು ಅಲ್ಲಿಯೆ ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಮಾಡಿಸಿದರು  ಎಂಬ ಐತಿಹ್ಯವೂ ಪ್ರಚಲಿತವಿದೆ.
 ಹಂಪೆಯ ಚಕ್ರ ತೀರ್ಥದ ಹತ್ತಿರ ಒಂದುಗುಹೆ ಇದೆ. ಅದರಿಂದ ಸುಮಾರು ದೂರದ ವರೆಗ ಕಲ್ಲಿನ ಮೇಲೆ ಸೆರಗಿನೋಪಾದಿಯ ಗುರುತು ಕಾಣುತ್ತದೆ. ರಾವಣನು ಸೀತೆಯನ್ನು ಅಪಹರಿಸಿದಾಗ ಅವಳ ಸೆರಗಿನಿಂದ ಮೂಡಿದ ಗುರುತು ಅದು.  ಅದಕ್ಕೆ ಅದನ್ನು ಸೀತೆಯ ಸೆರಗು ಎನ್ನುವರು. ಮಾಲ್ಯವಂತ ಬೆಟ್ಟದ ಮೇಲೆ  ಎರಡು ದೊಣೆಗಳಿವ. ಅದರಲ್ಲಿನೀರು ಬತ್ತುವುದೆ ಇಲ್ಲ. ಅವು ರಾಮಲಕ್ಷ್ಮಣರು ತಮ್ಮ ತಂದೆಯ ಶ್ರಾಧ್ಧದ ಸಲುವಾಗಿ ನೀರು ಬೇಕಾದಾಗ ಬಾಣ ಬಿಟ್ಟು ಕಲ್ಲಿನಲ್ಲಿ ನೀರು ಬರುವಂತೆ ಮಾಡಿದರು ಎನ್ನುವುದು ಒಂದು ಐತಿಹ್ಯ.
         ಅದೆ ರೀತಿ ವನವಾಸದ ಸಮಯದಲ್ಲಿ  ರಾಮಲಕ್ಮಣ ಸೀತೆಯರು ಹೋಗುತಿದ್ದಾಗ  ರಾಮನು ತಮ್ಮ ಲಕ್ಮಣನಿಗೆ , ತಮ್ಮಾ ಲಕ್ಷ್ಮಣಾ , ಬಾಯಾರಿಕೆಯಾಗಿದೆ,  ನೀರು ತಾ, ಎಂದರೆ ವಿನಯ ಮೂರ್ತಿಯಾದ ಲಕ್ಷ್ಮಣನು , ಬೇಕಾದರೆ ನೀನೆ ಹೋಗಿ ಕುಡಿ ಎಂದು ಬಿಮ್ಮನೆ ಕುಳಿತಿದ್ದನು. ಅಣ್ಣನ  ಮೇಲಿನ ಪ್ರೀತಿ ,ಗೌರವದಿಂದ ಮಡದಿಯನ್ನು ತೊರೆದು ಕಾಡಿಗೆ ನೆರಳಿನಂತೆ ಹಿಂಬಾಲಿಸಿರುವ ಲಕ್ಷ್ಮಣನ ಈ ನಡೆ ರಾಮನಿಗೂ ಅರೆ ಕ್ಷಣ ಅಚ್ಚರಿ ಮೂಡಿಸಿತು. ಮರು ಮಾತನಾಡದೆ ಅಲ್ಲಿಂದ ತುಸು ದೂರ ಹೋದರು. ನಂತರ ಲಕ್ಷ್ನಣನು ಅಣ್ಣಾ !, ನಿನಗೆ ಆಯಾಸವಾದಂತಿದೆ. ತುಸು ವಿಶ್ರಮಿಸು, ನೀರು ತರುವೆ, ಎಂದು ವಿನಯದಿಂದ ಹೇಳಿದಾಗ. ರಾಮನು ಮುಗಳ್ನಕ್ಕನಂತೆ. ಅವನಿಗೆ ಆಗಲೆ ತಿಳಿದಿತ್ತು ತಮ್ಮನ ಪೆಡಸಿನ ಮಾತಿಗೆ ಕಾರಣ ಆ  ಸ್ಳಳದ ಪ್ರಭಾವ ಎಂದು.ಇದು ಪೌರಾಣಿಕ ಐತಿಹ್ಯ.
 ಈ  ಎಲ್ಲ ನನಗೆ ಚಿಂತನೆಗೆ ಹಚ್ಚಿತು. ಶೃಂಗೇರಿಯಿದ್ದ ಸ್ಥಳದಲ್ಲಿ ಮಾನವ ಮತ್ತು ಪಶುಪಕ್ಷಿಗಳು ಸಾಮರಸ್ಯದಿಂದ ಬಾಳುತಿದ್ದವು.  ಮಾನವ ಶಿಶುವನ್ನು ಒಂದು ಜಿಂಕೆಯ  ತಾಯಿಯೋಪಾದಿಯಲ್ಲಿ ನೋಡಿಕೊಂಡಿರುವುದೆ ಈ ಋಷ್ಯಶೃಂಗರ  ಕಥೆಯ ಉಗಮಕ್ಕೆ ಕಾರಣವಾಗಿರಬಹುದೆ? ಎನಿಸಿತು..
ಇನ್ನುಹಾವುಕಪ್ಪೆಯ ರಕ್ಷಣೆಗೆ ಧಾವಿಸಿರುವುದು ಸಹಾ ನೆಲ ಮತ್ತು ನೀರಿನ ಗುಣವೆ ಆಗಿರಬಹುದು.. ಆದು ಈಗಲೂ ಅಲ್ಲಿನ ಜನರ ಸುಸಂಸ್ಕೃತ ನಡವಳಿಕೆ ಕಂಡಾಗ  ಅದು ಸಹಜವೇನೋ ಅನಿಸಿದೆ.
ಈ ರೀತಿಯ ಐತಿಹ್ಯಗಳು ಎಲ್ಲ ಪುಣ್ಯಕ್ಷೇತ್ರಗಳಲ್ಲೂ ಕೇಳಿ ಬರುತ್ತವೆ. ತಿರುಪತಿಯಲ್ಲಿ ಮೊದಲು ವರಾಹ ಸ್ವಾಮಿದರ್ಶನ ಮಾಡಿದರೆ ಮಾತ್ರ ಫಲ ಪ್ರಾಪ್ತಿ , ಎನ್ನುವ ನಂಬಿಕೆ, ಧರ್ಮಸ್ಥಳದಲ್ಲಿ ಅಪ್ಪಣ್ಣನನ ದರ್ಶನ. ಮಂತ್ರಾಲಯದಲ್ಲಿ ಮಂಚಾಲಮ್ಮನ ದರ್ಶನ ಮಾಡಿಕೊಳ್ಳದಿದ್ದರೆ ಫಲ ಪ್ರಾಪ್ತಿಯಾಗದು ಎನ್ನುವ ಸಂಪ್ರದಾಯ ಆಸ್ಥಳದ  ಮೂಲನಿವಾಸಿಗಳಿಗೂ ಆದ್ಯತೆ ನೀಡ ಬೇಕು ಎನ್ನುವ ಆಶಯದ ಪ್ರತೀಕ ಇರಬಹುದೆ ಎನಿಸಿತು.
ಹಂಪೆಯಲ್ಲಿ ವಿರೂಫಕ್ಷೇಶ್ವರನ ದರ್ಶನ ಮಾಡಿದ ಮೇಲೆ ಚಂಡಿಕೇಶ್ವರನಿಗೆ ಚಪಾಳೆ ಹೊಡೆದು ಕೈ ಮುಗಿದು, ಬಟ್ಟೆಯದಾರದ ತುಂಡನ್ನು ಕಿತ್ತಿ ಏರಿಸುವುದ ಸಹಾ ಇದೇ ರೀತಿಯ ಆಚರಣೆ ಗಮನಿಸಿದ್ದೆ. ಬಹುತೇಕ ಪ್ರಸಿದ್ಧ ಶಿವಾಲಯಗಳ ಆಸು ಪಾಸಿನಲ್ಲಿ ಚಂಡಿಕೇಶ್ವರನ ಚಿಕ್ಕ ಗುಡಿ ಇದ್ದೆ ಇರುವುದು ಗಮನಕ್ಕೆ ಬಂದಿತು. ಶಿವನು ಲಿಂಗಾಕಾರ ದಲ್ಲಿರುವುದರಿಂದ ಮತ್ತು  ಧ್ಯಾನ ಮಗ್ನ ನಾಗಿರುವುದರಿಂದ ಭಕ್ತರು ಬಂದಿರುವುದನ್ನು ಗಮನಿಸಿರುವುದಿಲ್ಲ ಅದಕ್ಕೆ ಚಂಡಿಕೇಶ್ವರನ ಹತ್ತಿರ ವರದಿ ಮಾಡಿಕೊಂಡರೆ ಅವನು ತಿಳಿಸುವನು ಎಂಬ ಐತಿಹ್ಯ..
ಸೊಂಡೂರಿನ ಕುಮಾರಸ್ವಾಮಿಯ ಕುರಿತಾದ ಐತಿಹ್ಯವಿದೆ ಒಂದಿದೆ.ಕುಮಾರಸ್ವಾಮಿಯದರ್ಶನಕ್ಕೆ ಇತ್ತೀಚಿನ ಮಹಿಳೆಯರಿಗೆ ಅವಕಾಶವೆ ಇರಲಿಲ್ಲ.ಅದಕ್ಕೆ ಕಾರಣ ಪಾರ್ವತಿಯ ಮಗನಿಗೆ ಮದುವೆ ಮಾಡಲು  ಕನ್ಯಾಕುಮಾರಿಯನ್ನು ಆಯ್ಕೆ ಮಾಡಿ ಬಂದು ಮಗನಿಗೆ ಅವಳ ಸೌಂದರ್ಯವನ್ನು ಅತಿಶಯವಾಗಿ ವರ್ಣಿಸಿದಳು.. ಕುಮಾರನು ಕುತೂಹಲದಿಂದ ಅವಳು ಯಾರ ಹಾಗಿದ್ದಾಳೆ ? ಎಂದು ಕೇಳಿದ. ಅದಕ್ಕೆ ಉತ್ಸಾಹದ ಭರದಲ್ಲಿ ತಾಯಿ ಅವಳು  ಖೂಬೆ ಖೂಬು ನನ್ನ ಹಾಗೆ ಇದ್ದಾಳೆ. ಅತಿಲಾವಣ್ಯ ವತಿ ಎಂದು ತುಸು ಗರ್ವದಿಂದಲೆ ಹೇಳಿದಳು. ಅದಕ್ಕೆ ಕಾರ್ತಿಕೇಯನು ಆ ಹುಡುಗಿ ನಿನ್ನ ಹಾಗಿದ್ದರೆ ತಾಯಿಯ ಸಮಾನ , ಮದುವೆ ಯಾಗಲಾರೆ ಎಂದು ನಿರಾಕರಿಸಿದ.ಕುಪಿತಳಾದ ಪಾರ್ವತಿ ಎಲ್ಲ ಹೆಣ್ಣುಗಳಲ್ಲೂ ನನ್ನ ಅಂಶ ಇದ್ದೆ ಇರುವುದು ಎಂದಾಗ ನಾನು ಮದುವೆಯನ್ನೆ ಆಗುವುದಿಲ್ಲ ಎಂದು ನಿರ್ಧಾರ ಮಾಡಿದ. ಅಷ್ಟೆ ಅಲ್ಲ ಹೆಣ್ಣಿನ ದರ್ಶನವೆ ಬೇಡ ಎಂದು ನಿರ್ಧರಿಸಿದ. ಅದಕ್ಕೆ ಮಹಿಳೆಯರಿಗೆ ಕುಮಾರ ಸ್ವಾಮಿಯ ದರ್ಶನ ನಿಷೇಧವಿತ್ತು ಜೊತೆಗೆ ಹೆಂಗಸರು ನೋಡಿದರೆ ರಕ್ತ ಕಾರಿ ಸಾಯುವರು ಎಂಬ ನಂಬಿಕೆಯನ್ನೂ ಹಬ್ಬಿಸಿದರು. ಪರಿಣಾಮವಾಗಿ ಶತಮಾನಗಳವರೆಗೆ ಅದನ್ನು ಪಾಲಿಸಲಾಯಿತು. ಆದರೆ ಕೆಲವೆ ವರ್ಷಗಳ ಹಿಂದೆ ವಿಚಾರವಂತ ಮಹಿಳೆಯರು ಚಳುವಳಿ ಮಾಡಿ ದೇವರ ದರ್ಶನ ಪಡೆದರು.ನಂಬಿಕೆ ಬರಿ ಮಿಥ್ಯ ಎಂದು ಸಿದ್ಧ ಮಾಡಿದರು. ಇಂದಿಗೂ ಆ ಮಹಿಳೆಯರು ಆರಾಮಾಗಿ ಇದ್ದಾರೆ. ಅವರ ಪ್ರಯತ್ನದ ಫಲವಾಗಿ ಈಗ ಎಲ್ಲ ಮಹಿಳೆಯರಿಗೂ ದರ್ಶನದ ಅವಕಾಶ ಲಭಿಸಿದೆ.
ಸೊಂಡೂರಿನ ಹೆಸರಾಂತ ಭಸ್ಮದ ಬಗೆಗೂ ಒಂದು ಐತಿಹ್ಯವಿದೆ. ಅದರ ಪ್ರಕಾರ ಅಲ್ಲಿ ದೊರೆವ ಭಸ್ಮ ಪರ್ವತಿಯ ಹಾಲು.  ಕುಮಾರಸ್ವಾಮಿ ಮದುವೆಯಾಗಲು ನಿರಾಕರಿಸಿದಾಗ, ಪಾರ್ವತಿಯು ಮಗನಾಗಿ ತಾಯಿಯ ಮಾತು ಮೀರುವೆಯಾದರೆ ನಾನು ಹಾಲುಕುಡಿಸಿ ನಿನ್ನನ್ನು ಬೆಳಸಿದ್ದು ವ್ಯರ್ಥವಾಯಿತು ಎಂದು ಹಲುಬಿದಳು. ಮನನೊಂದ ಕುಮಾರಸ್ವಾಮಿ ,ನನಗೆ ಹಾಲಿನ ಹಂಗೂ ಬೇಡ ಎಂದು ಕುಡಿದ ಹಾಲನ್ನೆಲ್ಲ ಕಕ್ಕಿ ಕೊಂಡ. ಅದೆ ಹಳ್ಳವಾಗಿ ಹರಿದು ಭಸ್ಮದ ಗುಡ್ಡ ವಾಯಿತು. ಕೊನೆಕೊನೆಗೆ ಹಾಲಿನ ಜೊತೆ ರಕ್ತ ಬರಲುಶುರುವಾದಾಗ ತಾಯಿ ಅವನನ್ನು ಕಾಡಿ ಬೇಡಿ ವಾಂತಿ ಮಾಡಿಕೊಳ್ಳದಂತೆ ತಡೆದಳಂತೆ. ಅದಕ್ಕೆ ಕೆಲಭಾಗದಲ್ಲಿ ಭಸ್ಮದ ಜೊತೆ ಕೆಂಪುಗೆರೆಗಳೂ ಕಾಣುತ್ತವೆ. ಸಂಡೂರಿನ ನಿರ್ಧಿಷ್ಟ ಭಾಗದಲ್ಲಿ ವರ್ಷಕೊಮ್ಮೆಮಾತ್ರ ನಿಗದಿತ ಪ್ರದೇಶದಲ್ಲಿ  ಅಗೆದರೆ ಭಸ್ಮ ದೊರೆಯುವುದು. ಅದನ್ನು ಸಂಗ್ರಹಿಸಿದು ಮತ್ತೆ ಆಭಾಗವನ್ನು ಮಣ್ಣನಿಂದ ಮುಚ್ಚುವರು . ಮುಂದಿನ ವರ್ಷದ ತನಕ ಅದನ್ನು ತೆರೆಯುವುದೆ ಇಲ್ಲ ಎಂಬ ಪ್ರತೀತಿ ಇದೆ.ಭಸ್ಮವು ಅಲ್ಯಮ್ಯುನಿಯಂನ ಅದಿರು , ಅದರಲ್ಲಿ ಮೆಂಗನೀಸ್‌ ಅಂಶವಿದ್ದರೆ ಕೆಂಪುಕಾಣುತ್ತದೆ ಎಂಬುದ ವೈಜ್ಞಾನಿಕ ಸತ್ಯ.
ಅದೂ ಅಲ್ಲದೆ ಕುಮಾರಸ್ವಾಮಿಯು ತನ್ನ ದರ್ಶನಕ್ಕೆ ಬರುವವರಿಗೆ ಅವರಷ್ಟೆ ಎತ್ತರವಿರುವಂತೆ ಗೋಚರಿಸುತ್ತಾನೆ. ಚಿಕ್ಕವರಿಗೆ ಚಿಕ್ಕವನಾಗಿ ಪ್ರೌಢರಿಗೆ ಪ್ರೌಢನಾಗಿ ಕಾಣುವನು ಎಂದು ಹೇಳುವರು ಅವನ ಎತ್ತರವನ್ನುನಿಖರವಾಗಿ ಅಳೆಯುವುದು ಕಷ್ಟದ ಕೆಲಸವೇನಲ್ಲ. ಆದರೆ ಜನರ ನಂಬಿಕೆಗೆ.ಭಂಗ ತರುವ ಅಗತ್ಯ ಕಾಣುತ್ತಿಲ್ಲ.
ಕುಮಾರಸ್ವಾಮಿಯಿಂದ  ತಿರಸ್ಕೃತಳಾದ ಕನ್ಯಾಕುಮಾರಿಯೂ ಮದುವೆಯಾಗದೆ ಹಾಗೆ ಚಿರಕನ್ಯಯಾಗಿ ಉಳಿದಳು, ಎನ್ನುವರು.
ಆದರೆ ಕೆಲವು ಪುರಾಣಗಳ ಪ್ರಕಾರ ಕಾರ್ತಿಕೇಯನಿಗೆ ಸತಿಯರಿದ್ದಾರೆ.
ಹಂಪೆಯ ವಿಜಯ ವಿಠಲದೇವಸ್ಥಾನದಲ್ಲಿ ಕಲ್ಲು ತೇರು ಇದೆ. ಮತ್ತು ಅಲ್ಲಿ ಒಂದು ಕಲ್ಲಿನ ಹುಂಜವೂ ಹಿಂದೆ  ಇತ್ತಂತೆ. ಈಗ ಅದನ್ನು ಯಾರೋ ಅಪಹರಿಸಿದ್ದಾರೆ. ಕಲ್ಲು ಕೋಳಿ ಕೂಗಿದಾಗ ಕಲ್ಲುತೇರು ಚಲಿಸಿದಾಗ ಪ್ರಪಂಚದಲ್ಲಿ ಪ್ರಳಯವಾಗುವುದು ಎಂಬ ಮಾತನ್ನು ಹಳಬರು ನಂಬುತಿದ್ದರು
ಆಂಧ್ರ ಪ್ರದೇಶದ ಮಂಗಳಗಿರಿಯಲ್ಲಿ ಪಾನಕದ ನರಸಿಂಹನ ಐತಿಹ್ಯವು ಇಂದಿಗೂ ಜ್ವಲಂತವಾಗಿದೆ. ಅಲ್ಲಿ ಮೇಲುನೋಟಕ್ಕೆ ಕಂಡುಬರುವ ಹಾಗೆ ಭಕ್ತರು, ಬಾಯಿತೆರೆದು ಕೊಂಡಿರುವ ಲಕ್ಷ್ಮಿ ನರಸಿಂಹ ದೇವನಿಗೆ ಅರ್ಪಿಸಿದ ಪಾನಕನ್ನು ಅದರ ಪ್ರಮಾಣ ಎಷ್ಟೆ ಇರಲಿ ಅರ್ದ ಭಾಗವನ್ನು ಮಾತ್ರ ನರಸಿಂಹನು ಸ್ವೀಕರಿಸುವನು ಉಳಿದರ್ಧವನ್ನು ತನ್ನ ಕಟವಾಯಿಯಿಂದ ಹೊರ ಹಾಕುವನು . ಒಂದು ಲೋಟ ಪಾನಕ ಅರ್ಪಿಸಿದರೆ, ಅರ್ಧ ಲೋಟ ಮಾತ್ರ ದೇವನು ಸ್ವೀಕಾರ ಮಾಡುವನು . ಒಂದು ಕೊಡ ಪಾನಕ ನೀಡಿದರೆ ಅರ್ಧಕೊಡ ಪಾನಕ ಕುಡಿದು ಬಿಡುವನು.ಇದನ್ನು ವೈಜ್ಞಾನಿಕ  ಪರಿಶಿಲನೆಗೆ ಒಳಪಡಿಸುವುದು ಕಷ್ಟಸಾಧ್ಯ. ಆದರೆ ಈ ಐತಿಹ್ಯವನ್ನು ಆಸ್ತಿಕರು ಇಂದಿಗೂ ನಂಬಿರುವರು.. ಅದಕ್ಕೆ ಭಂಗತರುವ ಕೆಲಸ ಸಲ್ಲ. ಧರ್ಮದ ಅಡಿಪಾಯವೆ ನಂಬಿಕೆ. ಈ ರೀತಿಯ ಐತಿಹ್ಯಗಳು ಈಗಲೂ ಸ್ವೀಕಾರಾರ್ಹವಾಗಿವೆ. ಮತ್ತು ಆಚರಣೆಯ ಅಂಗವಾಗಿ ಹೋಗಿವೆ.ಅವು ಜೀವ ವಿರೋಧಿ ಅಲ್ಲದಿದ್ದರೆ ಅವುಗಳನ್ನು ಪ್ರಶ್ನಿಸಿ, ಸುಳ್ಳು ಎಂದು ಸಿದ್ಧಮಾಡಿ   ಅವರ ಧಾರ್ಮಿಕ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಅಗತ್ಯವೂ ಇಲ್ಲ  ಎನಿಸಿದೆ.  ಐತಿಹ್ಯಕ್ಕೆ ಅದರದೆ ಆದ ಸ್ಥಾನವಿದೆ. ಆದರೆ ಅದನ್ನೆ ಇತಿಹಾಸ ಎಂದು ಬಿಂಬಿಸ ಬೇಕಿಲ್ಲ.
                                                       ಲೇಖನ - ಎಚ್‌..ಶೇಷಗಿರಿರಾವ್‌ 

ಸದಸ್ಯರು  ಯಾವುದೆ ಇತಿಹಾಸಕ್ಕೆ ಸಂಬಂಧಿಸಿದ ಲೇಖನವಿದ್ದರೆ ಕೆಳಗಿನ ಇ. ಮೇಲ್‌ವಿಳಾಸಕ್ಕೆ ಕಳುಹಿಸಿದರೆ ಪ್ರಕಟನೆಗೆ ಪರಿಶೀಲಿಸಲಾಗುವುದು
appaaji@gmail.com

Friday, October 12, 2012

ಕರ್ನಾಟಕ ಇತಿಹಾಸ ಅಕಾದೆಮಿಯ 26ನೇ ಸಮ್ಮೇಳನ


ಕರ್ನಾಟಕ ಇತಿಹಾಸ ಅಕಾದೆಮಿಯ ೨೬ನೇ  ವಾರ್ಷಿಕ ಸಮ್ಮೇಳನವು, ಸೆಪ್ಟಂಬರ್‌ ೨೨, ೨೩ ಮತ್ತು ೨೪ರಂದು ಮೂರು ದಿನ ಶ್ರೀಮದ್‌ಶಂಕರಾಚಾರ್ಯರ ದಕ್ಷಿಣಾಮ್ನಾಯ ಪೀಠದ ಸಹಯೋಗದಲ್ಲಿ ಶೃಂಗೇರಿಯಲ್ಲಿ ಜರುಗಿತು. ಡಾ.ಎಸ್‌.ವಿ. ವೆಂಕಟೇಶಯ್ಯನವರು ಸಮ್ಮೇಳನದ  ಸರ್ವಾಧ್ಯಕ್ಷರಾಗಿ ಮೂರು ದಿನದ ಕಾರ್ಯಕ್ರಮ ನಡೆಸಿಕೊಟ್ಟರು.

ಡಾ. ಡಿ.ಎಚ್‌. ಶಂಕರಮೂರ್ತಿ,  ಕರ್ನಾಟಕ ವಿಧಾನ ಪರಿಷತ್‌ ಸಭಾಪತಿಗಳುಶೃಂಗೇರಿ ಮಠದ ಆಡಳಿತಾಧಿಕಾರಿಗಳಾದ ಪದ್ಮಶ್ರೀ ಡಾ.ಗೌರಿಶಂಕರ ಅವರು, ಅಕಾದೆಮಿಯ ಅಧ್ಯಕ್ಷರಾದ ಡಾ. ದೇವರಕೊಂಡಾರೆಡ್ಡಿ, ಇತಿಹಾಸ ಸಂಸ್ಕೃತಿ ಪ್ರಶಸ್ತಿಯ ಪುರಸ್ಕೃತರಾದ ಪ್ರೊ. ಲಕ್ಷ್ಮಣ ತೆಲಗಾವಿ ಮತ್ತು ಡಾ. ಬಾ.ರಾ. ಗೋಪಾಲ್ ಪ್ರಶಸ್ತಿ ಪಡೆದ ಡಾ. ಸೀತಾರಾಮ ಜಾಗೀರದಾರ್‌  ಮತ್ತು, ನಿಕಟಪೂರ್ವ ಸರ್ವಾಧ್ಯಕ್ಷರಾದ ಡಾ. ಎಚ್‌.ಎಸ್. ಗೋಪಾಲರಾವ್‌, ಅನೇಕ ಹಿರಿಯ ಇತಿಹಾಸ ತಜ್ಞರು ಮತ್ತು ಅಕಾದೆಮಿಯ ಪದಾಧಿಕಾರಿಗಳು ವೇದಿಕೆಯ ಮೇಲಿದ್ದರು.

ಈ ಕಾರ್ಯಕ್ರಮದ ವಿಭಿನ್ನತೆ ಎಂದರೆ ಸಮಯಕ್ಕೆ ಸರಿಯಾಗಿ ಆದ ಉದ್ಘಾಟನೆ. ಕರ್ನಾಟಕದ ಮೂಲೆಮೂಲೆಗಳಿಂದ ಬಂದ ಪ್ರತಿನಿಧಿಗಳಿಗೆ ಉತ್ತಮ ವಸತಿ ಸೌಕರ್ಯ ದೊರಕಿತು. ಸುಮಾರು ಅರವತ್ತೈದು ಸುಸಜ್ಜಿತ ಕೋಣೆಗಳ ವ್ಯವಸ್ಥೆಯಾಗಿತ್ತು.. ಬೆಳಗ್ಗೆ ಎಂಟೂವರೆಗೆ ಸರಿಯಾಗಿ ಬೆಳಗಿನ ಉಪಹಾರ ಸಹಪ್ರಾಯೋಜಕರಾದ ಶ್ರೀ ಮಠದಿಂದ ಏರ್ಪಾಡಾಗಿತ್ತು. ಹಾಗಾಗಿ ರಾತ್ರಿ ಪ್ರಯಾಣ ಮಾಡಿ ದಣಿದು ಬಂದವರು ಬಿಸಿ ನೀರ ಸ್ನಾನ ಮಾಡಿ ಗಡದ್ದು ತಿಂಡಿ ತಿಂದು ಕಾರ್ಯಕ್ರಮ ನಡೆವ ವೇದಿಕೆಗೆ ಬಂದು ನೋಂದಾವಣೆ ಮಾಡಿಕೊಳ್ಳಲು ಸರತಿಗಾಗಿ ಕಾದಿದ್ದರು. ಅದೃಷ್ಟ ಎಂದರೆ ಅತಿಥಿಗಳಿಗಾಗಿ ಕಾಯುವ ಗೋಜಿರಲಿಲ್ಲ. ಹೇಳಿ ಕೇಳಿ ದೇವಸ್ಥಾನ. ಎಲ್ಲರೂ ಪಾದರಕ್ಷೆಗಳನ್ನು ಅದರ ಜೊತೆ ತಮ್ಮ ದುಶ್ಚಟಗಳನ್ನು ಆವರಣದ ಹೊರಗೆ ಬಿಟ್ಟು ಶ್ರದ್ಧೆಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸಮ್ಮೇಳನವನ್ನು ವಿಧಾನ ಪರಿಷತ್ತಿನ ಸಭಾಪತಿ ಡಿ.ಎಚ್.ಶಂಕರಮೂರ್ತಿಯವರು ಉದ್ಘಾಟಿಸಿದರು. ತಮ್ಮ ಉದ್ಘಾಟನಾ ಭಾಷಣದಲ್ಲಿ ಸುದೀರ್ಘವಾಗಿ ಪರಂಪರೆಯನ್ನು ಉಳಿಸಿಕೊಳ್ಳುವ ಅಗತ್ಯದ ಬಗೆಗೆ ಮಾತನಾಡಿದರು. ಯುವಜನರ ಜಾಗೃತಿಗೆ ಇತಿಹಾಸದ ಅಧ್ಯಯನದ ಅಗತ್ಯವನ್ನು ಒತ್ತಿ ಹೇಳಿದರು. ಸರಿಯಾದ ಇತಿಹಾಸದ ಪುನರ‍್ರಚನೆಯ ಅಗತ್ಯವನ್ನು ತಿಳಿಸಿದರು.

ಶ್ರೀಮಠದ ಆಡಳಿತಾಧಿಕಾರಿಗಳಾದ ಪದ್ಮಶ್ರೀ ಡಾ. ಗೌರಿಶಂಕರ್‌ ಅವರು ೨೬ನೇ ವಾರ್ಷಿಕ ಇತಿಹಾಸ ದರ್ಶನ ಗ್ರಂಥವನ್ನು ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಪದ್ಮಶ್ರೀ ಡಾ. ಗೌರಿಶಂಕರ ಅವರು ಸಮ್ಮೇಳನದ ಸಹಯೋಗ ತಮ್ಮ ಸೌಭಾಗ್ಯ ಎಂದು ತಿಳಿಸಿದರು. ಶ್ರೀಮಠ ಒಂದು ಶ್ರದ್ಧಾಕೇಂದ್ರ. ಇಲ್ಲಿ ಇತಿಹಾಸ ಮತ್ತು ಪರಂಪರೆಗಳು ಒಂದುಗೂಡಿವೆ. ಆದ್ದರಿಂದ ಇತಿಹಾಸ ಸಮ್ಮೇಳನ ನಡೆಸುವಲ್ಲಿ ಕೈಜೋಡಿಸುವುದು ತಮ್ಮ ಕರ್ತವ್ಯ. ಆದ್ದರಿಂದ ತಮಗೆ ಅತೀವ ಆನಂದವಾಗಿದೆ ಎಂದು ಹೇಳಿದರು. ಅಲ್ಲದೆ ಈ ಕೆಲಸ ಮಾಡಲೆಂದೇ ತಾವಿರುವುದು.  ಈ ರೀತಿಯ ಸಹಕಾರ ಭವಿಷ್ಯದಲ್ಲಿಯೂ ನೀಡಲು ಸಿದ್ಧ ಎಂದರು.

ಇದೇ ಸಂದರ್ಭದಲ್ಲಿ ಇತಿಹಾಸತಜ್ಞರಾದ ಪ್ರೊ. ಲಕ್ಷ್ಮಣ ತೆಲಗಾವಿಯವರಿಗೆ ಇತಿಹಾಸ ಸಂಸ್ಕೃತಿ ಶ್ರೀ  ಪ್ರಶಸ್ತಿ ಪ್ರದಾನ ಮಾಡಿ, ಜೊತೆಗೆ ಒಂದು ಲಕ್ಷ ರೂಪಾಯಿ ನಗದು ನೀಡಲಾಯಿತು. ಈ ಪ್ರಶಸ್ತಿಯ ಪ್ರಾಯೋಜಕರಾದ ಲಕ್ಷ್ಮಿ ಪ್ರಿಂಟರ್ಸನ ಶ್ರೀ ಅಶೋಕ ಕುಮಾರ್‌ ಅವರು, ತಮ್ಮ ಬಿ.ಆರ್.ಆರ್. ಟ್ರಸ್ಟ್ ವತಿಯಿಂದ ಬಹುಶಃ ದೇಶದಲ್ಲಿಯೆ ಅತಿ ಹೆಚ್ಚು ಮೌಲ್ಯಯುತವಾದ ಇತಿಹಾಸ ಪ್ರಶಸ್ತಿಯನ್ನು ಪ್ರತಿವರ್ಷ ಕರ್ನಾಟಕ ಇತಿಹಾಸ ಅಕಾದೆಮಿಯ ಮೂಲಕ ನೀಡುವುದಾಗಿ ಘೋಷಿಸಿದರು.
ಇದೇ ಸಮಯದಲ್ಲಿ  ಡಾ. ಬಾ.ರಾ. ಗೋಪಾಲ್ ಶಾಸನ ದತ್ತಿ ಪ್ರಶಸ್ತಿಯನ್ನು ಶ್ರೀ ಸೀತಾರಾಮ ಜಾಗೀರದಾರ್‌ ಅವರಿಗೆ ಪ್ರದಾನ ಮಾಡಲಾಯಿತು.

 ಶ್ರೀ ಕೆ.ಆರ್.ರಾಮಕೃಷ್ಣಆಯುಕ್ತರುಪ್ರಾಚ್ಯವಸ್ತು, ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರ್ಕಾರಅವರು ಹಿಂದಿನ ವರ್ಷದಲ್ಲಿ ಪಿಎಚ್.ಡಿ.  ಪಡೆದ ಅಕಾದೆಮಿ ಸದಸ್ಯರಿಗೆ ಸನ್ಮಾನ ಮಾಡಿದರು.
ಈ ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ. ಎಸ್.ವಿ. ವೆಂಕಟೇಶಯ್ಯನವರು ತಮ್ಮ ೩೩ ವರ್ಷದ ಸುದೀರ್ಘ ಮತ್ತು ಸಾರ್ಥಕ ಸೇವೆಯಲ್ಲಿ ಪ್ರಾಚೀನ ಸ್ಮಾರಕಗಳ ರಕ್ಷಣೆ, ಉತ್ಖನನ ಮತ್ತು ಪ್ರಾಚ್ಯವಸ್ತು ಇಲಾಖೆಯ ಮೂಲಕ ಮಾಡಿದ ಕೆಲಸದ ವಿವರ ನೀಡಿದರು. ಪುರಾತತ್ವ ಇಲಾಖೆಯ ಕಾರ್ಯವೈಖರಿ, ಪರಂಪರೆಯ ಸ್ಮಾರಕಗಳ ಸಂರಕ್ಷಣೆಗೆ ಇಲಾಖೆಯ ಕಳಕಳಿ ಮತ್ತು ಕಾಳಜಿ ಕುರಿತು ಮಾಹಿತಿ ನೀಡಿದರು. ಇತಿಹಾಸ ಅಕಾದೆಮಿಯ ಅಧ್ಯಕ್ಷರಾದ ಡಾ. ದೇವರಕೊಂಡಾರೆಡ್ಡಿಯವರು ಸಮ್ಮೇಳನದ ಹಿನ್ನೆಲೆ ಅದರ ಯಶಸ್ಸಿಗೆ ಕೈಜೋಡಿಸಿದವರ ವಿವರ ನೀಡಿ ಎಲ್ಲರನ್ನೂ ಸ್ವಾಗತಿಸಿದರು. ಸರಿಸುಮಾರು ಮೂರು ನೂರು ಪ್ರತಿನಿಧಿಗಳು ಭಾಗವಹಿಸಿದ್ದರು. ಅದರಲ್ಲಿ ಮಹಿಳೆಯರ ಸಂಖ್ಯೆಯೂ ಗಣನೀಯವಾಗಿತ್ತು. ಇತಿಹಾಸ ಮತ್ತು ಸಾಹಿತ್ಯರಂಗದಲ್ಲಿನವರ ಜೊತೆಜೊತೆಗೆ ಸಮಾಜದ ವಿವಿಧ ರಂಗದಲ್ಲಿನ ಇತಿಹಾಸ ಆಸಕ್ತರು ಭಾಗವಹಿಸಿದ್ದು ವಿಶೇಷವಾಗಿತ್ತು. ಅರವತ್ತು-ಎಪ್ಪತ್ತು ವಯೋಮಾನದ ಹಿರಿಯ ತಲೆಗಳೊಡನೆ ಅವರ ಮಾರ್ಗದರ್ಶನ ಪಡೆಯಲು, ಸಂವಾದ ನಡೆಸಲು, ಸಂಪ್ರಬಂಧ ಮಂಡಿಸಲು ಹೆಚ್ಚಿನ ಸಂಖ್ಯೆಯ ಯುವಜನರು ಭಾಗವಹಿಸಿದುದು ಭವಿಷ್ಯದ ಭರವಸೆಯ ಸಂಕೇತವಾಗಿತ್ತು. ಅಂದಾಜು ೧೪೦ಕ್ಕೂ ಹೆಚ್ಚು ಮಂದಿ ತಮ್ಮ ಸಂಪ್ರಬಂಧ ಮಂಡಿಸಲು ನೋಂದಾಯಿಸಿ ಕೊಂಡಿದ್ದರು. ಅದಕ್ಕಾಗಿ ಮುಖ್ಯ ವೇದಿಕೆಯ ಜೊತೆಗೆ ಸಮಾಂತರವಾಗಿ ಕಾರ್ಯಕ್ರಮ ನಡೆಸಲು ಇನ್ನೊಂದು ವೇದಿಕೆಯನ್ನು ಸಿದ್ಧಮಾಡಲಾಗಿತ್ತು. ಅಲ್ಲಿ ಪವರ್‌ ಪಾಯಿಂಟ್‌ ಪ್ರಾತ್ಯಕ್ಷಿಕೆ ಕೊಡಲು ಸೂಕ್ತ ವ್ಯವಸ್ಥೆ ಮಾಡಿದುದು, ಸಂಪ್ರಬಂಧಗಳನ್ನು ಪರಿಣಾಮಕಾರಿಯಾಗಿ ಚಿತ್ರ ಸಮೇತ ಮಂಡಿಸಲು ಅನುಕೂಲವಾಗಿತ್ತು.

ಉದ್ಘಾಟನೆಯ ನಂತರ ಗೋಷ್ಠಿಗಳು ಪ್ರಾರಂಭವಾದವು. ಪ್ರತಿ ಗೋಷ್ಠಿಗೂ ತಜ್ಞರೊಬ್ಬರು ಅಧ್ಯಕ್ಷರು, ಜೊತೆಗೆ ಒಬ್ಬ ನಿರೂಪಕರು. ಹೆಚ್ಚಿನ ಸಂಖ್ಯೆಯ ಪ್ರಬಂಧಗಳ ಮಂಡನೆ ಆಗಬೇಕಾದುದರಿಂದ ಪ್ರತಿ ಪ್ರಬಂಧ ಮಂಡನೆಗೆ ೮-೧೦ ನಿಮಿಷ ಕಾಲಾವಧಿ ನಿಗದಿ ಮಾಡಲಾಗಿತ್ತು. ಜೊತೆಗೆ ೨-೩ ಪ್ರಶ್ನೆಗಳಿಗೂ ಅವಕಾಶವಿತ್ತು.

ಹಲವು ಗೋಷ್ಠಿಗಳು ಬಹು ಆಸಕ್ತಿದಾಯಕವಾಗಿದ್ದವು. ಇತಿಹಾಸದ ಮೇಲೆ ಹೊಸ ಬೆಳಕು ಚೆಲ್ಲುವ ಪ್ರಯತ್ನ ಆ ಸಂಪ್ರಬಂಧಗಳಲ್ಲಿ ಕಂಡುಬಂದಿದ್ದು ಉತ್ತಮ ಭವಿಷ್ಯದ ಭರವಸೆ ಮೂಡಿಸಿತು.

ಆಯ್ದ ಗೋಷ್ಠಿಗಳ ವಿವರವನ್ನು ಒಂದೊಂದಾಗಿ ಬ್ಲಾಗ್‌ನಲ್ಲಿ ಮುಂಬರುವ ದಿನಗಳಲ್ಲಿ ನೀಡುವ ಯೋಜನೆ ಇದೆ. ಆಸಕ್ತರು ತಮ್ಮ ಸಂಪ್ರಬಂಧ, ಚಿತ್ರಗಳು (ಇದ್ದರೆ), ಸ್ವವಿವರವನ್ನು ಭಾವಚಿತ್ರ ಸಮೇತ ಇ-ಮೇಲ್‌ ಮುಖಾಂತರ ಕಳುಹಿಸಿದರೆ, ಪ್ರಕಟಿಸಬಹುದಾಗಿದೆ.  
ಮಿಂಚಂಚೆ (ಇ-ಮೇಲ್) ವಿಳಾಸ :  appaaji@gmail.com ಗೆ ದಯವಿಟ್ಟು ಕಳುಹಿಸಿ.


                                        ಸದಸ್ಯರ ಪ್ರತಿಕ್ರಿಯೆ ಮತ್ತು ಸಹಕಾರ ನಿರೀಕ್ಷಿಸಿದೆ




Monday, October 8, 2012

ಕರ್ಣಾಟಕ ಇತಿಹಾಸ ೨೬ನೆ ಸಮ್ಮೇಳನ, ಶೃಂಗೇರಿ
ದಿನಾಂಕ ೨೨, ೨೩ ಮತ್ತು ೨೪ ನೆ ಸೆಪ್ಟಂಬರ್‌ ೨೦೧೨


ಡಾ. ದೇವರ ಕೊಂಡಾರೆಡ್ಡಿಯವರಿಂದ ಆಶಯು ಭಾಷಣ 






                                                        ಸಮ್ಮೇಳನದ ಉದ್ಘಾಟನೆ
                                                         
                             ಶ್ರೀ. ಡಿ.ಎಚ್‌. .ಶಂಕರ ಮೂರ್ತಿ, ಸಭಾಪತಿಗಳು, ಕರ್ನಾಟಕ ರಾಜ್ಯ , ವಿಧಾನ ಪರಿಷತ್‌                                                        


                    ಇತಿಹಾಸ ದರ್ಶಿನಿ ಬಿಡುಗಡೆ      ಪದ್ಮಶ್ರೀ ಡಾ. ಗೌರಿಶಂಕರ್‌., ಆಡಳಿತಾಧಿಕಾರಿಗಳು






                                          "  ಇತಿಹಾಸ ಸಂಸ್ಕೃತಿ  ಶ್ರೀ" ಪ್ರಶಸ್ತಿ ಪ್ರದಾನ  


ಪ್ರೊ. ಲಕ್ಷ್ಮಣ ತೆಲಗಾವಿ ಅವರಿಗೆ 







                                           ಬಾ.ರಾ. ಗೋಪಾಲ ಪ್ರಶಸ್ತಿ ಪ್ರದಾನ
ಡಾ. ಸೀತಾರಾಮ್‌ ಜಾಗಿರದಾರ



                                   












Monday, October 1, 2012

ಸಹಕಾರ ಕೋರಿದೆ

ಕರ್ನಾಟಕ ಇತಿಹಾಸ  ಅಕಾದಮಿಯ ಶೃಂಗೇರಿಯಲ್ಲಿ ನಡೆದ ೨೬ನೆ ಸಮ್ಮೇಳನದಲ್ಲಿ ಬಾಗವಹಿಸಿದ ಸದಸ್ಯರು ತಾವು ತೆಗೆದ ವಿಶೇಷ ಫೋಟೊ  ಮತ್ತು ಅನುಭವಗಳನ್ನು ದಾಖಲಿಸಲು ಮತ್ತು ಇತರರೊಂದಿಗೆ ಹಂಚಿಕೊಳ್ಳಲು ಈ ಬ್ಲಾಗ್‌ಅನ್ನುವೇದಿಕೆಯಾಗಿ ಬಳಸಿಕೊಳ್ಳ ಬಹುದು . ದಯಮಾಡಿ ನಿಮ್ಮ ಸಲಹೆ ಸಹಕಾರ, ನೀಡಿದರೆ ಇದನ್ನು ನಮ್ಮ ನಡುವೆ ಸಶಕ್ತ ಸಂವಹನ ಮಾಧ್ಯಮವಾಗಿ  ಬಳಸಿಕೊಳ್ಳುವ ಸಾಧ್ಯತೆ   ಹೆಚ್ಚುವುದು. ತಮ್ಮ ಪ್ರತಿಕ್ರಿಯೆ ನಿರೀಕ್ಷಿಸಿದೆ.
ಮೊದಲನೆಯದಾಗಿ  ಈ  ಕುರಿತ ಸದಸ್ಯರೊಬ್ಬರ ಲೇಖನವನ್ನು ವೀಕ್ಷಿಸಲು ಕೆಳಗಿನ ಬ್ಲಾಗ್‌ಸಂದರ್ಶಿರಿ. ನೀವು ಮತ್ತು ನಿಮ್ಮಗೆಳೆಯರು ಭಾಗವಹಿಸಿ. ಈವರೆಗೆ  ಮಿಂಚಂಚೆ ವಿಳಾಸ ಇಲ್ಲದವರಿಗೆ ಅದನ್ನು    ಪಡೆಯಲು ಸಹಕರಿಸಿ. ಅದನ್ನು ತೆರೆದು ತಿಳಿಸಿದರೆ ಪ್ರತಿ ಲೇಖನವೂ ನಿಮ್ಮ ಇನ್  ಬಾಕ್ಸಗೆ  ಬರುವ ವ್ಯವಸ್ಥೆ ಮಾಡ ಲಾಗುವುದು
 http://appaaji.blogspot.in/ ಬ್ಲಾಗ್‌ಗೆ ಭೇಟಿಕೊಡಿ